ಪುಟಗಳು

ಮಂಗಳವಾರ, ಫೆಬ್ರವರಿ 22, 2011

ಕನ್ನಡ ವ್ಯಾಕರಣಕ್ಕೆ ಕೈಯಿಟ್ಟಿದ್ದೇನೆ..

'ಭಾಷೆ' ಎನ್ನುವುದು ನನಗೆ ಮೊದಲಿಂದಲೂ ಆಸಕ್ತಿಯ ವಿಷಯ. ಇವತ್ತಿಗೂ ಯಾವುದಾದರೂ ದೇಶದ ಬಗ್ಗೆ, ಪ್ರದೇಶದ ಬಗ್ಗೆ ತಿಳಿದುಕೊಳ್ಳುವಾಗ ಅಲ್ಲಿನ ಭಾಷೆಗಳ ಬಗ್ಗೆ ಕುತೂಹಲವಿಟ್ಟುಕೊಂಡು ತಿಳಿದುಕೊಳ್ಳುತ್ತೇನೆ. ಸಣ್ಣವನಿದ್ದಾಗಿಂದಲೂ ಬೇರೆ ಬೇರೆ ಭಾಷೆಗಳ ಲಿಪಿಗಳನ್ನು ಬರೆಯಲು ಪ್ರಯತ್ನಿಸುವುದನ್ನು ಮಾಡಿಕೊಂಡೇ ಬಂದಿದ್ದೇನೆ. ಸಹಜವಾಗಿ ಕನ್ನಡ ನನಗೆ ಅತ್ಯಂತ ಪ್ರಿಯವಾದ ಭಾಷೆ. ನನ್ನ ತಾಯ್ನುಡಿಯಾದ್ದರಿಂದ ಅದು ನನಗೆ ಅತಿ ಸುಲಭವೆನಿಸುವ ಭಾಷೆಯೂ ಹೌದು. ನಮ್ಮ ಮನೆಮಾತು ಹವ್ಯಕ ಕನ್ನಡವಾಗಿದ್ದರೂ ಕೂಡ ನನಗೆ ಹಳೆಮೈಸೂರುಸೀಮೆಯ ಕನ್ನಡವೇ ಹೆಚ್ಚು ಸುಲಭದ ಆಡುಮಾತಾಗಿ ರೂಢಿಯಾಗಿ ಹೋಗಿದೆ. ಪ್ರತಿ ಭಾಷೆಗೂ ಅದರದ್ದೇ ಆದ ಸ್ವರೂಪ ಇರುತ್ತದೆ, ವಿಶಿಷ್ಟತೆ ಇರುತ್ತದೆ, ವ್ಯಾಕರಣವಿರುತ್ತದೆ. ಭಾರತರ ಭಾಷಾವೈವಿಧ್ಯದ ಬಗ್ಗೆ ನನಗೆ ಅಚ್ಚರಿಯೂ ಹೆಮ್ಮೆಯೂ ಇದೆ. ಆದರೆ ಇಂಗ್ಲೀಷು, ಹಿಂದಿ ಸೇರಿದಂತೆ ಯಾವ ಭಾಷೆಯಾದರೂ ಅವು ಕರ್ನಾಟಕದಲ್ಲಿ ಕನ್ನಡದ ಮೇಲೆ ಸವಾರಿ ಮಾಡುವುದನ್ನು ವಿರೋಧಿಸುತ್ತೇನೆ. ಒಂದು ಭಾಷೆಯ ಉಳಿಕೆ ಮತ್ತು ಬೆಳವಣಿಗೆಗೆ ಅದರ ಬಳಕೆ ಮತ್ತು ತಿಳುವಳಿಕೆ ಬಹಳ ಮುಖ್ಯ. ನಮ್ಮ ಶಿಕ್ಷಣ ವ್ಯವಸ್ಥೆಯ ವಿಪರ್ಯಾಸ ಅಂದರೆ ಅದು ನಮ್ಮದೇ ನೆಲದ ಭಾಷೆಯಿಂದ ನಮ್ಮನ್ನು ವರ್ಷಾನುಗಟ್ಟಲೆ, ಮತ್ತು ಕೊನೆಯವರೆಗೂ ದೂರವಿಟ್ಟುಬಿಡುತ್ತದೆ. ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಹೋದರಂತೂ ನಮ್ಮ ಭಾಷೆಗಳ ಅಗತ್ಯತೆ ಗೌಣವಾಗಿಬಿಡುತ್ತದೆ. ಅಗತ್ಯವಿರುವ ಕೆಲವರು ಫ್ರೆಂಚ್, ಜರ್ಮನ್, ಜಪಾನಿ ಮುಂತಾದ ಭಾಷೆಗಳನ್ನು ಕಲಿಯುತ್ತಾರೆ. ಅಗತ್ಯವಿರದ ಕೆಲವರೂ ಸುಮ್ಮನೇ ಆಸಕ್ತಿಗೆ ಕಲಿಯಲು ಹೊರಡುತ್ತಾರೆ. ಇರಲಿ.

ನನಗೆ ಆಡುಮಾತಾಗಿ, ನನ್ನ ಓದಿನ ಭಾಷೆಯಾಗಿ ಕನ್ನಡ ಚೆನ್ನಾಗಿ ರೂಢಿಯಾಗಿದ್ದರೂ ಕೂಡ ಇದುವರೆಗೂ ಕನ್ನಡದ ವ್ಯಾಕರಣವನ್ನು ಸರಿಯಾಗಿ ತಿಳಿದುಕೊಳ್ಳಲು ಆಗಿರಲಿಲ್ಲ. ಫ್ರೌಡಶಾಲೆಯಲ್ಲಿ, ಪಿ.ಯುಸಿ.ಯಲ್ಲಿ ಮೊದಲ ಭಾಷೆಯಾಗಿ ಸಂಸ್ಕೃತ ತೆಗೆದುಕೊಂಡಿದ್ದರಿಂದ ಕನ್ನಡ ವ್ಯಾಕರಣದ ಓದು ಹೆಚ್ಚೇನೂ ಆಗಲಿಲ್ಲ. ಆಮೇಲೆ ವೃತ್ತಿಪರ ಶಿಕ್ಷಣಕ್ಕೆ ಹೋದಮೇಲೆ, ಮತ್ತು ಕೆಲಸಕ್ಕೆ ಸೇರಿದ ಮೇಲೆ ಭಾಷೆ, ವ್ಯಾಕರಣ ನೆನಪಿಗೇ ಬರದಷ್ಟು ದೂರವಾಗಿಬಿಟ್ಟಿತ್ತು. ಸುಮಾರು ವರ್ಷಗಳ ಅನಂತರ ಇತ್ತೀಚೆಗೆ ಮತ್ಯಾಕೋ ಕನ್ನಡ ವ್ಯಾಕರಣವನ್ನು ಓದಿ ತಿಳಿದುಕೊಳ್ಳುವ ಆಸಕ್ತಿ ಮತ್ತೆ ಚಿಗುರಿತ್ತು. ಎಲ್ಲೋ ದುಡ್ಡು ಸುರಿದು ಯಾವುದೋ ವಿದೇಶಿ ಭಾಷೆಯ ಕಲಿಕೆಗೆ ಹೊರಟು, ಕಲಿತು ಮರೆಯುವ ಬದಲು ಮೊದಲು ನಮ್ಮದೇ ಭಾಷೆಯನ್ನು ಸ್ವಲ್ಪ ಜಾಸ್ತಿ ತಿಳಿದುಕೊಳ್ಳುವುದು ಒಳ್ಳೆಯದು ಅಂತಲೂ ಅನ್ನಿಸಿತ್ತು.. ಸದ್ಯಕ್ಕಂತೂ ಯಾವ ತರಗತಿಯಲ್ಲಿ ಹೋಗಿ ಕೂತು ಕಲಿಯಲಿಕ್ಕಂತೂ ಆಗುವುದಿಲ್ಲ. ಆದ್ದರಿಂದ ನಾನೇ ಸ್ವಂತ ಓದಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ ಅಂದುಕೊಂಡೆ.. ಕೆಲ ತಿಂಗಳುಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಮಳಿಗೆಗೆ ಹೋಗಿದ್ದಾಗ ಕನ್ನಡ ವ್ಯಾಕರಣ ಪುಸ್ತಕಗಳು ಕಾಣಿಸಿದ್ದವು. ಪಂಜೆ ಮಂಗೇಶರಾಯರು ಬರೆದ ‘ಕನ್ನಡ ಮೂಲ ವ್ಯಾಕರಣ‘, ರಂಗನಾಥ ಶರ್ಮರ ‘ಹೊಸಗನ್ನಡ ವ್ಯಾಕರಣ‘ ಪುಸ್ತಕಗಳನ್ನು ಕೊಂಡು ತಂದಿಟ್ಟಿದ್ದೆ. . ಮೊನ್ನೆ ಸಾಹಿತ್ಯ ಸಮ್ಮೇಳನ ಆದಾಗಿಂದ ಓದಲು ಶುರುಮಾಡಿದ್ದೇನೆ. ಮೊದಲಿಗೆ ‘ಕನ್ನಡ ಮೂಲ ವ್ಯಾಕರಣ‘ ಪುಸ್ತಕಕ್ಕೆ ಕೈಹಾಕಿದ್ದೇನೆ. ಇದು ಸಾಂಪ್ರದಾಯಿಕ ಶೈಲಿಯಲ್ಲಿಲ್ಲ. ಮೊದಲು ವಿಷಯ ವಿವರಿಸಿ ಆಮೇಲೆ ಉದಾಹರಣೆ ಕೊಡುವ ಬದಲು ಮೊದಲೇ ಉದಾಹರಣೆ, ಪ್ರಯೋಗಗಳನ್ನು ಕೊಟ್ಟು ವಿವರಿಸಿ ಅದರ ಮೂಲಕ ವ್ಯಾಕರಣದ ವಿಷಯಗಳನ್ನು ಹೇಳಿದ್ದಾರೆ. ನಾಮಪದ, ಕ್ರಿಯಾಪದ, ಲಿಂಗ, ವಚನ, ವಿಭಕ್ತಿ, ಪ್ರತ್ಯಯ, ಸಂಧಿ, ಸಮಾಸ, ಕರ್ತರಿ, ಕರ್ಮಣಿ ಪ್ರಯೋಗ....ಹ್ಮ್.... ಇನ್ನೂ ಏನೇನೋ ಇದೆ. ಒಂದೊಂದೇ ನಿಧಾನಕ್ಕೆ ಓದುತ್ತಿದ್ದೇನೆ. ಎರಡೂ ಪುಸ್ತಕಗಳೂ ಚಿಕ್ಕದಾಗಿ ಚೊಕ್ಕದಾಗಿವೆ. ಈ ಪುಸ್ತಕಗಳನ್ನು ಓದಾದ ಮೇಲೆ ಕನ್ನಡ ವ್ಯಾಕರಣವನ್ನು ಬೇರೆ ಆಯಾಮದಿಂದ ಹೇಳುವ ಶಂಕರಭಟ್ಟರ 'ಕನ್ನಡ ಸೊಲ್ಲರಿಮೆ' ಪುಸ್ತಕವನ್ನೂ ಓದಬೇಕಿದೆ. ಕನ್ನಡ ವ್ಯಾಕರಣ ಓದಿಗೆ ದಿನಾ ಅರ್ಧ-ಮುಕ್ಕಾಲು ತಾಸು ಎತ್ತಿಟ್ಟಿದ್ದೇನೆ. ಚೆನ್ನಾಗನಿಸುತ್ತಿದೆ. ವ್ಯಾಕರಣ & ಪುಸ್ತಕಗಳ ಬಗ್ಗೆ ಸಲಹೆಗಳೇನಾದರೂ ಇದ್ದರೆ ಕೊಡಿ..

ಗೆಳೆಯರಿಗೆ ಹೇಳಿದರೆ ಕೆಲವರು ಅದನ್ನೆಲ್ಲಾ ಓದಿ ಯಾಕೆ ಟೈಂವೇಸ್ಟ್ ಮಾಡ್ತೀಯಾ, ಟೆಕ್ನಿಕಲ್ ಬುಕ್ಸ್ ಓದು, ಅದರಿಂದ ಪ್ರಯೋಜನವಾಗುತ್ತೆ ಅನ್ನುತ್ತಾರೆ. ಅದು ನಿಜ. ಆದರೂ ಇರಲಿ. ಅದನ್ನೂ ಮಾಡೋಣ, ಇದನ್ನೂ ಮಾಡೋಣ. ಆಸಕ್ತಿ ಇರುವ ಎಲ್ಲವನ್ನೂ ಮಾಡೋಣ. ಎಲ್ಲದಕ್ಕೂ ಟೈಂ ಇದೆ. ಲೈಫು ಇಷ್ಟೇ ಏನಲ್ಲವಲ್ಲ!

****

ಈ ನಡುವೆ ಹಿಂದಿನ ವಾರ ದಾಂಡೇಲಿ, ಸುತ್ತಮುತ್ತಲಿನ ಸ್ಥಳಗಳಿಗೆ ಪ್ರವಾಸ/ಚಾರಣ ಹೋಗಿಬಂದೆ. ಖುಷಿಯಾಯಿತು. ಆದರೆ ಎರಡು ದಿನ ಏನೇನೂ ಸಾಕಾಗಲಿಲ್ಲ. ಮೂಲತಃ ಉತ್ತರಕನ್ನಡ ಜಿಲ್ಲೆಯವನಾಗಿದ್ದರೂ ಶಿರಸಿಯ ಸುತ್ತಲಿನ ಕೆಲವು ಸ್ಥಳಗಳನ್ನು ಬಿಟ್ಟು ನನಗೆ ಆ ಜಿಲ್ಲೆಯನ್ನು ನೋಡಲು, ತಿರುಗಾಡಲು ಹೆಚ್ಚು ಅವಕಾಶ ಸಿಕ್ಕಿಲ್ಲ. ಮತ್ತೆ ಹೋಗಬೇಕು.. ಮತ್ತೆ ಮತ್ತೆ ಹೋಗಬೇಕು.. explore ಮಾಡಬೇಕು...

ಮಂಗಳವಾರ, ಫೆಬ್ರವರಿ 8, 2011

ಅದು ಅಕ್ಷರ ಜಾತ್ರೆ, ಆಗಿದ್ದು ಅಕ್ಷರಶಃ ಜಾತ್ರೆ !

ಇದು ನನಗೆ ಎರಡನೆ ಸಾಹಿತ್ಯ ಸಮ್ಮೇಳನ. ಎರಡು ವರ್ಷದ ಹಿಂದೆ ಶಿವಮೊಗ್ಗದಲ್ಲಿ ನಡೆದಾಗ ಹೋಗಿದ್ದೆ. ಅರ್ಧ ದಿನವಷ್ಟೆ ಅಲ್ಲಿದ್ದದ್ದು.  ಸಮ್ಮೇಳನ ಹೇಗಿರುತ್ತದೆ ಎಂದು ನೋಡಲು ಹೋಗಿದ್ದೆ ಎನ್ನುವುದಕ್ಕಿಂತ ಹೆಚ್ಚಿನ ಉದ್ದೇಶ ಇರಲಿಲ್ಲ ಆಗ. ಆದರೆ ಈ ಬಾರಿ ಬೆಂಗಳೂರಿನಲ್ಲೇ ನಡೆಯುತ್ತದೆ ಎಂದಾಗ ಸರಿಯಾಗಿ ಪಾಲ್ಗೊಳ್ಳಬೇಕು ಎಂಬ ಆಸೆ ಇತ್ತು. ಅದರಂತೆ ಕಾರ್ಯಕ್ರಮದ ಪಟ್ಟಿ ನೋಡಿ ನನಗೆ ಆಸಕ್ತಿಯಿದ್ದ ಕೆಲವನ್ನು ಗುರುತು ಹಾಕಿಕೊಂಡಿದ್ದೆ.

ಕನ್ನಡ ಜಾತ್ರೆಗೆ ದಾರಿಯಾವುದಯ್ಯಾ.. ಎಂದು ಕೇಳಿಕೊಂಡು ೫ನೇ ತಾರೀಕು ಶನಿವಾರ ನ್ಯಾಷನಲ್ ಕಾಲೇಜು ಮೈದಾನಕ್ಕೆ ಹೋದರೆ ಜನವೋ ಜನ. ಅವತ್ತು ೪ ಗಂಟೆಗೆ ನಾನು ಹೋಗಬೇಕೆಂದುಕೊಂಡಿದ್ದ ಗೋಷ್ಠಿಯೊಂದಿತ್ತು. ಹೋದಕೂಡಲೇ ಅಲ್ಲಿ ಕಾಣಿಸಿದ್ದು ಸಮ್ಮೇಳನದ ಮುಖ್ಯ ವೇದಿಕೆ. ಖುದ್ದು ವೆಂಕಟಸುಬ್ಬಯ್ಯನವರೇ ಮಾತಾಡುತ್ತಿದ್ದರು. ಕೇಳುತ್ತಾ ಇರುವಾಗ ಒಂದಿಬ್ಬರು ಗೆಳೆಯರು ಜೊತೆಯಾದರು. ಪುಸ್ತಕದಂಗಡಿಗಳಿಗೆ ಹೋದೆವು. ಹೋದೆವು ಅನ್ನುವುದಕ್ಕಿಂತ ಅದರ ಬಾಗಿಲಲ್ಲಿ ಹೋಗಿ ನಿಂತೆವು ಅಷ್ಟೆ, ಜನ ನಮ್ಮನ್ನು ತಳ್ಳಿಕೊಂಡು ಒಳಗೆ ತಂದುಬಿಟ್ಟರು. ಛಂದ ಪುಸ್ತಕದ ಮಳಿಗೆಯಲ್ಲಿ ವಸುಧೇಂದ್ರ ನಗುಮುಖದಿಂದ ಕೂತಿದ್ದರು. ವಿಪರೀತ ರಶ್ಶಿನಿಂದ ಇವತ್ತು ಯಾವುದೂ ಸರಿಯಾಗಿ ನೋಡಲಾಗುವುದಿಲ್ಲ ಎಂದು ಗೊತ್ತಾದರೂ ನಾಳೆ ಭಾನುವಾರ ಇದಕ್ಕೂ ಜಾಸ್ತಿ ರಶ್ಶು ಇರುತ್ತದೆ ಎಂದು ನೆನಪಿಗೆ ಬಂತು. ಇವತ್ತೇ ಮುಗಿಸಿಬಿಡೋಣ ಎಂದು ಒಂದೊಂದೇ ಸಾಲಿನೊಳಕ್ಕೆ ಹೋಗುತ್ತಾ ಕಳೆದುಹೋಗಿಬಿಟ್ಟೆ. ಗೆಳೆಯರು ಎಲ್ಲೋ ತಪ್ಪಿಹೋದರು. ಕರ್ನಾಟಕದಲ್ಲಿ ಇಷ್ಟೆಲ್ಲಾ ಪಬ್ಲಿಷರ್ ಗಳು ಇದ್ದಾರೆ ಎಂದು ಗೊತ್ತಾಗಿದ್ದೇ ಅಲ್ಲಿ. ಕೆಲವು ಲೇಖಕರೂ ಕಂಡರು. ’ಬನವಾಸಿ ಬಳಗ’ದ ಮಳಿಗೆಯಲ್ಲಿ ಹುಡುಗರು ಉತ್ಸಾಹದಿಂದ ಜನರನ್ನು ಮಾತಾಡಿಸುತ್ತಿದ್ದರು. ಎಲ್ಲಾ ಸಾಲುಗಳನ್ನೂ, ಎಲ್ಲಾ ಸ್ಟಾಲುಗಳನ್ನೂ ಮುಗಿಸಿಕೊಂಡು ಒಂದಿಷ್ಟು ಪುಸ್ತಕ ಎತ್ತಾಕಿಕೊಂಡು ಆಗುವಷ್ಟರಲ್ಲಿ ಅಲ್ಲಿ ಸುಮಾರು ೩-೪ ತಾಸುಗಳನ್ನು ಕಳೆದುಬಿಟ್ಟಿದ್ದೆ. ಸಂಜೆ ಕಾವ್ಯವಾಚನ ಮತ್ತು ಗಾಯನ ನಡೆಯುತ್ತಿತ್ತು. ಕೂತು ಕೇಳಿ ಸುಧಾರಿಸಿಕೊಂಡದ್ದಾಯ್ತು.

ಮಾರನೇ ದಿನ ಭಾನುವಾರದ ಎರಡು ಗೋಷ್ಠಿಗಳಿಗೆ ಹೋಗಲು ಗುರುತುಹಾಕಿಕೊಂಡಿದ್ದೆ. ಬೆಳಗ್ಗಿನ ಗೋಷ್ಠಿಗೆ ನಾನು ಹೋಗುವುದು ತಡವಾಗಿಬಿಟ್ಟಿತ್ತು. ಅಲ್ಲಿ ಸ್ವಲ್ಪ ಹೊತ್ತು ಇದ್ದು ಅನಂತರ ಉನ್ನತಿ ಸಭಾಂಗಣದಲ್ಲಿದ್ದ ಎರಡನೇ ಗೋಷ್ಠಿಗೆ ಹೋದೆ. ಅತಿಥಿಗಳು ಮಾತನಾಡಿದರು. ಚೆನ್ನಾಗಿತ್ತು. ನನ್ನ ಆಸಕ್ತಿಯ ಹಲವು ವಿಷಯಗಳು ತಿಳಿದವು. ಅದನ್ನು ಮುಗಿಸಿ ಹೊರಗೆ ಬಂದು ಮುಖ್ಯ ವೇದಿಕೆಯ ಬಳಿ ಬರುತ್ತಿದ್ದಂತೇ ಗೆಳೆಯರು ಜೊತೆಯಾದರು. ಆಮೇಲೆ ಬಹಿರಂಗ ಅಧಿವೇಶನ ಮತ್ತು ಸಮಾರೋಪ ಸಮಾರಂಭ.

********

ಈಗ ವಿಷಯಕ್ಕೆ ಬಂದರೆ, ಇದು ಸಾಹಿತ್ಯ ಸಮ್ಮೇಳನವಾ ಅಥವಾ ಒಂದು ಜಾತ್ರೆಯಾ ಎಂಬ ಸಂಶಯ ಎಲ್ಲರಿಗೂ ಬಂದಿರುವಂತೆ ನನಗೂ ಬಂದಿದ್ದಂತೂ ಹೌದು. ಅದು ಹಾಗೆ ಇದ್ದಿದ್ದೂ ಹೌದು. ನನ್ನ ಆಸುಪಾಸಿನ ವಯಸ್ಸಿನ ಬಹುತೇಕ ಹುಡುಗಹುಡುಗಿಯರಿಗೆ ಇದು ಮೊದಲನೇ ಸಮ್ಮೇಳನ. ಮಾಧ್ಯಮಗಳಲ್ಲಿ ಪ್ರಚಾರ, ಸಂಭ್ರಮ ನೋಡಿ ಸಮ್ಮೇಳನ ಅಂದರೆ ಏನೋ ವಿಶೇಷವಾದದ್ದು ಅಂದುಕೊಂಡು ಬಂದವರು ಬಹಳಷ್ಟು ಜನ. ನಾವು ಎಷ್ಟೇ ಸಕಾರಾತ್ಮಕವಾಗಿ ತೆಗೆದುಕೊಂಡು ಹೆಮ್ಮೆ ಪಡೋಣವೆಂದರೂ ಕೂಡ  ಭ್ರಮನಿರಸನವಾಗಿದೆ. ಇಷ್ಟು ದೊಡ್ಡ ಸಮ್ಮೇಳನ ಆಯೋಜಿಸುವುದು ಎಷ್ಟು ಕಷ್ಟದ ಕೆಲಸ ಎಂದು ಗೊತ್ತಿದೆ. ಆಯೋಜಕರನ್ನು ಟೀಕಿಸುವುದು, ಅದು ಸರಿಯಿಲ್ಲ ಇದು ಸರಿಯಿಲ್ಲ ಹಾಗಿರಬೇಕು ಹೀಗಿರಬೇಕು ಎನ್ನುವುದು ಸರಿಯಲ್ಲ ನಿಜ. ನಾವೇನೋ ಅಕ್ಷರ ಜಾತ್ರೆ ಎಂಬ ಸುಂದರ ಹೆಸರನ್ನಿಟ್ಟು ಕರೆದುಬಿಡುತ್ತೇವೆ. ಆದರೆ ಜಾತ್ರೆ ಅಂದರೆ ಅದು ಈ ಪಾಟಿ ಜಾತ್ರೆಯೇ ಆಗಿಬಿಡುತ್ತದೆಂದರೆ ಸಾಹಿತ್ಯ ಸಮ್ಮೇಳನದ ಉದ್ದೇಶ ಖಂಡಿತ ಇದಲ್ಲ.

ಮೂರುದಿನಗಳಲ್ಲಿ ಲಕ್ಷಾಂತರ ಜನ ಬಂದಿದ್ದು ನಿಜ. ಆದರೆ ಅಲ್ಲಿ ಬಂದಿದ್ದ ಜನರಲ್ಲಿ ಇಲ್ಲಿ ಎಂತದ್ದೋ ಸಮ್ಮೇಳನ ನಡೆಯುತ್ತಿದೆ ಎಂದು ಸುಮ್ಮನೇ ನೋಡಲು ಬಂದವರೇ ಹೆಚ್ಚು. ನಿಜವಾದ ಆಸಕ್ತಿಯಿದ್ದವರಿಗೆ ಬೇಕಾದ ಒಂದು ಗಂಭೀರ ವಾತಾವರಣವೇ ಅಲ್ಲಿ ಸಿಗಲಿಲ್ಲ. ಮುಖ್ಯವೇದಿಕೆ ಮುಂದೆ ಕುಳಿತವರಿಗಷ್ಟೆ ಎಂಬಂತಾಗಿತ್ತು. ಹಿಂದೆ ಕೂತವರಿಗೆ ದೃಶ್ಯವೂ ಇಲ್ಲ, ಸರಿಯಾದ ಶ್ರವ್ಯವೂ ಇಲ್ಲ! ಪುಸ್ತಕದಂಗಡಿಗಳಲ್ಲಿ ಬರೀ ಧೂಳು. ಆದರೂ ಅದು ಕನ್ನಡದ ಧೂಳು. ಗೋಷ್ಠಿಗಳ ವಿಷಯಗಳು ಚೆನ್ನಾಗಿದ್ದವಷ್ಟೆ. ಆದರೆ ಅಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಿರದ ಜನರೂ ಆ ಬಾಗಿಲಿನಿಂದ ಒಳಬಂದು ಈ ಬಾಗಿಲಿನಿಂದ ಹೊರಗೆ ಹೋದರು. ಮತ್ತೊಂದು ಕಡೆ ಹೊರಜಗತ್ತಿಗೆ ತೆರೆದುಕೊಳ್ಳಲಾರದ ಒಂದಿಷ್ಟು ಸಂಕುಚಿತ ಮನಸ್ಸುಗಳು ಸೇರಿ ಡಬ್ಬಿಂಗ್ ವಿರುದ್ಧ ಕೂಗಾಡಿಬಿಟ್ಟರು.

ಇದೆಲ್ಲಾ ನೋಡಿದರೆ ಒಂದು ಮೌಲ್ಯಯುತ ಸಮ್ಮೇಳನ ಮತ್ತು ಜಾತ್ರೆ ಎರಡನ್ನೂ ಬೆರೆಸಿಬಿಟ್ಟಂತೆ ಕಾಣುತ್ತದೆ. ಕಡ್ಲೇಕಾಯಿ ಪರಿಷೆಯಂತೆ, ಮಾರಿಕಾಂಬಾ ಜಾತ್ರೆಯಂತೆ ಒಂದು ದೊಡ್ಡ ಜಾತ್ರೆ ಮತ್ತು ಮಾರಾಟ ಮಾಡಬೇಕೆಂದರೆ ಅದನ್ನೇ ಮಾಡಬಹುದು. ಅದನ್ನು ಕನ್ನಡದ ಸೊಗಡಿನೊಂದಿಗೇ ಮಾಡಬಹುದು. ಅದ್ಬುತ ಕನ್ನಡ ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನಿಡಿಸಿ ಮಾಡಬಹುದು. ಅದಕ್ಕೆ ಕನ್ನಡ ಸಾಹಿತ್ಯ ಪರಿಷತ್ತೇ ಬೇಡ. ಈ ಭಾಷಣಗಳು, ಗೋಷ್ಠಿಗಳಲ್ಲಿ ಟೈಂಪಾಸಿಗೆ ಬಂದು ತೂಕಡಿಸುವ ಕೆಲ ಮುದುಕರು, ಪುಕ್ಸಟ್ಟೆ ತಿರುಗುವ ಪಡ್ಡೆಗಳು, ಐಟಂ ಹುಡ್ಗೀರು, ಕಡ್ಲೆಕಾಯಿ ಮಾರುವವರು, ಐಸ್ ಕ್ಯಾಂಡಿ ಚೀಪುವವರು, ತಿಂಡಿ ಹುಡುಕುವವರು, ಯಾವತ್ತೂ ಕಂಡಿಲ್ಲದವರಂತೆ ಚಾಟ್ಸ್ ತಿನ್ನುವವರು, ರಸ್ತೆ ಬದಿಯ ಮಾರಾಟಗಾರರು, ಕಯ್ಯಪಿಯ್ಯಗುಡುವ ಚಿಳ್ಳೆಗಳು, ಪಿಕ್ನಿಕ್ಕಿಗೆ ಬಂದಂತೆ ಬರುವವರು, ಯಾವುದೋ ಊರಿಂದ ಆನ್ ಡ್ಯೂಟಿ ರಜೆ ಮೇಲೆ ಬಂದು ಸುಮ್ಮನೇ ಇಲ್ಲಿ ಉಂಡು ತಿಂದು ತಿರುಗುವವರು, ಆ ಕಸದ ರಾಶಿ .... ಇವೆಲ್ಲಾ ‘ಸಾಹಿತ್ಯ ಸಮ್ಮೇಳನ‘ಕ್ಕೆ ಬೇಕಾಉಚಿತ ಊಟ, ಹಾಜರಾತಿ ರಜೆ ರದ್ದಾಗಲಿ. ಆಗ ಜೊಳ್ಳು ಹೋಗಿ ಗಟ್ಟಿಕಾಳುಗಳಷ್ಟೇ ಉಳಿಯುತ್ತವೆ ಮತ್ತು ಕನ್ನಡ ಕಟ್ಟಲು ಅಷ್ಟು ಸಾಕು ಕೂಡ.

ಇದು ಬೆಂಗಳೂರಿನಲ್ಲಿ ಆಗಿದ್ದಕ್ಕೆ ವಿಪರೀತ ಜನಸಂದಣಿಯಿಂದ ಹೀಗಾಯಿತಾ? ಅಥವಾ ಎಲ್ಲ ಕಡೆಯೂ ಹಿಂಗೇನಾ? ಆಯೋಜಕರು ಇಷ್ಟೆಲ್ಲಾ ಜನರನ್ನು ನಿರೀಕ್ಷಿಸಿರಲಿಲ್ಲವಾ? ಗೊತ್ತಿಲ್ಲ. ಒಟ್ಟಿನಲ್ಲಿ ಸಮ್ಮೇಳನ ವ್ಯರ್ಥ ಅಂತ ಅನ್ನಿಸದಿದ್ದರೂ ಸಮಾಧಾನವಾಗಲಿಲ್ಲ. ಮುಖ್ಯವೇದಿಕೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯಲಿ, ಜೊತೆಗೆ ಕೊನೇಪಕ್ಷ ಸಾಹಿತ್ಯ ಗೋಷ್ಠಿಗಳಿಗಾದರೂ ಸಂಬಂಧಪಟ್ಟ ಬರಹಗಾರರು, ಸಾಹಿತಿಗಳು, ಅಧ್ಯಾಪಕರು, ವಿಶ್ವವಿದ್ಯಾಲಯದ ಪ್ರತಿನಿಧಿಗಳು, ತಂತ್ರಜ್ಞರು,  ಕ್ಷೇತ್ರಗಳ ಪರಿಣಿತರು  ಮತ್ತು ಆಸಕ್ತಿ ಇರುವ ಸಾರ್ವಜನಿಕರು ಮಾತ್ರ ನೋಂದಾಯಿಸಿಕೊಂಡು ಭಾಗವಹಿಸಿ ಒಂದು ಕ್ಯಾಂಪಸ್ಸಿನಲ್ಲಿ ಮಾಡಬಹುದಾಗುವಂತೆ ಸಮ್ಮೇಳನದ ಸ್ವರೂಪ ಬದಲಾಗಬೇಕಿದೆ ಮತ್ತು ಇನ್ನೂ ವ್ಯವಸ್ಥಿತವಾಗಬೇಕಿದೆ. ಏನೇ ಆಗಲಿ ಇದು ನಮ್ಮದೇ ಸಮ್ಮೇಳನ. ಮುಂದಿನ ದಿನಗಳಲ್ಲಿ ಚೆನ್ನಾಗಿ ಆಗುತ್ತಾ ಹೋಗುತ್ತದೆ ಅಂತ ಆಶಿಸೋಣ.  ಒಟ್ಟಾರೆ ಈ ಸಮ್ಮೇಳನ ಒಂದು ಒಳ್ಳೆಯ ಅನುಭವ. ನನಗನ್ನಿಸಿದ್ದು ಹೇಳಿದ್ದೇನೆ. ಇನ್ನುಳಿದದ್ದು ಆ ತಾಯಿ ಭುವನೇಶ್ವರಿಗೆ ಬಿಟ್ಟದ್ದು.