ಪುಟಗಳು

ಸೋಮವಾರ, ಅಕ್ಟೋಬರ್ 6, 2014

'ಕೊಮಗಟ ಮರು' ಘಟನೆಗೆ ನೂರು ವರ್ಷ

ಭಾರತದ ಸ್ವಾತಂತ್ರಪೂರ್ವ ಇತಿಹಾಸವು ಅನೇಕ ರೋಚಕ ಘಟನೆಗಳನ್ನೊಳಗೊಂಡಿದೆ. ಆ ಕಾಲದಲ್ಲಿ ಬ್ರಿಟಿಶರ ದಬ್ಬಾಳಿಕೆ ವಿರುದ್ಧ ಭಾರತೀಯ ಮನಸ್ಸುಗಳೆಲ್ಲಾ ಹಲವಾರು ರೀತಿಯಲ್ಲಿ ಸೆಟೆದು ನಿಲ್ಲಲು ಪ್ರಯತ್ನಪಟ್ಟಿದ್ದು ಕಂಡುಬರುತ್ತದೆ. ಅನೇಕ ವ್ಯಕ್ತಿಗಳು ತಮ್ಮ ಮಿತಿಯಲ್ಲೇ ಬ್ರಿಟಿಶರನ್ನು ಎದುರಿಸಿ ನಿಂತ ದೃಷ್ಟಾಂತಗಳೂ ಅನೇಕ. ‘ಕೊಮಗಟ ಮರು ಘಟನೆಎನ್ನುವ ಈ ಒಂದು ಘಟನೆ ಕೇವಲ ಭಾರತೀಯ ಇತಿಹಾಸದಲ್ಲಲ್ಲದೇ ಕೆನಡಾ ದೇಶದ ಇತಿಹಾಸಕ್ಕೂ ಕೂಡ ಸಂಬಂಧಿಸಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಪಡೆದಿದೆ.


ಭಾರತವು ಬ್ರಿಟಿಶ್ ಆಳ್ವಿಕೆಯಲ್ಲಿ ಸಿಲುಕಿದ್ದ ಕಾಲದಲ್ಲಿಯೇ ಬ್ರಿಟಿಶರು ಜಗತ್ತಿನ ಹಲವು ಇತರ ದೇಶಗಳಲ್ಲೂ ಕೂಡ ತಮ್ಮ ಸಾಮ್ರಾಜ್ಯ ಸ್ಥಾಪಿಸಿಕೊಂಡು ಆಳುತ್ತಿದ್ದರು. ಅವುಗಳಲ್ಲಿ ಕೆನಡಾ ದೇಶ ಕೂಡ ಒಂದು. ಕೆನಡಾದಲ್ಲಿ ಮೂಲನಿವಾಸಿಗಳ ಸಂಖ್ಯೆ ಬಹಳ ಕಡಿಮೆ. ಹಾಗಾಗಿ ಅಲ್ಲಿ ಭಾರತೀಯರೂ ಸೇರಿದಂತೆ ಜಗತ್ತಿನ ಬೇರೆ ಬೇರೆ ದೇಶಗಳಿಂದ ಜನರು ವಲಸೆ ಹೋಗಿ ನೆಲೆಸಿದ್ದರು. ಭಾರತೀಯರಲ್ಲಿ ಹೆಚ್ಚಿನ ಜನ ಪಂಜಾಬಿಗಳು. ಭಾರತದಲ್ಲಿ ಅಷ್ಟೇನೂ ಚೆನ್ನಾಗಿರದಂತಹ ಆರ್ಥಿಕ ಪರಿಸ್ಥಿತಿಯಲ್ಲಿ ಅವರೆಲ್ಲರೂ ಉದ್ಯೋಗಕ್ಕೋಸ್ಕರ ಅಲ್ಲಿಗೆ ಹೋಗಿದ್ದವರು. ಆದರೆ ಅಲ್ಲಿಗೆ ಹೋದ ನಂತರ ಅವರೆಲ್ಲಾ ಬಹಳಷ್ಟು ತೊಂದರೆ ಮತ್ತು ಭೇದಭಾವಗಳನ್ನು ಅನುಭವಿಸಬೇಕಾಯಿತು. ಕೆನಡಾದಲ್ಲಿದ್ದ ಬಿಳಿಯ ಜನರಿಗೆ ಕಂದುಚರ್ಮದ ಜನರು ತಮ್ಮ ದೇಶಕ್ಕೆ ಬರುವುದು ಇಷ್ಟವಿರಲಿಲ್ಲ. ಅವರಿಗೆ ಈ ಜನರು ಕಾರ್ಖಾನೆಗಳಲ್ಲಿ, ಮಿಲ್ಲುಗಳಲ್ಲಿ, ಲಂಬರ್ ಯಾರ್ಡುಗಳಲ್ಲಿ ತಮ್ಮ ಉದ್ಯೋಗಗಳನ್ನು ಕಸಿದುಕೊಳ್ಳುತ್ತಾರೆಂಬ ಆತಂಕವಿತ್ತು. ಈ ಅಭದ್ರತೆಯ ಭಾವ ಹೆಚ್ಚಾದಂತೆ ಏಶಿಯಾ ಮೂಲದ ಜನರ ವಲಸೆಯನ್ನು ತಡೆಗಟ್ಟಲು ಬ್ರಿಟಿಶ್ ಕೊಲಂಬಿಯಾ ಪ್ರಾಂತ್ಯದ ಆಡಳಿತ ಒಂದು ಕಾನೂನನ್ನು ತರುತ್ತದೆ. ಕೆನಡಾ ದೇಶಕ್ಕೆ ಬರುವವರು ತಮ್ಮ ಮೂಲದೇಶದಿಂದ ನೇರವಾಗಿ ಒಂದೇ ಪ್ರಯಾಣದಲ್ಲಿ ಬರಬೇಕು ಹಾಗೂ ೨೦೦ ಡಾಲರ್ ಮೊತ್ತದ ಹಣವನ್ನು ಇಟ್ಟುಕೊಂಡು ಬರಬೇಕು. ಅಂತವರಿಗೆ ಮಾತ್ರ ದೇಶದೊಳಗೆ ಪ್ರವೇಶ ಕೊಡುವುದಾಗಿ ಆ ಕಾನೂನಿನಲ್ಲಿ ಹೇಳಲಾಗಿರುತ್ತದೆ. ಇದರ ಉದ್ದೇಶ ಭಾರತದಂತಹ ದೇಶದಿಂದ ವಲಸೆ ತಡೆಯುವುದೇ ಆಗಿರುತ್ತದೆ. ಏಕೆಂದರೆ ಆಗ ಭಾರತವೂ ಸೇರಿದಂತೆ ಹಲವಾರು ದೇಶಗಳಿಂದ ಕೆನಡಾಗೆ ನೇರ ಹಡಗಿನ ಸಂಪರ್ಕವೂ ಇರಲಿಲ್ಲ. ಜೊತೆಗೆ ವಲಸೆ ಬರುವವರಿಗೆ ಆ ಕಾಲದಲ್ಲಿ ದೊಡ್ಡ ಮೊತ್ತವಾಗಿದ್ದ ಅಷ್ಟು ಹಣವನ್ನು ಇಟ್ಟುಕೊಂಡು ಬರಲೂ ಸಾಧ್ಯವಿರಲಿಲ್ಲ. ಸಾಮಾನ್ಯ ಭಾರತೀಯನೊಬ್ಬನ ದಿನದ ಗಳಿಕೆ ಆಗ ಹತ್ತು ಸೆಂಟ್ ಗಳಷ್ಟೇ ಇತ್ತು. ಇಷ್ಟಲ್ಲದೇ ಕೆನಡಾ ಸರ್ಕಾರ ಹಡಗಿನ ಕಂಪನಿಗಳಿಗೆ ಭಾರತೀಯರಿಗೆ ಪ್ರಯಾಣದ ಟಿಕೆಟ್ ಕೊಡದಿರುವಂತೆ ಕೂಡ ಒತ್ತಡ ಹಾಕಲು ಆರಂಭಿಸಿತ್ತು. ೧೯೦೭ರಲ್ಲಿ ಕೆನಡಾದಲ್ಲಿದ್ದ ಭಾರತೀಯರಿಗೆ ಮತದಾನದ ಹಕ್ಕನ್ನು ತೆಗೆದುಹಾಕಲಾಯಿತು. ಭಾರತೀಯರು ಸಾರ್ವಜನಿಕ ಕಛೇರಿಯಲ್ಲಿ, ನ್ಯಾಯಾಂಗದಲ್ಲಿ ಕೆಲಸ ಮಾಡಲು, ಅಕೌಂಟೆಂಟ್, ವಕೀಲ ವೃತ್ತಿಗಳಲ್ಲಿ ತೊಡಗಿಕೊಳ್ಳಲು ಅನುಮತಿ ನಿರಾಕರಿಸಲಾಯಿತು. ಇವೆಲ್ಲವೂ ಕೂಡ ಕಂದು ಹಾಗೂ ಕಪ್ಪು ಜನರ ವಲಸೆ ತಡೆಯುವ ಉದ್ದೇಶದಿಂದಲೇ ಆಗಿತ್ತು. ಇಂತಹ ವರ್ಣಭೇದದ ಕಾನೂನನ್ನು ಎದುರಿಸುವ ಪ್ರಯತ್ನಗಳಲ್ಲಿ ಕೊಮಗಟುಮರುಘಟನೆ ಇತಿಹಾಸ ಪ್ರಸಿದ್ಧ.

ಈ ವಲಸೆ ಕಾನೂನಿನಿಂದ ಕೆರಳಿದವರು ಗುರ್ದಿತ್ ಸಿಂಗ್ ಎನ್ನುವ ದೇಶಭಕ್ತ ವ್ಯಾಪಾರಿ. ಭಾರತವನ್ನು ಬ್ರಿಟಿಶರಿಂದ ಮುಕ್ತಗೊಳಿಸಲು ಅಮೆರಿಕಾದಲ್ಲಿ ಸ್ಥಾಪಿತವಾಗಿದ್ದ ಗದರ್ಪಕ್ಷದ ಬೆಂಬಲಿಗರೂ ಆಗಿದ್ದ ಅವರು ಈ ಕಾನೂನಿಗೆ ಸವಾಲೆಸೆಯುವ ಉದ್ದೇಶದಿಂದ ಒಂದು ಯೋಜನೆ ರೂಪಿಸುತ್ತಾರೆ. ಅದರಂತೆ ಅವರು ಒಂದು ಜಪಾನಿ ಉಗಿಹಡಗನ್ನು ಬಾಡಿಗೆಗೆ ಪಡೆಯುತ್ತಾರೆ. ಅದರ ಹೆಸರೇಕೊಮಗಟಮರು’. ಅದರಲ್ಲಿ ಹಾಂಕಾಂಗಿನಿಂದ ಕೆನಡಾದ ವ್ಯಾಂಕೋವರ್ ನಗರಕ್ಕೆ ಪ್ರಯಾಣ ಮಾಡಲು ನಿರ್ಧರಿಸುತ್ತಾರೆ. ಅಂತೆಯೇ ಹಾಂಕಾಂಗಿನಲ್ಲಿರುವ ಗುರುದ್ವಾರದಲ್ಲಿ ನೆಲೆಸಿದ್ದ ವ್ಯಾಪಾರಿಗಳಾದ ಗುರ್ದಿತ್ ಸಿಂಗ್, ದಲ್ಜಿತ್ ಸಿಂಗ್ ಮತ್ತು ವೀರ್ ಸಿಂಗ್ ಭಾರತದ ಜನರು ಕೆನಡಾಗೆ ಹೋಗಲು ಸಾಧ್ಯವಾಗುವಂತೆ ಹಡಗಿನ ಪ್ರಯಾಣಕ್ಕೆ ಟಿಕೆಟುಗಳನ್ನು ಮಾರಾಟ ಮಾಡಲು ಶುರುಮಾಡುತ್ತಾರೆ. ಆಗ ಹಾಂಕಾಂಗಿನಲ್ಲಿನ ಬ್ರಿಟಿಶ್ ಸರ್ಕಾರವು ಇವರ ಚಟುವಟಿಕೆಗಳ ಮೇಲೆ ಕಣ್ಣಿಡುತ್ತದೆ. ಪ್ರಯಾಣಕ್ಕೆ ಇನ್ನು ಎರಡು ದಿನಗಳ ಬಾಕಿ ಇರುವಾಗ ಗುರ್ದಿತ್ ಸಿಂಗರನ್ನು ಬಂಧಿಸಿ ಹಡಗನ್ನು ಪೋಲೀಸ್ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. ಮಾರ್ಚ್ ೨೪, ೧೯೧೪ರಂದು ಗುರ್ದಿತ್ ಸಿಂಗರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆ. ಏಪ್ರಿಲ್ ೪, ೧೯೧೪ರಂದು ಹಡಗಿನ ಪ್ರಯಾಣಕ್ಕೆ ಗವರ್ನರ್ ಅನುಮತಿ ದೊರೆಯುತ್ತದೆ. ೧೫೦ ಜನ ಭಾರತೀಯರನ್ನು ತುಂಬಿಕೊಂಡ ಹಡಗು ಅಲ್ಲಿಂದ ಪ್ರಯಾಣ ಆರಂಭಿಸುತ್ತದೆ. ಶಾಂಘೈ ನಗರದಲ್ಲಿ ೧೧೧ ಜನರು ಸೇರಿಕೊಳ್ಳುತ್ತಾರೆ. ಪೋರ್ಟ್ ಆಫ್ ಮೋಜಿಯಲ್ಲಿ ೮೬ ಜನರು, ಯೊಕೊಹೊಮಾ ಬಂದರಿನಲ್ಲಿ ೧೪ ಜನರು ಸೇರಿಕೊಂಡು ಒಟ್ಟು ೩೭೬ ಪ್ರಯಾಣಿಕರಾಗುತ್ತಾರೆ. ಆ ಪ್ರಯಾಣಿಕರಲ್ಲಿ ೩೪೦ ಜನ ಸಿಖ್ಖರು, ೧೨ ಹಿಂದೂಗಳು ಮತ್ತು ೨೪ ಮುಸ್ಲಿಮರು. ಕೆನಡಾದಲ್ಲಿ ಮಾರಾಟ ಮಾಡಲು ೧೫೦೦ಟನ್ ಕಲ್ಲಿದ್ದಲನ್ನು ಸಹ ತುಂಬಿಕೊಳ್ಳಲಾಗುತ್ತದೆ. ಹಡಗು ಮೇ ೩ರಂದು ಕೆನಡಾ ಕಡೆಗೆ ಪ್ರಯಾಣ ಬೆಳೆಸುತ್ತದೆ. ಆ ಸಮಯದಲ್ಲಿ ಚೀನಾದಲ್ಲಿದ್ದ ಅನೇಕ ಸಿಖ್ ಮುಖಂಡರು ಭಾರತೀಯ ವಲಸಿಗರ ಬಗ್ಗೆ ಕೆನಡಾದಲ್ಲಿ ಬ್ರಿಟಿಶ್ ಆಡಳಿತಕ್ಕಿರುವ ಧೋರಣೆಯ ಪರಿಸ್ಥಿತಿಯನ್ನು ಪ್ರಯಾಣಿಕರಿಗೆ ವಿವರಿಸಿ ಎಚ್ಚರಿಸುತ್ತಾರೆ.

"೪೦೦ ಭಾರತೀಯ ಜನರನ್ನು ಹೊತ್ತ ಹಡಗು ಕೆನಡಾ ಕಡೆಗೆ ಪ್ರಯಾಣ ಬೆಳೆಸಿದೆ" ಎಂದು ಜರ್ಮನ್ ಕೇಬಲ್ ಕಂಪನಿಯು ಜರ್ಮನ್ ಪ್ರೆಸ್ ಗೆ ತಂತಿ ಸಂದೇಶ ಕಳಿಸುತ್ತದೆ. ಇದು ಬ್ರಿಟಿಶ್ ಪ್ರೆಸ್ಸಿಗೂ ಕೂಡ ತಲುಪಿ ಕೆನಡಾದ ಪತ್ರಿಕೆಗಳು ಇದನ್ನು ದೊಡ್ಡ ಸುದ್ದಿಯನ್ನಾಗಿ ಮಾಡುತ್ತವೆ. ವ್ಯಾಂಕೋವರ್ ನಗರದಪ್ರಾವಿನ್ಸ್ಎಂಬ ಪತ್ರಿಕೆಯುಹಡಗಿನ ತುಂಬಾ ಹಿಂದೂಗಳು ವ್ಯಾಕೋಂವರ್ ಗೆ ಬರುತ್ತಿದ್ದಾರೆಎಂಬ ತಲೆಬರಹ ಪ್ರಕಟಿಸುತ್ತದೆ. ಬ್ರಿಟಿಶ್ ಕೊಲಂಬಿಯಾ ಪ್ರೆಸ್ಕೆನಡಾಗೆ ಹಿಂದೂಗಳ ಧಾಳಿಎಂಬಂತಹ ಶೀರ್ಷಿಕೆಗಳನ್ನು ಪ್ರಕಟಿಸುತ್ತದೆ. ಬ್ರಿಟಿಶ್ ಕೊಲಂಬಿಯಾ ಆಡಳಿತಕ್ಕೆ ಈ ಸುದ್ದಿ ತಿಳಿಯುತ್ತಿದ್ದಂತೆಯೇ ಅವರು ಹೇಗಾದರೂ ಮಾಡಿ ಭಾರತೀಯ ವಲಸಿಗರನ್ನು ತಡೆಯಬೇಕು ಎಂದು ತಯಾರಾಗುತ್ತದೆ. ಈಗಾಗಲೇ ಕೆನಡಾದಲ್ಲಿ ನೆಲೆಯೂರಿದ್ದ ಭಾರತೀಯರು ಹಡಗಲ್ಲಿ ಬರುತ್ತಿರುವ ಜನರನ್ನು ಸುರಕ್ಷಿತವಾಗಿ ಕೆನಡಾದೊಳಗೆ ಬರುವಂತೆ ಮಾಡಲು ಚಟುವಟಿಕೆಗಳನ್ನು ಆರಂಭಿಸುತ್ತಾರೆ. ಗುರುದ್ವಾರದಲ್ಲಿ ಸಭೆಗಳಾಗುತ್ತವೆ. ಬರುವವರ ಸಹಾಯಕ್ಕಾಗಿ ಹಣವನ್ನು ಸೇರಿಸಲಾಗುತ್ತದೆ. ಬ್ರಿಟಿಶ್ ಆಡಳಿತದ ವಿರೋಧವನ್ನು ಎದುರಿಸಲು ಎಲ್ಲಾ ಭಾರತೀಯ ಜನರು ಒಗ್ಗಟ್ಟಾಗಿ ತಯಾರಾಗುತ್ತಾರೆ.

ಮೇ ೨೩, ೧೯೧೪ರಂದು ಕೊಮಗಟಮರು ಹಡಗು ವ್ಯಾಂಕೋವರ್ ಬಂದರನ್ನು ತಲುಪುತ್ತದೆ.. ಈ ಹಡಗು ವಲಸೆ ಕಾನೂನನ್ನು ಪಾಲಿಸದೇ ಬಂದಿರುವುದರಿಂದ ಪ್ರಯಾಣಿಕರನ್ನು ಬಿಟ್ಟುಕೊಳ್ಳಲು ಆಗುವುದಿಲ್ಲವೆಂದು ಕೆನಡಾದ ಅಧಿಕಾರಿಗಳು ನಿರಾಕರಿಸುತ್ತಾರೆ. ನಿಯಮದ ಪ್ರಕಾರ ಈ ಹಡಗು ವಲಸಿಗರ ಮೂಲ ಸ್ಥಳದಿಂದ ಒಂದೇ ನೇರ ಪ್ರಯಾಣದಲ್ಲಿ ಬಂದಿಲ್ಲ ಹಾಗೂ ಬ್ರಿಟಿಶ್ ಕೊಲಂಬಿಯಾ ರಾಜ್ಯದೊಳಗೆ ಬರಲು ಪ್ರತಿಯೊಬ್ಬ ಪ್ರಯಾಣಿಕ ೨೦೦ ಡಾಲರ್ ಹಣವನ್ನು ಇಟ್ಟುಕೊಂಡು ಬಂದಿಲ್ಲ ಎಂಬುದು ಅವರ ವಾದವಾಗಿರುತ್ತದೆ. ಕೆನಡಾದಲ್ಲಿದ್ದ ಭಾರತೀಯರೂ ಕೂಡ ವಕೀಲರನ್ನು ಇಟ್ಟುಕೊಂಡು ತಯಾರಾಗಿರುತ್ತಾರೆ. ಭಾರತವು ಬ್ರಿಟಿಶರ ಸಾಮ್ರಾಜ್ಯದ ಭಾಗವಾಗಿರುವುದರಿಂದ ಈ ನಿಯಮವು ತಮಗೆ ಅನ್ವಯಿಸುವುದಿಲ್ಲವೆಂದು ಭಾರತೀಯ ವಲಸಿಗರು ಪ್ರತಿಪಾದಿಸುತ್ತಾರೆ. ಈ ವಿಷಯ ನ್ಯಾಯಾಲಯದ ಮೆಟ್ಟಿಲೇರುತ್ತದೆ. ಬ್ರಿಟಿಶ್ ಕೊಲಂಬಿಯಾದ ಆಡಳಿತ ಮತ್ತು ಭಾರತೀಯರ ನಡುವೆ ಬಿರುಸಿನ ಕಾನೂನು ಹೋರಾಟ ಶುರುವಾಗುತ್ತದೆ. ಇದು ಎರಡು ತಿಂಗಳವರೆಗೆ ನಡೆಯುತ್ತದೆ. ಅಷ್ಟು ಕಾಲದವರೆಗೆ ಅಷ್ಟೂ ಜನ ಪ್ರಯಾಣಿಕರೊಂದಿಗೆ ಹಡಗು ಬಂದರಿನಲ್ಲಿ ಅತಂತ್ರವಾಗಿ ನಿಲ್ಲಬೇಕಾಗುತ್ತದೆ. ಎರಡು ತಿಂಗಳ ಹೋರಾಟದ ನಂತರ ಕೇವಲ ೨೪ ಜನರಿಗೆ ಮಾತ್ರ ಬ್ರಿಟಿಶ್ ಕೊಲಂಬಿಯಾ ಪ್ರವೇಶಿಸಲು ಅನುಮತಿ ದೊರೆಯುತ್ತದೆ. ಕೆನಡಾದ ಪೋಲೀಸರು ಮತ್ತು ಅಧಿಕಾರಿಗಳು ಹಡಗಿನೊಳಗೆ ಪ್ರವೇಶಿಸಲು ಪ್ರಯತ್ನಿಸಿದಾಗ ಅದರಲ್ಲಿದ್ದ ಪ್ರಯಾಣಿಕರು ಕಲ್ಲಿದ್ದಲನ್ನು ಎಸೆದು ಅವರನ್ನು ಹಿಮ್ಮೆಟ್ಟಿಸುತ್ತಾರೆ. ಕೊನೆಗೆ ನೌಕಾದಳದ ಹಡಗುಗಳನ್ನು ಬಳಸಿ ಜುಲೈ ೨೩, ೧೯೧೪ರಂದು ಉಳಿದ ಪ್ರಯಾಣಿಕರೊಂದಿಗೆ ಬಲವಂತವಾಗಿ ಹಡಗನ್ನು ಹೊರದಬ್ಬಲಾಗುತ್ತದೆ.

ಅಲ್ಲಿಂದ ತಿರುಗಿ ಪ್ರಯಾಣ ಹೊರಟ ಹಡಗು ಸೆಪ್ಟೆಂಬರ್ ೨೬, ೧೯೧೪ರಂದು ಕೋಲ್ಕತಾವನ್ನು ತಲುಪುತ್ತದೆ. ಕೋಲ್ಕತಾವನ್ನು ತಲುಪುತ್ತಿದ್ದಂತೆಯೇ ಈ ಹಡಗನ್ನು ತಡೆದು ಅದರಲ್ಲಿನ ಪ್ರಯಾಣಿಕರನ್ನು ರಾಜಕೀಯ ದಂಗೆಕೋರರೆಂಬ ಆರೋಪ ಹೊರಿಸಿ ಬಂಧಿಗಳನ್ನಾಗಿ ಮಾಡಿ ಅವರ ಸಮೇತ ಹಡಗನ್ನು ೧೭ಮೈಲಿ ದೂರದ ಬೋಜ್ ಬೋಜ್ಎಂಬಲ್ಲಿಗೆ ಕರೆದೊಯ್ಯಲಾಗುತ್ತದೆ. ಈ ಬಗ್ಗೆ ಗುರ್ದಿತ್ ಸಿಂಗರು ವಿಚಾರಿಸಿದಾಗ ಪ್ರಯಾಣಿಕರನ್ನು ಕೋಲ್ಕೋತಾದಿಂದ ರೈಲಿನಲ್ಲಿ ಪಂಜಾಬಿಗೆ ಕಳುಹಿಸಿಕೊಡಲಾಗುವುದೆಂದು ಬ್ರಿಟಿಶ್ ಅಧಿಕಾರಿಗಳು ತಿಳಿಸುತ್ತಾರೆ. ತಿಂಗಳುಗಳ ಕಾಲ ಸಮುದ್ರ ಪ್ರಯಾಣದಿಂದ ಮತ್ತು ಕೆನಡಾಗೆ ಪ್ರವೇಶ ಸಿಗದೇ ಹಿಂದಿರುಗಿ ಬಂದಿದ್ದರಿಂದ ಬೇಸತ್ತಿದ್ದ ಪ್ರಯಾಣಿಕರು ಇದನ್ನು ವಿರೋಧಿಸುತ್ತಾರೆ. ಹಲವರಿಗೆ ಕೋಲ್ಕೋತಾದಲ್ಲೇ ಇರುವ ಮನಸ್ಸಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಜೊತೆ ಕೊಂಡೊಯ್ದಿದ್ದ ಪವಿತ್ರ ಧರ್ಮಗ್ರಂಥ ಗುರುಗ್ರಂಥಸಾಹೀಬನ್ನು ಕೋಲ್ಕೋತಾದ ಗುರುದ್ವಾರದಲ್ಲಿ ಇಡಬೇಕಿರುತ್ತದೆ. ಹಾಗಾಗಿ ಪ್ರಯಾಣಿಕರು ಕೊಲ್ಕೊತಾಗೆ ಹೊರಡುತ್ತಾರೆ. ಆದರೆ ಬ್ರಿಟಿಶ್ ಪೋಲೀಸರ ಬೆದರಿಕೆಗಳಿಂದಾಗಿ ಪುನಃ ಬೋಜ್ ಬೋಜ್ ಸ್ಥಳಕ್ಕೆ ಬರಬೇಕಾಗುತ್ತದೆ. ಅಲ್ಲಿ ಮತ್ತೆ ಹಡಗನ್ನು ಏರಲು ಒತ್ತಾಯಿಸಲಾಗುತ್ತದೆ. ಬೇಸತ್ತ ಪ್ರಯಾಣಿಕರು ಇದನ್ನು ವಿರೋಧಿಸುತ್ತಾರೆ. ಆಗ ಬ್ರಿಟಿಶ್ ಪೋಲಿಸರು ಗುರ್ದಿತ್ ಸಿಂಗರನ್ನೂ ಸೇರಿದಂತೆ ಹಲವು ಮುಂದಾಳುಗಳನ್ನು ಬಂಧಿಸಿಲು ಮುಂದಾಗುತ್ತಾರೆ. ಇದರಿಂದ ಭಾರತೀಯ ಪ್ರಯಾಣಿಕರು ಮತ್ತು ಬ್ರಿಟಿಶ್ ಪೋಲೀಸರ ನಡುವೆ ಘರ್ಷಣೆ ಶುರುವಾಗುತ್ತದೆ. ಪೋಲೀಸರಿಂದ ಗುಂಡಿನ ಧಾಳಿಯೂ ನಡೆಯುತ್ತದೆ. ಗುರ್ದಿತ್ ಸಿಂಗರೂ ಸೇರಿದಂತೆ ಹಲವರು ತಪ್ಪಿಸಿಕೊಂಡು ಹೋಗುತ್ತಾರೆ. ಆದರೆ ೨೦ ಭಾರತೀಯರು ಗುಂಡಿಗೆ ಬಲಿಯಾಗುತ್ತಾರೆ ಮತ್ತು ಇತರ ೨೯ ಜನರು  ಗಾಯಗೊಳ್ಳುತ್ತಾರೆ. ಈ ರೀತಿ ಅಮಾಯಕ ಭಾರತೀಯರು ಬ್ರಿಟಿಶರಿಂದ ಹತ್ಯೆಗೊಳಗಾದ ಘಟನೆ ಭಾರತದ ಇತಿಹಾಸದ ದುರಂತಪುಟಗಳಿಗೆ ಸೇರ್ಪಡೆಯಾಗಿಬೋಜ್ ಬೋಜ್ ದಂಗೆಎಂದು ಹೆಸರಾಗಿದೆ. ಉಳಿದವರನ್ನು ಬಂಧನಕ್ಕೊಳಪಡಿಸಿ ಅವರ ಹಳ್ಳಿಗಳಿಗೆ ಕಳಿಸಲಾಗುತ್ತದೆ. ಮೊದಲ ವಿಶ್ವಯುದ್ಧ ಮುಗಿಯುವವರೆಗೂ ಅವರನ್ನು ಅವರವರ ಹಳ್ಳಿಗಳಲ್ಲೇ ಗೃಹಬಂಧನದಲ್ಲಿಡಲಾಗುತ್ತದೆ.  ಒಟ್ಟಾರೆ ಈ ಘಟನೆಯಲ್ಲಿ ಹಲವು ರೀತಿಯಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗಿರುವುದೂ ಸೇರಿ ಇದು ಕೆನಡಾದ ಇತಿಹಾಸದಲ್ಲೂ ಒಂದು ಕರಾಳ ಘಟನೆಯಾಗಿ ದಾಖಲಾಗಿದೆ.


1952ರಲ್ಲಿ ಈ ಘಟನೆ ನಡೆದಬೋಜ್ ಬೋಜ್ಸ್ಥಳದಲ್ಲಿ ಈ ಹುತಾತ್ಮರ ನೆನಪಿಗಾಗಿ ನಿರ್ಮಿಸಿದ ಒಂದು ಸ್ಮಾರಕವು ಪ್ರಧಾನಿ ನೆಹರೂರವರಿಂದ ಉದ್ಘಾಟಿಸಲ್ಪಟ್ಟಿತು. ಕೆನಡಾದ ವ್ಯಾಂಕೋವರ್ ನಗರದಫೆಸಿಫಿಕ್ ಗೇಟ್ ವೇದಲ್ಲಿ ಮತ್ತು ರಾಸ್ ಸ್ಟ್ರೀಟ್ ಗುರುದ್ವಾರದಲ್ಲಿ ಕೊಮಗಟಮರು ಘಟನೆಯ ಸ್ಮಾರಕ ಫಲಕಗಳನ್ನು ಇಂದಿಗೂ ಕಾಣಬಹುದು. ಇಂದು ಭಾರತೀಯರು ಕೆನಡಾದಲ್ಲಿ ಸುಸ್ಥಿತಿಯಲ್ಲಿ ನೆಲೆಸಿದ್ದಾರೆ. ಐದು ವರ್ಷಗಳ ಹಿಂದೆ ಕೆನಡಾದ ಪ್ರಧಾನಿ ಸ್ಟೀಫನ್ ಹಾರ್ಪರ್ ಭಾರತೀಯ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಕೊಮಗಟಮರು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುವ ಮಾತುಗಳನ್ನಾಡಿದ್ದಾರೆ. ಈ ಘಟನೆ ನಡೆದ ಬ್ರಿಟಿಶ್ ಕೊಲಂಬಿಯಾ ಪ್ರಾಂತ್ಯದ ಆಡಳಿತ ಕೂಡ ಕ್ಷಮೆ ಯಾಚಿಸಿದೆ. ೨೦೧೪ರ ಈ ವರ್ಷಕ್ಕೆ ಈ ಘಟನೆ ನಡೆದು ಒಂದು ಶತಮಾನವಾಗಿರುವ ಸಂದರ್ಭದಲ್ಲಿ ಕೆನಡಾದ ಭಾರತೀಯ ಸಮುದಾಯದಲ್ಲಿ ಇದರ ಸ್ಮರಣಾರ್ಥ ಹಲವು ಕಾರ್ಯಕ್ರಮಗಳು ನಡೆದಿವೆ. 

(ಆಗಸ್ಟ್ ೧೦, ೨೦೧೪ ರ ವಿಜಯವಾಣಿ ಪತ್ರಿಕೆಯ ವಿಜಯವಿಹಾರ ಪುರವಣಿಯಲ್ಲಿ ಪ್ರಕಟವಾಗಿದ್ದು. ಭಾಗ ೧, ಭಾಗ ೨)