ಪುಟಗಳು

ಭಾನುವಾರ, ಸೆಪ್ಟೆಂಬರ್ 8, 2013

Kannada books online purchase

ಕನ್ನಡ ಪುಸ್ತಕಗಳ ಆನ್ ಲೈನ್ ಖರೀದಿ

ಕನ್ನಡ ಪುಸ್ತಕಗಳನ್ನು ಕೊಳ್ಳಲು ಬೆಂಗಳೂರು, ಮೈಸೂರು ಹೊರತುಪಡಿಸಿ ಬೇರೆ ಊರುಗಳಲ್ಲಿ ಒಳ್ಳೆಯ ಸಂಗ್ರಹವಿರುವ ಅಂಗಡಿಗಳಿಲ್ಲ (ಅಥವಾ ಕೊಳ್ಳುವವರಿಲ್ಲ?!). ಬೆಂಗಳೂರಿನಲ್ಲಾದರೂ ಪುಸ್ತಕದಂಗಡಿಗೆ ಹೋಗಬೇಕೆಂದರೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಟವೇ ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಓಡಾಟದ ಶ್ರಮದ, ಹಣದ ಖರ್ಚೂ ಆಗುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಮೂಲಕ ಪುಸ್ತಕ ಕೊಂಡು ಮನೆಗೇ ತರಿಸಿಕೊಳ್ಳುವ ವ್ಯವಸ್ಥೆ ಬಂದಿರುವುದರಿಂದ ಯಾವ ಊರಲ್ಲಿದ್ದರೂ ಅದನ್ನು ಬಳಸಿಕೊಳ್ಳಬಹುದು.

ಈ ಕೆಳಗಿನದು ಕನ್ನಡ ಪುಸ್ತಕಗಳನ್ನು ಆನ್ ಲೈನ್ ಕೊಳ್ಳಲು ಇರುವ ತಾಣಗಳ ಪಟ್ಟಿ.  ಇವುಗಳಲ್ಲದೇ ಇನ್ನೂ ಬೇರೆ ತಾಣಗಳು ಗೊತ್ತಿದ್ದರೆ ತಿಳಿಸಿ.
ಕೆಲವು ತಾಣಗಳಲ್ಲಿ ಬಹಳ ಕಡಿಮೆ ಪುಸ್ತಕಗಳ ಸಂಗ್ರಹವಿದೆ. ಆಕೃತಿ ಬುಕ್ಸ್, ಅಕ್ಷರ ಪ್ರಕಾಶನ, ಮೈ ಬುಕ್ ಅಡ್ಡಾ, ಚಿಂತನ ಪುಸ್ತಕ, ನವಕರ್ನಾಟಕ, ಕ್ವಿಲ್ ಬುಕ್ಸ್ ತಾಣಗಳಲ್ಲಿ ಕನ್ನಡ ಪುಸ್ತಕಗಳ ಹೆಸರನ್ನು ಕನ್ನಡದಲ್ಲೇ ಟೈಪಿಸಿ ಹುಡುಕಬಹುದು ಅನ್ನುವುದು ವಿಶೇಷ. ಆದರೆ ಬೇರೆ ಎಲ್ಲಾ ತಾಣಗಳಲ್ಲೂ ಕನ್ನಡ ಹೆಸರನ್ನು ಇಂಗ್ಲೀಷ್ ಲಿಪಿಯಲ್ಲಿ ಹುಡುಕಬೇಕು. ಈ ಎಲ್ಲಾ ತಾಣಗಳಲ್ಲಿ ನಮಗೆ ಬೇಕಾದ ಎಲ್ಲಾ ಪುಸ್ತಕಗಳು ಇದ್ದೇ ಇರುತ್ತವೆ ಅಂತ ಹೇಳಲಾಗುವುದಿಲ್ಲ. ಆದರೂ ಒಂದು ಮಟ್ಟಿಗೆ ಒಳ್ಳೆಯ ಸಂಗ್ರಹವಿದೆ.  ಪುಸ್ತಕಗಳು ರಿಯಾಯತಿ ದರಗಳಲ್ಲಿಯೂ ಮಾರಾಟಕ್ಕಿರುತ್ತವೆ.

ನೀವು ಹುಡುಕುವ ಯಾವುದಾದರೂ ಪುಸ್ತಕ ಸಿಗಲಿಲ್ಲವೆಂದರೆ ಆ ತಾಣದ ಗ್ರಾಹಕ ಸೇವೆಗೆ ಒಂದು ಇ-ಮೇಲ್ ಕಳಿಸಿ ಹೆಚ್ಚು ಕನ್ನಡ ಪುಸ್ತಕಗಳನ್ನು ಸೇರಿಸಲು ಹೇಳಿ.  ಆಗ ಅವರು ಪುಸ್ತಕಗಳಿಗೆ ಬೇಡಿಕೆ ಇದೆ ಎಂದು ಖಂಡಿತ ಹೆಚ್ಚಿನ ಪುಸ್ತಕಗಳನ್ನು ಸಂಗ್ರಹಕ್ಕೆ ಸೇರಿಸುತ್ತಾರೆ. ಮುಂದೆ ಅನುಕೂಲವಾಗುತ್ತದೆ.

ನನ್ನ ವೈಯಕ್ತಿಕ ಅನುಭವ ಹೇಳುವುದಾದರೆ,  ಇವುಗಳಲ್ಲಿ ಆಕೃತಿ ಬುಕ್ಸ್, ಫ್ಲಿಪ್ ಕಾರ್ಟ್, ಸಪ್ನಾ, ನವಕರ್ನಾಟಕ ,ಇನ್ಫಿಬೀಮ್ ಗಳಿಂದ ಹಲವು ಪುಸ್ತಕಗಳನ್ನು ತರಿಸಿಕೊಂಡಿದ್ದೇನೆ. ಒಳ್ಳೆಯ ಸೇವೆ ಕೊಟ್ಟಿದ್ದಾರೆ.  ಅಮೇಜಾನ್.ಕಾಂನಲ್ಲಿ ಇಂಗ್ಲೀಶ್ ಪುಸ್ತಕಗಳನ್ನು ತರಿಸಿದ್ದೇನೆ. ಆದರೆ ಅದರ ಭಾರತೀಯ ಆವೃತ್ತಿಯಲ್ಲಿ (ಅಮೇಜಾನ್.ಇನ್) ವ್ಯವಹಾರ ಮಾಡಿಲ್ಲ. ಜಯನಗರದಲ್ಲಿರುವ ಟೋಟಲ್ ಕನ್ನಡ ಮಳಿಗೆಯೂ ಕೂಡ ಒಳ್ಳೆಯ ಸೇವೆ ಕೊಡುತ್ತಿದೆ. ಉಳಿದಂತೆ ಪಟ್ಟಿಯಲ್ಲಿರುವ ಇತರ ತಾಣಗಳ ಜೊತೆ ವ್ಯವಹರಿಸಿಲ್ಲವಾದರೂ ಹೆಚ್ಚಾಗಿ ಕ್ಯಾಶ್ ಆನ್ ಡೆಲಿವರಿ  ಆಯ್ಕೆ ಇರುತ್ತದಾದ್ದರಿಂದ ಏನೂ ತೊಂದರೆಯಿಲ್ಲ.

ಓದಿ... ಓದಿಸಿ... 

ಭಾನುವಾರ, ಜುಲೈ 7, 2013

ಗೊಂದಲದ ಮೀನು

ಕೆರೆಯ ದಡದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದೆ. ಎದುರಿನ ದಿಗಂತದವರೆಗೂ ನೀರು. ಗಾಳಿಗೆ ಏಳುವ ಸಣ್ಣ ಸಣ್ಣ ಅಲೆಗಳು. ಎಷ್ಟು ಹೊತ್ತು ನೋಡಿದರೂ  ಖುಷಿ ಕೊಡುವಂತಹ, ಮತ್ತದೇ ಅಚ್ಚರಿ ಹುಟ್ಟಿಸುವಂತಹ ಪ್ರಕೃತಿ. ಅದನ್ನು ನೋಡುತ್ತಾ ಸುಮ್ಮನೇ ಕೂರುವ ಸುಖಕ್ಕೆ ಒಂದಿಷ್ಟು ಹಾರುವ ಹುಳಗಳು ಅಡ್ಡಿಯಾಗುತ್ತಿದ್ದವು. ಕೆಲವು ತಲೆಯ ಸುತ್ತ ಹಾರುತ್ತಿದ್ದರೆ ಕೆಲವು ಕಿವಿಯ ಹತ್ತಿರ ಬಂದು ಗುಯ್ಯ್ ಗುಡುತ್ತಿದ್ದವು. ತಲೆಕೊಡವಿ ಅವುಗಳನ್ನು ಓಡಿಸಿ ಮತ್ತೆ ದಿಗಂತಕ್ಕೆ ಕಣ್ಣು ಹಾಯಿಸಿದರೆ ಒಂದೇ ನಿಮಿಷದಲ್ಲಿ ಮತ್ತೆ ಪ್ರತ್ಯಕ್ಷ. ಅದೇ ಹಾರಾಟ. ಅದೇ ಗುಂಯ್ಯ್ ಸದ್ದು. ಬೇಸರವಾಗಿ ಅವುಗಳನ್ನು ಓಡಿಸದೇ ಹಾಗೇ ಬಿಟ್ಟೆ. ಬಂದು ಹಾರಾಡಲಿ, ಸದ್ದು ಮಾಡಲಿ, ಮುತ್ತಿಕೊಳ್ಳಲಿ, ಕೊರೆಯಲಿ. ಕೊನೆಗೆ ಇಲ್ಲಿದ್ದು ಪ್ರಯೋಜನವಿಲ್ಲ ಎಂದು ಗೊತ್ತಾದರೆ ಅವೇ ಹೋಗಿಬಿಡುತ್ತವೆ ಎಂದುಕೊಂಡು ಸುಮ್ಮನಾದೆ. 

ಇದ್ದಕ್ಕಿದ್ದಂತೇ ಹಕ್ಕಿಗಳ ಕೂಗು ಕೇಳಿಸಿತು. ಎರಡು ಹಕ್ಕಿಗಳು ಒಂದನ್ನೊಂದು ಅಟ್ಟಿಸಿಕೊಂಡು ಕೂಗಾಡುತ್ತಾ ನಾನು ಕುಳಿತಿದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ಇಳಿದವು. ಒಂದು ಹಕ್ಕಿಯ ಕೊಕ್ಕಲ್ಲಿ ಮೀನೊಂದು ಒದ್ದಾಡುತ್ತಿತ್ತು.  ಅದೇನಾಯಿತೋ ಏನೋ ಆ ಹಕ್ಕಿ ತನ್ನ ಕೊಕ್ಕಲ್ಲಿದ್ದ ಮೀನನ್ನು ನೆಲದ ಮೇಲೆ ಹಾಕಿತು.  ಒಂದು ಕ್ಷಣವೂ ನಿಲ್ಲದೇ ಎರಡೂ ಹಕ್ಕಿಗಳೂ ಎಲ್ಲೋ ಹಾರಿ ಹೋದವು. ನಾನು ನೋಡುತ್ತಿದ್ದೆ. ಆ ಮೀನಿಗೆ ಇನ್ನೂ ಜೀವ ಇತ್ತು. ಒದ್ದಾಡುತ್ತಿತ್ತುಎಂಟು ಹತ್ತು ಅಡಿಗಳ ದೂರದಲ್ಲಿ ನೀರಿತ್ತು. ಅದರ ಸಾವಿಗೂ ಬದುಕಿಗೂ ಅಷ್ಟೇ ಅಂತರ. ಆದರೂ ಅದು ತನ್ನನ್ನು ಕಾಪಾಡಿಕೊಳ್ಳಲಾರದು. ಅದನ್ನು ತೆಗೆದು ನೀರಿಗೆ ಹಾಕಿಬಿಡಲೇ ಯೋಚಿಸಿದೆ. ಆದರೆ ಅದು ನೈಸರ್ಗಿಕ ಕ್ರಿಯೆಯ ಭಾಗ. ಆ ಹಕ್ಕಿ ಅದನ್ನು ಬೇಟೆ ಆಡಿ ಹಿಡಿದಿದೆ. ಅದು ಅದರ ಆಹಾರ. ಅದನ್ನು ಮುಟ್ಟುವ ಹಕ್ಕಿಲ್ಲ ಅನ್ನಿಸಿತು. ಸುಮ್ಮನೇ ಕುಳಿತೆ. ಆ ಹಕ್ಕಿ ಮತ್ತೆ ಬರಬಹುದು. ತನ್ನ ಆಹಾರ ಎಲ್ಲಿ ಹೋಯಿತು ಎಂದು ಹುಡುಕಬಹುದು. ಯಾವ ಕಾರಣಕ್ಕೆ ಅದನ್ನು ಇಲ್ಲಿ ಹಾಕಿ ಹೋಗಿತ್ತೋ ಏನೋ! ಹಾಗಿದ್ದರೆ ಕಣ್ಣ ಮುಂದೆ ಜೀವಿಯೊಂದನ್ನು ಬದುಕಿಸುವ ಅವಕಾಶವಿದ್ದೂ ಸುಮ್ಮನಿರುವುದು ಯಾವ ಮನುಷ್ಯತ್ವ? ಅದು ಇನ್ನೂ ಒದ್ದಾಡುತ್ತಿತ್ತು. ನೋಡುತ್ತಾ ಸುಮ್ಮನೇ ಕೂರಲೂ ಮನಸು ಒಪ್ಪಲಿಲ್ಲ. ಇಡೀ ಕೆರೆದಂಡೆಯಲ್ಲಿ ಯಾರೂ ಇರಲಿಲ್ಲ. ಈ ಘಟನೆಯನ್ನು ನೋಡಿದವನು ನಾನೊಬ್ಬನೆ, ಈಗ ಅದನ್ನು ಬದುಕಿಸಬಲ್ಲವನೂ ನಾನೊಬ್ಬನೆ ! ಹಾಗೇ ಆಕಾಶಕ್ಕೆ ನೋಡಿದೆ, ಆ ಹಕ್ಕಿಗಳು ಮತ್ತೆ ಬರಬಹುದೇ . ಎಲ್ಲೂ ಕಾಣಲಿಲ್ಲ. ಮೀನಿನ ಒದ್ದಾಟ ಕ್ಷೀಣವಾಗುತ್ತಿತ್ತು. ಏನಾದರಾಗಲಿ ಅದನ್ನು ನೀರಿಗೆ ಹಾಕೋಣ ಎಂದು ಅದರ ಹತ್ತಿರ ಹೋದೆ. ನೋಡಿದರೆ ಆ ಮೀನು ವಿಚಿತ್ರವಾಗಿತ್ತು. ಕರೀ ಬಣ್ಣದ್ದಿತ್ತು. ಅದರ ಮೈತುಂಬಾ ಸಣ್ಣ ಸಣ್ಣ ಕೂದಲುಗಳಿರುವಂತೆ ಕಾಣುತ್ತಿತ್ತು. ಇದುವರೆಗೂ ಅಂತಹ ಮೀನನ್ನು ನೋಡಿರಲಿಲ್ಲ. ಅದು ಯಾವ ರೀತಿಯ ಮೀನೋ ಏನೋ. ಅದನ್ನು ಮುಟ್ಟಿ ನನಗೇನಾದರೂ ತೊಂದರೆಯಾದರೆ? ಮತ್ತೆ ಹಿಂಜರಿದೆ. ಎದುರಿಗೇ ಒಂದು ಜೀವಿಯ ಸಾವನ್ನು ನೋಡುತ್ತಾ ಸುಮ್ಮನಿದ್ದಂತಾಗುತ್ತದಲ್ಲ. ಅದನ್ನು ಮುಟ್ಟದೇ ಹಾಗೇ ನೀರಿಗೆ ಹಾಕಲು ಸಾಧ್ಯವೇ ಯೋಚಿಸಿದೆ. ಅದು ಉಸಿರಿಗಾಗಿ ನಿಧಾನಕ್ಕೆ ದೇಕುತ್ತಿತ್ತು.

ಅಷ್ಟರಲ್ಲೇ ಹಿಂದೆ ಸ್ವಲ್ಪ ದೂರದಲ್ಲಿ ಮಕ್ಕಳ ಧ್ವನಿ ಕೇಳಿಸಿತು. ಇಬ್ಬರು ಹುಡುಗರು ಸ್ಕೇಟಿಂಗ್ ಆಡುತ್ತಾ ಕೆರೆದಂಡೆಯಲ್ಲಿ ಬರುತ್ತಿದ್ದರು. ನೋಡ ನೋಡುತ್ತಿದ್ದಂತೇ ಜುಯ್ಯನೇ ನನ್ನ ಬಳಿಯೇ ಬಂದರು. ಅದರಲ್ಲೊಬ್ಬನ ಕಣ್ಣಿಗೆ ಈ ಮೀನು ಕಾಣಿಸಿಯೇಬಿಡ್ತು. ಅವನು “ಹೇಯ್ ಇಲ್ನೋಡು ಮೀನು” ಅಂದ. ಮತ್ತೊಬ್ಬ “ಇನ್ನೂ ಜೀವ ಇದೆ ಅದಕ್ಕೆ, ನೀರಿಗೆ ಹಾಕೋಣ” ಅಂದ. ಅವನು ಮಾತು ಮುಗಿಸುವುದರೊಳಗಾಗಿಯೇ ಆ ಮೀನನ್ನು ಮೊದಲು ನೋಡಿದ್ದ ಹುಡುಗ ಅದನ್ನು ಹಿಡಿದು ಎತ್ತಿ ನೀರಿಗೆ ಎಸೆದ. ಮತ್ತೆ ಏನೋ ಕೂಗಾಡಿಕೊಳ್ಳುತ್ತಾ ಅವರಿಬ್ಬರೂ ಸ್ಕೇಟಿಂಗ್ ಮಾಡಿಕೊಂಡು ಹೋಗಿಯೇಬಿಟ್ಟರು. ಇಷ್ಟೊತ್ತು ಒದ್ದಾಡುತ್ತಾ ಬಿದ್ದಿದ್ದ ಮೀನು ಕೆಲವೇ ಸೆಕೆಂಡುಗಳಲ್ಲಿ ನೀರು ಸೇರಿತ್ತು.  

ಅರೇ! ಇಷ್ಟು ಸುಲಭದ ಕೆಲಸ ನಾನ್ಯಾಕೆ ಮಾಡಲಾಗಲಿಲ್ಲ? ಅದೇಕೆ ನಿಸರ್ಗ ನಿಯಮ ಅಂತೆಲ್ಲಾ ಯೋಚಿಸಿದೆ? ನನಗೇನಾದರೂ ಅಪಾಯ ಆಗಬಹುದು ಅಂತ ಹಿಂಜರಿದೆ? ಅಲ್ಲಿಂದ ಹೋಗಿ ಕಲ್ಲು ಬೆಂಚಿನ ಮೇಲೆ ಕುಳಿತೆ. ಎದುರಿಗೆ ಅದೇ ಸುಂದರ ಪ್ರಶಾಂತ ಜಲರಾಶಿ. ಇಷ್ಟು ಹೊತ್ತು ಎಲ್ಲಿದ್ದವೋ ಏನೋ ಮತ್ತೆ ಆ ಹುಳಗಳು ಬಂದು ತಲೆ ಸುತ್ತ ಹಾರುತ್ತಾ ಗುಂಯ್ಯ್ ಗುಡತೊಡಗಿದವು.

*********

ಗುರುವಾರ, ಜೂನ್ 6, 2013

ಗೂಗಲ್ ರೀಡರ್ ನಿವೃತ್ತಿ, ಮುಂದೇನು ಗತಿ !

ಮಾರ್ಚ್ ೧೩ ರಂದು ಎಂದಿನಂತೆ ಗೂಗಲ್ ರೀಡರ್ ತೆರೆದಾಗ ಸಂದೇಶವೊಂದು ಕಾಣುತ್ತಿತ್ತು.  ಅದರಲ್ಲಿ ಜುಲೈ ೧, ೨೦೧೩ಕ್ಕೆ ಗೂಗಲ್ ರೀಡರ್ ನಿವೃತ್ತಿ ಅಗುವುದಾಗಿ ಹೇಳಿತ್ತು. ರೀಡರ್ ಬಳಕೆದಾರರು ಮತ್ತು ಅಭಿಮಾನಿಗಳಿಗೆ ಇದು ಬ್ರೇಕಿಂಗ್ ಮತ್ತು ಶಾಕಿಂಗ್ ನ್ಯೂಸ್ ಆಗಿತ್ತು.

ಈ ಮೊದಲು ಗೂಗಲ್ ಬಜ್, ವೇವ್ ಮುಂತಾದ ಸೇವೆಗಳನ್ನು ನಿಲ್ಲಿಸಿದ್ದ ಗೂಗಲ್ ನವರು ಈಗ ತಮ್ಮ ಗೂಗಲ್ ರೀಡರ್ ಸೇವೆಯನ್ನು ಜುಲೈ ೧ ಕ್ಕೆ ನಿಲ್ಲಿಸುತ್ತಿರುವುದಾಗಿ ಘೋಷಿಸಿದ್ದಾರೆ. ಜೊತೆಗೆ ಮುಳುಗಡೆ ಸಮಯವನ್ನು ಕೊಟ್ಟು ನಮ್ಮ ಎಲ್ಲಾ ಡೇಟಾ ತೆಗೆದಿಟ್ಟುಕೊಂಡು ಬೇರೆಡೆಗೆ ಸಾಗಿಸಿಕೊಳ್ಳುವ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ. ಗೂಗಲ್ ರೀಡರ್ ನಿಲ್ಲಿಸಲು ಕೊಟ್ಟ ಎರಡು ಕಾರಣಗಳೆಂದರೆ, ಬಳಕೆದಾರರು ಕಡಿಮೆಯಾಗಿರುವುದು ಮತ್ತು ಗೂಗಲ್ಲಿನ ಹಲವಾರು ಉತ್ಪನ್ನಗಳನ್ನು ನಿಲ್ಲಿಸಿ ಕೆಲವೇ ಉತ್ಪನ್ನಗಳ ಅಭಿವೃದ್ಧಿ ಮಾಡುವುದು. ಇದರಲ್ಲಿ ಮೊದಲನೆಯ ಕಾರಣ ಅಂತಹ ನಿಜವೇನಲ್ಲ ಅನ್ನುವುದು ತಿಳಿದಿದೆ. ಏಕೆಂದರೆ ಜಗತ್ತಿನಾದ್ಯಂತ ಬಹುಸಂಖ್ಯೆಯಲ್ಲಿ ರೀಡರ್ ಬಳಕೆದಾರರಿದ್ದಾರೆ ಅಂತ ಮಾಹಿತಿಗಳು ಹೇಳುತ್ತಿವೆ. ಈ ಮೊದಲ ಒಂದೆರಡು ವರ್ಷಗಳಿಂದ ಹಂತಹಂತವಾಗಿ ಗೂಗರ್ ರೀಡರಿನಲ್ಲಿದ್ದ Like, share, share with note ಮುಂತಾದ ಸೌಲಭ್ಯಗಳನ್ನು ತೆಗೆದಿದ್ದರು. ಅವುಗಳ ಸ್ಥಾನದಲ್ಲಿ ಗೂಗಲ್ ಪ್ಲಸ್ ಇಡಲಾಗಿತ್ತು.

ನಾನು ಸುಮಾರು ಏಳು ವರ್ಷಗಳಿಂದ ಈ ಗೂಗಲ್ ರೀಡರ್ ಬಳಕೆ ಮಾಡುತ್ತಿದ್ದೆ. ಬಹಳ ಅನುಕೂಲಕರವಾಗಿಯೂ ಉಪಯುಕ್ತವಾಗಿಯೂ ಇದ್ದಂತಹ ಅಪ್ಲಿಕೇಶನ್ ಇದು. ಈಗ ಅನಿವಾರ್ಯವಾಗಿ ಬೇರೆ ದಾರಿಗಳನ್ನು ಹುಡುಕಬೇಕಾಗಿದೆ.  ಅಂತರಜಾಲದಲ್ಲಿ ಬೇರೆ ಬೇರೆ ಬ್ಲಾಗ್ ಗಳನ್ನು, ಮಿಂಬಲೆತಾಣಗಳನ್ನು, ಸುದ್ದಿತಾಣಗಳನ್ನು ಓದುವ ಅಭ್ಯಾಸ ಇಟ್ಟುಕೊಂಡ ಲಕ್ಷಾಂತರ ಜನರದ್ದೂ ಕೂಡ ಇದೇ ಪರಿಸ್ಥಿತಿಯಾಗಿದೆ. ಇದ್ದಕ್ಕಿದ್ದ ಹಾಗೇ ಬಂದೆರಗಿದ ಈ ಸುದ್ದಿಯಿಂದಾಗಿ ವೆಬ್ ಓದುಗರು  ಪರ್ಯಾಯಗಳನ್ನು ಹುಡುಕತೊಡಗಿದ್ದಾರೆ.

ಗೂಗಲ್ ರೀಡರ್ ಬಗ್ಗೆ ಗೊತ್ತಿಲ್ಲದವರಿದ್ದರೆ, ಅದನ್ನು ಹೀಗೆ ತಿಳಿದುಕೊಳ್ಳಬಹುದು. ಗೂಗಲ್ ರೀಡರ್ ಎಂಬುದು ಬೇರೆ ಬೇರೆ ಅಂತರಜಾಲ ತಾಣ(websites/blogs)ಗಳನ್ನು ಒಂದೇ ತಾಣದಲ್ಲಿ ಓದಲು ಸಾಧ್ಯವಾಗಿಸುವಂತಹ ಒಂದು ವ್ಯವಸ್ಥೆ. ಪ್ರತಿಯೊಂದು ತಾಣಗಳಿಗೂ ಒಂದೊಂದು ವೆಬ್ ವಿಳಾಸ (URL)ಇರುತ್ತದೆ. ಈ ಎಲ್ಲಾ ತಾಣಗಳ ವಿಳಾಸಗಳನ್ನು ನೆನಪಿಟ್ಟುಕೊಳ್ಳಲು ಆಗುವುದಿಲ್ಲ. ಹಾಗಂತ ಅವುಗಳನ್ನು ಬ್ರೌಸರ್ ಫೇವರಿಟ್ ನಲ್ಲಿ ಸೇರಿಸಿಟ್ಟುಕೊಳ್ಳಬಹುದಾದರೂ ಪ್ರತಿ ತಾಣದಲ್ಲಿ ಹೊಸ ಬರಹ ಹಾಕಿದ್ದು, ಸುದ್ದಿತಾಣಗಳಲ್ಲಿ ಸುದ್ದಿ update ಆಗಿದ್ದು ತಿಳಿಯಬೇಕೆಂದರೆ ಪ್ರತಿಯೊಂದು ತಾಣವನ್ನು ತೆರೆದು ನೋಡಬೇಕಾಗುತ್ತದೆ. ಕೆಲವೇ ಕೆಲವು ತಾಣಗಳು ನಮ್ಮ ಓದಿನ ಪಟ್ಟಿಯಲ್ಲಿದ್ದರೆ ಇದನ್ನು ಮಾಡಬಹುದು. ಆದರೆ ನೂರಾರು ಬ್ಲಾಗ್ ಗಳು, ವೆಬ್ ಸೈಟುಗಳನ್ನು ಈ ರೀತಿ ಮಾಡಲು ಸಾಧ್ಯವಿಲ್ಲ. ಅದೂ ಅಲ್ಲದೇ, ಹಾಗೆ ಮಾಡಿಕೊಂಡರೂ ಅದು ಆ ಕಂಪ್ಯೂಟರಲ್ಲಿ ಮಾತ್ರವೇ ಶೇಖರವಾಗಿರುತ್ತದೆ. ಬೇರೆ ಕಂಪ್ಯೂಟರ್ ಗಳಲ್ಲಿ ನೋಡಲು ಆಗುವುದಿಲ್ಲ. ಅದಕ್ಕಾಗಿ ಈ ಗೂಗಲ್ ರೀಡರ್ ಮೂಲಕ ನಮಗೆ ಬೇಕಾದ ಎಲ್ಲಾ ತಾಣಗಳ ಕೊಂಡಿಗಳನ್ನು ಹಾಕಿಟ್ಟುಕೊಂಡು ಚಂದಾದಾರಿಕೆ (subscribe) ಮಾಡಿಕೊಂಡುಬಿಟ್ಟರೆ ಎಲ್ಲಾ ತಾಣಗಳ ಎಲ್ಲಾ ಪೋಸ್ಟ್ ಗಳನ್ನು ಯಾವ  ಕಂಪ್ಯೂಟರ್ ನಲ್ಲಾದರೂ ಒಂದೆಡೆಗೇ ನೋಡಲು ಸಾಧ್ಯವಾಗುತ್ತದೆ ಮತ್ತು ಹೊಸ ಪೋಸ್ಟುಗಳು ಬಂದಾಗ ತಿಳಿಯುತ್ತದೆ. ಪ್ರತಿತಾಣವನ್ನು ತೆರೆದು ನೋಡುವುದು ಬೇಕಿರುವುದಿಲ್ಲ. ನಮ್ಮ ಜಿಮೇಲ್ ಐಡಿಯಿಂದಲೇ ಗೂಗಲ್ ರೀಡರ್ ಗೆ ಲಾಗಿನ್ ಆದರೆ ಸಾಕು. ಅದರಲ್ಲಿ ನಮ್ಮ ಇಮೇಲ್ ಅಂಚೆಪೆಟ್ಟಿಗೆಯಂತೆಯೇ ಎಲ್ಲಾ ಬರಹಗಳೂ ಕೂಡ ಕಾಣುತ್ತವೆ.  ನೇರವಾಗಿ ಅಲ್ಲಿಯೇ ಓದಬಹುದು.

ನಾನು ಸುಮಾರು ಏಳುನೂರು ಬ್ಲಾಗ್, ವೆಬ್ ತಾಣಗಳನ್ನು ಇದರ ಮೂಲಕ ಹಿಂಬಾಲಿಸುತ್ತಿದ್ದೆ. ಎಲ್ಲಾ ಬ್ಲಾಗು/ತಾಣಗಳಲ್ಲೂ ಕಣ್ಣು ಹಾಯಿಸಲು ನೆರವಾಗುತ್ತಿತ್ತು.. ವ್ಯವಸ್ಥಿತವಾಗಿ ಓದಲು ಮತ್ತು ಗುರುತಿಟ್ಟುಕೊಳ್ಳಲು ಸಾಧ್ಯವಾಗುತ್ತಿತ್ತು. ಈಗ ಗೂಗಲ್ ರೀಡರ್ ಬದಲಿಗೆ ಬೇರೆ ಯಾವುದು ಇಷ್ಟೇ ಅನುಕೂಲಕರವಾದ ಯಾವ ಬೇರೆ ಅಪ್ಲಿಕೇಶನ್ ಇವೆ ಎಂಬುದರ ಹುಡುಕಾಟದಲ್ಲಿದ್ದೇನೆ. ಈ ಬಗ್ಗೆ ಗೆಳೆಯರನೇಕರು ಕೆಲವು ಸಲಹೆಗಳನ್ನೂ, ರೀಡರಿನಂತದ್ದೇ ಸೇವೆ ಒದಗಿಸುವ ಇತರ ಕೆಲವು ತಾಣಗಳನ್ನೂ ಸೂಚಿಸಿದ್ದಾರೆ.  ಅಂತರಜಾಲದಲ್ಲಿ ನೋಡಿದರೆ ಈ ಬಗ್ಗೆ ಜಗತ್ತಿನ ಎಲ್ಲೆಡೆಯ ಬಳಕೆದಾರರಿಂದ ಜೋರು ಚರ್ಚೆಯೂ ನಡೆಯುತ್ತಿದೆ.  Best alternatives ಎಂದು ಹಲವು ತಾಣಗಳನ್ನು ಆನ್ ಲೈನ್ ಮ್ಯಾಗಜೀನ್ ಗಳು ಪಟ್ಟಿ ಮಾಡಿಕೊಡುತ್ತಿವೆ. ವಲಸೆಪರ್ವ ಶುರುವಾಗಿದೆ. ನಾನು ಸ್ನೇಹಿತರು ಸೂಚಿಸಿದ ಕೆಲವು ತಾಣಗಳನ್ನು ಪ್ರಯತ್ನಿಸಿ ನೋಡಿದ್ದೇನೆ. ಎಲ್ಲವೂ ಒಂದು ಮಟ್ಟಿಗೆ ಅಡ್ಡಿಲ್ಲ ಅನ್ನಿಸಿದರೂ ಗೂಗರ್ ರೀಡರಿನಷ್ಟು ಅನುಕೂಲಕರವೆನಿಸುತ್ತಿಲ್ಲ. ಇನ್ನೂ ಒಂದಿಷ್ಟು ತಾಣಗಳನ್ನು ಪ್ರಯೋಗಿಸಿ ನೋಡಿ ಒಂದು ತೀರ್ಮಾನಕ್ಕೆ ಬರಬೇಕಿದೆ. ಇದ್ದಿದ್ದರಲ್ಲಿ ಒಂದು ಸಮಾಧಾನದ ಅಂಶ ಎಂದರೆ ಗೂಗಲ್ ರೀಡರಿನಲ್ಲಿ subscribe ಮಾಡಿಕೊಂಡಿದ್ದ ಎಲ್ಲಾ ಕೊಂಡಿಗಳನ್ನೂ ಹೊಸತಾಣಗಳಿಗೆ ರಫ್ತು ಮಾಡಲು (export) ಅವಕಾಶವಿರುವುದು.

ಈ ಕೆಳಗಿನವು ಗೂಗಲ್ ರೀಡರಿಗೆ ಕೆಲವು ಪರ್ಯಾಯ ತಾಣಗಳು:  ಪ್ರಯತ್ನಿಸಿ ನೋಡಬೇಕು !
Cloud based: Bloglines, Old reader, NetVibes, NewsBlur, Feedly, Bloglovin, PulseTaptuPulse News
Desktop based: Feeddemon

ನೀವೂ ಗೂಗಲ್ ರೀಡರ್ ಬಳಕೆದಾರರಾಗಿದ್ದರೆ ನಿಮ್ಮ ಅನುಭವ ಏನು? ಹೊಸ ವ್ಯವಸ್ಥೆ ಏನು ಮಾಡಿಕೊಂಡಿದ್ದೀರಿ ತಿಳಿಸಿ.

ಇಷ್ಟು ವರ್ಷ ಸೇವೆ ನೀಡಿ ನಿವೃತ್ತಿಯಾಗುತ್ತಿರುವ ಗೂಗಲ್ ರೀಡರಿಗೆ ಧನ್ಯವಾದಗಳು. Miss you reader !

image: www.design-milk.com

ಭಾನುವಾರ, ಮೇ 26, 2013

ಆರು ವರ್ಷಕ್ಕೆ ಹೀಗೇ ಒಂದಿಷ್ಟು ಮಾತು-ಕತೆ

ಮೇ ೧೨ಕ್ಕೆ ಈ ’ವಿಕಾಸವಾದ’ ಬ್ಲಾಗಿಗೆ ೬ ವರ್ಷ ವಯಸ್ಸಾಯ್ತು. ಕನ್ನಡದಲ್ಲಿ ೪ ಸಾವಿರಕ್ಕಿಂತ ಜಾಸ್ತಿ ಬ್ಲಾಗ್ ಗಳಿವೆ ಅಂತ ಹೇಳುತ್ತಾರೆ. ಆದರೆ ಸಕ್ರಿಯ ಬ್ಲಾಗುಗಳ ಸಂಖ್ಯೆ ಬಹಳ ಕಡಿಮೆ. ಅದರಲ್ಲಿ ಈ ವಿಕಾಸವಾದವೂ ಒಂದು. ಕೇವಲ ೩೦೦ ಕ್ಕಿಂತಲೂ ಕಡಿಮೆ ಬ್ಲಾಗುಗಳು ಮಾತ್ರ ಚಟುವಟಿಕೆಯಿಂದ ಕೂಡಿವೆಯಂತೆ ! ಒಂದು ಕಾಲದಲ್ಲಿ ಉತ್ಸಾಹದಿಂದ ಬ್ಲಾಗ್ ಬರೆಯುತ್ತಿದ್ದ ಹಲವರು ಇವತ್ತು ನಿಲ್ಲಿಸಿದ್ದಾರೆ ಅಥವಾ ಬಹಳ ಕಡಿಮೆ ಮಾಡಿದ್ದಾರೆ. ಓದುಗರೂ ಕಡಿಮೆಯಾಗಿದ್ದಾರೆ. ಹೊಸಬರು ಸಾಕಷ್ಟು ಸಂಖ್ಯೆಯಲ್ಲಿ ಆ ಸ್ಥಾನಗಳನ್ನು ತುಂಬುತ್ತಿಲ್ಲ. ಇದಕ್ಕೆಲ್ಲಾ ಕಾರಣಗಳು ಹಲವಿರಬಹುದು. ಫೇಸ್ ಬುಕ್ ಕೂಡ ಒಂದು ಕಾರಣ ಅಂತ ಮಾತ್ರ ಹೇಳಬಲ್ಲೆ!

ನಾನಂತೂ ಬರೆಯಲು ಹಲವಾರು ವಿಷಯಗಳನ್ನು ಪಟ್ಟಿ ಮಾಡಿಟ್ಟುಕೊಂಡಿದ್ದರೂ ಬರೆಯಲು ಮಹೂರ್ತ ಸಿಗುವುದೇ ಅಪರೂಪ! ಈ ನಡುವೆ ಬ್ಲಾಗಿಗೆ ಸಂಬಂಧಿಸಿದಂತೆ ಒಂದು ವಿಷಯ ಹಂಚಿಕೊಳ್ಳಬೇಕು. ನನ್ನ ಬ್ಲಾಗಿಗೆ feedjit ಎನ್ನುವ ಟೂಲ್ ಒಂದನ್ನು ಅಳವಡಿಸಿಕೊಂಡಿದ್ದೇನೆ. ಅದು ಈ ತಾಣಕ್ಕೆ ಯಾವ ಯಾವ ಊರಿನ, ರಾಜ್ಯದ ಅಥವಾ ದೇಶದ ಅಂತರಜಾಲ ಸಂಪರ್ಕಗಳಿಂದ ಭೇಟಿ ಕೊಡಲಾಯಿತು, ಯಾವ ಕೊಂಡಿ ಮೂಲಕ ಬಂದರು, ಯಾವ ಹೊತ್ತಿಗೆ ಬಂದರು ಎಂಬ ಮಾಹಿತಿ ತೋರಿಸುತ್ತದೆ. ಈ ಬ್ಲಾಗ್ ಪುಟದ ಕೆಳ ಬಲಭಾಗದಲ್ಲಿ ಅದನ್ನು ಯಾರಾದರೂ ನೋಡಬಹುದು. ಅದರ ಒಳಗೆ ಹೋದರೆ ಇಲ್ಲಿಗೆ ಭೇಟಿ ಕೊಟ್ಟವರದ್ದು ಯಾವ ಆಪರೇಟಿಂಗ್ ಸಿಸ್ಟಮ್, ಯಾವ ಬ್ರೌಸರ್, ಎಲ್ಲಿಂದ ಒಳಬಂದರು, ಹೊರಹೋದರು ಎನ್ನುವ ಪೂರ್ಣ ಮಾಹಿತಿ ನೋಡಬಹುದು. ಹಲವರು ಬೇರೆ ಬೇರೆ ಬ್ಲಾಗುಗಳ ಮೂಲಕ ಇಲ್ಲಿಗೆ ಬಂದಿದ್ದರೆ ಮತ್ತೂ ಹಲವರು ನೇರವಾಗಿ ಬಂದಿರುತ್ತಾರೆ. ಇದು ಎಲ್ಲ ಬ್ಲಾಗಿಗರಿಗೂ ತಮ್ಮ ತಮ್ಮ ಬ್ಲಾಗ್ ಭೇಟಿಗಳ ಬಗ್ಗೆ ಮಾಹಿತಿ ನೋಡಿದಾಗ ಗಮನಕ್ಕೆ ಬಂದಿರಬಹುದು. ಭಾರತದಿಂದ ಹೊರಗೆ ಕನ್ನಡಿಗರು ಸಾಮಾನ್ಯವಾಗಿ ಅಮೆರಿಕಾ, ಯೂರೋಪು, ಗಲ್ಫ್ ದೇಶಗಳಲ್ಲಿ ಹೆಚ್ಚು ಜನರಿದ್ದಾರೆ. ಅಲ್ಲಿಂದ ಪುಟಭೇಟಿಗಳಾಗುವುದು ಸಹಜ. ಅದಲ್ಲದೇ ಬೆಂಗಳೂರಿನಲ್ಲೇ ಇರುವ ಹಲವಾರು ಐ.ಟಿ. ಕಂಪನಿಗಳ ಅಂತರಜಾಲ ಸಂಪರ್ಕ ಬೇರೆ ದೇಶದ್ದಾಗಿರುತ್ತದೆ. ಹಾಗಾಗಿ ಇಲ್ಲಿಂದಲೇ ಯಾರೋ ಬ್ಲಾಗ್ ತೆಗೆದು ನೋಡಿದ್ದರೂ ಕೂಡ ಅದು ಬೇರೆ ಯಾವುದೋ ದೇಶದ ಹೆಸರು ತೋರಿಸಿರುತ್ತದೆ. ಉದಾಹರಣೆಗೆ ನನ್ನ ಆಫೀಸಿನದ್ದು ಸಿಂಗಾಪುರದ ಸಂಪರ್ಕ. ಆದರೆ ಎಲ್ಲಕ್ಕಿಂತ ಆಶ್ಚರ್ಯವಾಗುವುದು ಅಂದರೆ ಆಫ್ರಿಕಾ ಖಂಡದ ಹಲವು ದೇಶಗಳಿಂದ ಮತ್ತು ಜಗತ್ತಿನ ಕೆಲವು ದ್ವೀಪರಾಷ್ಟ್ರಗಳಿಂದ ಆಗುವ ಭೇಟಿಗಳು! ಅಲ್ಲೆಲ್ಲಾ ಯಾವ ಓದುಗರಿದ್ದಾರೋ ಗೊತ್ತಿಲ್ಲ. ಇದ್ದರೆ ಅವರೆಲ್ಲರಿಗೂ ಧನ್ಯವಾದಗಳು.

ಮತ್ತೊಂದು ವಿಶಿಷ್ಟ ಸಂಗತಿ ಎಂದರೆ ಈ feedjitನಲ್ಲಿ ಗೂಗಲ್ ಸರ್ಚ್ ಮಾಡುವ ಮೂಲಕ ಬಂದಿರುವ ಭೇಟಿಗಳ ಬಗ್ಗೆ ವಿವರ ದಾಖಲಾಗಿರುತ್ತದೆ. ಯಾವ ಹುಡುಕುಪದದ(search word) ಮೂಲಕ ಈ ಬ್ಲಾಗಿಗೆ ಸಂಪರ್ಕವಾಯಿತು ಎಂಬ ಮಾಹಿತಿ ಇರುತ್ತದೆ. ಕುತೂಹಲಕ್ಕೆ ಅದನ್ನು ನೋಡುತ್ತಿರುತ್ತೇನೆ. ಅದನ್ನು ಗಮನಿಸಿದಾಗ ತಿಳಿದು ಬಂದಿದ್ದೇನೆಂದರೆ ನನ್ನ ಬ್ಲಾಗಿಗೆ ಗೂಗಲ್ ಹುಡುಕಾಟದ ಮೂಲಕ  ಬರುವ ಭೇಟಿಗಳಲ್ಲಿ ಅತಿ ಹೆಚ್ಚು 'ಕನ್ನಡ ಟೈಪಿಂಗ್' ಬಗ್ಗೆ ಹುಡುಕಿ ಬಂದವರದ್ದಾಗಿರುತ್ತದೆ. ಕಂಪ್ಯೂಟರಲ್ಲಿ ಕನ್ನಡ ಬರೆಯಲು ಇರುವ ಸೌಲಭ್ಯಗಳ ಬಗ್ಗೆ ಎರಡು ವರ್ಷಗಳ ಹಿಂದೆ ಹಾಕಿದ್ದ ಈ ಬರಹ ಇವತ್ತಿಗೂ ಮೊದಲ ಸ್ಥಾನದಲ್ಲಿದೆ. ಇನ್ನೂ ಬಹಳಷ್ಟು ಜನ ಅಡುಗೆಯ ಬಗ್ಗೆ ಹುಡುಕುವುದರ ಮೂಲಕ ಬರುತ್ತಾರೆ. ಏಕೆಂದರೆ ಹೆಚ್ಚು ಭೇಟಿ ಪಡೆದುಕೊಳ್ಳಲು ಕಾರಣವಾದ ಕೆಲ ಪದಗಳೆಂದರೆ ’ದೋಸೆ’, ’ರುಚಿರುಚಿ’, ’ಅಡುಗೆ’ ಮುಂತಾದವು. ’ಸಾವು’ ಎಂಬ ಪದವನ್ನು ಹುಡುಕಿ ಬಂದ ಭೇಟಿಗಳೂ ಹಲವು ಇರುತ್ತವೆ ! ಅಪರೂಪಕ್ಕೆ ಪುಸ್ತಕ, ಸಿನೆಮಾ ಮುಂತಾದವುಗಳ ಬಗ್ಗೆ ಮಾಹಿತಿ ಹುಡುಕುತ್ತಾ ಬಂದವರಿರುತ್ತಾರೆ. ಇದೆಲ್ಲದರ ನಡುವೆ ಇನ್ನೊಂದು ಅತಿ ಹೆಚ್ಚು ಹುಡುಕುಪದ ಎಂದರೆ ’ಬೆತ್ತಲೆ’. ಜನ ಈ ಪದವನ್ನು ಅದೇಕೆ ಅಷ್ಟೆಲ್ಲಾ ಹುಡುಕುತ್ತಾರೋ ಗೊತ್ತಿಲ್ಲ. ಈ ಪದದ ಮೂಲಕ ೨೦೦೭ರಲ್ಲಿ ಬರೆದಿದ್ದ ಈ ಬರಹಕ್ಕೆ ಬರುತ್ತಿರುತ್ತಾರೆ. ಬೆತ್ತಲೆಗಿರುವ ಡಿಮ್ಯಾಂಡ್ ಅದು ! :-)

ಹಳಬರೆಲ್ಲಾ ಮದುವೆ, ಸಂಸಾರ, ಕೆಲಸ, ಜವಾಬ್ದಾರಿ, ನಿರುತ್ಸಾಹ ಮುಂತಾದ ಕಾರಣಗಳನ್ನು ದಾಟಿಬಂದು ಬ್ಲಾಗ್ ಬರೆಯಲಿ ಮತ್ತು ಹೊಸಬರೂ ಹೆಚ್ಚು ಹೆಚ್ಚು ಬರೆಯಲಿ, ಓದಲಿ ಎಂಬ ಆಶಯದೊಂದಿಗೆ ಈ ವಿಕಾಸವೂ ನಡೆಯುತ್ತಿರುತ್ತದೆ.

ಭಾನುವಾರ, ಏಪ್ರಿಲ್ 14, 2013

ಹೃಷೀಕೇಶದ ಗಂಗಾನದಿ ರಾಫ್ಟಿಂಗ್


Picture picked from: www.nepalhimalayastrekking.com :)
 ಎರಡು ವರ್ಷಗಳ ಹಿಂದೆ ದಾಂಡೇಲಿ ಬಳಿ ಕಾಳಿನದಿಯಲ್ಲಿ ರಾಫ್ಟಿಂಗ್ ಮಾಡಿದ್ದೆ. ಸುಮಾರು ಎಂಟು ಕಿಲೋಮೀಟರ್ ದೂರದ ರಾಫ್ಟಿಂಗ್ ಅದಾಗಿತ್ತು. ಮೊದಲ ಬಾರಿಯ ಆ ರಾಫ್ಟಿಂಗ್ ಅನುಭವ ಬಹಳ ಚೆನ್ನಾಗಿತ್ತು. ಮೊನ್ನೆ ಮಾರ್ಚ್ ತಿಂಗಳ ಕೊನೆಯಲ್ಲಿ ಉತ್ತರಾಖಂಡ ರಾಜ್ಯದಲ್ಲಿ ಹಿಮಾಲಯ ಚಾರಣವೊಂದನ್ನು ಮುಗಿಸಿದ ಮೇಲೆ ’ಹೃಷೀಕೇಶ’ಕ್ಕೆ ಹೋದೆವು. ಋಷಿಕೇಶದಲ್ಲಿ ಗಂಗಾನದಿಯ ರಾಫ್ಟಿಂಗ್ ಬಗ್ಗೆ ಬಹಳ ಕೇಳ್ಪಟ್ಟಿದ್ದೆವು. ಹೃಷೀಕೇಶಕ್ಕೆ ಹೋದ ಮೇಲೆ ಕಂಡಿದ್ದೇನೆಂದರೆ, ಅಲ್ಲಿ ರಾಫ್ಟಿಂಗ್ ಒಂದು ದೊಡ್ಡ ಬಿಸಿನೆಸ್. ಒಂದೊಂದು ಬೀದಿಯಲ್ಲೂ ಮೂರ್ನಾಲ್ಕು ರಾಫ್ಟಿಂಗ್ ಏಜೆನ್ಸಿಗಳಿವೆ. ದರಗಳಲ್ಲಿಯೂ ವ್ಯತ್ಯಾಸಗಳಿವೆ. (Rafting in Rishikesh ಅಂತ Googleನಲ್ಲಿ ಹುಡುಕಿದರೆ ಸಿಗುತ್ತವೆ. ಜೊತೆಗೆ ಬಂಜೀ ಜಂಪಿಂಗ್ ಮುಂತಾದ ಇನ್ನೂ ಹಲವು ಸಾಹಸ ಚಟುವಟಿಕೆಗಳನ್ನು ಮಾಡಿಸುವಂತಹ ಸಂಸ್ಥೆಗಳೂ ಇವೆ.)

ಹೃಷೀಕೇಶದಲ್ಲಿ ಹಲವು ಕಡೆ ರಾಫ್ಟಿಂಗ್ ಶುರುವಾಗುವ ಜಾಗಗಳಿವೆ. ೧೨ ಕಿ.ಮಿ. ದೂರದ ಬ್ರಹ್ಮಪುರಿ, ೧೬ ಕಿ.ಮಿ. ದೂರದ ಶಿವಪುರಿ, ೨೫ ಕಿ.ಮಿ. ದೂರದ ಮೆರೈನ್ ಡ್ರೈವ್ ಮತ್ತು ೬೪ ಕಿ.ಮಿ. ದೂರದ ಮತ್ತೊಂದು ಸ್ಥಳ ಮುಂತಾದವು. ರಾಫ್ಟಿಂಗ್ ನವರು ಹೇಳುವಂತಹ ಈ ಕಿಲೋಮೀಟರ್ ದೂರಗಳು ನದಿಯಲ್ಲಿ ರಾಫ್ಟಿಂಗ್ ಮಾಡುವ ದೂರಗಳಲ್ಲ, ಬದಲಾಗಿ ಹೃಷೀಕೇಶದಿಂದ ರಸ್ತೆಯಲ್ಲಿ ಹೋದರೆ ಆಗುವ ದೂರ ಎನ್ನುವುದು ಆಮೇಲೆ ತಿಳಿಯಿತು. ನಾವು ಇಳಿದುಕೊಂಡಿದ್ದ  ಪ್ರವಾಸೋದ್ಯಮದ ಸರ್ಕಾರಿ ಲಾಡ್ಜ್  ’ಗರ್ವಾಲ್ ಮಂಡಲ್ ವಿಕಾಸ್ ನಿಗಮ’ದ ವ್ಯಕ್ತಿಯೊಬ್ಬರ ಮೂಲಕ ’ಪ್ಯಾಡಲ್ ಇಂಡಿಯಾ’ ಎನ್ನುವ ಸಂಸ್ಥೆಯನ್ನು ನಾವು ಏಳು ಜನ ತಲೆಗೆ ೮೦೦ ರೂ. ಕೊಟ್ಟು ರಾಫ್ಟಿಂಗಿಗಾಗಿ ಗೊತ್ತುಮಾಡಿಕೊಂಡದ್ದಾಯಿತು. ರಾಫ್ಟಿಂಗ್ ಮಾಡಿಸುವವರು ಗ್ರಾಹಕರನ್ನು ನಾವಿರುವ ಸ್ಥಳಕ್ಕೇ ಬಂದು ವಾಹನದಲ್ಲಿ ಕರೆದುಕೊಂಡು ಹೋಗುತ್ತಾರೆ ಮತ್ತು ವಾಪಸ್ ತಂದು ಬಿಡುತ್ತಾರೆ. ಅಂತೆಯೇ ಬೆಳಗ್ಗೆ ಎಂಟು ಗಂಟೆಗೆ ಋಷಿಕೇಶದಿಂದ ಹೊರಟು ೨೫ ಕಿ.ಮಿ. ದೂರದ ಮೆರೈನ್ ಡ್ರೈವ್ ಎಂಬ ಸ್ಥಳಕ್ಕೆ ತಲುಪಿದೆವು. ಅಲ್ಲಿ ಒಂದು ಚಿಕ್ಕ ತರಬೇತಿಯ ನಂತರ ರಾಫ್ಟಿಂಗ್ ಶುರುವಾಯಿತು. ಗಂಗಾನದಿಯ ಹರಿವು ಒಳ್ಳೆಯ ಸೆಳೆತದಿಂದ ಕೂಡಿತ್ತು. ನಡುನಡುವೆ ಹಲವಾರು rapids ದಾಟಿ ಸುಮಾರು ನಾಲ್ಕು ತಾಸುಗಳ ರಾಫ್ಟಿಂಗ್ ಮುಗಿಸಿದೆವು. ನದಿಯಲ್ಲಿ ಆ ದೂರ ಸುಮಾರು ೧೮ ಕಿ.ಮಿ. ಆಗಬಹುದು. 

ಇದಿಷ್ಟೂ ದೂರದಲ್ಲಿ ಸುಮಾರು ೧೫ rapidಗಳು ಇದ್ದಿರಬಹುದು. ಆದರೆ ಅಂತಹ ಗಾಬರಿ ಹುಟ್ಟಿಸುವಂತಹ, ದೋಣಿಯಿಂದ ಎತ್ತಿ ಒಗೆಯುವಂತಹ, ಮೇಲಿನಿಂದ ಬೀಳುವಂತಹ ದೊಡ್ಡ rapidಗಳಾವುದೂ ಇರಲಿಲ್ಲ. ಮೊದಲಬಾರಿ ರಾಫ್ಟಿಂಗ್ ಮಾಡಿದವರಿಗೆ ಇದು ಖುಷಿ ಕೊಡಬಹುದು.  ಆದರೆ ನಮಗೆ ಹೃಷೀಕೇಶದ ಈ ರಾಫ್ಟಿಂಗಿಗಿಂತ ಕಾಳಿನದಿಯ ರಾಫ್ಟಿಂಗ್ ಚೆನ್ನಾಗಿದೆ ಅನ್ನಿಸಿತು. 

***************************

ಕೊಸರು: ನನಗೆ ಈ ಊರಿನ ಹೆಸರನ್ನು ಬರೆಯುವುದರಲ್ಲಿ 'ಋಷಿಕೇಶ' ಸರಿಯೋ ಅಥವಾ 'ಹೃಷಿಕೇಶ' ಸರಿಯೋ ಎನ್ನುವುದರ ಬಗ್ಗೆ ಸಂಶಯವಿತ್ತು. ಈ ಸಂಸ್ಕೃತ ಪದವನ್ನು ಕನ್ನಡದಲ್ಲಿ ಬರೆಯುವಾಗ 'ಹೃಷಿಕೇಶ' ಎಂದು ಬರೆಯುವುದನ್ನು ನೋಡಿದ್ದೆ. ಆದರೆ ಇಂಗ್ಲೀಷಿನಲ್ಲಿ ಎಲ್ಲಾ ಕಡೆ Rishikesh ಎಂದು ಬರೆಯುತ್ತಾರೆ.  ಭಾರತೀಯ ಹೆಸರುಗಳ ವಿಷಯದಲ್ಲಿ ಇಂಗ್ಲೀಷನ್ನು ನಂಬಲಾಗುವುದಿಲ್ಲ. ಹಾಗಾಗಿ ನೋಡೋಣ ಎಂದುಕೊಂಡರೆ ಆ ಊರಿನಲ್ಲಿ ಹಿಂದಿಯಲ್ಲಿಯೂ ಸಹ ಋಷಿಕೇಶ (ऋषिकॆश) ಎಂದೇ ಬರೆದಿದ್ದರು ! ಈ ವಿಷಯವನ್ನು ಹಿರಿಯರಾದ ಸುನಾಥಕಾಕಾರಲ್ಲಿ ಕೇಳಿದೆ. ಅವರ ಉತ್ತರ ಹೀಗಿತ್ತು.

‘ಹೃಷೀಕೇಶ’ ಎನ್ನುವುದು ಸರಿಯಾದ ಪದ. ‘ಹೃಷೀಕ’ ಎಂದರೆ ಇಂದ್ರಿಯ. ಈಶ ಎಂದರೆ ಪ್ರಭು. ಹೃಷೀಕೇಶ ಅಂದರೆ ಇಂದ್ರಿಗಳ ಪ್ರಭು. ಸಂಧ್ಯಾವಂದನೆಯ ಮೊದಲಲ್ಲಿ ೨೪ ತತ್ವಾಭಿಮಾನಿ ದೇವತೆಗಳನ್ನು ನೆನೆಯುವಾಗ ‘ಹೃಷೀಕೇಶಾಯ ನಮ:’ ಎನ್ನುವ ತತ್ವಾಭಿಮಾನಿ ದೇವತೆಯನ್ನು ಸಹ ನೆನೆಯಲಾಗುತ್ತದೆ. ‘ಹೃಷೀಕೇಶ’ ಎನ್ನುವ ಒಂದು ಹಳ್ಳಿಯು ಗಂಗಾನದಿಯ ದಂಡೆಯ ಮೇಲೆ ಹರಿದ್ವಾರದಿಂದ ೨೪ ಕಿಲೋಮೀಟರುಗಳಷ್ಟು ದೂರದಲ್ಲಿದೆ. 'ಋಷಿಕೇಶ’ ಎನ್ನುವುದು ಆಡುಮಾತಿನಲ್ಲಿ ಬಳಕೆಯಾಗುತ್ತಿರುವ ಪದ. ಇದು ಸರಿಯಲ್ಲ.

ಈ ವಿಷಯ ತಿಳಿಸಿದ್ದಕ್ಕಾಗಿ ಸುನಾಥಕಾಕಾರಿಗೆ ಧನ್ಯವಾದಗಳನ್ನು ಹೇಳುತ್ತಿದ್ದೇನೆ.

ಮಂಗಳವಾರ, ಜನವರಿ 29, 2013

Definition of Wealth !

WEALTH defined by a Bibliophile! :)

What's your definition of Wealth?
 
ಫೇಸ್ ಬುಕ್ಕಲ್ಲಿ ಸಿಕ್ಕ ಈ ಮೇಲಿನ ಚಿತ್ರವನ್ನು ಹಂಚಿಕೊಂಡಿದ್ದೆ.  ಒಬ್ಬ ಪುಸ್ತಕಪ್ರೇಮಿಗೆ 'ಸಂಪತ್ತು' ಅಥವಾ 'ಆಸ್ತಿ' ಎಂದರೆ ಈ ಮೇಲಿನ ಚಿತ್ರದಲ್ಲಿರುವುದು.  ಸಂಪತ್ತಿನ ಬಗ್ಗೆ ನಿಮ್ಮ ವಿವರಣೆ ಏನು? ಎನ್ನುವುದು ಪ್ರಶ್ನೆ. ಅದಕ್ಕೆ ಅಣ್ಣ ಮಹೇಶ ಹೆಗಡೆ ಉತ್ತರಿಸಿದ್ದು ಬಹಳ ಇಷ್ಟವಾಯಿತು. ಅದನ್ನು ಇಲ್ಲಿ ಹಾಕುತ್ತಿದ್ದೇನೆ.
 
Good physical and mental health.

Just enough material resources for decent living.

Plenty of time to do what you really like to do.

Reduced uncertainty. Or to be true, ability to manage uncertainty and not worry about the future.

Company of like minded people for plenty of lighthearted conversation and hearty laughter.ಈ ಮೇಲಿನ ಅರ್ಥಪೂರ್ಣ ವಿವರಣೆ ಹಾಗೂ ಚಿತ್ರದೊಂದಿಗೆ ಈ ಕ್ಯಾಲೆಂಡರ್ ವರ್ಷದ ಮೊದಲ ಪೋಸ್ಟ್ ! :)

ಅಂದಹಾಗೆ... What's your definition of Wealth?