ಪುಟಗಳು

ಮಂಗಳವಾರ, ಏಪ್ರಿಲ್ 26, 2011

ಇದು ಬರ್ಲಿಂಗ್ಟನ್

ಬದುಕು ಅಟ್ಲಾಂಟಿಕ್ ಸಾಗರವನ್ನು ದಾಟಿಸಿ ಕರೆತಂದಿದೆ. ಕೆನಡಾ ದೇಶದ ಬರ್ಲಿಂಗ್ಟನ್ ಎಂಬ ಊರಿನ ಕಟ್ಟಡವೊಂದರ ಹದಿನೆಂಟನೇ ಮಹಡಿಯಲ್ಲಿ ನಾವು ಇಳಿದುಕೊಂಡಿರುವ ಮನೆಯ ಬಾಲ್ಕನಿಯಿಂದ ನಿಂತು ನೋಡುತ್ತಿದ್ದರೆ ಗೆರೆ ಎಳೆದಂತಹ ರಸ್ತೆಗಳು, ಬಣ್ಣ ಬಣ್ಣದ ರಟ್ಟಿನಂತೆ ಕಾಣುವ ಮನೆಗಳು, ಚಳಿಗಾಲಕ್ಕೆ ಎಲೆ ಕಳೆದುಕೊಂಡು ನಿಂತ ಖಾಲಿ ಖಾಲಿ ಮರಗಳು, ಮೈ ಕೊರೆಯುವ ಚಳಿ...


ನಮ್ಮ ಕಂಪನಿಯ ಒಂದು ಘಟಕ ಇಲ್ಲಿ ಇರುವುದರಿಂದ ಮತ್ತು ಅದರೊಂದಿಗೆ ನಮ್ಮ ವ್ಯವಹಾರವಿದ್ದುದರಿಂದ ಈ ಊರಿನ ಹೆಸರು ತಿಳಿದಿತ್ತೇ ಹೊರತು ಮತ್ಯಾವುದೇ ಮಾಹಿತಿ ಗೊತ್ತಿರಲಿಲ್ಲ, ಆ ಬಗ್ಗೆ ಯೋಚಿಸಲೂ ಹೋಗಿರಲಿಲ್ಲ. ಈಗ ನೋಡಿದರೆ ಇಲ್ಲೇ ಬಂದಿದ್ದೇನೆ. ಆಶ್ಚರ್ಯವಾಗುತ್ತದೆ. ಸಣ್ಣವನಿದ್ದಾಗ ನಾನು, ಅಪ್ಪ ಒಂದು ಆಟ ಆಡುತ್ತಿದ್ದೆವು. ನಮ್ಮ ಮನೆಯಲ್ಲಿ ಒಂದು ದೊಡ್ಡ ವಿಶ್ವನಕಾಶೆ ಇತ್ತು. ಅಪ್ಪ ಅದನ್ನು ನೆಲದ ಮೇಲೆ ಹರಡಿ ಯಾವುದಾದರೂ ಒಂದು ಸ್ಥಳದ ಹೆಸರು ನೋಡಿ ಹೇಳುತ್ತಿದ್ದರು. ನಾನು ಅದು ಎಲ್ಲಿದೆ ಎಂದು ಹುಡುಕಿ ಹೇಳಬೇಕಿತ್ತು. ಕೆಲವೊಮ್ಮ ಸ್ವಲ್ಪ ದೊಡ್ಡದಾಗಿ ಅಚ್ಚುಹಾಕಿರುವ ಹೆಸರನ್ನು ಹೇಳುತ್ತಿದ್ದರು, ನಾನು ಬೇಗ ಹುಡುಕಿ ಮತ್ತೊಂದು ಸ್ಥಳದ ಹೆಸರು ಹೇಳಲು ಕೇಳುತ್ತಿದ್ದೆ. ಅವರಿಗೆ ಬೇರೆ ಕೆಲಸವಿದ್ದಾಗ ಸಣ್ಣ ಅಕ್ಷರಗಳಲ್ಲಿ ಬರೆದಿರುವ ಯಾವುದೋ ಪುಟ್ಟ ಊರೊಂದನ್ನು ಅಥವಾ ಎಲ್ಲೋ ಸಣ್ಣದಾಗಿರುವ ದ್ವೀಪವೊಂದನ್ನೋ ಹೇಳಿಬಿಡುತ್ತಿದ್ದರು. ಸುಲಭವಾಗಿ ಸಿಗುತ್ತಿರಲಿಲ್ಲ. ನಾನು ಹುಡುಕಲೇಬೇಕೆಂಬ ಛಲಕ್ಕೆ ಬೀಳುತ್ತಿದ್ದೆ. ಭೂಪಟವನ್ನು ಪೂರ್ತಿ ತಡಕಾಡುತ್ತಿದ್ದೆ. ಹೀಗೆ ಆಡಿ ಆಡಿ ನನಗೆ ವಿಶ್ವದ ದೇಶ, ಸ್ಥಳಗಳ ಹೆಸರುಗಳು ಮತ್ತು ಇರುವೆಡೆಗಳು ಸುಮಾರಾಗಿ ಪರಿಚಯವಾದದ್ದು. ಇಲ್ಲಿಗೆ ಬರುವ ಮುಂಚೆ ಕಂಪ್ಯೂಟರ್ನಲ್ಲಿ ವಿಕಿಮ್ಯಾಪಿಯಾ ತೆಗೆದು ಈ ಊರಿನ ಹೆಸರನ್ನು ಹುಡುಕುತ್ತಿದ್ದಾಗ ಅಪ್ಪನೊಂದಿಗೆ ಆಡುತ್ತಿದ್ದ ನಕಾಶೆ ಹುಡುಕಾಟ ನೆನಪಾಗಿತ್ತು. ಬರ್ಲಿಂಗ್ಟನ್ ಎಂದು ಸರ್ಚ್ ಕೊಟ್ಟರೆ ಹಲವು ಬರ್ಲಿಂಗ್ಟನ್ ಗಳು ಪಟ್ಟಿಯಾಗುತ್ತವೆ. ಇದೊಂತರಾ ನಮ್ಮ ಕಡೆಯ ’ಸಿದ್ದಾಪುರ’ ಎಂಬ ಹೆಸರಿನಂತೆ. ಕರ್ನಾಟಕದಲ್ಲಿ ಹಲವು ಸಿದ್ದಾಪುರಗಳಿದ್ದಂತೆ ಬ್ರಿಟಿಷರು ಇದ್ದ ಕಡೆಯೆಲ್ಲಾ ಒಂದೊಂದು Burlington ನಾಮಕರಣ ಮಾಡಿಬಿಟ್ಟಿದ್ದಾರೆ. :)

ಇದು ನನಗೆ ಹೊಸದೊಂದು ಜಗತ್ತು. ಎಷ್ಟೆಷ್ಟೋ ಲೇನ್ ಗಳಿರುವ ಅಗಲ ಹೈವೇಗಳು, ಮುಗಿಯುವುದೇ ಇಲ್ಲ ಎಂಬಂತೆ ಹಾಯ್ದು ಹೋಗುತ್ತಲೇ ಇರುವ ಕಾರುಗಳು, ಕಾಲ್ನಡಿಗೆಯ ಜನರೇ ಇಲ್ಲದ ರಸ್ತೆಗಳು, ಅಪರೂಪಕ್ಕೆ ಮನೆಗಳಿಂದ ಹೊರಗೆ ಕಾಣಿಸಿ ಮರೆಯಾಗಿಬಿಡುವ ಮನುಷ್ಯರು, ರಾತ್ರಿ ಎಂಟೂವರೆ ತನಕವೂ ಇರುವ ಸೂರ್ಯನ ಬೆಳಕು! ಟೊರಾಂಟೋದಿಂದ ೫೦ ಕಿ.ಮಿ. ದೂರದ ಈ ನಗರ 'ಒಂಟಾರಿಯೋ ಲೇಕ್' ಎನ್ನುವ ಸಮುದ್ರದಂತಿರುವ ಒಂದು ದೊಡ್ಡ ಸರೋವರವೊಂದರ ದಡದ ಮೇಲಿದೆ. ಸರೋವರದ ಆಚೆ ದಡದಿಂದ ಯು.ಎಸ್.ಎ! ಸದ್ಯಕ್ಕೆ ಇಲ್ಲಿನ ಪಾರ್ಲಿಮೆಂಟಿಗೆ ಮಧ್ಯಂತರ ಚುನಾವಣೆ. ಈ ಕ್ಷೇತ್ರದಿಂದ ಚುನಾವಣೆಗೆ ನಿಂತಿರುವ ಹೆಣ್ಣುಮಗಳೊಬ್ಬರು ಓಟು ಕೇಳಲು ನಮ್ಮಮನೆಗೂ ಬಂದಿದ್ದರು :). -೨ ಇಂದ ೭ ಡಿಗ್ರಿ ಸೆಲ್ಶಿಯಸ್ ಒಳಗೇ ಓಲಾಡುತ್ತಿರುವ ತಾಪಮಾನ, ಗಾಳಿ, ಮಳೆಗಳು ಹೊರಗೆ ಹೆಚ್ಚು ಓಡಾಡಲಾಗದಂತೆ ಮಾಡಿವೆ. ಇನ್ನೇನು ಬೇಸಿಗೆ ಶುರುವಾದ ಮೇಲೆ ನೋಡಬೇಕು.

********

ಸತ್ಯಸಾಯಿಬಾಬಾ ತೀರಿಕೊಂಡಿದ್ದಾರೆ.  ಅವರು ದೇವಮಾನವ ಎನ್ನುವುದಕ್ಕಾಗದಿದ್ದರೆ ವಿಶೇಷಮಾನವ ಎನ್ನುವುದಕ್ಕೇನೂ ಅಡ್ದಿಯಿರಲಿಲ್ಲ. ಕೆಲವು ವ್ಯಕ್ತಿತ್ವಗಳು ಹಾಗೆಯೇ. ನಾನು ಅವರ ಭಕ್ತ ಅಥವಾ ಹಿಂಬಾಲಕನಲ್ಲದಿದ್ದರೂ ವೈಯಕ್ತಿಕವಾಗಿ ಬಾಬಾ ಬಗ್ಗೆ ನನಗೆ ಒಂದು ಪ್ರೀತಿಯೂ, ಗೌರವವೂ ಇದೆ. ಅದಕ್ಕೆ ಕಾರಣಗಳೂ ಇವೆ... ಇರಲಿ. ಆ ಬಗ್ಗೆ ಮತ್ತೆ ಬರೆದೇನು.

.........

ಸಿಗೋಣ..

16 ಕಾಮೆಂಟ್‌ಗಳು:

ಚುಕ್ಕಿಚಿತ್ತಾರ ಹೇಳಿದರು...

nice...

ನಕಾಶೆಯಲ್ಲಿ ಕಣ್ಣಿನಿ೦ದ ನೋಡಿ, ಕೈ ಇ೦ದ ಸ್ಪರ್ಶಿಸಿದ್ದಲ್ಲಿ ಈಗ ಕಾಲಿಟ್ಟಿದ್ದೀರಿ.. ಇ೦ತಹಾ ಅವಕಾಶ ಮತ್ತಷ್ಟೂ ಸಿಗಲಿ..
ಆಲ್ ದ ಬೆಸ್ಟ್..:)

Dr.D.T.krishna Murthy. ಹೇಳಿದರು...

ಭೂಮಿಯ ಇನ್ನೊಂದು ಮೂಲೆಯಲ್ಲಿ ಕುಳಿತು,ಹೊಸ ಲೋಕದ ಅನುಭವವನ್ನು ಹಂಚಿಕೊಂಡಿದ್ದೀರ.ನೋಡಿ ಕನ್ನಡ ಭಾಷೆ ನಮ್ಮನ್ನೆಲ್ಲಾ ಹೇಗೆ ಬೆಸೆದಿದೆ!ಶುಭವಾಗಲಿ.ನಮಸ್ಕಾರ.

ಸುಮ ಹೇಳಿದರು...

ಸಾಧ್ಯವಾದಷ್ಟು ಊರು ಸುತ್ತಿ ....ಅದರ ಬಗ್ಗೆ ಬರೆದು ನಮಗೆಲ್ಲ ತಿಳಿಸಿ :)

ತೇಜಸ್ವಿನಿ ಹೆಗಡೆ ಹೇಳಿದರು...

ಹ್ಮ್ಂ.... ಇನ್ನೂ ದೂರದೂರಿನಿಂದ ಸುದ್ದಿ ಏಕೆ ಬರಲಿಲ್ಲ ಎಂದು ಎಣಿಸುತ್ತಿರುವಾಗಲೇ.....:) ನೀನು ನಿನ್ನ ತಂದೆಯವರೊಂದಿಗೆ ಆಡುತ್ತಿದ್ದ ಆಟ ನನ್ನ ನೆಚ್ಚಿನ ಆಟವೂ ಆಗಿತ್ತು. ನಾವು(ಅಪ್ಪ, ತಂಗಿಯರು) ಈ ಆಟವನ್ನು ಆಡುತ್ತಿದ್ದೆವು.

ಆದಷ್ಟು ಬೇಗ ಉದ್ದದ, ಚೆಂದದ, ಮಾಹಿತಿಪೂರ್ಣವಾಗಿರುವ ಪತ್ರವೊಂದನ್ನು ಬರೆದು ಹಾಕಿಬಿಡು...:)(ಯಾರಿಗೆಂದು ಬೇರೆ ಹೇಳಬೇಕಾಗಿಲ್ಲ ತಾನೆ?:):-p)

ಮನಸು ಹೇಳಿದರು...

ವಿಕಾಸ್,
ನಕ್ಷೆಯಲ್ಲಿನ ಸ್ಥಳ ಹುಡುಕಾಟ ಮಾಡಿದ್ದಂತೆ ನನಗೂ ನನ್ನ ಅಪ್ಪಾಜಿ ಚಿಕ್ಕವಳಿದ್ದಾಗ ಇದೇ ರೀತಿ ಭಾನುವಾರ ಬಂತೆಂದರೆ ಆಟವಾಡುತ್ತಲಿದ್ದೆವು.... ನಿಮ್ಮ ಈ ಲೇಖನ ನನ್ನ ಆ ದಿನಗಳನ್ನ ನೆನಪಿಸಿತು... ಧನ್ಯವಾದಗಳು. ಈಗಷ್ಟೆ ಹೊಸನಗರಕ್ಕೆ ತಲುಪಿದ್ದೀರಿ ಎಂದೆನಿಸುತ್ತೆ.... ನಿಮಗೆ ಶುಭವಾಗಲಿ... ಹೊಸ ಜನ, ಹೊಸ ಭಾಷೆ ಎಲ್ಲವೂ ಒಳಿತನ್ನು ನೀಡಲಿ. ವಂದನೆಗಳು

shridhar ಹೇಳಿದರು...

Have a Nice Stay and Wonderful time at Burlington.

ನಾನು ಮತ್ತು ಅಕ್ಕ ಕೂಡ್ ಈ ರೀತಿಯ ಆಟ ಆಡುತ್ತಿದ್ದೆವು .. ಅದಕ್ಕೆ ನನಗೆ ಸಮಾಜ ಪರೀಕ್ಷೆಯಲ್ಲಿ ನಕಾಶೆ ಗುರುತಿಸುವದಕ್ಕೆ ಯಾವತ್ತು full marks :)

ಬರ್ಲಿಂಗ್ಟನ್ ಬಗ್ಗೆ ಒಂದಿಷ್ಟು ಲೇಖನಗಳು ಬರಲಿ :)

Subrahmanya ಹೇಳಿದರು...

ಚಿತ್ರಗಳನ್ನೂ ಹಾಕಿ ಹಾಗೇ ಅಲ್ಲಿಯ ವಿಚಿತ್ರಗಳನ್ನೂ ಬರೀರಿ.
ಬಾಬಾ ಬಗೆಗೆ ನೀವು ಏನು ಬರೀತೀರೋ ಅಂತಾ ಕುತೂಹ ಲವಿದೆ. ಬೇಗ ಬರೀರಿ.

Kanthi ಹೇಳಿದರು...

cool.. exploring Canada..

ಅನಾಮಧೇಯ ಹೇಳಿದರು...

Nice one ..Monne monne ashte nim blog bagge matadtidvi >neev nodidre Canada ge band bittidira .. .welcome to ontario :)

shivu.k ಹೇಳಿದರು...

ವಿಕಾಶ್,
ನಿಮ್ಮ ಅನುಭವದ ಜೊತೆಗೆ ಒಂದಷ್ಟು ಚಿತ್ರಗಳನ್ನು ಹಾಕಿ. ಇನ್ನಷ್ಟು ಚೆನ್ನಾಗಿರುತ್ತದೆ.

ವನಿತಾ / Vanitha ಹೇಳಿದರು...

oho..Have a nice time:)

ಪ್ರಶಾಂತ ಯಾಳವಾರಮಠ ಹೇಳಿದರು...

ವಿಕಾಸ ನಾನು ಇವಾಗ ಇರೋದು ಸ್ವೀಡನ್ ನಲ್ಲಿ ಸ್ವಲ್ಪ ಇತ್ತಕಡೆ ಅಸ್ಟೆ...
ಆದರೆ ನಾವು ಇವಾಗ ಸ್ವಲ್ಪ ಚಳಿ ಇಂದ ಹೊರಗೆ ಬಂದಿದಿವಿ :)
ಹ್ಯಾವ ಎ ಗ್ರೇಟ್ ಸ್ಪ್ರಿಂಗ್ ಅಹೆಡ್ - ನಿಮ್ಮ ಅನುಭವಗಳನ್ನ ಹೀಗೆ ನಾವು ಓದುವಹಾಗೆ ಆಗಲಿ :)

ಸುಧೇಶ್ ಶೆಟ್ಟಿ ಹೇಳಿದರು...

Nice Vikas :)

allindhalE alliya bagegina vishayagaLannu bareyiri :)

ವಿ.ರಾ.ಹೆ. ಹೇಳಿದರು...

@ಚುಕ್ಕಿ, ಥ್ಯಾಂಕ್ಯು :)
@ಡಾ.ಕೃಷ್ಣಮೂರ್ತಿ, ಹೌದು ಸಾರ್, ಖುಷಿಯಾಗತ್ತೆ. ಧನ್ಯವಾದಗಳು.
@ಸುಮ, ಹುಂ.. ಆದಷ್ಟು ಸುತ್ತುತ್ತೇನೆ. ಹೇಳುವಂತದ್ದು ಖಂಡಿತ ಹೇಳುತ್ತೇನೆ. ಥ್ಯಾಂಕ್ಯು :)
@ತೇಜಸ್ವಿನಿ, ಯಾರಿಗೆ? ಸಮಸ್ತ ಕನ್ನಡ ಕುಲಕೋಟಿಗಾ? :)ಹ್ಹ ಹ್ಹ.
@ಮನಸು, ಧನ್ಯವಾದಗಳು.
@ಶ್ರೀಧರ್, ಥ್ಯಾಂಕ್ಸ್ ಫಾರ್ ಯುವರ್ ವಿಶಸ್ :)
@ಸುಬ್ರಹ್ಮಣ್ಯ, ಬರೆಯುವೆ .. ಥ್ಯಾಂಕ್ಸ್ :)
@ಕಾಂತಿ, yes.. really cool (cold) here :)
@ಹೆಸರು ಹಾಕದವರು, thanksri, ಇಲ್ಲೂ ನಮ್ಗೆ ವೆಲ್ ಕಮ್ ಮಾಡಿದ್ದಕ್ಕೆ :)
@ಶಿವು, ಹಾಕ್ತೀನಿ ಸಾರ್, ಥ್ಯಾಂಕ್ಸ್..
@ವನಿತಾ, ಥ್ಯಾಂಕ್ಸ್
@ಪ್ರಶಾಂತ, ಹೌದು ನಾನೂ ಕಾಯ್ತಾ ಇದ್ದೀನಿ ಮರಗಿಡಗಳು ಚಿಗುರೋದನ್ನ. ಚೆನ್ನಾಗಿರತ್ತೆ. ಥ್ಯಾಂಕ್ಸ್..
@ಸುಧೇಶ್, ವಿಷ್ಯ ಸಿಕ್ರೆ ಖಂಡಿತ ಬರೀತಿನಿ , thnx :)

ಅನಾಮಧೇಯ ಹೇಳಿದರು...

even I am eager to know what you write about SB

ಸಂದೀಪ್ ಕಾಮತ್ ಹೇಳಿದರು...

"ಇರಲಿ. ಆ ಬಗ್ಗೆ ಮತ್ತೆ ಬರೆದೇನು "!

ಹಿಂಗಂತ ರವಿ ಬೆಳಗೆರೆ ಅನ್ನೋರು ಯಾವಾಗಲೂ ಬರೀತಿರ್ತಾರೆ ಆದರೆ ಯಾವತ್ತೂ ಬರೆದದ್ದು ನೋಡಿಲ್ಲ ;)