ಪುಟಗಳು

ಮಂಗಳವಾರ, ಡಿಸೆಂಬರ್ 30, 2014

ಹನಿಮೂನ್ ಪಿರಿಯಡ್ ಮತ್ತು ಅದರಾಚೆಯ ದಿನಗಳು

ಹನಿಮೂನ್ ಪಿರಿಯಡ್ ಅಂದಾಕ್ಷಣ ಮದುವೆಯಾದ ಮೇಲಿನ ಮಧುಚಂದ್ರ ಅಂತ ಕಣ್ಣರಳಿಸಬೇಕಿಲ್ಲ. ಇದು ವಿದ್ಯಾರ್ಥಿಗಳ ಹನಿಮೂನ್. ಫೈನಲ್ ಇಯರ್ ಪರೀಕ್ಷೆಗಳನ್ನು ಮುಗಿಸಿ ಫಲಿತಾಂಶಕ್ಕೆ ಕಾಯುವ ದಿನಗಳು ಕಾಲೇಜು ವಿದ್ಯಾರ್ಥಿಗಳಿಗೆ ಒಂಥರಾ ಹನಿಮೂನ್ ಪಿರಿಯಡ್ ಇದ್ದಂತೆ. ಹೆಮ್ಮೆಯಿಂದ ಪದವಿಧರರಾಗಿ ಹೊರಜಗತ್ತಿಗೆ ನೆಗೆಯುವ ತವಕ. ಮತ್ತೊಂದೆಡೆ ಸುಂದರ ಕಾಲೇಜು ದಿನಗಳು ಮುಗಿದು ಹೋದವು ಎಂಬ ಬೇಸರ. ಫಲಿತಾಂಶ ಬರುತ್ತಿದ್ದಂತೇ ಉದ್ಯೋಗ ಹುಡುಕುವ ಆತಂಕವೂ ಶುರುವಾಗುತ್ತದೆ. ವೃತ್ತಿಪರ ಕೋರ್ಸುಗಳಲ್ಲಿ ಹಲವಾರು ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆಯಲ್ಲೇ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ವಿಶ್ವ ಆರ್ಥಿಕ ಹಿಂಜರಿತದ ಹಿನ್ನೆಲೆಯನ್ನಿಟ್ಟುಕೊಂಡು ಕಂಪನಿಗಳು ಕೂಡ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತವೆ. ಆಯ್ಕೆಯಾದವರಿಗೆ ಕಂಪನಿಗಳು ಸೇರುವ ದಿನಾಂಕವನ್ನು ಕೊಟ್ಟಿರುತ್ತವೆ. ಕೆಲವರಿಗೆ ಅನಂತರ ತಿಳಿಸುವುದಾಗಿ ಹೇಳಿರುತ್ತವೆ. ಆ ದಿನಾಂಕಗಳು ಮುಂದೂಡಲ್ಪಡುವ ಸಾಧ್ಯತೆಗಳೂ ಇರುತ್ತವೆ. ಹಾಗಾಗಿ ಕ್ಯಾಂಪಸ್ ಆಯ್ಕೆ ಆದವರೂ ಮತ್ತು ಆಗದವರೂ ಕೂಡ ಪರೀಕ್ಷೆಯ ಫಲಿತಾಂಶಗಳು ಬಂದಮೇಲೂ ಕಾಯುವಿಕೆ ಅನಿವಾರ್ಯವಾಗುತ್ತದೆ. ಉದ್ಯೋಗಕ್ಕಾಗಿ ಹಲವಾರು ಕಡೆ ರೆಸ್ಯೂಮ್ ಕಳಿಸಿ ಉತ್ತರಕ್ಕಾಗಿ, ಸಂದರ್ಶನದ ಕರೆಗಾಗಿ ಕಾಯಬೇಕಾಗುತ್ತದೆ. ಕೆಲವರಿಗೆ ಬೇಗ ಸಿಗಬಹುದು, ಮತ್ತು ಕೆಲವರು ಇನ್ನೂ ಪ್ರಯತ್ನ ಮಾಡಬೇಕಾಗಬಹುದು. ಈ ಕಾಲಾವಧಿ ಕೆಲವೇ ದಿನಗಳಿಂದ ಹಿಡಿದು ಹಲವು ತಿಂಗಳುಗಳವರೆಗೂ ಇರಬಹುದು. ಒಟ್ಟಿನಲ್ಲಿ ಈ ಕಾಲ ಮಹತ್ವದ್ದಾಗಿರುತ್ತದೆ. ಉದ್ಯೋಗಕ್ಕೆ ಮತ್ತು ವೈಯಕ್ತಿಕ ಬದುಕಿನ ಉನ್ನತಿಗೆ ಸಹಾಯವಾಗುವಂತಹ ಚಟುವಟಿಕೆಗಳನ್ನು ಮಾಡಲು ಅದು ಸಕಾಲ. ಈ ಸಮಯದಲ್ಲಿ ಏನು ಮಾಡುತ್ತೀರಿ ಎನ್ನುವುದು ನಿಮ್ಮ ಮುಂದಿನ ಬದುಕಿನ ದಿಕ್ಕನ್ನು ಬದಲಿಸಬಹುದು. ಇಂತಹ ಅಮೂಲ್ಯ ಸಮಯವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಲು ಏನು ಮಾಡಬಹುದು ನೋಡೋಣ.

೧. ವಿಷಯಜ್ಞಾನ ಮತ್ತು ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಿ: ಪರೀಕ್ಷೆ ಮುಗಿದ ಮೇಲೆ ಹಲವರು ತಮ್ಮ ಪಠ್ಯ ಪುಸ್ತಕಗಳ ಕಡೆ ನೋಡುವುದೇ ಇಲ್ಲ. ಹೀಗಾದರೆ ಓದಿದ್ದು ಕಾಲಕ್ರಮೇಣ ಮರೆತುಹೋಗುವ ಸಾಧ್ಯತೆ ಹೆಚ್ಚು. ನಿಮ್ಮ ಸಿಲೆಬಸ್ ಪುಸ್ತಕಗಳು ಮತ್ತು ಇನ್ನಿತರ ಸಂಬಂಧಿತ ಪುಸ್ತಕಗಳನ್ನು ತಿರುವಿಹಾಕುತ್ತಿರಿ.  ಮುಖ್ಯವಾದ ವಿಷಯಗಳನ್ನು ಆಗಾಗ ಓದಿ ನೆನಪಿಟ್ಟುಕೊಳ್ಳಿ. ಇದರ ಜೊತೆ ಪತ್ರಿಕೆ, ಟೀವಿ, ಪಠ್ಯೇತರ ಪುಸ್ತಕಗಳ ಮೂಲಕ  ಸಾಮಾನ್ಯಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಜ್ಞಾನ ಪಡೆದುಕೊಳ್ಳುತ್ತಿರಿ.

೨. ಗೆಳೆಯರ ಸಂಪರ್ಕದಲ್ಲಿರಿ: ಅದುವರೆಗೂ ದಿನವೂ ಒಡನಾಟದಲ್ಲಿದ್ದ ಗೆಳೆಯರು ಕಾಲೇಜು ಮುಗಿದಮೇಲೆ ದೂರದೂರವಾಗಬೇಕಾದ ಸಂದರ್ಭ ಬರುತ್ತದೆ. ಹಾಗಾಗಿ ಗೆಳೆಯರ ಸಂಪರ್ಕದಲ್ಲಿರಿ. ಈಗಿನ ಕಾಲದಲ್ಲಿ ಮಾಹಿತಿಯೇ ಶಕ್ತಿಯಾಗಿರುವುದರಿಂದ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಗೆಳೆಯರ ಬಳಗ ಮುಖ್ಯ. ಆನ್ ಲೈನ್ ಗುಂಪುಗಳನ್ನು ಮಾಡಿಕೊಳ್ಳಬಹುದು. ಭೇಟಿಯಾಗುತ್ತಾ ಇರಬಹುದು. ಚರ್ಚೆ ಮಾಡಬಹುದು. ಒಬ್ಬೊಬ್ಬರಿಂದಲೂ ಹಲ ವಿಷಯಗಳು ತಿಳಿಯುತ್ತವೆ. ಉದ್ಯೋಗ ಪಡೆಯಲು ಸಹಾಯವಾಗುತ್ತವೆ.

೩. ಪರೀಕ್ಷೆಗಳಿಗೆ ತಯಾರಾಗಿ: ಉನ್ನತ ವಿದ್ಯಾಭ್ಯಾಸಕ್ಕೆ ಹೋಗುವ ಯೋಚನೆ ಇರುವವರು ಮತ್ತು ಕೆ.ಎ.ಎಸ್., ಐ. ಎ.ಎಸ್., ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬಯಸುವವರು ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ ಅವುಗಳ ಪ್ರವೇಶ ಪರೀಕ್ಷೆಗಳಿಗೆ ತಯಾರಾಗಬಹುದು. ಕೋಚಿಂಗ್ ಕ್ಲಾಸ್ ಗಳಿಗೆ ಸೇರಬಹುದು. ಪುಸ್ತಕಗಳನ್ನು ಅಧ್ಯಯನ ಮಾಡಬಹುದು.

೪. ಅಂತರಜಾಲದ ಸಾಮಾಜಿಕೆ ತಾಣಗಳಲ್ಲಿ ತೊಡಗಿಕೊಳ್ಳಿ: ಈಗಿನ ಕಾಲದಲ್ಲಿ ಎಲ್ಲರೂ ಸಾಮಾಜಿಕ ತಾಣಗಳಲ್ಲಿ ಸಮಯ ಪೋಲುಮಾಡಬೇಡಿ ಎನ್ನುತ್ತಿರುವಾಗ ಈ ಸಲಹೆ ಆಶ್ಚರ್ಯ ಮೂಡಿಸಬಹುದು. ಆದರೆ ಈ ಸೋಶಿಯಲ್ ನೆಟ್ವರ್ಕುಗಳನ್ನು ಸರಿಯಾಗಿ ಬಳಸಿಕೊಂಡರೆ ನಿಜಕ್ಕೂ ಅದರಿಂದ ಒಳ್ಳೆಯ ಉಪಯೋಗ ಪಡೆದುಕೊಳ್ಳಬಹುದು. ಹೊಸ ಹೊಸ ಜನರ ಪರಿಚಯ, ಮಾಹಿತಿ ವಿನಿಮಯಕ್ಕೆ ಸಹಾಯಕಾರಿ. ಇದರಲ್ಲಿಯೂ ಕಿರಿಯರಿಗೆ ಉದ್ಯೋಗಕ್ಕೆ ಸಹಾಯ ಮಾಡುವ ಗುಂಪುಗಳಿರುತ್ತವೆ, ರೆಫರೆನ್ಸ್ ಒದಗಿಸುವ ಸಹೃದಯರಿರುತ್ತಾರೆ. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಈಗಾಗಲೇ ತೊಡಗಿಕೊಂಡಿರುವ ವ್ಯಕ್ತಿಗಳಿರುತ್ತಾರೆ. ಅಂತವರ ಜೊತೆ ಆರೋಗ್ಯಕರ ಸಂವಹನ ಇಟ್ಟುಕೊಳ್ಳಿ. ಸುಮ್ಮನೇ ಹೊತ್ತುಕಳೆಯುವುದು, ಅನಗತ್ಯ ಚರ್ಚೆಗಳನ್ನು ಮಾಡುವುದು ಬಿಟ್ಟು ಸದುಪಯೋಗ ಪಡಿಸಿಕೊಳ್ಳಬಹುದು.

೫. ಸಾಫ್ಟ್ ಸ್ಕಿಲ್ ಹೆಚ್ಚಿಸಿಕೊಳ್ಳಿ, ಸರ್ಟಿಫಿಕೇಶ್ ಗಳನ್ನು ಮಾಡಿ:  ಎಷ್ಟೋ ಜನಕ್ಕೆ ಒಳ್ಳೆಯ ಜ್ಞಾನವಿದ್ದರೂ ಸಹ ಅದನ್ನು ಸರಿಯಾಗಿ ತೋರ್ಪಡಿಸಲು ಬರದೇ ಸಂದರ್ಶನಗಳಲ್ಲಿ ವಿಫಲರಾಗುತ್ತಾರೆ.  ಚೆನ್ನಾಗಿ ಮಾತನಾಡುವುದು, ಭಾಷೆಯ ಮೇಲಿನ ಹಿಡಿತ, ಒಳ್ಳೆಯ ವರ್ತನೆ ಇವುಗಳಿಗೆ ಸಾಫ್ಟ್ ಸ್ಕಿಲ್ಸ್ ಎನ್ನುತ್ತಾರೆ. ನಿಮಗೆ ಅದರಲ್ಲಿ ತೊಂದರೆ ಇದೆ ಅನ್ನಿಸಿದರೆ ಸಾಫ್ಟ್ ಸ್ಕಿಲ್ ಗಳನ್ನು ಹೆಚ್ಚಿಸಿಕೊಳ್ಳಲು ಸ್ಪೋಕನ್ ಲ್ಯಾಂಗ್ವೇಜ್ ತರಗತಿಗಳಿಗೆ ಸೇರಿಕೊಳ್ಳಬಹುದು, ಗೆಳೆಯರೊಂದಿಗೆ ಮಾತಾಡಿ, ಚರ್ಚೆ ಮಾಡಿ ಅಭ್ಯಾಸ ಮಾಡಿಕೊಂಡು ಆತ್ವವಿಶ್ವಾಸ ಪಡೆದುಕೊಳ್ಳಬಹುದು. ನಿಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ಮತ್ತು ಉದ್ಯೋಗ ಪಡೆಯಲು ಸಹಾಯವಾಗುವಂತಹ ಹಲವು ಸರ್ಟಿಫಿಕೇಶನ್ ಕೋರ್ಸ್ ಗಳಿರುತ್ತವೆ. ಅವುಗಳನ್ನು ಮಾಡಿಕೊಳ್ಳಿ.

೬. ಸ್ಟಾರ್ಟ್ ಅಪ್ ಕಂಪನಿಗಳು ಮತ್ತು ನಿಮ್ಮ ಇಷ್ಟದ ಕ್ಷೇತ್ರದ ಕಂಪನಿಗಳನ್ನು ಸೇರಿ:  ಯಾವುದೇ ಪರಿಣಿತಿಗೆ ಅನುಭವವು ಬಹಳ ಮುಖ್ಯ. ಸಣ್ಣ ಸಣ್ಣ ಕಂಪನಿಗಳಲ್ಲಿ ದೊರಕುವ ಕೆಲಸ ಅನುಭವ ಅನೇಕಬಾರಿ ದೊಡ್ಡ ಕಂಪನಿಗಳಲ್ಲಿ ಸಿಗುವುದಿಲ್ಲ. ಹಾಗಾಗಿ ಬರೀ ದೊಡ್ಡ ಕಂಪನಿಗಳಿಗೆ ಮಾತ್ರ ಗುರಿ ಇಡದೇ ಸಣ್ಣ ಕಂಪನಿಗಳಲ್ಲಿ ಉದ್ಯೋಗಾವಕಾಶ ಸಿಕ್ಕಿದಾಗ ಸೇರಿಕೊಳ್ಳಿ. ಇದು ಮುಂದಿನ ವೃತ್ತಿ ಬದುಕಿಗೆ ಬಹಳ ಸಹಾಯವಾಗುತ್ತದೆ.  ಹಲವರಿಗೆ ತಮ್ಮ ಇಷ್ಟದ ನಿರ್ದಿಷ್ಟ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಗುರಿಯಿರುತ್ತದೆ.  ಉದಾಹರಣೆಗೆ ಬ್ಯಾಂಕಿಂಗ್ ಕ್ಷೇತ್ರ ಇಷ್ಟ ಇರುವ ಕಂಪ್ಯೂಟರ್ ಪದವೀಧರರಿಗೆ ಕೇವಲ ಜಾವಾದಂತಹ ಕೋಡಿಂಗ್ ಚೆನ್ನಾಗಿ ಗೊತ್ತಿದ್ದರೆ ಸಾಕಾಗುವುದಿಲ್ಲ. ಬ್ಯಾಂಕು ಹೇಗೆ ಕೆಲಸ ಮಾಡುತ್ತದೆ, ಗ್ರಾಹಕರು ವ್ಯವಹರಿಸಲು ಏನು ಮುಖ್ಯ ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ. ಹಾಗಾಗಿ ಅಂತಹ ಕ್ಷೇತ್ರದಲ್ಲಿ ಇಂಟರ್ನ್ ಶಿಪ್ ಅಥವಾ ತರಬೇತಿಯ ಅವಕಾಶ ಪಡೆದುಕೊಳ್ಳಲು ಪ್ರಯತ್ನಿಸಿ. ಇದರಿಂದ ನಿರ್ದಿಷ್ಟ ಕ್ಷೇತ್ರ ಪರಿಚಯ ಮತ್ತು ಅನುಭವ ಆಗುತ್ತದೆ. ಸ್ವಂತಉದ್ಯೋಗ, ವ್ಯವಹಾರಗಳನ್ನು ಶುರುಮಾಡುವ ಮನಸ್ಸಿರುವವರು ಮೊದಲು ಆ ಸಂಬಂಧಿತ ಕ್ಷೇತ್ರಗಳಲ್ಲಿ ಕೆಲಸ ಮಾಡಿ ತಿಳಿದುಕೊಳ್ಳುವುದು ಅಗತ್ಯ.

೭. ಪುಸ್ತಕಗಳನ್ನು ಓದಿ: ಓದಿನ ಅಭಿರುಚಿ ಇರುವವರಿಗೂ ಇದು ಒಳ್ಳೆಯ ಸಮಯ. ದಿನದಲ್ಲಿ ಕೆಲವು ಗಂಟೆಗಳ ಸಮಯವನ್ನು ಪಠ್ಯೇತರ ಪುಸ್ತಕಗಳ ಓದಿಗೆ ಮೀಸಲಿಡುಬಹುದು. ಕತೆ ಕಾದಂಬರಿ ಸೇರಿದಂತೆ ನಿಮ್ಮ ಆಸಕ್ತಿಯ ಯಾವುದೇ ಪುಸ್ತಕವನ್ನಾದರೂ ಓದಿ. ಜಗತ್ತಿನಲ್ಲಿನ ವಿವಿಧ ಕ್ಷೇತ್ರಗಳ ಸಾಧಕರ ಚರಿತ್ರೆಗಳನ್ನು, ಆತ್ಮಕತೆಗಳನ್ನು ಓದಿ. ಯಾವುದೇ ಪುಸ್ತಕವೂ ಕೂಡ ನಮ್ಮ ವ್ಯಕ್ತಿತ್ವ ಅರಳಲು ಸಹಾಯ ಮಾಡುತ್ತವೆ.

೮. ಹೊಸದೇನನ್ನಾದರೂ ತಯಾರುಮಾಡಿ: ನಿಮ್ಮ ಮಿತಿಯಲ್ಲಿ ನೀವು ಹೊಸ ಹೊಸ ಪ್ರಯೋಗಗಳನ್ನು ಮಾಡಬಹುದು.  ಉದಾಹರಣೆಗೆ ಕಂಪ್ಯೂಟರ್,ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿರುವವರು ಹೊಸ ಮೊಬೈಲ್ ಆಪ್ ತಯಾರು ಮಾಡುವುದೋ, ವೆಬ್ ಸೈಟ್ ವಿನ್ಯಾಸ ಮಾಡುವುದು ಅಥವಾ ನಿಮ್ಮ ಕಂಪ್ಯೂಟರ್ ನಲ್ಲೇ ಸಣ್ಣ ಸಣ್ಣ ತಂತ್ರಾಂಶಗಳನ್ನು ಬರೆದು ಪರೀಕ್ಷೆ ಮಾಡುವುದು, ಈಗ ಇರುವ ವೆಬ್ ಪೋರ್ಟಲ್ ಗಳನ್ನು ಇನ್ನೂ ಜನಸ್ನೇಹಿಯಾಗಿಸುವುದು ಹೇಗೆ ಎಂದು ಯೋಚಿಸಿ ಪರಿಹಾರ ಕಂಡುಹಿಡಿಯುವುದು ಇತ್ಯಾದಿ. ಇದರಿಂದ ನೀವು ಕಲಿತ ಪಠ್ಯ ವಿಷಯಗಳನ್ನು ಎಲ್ಲಿ ಹೇಗೆ ಬಳಕೆ ಮಾಡಬಹುದೆಂಬ ತಿಳುವಳಿಕೆಯೂ ಮೂಡುತ್ತದೆ.

೯. ಪ್ರವಾಸ ಹೋಗಿಬನ್ನಿ: ಕೆಲಸ ಪಡೆಯುವುದರ ಜೊತೆಗೆ ವೈಯಕ್ತಿಕ ಜೀವನವೂ ಮುಖ್ಯ. ಸುತ್ತಮುತ್ತಲಿನ ಸ್ಥಳಗಳ, ದೇಶವಿದೇಶಗಳ ಪ್ರವಾಸ ವ್ಯಕ್ತಿತ್ವ ವಿಕಸನಕ್ಕೆ ಮತ್ತು ನಮ್ಮ ಅರಿವಿನ ವಿಸ್ತಾರಕ್ಕೆ ಸಹಾಯಕಾರಿ. ಎಷ್ಟೋ ದಿನಗಳಿಂದ ನಿಮಗೆ ಯಾವುದೋ ಸ್ಥಳಕ್ಕೆ ಭೇಟಿ ನೀಡುವ ಆಸೆ ಇದ್ದಿರಬಹುದು. ಸಮಾನಮನಸ್ಕ ಗೆಳೆಯರ ಜೊತೆಗೋ ಅಥವಾ ಕುಟುಂಬದ ಜೊತೆಗೋ ಪ್ರವಾಸ ಹೋಗಿಬನ್ನಿ. ಇದರಿಂದ ಮನಸ್ಸಿಗೂ ರಿಲ್ಯಾಕ್ಸ್ ಆಗುವುದರ ಜೊತೆ ಹೊರಜಗತ್ತನ್ನು ನೋಡುವ ಅವಕಾಶವಾಗುತ್ತದೆ.

೧೦. ಫ್ಯಾಮಿಲಿ ಬಿಸಿನೆಸ್ ನೋಡಿಕೊಳ್ಳಿ: ಅನೇಕರಿಗೆ ಅವರ ಕುಟುಂಬದ ವ್ಯಾಪಾರ ವ್ಯವಹಾರದ ಹಿನ್ನೆಲೆ ಇರುತ್ತದೆ. ಇಷ್ಟು ದಿನ ಓದು ಮುಂತಾದ ಕಾರಣಗಳಿಂದ ಅದರಲ್ಲಿ ತೊಡಗಿಕೊಳ್ಳದೇ ಇರಬಹುದು. ಈಗ ಸ್ವಲ್ಪ ಸಮಯ ಅದರಲ್ಲಿ ತೊಡಗಿಕೊಂಡು ಅದರ ಪರಿಚಯ ಮಾಡಿಕೊಂಡು ಅನುಭವ ಪಡೆಯಬಹುದು. ಅದು ಖಂಡಿತ ಮುಂದೆ ಸಹಾಯವಾಗುತ್ತದೆ. ನಿಮ್ಮ ತೋಟ ಗದ್ದೆ ಇದ್ದರೆ ಆ ಕೃಷಿ ಚಟುವಟಿಕೆಗಳ ಅನುಭವ ಮಾಡಿಕೊಳ್ಳಿ.

೧೧. ನಿಮ್ಮ ಬಂಧು ಬಳಗ ಮತ್ತು ಪರಿಚಿತರಿಗೆ ನಿಮ್ಮ ವಿದ್ಯಾರ್ಹತೆ, ಆಸಕ್ತಿಯ ಕ್ಷೇತ್ರದ ಬಗ್ಗೆ ವಿವರವಾಗಿ ತಿಳಿಸಿ ಅವಕಾಶಗಳು ಕಂಡುಬಂದಾಗ  ನಿಮಗೆ ತಿಳಿಸಲು, ಸಹಾಯ ಮಾಡಲು ನಿರ್ಭಿಡೆಯಿಂದ ಹೇಳಿ. ಆದರೆ ಯಾರನ್ನೂ ನಿಮಗೆ ಕೆಲಸ ಕೊಡಿಸಲು ಪದೇ ಪದೇ ಪೀಡಿಸಬೇಡಿ.


’ಖಾಲಿತಲೆ ಶೈತಾನನ ಕಾರ್ಯಾಗಾರ’ ಎನ್ನುವ ಮಾತೊಂದಿದೆ. ತಲೆ ಚುರುಕಾಗಿರಲು ನಮ್ಮ ಮೆದುಳಿಗೆ ಕೆಲಸ ಕೊಡುತ್ತಿರಬೇಕು. ಹಾಗಾಗಿ ಪೂರ್ತಿ ಚಟುವಟಿಕೆಯಿಂದಿರಿ. ಯಶಸ್ಸು ನಿಮ್ಮದಾಗಲಿ.

****

ಡಿಸೆಂಬರ್ ೧೦, ೨೦೧೪ರ 'ವಿಜಯವಾಣಿ' ಪತ್ರಿಕೆಯ 'ಮಸ್ತ್' ಪುರವಣಿಯಲ್ಲಿ ಇದು ಪ್ರಕಟವಾಗಿದ್ದು ಹೀಗೆ: ಡಿಗ್ರಿ ಮುಗೀತು, ಮುಂದ?