ಪುಟಗಳು

ಬುಧವಾರ, ಮೇ 28, 2014

Kannada typing in Smart phones - ಟೈಪಿಸು ಕನ್ನಡ ಡಿಂಡಿಮವ

ಸ್ಮಾರ್ಟ್ ಫೋನುಗಳಲ್ಲಿ ಕನ್ನಡದಲ್ಲಿ ಬರೆಯೋದು ಹೇಗೆ, ಅದಕ್ಕಾಗಿ ಇರುವ ಸೌಲಭ್ಯಗಳೇನು ಎನ್ನುವುದರ ಬಗ್ಗೆ ೨೮ ಮೇ ೨೦೧೪ರ  'ವಿಜಯವಾಣಿ' ಪತ್ರಿಕೆಯಲ್ಲಿ ಪ್ರಕಟವಾದ ನನ್ನದೊಂದು ಬರಹ: ಪುಟ ೧ಪುಟ ೩ 
ಇದು ಸ್ಮಾರ್ಟ್ ಫೋನುಗಳ ಕಾಲ. ಆಂಡ್ರಾಯ್ಡ್, ವಿಂಡೋಸ್, ಐಫೋನುಗಳು ಜನರ ಕೈಯಲ್ಲಿ ನಲಿದಾಡುತ್ತಿವೆ. ವಿವಿಧ ಸುದ್ದಿತಾಣಗಳ ವೀಕ್ಷಣೆ, ಫೇಸ್ ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕಜಾಲತಾಣಗಳ ಬಳಕೆ ಫೋನುಗಳಲ್ಲಿ ಹೆಚ್ಚಿದೆ. ಭಾರತದಲ್ಲಿ ಜನರು ತಮ್ಮ ತಮ್ಮ ತಾಯ್ನುಡಿಯಲ್ಲೇ ಫೋನುಗಳನ್ನು, ಅಂತರಜಾಲವನ್ನು ಬಳಸಲು ಬಯಸುತ್ತಿದ್ದಾರೆ. ಅದರಂತೆಯೇ ಕನ್ನಡಕ್ಕೂ ಕೂಡ ಬಹಳ ಬೇಡಿಕೆಯಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಕನ್ನಡವನ್ನು ಓದಲು ಮತ್ತು ಬರೆಯಲು ಅನುಕೂಲ ಮಾಡಿಕೊಡುವಂತಹ ಫೋನುಗಳಿವೆ.

ಕನ್ನಡಕ್ಕೆ ಬೆಂಬಲ:  ಈಗ ಜನಪ್ರಿಯವಾಗಿರುವ ಆಂಡ್ರಾಯ್ಡ್ ಫೋನುಗಳಲ್ಲಿ ಮೊದಲು ಕನ್ನಡ ಅಕ್ಷರಗಳಿಗೆ ಬೆಂಬಲ ಇರಲಿಲ್ಲ. ಅಂದರೆ ಅವುಗಳಲ್ಲಿ ಕನ್ನಡ ಅಕ್ಷರಗಳನ್ನು ಓದಲು ಸಾಧ್ಯವಾಗುತ್ತಿರಲಿಲ್ಲ. ಕನ್ನಡ ಅಕ್ಷರಗಳು ಖಾಲಿ ಚೌಕಗಳಂತೆ ಕಾಣುತ್ತಿದ್ದವು. ಹಳೆಯ ಆಂಡ್ರಾಯ್ಡ್ ಆವೃತ್ತಿಗಳನ್ನು ಹೊಂದಿರುವ ಕೆಲವು ಬ್ರ್ಯಾಂಡ್ ಗಳ ಕೆಲವು ಮಾಡೆಲ್ ಗಳಲ್ಲಿ ಮಾತ್ರ ಕನ್ನಡಕ್ಕೆ ಬೆಂಬಲವಿತ್ತು. ಆಂಡ್ರಾಯ್ಡ್ ೪.೧ (ಜೆಲ್ಲಿ ಬೀನ್) ಆವೃತ್ತಿಯ ನಂತರ ಕನ್ನಡಕ್ಕೆ ಬೆಂಬಲ ನೀಡಲಾಗಿರುವುದರಿಂದ ಆ ಆವೃತ್ತಿ ಮತ್ತು ಅದರ ನಂತರದ ಆವೃತ್ತಿಗಳನ್ನು ಹೊಂದಿರುವ ಎಲ್ಲಾ ಫೋನುಗಳಲ್ಲೂ ಕನ್ನಡ ಅಕ್ಷರಗಳು ಸರಿಯಾಗಿ ಮೂಡುತ್ತವೆ. ಆದಾಗ್ಯೂ ಕೆಲವು ಬ್ರ್ಯಾಂಡ್ ಫೋನುಗಳಲ್ಲಿ ಕನ್ನಡ ಸರಿಯಾಗಿ ಮೂಡದಿರುವ ಬಗ್ಗೆ ತಿಳಿದುಬಂದಿದೆ. ಕೊಳ್ಳುವಾಗ ಈ ಬಗ್ಗೆ ಖಾತ್ರಿಪಡಿಸಿಕೊಂಡು ಕನ್ನಡ ಅಕ್ಷರಗಳು ಸರಿಯಾಗಿ ಕಾಣದಿರುವ ಫೋನುಗಳನ್ನು ತಿರಸ್ಕರಿಸುವುದು ಒಳ್ಳೆಯದು.

ಸಂದೇಶ ಕಳುಹಿಸಲು, ಚಾಟಿಂಗ್ ಮಾಡಲು, ಸಾಮಾಜಿಕ ತಾಣಗಳಲ್ಲಿ ಬರೆಯಲು ಕನ್ನಡವನ್ನು ಇಂಗ್ಲೀಶ್ ಲಿಪಿಯಲ್ಲಿ ಬರೆಯುವ ಅಭ್ಯಾಸವಿದೆ. ಆದರೆ ಇದು ಓದಲು ಬಹಳ ಕಷ್ಟವಾಗುವುದರ ಜೊತೆಗೆ ತಂತ್ರಜ್ಞಾನದಲ್ಲಿ ಕನ್ನಡದ ಬೆಳವಣಿಗೆಗೂ ತೊಡಕಾಗಿದೆ. ಹಾಗಾಗಿ ಕನ್ನಡವನ್ನು ಕನ್ನಡ ಲಿಪಿಯಲ್ಲೇ ಬರೆಯುವುದು ಒಳ್ಳೆಯದು. ಆಂಡ್ರಾಯ್ಡ್ ದೂರವಾಣಿಗಳಲ್ಲಿ ಮತ್ತು ಟ್ಯಾಬ್ಲೆಟ್ ಗಳಲ್ಲಿ ಕನ್ನಡವನ್ನು ಬೆರಳಚ್ಚು ಮಾಡಲು ಇರುವ ಸೌಲಭ್ಯಗಳ ಬಗ್ಗೆ ಪರಿಚಯ ಮಾಡಿಕೊಳ್ಳೋಣ.

ಮೊದಲನೆಯದಾಗಿ, ಸ್ಯಾಮ್ಸಂಗ್ ಕಂಪನಿಯ ಕೆಲವು ಮಾಡೆಲ್ ಗಳಲ್ಲಿ ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ’ಸ್ಯಾಮ್ಸಂಗ್ ಇಂಡಿಯನ್ ಕೀಬೋರ್ಡ್’ ಎನ್ನುವ ಸೌಲಭ್ಯ ಒದಗಿಸಲಾಗಿದೆ. ಅದರಲ್ಲಿ ಕನ್ನಡವೂ ಸೇರಿದಂತೆ ಹಲವಾರು ಭಾರತೀಯ ಭಾಷೆಗಳನ್ನು ಟೈಪಿಸಬಹುದು.  ಕೀಬೋರ್ಡ್ ಇನ್ಪುಟ್ ನಲ್ಲಿ ಕನ್ನಡ ಆಯ್ಕೆ ಮಾಡಿಕೊಂಡರೆ ಆಯಿತು.

ಎರಡನೆಯದಾಗಿ, ಕನ್ನಡ ಟೈಪ್ ಮಾಡಲು ಸಾಧ್ಯಮಾಡಿಕೊಡುವಂತಹ  ಹಲವಾರು ಕಿರುತಂತ್ರಾಂಶಗಳು ಅಂದರೆ appಗಳು ಇವೆ.  ಅವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಬಹುತೇಕ ತಂತ್ರಾಂಶಗಳು ಉಚಿತವಾಗಿ ದೊರೆಯುತ್ತವೆ. ಹಲವಾರು ಹವ್ಯಾಸಿ ತಂತ್ರಜ್ಞರು ಮತ್ತು ವೃತ್ತಿಪರ ಸಂಸ್ಥೆಗಳು ಇವುಗಳನ್ನು ತಯಾರಿಸಿದ್ದಾರೆ. ಇವುಗಳನ್ನು ಯಾವುದೇ ಇತರ ಸಾಮಾನ್ಯ ಆಪ್ ಗಳಂತೆ ಡೌನ್ಲೋಡ್ ಮಾಡಿಕೊಂಡು ಹಾಕಿಕೊಳ್ಳಬಹುದು.  ಕೆಲವು ತಂತ್ರಾಂಶಗಳು ಇಂಗ್ಲೀಷಿನ QUERTY ಕೀಬೋರ್ಡಿಗೆ ಅನುಗುಣವಾಗಿರುವ ’ನುಡಿ’ (ಕೆ.ಪಿ.ರಾವ್/ಕ.ಗ.ಪ) ಮಾದರಿಯ ಕೀಬೋರ್ಡ್ ವಿನ್ಯಾಸ ಒದಗಿಸಿಕೊಡುತ್ತವೆ ಮತ್ತು ಕೆಲವು ತಂತ್ರಾಂಶಗಳು ಇನ್ ಸ್ಕ್ರಿಪ್ಟ್(inscript) ಮಾದರಿಯ ಕೀಬೋರ್ಡ್ ವಿನ್ಯಾಸ ಒದಗಿಸಿಕೊಡುತ್ತವೆ.  ಇನ್ನುಳಿದ ಕೆಲವು ತಂತ್ರಾಂಶಗಳು ಅದರದೇ ಆದ ಕೀಬೋರ್ಡ್ ವಿನ್ಯಾಸ ಹೊಂದಿರುತ್ತವೆ. ಬಳಸುವವರು ತಮಗೆ ಯಾವುದು ಸುಲಭವೆನಿಸುತ್ತದೋ ಅದನ್ನು ಅಳವಡಿಸಿಕೊಂಡು ಬಳಸಬಹುದು. ಕೆಲವು ತಂತ್ರಾಂಶಗಳು ಪದಸಲಹೆಗಳನ್ನೂ ಕೊಡುತ್ತವೆ. ಅಂದರೆ ನಾವು ಟೈಪ್ ಮಾಡಲು ಶುರುಮಾಡಿ ಒಂದೆರಡು ಅಕ್ಷರಗಳಾಗುತ್ತಿದ್ದಂತೆಯೇ ಮುಂದಿನ ಅಕ್ಷರಗಳು ಏನಿರಬಹುದು ಎಂಬುದನ್ನು ಊಹಿಸಿ ಅದು ಪೂರ್ತಿ ಪದಗಳನ್ನು ಸಲಹೆ ಮಾಡಿ ತೋರಿಸುತ್ತದೆ.

ಇವು ಕನ್ನಡ ಟೈಪ್ ಮಾಡಲು ಬಳಕೆಯಲ್ಲಿರುವ Appಗಳು.

೧. ಪದ ಕನ್ನಡ (Pada Kannada) : ಫೊನೆಟಿಕ್ (ನುಡಿ/ಕೆ.ಪಿ.ರಾವ್) ರೀತಿಯ ಕೀ ವಿನ್ಯಾಸ ಹೊಂದಿದೆ. ನೇರವಾಗಿ ಕನ್ನಡ ಟೈಪಿಸಲು ಬೇಕಾಗುವ ಕೀಬೋರ್ಡ್ ಉಚಿತವಾಗಿ ಲಭ್ಯವಿದೆ.
೨. ಜಸ್ಟ್ ಕನ್ನಡ (Just Kannada Keyboard): ಫೊನೆಟಿಕ್ (ನುಡಿ/ಕೆ.ಪಿ.ರಾವ್) ರೀತಿಯ ಕೀ ವಿನ್ಯಾಸ ಹೊಂದಿರುವ ಇದು ವ್ಯಾಪಕವಾಗಿ ಬಳಕೆಯಾಗುತ್ತಿರುವ ಕೀಬೋರ್ಡ್ ಗಳಲ್ಲಿ ಒಂದು.
೩. ಎನಿ ಸಾಫ್ಟ್ (AnySoft Keyboard): ಆಂಡ್ರಾಯ್ಡ್ ಫೋನುಗಳಲ್ಲಿ ಕನ್ನಡ ಊಡಿಸಲು ವಿನ್ಯಾಸಗೊಂಡ ಮೊದಲ ಕೀಬೋರ್ಡ್ ಇದು. ಇದನ್ನು ಹಾಕಿಕೊಳ್ಳಲು, ಮೊದಲು ಈ ಎನಿಸಾಫ್ಟ್ ತಂತ್ರಾಂಶ ಅಳವಡಿಸಿಕೊಂಡು ಅನಂತರ Kannada for AnySoft ಎನ್ನುವ ಆಪ್ ಹಾಕಿಕೊಳ್ಳಬೇಕು. ಇದರಲ್ಲಿ ಕ.ಗ.ಪ.(ನುಡಿ) ಹಾಗೂ ಇನ್ ಸ್ಕ್ರಿಪ್ಟ್ ವಿನ್ಯಾಸಗಳ ಆಯ್ಕೆ ಇದೆ.
೪. ಪಾಣಿನಿ (Kannada Panini Keypad): ಆಂಡ್ರಾಯ್ಡ್ ಫೋನುಗಳು ಬರುವುದಕ್ಕಿಂತಲೂ ಮೊದಲು ಭಾರತೀಯ ಭಾಷೆಗಳಲ್ಲಿ ಬರೆಯಲು ಸಹಾಯವಾಗುತ್ತಿದ್ದ ಈ ತಂತ್ರಾಂಶದ ಆಂಡ್ರಾಯ್ಡ್ ಆವೃತ್ತಿಯೂ ಲಭ್ಯವಿದೆ. ಇದು ತನ್ನದೇ ಆದ ಕೀಬೋರ್ಡ್ ವಿನ್ಯಾಸ ಹೊಂದಿದೆ. ವ್ಯಂಜನದ ಕೀಯನ್ನು ಒತ್ತುತ್ತಿದ್ದಂತೆಯೇ ಸ್ವರಗಳ ಕೀಗಳು ಬರುತ್ತವೆ. ದೊಡ್ಡ ದೊಡ್ಡ ಗಾತ್ರದ ಕೀಗಳಿವೆ.
೫. ಲಿಪಿಕಾರ್ (Lipikar Kannada): ಇದರಲ್ಲಿ ಇಂಗ್ಲೀಷಿನ ಕೀಗಳೇ ಇದ್ದು ಒಂದೊಂದು ಕೀಯನ್ನು ಒತ್ತುತ್ತಿದ್ದಂತೆಯೇ ಅದಕ್ಕೆ ಅನುಗುಣವಾಗಿ ಕನ್ನಡ ಅಕ್ಷರಗಳ ಆಯ್ಕೆ ಬರುತ್ತದೆ.
೬. ಸ್ವರಚಕ್ರ (Swarachakra Kannada Keyboard): ಇದರ ಕೀಬೋರ್ಡ್ ವಿನ್ಯಾಸ ಕೊಂಚ ವಿಭಿನ್ನವಾಗಿದೆ. ವ್ಯಂಜನಗಳನ್ನು ಕೊಡಲಾಗಿದ್ದು ಒಂದು ವ್ಯಂಜನಾಕ್ಷರವನ್ನು ಮುಟ್ಟಿದಾಗ ಅದರ ಸುತ್ತಲೂ ಚಕ್ರಾಕಾರವಾಗಿ ಸಂಬಂಧಿಸಿದ ಗುಣಿತಾಕ್ಷರಗಳು ಕಾಣುತ್ತವೆ. ಅದರಲ್ಲಿ ಬೇಕಾದ್ದನ್ನು ಮುಟ್ಟಿದರೆ ಆ ಅಕ್ಷರ ಮೂಡುತ್ತದೆ. ವೇಗವಾಗಿ ಬರೆಯಲು ಇದು ಅಷ್ಟು ಅನುಕೂಲಕಾರಿಯಾಗಿಲ್ಲ.
೭. ಕನ್ನಡ-ಹಿಂದಿ ಕೀಬೋರ್ಡ್ (Kannada-Hindi Keyboard): ವರ್ಣಮಾಲೆಯ ಅನುಕ್ರಮದಲ್ಲೇ ವ್ಯಂಜನಗಳನ್ನು ಕೊಡಲಾಗಿದ್ದು, ಸ್ವರ ಚಿನ್ಹೆಗಳಿಗೆ ಪ್ರತ್ಯೇಕ ಕೀಗಳಿವೆ. 
೮. ಬ್ರಾಹ್ಮಿ (Brahmi Kannada Keyboard): ವರ್ಣಮಾಲೆಯ ಅನುಕ್ರಮದಲ್ಲೇ ಅಕ್ಷರಗಳನ್ನು ಕೊಡಲಾಗಿದೆ. ವ್ಯಂಜನ ಮತ್ತು ಸ್ವರಗಳನ್ನು ಒಂದಾದ ಮೇಲೊಂದು ಒತ್ತಿ ಸೇರಿಸಿ ಅಕ್ಷರಗಳನ್ನು ಮೂಡಿಸಬೇಕು.
೯. ಸ್ಪರ್ಶ್ (Sparsh Kannada Keyboard): ಇದರಲ್ಲಿ ವರ್ಣಮಾಲೆಯ ಅನುಕ್ರಮದಲ್ಲೇ ವ್ಯಂಜನಗಳನ್ನು ಕೊಡಲಾಗಿದ್ದು ಒಂದು ಅಕ್ಷರದ ಗುಂಡಿಯನ್ನು ಒತ್ತಿದ್ದಾಗ ಅದರ ಗುಣಿತಾಕ್ಷರಗಳ ಆಯ್ಕೆಯನ್ನು ತೋರಿಸುತ್ತದೆ. ಅಲ್ಲಿಯೇ ಆಯ್ಕೆ ಮಾಡಿಕೊಳ್ಳಬಹುದು. ವ್ಯಂಜನ ಮತ್ತು ಸ್ವರಗಳನ್ನು ಬೇರೆ ಬೇರೆ ಗುಂಡಿ ಒತ್ತಿ ಸೇರಿಸುವುದು ಇಷ್ಟವಾಗದವರಿಗೆ ಇದು ಅನುಕೂಲವಾಗಬಹುದು.

ಈ ಕೆಳಗಿನವುಗಳಲ್ಲಿ ಹಲವಾರು ಭಾಷೆಗಳ ಆಯ್ಕೆ ಇದ್ದು ಇನ್ ಸ್ಟಾಲ್ ಮಾಡಿಕೊಂಡಾದ ಮೇಲೆ ಅದನ್ನು ತೆರೆದು ’ಕನ್ನಡ’ವನ್ನು ಸಕ್ರಿಯಗೊಳಿಕೊಳ್ಳಬೇಕಾಗುತ್ತದೆ.

೧೦. ಮಲ್ಟಿಲಿಂಗ್ (Multiling Keyboard): ಇನ್ ಸ್ಕ್ರಿಪ್ಟ್ ಮಾದರಿಯ ವಿನ್ಯಾಸ ಹೊಂದಿದೆ.
೧೧. ಅಡಾಪ್ಟೆಕ್ಸ್ಟ್ (Adaptxt keyboard): ಇದರಲ್ಲಿ ಕನ್ನಡ ಮತ್ತು ಕಂಗ್ಲೀಷ್ ಎನ್ನುವ ಎರಡು ಬಗೆಯ ಕೀಬೋರ್ಡುಗಳನ್ನು ಸಕ್ರಿಯಗೊಳಿಸಿಕೊಳ್ಳಬಹುದು. ಕನ್ನಡವನ್ನು ಇಂಗ್ಲೀಷ್ ಅಕ್ಷರಗಳಲ್ಲಿ ಬರೆಯುವವರಿಗೂ ಕಂಗ್ಲೀಷ್ ಕೀಲಿಮಣೆಯು ಪದಸಲಹೆಗಳನ್ನು ಕೊಡುತ್ತದೆ.
೧೨. ಇಂಡಿಕ್ ಕೀಬೋರ್ಡ್ (Indic Keyboard): ಇದು ಭಾರತೀಯ ಭಾಷೆಗಳಿಗಾಗಿ ಇರುವ ಕೀಬೋರ್ಡ್ ಆಗಿದ್ದು ಕನ್ನಡದಲ್ಲಿ ಜನಪ್ರಿಯವಿರುವ ಮೂರು ಕೀಬೋರ್ಡ್ ವಿನ್ಯಾಸಗಳಾದ ನುಡಿ, ಇನ್ ಸ್ಕ್ರಿಪ್ಟ್, ಟ್ರಾನ್ಸಿಲಿಟೆರೇಶನ್ ಮಾದರಿಗಳನ್ನು ಸಕ್ರಿಯಗೊಳಿಸಿಕೊಳ್ಳಬಹುದು.
೧೩. ಯುಕೀಬೋರ್ಡ್ (Ukeyboard): ಇದು ಗೂಗಲ್ ಟ್ರಾನ್ಸಿಟರೇಶನ್ ನಂತಹ ಕೀಬೋರ್ಡ್. ಇಂಗ್ಲೀಷಿನ ಕೀಗಳೇ ಇದ್ದು ಅವುಗಳನ್ನು ಒತ್ತುತ್ತಿದ್ದಂತೆ ಅದಕ್ಕೆ ತಕ್ಕುದಾಗಿ ಕನ್ನಡ ಪದಗಳು ಮೂಡುತ್ತಾ ಹೋಗುತ್ತವೆ. ಕೆಲವು ಕೀಗಳನ್ನು ಒತ್ತುತ್ತಿದ್ದಂತೆ ಮುಂದಿನ ಸಾಧ್ಯತೆಗಳ ಬಗ್ಗೆ ಪದಸಲಹೆಗಳನ್ನು ಕೊಡುತ್ತವೆ. ಆದರೆ ಇದನ್ನು ಬಳಸಲು ಅಂತರಜಾಲ ಸಂಪರ್ಕದ ಅಗತ್ಯ.
೧೪. MILE Indic Keyboards: ಇನ್ ಸ್ಕ್ರಿಪ್ಟ್ ಹಾಗೂ ಕ.ಗ.ಪ (ನುಡಿ) ವಿನ್ಯಾಸದ ಕೀಬೋರ್ಡ್ ಇದೆ.

'ಯುಕೀಬೋರ್ಡ್' ಹೊರತುಪಡಿಸಿ ಈ ಮೇಲಿನ ಎಲ್ಲಾ ಆಪ್ ಗಳನ್ನು ಒಮ್ಮೆ ಅಳವಡಿಕೊಂಡಮೇಲೆ ಅಂತರಜಾಲ(ಡೇಟಾ) ಸಂಪರ್ಕ ಇಲ್ಲದೆಯೂ ಬಳಸಬಹುದು. ಬೇಕಾದ ಕೀಬೋರ್ಡ್ ಅಳವಡಿಸಿಕೊಂಡಮೇಲೆ ಫೋನ್ ’ಸೆಟ್ಟಿಂಗ್ಸ್’ ತೆರೆಯಬೇಕು. ಅದರಲ್ಲಿ ’ಲ್ಯಾಂಗ್ವೇಜ್ ಮತ್ತು ಇನ್ಪುಟ್’ ಎನ್ನುವ ಆಯ್ಕೆ ಇರುತ್ತದೆ. ಅದನ್ನು ತೆರೆದಾಗ ಅಲ್ಲಿ ನೀವು ಇನ್ ಸ್ಟಾಲ್ ಮಾಡಿಕೊಂಡ ಕೀಬೋರ್ಡ್ ಹೆಸರುಗಳು ಕಾಣುತ್ತದೆ. ಅದರ ಪಕ್ಕದಲ್ಲಿರುವ ಚೆಕ್ ಬಾಕ್ಸ್ ನ್ನು ಒತ್ತಿ ಅದನ್ನು ಆಯ್ಕೆ ಮಾಡಿಕೊಂಡರೆ ಅದು ನಿಮ್ಮ ಕೀಬೋರ್ಡ್ ಆಯ್ಕೆ ಪಟ್ಟಿಗೆ ಸೇರುತ್ತದೆ. ಅನಂತರ ನಿಮಗೆ ಎಲ್ಲಿ ಕನ್ನಡ ಬರೆಯಲು ಬೇಕಾಗುತ್ತದೆಯೋ ಅಂದರೆ ಮೆಸೇಜ್, ವ್ಯಾಟ್ಸಪ್, ಫೇಸ್ ಬುಕ್ ಅಥವಾ ಮುಂತಾದ ಯಾವುದೇ ಕಡೆ ಟೈಪ್ ಮಾಡುವ ಜಾಗದಲ್ಲಿ ಕೀಬೋರ್ಡ್ ಇನ್ಪುಟ್ ಆಯ್ಕೆಗೆ ಹೋಗಿ ಈ ಕನ್ನಡ ಕೀಬೋರ್ಡ್ ಆಯ್ಕೆ ಮಾಡಿಕೊಂಡು ಕನ್ನಡವನ್ನು ನೇರವಾಗಿ ಟೈಪಿಸಬಹುದು.  ಕನ್ನಡ ಬೇಡದಿದ್ದಾಗ ಇಂಗ್ಲೀಷ್ ಕೀಬೋರ್ಡ್ ಆಯ್ಕೆಗೆ ಮರಳಬಹುದು.

ಆಂಡ್ರಾಯ್ಡ್ ಫೋನುಗಳಲ್ಲಿ ಕನ್ನಡ ಬರೆಯಲು ಇರುವ ಇಷ್ಟೆಲ್ಲಾ ಸೌಲಭ್ಯಗಳ ಬಗ್ಗೆ ಹೇಳಿದಮೇಲೆ ವಿಂಡೋಸ್ ಫೋನ್ ಮತ್ತು ಐಫೋನ್ ಹೊಂದಿರುವವರು ಕನ್ನಡ ಬರೆಯಲು ಏನು ಮಾಡಬೇಕು ಎನ್ನುವ ಪ್ರಶ್ನೆ ಬರುತ್ತದೆ. ಅದಕ್ಕೂ ಉತ್ತರವಿದೆ.

ವಿಂಡೋಸ್ ೮ ಆವೃತ್ತಿಯ ಫೋನುಗಳಲ್ಲಿ ಕನ್ನಡಕ್ಕೆ ಬೆಂಬಲವಿದೆ. ಕನ್ನಡ ಟೈಪ್ ಮಾಡಲು 'ಟೈಪ್ ಕನ್ನಡ'(Type Kannada) ಎನ್ನುವ ಒಂದು ತಂತ್ರಾಂಶವಿದೆ. ವಿಂಡೋಸ್ ಸ್ಟೋರ್ ನಲ್ಲಿ ಇದನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.  ಅನಂತರ ಇದನ್ನು ತೆರೆದು ಇದರಲ್ಲಿ ಕನ್ನಡದಲ್ಲಿ ಟೈಪ್ ಮಾಡಿ ಇಲ್ಲಿಂದ ಕಾಪಿ ಮಾಡಿ ಬೇಕಾದ ಕಡೆಯಲ್ಲಿ ಪೇಸ್ಟ್ ಮಾಡಬೇಕಾಗುತ್ತದೆ. ಆದರೆ ಇದನ್ನು ಬಳಸಲು ಅಂತರಜಾಲ(ಡೇಟಾ) ಸಂಪರ್ಕವಿರಬೇಕಾಗುತ್ತದೆ. ಇದರ ಮೂಲಕ ಬರೆದು ಫೇಸ್ ಬುಕ್, ಟ್ವಿಟ್ಟರ್ ಮುಂತಾದ ಕಡೆಗಳಲ್ಲಿ ನೇರವಾಗಿ ಶೇರ್ ಮಾಡಬಹುದು. ಆಂಡ್ರಾಯ್ಡ್ ನಂತೆ ಡೇಟಾ ಸಂಪರ್ಕವಿಲ್ಲದಿದ್ದರೂ ನೇರವಾಗಿ ಕನ್ನಡ ಬರೆಯುವ ಕೀಬೋರ್ಡ್ ತಂತ್ರಾಂಶಗಳು ವಿಂಡೋಸ್ ಫೋನಿಗೆ ಇನ್ನೂ ಲಭ್ಯವಿಲ್ಲ.

ಐಫೋನಿನಲ್ಲಿ iOS-4 ರ ನಂತರದ ಆವೃತ್ತಿಗಳಲ್ಲಿ ಕನ್ನಡಕ್ಕೆ ಬೆಂಬಲ ನೀಡಲಾಗಿದೆ. ಆದರೆ ಇದರಲ್ಲೂ ಕೂಡ ಆಂಡ್ರಾಯ್ಡ್ ನಂತೆ ನೇರವಾಗಿ ಕನ್ನಡ ಬರೆಯುವ ಕೀಬೋರ್ಡ್ ಸೌಲಭ್ಯ ಇನ್ನೂ ಲಭ್ಯವಿಲ್ಲ. ಆಪಲ್ ಸ್ಟೋರ್ ನಲ್ಲಿ Kannada for iPhone ಎಂಬ app ಡೌನ್ಲೋಡ್ ಮಾಡಿ ಅಳವಡಿಸಿಕೊಂಡು ಕನ್ನಡವನ್ನು ಬರೆಯಬಹುದು. ಇದನ್ನು ಆಫ್ ಲೈನ್ ಮತ್ತು ಆನ್ ಲೈನ್ ಬಳಕೆ ಮಾಡಬಹುದು.  iTransliterate ಎನ್ನುವ ಮತ್ತೊಂದು ತಂತ್ರಾಂಶದ ಮೂಲಕವೂ ಕನ್ನಡ ಬರೆಯಬಹುದು. ಅಳವಡಿಸಿಕೊಂಡ ನಂತರ ಇದನ್ನು ತೆರೆದು ಇದರಲ್ಲಿ ಕನ್ನಡದಲ್ಲಿ ಟೈಪ್ ಮಾಡಿ ಇಲ್ಲಿಂದ ಕಾಪಿ ಮಾಡಿ ಬೇಕಾದ ಕಡೆಯಲ್ಲಿ ಪೇಸ್ಟ್ ಮಾಡಬೇಕಾಗುತ್ತದೆ. ಇದರ ಮೂಲಕ ಬರೆದು ಫೇಸ್ ಬುಕ್, ಟ್ವಿಟ್ಟರ್ ಮುಂತಾದ ಕಡೆಗಳಲ್ಲಿ ನೇರವಾಗಿ ಶೇರ್ ಮಾಡಬಹುದು.

ಅಭ್ಯಾಸವಿಲ್ಲದವರಿಗೆ ಕನ್ನಡ ಟೈಪ್ ಮಾಡಲು ಮೊದಮೊದಲು ಸ್ವಲ್ಪ ತೊಡಕೆನಿಸಿದರೂ ಆಮೇಲೆ ಸುಲಭವಾಗುತ್ತದೆ. ತಂತ್ರಜ್ಞಾನದಲ್ಲಿ ಇಷ್ಟೆಲ್ಲಾ ಸೌಲಭ್ಯಗಳಿರುವಾಗ ನಾವು ಹಿಂದೆ ಬೀಳುವುದು ಬೇಡ. ಎಲ್ಲೆಡೆಯೂ ಕನ್ನಡವನ್ನೇ ಬಳಸೋಣ. ಕನ್ನಡವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮತ್ತು ಎಲ್ಲೆಡೆಯಲ್ಲೂ ಬಳಕೆಯಲ್ಲಿ ಉಳಿಯಲು ಮತ್ತು ಬೆಳೆಯಲು ಇದು ಅತ್ಯಗತ್ಯ.

****
'ನುಡಿ' ವಿನ್ಯಾಸದ 'ಪದ' ಕೀಬೋರ್ಡ್ 
ಬ್ರಾಹ್ಮಿ ಕೀಬೋರ್ಡ್ 
Inscript ವಿನ್ಯಾಸದ ಕೀಬೋರ್ಡ್ 

9 ಕಾಮೆಂಟ್‌ಗಳು:

sunaath ಹೇಳಿದರು...

ನಿಮ್ಮ ಲೇಖನವನ್ನು ಓದಿ ತುಂಬ ಸಂತೋಷವಾಯಿತು.

ಶಿವಕುಮಾರ್ ನಾಯಕ್ ಹೇಳಿದರು...

ವಿಕ್ಸ್ ನಮ್ಮದೊಂದು ಚಿಕ್ಕ ಪ್ರಶ್ನೆ, ನೀವು ಹೇಳಿದ ಎಲ್ಲ ಕೀ ಬೋರ್ಡಗಳಲ್ಲಿ ವೇಗವಾಗಿ ಬರೆಯಲು ಯಾವ ಅನ್ವಯಕ (ಆಪ್) ಸೂಕ್ತ.

Dr U B Pavanaja ಹೇಳಿದರು...

ಲೇಖನಚೆನ್ನಾಗಿದೆ. ನನ್ನ ಬ್ಲಾಗ್‌ನಲ್ಲಿ ಈ ಲೇಖನಕ್ಕೂ ಕೊಂಡಿ ಸೇರಿಸಿದ್ದೇನೆ. ಇಲ್ಲಿ ನೋಡಿ

Dr U B Pavanaja ಹೇಳಿದರು...

@ಶಿವಕುಮರ್ - ನನ್ನ ಪ್ರಕಾರ Anysoftkeyboard ಮತ್ತು Kannada for Anysoftkeyboard ಉತ್ತಮ. ಬಹುಶಃ ಕೆ.ಪಿ.ರಾವ್ ವಿನ್ಯಾಸ (ನುಡಿ) ಬಳಸಿ ಅಭ್ಯಾಸ ಇರುವ ಕರಣ ನನಗೆ ಹಾಗೆ ಅನ್ನಿಸಿದ್ದರೂ ಇರಬಹುದು.

Chennabasavaraj ಹೇಳಿದರು...

ಅಂತರ್ಜಾಲದಲ್ಲಿ ಕನ್ನಡ ಅಕ್ಷರಗಳ ಬೆರಳಚ್ಚಿಸಲು, ಉಪಯುಕ್ತ ಮಾಹಿತಿಗಳನ್ನೊಳಗೊಂಡ ಉತ್ತಮ ಬರಹ. ಮತ್ತಷ್ಟು ನಿಮ್ಮ ಬರಹಗಳ ನಿರೀಕ್ಷೆಯಲ್ಲಿ ಕನ್ನಡಿಗರು

ಸಂಜು ಅತಿವಾಳೆ ಹೇಳಿದರು...

ಚೆನಾಗಿದೆ

drgangadharan ಹೇಳಿದರು...

ಚನ್ನಾಗಿದೆ.

prashasti ಹೇಳಿದರು...

Nice. ನಾನು JustKannada ಬಳಸ್ತಾ ಇದ್ದಿ

Akka ಹೇಳಿದರು...

upayukhta maahiti. naanu pada kannada upayogisuttiddene