ಪುಟಗಳು

ಬುಧವಾರ, ಜುಲೈ 27, 2011

ಅರೆಸ್ಟ್

ಲ್ಲಪ್ಪ ಯಾವುದೋ ಜಗಳಕ್ಕೆ ತನ್ನ ತಮ್ಮನನ್ನೇ ಕೊಲೆ ಮಾಡಿ ಜೈಲು ಸೇರಿದ್ದ. ಸ್ವಂತ ತಮ್ಮನನ್ನೇ ಭೀಕರವಾಗಿ ಕೊಲೆ ಮಾಡಿದ ಕಲ್ಲಪ್ಪನಿಗೆ ನ್ಯಾಯಾಲಯದಿಂದ ಇನ್ನೂ ಶಿಕ್ಷೆಯ ಪ್ರಮಾಣ ಘೋಷಣೆಯಾಗಬೇಕಿತ್ತು. ಆ ವಿಕೃತ ಕೊಲೆಗೆ ಮರಣದಂಡನೆಯಾಗುವುದು ಖಚಿತವಾಗಿತ್ತು. ಆದರೆ ಅಷ್ಟರಲ್ಲೇ ಒಂದು ರಾತ್ರಿ ಜೈಲರನನ್ನು ಕಬ್ಬಿಣದ ಸರಳಿನಲ್ಲಿ ಹೊಡೆದು ಬೀಗದ ಕೈ ಕಿತ್ತುಕೊಂಡು ಬಾಗಿಲು ತೆಗೆದು ಪರಾರಿಯಾಗಿದ್ದ. ಆ ಸಮಯದಲ್ಲಿ ಜೈಲರನ ಕೈಯಲ್ಲಿ ಯಾವುದೇ ಆಯುಧವಿಲ್ಲದಿದ್ದುದರಿಂದ ಕಲ್ಲಪ್ಪನ ಏಟಿನಿಂದ ತಪ್ಪಿಸಿಕೊಳ್ಳಲಾಗದೇ ಆತ ದಾರುಣವಾಗಿ ಹೊಡೆತ ತಿಂದು ಬಿದ್ದಿದ್ದ.

ಜೈಲಿನಿಂದ ಹೊರಬಿದ್ದ ಕಲ್ಲಪ್ಪ ಓಡಲು ಶುರುಮಾಡಿದ. ಊರಿನ ಬೀದಿಗಳಲ್ಲಿ ಚಟುವಟಿಕೆ ಕಡಿಮೆಯಾಗುತ್ತಿತ್ತು. ಜನರೆಲ್ಲಾ ಮನೆ ಸೇರಿಕೊಳ್ಳುತ್ತಿದ್ದರು. ಅಲ್ಲಿಂದ ಊರು ದಾಟಿ ಕಾಡಿನೊಳಗೆ ಸೇರಿ ಎಷ್ಟೋ ಹೊತ್ತಿನವರೆಗೆ ಓಡುತ್ತಾ ಓಡುತ್ತಾ ಸುಸ್ತಾದ ಕಲ್ಲಪ್ಪ ಸುಧಾರಿಸಿಕೊಳ್ಳಲು ನಿಂತ. ಅವತ್ಯಾಕೋ ಕತ್ತಲು ಹೆಚ್ಚೇ ಇದ್ದಂತಿತ್ತು. ಹಾಗೇ ತಲೆ ಎತ್ತಿ ನೋಡಿದ. ಆಕಾಶದಲ್ಲಿ ಚಂದ್ರ ಕಾಣಲಿಲ್ಲ, ನಕ್ಷತ್ರಗಳೂ ತಲೆಮರೆಸಿಕೊಂಡಿದ್ದವು. ಕಲ್ಲಪ್ಪನಿಗೆ ತಾನು ಎಲ್ಲಿದ್ದೇನೆ ಎಂಬುದೇ ಗೊತ್ತಾಗಲಿಲ್ಲ. ಆ ಕಾಡು ಅವನಿಗೆ ಅತ್ಯಂತ ಅಪರಿಚಿತ ಅನ್ನಿಸಿತು. ಅದೇ ಕಾಡಿನಲ್ಲಿ ಹಾಗೇ ಹೋದರೆ ಊರಿನಿಂದ ದೂರಕ್ಕೆ ಹೋಗುತ್ತೇನೋ ಅಥವಾ ಮತ್ತೆ ಊರೊಳಗೇ ಹೋಗುತ್ತೇನೋ ಎಂದು ಗೊತ್ತಾಗದೇ ಗೊಂದಲಕ್ಕೊಳಗಾಗಿ ಯೋಚಿಸತೊಡಗಿದ. ಇಷ್ಟು ಹೊತ್ತಿಗಾಗಲೇ ತಾನು ಜೈಲರನನ್ನು ಹೊಡೆದು ಓಡಿಬಂದ ವಿಷಯ ಎಲ್ಲರಿಗೂ ತಿಳಿದಿರುತ್ತದೆ, ತನ್ನನ್ನು ಹುಡುಕಿಕೊಂಡು ಪೋಲೀಸರು ಹೊರಟಿರುತ್ತಾರೆ, ಎಲ್ಲ ಕಡೆಯಲ್ಲೂ ಮಾಹಿತಿ ಕೊಟ್ಟಿರುತ್ತಾರೆ ಎಂದು ಅವನಿಗೆ ಖಾತ್ರಿಯಿತ್ತು. ತನ್ನ ಊರಿಗೆ ಹೋದರೂ ಅಲ್ಲಿ ಪೋಲೀಸರ ದಂಡೇ ಕಾದುಕುಳಿತಿರುತ್ತದೆ ಎಂದು ಗೊತ್ತಿತ್ತು. ಜೈಲಿನ ಬಂಧನದಿಂದ ತಪ್ಪಿಸಿಕೊಂಡು ಬಂದರೂ ಇನ್ನು ಯಾವತ್ತೂ ಈ ಜಗತ್ತಿನಲ್ಲಿ ಸ್ವತಂತ್ರವಾಗಿರುವುದು ಸಾಧ್ಯವಿಲ್ಲ ಅನ್ನಿಸತೊಡಗಿತು. ಮತ್ತೆ ಜೈಲಿನಲ್ಲಿರುವಂತೆಯೇ ಭಾಸವಾಯಿತು. ಹಾಗೇ ಮುಂದೆ ನಡೆಯತೊಡಗಿದ.


ಸ್ವಲ್ಪ ದೂರ ನೆಡೆಯುತ್ತಿದ್ದಂತೇ ಅಲ್ಲೇ ಪಕ್ಕದಲ್ಲಿ ಒಂದು ಹಳೇ ದಾರಿಯಿದ್ದಂತೆ ಕಂಡಿತು. ಅದರ ಕಡೆ ಓಡಿ ಹೋದ. ಅವನ ಅದೃಷ್ಟ ಅಲ್ಲಿಯೇ ಕೈಕೊಟ್ಟಿತ್ತು. ಕತ್ತಲಿನಲ್ಲಿ ಸ್ವಲ್ಪ ದೂರದಲ್ಲಿ ವ್ಯಕ್ತಿಯೊಬ್ಬ ನಿಂತಿದ್ದು ಕಂಡಿತು. ಆತನ ಮುಖ ಸರಿಯಾಗಿ ಕಾಣುತ್ತಿರಲಿಲ್ಲ. ಅಷ್ಟು ಹೊತ್ತಿಗೆ ಕರಿಮೋಡಗಳ ಮರೆಯಿಂದ ಚಂದ್ರ ಹೊರಕ್ಕೆ ಇಣುಕಿ ಮರದ ಎಲೆಗಳ ಸಂದಿಯಿಂದ ಬಂದ ಸಣ್ಣ ಬೆಳಕಿನಲ್ಲಿ ಆ ವ್ಯಕ್ತಿಯ ಕೈಲಿದ್ದ ಕೋವಿ ಕಲ್ಲಪ್ಪನಿಗೆ ಕಂಡಿತು. ಕಲ್ಲಪ್ಪನ ಎದೆ ಧಸಕ್ಕೆಂದಿತು. ಆ ಕೋವಿ ಕಲ್ಲಪ್ಪನೆಡೆಗೇ ನೆಟ್ಟಿತ್ತು. ಅಲ್ಲಿಂದ ಓಡಲು ಕಲ್ಲಪ್ಪ ಹವಣಿಸುತ್ತಿದ್ದಂತೆಯೇ "ಈ ಬಂದೂಕು ಪೂರ್ತಿ ಲೋಡ್ ಆಗಿದೆ" ಎಂದ ಆ ವ್ಯಕ್ತಿ. ಕಲ್ಲಪ್ಪ ಮರಗಟ್ಟಿ ನಿಂತ. ಅವನ ಎದೆ ಜೋರಾಗಿ ಹೊಡೆದುಕೊಳ್ಳತೊಡಗಿತು. ಕೈಕಾಲೇ ಆಡದಂತಾದ. ಆ ದಾರಿಯಲ್ಲಿ ಹಿಂದೆ ತಿರುಗಿ ನಡೆಯುವಂತೆ ಕಲ್ಲಪ್ಪನಿಗೆ ಕೋವಿಯಿಂದಲೇ ಸನ್ನೆ ಮಾಡಿದ ಆ ವ್ಯಕ್ತಿ. ಕಲ್ಲಪ್ಪ ತಪ್ಪಿಸಿಕೊಳ್ಳುವ ಅವಕಾಶವಿಲ್ಲದಷ್ಟು ಹತ್ತಿರ ಸಿಕ್ಕಿಹಾಕಿಕೊಂಡಿದ್ದ. ಬೇರೆ ವಿಧಿಯಿಲ್ಲದೇ ಆತ ತೋರಿಸಿದ ದಾರಿಯಲ್ಲಿ ನಿಧಾನಕ್ಕೆ ನಡೆಯತೊಡಗಿದ. ಹಿಂದೆ ಕುತ್ತಿಗೆಗೆ ಕೋವಿಯ ನಳಿಕೆ ತಾಗುತ್ತಿತ್ತು. ಜೋರಾಗಿ ಉಸಿರಾಡಲೂ ಹೆದರಿಕೆಯಾಗಿ ಎಡಬಲಕ್ಕೆ ಸ್ವಲ್ಪವೂ ತಿರುಗದೇ ಮನ್ನಡೆದ. ಕತ್ತು ಭಯಂಕರವಾಗಿ ನೋಯುತ್ತಿತ್ತು. ದೇಹ ಸೋತುಹೋದಂತೆ ಅನ್ನಿಸಿತು.


ಕಲ್ಲಪ್ಪ ತನ್ನ ತಮ್ಮನನ್ನು ಕೊಲೆ ಮಾಡಿದ ರೀತಿಯಲ್ಲೇ ಅವನೆಂತಹ ಕ್ರೂರ ಮನಸ್ಸಿನವನೆಂದು ಹೇಳಬಹುದಿತ್ತು. ತನ್ನ ಕೊರಳಿಗೆ ಕುಣಿಗೆ ಬೀಳುವುದು ಖಂಡಿತ ಎಂದು ಗೊತ್ತಾದ ಮೇಲೂ ಕೂಡ ಜೈಲರನನ್ನು ಹೊಡೆದು ಓಡಿಬರುವ ಸಾಹಸಕ್ಕೆ ಕೈ ಹಾಕಿದ್ದ. ಆದರೆ ಅಂತಹ ಮನುಷ್ಯನೂ ಈಗ ಏನೂ ಮಾಡದವನಂತಾಗಿದ್ದ. ಆತನ ಹುಂಬ ಧೈರ್ಯ ಕೊನೆಯಾದಂತೆ ಅನ್ನಿಸಿತು. ಹಿಂದೆ ಆ ವ್ಯಕ್ತಿ ಹತ್ತಿರದಲ್ಲೇ ನಡೆಯುತ್ತಿದ್ದ ಶಬ್ದ ಕೇಳುತ್ತಿತ್ತು. ಕತ್ತಲು ಹೆಚ್ಚುತ್ತಿತ್ತು. ಹೀಗೆ ಎಷ್ಟೋ ದೂರ ಅವರಿಬ್ಬರೂ ನಡೆದರು. ಹಾಗೇ ನಡೆಯುತ್ತಾ ಒಮ್ಮೆ ಬೆಳದಿಂಗಳ ಯಾವುದೋ ಒಂದು ಕ್ಷಣದಲ್ಲಿ ಕಲ್ಲಪ್ಪ ಅಚಾನಕ್ಕಾಗಿ ಹಿಂದಿರುಗಿ ನೋಡಿದ. ನೋಡಿದವನೇ ಬೆಚ್ಚಿಬಿದ್ದ. ಅವನ ಹಿಂದೆ ಬರುತ್ತಿದ್ದ ವ್ಯಕ್ತಿ ಅವನಿಂದ ಹೊಡೆಸಿಕೊಂಡ ಜೈಲರ್ ಆಗಿದ್ದ. ಆ ಮುಖ ಬಿಳುಚಿಕೊಂಡಿತ್ತು. ಕಬ್ಬಿಣದ ಸರಳಿನಿಂದ ಕಲ್ಲಪ್ಪ ಹೊಡೆದ ಗುರುತು ಮುಖದ ಮೇಲೆ ಹಾಗೇ ಎದ್ದು ಕಾಣುತ್ತಿತ್ತು. ಕಲ್ಲಪ್ಪ ಪೂರ್ತಿ ಧೈರ್ಯ ಕಳೆದುಕೊಂಡ. ಎಂತದೇ ಧೈರ್ಯವಂತನಾದರೂ ಅಸಹಾಯಕನಾದಾಗ ಸೋತುಬಿಡುತ್ತಾನೆ.

ಅವರಿಬ್ಬರೂ ಹಾಗೇ ನೆಡೆಯುತ್ತಾ ಊರಿನೊಳಗೆ ಬಂದರು. ಅಷ್ಟೊತ್ತಿಗೆ ಬೆಳಗಿನ ಜಾವ. ಊರ ಬೀದಿಗಳೆಲ್ಲಾ ಖಾಲಿಯಿದ್ದವು. ಆ ಜೈಲರ್ ಸೀದಾ ಕಲ್ಲಪ್ಪನನ್ನು ಜೈಲಿನ ದಾರಿಗೆ ನಡೆಸಿಕೊಂಡು ಹೋದ. ಜೈಲಿನ ಮುಖ್ಯದ್ವಾರಕ್ಕೆ ಬಂದು ಕಲ್ಲಪ್ಪ ಬಾಗಿಲನ್ನು ತಳ್ಳಿದ. ಹಾಗೇ ತೆಗೆದುಕೊಂಡಿತು. ಒಳಗೆ ಹೋಗುತ್ತಿದ್ದಂತೆಯೇ ಅಲ್ಲಿ ಕಾವಲಿದ್ದ ಪೋಲೀಸರು ಇವನನ್ನು ಹಿಡಿದುಕೊಂಡರು. ಕಲ್ಲಪ್ಪ ಹಿಂದಿರುಗಿ ನೋಡಿದ. ತನ್ನ ಹಿಂದೆ ಬರುತ್ತಿದ್ದ ಜೈಲರ್ ತನ್ನ ಜೊತೆಗೆ ಒಳಗೆ ಬಂದಿದ್ದು ಕಾಣಲಿಲ್ಲ.

ಬಂಧಿಸಿದ್ದ ಕಲ್ಲಪ್ಪನಿಗೆ ಕೋಳ ತೊಡಿಸಿ ಜೈಲಿನ ಕೋಣೆಯ ಕಡೆಗೆ ಕರೆದೊಯ್ದರು..... ಅಲ್ಲೇ ಕಾರಿಡಾರ್ ನ ಬದಿಯಲ್ಲಿ ಮೇಜಿನ ಮೇಲೆ ಜೈಲರನ ಹೆಣವನ್ನು ಮಲಗಿಸಲಾಗಿತ್ತು !


****

ಇಂಗ್ಲೀಶ್ ಮೂಲ ಕಥೆ:  AN ARREST by Ambrose Bierce
ಸಖಿ ಪತ್ರಿಕೆಗಾಗಿ ಅನುವಾದಿಸಿ ಬರೆದಿದ್ದು.ಸೋಮವಾರ, ಜುಲೈ 11, 2011

ಐಸ್ ವೈನ್ & ಕೊಮಗಟ ಮರು

ಯಾವುದಾದರೂ ಊರಿಗೆ/ಪ್ರದೇಶಕ್ಕೆ ಹೋದಾಗ ಅಲ್ಲಿನ ವಿಶೇಷ ಅನ್ನಿಸುವಂತದ್ದು ಏನಾದರೂ ಇದೆಯಾ ಎಂದು ತಿಳಿದುಕೊಳ್ಳುವುದು ನನ್ನ ಅಭ್ಯಾಸ. ಅಂದರೆ ಆ ಊರಿನ ವಿಶೇಷ ಪದಾರ್ಥಗಳು, ಆ ಊರಲ್ಲಿ ಮಾತ್ರ ಸಿಗುವಂತದ್ದು, ಬೆಳೆಯುವಂತದ್ದು, ತಯಾರಾಗುವಂತದ್ದು. ಉದಾಹರಣೆಗೆ ಹಾಸನ ಅಂದಕೂಡಲೇ ಸೌತೆಕಾಯಿ, ಶುದ್ಧ ನೀರಾ ಹೀಗೆ. ಮೊದಲೆಲ್ಲಾ ಸುಮಾರಷ್ಟು ಊರುಗಳಲ್ಲಿ ಆ ಊರಿನದ್ದೇ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವಂತದ್ದೇನಾದರೂ ಇರುತ್ತಿದ್ದವು. ಈಗಲೂ ಇವೆ. ಮೊಳಕಾಲ್ಮೂರು ಸೀರೆ, ಚನ್ನಪಟ್ಟಣದ ಬೊಂಬೆ,  ಮತ್ಯಾವುದೋ ಕಲೆ, ತರಕಾರಿ, ತಿಂಡಿ, ಸಿಹಿ ಮುಂತಾದವು.  ಆದರೆ ಜಾಗತೀಕರಣದ ನಂತರ ಎಲ್ಲ ಸ್ವಲ್ಪ ಕಲಸುಮೇಲೋಗರವಾಗಿದ್ದರೂ ಕೂಡ ಕೆಲವು ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಇರಲಿ.


www.en.wikipedia.org/wiki/Ice_wine

ಅದೇ ರೀತಿ ಇಲ್ಲಿ ಕೆನಡಾದಲ್ಲಿ ನಾನಿರುವ ಪ್ರದೇಶದ ವಿಶೇಷದ ಬಗ್ಗೆ ವಿಚಾರಿಸಿದಾಗ ನನಗೆ ತಿಳಿದು ಬಂದದ್ದು ’ಐಸ್ ವೈನ್’. ನಾನು ರೆಡ್ ವೈನ್, ವೈಟ್ ವೈನ್ ಕೇಳಿದ್ದೆ ಆದರೆ ಈ ಐಸ್ ವೈನ್ ಬಗ್ಗೆ ಇದುವರೆಗೂ ಕೇಳಿರಲಿಲ್ಲ. ಈ ಒಂಟಾರಿಯೋ ರಾಜ್ಯದ ನಯಾಗರ ಪ್ರದೇಶದಲ್ಲಿ ಬಹಳ ದ್ರಾಕ್ಷಿ ತೋಟಗಳಿವೆ. ಆದ್ದರಿಂದ ಬಹಳ ವೈನರಿಗಳೂ ಇವೆ. ಹಲವು ಬಗೆಯ ವೈನ್ ಗಳು ತಯಾರಾಗುತ್ತವೆ. ಒಂದೊಂದು ವೈನ್ ಗೂ ಅದರದ್ದೇ ಆದ ವಿಶೇಷತೆಗಳಿವೆ. ಇಲ್ಲಿ ತಯಾರಾಗುವ ಅಂತಹ ವಿಶೇಷ ವೈನ್ ಗಳಲ್ಲಿ ಮುಖ್ಯವಾದದ್ದು ಈ ಐಸ್ ವೈನ್. ಇದು ಜಗತ್ತಿನ ಹಲವು ಶೀತ ದೇಶಗಳಲ್ಲಿ ತಯಾರಾಗುತ್ತದಾದರೂ ಕೆನಡಾದ ಐಸ್ ವೈನ್ ಗುಣಮಟ್ಟ ಮತ್ತು ಪ್ರಮಾಣದಲ್ಲಿ ನಂ. ೧ ಆಗಿದ್ದು ಪ್ರಸಿದ್ಧವಾಗಿದೆಯಂತೆ. ಸಾಮಾನ್ಯವಾಗಿ ವೈನ್ ಮಾಡುವಾಗ ದ್ರಾಕ್ಷಿ ಮಾಗಿದ ಅನಂತರ ಬಳ್ಳಿಯಿಂದ ಕಿತ್ತು ಸಂಸ್ಕರಣೆ ಮಾಡುತ್ತಾರೆ, ಆದರೆ ಈ ಐಸ್ ವೈನ್ ಗೆ ಮಾತ್ರ ಈ ರೀತಿ ಮಾಡುವುದಿಲ್ಲ. ಐಸ್ ವೈನ್ ವಿಶೇಷತೆ ಇರುವುದೇ ಅಲ್ಲಿ. ದ್ರಾಕ್ಷಿಯ ಗೊಂಚಲನ್ನು ಬಳ್ಳಿಯಲ್ಲಿ ಹಾಗೆಯೇ ಬಿಡುತ್ತಾರೆ. ಚಳಿಗಾಲದಲ್ಲಿ ಮೈನಸ್ ವಾತಾವರಣದಲ್ಲಿ ಅವುಗಳ ಮೇಲೆ ಹಿಮ ಕೂರುತ್ತದೆ. ಆಗ ಅದರಲ್ಲಿನ ನೀರಿನ ಅಂಶ ಹೆಪ್ಪುಗಟ್ಟಿ ಹೋಗುತ್ತದೆ. ಆದರೆ ಸಕ್ಕರೆ ಮತ್ತು ತಿರುಳಿನ ಅಂಶ ಮಾತ್ರ ಹಾಗೇ ಉಳಿಯುತ್ತದೆ. ಇದರಿಂದ ಮಾಮೂಲಿ ದ್ರಾಕ್ಷಿಗಿಂತ ದಪ್ಪ ಮತ್ತು ಸಿಹಿಯಾದ ಸಿರಪ್ ಸಿಗುತ್ತದೆ.. ಇದನ್ನು ಸಂಸ್ಕರಣೆ ಮಾಡಿ ವೈನ್ ತಯಾರಿಸುತ್ತಾರೆ. ಇದನ್ನು ಮಾಡುವುದು ಸುಲಭವಲ್ಲ ಮತ್ತು ಬಹಳ ಕಡಿಮೆ ಪ್ರಮಾಣದಲ್ಲಿ ಸಿಗುವುದರಿಂದ ಬೇರೆ ವೈನ್ ಗಳಿಗೆ ಹೋಲಿಸಿದರೆ ಬಹಳ ದುಬಾರಿ ಕೂಡ.

ಈ ಬಗ್ಗೆ ಇಂಗ್ಲೀಷ್ ವಿಕಿಪಿಡಿಯಾ ಮಾಹಿತಿ ಇಲ್ಲಿದೆ. ಇದನ್ನು ಗೂಗ್ಲ್ ಟ್ರಾನ್ಸ್ ಲೇಟರ್ ಟೂಲ್ ಕಿಟ್ ಬಳಸಿ ಸದ್ಯದಲ್ಲೇ ಕನ್ನಡ ವಿಕಿಪಿಡಿಯಾಗೂ ಹಾಕುತ್ತೇನೆ.

***

www.sikh-history.com/sikhhist/events/kamagatamaru.html
ಇನ್ನೊಂದು ಸಂಗತಿಯೆಂದರೆ ಇಲ್ಲಿನ ಭಾರತೀಯರಿಗೆ ಸಂಬಂಧಿಸಿದ ಇತಿಹಾಸದ ಒಂದು ಘಟನೆ. ಕೆನಡಾದ ಭಾರತೀಯ ಜನಸಂಖ್ಯೆಯಲ್ಲಿ ಸಿಖ್ಖರು ಹೆಚ್ಚಿದ್ದಾರೆ. ಬ್ರಿಟಿಷ್ ಕೊಲಂಬಿಯಾ ರಾಜ್ಯದಲ್ಲಿ ಅವರ ಸಂಖ್ಯೆ ಹೆಚ್ಚಿದೆ. ಇಪ್ಪತ್ತನೇ ಶತಮಾನದ ಶುರುವಿನಲ್ಲಿ ಕೆನಡಾದಲ್ಲಿ ಜನಸಂಖ್ಯೆ ಬಹಳ ಕಡಿಮೆ ಇತ್ತು. ಆಗ ಇಲ್ಲಿ ಬ್ರಿಟಿಷರ ನೇರ ಆಡಳಿತವಿತ್ತು. ಅವರು ವಲಸಿಗರಿಗೆ ಕರೆಕೊಟ್ಟು ಕೆನಡಾಗೆ ಬರಮಾಡಿಕೊಳ್ಳುತ್ತಿದ್ದರಂತೆ. ಕೃಷಿ ಮಾಡಲು ಭೂಮಿಯನ್ನೂ ಕೊಡುತ್ತಿದ್ದರಂತೆ. ಇದರಿಂದಾಗಿ ಭಾರತದಿಂದಲೂ ಬಹಳ ಜನ ಪಂಜಾಬಿಗಳು ಅಲ್ಲಿಗೆ ಹೋದರು. ಆದರೆ ಬ್ರಿಟಿಷರಿಗೆ ಕಪ್ಪು/ಕಂದು ಚರ್ಮದ ಜನರು ಅಲ್ಲಿಗೆ ಬರುವುದು ಇಷ್ಟವಿರಲಿಲ್ಲ. ಅವರು ಕೇವಲ ಬಿಳಿಯರನ್ನು ಮಾತ್ರ ಪ್ರೋತ್ಸಾಹಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಬೇರೆ ಜನರು ಅಲ್ಲಿಗೆ ವಲಸೆ ಬರದಂತೆ ತಡೆಯಲು ಅಲ್ಲಿನ ಆಡಳಿತ ಒಂದು ಕಾನೂನನ್ನು ಮಾಡುತ್ತದೆ. ಕೆನಡಾಗೆ ನೇರವಾಗಿ ಒಂದೇ ಪ್ರಯಾಣದಲ್ಲಿ ಬಂದವರಿಗೆ ಮತ್ತು ಒಂದು ಮೊತ್ತದ ಹಣ ಇಟ್ಟುಕೊಂಡು ಬಂದವರಿಗೆ ಮಾತ್ರ ಪ್ರವೇಶ ಎಂದು. ದಕ್ಷಿಣ ಏಷ್ಯಾದ ಜನರು ಕೆನಡಾಗೆ ಬರದಂತೆ ತಡೆಯುವುದು ಅವರ ಉದ್ದೇಶವಾಗಿರುತ್ತದೆ. ಭಾರತದಿಂದ ನೇರವಾಗಿ ಕೆನಡಾಗೆ ಹೋಗಲು ಆಗಿನ ಕಾಲದಲ್ಲಿ ಯಾವ ವ್ಯವಸ್ಥೆಯೂ ಇರಲಿಲ್ಲ. ೧೯೧೪ರಲ್ಲಿ ಸಿಖ್ ವ್ಯಾಪಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರನಾದ ಗುರ್ದಿತ್ ಸಿಂಗ್ ಎನ್ನುವವರು ಆ ಕಾನೂನು ಮೀರದೇ ವಲಸೆ ಮಾಡಲು ಯೋಚಿಸುತ್ತಾರೆ. ಒಂದು ಜಪಾನಿ ಹಡಗನ್ನು ಬಾಡಿಗೆಗೆ ಪಡೆಯುತ್ತಾರೆ. ಅದರ ಹೆಸರೇ ’ಕೊಮಗಟ ಮರು’. ಅದರಲ್ಲಿ ಹಾಂಗ್ ಕಾಂಗ್ ನಿಂದ ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್ ನಗರಕ್ಕೆ ನೇರವಾಗಿ ಒಂದೇ ಪ್ರಯಾಣ ಮಾಡುವ ಉಪಾಯ ಮಾಡುತ್ತಾರೆ. ಅದರಂತೆ ಆ ಹಡಗು ೩೭೬ ಜನ ಭಾರತೀಯರನ್ನು ತುಂಬಿಕೊಂಡು ಹೊರಟು ವ್ಯಾಂಕೋವರ್ ತಲುಪಿದಾಗ ಅಲ್ಲಿನ ಬ್ರಿಟಿಷರು ಅದನ್ನು ಬಂದರಿನೊಳಗೆ ಬಿಟ್ಟುಕೊಳ್ಳುವುದಿಲ್ಲ. ಆ ಹಡಗು ಅತಂತ್ರವಾಗಿ ಪ್ರಯಾಣಿಕರ ಸಮೇತ ಸಮುದ್ರದಲ್ಲಿ ಎರಡು ತಿಂಗಳುಗಳ ಕಾಲ ನಿಲ್ಲಬೇಕಾಗುತ್ತದೆ. ಕೊನೆಗೆ ಕೆನಡಾ ನೌಕಾದಳವು ಅದನ್ನು ಬಲವಂತವಾಗಿ ಅಲ್ಲಿಂದ ಹೊರದಬ್ಬಿ ಕೋಲ್ಕೋತಾಗೆ ತಲುಪಿಸುತ್ತದೆ. ಆಗ ಭಾರತವು ಬ್ರಿಟಿಷರ ಕೈಯಲ್ಲಿದ್ದ ಕಾಲ. ಕೋಲ್ಕೋತಾಗೆ ಬಂದ ಆ ಹಡಗಿನ ಜನರ ಮೇಲೆ ಬ್ರಿಟಿಷರು ಅನುಮಾನದಿಂದ ಗುಂಡು ಹಾರಿಸುತ್ತಾರೆ. ಬಂಧಿಸಲು ತಯಾರಾಗುತ್ತಾರೆ. ಆಗ ಅಲ್ಲಿ ಕಾದಾಟಗಳಾಗಿ ೨೦ ಜನ ಭಾರತೀಯರು ಕೊಲ್ಲಲ್ಪಡುತ್ತಾರೆ.

ಇದು ಕೆನಡಾದ ಇತಿಹಾಸದಲ್ಲಿ ಒಂದು ವಿಶೇಷ ಘಟನೆಯಾಗಿದೆ (Sikh History link). ಇದು ನಡೆದು ಒಂದು ಶತಮಾನವಾಗುತ್ತಿರುವಾಗ ೨೦೦೬ರಲ್ಲಿ ಕೆನಡಾದ ಪ್ರಧಾನಿ ಹಾರ್ಪರ್ ಈ ಘಟನೆಯ ಬಗ್ಗೆ ಬಹಿರಂಗವಾಗಿ ಭಾರತೀಯ ಸಮುದಾಯದ ಕ್ಷಮೆಯನ್ನೂ ಯಾಚಿಸಿದ್ದಾರೆ. ಕೊಮಗಟ ಮರು ಘಟನೆಯ ಬಗ್ಗೆ ಕಂಟಿನ್ಯುಯಸ್ ಜರ್ನಿ ಎನ್ನುವ ಸಿನೆಮಾ ಕೂಡ ಇದೆ. (IMDb link)

ಬುಧವಾರ, ಜುಲೈ 6, 2011

ದಿಢೀರ್ ದೋಸೆ

ದೋಸೆ ತಿನ್ನುವ ತಲುಬು ಬಂದಿದೆ. ಅಕ್ಕಿ ನೆನೆಸಿಲ್ಲ, ಹಿಟ್ಟು ರುಬ್ಬಿಲ್ಲ. ವಿಧವಿಧದ ದೋಸೆ ಮಾಡಲು ಪದಾರ್ಥಗಳೂ ಇಲ್ಲ.

ಪರಿಹಾರ? ಹಿಟ್ಟಿನ ದೋಸೆ ಅಲಿಯಾಸ್ ದಿಢೀರ್ ದೋಸೆ ! ಅತ್ಯಂತ ಸರಳವಾಗಿ ಮತ್ತು ಕಡಿಮೆ ಸಮಯದಲ್ಲಿ ಮಾಡಬಹುದಾದ ದೋಸೆ.

ಬೇಕಾಗುವ ಪದಾರ್ಥಗಳು..

 • ಅಕ್ಕಿಹಿಟ್ಟು, ಗೋಧಿಹಿಟ್ಟು, ಸಣ್ಣರವೆ(ಸೂಜಿರವೆ), ಉಪ್ಪು.......ಇವು ನಾಲ್ಕೂ must.
 • ಜೀರಿಗೆ, ಖಾರದ ಪುಡಿ ಎಷ್ಟು ಬೇಕೋ ಅಷ್ಟ್.

ಮಾಡುವುದು ಹೀಗೆ...
 1. ಒಂದು ಅಳತೆ ಅಕ್ಕಿಹಿಟ್ಟಿಗೆ ಅರ್ಧ ಅಳತೆ ಗೋಧಿ ಹಿಟ್ಟು, ಅರ್ಧ ಅಳತೆ ರವೆ ಬೆರೆಸಿರಿ. ಸ್ವಲ್ಪ ಜೀರಿಗೆ ಹಾಕಿ.
 2. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ತುಂಬಾ ತೆಳುವಾಗದಂತೆ ಎಚ್ಚರವಹಿಸಿ.
 3. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಖಾರದ ಪುಡಿ ಹಾಕಿ ಚೆನ್ನಾಗಿ ಬೆರೆಸಿ. ಅಲ್ಲಿಗೆ ದೋಸೆ ಹಿಟ್ಟು ತಯಾರಾಯ್ತು!
 4. ಒಲೆ ಹಚ್ಚಿ ಅದರ ಮೇಲೆ ಕಾವಲಿ ಇಟ್ಟು ಬಿಸಿ ಮಾಡಿ.
 5. ಚೆನ್ನಾಗಿ ಕಾದ ಮೇಲೆ ದೋಸೆ ಎರೆಯಲು ಶುರುಮಾಡಿ. ಮೀಡಿಯಮ್ ದಪ್ಪ ಇರಲಿ.
 6. ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ. ಎರಡೂ ಕಡೆ ಚೆನ್ನಾಗಿ ಬೇಯಿಸಿ.

ಬಿಸಿಬಿಸಿ ದೋಸೆ ತಯಾರು.
ಹಿಟ್ಟಿನ ದೋಸೆ
(Item shown in the picture may not represent the actual product. ಇನ್ನೂ ಚೆನ್ನಾಗಿ ಆಗಬಹುದು;-))

***

 • ಬೇಕಿದ್ದರೆ ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ದೋಸೆ ಹಿಟ್ಟಿಗೆ ಹಾಕಬಹುದು.
 • ಇದೀಗ ಬಂದ ಮಾಹಿತಿ ಪ್ರಕಾರ ಗೋಧಿಹಿಟ್ಟಿನ ಬದಲಿಗೆ ರಾಗಿಹಿಟ್ಟನ್ನೂ ಬಳಸಬಹುದು!
 • ಮತ್ತೊಂದು ದಿಡೀರ್ ರವೆ ದೋಸೆ ರೆಸಿಪಿ ಇಲ್ಲಿದೆ:  ಧಿಡೀರ್ ರವಾಮಸಾಲ್‌ದೋಸೆ
 • ಸಮಯ ಇದ್ದಾಗ ದೋಸೆಗೆ ಹೀಗೆ ಆಲೂಗಡ್ಡೆ ಪಲ್ಯ ಮಾಡಿಕೊಳ್ಳಬಹುದು.

***

"ಇಷ್ಟಬಂದಹಾಗೆ ಇರಬೇಕು ಅಂದರೆ ಇಷ್ಟಪಟ್ಟಿದ್ದನ್ನೆಲ್ಲಾ ಕಲೀಬೇಕು". ಹೀಗಂತ ಹೇಳಿದ್ದು ಶಿವರಾಮ ಕಾರಂತರು...’ಹುಚ್ಚು ಮನಸಿನ ಹತ್ತು ಮುಖಗಳು’ ಪುಸ್ತಕದಲ್ಲಿ.

ಅಂದಹಾಗೆ, ನಾನಿನ್ನೂ ಅಡುಗೆಶಾಲೆಯಲ್ಲಿ ಕಲಿಯುತ್ತಿರುವ ವಿಧೇಯ ವಿದ್ಯಾರ್ಥಿ. :)

ಮಂಗಳವಾರ, ಜೂನ್ 21, 2011

ಹಾಚಿಕೊಅವತ್ತಿನ ಕೆಲಸ ಮುಗಿಸಿಕೊಂಡು ಮಾಮೂಲಿನ ರೈಲಿನಲ್ಲಿ ರಾತ್ರಿ ಬಂದಿಳಿದ ಫ್ರೊಫೆಸರ್ ಪಾರ್ಕರ್ ದಿಕ್ಕಿಲ್ಲದೇ ಓಡಾಡುತ್ತಿರುವ ಒಂದು ಮುದ್ದಾದ ನಾಯಿಮರಿಯನ್ನು ನೋಡುತ್ತಾನೆ. ಅದನ್ನು ಕರುಣೆಯಿಂದ ಎತ್ತಿಕೊಂಡು ಸ್ಟೇಷನ್ ಮಾಸ್ತರನಿಗೆ ಕೊಡಲು ಹೋಗುತ್ತಾನೆ. ಸ್ಟೇಶನ್ ಮಾಸ್ತರನು ಅದನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾನೆ. ಫ್ರೊಫೆಸರನಿಗೆ ಅದನ್ನು ಅಲ್ಲೇ ಬಿಡಲು ಇಷ್ಟವಿಲ್ಲದೇ ಮಾರನೇ ದಿನ ಸಂಬಂಧಪಟ್ಟವರಿಗೆ ತಲುಪಿಸಬೇಕೆಂದುಕೊಂಡು ಅದನ್ನು ತನ್ನ ಮನೆಗೆ ತೆಗೆದುಕೊಂಡು ಹೋಗುತ್ತಾನೆ. ಹೆಂಡತಿಗೆ ಗೊತ್ತಾದರೆ ಬಯ್ಯುತ್ತಾಳೆಂದು ಅದನ್ನು ಅಡಗಿಸಿಡುತ್ತಾನೆ. ರಾತ್ರಿ ಚಿಕ್ಕಮಗುವಿನಂತೆ ಅದನ್ನು ಸಂತೈಸುತ್ತಾನೆ. ಮರುದಿನದಿಂದ ಅದನ್ನು ಸಂಬಂಧಿಸಿದವರು ತೆಗೆದುಕೊಂಡು ಹೋಗಬೇಕೆಂದು ಎಲ್ಲೆಡೆ ಸುದ್ದಿ ಕೊಟ್ಟರೂ ಸಹ ಯಾರೂ ತೆಗೆದುಕೊಳ್ಳಲು ಬರುವುದೇ ಇಲ್ಲ. ಅದರ ಕುತ್ತಿಗೆಯಲ್ಲಿದ್ದ ಜಪಾನಿ ಭಾಷೆಯ ಸಂಕೇತದ ಸರವನ್ನು ತನ್ನ ಗೆಳೆಯನ ಮೂಲಕ ಓದಿಸಿ ತಿಳಿದುಕೊಂಡು ಅದಕ್ಕೆ ’ಹಾಚಿ’ ಎಂದು ಹೆಸರಿಡುತ್ತಾನೆ. ಜಪಾನಿ ಭಾಷೆಯಲ್ಲಿ ಹಾಚಿ ಎಂದರೆ ಶುಭಶಕುನ. ಹಲವು ದಿನಗಳು ಉರುಳುತ್ತವೆ. ಆ ಮರಿಯೊಂದಿಗೆ ಫ್ರೊಫೆಸರನ ಸ್ನೇಹವಾಗಿರುತ್ತದೆ. ಒಂದು ದಿನ ನಾಯಿ ದತ್ತು ತೆಗೆದುಕೊಳ್ಳುವವರ ಫೋನ್ ಬರುತ್ತದೆ. ಅವರ ಹೆಂಡತಿ ಮೊದಲು ಮರಿಯನ್ನು ಆದಷ್ಟು ಬೇಗ ಹಿಂದಿರುಗಿಸುವಂತೆ ತಾಕೀತು ಮಾಡಿದ್ದರೂ ಸಹ ಈಗ ತನ್ನ ಗಂಡ ಮತ್ತು ನಾಯಿಮರಿ ಒಡನಾಟವನ್ನು ನೋಡಿ, ಅದರ ಜೊತೆ ಆತನ ಖುಷಿಯನ್ನು ನೋಡಿ ಅದನ್ನು ತಮ್ಮ ಮನೆಯಲ್ಲೇ ಉಳಿಸಿಕೊಳ್ಳುತ್ತಾಳೆ. ಅದು ಫ್ರೊಫೆಸರರ ಕುಟುಂಬದಲ್ಲಿ ಒಂದಾಗುತ್ತದೆ. ಹಾಗೇ ಸಹಜವೆಂಬಂತೆ ವರ್ಷಗಳು ಉರುಳುತ್ತವೆ. ಮರಿ ದೊಡ್ಡದಾಗುತ್ತದೆ. ಅವರಿಬ್ಬರ ನಡುವೆ ಒಂದು ಅನ್ಯೋನ್ಯತೆ ಬೆಳೆದಿರುತ್ತದೆ. ಅವರಿಗೂ ಹಾಚಿಗೂ ಒಂದು ಅತೀ ಆಪ್ತ ಸಂಬಂಧವಾಗಿರುತ್ತದೆ. ಜೊತೆಜೊತೆಗೇ ಅವರಿಬ್ಬರ ಆಟ, ಊಟ, ಓಡಾಟ. ಅದರೊಂದಿಗೆ ಪ್ರೊಫೆಸರ್ ತುಂಬಾ ಖುಷಿಯ ಜೀವನವನ್ನು ಅನುಭವಿಸುತ್ತಾನೆ. ಫ್ರೊಫೆಸರನ ಮಗಳಿಗೂ ಕೂಡ ಆ ನಾಯಿ ಬಹಳ ಪ್ರೀತಿಯದಾಗಿರುತ್ತದೆ.

ಹೀಗೇ ಒಂದು ದಿನ ಫ್ರೊಫೆಸರರು ಬೆಳಗ್ಗೆ ಎಂದಿನಂತೆ ಕಾಲೇಜಿಗೆ ಹೊರಟಾಗ ಆ ನಾಯಿಯೂ ಅವರ ಜೊತೆಗೇ ಬರಲು ಹಠ ಮಾಡುತ್ತದೆ. ಅದನ್ನು ಕೂಡಿ ಹಾಕಿ ಹೋದರೂ ಅದು ತಪ್ಪಿಸಿಕೊಂಡು ರೈಲ್ವೆ ಸ್ಟೇಷನ್ನಿಗೆ ಬರುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ಅದು ಹಿಂದಿರುಗಿ ಹೋಗಲು ಒಪ್ಪದಿದ್ದಾಗ ಪ್ರೊಫೆಸರರು ಅದನ್ನು ಮನೆಗೆ ಕರೆದೊಯ್ದು ಬಿಟ್ಟು ಬರುತ್ತಾರೆ. ಆದರೆ ಅದು ಸಂಜೆ ಮತ್ತೆ ಸ್ಟೇಶನ್ನಿಗೆ ಹೋಗಿ ಅವರಿಗಾಗಿ ಕಾಯತೊಡಗುತ್ತದೆ. ಮಾರನೇ ದಿನವೂ ಅದರ ಹಠದಿಂದ ಅದನ್ನು ಅವರ ಜೊತೆಗೇ ರೈಲ್ವೆ ಸ್ಟೇಶನ್ನಿಗೆ ಕರೆದೊಯ್ಯುಬೇಕಾಗುತ್ತದೆ..ಅಲ್ಲಿ ಅದು ಆತ ಹೋಗುವವರೆಗೂ ಕಾದಿದ್ದು ವಾಪಸ್ಸು ಬರುತ್ತದೆ. ಮತ್ತೆ ಸಂಜೆ ಹೋಗಿ ಸ್ಟೇಶನ್ನಿನ ಮುಂದಿರುವ ಕಟ್ಟೆಯಲ್ಲಿ ಕಾಯುತ್ತಾ ಕೂರುತ್ತದೆ. ಆತ ವಾಪಸ್ಸು ಬಂದಾಗ ಅವನ ಜೊತೆ ಮನೆಗೆ ಹೊರಡುತ್ತದೆ. ಅದರ ಮಾರನೇ ದಿನವೂ ಇದೇ ಮರುಕಳಿಸುತ್ತದೆ. ಕ್ರಮೇಣ ಇದು ದಿನನಿತ್ಯದ ರೂಢಿಯಾಗುತ್ತದೆ. ಬೆಳಗ್ಗೆ ಫೊಫೆಸರನ ಜೊತೆ ಹೋಗಿ ಬರುವುದು, ಸಂಜೆ ಮತ್ತೆ ಹೋಗಿ ಆತನ ಜೊತೆ ಆಟವಾಡುತ್ತಾ ಮರಳಿ ಬರುವುದು. ಸುತ್ತಮುತ್ತಲಿನ ಅಂಗಡಿಗಳಿಗೆ, ವ್ಯಾಪಾರಿಗಳಿಗೆ ಅದು ಚಿರಪರಿಚಿತವಾಗುತ್ತದೆ. ವರ್ಷ ಉರುಳುತ್ತದೆ. ಒಂದು ದಿನ ಕಾಲೇಜಿಗೆ ಹೋದ ಪ್ರೊಫೆಸರರು ಅಲ್ಲಿಯೇ ಹೃದಯಾಘಾತದಿಂದ ತೀರಿಕೊಂಡುಬಿಡುತ್ತಾರೆ. ಅವತ್ತು ಸಂಜೆಯೂ ಹಾಚಿ ಅವರಿಗಾಗಿ ಕಾಯುತ್ತದೆ. ಆತ ಬರುವುದಿಲ್ಲ. ಫೊಫೆಸರರ ಅಳಿಯ ಬಂದು ಹಾಚಿಯನ್ನು ಕರೆದುಕೊಂಡುಹೋಗುತ್ತಾನೆ. ಆದರೆ ಅದು ಅವನ ಮನೆಯಿಂದ ತಪ್ಪಿಸಿಕೊಂಡು ತನ್ನ ಮನೆಗೆ ಹೋಗಿ ಅಲ್ಲಿಂದ ಸ್ಟೇಶನ್ನಿನ ದಾರಿ ಹಿಡಿಯುತ್ತದೆ. ಅಲ್ಲಿ ಬಂದು ಮತ್ತೆ ತನ್ನ ಎಂದಿನ ಜಾಗದಲ್ಲಿ ಕಾಯುತ್ತದೆ. ಫ್ರೊಫೆಸರ್ ಬರುವುದೇ ಇಲ್ಲ. ಸಂಜೆರೈಲಿನ ಸದ್ದಿಗೆ ಕಿವಿಕೊಡುತ್ತಾ, ಸ್ಟೇಶನ್ನಿನ ಬಾಗಿಲನ್ನೇ ಗಮನಿಸುತ್ತಾ, ಅಲ್ಲಿಂದ ಹೊರಬರುವವರಲ್ಲಿ ಫ್ರೊಫೆಸರನನ್ನು ಹುಡುಕುತ್ತಾ ಅದು ಅಲ್ಲೇ ಕಾಯುತ್ತದೆ..ದಿನವೂ ಅದೇ ಸಮಯಕ್ಕೆ ಅಲ್ಲಿ ಕಾಯುತ್ತದೆ..ಮುಂದಿನ ಒಂಭತ್ತು ವರ್ಷಗಳವರೆಗೆ ಪ್ರತಿದಿನ ಕಾಯುತ್ತಲೇ ಇರುತ್ತದೆ!

***

ಜಪಾನಿನ ಟೋಕಿಯೋದಲ್ಲಿ ಆದ ನಿಜಕತೆ ಇದು! ಆ ಫ್ರೊಫೆಸರನ ಹೆಸರು Hidesaburo Ueno. ಒಂಭತ್ತು ವರ್ಷ ಕಾದು ೧೯೩೫ರಲ್ಲಿ ಆ ನಾಯಿ ಅದೇ ಜಾಗದಲ್ಲಿ ಸಾಯುತ್ತದೆ. ೧೯೮೭ ರಲ್ಲಿ ಬಿಡುಗಡೆಯಾದ Seijirō Kōyama ನಿರ್ದೇಶನದ Hachikō Monogatari ಎಂಬ ಜಪಾನಿ ಭಾಷೆ ಸಿನೆಮಾವನ್ನು ೨೦೦೯ರಲ್ಲಿ ಇಂಗ್ಲೀಷಿಗೆ ರೀಮೇಕ್ ಮಾಡಿರುವ ಸಿನೆಮಾ ಇದು. ನಿರ್ದೇಶಕ Lasse Hallström. ಹಾಚಿಯ ನೆನಪಿಗಾಗಿ ಟೋಕಿಯೋದ ಶಿಬುಯಾ ರೈಲ್ವೆ ನಿಲ್ದಾಣದಲ್ಲಿ ಅದರ ಕಂಚಿನ ಪ್ರತಿಮೆ ಮಾಡಿಟ್ಟಿದ್ದಾರಂತೆ. ಪ್ರತಿವರ್ಷ ಏಪ್ರಿಲ್ ೮ರಂದು ಹಾಚಿಯ ನೆನಪಿಗಾಗಿ ಶಿಬುಯಾ ಸ್ಟೇಶನ್ನಿನ್ನಲ್ಲಿ ನೂರಾರು ಜನ ಸೇರಿ ಅದಕ್ಕೆ ಗೌರವ ಸಲ್ಲಿಸುತ್ತಾರಂತೆ. ಆ ಸ್ಟೇಶನ್ನಿನ ಪ್ರವೇಶದ್ವಾರಕ್ಕೆ Hachikō-guchi ಎಂದೇ ಹೆಸರಿಡಲಾಗಿದೆ.

Hachiko: A Dog's Story....ನಾಯಿಯ ನಿಯತ್ತು, ಮನುಷ್ಯ ಮತ್ತು ನಾಯಿಯ ನಡುವಿನ ಸ್ನೇಹಬಾಂಧವ್ಯದ ನಿಜಅನಾವರಣವಿದು. ನೋಡಿದ ಮೇಲೆ ನಿಮ್ಮ ಮನೆಯ ನಾಯಿಯಲ್ಲೂ 'ಹಾಚಿ' ಕಾಣತೊಡಗುವುದು ಖಂಡಿತ.

ಕಣ್ಣೀರು ತರಿಸುವ ಸಿನೆಮಾ.

*******

ನನಗೆ ಈ ಸಿನೆಮಾ ಸಲಹೆ ಮಾಡಿದ ಸೀಮಾ ಹೆಗಡೆಯವರಿಗೆ ಧನ್ಯವಾದಗಳು.

ಗುರುವಾರ, ಜೂನ್ 9, 2011

'ನಯಾಗರ'ದಲ್ಲಿ ಒಂದು ದಿನ

ನಾನಿರುವ ಬರ್ಲಿಂಗ್ಟನ್ ಊರಿನಿಂದ ಪ್ರಸಿದ್ಧ ನಯಾಗರ ಫಾಲ್ಸ್ ೮೦ ಕಿ.ಮಿ. ದೂರವಿದೆ. ನಯಾಗರ ಬಗ್ಗೆ ಬಹಳ ಕೇಳಿದ್ದರಿಂದ ಅದರ ಬಗ್ಗೆ ಕುತೂಹಲವಿತ್ತು. ಬಹಳ ದಿನಗಳಿಂದ ಹೋಗಬೇಕು ಅಂದುಕೊಂಡಿದ್ದರೂ ಸಹ ವಾರದ ಕೊನೆಯ ದಿನಗಳಲ್ಲಿ ಹವಾಮಾನ ಅನುಕೂಲಕರವಾಗಿ ಇಲ್ಲದಿರುತ್ತಿದ್ದುದರಿಂದ ಹೋಗಲು ಆಗಿರಲಿಲ್ಲ. ಅಂತೂ ಕೊನೆಗೆ ಮೊನ್ನೆ ಭಾನುವಾರ ಕಾಲ ಕೂಡಿ ಬಂತು. ಹವಾಮಾನ ಮುನ್ಸೂಚನೆ ನೋಡಿಕೊಂಡು ಅವತ್ತು ’ಸನ್ನಿ ಡೇ’ ಎಂದು ಖಾತ್ರಿ ಮಾಡಿಕೊಂಡು ಬೆಳಗ್ಗೆ ಇಲ್ಲಿಂದ GO ಬಸ್ಸಿನಲ್ಲಿ ಹೊರಟು ಅಲ್ಲಿಗೆ ತಲುಪಿದೆವು. (ನಮ್ಮ ಕ.ರಾ.ರ.ಸಾ.ನಿ. ತರಹ ಇಲ್ಲಿ GO ಬಸ್ಸುಗಳು/ಟ್ರೈನುಗಳು). ಬಸ್ಸಿಳಿದು ಸ್ವಲ್ಪ ದೂರ ಕಾಲ್ನಡಿಗೆಯಲ್ಲಿ ಹೋಗಬೇಕು. ಅವತ್ತು ಒಳ್ಳೆಯ ಬಿಸಿಲಿತ್ತು. ಆದ್ದರಿಂದ ಜನರೂ ಬಹಳ ಇದ್ದರು. ಕ್ಲಿಫ್ಟನ್ ಹಿಲ್ ಎನ್ನುವ ರಸ್ತೆಯಲ್ಲಿ ಚಿತ್ರವಿಚಿತ್ರ ಅಂಗಡಿಗಳು, ಮ್ಯೂಸಿಯಂಗಳು, ಅಬ್ಬರದ ಕರ್ಕಶ ಸಂಗೀತ, ಪಾರ್ಕ್, ಮತ್ತೇನೇನೋ ಆಕರ್ಷಣೆಗಳನ್ನು ದಾಟಿ ಸ್ವಲ್ಪ ಕೆಳಗೆ ಇಳಿಯುತ್ತಿದ್ದಂತೇ ದೂರದಲ್ಲಿ ಎದುರಾದದ್ದು ನಯಾಗರ! ನೋಡಿದ ಕೂಡಲೇ ನನ್ನ ಮನಸ್ಸಿನಲ್ಲಿ ಜೋಗದೊಡನೆ ಹೋಲಿಕೆ ಶುರುವಾಗಿತ್ತು.


ನಯಾಗರ ಕೆನಡಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ ದೇಶಗಳ ಗಡಿಯಲ್ಲಿದೆ. ಗಡಿರೇಖೆ ಆ ಜಲಪಾತ ಮತ್ತು ನದಿಯ ಮೇಲೇ ಹಾದುಹೋಗುತ್ತದೆ. ಈರಿ ಮತ್ತು ಒಂಟಾರಿಯೋ ಸರೋವರಗಳ ನಡುವೆ ಹರಿಯುವ ನದಿಯಲ್ಲಿ ಈ ಜಲಪಾತವಿದೆ. ಇಲ್ಲಿ ಎರಡು ಜಲಪಾತಗಳಿವೆ. ಒಂದನ್ನು ಅಮೇರಿಕನ್ ಫಾಲ್ಸ್ ಎನ್ನುತ್ತಾರೆ. ಮತ್ತೊಂದು, ಕುದುರೆಲಾಳದಾಕಾರದಲ್ಲಿ ಇರುವುದು ಕೆನಡಾ ಕಡೆಯ ಜಲಪಾತ (ಹಾರ್ಸ್ ಶೂ ಫಾಲ್ಸ್). ನಯಾಗರ ಜಲಪಾತ ಬಹಳ ಎತ್ತರವಿಲ್ಲ. ಆದರೆ ಅಗಲ ಮತ್ತು ಬೀಳುವ ನೀರಿನ ಪ್ರಮಾಣ ಅಗಾಧ. ಕುದುರೆಲಾಳಾಕಾರದಲ್ಲಿ ಎಲ್ಲಾ ಕಡೆಯಿಂದ ಒಂದೇ ಪ್ರಮಾಣದಲ್ಲಿ ನೀರು ನೊರೆ ನೊರೆಯಾಗಿ ಬೀಳುತ್ತದೆ. ಅಲ್ಲೆಲ್ಲಾ ಇಬ್ಬನಿ ತುಂಬಿಕೊಂಡಿತ್ತು. ಆ ಜಾಗದಲ್ಲಿ ನೀರಿನ ಹನಿಗಳು ಹೊಗೆಹೊಗೆಯಂತೆ ಮೇಲೇಳುವುದು ತುಂಬಾ ಚಂದ. (ದೇವಲೋಕದಿಂದ ಗಂಗೆ ಭೂಮಿಗೆ ಧುಮುಕಿದಂತೆ ಕಾಣುತ್ತಿತ್ತು ಅಂತೆಲ್ಲಾ ಸುಮ್ ಸುಮ್ನೇ ಹೈಪ್ ಮಾಡಲ್ಲ :)). ನಯಾಗರದಲ್ಲಿ ಕೆನಡಾ ಮತ್ತು ಯು.ಎಸ್. ಸಂಪರ್ಕಿಸಲು ಒಂದು ಸೇತುವೆ ಇದೆ. ನೀರ್ಬೀಳು ಕೆನಡಾ ಕಡೆಗೆ ಮುಖ ಮಾಡಿರುವುದರಿಂದ ಅಮೆರಿಕಾದ ಕಡೆಗಿಂತ ಕೆನಡಾದ ಕಡೆಯಿಂದ ಪೂರ್ಣ ಮತ್ತು ಸುಂದರವಾಗಿ ಕಾಣುತ್ತದಂತೆ. ಅದಕ್ಕೇ ಅಲ್ಲಿಂದಲೂ ಜನ ಈ ಕಡೆ ಬಂದು ನೋಡುತ್ತಾರಂತೆ.

ಕೆನಡಾ ಮತ್ತು ಯು.ಎಸ್.ಎ ಸಂಪರ್ಕಿಸುವ ರೇನ್ ಬೋ ಸೇತುವೆ

ನಯಾಗರ ಅಮೆರಿಕನ್ ಫಾಲ್ಸ್

ಮೇಯ್ಡ್ ಆಫ್ ದಿ ಮಿಸ್ಟ್ ದೋಣಿಯಲ್ಲಿ ಜಲಪಾತದ ಬುಡದವರೆಗೆ ಕರೆದುಕೊಂಡು ಹೋಗುತ್ತಾರೆ, ಹತ್ತಿರದಿಂದ ನೋಡಬಹುದು. ಆ ದೋಣಿಯಲ್ಲಿ ಕುದುರೆಲಾಳದ ಒಳಗೆ ಹೋದಾಗ ಸುತ್ತಲೂ ಎಲ್ಲಾ ಬಿಳಿಬಿಳಿ ನೀರಿನ ಜಗತ್ತು ! ಮಳೆಯಂತೆ ಹನಿಗಳ ಸಿಂಚನ. ಒಂದು ದೊಡ್ಡ ನೀರಿನ ಕೋಟೆಯೊಳಗೆ ನಿಂತಂತೆ ಅನ್ನಿಸುತ್ತಿತ್ತು. ಒಂಥರಾ fantasy ಲೋಕದಂತಿತ್ತು. ಇದು ಖುಷಿಕೊಟ್ಟ ಅನುಭವ. ಅದಾದ ಮೇಲೆ 'ಜರ್ನಿ ಬಿಹೈಂಡ್ ದಿ ಫಾಲ್ಸ್' (ಸುರಂಗದೊಳಗಿಂದ ಜಲಪಾತ ಹಿಂದಕ್ಕೆ ಹೋಗಿನೋಡುವುದು) ಮುಂತಾದ ಚಟುವಟಿಕಗಳನ್ನು ಮುಗಿಸಿದೆವು. ಅನಂತರ ಪಕ್ಕದಲ್ಲಿರುವ ಉದ್ಯಾನದಲ್ಲಿ ಕೂತು ಊಟ ಮಾಡಿ ವಿಶ್ರಾಂತಿ ತೆಗೆದೆವು. ನಯಾಗಾರವನ್ನು ಒಂದು ಮುಖ್ಯ ಪ್ರವಾಸಿ/ಮನರಂಜನಾ ತಾಣವಾಗಿ ನಿರ್ವಹಿಸಿಟ್ಟಿದ್ದಾರೆ. ಹೆಲಿಕಾಪ್ಟರ್ ರೈಡ್, ವೈಟ್ ವಾಟರ್ ವಾಕ್, ವರ್ಲ್ ಪೂಲ್, ವಿವಿಧ ಪಾರ್ಕುಗಳು ಮುಂತಾದ ಬಹಳ ಚಟುವಟಿಕೆಗಳು, ಆಕರ್ಷಣೆಗಳಿವೆ. ಸುಮಾರು ಕೆಸಿನೋಗಳಿವೆ. ಅಲ್ಲಿನ ರಸ್ತೆಗಳಲ್ಲಿ ಒಂದಿಷ್ಟು ಸುತ್ತಾಡಿದೆವು. ಸಂಜೆಯಾಗುತ್ತಿತ್ತು. ಕತ್ತಲಾದ ಮೇಲೆ ಬಣ್ಣ ಬಣ್ಣದ ದೀಪಗಳನ್ನು ಹಾಕುತ್ತಾರಂತೆ. ಆಗಿನ ನೋಟ ಇನ್ನೂ ಅದ್ಭುತವಂತೆ. ನೋಡಬೇಕೆಂಬ ಆಸೆಯೇನೋ ಇತ್ತು. ಆದರೆ ಬೆಳಗ್ಗಿಂದ ತಿರುಗಿ ಸುಸ್ತಾಗಿದ್ದರಿಂದ ಮತ್ತು ನಮ್ಮ ಬಸ್ ತಪ್ಪಿಹೋದರೆ ತೊಂದರೆಯಾಗುತ್ತಿದ್ದುದರಿಂದ ವಾಪಸ್ ಹೊರಟೆವು.

ನಯಾಗರ ಕುದುರೆಲಾಳ ಜಲಪಾತ

ಆವತ್ತು ಜಾಸ್ತಿ ಜನ ಇದ್ದುದರಿಂದ ಹೊರಡುವ ಸ್ಥಳದಿಂದಲೇ ಎಲ್ಲಾ ಸೀಟನ್ನೂ ತುಂಬಿಕೊಂಡು ಬಂತು ಬಸ್ಸು. ನಮ್ಮ ಸ್ಟಾಪಿಗೆ ಬಂದಾಗ ನಾವು ಸುಮಾರು ಜನ ಬಸ್ಸು ಕಾಯುತ್ತಿದ್ದುದನ್ನು ನೋಡಿ ಡ್ರೈವರ್ ವಿಷಾದಿಸಿದ. ನಮಗ್ಯಾರಿಗೂ ಸೀಟಿರಲಿಲ್ಲ. ಮುಂದಿನ ಬಸ್ಸಿಗೆ ಇನ್ನೂ ಒಂದುವರೆ ತಾಸು ಕಾಯಬೇಕಿತ್ತು. ನಿಂತುಕೊಂಡು ಪ್ರಯಾಣ ಮಾಡುವುದಿದ್ದರೆ ಬನ್ನಿ, ಈಗಲೇ ಹೇಳಿದ್ದೇನೆ, ಸೀಟಿಲ್ಲ, ಸ್ಸಾರಿ ಸ್ಸಾರಿ ಎಂದು ಮೂರ್ನಾಲ್ಕು ಬಾರಿ ಹೇಳಿದ. ಬಿಳಿಯರು ಯಾರೂ ಬಸ್ ಹತ್ತಲಿಲ್ಲ. ನಾವು ಒಂದಿಷ್ಟು ಜನ ಭಾರತದವರು, ನೀನ್ಯಾಕ್ ಅಷ್ಟೆಲ್ಲಾ ಬೇಜಾರ್ ಮಾಡ್ಕೋತೀಯಾ, ಇದೆಲ್ಲಾ ನಮಗೆ ಮಾಮೂಲು ಅಂತ ಅಂದುಕೊಂಡು ಬಸ್ ಹತ್ತಿದೆವು. ಆ ಬಸ್ಸು ಅಲ್ಲಿನ ಹಳ್ಳಿಗಳಲ್ಲೆಲ್ಲಾ ಹಾದು ನಮ್ಮನ್ನು ತಂದುಬಿಡುವಷ್ಟರಲ್ಲಿ ರಾತ್ರಿಯಾಗಿತ್ತು.

***

ಅಮೇರಿಕ ಕಡೆಯಿಂದ ಹಂಸಾನಂದಿಯವರ ಪ್ರವಾಸ ಬರಹ : ನಯಾಗರ ಫಾಲ್ಸ್ ನಲ್ಲಿ ಮಸಾಲೆ ದೋಸೆ ಗಾಡಿ!

***

Useful external links

೧. Attractions in the Niagara falls area

ಗುರುವಾರ, ಮೇ 5, 2011

Kannada typing in computer

ಕಂಪ್ಯೂಟರ್ ನಲ್ಲಿ ಕನ್ನಡ ಟೈಪ್ ಮಾಡುವುದು.

ನಾನು ೨೦೦೨ ರಲ್ಲಿ  ಕಂಪ್ಯೂಟರ್ ತಗೊಂಡಿದ್ದು. ಆಗ ಕಂಪ್ಯೂಟರ್ ನಲ್ಲಿ ಕನ್ನಡ ಟೈಪ್ ಮಾಡುವುದು ಎನ್ನುವ ವಿಷಯ ನನಗೆ ಹೊಸದಾಗಿತ್ತು. ನನ್ನ ಗಣಕದಲ್ಲಿ ’ಬರಹ’ ಮತ್ತು ’ನುಡಿ’ ತಂತ್ರಾಂಶಗಳನ್ನೂ ಅಳವಡಿಸಿಕೊಂಡಿದ್ದ ನೆನಪು. ಆದರೆ ನನಗೆ ಆಗ ಕಂಪ್ಯೂಟರ್ ನಲ್ಲಿ  ಕನ್ನಡ ಬರೆಯುವ ಯಾವುದೇ  ಅಗತ್ಯವಿರದಿದ್ದರಿಂದ ಕನ್ನಡ ಟೈಪಿಸುವ ತಂತ್ರಾಂಶಗಳು ಯಾವಾಗಲಾದರೊಮ್ಮೆ ಸುಮ್ಮನೇ ಕುತೂಹಲಕ್ಕಷ್ಟೇ ಆಗಿತ್ತು. ಆಗ ಅಂತರಜಾಲವೂ ಕೂಡ ಇಷ್ಟು ವ್ಯಾಪಕವೂ ಆಗಿರಲಿಲ್ಲ ಮತ್ತು ನಮಗೂ ಅಷ್ಟು ನಿಲುಕಿರಲಿಲ್ಲ. ಮುಖ್ಯವಾಗಿ ಭಾರತೀಯ ಭಾಶೆಗಳಿಗೆ ಫಾಂಟ್ ಸಮಸ್ಯೆ ಇತ್ತು. ಆಮೇಲಿನ ದಿನಗಳಲ್ಲಿ ಎಲ್ಲ ಕಡೆಗಳಲ್ಲೂ ಹೊಂದುವಂತಹ ಅಂತಾರಾಷ್ಟ್ರೀಯ ಸ್ಟ್ಯಾಂಡರ್ಡಿನ ಯುನಿಕೋಡ್ * ಫಾಂಟುಗಳು ತಯಾರಾದವು. ಬರಹ, ನುಡಿ ತಂತ್ರಾಂಶಗಳು ಯುನಿಕೋಡ್ ಅಕ್ಷರಗಳನ್ನು ಟೈಪಿಸುವ ಸವಲತ್ತುಗಳನ್ನು ಒದಗಿಸಿಕೊಟ್ಟವು. ಆರ್ಕುಟ್ ಮತ್ತು ಬ್ಲಾಗ್ ಗಳಲ್ಲಿ ಕನ್ನಡ ಯುನಿಕೋಡ್ ನ ಬರಹಗಳು ಕಾಣಿಸತೊಡಗಿದವು. ಅಂತರಜಾಲದ ಬಳಕೆ ಹೆಚ್ಚಿದ ಮೇಲೆ ಕಂಪ್ಯೂಟರ್ ನಲ್ಲಿ ಕನ್ನಡ ಬರೆಯುವುದು ಹೆಚ್ಚುತ್ತಾ ಹೋಯಿತು. ಹಳೆಯ ಆಪರೇಟಿಂಗ್ ಸಿಸ್ಟಮ್ (O.S) ಮತ್ತು ಕೆಲವು ಬ್ರೌಸರ್ ಗಳಲ್ಲಿ ಕನ್ನಡ ಕಾಣಿಸಲು ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬೇಕಾಗಿತ್ತು.

ಈಗ ಅದೆಲ್ಲಾ ಹಳೆಯ ಕತೆಯಾಗಿದೆ. ಎಲ್ಲಾ ಒಂದು ಹಂತಕ್ಕೆ ಬಗೆಹರಿದಿದೆ. ಎಲ್ಲಾ O.S.ಗಳೂ, ಬ್ರೌಸರ್ ಗಳೂ ಭಾರತೀಯ ಲಿಪಿಗಳ ಫಾಂಟುಗಳನ್ನು ಬೆಂಬಲಿಸುತ್ತವೆ. ನಾವು ಬಳಸುವ ಇಂಗ್ಲೀಷ್ ಅಕ್ಷರಗಳಿರುವ ಕೀಲಿಮಣೆಯ ಮೂಲಕವೇ ಕನ್ನಡವನ್ನು ಟೈಪಿಸಲು ಆಗುವ ಹಲವಾರು ಟೂಲ್ ಗಳು ಇವೆ. ಇಂಗ್ಲೀಷ್ ಟೈಪ್ ಮಾಡಿದಷ್ಟೇ ಸುಲಭವಾಗಿ ಇವತ್ತು ಕನ್ನಡವನ್ನು ಟೈಪ್ ಮಾಡಬಹುದು. ಸದ್ಯಕ್ಕೆ ಕನ್ನಡ ಟೈಪಿಂಗನ್ನು ಇದಕ್ಕಿಂತಲೂ ಅನುಕೂಲ ಮಾಡಲಿಕ್ಕಾಗುವುದಿಲ್ಲ ಅನ್ನಿಸುತ್ತದೆ.

*************************

Kannada Keyboard Layouts

ಕನ್ನಡ ಟೈಪಿಂಗಿಗೆ ಮುಖ್ಯವಾಗಿ ನಾಲ್ಕು ಬಗೆಯ ಕೀಲಿಮಣೆ ವಿನ್ಯಾಸಗಳಿವೆ (keyboard layouts). ಇವುಗಳಲ್ಲಿ ಯಾವುದಾದರೊಂದನ್ನು ಬಳಸಬಹುದು.  ಕೀಲಿಮಣೆ ವಿನ್ಯಾಸವೆಂದರೆ ಯಾವ ಕನ್ನಡ ಅಕ್ಷರ ಮೂಡಿಸಲು ಯಾವ ಕೀ ಒತ್ತಬೇಕು ಎಂಬುದರ ವಿನ್ಯಾಸ ಅಷ್ಟೆ. 

೧. ಫೊನೆಟಿಕ್ * (Phonetic) ಕೀಲಿಮಣೆ:  ಕನ್ನಡವನ್ನು ಇಂಗ್ಲೀಷಿನಂತೆ ಟೈಪ್ ಮಾಡುವುದು. ಅಂದರೆ ’ಕನ್ನಡ’ ಎಂದು ಬರೆಯಬೇಕಾದರೆ kannaDa ಎಂದು ಟೈಪಿಸಬೇಕು. ಇದು 'ಟ್ರಾನ್ಸ್ ಲಿಟೆರೇಶನ್ * ಕೀಲಿಮಣೆ' ಎಂದೂ ಗುರುತಿಸಲ್ಪಡುತ್ತದೆ. 'ಬರಹ ಕೀಲಿಮಣೆ' ಎಂದರೂ ಇದೇ ಎನ್ನಬಹುದು. ವಿನ್ಯಾಸ ಹೀಗಿದೆ: www.baraha.com/help/Keyboards/kan_phonetic.htm

೨. ಕೆ.ಪಿ.ರಾವ್ ಅಥವಾ ಕನ್ನಡ ಗಣಕ ಪರಿಷತ್ತು (ಕಗಪ) ಅಥವಾ ನುಡಿ ಕೀಲಿಮಣೆ: ಇದೂ ಕೂಡ ಬಹುತೇಕ ಇಂಗ್ಲೀಷಿನ ಕೀಲಿಮಣೆಗೆ ಅನುಗುಣವಾಗಿದೆ. ಒಂದೊಂದು ಕೀಲಿಗೂ ಒಂದೊಂದು ಕನ್ನಡ ಅಕ್ಷರಗಳನ್ನು ನಿಗದಿ ಮಾಡಲಾಗಿದೆ. kಗೆ ಕ, jಗೆ ಜ, uಗೆ ಉ... ಹೀಗೆ.  ಆದರೆ ಕನ್ನಡ ಪದಗಳನ್ನು ಇಂಗ್ಲೀಷಿನಂತೆ ಟೈಪ್ ಮಾಡುವುದು ಬೇಕಾಗಿಲ್ಲ. 'ಗಣಕ' ಎಂದು ಬರೆಯಲು gNk  ಒತ್ತಿದರಾಯ್ತು.  ಇದು ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸ.  www.baraha.com/help/Keyboards/kan_brhkbd.htm

೩. ಟೈಪ್ ರೈಟಿಂಗ್ ಕೀಲಿಮಣೆ: ಹಿಂದೆ ಬಳಸುತ್ತಿದ್ದ ಕನ್ನಡ ಬೆರಳಚ್ಚು ಯಂತ್ರದ (ಟೈಪ್ ರೈಟಿಂಗ್ ಮೆಶೀನ್) ಕೀಲಿಮಣೆ. ಕನ್ನಡ ಟೈಪ್ ರೈಟಿಂಗ್ ಕಲಿತವರಿಗೆ ಇದು ಅನುಕೂಲ.

೪. ಇನ್ ಸ್ಕ್ರಿಪ್ಟ್ (inscript) ಕೀಲಿಮಣೆ: - ಇದು ಇಂಗ್ಲೀಷ್ ಕೀಲಿಮಣೆಗೆ ಸಂಬಂಧವಿಲ್ಲದಂತ ಬೇರೆ ವಿನ್ಯಾಸ.  C-DAC ಸಂಸ್ಥೆ ಅಭಿವೃದ್ಧಿ ಪಡಿಸಿ ಭಾರತ ಸರ್ಕಾರದಿಂದ ಅಧಿಕೃತಗೊಳಿಸಿದ ಕೀಲಿಮಣೆ. www.baraha.com/help/Keyboards/kan_inscript.htm

ಇವು ನಾಲ್ಕರಲ್ಲಿ ಹೆಚ್ಚಾಗಿ ಬಳಸಲ್ಪಡುತ್ತಿರುವುದು ಮೊದಲಿನ ಎರಡು ವಿನ್ಯಾಸಗಳಾದರೂ ಕೂಡ, ಹೆಚ್ಚು ಟೈಪ್ ಮಾಡುವ ಕೆಲಸವಿರುವವರು ಕೊನೆಯ ಎರಡು ಕೀಲಿಮಣೆ ಕಲಿತು ಬಳಸಿದರೆ ವೇಗವಾಗಿ ಟೈಪ್ ಮಾಡಬಹುದು ಅಂತ ಬಲ್ಲವರು ಹೇಳುತ್ತಾರೆ. ಅದು ವೈಯಕ್ತಿಕ ಆಯ್ಕೆಗೆ ಬಿಟ್ಟದ್ದು.

***

Tools and Softwares to write (type), edit Kannada script 

ಈಗ ಕನ್ನಡ ಟೈಪಿಸಲು ಬಳಸಬಹುದಾದ ತಂತ್ರಾಂಶಗಳನ್ನು ನೋಡೋಣ. ಇದಿಷ್ಟು ದಿನಗಳಲ್ಲಿ ನಾನು ಗಮನಿಸಿದ, ಬಳಸಿದ, ಬಳಸುತ್ತಿರುವ ಕೆಲವು ಕನ್ನಡ ಟೈಪಿಂಗ್ ಟೂಲ್ ಗಳನ್ನು ಪಟ್ಟಿ ಮಾಡಿದ್ದೇನೆ. ಎಲ್ಲಾ ತಂತ್ರಾಂಶಗಳೂ/ಟೂಲ್ ಗಳೂ ಮೇಲೆ ಹೇಳಿರುವ ಒಂದು ಅಥವಾ ಹೆಚ್ಚು ಬಗೆಯ ಕೀಲಿಮಣೆ ವಿನ್ಯಾಸವನ್ನು ಬಳಸಿ ಟೈಪಿಸಲು ಆಯ್ಕೆಗಳನ್ನು ಕೊಡುತ್ತವೆ.

Offline/Installable Tools, Softwares

I. ಆಫ್ ಲೈನ್ ತಂತ್ರಾಂಶಗಳು: ಇವುಗಳನ್ನು ಬಳಸಲು ಅಂತರಜಾಲ ಸಂಪರ್ಕ ಬೇಕಿರುವುದಿಲ್ಲ.  ನಮ್ಮ ಕಂಪ್ಯೂಟರ್ ನಲ್ಲಿ  ತಂತ್ರಾಂಶ ಅಳವಡಿಸಿಕೊಂಡರೆ ಆಯಿತು. (install).

೧. ಬರಹ:- ಇದರಲ್ಲಿ 'ಬರಹ ಕೀಲಿಮಣೆ' ಎಂದೇ ಹೆಸರಾಗಿರುವ ಫೊನೆಟಿಕ್ ಕೀಲಿಮಣೆ ಮೂಲಕ ಟೈಪಿಸಬಹುದು. 'ಕಗಪ' ಮತ್ತು 'ಇನ್ ಸ್ಕ್ರಿಪ್ಟ್' ಕೀಲಿಮಣೆಯ ಆಯ್ಕೆಯೂ ಇದೆ. ಯುನಿಕೋಡ್ ಮತ್ತು non-ಯುನಿಕೋಡ್ ಫಾಂಟ್ಸ್ ಇವೆ. http://www.baraha.com ತಾಣದಲ್ಲಿ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. (ಈ ತಂತ್ರಾಂಶದ ಪೂರ್ಣ ಆವೃತ್ತಿ ಉಚಿತವಾಗಿ ಲಭ್ಯವಿರುವುದಿಲ್ಲ, ಲೈಸೆನ್ಸ್ ಖರೀದಿಸಿ ಪೂರ್ಣ ಆವೃತ್ತಿ ಪಡೆಯಬಹುದು)

೨. ನುಡಿ:- 'ಕಗಪ' ಕೀಲಿಮಣೆ ಮೂಲಕ ಟೈಪಿಸಬಹುದು. ಯುನಿಕೋಡ್ ಮತ್ತು non-ಯುನಿಕೋಡ್ ಫಾಂಟ್ಸ್ ಇವೆ. ಇದು ಉಚಿತ ತಂತ್ರಾಂಶ.  http://www.kagapa.in ತಾಣದಲ್ಲಿ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

೩. ಪದ:-  ಫೊನೆಟಿಕ್/ಟ್ರಾನ್ಸ್ ಲಿಟೆರೇಶನ್, ಕಗಪ ಕೀಲಿಮಣೆ ಸೌಲಭ್ಯವಿದೆ. ಯುನಿಕೋಡ್ ಟೈಪಿಸಬಹುದು.  ಇದು ಉಚಿತ ತಂತ್ರಾಂಶವಾಗಿದ್ದು ಹಲವಾರು ಉತ್ತಮ ಸೌಲಭ್ಯಗಳನ್ನು ಒಳಗೊಂಡಿದೆ. http://www.pada.pro ತಾಣದಲ್ಲಿ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ತಂತ್ರಾಂಶದ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ :  ಪದ ತಂತ್ರಾಂಶ

ಮೇಲಿನ ಮೂರು ತಂತ್ರಾಂಶಗಳಲ್ಲಿ ಟೈಪಿಸಿದ ಅಕ್ಷರಗಳನ್ನು ಎಡಿಟ್ (ಬಣ್ಣ, ಗಾತ್ರ, ಹಿನ್ನೆಲೆ etc.,) ಮಾಡುವುದು, ಫೈಲ್ ಗಳನ್ನು ಬೇರೆ ಬೇರೆ ಮಾದರಿಗಳಲ್ಲಿ ಉಳಿಸುವುದು (save as), ಫಾಂಟ್ ಪರಿವರ್ತನೆ (font convert) ಮುಂತಾದ ಸವಲತ್ತುಗಳಿವೆ. ಬರಹ, ನುಡಿಗಳಲ್ಲಿ ಬೇರೆ ಬೇರೆ ರೀತಿಯ non unicode ಅಕ್ಷರ ಶೈಲಿಗಳ (font types) ಸೌಲಭ್ಯಗಳಿವೆ.

೪. ವಿಂಡೋಸ್ ಇಂಡಿಕ್ ಇನ್ ಪುಟ್ :- ಯಾವ ಹೊರ ತಂತ್ರಾಂಶದ ಅಗತ್ಯವೂ ಇಲ್ಲದಂತೆ ಕನ್ನಡ ಟೈಪ್ ಮಾಡಲು ವಿಂಡೋಸ್ ನಲ್ಲೇ ಸೌಲಭ್ಯ ಇರುತ್ತದೆ.  ಕಂಟ್ರೋಲ್ ಪ್ಯಾನಲ್ ಗೆ ಹೋಗಿ ಕನ್ನಡ ಕೀಲಿಮಣೆ ಸೇರಿಸಿಕೊಳ್ಳಬೇಕಾಗುತ್ತದೆ ಅಷ್ಟೆ. ಮಾಮೂಲಾಗಿ ವಿಂಡೋಸ್ O.S.ನಲ್ಲಿ ಇನ್ ಸ್ಕ್ರಿಪ್ಟ್ ಕೀಲಿಮಣೆ ಇರುತ್ತದೆ. ವಿಂಡೋಸ್ ಇಂಡಿಕ್ ಇನ್ಪುಟ್ ತಂತ್ರಾಂಶ ಅಳವಡಿಸಿಕೊಂಡರೆ ನಾಲ್ಕೂ ಬಗೆಯ ಕೀಲಿಮಣೆ ಸೌಲಭ್ಯ ದೊರೆಯುತ್ತದೆ. www.bhashaindia.com/Downloads/pages/home.aspx ತಾಣದಲ್ಲಿ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಕೀಲಿಮಣೆ ಸೇರಿಸುವುದು ಹೇಗೆ ಎಂದು ತಿಳಿಯಲು ಮೇಲಿನ ಕೊಂಡಿಗೆ ಹೋಗಿ help document ನೋಡಿ ಅಥವಾ ಇಲ್ಲಿ ಚಿಟುಕಿ.  Windows XP ಬಳಸುವವರಿಗಾಗಿ ಇಂಡಿಕ್ ಇನ್ಪುಟ್ ೧ ಇದೆ . Windows 7 ಬಳಸುವವರಿಗಾಗಿ ಇಂಡಿಕ್ ಇನ್ಪುಟ್ ೨ ಇದೆ.

೫. ಗೂಗಲ್  ಟ್ರಾನ್ಸ್ ಲಿಟೆರೇಶನ್ IME :-  ಟ್ರಾನ್ಸ್ ಲಿಟೆರೇಶನ್ ಕೀಲಿಮಣೆ ಮೂಲಕ ಟೈಪಿಸಬಹುದು. www.google.com/ime/transliteration ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.

೬. ಪ್ರಮುಖ್ IME:- ಟ್ರಾನ್ಸ್ ಲಿಟೆರೇಶನ್ ಕೀಲಿಮಣೆ ಮೂಲಕ ಟೈಪಿಸಬಹುದು. http://www.vishalon.net/PramukhIME/Windows.aspx  ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.

ಮೇಲಿನ ತಂತ್ರಾಂಶಗಳಲ್ಲಿ IME (input method editor) on ಮಾಡಿಟ್ಟುಕೊಂಡು word, excel, ppt ಮುಂತಾದ ಬೇರೆ ಬೇರೆ ಅಪ್ಲಿಕೇಶನ್ ಗಳಲ್ಲಿ, ವೆಬ್ ಸೈಟ್, ಚಾಟ್ ಎಲ್ಲಾ ಕಡೆ ನೇರವಾಗಿ ಕನ್ನಡ ಟೈಪಿಸಬಹುದು. ಕನ್ನಡ ಮತ್ತು ಇಂಗ್ಲೀಷಿನ ಮಧ್ಯೆ toggle ಮಾಡುತ್ತಾ ಬಳಸಿಕೊಳ್ಳಬಹುದು. (ಬರಹ ಡೈರೆಕ್ಟ್, ನೇರ ನುಡಿ, ಪದ IME ). ಈ ಎಲ್ಲಾ ತಂತ್ರಾಂಶಗಳನ್ನೂ ವಿಂಡೋಸ್ ಕಾರ್ಯಾಚರಣೆ ವ್ಯವಸ್ತೆಯಲ್ಲಿ (O.S.) ಮಾತ್ರ ಅಳವಡಿಸಿಕೊಳ್ಳಲು ಸಾಧ್ಯ.


Online Tools

II. ಆನ್ ಲೈನ್ ಟೂಲ್ ಗಳು: ಅಂತರಜಾಲ ಸಂಪರ್ಕವಿರುವಾಗ ಮಾತ್ರ ತೆಗೆದು ಬಳಸಲು ಸಾಧ್ಯ.

ಈ ಕೆಳಗಿನವು ಟ್ರಾನ್ಸ್ ಲಿಟೆರೇಶನ್ ಟೂಲ್ ಗಳು. ಕನ್ನಡವನ್ನು ಇಂಗ್ಲೀಷಿನಲ್ಲಿ ಟೈಪ್ ಮಾಡಿ ಸ್ಪೇಸ್ ಬಾರ್ ಒತ್ತಿದ ಅನಂತರ ಕನ್ನಡ ಅಕ್ಷರಗಳಾಗಿ/ಪದಗಳಾಗಿ ರೂಪಾಂತರ ಹೊಂದುತ್ತವೆ. ಪದಗಳು ತಪ್ಪಾಗಿಯೂ ಬರಬಹುದು. ಇದು ಟೈಪ್ ಮಾಡುವವರ ಟೈಪಿಂಗ್ ತಿಳುವಳಿಕೆಯ ಮೇಲೆ ಮತ್ತು ತಂತ್ರಾಂಶದ ಬುದ್ಧಿವಂತಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಅದು ಹಲವು ಸಲಹೆಗಳನ್ನೂ ಕೊಡುತ್ತದೆ, ತಪ್ಪಾಗಿ ಬಂದರೆ ನಾವು ಸರಿಪಡಿಸಬೇಕಾಗುತ್ತದೆ.

೧. ಗೂಗಲ್ ಟ್ರಾನ್ಸ್ ಲಿಟೆರೇಶನ್ www.google.com/transliterate/kannada

(ಗೂಗಲ್ ನವರು transliteration bookmarklets ಎಂಬ ಟೂಲ್ ಕೂಡ ಕೊಟ್ಟಿದ್ದಾರೆ. ಅದನ್ನು ನಮ್ಮ ಬ್ರೌಸರಿನ ಫೇವರೆಟ್ ಬಾರ್ ನಲ್ಲಿ ಹಾಕಿಕೊಂಡಿದ್ದರೆ ಬೇಕಾದಾಗ ಆನ್ ಮಾಡಿಕೊಂಡು ಯಾವುದೇ ಜಾಲತಾಣದಲ್ಲಾದರೂ ಕೂಡ ಕನ್ನಡ ಟೈಪಿಸಬಹುದು. ವಿವರಗಳು ಇಲ್ಲಿವೆ : http://t13n.googlecode.com/svn/trunk/blet/docs/help.html )

೨. ತಮಿಳ್ ಕ್ಯೂಬ್ : www.tamilcube.com/translate/kannada.aspx

೩. ಕ್ವಿಲ್ ಪ್ಯಾಡ್: http://www.quillpad.in/editor.html

೪. ಮೈಕ್ರೋಸಾಫ್ಟ್: www.specials.msn.co.in/ilit/Kannada.aspx

೫. ಯಾಹೂ: http://kannada.yahoo.com/type-in-kannada/

೬. ಒನ್ ಇಂಡಿಯhttp://kannada.oneindia.in/common/translator.html

ಈ ಕೆಳಗಿನವುಗಳಲ್ಲಿ ಟೈಪ್ ಮಾಡಿದಾಗ ನೇರವಾಗಿ ಕನ್ನಡ ಅಕ್ಷರಗಳೇ ಮೂಡುತ್ತವೆ. ಇಂಗ್ಲೀಷ್ ಅಕ್ಷರಗಳ ಮಧ್ಯಸ್ಥಿಕೆ ಬೇಕಾಗುವುದಿಲ್ಲ. ಅಂತರಜಾಲದ ಮೂಲಕ ಕನ್ನಡ ಟೈಪಿಸುವವರು ಇವುಗಳನ್ನು ಬಳಸುವುದು ಒಳ್ಳೆಯದು. ಹೆಚ್ಚಿನ ಎಲ್ಲವೂ ಫೊನೆಟಿಕ್ ಕೀಲಿಮಣೆ ವಿನ್ಯಾಸವನ್ನು ಹೊಂದಿವೆ.

೧. ನೀವು ಗೂಗಲ್ ಕ್ರೋಮ್ ಬ್ರೌಸರ್ ಬಳಸುತ್ತಿದ್ದರೆ, ವಿಕಿಮೀಡಿಯ ಇನ್ಪುಟ್ ‌ಟೂಲ್ಸ್ ಎನ್ನುವ ಎಕ್ಸ್‌ಟೆನ್ಷನ್ ಬಳಸಿ ಕನ್ನಡ ನೇರವಾಗಿ ಟೈಪಿಸಲು ಸಾಧ್ಯವಿದೆ. ಇದರಲ್ಲಿ ಕಗಪಇನ್ಸ್‌ಸ್ಕ್ರಿಪ್ಟ್ಟ್ರಾನ್ಸ್‌ಲಿಟರೇಷನ್(ಲಿಪ್ಯಂತರಣ)  ಕೀಬೋರ್ಡ್‌ ಆಯ್ಕೆಗಳವೆ. ಎಕ್ಸ್‌ಟೆನ್ಷನ್ ಅನ್ನು ಇನ್ಸ್ಟಾಲ್ ಮಾಡಿಕೊಂಡ ನಂತರ CTRL + M ಬಳಸಿ ಇದರಲ್ಲಿನ ಇತರೆ ಕೀಬೋರ್ಡ್ ಆಯ್ಕೆಗಳನ್ನು ಬಳಸಿಕೊಳ್ಳಬಹುದು. ಇಂಗ್ಲೀಷ್ ಟೈಪಿಸಲು CTRL + M ಬಳಸಿ ಮತ್ತೆ ನಿಮ್ಮ ಸಿಸ್ಟಂ‌ನ ಮೂಲ/ನಿರ್ದಿಷ್ಟ ಕೀಬೋರ್ಡ್‌ಗೆ ಮರಳಬಹುದು. 

೨ . ಕನ್ನಡ ಸ್ಲೇಟ್: http://www.kannadaslate.com/

೩ . ಯಂತ್ರಂ: http://type.yanthram.com/kn/

೪ . ವೆಬ್ ದುನಿಯಾ: http://utilities.webdunia.com/kannada/transliteration.html

೫ . ಮಾನ್ಯುಸಾಫ್ಟ್: www.service.monusoft.com/KannadaTypePad.htm

೬ . ಪ್ರಮುಖ್: http://service.vishalon.net/pramukhtypepad.aspx

೭ . ಲಿಪಿಕಾರ್: www.lipikaar.com/editor/kannada

೮ . ಮೈ ಲ್ಯಾಂಗ್ವೇಜ್: www.mylanguages.org/kannada_phonetic_keyboard.php


೧೦. Gate2Home Kannada keyboard: http://gate2home.com/Kannada-Keyboard

೧೧. ಸುವರ್ಣನುಡಿ ಕೂಲ್ ಪ್ಯಾಡ್ :  http://www.suvarnanudi.com/main/koolpad.htm

ಮೇಲಿನ ಟೂಲ್ ಗಳಲ್ಲಿ ಕೆಲವು ಕೇವಲ ಅಕ್ಷರ ಟೈಪಿಸಲು ಮಾತ್ರ ಸೌಲಭ್ಯ ಕೊಟ್ಟರೆ, ಇನ್ನು ಕೆಲವು ಎಡಿಟಿಂಗ್ (ಅಕ್ಷರಗಳ ಬಣ್ಣ, ಗಾತ್ರ ಮುಂತಾದ ಬದಲಾವಣೆಗಳು) ಮಾಡಲು ಸಾಧ್ಯ ಮಾಡಿಕೊಡುತ್ತವೆ.

******

III. ಆಫೀಸಿನಲ್ಲೋ, ಮತ್ತೆಲ್ಲೋ ನಿಮ್ಮ ಕಂಪ್ಯೂಟರ್ ಗೆ ಯಾವ ಸಾಫ್ಟ್ ವೇರ್ ಅಳವಡಿಸಿಕೊಳ್ಳಲೂ ಅಡ್ಮಿನ್ ರೈಟ್ಸ್  ಅಥವಾ ಅನುಮತಿ ಇಲ್ಲ ಎಂದಾಗ ಮತ್ತು ಅಂತರಜಾಲ ಸಂಪರ್ಕ ಕೂಡ ಇಲ್ಲ ಎಂದಾಗ:

೧. ಪ್ರಮುಖ್ ಪ್ಯಾಡ್ ಡೌನ್ ಲೋಡ್ ಮಾಡಿಟ್ಟುಕೊಂಡಿದ್ದರೆ ಕನ್ನಡ ಟೈಪ್ ಮಾಡಬಹುದು:
http://www.vishalon.net/PramukhIME/PramukhTypePad.aspx

೨. ಪದ ತಂತ್ರಾಂಶZipped/Portable version ಕೂಡ ಬಳಸಬಹುದು: http://www.pada.pro/download/

****

೧. ಲಿನಕ್ಸ್ ನಲ್ಲಿ ಕನ್ನಡ ಟೈಪಿಸಲು O.S.ನಲ್ಲೇ ಟೂಲ್ ಗಳು (iBus or SCIM) ಇವೆ.  ಹೇಗೆಂದು ತಿಳಿಯಲು ಇದನ್ನು ಓದಿ :
ಲಿನಕ್ಸ್ ನಲ್ಲಿ ನಮಗೆ ಬೇಕಾದ ಹಾಗೆ ಕೀಲಿಮಣೆ ವಿನ್ಯಾಸ ಮಾಡಿಕೊಳ್ಳಲು ಅವಕಾಶವೂ ಇದೆ.  ಆದರೆ ಬೇರೆ ಬೇರೆ ರೀತಿಯ text editingಗೆ ಹೊರ ತಂತ್ರಾಂಶಗಳು ಬೇಕಾಗಬಹುದು.

೨. 'ಪದ' ತಂತ್ರಾಂಶದ ಲಿನಕ್ಸ್ ಆವೃತ್ತಿ ಅಳವಡಿಸಿಕೊಂಡು ಬರೆಯಬಹುದು: http://www.pada.pro/download/

Macintosh O.S.ನಲ್ಲಿ ಕನ್ನಡ ಸೇರಿಸುವ ಬಗ್ಗೆ ಇಲ್ಲಿ ಓದಿ:
www.imacusers.com/adding-kannada-support-to-mac-os-x


So....ಕನ್ನಡ ಟೈಪಿಂಗ್ ಕಷ್ಟ, ಕನ್ನಡ ಟೈಪ್ ಮಾಡೋಕೆ ಯಾವುದೂ ಸರಿಯಾದ ಟೂಲೇ ಇಲ್ಲ .. ಅದೂ ಇದೂ ಅಂತ ಯಾರೂ ನೆಪ ಹೇಳುವ ಹಾಗಿಲ್ಲ. ನಿಮಗ್ಯಾವುದಿಷ್ಟನೋ ಆ ಟೂಲ್  ಆಯ್ಕೆ ಮಾಡ್ಕೊಳ್ಳಿ. ಶುರು ಹಚ್ಕೊಳ್ಳಿ.. :)

****

ಕಂಪ್ಯೂಟರ್ ನಲ್ಲಿ ಕನ್ನಡ ಅಂದ್ರೆ ಬರೀ ಕನ್ನಡ ಟೈಪಿಸೋದು ಮಾತ್ರ ಅಲ್ಲ, ಇನ್ನೂ ಮಾಡಬೇಕಾಗಿರುವ ಬಹಳಷ್ಟು ಕೆಲಸಗಳಿವೆ, ನಾವು ಹಿಂದುಳಿದಿದ್ದೇವೆ ಅಂತ ಗಣಕತಜ್ಞ 'ಪವನಜ' ಅವರು ಯಾವಾಗಲೂ ಹೇಳ್ತಾ ಇರ್ತಾರೆ. ಈ ಬಗ್ಗೆ ಬರೆದಿದ್ದಾರೆ. ಅದು ಇಲ್ಲಿದೆ: ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ -ಅಂದು, ಇಂದು, ಮುಂದು. ಕನ್ನಡದಲ್ಲಿ ಬರೆಯದೇ 'ಕಂಗ್ಲೀಷ್‍ನಲ್ಲಿ ಬರೆಯುವವರಿಗೆ ನಾವು ಕನ್ನಡದಲ್ಲಿ ಏಕೆ ಬರೆಯಬೇಕು ಎಂಬುದನ್ನೂ ವಿವರಿಸಿದ್ದಾರೆ, ಅದನ್ನು ಇಲ್ಲಿ ಓದಬಹುದು: ಕಂಗ್ಲೀಷ್ ಶೂರರಿಗೆ

=================================================
 • ಟ್ರಾನ್ಸ್ಲಿಟೆರೇಶನ್ (transliteration) = ಲಿಪ್ಯಂತರ = ಒಂದು ಭಾಷೆಯ ಲಿಪಿಯನ್ನು ಮತ್ತೊಂದು ಭಾಷೆಯ ಲಿಪಿಯಾಗಿಸುವುದು.  
 • ಫೊನೆಟಿಕ್(phonetic) = ಧ್ವನ್ಯಾತ್ಮಕ = ನಾವು ಹೇಗೆ ಮಾತಾಡುತ್ತೀವೋ ಹಾಗೆ ಬರೆಯುವುದು.
 • ಯುನಿಕೋಡ್ ಎಂದರೆ ಏನು ಎಂದು ತಿಳಿಯಲು ಇಲ್ಲಿ ಚಿಟುಕಿ.
=================================================
 • SMART PHONEಗಳಲ್ಲಿ ಕನ್ನಡ ಟೈಪಿಸುವ ಸೌಲಭ್ಯಗಳ ಬಗ್ಗೆ ಈ ಬರಹ ನೋಡಿ: Kannada Typing in  Smart phones
=================================================

ಕಂಪ್ಯೂಟರ್ (ವಿಂಡೋಸ್)ನಲ್ಲಿ ಕನ್ನಡ ತಂತ್ರಾಂಶ ಅಳವಡಿಕೆ ಮತ್ತು ಬಳಕೆ ಬಗ್ಗೆ ನೆರವು ಬೇಕಾದಲ್ಲಿ vikashegde82@gmail.com ವಿಳಾಸಕ್ಕೆ ಮಿಂಚೆ ಕಳಿಸಬಹುದು. ಸಾಧ್ಯವಾದ ಮಟ್ಟಿಗೆ ಉತ್ತರಿಸುತ್ತೇನೆ.

ಮಂಗಳವಾರ, ಏಪ್ರಿಲ್ 26, 2011

ಇದು ಬರ್ಲಿಂಗ್ಟನ್

ಬದುಕು ಅಟ್ಲಾಂಟಿಕ್ ಸಾಗರವನ್ನು ದಾಟಿಸಿ ಕರೆತಂದಿದೆ. ಕೆನಡಾ ದೇಶದ ಬರ್ಲಿಂಗ್ಟನ್ ಎಂಬ ಊರಿನ ಕಟ್ಟಡವೊಂದರ ಹದಿನೆಂಟನೇ ಮಹಡಿಯಲ್ಲಿ ನಾವು ಇಳಿದುಕೊಂಡಿರುವ ಮನೆಯ ಬಾಲ್ಕನಿಯಿಂದ ನಿಂತು ನೋಡುತ್ತಿದ್ದರೆ ಗೆರೆ ಎಳೆದಂತಹ ರಸ್ತೆಗಳು, ಬಣ್ಣ ಬಣ್ಣದ ರಟ್ಟಿನಂತೆ ಕಾಣುವ ಮನೆಗಳು, ಚಳಿಗಾಲಕ್ಕೆ ಎಲೆ ಕಳೆದುಕೊಂಡು ನಿಂತ ಖಾಲಿ ಖಾಲಿ ಮರಗಳು, ಮೈ ಕೊರೆಯುವ ಚಳಿ...


ನಮ್ಮ ಕಂಪನಿಯ ಒಂದು ಘಟಕ ಇಲ್ಲಿ ಇರುವುದರಿಂದ ಮತ್ತು ಅದರೊಂದಿಗೆ ನಮ್ಮ ವ್ಯವಹಾರವಿದ್ದುದರಿಂದ ಈ ಊರಿನ ಹೆಸರು ತಿಳಿದಿತ್ತೇ ಹೊರತು ಮತ್ಯಾವುದೇ ಮಾಹಿತಿ ಗೊತ್ತಿರಲಿಲ್ಲ, ಆ ಬಗ್ಗೆ ಯೋಚಿಸಲೂ ಹೋಗಿರಲಿಲ್ಲ. ಈಗ ನೋಡಿದರೆ ಇಲ್ಲೇ ಬಂದಿದ್ದೇನೆ. ಆಶ್ಚರ್ಯವಾಗುತ್ತದೆ. ಸಣ್ಣವನಿದ್ದಾಗ ನಾನು, ಅಪ್ಪ ಒಂದು ಆಟ ಆಡುತ್ತಿದ್ದೆವು. ನಮ್ಮ ಮನೆಯಲ್ಲಿ ಒಂದು ದೊಡ್ಡ ವಿಶ್ವನಕಾಶೆ ಇತ್ತು. ಅಪ್ಪ ಅದನ್ನು ನೆಲದ ಮೇಲೆ ಹರಡಿ ಯಾವುದಾದರೂ ಒಂದು ಸ್ಥಳದ ಹೆಸರು ನೋಡಿ ಹೇಳುತ್ತಿದ್ದರು. ನಾನು ಅದು ಎಲ್ಲಿದೆ ಎಂದು ಹುಡುಕಿ ಹೇಳಬೇಕಿತ್ತು. ಕೆಲವೊಮ್ಮ ಸ್ವಲ್ಪ ದೊಡ್ಡದಾಗಿ ಅಚ್ಚುಹಾಕಿರುವ ಹೆಸರನ್ನು ಹೇಳುತ್ತಿದ್ದರು, ನಾನು ಬೇಗ ಹುಡುಕಿ ಮತ್ತೊಂದು ಸ್ಥಳದ ಹೆಸರು ಹೇಳಲು ಕೇಳುತ್ತಿದ್ದೆ. ಅವರಿಗೆ ಬೇರೆ ಕೆಲಸವಿದ್ದಾಗ ಸಣ್ಣ ಅಕ್ಷರಗಳಲ್ಲಿ ಬರೆದಿರುವ ಯಾವುದೋ ಪುಟ್ಟ ಊರೊಂದನ್ನು ಅಥವಾ ಎಲ್ಲೋ ಸಣ್ಣದಾಗಿರುವ ದ್ವೀಪವೊಂದನ್ನೋ ಹೇಳಿಬಿಡುತ್ತಿದ್ದರು. ಸುಲಭವಾಗಿ ಸಿಗುತ್ತಿರಲಿಲ್ಲ. ನಾನು ಹುಡುಕಲೇಬೇಕೆಂಬ ಛಲಕ್ಕೆ ಬೀಳುತ್ತಿದ್ದೆ. ಭೂಪಟವನ್ನು ಪೂರ್ತಿ ತಡಕಾಡುತ್ತಿದ್ದೆ. ಹೀಗೆ ಆಡಿ ಆಡಿ ನನಗೆ ವಿಶ್ವದ ದೇಶ, ಸ್ಥಳಗಳ ಹೆಸರುಗಳು ಮತ್ತು ಇರುವೆಡೆಗಳು ಸುಮಾರಾಗಿ ಪರಿಚಯವಾದದ್ದು. ಇಲ್ಲಿಗೆ ಬರುವ ಮುಂಚೆ ಕಂಪ್ಯೂಟರ್ನಲ್ಲಿ ವಿಕಿಮ್ಯಾಪಿಯಾ ತೆಗೆದು ಈ ಊರಿನ ಹೆಸರನ್ನು ಹುಡುಕುತ್ತಿದ್ದಾಗ ಅಪ್ಪನೊಂದಿಗೆ ಆಡುತ್ತಿದ್ದ ನಕಾಶೆ ಹುಡುಕಾಟ ನೆನಪಾಗಿತ್ತು. ಬರ್ಲಿಂಗ್ಟನ್ ಎಂದು ಸರ್ಚ್ ಕೊಟ್ಟರೆ ಹಲವು ಬರ್ಲಿಂಗ್ಟನ್ ಗಳು ಪಟ್ಟಿಯಾಗುತ್ತವೆ. ಇದೊಂತರಾ ನಮ್ಮ ಕಡೆಯ ’ಸಿದ್ದಾಪುರ’ ಎಂಬ ಹೆಸರಿನಂತೆ. ಕರ್ನಾಟಕದಲ್ಲಿ ಹಲವು ಸಿದ್ದಾಪುರಗಳಿದ್ದಂತೆ ಬ್ರಿಟಿಷರು ಇದ್ದ ಕಡೆಯೆಲ್ಲಾ ಒಂದೊಂದು Burlington ನಾಮಕರಣ ಮಾಡಿಬಿಟ್ಟಿದ್ದಾರೆ. :)

ಇದು ನನಗೆ ಹೊಸದೊಂದು ಜಗತ್ತು. ಎಷ್ಟೆಷ್ಟೋ ಲೇನ್ ಗಳಿರುವ ಅಗಲ ಹೈವೇಗಳು, ಮುಗಿಯುವುದೇ ಇಲ್ಲ ಎಂಬಂತೆ ಹಾಯ್ದು ಹೋಗುತ್ತಲೇ ಇರುವ ಕಾರುಗಳು, ಕಾಲ್ನಡಿಗೆಯ ಜನರೇ ಇಲ್ಲದ ರಸ್ತೆಗಳು, ಅಪರೂಪಕ್ಕೆ ಮನೆಗಳಿಂದ ಹೊರಗೆ ಕಾಣಿಸಿ ಮರೆಯಾಗಿಬಿಡುವ ಮನುಷ್ಯರು, ರಾತ್ರಿ ಎಂಟೂವರೆ ತನಕವೂ ಇರುವ ಸೂರ್ಯನ ಬೆಳಕು! ಟೊರಾಂಟೋದಿಂದ ೫೦ ಕಿ.ಮಿ. ದೂರದ ಈ ನಗರ 'ಒಂಟಾರಿಯೋ ಲೇಕ್' ಎನ್ನುವ ಸಮುದ್ರದಂತಿರುವ ಒಂದು ದೊಡ್ಡ ಸರೋವರವೊಂದರ ದಡದ ಮೇಲಿದೆ. ಸರೋವರದ ಆಚೆ ದಡದಿಂದ ಯು.ಎಸ್.ಎ! ಸದ್ಯಕ್ಕೆ ಇಲ್ಲಿನ ಪಾರ್ಲಿಮೆಂಟಿಗೆ ಮಧ್ಯಂತರ ಚುನಾವಣೆ. ಈ ಕ್ಷೇತ್ರದಿಂದ ಚುನಾವಣೆಗೆ ನಿಂತಿರುವ ಹೆಣ್ಣುಮಗಳೊಬ್ಬರು ಓಟು ಕೇಳಲು ನಮ್ಮಮನೆಗೂ ಬಂದಿದ್ದರು :). -೨ ಇಂದ ೭ ಡಿಗ್ರಿ ಸೆಲ್ಶಿಯಸ್ ಒಳಗೇ ಓಲಾಡುತ್ತಿರುವ ತಾಪಮಾನ, ಗಾಳಿ, ಮಳೆಗಳು ಹೊರಗೆ ಹೆಚ್ಚು ಓಡಾಡಲಾಗದಂತೆ ಮಾಡಿವೆ. ಇನ್ನೇನು ಬೇಸಿಗೆ ಶುರುವಾದ ಮೇಲೆ ನೋಡಬೇಕು.

********

ಸತ್ಯಸಾಯಿಬಾಬಾ ತೀರಿಕೊಂಡಿದ್ದಾರೆ.  ಅವರು ದೇವಮಾನವ ಎನ್ನುವುದಕ್ಕಾಗದಿದ್ದರೆ ವಿಶೇಷಮಾನವ ಎನ್ನುವುದಕ್ಕೇನೂ ಅಡ್ದಿಯಿರಲಿಲ್ಲ. ಕೆಲವು ವ್ಯಕ್ತಿತ್ವಗಳು ಹಾಗೆಯೇ. ನಾನು ಅವರ ಭಕ್ತ ಅಥವಾ ಹಿಂಬಾಲಕನಲ್ಲದಿದ್ದರೂ ವೈಯಕ್ತಿಕವಾಗಿ ಬಾಬಾ ಬಗ್ಗೆ ನನಗೆ ಒಂದು ಪ್ರೀತಿಯೂ, ಗೌರವವೂ ಇದೆ. ಅದಕ್ಕೆ ಕಾರಣಗಳೂ ಇವೆ... ಇರಲಿ. ಆ ಬಗ್ಗೆ ಮತ್ತೆ ಬರೆದೇನು.

.........

ಸಿಗೋಣ..

ಶುಕ್ರವಾರ, ಏಪ್ರಿಲ್ 1, 2011

ಶೃಂಗೇರಿಯ ಮೂಗುತಿ ಮೀನು

ಅದು ಹರಿಹರಪುರ. ತುಂಗೆ ತೆಳುವಾಗಿ ಹರಿಯುತ್ತಿದ್ದಾಳೆ. ನಾನು ಮಲಗಿದ್ದೆ ಮಡಿಲಲ್ಲಿ. ಸಣ್ಣ ಸಣ್ಣ ಗುಂಡು ಗುಂಡು ಕಲ್ಲುಗಳ ನಯವಾದ ಹಾಸಿಗೆ.. ಹತ್ತಾರು ಮೃದಂಗಗಳು ಒಂದೇ ಲಯದಲ್ಲಿ ನುಡಿದಂತೆ... ನಾದಮಂಟಪದ ಕಲ್ಲಿನ ಕಂಬಗಳಲ್ಲಿ ಸ್ವರಗಳು ಹೊಮ್ಮಿದಂತೆ ಕಿವಿಗೆ ಹೊಸದೊಂದು ನಾದಮಯ ಲೋಕ... ಹೊರಗಿನಿಂದ ನೀರಿನ ಜುಳು ಜುಳು ಸಂಗೀತ, ಭೋರ್ಗರೆಯುವಾಗ ನೀರಿನ ಅಬ್ಬರದ ಕೂಗನ್ನು ಕೇಳಿದ್ದೆ, ಆದರೆ ನೀರಿನೊಳಗಿನ ಈ ಸಂಗೀತ ಲೋಕದ ಅರಿವಿರಲಿಲ್ಲ. ಇಲ್ಲಿ ಸಮತಟ್ಟಾದ ಹರಿವಿತ್ತು. ಆ ನೀರು ಹರಿಯುವಾಗ ದೊಡ್ಡ ಕಲ್ಲುಗಳನ್ನು ಹತ್ತಿ ಇಳಿದು, ಸಣ್ಣ ಕಲ್ಲುಗಳ ಮೇಲೆ ತೆವಳಿ, ಹೊರಳಾಡಿ, ಪುಟಿದು ಮುಂದೆ ಹೋಗುತ್ತಾ ಸಂಗೀತದ ಹೊನಲನ್ನೂ ಹರಿಸುತ್ತದೆ. ಹೊರಗಿನಿಂದ ಅದು ಕೇಳದು, ಆದರೆ ಮುಳುಗಿದ ನೀರಿನಲ್ಲಿ ಅದು ಗಂಧರ್ವಲೋಕಗಾನ! ಅದೆಷ್ಟು ಹೊತ್ತೋ ಗೊತ್ತಿಲ್ಲ. ಕೇಳುತ್ತಾ ಮಲಗಿದ್ದೆ....

***

ಅವತ್ತಿಗಾಗಲೇ ಶೃಂಗೇರಿಗೆ ಹೋಗದೆ  ಹತ್ತು ವರ್ಷಗಳ ಮೇಲಾಗಿಬಿಟ್ಟಿತ್ತು. ಇದ್ದಕ್ಕಿಂದ್ದತೇ ದೈವಪ್ರೇರಣೆಯಾಗಿ ಶೃಂಗೇರಿಗೆ ಹೋಗಬೇಕೆನಿಸಿತ್ತು. :P ಇಬ್ಬರು ಗೆಳೆಯರಿಗೆ ದೈವಾನುಗ್ರಹದ ಭರವಸೆ ಮೂಡಿಸಿ ಕರೆದುಕೊಂಡು ಅವತ್ತು ಶೃಂಗೇರಿಗೆ ಹೋಗಿ ಇಳಿದಾಗ ಸಂಜೆಯಾಗಿತ್ತು. ಜನವೋ ಜನ. ಉಳಿದುಕೊಳ್ಳಲು ವಸತಿ ಕೇಳಿದರೆ ಎಲ್ಲೂ ಸಿಗಲಿಲ್ಲ. ದೇವಸ್ಥಾನದ ವಸತಿಗಳೆಲ್ಲಾ ತುಂಬಿಹೋಗಿವೆ. ಖಾಸಗಿಯವರದ್ದೂ ತುಂಬಿಹೋಗಿ ಉಳಿದ ಕೆಲವಕ್ಕೆ ಮೂರುಪಟ್ಟು ಬೆಲೆ ಕೊಡಲು ಪೈಪೋಟಿಯಿತ್ತು. ಹೆಂಗಸರು, ಮಕ್ಕಳು-ಮರಿ ಇದ್ದವರಿಗೆ ಆದ್ಯತೆ. ನಮಗ್ಯಾವನು ಕೊಡುತ್ತಾನೆ ರೂಮು? ಇತ್ತೀಚೆಗೆ ಯಾವ ಪುಣ್ಯ ಕ್ಷೇತ್ರಗಳಿಗೆ ಹೋದರೂ ಅಷ್ಟೆ. ರಶ್ಶ್.. ಮೊದಲೆಲ್ಲಾ ಹೀಗಿರಲಿಲ್ಲ , ಜಾತ್ರೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಮಾತ್ರ ಜನಜಂಗುಳಿ ಇರುತ್ತಿತ್ತು. ಆದರೆ ಈಗ ಪ್ರತಿ ಶನಿವಾರ ಭಾನುವಾರಗಳೂ ಜಾತ್ರೆ! ಜನರಲ್ಲಿ ದೈವಭಕ್ತಿ ಜಾಸ್ತಿಯಾಗಿ ಹೋಗಿದೆಯಾ? ಗೊತ್ತಿಲ್ಲ. ಹೆಚ್ಚಾಗಿ ಈಗಿನ ಕನೆಕ್ಟಿವಿಟಿ ಇದಕ್ಕೆ ಕಾರಣವಿರಬಹುದು. ಮೊದಲೆಲ್ಲಾ ಪ್ರಯಾಣ ಅಷ್ಟು ಸುಲಭವಿರಲಿಲ್ಲ. ನಾನು ಸಣ್ಣವನಿದ್ದಾಗ ಶಿರಸಿಗೆ ಹೋಗಲು ಮೈಸೂರು-ಯಲ್ಲಾಪುರ ಬಸ್ಸು, ಬೆಂಗಳೂರು-ಕಾರವಾರ ಬಸ್ಸು ಅಂತೆಲ್ಲಾ ಸಮಯ ನೋಡಿಕೊಂಡು ಹೊರಡುತ್ತಿದ್ದುದು ನೆನಪಿದೆ. ಈಗ ಹಾಗಿಲ್ಲ ಎಲ್ಲಿಂದ ಎಲ್ಲಿಗೆ ಬೇಕಾದರೂ ಸಾಕಷ್ಟು ಬಸ್ಸುಗಳಿವೆ. ಅದಿಲ್ಲದಿದ್ದರೆ ಜನರ ಬಳಿ ಸ್ವಂತ/ಬಾಡಿಗೆ ಗಾಡಿಗಳಿವೆ. ಅದಕ್ಕೇ ಇರಬೇಕು, ಓಡಾಟವೂ ಜಾಸ್ತಿಯಾಗಿದೆ. ಅಂದ ಮೇಲೆ ಕೇಳಬೇಕೇ.. ದೇವರೂ ಫುಲ್ ಬಿಜಿ! ಸರಿ.. ಅವತ್ತು ರಾತ್ರಿಯವರೆಗೂ ಎಲ್ಲಿಯೂ ವಸತಿ ವ್ಯವಸ್ಥೆ ಸಿಗದಿದ್ದಾಗ ಇಲ್ಲೇ ಹತ್ತಿರದ ಹಳ್ಳಿಯೊಂದರಲ್ಲಿ ತಮ್ಮ ನೆಂಟರ ಮನೆ ಇದೆ ಅಲ್ಲಿಗೆ ಹೋಗೋಣ ಅಂತ ಒಬ್ಬ ಗೆಳೆಯನೆಂದ. ಮತ್ತೊಬ್ಬ ಬೇಡ ಅಂದ... ಕೊಪ್ಪಕ್ಕೆ ಹೋಗಿಬಿಡೋಣ ಅಂತ ಮತ್ತೊಬ್ಬನೆಂದ, ನಾನು ಬೇಡ ಎಂದೆ. ಅಲ್ಲಿಗೆ ಅಲ್ಲೇ ದೇವಸ್ಥಾನದ ಸುತ್ತಲ ಆವರಣದೊಳಗೆ ಮಲಗುವುದೆಂದು ನಿರ್ಧರಿಸಿದೆವು. ಎಲ್ಲಾದರೆ ನಮಗೇನು,  ಊಟ ಮಾಡಿ ಬಂದು ... ಮಲ್ಗೋಕೆ ಭೂಮ್ ತಾಯಿ ಮಂಚಾ... ಅಂತ ಚಾಪೆ ಹಾಸುವಷ್ಟರಲ್ಲಿ ಗೆಳೆಯನಿಗೆ ಯಾರೋ ಪರಿಚಯದ ಪೋಲೀಸ್ ಒಬ್ಬರು ನೆನಪಾಗಿಬಿಟ್ಟರು. ಅವರನ್ನೊಮ್ಮೆ ಕೇಳಿನೋಡೋಣ ಅಂತ ಫೋನ್ ಮಾಡಲಾಗಿ ಅವರೂ ಸಿಕ್ಕು ಅರ್ಧ ಗಂಟೆಯೊಳಗೆ ನೈಟ್ ಡ್ಯೂಟಿಗೆ ಹೋಗಿದ್ದ ಪೋಲೀಸರ ಕೋಣೆಯ ಕೀಗಳು ನಮ್ಮ ಕೈಲಿದ್ದವು.

ಮಾರನೇ ದಿನ ಸುಖವಾಗಿ ನಿಧಾನಕ್ಕೆ ಎದ್ದು ತಯಾರಾಗಿ ಬಿಗ್ ಬಾಸ್ ಚಂದ್ರಮೌಳೇಶ್ವರನಿಗೂ, ಶಾರದಾಂಬೆಗೂ ಕೈಮುಗಿದು ಸೀದಾ ನೆಡೆದದ್ದು ತುಂಗಾನದಿಯ ಕಡೆಗೆ. ಶೃಂಗೇರಿಯ ಆಕರ್ಷಣೆ ತುಂಗಾನದಿಯ ರಾಶಿ ರಾಶಿ ಮೀನುಗಳು. ಅವುಗಳನ್ನು ನೋಡುತ್ತಾ ಕೂರುವುದು, ಅವುಗಳಿಗೆ ತಿಂಡಿ ತಿನ್ನಿಸುವುದು, ಆಟವಾಡುವುದು, ನೀರಲ್ಲಿ ಕಾಲುಬಿಟ್ಟುಕೊಂಡು ಅವುಗಳಿಂದ ಕಚಗುಳಿ ಕೊಡಿಸಿಕೊಳುವುದು ನನಗಂತೂ ಭಾರೀ ಇಷ್ಟ. ಅಲ್ಲಿ ಎಷ್ಟೋ ಜನ ಮೀನುಗಳೊಂದಿಗೆ ಖುಷಿ ಪಡುತ್ತಿದ್ದರು. ಮಕ್ಕಳು ಮೀನುಗಳನ್ನು ನೋಡಿ ಕುಣಿಯುತ್ತಿದ್ದವು. ಮಂಡಕ್ಕಿ ಎಸೆಯುತ್ತಿದ್ದವು. ಹಿಂಡು ಹಿಂಡು ಮೀನುಗಳು..... ಎಷ್ಟು ಚಂದ... ಇಂತಹುಗಳಿಂದಲೇ ಅಲ್ಲವೇ ಈ ಭೂಮಿ ಇಷ್ಟು ಸುಂದರ...  ನಾನು ಮೂಗುತಿ ಮೀನನ್ನು ಹುಡುಕುತ್ತಿದ್ದೆ.... . ಸಣ್ಣವನಿದ್ದಾಗ ಪ್ರತಿಬಾರಿ ಹೋದಾಗಲೂ ಮೀನಿನ ಗುಂಪಿನಲ್ಲಿ ಕಾಣಿಸುತ್ತಿತ್ತು. ಯಾರೋ ಒಂದು ಮೀನಿಗೆ ಮೂಗುತಿ ರಿಂಗ್ ಹಾಕಿ ಬಿಟ್ಟಿದ್ದರು. ಈ ಸಲ ಅದು ಕಾಣಿಸಲಿಲ್ಲ. ನಾ ಬರ್ತೀನಿ ಅಂತ ಕಾದು ಕೂತಿರತ್ತಾ ಅದು? ಎಷ್ಟು ವರ್ಷ ಆಯಸ್ಸೋ ಏನೋ ಆ ಮೀನಿಗೆ! ಈಗ ಬದುಕಿದೆಯೋ ಇಲ್ವೋ ಗೊತ್ತಿಲ್ಲ. ನಾವಂತೂ ಕೂತಿದ್ದೆವು ಒಂದು ತಾಸು ಅಲ್ಲೇ.  ನದಿಯ ಆಕಡೆ ನರಸಿಂಹ ವನ.  ಅಲ್ಲಿಗೆ ಹೋಗಲು ಸೇತುವೆ ಇಲ್ಲದ ಕಾಲದಲ್ಲಿ ಅಪ್ಪನ ಹೆಗಲ ಮೇಲೆ ಕೂತು ನದಿದಾಟುತ್ತಿದ್ದುದು ನೆನಪಾಯಿತು.. ನರಸಿಂಹ ವನ ತಂಪಾಗಿತ್ತು. ನರಸಿಂಹವನದಲ್ಲೊಂದು ಮಂದಿರ ಮಾಡಿದ್ದಾರೆ. ಅಲ್ಲಿ ಶ್ಶ್... ಸೈಲೆನ್ಸ್.. ಯಾಕೋ ಗೊತ್ತಿಲ್ಲ ಅಂಗಿ ಬಿಚ್ಚಿಕೊಂಡೇ ಒಳಗೆ ಹೋಗಬೇಕು.... ಆ ವನದಲ್ಲಿ ಜಗದ್ಗುರುಗಳ ವಾಸ್ತವ್ಯವಿದೆ.

ಮಧ್ಯಾಹ್ನ ದೇವಸ್ಥಾನದ ಫುಲ್ ಮೀಲ್ಸ್ ಉಂಡು ಶಿವಮೊಗ್ಗದ ದಾರಿ ಕಡೆ ಯೋಚಿಸಿದಾಗ ಗೆಳೆಯನೊಬ್ಬನಿಗೆ ನೆನಪಾದದ್ದು ಹರಿಹರಪುರ! ಶೃಂಗೇರಿ-ಶಿವಮೊಗ್ಗ ದಾರಿಯಲ್ಲೇ ನಡುವೆ ಇದೆ. ಅವನ ಪೂರ್ವಜರ ಊರು ಅದು. ನಮಗೇನು .. ಜೈ ಅಂದೆವು.  ಬಸ್ ಹತ್ತಿದೆವು. ಅಲ್ಲೊಂದು ಮಠವೂ ಇದೆ. ಅಲ್ಲಿಗೆ ಹೋಗೋಣ ಅಂತ ಅವನೆಂದ. ಕೆಳಗೆ ತುಂಗಾನದಿ ಹರಿಯುತ್ತದೆ. ಯಾರೂ ಇಲ್ಲದ ಜಾಗಕ್ಕೆ ಕರೆದುಕೊಂಡು ಹೋಗ್ತೀನಿ ಅಂದ. ಸರಿ ಅಂದೆವು... ಸ್ವಲ್ಪ ದೂರ ನಡೆದು ಗಿಡಮರಗಳ ಸಂದಿ ಹಾಯ್ದು ಹೆಚ್ಚು ಆಳವಿಲ್ಲದ ಜಾಗ ಹುಡುಕಿ ಸೆಟ್ಲಾದೆವು.. ಆ ಇಡೀ ಜಗತ್ತಿನಲ್ಲಿ ನಾವು ನಾಲ್ವರು ಮಾತ್ರ! ನಾವು ಮೂವರು ಮತ್ತು ತುಂಗೆ. ತಾಸುಗಟ್ಟಲೇ ನೀರಿನಲ್ಲಿ ಮಲಗಿ, ಆಡಿ, ಈಜಿ ರಿಲ್ಯಾಕ್ಸ್ ಆದೆವು. ಸಂಜೆಯಾಗುತ್ತಿತ್ತು. ಐದೈದು ನಿಮಿಷಕ್ಕೆ ಬಸ್ಸು ಬರಲು ಅದು ಬೆಂಗಳೂರಲ್ಲ. ಮತ್ತೆ ಶಿವಮೊಗ್ಗ ಬಸ್ಸು ಸಿಗದಿದ್ದರೆ ಕಷ್ಟ ಎಂದುಕೊಂಡು ಅಲ್ಲಿಂದ ಎದ್ದೆವು.. ಹೊರಡುವಾಗ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಸುಮ್ಮನೇ ಒಮ್ಮೆ ಹಿಂದಿರುಗಿ ನೋಡಿದೆ. ಹೊಳೆನೀರಿನಲ್ಲಿ ಆ ಮೂಗುತಿ ಮೀನು ಫಳಕ್ಕನೆ ಮಿಂಚಿದಂತಾಯಿತು. ಶೃಂಗೇರಿ ಟ್ರಿಪ್ಪು ಸಂಪೂರ್ಣವಾಗಿತ್ತು.

ಮಂಗಳವಾರ, ಫೆಬ್ರವರಿ 22, 2011

ಕನ್ನಡ ವ್ಯಾಕರಣಕ್ಕೆ ಕೈಯಿಟ್ಟಿದ್ದೇನೆ..

'ಭಾಷೆ' ಎನ್ನುವುದು ನನಗೆ ಮೊದಲಿಂದಲೂ ಆಸಕ್ತಿಯ ವಿಷಯ. ಇವತ್ತಿಗೂ ಯಾವುದಾದರೂ ದೇಶದ ಬಗ್ಗೆ, ಪ್ರದೇಶದ ಬಗ್ಗೆ ತಿಳಿದುಕೊಳ್ಳುವಾಗ ಅಲ್ಲಿನ ಭಾಷೆಗಳ ಬಗ್ಗೆ ಕುತೂಹಲವಿಟ್ಟುಕೊಂಡು ತಿಳಿದುಕೊಳ್ಳುತ್ತೇನೆ. ಸಣ್ಣವನಿದ್ದಾಗಿಂದಲೂ ಬೇರೆ ಬೇರೆ ಭಾಷೆಗಳ ಲಿಪಿಗಳನ್ನು ಬರೆಯಲು ಪ್ರಯತ್ನಿಸುವುದನ್ನು ಮಾಡಿಕೊಂಡೇ ಬಂದಿದ್ದೇನೆ. ಸಹಜವಾಗಿ ಕನ್ನಡ ನನಗೆ ಅತ್ಯಂತ ಪ್ರಿಯವಾದ ಭಾಷೆ. ನನ್ನ ತಾಯ್ನುಡಿಯಾದ್ದರಿಂದ ಅದು ನನಗೆ ಅತಿ ಸುಲಭವೆನಿಸುವ ಭಾಷೆಯೂ ಹೌದು. ನಮ್ಮ ಮನೆಮಾತು ಹವ್ಯಕ ಕನ್ನಡವಾಗಿದ್ದರೂ ಕೂಡ ನನಗೆ ಹಳೆಮೈಸೂರುಸೀಮೆಯ ಕನ್ನಡವೇ ಹೆಚ್ಚು ಸುಲಭದ ಆಡುಮಾತಾಗಿ ರೂಢಿಯಾಗಿ ಹೋಗಿದೆ. ಪ್ರತಿ ಭಾಷೆಗೂ ಅದರದ್ದೇ ಆದ ಸ್ವರೂಪ ಇರುತ್ತದೆ, ವಿಶಿಷ್ಟತೆ ಇರುತ್ತದೆ, ವ್ಯಾಕರಣವಿರುತ್ತದೆ. ಭಾರತರ ಭಾಷಾವೈವಿಧ್ಯದ ಬಗ್ಗೆ ನನಗೆ ಅಚ್ಚರಿಯೂ ಹೆಮ್ಮೆಯೂ ಇದೆ. ಆದರೆ ಇಂಗ್ಲೀಷು, ಹಿಂದಿ ಸೇರಿದಂತೆ ಯಾವ ಭಾಷೆಯಾದರೂ ಅವು ಕರ್ನಾಟಕದಲ್ಲಿ ಕನ್ನಡದ ಮೇಲೆ ಸವಾರಿ ಮಾಡುವುದನ್ನು ವಿರೋಧಿಸುತ್ತೇನೆ. ಒಂದು ಭಾಷೆಯ ಉಳಿಕೆ ಮತ್ತು ಬೆಳವಣಿಗೆಗೆ ಅದರ ಬಳಕೆ ಮತ್ತು ತಿಳುವಳಿಕೆ ಬಹಳ ಮುಖ್ಯ. ನಮ್ಮ ಶಿಕ್ಷಣ ವ್ಯವಸ್ಥೆಯ ವಿಪರ್ಯಾಸ ಅಂದರೆ ಅದು ನಮ್ಮದೇ ನೆಲದ ಭಾಷೆಯಿಂದ ನಮ್ಮನ್ನು ವರ್ಷಾನುಗಟ್ಟಲೆ, ಮತ್ತು ಕೊನೆಯವರೆಗೂ ದೂರವಿಟ್ಟುಬಿಡುತ್ತದೆ. ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಹೋದರಂತೂ ನಮ್ಮ ಭಾಷೆಗಳ ಅಗತ್ಯತೆ ಗೌಣವಾಗಿಬಿಡುತ್ತದೆ. ಅಗತ್ಯವಿರುವ ಕೆಲವರು ಫ್ರೆಂಚ್, ಜರ್ಮನ್, ಜಪಾನಿ ಮುಂತಾದ ಭಾಷೆಗಳನ್ನು ಕಲಿಯುತ್ತಾರೆ. ಅಗತ್ಯವಿರದ ಕೆಲವರೂ ಸುಮ್ಮನೇ ಆಸಕ್ತಿಗೆ ಕಲಿಯಲು ಹೊರಡುತ್ತಾರೆ. ಇರಲಿ.

ನನಗೆ ಆಡುಮಾತಾಗಿ, ನನ್ನ ಓದಿನ ಭಾಷೆಯಾಗಿ ಕನ್ನಡ ಚೆನ್ನಾಗಿ ರೂಢಿಯಾಗಿದ್ದರೂ ಕೂಡ ಇದುವರೆಗೂ ಕನ್ನಡದ ವ್ಯಾಕರಣವನ್ನು ಸರಿಯಾಗಿ ತಿಳಿದುಕೊಳ್ಳಲು ಆಗಿರಲಿಲ್ಲ. ಫ್ರೌಡಶಾಲೆಯಲ್ಲಿ, ಪಿ.ಯುಸಿ.ಯಲ್ಲಿ ಮೊದಲ ಭಾಷೆಯಾಗಿ ಸಂಸ್ಕೃತ ತೆಗೆದುಕೊಂಡಿದ್ದರಿಂದ ಕನ್ನಡ ವ್ಯಾಕರಣದ ಓದು ಹೆಚ್ಚೇನೂ ಆಗಲಿಲ್ಲ. ಆಮೇಲೆ ವೃತ್ತಿಪರ ಶಿಕ್ಷಣಕ್ಕೆ ಹೋದಮೇಲೆ, ಮತ್ತು ಕೆಲಸಕ್ಕೆ ಸೇರಿದ ಮೇಲೆ ಭಾಷೆ, ವ್ಯಾಕರಣ ನೆನಪಿಗೇ ಬರದಷ್ಟು ದೂರವಾಗಿಬಿಟ್ಟಿತ್ತು. ಸುಮಾರು ವರ್ಷಗಳ ಅನಂತರ ಇತ್ತೀಚೆಗೆ ಮತ್ಯಾಕೋ ಕನ್ನಡ ವ್ಯಾಕರಣವನ್ನು ಓದಿ ತಿಳಿದುಕೊಳ್ಳುವ ಆಸಕ್ತಿ ಮತ್ತೆ ಚಿಗುರಿತ್ತು. ಎಲ್ಲೋ ದುಡ್ಡು ಸುರಿದು ಯಾವುದೋ ವಿದೇಶಿ ಭಾಷೆಯ ಕಲಿಕೆಗೆ ಹೊರಟು, ಕಲಿತು ಮರೆಯುವ ಬದಲು ಮೊದಲು ನಮ್ಮದೇ ಭಾಷೆಯನ್ನು ಸ್ವಲ್ಪ ಜಾಸ್ತಿ ತಿಳಿದುಕೊಳ್ಳುವುದು ಒಳ್ಳೆಯದು ಅಂತಲೂ ಅನ್ನಿಸಿತ್ತು.. ಸದ್ಯಕ್ಕಂತೂ ಯಾವ ತರಗತಿಯಲ್ಲಿ ಹೋಗಿ ಕೂತು ಕಲಿಯಲಿಕ್ಕಂತೂ ಆಗುವುದಿಲ್ಲ. ಆದ್ದರಿಂದ ನಾನೇ ಸ್ವಂತ ಓದಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ ಅಂದುಕೊಂಡೆ.. ಕೆಲ ತಿಂಗಳುಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಮಳಿಗೆಗೆ ಹೋಗಿದ್ದಾಗ ಕನ್ನಡ ವ್ಯಾಕರಣ ಪುಸ್ತಕಗಳು ಕಾಣಿಸಿದ್ದವು. ಪಂಜೆ ಮಂಗೇಶರಾಯರು ಬರೆದ ‘ಕನ್ನಡ ಮೂಲ ವ್ಯಾಕರಣ‘, ರಂಗನಾಥ ಶರ್ಮರ ‘ಹೊಸಗನ್ನಡ ವ್ಯಾಕರಣ‘ ಪುಸ್ತಕಗಳನ್ನು ಕೊಂಡು ತಂದಿಟ್ಟಿದ್ದೆ. . ಮೊನ್ನೆ ಸಾಹಿತ್ಯ ಸಮ್ಮೇಳನ ಆದಾಗಿಂದ ಓದಲು ಶುರುಮಾಡಿದ್ದೇನೆ. ಮೊದಲಿಗೆ ‘ಕನ್ನಡ ಮೂಲ ವ್ಯಾಕರಣ‘ ಪುಸ್ತಕಕ್ಕೆ ಕೈಹಾಕಿದ್ದೇನೆ. ಇದು ಸಾಂಪ್ರದಾಯಿಕ ಶೈಲಿಯಲ್ಲಿಲ್ಲ. ಮೊದಲು ವಿಷಯ ವಿವರಿಸಿ ಆಮೇಲೆ ಉದಾಹರಣೆ ಕೊಡುವ ಬದಲು ಮೊದಲೇ ಉದಾಹರಣೆ, ಪ್ರಯೋಗಗಳನ್ನು ಕೊಟ್ಟು ವಿವರಿಸಿ ಅದರ ಮೂಲಕ ವ್ಯಾಕರಣದ ವಿಷಯಗಳನ್ನು ಹೇಳಿದ್ದಾರೆ. ನಾಮಪದ, ಕ್ರಿಯಾಪದ, ಲಿಂಗ, ವಚನ, ವಿಭಕ್ತಿ, ಪ್ರತ್ಯಯ, ಸಂಧಿ, ಸಮಾಸ, ಕರ್ತರಿ, ಕರ್ಮಣಿ ಪ್ರಯೋಗ....ಹ್ಮ್.... ಇನ್ನೂ ಏನೇನೋ ಇದೆ. ಒಂದೊಂದೇ ನಿಧಾನಕ್ಕೆ ಓದುತ್ತಿದ್ದೇನೆ. ಎರಡೂ ಪುಸ್ತಕಗಳೂ ಚಿಕ್ಕದಾಗಿ ಚೊಕ್ಕದಾಗಿವೆ. ಈ ಪುಸ್ತಕಗಳನ್ನು ಓದಾದ ಮೇಲೆ ಕನ್ನಡ ವ್ಯಾಕರಣವನ್ನು ಬೇರೆ ಆಯಾಮದಿಂದ ಹೇಳುವ ಶಂಕರಭಟ್ಟರ 'ಕನ್ನಡ ಸೊಲ್ಲರಿಮೆ' ಪುಸ್ತಕವನ್ನೂ ಓದಬೇಕಿದೆ. ಕನ್ನಡ ವ್ಯಾಕರಣ ಓದಿಗೆ ದಿನಾ ಅರ್ಧ-ಮುಕ್ಕಾಲು ತಾಸು ಎತ್ತಿಟ್ಟಿದ್ದೇನೆ. ಚೆನ್ನಾಗನಿಸುತ್ತಿದೆ. ವ್ಯಾಕರಣ & ಪುಸ್ತಕಗಳ ಬಗ್ಗೆ ಸಲಹೆಗಳೇನಾದರೂ ಇದ್ದರೆ ಕೊಡಿ..

ಗೆಳೆಯರಿಗೆ ಹೇಳಿದರೆ ಕೆಲವರು ಅದನ್ನೆಲ್ಲಾ ಓದಿ ಯಾಕೆ ಟೈಂವೇಸ್ಟ್ ಮಾಡ್ತೀಯಾ, ಟೆಕ್ನಿಕಲ್ ಬುಕ್ಸ್ ಓದು, ಅದರಿಂದ ಪ್ರಯೋಜನವಾಗುತ್ತೆ ಅನ್ನುತ್ತಾರೆ. ಅದು ನಿಜ. ಆದರೂ ಇರಲಿ. ಅದನ್ನೂ ಮಾಡೋಣ, ಇದನ್ನೂ ಮಾಡೋಣ. ಆಸಕ್ತಿ ಇರುವ ಎಲ್ಲವನ್ನೂ ಮಾಡೋಣ. ಎಲ್ಲದಕ್ಕೂ ಟೈಂ ಇದೆ. ಲೈಫು ಇಷ್ಟೇ ಏನಲ್ಲವಲ್ಲ!

****

ಈ ನಡುವೆ ಹಿಂದಿನ ವಾರ ದಾಂಡೇಲಿ, ಸುತ್ತಮುತ್ತಲಿನ ಸ್ಥಳಗಳಿಗೆ ಪ್ರವಾಸ/ಚಾರಣ ಹೋಗಿಬಂದೆ. ಖುಷಿಯಾಯಿತು. ಆದರೆ ಎರಡು ದಿನ ಏನೇನೂ ಸಾಕಾಗಲಿಲ್ಲ. ಮೂಲತಃ ಉತ್ತರಕನ್ನಡ ಜಿಲ್ಲೆಯವನಾಗಿದ್ದರೂ ಶಿರಸಿಯ ಸುತ್ತಲಿನ ಕೆಲವು ಸ್ಥಳಗಳನ್ನು ಬಿಟ್ಟು ನನಗೆ ಆ ಜಿಲ್ಲೆಯನ್ನು ನೋಡಲು, ತಿರುಗಾಡಲು ಹೆಚ್ಚು ಅವಕಾಶ ಸಿಕ್ಕಿಲ್ಲ. ಮತ್ತೆ ಹೋಗಬೇಕು.. ಮತ್ತೆ ಮತ್ತೆ ಹೋಗಬೇಕು.. explore ಮಾಡಬೇಕು...

ಮಂಗಳವಾರ, ಫೆಬ್ರವರಿ 8, 2011

ಅದು ಅಕ್ಷರ ಜಾತ್ರೆ, ಆಗಿದ್ದು ಅಕ್ಷರಶಃ ಜಾತ್ರೆ !

ಇದು ನನಗೆ ಎರಡನೆ ಸಾಹಿತ್ಯ ಸಮ್ಮೇಳನ. ಎರಡು ವರ್ಷದ ಹಿಂದೆ ಶಿವಮೊಗ್ಗದಲ್ಲಿ ನಡೆದಾಗ ಹೋಗಿದ್ದೆ. ಅರ್ಧ ದಿನವಷ್ಟೆ ಅಲ್ಲಿದ್ದದ್ದು.  ಸಮ್ಮೇಳನ ಹೇಗಿರುತ್ತದೆ ಎಂದು ನೋಡಲು ಹೋಗಿದ್ದೆ ಎನ್ನುವುದಕ್ಕಿಂತ ಹೆಚ್ಚಿನ ಉದ್ದೇಶ ಇರಲಿಲ್ಲ ಆಗ. ಆದರೆ ಈ ಬಾರಿ ಬೆಂಗಳೂರಿನಲ್ಲೇ ನಡೆಯುತ್ತದೆ ಎಂದಾಗ ಸರಿಯಾಗಿ ಪಾಲ್ಗೊಳ್ಳಬೇಕು ಎಂಬ ಆಸೆ ಇತ್ತು. ಅದರಂತೆ ಕಾರ್ಯಕ್ರಮದ ಪಟ್ಟಿ ನೋಡಿ ನನಗೆ ಆಸಕ್ತಿಯಿದ್ದ ಕೆಲವನ್ನು ಗುರುತು ಹಾಕಿಕೊಂಡಿದ್ದೆ.

ಕನ್ನಡ ಜಾತ್ರೆಗೆ ದಾರಿಯಾವುದಯ್ಯಾ.. ಎಂದು ಕೇಳಿಕೊಂಡು ೫ನೇ ತಾರೀಕು ಶನಿವಾರ ನ್ಯಾಷನಲ್ ಕಾಲೇಜು ಮೈದಾನಕ್ಕೆ ಹೋದರೆ ಜನವೋ ಜನ. ಅವತ್ತು ೪ ಗಂಟೆಗೆ ನಾನು ಹೋಗಬೇಕೆಂದುಕೊಂಡಿದ್ದ ಗೋಷ್ಠಿಯೊಂದಿತ್ತು. ಹೋದಕೂಡಲೇ ಅಲ್ಲಿ ಕಾಣಿಸಿದ್ದು ಸಮ್ಮೇಳನದ ಮುಖ್ಯ ವೇದಿಕೆ. ಖುದ್ದು ವೆಂಕಟಸುಬ್ಬಯ್ಯನವರೇ ಮಾತಾಡುತ್ತಿದ್ದರು. ಕೇಳುತ್ತಾ ಇರುವಾಗ ಒಂದಿಬ್ಬರು ಗೆಳೆಯರು ಜೊತೆಯಾದರು. ಪುಸ್ತಕದಂಗಡಿಗಳಿಗೆ ಹೋದೆವು. ಹೋದೆವು ಅನ್ನುವುದಕ್ಕಿಂತ ಅದರ ಬಾಗಿಲಲ್ಲಿ ಹೋಗಿ ನಿಂತೆವು ಅಷ್ಟೆ, ಜನ ನಮ್ಮನ್ನು ತಳ್ಳಿಕೊಂಡು ಒಳಗೆ ತಂದುಬಿಟ್ಟರು. ಛಂದ ಪುಸ್ತಕದ ಮಳಿಗೆಯಲ್ಲಿ ವಸುಧೇಂದ್ರ ನಗುಮುಖದಿಂದ ಕೂತಿದ್ದರು. ವಿಪರೀತ ರಶ್ಶಿನಿಂದ ಇವತ್ತು ಯಾವುದೂ ಸರಿಯಾಗಿ ನೋಡಲಾಗುವುದಿಲ್ಲ ಎಂದು ಗೊತ್ತಾದರೂ ನಾಳೆ ಭಾನುವಾರ ಇದಕ್ಕೂ ಜಾಸ್ತಿ ರಶ್ಶು ಇರುತ್ತದೆ ಎಂದು ನೆನಪಿಗೆ ಬಂತು. ಇವತ್ತೇ ಮುಗಿಸಿಬಿಡೋಣ ಎಂದು ಒಂದೊಂದೇ ಸಾಲಿನೊಳಕ್ಕೆ ಹೋಗುತ್ತಾ ಕಳೆದುಹೋಗಿಬಿಟ್ಟೆ. ಗೆಳೆಯರು ಎಲ್ಲೋ ತಪ್ಪಿಹೋದರು. ಕರ್ನಾಟಕದಲ್ಲಿ ಇಷ್ಟೆಲ್ಲಾ ಪಬ್ಲಿಷರ್ ಗಳು ಇದ್ದಾರೆ ಎಂದು ಗೊತ್ತಾಗಿದ್ದೇ ಅಲ್ಲಿ. ಕೆಲವು ಲೇಖಕರೂ ಕಂಡರು. ’ಬನವಾಸಿ ಬಳಗ’ದ ಮಳಿಗೆಯಲ್ಲಿ ಹುಡುಗರು ಉತ್ಸಾಹದಿಂದ ಜನರನ್ನು ಮಾತಾಡಿಸುತ್ತಿದ್ದರು. ಎಲ್ಲಾ ಸಾಲುಗಳನ್ನೂ, ಎಲ್ಲಾ ಸ್ಟಾಲುಗಳನ್ನೂ ಮುಗಿಸಿಕೊಂಡು ಒಂದಿಷ್ಟು ಪುಸ್ತಕ ಎತ್ತಾಕಿಕೊಂಡು ಆಗುವಷ್ಟರಲ್ಲಿ ಅಲ್ಲಿ ಸುಮಾರು ೩-೪ ತಾಸುಗಳನ್ನು ಕಳೆದುಬಿಟ್ಟಿದ್ದೆ. ಸಂಜೆ ಕಾವ್ಯವಾಚನ ಮತ್ತು ಗಾಯನ ನಡೆಯುತ್ತಿತ್ತು. ಕೂತು ಕೇಳಿ ಸುಧಾರಿಸಿಕೊಂಡದ್ದಾಯ್ತು.

ಮಾರನೇ ದಿನ ಭಾನುವಾರದ ಎರಡು ಗೋಷ್ಠಿಗಳಿಗೆ ಹೋಗಲು ಗುರುತುಹಾಕಿಕೊಂಡಿದ್ದೆ. ಬೆಳಗ್ಗಿನ ಗೋಷ್ಠಿಗೆ ನಾನು ಹೋಗುವುದು ತಡವಾಗಿಬಿಟ್ಟಿತ್ತು. ಅಲ್ಲಿ ಸ್ವಲ್ಪ ಹೊತ್ತು ಇದ್ದು ಅನಂತರ ಉನ್ನತಿ ಸಭಾಂಗಣದಲ್ಲಿದ್ದ ಎರಡನೇ ಗೋಷ್ಠಿಗೆ ಹೋದೆ. ಅತಿಥಿಗಳು ಮಾತನಾಡಿದರು. ಚೆನ್ನಾಗಿತ್ತು. ನನ್ನ ಆಸಕ್ತಿಯ ಹಲವು ವಿಷಯಗಳು ತಿಳಿದವು. ಅದನ್ನು ಮುಗಿಸಿ ಹೊರಗೆ ಬಂದು ಮುಖ್ಯ ವೇದಿಕೆಯ ಬಳಿ ಬರುತ್ತಿದ್ದಂತೇ ಗೆಳೆಯರು ಜೊತೆಯಾದರು. ಆಮೇಲೆ ಬಹಿರಂಗ ಅಧಿವೇಶನ ಮತ್ತು ಸಮಾರೋಪ ಸಮಾರಂಭ.

********

ಈಗ ವಿಷಯಕ್ಕೆ ಬಂದರೆ, ಇದು ಸಾಹಿತ್ಯ ಸಮ್ಮೇಳನವಾ ಅಥವಾ ಒಂದು ಜಾತ್ರೆಯಾ ಎಂಬ ಸಂಶಯ ಎಲ್ಲರಿಗೂ ಬಂದಿರುವಂತೆ ನನಗೂ ಬಂದಿದ್ದಂತೂ ಹೌದು. ಅದು ಹಾಗೆ ಇದ್ದಿದ್ದೂ ಹೌದು. ನನ್ನ ಆಸುಪಾಸಿನ ವಯಸ್ಸಿನ ಬಹುತೇಕ ಹುಡುಗಹುಡುಗಿಯರಿಗೆ ಇದು ಮೊದಲನೇ ಸಮ್ಮೇಳನ. ಮಾಧ್ಯಮಗಳಲ್ಲಿ ಪ್ರಚಾರ, ಸಂಭ್ರಮ ನೋಡಿ ಸಮ್ಮೇಳನ ಅಂದರೆ ಏನೋ ವಿಶೇಷವಾದದ್ದು ಅಂದುಕೊಂಡು ಬಂದವರು ಬಹಳಷ್ಟು ಜನ. ನಾವು ಎಷ್ಟೇ ಸಕಾರಾತ್ಮಕವಾಗಿ ತೆಗೆದುಕೊಂಡು ಹೆಮ್ಮೆ ಪಡೋಣವೆಂದರೂ ಕೂಡ  ಭ್ರಮನಿರಸನವಾಗಿದೆ. ಇಷ್ಟು ದೊಡ್ಡ ಸಮ್ಮೇಳನ ಆಯೋಜಿಸುವುದು ಎಷ್ಟು ಕಷ್ಟದ ಕೆಲಸ ಎಂದು ಗೊತ್ತಿದೆ. ಆಯೋಜಕರನ್ನು ಟೀಕಿಸುವುದು, ಅದು ಸರಿಯಿಲ್ಲ ಇದು ಸರಿಯಿಲ್ಲ ಹಾಗಿರಬೇಕು ಹೀಗಿರಬೇಕು ಎನ್ನುವುದು ಸರಿಯಲ್ಲ ನಿಜ. ನಾವೇನೋ ಅಕ್ಷರ ಜಾತ್ರೆ ಎಂಬ ಸುಂದರ ಹೆಸರನ್ನಿಟ್ಟು ಕರೆದುಬಿಡುತ್ತೇವೆ. ಆದರೆ ಜಾತ್ರೆ ಅಂದರೆ ಅದು ಈ ಪಾಟಿ ಜಾತ್ರೆಯೇ ಆಗಿಬಿಡುತ್ತದೆಂದರೆ ಸಾಹಿತ್ಯ ಸಮ್ಮೇಳನದ ಉದ್ದೇಶ ಖಂಡಿತ ಇದಲ್ಲ.

ಮೂರುದಿನಗಳಲ್ಲಿ ಲಕ್ಷಾಂತರ ಜನ ಬಂದಿದ್ದು ನಿಜ. ಆದರೆ ಅಲ್ಲಿ ಬಂದಿದ್ದ ಜನರಲ್ಲಿ ಇಲ್ಲಿ ಎಂತದ್ದೋ ಸಮ್ಮೇಳನ ನಡೆಯುತ್ತಿದೆ ಎಂದು ಸುಮ್ಮನೇ ನೋಡಲು ಬಂದವರೇ ಹೆಚ್ಚು. ನಿಜವಾದ ಆಸಕ್ತಿಯಿದ್ದವರಿಗೆ ಬೇಕಾದ ಒಂದು ಗಂಭೀರ ವಾತಾವರಣವೇ ಅಲ್ಲಿ ಸಿಗಲಿಲ್ಲ. ಮುಖ್ಯವೇದಿಕೆ ಮುಂದೆ ಕುಳಿತವರಿಗಷ್ಟೆ ಎಂಬಂತಾಗಿತ್ತು. ಹಿಂದೆ ಕೂತವರಿಗೆ ದೃಶ್ಯವೂ ಇಲ್ಲ, ಸರಿಯಾದ ಶ್ರವ್ಯವೂ ಇಲ್ಲ! ಪುಸ್ತಕದಂಗಡಿಗಳಲ್ಲಿ ಬರೀ ಧೂಳು. ಆದರೂ ಅದು ಕನ್ನಡದ ಧೂಳು. ಗೋಷ್ಠಿಗಳ ವಿಷಯಗಳು ಚೆನ್ನಾಗಿದ್ದವಷ್ಟೆ. ಆದರೆ ಅಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಿರದ ಜನರೂ ಆ ಬಾಗಿಲಿನಿಂದ ಒಳಬಂದು ಈ ಬಾಗಿಲಿನಿಂದ ಹೊರಗೆ ಹೋದರು. ಮತ್ತೊಂದು ಕಡೆ ಹೊರಜಗತ್ತಿಗೆ ತೆರೆದುಕೊಳ್ಳಲಾರದ ಒಂದಿಷ್ಟು ಸಂಕುಚಿತ ಮನಸ್ಸುಗಳು ಸೇರಿ ಡಬ್ಬಿಂಗ್ ವಿರುದ್ಧ ಕೂಗಾಡಿಬಿಟ್ಟರು.

ಇದೆಲ್ಲಾ ನೋಡಿದರೆ ಒಂದು ಮೌಲ್ಯಯುತ ಸಮ್ಮೇಳನ ಮತ್ತು ಜಾತ್ರೆ ಎರಡನ್ನೂ ಬೆರೆಸಿಬಿಟ್ಟಂತೆ ಕಾಣುತ್ತದೆ. ಕಡ್ಲೇಕಾಯಿ ಪರಿಷೆಯಂತೆ, ಮಾರಿಕಾಂಬಾ ಜಾತ್ರೆಯಂತೆ ಒಂದು ದೊಡ್ಡ ಜಾತ್ರೆ ಮತ್ತು ಮಾರಾಟ ಮಾಡಬೇಕೆಂದರೆ ಅದನ್ನೇ ಮಾಡಬಹುದು. ಅದನ್ನು ಕನ್ನಡದ ಸೊಗಡಿನೊಂದಿಗೇ ಮಾಡಬಹುದು. ಅದ್ಬುತ ಕನ್ನಡ ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನಿಡಿಸಿ ಮಾಡಬಹುದು. ಅದಕ್ಕೆ ಕನ್ನಡ ಸಾಹಿತ್ಯ ಪರಿಷತ್ತೇ ಬೇಡ. ಈ ಭಾಷಣಗಳು, ಗೋಷ್ಠಿಗಳಲ್ಲಿ ಟೈಂಪಾಸಿಗೆ ಬಂದು ತೂಕಡಿಸುವ ಕೆಲ ಮುದುಕರು, ಪುಕ್ಸಟ್ಟೆ ತಿರುಗುವ ಪಡ್ಡೆಗಳು, ಐಟಂ ಹುಡ್ಗೀರು, ಕಡ್ಲೆಕಾಯಿ ಮಾರುವವರು, ಐಸ್ ಕ್ಯಾಂಡಿ ಚೀಪುವವರು, ತಿಂಡಿ ಹುಡುಕುವವರು, ಯಾವತ್ತೂ ಕಂಡಿಲ್ಲದವರಂತೆ ಚಾಟ್ಸ್ ತಿನ್ನುವವರು, ರಸ್ತೆ ಬದಿಯ ಮಾರಾಟಗಾರರು, ಕಯ್ಯಪಿಯ್ಯಗುಡುವ ಚಿಳ್ಳೆಗಳು, ಪಿಕ್ನಿಕ್ಕಿಗೆ ಬಂದಂತೆ ಬರುವವರು, ಯಾವುದೋ ಊರಿಂದ ಆನ್ ಡ್ಯೂಟಿ ರಜೆ ಮೇಲೆ ಬಂದು ಸುಮ್ಮನೇ ಇಲ್ಲಿ ಉಂಡು ತಿಂದು ತಿರುಗುವವರು, ಆ ಕಸದ ರಾಶಿ .... ಇವೆಲ್ಲಾ ‘ಸಾಹಿತ್ಯ ಸಮ್ಮೇಳನ‘ಕ್ಕೆ ಬೇಕಾಉಚಿತ ಊಟ, ಹಾಜರಾತಿ ರಜೆ ರದ್ದಾಗಲಿ. ಆಗ ಜೊಳ್ಳು ಹೋಗಿ ಗಟ್ಟಿಕಾಳುಗಳಷ್ಟೇ ಉಳಿಯುತ್ತವೆ ಮತ್ತು ಕನ್ನಡ ಕಟ್ಟಲು ಅಷ್ಟು ಸಾಕು ಕೂಡ.

ಇದು ಬೆಂಗಳೂರಿನಲ್ಲಿ ಆಗಿದ್ದಕ್ಕೆ ವಿಪರೀತ ಜನಸಂದಣಿಯಿಂದ ಹೀಗಾಯಿತಾ? ಅಥವಾ ಎಲ್ಲ ಕಡೆಯೂ ಹಿಂಗೇನಾ? ಆಯೋಜಕರು ಇಷ್ಟೆಲ್ಲಾ ಜನರನ್ನು ನಿರೀಕ್ಷಿಸಿರಲಿಲ್ಲವಾ? ಗೊತ್ತಿಲ್ಲ. ಒಟ್ಟಿನಲ್ಲಿ ಸಮ್ಮೇಳನ ವ್ಯರ್ಥ ಅಂತ ಅನ್ನಿಸದಿದ್ದರೂ ಸಮಾಧಾನವಾಗಲಿಲ್ಲ. ಮುಖ್ಯವೇದಿಕೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯಲಿ, ಜೊತೆಗೆ ಕೊನೇಪಕ್ಷ ಸಾಹಿತ್ಯ ಗೋಷ್ಠಿಗಳಿಗಾದರೂ ಸಂಬಂಧಪಟ್ಟ ಬರಹಗಾರರು, ಸಾಹಿತಿಗಳು, ಅಧ್ಯಾಪಕರು, ವಿಶ್ವವಿದ್ಯಾಲಯದ ಪ್ರತಿನಿಧಿಗಳು, ತಂತ್ರಜ್ಞರು,  ಕ್ಷೇತ್ರಗಳ ಪರಿಣಿತರು  ಮತ್ತು ಆಸಕ್ತಿ ಇರುವ ಸಾರ್ವಜನಿಕರು ಮಾತ್ರ ನೋಂದಾಯಿಸಿಕೊಂಡು ಭಾಗವಹಿಸಿ ಒಂದು ಕ್ಯಾಂಪಸ್ಸಿನಲ್ಲಿ ಮಾಡಬಹುದಾಗುವಂತೆ ಸಮ್ಮೇಳನದ ಸ್ವರೂಪ ಬದಲಾಗಬೇಕಿದೆ ಮತ್ತು ಇನ್ನೂ ವ್ಯವಸ್ಥಿತವಾಗಬೇಕಿದೆ. ಏನೇ ಆಗಲಿ ಇದು ನಮ್ಮದೇ ಸಮ್ಮೇಳನ. ಮುಂದಿನ ದಿನಗಳಲ್ಲಿ ಚೆನ್ನಾಗಿ ಆಗುತ್ತಾ ಹೋಗುತ್ತದೆ ಅಂತ ಆಶಿಸೋಣ.  ಒಟ್ಟಾರೆ ಈ ಸಮ್ಮೇಳನ ಒಂದು ಒಳ್ಳೆಯ ಅನುಭವ. ನನಗನ್ನಿಸಿದ್ದು ಹೇಳಿದ್ದೇನೆ. ಇನ್ನುಳಿದದ್ದು ಆ ತಾಯಿ ಭುವನೇಶ್ವರಿಗೆ ಬಿಟ್ಟದ್ದು.

ಶುಕ್ರವಾರ, ಜನವರಿ 21, 2011

ಆತ್ಮಕತೆಗಳೊಂದಿಗೆ Simply Fly

ನಿನ್ನೆಗೆ ಕ್ಯಾಪ್ಟನ್ ಗೋಪೀನಾಥರ Simply Fly ಪುಸ್ತಕವನ್ನು ಓದಿ ಮುಗಿಸಿದೆ.  ರೆಟ್ಟೆಗಾತ್ರದ ಪುಸ್ತಕವನ್ನು ಒಂದೂವರೆ ತಿಂಗಳಿನ ಹಿಂದೆಯೇ ಓದಲು ಶುರುಮಾಡಿದ್ದರೂ ಮಧ್ಯೆ ಮಧ್ಯೆ ನಾನಾ ಕಾರಣಗಳಿಂದ ಅದನ್ನು ಮುಗಿಸಲಾಗದೇ ಇಷ್ಟು ತಡವಾಯಿತು. ಆ ಪುಸ್ತಕ ಕನ್ನಡದಲ್ಲಿ ’ಬಾನಯಾನ’ವಾಗಿ ಹೊರಬಂದಿದ್ದರೂ ಕೂಡ ಇಂಗ್ಲೀಷಲ್ಲಿ ಮೂಲ ಪುಸ್ತಕವನ್ನೇ ಓದೋಣ ಎಂದು ಹೊರಟಿದ್ದೂ ತಡವಾಗಿ ಮುಗಿದುದ್ದಕ್ಕೆ ಒಂದು ಕಾರಣ ಎನ್ನಬಹುದು. ಇರಲಿ. ಸಾಮಾನ್ಯವಾಗಿ ನನಗೆ ಮೊದಲು ಆತ್ಮಕತೆಗಳನ್ನು ಓದಲು ಇಷ್ಟವಾಗುತ್ತಿರಲಿಲ್ಲ. ಅದ್ಯಾವ ಗಳಿಗೆಯಲ್ಲೋ ಲಂಕೇಶರ ಆತ್ಮಕತೆ ’ಹುಳಿಮಾವಿನಮರ’ವನ್ನು ಓದಿದ ಮೇಲೆ ಆತ್ಮಕತೆಗಳ ಬಗ್ಗೆ ಆಸಕ್ತಿ ಹೊರಟುಹೋಗಿತ್ತು. ಆಗಿನ್ನೂ ಸಣ್ಣವಯಸ್ಸಿದ್ದುದರಿಂದ ಹಾಗೆನ್ನಿಸಿತ್ತೋ ಅಥವಾ ಆ ಪುಸ್ತಕವೇ ಹಾಗಿತ್ತೋ ನೆನಪಿಲ್ಲ. ಆತ್ಮಕತೆಗಳು ಎಂದರೆ ಕೇವಲ ನಿರುಪಯೋಗಿ ವೈಯಕ್ತಿಕ ವಿವರಗಳು, ಅದು ಯಾರದ್ದಾದರೂ ಸರಿ, ಓದಿ ಮಾಡುವುದಾದರೂ ಏನು ಎನ್ನಿಸಿಬಿಟ್ಟಿತ್ತು. ಆದರೆ ನನ್ನ ಈ ಭಾವನೆಯನ್ನು ಬದಲಿಸಿದ್ದು ಶಿವರಾಮಕಾರಂತರ ’ಹುಚ್ಚುಮನಸ್ಸಿನಹತ್ತುಮುಖಗಳು’. ಒಮ್ಮೆ ಗೆಳೆಯನೊಬ್ಬನ ಮನೆಗೆ ಹೋದಾಗ ಕಂಡಪುಸ್ತಕವನ್ನು ಸುಮ್ಮನೇ ಕೈಗೆತ್ತಿಕೊಂಡು ಓದಿದ್ದು ಆತ್ಮಕತೆಗಳ ಬಗ್ಗೆ ನನ್ನ ಭಾವನೆಯನ್ನು ಬದಲಿಸಿತು. ಎಲ್ಲಾ ಆತ್ಮಕತೆಗಳು ಆಸಕ್ತಿದಾಯಕವಾಗಿರಬೇಕಂತಿಲ್ಲ, ಆದರೆ ಅದರಿಂದ ತಿಳಿದುಕೊಳ್ಳುವುದು ಬಹಳಾ ಇರುತ್ತದೆ ಎಂಬುದು ಅರ್ಥವಾಗಿತ್ತು. ಹಿರಿಯರ ಅನುಭವವು ತಿಳಿಸಿಕೊಡುವಷ್ಟು ಮತ್ತೆಲ್ಲೂ ಸಿಗುವುದಿಲ್ಲ ಎಂದು ಖಾತ್ರಿಯಾಗಿತ್ತು. ಒಬ್ಬರ ಬಗ್ಗೆ ಮತ್ತೊಬ್ಬರು ಬರೆದ ಜೀವನ ಚರಿತ್ರೆಗಳು ಒಬ್ಬ ವ್ಯಕ್ತಿಯ ಸರಿಯಾದ ಚಿತ್ರಣವನ್ನು ಕೊಡಲು ಸಾಧ್ಯವಾಗುವುದಿಲ್ಲ. ಒಬ್ಬ ವ್ಯಕ್ತಿ ತನ್ನ ಬಗ್ಗೆ ತಾನು ತಿಳಿದುಕೊಂಡಷ್ಟು ಮತ್ಯಾರಿಗೂ ತಿಳಿಯಲು ಸಾಧ್ಯವಿಲ್ಲವಲ್ಲ ಅಂತೆಯೇ ಶಿವರಾಮ ಕಾರಂತರ ಆತ್ಮಕತೆ ಓದಿ ಅವರ ಬಗ್ಗೆ ಅಚ್ಚರಿಪಟ್ಟೆ. ಎಲ್ಲಾ ಕ್ಷೇತ್ರಗಳಲ್ಲೂ ಅವರ ಒಂದೊಂದು ಕೆಲಸದ ಬಗ್ಗೆಯೂ ಅವರಿಟ್ಟುಕೊಂಡ ನೋಟಗಳು, ಅದನ್ನು ಕಾರ್ಯಗತಗೊಳಿಸಿದ, ಅನುಭವಗಳ ವಿವರಗಳು ಮನಸ್ಸಿನಲ್ಲಿ ಕೂತವು. ಅದರಿಂದ ನನ್ನಲ್ಲಿ ಏನೋ ಅದ್ಭುತ ಬದಲಾವಣೆಯಾಗಿ ಹೋಯಿತು ಅಂತೇನೂ ಇಲ್ಲ , ಆದರೆ ಅದರಿಂದಾಗಿ ಜೀವನದ ಕೆಲ ವಿಷಯಗಳ ಬಗ್ಗೆ ನನ್ನ ಧೋರಣೆ ಬದಲಾಯಿಸಿಕೊಂಡೆ. ಹೊಸನೋಟ ಬೆಳೆಸಿಕೊಂಡೆ. ಅದು ಬಹಳ ಸಹಾಯಕಾರಿಯೂ ಆಯಿತು.

ನನಗೆ ಮೊದಲಿನಿಂದಲೂ ಓದುವ ಚಪಲ ಸ್ವಲ್ಪ ಜಾಸ್ತಿಯೇ ಇರುವುದರಿಂದ ಸಿಕ್ಕ ಸಿಕ್ಕ ಪುಸ್ತಕಗಳನ್ನೆಲ್ಲಾ ಓದಿಬಿಡುತ್ತಿದ್ದೆ. ವಿದ್ಯಾರ್ಥಿಯಾಗಿದ್ದಾಗ ಮತ್ತು ಆಮೇಲೆ ಕೆಲಸಕ್ಕೆ ಸೇರಿದ ಅನಂತರ ಜವಾಬ್ದಾರಿ ಕಡಿಮೆ ಇರುವಾಗ ಬೇಕಾದಷ್ಟು ಸಮಯವೂ ಇರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಮಯದ ಅಭಾವ ಶುರುವಾಯಿತು ಅನ್ನುವುದಕ್ಕಿಂತ ಇರುವ ಸಮಯವನ್ನು ಸರಿಯಾಗಿ ಬಳಸಿಕೊಳ್ಳುವ ಅಗತ್ಯತೆ ಹೆಚ್ಚಾಗುತ್ತಾ ಹೋಯಿತು. ಜೊತೆಗೆ ಆಸಕ್ತಿಗಳೂ ಬದಲಾಗುತ್ತಾ ಹೋದವು. ಇದು ಸ್ಪಷ್ಟವಾಗಿ ಅನ್ನಿಸಿದ್ದು ಮತ್ತೊಂದು ಆತ್ಮಕತೆಯನ್ನು ಓದಿದ ಮೇಲೆ. ಅದು ರವಿಬೆಳಗೆರೆ ಅನುವಾದಿತ ‘ಟೈಂಪಾಸ್ ‘ ಪುಸ್ತಕ. ಪ್ರೊತಿಮಾ ಬೇಡಿ ಎನ್ನುವ ನೃತ್ಯಗಾತಿಯೊಬ್ಬಳ ಬದುಕಿನ ಕತೆ ಅದು. ಅದು ಓದಿಯಾದ ಮೇಲೆ ಇಂತದ್ದನ್ನು ಓದಲು ’ಟೈಂ ವೇಸ್ಟ್ ’ ಮಾಡಿಕೊಂಡೆನಲ್ಲಾ ಎನ್ನಿಸಿಬಿಟ್ಟಿತ್ತು. ಸಣ್ಣವಯಸ್ಸಿನಿಂದ ಹಿಡಿದು ಮುದುಕಿಯಾಗುವವರೆಗೆ ತನಗೆ ಯಾರನ್ನು, ಎಂತವರನ್ನು ಕಂಡಾಗ ಪುಳಕವಾಗುತ್ತಿತ್ತು , ಯಾರ್ಯಾರ ಜೊತೆ ತನ್ನ ಸಂಬಂಧವಿತ್ತು , ಅವನ ಜೊತೆ ಏನು ಮಾಡಿದೆ ಇವನ ಜೊತೆ ಏನು ಮಾಡಿದೆ ಎಂಬಂತಹ ವಿವರಗಳೇ ಜಾಸ್ತಿ ಇದ್ದ ಅವಳ ಖಾಸಗಿ ವಿಷಯಗಳನ್ನು ಓದಿ ತಿಳಿದುಕೊಂಡು ನಾನು ಮಾಡುವುದೇನೂ ಇರಲಿಲ್ಲ. ಅದೊಂದು ಯಾವುದೇ ಹೆಚ್ಚಿನ ಒಳನೋಟಗಳಿಲ್ಲದ ಮನರಂಜನೆಯಷ್ಟೆ. ಆತ್ಮಕತೆಗಳ ಓದಿನಲ್ಲಿ ರೋಚಕತೆ ಮುಖ್ಯವಾಗಬಾರದು. ಚಮಚಾಗಿರಿ, 'ದಾದಾಗಿರಿ' ಮಾಡಿದ್ದನ್ನೂ ಆತ್ಮಕತೆಯಾಗಿ ಬರೆದುಕೊಂಡವರಿದ್ದಾರೆ.  ಇದಾದ ಮೇಲೆ ಪುಸ್ತಕಗಳ ಆಯ್ಕೆ ವಿಷಯದಲ್ಲೂ ಸ್ವಲ್ಪ ಎಚ್ಚರವಹಿಸುತ್ತಾ ಹೋದೆ. ಹಿಂದಿನ ವರುಷದ ಮಧ್ಯದಲ್ಲಿ ಓದಿದ ಮತ್ತೊಂದು ಅದೇ ಬೆಳಗೆರೆ ಅನುವಾದಿತ ಆತ್ಮಕತೆ ‘ಚಲಂ‘. ಒಬ್ಬ ಸಾರ್ವಜನಿಕ ವ್ಯಕ್ತಿಯದು ಅದೆಷ್ಟೇ ವಿಲಕ್ಷಣ ವ್ಯಕ್ತಿತ್ವವಾಗಿದ್ದರೂ ಅವರ ಆ ಬದುಕಿನ ವಿವರ ತಿಳಿದುಕೊಳ್ಳುವಂತದ್ದೇನೂ ಆಗಿರಬೇಕಂತಿಲ್ಲ. ಆ ಆತ್ಮಕತೆ ಕೆಟ್ಟದಾಗಿತ್ತು ಅನ್ನುವುದಕ್ಕಿಂತ ಅದರ ಅನುವಾದ ಇನ್ನೂ ಕೆಟ್ಟದಾಗಿತ್ತು ಎನ್ನುವುದು ಸೂಕ್ತ.  ಅದ್ದರಿಂದಲೇ ಅದು ನಾನು ಓದಿದ ಒಂದು ಅತ್ಯಂತ ಕೆಟ್ಟ ಕನ್ನಡ ಪುಸ್ತಕವಾಗಿ ದಾಖಲಾಗಿಹೋಯಿತು.


ಬಾನಯಾನ
ಹೀಗಿರುವಾಗ ಹಿಂದಿನ ವರ್ಷದ ಕೊನೆಯಲ್ಲಿ ತೆಗೆದುಕೊಂಡದ್ದು ’ಸಿಂಪ್ಲಿಫ್ಲೈ’.  ಇದು ಭಾರತದ ವಿಮಾನಯಾನದಲ್ಲಿ ಕ್ರಾಂತಿ ಮಾಡಿದ ಕ್ಯಾಪ್ಟನ್ ಗೋಪಿನಾಥರ ಆತ್ಮಕತೆ. ಅವರು 'ಏರ್ ಡೆಕ್ಕನ್'  ಶುರುಮಾಡಿದ ವ್ಯಕ್ತಿಯಾಗಿ ಹೆಚ್ಚು ಪ್ರಸಿದ್ಧ. ವಿಧಾನಸಭೆ, ಲೋಕಸಭೆ ಚುನಾವಣೆಗೆ ನಿಂತಿದ್ದ ರಾಜಕೀಯ ವ್ಯಕ್ತಿಯಾಗಿಯೂ ಸುಮಾರು ಜನರಿಗೆ ಪರಿಚಯವಿರುವಂತವರು. ಆದರೆ ಆತ ಬರೀ ಅಷ್ಟೇ ಅಲ್ಲ. ಅವರೊಬ್ಬ ಸಣ್ಣ ವ್ಯಾಪಾರಿ,  ಉದ್ಯಮಿ, ಒಂದೇ ಕಾಲಕ್ಕೆ ಹೊಟೆಲ್, ಆಟೊಮೊಬೈಲ್ ವ್ಯಾಪಾರಗಳನ್ನು ನಿರ್ವಹಿಸಿದವ, ಬರಹಗಾರ, ಬಾಂಗ್ಲಾ ಯುದ್ಧದಲ್ಲಿ ನೇರವಾಗಿ ಪಾಲ್ಗೊಂಡಿದ್ದ ಮಿಲಿಟರಿ ಅಧಿಕಾರಿ, ಮೇಲಾಗಿ ಅವರೊಬ್ಬ ಪಕ್ಕಾ ರೈತ! ಇದರಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಕ್ಯಾಪ್ಟನ್ ನನಗೆ ಇಷ್ಟವಾಗಿದ್ದು ಮಾದರಿರೈತನಾಗಿ. ಅವರ ಕುಟುಂಬದ ಜಮೀನು ಗೊರೂರು ಅಣೆಕಟ್ಟು ಯೋಜನೆಯಲ್ಲಿ ಕೈಬಿಟ್ಟು ಹೋದಾಗ ದೂರದ ಜಾಗದಲ್ಲಿ ಸರ್ಕಾರದಿಂದ ಪರಿಹಾರವಾಗಿ ಬಂದ ಜಮೀನಿನಲ್ಲಿ ಹೊಸದಾಗಿ ಕೃಷಿ ಶುರುಮಾಡಿ, ಅದನ್ನು ಮಾದರಿಯೆಂಬಂತೆ ಮಾಡಿದ್ದೇ ಸಾಕು, ಒಬ್ಬ ಮನುಷ್ಯನ ಜೀವನದ ಸಾಧನೆ ಎನ್ನಬಹುದು. ಕೃಷಿಯ ಬಗ್ಗೆ, ಪ್ರಕೃತಿ ಬಗ್ಗೆ , ಪ್ರಾಣಿ ಪಕ್ಷಿ ಕೀಟಗಳ ಬಗ್ಗೆ ಅವರ ತಿಳುವಳಿಕೆ, ರಾಸಾಯನಿಕಗಳಿಲ್ಲದ ನೈಸರ್ಗಿಕ ಕೃಷಿಯ ಅಳವಡಿಕೆ ಅದ್ಬುತ. ನಾಲ್ಕು ವರ್ಷ ನನ್ನ ಕರ್ಮಭೂಮಿಯಾಗಿದ್ದ ಹಾಸನದಲ್ಲಿಯೇ ಅವರೂ ಇದ್ದಿದ್ದು, ಅಲ್ಲಿಯ ಚಿರಪರಿಚಿತ ವಾತಾವರಣದ ಬಗ್ಗೆ, ಅವರು ಒಡೆನಾಡಿದ ಗುರುತಿರುವ ಹಿರಿಯರ ಬಗ್ಗೆ ಅವರು ಬರೆದಿರುವುದು ಎಲ್ಲವೂ ಪುಸ್ತಕದ ಓದುವಾಗಿನ ಆಸಕ್ತಿಯನ್ನು ಹೆಚ್ಚಿಸಿದಂತವು. ವರ್ಷಗಟ್ಟಲೆ ಅತ್ಯಂತ ಶ್ರಮಪಟ್ಟು ಹೆಲಿಕಾಪ್ಟರ್ ಕಂಪನಿ, ವಿಮಾನದ ಕಂಪನಿಗಳನ್ನು ಶುರುಮಾಡಿ ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದರೂ ಅವರಲ್ಲಿ ಕಾಣುವುದು ಹಣ ಮಾಡಬೇಕೆಂದು ಹೊರಟಿರುವ ಒಬ್ಬ ಬಿಸಿನೆಸ್ ಮನ್ ಅಲ್ಲ. ಅವರಲ್ಲಿ ಕಾಣುವುದು ವ್ಯಾಪಾರದೆಡೆಗಿನ ಒಂದು ವಿಶಿಷ್ಟ ನೋಟವಿರುವ ಮತ್ತು ಒಂದು ನೈತಿಕತೆ ಇರುವ ಮನುಷ್ಯ. ದೇಶದ ಬಡಮಧ್ಯಮವರ್ಗದವರೆಗೂ ಯೋಚಿಸುವಂತಹ ಮನೋವೃತ್ತಿ. ಏನಾದರೂ ಮಾಡಬೇಕು ಎನ್ನಿಸಿದರೆ ಅದನ್ನು ಮಾಡೇ ತೀರುವ, ಎಲ್ಲಿ ಏನು ಹೊಸದನ್ನು ಮಾಡಲಾಗುತ್ತದೆ ಎಂದು ಹುಡುಕುತ್ತಲೇ ಇರುವ, ಮಾಡುವ ಎಲ್ಲಾ ಕೆಲಸಗಳಲ್ಲೂ ಸಾಧ್ಯವಾದಷ್ಟೂ ಆಳಕ್ಕಿಳಿಯುವ ಅವರ ಗುಣ ಸಿಕ್ಕಾಪಟ್ಟೆ ಇಷ್ಟವಾಗಿದ್ದು. ಬ್ಬ ಮನುಷ್ಯ ಇಷ್ಟೆಲ್ಲಾ ಆಗುವುದು ಸಾಧ್ಯವಾ ಎಂದು ಅಚ್ಚರಿ ಪಡುವಷ್ಟರಲ್ಲೇ ಅವರು ಈಗ ಮತ್ತೊಂದು ದೊಡ್ಡ ಕೆಲಸಕ್ಕೆ ಕೈ ಹಾಕಿದ್ದಾರೆ, ಅದು ಕಾರ್ಗೋ ವಿಮಾನಗಳ ಸೇವೆಯ ಆರಂಭ. ಒಟ್ಟಿನಲ್ಲಿ ಅವರ ಬದುಕೊಂದು ಅದ್ಭುತ ಹಾರಾಟ. ಅವರಿಗೊಂದು ಆಲ್ ದಿ ಬೆಸ್ಟ್ ಮತ್ತು ಸಿಕ್ಕಾಪಟ್ಟೆ ಥ್ಯಾಂಕ್ಸ್.. ಒಂದು ಒಳ್ಳೆಯ ಆತ್ಮಕಥನವನ್ನು ಓದಿದ ತೃಪ್ತಿ ಸಿಕ್ಕಿದೆ.

ಆತ್ಮಕತೆಗಳ ಸಾಲಿನಲ್ಲಿ ಬಹುಶಃ ನನ್ನ ಮುಂದಿನ ಗುರಿ ’ಭಿತ್ತಿ’.

*******

ಜೊತೆಗೆ ಬ್ಲಾಗ್ ಒಣಗದಂತೆ ಹೀಗೆ ಆಗಾಗ ಸ್ವಲ್ಪ ನೀರು ಹರಿಸುವ ಪ್ರಯತ್ನ ಜಾರಿಯಲ್ಲಿರುತ್ತದೆ.

ಅಲ್ಲಿಯವರೆಗೆ Line on hold ( Is this phrase patented? ;-) )