ಪುಟಗಳು

ಸೋಮವಾರ, ಜುಲೈ 11, 2011

ಐಸ್ ವೈನ್ & ಕೊಮಗಟ ಮರು

ಯಾವುದಾದರೂ ಊರಿಗೆ/ಪ್ರದೇಶಕ್ಕೆ ಹೋದಾಗ ಅಲ್ಲಿನ ವಿಶೇಷ ಅನ್ನಿಸುವಂತದ್ದು ಏನಾದರೂ ಇದೆಯಾ ಎಂದು ತಿಳಿದುಕೊಳ್ಳುವುದು ನನ್ನ ಅಭ್ಯಾಸ. ಅಂದರೆ ಆ ಊರಿನ ವಿಶೇಷ ಪದಾರ್ಥಗಳು, ಆ ಊರಲ್ಲಿ ಮಾತ್ರ ಸಿಗುವಂತದ್ದು, ಬೆಳೆಯುವಂತದ್ದು, ತಯಾರಾಗುವಂತದ್ದು. ಉದಾಹರಣೆಗೆ ಹಾಸನ ಅಂದಕೂಡಲೇ ಸೌತೆಕಾಯಿ, ಶುದ್ಧ ನೀರಾ ಹೀಗೆ. ಮೊದಲೆಲ್ಲಾ ಸುಮಾರಷ್ಟು ಊರುಗಳಲ್ಲಿ ಆ ಊರಿನದ್ದೇ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವಂತದ್ದೇನಾದರೂ ಇರುತ್ತಿದ್ದವು. ಈಗಲೂ ಇವೆ. ಮೊಳಕಾಲ್ಮೂರು ಸೀರೆ, ಚನ್ನಪಟ್ಟಣದ ಬೊಂಬೆ,  ಮತ್ಯಾವುದೋ ಕಲೆ, ತರಕಾರಿ, ತಿಂಡಿ, ಸಿಹಿ ಮುಂತಾದವು.  ಆದರೆ ಜಾಗತೀಕರಣದ ನಂತರ ಎಲ್ಲ ಸ್ವಲ್ಪ ಕಲಸುಮೇಲೋಗರವಾಗಿದ್ದರೂ ಕೂಡ ಕೆಲವು ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಇರಲಿ.


www.en.wikipedia.org/wiki/Ice_wine

ಅದೇ ರೀತಿ ಇಲ್ಲಿ ಕೆನಡಾದಲ್ಲಿ ನಾನಿರುವ ಪ್ರದೇಶದ ವಿಶೇಷದ ಬಗ್ಗೆ ವಿಚಾರಿಸಿದಾಗ ನನಗೆ ತಿಳಿದು ಬಂದದ್ದು ’ಐಸ್ ವೈನ್’. ನಾನು ರೆಡ್ ವೈನ್, ವೈಟ್ ವೈನ್ ಕೇಳಿದ್ದೆ ಆದರೆ ಈ ಐಸ್ ವೈನ್ ಬಗ್ಗೆ ಇದುವರೆಗೂ ಕೇಳಿರಲಿಲ್ಲ. ಈ ಒಂಟಾರಿಯೋ ರಾಜ್ಯದ ನಯಾಗರ ಪ್ರದೇಶದಲ್ಲಿ ಬಹಳ ದ್ರಾಕ್ಷಿ ತೋಟಗಳಿವೆ. ಆದ್ದರಿಂದ ಬಹಳ ವೈನರಿಗಳೂ ಇವೆ. ಹಲವು ಬಗೆಯ ವೈನ್ ಗಳು ತಯಾರಾಗುತ್ತವೆ. ಒಂದೊಂದು ವೈನ್ ಗೂ ಅದರದ್ದೇ ಆದ ವಿಶೇಷತೆಗಳಿವೆ. ಇಲ್ಲಿ ತಯಾರಾಗುವ ಅಂತಹ ವಿಶೇಷ ವೈನ್ ಗಳಲ್ಲಿ ಮುಖ್ಯವಾದದ್ದು ಈ ಐಸ್ ವೈನ್. ಇದು ಜಗತ್ತಿನ ಹಲವು ಶೀತ ದೇಶಗಳಲ್ಲಿ ತಯಾರಾಗುತ್ತದಾದರೂ ಕೆನಡಾದ ಐಸ್ ವೈನ್ ಗುಣಮಟ್ಟ ಮತ್ತು ಪ್ರಮಾಣದಲ್ಲಿ ನಂ. ೧ ಆಗಿದ್ದು ಪ್ರಸಿದ್ಧವಾಗಿದೆಯಂತೆ. ಸಾಮಾನ್ಯವಾಗಿ ವೈನ್ ಮಾಡುವಾಗ ದ್ರಾಕ್ಷಿ ಮಾಗಿದ ಅನಂತರ ಬಳ್ಳಿಯಿಂದ ಕಿತ್ತು ಸಂಸ್ಕರಣೆ ಮಾಡುತ್ತಾರೆ, ಆದರೆ ಈ ಐಸ್ ವೈನ್ ಗೆ ಮಾತ್ರ ಈ ರೀತಿ ಮಾಡುವುದಿಲ್ಲ. ಐಸ್ ವೈನ್ ವಿಶೇಷತೆ ಇರುವುದೇ ಅಲ್ಲಿ. ದ್ರಾಕ್ಷಿಯ ಗೊಂಚಲನ್ನು ಬಳ್ಳಿಯಲ್ಲಿ ಹಾಗೆಯೇ ಬಿಡುತ್ತಾರೆ. ಚಳಿಗಾಲದಲ್ಲಿ ಮೈನಸ್ ವಾತಾವರಣದಲ್ಲಿ ಅವುಗಳ ಮೇಲೆ ಹಿಮ ಕೂರುತ್ತದೆ. ಆಗ ಅದರಲ್ಲಿನ ನೀರಿನ ಅಂಶ ಹೆಪ್ಪುಗಟ್ಟಿ ಹೋಗುತ್ತದೆ. ಆದರೆ ಸಕ್ಕರೆ ಮತ್ತು ತಿರುಳಿನ ಅಂಶ ಮಾತ್ರ ಹಾಗೇ ಉಳಿಯುತ್ತದೆ. ಇದರಿಂದ ಮಾಮೂಲಿ ದ್ರಾಕ್ಷಿಗಿಂತ ದಪ್ಪ ಮತ್ತು ಸಿಹಿಯಾದ ಸಿರಪ್ ಸಿಗುತ್ತದೆ.. ಇದನ್ನು ಸಂಸ್ಕರಣೆ ಮಾಡಿ ವೈನ್ ತಯಾರಿಸುತ್ತಾರೆ. ಇದನ್ನು ಮಾಡುವುದು ಸುಲಭವಲ್ಲ ಮತ್ತು ಬಹಳ ಕಡಿಮೆ ಪ್ರಮಾಣದಲ್ಲಿ ಸಿಗುವುದರಿಂದ ಬೇರೆ ವೈನ್ ಗಳಿಗೆ ಹೋಲಿಸಿದರೆ ಬಹಳ ದುಬಾರಿ ಕೂಡ.

ಈ ಬಗ್ಗೆ ಇಂಗ್ಲೀಷ್ ವಿಕಿಪಿಡಿಯಾ ಮಾಹಿತಿ ಇಲ್ಲಿದೆ. ಇದನ್ನು ಗೂಗ್ಲ್ ಟ್ರಾನ್ಸ್ ಲೇಟರ್ ಟೂಲ್ ಕಿಟ್ ಬಳಸಿ ಸದ್ಯದಲ್ಲೇ ಕನ್ನಡ ವಿಕಿಪಿಡಿಯಾಗೂ ಹಾಕುತ್ತೇನೆ.

***

www.sikh-history.com/sikhhist/events/kamagatamaru.html
ಇನ್ನೊಂದು ಸಂಗತಿಯೆಂದರೆ ಇಲ್ಲಿನ ಭಾರತೀಯರಿಗೆ ಸಂಬಂಧಿಸಿದ ಇತಿಹಾಸದ ಒಂದು ಘಟನೆ. ಕೆನಡಾದ ಭಾರತೀಯ ಜನಸಂಖ್ಯೆಯಲ್ಲಿ ಸಿಖ್ಖರು ಹೆಚ್ಚಿದ್ದಾರೆ. ಬ್ರಿಟಿಷ್ ಕೊಲಂಬಿಯಾ ರಾಜ್ಯದಲ್ಲಿ ಅವರ ಸಂಖ್ಯೆ ಹೆಚ್ಚಿದೆ. ಇಪ್ಪತ್ತನೇ ಶತಮಾನದ ಶುರುವಿನಲ್ಲಿ ಕೆನಡಾದಲ್ಲಿ ಜನಸಂಖ್ಯೆ ಬಹಳ ಕಡಿಮೆ ಇತ್ತು. ಆಗ ಇಲ್ಲಿ ಬ್ರಿಟಿಷರ ನೇರ ಆಡಳಿತವಿತ್ತು. ಅವರು ವಲಸಿಗರಿಗೆ ಕರೆಕೊಟ್ಟು ಕೆನಡಾಗೆ ಬರಮಾಡಿಕೊಳ್ಳುತ್ತಿದ್ದರಂತೆ. ಕೃಷಿ ಮಾಡಲು ಭೂಮಿಯನ್ನೂ ಕೊಡುತ್ತಿದ್ದರಂತೆ. ಇದರಿಂದಾಗಿ ಭಾರತದಿಂದಲೂ ಬಹಳ ಜನ ಪಂಜಾಬಿಗಳು ಅಲ್ಲಿಗೆ ಹೋದರು. ಆದರೆ ಬ್ರಿಟಿಷರಿಗೆ ಕಪ್ಪು/ಕಂದು ಚರ್ಮದ ಜನರು ಅಲ್ಲಿಗೆ ಬರುವುದು ಇಷ್ಟವಿರಲಿಲ್ಲ. ಅವರು ಕೇವಲ ಬಿಳಿಯರನ್ನು ಮಾತ್ರ ಪ್ರೋತ್ಸಾಹಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಬೇರೆ ಜನರು ಅಲ್ಲಿಗೆ ವಲಸೆ ಬರದಂತೆ ತಡೆಯಲು ಅಲ್ಲಿನ ಆಡಳಿತ ಒಂದು ಕಾನೂನನ್ನು ಮಾಡುತ್ತದೆ. ಕೆನಡಾಗೆ ನೇರವಾಗಿ ಒಂದೇ ಪ್ರಯಾಣದಲ್ಲಿ ಬಂದವರಿಗೆ ಮತ್ತು ಒಂದು ಮೊತ್ತದ ಹಣ ಇಟ್ಟುಕೊಂಡು ಬಂದವರಿಗೆ ಮಾತ್ರ ಪ್ರವೇಶ ಎಂದು. ದಕ್ಷಿಣ ಏಷ್ಯಾದ ಜನರು ಕೆನಡಾಗೆ ಬರದಂತೆ ತಡೆಯುವುದು ಅವರ ಉದ್ದೇಶವಾಗಿರುತ್ತದೆ. ಭಾರತದಿಂದ ನೇರವಾಗಿ ಕೆನಡಾಗೆ ಹೋಗಲು ಆಗಿನ ಕಾಲದಲ್ಲಿ ಯಾವ ವ್ಯವಸ್ಥೆಯೂ ಇರಲಿಲ್ಲ. ೧೯೧೪ರಲ್ಲಿ ಸಿಖ್ ವ್ಯಾಪಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರನಾದ ಗುರ್ದಿತ್ ಸಿಂಗ್ ಎನ್ನುವವರು ಆ ಕಾನೂನು ಮೀರದೇ ವಲಸೆ ಮಾಡಲು ಯೋಚಿಸುತ್ತಾರೆ. ಒಂದು ಜಪಾನಿ ಹಡಗನ್ನು ಬಾಡಿಗೆಗೆ ಪಡೆಯುತ್ತಾರೆ. ಅದರ ಹೆಸರೇ ’ಕೊಮಗಟ ಮರು’. ಅದರಲ್ಲಿ ಹಾಂಗ್ ಕಾಂಗ್ ನಿಂದ ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್ ನಗರಕ್ಕೆ ನೇರವಾಗಿ ಒಂದೇ ಪ್ರಯಾಣ ಮಾಡುವ ಉಪಾಯ ಮಾಡುತ್ತಾರೆ. ಅದರಂತೆ ಆ ಹಡಗು ೩೭೬ ಜನ ಭಾರತೀಯರನ್ನು ತುಂಬಿಕೊಂಡು ಹೊರಟು ವ್ಯಾಂಕೋವರ್ ತಲುಪಿದಾಗ ಅಲ್ಲಿನ ಬ್ರಿಟಿಷರು ಅದನ್ನು ಬಂದರಿನೊಳಗೆ ಬಿಟ್ಟುಕೊಳ್ಳುವುದಿಲ್ಲ. ಆ ಹಡಗು ಅತಂತ್ರವಾಗಿ ಪ್ರಯಾಣಿಕರ ಸಮೇತ ಸಮುದ್ರದಲ್ಲಿ ಎರಡು ತಿಂಗಳುಗಳ ಕಾಲ ನಿಲ್ಲಬೇಕಾಗುತ್ತದೆ. ಕೊನೆಗೆ ಕೆನಡಾ ನೌಕಾದಳವು ಅದನ್ನು ಬಲವಂತವಾಗಿ ಅಲ್ಲಿಂದ ಹೊರದಬ್ಬಿ ಕೋಲ್ಕೋತಾಗೆ ತಲುಪಿಸುತ್ತದೆ. ಆಗ ಭಾರತವು ಬ್ರಿಟಿಷರ ಕೈಯಲ್ಲಿದ್ದ ಕಾಲ. ಕೋಲ್ಕೋತಾಗೆ ಬಂದ ಆ ಹಡಗಿನ ಜನರ ಮೇಲೆ ಬ್ರಿಟಿಷರು ಅನುಮಾನದಿಂದ ಗುಂಡು ಹಾರಿಸುತ್ತಾರೆ. ಬಂಧಿಸಲು ತಯಾರಾಗುತ್ತಾರೆ. ಆಗ ಅಲ್ಲಿ ಕಾದಾಟಗಳಾಗಿ ೨೦ ಜನ ಭಾರತೀಯರು ಕೊಲ್ಲಲ್ಪಡುತ್ತಾರೆ.

ಇದು ಕೆನಡಾದ ಇತಿಹಾಸದಲ್ಲಿ ಒಂದು ವಿಶೇಷ ಘಟನೆಯಾಗಿದೆ (Sikh History link). ಇದು ನಡೆದು ಒಂದು ಶತಮಾನವಾಗುತ್ತಿರುವಾಗ ೨೦೦೬ರಲ್ಲಿ ಕೆನಡಾದ ಪ್ರಧಾನಿ ಹಾರ್ಪರ್ ಈ ಘಟನೆಯ ಬಗ್ಗೆ ಬಹಿರಂಗವಾಗಿ ಭಾರತೀಯ ಸಮುದಾಯದ ಕ್ಷಮೆಯನ್ನೂ ಯಾಚಿಸಿದ್ದಾರೆ. ಕೊಮಗಟ ಮರು ಘಟನೆಯ ಬಗ್ಗೆ ಕಂಟಿನ್ಯುಯಸ್ ಜರ್ನಿ ಎನ್ನುವ ಸಿನೆಮಾ ಕೂಡ ಇದೆ. (IMDb link)

14 ಕಾಮೆಂಟ್‌ಗಳು:

ಶಂಭುಲಿಂಗ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Subrahmanya ಹೇಳಿದರು...

ಉತ್ತಮ ಮಾಹಿತಿಯುಳ್ಳ ಲೇಖನ. ನಮಗಾಗಿ ಅಲ್ಲಿನ ವಿಶೇಷತೆಗಳನ್ನು ಅಕರಾಸ್ಥೆಯಿಂದ ಬರೆಯುತ್ತಿರುವ ನಿಮ್ಮ ಉತ್ಸಾಹ ಇನ್ನೂ ವರ್ಧಿಸಲಿ. ವೈನ್ ಬಗ್ಗೆ ಬರೆದಿದ್ದು ವಯಿನಾಗಿತ್ತು.

shreeshum ಹೇಳಿದರು...

ಅಲ್ಲಾ ನಿಂಗೆ ಹೇಳಿರೆ ಸಿಟ್ಟು ಬರಗು. ಆದ್ರೆ ಹಿರೀ ಜನ ಆಗಿ ಹೇಳ್ದಿದ್ರೆ ತಡೀತಲ್ಲೆ. ಇಷ್ಟೊಳ್ಳೆ ಮಾಹಿತಿ ಲೇಖನ ಸುಧಾಕ್ಕೋ ತರಂಗಾಕ್ಕೋ ಕಳ್ಶಿ ಪ್ರಕಟ ಆದ್ಮೇಲೆ ಬ್ಲಾಗ್ ಗೆ ಹಾಕಕಪ. ಇರ್ಲಿ ಬಿಡು ಆಗಿದ್ದು ಆತನ.

ಚುಕ್ಕಿಚಿತ್ತಾರ ಹೇಳಿದರು...

ವಿಕಾಸ್..
”ಕೊಮಗಟ ಮರು” ಅನ್ನುವ ಶಬ್ಧ ನಿಜಕ್ಕೂ ರೋಮಾ೦ಚನ ಉ೦ಟು ಮಾಡಿತು.ಈ ಹಡಗಿನ ಚರಿತ್ರೆಯನ್ನು ಬಾಬು ಕೃಷ್ಣಮೂರ್ತಿ ಅವರ ”ರುಧಿರಾಭಿಷೇಕ” ಅನ್ನುವ ಕಾದ೦ಬರಿಯಲ್ಲಿ ಅಪೂರ್ವವಾಗಿ ಚಿತ್ರಿಸಲಾಗಿದೆ.ಬ್ರಿಟೀಷರ ದೌರ್ಜನ್ಯ ಸಿಕ್ಖರ ಹೋರಾಟ ಅವರ ಅಸಹಾಯಕಥೆ ಇವುಗಳನ್ನೆಲ್ಲಾ ಕಣ್ಣಿಗೆ ಕಟ್ಟಿದ೦ತೆ ವರ್ಣಿಸಿದ್ದಾರೆ. ಓದಿಲ್ಲದಿದ್ದರೆ ಖ೦ಡಿತವಾಗಿ ಓದಿ.

amita ಹೇಳಿದರು...

ಒಳ್ಳೆ ಮಾಹಿತಿ....ಮತ್ತು ಒಳ್ಳೆ ಮಾಹಿತಿ....ಅಚ್ಹುಕಟ್ಟು ಬರಹ...ಇದು ಪಕ್ಕಾ ವಿಕಾಸವಾದ...

ಅನಾಮಧೇಯ ಹೇಳಿದರು...

ಆಸಕ್ತಿದಾಯಕ ಮಾಹಿತಿ :) ಚೆನ್ನಾಗಿಯೇ ಅ೦ತರ್ಜಾಲ ಜಾಲಾಡುತ್ತಿದ್ದೀರಾ :)

ಮನಸು ಹೇಳಿದರು...

ಒಳ್ಳೆಯ ಮಾಹಿತಿ ಐಸ್ ವೈನ್ ಬಗ್ಗೆ ಗೊತ್ತೇ ಇರಲಿಲ್ಲ. "ಕೊಮಗಟ ಮರು" ಈ ಬಗ್ಗೆ ನಮಗೆ ತಿಳಿದೇ ಇರಲಿಲ್ಲ. ಧನ್ಯವಾದಗಳು.

ಸುಮ ಹೇಳಿದರು...

good info :)

sunaath ಹೇಳಿದರು...

"ಕೊಮಗಟ ಮರು" ಬಗೆಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು. ‘ರುಧಿರಾಭಿಷೇಕ’ ಕಾದಂಬರಿಯ ಬಗೆಗೆ ತಿಳಿಸಿದ ವಿಜಯಶ್ರೀಯವರಿಗೂ ಧನ್ಯವಾದಗಳು. ಆ ಕೃತಿಯನ್ನೂ ಓದಬೇಕಾಯಿತು.

ಗಿರೀಶ್.ಎಸ್ ಹೇಳಿದರು...

Very good information Vikas..Especially Kamagata Maru !!!
Thanks for sharing...

AntharangadaMaathugalu ಹೇಳಿದರು...

ನೀವಿರುವ ಜಾಗದ ವಿಶೇಷತೆಗಳನ್ನು ತಿಳಿದುಕೊಂಡು, ನಮಗೂ ತಿಳಿಸುತ್ತಿದ್ದೀರಿ ವಿಕಾಸ್. ನನಗೆ ತಿಳಿದಿರದಿದ್ದ ವಿಷಯವೊಂದನ್ನು ತಿಳಿದುಕೊಂಡಂತಾಯ್ತು. ಚೆನ್ನಾಗಿದೆ ವಿಷಯ ಸಂಗ್ರಹಣೆ. ಧನ್ಯವಾದಗಳು.

ಅನಾಮಧೇಯ ಹೇಳಿದರು...

ಒಳ್ಳೆಯ ಲೇಖನ. ಯಾವಾಗಲಾದರು ಅಲ್ಲಿಗೆ ಹೋದ್ರೆ vine ಮಾತ್ರ ಮಿಸ್ ಮಾಡೋ ಹಂಗಿಲ್ಲ ಅಂತಾಯ್ತು :)

Radhika ಹೇಳಿದರು...

Just today read that, Canada is the country with highest per capita consumption of electricity, thanks to extrem weather conditions there. Your writeups are informative and interesting. As few readers opined, this article could have made it to print media and reached more people.

ವಿ.ರಾ.ಹೆ. ಹೇಳಿದರು...

ಸುಬ್ರಹ್ಮಣ್ಯ.. ಧನ್ಯವಾದಗಳು
ಶರ್ಮಣ್ಣ, ನೀ ಹೇಳಿದ್ ಒಳ್ಳೇದಾತು. ಇನ್ಮುಂದೆ ಇಂತದ್ದೆಂತಾದ್ರೂ ಬರೆದರೆ ಹಂಗೇ ಮಾಡ್ತಿ.
ಚುಕ್ಕಿ, ರುಧಿರಾಭಿಷೇಕದ ಬಗ್ಗೆ ತಿಳಿಸಿದ್ದಕ್ಕೆ ಥ್ಯಾಂಕ್ಸ್. ಓದುತ್ತೇನೆ ಅದನ್ನು.
ಅಮಿತಾ, ಥ್ಯಾಂಕ್ಯು :)
ಪ್ರಮೋದ, ಹ್ಮ್.. ಅಂತರಜಾಲಾಟ :)
ಮನಸು, ಸುಮಾ, ಸುನಾಥಕಾಕಾ, ಗಿರೀಶ, ಅಂತರಂಗದ ಮಾತು, ರಾಧಿಕಾ, ಸುಖೇಶ್, ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು..