ಪುಟಗಳು

ಮಂಗಳವಾರ, ಮೇ 11, 2010

ಮೂರು ವರ್ಷವಾಯ್ತು

ಟಿಪಿಕಲ್ ಹುಡುಗರಂತೆ ಬರ್ತ್ ಡೇಗಳು ನನಗೆ ನೆನಪಿರುವುದಿಲ್ಲ. ತೀರಾ ಒಂದೆರಡು ಆಪ್ತರು ಹುಟ್ಟಿದ ದಿನ ಬಿಟ್ಟರೆ ಮತ್ಯಾರದ್ದೂ ನನಗೆ ನೆನಪಿಟ್ಟುಕೊಳ್ಳಲಾಗಿಲ್ಲ. ಇದರಲ್ಲಿ ನಾನು ನಿರ್ಗುಣಂ ನಿರ್ವಿಷೇಶಂ. ಇದರಿಂದಲೇ ಹಲವಾರು ಬಾರಿ ಮುನಿಸು, ರಮಿಸು ಎಲ್ಲಾ ಆಗಿದೆ. ಆದರೂ ಆ ವಿಷಯದಲ್ಲಿ ಇನ್ನೂ ನಾನು ಅಜೇಯಂ ಅಚಿಂತ್ಯಂ, ಬಹುಶಃ ಅನಂತಂ. ಆದರೆ ಅದ್ಯಾಕೋ ಗೊತ್ತಿಲ್ಲ ನನ್ನ ಬ್ಲಾಗ್ ವಿಷಯದಲ್ಲಿ ಮಾತ್ರ ಹಾಗಾಗುವುದಿಲ್ಲ. ಈ ಎರಡೂ ವರ್ಷ ನೀಟಾಗಿ ನೆನಪಿತ್ತು. ಮೂರನೇ ವರ್ಷವೂ ಒಂದು ವಾರದ ಕೆಳಗೆ ನೆನಪಿತ್ತು, ಆದರೆ ಆಮೇಲೆ ಮರೆತೇ ಹೋಯಿತು. ನಿನ್ನೆ ರಾತ್ರಿ ತರಾಸು 'ವಿಜಯೋತ್ಸವ' ಕಾದಂಬರಿ ಓದುತ್ತಾ ಮೆಹರ್ಬಾನುವಿನ ಸೌಂದರ್ಯ ಕಲ್ಪಿಸಿಕೊಳ್ಳುತ್ತಿರುವಾಗಲೇ ಇವತ್ತು ಬ್ಲಾಗ್ ನ ಹುಟ್ಟಿದ ಹಬ್ಬ ಎಂದು ನೆನಪಾಗಿ ಬಿಡ್ತು! ಮರೆತಿದ್ದಕ್ಕೆ ಸಂಕಟವಾದರೂ ಕೂಡ ತೀರ ಬೆಂಗಳೂರಿನಂತೆ ಸೆಪ್ಟೆಂಬರಿನ ಗಣೇಶೋತ್ಸವವನ್ನು ನವೆಂಬರಿನಲ್ಲಿ ಮಾಡುವಷ್ಟು ತಡವೇನೂ ಆಗಿರಲಿಲ್ಲವಾದ್ದರಿಂದ ಸಮಾಧಾನವಾಯ್ತು.

ಹೌದು. ನಿನ್ನೆ ಅಂದರೆ ಮೇ ೧೦ ಕ್ಕೆ ನನ್ನ ಬ್ಲಾಗು ಶುರುವಾಗಿ ಮೂರು ವರ್ಷಗಳಾಯ್ತು. ಬ್ಲಾಗ್ ಲೋಕದ ಹಲವಾರು ಹಿರಿಕಿರಿಯರ ಮಧ್ಯೆ ನಾನು ನಿಂತಿದ್ದೇನೆ. ಹಿಂದಿನ ವರ್ಷಕ್ಕಿಂತ ಕಡಿಮೆ ಪೋಸ್ಟ್ ಗಳನ್ನು ಹಾಕಿದ್ದೇನೆ ಎಂಬುದು ಒಂದು ಹೈಲೈಟು. ಮೂರು ವರ್ಷಗಳಾದರೂ ನೂರು ಪೋಸ್ಟು ತಲುಪಿಲ್ಲ ಎನ್ನುವುದು ಮತ್ತೊಂದು ಹೈಲೈಟು! ನಾನು ಬ್ಲಾಗ್ ಬರೆಯುವ ವಿಷಯ ಕೆಲವು ಆಪ್ತರಿಗೂ, ಸಂಬಂಧಿಕರಿಗೂ ತಿಳಿದುಹೋಗಿರುವುದರಿಂದ, ಬ್ಲಾಗ್ ಕೊಂಡಿಯೂ ಸಿಕ್ಕಿರುವುದರಿಂದ ಸ್ವಲ್ಪ ತೊಂದರೆಯಾಗಿದೆ ಎಂದೇ ಹೇಳಬಹುದು. ನಾವು ಬರೆಯುವುದನ್ನು ತೀರ ಹತ್ತಿರದವರೆಲ್ಲಾ ಓದಲು ಶುರುಮಾಡಿಬಿಟ್ಟರೆ ಮುಕ್ತವಾಗಿ ಬರೆಯಲು ತೊಂದರೆಯಾಗುತ್ತದೆ ಎಂದು ಅವತ್ತು ನಾನೂ ಮತ್ತು ಕಡಲ ತೀರದ ಕಾಮತ್ ಮಾಮ್ಸ್ ಮಾತಾಡಿಕೊಂಡಿದ್ದೆವು. ಹೌದು, ಅದು ನಿಜ, ಇರಲಿ, ಏನೂ ಮಾಡಕ್ಕಾಗಲ್ಲ. ಹೇಗೋ ಸಂಭಾಳಿಸಿಕೊಳ್ಳುವುದೊಂದೇ ಬಾಕಿ.

ಯಾವುದೋ ಕಾಲಘಟ್ಟದಲ್ಲಿ ನಿಂತು ಸಂಭ್ರಮಿಸುವಾಗ ವೈಯಕ್ತಿಕ ವಿಷಯಗಳನ್ನಷ್ಟೇ ನೋಡಿಕೊಳ್ಳದೇ ಜೊತೆಗೆ ಸಂಬಂಧಪಟ್ಟ ವಾತಾವರಣದ ವಿಷಯಗಳ ಬದಲಾವಣೆಗಳ ಬೆಳವಣಿಗೆಗಳ ಬಗ್ಗೆಯೂ ಅವಲೋಕಿಸಬಹುದು ಅಂತ ಅಡಿಗರು ಹೇಳುತ್ತಿದ್ದರು. ಕನ್ನಡದಲ್ಲಿ ಇವತ್ತು ಸಾವಿರಾರು ಬ್ಲಾಗ್ ಗಳು ಇವೆ. ಬ್ಲಾಗ್ ಎಂದರೆ ಪತ್ರಿಕೆಯಂತೆ, ಬ್ಲಾಗ್ ಎಂದರೆ ಪುಸ್ತಕದಂತೆ, ಬ್ಲಾಗ್ ಎಂದ ಘನ ಗಂಭೀರ ಸಾಹಿತ್ಯದಂತೆ ಬರೀ ಕತೆ ಕವನ ವಿಚಾರ ವಿಶ್ಲೇಷಣೆಗಳನ್ನೇ ಬರೆಯಬೇಕು ಎಂಬುದರಿಂದ ಕ್ರಮೇಣ ಹೊರಬಂದಂತೆ ಕಾಣುತ್ತಿರುವ ಕನ್ನಡ ಬ್ಲಾಗ್ ಲೋಕದಲ್ಲಿ ವೈವಿಧ್ಯಗಳು ಸಿಕ್ಕಾಪಟ್ಟೆ ಬರುತ್ತಿವೆ. ಸಂತೋಷ. ಆದರೂ ಕೂಡ ಬಹಳಷ್ಟು ಕಡೆ ಯಾಕೋ ಹೇಳುವ ವಿಷಯವನ್ನು ಸ್ವಲ್ಪ ಕಾವ್ಯಮಯವಾಗಿಯೇ ಹೇಳುವ ಪ್ರಯತ್ನ ಕಾಣುತ್ತಿದೆ. ತಮ್ಮ ಬ್ಲಾಗ್ ಅನ್ನು ತಿದ್ದಿ ತೀಡಿ ಅಲಂಕಾರ ಮಾಡಿ ಮನೆಗಿಂತಲೂ ಓರಣವಾಗಿಟ್ಟುಕೊಳ್ಳುವ ಮಂದಿಯಿಂದ ಹಿಡಿದು ಅಲ್ಲಿ ಇಲ್ಲಿ ಅಲ್ಲಲ್ಲಿ ಎಲ್ಲೆಲ್ಲೋ ಪ್ರಕಟವಾದ ಅವರ ಚಂದದ ಬರಹಗಳನ್ನು ಹಾಕುವವರೂ ಇದ್ದಾರೆ. ಎಲ್ಲರಿಗೂ ಇರುವಂತೆ ನನ್ನ ಅಣ್ಣನೊಬ್ಬ ಅಮೆರಿಕಾದಲ್ಲಿದ್ದಾನೆ. ಅವನು ಬ್ಲಾಗ್ ಎಂಬುದು ಬಳಕೆಗೆ ಬಂದ ಕಾಲದಿಂದಲೇ ಬ್ಲಾಗುವುದನ್ನು ಶುರುಮಾಡಿದವನು. ಬ್ಲಾಗ್ ಎಂಬುದು ೧೦ ರಿಂದ ೨೦ ನಿಮಿಷದಲ್ಲಿ ಬರೆಯುವಂತದ್ದೂ ಮತ್ತು ೫ ನಿಮಿಷದಲ್ಲಿ ಓದಿ ಮುಗಿಸುವಂತದ್ದೂ ಆಗಿರಬೇಕು ಅಂತ ಆತ ಹೇಳುತ್ತಿರುತ್ತಾನೆ. ಇರಲಿ ಬಿಡಿ. ನಾವು ಹೀಗೆಲ್ಲಾ ಮಿತಿ ಹಾಕಿಕೊಳ್ಳುವುದು ಬೇಡ. ದಿನಾ ದಿನಾ ಹೊಸ ಹೊಸ ಬ್ಲಾಗಿನ ಕೊಂಡಿಗಳು ಸಿಗುತ್ತಿವೆ. ನನ್ನ ಗೂಗಲ್ ರೀಡರ್ ಒಂದು ಸಮೃದ್ಧ ಪತ್ರಿಕೆಯಂತಾಗಿದೆ. ಬ್ಲಾಗ್ ಗಳಲ್ಲಿ ಬಹುಸಂಖ್ಯೆಯಲ್ಲಿ ಪತ್ರಕರ್ತರು ಕಾಲಿಟ್ಟಿದ್ದು, ಓದುಗರು ನಾಡಿನ ಪತ್ರಿಕೆಗಳ ಅಪದ್ಧಗಳನ್ನು ಬ್ಲಾಗ್ ಗಳಲ್ಲೇ ಝಾಡಿಸುತ್ತಿರುವುದೂ, ಶರ್ಮಣ್ಣ ತಮ್ಮ ಬ್ಲಾಗಿನಲ್ಲೇ ತಮ್ಮ ಆಸ್ತಿ ಅಫಿಡವಿಟ್ಟು ಸಲ್ಲಿಸಿದ್ದು ವಿಶೇಷವಾಗಿದೆ. ಈ ಪ್ಯಾರಾದ ಮೊದಲನೇ ಸಾಲಿನಲ್ಲಿರುವಂತೆ ಅಡಿಗರು ಅದ್ಯಾವಾಗ ಹಾಗೆ ಹೇಳಿದ್ರು ಅಂತ ಅನುಮಾನವೇನಾದ್ರೂ ಬಂತಾ? ನಾನು ನೆನಪಿಸಿಕೊಂಡಿದ್ದು ಕವಿ ಗೋಪಾಲಕೃಷ್ಣ ಅಡಿಗರಲ್ಲ, ಅದು ಪ್ರಕಾಶ ನಗರದ ೨೩ನೇ ಕ್ರಾಸಿನ ಮೂಲೆಯಲ್ಲಿ ಹೋಟೆಲ್ ಇಟ್ಟಿರುವ ಅಡಿಗರ ಮಾತು. ;)

ಈ ವರ್ಷವೂ ಬ್ಲಾಗಿನಿಂದ ಕೆಲವು ಹೊಸ ಗೆಳೆಯರು ಸಿಕ್ಕಿದ್ದಿದೆ. ಎಂದಿನಂತೆ ನನ್ನ ಆಸಕ್ತಿ , ಹವ್ಯಾಸ, ಚಟುವಟಿಕೆಗಳಿಗೆ ಬ್ಲಾಗ್ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ ಮಾಡುತ್ತಿದೆ. ಹೇಳಿಕೊಂಡರೆ ಕೇಳಿಸಿಕೊಂಡವರಿಗೆ ಸವಿ ಅನ್ನಿಸಬಹುದಾದ ಹೇಳಿಕೊಳ್ಳಲಾಗದ ತಲೆನೋವೊಂದು ಅನುಭವವಾಗಿದೆ. ಹಿಂದೊಮ್ಮೆ ಬ್ಲಾಗ್ ಕಮೆಂಟ್ ವಿಷಯದಲ್ಲಿ ವಿದೇಶದಲ್ಲಿರುವ ವಿ-ಜ್ಞಾನಿಯೊಬ್ಬರು ಹಾಕಿರುವ ಧಮಕಿ ಇನ್ನೂ ನೆನಪಿದೆ. ಕೆಲಸ, ಓದು ಬರವಣಿಗೆ ನಡೆಯುತ್ತಲಿದೆ. ಬರೆಯುವ ವಿಷಯದಲ್ಲಿ ನಾನು ಸೋಮಾರಿ ಏನಲ್ಲದಿದ್ದರೂ ಬರೆಯುವುದರಲ್ಲಿ ತಾಳ್ಮೆ ಸ್ವಲ್ಪ ಕಡಿಮೆ ಇದೆ. ಇದು ಮುಂದುವರೆಯಲಿದೆ ಎಂಬುದೇ ಸದ್ಯದ ಭರವಸೆ. ಬರಹ ಸಾಫ್ಟ್ ವೇರಿಗೂ, ಗೂಗಲ್ ಬ್ಲಾಗ್ ಸ್ಪಾಟಿಗೂ, ಬ್ಲಾಗಿಗೆ ಹಿಟ್ ಮೇಲ್ ಹಿಟ್ ಕೊಡುತ್ತಿರುವ ಎಲ್ಲಾ ರೀತಿಯ ಓದುಗರಿಗೂ ನನ್ನ ಪ್ರೀತಿ, ಕೃತಜ್ಞತೆ, ಧನ್ಯವಾದಗಳಿವೆ.

****

ಹಿಂದಿನ ಎರಡು ವರ್ಷ..

'ವರ್ಷ ಕಳೆಯಿತು'
ವಿಕಾಸದ ಹಾದಿಯಲ್ಲಿ ೨ ವರ್ಷ!

30 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

congraats kaNo... nan b'day aada maarane dina ninna blog birthday :-)

ಗಿರೀಶ ರಾಜನಾಳ ಹೇಳಿದರು...

ಹಾಯ್ ವಿಕಾಸ,
ನಿಮ್ಮ ಬ್ಲಾಗಿಗೆ ೩ ವರ್ಶ ತುಂಬಿದಕ್ಕೆ ಶುಭಾಶಯಗಳು.
ನಿಮ್ಮ ಬರವಣಿಗೆ ನಿಲ್ಲದಿರಲಿ. ನಿಮ್ಮ ಬ್ಲಾಗಿಗೆ ಹಿಟ್ ಕೊಡುವ ಜವಾಬ್ದಾರಿ ನಮ್ಮದು. ಆಲ್ ದಿ ಬೆಸ್ಟ ...

ಪಕ್ಕದ ಮನೆ ಹುಡುಗಾ ! ಹೇಳಿದರು...

ವಿಕಾಸ್,
ನಿಮ್ಮ ಬ್ಲಾಗ್ ಅನ್ನು ಕಳೆದ ೨ ವರ್ಷದಿಂದ ಓದುತ್ತಿದ್ದೇನೆ. ನಿಮ್ಮ ಶೈಲಿ ನನಗೆ ಇಷ್ಟ. ನಿಮ್ಮ ಗೆಳೆತನವೂ.
ನಿಮ್ಮ ಯಾತ್ರೆ ಹೀಗೆ ಮುಂದುವರೆಯಲಿ, ಹಾಗೇ ಇಂಟರ್ ನೆಟ್ ಅಲ್ಲಿ ಕನ್ನಡ ತುಂಬಿಸುವ ನಿಮ್ಮೆಲ್ಲ ಪ್ರಯತ್ನಗಳೂ ಗೆಲುವು ಕಾಣಲಿ.

Ravi Hegde ಹೇಳಿದರು...

ಅಭಿನಂದನೆಗಳು.

ರವಿ

ಗೌತಮ್ ಹೆಗಡೆ ಹೇಳಿದರು...

ಹ್ಯಾಪಿ ಹುಟ್ಟುಹಬ್ಬ ನಿನ್ನ ಬ್ಲಾಗ್ ವಿಕಾಸಣ್ಣ :)

anand ಹೇಳಿದರು...

CONGRATS VIKAS
INNU CHENNAGIRO LEKHANAGALANNU POST MADI
NIM BLOG TUMBA CHENNAAGIDE

ಹಷ೯ (Harsha) ಹೇಳಿದರು...

HU HA SU blog ge ...

ಅನಾಮಧೇಯ ಹೇಳಿದರು...

ಬ್ಲಾಗಿಗೆ ಮೂರನೇ ಹುಟ್ಟುಹಬ್ಬದ ಶುಭ ಹಾರೈಕೆ. ಎದಿನಂತೆ ಒಂದು ಒಳ್ಳೆ ಬರಹದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿರುವೆ. ಹಿಂಗೆ ಬರೀತಾ ಇರು ಮತ್ತು ಜಾಸ್ತಿ ಗೆಳೆಯರು ಸಿಕ್ತಾರೆ! ನಾನು-ನೀನು ಸ್ನೇಹಿತರಾಗಿದ್ದು ಬ್ಲಾಗ್‌ನಿಂದಲೆ ಅಲ್ವಾ?!
ಕೋಡ್ಸರ

Subrahmanya ಹೇಳಿದರು...

Yes. All the Best. ಇನ್ನಷ್ಟು ಸದಭಿರುಚಿಯ ಬರಹಗಳು ಬರಲಿ.

ತೇಜಸ್ವಿನಿ ಹೆಗಡೆ ಹೇಳಿದರು...

ಆರೋಗ್ಯಕರ-ವಾದ ಹೊರ ಬರುತ್ತಲೇ ಇರಲಿ :) ಅಭಿನಂದನೆಗಳು.

sunaath ಹೇಳಿದರು...

ವಿಕಾಸ,
ಹುಟ್ಟುಹಬ್ಬದ ಶುಭಾಶಯಗಳು!

Sree ಹೇಳಿದರು...

ಕಂಗ್ರಾಟ್ಸುಗಳು:) ಈ ನಡ್ವೆ ನನ್ನ ಈ ತಮ್ಮ ಏನ್ ಬರೆದ್ರೂ ಕ್ಯೂಟ್ ಟಚ್ ಇರತ್ತೆ, ತಲೆನೋವು ಕಾರಣ ಇರ್ಬಹುದು;)
(ನಾಕ್ ವರ್ಷಕ್ಕೆ ೫೦ಪೋಸ್ಟ್ ಕೂಡ ಮುಟ್ಟಿಲ್ಲ, ಸೋ ನಾ ಅಕ್ಕನೇ!:ಡ್)

ವನಿತಾ / Vanitha ಹೇಳಿದರು...

ಶುಭಾಶಯಗಳು :)

NilGiri ಹೇಳಿದರು...

ಅಭಿನಂದನೆಗಳು! ಹೀಗೆ ಹೆಚ್ಚು ಹೆಚ್ಚು "ವಾದಿ"ಸುತ್ತಲೇ ಇರಿ :)

ಅನಾಮಧೇಯ ಹೇಳಿದರು...

Congrats :)

ಚಿತ್ರಾ ಹೇಳಿದರು...

ವಿಕಾಸ,
ಬ್ಲಾಗ್ ನ ಜನ್ಮದಿನಕ್ಕೆ ಶುಭಾಶಯಗಳು ! ಬರಹ ಚಂದ ಇದ್ದು . ಹಿಂಗೆ ನಿನ್ನ ವಾದ ಇನ್ನಷ್ಟು ವಿಕಾಸವಾಗುತ್ತಿರಲಿ ! ಬಳಗ ಹೆಚ್ಚುತ್ತಿರಲಿ.
ನೀನು ನನ್ನ ಹಿಟ್ ಲಿಸ್ಟ್ ನಲ್ಲಿರದ್ರಿಂದ ಬ್ಲಾಗನ್ನ ಹಿಟ್ ಮಾಡ್ತಾನೆ ಇರ್ತಿ. ಮುಂದುವರೆಸು ವಾದವನ್ನ ! ಇನ್ನಷ್ಟು ಸ್ಟ್ರಾಂಗ್ ಆಗಿ .

shridhar ಹೇಳಿದರು...

ವಿಕಾಸ-ವಾದ ..ಇನ್ನಷ್ಟು ವಿಕಸನಗೊಳ್ಳಲಿ.
ಅಭಿನಂದನೆಗಳು.

ganesh ಹೇಳಿದರು...

Congrats. :-)

ಬಾಲು ಹೇಳಿದರು...

ನೀನು ಏನೇ ಹೇಳು ವಿಕಾಸ, ಇತ್ತೀಚಿಗೆ ಕಾಲ ತುಂಬಾ ಕೆಟ್ಟೋಗಿದೆ. (ಕಳೆದ ೩ ವರ್ಷ ದಿಂದ ಅಂತ ಬೇಕಾದರು ಅಂದುಕೋ ಬಹುದೆನಪ್ಪ)
ಮೊದಲೆಲ್ಲ ಹುಟ್ಟಿದ್ದ ಹಬ್ಬ ಅಂದ್ರೆ ಒಳ್ಳೆ ಪಾರ್ಟಿ ಇರ್ತಾ ಇತ್ತು, ನಾವು ಗಳು ಹೋಗಿ ಒಳ್ಳೆ ದನ ತಿಂದಂಗೆ ತಿಂದು, ಮನೆಗೆ ಬಂದು ಹೆಣದ ತರ ಬಿದ್ದುಗೊತಾ ಇದ್ವಿ. ಈಗೆಲ್ಲ ಬ್ಲಾಗಲ್ಲಿ ಒಂದು ಪೋಸ್ಟ್ ಹಾಕಿ, ವಿಷ್ಯ ಹೇಳಿ ಬಿಡ್ತಾರೆ. ನಮ್ಮಂತ ತಿಂಡಿ ಪೋತರ ಬಗ್ಗೆ ಸ್ವಲ್ಪ ಕರುಣೆ ಇಲ್ವೆ?
ಇಷ್ಟೆಲ್ಲಾ ಹೇಳಿದ್ರು ನೀನು ಭದ್ರೆ ದಂಡೆಲಿ ಪಾರ್ಟಿ ಕೊಡ್ತಿ ಅನ್ನೋ ಯಾವ ಆಸೆ ನು ಇಲ್ಲ ಬಿಡು. :)

ಇಲ್ಲಿ ತನಕ ೮೯ ಪೋಸ್ಟ್ ಮಾಡಿದ್ದಿ, ಬರೆದು ಪೋಸ್ಟ್ ಮಾಡದೇ ಇತ್ತ ಲೇಖನಗಳು ಸೇರಿಸಿದರೆ ಅದು ೧೦೦ ದಾಟಿರುತ್ತೆ ಅನ್ಸುತ್ತೆ. ಒಳ್ಳೆ ಲೇಖನ ಬರೀತಿ, ನಿನ್ ಪೋಸ್ಟ್ ಗಳು ಆಗಾಗ ಇಮೇಲ್ ನಲ್ಲಿ ಹರಿದಾಡುತ್ತಾ ಇರುತ್ತೆ, ಇದು ನಿಜಕ್ಕೂ ಸಿಕ್ಕಾಪಟ್ಟೆ ಕುಶಿ ವಿಚಾರ.

ನಿನ್ ಬ್ಲಾಗು ಓದುವ ಕುಶಿ ಯಾವಾಗಲು ನಮಗಿರಲಿ.

ಅನಾಮಧೇಯ ಹೇಳಿದರು...

Well, goodluck!. Don't worry about Scientists abroad as they never come to India. Also, threats from scientists are of least concern when compared to threats from GaNi maphia!

ಸುಧೇಶ್ ಶೆಟ್ಟಿ ಹೇಳಿದರು...

ವಿಕಾಸ್....

ಕ೦ಗ್ರಾಟ್ಸ್... :)

ಬ್ಲಾಗ್ ಲಿ೦ಕ್ ಹತ್ತಿರದವರಿಗೆ ಸಿಕ್ಕರೆ ಕಷ್ಟ ಎ೦ಬುದು ನಿಜ :)

ಎಲ್ಲರಿಗೂ ಇಷ್ಟ ಆಗುವಂತಹ ಬ್ಲಾಗ್ ನಿಮ್ಮದು. ಹೀಗೆ ಮು೦ದುವರಿಸಿ....

ಮಧು ಹೇಳಿದರು...

ವಿಕಾಸ್,

ಅಭಿನಂದನೆಗಳು.

Divya Mallya - ದಿವ್ಯಾ ಮಲ್ಯ ಹೇಳಿದರು...

ವಿಕಾಸ್ ಕಂಗ್ರಾಟ್ಸು!! ಹೀಗೆ ಅವಿರತವಾಗಿರಲಿ ಬರವಣಿಗೆ:)

Prabhuprasad Naduthota ಹೇಳಿದರು...

ಅಭಿನಂದನೆಗಳು ವಿಕಾಸ್‌ಹೆಗ್ಡೆಯವರೇ...
ಈ ಪಯಣ ಚಿರಕಾಲ ಮುಂದುವರೆಯಲೆಂಬ ಹಾರೈಕೆ ಈ ನಿಮ್ಮಸ್ನೇಹಿತನದು..
ನ. ಗೋ. ಪ್ರ.

shivu.k ಹೇಳಿದರು...

ಅಭಿನಂದನೆಗಳು ವಿಕಾಸ್, ನಿಮ್ಮ ಪಯಣ ಮತ್ತಷ್ಟು ಸುಖವಾಗಿ ಮುಂದುವರಿಯಲಿ.

Parisarapremi ಹೇಳಿದರು...

ಹೀಗೇ ’ವಿಕಾಸ’ವಾಗುತ್ತಿರಲಿ ನಿಮ್ಮ ಬ್ಲಾಗು!! ಆಲ್ ದಿ ಬೆಸ್ಟ್!

roopa ಹೇಳಿದರು...

ವಿಕಾಸ್,
ಅಭಿನ೦ದನೆಗಳು. ಹೀಗೆ ಯಾವಾಗಲು ನಿಮ್ಮ ಒಳ್ಳೆಯ ಬರಹಗಳು ಬರುತ್ತಾ ಇರಲಿ . ನಾವು ಹೀಗೆ ಓದುತ್ತಾ ಇರುತ್ತೇವೆ.

ವಿ.ರಾ.ಹೆ. ಹೇಳಿದರು...

@vijay, ಹೌದಾ! ಮೊದಲೇ ಹೇಳಿದರೆ ಇಬ್ರೂ ಒಟ್ಟಿಗೇ ಶೋಕಾಚರಣೆ ಮಾಡಬಹುದಿತ್ತು :) ಧನ್ಯವಾದಗಳು.

@ಗಿರೀಶ, ಥ್ಯಾಂಕ್ಸ್. ಬರುತ್ತಿರಿ.

@ವಸಂತ, ಥ್ಯಾಂಕ್ಸ್. ಬರುತ್ತಿರಿ.

@ರವಿ, ಥ್ಯಾಂಕ್ ಯು.

@ಗೌತಮ, ಥ್ಯಾಂಕ್ ಯು.;)

@ಆನಂದ, ಓ.ಕೆ. ಬಾಸ್. thanks

@ಹರ್ಷ, thanks ನಿಮ್ಗೆ ;)

@ಕೋಡ್ಸರ, ನಿಮ್ಮಂತಹ ಗೆಳೆಯರು ಸಿಕ್ಕಿದ್ದು ಈ ಬ್ಲಾಗಿನಿಂದಲೇ ಅನ್ನುವುದು ಸಂತೋಷ. thanks.

@ಸುಬ್ರಮಣ್ಯ, ಓ.ಕೆ. ಪ್ರಯತ್ನಿಸುವೆ. ಥ್ಯಾಂಕ್ ಯು.

@ತೇಜಸ್ವಿನಿ, ಥ್ಯಾಂಕ್ ಯು

@ಸುನಾಥ ಕಾಕಾ, ಥ್ಯಾಂಕ್ ಯು

@ಶ್ರೀ, ನಿಮ್ ತಮ್ಮ ಕ್ಯೂಟ್ ಇರೋದ್ರಿಂದ ಬರೆಯೋದ್ರಲ್ಲೂ ಸ್ವಲ್ಪ ಆ ಟಚ್ ಇದ್ದೇ ಇರ್ಬೋದು. ನನ್ನದು ೨೦೦ ಮುಟ್ಟಿದಾಗ್ಲಾದ್ರೂ ನೀವು ೧೦೦ ಮುಟ್ಟಿಸಬಹುದು :) thank you...

@ವನಿತಾ, ಧನ್ಯವಾದಗಳು.

@ನೀಲಗಿರಿ, ಧನ್ಯವಾದಗಳು.

@ಕೆನೆಕಾಫಿ, ಧನ್ಯವಾದಗಳು.

@ಚಿತ್ರಾ, ಸ್ವಲ್ಪ ನಿಧಾನಕೆ ಹಿಟ್ ಮಾಡಿ ;)ಥ್ಯಾಂಕ್ ಯು

@ಶ್ರೀಧರ್, ಧನ್ಯವಾದಗಳು.

@ಗಣೇಶ್, ಧನ್ಯವಾದಗಳು.

@ಬಾಲು, ನಿಮಗೆ ಓದಿಸೋ ಖುಶಿ ನನಗಿರಲಿ. ಪಾರ್ಟಿ ಪ್ರೈವೇಟಾಗಿ ಮಾಡೋಣ. ;) ಥ್ಯಾಂಕ್ ಯು

@ಅನಾಮಧೇಯ, ಹಾಗಂತೀರಾ? ಓ.ಕೆ. ರೈಟ್.

@ಸುಧೇಶ್, ಧನ್ಯವಾದಗಳು.

@ಮಧು, ಧನ್ಯವಾದಗಳು.

@ದಿವ್ಯಾಮಲ್ಯ, ಧನ್ಯವಾದಗಳು.

@ಪ್ರಭು, ಧನ್ಯವಾದಗಳು.

@ಶಿವು, ಥ್ಯಾಂಕ್ ಯು

@ಪರಿಸರ, ಥ್ಯಾಂಕ್ ಯು

@ರೂಪಾ, ಥ್ಯಾಂಕ್ ಯು

Chaithrika ಹೇಳಿದರು...

ಚೆನ್ನಾಗಿದೆ.

ಶ್ರೀನಿಧಿ.ಡಿ.ಎಸ್ ಹೇಳಿದರು...

@chaitrika,

ok:)


vikasa, late wishessu!:)