ಪುಟಗಳು

ಶುಕ್ರವಾರ, ಸೆಪ್ಟೆಂಬರ್ 16, 2016

ಕನ್ನಡ ಸಬ್‍ ಟೈಟಲ್ಸ್ ರಚಿಸುವ ಸರಳ ವಿಧಾನ

Kannada subtitles making

ಜಗತ್ತಿನ ಬೇರೆ ಬೇರೆ ದೇಶಗಳ ವಿವಿಧ ಭಾಷೆಗಳಲ್ಲಿ ಉತ್ತಮ ಸಿನೆಮಾಗಳು ತಯಾರಾಗುತ್ತಿರುತ್ತವೆ. ಒಂದು ಭಾಷೆಯ ಸಿನೆಮಾ ಕಲೆಯನ್ನು ವಿವಿಧ ಭಾಷೆಗಳಲ್ಲಿ ಜನರಿಗೆ ತಲುಪಿಸಲು ಇರುವ ಎರಡು ವಿಧಾನಗಳೆಂದರೆ, ಒಂದು ವಾಯ್ಸ್ ಡಬ್ಬಿಂಗ್, ಮತ್ತೊಂದು ಸಬ್ ಟೈಟ್ಲಿಂಗ್. ಇದರಲ್ಲಿ ಡಬ್ಬಿಂಗ್ ಎಲ್ಲರಿಗೂ ಸುಲಭವಾಗಿ ತಲುಪುವಂತದ್ದಾಗಿದ್ದು ಬಹಳ ಸಹಾಯಕಾರಿಯಾಗಿರುತ್ತದೆ.

ಅಡಿಬರಹಗಳನ್ನು ಬಳಸುವುದು ಮತ್ತೊಂದು ಮಾರ್ಗ. ಸಾಮಾನ್ಯವಾಗಿ ನಮಗೆ ವಿವಿಧ ಭಾಷೆಗಳ ಸಿನೆಮಾಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಸುವುದು ಇಂಗ್ಲೀಷ್ ಭಾಷೆಯ ಅಡಿಬರಹಗಳು. ಆದರೆ ಇಂಗ್ಲೀಷಿಗಿಂತ ಹೆಚ್ಚು ಸಾಮಾನ್ಯವಾಗಿ ಅರ್ಥವಾಗುವ ನಮ್ಮ ಕನ್ನಡದಲ್ಲಿದ್ದರೆ ಅದು ಹೆಚ್ಚು ಜನರನ್ನು ತಲುಪಲು ಒಳ್ಳೆಯದು. ಕಿವಿಕೇಳದ ತೊಂದರೆ ಇರುವವರಿಗೂ ಇದು ಸಹಾಯಕಾರಿ. ಹಾಗಾಗಿ ಉತ್ತಮ ಸಿನೆಮಾಗಳಿರಬಹುದು ಅಥವಾ ಶೈಕ್ಷಣಿಕ, ಮಾಹಿತಿ ಇನ್ನಿತರ ವೀಡಿಯೋಗಳಿರಬಹುದು, ಅದನ್ನು ಆಸಕ್ತರಿಗೆ, ಅಗತ್ಯ ಇರುವವರಿಗೆ ತಲುಪಿಸಲು ಕನ್ನಡ ಅಡಿಬರಹಗಳು ಬೇಕು. ಇಂತಹ ಕನ್ನಡ ಅಡಿಬರಹಗಳನ್ನು ತಯಾರಿಸುವುದನ್ನು ಒಂದು ಸಾಮುದಾಯಿಕ ಕೆಲಸವನ್ನಾಗಿ ಮಾಡಬಹುದು.

ಇಲ್ಲಿ ನಾವು ಆಂಗ್ಲ ಅಡಿಬರಹಗಳ ಕಡತಗಳ ಮೂಲಕ ಕನ್ನಡ ಅಡಿಬರಹಗಳನ್ನು ರಚಿಸುವ ಬಗ್ಗೆ ತಿಳಿದುಕೊಳ್ಳೋಣ. ಹೆಚ್ಚು ತಾಂತ್ರಿಕತೆಯ ಬಗ್ಗೆ ತಲೆಕೆಡಿಸಿಕೊಳ್ಳದೇ ಬಹಳ ವಿವರವಾಗಿ ಹೋಗದೇ ಸರಳವಾಗಿ ಅರ್ಥಮಾಡಿಕೊಂಡು ಆಮೇಲೆ ಅದರಲ್ಲಿ ಹೆಚ್ಚಿನ ಪ್ರಯತ್ನ, ಪ್ರಯೋಗಗಳನ್ನು ಮಾಡಬಹುದು.

ಅಡಿಬರಹಗಳಲ್ಲಿ image based, text based ವಿಧಗಳಿವೆ. ibx, sub, srt, vtt ಹೀಗೆ ಹಲವಾರು ಮಾದರಿಗಳಿವೆ. ಅವುಗಳಲ್ಲಿ ಹೆಚ್ಚು ಸಾಮಾನ್ಯ, ಸರಳ ಮತ್ತು ಜನಪ್ರಿಯವಾದದ್ದು .SRT ಮಾದರಿ. ಇದಕ್ಕೆ subrip ಫೈಲ್ ಎಂದು ಹೇಳುತ್ತಾರೆ. ಈ ಫೈಲನ್ನು ನೋಟ್ ಪ್ಯಾಡ್ ನಲ್ಲಿ ತೆರೆಯಬಹುದು. (ಫೈಲ್ ಮೇಲೆ ರೈಟ್ ಕ್ಲಿಕ್ ಮಾಡಿ ಓಪನ್ ವಿತ್ ನೋಟ್ ಪ್ಯಾಡ್).

ಈ ಫೈಲಿನ ಒಳರಚನೆ ಈ ಕೆಳಗಿನಂತೆ ಇರುತ್ತದೆ.

1
00:04:00,199 --> 00:04:03,970
Sir, the government defending
goons like them deliberately.

2
00:04:04,033 --> 00:04:06,835
We must teach them a lesson,
sir. - Good.

3
00:04:07,099 --> 00:04:08,768
Did you just finish your training?

ಈ ರಚನೆಯನ್ನು ಹೀಗೆ ಅರ್ಥೈಸಿಕೊಳ್ಳಬಹುದು.

ಮೊದಲ ಸಾಲು: ಕ್ರಮಾಂಕ (೧, ೨, ೩, ೪...........)
ಎರಡನೇ ಸಾಲು: ಸಂಭಾಷಣೆ ಶುರುವಾಗುವ ಮತ್ತು ಕೊನೆಯಾಗುವ ಸಮಯ.
(ಗಂಟೆ:ನಿಮಿಷ:ಸೆಕೆಂಡು,ಮಿಲಿಸೆಕೆಂಡು --> ಗಂಟೆ:ನಿಮಿಷ:ಸೆಕೆಂಡು,ಮಿಲಿಸೆಕೆಂಡು)
ಮೂರನೇ ಸಾಲು: ಸಂಭಾಷಣೆಯ ಪಠ್ಯ ಅಂದರೆ ಮಾತುಗಳು (ಅಥವಾ ಇತರ ಶಬ್ದಗಳು)
ಕೊನೆಯ ಸಾಲು: ಒಂದು ಖಾಲಿ ಜಾಗ (ಸಾಲು)

ಇನ್ನು ಕನ್ನಡ ಅಡಿಬರಹ ರಚಿಸುವುದು ಹೇಗೆಂದು ತಿಳಿಯೋಣ:
1. ಮೊದಲಿಗೆ ಯಾವ ಸಿನೆಮಾಗೆ ಕನ್ನಡ ಅಡಿಬರಹಗಳನ್ನು ರಚಿಸಬೇಕೋ ಅದರ ಇಂಗ್ಲೀಷ್ SRT ಫೈಲನ್ನು ಡೌನ್ಲೋಡ್ ಮಾಡಿಕೊಳ್ಳಿ. ಈ ಜಾಲತಾಣಗಳಲ್ಲಿ ಹುಡುಕಿ ಇಳಿಸಿಕೊಳ್ಳಬಹುದು: Opensubtitles.org, Subscene.com, Moviesubtitles.org, Cinemasubtitles.com
2. ಆ ಫೈಲನ್ನು ನೋಟ್ ಪ್ಯಾಡಿನಲ್ಲಿ ತೆರೆದುಕೊಳ್ಳಿ.
3. ಮೊದಲು ಎರಡು-ಮೂರು ಇಂಗ್ಲೀಷಿನ ಸಂಭಾಷಣೆಗಳಿರುವಲ್ಲಿ ಭಾಷಾಂತರ ಮಾಡಿ ಕನ್ನಡದಲ್ಲಿ ಬರೆಯಿರಿ. (ಯಾವುದೇ ಕನ್ನಡ ಯುನಿಕೋಡ್ ಟೈಪಿಂಗ್ ತಂತ್ರಾಂಶವಾದರೂ ಬಳಸಿ). ಭಾಷಾಂತರ ಅಂದರೆ ಪದಕ್ಕೆ ಪದ ಅನುವಾದ ಮಾಡಬೇಕಂತಿಲ್ಲ. ಸಿನೆಮಾ ನೋಡಿಕೊಂಡು ಸಂದರ್ಭಕ್ಕೆ ತಕ್ಕುನಾಗಿ, ಭಾವಾರ್ಥ ಬರುವಂತೆ, ಕನ್ನಡಕ್ಕೆ ತನ್ನಿ.
4. ಅನಂತರ File - Save As ಕೊಡಿ. ಆಗ ಬರುವ ಡೈಲಾಗ್ ಬಾಕ್ಸಿನಲ್ಲಿ ಕೆಳಗೆ Save as type ಇರುವಲ್ಲಿ All files ಆಯ್ಕೆ ಮಾಡಿ. Encoding ಎಂದು ಇರುವಲ್ಲಿ Unicode ಆಯ್ಕೆ ಮಾಡಿಕೊಳ್ಳಿ. (By default ಅದು ANSI ಎಂದು ಇರುತ್ತದೆ). ಫೈಲಿಗೆ ಹೆಸರು ಕೊಟ್ಟು Save ಮಾಡಿ. ನೆನಪಿರಲಿ, ಆ ಫೈಲ್ extension ಬದಲಾಗಬಾರದು. .SRT ಎಂದೇ ಇರಬೇಕು.
5. ಈಗ ಆ ಫೈಲ್ ತೆರೆದು ಇನ್ನುಳಿದ ಸಂಭಾಷಣೆಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿ. ಒಮ್ಮೆ ಶುರುಮಾಡಿ ಸ್ವಲ್ಪ ಭಾಷಾಂತರ ಮಾಡಿ ಉಳಿಸಿಟ್ಟರೆ ಮತ್ತೆ ಅದನ್ನು ಯಾವಾಗಬೇಕಾದರೂ ನೋಟ್ ಪ್ಯಾಡಿನಲ್ಲಿ ತೆರೆದು ಕೆಲಸ ಮುಂದುವರೆಸಿ ಮತ್ತೆ ಸೇವ್ ಮಾಡಬಹುದು.

ಇಷ್ಟು ಮಾಡಿದರೆ ಕನ್ನಡ ಅಡಿಬರಹಗಳ ಕಡತ ರೆಡಿ!. ಈ srt ಫೈಲನ್ನು ನಿಮ್ಮಲ್ಲಿರುವ ಸಿನೆಮಾ ಜೊತೆಗೆ ಲೋಡ್ ಮಾಡಿಕೊಂಡು ಕನ್ನಡ ಅಡಿಬರಹಗಳ ಸಮೇತ ನೋಡಬಹುದು.


*******

ಕೆಲವೊಂದು ವೀಡಿಯೋ ಪ್ಲೇಯರ್‍ಗಳಲ್ಲಿ ಈ srt ಫೈಲ್‍ನ ಕನ್ನಡ ಅಕ್ಷರಗಳು ಸರಿಯಾಗಿ ಮೂಡುವುದಿಲ್ಲ. ಉದಾಹರಣೆಗೆ, ಬಹುಪ್ರಚಲಿತ VLC Player.

SRT file on VLC player - Improper font rendering

ಇದರಲ್ಲಿ ಕನ್ನಡ ಸರಿಯಾಗಿ ಮೂಡಬೇಕೆಂದರೆ .ass ಎಂಬ extension ಹೊಂದಿರುವ AdvanceSubstationAlpha ಎಂಬ ಫೈಲ್ ಮಾದರಿ ಬಳಸಬೇಕು. ಹಾಗಾಗಿ srt ಫೈಲನ್ನು ass ಕಡತವಾಗಿ ಪರಿವರ್ತಿಸಬೇಕು. ಇದಕ್ಕೆ Subtitle Edit ಅನ್ನುವ ತಂತ್ರಾಂಶವೊಂದಿದೆ. ಅದನ್ನು ಅಳವಡಿಸಿಕೊಂಡು ಅದರಲ್ಲಿ srt file ತೆರೆದು save as ಕೊಟ್ಟು .ass file ಎಂದು ಸೇವ್ ಮಾಡಿದರೆ ಮುಗಿಯಿತು. ಈಗ ಆ .ass ಫೈಲನ್ನು ವಿ.ಎಲ್.ಸಿ.ಯಲ್ಲಿ ಸಿನೆಮಾ ಜೊತೆ ಲೋಡ್ ಮಾಡಿದರೆ ಸುಂದರ ಕನ್ನಡ ಅಕ್ಷರಗಳು ಕಾಣುತ್ತವೆ.

ASS file on VLC Player - Proper font rendering

ಅಡಿಬರಹದ ಅಕ್ಷರಗಳ ಗಾತ್ರವನ್ನು ಬೇಕಾದರೆ ಬದಲಾಯಿಸಿಕೊಳ್ಳಬಹುದು. ass ಫೈಲನ್ನು ನೋಟ್ ಪ್ಯಾಡಿನಲ್ಲಿ ತೆರೆದು ಫಾಂಟ್ ಗಾತ್ರ ಹೆಚ್ಚು/ಕಡಿಮೆ ಮಾಡಿಕೊಳ್ಳಿ. ಬೇಕಿದ್ದರೆ ಬೇರೆ ಫಾಂಟ್ ಹೆಸರನ್ನು ಕೊಡಬಹುದು. ನಿಮ್ಮ ಸಿಸ್ಟಮ್ಮಲ್ಲಿ ಆ ಫಾಂಟ್ ಇರಬೇಕಷ್ಟೆ. ಇಲ್ಲದಿದ್ದಲ್ಲಿ ಅದು ನಿಮ್ಮ ಗಣಕದ ಕಾರ್ಯಾಚರಣ ವ್ಯವಸ್ಥೆಯ default ಫಾಂಟನ್ನು ತೆಗೆದುಕೊಳ್ಳುತ್ತದೆ. ಉದಾ: ವಿಂಡೋಸ್‍ಗೆ 'ತುಂಗಾ'

Open with notepad and change font size

ಇದೇ ರೀತಿಯಲ್ಲಿ ಯಾವುದೇ ವೀಡಿಯೋಗಳಿಗೆ ಹೊಸದಾಗಿ ಕನ್ನಡದಲ್ಲೇ ನೇರವಾಗಿ ಅಡಿಬರಹ ರೂಪಿಸಬಹುದು. ವೀಡಿಯೋ ನೋಡುತ್ತಾ ಪ್ರತಿಯೊಂದು ಸಂಭಾಷಣೆಯ ಶುರು ಮತ್ತು ಕೊನೆಯಾಗುವ ಸಮಯ ದಾಖಲಿಸಿಕೊಂಡು ಅದಕ್ಕೆ ತಕ್ಕನಾಗಿ ಅಡಿಬರಹ ಬರೆಯಬೇಕಾಗುತ್ತದೆ. ನೋಟ್ ಪ್ಯಾಡ್‍ನಲ್ಲೇ ಮೇಲೆ ತೋರಿಸಿರುವ ಮಾದರಿಯಲ್ಲೇ ರಚಿಸಿದರಾಯಿತು. ಉಳಿಸುವಾಗ srt file extension ಇರಬೇಕು. ಈಗಾಗಲೇ ಉಪಶೀರ್ಷಿಕೆಗಳ ಕಡತ ಇಲ್ಲದಿದ್ದಲ್ಲಿ ಆ ವೀಡಿಯೋದಲ್ಲಿನ ಮಾತುಗಳು ಮತ್ತು ಶಬ್ದಗಳ ಸಮಯ ಮಾಹಿತಿಯನ್ನು (ವಾಯ್ಸ್/ಸೌಂಡ್ ಟ್ರ್ಯಾಕ್ ಮಾಹಿತಿ) ಒಟ್ಟಿಗೇ ಪಡೆಯಲೂ ಯಾವುದಾದರೂ ತಂತ್ರಾಂಶ ಇರಬಹುದು. ವೃತ್ತಿಪರರಲ್ಲಿ ಕೇಳಿದರೆ ಗೊತ್ತಾಗುತ್ತದೆ. ಆ ಮಾಹಿತಿ ಸಿಕ್ಕಿದರೆ ವೀಡಿಯೋವನ್ನು ನೋಡುತ್ತಾ ಸಂಭಾಷಣೆ/ನಿರೂಪಣೆಯ ಸಮಯಗಳನ್ನು ನೋಟ್ ಮಾಡಿಕೊಳ್ಳುವ ಕೆಲಸ ತಪ್ಪುತ್ತದೆ.


 • Subscene, opensubtitles, moviesubtitles ಮುಂತಾದ ಉಪಶೀರ್ಷಿಕೆಗಳ ಜಾಲತಾಣಗಳಲ್ಲಿ ಕನ್ನಡ ಫೈಲುಗಳನ್ನು ಅಪ್ಲೋಡ್ ಮಾಡಲು ಅಲ್ಲಿ ಕನ್ನಡ ಭಾಷೆಯ ಆಯ್ಕೆ ಇಲ್ಲ. cinemasubtitles.com ಎಂಬ ತಾಣದಲ್ಲಿ ಕನ್ನಡ ಆಯ್ಕೆ ಇದೆ. ನಾವು ರಚಿಸುವ ಕನ್ನಡ ಅಡಿಬರಹಗಳ ಫೈಲುಗಳನ್ನು ಅಲ್ಲಿಗೆ ಹಾಕಬಹುದು.
 • Subtitle workshop, Subtitle Edit ಎಂಬ ಟೂಲ್‍ಗಳು ಈ ಸಬ್ ಟೈಟಲ್ ರಚನೆಗೆ, ಎಡಿಟಿಂಗಿಗೆ, ವೀಡಿಯೋ ಹೊಂದಾಣಿಕೆಗೆ, ಪರೀಕ್ಷೆಗೆ ಬೇಕಾದ ಹಲವು advanced ಸೌಲಭ್ಯಗಳನ್ನು ಹೊಂದಿವೆ. ಆಸಕ್ತರು ಪ್ರಯತ್ನಿಸಬಹುದು. Subtitle Edit ಚೆನ್ನಾಗಿದೆ. ಇನ್ನೂ ಹಲವು ಇಲ್ಲಿವೆ: Top 10 Subtitle Editor Tools
 • ಸಬ್‍ಟೈಟಲ್ಸ್ ಹೊಂದಿರುವ DVD VOB ಮುಂತಾದ ಇನ್ನಿತರ ನಮೂನೆಗಳ ವೀಡಿಯೋಗಳಿಂದ ಸಬ್‍ಟೈಟಲ್ ಗಳನ್ನು extract ಮಾಡಲು Subrip, Subtitle Edit ಮುಂತಾದ ತಂತ್ರಾಂಶಗಳನ್ನು ಪ್ರಯತ್ನಿಸಬಹುದು. (ಎಲ್ಲಾ ವೀಡಿಯೋಗಳಲ್ಲೂ ಇದು ಸಾಧ್ಯವಾಗುವುದಿಲ್ಲ)
 • ವೀಡಿಯೋಗಳನ್ನು ಬೇರೆಬೇರೆ ಮಾದರಿಗಳಿಗೆ ಪರಿವರ್ತಿಸಲು ಮತ್ತು ಉಪಶೀರ್ಷಿಕೆಗಳನ್ನು ವೀಡಿಯೋ ಜೊತೆಗೇ ಸೇರಿಸಿ integrate/embed ಮಾಡಲು FreeMakeVideoConverter, WonderShareVideoConverter ಮುಂತಾದ ತಂತ್ರಾಂಶಗಳನ್ನು ಬಳಸಬಹುದು.
 • ಸಬ್‍ಟೈಟಲ್‍ಗಳ ಬಗ್ಗೆ ವಿವರ ಮಾಹಿತಿಗಾಗಿ ವಿಕಿಪೀಡಿಯಾ ಪುಟದ ಕೊಂಡಿ: Subtitle (captioning)
 • Blood Diamond ಸಿನೆಮಾದ ಕನ್ನಡ ಅಡಿಬರಹಗಳು ಇಲ್ಲಿವೆ: Blood Diamond - Kannada Subtitles
 • ಮೇಲಿನ ಮಾಹಿತಿಗಳೆಲ್ಲವೂ Windows operating systemಗೆ ಸಂಬಂಧಿಸಿದಂತದ್ದಾಗಿದೆ. Linux, Mac ಮುಂತಾದ O.S.ಗಳಲ್ಲೂ ಇದೇ ರೀತಿ ಪ್ರಯತ್ನಿಸಬಹುದು.
 • ಇಲ್ಲೊಂದು Online Subtitles Translator & Editor ಇದೆ. ಇದು ಗೂಗಲ್ ಅನುವಾದವನ್ನು ಬಳಸುತ್ತದೆ. ಅದರಲ್ಲಿ ಇಂಗ್ಲೀಷಿನ ಫೈಲನ್ನು ಅಪ್ಲೋಡ್ ಮಾಡಿದರೆ ಕನ್ನಡಕ್ಕೆ ಅನುವಾದಿಸುತ್ತದೆ. ಬೇಕಿದ್ದಲ್ಲಿ ನಾವು ಅದನ್ನು ಆನ್ ಲೈನ್ ಎಡಿಟ್ ಮಾಡಿ ಸೇವ್ ಮಾಡಿಕೊಳ್ಳಬಹುದು. ಆದರೆ ಗೂಗಲ್ ಅನುವಾದ ಅಷ್ಟು ಸರಿಯಾಗಿರುವುದಿಲ್ಲ.
 • ಕನ್ನಡ ಉಪಶೀರ್ಷಿಕೆಗಳನ್ನು ಬರೆಯಲು ಆಸಕ್ತಿ ಇರುವವರಿಗಾಗಿ, ಮಾಹಿತಿಗಳ ವಿನಿಮಯಕ್ಕೆ, ಚರ್ಚೆಗೆ ಫೇಸ್‍ಬುಕ್ ಗುಂಪೊಂದನ್ನು ರಚಿಸಲಾಗಿದೆ. ಆಸಕ್ತರು ಈ ಗುಂಪನ್ನು ಸೇರಬಹುದು: Kannada Subtitles - ಕನ್ನಡ ಅಡಿಬರಹಗಳು
- ವಿಕಾಸ್ ಹೆಗಡೆ (vikashegde82@gmail.com)

ಅಡಿಬರಹಗಳೊಂದಿಗೆ 'ಅಪೊಕ್ಯಾಲಿಪ್ಟೋ' ಚಿತ್ರದ ಕೆಲವು ಸ್ಕ್ರೀನ್ ‍ಶಾಟ್ಸ್
ಶುಕ್ರವಾರ, ಸೆಪ್ಟೆಂಬರ್ 2, 2016

ಅಮೇಜಾನ್ ಕಿಂಡಲ್ ಮತ್ತು ಕನ್ನಡ

Amazon Kindle and Kannada Support

ಕಿಂಡಲ್ ಇ-ಬುಕ್ ರೀಡರ್ ಬಳಕೆದಾರರಿಗೆ ತಿಳಿದಿರುವಂತೆ ಕಿಂಡಲ್ಲಿನ ಯಾವುದೇ ಮಾಡೆಲ್ಲುಗಳಲ್ಲಿ ಕನ್ನಡದ ಪಠ್ಯವು bydefault ಸರಿಯಾಗಿ ಮೂಡುವುದಿಲ್ಲ. ಮೂಲತಃ ಅಮೆರಿಕಾದ್ದಾದ ಅಮೇಜಾನ್ ಕಿಂಡಲ್, ಭಾರತದ ಮಾರುಕಟ್ಟೆಗೆ ಪ್ರವೇಶವಾದಾನಂತರ ಕನ್ನಡ ಸೇರಿದಂತೆ ಇತರ ಭಾರತ ಭಾಷೆಗಳಿಗೆ ಬೆಂಬಲ ಕೊಡಬಹುದೆಂಬ ನಿರೀಕ್ಷೆ ಇತ್ತು. ಆದರೆ ಈಗ ಕೆಲವರ್ಷಗಳೇ ಕಳೆದುಹೋದರೂ ಅದು ಆಗಲಿಲ್ಲ. ಹಾಗಾಗಿ ಇದುವರೆಗೆ ಭಾರತೀಯ ಭಾಷೆಗಳ ಪುಸ್ತಕಗಳನ್ನು ಅಮೇಜಾನಿನಲ್ಲಿ ಅಧಿಕೃತವಾಗಿ ಪ್ರಕಟಿಸಲು ಸಾಧ್ಯವಾಗಿರಲಿಲ್ಲ. ಆದಾಗಿಯೂ ಸಹ ಕೆಲವು ಕನ್ನಡ ಲೇಖಕರು ತಮ್ಮ ಪುಸ್ತಕವನ್ನು ಮೊಬಿ (mobi) ಇ-ಪುಸ್ತಕ ಮಾದರಿಗೆ ಪರಿವರ್ತಿಸಿ ಡೈರೆಕ್ಟ್ ಪಬ್ಲಿಷಿಂಗ್ ಮೂಲಕ ಅಮೇಜಾನ್ ನಲ್ಲಿ ಹಾಕಿದ್ದರು. (ಉದಾಹರಣೆಗೆ, ಶ್ರೀ ನಾಗೇಶ್ ಕುಮಾರರ ‘ಮುಳುಗುವ ಕೊಳ’ ಕಾದಂಬರಿ) ಆದರೆ ಅವುಗಳನ್ನು ಓದಲು ಫಾಂಟ್ ಸಮಸ್ಯೆಯಾಗಿತ್ತು. ಕನ್ನಡದ ಅಕ್ಷರಗಳು ಕಿಂಡಲ್ ರೀಡರಿನಲ್ಲಿ ಸರಿಯಾಗಿ ಮೂಡುತ್ತಿರಲಿಲ್ಲ. ಕಿಂಡಲ್ಲಿನ ಬ್ರೌಸರ್ ನಲ್ಲೂ ಕೂಡ ಇದೇ ಸಮಸ್ಯೆಯಿಂದಾಗಿ ಕನ್ನಡ ಜಾಲತಾಣಗಳನ್ನು ಓದಲೂ ಆಗುತ್ತಿರಲಿಲ್ಲ.

ಈ ನಡುವೆ ಕನ್ನಡದ ಕತೆಗಾರ ವಸುಧೇಂದ್ರ ಅವರು ಆಗಸ್ಟ್ ೨೦೧೬ರಲ್ಲಿ ತಮ್ಮ ಹೊಸ ಪುಸ್ತಕ ‘ಐದು ಪೈಸೆ ವರದಕ್ಷಿಣೆ’ಯ ಕಿಂಡಲ್ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಅದರ ಜೊತೆಗೆ ಕನ್ನಡ ಫಾಂಟ್ ಗಳು ಸರಿಯಾಗಿ ಕಾಣುವಂತೆ ಮಾಡುವುದು ಹೇಗೆ ಎಂಬ ಉಪಾಯವನ್ನೂ ಹೇಳಿದ್ದರು. ತಂತ್ರಜ್ಞ ಅಮರ್ ತುಂಬಳ್ಳಿಯವರು ಈ ಬಗ್ಗೆ ಕೆಲಸ ಮಾಡಿದ್ದು ಆ ತಂತ್ರವನ್ನು ತಮ್ಮ ಬ್ಲಾಗ್ ನಲ್ಲಿ ಬರೆದಿದ್ದಾರೆ.

ಅದು ಹೀಗಿದೆ:
 • ಹಂತ ೧: ಕಿಂಡಲ್ ಸಾಪ್ಟ್ ವೇರನ್ನು ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಿಕೊಂಡು ರೀಸ್ಟಾರ್ಟ್ ಮಾಡಿ.
 • ಹಂತ ೨: ಕಿಂಡಲ್ಲನ್ನು ಕಂಪ್ಯೂಟರಿಗೆ ಜೋಡಿಸಿ. ಕಿಂಡಲ್ ಡೈರೆಕ್ಟರಿ (ಡ್ರೈವ್) ತೆರೆದು ಅದರಲ್ಲಿ Fonts ಎನ್ನುವ ಫೋಲ್ಡರ್ ಒಂದನ್ನು ರಚಿಸಿಕೊಳ್ಳಿ.
 • ಹಂತ ೩: ಆನಂತರ ಕನ್ನಡದ ಯಾವುದೇ ಯುನಿಕೋಡ್ ಫಾಂಟನ್ನು ಫೋಲ್ಡರಿನಲ್ಲಿ ಹಾಕಿ. ಉದಾಹರಣೆಗೆ ಉಚಿತ Google Noto Fonts ಡೌನ್ಲೋಡ್ ಮಾಡಿ ಹಾಕಿಕೊಳ್ಳಬಹುದು. (ಆ ತಾಣದಲ್ಲಿ Kannada ಎಂದುಹುಡುಕಿ)
 • ಹಂತ ೪: ಕಿಂಡಲ್ ಡ್ರೈವ್ ನಲ್ಲಿ ಒಂದು ಖಾಲಿ ಫೈಲನ್ನು ರಚಿಸಿ ಅದನ್ನು USE_ALT_FONTS ಎಂದು ಹೆಸರಿಸಿ. (ಖಾಲಿ ಫೈಲ್ ಅಂದರೆ ಉದಾಹರಣೆಗೆ ಸುಮ್ಮನೇ ಒಂದು ನೋಟ್ ಪ್ಯಾಡ್ ಫೈಲ್ ರಚಿಸಿ ಅದರ .txt ಎಂಬ extension ತೆಗೆದುಬಿಡುವುದು. File becomes unusable ಎಂಬ ಎಚ್ಚರಿಕೆಯನ್ನು ನಿರ್ಲಕ್ಷಿಸಿ)
 • ಹಂತ ೫: ಕಿಂಡಲ್ಲನ್ನು ಕಂಪ್ಯೂಟರಿಂದ ಬೇರ್ಪಡಿಸಿ ರೀಸ್ಟಾರ್ಟ್ ಮಾಡಿ.

ಇಷ್ಟುಮಾಡಿ ಕನ್ನಡ ಇ-ಪುಸ್ತಕವನ್ನು ಕಿಂಡಲ್ಲಲ್ಲಿ ತೆರೆದರೆ ಕನ್ನಡ ಅಕ್ಷರಗಳು ಸರಿಯಾಗಿ ಮೂಡುತ್ತವೆ. ಇದು ಕಿಂಡಲ್ ಬೇಸಿಕ್ ಮಾಡೆಲ್ ಗಳಲ್ಲಿ ಆಗುವುದಿಲ್ಲ. ಕಿಂಡಲ್ ಟಚ್ ಮತ್ತು ಇನ್ನೂ ನಂತರದ ಮಾಡೆಲ್ಲುಗಳಲ್ಲಿ ಮಾತ್ರ ಸಾಧ್ಯ. ನನ್ನಲ್ಲಿ ಕಿಂಡಲ್ ಪೇಪರ್ ವೈಟ್ 1st generation ಮಾಡೆಲ್ ಇದ್ದು ಈ ಮೇಲಿನ ವಿಧಾನ ಯಶಸ್ವಿಯಾಗಿದೆ.

ವಸುಧೇಂದ್ರರ 'ಐದು ಪೈಸೆ ವರದಕ್ಷಿಣೆ' ಪುಸ್ತಕದ ಪುಟದ ನೋಟ

ನಾಗೇಶ್ ಕುಮಾರರ 'ಮುಳುಗುವ ಕೊಳ' ಪುಸ್ತಕದ ಪುಟದ ನೋಟ

ಈ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ವಸುಧೇಂದ್ರರ ಪುಸ್ತಕ ಪಬ್ಲಿಷ್ ಆದ ನಾಲ್ಕೇ ದಿನಗಳಲ್ಲಿ ಅಮೇಜಾನ್ ನವರು ಅವರ ಪುಸ್ತಕವನ್ನು ಅಲ್ಲಿಂದ ತೆಗೆದುಹಾಕಿದರು. ನಾಗೇಶ್ ಕುಮಾರರ ಎರಡು ಪುಸ್ತಕಗಳಿಗೂ ಅದೇ ಗತಿಯಾಯ್ತು. ಅಮೇಜಾನ್ ನವರು “ಸದ್ಯಕ್ಕೆ ನಾವು ಕನ್ನಡ ಭಾಷೆಯ ಪುಸ್ತಕಗಳಿಗೆ ಅವಕಾಶ (ವೇದಿಕೆ) ಒದಗಿಸುತ್ತಿಲ್ಲ” ಎಂಬ ಕಾರಣ ಕೊಟ್ಟಿರುವುದಾಗ ವಸುಧೇಂದ್ರ ಅವರು ತಮ್ಮ ಫೇಸ್ಬುಕ್ ಗೋಡೆಯಲ್ಲಿ ಬರೆದುಕೊಂಡರು. ಅಮೇಜಾನ್ ನ ಈ ನಡೆ ಕನ್ನಡ ನೆಟ್ ಜಗತ್ತಿನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಈ ಬಗ್ಗೆ ಆಗ್ರಹಿಸಿ ಅಮೇಜಾನ್ ಗೆ ಪತ್ರ ಬರೆದವು. ಹಲವು ಕನ್ನಡ, ಇಂಗ್ಲೀಷ್ ಪತ್ರಿಕೆಗಳು ಈ ಬಗ್ಗೆ ವರದಿಮಾಡಿವೆ. ಅವುಗಳ ಕೊಂಡಿ ಇಲ್ಲಿದೆ: ಪ್ರಜಾವಾಣಿ, ವಿಶ್ವವಾಣಿ, ಇಕನಾಮಿಕ್ ಟೈಮ್ಸ್, ದ ಹಿಂದೂ, ಬ್ಯಾಂಗಲೋರ್ ಮಿರರ್. ಕನ್ನಡದ ಇ-ಪುಸ್ತಕಗಳ ಲಭ್ಯತೆ ಮತ್ತು ಅಗತ್ಯತೆ ಬಗ್ಗೆ ಚರ್ಚೆಯೂ ನಡೆದಿದೆ. ಭಾರತದಲ್ಲಿ ಮಾರಾಟವಾಗುವ ಎಲ್ಲಾ ಗ್ಯಾಜೆಟ್‍ಗಳು ಕಡ್ಡಾಯವಾಗಿ ಭಾರತೀಯ ಭಾಷೆಗಳನ್ನು ಬೆಂಬಲಿಸಬೇಕು ಎಂಬ ನಿಯಮ ರೂಪಿಸುವಂತೆ ಸರ್ಕಾರಕ್ಕೆ ಆಗ್ರಹಿಸುವ ಅಭಿಯಾನವೂ ನಡೆದಿದೆಈಗ ಕನ್ನಡ ಹಲವು ಇ-ಪುಸ್ತಕಗಳು ಹಲವಾರು ಬೇರೆ ಬೇರೆ ತಾಣಗಳಲ್ಲಿ ದೊರೆಯುತ್ತಿವೆ. ಏನೇ ಆದರೂ ಮುದ್ರಣ ಮಾತ್ರ ಅಲ್ಲದೇ ಎಲ್ಲಾ ತಂತ್ರಜ್ಞಾನಗಳಲ್ಲಿ ಕನ್ನಡವೂ ಇರಬೇಕಾದ್ದು ಈ ಕಾಲದ ಅಗತ್ಯವಾಗಿದೆ.

ಆಗಸ್ಟ್ ೨೦, ೨೦೧೬ ರ ಪ್ರಜಾವಾಣಿ 'ಅಂತರಾಳ' ಪುಟದಲ್ಲಿ ಇ-ಪುಸ್ತಕಗಳ ಬಗ್ಗೆ ನನ್ನ ಚುಟುಕು ಅಭಿಪ್ರಾಯ.
 ***

ಸಂಬಂಧಿತ ಇತರ ಪೋಸ್ಟ್ ಗಳು:
ಭಾನುವಾರ, ಆಗಸ್ಟ್ 28, 2016

'Blood Diamond' movie - Kannada Subtitles

ಬ್ಲಡ್ ಡೈಮಂಡ್  - ಕನ್ನಡ ಅಡಿಬರಹಗಳು

ಇದೊಂದು ಸಣ್ಣ ಪ್ರಯತ್ನ ಯಶಕಂಡಿದೆ. 'ಬ್ಲಡ್ ಡೈಮಂಡ್' ಎಂಬ ಸಿನೆಮಾಕ್ಕೆ ಕನ್ನಡ ಸಬ್ ಟೈಟಲ್ಸ್ ಬರೆದು ಮುಗಿಸಿದ್ದೇನೆ. ಹೇಳಬೇಕೆಂದರೆ ಈ ಯೋಚನೆ ಶುರುವಾಗಿದ್ದು ಮೂರು ವರ್ಷಗಳ ಹಿಂದೆ. ವಸುಧೇಂದ್ರ (Vasudhendra) ಅವರು ಕನ್ನಡ ಉಪಶೀರ್ಷಿಕೆಗಳನ್ನು ಬರೆಯುವುದು ಹೇಗೆ ಎಂಬ ಬಗ್ಗೆ ಪ್ರಯತ್ನಗಳನ್ನು ಮಾಡಿ ಯಶಸ್ವಿಯಾಗಿ ಅನಂತರ ಕೆ.ವಿ.ಸುಬ್ಬಣ್ಣ ರಂಗಮಂದಿರದಲ್ಲಿ ಒಂದು ಪ್ರಾತ್ಯಕ್ಷಿಕೆ ತೋರಿಸಿದ್ದರು. ಜಗತ್ತಿನ ಉತ್ತಮ ಚಿತ್ರಗಳನ್ನು ಜನರಿಗೆ ಪರಿಚಯಿಸಲು ಸಹಾಯವಾಗುತ್ತದೆಂಬ ಉದ್ದೇಶದಿಂದ ಮಾಡಿದ ಪ್ರಯತ್ನ ಅದು. ವಿ.ಎಲ್.ಸಿ ಪ್ಲೇಯರ್ ನಲ್ಲಿ ಸ್ವಲ್ಪ ಸೆಟ್ಟಿಂಗ್ ಬದಲಾಯಿಸಿ ಕನ್ನಡ ಫಾಂಟ್ ಕಾಣುವಂತೆ ಮಾಡಬೇಕಿತ್ತು. ಅವತ್ತೇ ರಾತ್ರಿ ಅವರು ಹೇಳಿಕೊಟ್ಟಂತೆ ಪ್ರಯೋಗ ಮಾಡಿ 'ರಾಶೋಮನ್' ಎಂಬ ಜಪಾನಿ ಸಿನೆಮಾಗೆ ಕನ್ನಡದಲ್ಲಿ ಕೆಲವು ಸಬ್ ಟೈಟಲ್ಸ್ ಬರೆದು ಪ್ರಯತ್ನಿಸಿ ಖುಶಿಪಟ್ಟಿದ್ದೆ. ಆದರೆ ಅದು ಅಪೂರ್ಣಗೊಂಡು ಹಾಗೇ ಮರೆತುಹೋಗಿತ್ತು.
ಈಗೊಂದು ತಿಂಗಳ ಹಿಂದೆ ಕಂಪ್ಯೂಟರಲ್ಲಿ ಏನೋ ಹುಡುಕುತ್ತಿದ್ದಾಗ ಆ ಹಳೆಯ ಫೈಲ್ ಕಾಣಿಸಿ ಮತ್ತೊಮ್ಮೆ ಸಬ್ ಟೈಟಲ್ಸ್ ಬರೆಯುವ ಮನಸ್ಸಾಯಿತು. ಆಗ ನೆನಪಾದವರು ಸಿನಿಕರ್ಮಿ ರವೀಂದ್ರ (Ravindra Venshi). ಅವರೂ ಹಿಂದೊಮ್ಮೆ ಸಿನೆಮಾವೊಂದಕ್ಕೆ ಸಬ್ ಟೈಟಲ್ಸ್ ಬರೆದು ಹಂಚಿಕೊಂಡಿದ್ದರು. ಅವರೊಂದಿಗೆ ಸ್ವಲ್ಪ ಚರ್ಚೆ ಮಾಡಿ ಮಾರ್ಗದರ್ಶನ ಪಡೆದು ಅನಂತರ ನನ್ನ ಇಷ್ಟದ ಸಿನೆಮಾಗಳಲ್ಲೊಂದಾದ 'ಬ್ಲಡ್ ಡೈಮಂಡ್' ಸಿನೆಮಾ ಆರಿಸಿಕೊಂಡು ಶುರುಮಾಡಿದೆ. ಅದರಲ್ಲಿದ್ದದ್ದು ೧೩೦೦ ಸಂಭಾಷಣೆಗಳು! ಹಾಗಾಗಿ ನಿಧಾನಕ್ಕೆ ಸ್ವಲ್ಪ ಸ್ವಲ್ಪವೇ ಬರೆದು ಮುಗಿಸಲು ತಿಂಗಳ ಸಮಯ ಹಿಡಿಯಿತು.
ಯಾರಿಗಾದರೂ ಆ ಸಬ್ ಟೈಟಲ್ ಫೈಲ್ ಬೇಕಿದ್ದಲ್ಲಿ ಸಂದೇಶ ಕಳಿಸಿ. ಯಾರಾದರೂ ಉತ್ಸಾಹಿಗಳಿದ್ದಲ್ಲಿ ನಿಮ್ಮ ಇಷ್ಟದ ಸಿನೆಮಾಗಳಿಗೆ ಕನ್ನಡ ಅಡಿಬರಹ ಬರೆಯಲೂಬಹುದು. 

ಹೀಗಂತ ಫೇಸ್ಬುಕ್ಕಲ್ಲಿ ಬರೆದುಕೊಂಡಿದ್ದೆ. ಆಸಕ್ತಿ ಇರುವ ಕೆಲವು ಗೆಳೆಯರು ಸಂದೇಶ ಕಳಿಸಬಹುದು, ಅವರಿಗೆ ಫೈಲ್ ಕಳಿಸೋಣ ಅಂದುಕೊಂಡಿದ್ದೆ. ಆದರೆ ಸಬ್‍ಟೈಟಲ್ಸ್ ಫೈಲ್ ಕೋರಿ ನೂರಾರು ಸಂದೇಶಗಳು ಬಂದಿವೆ. ಹಾಗಾಗಿ ಅದನ್ನು ಇಲ್ಲಿ ಅಪ್ಲೋಡ್ ಮಾಡಿದ್ದೇನೆ. 
ಈ ಕೆಳಗಿನ ಕೊಂಡಿಗಳ ಮೂಲಕ ಅಡಿಬರಹದ ಫೈಲ್‍ಗಳನ್ನು ಇಳಿಸಿಕೊಂಡು ನಿಮ್ಮಲ್ಲಿರುವ ಆ ಸಿನೆಮಾದೊಂದಿಗೆ ಲೋಡ್ ಮಾಡಿಕೊಂಡು ನೋಡಬಹುದು. ಇದು ಯುನಿಕೋಡ್ ಫೈಲ್ ಆಗಿರುವುದರಿಂದ ಯಾವುದೇ ಫಾಂಟ್ ಸೆಟ್ಟಿಂಗ್ಸ್ ಮಾಡಬೇಕಾದ್ದಿಲ್ಲ.

KM Player & 123 Playerಗಾಗಿ ಈ ಫೈಲ್ Blood Diamond - Kannada Subtitles  

VLC Playerಗಾಗಿ ಈ ಫೈಲ್ Blood Diamond - Kannada Subtitles 

ನಾನು ಕೆಲವು ವೀಡಿಯೋ ಪ್ಲೇಯರುಗಳಲ್ಲಿ ಮಾತ್ರ ಪ್ರಯತ್ನಿಸಿದ್ದೇನೆ. ಬೇರೆ ಅನೇಕ ವೀಡಿಯೋ ಪ್ಲೇಯರುಗಳಲ್ಲಿ ಇದನ್ನು ಪ್ರಯೋಗಿಸಬಹುದು. ನಿಮ್ಮಲ್ಲಿರುವ ಪ್ಲೇಯರ್‍ಗಳಲ್ಲಿ ಪ್ರಯತ್ನಿಸಿ. ವೀಡಿಯೋ ಪ್ಲೇಯರುಗಳಲ್ಲಿ ಪರದೆ ಮೇಲೆ ರೈಟ್ ಕ್ಲಿಕ್ ಮಾಡಿದರೆ ಅಥವಾ ಮೆನುವಿನಲ್ಲಿ ಸಬ್‍ಟೈಟಲ್ ಫೈಲ್ ಲೋಡ್ ಮಾಡುವ ಆಯ್ಕೆ ಇರುತ್ತದೆ. ಸ್ಮಾರ್ಟ್ ಫೋನಿನಲ್ಲಿ ನಾನು ಪ್ರಯತ್ನಿಸಿಲ್ಲ.
ನೋಡಿದಾನಂತರ ಅದರ ಬಗ್ಗೆ ಅನಿಸಿಕೆಗಳನ್ನು ತಿಳಿಸಿದರೆ ಸಂತೋಷ. ಜೊತೆಗೆ ನೀವು ನೋಡಿದ್ದು ಯಾವ ಸಾಧನದಲ್ಲಿ ಮತ್ತು ಯಾವ ಪ್ಲೇಯರ್‍ನಲ್ಲಿ ಎಂದು ತಿಳಿಸಿದರೆ ಒಳ್ಳೆಯದು.

ಸಬ್‍ಟೈಟಲ್ ಫೈಲನ್ನು ತೆರೆದು ನೋಡಿದರೆ ಅದನ್ನು ಮಾಡುವುದು ಹೇಗೆ ಎಂದು ತಿಳಿಯುತ್ತದೆ. ಕಂಪ್ಯೂಟರ್ ತಾಂತ್ರಿಕ ಕ್ಷೇತ್ರದಲ್ಲಿರುವವರಿಗಂತೂ ಹೇಳುವುದೇ ಬೇಡ. ಆದರೂ ಹಲವರು ಆಸಕ್ತರು ಕೇಳಿರುವಂತೆ ಆ ವಿಧಾನ, ಸಬ್ ಟೈಟಲ್ ಫೈಲ್ ಮಾದರಿಗಳು, ವಿವಿಧ ವಿಡಿಯೋ ಪ್ಲೇಯರ್ ಗಳಲ್ಲಿ ಅದರ ಬಳಕೆ ಇತ್ಯಾದಿಗಳ ಬಗ್ಗೆ ನನಗೆ ತಿಳಿದಷ್ಟು ಕೆಲವು ಮಾಹಿತಿಗಳನ್ನು ಸದ್ಯದಲ್ಲೇ ಮತ್ತೊಂದು ಬ್ಲಾಗ್ ಪೋಸ್ಟ್ ನಲ್ಲಿ ಹಂಚಿಕೊಳ್ಳುತ್ತೇನೆ.

-ವಿಕಾಸ್ ಹೆಗಡೆ (vikashegde82@gmail.com)

ಬುಧವಾರ, ಜೂನ್ 15, 2016

ಮರುಭೂಮಿಯ ಬಂಗಾರ ಜೈಸಲ್ಮೇರ್

ಬೋಳುಭೂಮಿಯ ಬಿರುಬಿಸಿಲಿನಲ್ಲಿ ದೂರದಿಂದ ಒಂದು ದೊಡ್ಡ ಮರಳಿನ ದಿಬ್ಬದಂತೆ ಕಾಣುತ್ತಿದ್ದ ಅದು ಹತ್ತಿರವಾಗುತ್ತಿದ್ದಂತೇ ಒಂದು ಕೋಟೆಯ ಆಕೃತಿ ಕಾಣತೊಡಗಿತು. ಮರುಭೂಮಿಯ ಒಡಲಿನಿಂದ ಹೊರಬಂದು ಎತ್ತರದ ಜಾಗದಲ್ಲಿ ಸೆಟೆದು ನಿಂತಂತೆ ಕಾಣುತ್ತಿದ್ದ ಆ ಬಂಗಾರಬಣ್ಣದ ಭವ್ಯವಾದ ಕೋಟೆಯನ್ನು ಕಂಡು ಬೆರಗಾಗಿಹೋದೆವು. ಅದು ಗೋಲ್ಡನ್ ಫೋರ್ಟ್ ಎಂದೇ ಪ್ರಸಿದ್ಧವಾದ ಜೈಸಲ್ಮೇರ್ ಕೋಟೆ. ಜೈಪುರದಿಂದ ಹೊರಟ ನಾವು ಒಂದು ದೀರ್ಘ ಪಯಣದ ನಂತರ ಜೈಸಲ್ಮೇರ್ ಸೇರಿದಾಗ ಥಾರ್ ಮರುಭೂಮಿಗೆ ನಮ್ಮನ್ನು ಸ್ವಾಗತಿಸಿದ್ದು ಈ ಕೋಟೆ.


ರಾಜಸ್ಥಾನದ ಪ್ರಮುಖ ನಗರಗಳಲ್ಲೊಂದಾಗಿರುವ ಜೈಸಲ್ಮೇರ್ ಪಾಕಿಸ್ತಾನದ ಗಡಿಯಿಂದ ಕೇವಲ ೪೦ ಕಿ.ಮಿ. ದೂರದಲ್ಲಿದೆ. ಇದು ’ಬಂಗಾರ ನಗರಿ’ ಎಂದೇ ಪ್ರಸಿದ್ಧ. ಅದಕ್ಕೆ ಕಾರಣ ಎಂದರೆ ಮರುಭೂಮಿಯ ಮರಳ ಜೊತೆಗೆ ಇಲ್ಲಿ ಎಲ್ಲಾ ಕಟ್ಟಡಗಳೂ ನಸುಬಂಗಾರ ಬಣ್ಣ! ಹೊಟೆಲ್ ಸೇರಿ ಒಂದೆರಡು ಗಂಟೆ ದಣಿವಾರಿಸಿಕೊಂಡು ಫ್ರೆಶ್ ಆದೆವು. ಮೊದಲು ಆ ಕೋಟೆಗೇ ಲಗ್ಗೆಯಿಡಬೇಕು ಎನ್ನುವ ಉತ್ಸಾಹದಿಂದ ಹೊರಟೆವು. ದಾರಿಯುದ್ದಕ್ಕೂ ಇದ್ದ ಅನೇಕ ಪ್ರವಾಸಿ ಏಜೆನ್ಸಿಗಳ ಬೋರ್ಡುಗಳು ಇಲ್ಲಿ ಪ್ರವಾಸೋದ್ಯಮ ಒಂದು ಮುಖ್ಯ ಕಸುಬು ಎಂದು ತೋರಿಸಿದವು. ಜೈಸಲ್ಮೇರಿನ ಹೃದಯದಂತಿರುವ ಕೋಟೆ ತಲುಪಿ ಒಳನಡೆದೆವು. ಹನ್ನೆರಡನೇ ಶತಮಾನದ ಈ ಕೋಟೆ ಇವತ್ತಿಗೂ ಜೀವಂತವಾಗಿದೆ. ಕೋಟೆಯೊಳಗೇ ಒಂದು ಊರಿದೆ. ಅಲ್ಲಿ ಮನೆಗಳು, ಅಂಗಡಿಗಳು, ಗುಡಿಗಳು, ಹವೇಲಿಗಳು ಎಲ್ಲವೂ ಇವೆ. ಇಂತಹ ಒಂದು ಜೀವಂತ ಕೋಟೆ ಇಡೀ ವಿಶ್ವದಲ್ಲಿ ಇದೊಂದೇ ಇರುವುದು ಎಂದು ಹೇಳಿದರು. ಕೋಟೆಯ ಗಲ್ಲಿಗಲ್ಲಿಗಳಲ್ಲಿ ನಸುಬಂಗಾರಬಣ್ಣದ ಕಲ್ಲುಕಟ್ಟಡಗಳು, ಸಾಲುಸಾಲು ಕುಶಲಕರ್ಮಿ ವಸ್ತುಗಳ ಅಂಗಡಿಗಳು, ಬಣ್ಣಬಣ್ಣದ ಪೇಟ ತೊಟ್ಟ ಜನ, ಸಂಗೀತವಾದ್ಯಗಳನ್ನು ನುಡಿಸುವವರು, ತೊಗಲುಗೊಂಬೆಯಾಟ, ಸುಂದರ ವಾಸ್ತುಶಿಲ್ಪದ ಹವೇಲಿಗಳು, ಪ್ರವಾಸಿಗರ ಹಿಂಡು ಇವುಗಳನ್ನು ನೋಡುತ್ತಾ ಹೊತ್ತುಕಳೆದದ್ದೇ ತಿಳಿಯದೇ ಕೋಟೆಯಲ್ಲಿ ಮೈಮನ ದಾರಿತಪ್ಪಿ ಅಲೆಯುತ್ತಿತ್ತು. ಅಷ್ಟರಲ್ಲಿ ಸಂಜೆಯಾಗತೊಡಗಿದ್ದರಿಂದ ವಾಪಸಾದೆವು.

ಬೆಳಗ್ಗೆ ಎದ್ದು ತಯಾರಾಗಿ ಮತ್ತೆ ಕೋಟೆಗೆ ಹೋದೆವು. ಒಳಗೆ ಏಳು ಜೈನಮಂದಿರಗಳಿವೆಯಂತೆ. ಅಲ್ಲಿನ ಒಂದು ಜೈನ ಮಂದಿರ ಹೊಕ್ಕು ನೋಡಿದಾಗ ಅದ್ಭುತ ವಾಸ್ತುಶಿಲ್ಪದ ಕಲ್ಲಿನ ಕೆತ್ತನೆಗಳ ಸೊಬಗು ಬೆರಗುಮೂಡಿಸಿತು. ಅನಂತರ ಲಕ್ಷ್ಮಿನಾಥ ಗುಡಿಗೆ ಭೇಟಿಕೊಟ್ಟು ಅಲ್ಲಿನ ಅರಮನೆಯ ಒಳಗೆ ಹೋದರೆ ಅದೇ ಒಂದು ಲೋಕ. ಸೂಚನಾಗುರುತುಗಳಿಲ್ಲದಿದ್ದರೆ ದಾರಿತಪ್ಪಿ ಕಳೆದುಹೋಗುವಂತಿರುವ ಆ ಅರಮನೆಯಲ್ಲಿ ಹೊರಗೆ ಬಿರುಬಿಸಿಲಿದ್ದರೂ ಒಳಗೆ ತಂಪಾಗಿ ಗಾಳಿಯಾಡುವಂತೆ ರಚಿಸಿದ ಕೊಠಡಿಗಳು, ಅರಮನೆಯ ಸ್ತ್ರೀಯರು ನಿಂತು ನೋಡಲು ಕಟ್ಟಿಸಿದ ಸುಂದರ ಬಾಲ್ಕನಿಗಳು ವಿಶೇಷವೆನಿಸಿದವು.  ಅರಮನೆಯ ಮೇಲ್ಛಾವಣಿಗೆ ಬಂದರೆ ಮರುಭೂಮಿಯಲ್ಲಿ ಮೈಚಾಚಿ ಬಿದ್ದುಕೊಂಡಂತಿರುವ ಜೈಸಲ್ಮೇರ್ ಊರಿನ ಚದುರಿಬಿದ್ದಂತಹ ಕಟ್ಟಡಗಳ ವಿಹಂಗಮ ನೋಟ ಸಾಧ್ಯ. ಹೀಗೆಯೇ ಕೋಟೆಯ ಸೊಬಗನ್ನು ನೋಡಿ ಹೊರಬಂದು ಅಲ್ಲೇ ಸನಿಹದಲ್ಲಿರುವ ಒಂದು ದೊಡ್ಡ ಸುಂದರ ಹವೇಲಿಗೆ ಭೇಟಿಕೊಟ್ಟು ಹೊರಡುವಷ್ಟರಲ್ಲಿ ಮಧ್ಯಾಹ್ನ ಮೀರಿಹೋಗಿತ್ತು. 


ಅವತ್ತಿನ ಸಂಜೆ ೪೦ ಕಿ.ಮಿ ದೂರದ ’ಸಮ್’ ಎನ್ನುವ ಸ್ಥಳಕ್ಕೆ ನಮ್ಮ ಭೇಟಿ . ಮರಳುಗಾಡು ಎಂಬುದರ ನಿಜಚಿತ್ರಣವನ್ನು ಕಾಣಲು ಇಲ್ಲಿ ಸಾಧ್ಯ. ನುಣುಪಾದ ಮರಳ ದಿಣ್ಣೆಗಳು ಇಲ್ಲಿ ಸಮುದ್ರದಂತೆ ಅಲೆಅಲೆಗಳಾಗಿ ಹರಡಿಕೊಂಡಿವೆ. ಬೀಸುಗಾಳಿಯು ಇಲ್ಲಿ ಮರಳಮೇಲೆಯೇ ವಕ್ರರೇಖೆಗಳ ಚಿತ್ತಾರ ಬಿಡಿಸುತ್ತದೆ. ಇಲ್ಲಿನ ಸೂರ್ಯಾಸ್ತದ ಸೊಬಗನ್ನು ನೋಡಲು ನೂರಾರು ಜನ ಸೇರಿದ್ದರು. ಈ ಪ್ರದೇಶದಲ್ಲಿ ಅನೇಕ ಮರುಭೂಮಿಯ ರೆಸಾರ್ಟುಗಳು, ಕ್ಯಾಂಪುಗಳು ಇವೆ. ಒಂಟೆ ಸವಾರಿ, ಸಾಂಪ್ರದಾಯಿಕ ನೃತ್ಯಸಂಗೀತಗಳು ಪ್ರವಾಸಿಗರನ್ನು ರಂಜಿಸುತ್ತವೆ. ಅಂದು ರಾತ್ರಿ ನಮ್ಮ ಕ್ಯಾಂಪಿನಲ್ಲಿ ಅಲ್ಲಿನ ವಿಶೇಷ ಬಾಜ್ರಾ(ಸಜ್ಜೆ) ರೊಟ್ಟಿ ಮತ್ತು ಕೇರ್ ಸಾಂಗ್ರಿ ಎಂಬ ಹುಲ್ಲಿನಂತ ಗಿಡದಿಂದ ಮಾಡಿದ ಪಲ್ಯವನ್ನು ಸವಿದೆವು. ಆಯೋಜಿತವಾಗಿದ್ದ ಸಂಗೀತಕಾರ್ಯಕ್ರಮವನ್ನು ತಣ್ಣನೆಯ ರಾತ್ರಿಯಲ್ಲಿ ಎಂಜಾಯ್ ಮಾಡಿದೆವು.

ಮರುದಿನ ಜೈಸಲ್ಮೇರ್ ಪಟ್ಟಣದ ಸುತ್ತಮುತ್ತ  ಇರುವ ಕೆಲವು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿಕೊಟ್ಟೆವು. ೧೬ ಕಿ.ಮಿ ದೂರದಲ್ಲಿ ’ಕುಲ್ದಾರಾ’ ಎನ್ನುವ ಒಂದು ವಿಚಿತ್ರ ಹಳ್ಳಿಯಿದೆ. ಅಲ್ಲಿನ ಕತೆಯ ಪ್ರಕಾರ ನೂರಾರು ವರ್ಷಗಳ ಹಿಂದೆ ಜೈಸಲ್ಮೇರಿನ ರಾಜ ಇಲ್ಲಿನ ಹುಡುಗಿಯೊಬ್ಬಳನ್ನು ಮದುವೆಯಾಗಲು ಒತ್ತಾಯಿಸಿದ್ದರಿಂದ ಅಲ್ಲಿದ್ದ ನಾನೂರು ಕುಟುಂಬಗಳು ಒಂದೇ ರಾತ್ರಿಯಲ್ಲಿ ಹಳ್ಳಿಯನ್ನು ತೊರೆದುಹೋದವಂತೆ.! ಈಗ ಅಲ್ಲಿ ಬರೀ ಪಾಳುಬಿದ್ದ ಮನೆಗಳಿವೆ. ಜೈಸಲ್ಮೇರದ ಹಲವು ಮ್ಯೂಸಿಯಂಗಳು, ಹವೇಲಿಗಳು, ಬಡಾಬಾಗ್, ಗಡಿಸರ್ ಸರೋವರ, ಅಮರ್ ಸಾಗರ್ ಸರೋವರ, ಲೋದರ್ವದ ಸುಂದರ ಜೈನಮಂದಿರ ಮುಂತಾದವು ಅಲ್ಲಿನ ಇನ್ನಿತರ ಪ್ರೇಕ್ಷಣೀಯ ಸ್ಥಳಗಳು.

ಹೋಗುವುದು ಹೇಗೆ?

ಬೆಂಗಳೂರಿನಿಂದ ಜೈಪುರ ಅಥವಾ ದೆಹಲಿಗೆ ವಿಮಾನ ಅಥವಾ ಟ್ರೇನಿನಲ್ಲಿ ಪ್ರಯಾಣಿಸಿ ಅಲ್ಲಿಂದ ನೇರ ಟ್ರೇನ್ ಮೂಲಕ ಜೈಸಲ್ಮೇರ್ ತಲುಪಬಹುದು. ಅತಿಹತ್ತಿರದ ವಿಮಾನ ನಿಲ್ದಾಣ ಜೋಧಪುರ. ಜೋಧಪುರ, ಉದಯಪುರ, ಬಿಕಾನೇರ್, ಅಜ್ಮೇರ್, ಅಹಮದಾಬಾದ್ ಮುಂತಾದ ನಗರಗಳಿಂದಲೂ ರಸ್ತೆ ಹಾಗೂ ರೈಲುಮಾರ್ಗಗಳಿಂದ ಸಂಪರ್ಕಿತವಾಗಿದೆ.  

ಜೂನ್ ೫, 2016ರ ವಿಜಯಕರ್ನಾಟಕ 'ಸಾಪ್ತಾಹಿಕ ಲವಲವಿಕೆ'ಯಲ್ಲಿ ಪ್ರಕಟಿತ

ಭಾನುವಾರ, ಏಪ್ರಿಲ್ 24, 2016

ಕನ್ನಡ ಅನುವಾದಗಳ ಕ್ರೌಡ್ ಸೋರ್ಸಿಂಗ್

ಅಂತರಜಾಲದಲ್ಲಿ ಜಗತ್ತಿನ ಹಲವು ಭಾಷೆಗಳಲ್ಲಿ ಸೇವೆಗಳನ್ನು ಒದಗಿಸುವುದಕ್ಕೋಸ್ಕರ ಅನುವಾದದ ಕೆಲಸಗಳನ್ನು ಕ್ರೌಡ್ ಸೋರ್ಸ್ (Crowdsource) ಮಾಡುವ ಪರಿಪಾಠವನ್ನು ಹಲವಾರು ಕಂಪನಿಗಳು ಇಟ್ಟುಕೊಂಡಿವೆ ಅಂದರೆ ಆಯಾ ಭಾಷೆಯ ಬಳಕೆದಾರರೇ ತಮ್ಮ ಭಾಷೆಗಳಿಗೆ ಅನುವಾದ ಮಾಡಿಕೊಳ್ಳುವ ಅವಕಾಶ ಒದಗಿಸಿಕೊಡುವ ಮೂಲಕ ಯೂಸರ್ ಇಂಟರ್ಫೇಸ್ ವಿವಿಧ ಭಾಷೆಗಳಲ್ಲಿ ದೊರೆಯುವಂತೆ ಮಾಡುವುದು ಇದರ ಉದ್ದೇಶ.ಫೇಸ್ಬುಕ್ , ಟ್ವಿಟ್ಟರ್ ಮುಂತಾದ ಜನಪ್ರಿಯ ಸಾಮಾಜಿಕ ಸಂಪರ್ಕತಾಣಗಳು ಅನೇಕ ಭಾಷೆಗಳಲ್ಲಿ ದೊರೆಯುತ್ತಿರುವುದರ ಹಿಂದೆ ಈ ಕ್ರೌಡ್ ಸೋರ್ಸಿಂಗ್ ಬಹುಮುಖ್ಯ ಪಾತ್ರ ವಹಿಸಿದೆ. ಅಂತರಜಾಲದಲ್ಲಿ ಎಲ್ಲಾ ಭಾಷೆಗಳಲ್ಲಿ ಸೇವೆಗಳನ್ನು ಒದಗಿಸಲು, ಅಂತರಜಾಲವು ಹೆಚ್ಚಿನ ಜನರನ್ನು ತಲುಪಲು ಇದು ಅಗತ್ಯ ಎಂದು ಬಣ್ಣಿಸಲ್ಪಟ್ಟರೂ ಕಾರ್ಪೋರೇಟ್ ಕಂಪನಿಗಳು ಹೀಗೆ ಉಚಿತವಾಗಿ ಕೆಲಸ ಮಾಡಿಸಿಕೊಳ್ಳುವುದು ಎಷ್ಟು ಸರಿ ಎಂಬ ಟೀಕೆಯೂ ಕೇಳಿಬರುತ್ತದೆ.

ಅದೇನೇ ಇದ್ದರೂ ಸಹ ಅವತ್ತಿನಿಂದ ಇವತ್ತಿನವರೆಗೂ ಕನ್ನಡ ಭಾಷೆಯಲ್ಲಿ ಎಲ್ಲವನ್ನೂ ತರಬೇಕು ಎಂಬ ಉತ್ಸಾಹಿಗಳು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅದು ಉಚಿತವಾಗಿ ಮಾಡುವ ಕೆಲಸವಾದರೂ ಸರಿ, ಎಲ್ಲೆಡೆ ಕನ್ನಡ ಇರಬೇಕು, ಅದು ನುಡಿಯ ಬೆಳವಣಿಗೆಗೆ ಬಹಳ ಒಳ್ಳೆಯದು ಎಂಬ ನಿಲುವು ಅವರೆಲ್ಲರದು. ಇದರಿಂದಲೇ ಇವತ್ತು ಅನೇಕ ಜನಪ್ರಿಯ ತಾಣಗಳು, ಸೇವೆಗಳು ಕನ್ನಡದಲ್ಲಿ ಲಭ್ಯ ಇದೆ. ಕೆಲವು ಕ್ರೌಡ್ ಸೋರ್ಸ್ ಮೂಲಕ ಮಾಡಿರುವುದಾಗಿವೆ ಮತ್ತು ಹಲವನ್ನು ಆಯಾ ಕಂಪನಿ (ಸೇವಾದಾತರು)ಗಳೇ ಒದಗಿಸಿವೆ. ಉದಾಹರಣೆಗೆ ಗೂಗಲ್ ನ ಅನೇಕ ಸೇವೆಗಳು ಜನರ ಅನುವಾದದಿಂದ ತಯಾರಾಗಿವೆ, ಆದರೆ ಯಾಹೂ ಮೇಲ್ ನಲ್ಲಿ ಮತ್ತು ಇತ್ತೀಚೆಗೆ ಜನಪ್ರಿಯಗೊಂಡಿರುವ ಹೈಕ್ ಮೆಸ್ಸೆಂಜರ್ ಎಂಬ ಸಂದೇಶವಾಹಕದಲ್ಲಿ ಕನ್ನಡ ಭಾಷೆಯಲ್ಲಿ ಯೂಸರ್ ಇಂಟರ್ಫೇಸನ್ನು ಅವರೇ ಮಾಡಿ ಒದಗಿಸಿದ್ದಾರೆ.

೨೦೦೫ರ ಸುಮಾರಿಗೆ ಅಂತರಜಾಲ ದೈತ್ಯ ಗೂಗಲ್ ಮೊದಲ ಬಾರಿಗೆ ತನ್ನ ಬೇರೆ ಬೇರೆ ಸೇವೆಗಳ ಅನುವಾದ ಕೆಲಸಗಳನ್ನು ಕ್ರೌಡ್ ಸೋರ್ಸಿಂಗ್ ಮಾಡಿತು. ಒಂದು ಮಟ್ಟದ ಅನುವಾದ ಪೂರ್ಣಗೊಂಡನಂತರ ಅದನ್ನು ಲೈವ್ ಮಾಡುವ ಪ್ರಯತ್ನ ಅದಾಗಿತ್ತು. ಕನ್ನಡದಲ್ಲಿ ಅನೇಕ ಜನ ಈ ಅನುವಾದದ ಕೆಲಸಗಳಲ್ಲಿ ತೊಡಗಿಕೊಂಡರು. ನಾನು ಕೂಡ ೨೦೦೫-೦೬ರ ಸಮಯದಲ್ಲಿ ಇಂತಹ ಅನುವಾದಗಳಲ್ಲಿ ತೊಡಗಿಕೊಳ್ಳಲು ಪ್ರಾರಂಭಿಸಿದ್ದು. ಗೂಗಲ್ ನ ಹಲವು ಸೇವೆಗಳ ಅನುವಾದಗಳಲ್ಲಿ ತೊಡಗಿಕೊಂಡೆ. ಗೂಗಲ್ ನ ಮುಖಪುಟದಲ್ಲ್ಕಿ ಇಂಗ್ಲೀಷಿನಲ್ಲಿ I am feeling lucky ಎಂದಿರುವ ಕಡೆ ಕನ್ನಡದಲ್ಲಿ ’ನಾನು ಅದೃಷ್ಟಶಾಲಿ’ ಎಂದು ಕಾಣುತ್ತದೆ. ನಾನು ಅನುವಾದದಲ್ಲಿ ತೊಡಗಿದಾಗ ಮೊದಲು ಯಾರೋ ಅದನ್ನು ’ನಾನು ಅದೃಷ್ಟವಂತ’ ಎಂದು ಅನುವಾದಿಸಿದ್ದರು. ಅದನ್ನು ನೋಡಿದಾಗ ’ಅದೃಷ್ಟವಂತ’ ಎನ್ನುವುದು ಬರೀ ಪುಲ್ಲಿಂಗವಾಗುತ್ತದೆ, ಸ್ತ್ರೀಲಿಂಗಕ್ಕೂ ಆಗಬೇಕೆಂದು ಯೋಚಿಸಿ ’ಅದೃಷ್ಟಶಾಲಿ’ ಎಂದು ಬದಲಾಯಿಸಿದೆ. ಅದೇ ಒಪ್ಪಿತವಾಗಿ ಇವತ್ತಿಗೂ ಉಳಿದುಬಂದಿದೆ. ಇವತ್ತಿಗೂ ಪ್ರತಿಬಾರಿ ಭಾರತದ ಆವೃತ್ತಿ Google.co.in ತೆರೆದಾಗ ಕಾಣುತ್ತದೆ. ಅನಂತರದ ದಿನಗಳಲ್ಲಿ ಅಂತರಜಾಲ ಭೂನಕಾಶೆ ವಿಕಿಮ್ಯಾಪಿಯಾದಲ್ಲೂ ಕೂಡ ಅನುವಾದದ ಅವಕಾಶ ಮಾಡಿಕೊಟ್ಟರು. ಕನ್ನಡದ ಪರಿಸ್ಥಿತಿ ನೋಡಿದಾಗ ೦% ಇತ್ತು. ಒಂದಿಷ್ಟು ಉತ್ಸಾಹಿಗಳನ್ನು ಸೇರಿಸಿ ಅನುವಾದದಲ್ಲಿ ತೊಡಗಿಕೊಂಡು ಕೆಲವೇ ದಿನಗಳಲ್ಲಿ ಶೇಕಡಾ ೮೦ ಮುಟ್ಟಿಸಿದೆವು. ಕನ್ನಡ ವಿಕಿಮ್ಯಾಪಿಯಾ ಲೈವ್ ಆಯಿತು. ಹೀಗೆಯೇ ಈಗ ಜನಪ್ರಿಯವಾಗಿರುವ ಕೆಲವು ಸೋಶಿಯಲ್ ನೆಟ್ವರ್ಕ್ ತಾಣಗಳೂ ಸಹ ಅನುವಾದಗಳನ್ನು ಕ್ರೌಡ್ ಸೋರ್ಸಿಂಗ್ ಮಾಡುವ ಮೂಲಕವೇ ಭಾರತೀಯ ಭಾಷೆಗಳಲ್ಲಿ ತಯಾರಾದವು.

ಅನುವಾದಕನಾಗಿ ಏನು ಮಾಡಬಹುದು? (As Translator)

ಈ ಕೆಳಗಿನವು ಈಗ ಕನ್ನಡದಲ್ಲಿ ನಡೆಯುತ್ತಿರುವ ಅನುವಾದದ ಕ್ರೌಡ್ ಸೋರ್ಸಿಂಗ್ ಯೋಜನೆಗಳು. ಆಸಕ್ತಿ ಇರುವವರು ಈ ಕೊಂಡಿಗಳ ಮೂಲಕ ಹೋಗಿ ನೊಂದಾಯಿಸಿಕೊಂಡು ಅನುವಾದ ಹಾಗೂ ಪದಕಟ್ಟುವ ಕೆಲಸಕ್ಕೆ ಕೈಜೋಡಿಸಬಹುದು. (ಮತ್ತಿತರ ಯೋಜನೆಗಳು ಯಾವುದಾದರೂ ಗೊತ್ತಿದ್ದಲ್ಲಿ ಕಾಮೆಂಟ್ ಮಾಡಿ)


ಈ ಅನುವಾದಗಳಲ್ಲಿ ಇಂಗ್ಲೀಷಿಗೆ ಪರ್ಯಾಯವಾಗಿ ಅನೇಕ ಹೊಸ ಹೊಸ ಪದಗಳೂ ಇವೆ.  ಹಾಗಂತ ಈ ಅನುವಾದಗಳು ಎಲ್ಲವೂ ಪೂರ್ತಿ ಸರಿ ಇದೆ ಎಂದು ಹೇಳಲಾಗುವುದಿಲ್ಲ. ಇದು ನಮ್ಮ ನಿಮ್ಮಂತಹ ಸಾಮಾನ್ಯ ಜನರೇ ಮಾಡಿರುವುದರಿಂದ ಅನೇಕ ತಪ್ಪುಗಳೂ ನುಸುಳಿವೆ. ಕೆಲವು ಅನುವಾದಗಳು ಸರಿಯಿಲ್ಲ ಎಂದೂ ಅನ್ನಿಸಬಹುದು. ನೀವೂ ಅನುವಾದಕರಾಗಿ ಸೇರಿಕೊಂಡು ಅನುವಾದಗಳನ್ನು (ಸರಿ) ಮಾಡಬಹುದು. ಈಗಾಗಲೇ ಮಾಡಿರುವ ಅನುವಾದಗಳಲ್ಲಿ ನಿಮಗೆ ಸರಿ ಎನ್ನಿಸುವುದಕ್ಕೆ ಮತ ಹಾಕಬಹುದು. ಇಲ್ಲಿ ಕಟ್ಟುವ ಪದಗಳು, ಅನುವಾದಗಳು ಮುಂದೆ ವ್ಯಾಪಕವಾಗಿ ಬಳಕೆಗೆ ಬಂದು ಕನ್ನಡದ ಪದಸಂಪತ್ತಿಗೆ ಸೇರುವ ಸಾಧ್ಯತೆಯೂ ಇದೆ.

ವಿಕಿಮೀಡಿಯಾ, ಮೊಜಿಲ್ಲಾ, FUEL, MX Player ಇವು non-commercial projects ಆಗಿದ್ದು ಅನುವಾದಗಳನ್ನು ಬಳಕೆಗಾಗಿ ಉಚಿತವಾಗಿ ಅವರಿಂದ ಪಡೆದುಕೊಳ್ಳಬಹುದು.  ಉಳಿದವುಗಳು commercial ಆಗಿದ್ದು ಆಯಾ ಸೇವೆಗಳಲ್ಲಿ ಮಾತ್ರ ಬಳಕೆಯಾಗುತ್ತವೆ. FUEL ಪ್ರಾಜೆಕ್ಟ್ ಎಂಬುದು terminology standardization ಕೆಲಸದಲ್ಲಿ ತೊಡಗಿದ್ದು ಕಂಪ್ಯೂಟರ್ ಮತ್ತು ಅಂತರಜಾಲ ಲೋಕದ ವಿವಿಧ ತಂತ್ರಾಂಶ, ಜಾಲತಾಣಗಳಲ್ಲಿ ಬಳಸಲು ನೆರವಾಗುವಂತೆ standard terminology database ರಚಿಸುತ್ತಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಬಹುದು: http://fuelproject.org/about/


ಬಳಕೆದಾರನಾಗಿ ಏನು ಮಾಡಬಹುದು.? (As User)


 ವಾಟ್ಸಪ್  ಕನ್ನಡದಲ್ಲಿ...
ಈ ಮೇಲಿನ ಎಲ್ಲವೂ ಈಗಾಗಲೇ ಕನ್ನಡದಲ್ಲಿ ಲಾಂಚ್ ಆಗಿವೆ. ನೀವು ಇವುಗಳನ್ನು ಬಳಸುತ್ತಿದ್ದಲ್ಲಿ ಯೂಸರ್ ಇಂಟರ್ಫೇಸನ್ನು ಕನ್ನಡಕ್ಕೆ ಬದಲಾಯಿಸಿಕೊಳ್ಳಬಹುದು. ಅದಕ್ಕಾಗಿ ಮಾಡಬೇಕಾದ್ದಿಷ್ಟೆ. Account Settingsಗೆ ಹೋಗಿ ಅದರಲ್ಲಿ Language ಆಯ್ಕೆಯಲ್ಲಿ ’ಕನ್ನಡ’ವನ್ನು ಆಯ್ಕೆಮಾಡಿಕೊಂಡರೆ ಆಯಿತು. ಕನ್ನಡಿಗರೆಲ್ಲರು ಎಲ್ಲಾ ಅಂತರಜಾಲ ಸೇವೆಗಳಲ್ಲಿ ಇಂಟರ್ಫೇಸನ್ನು ಕನ್ನಡಕ್ಕೆ ಬದಲಾಯಿಸಿಕೊಂಡು ಕನ್ನಡದ ಬೆಳವಣಿಗೆಗೆ ನೆರವಾಗಬೇಕು.

ಪ್ರಯೋಜನಗಳೇನು? 

ಮಾಹಿತಿತಂತ್ರಜ್ಞಾನ ಮತ್ತು ಅಂತರಜಾಲಕ್ಕೆ ಸಂಬಂಧಿಸಿದಂತೆ ಕನ್ನಡದ ಹೊಸ ಹೊಸ ಪದಗಳು ರಚನೆಯಾಗುತ್ತವೆ.

ಐ.ಟಿ ಮುಂತಾದ ಕಡೆ ಕೆಲಸ ಮಾಡುವ ಬಹುತೇಕರಿಗೆ ಕನ್ನಡ ಬಳಕೆಯೇ ತಪ್ಪಿಹೋಗಿರುತ್ತದೆ. ಇದರಿಂದಾಗಿ ಸ್ವಲ್ಪವಾದರೂ ಕನ್ನಡ ಬಳಕೆ ಉಳಿಯುತ್ತದೆ. ಹೊಸಹೊಸ ಪದಗಳೂ ತಿಳಿಯುತ್ತವೆ. 

ಕಾರ್ಪೋರೇಟ್ ಕಂಪನಿಗಳಾಗಲೀ ಮತ್ಯಾವುದೇ ಸೇವಾದಾತರೇ ಆಗಲೀ ಆಯಾ ಭಾಷೆಯ ಬಳಕೆದಾರರು ಎಷ್ಟಿದ್ದಾರೆ ಎಂಬ ಅಂಕಿಅಂಶಗಳ ನಿಗಾ ಇಡುತ್ತವೆ. ಹೆಚ್ಚು ಬಳಕೆಯಿಂದಾಗಿ ಕನ್ನಡ ಬಳಸುವವರು ಬಹಳ ಜನ ಇದ್ದಾರೆ ಎಂಬುದು ಕಂಪನಿಗಳಿಗೆ ತಿಳಿಯುತ್ತದೆ. ಆ ಭಾಷೆಯ ಬಳಕೆದಾರರು ಹೆಚ್ಚಿದ್ದಷ್ಟೂ ಅವರ ಇನ್ನಿತರ ಯೋಜನೆಗಳಲ್ಲಿ ಆ ಭಾಷೆಗಳನ್ನೂ ಸೇರಿಸಿಕೊಳ್ಳುತ್ತವೆ. ತಂತ್ರಜ್ಞಾನದಲ್ಲಿ ಕನ್ನಡದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇದರಿಂದಾಗಿ ಕನ್ನಡವು ಜಾಗತಿಕ ಮಟ್ಟದಲ್ಲಿಯೂ ಗುರುತಿಸಿಕೊಳ್ಳಲು ನೆರವಾಗುತ್ತದೆ. ಹೆಚ್ಚು ಹೆಚ್ಚು ಜನ ಬಳಸಲು ಶುರುಮಾಡಿದಂತೆ ಕನ್ನಡದ ಉತ್ಪನ್ನಗಳಿಗೂ ಬೇಡಿಕೆ ಇದೆ ಎಂಬುದು ತಿಳಿದು ಎಲ್ಲಾ ಸೇವೆಗಳನ್ನೂ ಕನ್ನಡದಲ್ಲಿ ಕೊಡಲು ಮುಂದಾಗುತ್ತವೆ, ಕನ್ನಡ ಚೆನ್ನಾಗಿ ಗೊತ್ತಿರುವವರ ಅಗತ್ಯ ಉಂಟಾಗಿ ಉದ್ಯೋಗಾವಕಾಶಗಳ ಬಾಗಿಲೂ ತೆರೆಯುತ್ತದೆ. ಕನ್ನಡದ ಬಳಕೆ ಹೆಚ್ಚುತ್ತದೆ. ಭಾಷೆಯ ಮತ್ತು ಭಾಷಿಕರ ಬೆಳವಣಿಗೆಗೆ ಸಹಾಯವಾಗುತ್ತದೆ.
******

*೨೦೧೪ರಲ್ಲಿ ಫೇಸ್ ಬುಕ್ ಕನ್ನಡದಲ್ಲಿ ಅಧಿಕೃತವಾಗಿ ಬಿಡುಗಡೆಯಾದಾಗ ನಾನು 'ಒನ್ ಇಂಡಿಯಾ ಕನ್ನಡ' ಸುದ್ದಿತಾಣದಲ್ಲಿ ಬರೆದಿದ್ದ ಲೇಖನದ ಕೊಂಡಿ ಇಲ್ಲಿದೆ: ಫೇಸ್ ಬುಕ್ ಈಗ ಕನ್ನಡ ಭಾಷೆಯಲ್ಲಿ ಲೋಕಾರ್ಪಣೆ

*ಕನ್ನಡದ ತಂತ್ರಜ್ಞಾನ ಬಳಕೆ ಬಗ್ಗೆ ’ಕನ್ನಡಪ್ರಭ’ಕ್ಕೆ ಬರೆದಿದ್ದ ಒಂದು ಬರೆಹ: ಬಾರಿಸು ಡಿಜಿಟಲ್ ಕನ್ನಡ ಡಿಂಡಿಮವ

ಸೋಮವಾರ, ಏಪ್ರಿಲ್ 11, 2016

'ಫೋಟೋ ಕ್ಲಿಕ್ಕಿಸುವ ಮುನ್ನ' - ಪುಸ್ತಕ ಪರಿಚಯ

ನನಗೆ ಫೋಟೋಗ್ರಫಿಯಲ್ಲಿ ಯಾವುದೇ ಅಭ್ಯಾಸ ಇಲ್ಲವಾದರೂ ಅದರ ಬಗ್ಗೆ ವಿಶೇಷ ಆಸಕ್ತಿ, ಕುತೂಹಲವಂತೂ ಇದೆ. ಆದರೆ ಕಂಡಕಂಡಲ್ಲಿ ಫೋಟೋ ತೆಗೆಯಲು ನಿಲ್ಲುವ, ಇಪ್ಪತ್ತು ಸಾರಿ ಕ್ಲಿಕ್ಕಿಸಿದ್ದನ್ನೇ ಕ್ಲಿಕ್ಕಿಸುವ, ಕಾರ್ಯಕ್ರಮಗಳಲ್ಲಿ ಅಡ್ಡಡ್ದ ಬರುವ ಫೋಟೋಗ್ರಾಫರುಗಳೆಂದರೆ ಒಂಥರಾ ಕಿರಿಕಿರಿ. ಕೈಯಲ್ಲಿ ಡಿಎಸ್ಸೆಲ್ಲಾರ್ ಕ್ಯಾಮೆರಾ ಇದೆ ಎಂದು ಕೆಲವರದ್ದು ಸುಮ್ಮನೇ ಫೋಟೋಗ್ರಫಿ. ಆದರೆ ಸೀರಿಯಸ್ ಪೋಟೋಗ್ರಫಿಯ ವಿಚಾರವೇ ಬೇರೆ ಎಂಬುದು ನಿಜ. ಹಾಗಾಗಿ ನನಗೆ ಅದರ ಬಗ್ಗೆ ತಿಳಿದುಕೊಳ್ಳಬೇಕು ಎಂದೆನಿಸಿದ್ದರೂ ಅವರಿವರಿಂದ ಸ್ವಲ್ಪ ಸ್ವಲ್ಪ ಕೇಳಿ ಗೊತ್ತಿತ್ತೇ ಹೊರತು ಹೆಚ್ಚಿನ ಮಾಹಿತಿ ತಿಳಿದಿರಲಿಲ್ಲ.

ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ 'ಶಿವು.ಕೆ' ಅವರಿಂದ ರಚಿತವಾದ ’ಫೋಟೋ ಕ್ಲಿಕ್ಕಿಸುವ ಮುನ್ನ’ ಪುಸ್ತಕ ೨೦೧೫ರ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಯಿತು. ಇಂತಹ ಅವಕಾಶ ಬಿಡುವುದು ತರವಲ್ಲ ಎಂದು ಪುಸ್ತಕ ಖರೀದಿಸಿದೆ. ಅದರಲ್ಲಿರುವ ಅಧ್ಯಾಯಗಳನ್ನು ಒಂದೊಂದಾಗಿ ಓದಿಮುಗಿಸುತ್ತಿದ್ದಂತೆಯೇ ನನ್ನಲ್ಲಿ ಫೋಟೋಗ್ರಫಿ ಬಗ್ಗೆ ಒಂದು ಸ್ಪಷ್ಟತೆ ಮೂಡತೊಡಗಿತು. ಪಿಕ್ಟೋರಿಯಲ್ ಪೋಟೋಗ್ರಫಿಯ (ಇದಕ್ಕೆ ಭಾವಾಭಿವ್ಯಂಜಕ ಛಾಯಾಚಿತ್ರ ಕಲೆ ಎಂಬ ಭಯಂಕರ ಪದ ಇದೆ) ವಿವರಣೆಗಳನ್ನು ಓದಿ ಒಂದು ಫೋಟೋ 'ಚೆನ್ನಾಗಿದೆ' ಎಂದೆನಿಸಿಕೊಳ್ಳಬೇಕಾದರೆ ಏನಿರುತ್ತದೆ ಎಂಬುದು ತಿಳಿಯಿತು. ಇದರ ಜೊತೆ ಮ್ಯಾಕ್ರೋ, ಕ್ಯಾಂಡಿಡ್ ಮುಂತಾದ ಫೋಟೋಗ್ರಫಿಯ ವಿಧಗಳ ಬಗ್ಗೆ ಸರಳ ವಿವರಣೆಯ ಅಧ್ಯಾಯಗಳು ಚೆನ್ನಾಗಿ ಓದಿಸಿಕೊಂಡು ಅವುಗಳ ಬಗ್ಗೆ ತಿಳಿಸಿಕೊಟ್ಟವು. ಸ್ವಲ್ಪ ಬೌನ್ಸರ್ ಆಗಿದ್ದು ಅಂದರೆ ಕ್ಯಾಮೆರಾ ಲೆನ್ಸುಗಳ ತಾಂತ್ರಿಕ ವಿವರಗಳು. ಬಹುಶಃ ಅದನ್ನು ಕ್ಯಾಮೆರಾಗಳನ್ನು ಬಳಸಿಯೇ ತಿಳಿದುಕೊಳ್ಳಬೇಕೆನಿಸುತ್ತದೆ! ವಿಶೇಷವಾಗಿ ಇಷ್ಟವಾದುದ್ದೆಂದರೆ ನೇಚರ್ ಫೋಟೋಗ್ರಫಿ ಬಗ್ಗೆಯ ಅಧ್ಯಾಯ. ಅದನ್ನು ಓದುತ್ತಾ ಹೋದರೆ ಒಬ್ಬ ಫೋಟೋಗ್ರಾಫರನ ಪ್ರಯತ್ನದ ಬಗ್ಗೆ ಆಶ್ಚರ್ಯ ಮತ್ತು ಗೌರವ ಎರಡೂ ಉಂಟಾಗುತ್ತದೆ, ಜೊತೆಗೆ ಫೋಟೋಗ್ರಫಿ ಎಂಬುದು ಎಂತಹ ಕಲೆ ಎನ್ನುವುದೂ ತಿಳಿಯುತ್ತದೆ. ಪುಸ್ತಕದಲ್ಲಿ ನೇಚರ್ ಫೋಟೋಗ್ರಾಫಿಯ ವಿವರಣೆ ಬಹಳ ಚೆನ್ನಾಗಿ ಮೂಡಿಬಂದಿದೆ. ಲೇಖಕರು ತಮ್ಮದೇ ಹಲವು ಫೋಟೋಗಳ ಜೊತೆ ಇನ್ನೂ ಇತರ ಕೆಲವು ಪರಿಣಿತ ಫೋಟೋಗ್ರಾಫರುಗಳ ಫೋಟೋಗಳನ್ನು ಬಣ್ಣದಲ್ಲಿ ಮುದ್ರಿಸಿ ಅದನ್ನು ಉದಾಹರಣೆಯಾಗಿಟ್ಟುಕೊಂಡು ವಿವರಣೆಗಳನ್ನು ಕೊಡುತ್ತಾ ಹೋಗಿರುವುದರಿಂದ ಅರ್ಥಮಾಡಿಕೊಳ್ಳುವುದೂ ಸುಲಭವಾಯಿತು. ಮುನ್ನಾರ್ ನಲ್ಲಿ ಕ್ಲಿಕ್ಕಿಸಿದ ಫೋಟೋ ಒಂದರ ಮೂಲಕ ಫೋಟೋ ಒಂದನ್ನು ಓದುವುದು ಹೇಗೆ ಎಂಬ ವಿವರಣೆಯೂ ಬಹಳ ಇಷ್ಟವಾಯಿತಲ್ಲದೇ ಶಾಲೆ ಪುಸ್ತಕದ ಸಚಿತ್ರ ವಿವರಣೆಯ ಪಾಠದಂತೆ ಅರ್ಥವಾಯಿತು.

ಒಂದಂತೂ ನಿಜ, ನಾವು ಫೋಟೋಗ್ರಫಿ ಮಾಡುತ್ತಿವೋ ಬಿಡುತ್ತೀವೋ ಅದು ಬೇರೆ ವಿಷ್ಯ. ಆದರೆ ಫೋಟೋಗ್ರಫಿ ಸಂಬಂಧಿತ ಹಲವಾರು ವಿಷಯಗಳಿಂದ ತುಂಬಿದ ಈ ಪುಸ್ತಕ ಓದಿದರೆ ಫೋಟೋಗ್ರಫಿ ಎಂಬ ಆಸಕ್ತಿಕರ ವಿಷಯದ ಬಗ್ಗೆ ತಿಳಿದುಕೊಳ್ಳುವ ಲಾಭವಂತೂ ಖಂಡಿತ. ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸುವ ಮುನ್ನ ಮನಸ್ಸಿನಲ್ಲೇ ಫೋಟೋಗಳನ್ನು ಕ್ಲಿಕ್ಕಿಸುವುದಕ್ಕೆ ಶುರುವಾಗುವುದು ಫೋಟೋಗ್ರಫಿಯ ಲಕ್ಷಣವೆನ್ನುವುದನ್ನು ಯಶಸ್ವಿಯಾಗಿ ಓದುಗನಿಗೆ ದಾಟಿಸುವಂತಹ ಈ ಪುಸ್ತಕ ಫೋಟೋಗ್ರಫಿಯ ಆಸಕ್ತಿಗೆ, ಕಲಿಕೆಗಂತೂ ಒಳ್ಳೆಯ ಮುನ್ನುಡಿಯಾಗಬಲ್ಲುದು.

ಇಷ್ಟೆಲ್ಲಾ ಹೇಳಿದ ಮೇಲೆ ಇನ್ನೊಂದು ವಿಷಯ ಹೇಳಬೇಕು. ದಪ್ಪಕಾಗದವನ್ನು ಬಳಸಿ ಹಲವಾರು ಚಿತ್ರಗಳನ್ನು ಮುದ್ರಿಸಿರುವುದರಿಂದ ಸಹಜವಾಗಿಯೇ ಪುಸ್ತಕದ ಬೆಲೆ ಹೆಚ್ಚಿದೆ. ಆದರೆ ಬೆಲೆಗೆ ತಕ್ಕ content ಕೂಡ ಇದೆ. ಕನ್ನಡದಲ್ಲಿ ಇಂತಹ ಪುಸ್ತಕ ಬರೆದು ಪ್ರಕಟಿಸಿದ ಶಿವು (Shivu KA) ಅವರಿಗೆ ತಡವಾದರೂ ವಿಶೇಷ ಅಭಿನಂದನೆ, ಧನ್ಯವಾದ ಹೇಳಲೇಬೇಕು.  ಅಂದಹಾಗೆ, ಪುಸ್ತಕದ ಮುಖಪುಟದಲ್ಲಿ ಲೇಖಕರ ಹೆಸರಿನ ಜೊತೆ ಕಾಣುತ್ತಿರುವ EFAIP, ARPS ಅಂದ್ರೆ ಅದ್ಯಾವ ಡಿಗ್ರಿಗಳು ಅಂತ ಸಂಶಯ ಬಂದರೆ ಅದನ್ನು ತಿಳಿದುಕೊಳ್ಳಲು ಈ ಪುಸ್ತಕದಲ್ಲೇ ಒಂದು ಅಧ್ಯಾಯ ಇದೆ. 

***
ಪುಸ್ತಕವು ನವಕರ್ನಾಟಕ, ಸಪ್ನಾ, ಟೋಟಲ್ ಕನ್ನಡ  ಮುಂತಾದಲ್ಲಿ ಸಿಗುತ್ತದೆ. ನೇರವಾಗಿ ಲೇಖಕರಿಗೆ ಫೋನ್ (9845147695) ಮಾಡಿಯೂ ತರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. 

ಗುರುವಾರ, ಮಾರ್ಚ್ 31, 2016

ಕೌಲಾಲಂಪುರ ತಿರುಗಾಟದಲ್ಲಿ…..


ಮಲೇಶಿಯಾದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಆ ದೇಶದ ರಾಜಧಾನಿ ಕೌಲಾಲಂಪುರವೂ ಒಂದು. ಪಶ್ಚಿಮ ತೀರದಲ್ಲಿರುವ ಪಿನಾಂಗ್ ಎಂಬ ದ್ವೀಪದಲ್ಲಿ ಒಂದು ದಿನದ ಪ್ರವಾಸ ಮುಗಿಸಿ ಬಸ್ಸಿನಲ್ಲಿ ಹೊರಟ ನಾವು ಕೌಲಾಲಂಪುರಕ್ಕೆ ಬಂದಿಳಿದಾಗ ರಾತ್ರಿ ೧೧ ಗಂಟೆಯಾಗಿತ್ತು. ಮೊದಲೇ ಕಾದಿರಿಸಿದ್ದ ಹೋಟೆಲನ್ನು ತಲುಪಿ ವಿಶ್ರಮಿಸಿದೆವು. ಮರುದಿನ ಬೆಳಗ್ಗೆ ನಾವು ತಂಗಿದ್ದ ಹೊಟೆಲಿನ ಎದುರಿನ ರಸ್ತೆಯಲ್ಲೇ ಭಾರತೀಯ ಹೋಟೆಲ್ ಇರುವುದು ತಿಳಿಯಿತು. ಅಲ್ಲಿ ಹೋಗಿ ನೋಡಿದರೆ ಅದು ಅಪ್ಪಟ ದಕ್ಷಿಣ ಭಾರತೀಯ ಶೈಲಿಯದೇ ಆಗಿತ್ತು. ಜೊತೆಗೆ ಅದೇ ರಸ್ತೆಯಲ್ಲಿ ಇನ್ನೂ ಅನೇಕ ಭಾರತೀಯ ಹೊಟೆಲುಗಳೂ ಇದ್ದವು. ಕೌಲಾಲಂಪುರದಲ್ಲಿ ತಮಿಳು ಮೂಲದ ಜನರು ಬಹಳ ಇರುವುದರಿಂದ ನಮ್ಮ ತಿನಿಸುಗಳೆಲ್ಲವೂ ಲಭ್ಯ ಎಂದು ತಿಳಿಯಿತು.  ರುಚಿಯಾದ ಉಪಾಹಾರದೊಂದಿಗೆ ನಮ್ಮ ಅವತ್ತಿನ ಪ್ರವಾಸ ಶುರುವಾಯಿತು.
  

ಅಲ್ಲಿಂದ ಸಿಟಿಬಸ್ಸಿನಲ್ಲಿ ಹೊರಟು 13 ಕಿ.ಮಿ. ದೂರದ ಗೊಂಬಾಕ್ ಪ್ರದೇಶದಲ್ಲಿರುವ ಬತು ಕೇವ್ಸ್ ಎಂಬ ಸ್ಥಳಕ್ಕೆ ಹೋದೆವು.  ಅಲ್ಲಿ ಇಳಿದೊಡನೆಯೇ ಕಂಡದ್ದು ಎತ್ತರೆತ್ತರ ಶಿಲಾಪರ್ವತಗಳು, ಅವುಗಳೆದುರಲ್ಲಿ ಬೃಹತ್ ಗಾತ್ರದ ಪ್ರಸನ್ನವದನ ಮುರುಗನ್ ಮೂರ್ತಿ! ಬಂಗಾರವರ್ಣದ ಆ ಮೂರ್ತಿ ದೂರದಿಂದಲೇ ಬಿಸಿಲಿಗೆ ಫಳ ಫಳ ಹೊಳೆಯುತ್ತಿತ್ತು. ಈ ಬತು ಗುಹೆಗಳು ಕೌಲಾಲಂಪುರದ ಪ್ರಸಿದ್ಧ ಪ್ರವಾಸಿ ಹಾಗೂ ಹಿಂದೂ ಧಾರ್ಮಿಕ ತಾಣ. ಹಾಗಾಗಿ ಅಲ್ಲಿ ದೇಶ ವಿದೇಶಗಳ ಜನರ ದಂಡೇ ನೆರೆದಿತ್ತು. ಇಲ್ಲಿನ ಪರ್ವತಗಳು ೪೦ ಕೋಟಿ ವರ್ಷಗಳಷ್ಟು ಹಳೆಯವೆಂದು ಅಂದಾಜಿಸಲಾದ ಸುಣ್ಣದ ಕಲ್ಲಿನ ರಚನೆಗಳು. ಇಲ್ಲಿ ಅನೇಕ ಗುಹೆಗಳಿದ್ದು ಮುಖ್ಯವಾಗಿ ಮೂರು ಗುಹೆಗಳಿವೆ. ಟೆಂಪಲ್ ಕೇವ್ ಎಂದು ಕರೆಯಲ್ಪಡುವ ದೊಡ್ಡ ಗುಹೆಯಲ್ಲಿ ಮುರುಗನ್ ದೇವಾಲಯವಿದೆ. ೧೯೮೨ರಲ್ಲಿ ತಂಬುಸಾಮಿ ಪಿಳ್ಳೈ ಅವರಿಂದ ಇಲ್ಲಿ ದೇವಾಲಯ ಸ್ಥಾಪಿಸಲ್ಪಟ್ಟಿತಂತೆ. ೨೦೦೬ರಲ್ಲಿ ೧೪೦ ಅಡಿಯ ಮುರುಗನ್ ಮೂರ್ತಿ ಸ್ಥಾಪಿಸಲ್ಪಟ್ಟಿತು. ಈ ಗುಹೆಗಳನ್ನು ಪ್ರವೇಶಿಸಲು ಸುಮಾರು ೨೮೦ ಮೆಟ್ಟಿಲುಗಳನ್ನು ಹತ್ತಬೇಕು. ಅಲ್ಲಿನ ಪುಂಡ ಮಂಗಗಳ ಕಾಟದ ನಡುವೆಯೇ ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋದೆವು. ಆ ಗುಹೆಯ ಪ್ರವೇಶದ್ವಾರ ಒಳಗೆ ದೊಡ್ಡ ಪ್ರಾಂಗಣದೊಳಕ್ಕೆ ತೆರೆದುಕೊಳ್ಳುತ್ತದೆ. ಎತ್ತರೆತ್ತರ ಕಲ್ಲಿನ ನೈಸರ್ಗಿಕ ರಚನೆಯ ಆ ಪ್ರಾಂಗಣ ಮೇಲ್ಭಾಗದಿಂದಲೂ ಆವೃತವಾಗಿದೆ. ಕರಗಿ ಬೀಳುತ್ತಿರುವ ಜ್ವಾಲಾಮುಖಿಯ ಲಾವಾ ಹಾಗೇ ಗಟ್ಟಿಯಾದಂತೆ ತೋರುವ ರಚನೆಗಳು ಕಾಣುತ್ತಿದ್ದವು. ಬತು ಗುಹೆಗಳ ಒಳಭಾಗವೆಲ್ಲವೂ ಇದೇ ರೀತಿಯ ಅದ್ಭುತ ರಚನೆಯಿಂದ ಕೂಡಿದೆ. ಒಳಗೆಲ್ಲಾ ಹಿಂದೂ ದೇವತೆಗಳ ಹಾಗೂ ಪುರಾಣ ಪಾತ್ರಗಳ ಮೂರ್ತಿಗಳನ್ನು ಹಾಗೂ ಸಣ್ಣ ಸಣ್ಣ ಗುಡಿಗಳನ್ನು ಮಾಡಿಟ್ಟಿದ್ದಾರೆ. ಹಾಗೇ ಆ ಪ್ರಾಂಗಣವನ್ನು ದಾಟಿ ಮತ್ತೆ ಒಂದಿಷ್ಟು ಮೆಟ್ಟಿಲುಗಳನ್ನು ಹತ್ತಿ ಹೋದರೆ ಅಲ್ಲಿ  ಮುರುಗನ್ ಮುಖ್ಯ ಗುಡಿಯಿದೆ. ನಿತ್ಯ ಪೂಜೆ ನಡೆಯುತ್ತದೆ. ಅಲ್ಲಿ ಸ್ವಲ್ಪ ಹೊತ್ತು ಕಳೆದು ಗುಹೆಗಳಿಂದ ಹೊರಬರುವುದರೊಳಗಾಗಿ ಮಧ್ಯಾಹ್ನದ ಸಮಯವಾಗುತ್ತಿತ್ತು. ಅಲ್ಲಿಂದ ಮೆಟ್ರೋ ಟ್ರೇನಿನಲ್ಲಿ ಹೊರಟು ಪುನಃ ನಗರಕ್ಕೆ ಬಂದು ಊಟ ಮಾಡಿ ವಿಶ್ರಮಿಸಿದೆವು.

ಅಂದು ಸಾಯಂಕಾಲ 'ಲೇಕ್ ಗಾರ್ಡನ್' ಗೆ ಭೇಟಿಕೊಟ್ಟೆವು. ೯೨ ಎಕರೆ ಪ್ರದೇಶದಲ್ಲಿರುವ ಈ ಗಾರ್ಡನ್ ಒಂದು ಸುಂದರ ಉದ್ಯಾನವನ. ಕಾರಂಜಿಗಳು, ಸಣ್ಣ ಕೃತಕ ಜಲಪಾತಗಳು, ಹುಲ್ಲುಹಾಸು, ನೀರಿನ ಕೊಳಗಳಿರುವ ಸುಂದರ ವಿಶಾಲ ತಾಣ. ಇಲ್ಲಿ ಬರ್ಡ್ ಪಾರ್ಕ್, ಚಿಟ್ಟೆ ಪಾರ್ಕ್ ಕೂಡ ಇದೆ.  ಮಲೇಶಿಯಾದ ‘ರಾಷ್ಟ್ರೀಯ ಸ್ಮಾರಕವು ಇಲ್ಲಿದೆ. ಎರಡನೇ ವಿಶ್ವಯುದ್ಧದಲ್ಲಿ ಹೋರಾಡಿ ಮಡಿದ ಮಲೇಶಿಯಾದ ವೀರರ ಕಂಚಿನ ಸ್ಮಾರಕ ಮೂರ್ತಿಗಳಿವೆ.  ಈ ಪರಿಸರದಲ್ಲಿ ಕೆಲ ಗಂಟೆಗಳ ಕಾಲ ಕಳೆದೆವು. ಅಲ್ಲಿಂದ ಹೊರಟು ಹೊರಬರುತ್ತಿದ್ದಂತೇ ಮಳೆ ಶುರುವಾಯಿತು. ಇದ್ಯಾಕೋ ನಮ್ಮ ಅದೃಷ್ಟ ಸರಿ ಇಲ್ಲ ಎಂದುಕೊಳ್ಳುತ್ತಿರುವಾಗಲೇ ಸ್ವಲ್ಪ ಹೊತ್ತು ಸುರಿದು ಪುನಃ ವಾತಾವರಣ ತಿಳಿಯಾಯಿತು.

ಮಲೇಶಿಯಾದ ಪ್ರಸಿದ್ಧ ಅವಳಿ ಗೋಪುರಗಳು ನಮ್ಮ ಮುಂದಿನ ಗುರಿಯಾಗಿತ್ತು. ರಾಷ್ಟ್ರೀಯ ಸ್ಮಾರಕದಿಂದ ಹೊರಟು ಕೌಲಾಲಂಪುರ ಸಿಟಿ ಸೆಂಟರ್ ಪ್ರದೇಶ ತಲುಪಿದಾಗ ಸಂಪೂರ್ಣ ಕತ್ತಲಾಗಿತ್ತು. ಈ ಪ್ರದೇಶ ಕೌಲಾಲಂಪುರದ ಪ್ರಮುಖ ವಾಣಿಜ್ಯ ಪ್ರದೇಶ. ೧೪೮೩ಅಡಿ ಎತ್ತರದ ೮೮ ಮಹಡಿಗಳುಳ್ಳ ಅವಳಿ ಗೋಪುರಗಳು ಇಲ್ಲಿನ ಪ್ರಮುಖ ಆಕರ್ಷಣೆ. ಪೆಟ್ರೋನಾಸ್ ಟವರ್ ಗಳೆಂದು ಕರೆಯಲ್ಪಡುವ ಈ ಎತ್ತರ ಗೋಪುರಗಳು ಕೌಲಾಲಂಪುರದ ಐಕಾನ್ ಗಳು. ಇವುಗಳನ್ನು ಕತ್ತಲಲ್ಲಿ ನೋಡಲು ಬಲು ಚಂದ. ಸಾವಿರಾರು ದೀಪಗಳಿಂದ ಕೂಡಿದ ಆಕಾಶದಿಂದ ಇಳಿಬಿಟ್ಟ ದೀಪದಕಂಬಗಳಂತೆ ಕಾಣುತ್ತವೆ. ವಿವಿಧ ಕೋನಗಳಲ್ಲಿ ಆ ಗೋಪುರಗಳ ಜೊತೆ ಫೋಟೋ ತೆಗೆಸಿಕೊಳ್ಳುವ ಕೆಲಸದಲ್ಲಿ ಪ್ರವಾಸಿಗರು ನಿರತರಾಗಿದ್ದರು. ಶುಲ್ಕ ಪಾವತಿಸಿ ಆ ಗೋಪುರಗಳನ್ನು ಹತ್ತಿ ಎತ್ತರದಿಂದ ನಗರವೀಕ್ಷಣೆ ಮಾಡುವ ಅವಕಾಶವಿರುವುದೂ ತಿಳಿಯಿತು.  ಆ ಗೋಪುರಗಳ ಸೌಂದರ್ಯವನ್ನು ಕಣ್ತುಂಬಿಕೊಂಡು ಕೌಲಾಲಂಪುರ ಸಿಟಿಯಲ್ಲಿ ಒಂದಿಷ್ಟು ಓಡಾಡಿ ನಮ್ಮ ಹೊಟೆಲ್ ಗೆ ಹಿಂದಿರುಗಿದೆವು.  ಮರುದಿನ ಭೇಟಿ ಕೊಡಬೇಕಾದ ಹಲವು ತಾಣಗಳ  ಓಡಾಟದ ಯೋಜನೆ ಮಾಡಿ ಆ ದಿನ ಮುಗಿಸಿದೆವು.

***

ಕೌಲಾಲಂಪುರದಲ್ಲಿ ಪ್ರವಾಸಿಗರು ಭೇಟಿ ಕೊಡಲು ಆರ್ಟ್ ಗ್ಯಾಲರಿಗಳು, ಮ್ಯೂಸಿಯಂಗಳುಪಾರಂಪರಿ ಮಸೀದಿಗಳು, ಗುಡಿಗಳು, ಬರ್ಡ್ ಪಾರ್ಕ್, ಅಕ್ವೇರಿಯಂ, ಪಾರ್ಲಿಮೆಂಟ್ ಭವನ, ಅರಮನೆ ಮುಂತಾದ ಸ್ಥಳಗಳಿವೆ. ೧೯೨೮ರಲ್ಲಿ ಶುರುವಾದ ಕೌಲಾಲಂಪುರದ ಐತಿಹಾಸಿಕ ಸೆಂಟ್ರಲ್ ಮಾರ್ಕೆಟ್ ಅಲ್ಲಿನ ಪಾರಂಪರಿಕ ಸ್ಥಳಗಳಲ್ಲೊಂದಾಗಿದೆ. ಕುಶಲಕರ್ಮಿ ವಸ್ತುಗಳು, ಕಲಾತ್ಮಕ ಸಾಂಪ್ರದಾಯಿಕ ವಸ್ತುಗಳು ಮುಂತಾದವು ಅಲ್ಲಿ ದೊರೆಯುತ್ತವೆ. ಕೌಲಾಲಂಪುರದಿಂದ ಒಂದು ತಾಸು ಪ್ರಯಾಣದ ದೂರದಲ್ಲಿರುವ ಜೆಂಟಿಂಗ್ ಎಂಬ ಪ್ರದೇಶದಲ್ಲಿ ಪ್ರಸಿದ್ಧ ಅಮ್ಯೂಸ್ ಮೆಂಟ್ ಪಾರ್ಕ್ ಇದೆ. ಒಂದಿಡೀ ದಿನವನ್ನು ಅಲ್ಲಿ ಕಳೆಯಬಹುದು. ೨೫ ಕಿ.ಮೀ. ದೂರದಲ್ಲಿರುವ ಪುತ್ರಜಯ ಎನ್ನುವ  ಪ್ರದೇಶ  ಆ ದೇಶದ ಸುಂದರ ನಿರ್ಮಾಣ ಶೈಲಿಯ ಆಡಳಿತ ಕಟ್ಟಡಗಳಿರುವ ಉಪನಗರ.

ಕೌಲಾಲಂಪುರಕ್ಕೆ ಭಾರತದ ಅನೇಕ ನಗರಗಳಿಂದ  ಹಾಗೂ ಅಕ್ಕಪಕ್ಕದ ದೇಶಗಳಿಂದ ನೇರ ವಿಮಾನ ಸಂಪರ್ಕವಿದೆ. ನಗರದಲ್ಲಿ ಓಡಾಟಕ್ಕೆ ಮೆಟ್ರೋ ಟ್ರೇನ್, ಸಿಟಿ ಬಸ್, ಟ್ಯಾಕ್ಸಿ ಸೌಕರ್ಯಗಳಿವೆ. ಭಾರತೀಯ ಆಹಾರದ ಲಭ್ಯತೆಗೆ ತೊಂದರೆಯಿಲ್ಲ.


೨೦ಮಾರ್ಚ್ ೨೦೧೬ ವಿಜಯಕರ್ನಾಟಕ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟಿತ: ಗುಹಾಲೋಕ ಬತು ಕೇವ್ಸ್ 
-ವಿಕಾಸ್ ಹೆಗಡೆ