ಪುಟಗಳು

ಭಾನುವಾರ, ಏಪ್ರಿಲ್ 24, 2016

ಕನ್ನಡ ಅನುವಾದಗಳ ಕ್ರೌಡ್ ಸೋರ್ಸಿಂಗ್

ಅಂತರಜಾಲದಲ್ಲಿ ಜಗತ್ತಿನ ಹಲವು ಭಾಷೆಗಳಲ್ಲಿ ಸೇವೆಗಳನ್ನು ಒದಗಿಸುವುದಕ್ಕೋಸ್ಕರ ಅನುವಾದದ ಕೆಲಸಗಳನ್ನು ಕ್ರೌಡ್ ಸೋರ್ಸ್ (Crowdsource) ಮಾಡುವ ಪರಿಪಾಠವನ್ನು ಹಲವಾರು ಕಂಪನಿಗಳು ಇಟ್ಟುಕೊಂಡಿವೆ ಅಂದರೆ ಆಯಾ ಭಾಷೆಯ ಬಳಕೆದಾರರೇ ತಮ್ಮ ಭಾಷೆಗಳಿಗೆ ಅನುವಾದ ಮಾಡಿಕೊಳ್ಳುವ ಅವಕಾಶ ಒದಗಿಸಿಕೊಡುವ ಮೂಲಕ ಯೂಸರ್ ಇಂಟರ್ಫೇಸ್ ವಿವಿಧ ಭಾಷೆಗಳಲ್ಲಿ ದೊರೆಯುವಂತೆ ಮಾಡುವುದು ಇದರ ಉದ್ದೇಶ.ಫೇಸ್ಬುಕ್ , ಟ್ವಿಟ್ಟರ್ ಮುಂತಾದ ಜನಪ್ರಿಯ ಸಾಮಾಜಿಕ ಸಂಪರ್ಕತಾಣಗಳು ಅನೇಕ ಭಾಷೆಗಳಲ್ಲಿ ದೊರೆಯುತ್ತಿರುವುದರ ಹಿಂದೆ ಈ ಕ್ರೌಡ್ ಸೋರ್ಸಿಂಗ್ ಬಹುಮುಖ್ಯ ಪಾತ್ರ ವಹಿಸಿದೆ. ಅಂತರಜಾಲದಲ್ಲಿ ಎಲ್ಲಾ ಭಾಷೆಗಳಲ್ಲಿ ಸೇವೆಗಳನ್ನು ಒದಗಿಸಲು, ಅಂತರಜಾಲವು ಹೆಚ್ಚಿನ ಜನರನ್ನು ತಲುಪಲು ಇದು ಅಗತ್ಯ ಎಂದು ಬಣ್ಣಿಸಲ್ಪಟ್ಟರೂ ಕಾರ್ಪೋರೇಟ್ ಕಂಪನಿಗಳು ಹೀಗೆ ಉಚಿತವಾಗಿ ಕೆಲಸ ಮಾಡಿಸಿಕೊಳ್ಳುವುದು ಎಷ್ಟು ಸರಿ ಎಂಬ ಟೀಕೆಯೂ ಕೇಳಿಬರುತ್ತದೆ.

ಅದೇನೇ ಇದ್ದರೂ ಸಹ ಅವತ್ತಿನಿಂದ ಇವತ್ತಿನವರೆಗೂ ಕನ್ನಡ ಭಾಷೆಯಲ್ಲಿ ಎಲ್ಲವನ್ನೂ ತರಬೇಕು ಎಂಬ ಉತ್ಸಾಹಿಗಳು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅದು ಉಚಿತವಾಗಿ ಮಾಡುವ ಕೆಲಸವಾದರೂ ಸರಿ, ಎಲ್ಲೆಡೆ ಕನ್ನಡ ಇರಬೇಕು, ಅದು ನುಡಿಯ ಬೆಳವಣಿಗೆಗೆ ಬಹಳ ಒಳ್ಳೆಯದು ಎಂಬ ನಿಲುವು ಅವರೆಲ್ಲರದು. ಇದರಿಂದಲೇ ಇವತ್ತು ಅನೇಕ ಜನಪ್ರಿಯ ತಾಣಗಳು, ಸೇವೆಗಳು ಕನ್ನಡದಲ್ಲಿ ಲಭ್ಯ ಇದೆ. ಕೆಲವು ಕ್ರೌಡ್ ಸೋರ್ಸ್ ಮೂಲಕ ಮಾಡಿರುವುದಾಗಿವೆ ಮತ್ತು ಹಲವನ್ನು ಆಯಾ ಕಂಪನಿ (ಸೇವಾದಾತರು)ಗಳೇ ಒದಗಿಸಿವೆ. ಉದಾಹರಣೆಗೆ ಗೂಗಲ್ ನ ಅನೇಕ ಸೇವೆಗಳು ಜನರ ಅನುವಾದದಿಂದ ತಯಾರಾಗಿವೆ, ಆದರೆ ಯಾಹೂ ಮೇಲ್ ನಲ್ಲಿ ಮತ್ತು ಇತ್ತೀಚೆಗೆ ಜನಪ್ರಿಯಗೊಂಡಿರುವ ಹೈಕ್ ಮೆಸ್ಸೆಂಜರ್ ಎಂಬ ಸಂದೇಶವಾಹಕದಲ್ಲಿ ಕನ್ನಡ ಭಾಷೆಯಲ್ಲಿ ಯೂಸರ್ ಇಂಟರ್ಫೇಸನ್ನು ಅವರೇ ಮಾಡಿ ಒದಗಿಸಿದ್ದಾರೆ.

೨೦೦೫ರ ಸುಮಾರಿಗೆ ಅಂತರಜಾಲ ದೈತ್ಯ ಗೂಗಲ್ ಮೊದಲ ಬಾರಿಗೆ ತನ್ನ ಬೇರೆ ಬೇರೆ ಸೇವೆಗಳ ಅನುವಾದ ಕೆಲಸಗಳನ್ನು ಕ್ರೌಡ್ ಸೋರ್ಸಿಂಗ್ ಮಾಡಿತು. ಒಂದು ಮಟ್ಟದ ಅನುವಾದ ಪೂರ್ಣಗೊಂಡನಂತರ ಅದನ್ನು ಲೈವ್ ಮಾಡುವ ಪ್ರಯತ್ನ ಅದಾಗಿತ್ತು. ಕನ್ನಡದಲ್ಲಿ ಅನೇಕ ಜನ ಈ ಅನುವಾದದ ಕೆಲಸಗಳಲ್ಲಿ ತೊಡಗಿಕೊಂಡರು. ನಾನು ಕೂಡ ೨೦೦೫-೦೬ರ ಸಮಯದಲ್ಲಿ ಇಂತಹ ಅನುವಾದಗಳಲ್ಲಿ ತೊಡಗಿಕೊಳ್ಳಲು ಪ್ರಾರಂಭಿಸಿದ್ದು. ಗೂಗಲ್ ನ ಹಲವು ಸೇವೆಗಳ ಅನುವಾದಗಳಲ್ಲಿ ತೊಡಗಿಕೊಂಡೆ. ಗೂಗಲ್ ನ ಮುಖಪುಟದಲ್ಲ್ಕಿ ಇಂಗ್ಲೀಷಿನಲ್ಲಿ I am feeling lucky ಎಂದಿರುವ ಕಡೆ ಕನ್ನಡದಲ್ಲಿ ’ನಾನು ಅದೃಷ್ಟಶಾಲಿ’ ಎಂದು ಕಾಣುತ್ತದೆ. ನಾನು ಅನುವಾದದಲ್ಲಿ ತೊಡಗಿದಾಗ ಮೊದಲು ಯಾರೋ ಅದನ್ನು ’ನಾನು ಅದೃಷ್ಟವಂತ’ ಎಂದು ಅನುವಾದಿಸಿದ್ದರು. ಅದನ್ನು ನೋಡಿದಾಗ ’ಅದೃಷ್ಟವಂತ’ ಎನ್ನುವುದು ಬರೀ ಪುಲ್ಲಿಂಗವಾಗುತ್ತದೆ, ಸ್ತ್ರೀಲಿಂಗಕ್ಕೂ ಆಗಬೇಕೆಂದು ಯೋಚಿಸಿ ’ಅದೃಷ್ಟಶಾಲಿ’ ಎಂದು ಬದಲಾಯಿಸಿದೆ. ಅದೇ ಒಪ್ಪಿತವಾಗಿ ಇವತ್ತಿಗೂ ಉಳಿದುಬಂದಿದೆ. ಇವತ್ತಿಗೂ ಪ್ರತಿಬಾರಿ ಭಾರತದ ಆವೃತ್ತಿ Google.co.in ತೆರೆದಾಗ ಕಾಣುತ್ತದೆ. ಅನಂತರದ ದಿನಗಳಲ್ಲಿ ಅಂತರಜಾಲ ಭೂನಕಾಶೆ ವಿಕಿಮ್ಯಾಪಿಯಾದಲ್ಲೂ ಕೂಡ ಅನುವಾದದ ಅವಕಾಶ ಮಾಡಿಕೊಟ್ಟರು. ಕನ್ನಡದ ಪರಿಸ್ಥಿತಿ ನೋಡಿದಾಗ ೦% ಇತ್ತು. ಒಂದಿಷ್ಟು ಉತ್ಸಾಹಿಗಳನ್ನು ಸೇರಿಸಿ ಅನುವಾದದಲ್ಲಿ ತೊಡಗಿಕೊಂಡು ಕೆಲವೇ ದಿನಗಳಲ್ಲಿ ಶೇಕಡಾ ೮೦ ಮುಟ್ಟಿಸಿದೆವು. ಕನ್ನಡ ವಿಕಿಮ್ಯಾಪಿಯಾ ಲೈವ್ ಆಯಿತು. ಹೀಗೆಯೇ ಈಗ ಜನಪ್ರಿಯವಾಗಿರುವ ಕೆಲವು ಸೋಶಿಯಲ್ ನೆಟ್ವರ್ಕ್ ತಾಣಗಳೂ ಸಹ ಅನುವಾದಗಳನ್ನು ಕ್ರೌಡ್ ಸೋರ್ಸಿಂಗ್ ಮಾಡುವ ಮೂಲಕವೇ ಭಾರತೀಯ ಭಾಷೆಗಳಲ್ಲಿ ತಯಾರಾದವು.

ಅನುವಾದಕನಾಗಿ ಏನು ಮಾಡಬಹುದು? (As Translator)

ಈ ಕೆಳಗಿನವು ಈಗ ಕನ್ನಡದಲ್ಲಿ ನಡೆಯುತ್ತಿರುವ ಅನುವಾದದ ಕ್ರೌಡ್ ಸೋರ್ಸಿಂಗ್ ಯೋಜನೆಗಳು. ಆಸಕ್ತಿ ಇರುವವರು ಈ ಕೊಂಡಿಗಳ ಮೂಲಕ ಹೋಗಿ ನೊಂದಾಯಿಸಿಕೊಂಡು ಅನುವಾದ ಹಾಗೂ ಪದಕಟ್ಟುವ ಕೆಲಸಕ್ಕೆ ಕೈಜೋಡಿಸಬಹುದು. (ಮತ್ತಿತರ ಯೋಜನೆಗಳು ಯಾವುದಾದರೂ ಗೊತ್ತಿದ್ದಲ್ಲಿ ಕಾಮೆಂಟ್ ಮಾಡಿ)


ಈ ಅನುವಾದಗಳಲ್ಲಿ ಇಂಗ್ಲೀಷಿಗೆ ಪರ್ಯಾಯವಾಗಿ ಅನೇಕ ಹೊಸ ಹೊಸ ಪದಗಳೂ ಇವೆ.  ಹಾಗಂತ ಈ ಅನುವಾದಗಳು ಎಲ್ಲವೂ ಪೂರ್ತಿ ಸರಿ ಇದೆ ಎಂದು ಹೇಳಲಾಗುವುದಿಲ್ಲ. ಇದು ನಮ್ಮ ನಿಮ್ಮಂತಹ ಸಾಮಾನ್ಯ ಜನರೇ ಮಾಡಿರುವುದರಿಂದ ಅನೇಕ ತಪ್ಪುಗಳೂ ನುಸುಳಿವೆ. ಕೆಲವು ಅನುವಾದಗಳು ಸರಿಯಿಲ್ಲ ಎಂದೂ ಅನ್ನಿಸಬಹುದು. ನೀವೂ ಅನುವಾದಕರಾಗಿ ಸೇರಿಕೊಂಡು ಅನುವಾದಗಳನ್ನು (ಸರಿ) ಮಾಡಬಹುದು. ಈಗಾಗಲೇ ಮಾಡಿರುವ ಅನುವಾದಗಳಲ್ಲಿ ನಿಮಗೆ ಸರಿ ಎನ್ನಿಸುವುದಕ್ಕೆ ಮತ ಹಾಕಬಹುದು. ಇಲ್ಲಿ ಕಟ್ಟುವ ಪದಗಳು, ಅನುವಾದಗಳು ಮುಂದೆ ವ್ಯಾಪಕವಾಗಿ ಬಳಕೆಗೆ ಬಂದು ಕನ್ನಡದ ಪದಸಂಪತ್ತಿಗೆ ಸೇರುವ ಸಾಧ್ಯತೆಯೂ ಇದೆ.

ವಿಕಿಮೀಡಿಯಾ, ಮೊಜಿಲ್ಲಾ, FUEL, MX Player ಇವು non-commercial projects ಆಗಿದ್ದು ಅನುವಾದಗಳನ್ನು ಬಳಕೆಗಾಗಿ ಉಚಿತವಾಗಿ ಅವರಿಂದ ಪಡೆದುಕೊಳ್ಳಬಹುದು.  ಉಳಿದವುಗಳು commercial ಆಗಿದ್ದು ಆಯಾ ಸೇವೆಗಳಲ್ಲಿ ಮಾತ್ರ ಬಳಕೆಯಾಗುತ್ತವೆ. FUEL ಪ್ರಾಜೆಕ್ಟ್ ಎಂಬುದು terminology standardization ಕೆಲಸದಲ್ಲಿ ತೊಡಗಿದ್ದು ಕಂಪ್ಯೂಟರ್ ಮತ್ತು ಅಂತರಜಾಲ ಲೋಕದ ವಿವಿಧ ತಂತ್ರಾಂಶ, ಜಾಲತಾಣಗಳಲ್ಲಿ ಬಳಸಲು ನೆರವಾಗುವಂತೆ standard terminology database ರಚಿಸುತ್ತಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಬಹುದು: http://fuelproject.org/about/


ಬಳಕೆದಾರನಾಗಿ ಏನು ಮಾಡಬಹುದು.? (As User)


 ವಾಟ್ಸಪ್  ಕನ್ನಡದಲ್ಲಿ...
ಈ ಮೇಲಿನ ಎಲ್ಲವೂ ಈಗಾಗಲೇ ಕನ್ನಡದಲ್ಲಿ ಲಾಂಚ್ ಆಗಿವೆ. ನೀವು ಇವುಗಳನ್ನು ಬಳಸುತ್ತಿದ್ದಲ್ಲಿ ಯೂಸರ್ ಇಂಟರ್ಫೇಸನ್ನು ಕನ್ನಡಕ್ಕೆ ಬದಲಾಯಿಸಿಕೊಳ್ಳಬಹುದು. ಅದಕ್ಕಾಗಿ ಮಾಡಬೇಕಾದ್ದಿಷ್ಟೆ. Account Settingsಗೆ ಹೋಗಿ ಅದರಲ್ಲಿ Language ಆಯ್ಕೆಯಲ್ಲಿ ’ಕನ್ನಡ’ವನ್ನು ಆಯ್ಕೆಮಾಡಿಕೊಂಡರೆ ಆಯಿತು. ಕನ್ನಡಿಗರೆಲ್ಲರು ಎಲ್ಲಾ ಅಂತರಜಾಲ ಸೇವೆಗಳಲ್ಲಿ ಇಂಟರ್ಫೇಸನ್ನು ಕನ್ನಡಕ್ಕೆ ಬದಲಾಯಿಸಿಕೊಂಡು ಕನ್ನಡದ ಬೆಳವಣಿಗೆಗೆ ನೆರವಾಗಬೇಕು.

ಪ್ರಯೋಜನಗಳೇನು? 

ಮಾಹಿತಿತಂತ್ರಜ್ಞಾನ ಮತ್ತು ಅಂತರಜಾಲಕ್ಕೆ ಸಂಬಂಧಿಸಿದಂತೆ ಕನ್ನಡದ ಹೊಸ ಹೊಸ ಪದಗಳು ರಚನೆಯಾಗುತ್ತವೆ.

ಐ.ಟಿ ಮುಂತಾದ ಕಡೆ ಕೆಲಸ ಮಾಡುವ ಬಹುತೇಕರಿಗೆ ಕನ್ನಡ ಬಳಕೆಯೇ ತಪ್ಪಿಹೋಗಿರುತ್ತದೆ. ಇದರಿಂದಾಗಿ ಸ್ವಲ್ಪವಾದರೂ ಕನ್ನಡ ಬಳಕೆ ಉಳಿಯುತ್ತದೆ. ಹೊಸಹೊಸ ಪದಗಳೂ ತಿಳಿಯುತ್ತವೆ. 

ಕಾರ್ಪೋರೇಟ್ ಕಂಪನಿಗಳಾಗಲೀ ಮತ್ಯಾವುದೇ ಸೇವಾದಾತರೇ ಆಗಲೀ ಆಯಾ ಭಾಷೆಯ ಬಳಕೆದಾರರು ಎಷ್ಟಿದ್ದಾರೆ ಎಂಬ ಅಂಕಿಅಂಶಗಳ ನಿಗಾ ಇಡುತ್ತವೆ. ಹೆಚ್ಚು ಬಳಕೆಯಿಂದಾಗಿ ಕನ್ನಡ ಬಳಸುವವರು ಬಹಳ ಜನ ಇದ್ದಾರೆ ಎಂಬುದು ಕಂಪನಿಗಳಿಗೆ ತಿಳಿಯುತ್ತದೆ. ಆ ಭಾಷೆಯ ಬಳಕೆದಾರರು ಹೆಚ್ಚಿದ್ದಷ್ಟೂ ಅವರ ಇನ್ನಿತರ ಯೋಜನೆಗಳಲ್ಲಿ ಆ ಭಾಷೆಗಳನ್ನೂ ಸೇರಿಸಿಕೊಳ್ಳುತ್ತವೆ. ತಂತ್ರಜ್ಞಾನದಲ್ಲಿ ಕನ್ನಡದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇದರಿಂದಾಗಿ ಕನ್ನಡವು ಜಾಗತಿಕ ಮಟ್ಟದಲ್ಲಿಯೂ ಗುರುತಿಸಿಕೊಳ್ಳಲು ನೆರವಾಗುತ್ತದೆ. ಹೆಚ್ಚು ಹೆಚ್ಚು ಜನ ಬಳಸಲು ಶುರುಮಾಡಿದಂತೆ ಕನ್ನಡದ ಉತ್ಪನ್ನಗಳಿಗೂ ಬೇಡಿಕೆ ಇದೆ ಎಂಬುದು ತಿಳಿದು ಎಲ್ಲಾ ಸೇವೆಗಳನ್ನೂ ಕನ್ನಡದಲ್ಲಿ ಕೊಡಲು ಮುಂದಾಗುತ್ತವೆ, ಕನ್ನಡ ಚೆನ್ನಾಗಿ ಗೊತ್ತಿರುವವರ ಅಗತ್ಯ ಉಂಟಾಗಿ ಉದ್ಯೋಗಾವಕಾಶಗಳ ಬಾಗಿಲೂ ತೆರೆಯುತ್ತದೆ. ಕನ್ನಡದ ಬಳಕೆ ಹೆಚ್ಚುತ್ತದೆ. ಭಾಷೆಯ ಮತ್ತು ಭಾಷಿಕರ ಬೆಳವಣಿಗೆಗೆ ಸಹಾಯವಾಗುತ್ತದೆ.
******

*೨೦೧೪ರಲ್ಲಿ ಫೇಸ್ ಬುಕ್ ಕನ್ನಡದಲ್ಲಿ ಅಧಿಕೃತವಾಗಿ ಬಿಡುಗಡೆಯಾದಾಗ ನಾನು 'ಒನ್ ಇಂಡಿಯಾ ಕನ್ನಡ' ಸುದ್ದಿತಾಣದಲ್ಲಿ ಬರೆದಿದ್ದ ಲೇಖನದ ಕೊಂಡಿ ಇಲ್ಲಿದೆ: ಫೇಸ್ ಬುಕ್ ಈಗ ಕನ್ನಡ ಭಾಷೆಯಲ್ಲಿ ಲೋಕಾರ್ಪಣೆ

*ಕನ್ನಡದ ತಂತ್ರಜ್ಞಾನ ಬಳಕೆ ಬಗ್ಗೆ ’ಕನ್ನಡಪ್ರಭ’ಕ್ಕೆ ಬರೆದಿದ್ದ ಒಂದು ಬರೆಹ: ಬಾರಿಸು ಡಿಜಿಟಲ್ ಕನ್ನಡ ಡಿಂಡಿಮವ

1 ಕಾಮೆಂಟ್‌:

Unknown ಹೇಳಿದರು...

live science ನ ಅರ್ಥ ಕನ್ನಡದಲ್ಲಿ ಬೇಕಾಗಿದೆ