ಪುಟಗಳು

ಶನಿವಾರ, ಜೂನ್ 30, 2012

ಪತ್ರಿಕೆಗಳಲ್ಲಿ ಬ್ಲಾಗುಗಳು ಮತ್ತು ನನ್ನ ಬ್ಲಾಗು

ನೆನಪಿದೆ. ಅವತ್ತು ಆಗಸ್ಟ್ ೧೭, ೨೦೦೮. ಭಾನುವಾರ ಬೆಳಗ್ಗೆ ಏಳೂವರೆ. ಭದ್ರಾವತಿಯಿಂದ  ಹೊರನಾಡಿಗೆ ಹೊರಟಿದ್ದ ನಾನು ನರಸಿಂಹರಾಜಪುರ ಬಸ್ಟ್ಯಾಂಡ್ ಹೋಟೆಲಿನಲ್ಲಿ ತಿಂಡಿ ಮುಗಿಸಿ ಹೊರಬರುತ್ತಿದ್ದೆ. ಫೋನಿಗೆ ಸಂದೇಶವೊಂದು ಬಂದಿತ್ತು. ಗೆಳೆಯ ವಿಜಿ ಸಂದೇಶ ಕಳಿಸಿದ್ದ. ತೆಗೆದು ನೋಡಿದರೆ, "ಇವತ್ತಿನ ಕನ್ನಡ ಪ್ರಭ ಪತ್ರಿಕೆಯಲ್ಲಿ ನಿನ್ನ ಬ್ಲಾಗ್ ಬಗ್ಗೆ ಬಂದಿದೆ ನೋಡು" ಅಂತ ಇತ್ತು. ಏನು ಬರೆದಿದ್ದಾರೆ ನೋಡೋಣ ಅಂತ ಅಲ್ಲೇ ಹೋಗಿ ಪತ್ರಿಕೆ ಕೊಂಡುಕೊಂಡಿದ್ದೆ. ಸಾಪ್ತಾಹಿಕ ಪ್ರಭದ ’ಬ್ಲಾಗ್ ಬುಟ್ಟಿ’ಯಲ್ಲಿ ನನ್ನ ಈ ಬ್ಲಾಗ್ ಬಗ್ಗೆ ಒಂದು ಚಿಕ್ಕ ಪರಿಚಯ ಬರೆದು ಆಗ ಬರೆದಿದ್ದ ’ಎಲೆಶೆಟ್ಟಿ’ ಎನ್ನುವ ಬರಹವೊಂದನ್ನು ಪೂರ್ತಿ ಪ್ರಕಟಿಸಿದ್ದರು.

ಬಹುಶಃ ಈ ರೀತಿ ಬ್ಲಾಗ್ ಗಳನ್ನು ಪರಿಚಯ ಮಾಡಿಕೊಡುವ ಕೆಲಸವನ್ನು ಮೊದಲು ಮಾಡಿದ್ದು ’ಕನ್ನಡ ಪ್ರಭ’ ಪತ್ರಿಕೆಯೇ ಇರಬೇಕು. ಆಮೇಲೆ ’ಹೊಸದಿಗಂತ’ ಪತ್ರಿಕೆ ಕೂಡ ಪ್ರತಿವಾರ ’ಜೇಡರಬಲೆ’ಯಲ್ಲಿ ಒಂದೊಂದು ಬ್ಲಾಗ್ ಗಳನ್ನು ಪರಿಚಯ ಮಾಡಿಕೊಡುತ್ತಿತ್ತು. ಅನಂತರದ ದಿನಗಳಲ್ಲಿ ವಿಜಯ ಕರ್ನಾಟಕವು ’ವೆಬ್ಬಾಗಿಲು’ ಎಂಬ ಹೆಸರಿನ ಅಂಕಣದಲ್ಲಿ ಬ್ಲಾಗುಗಳ ಬಗ್ಗೆ ಬರೆಯಿತು. ಈಗ ವಿ..ದಲ್ಲಿ ಬ್ಲಾಗ್ ಗಳ ಬಗ್ಗೆ ’ಬ್ಲಾಗಿಲು’ಎಂಬ ಅಂಕಣ ಬರುತ್ತಿದೆ.


ಮೊನ್ನೆ ಜೂನ್ ಹದಿನೈದು, ಪ್ರಜಾವಾಣಿಯು ಮೆಟ್ರೋ ಪುರವಣಿಯ 'ಬ್ಲಾಗಿಲನು ತೆರೆದು' ಅಂಕಣದಲ್ಲಿ ನನ್ನ ಬ್ಲಾಗ್ ಬಗ್ಗೆ ಬರೆದಿದೆ. ಪ್ರತಿ ಶುಕ್ರವಾರ ಅದರಲ್ಲಿ ಒಂದೊಂದು ಬ್ಲಾಗ್ ಪರಿಚಯ ಮಾಡಿಕೊಟ್ಟು ಆಯ್ದ ಬರಹವೊಂದನ್ನು ಪ್ರಕಟಿಸುತ್ತಾರೆ. ನನ್ನ ಬ್ಲಾಗ್ ಬಗ್ಗೆ ಬಂದಿದ್ದು ಗೊತ್ತಿರಲಿಲ್ಲ. ಅವತ್ತು ರಾತ್ರಿ ಗೆಳೆಯ ಪ್ರಭುಪ್ರಸಾದ ಈ ಬಗ್ಗೆ ಹೇಳಿದಾಗಲೇ ಗೊತ್ತಾಗಿದ್ದುನನಗೇ ಆಶ್ಚರ್ಯವಾಗುವಂತೆ ಮುದ್ದಾಗಿ ಪರಿಚಯ ಬರೆದು, ಒಂದೆರಡು screen shotಗಳನ್ನೂ ಹಾಕಿ, ಆ ಹಿಂದಿನ ದಿನವಷ್ಟೇ ಬರೆದು ಹಾಕಿದ್ದ ಪುಟ್ಟ ಬರಹವನ್ನೂ ಪ್ರಕಟಿಸಿದ್ದರು. ಅವರಿಗೆ ಧನ್ಯವಾದಗಳು

ಇತ್ತೀಚೆಗೆ ’ಸಂಯುಕ್ತ ಕರ್ನಾಟಕ’ವೂ ಕೂಡ 'ಬ್ಲಾಗ್ ಲೋಕ'ದಲ್ಲಿ ಬ್ಲಾಗ್ ಗಳನ್ನು ಪರಿಚಯಿಸುತ್ತಿದೆ. ಈ ನಡುವೆ ಅದೇ ಜೂನ್ ಹದಿನಾಲ್ಕರಂದು ’ಸಂಯುಕ್ತ ಕರ್ನಾಟಕ’ ಪತ್ರಿಕೆ ನನ್ನ 'ಕನ್ನಡ ಟೈಪಿಂಗ್' ಬರಹವನ್ನು ಪ್ರಕಟಿಸಿತ್ತು. ಕಂಪ್ಯೂಟರ್ ನಲ್ಲಿ ಕನ್ನಡದಲ್ಲಿ ಬರೆಯಲು ಏನೇನು ಸೌಲಭ್ಯಗಳಿವೆ ಎಂಬುದರ ಬಗ್ಗೆ  ಆ ಬರಹ. ಯಥಾಪ್ರಕಾರ ನನಗೆ ಅದು ಪ್ರಕಟವಾಗಿದ್ದು ಗೊತ್ತಿರಲಿಲ್ಲ. ಅವತ್ತು ರಾತ್ರಿ ವಿಜಯಕ್ಕ ಫೇಸ್ ಬುಕ್ಕಿನಲ್ಲಿ ಸಂದೇಶ ಕಳುಹಿಸಿ ಅದರ ಕೊಂಡಿ ಕೊಟ್ಟಾಗಲೇ ಗೊತ್ತಾಗಿದ್ದು. ಆದರೆ ಸಂಯುಕ್ತ ಕರ್ನಾಟಕ ಮಾಡಿದ್ದು ಬ್ಲಾಗ್ ಪರಿಚಯ ಅಲ್ಲ. ಅನಾಮತ್ತು ಆ ಬರಹದ ಕಾಪಿ ಪೇಸ್ಟು.! ಭಾಗ ೧, ೨ ಎಂದು ಎರಡು ದಿನ ಬಂದ ಆ ಬರಹದ ಕೊನೆಯಲ್ಲಿ ನನ್ನ ಹೆಸರು, ಇ ಮೇಲ್ ಐಡಿ, ಬ್ಲಾಗ್ ಲಿಂಕ್ ಎಲ್ಲಾ ಪ್ರಕಟಿಸಿದ್ದರು. ಆದರೆ ಅದೇ ನನ್ನ ಇ-ಮೇಲ್ ಐಡಿಗೆ ಅವರು ಒಂದು ಸಂದೇಶ ಕಳಿಸಿ ಹೀಗೆ ಪ್ರಕಟಿಸುತ್ತೇವೆ ಅಂತ ಮೊದಲೇ ಹೇಳಿದ್ದರೆ ಆ ಬರಹವನ್ನು ಖುಷಿಯಿಂದ ಇನ್ನೂ ಚೆನ್ನಾಗಿ ಅಪ್ ಡೇಟ್ ಮಾಡಿ ಬರೆದುಕೊಡುತ್ತಿದ್ದೆ. ಏಕೆಂದರೆ ಆ ಬರಹ ಒಂದು ವರ್ಷದ ಹಿಂದೆ purely ಒಂದು ಅಂತರಜಾಲ ಬರಹವಾಗಿ ಬರೆದಿದ್ದು. ಅಂದರೆ ಅದರಲ್ಲಿ ಹಲವು ಕೊಂಡಿ(page links)ಗಳಿವೆ ಮತ್ತು ಅನೇಕ ಕೊಂಡಿಗಳು ಕರೆದುಕೊಂಡು ಹೋಗುವ ಜಾಗದಲ್ಲಿ ಈಗ ಏನೂ ಇಲ್ಲ. ಉದಾಹರಣೆಗೆ ’ಬರಹ’ ತಂತ್ರಾಂಶ ಈಗ ಉಚಿತವಲ್ಲ, ’ನುಡಿ’ ತಂತ್ರಾಂಶಕ್ಕೆ ಕನ್ನಡ ಗಣಕ ಪರಿಷತ್ತಿನ ಮಿಂಬಲೆ ತಾಣವೇ ಇಲ್ಲ. ’ಪದ’ ತಂತ್ರಾಂಶದ ವೆಬ್ ಸೈಟ್ expire ಆಗಿಹೋಗಿದೆ. ಕೆಲವು ಹಳೇ ತಾಣಗಳು ಕೆಲಸ ಮಾಡುತ್ತಿಲ್ಲ. ಕೆಲವು ಬದಲಾವಣೆಯಾಗಿವೆ. ಹೊಸದು ಬಂದಿದೆ. ಆದ್ದರಿಂದ ಇಂತಹ ಬರಹವನ್ನು ಈಗ ಪ್ರಕಟಿಸಿದರೆ ಅದನ್ನು ಓದಿ ಅದರ ಕೊಂಡಿ ಹಿಡಿದು ಹೋಗುವ ಆಸಕ್ತಿಯುಳ್ಳ ಓದುಗರು ನಿರಾಶರಾಗಬೇಕಾಗುತ್ತದೆ. ಪತ್ರಿಕೆಯಲ್ಲಿ ಹಾಕುವಾಗ ಅವರು ಇಂತಹುದರ ಬಗ್ಗೆ ಎಚ್ಚರವಹಿಸಿಬೇಕಾಗಿತ್ತು.

***

ಮೊದಲೆಲ್ಲಾ ಬ್ಲಾಗ್ ಗಳ ಸಂಖ್ಯೆ ಕಡಿಮೆ ಇತ್ತು. ಐದಾರು ವರ್ಷಗಳ ಹಿಂದೆ ಕನ್ನಡ ಬ್ಲಾಗುಗಳನ್ನು ಬರೆಯಲು ಆರಂಭಿಸಿದ ನಾವೆಲ್ಲಾ ಹೆಚ್ಚುಕಡಿಮೆ ಒಂದೇ ವಾರಗೆಯವರಿದ್ದೆವು. ಸುಮಾರಾಗಿ ಬ್ಲಾಗಿಗರ ಪರಿಚಯ ಕೂಡ ಇರುತ್ತಿತ್ತು. ಯಾವುದ್ಯಾವುದೋ ಸಂದರ್ಭಗಳಲ್ಲಿ ಭೇಟಿ ಕೂಡ ಆಗುತ್ತಿದ್ದೆವು. ಬ್ಲಾಗ್ ಗಳ ಬಗ್ಗೆ ಮಾತಾಡುತ್ತಿದ್ದೆವು. ಮಾಹಿತಿ ಹಂಚಿಕೊಳ್ಳುತ್ತಿದ್ದೆವು. ಆಗ ಇದ್ದ ಬ್ಲಾಗುಗಳಲ್ಲಿ ಬಹುತೇಕ ಎಲ್ಲವೂ ಗೊತ್ತಿರುತ್ತಿತ್ತು. ಹಲವು ಹಳಬರ ಬ್ಲಾಗ್ ಕೊಂಡಿಗಳು ಇನ್ನೂ ನೆನಪಿನಲ್ಲೇ ಇವೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಬ್ಲಾಗ್ ಲೋಕ ಬಹಳ ಬೆಳೆದಿದೆ. ಸಾವಿರಾರು ಬ್ಲಾಗ್ ಗಳಿವೆ. ಎಷ್ಟೋ ಚಂದಚಂದದ ಬ್ಲಾಗುಗಳು ಗೊತ್ತೇ ಇರುವುದಿಲ್ಲ. ಪತ್ರಿಕೆಗಳು ಹೀಗೆ ಪರಿಚಯ ಮಾಡಿಕೊಡುತ್ತಿರುವುದರಿಂದಲೇ ಹಲವಾರು ಬ್ಲಾಗ್ ಗಳು ಗೊತ್ತಾಗುತ್ತಿವೆ, ಓದಲು ಸಿಗುತ್ತಿವೆ.. ಬರೆಯುವವರಿಗೆ ಪ್ರೋತ್ಸಾಹವೂ ಸಿಗುತ್ತಿದೆ. ನನ್ನ ಗೂಗಲ್ ರೀಡರ್ ಅಂತೂ ತುಂಬಿ ತುಳುಕುತ್ತಿದೆ. ಪತ್ರಿಕೆಗಳಿಗೆ ಕೃತಜ್ಞತೆಗಳು.

15 ಕಾಮೆಂಟ್‌ಗಳು:

Seema S. Hegde ಹೇಳಿದರು...

ವಿಕಾಸ, ಹೃತ್ಪೂರ್ವಕ ಅಭಿನಂದನೆಗಳು!

Mahesh Hegade ಹೇಳಿದರು...

Very good. If available, send the link to Prajavani. Looked in Metro Section. Did not find it. Keep it going.

sunaath ಹೇಳಿದರು...

ಅಭಿನಂದನೆಗಳು.

Subrahmanya ಹೇಳಿದರು...

ಓದಿ ನಲಿವಾಯ್ತು. ಇನ್ನೂ ಒಳ್ಳೇದಾಗ್ಲಿ. ಈ ಸಂಯುಕ್ತ ಕರ್ನಾಟಕದ ಎಡವಟ್ಟುಗಳು ಮುಗಿಯುವುದೇ ಇಲ್ಲವೇನೋ !.

ವಿ.ರಾ.ಹೆ. ಹೇಳಿದರು...

@Maheshanna,

http://www.prajavaniepaper.com/

Login.

Go to 'Archives'. (On right top)

Select Date: June 15th, edition 'common'.

Go to 'Metro' supplimentary. Page 3.

AntharangadaMaathugalu ಹೇಳಿದರು...

ಅಭಿನಂದನೆಗಳು ವಿಕಾಸ್.. ನಮ್ಮೂರ ಪ್ರತಿಭೆ ಮಿಂಚುತ್ತಿದೆ, ತುಂಬಾ ಸಂತೋಷದ ವಿಷಯ....

ಶ್ಯಾಮಲ

ಶ್ರೀನಿಧಿ.ಡಿ.ಎಸ್ ಹೇಳಿದರು...

:)

ತೇಜಸ್ವಿನಿ ಹೆಗಡೆ ಹೇಳಿದರು...

ಮೊದಲಿಗೆ ಅಭಿನಂದನೆಗಳು...:) ನಿಮ್ಮ ಐಸ್ ವೈನ್ ಪೋಸ್ಟ್ ಆದ ಮೇಲೆ ಬರೆದ ಉಳಿದ ಪೋಸ್ಟ್‌ಗಳ ಅಪ್‌ಡೇಟ್ ಸಿಕ್ಕಿರಲೇ ಇಲ್ಲ...!!! ಈಗ ಎಲ್ಲವನ್ನೂ ಒಟ್ಟಿಗೇ ಓದಿದೆ. ಬರವಣಿಗೆ ಮುಂದುವರಿಯಲಿ.

ಚುಕ್ಕಿಚಿತ್ತಾರ ಹೇಳಿದರು...

ಅಭಿನಂದನೆಗಳು..:)

Hamsanandi Haasana ಹೇಳಿದರು...

Nice!

ವಿ.ರಾ.ಹೆ. ಹೇಳಿದರು...

ಎಲ್ಲರಿಗೂ ಧನ್ಯವಾದಗಳು.

@ಸುಬ್ರಹ್ಮಣ್ಯ, ಹೌದು, ಸಂ.ಕ.ದಲ್ಲಿ ಆ ಬರಹ ಓದಿ ’ಬರಹ’ ತಂತ್ರಾಂಶ ಹುಡುಕಿ ಹೋದ ಇಬ್ಬರು ನನಗೆ ಇಮೇಲ್ ಮಾಡಿ ತೊಂದರೆ ಹೇಳಿಕೊಂಡಿದ್ದಾರೆ :)

Badarinath Palavalli ಹೇಳಿದರು...

ಸಾರ್, ನಿಮ್ಮ ಬ್ಲಾಗಿನ ಬಗ್ಗೆ ವಿ.ಕ.ದಲ್ಲಿ ಓದಿದ್ದೆ.

ಒಂದು ಒಳ್ಳೆಯ ಬ್ಲಾಗ್ ರೂಪಿಸಿದ್ದೀರ. ನಾನು ನಿಮ್ಮ ಬ್ಲಾಗಿನ ಅಂತರಂಗವನ್ನೆಲ್ಲ ಓದಲೇ ಬೇಕು.

ನನ್ನ ಅಜ್ಞಾತ ಬ್ಲಾಗಿಗೂ ಸ್ವಾಗತ.

Badarinath Palavalli ಹೇಳಿದರು...

ಸಾರ್, ನಿಮ್ಮ ಬ್ಲಾಗಿನ ಬಗ್ಗೆ ವಿ.ಕ.ದಲ್ಲಿ ಓದಿದ್ದೆ.

ಒಂದು ಒಳ್ಳೆಯ ಬ್ಲಾಗ್ ರೂಪಿಸಿದ್ದೀರ. ನಾನು ನಿಮ್ಮ ಬ್ಲಾಗಿನ ಅಂತರಂಗವನ್ನೆಲ್ಲ ಓದಲೇ ಬೇಕು.

ನನ್ನ ಅಜ್ಞಾತ ಬ್ಲಾಗಿಗೂ ಸ್ವಾಗತ.

Shrinidhi Hande ಹೇಳಿದರು...

ಅಭಿನಂದನೆಗಳು.

ಅನಾಮಧೇಯ ಹೇಳಿದರು...

ಅಭಿನ೦ದನೆಗಳು :)

ಮೊನ್ನೆ ಮೊನ್ನೆ ನನ್ನ ಬ್ಲಾಗ್ ಅನ್ನು ವಿ.ಕ ದವರು ಹಾಕಿದ್ದರು ಅ೦ತ ಗೆಳೆಯನೊಬ್ಬ ಹೇಳಿ ಗೊತ್ತಾಯಿತು :)