ಪುಟಗಳು

ಬುಧವಾರ, ಜನವರಿ 18, 2017

ರೋಮ್ ರೋಮಾಂಚನ.... Reloaded

೨೦ನವೆಂಬರ್೨೦೧೬ರ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟವಾದ ಬರಹ

ವಿಶಾಲವಾಗಿ ಬೆಳೆದು ನಿಂತ ಆಧುನಿಕ ನಗರಿ, ನಡುನಡುವೆಯೇ ಎದ್ದುಕಾಣುವ ಇತಿಹಾಸದ ಕುರುಹುಗಳು, ವಿಶಿಷ್ಟ ಶೈಲಿಯ ಕಟ್ಟಡಗಳು, ನಕಾಶೆ ಹಿಡಿದು ತಿರುಗುವ ಪ್ರವಾಸಿಗರ ದಂಡು. ಅದುವೇ ರೋಮ್. ಇತಿಹಾಸ ಪ್ರಸಿದ್ಧ ರೋಮ್ ಸಾಮ್ರಾಜ್ಯದ ಮತ್ತು ಕ್ಯಾಥೋಲಿಕ್ ಧಾರ್ಮಿಕತೆಯ ಕೇಂದ್ರಸ್ಥಾನ. ಇಟಲಿಯ ರಾಜಧಾನಿ ರೋಮ್ ನ ಸ್ಥಳೀಯ ಹೆಸರು ರೋಮಾ. ರೋಮ್ ನಗರ ತನ್ನಲ್ಲಿ ಪ್ರಾಚೀನತೆಯನ್ನು ತುಂಬಿಕೊಂಡೇ ಆಧುನಿಕವಾಗಿ ಬೆಳೆದುನಿಂತಿದೆ. ನಗರದಲ್ಲೆಲ್ಲಾ ಪ್ರಾಚೀನ ದೇವಾಲಯಗಳು, ದ್ವಾರಗಳು, ಕಟ್ಟಡಗಳು ಕಾಣಸಿಗುತ್ತವೆ. ಪ್ರೇಕ್ಷಣೀಯ ಸ್ಥಳಗಳು ಹಲವಾರು. ಅವರವರ ಆಸಕ್ತಿಗೆ ತಕ್ಕಂತೆ ಇತಿಹಾಸ, ಧಾರ್ಮಿಕ ಸಂಬಂಧಿತ ಸ್ಥಳಗಳಿವೆ. ಒಂದೊಂದೂ ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿವೆ. ರೋಮಾದಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ತಲುಪಲು ಮೆಟ್ರೋ ಸಾರಿಗೆ ಇದೆ. ಎಲ್ಲಾ ಮೆಟ್ರೋ ನಿಲ್ದಾಣಗಳೂ ಈ ಸ್ಥಳಗಳ ಹತ್ತಿರವೇ ಇದೆ.

ನಾನು ಅಂತರಜಾಲದಲ್ಲಿ ಜಾಲಾಡಿ ಒಂದಿಷ್ಟು ನನ್ನ ಆಸಕ್ತಿಯ ಸ್ಥಳಗಳನ್ನು ಗುರುತುಹಾಕಿಕೊಂಡಿದ್ದೆ. ಮೊದಲು ಭೇಟಿಕೊಟ್ಟದ್ದು ’ಕೊಲೋಸಿಯಂ’. ಇದೊಂದು ದೊಡ್ಡ ಕ್ರೀಡಾಂಗಣದಂತಹ ರಚನೆ. ಈ ಅಂಗಣದ ರಚನೆ ಅದ್ಭುತವಾಗಿದೆ.  ವರ್ತುಲಾಕಾರದಲ್ಲಿರುವ ಇದು ನಾಲ್ಕು ಹಂತದ ಪ್ರೇಕ್ಷಕ ಗ್ಯಾಲರಿಗಳನ್ನೊಳಗೊಂಡಂತೆ ನಿರ್ಮಿಸಲಾಗಿದೆ.’ಗ್ಲಾಡಿಯೇಟರ್’ ಎಂಬ ಇಂಗ್ಲೀಶ್ ಸಿನೆಮಾ ನೋಡಿದರೆ ಇದರ ಕಲ್ಪನೆ ಸಿಗುತ್ತದೆ. ಆಗಿನ ಕಾಲದಲ್ಲಿ ಗುಲಾಮರ, ಕ್ರೂರ ಪ್ರಾಣಿಗಳ ಹೊಡೆದಾಟದ ಪಂದ್ಯಗಳನ್ನು ಏರ್ಪಡಿಸುತ್ತಿದ್ದ ಜಾಗವಂತೆ. ಈ ಕೊಲೊಸಿಯಂ ಶಿಥಿಲವಾಗಿ ಅನೇಕ ಭಾಗಗಳು ನಾಶವಾಗಿದ್ದರೂ ಸಹ ಆಗಿನ ಕಾಲದ ಈ ಭವ್ಯತೆಯ  ಕಲ್ಪನೆ ಮತ್ತು ನಿರ್ಮಾಣ ಮೆಚ್ಚುವಂತಿದೆ. ಈ ಪ್ರದೇಶದಲ್ಲಿ ಇನ್ನೂ ಅನೇಕ ಸ್ಮಾರಕಗಳು, ದೇವಾಲಯಗಳು, ಭಗ್ನಶಿಲ್ಪಗಳು ಇವೆ.

ಕಾಶಿಗೆ ಹೋಗಿ ವಿಶ್ವೇಶ್ವರನ ದರ್ಶನ ಪಡೆಯದಿದ್ದರೆ ಹೇಗೆ? ನನ್ನ ಮುಂದಿನ ಭೇಟಿ ಕ್ಯಾಥೋಲಿಕ್ಕರ ಪವಿತ್ರಕ್ಷೇತ್ರ ವ್ಯಾಟಿಕನ್. ಇದೊಂದು ಸ್ವತಂತ್ರ ದೇಶವಾಗಿದ್ದರೂ ಸಹ ರೋಮ್ ನಗರದ ಒಳಗೇ ಇದೆ. ಸೇಂಟ್ ಪೀಟರ್ಸ್ ಬೆಸಿಲಿಕಾ ಇಲ್ಲಿನ ದೊಡ್ಡ ಆಕರ್ಷಣೆ. ಹೊರಗಿನಿಂದ ಇದರ ಒಳಗಿನ ಭವ್ಯತೆಯು ಊಹೆಗೆ ಸಿಗುವುದಿಲ್ಲ. ಆದರೆ ಒಳಹೋಗಿ ನೋಡಿದರೆ ಅರಮನೆಯ ವೈಭವವನ್ನು ನೆನಪಿಸುತ್ತದೆ. ಒಳಾಂಗಣದ ಅಲಂಕಾರಿಕ ವಿನ್ಯಾಸಗಳು ಬಲುಸುಂದರವಾಗಿವೆ. ದೊಡ್ಡದೊಡ್ಡ ಪೇಟಿಂಗುಗಳು, ಮೊಸಾಯಿಕ್ ಚಿತ್ರಗಳು, ಶಿಲ್ಪಗಳು ಇತಿಹಾಸ ಮತ್ತು ಧಾರ್ಮಿಕ ಸ್ಥಿತ್ಯಂತರಗಳ ದರ್ಶನ ಮಾಡಿಸುತ್ತವೆ. ಪ್ರಸಿದ್ಧ ಕಲಾವಿದ ಮೈಕಲಾಂಜಲೋ ರಚಿಸಿದ ಮಾತೆಮೇರಿಯ ಮಡಿಲಲ್ಲಿರುವ ಏಸುವಿನ ಶಿಲ್ಪ ಇಲ್ಲಿದೆ. ಇವೆಲ್ಲಾ ನೋಡಿ ಮುಗಿಸಿ ಪಕ್ಕದಲ್ಲಿರುವ ವ್ಯಾಟಿಕನ್ ಮ್ಯೂಸಿಯಂ ಹೊಕ್ಕೆ. ಆಸಕ್ತರಿಗಂತೂ ಈ ಮ್ಯೂಸಿಯಂ ಅದ್ಬುತಗಳ ಆಗರ. ಇದನ್ನು ಸುಮ್ಮನೇ ನೋಡಿಮುಗಿಸಲು ಹಲವಾರು ತಾಸುಗಳೇ ಬೇಕು. ಗ್ರೀಕ್, ರೋಮನ್ ಮುಂತಾದ ಶಿಲ್ಪಗಳು ಇಲ್ಲಿವೆ. ಇಲ್ಲಿನ ಒಂದೊಂದು ವಸ್ತುಗಳೂ ಒಂದೊಂದು ಕತೆ ಹೇಳುತ್ತವೆ. ವ್ಯಾಟಿಕನ್ ನಲ್ಲಿ ಇನ್ನೂ ಕೆಲವು ಪ್ರಾಚೀನ ಧಾರ್ಮಿಕ ಕಟ್ಟಡಗಳು, ಸುಂದರ ಉದ್ಯಾನವನಗಳೂ ಇವೆ.ರೋಮ್ ನಗರದ ಸೌಂದರ್ಯಕ್ಕೆ ಅಲ್ಲಿನ ಸುಂದರ ಕಾರಂಜಿಗಳ ಕಾಣಿಕೆ ದೊಡ್ಡದು. ಅನೇಕ ರಸ್ತೆಗಳು ಸಂಧಿಸುವ ಕಡೆ ಚಿಮ್ಮುವ ಕಾರಂಜಿಗಳು ಮತ್ತು ಅಲ್ಲಿನ ಶಿಲ್ಪಗಳು ನಮ್ಮ ಕಣ್ಣುಗಳನ್ನು ಅಲ್ಲೇ ನೆಡುವಂತೆ ಮಾಡುತ್ತವೆ. ನನ್ನ ಮುಂದಿನ ಭೇಟಿಯ ತಾಣ ಟ್ರೇವಿ ಫೌಂಟೇನ್ ಎನ್ನುವ ಕಾರಂಜಿಯಾಗಿತ್ತು. ಇದೊಂದು ದೊಡ್ಡಕಾರಂಜಿ. ಅರಮನೆಯೊಂದರ ಗೋಡೆಯ ಮೇಲಿರುವ ದೊಡ್ಡ ದೊಡ್ಡ ಹಾಲುಗಲ್ಲಿನ ಸುಂದರ ಶಿಲ್ಪಗಳಿಂದ ಚಿಮ್ಮುವಂತೆ ರೂಪಿಸಲಾಗಿದೆ. ಅದರ ಮುಂದೊಂದು ಅರ್ಧ ವೃತ್ತಾಕಾರದ ತಿಳಿನೀರಿನ ಕೊಳ. ಈ ಕಾರಂಜಿಗೆ ಸಂಬಂಧಿಸಿದಂತೆ ನಂಬಿಕೆಯೊಂದಿದೆಯಂತೆ. ಆ ನಂಬಿಕೆ ಪ್ರಕಾರ ಕಾರಂಜಿಗೆ ಬೆನ್ನುಮಾಡಿ ನಿಂತು ಭುಜದ ಮೇಲಿಂದ ನಾಣ್ಯವೊಂದನ್ನು ಎಸೆದರೆ ಮತ್ತೆ ರೋಮ್ ನಗರಕ್ಕೆ ಕುಟುಂಬ ಸಮೇತ ಬರುವ ಅವಕಾಶ ಸಿಗುತ್ತದಂತೆ! ಹೀಗೆ ನಾಣ್ಯ ಎಸೆಯುತ್ತಿದ್ದ ಅನೇಕ ಜನರನ್ನೂ ಕಂಡೆ! ಈ ಕಾರಂಜಿಯ ಎದುರೇ ಒಂದು ಚರ್ಚ್ ಇದೆ. ಅದರ ಗೇಟ್ ತುಂಬೆಲ್ಲಾ ಬೀಗಗಳು. ಆ ಬೀಗಗಳ ಮೇಲೆಲ್ಲಾ ಏನೋ ಬರೆದಿವೆ. ಇದೂ ಒಂದು ನಂಬಿಕೆಯಂತೆ ಅಲ್ಲಿ. ಪ್ರೇಮಿಗಳು ತಮ್ಮ ಹೆಸರನ್ನು ಬೀಗದ ಮೇಲೆ ಬರೆದು ಈ ಚರ್ಚ್ ಗೇಟಿಗೆ ಹಾಕಿದರೆ ಅವರ ಬಂಧ ಶಾಶ್ವತವಾಗಿರುತ್ತದಂತೆ!

ಸ್ಪಾನಿಷ್ ಸ್ಟೆಪ್ಸ್ ಎನ್ನುವ ೧೩೮ ಮೆಟ್ಟಿಲುಗಳಿರುವ ಜಾಗ, ಅಲ್ಲಿರುವ ದೋಣಿಯಾಕಾರದ ಕಾರಂಜಿ, ಅಂತಹ ಜನಜಂಗುಳಿಯ ನಡುವೆಯೂ ಎತ್ತರದಲ್ಲಿ ಮೌನವಹಿಸಿ ನಿಂತಿರುವ ಚರ್ಚು, ಅಲ್ಲಿಂದ ಕಾಣುವ ನಗರದ ವಿಹಂಗಮ ನೋಟ, ಮುಳುಗುತ್ತಿದ್ದ ಸೂರ್ಯ, ಜೊತೆಗೆ ಇಟಲಿಯ ವಿಶಿಷ್ಟ ಕಪ್ಪು ಕಾಫಿ. ಇವಿಷ್ಟೂ ಸಂಜೆಯನ್ನು ತುಂಬಿದವು. ಕತ್ತಲಾಗುತ್ತಿತ್ತು. ರೋಮಿನ ರಸ್ತೆಗಳಲ್ಲಿ ಅಲೆದು ಅವತ್ತಿನ ತಿರುಗಾಟ ಮುಗಿಸಿ ಹೋಟೆಲ್ ತಲುಪಿದೆ. ನಾಗತಿಹಳ್ಳಿಯವರ ಸಿನೆಮಾದ ’ರೋಮ್ ರೋಮ್ ರೋಮಾಂಚನ..’ ಎಂಬ ಹಾಡು ಅಕ್ಷರಶಃ ನಿಜವೆನಿಸುವಂತೆ ಈ ಐತಿಹಾಸಿಕ ನಗರಿ ಒದಗಿಸಿದ ಅನುಭವ ಅನನ್ಯವಾದುದಾಗಿತ್ತು.

****
ಹೋಗುವುದು ಹೇಗೆ?
ಬೆಂಗಳೂರಿನಿಂದ ವಿಮಾನದಲ್ಲಿ ಪ್ಯಾರಿಸ್ ಅಥವಾ ಫ್ರಾಂಕ್ ಫರ್ಟ್ ಹೋಗಿ ಅಲ್ಲಿಂದ ರೋಮ್ ಗೆ ವಿಮಾನ ಬದಲಿಸಬಹುದು. ಗಲ್ಫ್ ದೇಶಗಳ ಮಾರ್ಗವಾಗಿಯೂ ವಿಮಾನಗಳಿವೆ. ಬೆಂಗಳೂರಿನಿಂದ ರೋಮ್ ಗೆ ನೇರ ವಿಮಾನಗಳೂ ಕೂಡ ಇರಬಹುದು.

ಇತರ ಸ್ಥಳಗಳು.

ರೋಮನ್ ಫೋರಂ, ಸಿಸ್ಟೀನ್ ಚಾಪೆಲ್, ಬೆಸಿಲಿಕಾಗಳು, ಅನೇಕ ಗ್ಯಾಲರಿಗಳು, ಮ್ಯೂಸಿಯಂಗಳು, ಸ್ಮಾರಕಗಳು ಸೇರಿದಂತೆ ರೋಮಿನ ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತುಹಾಕಲು ಕನಿಷ್ಟ ಒಂದು ವಾರ ಬೇಕಾಗುತ್ತದೆ.

****