ಪುಟಗಳು

ಮಂಗಳವಾರ, ಆಗಸ್ಟ್ 31, 2010

" ಆ ಮತ್ತೊಂದು ಬಾಗಿಲು "

"ಸ್ವಲ್ಪ ಹೊತ್ತು, ಇನ್ನೇನು ಚಿಕ್ಕಮ್ಮ ಬಂದೇ ಬಿಡ್ತಾರೆ" ಅಂದಳು ಆ ಹುಡುಗಿ.

ಆಕೆ ಸುಮಾರು ಹದಿನೈದು ಹದಿನಾರು ವರ್ಷದವಳಂತೆ ಕಂಡಳು.

ನಟ್ಟೆಲ್ ಸುಮ್ಮನೇ ಕೂತ.

"ಅಲ್ಲಿವರೆಗೆ ನಾವಿಬ್ರೂ ಮಾತಾಡೋಣ, ಏನಾದ್ರೂ ಮಾತಾಡಿ", ಅಂದಳು ಹುಡುಗಿ.

ಆ ಹುಡುಗಿಯ ಉತ್ಸಾಹಕ್ಕೆ ತೊಂದರೆ ಮಾಡಲು ಅವನಿಗೂ ಇಷ್ಟವಾಗಲಿಲ್ಲ. ಆಕೆಯ ಚಿಕ್ಕಮ್ಮ ಬರುವವರೆಗೂ ಕಾಯೋಣ ಎಂದುಕೊಂಡ. ಆದರೆ ಹೀಗೆ ಸುಮ್ಮನೇ ಅಪರಿಚಿತರ ಮನೆಗೆ ಹೋಗುವುದು, ಅವರ ಮನೆಯಲ್ಲಿ ಕೂರುವುದರಿಂದ ಅವನು ಆ ಹಳ್ಳಿಗೆ ಬಂದ ಉದ್ದೇಶಕ್ಕೆ ಏನಾದರೂ ಸಹಾಯವಾಗುವುದಾ ಎಂದು ಮನಸ್ಸಿನಲ್ಲೇ ಪ್ರಶ್ನೆ ಹಾಕಿಕೊಂಡ.

"ನಿಂಗೆ ಅಲ್ಯಾರೂ ಪರಿಚಯದವರಿಲ್ಲ. ಅದು ಸಣ್ಣ ಹಳ್ಳಿ. ಆ ಊರಿನಲ್ಲಿ ಜನ ಕಡಿಮೆ ಇದ್ದಾರೆ. ಮನೆಗಳಂತೂ ಒಂದಂಕ್ಕೊಂದು ದೂರ ದೂರ ಇವೆ. ಸುಮ್ಮನೇ ಒಬ್ಬನೇ ಹೋಗಿ ಯಾರೂ ಪರಿಚಯ ಇಲ್ಲದಿದ್ದರೆ ಆ ಊರಿನ ಭೂತಗಳ ಜೊತೆ ನೀನೂ ಭೂತದ ತರಹ ಒಬ್ಬನೇ ಬದುಕಬೇಕಾಗಬಹುದು. ನನಗೆ ಪರಿಚಯದವರು ಕೆಲವರು ಅಲ್ಲಿದ್ದಾರೆ. ಕೆಲವು ಒಳ್ಳೆಯ ಜನರಿದ್ದಾರೆ. ನಿನಗೆ ನನ್ನ ಪರಿಚಯ ಪತ್ರ ಕೊಡ್ತೀನಿ. ಅವರಿಗೆ ಇದನ್ನು ತೋರಿಸಿ ಪರಿಚಯ ಮಾಡಿಕೋ", ಎಂದು ಅವನು ಈ ಹಳ್ಳಿಗೆ ಬರುವುದಕ್ಕಿಂತ ಮೊದಲು ಅವನ ಅಕ್ಕ ಹೇಳಿದ್ದಳು..

ಅಕ್ಕ ಹೇಳಿದ್ದ ಒಳ್ಳೆಯ ಜನರಲ್ಲಿ ಈ ಹುಡುಗಿಯ ಚಿಕ್ಕಮ್ಮನೂ ಇರಬಹುದಾ ಎಂದು ನಟ್ಟೆಲ್ ಯೋಚಿಸಿದ .

ಇವನು ಏನೂ ಮಾತಾಡದೇ ಕುಳಿತದ್ದನ್ನು ನೋಡಿ ಆ ಪುಟ್ಟ ಹುಡುಗಿ ಕೇಳಿದಳು, "ಈ ಊರಿನಲ್ಲಿ ನಿಮಗೆ ಯಾರೂ ಪರಿಚಯದವರಿಲ್ವಾ?"

"ಇಲ್ಲಮ್ಮ , ಈ ಊರಿನ ಜನ ಇರಲಿ, ಒಂದು ಭೂತ ಕೂಡ ಪರಿಚಯ ಇಲ್ಲ,

"ಹಾಗಿದ್ದರೆ ನನ್ನ ಚಿಕ್ಕಮ್ಮನೂ ನಿಮಗೆ ಗೊತ್ತಿಲ್ಲ ಅಂತ ಆಯಿತು" ಅಂದಳು ಹುಡುಗಿ.

"ಇಲ್ಲ, ಬರೀ ಅವರ ಹೆಸರು, ವಿಳಾಸ ಅಷ್ಟೇ ನನಗೆ ಗೊತ್ತಿರುವುದು, ನನ್ನ ಅಕ್ಕ ಐದು ವರ್ಷಗಳ ಹಿಂದೆ ಇಲ್ಲೇ ಹತ್ತಿರದಲ್ಲಿ ಇದ್ದಳಂತೆ. ಅವಳು ಈ ಹಳ್ಳಿಗೆ ಕಳಿಸಿದಳು", ಎಂದು ಉತ್ತರಿಸಿದ.

ಅವನಿಗೆ ಆ ಚಿಕ್ಕಮ್ಮ ಎಷ್ಟು ವಯಸ್ಸಿನವಳು, ಮದುವೆ ಆದವಳೋ, ವಿಧವೆಯೋ ಏನೂ ಗೊತ್ತಿರಲಿಲ್ಲ. ಆದರೂ ಆ ಮನೆಯನ್ನು ಗಮನಿಸಿದಾಗ ಯಾರೋ ಗಂಡಸರಂತೂ ಇರುವ ಮನೆ ಎಂದು ಅಂದಾಜಾಯಿತು.

ಮತ್ತೆ ಸುಮ್ಮನೇ ಕೂತ.

ಹುಡುಗಿ ಮಾತನಾಡಿದಳು, "ಮೂರು ವರ್ಷದ ಹಿಂದೆ ಆ ದುರಂತ ನೆಡೆದದ್ದು, ಪಾಪ, ಚಿಕ್ಕಮ್ಮ ಆವಾಗಿನಿಂದ ಒಂಥರಾ ಆಗಿಹೋಗಿದ್ದಾರೆ".

"ದುರಂತ? ಏನದು?", ಕೇಳಿದ ನಟ್ಟೆಲ್.

"ಅಲ್ಲಿರುವ ಬಾಗಿಲು ನೋಡಿದ್ದೀರಾ?", ನಟ್ಟೆಲ್ ನೋಡಿದ, ಅವರು ಕುಳಿತ ಜಗುಲಿಯಲ್ಲಿ ಪಕ್ಕದಲ್ಲಿ ಮತ್ತೊಂದು ದೊಡ್ಡ ಬಾಗಿಲಿತ್ತು, ಪೂರ್ತಿ ತೆರೆದಿತ್ತು.

ಆ ಕಡೆಯಿಂದ ಹೊರಗೆ ಹೋಗುವ ದಾರಿ ಕಾಣುತ್ತಿತ್ತು.

"ಈ ಚಳಿಯಲ್ಲೂ ಆ ಬಾಗಿಲು ಯಾಕೆ ಹಾಗೆ ತೆರೆದಿಟ್ಟಿದ್ದಾರೆ ಅಂತ ನೀವು ಯೋಚಿಸಬಹುದು", ಬಾಗಿಲನ್ನೇ ನೋಡುತ್ತಾ ಕೇಳಿದಳು ಹುಡುಗಿ.

ನಟ್ಟೆಲ್ ಗೆ ಆಶ್ಚರ್ಯವಾಯಿತು. ಈಕೆಯ ಚಿಕ್ಕಮ್ಮನ ಬಗ್ಗೆ ಹೇಳುತ್ತಿರುವ ಘಟನೆಗೂ ಆ ಬಾಗಿಲಿಗೂ ಏನೋ ಸಂಬಂಧ ಇರಬಹುದೆಂದುಕೊಂಡ.

ಹುಡುಗಿ ಮುಂದುವರೆಸಿದಳು, "ಇವತ್ತಿನ ಸರಿಯಾಗಿ ಮೂರು ವರ್ಷದ ಹಿಂದೆ ಚಿಕ್ಕಮ್ಮನ ಗಂಡ, ಅವಳ ಇಬ್ಬರು ತಮ್ಮಂದಿರು ಕಾಡಿಗೆ ಬೇಟೆಗೆ ಹೋಗಿಬರುತ್ತೇವೆಂದು ಇದೇ ಬಾಗಿಲಿನ ಮೂಲಕ ಹೋದವರು ಹಿಂದಿರುಗಿ ಬರಲೇ ಇಲ್ಲ!. ಅವರು ಎಲ್ಲಿ ಹೋದರೆಂಬುದೂ ಗೊತ್ತಾಗಲಿಲ್ಲ. ಹೊಳೆ ದಾಟುವಾಗ ಕೊಚ್ಚಿಕೊಂಡು ಹೋಗಿರಬೇಕು ಅಂದರು ಮೊದಲು. ಆದರೆ ಆ ಹೊಳೆ ಅಂಥಾ ದೊಡ್ಡದೇನೂ ಅಲ್ಲ. ಯಾರೂ ಯಾವತ್ತೂ ಅದರಲ್ಲಿ ಸತ್ತಿಲ್ಲ. ಅಂದ ಮೇಲೆ ಇವರು ಕೊಚ್ಚಿಕೊಂಡು ಹೋಗಲು ಸಾಧ್ಯವಿರಲಿಲ್ಲ. ಅಮೇಲೆ ತಿಳಿದದ್ದು, ಅವರು ಅಲ್ಲಿನ ಜೌಗಿನ ನೆಲದಲ್ಲಿ ಹೂತು ಸತ್ತುಹೋದ್ರಂತೆ. ಒಟ್ಟಿನಲ್ಲಿ ಕೊನೆಗೂ ಅವರ ದೇಹಗಳೂ ಸಿಗಲಿಲ್ಲ". ಹುಡುಗಿಯ ಧ್ವನಿಯಲ್ಲಿ ಬದಲಾವಣೆ ಆಗಿದ್ದನ್ನು ನಟ್ಟೆಲ್ ಗಮನಿಸಿದ.

"ಅವತ್ತಿಂದ ಚಿಕ್ಕಮ್ಮ ಅವರು ಬರೋದನ್ನೇ ಕಾಯುತ್ತಿದ್ದಾರೆ, ಯಾವತ್ತೋ ಒಂದು ದಿನ ಬಂದೇ ಬರ್ತಾರೆ ಅಂತ ನಂಬಿಕೊಂಡಿದ್ದಾರೆ, ಅವರ ಗಂಡ, ತಮ್ಮಂದಿರು ಮತ್ತು ಅವರ ಪ್ರೀತಿಯ ನಾಯಿ ಮರಿ ವಾಪಸ್ಸು ಬರುವುದನ್ನೇ ಪ್ರತಿದಿನ ಕಾಯ್ತಿರ್ತಾರೆ. ಅವರಿಗಾಗೇ ಆ ಬಾಗಿಲನ್ನು ದಿನಾ ಸಂಜೆ ತೆಗೆದಿಟ್ಟಿರುತ್ತಾರೆ. ಹೋಗುವಾಗ ಚಿಕ್ಕಪ್ಪ ಬಿಳೀ ರೈನ್ ಕೋಟು ಹಾಕಿಕೊಂಡಿದ್ದರಂತೆ, ಅವರ ಚಿಕ್ಕ ತಮ್ಮ ಜೋರಾಗಿ ಹಾಡು ಹೇಳುತ್ತಾ ಚಿಕ್ಕಮ್ಮನನ್ನು ಅಣಗಿಸುತ್ತಾ ಹೋದನಂತೆ. ಇದನ್ನು ಚಿಕ್ಕಮ್ಮ ಯಾವಾಗ್ಲೂ ಹೇಳ್ತಿರ್ತಾರೆ. ಅದನ್ನು ಕೇಳೀ ಕೇಳೀ ಒಬ್ಬಳೇ ಕೂತಿದ್ದಾಗ ನನಗೂ ಒಂದು ದಿನ ಇದೇ ಬಾಗಿಲಲ್ಲಿ ಅವರು ಹಾಗೇ ನೋಡನೋಡುತ್ತಿದ್ದಂತೆ ಬಂದುಬಿಡುತ್ತಾರೆನೋ ಅನ್ನಿಸಿಬಿಡುತ್ತದೆ."

ಮಾತಾಡುತ್ತಿದ್ದವಳ ಧ್ವನಿ ಸಣ್ಣದಾಯಿತು. ಕಣ್ಣಲ್ಲಿ ನೀರು ತುಂಬಿಕೊಂಡಿತು.

*****

ಅಷ್ಟರಲ್ಲೇ ಒಂದು ಹೆಂಗಸು ಮುಂದಿನ ಬಾಗಿಲಿನಿಂದ ಅವಸರದಲ್ಲಿ ಒಳಗೆ ಬಂದಳು. ನಟ್ಟೆಲ್ ನನ್ನು ನೋಡಿ ಅವನನ್ನು ಇಷ್ಟು ಹೊತ್ತು ಕಾಯಿಸಿದ್ದಕ್ಕೆ ಮೂರ್ನಾಲ್ಕು ಬಾರಿ ಕ್ಷಮೆ ಕೇಳಿದಳು. ಆ ಹೆಂಗಸೇ ಆ ಹುಡುಗಿಯ ಚಿಕ್ಕಮ್ಮ ಎಂದು ನಟ್ಟೆಲ್ ನಿಗೆ ತಿಳಿಯಿತು. ತಾನು ಬಂದಿದ್ದು ಇವಳಿಗೆ ಹೇಗೆ ಗೊತ್ತಾಯಿತು ಎಂದು ಯೋಚಿಸಿದ ನಟ್ಟೆಲ್, ತಾನು ಮನೆಯೊಳಗೆ ಬರುವುದನ್ನು ನೋಡಿದ ಯಾರೋ ಹೋಗಿ ಹೇಳಿರಬಹುದು ಎಂದುಕೊಂಡ.

"ನಮ್ಮ ಪುಟ್ಟಿ ನಿಮ್ಮ ಜೊತೆ ಚೆನ್ನಾಗಿ ಮಾತಾಡ್ತಾ ಇದ್ದಳಾ, ಕಾಯುವಾಗ ಏನೂ ಬೇಸರವಾಗಲಿಲ್ಲ ತಾನೆ?" ಎಂದು ಕೇಳಿದಳು ಆ ಹೆಂಗಸು.

"ಇಲ್ಲ, ಬಹಳ ಚೆನ್ನಾಗಿ ಮಾತಾಡುತ್ತಾಳೆ, ಹೊತ್ತು ಹೋದದ್ದೇ ತಿಳಿಯಲಿಲ್ಲ" ಎಂದ ನಟ್ಟೆಲ್.

ಆ ಹೆಂಗಸು ಹುಡುಗಿ ತೋರಿಸಿದ್ದ ದೊಡ್ಡ ಬಾಗಿಲನ್ನೇ ತೋರಿಸುತ್ತಾ ಕೇಳಿದಳು, "ಆ ದೊಡ್ಡ ಬಾಗಿಲು ತೆಗೆದೇ ಇತ್ತು, ಅಲ್ಲಿಂದ ಗಾಳಿ ಬೀಸುತ್ತದೆ, ನಿಮಗೆ ಚಳಿಯಾಗಿರಬಹುದು, ನನ್ನ ಗಂಡ, ತಮ್ಮಂದಿರು ಬರುವ ಹೊತ್ತಾಯಿತು, ಅವರು ಬೇಟೆಗೆ ಹೋದವರು ಈ ಕಡೆ ಬಾಗಿಲಿನಿಂದ ಬರುತ್ತಾರೆ, ಅದಕ್ಕೇ ತೆರೆದಿಟ್ಟಿದ್ದೆ",

ನಟ್ಟೆಲ್ ನಿಗೆ ಆಶ್ಚರ್ಯವಾಯಿತು, ಸಣ್ಣಗೆ ಭಯವೂ ಆಯಿತು.

"ಕೊಳಕು ಕಾಲುಗಳಲ್ಲೇ ಒಳಬಂದು ಇಲ್ಲೆಲ್ಲಾ ಮಣ್ಣು ಮಾಡ್ತಾರೆ, ಎಷ್ಟು ಬಾರಿ ಹೇಳಿದರೂ ಕೇಳಲ್ಲ, ನೀವು ಗಂಡಸರೇ ಹೀಗೆ ಅಲ್ವೆ?" ಎಂದು ನಕ್ಕಳು. ಅವರ ಬೇಟೆಯ ಬಗ್ಗೆ, ಇತ್ತೀಚೆಗೆ ಯಾವುದೂ ಹಕ್ಕಿಗಳು ಸರಿಯಾಗಿ ಬೇಟೆಗೆ ಸಿಗದಿರುವ ಬಗ್ಗೆ, ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಬಾತುಕೋಳಿಗಳ ಬಗ್ಗೆ ಒಂದೇ ಸಮನೆ ಏನೇನೋ ಹೇಳಿದಳು. ಮಾತನಾಡುವಾಗಲೂ ಅವಳ ಕಣ್ಣು ಆ ತೆರೆದ ಬಾಗಿಲ ಕಡೆಗೇ ಇದ್ದವು. ಮನೆಗೆ ಅತಿಥಿಯಾಗಿ ಬಂದಿದ್ದ ನಟ್ಟೆಲ್ ನ ಕುಶಲ ವಿಚಾರಿಸುವುದರ ಬಗ್ಗೆ ಆಕೆಗೆ ಹೆಚ್ಚಿನ ಗಮನ ಇದ್ದಂತಿರಲಿಲ್ಲ. ಆಗಾಗ ಬಾಗಿಲಿನ ಬಳಿ ಬಗ್ಗಿ ಕಣ್ಣು ಕಿರಿದಾಗಿಸಿ ನೋಡುತ್ತಿದ್ದಳು. ಅವಳ ಗಂಡ, ತಮ್ಮಂದಿರು ಹೋಗಿ ಸರಿಯಾದ ಮೂರು ವರ್ಷವಾದ ದಿನಕ್ಕೇ ನಟ್ಟೆಲ್ ಅವರ ಮನೆಗೆ ಭೇಟಿ ಕೊಟ್ಟದ್ದು ಕೇವಲ ಕಾಕತಾಳೀಯವಾಗಿತ್ತು.

ನಟ್ಟೆಲ್ ತಾನಾಗೇ ತನ್ನ ಪರಿಸ್ಥಿತಿಯನ್ನು ವಿವರಿಸತೊಡಗಿದ."ನನಗೆ ನಗರದ ವಾತಾವರಣದಿಂದ ದೂರ ಹೋಗಿ ಇರುವಂತೆ ವೈದ್ಯರು ಹೇಳಿದ್ದಾರೆ. ಅಲ್ಲೇ ಇದ್ದರೆ ಹೆಚ್ಚು ಕಾಲ ಬದುಕುವುದಿಲ್ಲ, ಆದ್ದರಿಂದ ಯಾವುದಾದರೂ ಹಳ್ಳಿಗೆ ಹೋಗಿ ಇರಿ ಎಂದಿದ್ದಾರೆ. ಅದಕ್ಕೇ ಇಲ್ಲಿಗೆ ಬಂದಿದ್ದೇನೆ. ನನ್ನ ಖಾಯಿಲೆಗೆ ಇಂತಹ ಸ್ಥಳದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕಂತೆ. ಜೊತೆಗೆ ನನ್ನ ಮನಸ್ಸಿಗೆ ಹೆಚ್ಚಿನ ಒತ್ತಡ ಅಥವಾ ಆಘಾತ ಆಗಬಾರದಾದೆಂದೂ ಹೇಳಿದ್ದಾರೆ. ನನ್ನ ಅಕ್ಕನಿಗೆ ಈ ಹಳ್ಳಿ ಗೊತ್ತಿದ್ದರಿಂದ ಈ ಇಲ್ಲಿಗೆ ಕಳಿಸಿಕೊಟ್ಟಳು".

"ಅಲ್ನೋಡಿ, ಅವರು ಬಂದೇ ಬಿಟ್ಟರು" , ಅವನು ಮಾತಾಡುತ್ತಿದ್ದಂತೇ ಆ ಹೆಂಗಸು ಆ ದೊಡ್ಡ ಬಾಗಿಲಿನ ಕಡೆ ನೋಡುತ್ತಾ ಜೋರಾಗಿ ಹೇಳಿದಳು. "ಅಂತೂ ಬೇಗನೇ ಬಂದರು, ರಾತ್ರಿ ಊಟದ ಹೊತ್ತಿಗಾದರೂ ಬರುತ್ತಾರೋ ಇಲ್ಲವೋ ಅಂದುಕೊಂಡಿದ್ದೆ, ಇವತ್ತೂ ಮೈಯೆಲ್ಲಾ ಕೊಳೆ ಮಾಡಿಕೊಂಡೇ ಬಂದಿರ್ತಾರೆ" .

ಈ ಬಾರಿ ನಟ್ಟೆಲ್ ಗೆ ಆಶ್ಚರ್ಯದ ಜೊತೆ ಜೋರು ಭಯವಾಗತೊಡಗಿತು. ಅವರೆಲ್ಲಾ ಸತ್ತುಹೋಗಿ ಮೂರುವರ್ಷವಾಯಿತು ಎಂದು ಸ್ವಲ್ಪ ಹೊತ್ತಿನ ಮುಂಚೆ ಹುಡುಗಿ ಹೇಳಿದ್ದಳು. ಇಷ್ಟು ಹೊತ್ತು ಈ ಪಾಪದ ಹೆಂಗಸು ತನ್ನ ಗಂಡ, ತಮ್ಮಂದಿರ ನೆನಪಿನಲ್ಲಿ ಏನೋ ಹೇಳುತ್ತಿದ್ದಾಳೆ ಅಂದುಕೊಂಡಿದ್ದ. ಈಗ ನೋಡಿದರೆ ಅವರು ಬರುತ್ತಿದ್ದಾರೆ ಅನ್ನುತ್ತಿದ್ದಾಳೆ!. ಸಣ್ಣಗೆ ನಡುಕ ಶುರುವಾಯಿತು. ಆ ಹುಡುಗಿಯ ಕಡೆ ನೋಡಿದ. ಆ ಹುಡುಗಿಯೂ ಹೆದರಿದಂತೆ ಕಂಡಳು. ಆಕೆಯೂ ಆತಂಕದಿಂದ ಆ ಬಾಗಿಲಿನ ಕಡೆಗೇ ನೋಡುತ್ತಿದ್ದಳು. ನಟ್ಟೆಲ್ ತಡೆಯಲಾರದೇ ಎದ್ದು ಹೋಗಿ ಬಾಗಿಲಿನಿಂದ ನೋಡಿದ. ದೂರದಲ್ಲಿ ಮಬ್ಬುಗತ್ತಲಿನಲ್ಲಿ ಮೂರು ಆಕೃತಿಗಳು ಬರುತ್ತಿದ್ದವು. ಆ ಹುಡುಗಿ ಹೇಳಿದ ರೀತಿಯಲ್ಲೇ ಒಬ್ಬ ಬಿಳೀ ರೈನ್ ಕೋಟು ತೊಟ್ಟಿದ್ದ, ಹುಡುಗನೊಬ್ಬ ಯಾವುದೋ ಹಾಡನ್ನು ಜೋರಾಗಿ ಹೇಳುತ್ತಿದ್ದ. ಆ ಮೂರು ಜನರ ಜೊತೆಯಲ್ಲೇ ನಾಯಿಯೊಂದು ಪುಟಪುಟನೇ ಓಡುತ್ತಾ ಬರುತ್ತಿತ್ತು.

ನಟ್ಟೆಲ್ ನಿಗೆ ವಿಪರೀತ ಭಯವಾಗತೊಡಗಿತು. ಎದೆ ಜೋರಾಗಿ ಹೊಡೆದುಕೊಳ್ಳತೊಡಗಿತು. ಆ ಮನೆಯ ವಾತಾವರಣ ಏಕೋ ಸರಿಯಿಲ್ಲ ಅನ್ನಿಸಿತು. ಗಂಟಲು ಒಣಗಿತು. ಆ ಹೆಂಗಸು, ಮತ್ತು ಹುಡುಗಿಯನ್ನು ತಿರುಗಿ ನೋಡಲೂ ಭಯವಾಗಿ ತನ್ನ ಕೋಲು ಮತ್ತು ಕೈಚೀಲವನ್ನು ಎತ್ತಿಕೊಂಡವನೇ ಮುಂದಿನ ಬಾಗಿಲಿನಿಂದ ಹೊರಕ್ಕೆ ಓಡಿದ. ರಸ್ತೆ ನಿರ್ಜನವಾಗಿತ್ತು. ತೋಚಿದ ಕಡೆ ಓಡಿದ. ಓಡುವಾಗ ದಾರಿಯಲ್ಲಿ ಬರುತ್ತಿದ್ದ ಸೈಕಲ್ ಒಂದಕ್ಕೆ ಅಡ್ಡಸಿಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡ.

ಈಗ ಇಲ್ಲಿ ಆ ಮೂರೂ ಜನ ತೆರೆದ ಬಾಗಿಲಿನಿಂದ ಮನೆ ಒಳಗೆ ಬಂದರು. ಬಿಳೀಕೋಟು ತೊಟ್ಟಿದ್ದ ವ್ಯಕ್ತಿ ಆ ಹೆಂಗಸಿಗೆ ಹೇಳಿದ, "ನೋಡು ಇವತ್ತು ಬೇಗನೇ ಬಂದುಬಿಟ್ಟೆವು. ಮನೆಗೆ ಯಾರೋ ಬಂದಂತಿತ್ತಲ್ಲ, ನಾವು ಬರುತ್ತಿದ್ದಂತೆ ಮುಂದಿನ ಗೇಟು ತೆರೆದು ಓಡಿಹೋದರು?"

"ಅವನ್ಯಾರೋ ನಗರದಿಂದ ಬಂದಿದ್ದಾನಂತೆ. ಅವನಿಗೇನೋ ಖಾಯಿಲೆಯಂತೆ. ಹಳ್ಳಿಗೆ ಹೋಗಿ ಇರಬೇಕೆಂದು ಡಾಕ್ಟರು ಹೇಳಿದ್ದಾರಂತೆ. ತನ್ನ ಖಾಯಿಲೆ ಬಗ್ಗೆ ಏನೋ ಹೇಳುತ್ತಿದ್ದ. ನೀವು ಬರುತ್ತಾ ಇದ್ದದ್ದು ನೋಡಿ ಅವನ ಕತೆಯೆಲ್ಲಾ ನಿಂತು ಹೋಯ್ತು. 'ಹೋಗಿ ಬರ್ತೇನೆ' ಅಂತ ಕೂಡ ಹೇಳದೇ ಯಾವುದೋ ಭೂತ ಕಂಡವನಂತೆ ಹೆದರಿ ಹಾಗೇ ಓಡಿಬಿಟ್ಟ, ವಿಚಿತ್ರ ಮನುಷ್ಯ", ಅಂದಳು ಹೆಂಗಸು.

ಅದುವರೆಗೂ ಸುಮ್ಮನಿದ್ದ ಹುಡುಗಿ ನಗುತ್ತಾ ಹೇಳಿದಳು, "ಅವನು ನಮ್ಮ ನಾಯಿ ಕಂಡು ಹೆದರಿರಬೇಕು. ನನಗೆ ಹೇಳಿದ್ದ, ಅವನಿಗೆ ನಾಯಿ ಕಂಡರೆ ಮೊದಲಿಂದಲೂ ಹೆದರಿಕೆಯಂತೆ. ಒಂದು ಸಲ ಅವನು ಎಲ್ಲೋ ರಾತ್ರಿ ಒಬ್ಬನೇ ಹೋಗುವಾಗ ಕತ್ತಲಿನಲ್ಲಿ ನಾಯಿಗಳು ಧಾಳಿ ಮಾಡಿದವಂತೆ. ಅವುಗಳಿಂದ ತಪ್ಪಿಸಿಕೊಳ್ಳಲು ಓಡಿ ದಾರಿ ತಪ್ಪಿ ಸ್ಮಶಾನದೊಳಕ್ಕೆ ನುಗ್ಗಿ ಯಾವುದೋ ಗೋರಿಯಲ್ಲಿ ಅಡಗಿ ಕುಳಿತಿರಬೇಕಾಯಿತಂತೆ. ರಾತ್ರಿಯೆಲ್ಲಾ ನಾಯಿಗಳ ಭಯದೊಂದಿಗೆ ಸ್ಮಶಾನದಲ್ಲೇ ಕುಳಿತಿದ್ದನಂತೆ. ಅವತ್ತಿಂದ ನಾಯಿ ಎಂದರೆ ಅವನಿಗೆ ಇನ್ನೂ ಭಯವಂತೆ".

"ಯಾರಿಗೇ ಆದ್ರೂ ಹಾಗೆಲ್ಲಾ ಆದರೆ ಭಯ ಆಗೇ ಆಗುತ್ತೆ ಅಲ್ವಾ?" ಆಕೆಯ ಧ್ವನಿ ತಣ್ಣಗೆ ಅತ್ಯಂತ ಸಹಜವಾಗಿತ್ತು.

****

ಮನಸಿಗೆ ಬಂದಂತೆ ಕತೆಕಟ್ಟಿ, ತಕ್ಷಣಕ್ಕೆ ಅದನ್ನೇ ನಿಜವೆಂಬಂತೆ ಹೇಳುವುದರಲ್ಲಿ ಅವಳು ನಿಸ್ಸೀಮಳಾಗಿದ್ದಳು.

-------------------

Saki ಎಂಬ ಕಾವ್ಯನಾಮದಿಂದ ಪ್ರಸಿದ್ಧಿಯಾಗಿರುವ ಬ್ರಿಟಿಷ್ ಲೇಖಕ Hector Hugh Munro (1870 – 1916), ಸಣ್ಣ ಕತೆಗಳ ಮಾಸ್ಟರ್ ಎಂದು ಕರೆಯಲ್ಪಡುವಾತ. ಆತನ ಹಲವಾರು ಸಣ್ಣಕತೆಗಳು ಇಂದಿಗೂ ಅತೀ ಹೆಚ್ಚು ಓದಿಸಿಕೊಂಡ ಖ್ಯಾತಿ ಹೊಂದಿವೆ. ಕುತೂಹಲ ಹುಟ್ಟಿಸುವ ನಿರೂಪಣೆ ಆತನ ಕತೆಗಳ ವಿಶೇಷತೆ. The Open Window ಎಂಬುದು ಅವರ ಬಹಳ ಪ್ರಸಿದ್ಧ ಕತೆ. ಇಂಗ್ಲಿಷಿನಲ್ಲಿ ಈ ಕತೆಯ ಕೊನೆಯ ಸಾಲು ಆ ಕಾಲದಲ್ಲಿ ಬಲು ಪ್ರಸಿದ್ಧವಾಗಿ ಇಂಗ್ಲಿಷ್ ಭಾಷಾಸಂಪತ್ತಿಗೆ ಸೇರಿಸಲ್ಪಟ್ಟಿತು ಎಂದು ವಿಕಿಪಿಡಿಯಾ ಹೇಳುತ್ತದೆ. ಆ ಕತೆಯ ಕನ್ನಡಾನುವಾದ ಇದು.

(ಆಗಸ್ಟ್ ’ಸಖಿ’ ಮ್ಯಾಗಜೀನ್ ನಲ್ಲಿ ಪ್ರಕಟವಾಗಿದ್ದು).