ಪುಟಗಳು

ಬುಧವಾರ, ಡಿಸೆಂಬರ್ 12, 2012

ಸಾಮಾಜಿಕ ತಾಣಗಳ ಗೀಳು

ಸೈಬರ್ ಲೋಕದಲ್ಲಿ ಇವತ್ತು ಸೋಶಿಯಲ್ ನೆಟ್ ವರ್ಕ್ ಗಳಲ್ಲಿ ವಿಹರಿಸದೇ ಇರುವವವರು ಅಪರೂಪ. ಫೇಸ್ ಬುಕ್, ಟ್ವಿಟ್ಟರ್, ಲಿಂಕೆಡಿನ್, ಗೂಗಲ್ ಪ್ಲಸ್ ಮುಂತಾದ ಸೋಶಿಯಲ್ ನೆಟ್ ವರ್ಕ್ ಗಳು ಒಂದು ಪರ್ಯಾಯ ಜಗತ್ತಿನಂತೆ ರೂಪುಗೊಂಡಿವೆ. ಕಂಪ್ಯೂಟರ್ ಮತ್ತು ಇಂಟರ್ನೆಟ್ ಎಟುಕಿಸಿಕೊಂಡಿರುವ ಬಹುತೇಕ ಜನ ಈ ಜಗತ್ತಿನ ಪ್ರಜೆಗಳು. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾದ ಮೇಲಂತೂ ಸೋಶಿಯಲ್ ನೆಟ್ ವರ್ಕ್ ಜಗತ್ತಿನಲ್ಲಿ ಚಟುವಟಿಕೆಗಳು ಬಹಳ ಹೆಚ್ಚಾಗಿ ಹೋಗಿವೆ. ತಮ್ಮ ಅನಿಸಿಕೆಗಳನ್ನು ಎಲ್ಲರಲ್ಲಿ ಹಂಚಿಕೊಳ್ಳುವ ಅವಕಾಶ, ಯಾರ ಹಂಗೂ ಇಲ್ಲದಂತೆ ಒದಗುವ ವೇದಿಕೆ, ತಕ್ಷಣಕ್ಕೇ ಸಿಗುವ ಮೆಚ್ಚುಗೆ, ಪ್ರತಿಕ್ರಿಯೆ, ಗೆಳೆಯರು, ವೃತ್ತಿಪರ ಸಂಪರ್ಕ, ಮಾಹಿತಿ ವಿಚಾರ ವಿನಿಮಯ, ಸಮಾನ ಮನಸ್ಕರು, ಆಸಕ್ತಿಯ ಗುಂಪುಗಳು, ಚರ್ಚೆ ಮುಂತಾದ ಹಲವು ಕಾರಣಗಳಿಂದ ಹೆಚ್ಚು ಹೆಚ್ಚು ಜನ ಇದರ ಆಕರ್ಷಣೆಗೊಳಗಾಗುತ್ತಿದ್ದಾರೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ಗೃಹಿಣಿಯರೂ ಸೇರಿದಂತೆ ಬಹಳ ಜನ ಈ ಸೋಶಿಯಲ್ ನೆಟ್ ವರ್ಕು ಗಳನ್ನು ಬಳಸುತ್ತಿದ್ದಾರೆ. ಹೊಸ ಹೊಸ ಗೆಳೆತನ, ಪ್ರೊಫೆಶನಲ್ ಸಂಪರ್ಕಗಳು, ವಿವಿಧ ಚಟುವಟಿಕೆಗಳು, ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಾಯವಾಗುತ್ತಿರುವ ಈ ಸಾಮಾಜಿಕ ತಾಣಗಳು ಮತ್ತೊಂದೆಡೆ ಸಂಬಂಧಗಳು ಹಾಳಾಗಲು, ಮೋಸ ವಂಚನೆಗಳಿಗೆ, ದ್ವೇಷ ಹರಡಲು, ಭಾವನೆಗಳನ್ನು ಕಲಕಲು ಕೂಡ ಕಾರಣವಾಗುತ್ತಿರುವು ಅಷ್ಟೇ ಸತ್ಯ.

ಜಗತ್ತಿನಲ್ಲಿ ಇವತ್ತು ವಿವಿಧ ಸೋಶಿಯಲ್ ನೆಟ್ ವರ್ಕ್ ಗಳಲ್ಲಿ ಕೋಟ್ಯಂತರ ಜನರ ಖಾತೆಗಳಿವೆ. ಮಾಹಿತಿಯ ಪ್ರಕಾರ ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನ ದಿನಾ ತಮ್ಮ ಖಾತೆಗಳಿಗೆ ಲಾಗಿನ್ ಆಗುತ್ತಾರೆಂದರೆ ಈ ತಾಣಗಳ ಸೆಳೆತವನ್ನು ಊಹಿಸಬಹುದು. ಸರ್ವೆಗಳ ವರದಿ ಪ್ರಕಾರ ಈ ತಾಣಗಳಲ್ಲಿ ಸಕ್ರಿಯರಾಗಿವವರು ದಿನವೂ ಒಂದು ಗಂಟೆಗಿಂತಲೂ ಹೆಚ್ಚು ಕಾಲ ಇದರಲ್ಲಿ ಕಳೆಯುತ್ತಾರೆ. ಇಡೀ ಜಗತ್ತಿನೆಲ್ಲೆಡೆ ತೆಗೆದುಕೊಂಡರೆ ಈ ಸಮಯದ ಮೊತ್ತ ದಿನಕ್ಕೆ ಲಕ್ಷಾಂತರ ಗಂಟೆಗಳು. ಇದನ್ನು ಸಮಯದ ಬಳಕೆ ಎನ್ನಬೇಕೋ ಅಥವಾ ಸಮಯದ ಪೋಲು ಎನ್ನಬೇಕೋ ಅನ್ನುವ ಗೊಂದಲ ಮೂಡಿಸುತ್ತದೆ. ಇದನ್ನು ಬಳಸುವವರಲ್ಲಿ ಹಲವರು ಬೆಳಗ್ಗೆ ನಿದ್ದೆಯಿಂದ ಎದ್ದು ಎಲ್ಲಾ ಕೆಲಸಗಳಿಗಿಂತ ಮೊದಲು ಈ ತಾಣಗಳನ್ನು ನೋಡುವ, ಮತ್ತೂ ಕೆಲವರು ರಾತ್ರಿ ಎಚ್ಚರವಾದಾಗಲೂ ಈ ತಾಣಗಳಲ್ಲಿ ಕಣ್ಣುಹಾಯಿಸುವ ಅಭ್ಯಾಸ ಹೊಂದಿದ್ದಾರೆ ಅನ್ನುವುದು ತಿಳಿದುಬಂದಿದೆ. ಒಟ್ಟಾರೆ ಇದನ್ನು ರಚನಾತ್ಮಕವಾಗಿ ಬಳಸಲು ವಿಫಲರಾಗುತ್ತಿರುವ ಹಲವರು ಇದರ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ನಿಜ ಜೀವನದಲ್ಲಿ ಒಂದು ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಸೋಶಿಯಲ್ ನೆಟ್ ವರ್ಕುಗಳಲ್ಲಿ ಬೇರೆ ರೀತಿಯಲ್ಲಿ ವರ್ತಿಸುವುದು, ವಿಭಿನ್ನ ಇಮೇಜ್ ರೂಪಿಸಿಕೊಳ್ಳುವುದು, ಅಗ್ರೆಸ್ಸಿವ್ ಮತ್ತು ಅಹಂಕಾರೀ ಮನೋಭಾವ, ಅಲ್ಲಿನ ಚಟುವಟಿಕೆಗಳನ್ನು ವೈಯಕ್ತಿಕ ಸಂಬಂಧಗಳಿಗೂ ಲಿಂಕ್ ಮಾಡುವುದು, ನೇರ ಸಂಪರ್ಕ ಸಾಧ್ಯವಿದ್ದವರ ಜೊತೆಗೂ ಕೂಡ ಈ ತಾಣಗಳಿಂದಲೇ ಸಂವಹಿಸುವುದು, ಇವುಗಳನ್ನೇ ತಮ್ಮ ಜಗತ್ತು ಎಂಬಂತೆ ಮುಳುಗಿರುವುದು ಮುಂತಾದ ವಿಚಿತ್ರ ವರ್ತನೆಗಳು ಕಂಡು ಬರುತ್ತಿವೆ. ಇದರಿಂದ ಅವರಿಗೇ ಗೊತ್ತಿಲ್ಲದಂತೆ ಅವರ ವೈಯಕ್ತಿಕ ಮತ್ತು ವೃತ್ತಿ ಜೀವನದ ಮೇಲೆ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮಗಳಾಗುತ್ತಿವೆ.

ನೀವು ಅಡಿಕ್ಟ್ ಆಗಿದ್ದೀರಾ?

ಹಾಗಿದ್ದರೆ ಈ ಸೋಶಿಯಲ್ ನೆಟ್ ವರ್ಕ್ ಗಳು ಅಷ್ಟು ತೊಂದರೆ ಮಾಡುತ್ತವಾ? ಅಥವಾ ಅದನ್ನು ಬಳಸುವುದರಲ್ಲಿ ತಪ್ಪು ಮಾಡುತ್ತಿದ್ದೇವಾ ಎಂಬ ಪ್ರಶ್ನೆ ಏಳುತ್ತದೆ. ಅದರಲ್ಲಿ ಯಾವುದೇ ವಿಶೇಷ ಕೆಲಸವಿಲ್ಲದಿದ್ದಾಗಲೂ ದಿನಕ್ಕೆ ಅರ್ಧದಿಂದ ಒಂದು ಗಂಟೆಗಿಂತಲೂ ಹೆಚ್ಚು ಕಾಲ ಕಳೆಯುವುದು, ಪದೇ ಪದೇ ಅವುಗಳನ್ನು ತೆಗೆದು ನೋಡುವ ತವಕ, ತಮ್ಮ ಎಲ್ಲಾ ಅನಿಸಿಕೆಗಳನ್ನು, ಭಾವನೆಗಳನ್ನು, ಚಟುವಟಿಕೆಗಳನ್ನು ಅದರಲ್ಲಿ ಬರೆದು ಹಾಕಿಕೊಳ್ಳುವುದು, ಜನರ ಜೊತೆ ಇದ್ದಾಗಲೂ ಸೋಶಿಯಲ್ ನೆಟ್ವರ್ಕುಗಳಲ್ಲಿ ಮುಳುಗಿರುವುದು, ಯಾರೊಂದಿಗೂ ಬೆರೆಯದೇ ಒಂಟಿತನ ಬಯಸಿ ಆ ತಾಣಗಳಲ್ಲಿ ಸಕ್ರಿಯನಾಗಿರುವುದು, ಇವುಗಳಿಗೇ ಹೆಚ್ಚಿನ ಸಮಯ ಮತ್ತು ಮಹತ್ವ ಕೊಟ್ಟು ದಿನದ ಇತರ ಕೆಲಸಗಳ ಬಗ್ಗೆ ಉದಾಸೀನತೆ ಹೊಂದಿರುವುದು ಮತ್ತು ಕೆಲಸಗಳನ್ನು ಮುಂದಕ್ಕೆ ಹಾಕುವುದು ಮುಂತಾದವುಗಳು ಒಬ್ಬ ವ್ಯಕ್ತಿ ಈ ಸೋಶಿಯಲ್ ತಾಣಗಳಿಗೆ ಅಡಿಕ್ಟ್ ಆಗಿರುವ ಲಕ್ಷಣಗಳನ್ನು ತೋರಿಸುತ್ತವೆ. ಬರೀ ಯುವಜನಾಂಗಕ್ಕೆ ಸೀಮಿತವಾಗಿರದೇ ಈ ವ್ಯಸನ ಮೂವತ್ತೈದು ವರ್ಷ ವಯಸ್ಸಿನ ನಂತರದ ವ್ಯಕ್ತಿಗಳಲ್ಲೂ ಹೆಚ್ಚಾಗುತ್ತಿರುವುದು ವಿಶೇಷ !

ಇದರಿಂದ ಹೊರಬರೋದು ಹೇಗೆ?

ಮೊದಲನೆಯದಾಗಿ, ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳಬೇಕು. ಎಷ್ಟು ಕಾಲ ಇದರಲ್ಲಿ ಕಳೆಯುತ್ತಿದ್ದೇನೆ? ಸುಮ್ಮನೇ ಟೈಂಪಾಸಿಗೆ ಮಾಡುತ್ತಿದ್ದೇನಾ ಅಥವಾ ಅಗತ್ಯವಿದ್ದು ಬಳಸುತ್ತಿದ್ದೇನಾ? ಎರಡನೆಯದಾಗಿ, ನಿಜಕ್ಕೂ ಈ ಚಟ ನಮ್ಮಲ್ಲಿದೆ ಅನ್ನಿಸಿದರೆ ಅದನ್ನು ಒಪ್ಪಿಕೊಳ್ಳಬೇಕು. ಮೂರನೆಯದಾಗಿ, ಇದರಿಂದ ಹೊರಬರುವ ದೃಢ ನಿರ್ಧಾರ ಮಾಡಬೇಕು.

೧. ದಿನನಿತ್ಯದ ಬದುಕಿನ ಎಲ್ಲಾ ಕೆಲಸಗಳಿಗೆ ಮೊದಲ ಆದ್ಯತೆ ಕೊಟ್ಟು ನಂತರ ಬಿಡುವಿನ ಸಮಯದಲ್ಲಷ್ಟೇ ಸೋಶಿಯಲ್ ನೆಟ್ ವರ್ಕ್ ಗಳನ್ನು ನೋಡುವ ನಿರ್ಧಾರ ಮಾಡಿಕೊಳ್ಳಿ. ದಿನದ ನಿರ್ದಿಷ್ಟ ಸಮಯದಲ್ಲಿ ಇಷ್ಟು ಹೊತ್ತು ಮಾತ್ರ ನೋಡುತ್ತೇನೆ ಎಂಬ ತೀರ್ಮಾನ ಇನ್ನೂ ಒಳ್ಳೆಯದು. ಆದರೆ ಅದು ಕೂಡ ಬಿಡುವಿನ ಸಮಯದಲ್ಲಿ ಮಾತ್ರ ಇರಲಿ.

೨. ಕಾಲೇಜಿನಲ್ಲಿ, ಕ್ಲಾಸ್ ರೂಮಿನಲ್ಲಿ, ಆಫೀಸಿನಲ್ಲಿ ಪದೇ ಪದೇ ಸೋಶಿಯಲ್ ನೆಟ್ ವರ್ಕು ಗಳನ್ನು ತೆಗೆದು ನೋಡುವ, ಅವುಗಳಲ್ಲಿ ತೊಡಗುವ ಅಭ್ಯಾಸ ಖಂಡಿತ ಒಳ್ಳೆಯದಲ್ಲ. ಇದು ಸಮಯವನ್ನು ಹಾಳುಮಾಡುವುದಲ್ಲದೇ, ನಿಮ್ಮ ಗಮನ, ಏಕಾಗ್ರತೆಯನ್ನು ಬೇರೆಡೆಗೆ ಸೆಳೆದು ಕೆಲಸದ ಸಾಮರ್ಥ್ಯವನ್ನೂ ಕುಗ್ಗಿಸುತ್ತವೆ. ಆದ್ದರಿಂದ ಈ ಅಭ್ಯಾಸಕ್ಕೆ ಬ್ರೇಕ್ ಹಾಕಿ.

೩. ನಿಮ್ಮ ಎಲ್ಲಾ ಚಟುವಟಿಕೆಗಳನ್ನು, ಊಟ ತಿಂಡಿಯಂತಹ ಸಾಮಾನ್ಯ ಸಂಗತಿಗಳನ್ನು, ಅಲ್ಲಿ ಇಲ್ಲಿ ತಿರುಗಾಡಿದ್ದನ್ನು, ಕಂಡಿದ್ದನ್ನು, ಮನಸಿಗೆ ಬರುವ ಪ್ರತಿಯೋಚನೆಯನ್ನು ಹಂಚಿಕೊಳ್ಳುತ್ತಿದ್ದರೆ ಅದು ಕಸದಬುಟ್ಟಿಯಂತಾಗುತ್ತದೆ. ಇದಕ್ಕೆ ಕಡಿವಾಣ ಹಾಕಿ. ದಿನಾ ಹತ್ತಾರು ಫೋಟೋಗಳನ್ನು ಹಾಕುವುದು, ಅದಕ್ಕೆ ಬರುವ ಮೆಚ್ಚುಗೆಗಳಿಂದ ಸಂಭ್ರಮಿಸುವುದು, ಪ್ರತಿಕ್ರಿಯೆಗೆ ಉತ್ತರಿಸುವುದು ಖುಶಿ ಕೊಟ್ಟಂತೆ ಅನ್ನಿಸಿದರೂ ಸಹ ಅವು ನಿಮ್ಮನ್ನು ಒಂದು ಮಾನಸಿಕ ಬೌಂಡರಿಯೊಳಗೆ ಬಂಧಿಸಿಬಿಡುತ್ತವೆ.

೪. ಸುಮ್ಮನೇ ಹೊತ್ತು ಕಳೆಯಲು ಸೋಶಿಯಲ್ ನೆಟ್ ವರ್ಕ್ ತಾಣಗಳಲ್ಲಿ ತೊಡಗಿಕೊಳ್ಳಬೇಡಿ. ಬದಲಾಗಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಔಟ್ ಡೋರ್ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಹೊರಹೋಗಿ ಜನರ ಜೊತೆ, ಗೆಳೆಯರ ಜೊತೆ ಬೆರೆಯಿರಿ. ಮನೆಯಲ್ಲಿದ್ದಾಗ ಕುಟುಂಬ ಸದಸ್ಯರೊಡನೆ ಮಾತಾಡಿ.

೫. ದೇಶದ ಎಲ್ಲಾ ಘಟನೆಗಳ ಬಗ್ಗೆ, ರಾಜಕೀಯ ವಿದ್ಯಮಾನಗಳ ಬಗ್ಗೆ ಪರಿಣಿತನಂತೆ ನಿಮ್ಮ ಅಭಿಪ್ರಾಯ ಹೇಳಲು ಹೋಗಬೇಡಿ. ಇದು ಜಾಸ್ತಿಯಾದರೆ ನಿಮ್ಮ ಅಭಿಪ್ರಾಯಗಳಿಗೆ ನಿಮ್ಮ ಮಿತ್ರರ ವಲಯದಲ್ಲೇ ಬೆಲೆ ಕಳೆದುಹೋಗುತ್ತದೆ. ಕ್ರಿಕೆಟ್, ಸಿನೆಮಾ ಮುಂತಾದವುಗಳ ಲೈವ್ ಕಾಮೆಂಟ್ರಿ ಕೊಡುವುದು ಇತರರಿಗೆ ಕಿರಿಕಿರಿಯುಂಟುಮಾಡುತ್ತದೆ.

೬. ಸಮಯ ಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆ ಇರಲಿ. ಧಾರ್ಮಿಕ, ಸಾಮಾಜಿಕ ಭಾವನೆಗಳನ್ನು ಕೆರಳಿಸುವ, ಇತರರಿಗೆ ನೋವುಂಟುಮಾಡುವ , ದ್ವೇಷ ಹರಡುವಂತಹ ಚಟುವಟಿಕೆಗಳನ್ನು ಮಾಡಬೇಡಿ. ಇಂತಹ ಚಟುವಟಿಕೆಗಳಿಂದ ಕಾನೂನಿನ ಪ್ರಕಾರವೂ ನೀವು ಅಪರಾಧಿಯಾಗಬಹುದು.

೭. ಹೆಚ್ಚು ಗುಂಪುಗಳಿಗೆ ಸೇರಿಕೊಳ್ಳಬೇಡಿ. ಅನಗತ್ಯ ಚರ್ಚೆಗಳಲ್ಲಿ ತೊಡಗಬೇಡಿ. ಚರ್ಚೆಗಳು ಸಮಯ ತಿನ್ನುವುದಲ್ಲದೇ ವೈಯಕ್ತಿಕ ಮಟ್ಟಕ್ಕೂ ಹೋಗಿ ವಿರಸ ಉಂಟುಮಾಡುವ ಸಾಧ್ಯತೆಗಳಿರುತ್ತವೆ.

೮. ಆನ್ ಲೈನ್ ಚಾಟಿಂಗ್ ಆಫ್ ಇಟ್ಟುಕೊಳ್ಳಿ. ಬೇಕಾದಾಗ ಮಾತ್ರ ಲಾಗಿನ್ ಆಗಿ. ಇದರಿಂದ ಸುಮ್ಮನೇ ಯಾರೋ ಪಿಂಗ್ ಮಾಡುವುದು, ಅದಕ್ಕೆ ಉತ್ತರಿಸುತ್ತಾ ಕೂತು ಕಾಲಕಳೆಯುವುದು ತಪ್ಪುತ್ತದೆ.

೯. ಈ ಸೋಶಿಯಲ್ ತಾಣಗಳಲ್ಲೇ ಹೆಚ್ಚು ಹೊತ್ತು ಕಳೆಯುವ, ದಿನವೂ ಹತ್ತಾರು ಸಂದೇಶ, ಚಿತ್ರಗಳನ್ನು ಹಾಕುವ, ಹಂಚಿಕೊಳ್ಳುವ ಜನರನ್ನು ನಿಮ್ಮ ಗೆಳೆಯರ ಪಟ್ಟಿಯಿಂದ ತೆಗೆದುಹಾಕಿ. ಇದು ನಿಮ್ಮ ಸಮಯ ಉಳಿಸಲು ಸಹಾಯವಾಗುತ್ತದೆ.

೧೦. ಬೇರೆ ಮುಖ್ಯ ಅಸೈನ್ ಮೆಂಟ್ ಗಳಿದ್ದಾಗ ಆ ಅವಧಿಯಲ್ಲಿ ನಿಮ್ಮ ಸಾಮಾಜಿಕ ತಾಣಗಳ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿಕೊಳ್ಳಿ.

೧೧. ಈ ಯಾವುದನ್ನೂ ಪಾಲಿಸಲೂ ಆಗುತ್ತಿಲ್ಲ ಎಂದಾಗ ಗಟ್ಟಿ ಮನಸ್ಸುಮಾಡಿ ನಿಮ್ಮ ಖಾತೆಯನ್ನು ಡಿಲೀಟ್ ಮಾಡಿಬಿಡಿ. ಮುಂದೆ ಮತ್ತೆ ಬೇಕೆನಿಸಿದಾಗ ಮತ್ತೆ ತೆರೆಯಬಹುದು. ನಿಮ್ಮವರೆಲ್ಲರೂ ಇದ್ದೇ ಇರುತ್ತಾರೆ.

ಒಟ್ಟಿನಲ್ಲಿ ಈ ಸಾಮಾಜಿಕ ತಾಣಗಳು ಒಂದು ಮಿಥ್ಯಾಜಗತ್ತು ಎಂಬ ಸ್ಪಷ್ಟ ಅರಿವು ನಿಮಗಿರಲಿ. ನಿಮ್ಮ ವ್ಯಕ್ತಿತ್ವವನ್ನು ಅರಳಿಸುವ ರೀತಿಯಲ್ಲಿ ಮತ್ತು ಜ್ಞಾನ ಹೆಚ್ಚಿಸುವ ರೀತಿಯಲ್ಲಿ ಬಳಸಿಕೊಳ್ಳಿ. ನಿಮ್ಮ ಸಮಯ ಅಮೂಲ್ಯ. ಯಾವುದೇ ಕಾರಣಕ್ಕೂ ಸೋಶಿಯಲ್ ನೆಟ್ ವರ್ಕ್ ಗಳು ವೈಯಕ್ತಿಕ ಬದುಕಿಗಿಂತ ಹೆಚ್ಚಾಗುವುದು ಬೇಡ.

***

ಈ ಬರಹ ನಾಲ್ಕುನೂರು ಪದಗಳ ಮಿತಿಯಲ್ಲಿ ೬ ಡಿಸೆಂಬರ್ ೨೦೧೨ ರ ವಿಜಯಕರ್ನಾಟಕ ಲವಲವಿಕೆ ಪುರವಣಿಯಲ್ಲಿ ಪ್ರಕಟವಾಗಿದ್ದು ಹೀಗೆ : ಲಗಾಮಿಲ್ಲದ ಸೈಬರ್ ಯಾನ

ಭಾನುವಾರ, ನವೆಂಬರ್ 11, 2012

ಪದ ತಂತ್ರಾಂಶ - Pada Software (Indic word processor & IME)

ಕಂಪ್ಯೂಟರಲ್ಲಿ ಕನ್ನಡದ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಂತರಜಾಲದಲ್ಲಿ ಸದ್ಯಕ್ಕೆ ಕನ್ನಡ ವೆಬ್ ಸೈಟುಗಳ ಸಂಖ್ಯೆ ಕಡಿಮೆ ಇದ್ದರೂ ಕೂಡ ಓದುಗರ ಸಂಖ್ಯೆ ಕಡಿಮೆ ಇಲ್ಲ. ಬಹಳಷ್ಟು ಜನ ಕಂಪ್ಯೂಟರ್ನಲ್ಲಿ ಕನ್ನಡದಲ್ಲಿ ಬರೆಯಲು ಬಯಸುತ್ತಿದ್ದಾರೆ. ಕೆಲವರು ಒತ್ತಕ್ಷರ, ದೀರ್ಘ, ಮಹಾಪ್ರಾಣ ಮುಂತಾದ ಟೈಪಿಂಗ್ ಸ್ವಲ್ಪ ಸಮಸ್ಯೆಯಾಗಿ ಹಿಂಜರಿಯುತ್ತಿದ್ದಾರೆ. ಆದರೂ ಕೂಡ ಉತ್ಸಾಹಿಗಳಿಗೇನೂ ಕಡಿಮೆ ಇಲ್ಲ. ಬಹಳ ಸುಲಭವಾಗಿ ನೇರವಾಗಿ ಎಲ್ಲಿ ಬೇಕಾದರೂ ಕನ್ನಡದಲ್ಲಿ ಬರೆಯಲು ಗೂಗಲ್, ಮೈಕ್ರೋಸಾಫ್ಟ್, ಪ್ರಮುಖ್ ಮುಂತಾದ ಹಲವು IME ಟೂಲ್ ಗಳಿವೆ.  ನುಡಿ, ಪದ, ಬರಹದ IME ಜೊತೆಗೆ ಪದ ಸಂಸ್ಕಾರಕಗಳೂ (Word Processors) ಇವೆ. ಆನ್ ಲೈನ್ ನಲ್ಲಿ ಬರೆಯಲು ಹಲವು ಟೂಲ್ ಗಳಿವೆ. ಸಾಮಾನ್ಯ ಬಳಕೆದಾರರಿಗೆ ಈಗ ಯಾವ ತಾಂತ್ರಿಕ ಸಮಸ್ಯೆ ಇಲ್ಲ. ಬೇಕಾಗಿರುವುದು ಸ್ವಲ್ಪ ಆಸಕ್ತಿ, ಅಭ್ಯಾಸ ಅಷ್ಟೆ.  ಈ ಮೊದಲು ವ್ಯಾಪಕವಾಗಿ ಬಳಕೆಯಲ್ಲಿದ್ದ 'ಬರಹ' ತಂತ್ರಾಂಶ ಆವೃತ್ತಿ ಹತ್ತರ ಬಳಿಕ ಉಚಿತವಾಗಿ ಲಭ್ಯವಿಲ್ಲ. ಅದರಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗಾಗಿ ಸಂಪನ್ಮೂಲ ಒಟ್ಟುಮಾಡಲು ಸದ್ಯಕ್ಕೆ ಬರಹ ತಂತ್ರಾಂಶಕ್ಕೆ ಶುಲ್ಕವಿಡಲಾಗಿದೆ ಎಂದು ಹೇಳಲಾಗಿದೆ. ಮತ್ತೊಂದು ಬಹುಬಳಕೆಯ 'ನುಡಿ' ತಂತ್ರಾಂಶದಲ್ಲಿ ಕೆಲವು ಸೌಲಭ್ಯಗಳಿಲ್ಲ. (ಕನ್ನಡ ಬರೆಯಲು ಇರುವ ಹಲವು ತಂತ್ರಾಂಶ ಹಾಗೂ ಟೂಲ್ ಗಳ ಬಗ್ಗೆ ಹಿಂದೊಮ್ಮೆ ಬರೆದಿದ್ದೆ.  ಅದು ಇಲ್ಲಿದೆ: Kannada Typing in Computers).


ಈ ಸಂದರ್ಭದಲ್ಲಿ 'ಪದ' ತಂತ್ರಾಂಶದ ಹೊಸ ಆವೃತ್ತಿ (Pada 4.0) ಬಿಡುಗಡೆಯಾಗಿದೆ. ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಬರೆಯಲು ಸಾಧ್ಯವಿರುವ ಈ ತಂತ್ರಾಂಶದಲ್ಲಿ ಮುಖ್ಯವಾಗಿ ಕನ್ನಡಕ್ಕೆ ಹಲವು ರೀತಿಯ ವಿಶೇಷ ಸೌಲಭ್ಯಗಳಿವೆ. ಸ್ಪೆಲ್ ಚೆಕರ್, ಪದ ಅರ್ಥ, ಆಟೋ ಕಂಪ್ಲೀಟ್ ಸೌಲಭ್ಯಗಳಿವೆ. ಮೊತ್ತಮೊದಲ ಬಾರಿಗೆ ಎರಡು ಲಕ್ಷಕ್ಕೂ ಹೆಚ್ಚು ಪದಗಳನ್ನುಳ್ಳ ನಿಘಂಟು ಕೂಡ ಇದರಲ್ಲಿದೆ. ಟೈಪಿಸಿದ ಕಡತಗಳನ್ನು ಹಲವು ರೀತಿಯಲ್ಲಿ ಉಳಿಸಲು(save as) ಅವಕಾಶವಿದೆ. ಹಲವು ಬಗೆಯ ಅಕ್ಷರ ಶೈಲಿಗಳಿವೆ (Font styles). ಪದ ತಂತ್ರಾಂಶ ಅಳವಡಿಸಿಕೊಂಡಾಗ ಅದರ ಜೊತೆ ಪದ IME ಕೂಡ ಇರುತ್ತದೆ. ಇದನ್ನು ಆನ್ ಮಾಡಿಕೊಂಡು ವರ್ಡ್, ಎಕ್ಸೆಲ್ ಮುಂತಾದ ಯಾವುದೇ ಅಪ್ಲಿಕೇಶನ್ ಗಳಲ್ಲಿ ಹಾಗೂ ಇಮೇಲ್, ಚಾಟ್, ಫೇಸ್ ಬುಕ್, ಬ್ಲಾಗ್ ಮುಂತಾದ ಯಾವುದೇ ಅಂತರಜಾಲ ತಾಣಗಳಲ್ಲಿ ನೇರವಾಗಿ ಕನ್ನಡದಲ್ಲಿ ಟೈಪಿಸಬಹುದು.  http://www.pada.pro ತಾಣದಲ್ಲಿ ಈ ತಂತ್ರಾಂಶ ಉಚಿತವಾಗಿ ದೊರೆಯುತ್ತದೆ.

ಇದರಲ್ಲಿರುವ ಸೌಲಭ್ಯಗಳು ಹೀಗಿವೆ.
 • ವಿಂಡೋಸ್ ಎಲ್ಲಾ ಆವೃತ್ತಿಗಳಲ್ಲೂ ಅಳವಡಿಸಿಕೊಳ್ಳಬಹುದು. (ಲಿನಕ್ಸ್ ಆವೃತ್ತಿ ಅಭಿವೃದ್ಧಿಗೊಳ್ಳುತ್ತಿದೆ)
 • ನಾಲ್ಕು ಬಗೆಯ ಕೀಬೋರ್ಡ್ ಆಯ್ಕೆ.
  •  ಅ) ಫೊನೆಟಿಕ್     ಬ) ಫೊನೆಟಿಕ್ ೨     ಕ) ನುಡಿ (ಕಗಪ)     ಡ) ಟ್ರಾನ್ಸ್ ಲಿಟೆರೇಶನ್
 • ಟೈಪಿಸುವಾಗ ಪದಗಳ ಸ್ವಯಂಪೂರ್ಣಗೊಳ್ಳುವಿಕೆ (Auto Complete).
 • ಕಡತಗಳನ್ನು plain text, rich text, HTML ರೀತಿಯಲ್ಲಿ ಉಳಿಸುವುದು ಮತ್ತು ಸಂಪಾದಿಸುವುದು.
 • ಪಿಡಿಎಫ್ ಕಡತದ ರಚನೆ. (Create PDF)
 • ಆನ್ ಲೈನ್ ವಿಕ್ಷನರಿಗೆ ಸಂಪರ್ಕ. (ಯಾವುದೇ ಪದದ ಮೇಲೆ ನೇರವಾಗಿ ರೈಟ್ ಕ್ಲಿಕ್ ಮಾಡಿ ವಿಕ್ಷನರಿಯಲ್ಲಿ ಅರ್ಥ ಹುಡುಕಬಹುದು)
 • ಪದಕೋಶ: ಎರಡು ಲಕ್ಷಕ್ಕೂ ಹೆಚ್ಚು ಪದಗಳಿರುವ ಆಫ್ ಲೈನ್ ನಿಘಂಟು.
 • ಹುಡುಕು ಮತ್ತು ಬದಲಿಸು (Find and Replace) ಸೌಲಭ್ಯ.
 • ಸ್ಪೆಲ್ ಚೆಕರ್ (Spell checker)
 • ಲಿಪಿ ಪರಿವರ್ತಕ (Script converter) - ಒಂದು ಭಾಷೆಯ ಲಿಪಿಯಿಂದ ಮತ್ತೊಂದಕ್ಕೆ ಪರಿವರ್ತನೆ ಹಾಗೂ ANSI ಇಂದ ಯುನಿಕೋಡ್ ಗೆ ಪರಿವರ್ತನೆ.
 • ಹಲವು ರೀತಿಯ ಅಕ್ಷರ ಶೈಲಿಗಳು (Font styles).
 • ಪದ IME : ಎಲ್ಲಿ ಬೇಕಾದರೂ ನೇರವಾಗಿ ಕನ್ನಡ ಟೈಪಿಸುವ ಎಂಜಿನ್.
 • ಅಕ್ಷರಗಳ ವಿವಿಧ ಗಾತ್ರ, ಬಣ್ಣ ಮತ್ತು ಹಿನ್ನೆಲೆಯ ಬಣ್ಣಗಳ ಸೌಲಭ್ಯ ಸೇರಿದಂತೆ ಇನ್ನೂ ಹಲವು formatting ಆಯ್ಕೆಗಳು.
ಪದ ತಂತ್ರಾಂಶದ ಇನ್ನೊಂದು ವಿಶೇಷವೆಂದರೆ ಬರಹ, ನುಡಿ ಮುಂತಾದ ತಂತ್ರಾಂಶಗಳಲ್ಲಿ ಉಳಿಸಿಟ್ಟಿರುವ ಯಾವುದೇ ಕಡತಗಳನ್ನು ನೇರವಾಗಿ ಇದರಲ್ಲಿ ತೆರೆಯಬಹುದು. ಅದು ಯುನಿಕೋಡ್ ಅಕ್ಷರಗಳಾಗಿ ತೆರೆದುಕೊಳ್ಳುತ್ತದೆ. ಮತ್ತೊಂದು ವಿಶೇಷವೆಂದರೆ ಪದ ತಂತ್ರಾಂಶದ ಮೂಲಕ ರಚಿಸಿದ ಪಿಡಿಎಫ್ ಕಡತಗಳಲ್ಲಿ ಯಾವುದೇ ಪದವನ್ನು ಕೂಡ ಹುಡುಕಬಹುದು (find) ಹಾಗೂ ಪಿಡಿಎಫ್ ಕಡತದಲ್ಲಿರುವ ಪಠ್ಯವನ್ನು ಕಾಪಿ ಮಾಡಿ ಬೇರೆಡೆಗೆ ಪೇಸ್ಟ್ ಮಾಡಬಹುದು. ಯಾವುದೇ ಫಾಂಟ್ ಸಮಸ್ಯೆ ಉಂಟಾಗುವುದಿಲ್ಲ.

ಪದ ತಂತ್ರಾಂಶದ zipped/portable version ಕೂಡ ಲಭ್ಯವಿದೆ.  ಬಹುತೇಕ ಆಫೀಸ್ ಮುಂತಾದ ಕಡೆ ಗಣಕದಲ್ಲಿ ಯಾವುದೇ ತಂತ್ರಾಂಶ ಅಳವಡಿಸಿಕೊಳ್ಳಲು admin rights ಅಥವಾ permission ಇರುವುದಿಲ್ಲ. ಅಂತಹ ಕಡೆ  ಈ zipped version ಇಟ್ಟುಕೊಂಡು ಕನ್ನಡದಲ್ಲಿ ಬರೆಯಬಹುದು. ಅಥವಾ ಒಂದು ಪೆನ್ ಡ್ರೈವ್ ನಲ್ಲಿ ಕಾಪಿ ಮಾಡಿಟ್ಟುಕೊಂಡು ಬೇಕಾದ ಕಂಪ್ಯೂಟರ್ ನಲ್ಲಿ ಹಾಕಿ ನೇರವಾಗಿ ಬಳಸಬಹುದು. ಕಂಪ್ಯೂಟರಿನಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.

ಇಷ್ಟೆಲ್ಲಾ ಸೌಲಭ್ಯಗಳ ತಂತ್ರಾಂಶ ರಚಿಸಿ ಉಚಿತವಾಗಿ ಬಳಕೆಗೆ ದೊರೆಯುವಂತೆ ಮಾಡಿರುವ ತಂತ್ರಾಂಶ ಅಭಿವೃದ್ಧಿಗಾರರಾದ ಲೋಹಿತ್ ಶಿವಮೂರ್ತಿಯವರಿಗೆ ಧನ್ಯವಾದಗಳು. 

ಡೌನ್ ಲೋಡ್ ಮಾಡಿಕೊಳ್ಳುವ ತಾಣ: http://www.pada.pro/download

ಶುಕ್ರವಾರ, ಅಕ್ಟೋಬರ್ 19, 2012

ಸಿಂಗಾರೆವ್ವ ಮತ್ತು ಅರಮನೆ

ನೋಡನೋಡುತ್ತಲೇ ಮತ್ತೆ ಒಂದೂವರೆ ತಿಂಗಳು ಕಳೆದು ಹೋಯಿತು. ಈ ನಡುವೆ ತಿರುಗಾಟಗಳು ಹೆಚ್ಚಾಗಿ ಬರೆಯಲು ಆಗಲಿಲ್ಲ ಅಂತ ನೆಪ ಹೇಳಬಹುದಾದರೂ ಸಮಯಕ್ಕೇನೂ ಕೊರತೆಯಂತೂ ಇಲ್ಲ.

****

ನನಗೆ ಇತ್ತೀಚಿನವರೆಗೂ ಚಂದ್ರಶೇಖರ ಕಂಬಾರರ ಕಾದಂಬರಿಗಳ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಅವರು ಹೆಚ್ಚಾಗಿ ನಾಟಕಗಳನ್ನು ಬರೆಯುತ್ತಾರೆ ಅಂದುಕೊಂಡಿದ್ದೆ. ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಮೇಲೆ ಹಲವು ಪತ್ರಿಕೆಗಳಲ್ಲಿ ಅವರ ಪರಿಚಯ ಮತ್ತು ಅವರ ಬರವಣಿಗೆಯ ವಿವರಗಳನ್ನು ಓದಿದ್ದೆ. ಆಮೇಲೆ ಅವರ ಹಲವು ಕಾದಂಬರಿಗಳ ಬಗ್ಗೆ ಗೊತ್ತಾಯ್ತು. ಅದರಲ್ಲಿ ಹೆಚ್ಚು ಕಂಡು ಬಂದ ಹೆಸರು 'ಸಿಂಗಾರೆವ್ವ ಮತ್ತು ಅರಮನೆ'. ಹಾಗಾಗಿ ಈ ಪುಸ್ತಕ ಕೊಂಡು ಓದೋಣವೆಂದು ಹುಡುಕಿದರೆ ಒಂದೇ ಸಲಕ್ಕೆ ಫ್ಲಿಪ್ ಕಾರ್ಟಲ್ಲೇ ಸಿಕ್ಕಿತು. ತರಿಸಿಕೊಂಡೆ.

ಮೊದಲನೆಯದಾಗಿ ಅದರಲ್ಲಿ ಕತೆಯ ನಿರೂಪಣೆಯ ತಂತ್ರವೇ ಚೆನ್ನಾಗಿದೆ. ಕಂಬಾರರು ಅಲ್ಲಿ ತಾವೇ ತಮ್ಮ ಊರಿಗೆ ಹೋಗಿ ಶೀನಿಂಗಿ ಎಂಬ ಮುದುಕಿಯಿಂದ ಕತೆ ಕೇಳುತ್ತಿರುವಂತೆ ನಿರೂಪಿಸಿರುವುದರಿಂದ ಇದು ನಿಜವಾಗಿ ನಡೆದದ್ದು ಎಂಬ ಭಾವನೆ ಮೂಡಿಸುತ್ತದೆ. ನಡುನಡುವೆ ಕತೆಗೆ ಪೂರಕ ಹಿನ್ನೆಲೆಗಳನ್ನು ಲೇಖಕರು ತಾವೇ ಕಂಡ ತಮ್ಮ ಊರಿನ ನೆನಪುಗಳು ಎಂಬಂತೆ ವಿವರಿಸುತ್ತಾ, ಓದುಗರನ್ನೇ ಉದ್ದೇಶಿಸಿ ಮಾತನಾಡುತ್ತಾ, ವಿರಾಮ ಕೊಡುತ್ತಾ ಮತ್ತೆ ಕತೆ ಮುಂದುವರೆಸುತ್ತಾರೆ. ಕಂಬಾರರು ಅದರಲ್ಲಿನ ಪಾತ್ರಗಳನ್ನು, ಊರುಗಳನ್ನು ಶೀನಿಂಗಿ ಮೂಲಕ ವಿವರಿಸಿದ ಪರಿ ಇಷ್ಟವಾಯಿತು. ಸಿಂಗಾರೆವ್ವ, ದೇಸಾಯಿ, ಗೌಡ, ಮರೆಪ್ಪ, ಶೆಟ್ಟಿ, ಹುಚ್ಚಯ್ಯ ಮುಂತಾದ ಪಾತ್ರಗಳೆಲ್ಲಾ ಶೀನಿಂಗಿ ವಿವರಿಸುತ್ತಾ ಹೋದಂತೆ ಮನಸ್ಸು ಅದನ್ನು ಕಲ್ಪಿಸಿಕೊಳ್ಳುತ್ತಾ ಹೋಗುತ್ತದೆ. ನಾನಿಲ್ಲಿ ಪುಸ್ತಕದ ಕತೆಯ ಬಗ್ಗೆ ಹೇಳಲು ಹೋಗುವುದಿಲ್ಲ. ದೇಸಗತಿ ಬಂಗಲೆಯ ದಿವಾಳಿತನದ, ಖಾಲಿತನದ ವರ್ಣನೆ, ಹುಣಸೆ ಮೆಳೆಯ ವಿವರಣೆ, ಅದರ ಭಯಾನಕತೆಯ ಹಿಂದಿನ ಆ ನಿಗೂಢ ಕತೆಗಳು, ತಿಕ್ಕಲುತನಗಳು, ಹಾದರಗಳು, ಭಕ್ತಿ, ಬಡತನ, ಬೆಳಗಾವಿ ಸೀಮೆಯ ಮಾತುಗಳು, ಬೈಗುಳಗಳು ಎಲ್ಲಾ ಸೇರಿ ಒಟ್ಟಾಗಿ ಒಂದು ಸಮಗ್ರ ಚಿತ್ರಣವನ್ನು ಮನಸ್ಸಿನಲ್ಲಿ ತಂದು ಅಷ್ಟೇ ಕುತೂಹಲದಿಂದ ಚೆನ್ನಾಗಿ ಓದಿಸಿಕೊಂಡ ಪುಸ್ತಕ. 

ಇದು ನಾಗಾಭರಣರಿಂದ ಸಿನೆಮಾ ಕೂಡ ಆಗಿದೆಯಂತೆ. ನೋಡಬೇಕು.

ಫ್ಲಿಪ್ ಕಾರ್ಟಲ್ಲಿ ಧ್ವನಿ ಪುಸ್ತಕವೂ ಸಿಗುತ್ತದೆ :  'ಸಿಂಗಾರೆವ್ವ ಮತ್ತು ಅರಮನೆ'

ಗುರುವಾರ, ಆಗಸ್ಟ್ 30, 2012

'ಬ್ಲಾಗಿಸು ಕನ್ನಡ ಡಿಂಡಿಮವ' ಪುಸ್ತಕ

ಬ್ಲಾಗುಗಳನ್ನು ಸಾಹಿತ್ಯವೆಂದು ಪರಿಗಣಿಸಲಾಗುವುದಿಲ್ಲ, ಅದು ಸಾಹಿತ್ಯವೇ ಅಲ್ಲ ಅನ್ನುವವರಿದ್ದಾರೆ. ಒಳ್ಳೇದು, ನನ್ನ ಪ್ರಕಾರ ಬರೆದದ್ದೆಲ್ಲಾ ಸಾಹಿತ್ಯವೇ ಆಗಿ ಪ್ರಕಟವಾಗಿ ಮಾಡಬೇಕಾದ್ದೂ ಏನಿಲ್ಲ, ಅಷ್ಟಕ್ಕೂ ಶುದ್ಧ ‘ಸಾಹಿತ್ಯ‘ ಅಂದರೇನು ಅಂತ ನನಗೆ ಇದುವರೆಗೂ ಸ್ಪಷ್ಟವಾಗಿಲ್ಲ.  ಬರೆದದ್ದು ‘ಬರಹ‘ ಆದರೆ ಸಾಕು. ಓದಿದ್ದು ಅರ್ಥವಾಗುವಂತಿದ್ದರೆ ಆಯಿತು, ಆ ಬರಹದಲ್ಲಿ ಓದಿಸಿಕೊಂಡು ಹೋಗುವ ಮತ್ತು ತಿಳಿಸಿಕೊಡುವ ಗುಣವಿದ್ದರೆ ಸಾಕು.

’ಬಾರಿಸು ಕನ್ನಡ ಡಿಂಡಿಮವ‘ ಅನ್ನುವ ಮಾತು ಕನ್ನಡಿಗರಿಗೆ ಚಿರಪರಿಚಿತ. ಅಂತರಜಾಲದಲ್ಲಿ ಬ್ಲಾಗುಗಳಲ್ಲಿ ಬರವಣಿಗೆ ಮಾಡುವವರು ಕನ್ನಡದಲ್ಲಿ 'ಬ್ಲಾಗಿಸಿ' ಕನ್ನಡ ಡಿಂಡಿಮ ಬಾರಿಸುತ್ತಿದ್ದಾರೆ. ಇದನ್ನು 'ಬ್ಲಾಗಿಸು ಕನ್ನಡ ಡಿಂಡಿಮ' ಅನ್ನಬಹುದು..  ಬರೆಯುವ ಆಸೆ ಇದೆ, ಆದರೆ ಕೈಯಲ್ಲಿರುವುದು ಪೆನ್ನು ಕಾಗದ ಅಲ್ಲ, ಎದುರಿಗಿರುವುದು ಕಂಪ್ಯೂಟರ್ರು, ಕೀಬೋರ್ಡು. ತಮ್ಮ ಅನುಭವಗಳನ್ನು, ತಾವು ಕಂಡ ಜೀವನ ಜಗತ್ತನ್ನು ಅಕ್ಷರಕ್ಕಿಳಿಸುವ ತುಡಿತ ಇದೆ, ಆದರೆ ಅವರು ಬರವಣಿಗೆಯ ವೃತ್ತಿಯವರಲ್ಲ. ಹೀಗೆ ಬ್ಲಾಗುಗಳಿಂದಲೇ ಬರವಣಿಗೆ ಆರಂಭಿಸಿದ ನಾಲ್ವರ ನಾಲ್ಕು ಪುಸ್ತಕಗಳು ಮೊನ್ನೆ ಶನಿವಾರ ಆಗಸ್ಟ್ ೨೫, ೨೦೧೨ರಂದು ಬಿಡುಗಡೆಯಾದವು. ಅದರ ಜೊತೆಗೇ ಮತ್ತೊಂದು ವಿಶಿಷ್ಟ ಪುಸ್ತಕ ಬಿಡುಗಡೆಯಾಯಿತು. ಈ ಪುಸ್ತಕದ ಹೆಸರು ‘ಬ್ಲಾಗಿಸು ಕನ್ನಡ ಡಿಂಡಿಮವ‘.  ಬ್ಲಾಗ್ ಬರಹಗಳು ಬಿಡಿಬಿಡಿಯಾಗಿ ಪತ್ರಿಕೆಗಳಲ್ಲಿ ಆಗೀಗ ಪ್ರಕಟವಾಗುತ್ತವೆ. ಆದರೆ ಈ ಬಾರಿ ಬೇರೆ ಬೇರೆಯವರು ಬರೆದ ಬ್ಲಾಗ್ ಬರಹಗಳನ್ನು ಸೇರಿಸಿ ಪುಸ್ತಕ ಮಾಡಿದ್ದಾರೆ. ಹಾಗಾಗಿ ಕನ್ನಡದ ಮಟ್ಟಿಗೆ ಇದು ಮೊದಲ ಪ್ರಯತ್ನವೇ ಇರಬೇಕು.’ದೇಸಿ ಪ್ರಕಾಶನ’ದವರು ೨೫ ಬ್ಲಾಗ್ ಬರಹಗಳ ಈ ಚಂದದ ಪುಸ್ತಕ ಪ್ರಕಟಿಸಿದ್ದಾರೆ. ಈ ಬರಹಗಳನ್ನು ಸೇರಿಸಿ ಸಂಪಾದಿಸಿ ಪುಸ್ತಕ ತಯಾರು ಮಾಡಿಕೊಟ್ಟವರು ಚೇತನಾ ತೀರ್ಥಹಳ್ಳಿ ಮತ್ತು ಸುಶ್ರುತ ದೊಡ್ಡೇರಿ.  ಎಷ್ಟೇ ಬ್ಲಾಗು ಬ್ಲಾಗು ಅಂದರೂ ಕಂಪ್ಯೂಟರ್ ನಲ್ಲಿ ಓದುವುದಕ್ಕಿಂತಲೂ ಮುದ್ರಣದಲ್ಲಿ, ಪುಸ್ತಕದಲ್ಲಿ ಓದುವಾಗಿನ ಅನುಭೂತಿಯೇ ಬೇರೆ ತರಹದ್ದು. ಕಂಪ್ಯೂಟರ್/ಗ್ಯಾಜೆಟ್ ಗಳಲ್ಲಿ ಓದುವ ಅಭ್ಯಾಸ ಇಲ್ಲದವರಿಗೂ ಈ ಪುಸ್ತಕದ ಮೂಲಕ ಬ್ಲಾಗ್ ಬರಹಗಳನ್ನು ಸವಿಯುವ ಅವಕಾಶ ಸಿಕ್ಕಿದೆ. ಪ್ರಕಾಶಕರಿಗೂ, ಸಂಪಾದಕರಿಗೂ ಧನ್ಯವಾದಗಳು.

ನೀವೂ ಓದಿನೋಡಿ.

ಮಂಗಳವಾರ, ಆಗಸ್ಟ್ 7, 2012

Food blogs

ಅಡುಗೆ ಒಂದು ಕಲೆ.  ಅದು ಅಭ್ಯಾಸ ಮತ್ತು ಅನುಭವದಿಂದ ಸಿದ್ಧಿಸುವಂತದ್ದು. ಈ ಕಲೆಯನ್ನು ಕಲಿಯಲು ಪ್ರಯತ್ನ ಪಡುತ್ತಲೇ ಸಾಧಾರಣ ಗೆಲುವು,  ಒಮ್ಮೊಮ್ಮೆ ದಯನೀಯ ಸೋಲು ಕಾಣುತ್ತಿರುವ ನಾನು ಆಗಾಗ ಒಂದಿಷ್ಟು ಅಡುಗೆ ಬ್ಲಾಗುಗಳನ್ನು refer ಮಾಡುತ್ತೇನೆ. ಅಡುಗೆಯ ನೂರಾರು ಬ್ಲಾಗುಗಳು/ತಾಣಗಳು ಇವೆ. ಆದರೆ ಸಾಮಾನ್ಯವಾಗಿ ನಾನು ದಿನನಿತ್ಯದ ಮನೆ ತಿನಿಸುಗಳು, ಹವ್ಯಕ/ಮಲೆನಾಡು ಅಡುಗೆಗಳು, ಕರ್ನಾಟಕದ ತಿನಿಸುಗಳು ಮತ್ತು ಸರಳವಾದ ಅಡುಗೆಗಳನ್ನು ಹುಡುಕುವುದರಿಂದ ಅಂತಹ ಹಲವು ಅಡುಗೆ ವಿಧಾನಗಳನ್ನು ಬರೆಯುವ ಬ್ಲಾಗುಗಳು/ಜಾಲತಾಣಗಳು ನನ್ನ ಸಂಗ್ರಹದಲ್ಲಿವೆ. ಎಲ್ಲಾ ಅಡುಗೆ ಮಾಡದಿದ್ದರೂ ಕೆಲವೊಂದಿಷ್ಟನ್ನು ಕುತೂಹಲಕ್ಕೆ ಮತ್ತು ಆಸಕ್ತಿಗೆ ಓದುತ್ತೇನೆ.  ಅವುಗಳದ್ದೊಂದು ಪಟ್ಟಿ ..ಹೀಗೇ ಸುಮ್ಮನೇ..

ರುಚಿರುಚಿಅಡುಗೆ
ಒಗ್ಗರಣೆ
ಟೇಸ್ಟ್ ಆಫ್ ಮೈಸೂರ್
ಹವ್ಯಕಪಾಕ
ಮನೆಯಶಕ್ತಿ
ನನ್ ಪ್ರಪಂಚ
ಪಾಕಚಂದ್ರಿಕೆ
ಸವಿರುಚಿ
ಅರ್ಚನಾಸ್ ಕಿಚನ್
ರುಚಿ
ಅಡುಗೆ ಸವಿರುಚಿ
ಗೆಳತಿಯರ ಪಾಕಶಾಲೆ
ನನ್ನಡುಗೆ

ಆಗಾಗ ಅಡುಗೆಗಳನ್ನು ಬರೆಯುವ ..
ಅರ್ಚನಾ ಹೆಬ್ಬಾರ್
ನೆನಪಿನ ಸಂಚಿಯಿಂದ... 
ತೆರದ ಮನಸಿನ ಪುಟಗಳು

ಗುರುವಾರ, ಜುಲೈ 26, 2012

ಅನಂತಪದ್ಮನಾಭ ಗುಡಿಯಲ್ಲಿ ನೀಲಿಶಲ್ಯಧಾರಿಗಳು


ನೀವು ಯಾವುದಾದರೂ ಮಿಲಿಟರಿ ಬೇಸ್ ಒಳಗೆ ಹೋಗಿದ್ದೀರಾ? ಅಲ್ಲಿನ ಭದ್ರತೆ ಹೇಗಿರುತ್ತೆ ಅಂತ ನೋಡಿದ್ದೀರಾ?  ನಾನಂತೂ ಹೋಗಿಲ್ಲ, ಬರೀ ಸಿನೆಮಾಗಳಲ್ಲಿ ನೋಡಿದ್ದಷ್ಟೇ. ಆದರೆ ಮಿಲಿಟರಿ ಬೇಸ್ ಎಂದರೆ ಹೀಗಿರಬಹುದು ಎಂದು ಅನ್ನಿಸಿದ್ದು ತಿರುವನಂತಪುರದ ಅನಂತಪದ್ಮನಾಭ ದೇವಸ್ಥಾನದಲ್ಲಿ! ಅಲ್ಲಿ ಅಂತಹ ಸಂಪತ್ತಿದೆ ಎಂದು ಗೊತ್ತಾದ ಮೇಲೆ ದೇವಸ್ಥಾನಕ್ಕೆ ಇದ್ದಕ್ಕಿದ್ದಂತೇ ಸ್ಟಾರ್ ವ್ಯಾಲ್ಯೂ ಬಂದು ಭೇಟಿ ಕೊಡುವವರ ಸಂಖ್ಯೆ ಬಹಳವಾಗಿದೆ.

ಬಹುಶಃ ಕೇರಳದ ಎಲ್ಲಾ ದೇವಾಲಯಗಳಲ್ಲೂ ಪ್ಯಾಂಟ್, ಅಂಗಿ, ಬನಿಯನ್ ಗೆ ಪ್ರವೇಶ ಇಲ್ಲ. ಪಂಚೆ ಉಟ್ಟುಕೊಂಡರೆ ಮಾತ್ರ ಗುಡಿ ಒಳಗೆ ಹೋಗಬಹುದು. ಇಲ್ಲೂ ಕೂಡ ಹಾಗೇ. ಅಂಗಿ ಪ್ಯಾಂಟು ತೆಗೆದಿಡಲು ಮತ್ತು ಪಂಚೆ ಬಾಡಿಗೆಗೆ ಪಡೆಯಲು (ಅಥವಾ ಖರೀದಿಗೆ) ಹೊರಗೆ ವ್ಯವಸ್ಥೆ ಇತ್ತು. ಪ್ರವೇಶ ದ್ವಾರದಲ್ಲಿ ತಪಾಸಣೆ.  ಮೈಮೇಲೆ ಪಂಚೆ ಶಲ್ಯ ಮಾತ್ರ ಇದ್ದರೂ ಅದನ್ನೇ ಎರಡೆರಡು ಬಾರಿ ತಡಕಾಡಿದರು. ಯಾವುದೇ ಚೀಲ, ಪರ್ಸ್, ಸೆಲ್ ಫೋನ್, ನೀರಿನ ಬಾಟಲಿ, ಏನನ್ನೂ ಬಿಡುವುದಿಲ್ಲ. ಆಮೇಲೆ ಮೆಟಲ್ ದಿಟೆಕ್ಟರ್. ಅದರಲ್ಲಿ ಹಾಯುವಾಗ ಅದು ಸದ್ದು ಮಾಡಿದರೆ ಪಕ್ಕಕ್ಕೆ ಕರೆದು ಮತ್ತೆ ತಪಾಸಣೆ. ಅಲ್ಲೂ ಪಾಸ್ ಆಗಿ ಮುಖ್ಯದ್ವಾರ ದಾಟಿ ಮುಂದೆ ನಡೆಯುತ್ತಿದ್ದಂತೇ ಅಲ್ಲೊಂದಿಷ್ಟು ಜನ ನಮ್ಮನ್ನೇ ನೋಡುತ್ತಿದ್ದರು. ಇವರ್ಯಾಕೆ ಹೀಗೆ ನೋಡುತ್ತಾರೆ ಅಂತ ಅರ್ಥಾಗಲಿಲ್ಲ. ಹತ್ತಿರಕ್ಕೆ ಕರೆದರು. ಆಗ ಗೊತ್ತಾಗಿದ್ದು ಅವರೂ ಕೂಡ ಪೋಲೀಸರು ಎಂದು! ಅವರ್ಯಾರೂ ಖಾಕಿಯಲ್ಲಿ ಇರಲಿಲ್ಲ. ದೇವಸ್ಥಾನದ ಭದ್ರತೆಗೆಂದೇ ಇರುವ ಪೋಲೀಸರಿಗೂ ಅಲ್ಲಿ ಪಂಚೆಯೇ ಸಮವಸ್ತ್ರ. ಹೆಗಲ ಮೇಲೆ ಹೊದೆಯಲು ಹಿಂಭಾಗದಲ್ಲಿ ’ಪೋಲೀಸ್’ ಎಂದು ಬರೆದಿರುವ ನೀಲಿ ಬಣ್ಣದ ಶಲ್ಯ. ಮತ್ತೊಮ್ಮೆ ತಪಾಸಣೆ ಮಾಡಿದರು. ಮುಂಭಾಗದ ಆವರಣದಲ್ಲೆಲ್ಲಾ ಆ ನೀಲಿಶಲ್ಯಧಾರಿಗಳು ತಿರುಗಾಡುತ್ತಿದ್ದರು. ಎಲ್ಲರದ್ದೂ ನೋಟ ದೇವಾಲಯದ ಒಳಗೆ ಬರುವ ಜನರೆಡೆಗೆ. ಅದೂ ಅಲ್ಲದೇ ಮತ್ತೆಷ್ಟು ಸಿಸಿಟಿವಿ ಕ್ಯಾಮೆರಾಗಳ ಕಣ್ಣು ನಮ್ಮ ಮೇಲಿತ್ತೋ ಗೊತ್ತಿಲ್ಲ.  ಆ ಕಡೆ ಹೋಗಿ ಎಂದು ಕೈತೋರಿಸಿದ ಮತ್ತೊಬ್ಬ ಪೋಲೀಸ್. ಅವರು ಹೇಳಿದ ಮೇಲೆ ಮುಗಿಯಿತು. ಆ ಕಡೆ ಹೋಗಬೇಕು. ಕ್ಯೂನಲ್ಲಿ ನಿಲ್ಲಬೇಕಿತ್ತು. ನಿಂತೆವು. ದೇವರ ದರ್ಶನದ ಬಾಗಿಲು ತೆರೆಯಲು ಇನ್ನೂ ೨೦ ನಿಮಿಷ ಇತ್ತು.  ಸುಮ್ಮನೇ ಹಾಗೇ ಗಮನಿಸಿದೆ. ಅಷ್ಟು ದೂರದತನಕ ಇರುವ ದೇವಾಲಯದ ಪಡಸಾಲೆಯಲ್ಲಿ ನೀಲಿಶಲ್ಯ ಹೊದ್ದುಕೊಂಡ ಅನೇಕ ಪೋಲೀಸರು ತಿರುಗಾಡುತ್ತಲೇ ಇದ್ದರು. ಆಯಕಟ್ಟಿನ ಜಾಗಗಳಲ್ಲಿ ನಿಂತ ಪೋಲಿಸರು ಗನ್ ಹಿಡಿದಿದ್ದರು. ಪ್ರತಿಯೊಬ್ಬನ ಮೇಲೂ ಅವರ ಹದ್ದಿನ ಕಣ್ಣು. ಯಾವುದೇ ಕ್ಷಣದಲ್ಲಿ ಯಾರನ್ನು ಬೇಕಾದರೂ ಅಲ್ಲೇ ನಿಲ್ಲಿಸಿ ತಡವುತ್ತಿದ್ದರು. ಅಲ್ಲಿನ ವಾತಾವರಣವೇ ಒಂಥರಾ ಅನ್ನಿಸತೊಡಗಿತ್ತು. ಜನರಲ್ಲಿ ಶಿಸ್ತು ತಾನುತಾನಾಗೇ ಬಂದಿತ್ತು.

ಸಾಲು ಕರಗಲು ಶುರುವಾಯಿತು. ಗರ್ಭಗುಡಿಯ ಕಡೆಗೆ ನಡೆದೆವು. ಅಲ್ಲಿನ ದೊಡ್ಡ ಗರ್ಭಗುಡಿಗೆ ಮೂರುಬಾಗಿಲು. ಒಳಗೆ ಪದ್ಮನಾಭಸ್ವಾಮಿ ಮಲಗಿದ್ದಾನೆ. ಒಂದು ಬಾಗಿಲಲ್ಲಿ ಅವನ ಪಾದಗಳ ದರ್ಶನ, ಮಧ್ಯದ ಬಾಗಿಲಲ್ಲಿ ಪದ್ಮ-ನಾಭಿ, ಮೂರನೆಯ ಬಾಗಿಲಲ್ಲಿ ಮುಖ. ಒಳಗೆ ಕತ್ತಲಿದ್ದುದರಿಂದ ನನಗೆ ಏನೂ ಸರಿಯಾಗಿ ಕಾಣಲಿಲ್ಲ. ಗರ್ಭಗುಡಿಯ ಸುತ್ತಲಲ್ಲೇ ಇರುವ ಕೆಲ ಕೊಠಡಿಗಳಿಗೆ ದೊಡ್ಡ ಬೀಗ ಹಾಕಲ್ಪಟ್ಟು ಸೀಲ್ ಮಾಡಲಾಗಿತ್ತು. ಅಲ್ಲಿಂದಲೇ ಸಂಪತ್ತು ಇರುವ ನೆಲಮಾಳಿಗೆಗೆ ಪ್ರವೇಶ ಇರುವುದು ಎಂದು ಅರ್ಥಮಾಡಿಕೊಂಡೆವು. ಜನರು ಆ ಕೋಣೆಗಳನ್ನು ನೋಡಲೂ ಹಿಂಜರಿಯುವಂತೆ ಗರ್ಭಗುಡಿಯ ಸುತ್ತಲೂ ಪೋಲೀಸ್ ಪಡೆ ಓಡಾಡುತ್ತಲೇ ಇತ್ತು. ಕೈಮುಗಿದು ನಿಂತವರ, ಉದ್ದಂಡ ಬಿದ್ದವರ, ಪ್ರದಕ್ಷಿಣೆ ಹಾಕುವವರ, ಓಡಾಡುವವರ, ಎಲ್ಲರ ಚಲನವಲನಗಳನ್ನು ಅವರ ಕಣ್ಣುಗಳು ಗಮನಿಸುತ್ತಲೇ ಇದ್ದವು. ಜೋರಾಗಿ ಮಾತಾಡುವಂತಿಲ್ಲ, ಎಲ್ಲೂ ಕೂರುವಂತಿಲ್ಲ. ಸಾಲು ತಪ್ಪಿಸುವಂತಿಲ್ಲ. ಗರ್ಭಗುಡಿಯ ಆವರಣದಿಂದ ಹೊರಗೆ ಬಂದು ತಲೆಕೊಡವಿಕೊಂಡು ನೋಡಿದರೆ ವಿಶಾಲ ಪ್ರಾಂಗಣ. ಎಕರೆಗಿಂತಲೂ ಹೆಚ್ಚಿನ ಜಾಗದಲ್ಲಿರುವ ದೇವಾಲಯದಲ್ಲಿ ಕಲ್ಲಿನ ಕಂಬಗಳು, ಛಾವಣಿ, ಅವುಗಳಲ್ಲಿ ಕಲೆ ಚಿತ್ತಾರ... ಮತ್ತು ಎಲ್ಲೆಲ್ಲೂ ಪಂಚೆ, ನೀಲಿಶಲ್ಯಧಾರೀ ಪೋಲೀಸರು.

ಅಲ್ಲಿಂದ ಹೊರಬಂದಾಗ ಮಿಲಿಟರಿ ಬೇಸ್ ಒಂದನ್ನು ಹೊಕ್ಕು ಬಂದ ಅನುಭವ.

*******

ಅನಂತಪದ್ಮನಾಭಸ್ವಾಮಿ ದೇವಾಲಯದ ಬಗ್ಗೆ ಮಾಹಿತಿಗೆ:
http://en.wikipedia.org/wiki/Padmanabhaswamy_Temple
http://www.sree-padmanabhaswamy.com/

ಶನಿವಾರ, ಜೂನ್ 30, 2012

ಪತ್ರಿಕೆಗಳಲ್ಲಿ ಬ್ಲಾಗುಗಳು ಮತ್ತು ನನ್ನ ಬ್ಲಾಗು

ನೆನಪಿದೆ. ಅವತ್ತು ಆಗಸ್ಟ್ ೧೭, ೨೦೦೮. ಭಾನುವಾರ ಬೆಳಗ್ಗೆ ಏಳೂವರೆ. ಭದ್ರಾವತಿಯಿಂದ  ಹೊರನಾಡಿಗೆ ಹೊರಟಿದ್ದ ನಾನು ನರಸಿಂಹರಾಜಪುರ ಬಸ್ಟ್ಯಾಂಡ್ ಹೋಟೆಲಿನಲ್ಲಿ ತಿಂಡಿ ಮುಗಿಸಿ ಹೊರಬರುತ್ತಿದ್ದೆ. ಫೋನಿಗೆ ಸಂದೇಶವೊಂದು ಬಂದಿತ್ತು. ಗೆಳೆಯ ವಿಜಿ ಸಂದೇಶ ಕಳಿಸಿದ್ದ. ತೆಗೆದು ನೋಡಿದರೆ, "ಇವತ್ತಿನ ಕನ್ನಡ ಪ್ರಭ ಪತ್ರಿಕೆಯಲ್ಲಿ ನಿನ್ನ ಬ್ಲಾಗ್ ಬಗ್ಗೆ ಬಂದಿದೆ ನೋಡು" ಅಂತ ಇತ್ತು. ಏನು ಬರೆದಿದ್ದಾರೆ ನೋಡೋಣ ಅಂತ ಅಲ್ಲೇ ಹೋಗಿ ಪತ್ರಿಕೆ ಕೊಂಡುಕೊಂಡಿದ್ದೆ. ಸಾಪ್ತಾಹಿಕ ಪ್ರಭದ ’ಬ್ಲಾಗ್ ಬುಟ್ಟಿ’ಯಲ್ಲಿ ನನ್ನ ಈ ಬ್ಲಾಗ್ ಬಗ್ಗೆ ಒಂದು ಚಿಕ್ಕ ಪರಿಚಯ ಬರೆದು ಆಗ ಬರೆದಿದ್ದ ’ಎಲೆಶೆಟ್ಟಿ’ ಎನ್ನುವ ಬರಹವೊಂದನ್ನು ಪೂರ್ತಿ ಪ್ರಕಟಿಸಿದ್ದರು.

ಬಹುಶಃ ಈ ರೀತಿ ಬ್ಲಾಗ್ ಗಳನ್ನು ಪರಿಚಯ ಮಾಡಿಕೊಡುವ ಕೆಲಸವನ್ನು ಮೊದಲು ಮಾಡಿದ್ದು ’ಕನ್ನಡ ಪ್ರಭ’ ಪತ್ರಿಕೆಯೇ ಇರಬೇಕು. ಆಮೇಲೆ ’ಹೊಸದಿಗಂತ’ ಪತ್ರಿಕೆ ಕೂಡ ಪ್ರತಿವಾರ ’ಜೇಡರಬಲೆ’ಯಲ್ಲಿ ಒಂದೊಂದು ಬ್ಲಾಗ್ ಗಳನ್ನು ಪರಿಚಯ ಮಾಡಿಕೊಡುತ್ತಿತ್ತು. ಅನಂತರದ ದಿನಗಳಲ್ಲಿ ವಿಜಯ ಕರ್ನಾಟಕವು ’ವೆಬ್ಬಾಗಿಲು’ ಎಂಬ ಹೆಸರಿನ ಅಂಕಣದಲ್ಲಿ ಬ್ಲಾಗುಗಳ ಬಗ್ಗೆ ಬರೆಯಿತು. ಈಗ ವಿ..ದಲ್ಲಿ ಬ್ಲಾಗ್ ಗಳ ಬಗ್ಗೆ ’ಬ್ಲಾಗಿಲು’ಎಂಬ ಅಂಕಣ ಬರುತ್ತಿದೆ.


ಮೊನ್ನೆ ಜೂನ್ ಹದಿನೈದು, ಪ್ರಜಾವಾಣಿಯು ಮೆಟ್ರೋ ಪುರವಣಿಯ 'ಬ್ಲಾಗಿಲನು ತೆರೆದು' ಅಂಕಣದಲ್ಲಿ ನನ್ನ ಬ್ಲಾಗ್ ಬಗ್ಗೆ ಬರೆದಿದೆ. ಪ್ರತಿ ಶುಕ್ರವಾರ ಅದರಲ್ಲಿ ಒಂದೊಂದು ಬ್ಲಾಗ್ ಪರಿಚಯ ಮಾಡಿಕೊಟ್ಟು ಆಯ್ದ ಬರಹವೊಂದನ್ನು ಪ್ರಕಟಿಸುತ್ತಾರೆ. ನನ್ನ ಬ್ಲಾಗ್ ಬಗ್ಗೆ ಬಂದಿದ್ದು ಗೊತ್ತಿರಲಿಲ್ಲ. ಅವತ್ತು ರಾತ್ರಿ ಗೆಳೆಯ ಪ್ರಭುಪ್ರಸಾದ ಈ ಬಗ್ಗೆ ಹೇಳಿದಾಗಲೇ ಗೊತ್ತಾಗಿದ್ದುನನಗೇ ಆಶ್ಚರ್ಯವಾಗುವಂತೆ ಮುದ್ದಾಗಿ ಪರಿಚಯ ಬರೆದು, ಒಂದೆರಡು screen shotಗಳನ್ನೂ ಹಾಕಿ, ಆ ಹಿಂದಿನ ದಿನವಷ್ಟೇ ಬರೆದು ಹಾಕಿದ್ದ ಪುಟ್ಟ ಬರಹವನ್ನೂ ಪ್ರಕಟಿಸಿದ್ದರು. ಅವರಿಗೆ ಧನ್ಯವಾದಗಳು

ಇತ್ತೀಚೆಗೆ ’ಸಂಯುಕ್ತ ಕರ್ನಾಟಕ’ವೂ ಕೂಡ 'ಬ್ಲಾಗ್ ಲೋಕ'ದಲ್ಲಿ ಬ್ಲಾಗ್ ಗಳನ್ನು ಪರಿಚಯಿಸುತ್ತಿದೆ. ಈ ನಡುವೆ ಅದೇ ಜೂನ್ ಹದಿನಾಲ್ಕರಂದು ’ಸಂಯುಕ್ತ ಕರ್ನಾಟಕ’ ಪತ್ರಿಕೆ ನನ್ನ 'ಕನ್ನಡ ಟೈಪಿಂಗ್' ಬರಹವನ್ನು ಪ್ರಕಟಿಸಿತ್ತು. ಕಂಪ್ಯೂಟರ್ ನಲ್ಲಿ ಕನ್ನಡದಲ್ಲಿ ಬರೆಯಲು ಏನೇನು ಸೌಲಭ್ಯಗಳಿವೆ ಎಂಬುದರ ಬಗ್ಗೆ  ಆ ಬರಹ. ಯಥಾಪ್ರಕಾರ ನನಗೆ ಅದು ಪ್ರಕಟವಾಗಿದ್ದು ಗೊತ್ತಿರಲಿಲ್ಲ. ಅವತ್ತು ರಾತ್ರಿ ವಿಜಯಕ್ಕ ಫೇಸ್ ಬುಕ್ಕಿನಲ್ಲಿ ಸಂದೇಶ ಕಳುಹಿಸಿ ಅದರ ಕೊಂಡಿ ಕೊಟ್ಟಾಗಲೇ ಗೊತ್ತಾಗಿದ್ದು. ಆದರೆ ಸಂಯುಕ್ತ ಕರ್ನಾಟಕ ಮಾಡಿದ್ದು ಬ್ಲಾಗ್ ಪರಿಚಯ ಅಲ್ಲ. ಅನಾಮತ್ತು ಆ ಬರಹದ ಕಾಪಿ ಪೇಸ್ಟು.! ಭಾಗ ೧, ೨ ಎಂದು ಎರಡು ದಿನ ಬಂದ ಆ ಬರಹದ ಕೊನೆಯಲ್ಲಿ ನನ್ನ ಹೆಸರು, ಇ ಮೇಲ್ ಐಡಿ, ಬ್ಲಾಗ್ ಲಿಂಕ್ ಎಲ್ಲಾ ಪ್ರಕಟಿಸಿದ್ದರು. ಆದರೆ ಅದೇ ನನ್ನ ಇ-ಮೇಲ್ ಐಡಿಗೆ ಅವರು ಒಂದು ಸಂದೇಶ ಕಳಿಸಿ ಹೀಗೆ ಪ್ರಕಟಿಸುತ್ತೇವೆ ಅಂತ ಮೊದಲೇ ಹೇಳಿದ್ದರೆ ಆ ಬರಹವನ್ನು ಖುಷಿಯಿಂದ ಇನ್ನೂ ಚೆನ್ನಾಗಿ ಅಪ್ ಡೇಟ್ ಮಾಡಿ ಬರೆದುಕೊಡುತ್ತಿದ್ದೆ. ಏಕೆಂದರೆ ಆ ಬರಹ ಒಂದು ವರ್ಷದ ಹಿಂದೆ purely ಒಂದು ಅಂತರಜಾಲ ಬರಹವಾಗಿ ಬರೆದಿದ್ದು. ಅಂದರೆ ಅದರಲ್ಲಿ ಹಲವು ಕೊಂಡಿ(page links)ಗಳಿವೆ ಮತ್ತು ಅನೇಕ ಕೊಂಡಿಗಳು ಕರೆದುಕೊಂಡು ಹೋಗುವ ಜಾಗದಲ್ಲಿ ಈಗ ಏನೂ ಇಲ್ಲ. ಉದಾಹರಣೆಗೆ ’ಬರಹ’ ತಂತ್ರಾಂಶ ಈಗ ಉಚಿತವಲ್ಲ, ’ನುಡಿ’ ತಂತ್ರಾಂಶಕ್ಕೆ ಕನ್ನಡ ಗಣಕ ಪರಿಷತ್ತಿನ ಮಿಂಬಲೆ ತಾಣವೇ ಇಲ್ಲ. ’ಪದ’ ತಂತ್ರಾಂಶದ ವೆಬ್ ಸೈಟ್ expire ಆಗಿಹೋಗಿದೆ. ಕೆಲವು ಹಳೇ ತಾಣಗಳು ಕೆಲಸ ಮಾಡುತ್ತಿಲ್ಲ. ಕೆಲವು ಬದಲಾವಣೆಯಾಗಿವೆ. ಹೊಸದು ಬಂದಿದೆ. ಆದ್ದರಿಂದ ಇಂತಹ ಬರಹವನ್ನು ಈಗ ಪ್ರಕಟಿಸಿದರೆ ಅದನ್ನು ಓದಿ ಅದರ ಕೊಂಡಿ ಹಿಡಿದು ಹೋಗುವ ಆಸಕ್ತಿಯುಳ್ಳ ಓದುಗರು ನಿರಾಶರಾಗಬೇಕಾಗುತ್ತದೆ. ಪತ್ರಿಕೆಯಲ್ಲಿ ಹಾಕುವಾಗ ಅವರು ಇಂತಹುದರ ಬಗ್ಗೆ ಎಚ್ಚರವಹಿಸಿಬೇಕಾಗಿತ್ತು.

***

ಮೊದಲೆಲ್ಲಾ ಬ್ಲಾಗ್ ಗಳ ಸಂಖ್ಯೆ ಕಡಿಮೆ ಇತ್ತು. ಐದಾರು ವರ್ಷಗಳ ಹಿಂದೆ ಕನ್ನಡ ಬ್ಲಾಗುಗಳನ್ನು ಬರೆಯಲು ಆರಂಭಿಸಿದ ನಾವೆಲ್ಲಾ ಹೆಚ್ಚುಕಡಿಮೆ ಒಂದೇ ವಾರಗೆಯವರಿದ್ದೆವು. ಸುಮಾರಾಗಿ ಬ್ಲಾಗಿಗರ ಪರಿಚಯ ಕೂಡ ಇರುತ್ತಿತ್ತು. ಯಾವುದ್ಯಾವುದೋ ಸಂದರ್ಭಗಳಲ್ಲಿ ಭೇಟಿ ಕೂಡ ಆಗುತ್ತಿದ್ದೆವು. ಬ್ಲಾಗ್ ಗಳ ಬಗ್ಗೆ ಮಾತಾಡುತ್ತಿದ್ದೆವು. ಮಾಹಿತಿ ಹಂಚಿಕೊಳ್ಳುತ್ತಿದ್ದೆವು. ಆಗ ಇದ್ದ ಬ್ಲಾಗುಗಳಲ್ಲಿ ಬಹುತೇಕ ಎಲ್ಲವೂ ಗೊತ್ತಿರುತ್ತಿತ್ತು. ಹಲವು ಹಳಬರ ಬ್ಲಾಗ್ ಕೊಂಡಿಗಳು ಇನ್ನೂ ನೆನಪಿನಲ್ಲೇ ಇವೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಬ್ಲಾಗ್ ಲೋಕ ಬಹಳ ಬೆಳೆದಿದೆ. ಸಾವಿರಾರು ಬ್ಲಾಗ್ ಗಳಿವೆ. ಎಷ್ಟೋ ಚಂದಚಂದದ ಬ್ಲಾಗುಗಳು ಗೊತ್ತೇ ಇರುವುದಿಲ್ಲ. ಪತ್ರಿಕೆಗಳು ಹೀಗೆ ಪರಿಚಯ ಮಾಡಿಕೊಡುತ್ತಿರುವುದರಿಂದಲೇ ಹಲವಾರು ಬ್ಲಾಗ್ ಗಳು ಗೊತ್ತಾಗುತ್ತಿವೆ, ಓದಲು ಸಿಗುತ್ತಿವೆ.. ಬರೆಯುವವರಿಗೆ ಪ್ರೋತ್ಸಾಹವೂ ಸಿಗುತ್ತಿದೆ. ನನ್ನ ಗೂಗಲ್ ರೀಡರ್ ಅಂತೂ ತುಂಬಿ ತುಳುಕುತ್ತಿದೆ. ಪತ್ರಿಕೆಗಳಿಗೆ ಕೃತಜ್ಞತೆಗಳು.

ಬುಧವಾರ, ಜೂನ್ 13, 2012

ತಿರುಗಿ ಕೆಟ್ಟರೂ ಪರವಾಗಿಲ್ಲ....

ಹಿಂದಿನ ವರ್ಷ ಕೆನಡಾದಲ್ಲಿ ತಣ್ಣಗೆ ಕುಳಿತು ನೆಟ್ ಚಾಟ್ ಮಾಡುತ್ತಿದ್ದಾಗ ಗೆಳತಿಯೊಬ್ಬಳು "ಅಲಾಸ್ಕಾಗೆ ಹೋಗಿ ಬಂದ್ಯಾ?" ಅಂತ ಕೇಳಿದ್ದಳು. ಭೂಮಿ ಮೇಲಿನ ಸುಂದರ ಪ್ರದೇಶಗಳಲ್ಲಿ 'ಅಲಾಸ್ಕಾ' ಕೂಡ ಒಂದು ಅಂತ ಹೇಳುತ್ತಾರೆ.  ಕೆನಡಾ ದೇಶದ ಗಡಿಗೆ ತಾಗಿಕೊಂಡಿದ್ದರೂ ಕೂಡ ನಾನಿದ್ದ ಊರಿನಿಂದ ಅದು ಬಹಳ ದೂರ ಇತ್ತು.  ಜೊತೆಗೆ ಅದು ಯು.ಎಸ್.ಎ. ದೇಶಕ್ಕೆ ಸೇರುವ ಪ್ರದೇಶ.  ನನಗೆ ಯು.ಎಸ್. ವೀಸಾ ಕೂಡ ಇರಲಿಲ್ಲ. ಇದ್ದರೂ ಬಹಳ ಸಮಯ ಮತ್ತು ಹಣ ಖರ್ಚಾಗುತ್ತಿದ್ದುದರಿಂದ ಅಲಾಸ್ಕಾಗೆ ಹೋಗಿಬರಲು ಆಗುತ್ತಿರಲೂ ಇಲ್ಲ. ಅದನ್ನೇ ಆವಳಿಗೆ ಹೇಳಿದರೆ ಅವಳು ಅಷ್ಟು ದೂರ ಹೋಗಿ ಅಲಾಸ್ಕಾಗೆ ಹೋಗಲಿಲ್ಲ ಅಂದಮೇಲೆ ನೀನು ಅಲ್ಲಿಗೆ ಹೋಗಿದ್ದೇ ವೇಸ್ಟ್ ಅಂದಳು.  ನಾನೂ ಸುಮ್ಮನಿರದೇ, "ನೀನು ಕಾಶ್ಮೀರಕ್ಕೆ ಹೋಗಿದ್ದೀಯಾ?" ಅಂತ ಕೇಳಿದೆ. ಅವಳು ಇಲ್ಲ ಅಂದಳು. ಹಾಗಿದ್ದಮೇಲೆ ನೀನು ಇಪ್ಪತ್ತೈದು ವರ್ಷದಿಂದ ಭಾರತದಲ್ಲಿ ಇರುವುದೇ ವೇಸ್ಟ್ ಅಂದು ಅವಳನ್ನು ಸುಮ್ಮನಾಗಿಸಿದೆ. :)  ನಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಒಮ್ಮೆ ಬೇರೆ ದೇಶದ ಕ್ಲೈಂಟ್ ಒಬ್ಬಳು ಬಂದಿದ್ದಳು. ಭಾರತಕ್ಕೆ ಅದು ಅವಳ ಮೊದಲ ಭೇಟಿ ಆಗಿತ್ತು .  ಅವಳು  ಬರುವಾಗಲೇ ಯಾವ ರೀತಿ ಪ್ಲಾನ್ ಮಾಡಿಕೊಂಡು ಬಂದಿದ್ದಳು ಅಂದರೆ ಇಲ್ಲಿ ಇದ್ದಿದ್ದು ಒಂದು  ವಾರವೇ ಆದರೂ ಒಂದೇ ದಿನದಲ್ಲಿ ವಿಮಾನದಲ್ಲಿ ಹೋಗಿ ತಾಜ್ ಮಹಲ್ ನೋಡಿಕೊಂಡು ಬಂದಿದ್ದಳು! "ನಾವೆಲ್ಲಾ ಇದೇ ದೇಶದಲ್ಲೇ ಹುಟ್ಟಿ ಇಲ್ಲೇ ಇದ್ದರೂ ಆ ಕಡೆ ತಲೆಯೂ ಹಾಕಲಾಗಿಲ್ಲ, ನೀನು ಒಂದೇ ದಿನದಲ್ಲಿ ಒಬ್ಬಳೇ ಹೋಗಿ ನೋಡಿಕೊಂಡು ಬಂದೆ" ಅಂತ ಅವಳಿಗೆ ಶಭಾಶ್ ಹೇಳಿದ್ದೆವು.

ವಿಷಯ ಇದೇ. ನಾನು ಹಿಂದಿನ ವರ್ಷ ಇದೇ ಸಮಯದಲ್ಲಿ ಇನ್ನು ಒಂದು ವರ್ಷದ ಒಳಗಾಗಿ ಕರ್ನಾಟಕದಲ್ಲಿ ನನ್ನ ಆಸಕ್ತಿಯ ಕೆಲವು ಮುಖ್ಯವಾದ ಸ್ಥಳಗಳಿಗೆಲ್ಲಾ ಹೋಗಬೇಕು ಅಂದುಕೊಂಡಿದ್ದೆ.  ಆದರೆ ಅದು ಆಗಲಿಲ್ಲ. ಅದರ ಬಗ್ಗೆ ಹೀಗೆಯೇ ಪ್ಲಾನ್ ಮಾಡುತ್ತಾ ಇಷ್ಟು ವರ್ಷಗಳಲ್ಲಿ ಎಲ್ಲೆಲ್ಲಿ ಹೋಗಿದ್ದೇನೆ ಅಂತ ಯೋಚಿಸುತ್ತಿದ್ದೆ.  ನಾನು ಭಾರತದ ನಾಲ್ಕು ದಕ್ಷಿಣ ರಾಜ್ಯಗಳಿಗಷ್ಟೇ ಹೋಗಿದ್ದೇನೆ. ಅದೂ ಅಲ್ಲಿ ಕೆಲವು ಊರುಗಳಷ್ಟೇ!. ಕರ್ನಾಟಕವನ್ನೇ ತೆಗೆದುಕೊಂಡರೆ, ಇಲ್ಲಿನ ಮೂವತ್ತು ಜಿಲ್ಲೆಗಳಲ್ಲಿ ಬೀದರ್, ಕಲ್ಬುರ್ಗಿ, ವಿಜಾಪುರ, ಬೆಳಗಾವಿ, ರಾಯಚೂರು, ಕೊಪ್ಪಳ, ಗದಗ, ಯಾದಗಿರಿ ಜಿಲ್ಲೆಗಳನ್ನೇ ಹೊಕ್ಕಿಲ್ಲ!!  ಬೆಂಗಳೂರಿನ ಹತ್ತಿರ ಇರುವ ಎಷ್ಟೋ ಸ್ಥಳಗಳಿಗೆ ಹೋಗಬೇಕು ಅಂದುಕೊಳುತ್ತಲೇ ವರ್ಷಗಳು ಕಳೆದುಹೋಗಿವೆ! ನನ್ನ ತವರು ಜಿಲ್ಲೆ ಶಿವಮೊಗ್ಗ, ಉತ್ತರಕನ್ನಡಗಳಲ್ಲೇ ಎಷ್ಟೊಂದೆಲ್ಲಾ ಸ್ಥಳಗಳು ಬಾಕಿ ಇವೆ. ಇಲ್ಲಿ ಸ್ಥಳಗಳು ಅಂದರೆ ನಮ್ಮ ಆಸಕ್ತಿಗೆ ಸಂಬಂಧಿಸಿದ ಯಾವುದಾದರೂ ಆಯಿತು. ಕೆಲವರಿಗೆ ಐತಿಹಾಸಿಕ ಸ್ಥಳಗಳು ಆಸಕ್ತಿಯದ್ದಾದರೆ, ಮತ್ತೆ ಕೆಲವರಿಗೆ ನಿಸರ್ಗವೇ ಪುಣ್ಯಕ್ಷೇತ್ರ! ಆದರೆ ಆಸಕ್ತಿಗಳೇ ಇರದಿದ್ದರೆ ಮಾತ್ರ ಇದೆಲ್ಲಾ ಅರ್ಥಾಗುವುದಿಲ್ಲ.  ಪ್ರತಿಯೊಂದು ಪ್ರದೇಶಗಳಲ್ಲೂ ಆ ಜನ, ಜೀವನ, ಭಾಷೆ, ಹವಾಮಾನ, ಪ್ರಕೃತಿ, ಸಂಸ್ಕೃತಿ ಎಲ್ಲವೂ ಅನುಭವಗಳೇ ಹೌದು. ಹಾಗೆ ಎಲ್ಲಾ ಕಡೆ ಹೋಗಲು ಎಲ್ಲರಿಗೂ ಸಾಧ್ಯವೂ ಇಲ್ಲ ಅಂದುಕೊಂಡರೂ ಒಂದಂತೂ ನಿಜ. ತಿರುಗಿ ಕೆಟ್ಟರೂ ಪರವಾಗಿಲ್ಲ, ಕೂತು ಕೆಡಬಾರದು !

ಗುರುವಾರ, ಮೇ 31, 2012

ಬರೆಯುತ್ತಿರಬೇಕು..


ಇವತ್ತಿಗೆ ಸರಿಯಾಗಿ ಹತ್ತು ತಿಂಗಳು ನಾಲ್ಕು ದಿನ! ಹಿಂದಿನ ವರ್ಷ ಜುಲೈ ಇಪ್ಪತ್ತೇಳರ ಅನಂತರ ಬ್ಲಾಗ್ ನಲ್ಲಿ ಯಾವುದೇ ಬರಹ ಹಾಕಿರಲಿಲ್ಲಅರೆಸ್ಟ್ ಎಂಬ ಕತೆಯೊಂದನ್ನು ಹಾಕಿದ ಮೇಲೆ ಬ್ಲಾಗ್ ಕೂಡ ಅರೆಸ್ಟ್ ಆಗಿಹೋಗಿತ್ತು!. ಬ್ಲಾಗ್ ನಲ್ಲಿ ಬರೆಯಲು ನಿಲ್ಲಿಸಿದ್ದಕ್ಕೆ ಕಾರಣ ಹುಡುಕೋಣ ಎಂದು ಹೊರಟರೆ ಇಂತದ್ದೇ ಅಂತ ಹೇಳುವ ಕಾರಣಗಳ್ಯಾವುದೂ ಸಿಗುತ್ತಿಲ್ಲ. ಅಷ್ಟೊಂದು busy ಆಗಿಹೋದೇನಾ ಅಂತ ಅಂದುಕೊಂಡರೆ ಖಂಡಿತ ಇಲ್ಲ ಅಂತ ನನಗೆ ಗೊತ್ತಿದೆ. ಮತ್ತೇನು ಅಸಡ್ಡೆಯಾ? ಆಲಸ್ಯವಾ? ಫೇಸ್ ಬುಕ್? ಮತ್ಯಾವುದೋ ಕಾರಣ? ಗೊತ್ತಾಗುತ್ತಿಲ್ಲ. ಕಂಡಿದ್ದನ್ನು, ಅನುಭವಕ್ಕೆ ಬಂದಿದ್ದನ್ನು ತಕ್ಷಣಕ್ಕೇ ಹಂಚಿಕೊಳ್ಳುವ, ಸುದ್ದಿ ಮಾಡುವ, ಅಷ್ಟೇ ಬೇಗ ಅದನ್ನು ಮರೆತೂ ಹೋಗುವ ಕಾಲ ಇದು. ಹಾಗಾಗಿ ಕಾರಣ ಹುಡುಕುವುದಕ್ಕಿಂತ ಪರಿಹಾರ ಹುಡುಕುವುದೇ ಸರಿ. ಇದು ನನ್ನ ಬ್ಲಾಗ್ ಕತೆ ಮಾತ್ರವಲ್ಲ. ಬಹಳಷ್ಟು ಬ್ಲಾಗ್ ಗಳೂ ಕೂಡ ಇದೇ ಸ್ಥಿತಿಯಲ್ಲಿವೆ. ಕೆಲವರು ಬರೆಯುವುದನ್ನೇ ನಿಲ್ಲಿಸಿದ್ದರೆ, ಕೆಲವರು ಅಪರೂಪಕ್ಕಾದರೂ ಬರೆದು ಹಾಕುತ್ತಿದ್ದಾರೆ. ಇರಲಿ, ಇದಿಷ್ಟೂ ಅವಧಿಯ ಸಾಕಷ್ಟು ವಿಷಯಗಳನ್ನು ದಾಖಲಿಸುವುದಿದೆ. ಎಲ್ಲೋ ತಿರುಗಾಟದ ಅನುಭವ, ಓದಿ ಮೆಚ್ಚಿದ ಪುಸ್ತಕ, ಖುಷಿಯ ಕ್ಷಣಗಳು, ಹಂಚಿಕೊಳ್ಳಬಹುದಾದ ಮಾಹಿತಿ, ಈ ವಿಚಿತ್ರ ಜಗತ್ತು, ಈ ಬದುಕು, ಜೀವನಪ್ರೀತಿ, ನಿರಂತರ ಕುತೂಹಲ, ಯಾರದ್ದೋ ಮೇಲಿನ ಸಿಟ್ಟು, ಈ ವ್ಯವಸ್ಥೆಯೇ ಸರಿಯಿಲ್ಲ ಎಂಬ ಅಸಹನೆ, ಅವಳ ನೆನಪಿನ ನಿಟ್ಟುಸಿರು, ಯಾರಿಗೂ ಅರ್ಥಾಗದ ದುಗುಡ, ಏನೋ ಬೇಕೆಂಬ ಹಂಬಲ, ಮನಸ್ಸಿಗೆ ಬಂದ ಲಹರಿ, ಕುಶಾಲು, ಮಾತು-ಕತೆ, ಬರವಣಿಗೆ ಮುಂತಾದ ಎಲ್ಲದಕ್ಕೂ ಅವಕಾಶವಿರುವಾಗ ಕಾರಣ ಹುಡುಕಬಾರದು. ಹೀಗೇ ಅಂತೇನೂ ಇಲ್ಲ, ಹೇಗಾದರೂ ಸರಿ....ಬರೆಯುತ್ತಿರಬೇಕು.. ಅಷ್ಟೆ

ಬ್ಲಾಗ್ ಶುರುಮಾಡಿ ಮೇ ೧೨ಕ್ಕೆ ಐದು ವರ್ಷಗಳಾದರೂ ಅದು ನೆನಪಾಗಿದ್ದು ಮಾತ್ರ ಇವತ್ತು!

ಸಿಗೋಣ..