ಪುಟಗಳು

ಮಂಗಳವಾರ, ಜೂನ್ 21, 2011

ಹಾಚಿಕೊಅವತ್ತಿನ ಕೆಲಸ ಮುಗಿಸಿಕೊಂಡು ಮಾಮೂಲಿನ ರೈಲಿನಲ್ಲಿ ರಾತ್ರಿ ಬಂದಿಳಿದ ಫ್ರೊಫೆಸರ್ ಪಾರ್ಕರ್ ದಿಕ್ಕಿಲ್ಲದೇ ಓಡಾಡುತ್ತಿರುವ ಒಂದು ಮುದ್ದಾದ ನಾಯಿಮರಿಯನ್ನು ನೋಡುತ್ತಾನೆ. ಅದನ್ನು ಕರುಣೆಯಿಂದ ಎತ್ತಿಕೊಂಡು ಸ್ಟೇಷನ್ ಮಾಸ್ತರನಿಗೆ ಕೊಡಲು ಹೋಗುತ್ತಾನೆ. ಸ್ಟೇಶನ್ ಮಾಸ್ತರನು ಅದನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾನೆ. ಫ್ರೊಫೆಸರನಿಗೆ ಅದನ್ನು ಅಲ್ಲೇ ಬಿಡಲು ಇಷ್ಟವಿಲ್ಲದೇ ಮಾರನೇ ದಿನ ಸಂಬಂಧಪಟ್ಟವರಿಗೆ ತಲುಪಿಸಬೇಕೆಂದುಕೊಂಡು ಅದನ್ನು ತನ್ನ ಮನೆಗೆ ತೆಗೆದುಕೊಂಡು ಹೋಗುತ್ತಾನೆ. ಹೆಂಡತಿಗೆ ಗೊತ್ತಾದರೆ ಬಯ್ಯುತ್ತಾಳೆಂದು ಅದನ್ನು ಅಡಗಿಸಿಡುತ್ತಾನೆ. ರಾತ್ರಿ ಚಿಕ್ಕಮಗುವಿನಂತೆ ಅದನ್ನು ಸಂತೈಸುತ್ತಾನೆ. ಮರುದಿನದಿಂದ ಅದನ್ನು ಸಂಬಂಧಿಸಿದವರು ತೆಗೆದುಕೊಂಡು ಹೋಗಬೇಕೆಂದು ಎಲ್ಲೆಡೆ ಸುದ್ದಿ ಕೊಟ್ಟರೂ ಸಹ ಯಾರೂ ತೆಗೆದುಕೊಳ್ಳಲು ಬರುವುದೇ ಇಲ್ಲ. ಅದರ ಕುತ್ತಿಗೆಯಲ್ಲಿದ್ದ ಜಪಾನಿ ಭಾಷೆಯ ಸಂಕೇತದ ಸರವನ್ನು ತನ್ನ ಗೆಳೆಯನ ಮೂಲಕ ಓದಿಸಿ ತಿಳಿದುಕೊಂಡು ಅದಕ್ಕೆ ’ಹಾಚಿ’ ಎಂದು ಹೆಸರಿಡುತ್ತಾನೆ. ಜಪಾನಿ ಭಾಷೆಯಲ್ಲಿ ಹಾಚಿ ಎಂದರೆ ಶುಭಶಕುನ. ಹಲವು ದಿನಗಳು ಉರುಳುತ್ತವೆ. ಆ ಮರಿಯೊಂದಿಗೆ ಫ್ರೊಫೆಸರನ ಸ್ನೇಹವಾಗಿರುತ್ತದೆ. ಒಂದು ದಿನ ನಾಯಿ ದತ್ತು ತೆಗೆದುಕೊಳ್ಳುವವರ ಫೋನ್ ಬರುತ್ತದೆ. ಅವರ ಹೆಂಡತಿ ಮೊದಲು ಮರಿಯನ್ನು ಆದಷ್ಟು ಬೇಗ ಹಿಂದಿರುಗಿಸುವಂತೆ ತಾಕೀತು ಮಾಡಿದ್ದರೂ ಸಹ ಈಗ ತನ್ನ ಗಂಡ ಮತ್ತು ನಾಯಿಮರಿ ಒಡನಾಟವನ್ನು ನೋಡಿ, ಅದರ ಜೊತೆ ಆತನ ಖುಷಿಯನ್ನು ನೋಡಿ ಅದನ್ನು ತಮ್ಮ ಮನೆಯಲ್ಲೇ ಉಳಿಸಿಕೊಳ್ಳುತ್ತಾಳೆ. ಅದು ಫ್ರೊಫೆಸರರ ಕುಟುಂಬದಲ್ಲಿ ಒಂದಾಗುತ್ತದೆ. ಹಾಗೇ ಸಹಜವೆಂಬಂತೆ ವರ್ಷಗಳು ಉರುಳುತ್ತವೆ. ಮರಿ ದೊಡ್ಡದಾಗುತ್ತದೆ. ಅವರಿಬ್ಬರ ನಡುವೆ ಒಂದು ಅನ್ಯೋನ್ಯತೆ ಬೆಳೆದಿರುತ್ತದೆ. ಅವರಿಗೂ ಹಾಚಿಗೂ ಒಂದು ಅತೀ ಆಪ್ತ ಸಂಬಂಧವಾಗಿರುತ್ತದೆ. ಜೊತೆಜೊತೆಗೇ ಅವರಿಬ್ಬರ ಆಟ, ಊಟ, ಓಡಾಟ. ಅದರೊಂದಿಗೆ ಪ್ರೊಫೆಸರ್ ತುಂಬಾ ಖುಷಿಯ ಜೀವನವನ್ನು ಅನುಭವಿಸುತ್ತಾನೆ. ಫ್ರೊಫೆಸರನ ಮಗಳಿಗೂ ಕೂಡ ಆ ನಾಯಿ ಬಹಳ ಪ್ರೀತಿಯದಾಗಿರುತ್ತದೆ.

ಹೀಗೇ ಒಂದು ದಿನ ಫ್ರೊಫೆಸರರು ಬೆಳಗ್ಗೆ ಎಂದಿನಂತೆ ಕಾಲೇಜಿಗೆ ಹೊರಟಾಗ ಆ ನಾಯಿಯೂ ಅವರ ಜೊತೆಗೇ ಬರಲು ಹಠ ಮಾಡುತ್ತದೆ. ಅದನ್ನು ಕೂಡಿ ಹಾಕಿ ಹೋದರೂ ಅದು ತಪ್ಪಿಸಿಕೊಂಡು ರೈಲ್ವೆ ಸ್ಟೇಷನ್ನಿಗೆ ಬರುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ಅದು ಹಿಂದಿರುಗಿ ಹೋಗಲು ಒಪ್ಪದಿದ್ದಾಗ ಪ್ರೊಫೆಸರರು ಅದನ್ನು ಮನೆಗೆ ಕರೆದೊಯ್ದು ಬಿಟ್ಟು ಬರುತ್ತಾರೆ. ಆದರೆ ಅದು ಸಂಜೆ ಮತ್ತೆ ಸ್ಟೇಶನ್ನಿಗೆ ಹೋಗಿ ಅವರಿಗಾಗಿ ಕಾಯತೊಡಗುತ್ತದೆ. ಮಾರನೇ ದಿನವೂ ಅದರ ಹಠದಿಂದ ಅದನ್ನು ಅವರ ಜೊತೆಗೇ ರೈಲ್ವೆ ಸ್ಟೇಶನ್ನಿಗೆ ಕರೆದೊಯ್ಯುಬೇಕಾಗುತ್ತದೆ..ಅಲ್ಲಿ ಅದು ಆತ ಹೋಗುವವರೆಗೂ ಕಾದಿದ್ದು ವಾಪಸ್ಸು ಬರುತ್ತದೆ. ಮತ್ತೆ ಸಂಜೆ ಹೋಗಿ ಸ್ಟೇಶನ್ನಿನ ಮುಂದಿರುವ ಕಟ್ಟೆಯಲ್ಲಿ ಕಾಯುತ್ತಾ ಕೂರುತ್ತದೆ. ಆತ ವಾಪಸ್ಸು ಬಂದಾಗ ಅವನ ಜೊತೆ ಮನೆಗೆ ಹೊರಡುತ್ತದೆ. ಅದರ ಮಾರನೇ ದಿನವೂ ಇದೇ ಮರುಕಳಿಸುತ್ತದೆ. ಕ್ರಮೇಣ ಇದು ದಿನನಿತ್ಯದ ರೂಢಿಯಾಗುತ್ತದೆ. ಬೆಳಗ್ಗೆ ಫೊಫೆಸರನ ಜೊತೆ ಹೋಗಿ ಬರುವುದು, ಸಂಜೆ ಮತ್ತೆ ಹೋಗಿ ಆತನ ಜೊತೆ ಆಟವಾಡುತ್ತಾ ಮರಳಿ ಬರುವುದು. ಸುತ್ತಮುತ್ತಲಿನ ಅಂಗಡಿಗಳಿಗೆ, ವ್ಯಾಪಾರಿಗಳಿಗೆ ಅದು ಚಿರಪರಿಚಿತವಾಗುತ್ತದೆ. ವರ್ಷ ಉರುಳುತ್ತದೆ. ಒಂದು ದಿನ ಕಾಲೇಜಿಗೆ ಹೋದ ಪ್ರೊಫೆಸರರು ಅಲ್ಲಿಯೇ ಹೃದಯಾಘಾತದಿಂದ ತೀರಿಕೊಂಡುಬಿಡುತ್ತಾರೆ. ಅವತ್ತು ಸಂಜೆಯೂ ಹಾಚಿ ಅವರಿಗಾಗಿ ಕಾಯುತ್ತದೆ. ಆತ ಬರುವುದಿಲ್ಲ. ಫೊಫೆಸರರ ಅಳಿಯ ಬಂದು ಹಾಚಿಯನ್ನು ಕರೆದುಕೊಂಡುಹೋಗುತ್ತಾನೆ. ಆದರೆ ಅದು ಅವನ ಮನೆಯಿಂದ ತಪ್ಪಿಸಿಕೊಂಡು ತನ್ನ ಮನೆಗೆ ಹೋಗಿ ಅಲ್ಲಿಂದ ಸ್ಟೇಶನ್ನಿನ ದಾರಿ ಹಿಡಿಯುತ್ತದೆ. ಅಲ್ಲಿ ಬಂದು ಮತ್ತೆ ತನ್ನ ಎಂದಿನ ಜಾಗದಲ್ಲಿ ಕಾಯುತ್ತದೆ. ಫ್ರೊಫೆಸರ್ ಬರುವುದೇ ಇಲ್ಲ. ಸಂಜೆರೈಲಿನ ಸದ್ದಿಗೆ ಕಿವಿಕೊಡುತ್ತಾ, ಸ್ಟೇಶನ್ನಿನ ಬಾಗಿಲನ್ನೇ ಗಮನಿಸುತ್ತಾ, ಅಲ್ಲಿಂದ ಹೊರಬರುವವರಲ್ಲಿ ಫ್ರೊಫೆಸರನನ್ನು ಹುಡುಕುತ್ತಾ ಅದು ಅಲ್ಲೇ ಕಾಯುತ್ತದೆ..ದಿನವೂ ಅದೇ ಸಮಯಕ್ಕೆ ಅಲ್ಲಿ ಕಾಯುತ್ತದೆ..ಮುಂದಿನ ಒಂಭತ್ತು ವರ್ಷಗಳವರೆಗೆ ಪ್ರತಿದಿನ ಕಾಯುತ್ತಲೇ ಇರುತ್ತದೆ!

***

ಜಪಾನಿನ ಟೋಕಿಯೋದಲ್ಲಿ ಆದ ನಿಜಕತೆ ಇದು! ಆ ಫ್ರೊಫೆಸರನ ಹೆಸರು Hidesaburo Ueno. ಒಂಭತ್ತು ವರ್ಷ ಕಾದು ೧೯೩೫ರಲ್ಲಿ ಆ ನಾಯಿ ಅದೇ ಜಾಗದಲ್ಲಿ ಸಾಯುತ್ತದೆ. ೧೯೮೭ ರಲ್ಲಿ ಬಿಡುಗಡೆಯಾದ Seijirō Kōyama ನಿರ್ದೇಶನದ Hachikō Monogatari ಎಂಬ ಜಪಾನಿ ಭಾಷೆ ಸಿನೆಮಾವನ್ನು ೨೦೦೯ರಲ್ಲಿ ಇಂಗ್ಲೀಷಿಗೆ ರೀಮೇಕ್ ಮಾಡಿರುವ ಸಿನೆಮಾ ಇದು. ನಿರ್ದೇಶಕ Lasse Hallström. ಹಾಚಿಯ ನೆನಪಿಗಾಗಿ ಟೋಕಿಯೋದ ಶಿಬುಯಾ ರೈಲ್ವೆ ನಿಲ್ದಾಣದಲ್ಲಿ ಅದರ ಕಂಚಿನ ಪ್ರತಿಮೆ ಮಾಡಿಟ್ಟಿದ್ದಾರಂತೆ. ಪ್ರತಿವರ್ಷ ಏಪ್ರಿಲ್ ೮ರಂದು ಹಾಚಿಯ ನೆನಪಿಗಾಗಿ ಶಿಬುಯಾ ಸ್ಟೇಶನ್ನಿನ್ನಲ್ಲಿ ನೂರಾರು ಜನ ಸೇರಿ ಅದಕ್ಕೆ ಗೌರವ ಸಲ್ಲಿಸುತ್ತಾರಂತೆ. ಆ ಸ್ಟೇಶನ್ನಿನ ಪ್ರವೇಶದ್ವಾರಕ್ಕೆ Hachikō-guchi ಎಂದೇ ಹೆಸರಿಡಲಾಗಿದೆ.

Hachiko: A Dog's Story....ನಾಯಿಯ ನಿಯತ್ತು, ಮನುಷ್ಯ ಮತ್ತು ನಾಯಿಯ ನಡುವಿನ ಸ್ನೇಹಬಾಂಧವ್ಯದ ನಿಜಅನಾವರಣವಿದು. ನೋಡಿದ ಮೇಲೆ ನಿಮ್ಮ ಮನೆಯ ನಾಯಿಯಲ್ಲೂ 'ಹಾಚಿ' ಕಾಣತೊಡಗುವುದು ಖಂಡಿತ.

ಕಣ್ಣೀರು ತರಿಸುವ ಸಿನೆಮಾ.

*******

ನನಗೆ ಈ ಸಿನೆಮಾ ಸಲಹೆ ಮಾಡಿದ ಸೀಮಾ ಹೆಗಡೆಯವರಿಗೆ ಧನ್ಯವಾದಗಳು.

19 ಕಾಮೆಂಟ್‌ಗಳು:

ಮನಸು ಹೇಳಿದರು...

ನೀವು ಕಥೆ ಹೇಳಿದ್ದೇ ಕಣ್ಣೀರು ತರಿಸುತ್ತಿದೆ. ಇನ್ನು ಚಿತ್ರವನ್ನು ನೋಡಿದರೆ ಕಣ್ಣೀರು ಬರದೇ ಇರುವುದೇ..!! ಪ್ರಾಣಿಗಳು ಮನುಷ್ಯನಿಗಿಂತ ನಿಯತ್ತಿನವು. ನಿರೂಪಣೆ ತುಂಬಾ ಚೆನ್ನಾಗಿದೆ. ಈ ಲೇಖನ ಓದಿ ತುಂಬಾ ದಿನಗಳಿಂದ ಬರೆಯಬೇಕೆಂದಿದ್ದ ಒಂದು ನೈಜ ಘಟನೆ ನೆನಪಾಯಿತು. ನಿಮ್ಮ ಲೇಖನದಿಂದ ಬರೆಯಲೇಬೇಕೆನಿಸಿದೆ.

ಶಿವಪ್ರಕಾಶ್ ಹೇಳಿದರು...

tappade ee cinima noduttene..
dhanyavaadagalu...

amita ಹೇಳಿದರು...

ನನಗೂ ಭಾಳ ಇಷ್ಟಾ ಆಯ್ತು...ಕಥೆ...ಇಂಥದ್ದೇ ಇನ್ನೊಂದು ಜಪಾನಿ ಚಿತ್ರ ''the tale of marri and three puppies''ಸಾಧ್ಯ ವಾದರೆ ನೋಡಿ..ಇಲ್ಲೂ ಕಣ್ಣೇರು ತಡೆಯಲು ಪ್ರಯತ್ನಿಸಿದಷ್ಟು ಸೋತು ಹೋಗುತ್ತೇವೆ...ಸುಖಾಂತ ವಾಗುವುದೇ ಒಂದು ನೆಮ್ಮದಿ..ನೀವು ನೋಡಿದ ಇನ್ನಷ್ಟು ಒಳ್ಳೆ ಚಿತ್ರಗಳನ್ನು ನಮಗೂ ತಿಳಿಸಿ ಕೃತಾರ್ಥ ರಾಗಿ...ವಿಕಾಸ್...

Akka ಹೇಳಿದರು...

ಮನ ಕಲಕುವ ಲೇಖನ.........HMV ನಾಯಿಯ ಕಥೆ ನೆನಪಿಗೆ ಬಂತು.

sunaath ಹೇಳಿದರು...

ಕತೆಯು ನನಗೂ ಕಣ್ಣೀರು ತರಿಸಿತು.

Subrahmanya ಹೇಳಿದರು...

ಮನಮುಟ್ಟುವ ಚಿತ್ರ.ನೋಡಿದೀನಿ, ನೀವಿಲ್ಲಿ ಬರೆದದ್ದು ಇನ್ನೂ ಚೆನ್ನಾಗಿದೆ.

Kanthi ಹೇಳಿದರು...

chitra vimarshe chennaagide. Ee movie nodle beku anistide..

Archu ಹೇಳಿದರು...

ವಿಕಾಸ್, ತುಂಬಾ ಹೃದಯ ಸ್ಪರ್ಶಿ ಕಥೆ.ಸಿನೆಮ ನೋಡಲೇಬೇಕು ಅನಿಸಿದೆ. ಈ ವಿಷಯ ಹಂಚಿಕೊಂಡದ್ದಕ್ಕೆ ಥಾಂಕ್ಯೂ !!

ನಮ್ಮ ಮನೆಯ ನಾಯಿ ನಾನು ಮನೆಯಿಂದ ಹಾಸ್ಟೆಲ್ ಗೆ ಹೋಗುವಾಗ ಬಸ್ ಸ್ಟಾಂಡ್ ತನಕ ಜತೆಗೆ ಬರುತ್ತಿತ್ತು.
ಅಮ್ಮ ಎಲ್ಲಾದರೂ ಮನೆಯಿಂದ ಹೊರಗೆ ಹೋದರೆ , ನಮ್ಮ ಮನೆಯ ದನ,ಕರು, ನಾಯಿ ಎಲ್ಲಾ ಬೇಜಾರು ಮಾಡಿಕೊಂಡು ಜೋರಾಗಿ ಬೇಸರದ ದನಿಯಲ್ಲಿ ಕೂಗುತ್ತಿದ್ದವು.

ಮನುಷ್ಯ -ಪ್ರಾಣಿಗಳ ಸಂಬಂಧದ ಸೂಕ್ಷತೆ ಬಗ್ಗೆ ಬೈರಪ್ಪನವರ "ತಬ್ಬಲಿಯು ನೀನಾದೆ ಮಗನೆ " ಓದಬೇಕು !

prasca ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
prasca ಹೇಳಿದರು...

ನನ್ನ ಅತ್ಯಂತ ಕಳಕಳಿಯ ಮನವಿ ದಯವಿಟ್ಟು ಸಾಕುಪ್ರಾಣಿಗಳನ್ನು ಮನೆಯಲ್ಲಿ ಸಾಕಬೇಡಿ. ಜೀವನ ಪೂರ್ತಿ ಸಂತೋಷವೇ ತರುವ ಅವುಗಳ ಒಡನಾಟ ಕೊನೆಯಲ್ಲಿ ಅತ್ಯಂತ ದುಃಖದಾಯಕವಾಗಿರುತ್ತದೆ. ನನ್ನ ಮೊದಲನೇ ಮಗನೆಂದೆ ಕರೆಸಿಕೊಂಡಿದ್ದ ವಿಕ್ಕಿಯ ಅಗಲಿಕೆಯ ನೋವಿನಿಂದ ಹೊರಬರಲು ಇನ್ನೂ ನಮ್ಮ ಕುಟುಂಬಕ್ಕೆ ಸಾಧ್ಯವಾಗಿಲ್ಲ. ನನ್ನ ಬ್ಲಾಗಿನಲ್ಲಿ ಅವನದೆಷ್ಟು ಚಿತ್ರಗಳನ್ನು ಪ್ರಕಟಿಸಿ ಕಣ್ಣೀರು ಹಾಕಿದರೂ ಅವನನ್ನು ಮರೆಯಲಾಗುತ್ತಿಲ್ಲ. ಅವನ ಗುಂಗಿನಿಂದ ಹೊರಬರಲಾಗುತ್ತಿಲ್ಲ. ಈಗಲೂ ಸಹ ಅವನನ್ನು ವಿಹಾರ ಕರೆದು ಕೊಂಡು ಹೋಗಲು ಹೊರಟಿದ್ದೆ ಅವನು ಇಲ್ಲವೆಂದು ಮರುಕ್ಷಣವೇ ಅರಿವಾದಾಗ ನೋವು ಭರಿಸಲು ಅಸಾಧ್ಯ.

ದೀಪಸ್ಮಿತಾ ಹೇಳಿದರು...

ಮನಕಲಕುವ ಕತೆ. ಸಾಕುಪ್ರಾಣಿಯನ್ನು ಕಳೆದುಕೊಂಡರೆ ಎಂತಹ ನೋವು ಆಗುತ್ತದೆ ಎಂದು ಅನುಭವವಿದೆ

ಅನಾಮಧೇಯ ಹೇಳಿದರು...

ನಿಮ್ಮ ಸಲಹೆಯನ್ನು ಈ ಕೂಡಲೇ ಪಾಲಿಸಿ, 'ಪೈರೆಟ್ ಬೇ'ಯಿ೦ದ ಹಾಚಿಕೊ ಚಿತ್ರವನ್ನು ಇಳಿಸುತ್ತಾ ಇದ್ದೇನೆ. ಧನ್ಯವಾದಗಳು.
Eight Below ಎ೦ಬ ಚಿತ್ರವೂ ಮನುಷ್ಯ-ಶ್ವಾನ ಪ್ರೀತಿಯ ಬಗ್ಗೆ ಇದೆ. ಧ್ರುವ ಪ್ರದೇಶದಲ್ಲಿ, ಹಿಮಪಾತದ ನಡುವೆ ನಾಯಿಗಳ ನಿಷ್ಟೆಯನ್ನು ತೋರಿಸುವ ಚಿತ್ರವಿದು. ಸಮಯ ಸಿಕ್ಕಾಗ ನೋಡಿ, ಚೆನ್ನಾಗಿದೆ

ವಿ.ರಾ.ಹೆ. ಹೇಳಿದರು...

@ಮನಸು, ಹೌದು. ಪ್ರಾಣಿಗಳ ಕೃತಜ್ಞತೆಯ ಮುಂದೆ ಮನುಷ್ಯ ಏನೇನೂ ಅಲ್ಲ. ನಿಮ್ಮ ಘಟನೆ ಬರೆಯಿರಿ. ಥ್ಯಾಂಕ್ಸ್

@ಶಿವ, ನೋಡಿ, ನಿಮಗೂ ಧನ್ಯವಾದಗಳು

@ಅಮಿತಾ, ಆ ಚಿತ್ರದ ಕೆಲವು ಭಾಗಗಳನ್ನು ನೋಡಿದ್ದೇನೆ. ಪೂರ್ತಿ ನೋಡುತ್ತೇನೆ. ಥ್ಯಾಂಕ್ಸ್..

@ಅಕ್ಕಾ, ಹ್ಮ್.. ಹೌದು.. ಥ್ಯಾಂಕ್ಯು..

@ಕಾಕಾ, ಕಣ್ಣೀರು ಗ್ಯಾರಂಟಿ.

@ಸುಬ್ರಹ್ಮಣ್ಯ, ಥ್ಯಾಂಕ್ಸ್, ಬೇರೆ ಇಂತಹ ಸಿನೆಮಾ ನೋಡಿದ್ದರೆ ದಯವಿಟ್ಟು ಹಂಚಿಕೊಳ್ಳಿ.

@ಕಾಂತಿ, ವಿಮರ್ಶೆ ಅಲ್ಲ ಪರಿಚಯ.:) ಖಂಡಿತಾ ನೋಡಿ. ಥ್ಯಾಂಕ್ಸ್

@ಅರ್ಚನಾ, ಹ್ಮ್.. ಹೌದು..ಈ ಚಿತ್ರ ನೋಡಿ. ಮತ್ತೆ ನಿಮ್ಮನೆ ನಾಯಿಯೇ ಕಣ್ಮುಂದೆ ಬಂದಂತಾಗುತ್ತದೆ. ಥ್ಯಾಂಕ್ಸ್.

@ಪ್ರಸ್ಕಾ, ನಿಮ್ಮ ಬ್ಲಾಗಿನಲ್ಲಿ ನಿಮ್ಮ ವಿಕ್ಕಿಯ ಬಗ್ಗೆ ಹಾಕಿದ್ದನ್ನು ನೋಡಿದ್ದೆ. ಏನು ಪ್ರತಿಕ್ರಯಿಸಬೇಕೋ ಗೊತ್ತಾಗದೇ ಹಾಗೇ ಬಂದಿದ್ದೆ. ನಿಜ. ಪ್ರೀತಿಯ ಪ್ರಾಣಿಗಳನ್ನು ಕಳೆದುಕೊಂಡಾಗ ಆಗುವ ನೋವು ಯಾರಿಗೂ ಬೇಡ.

@ದೀಪಸ್ಮಿತಾ, ಹೌದು. ನಿಜ.

@ಪ್ರಮೋದ, ಎಯ್ಟ್ ಬಿಲೋದಂತಹ ಒಳ್ಳೆಯ ಸಿನೆಮಾ ಸಲಹೆ ಮಾಡಿದ್ದಕ್ಕೆ ಥ್ಯಾಂಕ್ಸ್.. ನೋಡಿದೆ.. ಬಹಳ ಚೆನ್ನಾಗಿದೆ. ಇನ್ನೂ ಅಂತಹ ಸಿನೆಮಾಗಳು ಗೊತ್ತಿದ್ದರೆ ಹಂಚಿಕೊಳ್ಳಿ.

ಅನಿಕೇತನ ಸುನಿಲ್ ಹೇಳಿದರು...

Nijakku kanniru bantu geleya.parichayisiddakke Dhanyavada.

Seema Hegde ಹೇಳಿದರು...

ಗೊತ್ತಿತ್ತು ನಿನಗೂ ಕಣ್ಣೀರು ಗ್ಯಾರೆಂಟಿ ಎಂದು! ನಾವಂತೂ ಹುಚ್ಚರ ಹಾಗೆ ಅತ್ತಿದ್ದೆವು!ಟೋಕಿಯೋದಲ್ಲಿದಾಗ ಈ ಕಥೆ ಗೊತ್ತಾಗದೇ ಹೋಯಿತು ಅನ್ನುವುದು ಬೇಸರದ ಸಂಗತಿ. ಶಿಬುಯಾ ಸ್ಟೇಶನ್ ನಲ್ಲಿ ಎಷ್ಟೋ ಸಲ ಓಡಾಡಿದ್ದೇವೆ ಆದರೆ ಹಾಚಿಕೋ ಸ್ಮಾರಕ ನೋಡಲೇ ಇಲ್ಲ :(
Japanese version ನೋಡಿ ಮತ್ತೊಮ್ಮೆ ಅಳುವ ಆಲೋಚನೆಯಿದೆ. Download ಮಾಡಬೇಕು :)
ಹಾಗೆಯೇ Marley and me ಮತ್ತು Turner and Hooch ನೋಡು. ಇದರಷ್ಟು ಚೆನ್ನಾಗಿಲ್ಲದಿದ್ದರೂ ಚೆನ್ನಾಗಿವೆ.

Seema Hegde ಹೇಳಿದರು...

ಗೊತ್ತಿತ್ತು ನಿನಗೂ ಕಣ್ಣೀರು ಗ್ಯಾರೆಂಟಿ ಎಂದು! ನಾವಂತೂ ಹುಚ್ಚರ ಹಾಗೆ ಅತ್ತಿದ್ದೆವು!ಟೋಕಿಯೋದಲ್ಲಿದಾಗ ಈ ಕಥೆ ಗೊತ್ತಾಗದೇ ಹೋಯಿತು ಅನ್ನುವುದು ಬೇಸರದ ಸಂಗತಿ. ಶಿಬುಯಾ ಸ್ಟೇಶನ್ ನಲ್ಲಿ ಎಷ್ಟೋ ಸಲ ಓಡಾಡಿದ್ದೇವೆ ಆದರೆ ಹಾಚಿಕೋ ಸ್ಮಾರಕ ನೋಡಲೇ ಇಲ್ಲ :(
Japanese version ನೋಡಿ ಮತ್ತೊಮ್ಮೆ ಅಳುವ ಆಲೋಚನೆಯಿದೆ. Download ಮಾಡಬೇಕು :)
ಹಾಗೆಯೇ Marley and me ಮತ್ತು Turner and Hooch ನೋಡು. ಇದರಷ್ಟು ಚೆನ್ನಾಗಿಲ್ಲದಿದ್ದರೂ ಚೆನ್ನಾಗಿವೆ.

VENU VINOD ಹೇಳಿದರು...

ನಂಗೂ ಕಣ್ಣೀರು ತರಿಸಿದ ಸಿನಿಮಾ ಇದು...ಹಚಿಯ ಮುಖ ನೋಡಿದ್ರೆ ಎಷ್ಟು ಖುಷಿಯಾಗುತ್ತೆ..
ಇನ್ನೊಂದು ಸಿನಿಮ ಸಿಕ್ಕಿದ್ರೆ ನೋಡಿ.eight below.
ಅದೂ ಕೂಡಾ ನಾಯಿ-ಮಾನವ ಸಂಬಂಧದ ಕಥೆ..ಚೆನ್ನಾಗಿದೆ

ವಿ.ರಾ.ಹೆ. ಹೇಳಿದರು...

ಸುನಿಲ್, :-)

ಸೀಮಕ್ಕ, ಈ ಚಿತ್ರದ ಬಗ್ಗೆ ಹೇಳಿದ್ದಕ್ಕ ನಿಮಗೆ ಧನ್ಯವಾದ, ನೀವು ಹೇಳಿದ ಮತ್ತೆರಡು ಸಿನೆಮಾಗಳನ್ನು ನೋಡುತ್ತೇನೆ.

ವೇಣು, ಹಾಂ.. ಎಯ್ಟ್ ಬಿಲೋ ನೋಡಿದೆ. ಚೆನ್ನಾಗಿದೆ. ಇಷ್ಟವಾಯಿತು. ಥ್ಯಾಂಕ್ಸ್ :)

Shrinidhi Hande ಹೇಳಿದರು...

I've seen a video of this