ಪುಟಗಳು

ಗುರುವಾರ, ಏಪ್ರಿಲ್ 22, 2010

ಮತ್ತೆ ಹುಲಿಕಣಿವೆಯಲ್ಲಿ....

ನೀರವ ಪ್ರಕೃತಿಯಲ್ಲಿ ನಿಗೂಢತೆಯ ಅನುಭವವಾಗುತ್ತದೆಂದು ಹೇಳಿದ್ದೆನಷ್ಟೆ. ಅದು ಅಂತಹ ಪ್ರಕೃತಿಯು ತನ್ನಿಂದ ದೂರವಿದ್ದವರಿಗೆ ಒದಗಿಸಿಕೊಡುವ ನಿಗೂಢತೆ. ನಿಶ್ಯಬ್ದತೆ ಇದ್ದಾಗ ನಿಗೂಢತೆ ಸಹಜ. ಅಲ್ಲಿಯೇ ಹುಟ್ಟಿಬೆಳೆದವರನ್ನು ಕೇಳಿದರೆ ಅವರಿಗೆ ಅಲ್ಲಿ ಯಾವ ನಿಗೂಢತೆಯೂ ಕಾಣದೇ ಹೋದೀತು. ಅಂತಹುದೇ ಪರಿಸರದಿಂದ ಬಂದು ನಗರ ಸೇರಿಕೊಂಡ ಕೆಲವರಿಗೆ ಇಲ್ಲಿನ ರೈಲ್ವೇ ಸ್ಟೇಶನ್ನು, ಶಾಪಿಂಗ್ ಮಾಲುಗಳೇ ಎಲ್ಲಿಲ್ಲದ ಅನುಭೂತಿ ಕೊಡುವ ಹಾಗೆ ಪಟ್ಟಣ ನಗರಗಳಲ್ಲಿ ಬೆಳೆದವರಿಗೆ ಆ ವಾತಾವರಣ ಅದ್ಭುತ ಅನುಭೂತಿಗಳನ್ನು ಒದಗಿಸಿಕೊಡಬಹುದು. ಸೌಂದರ್ಯದಲ್ಲಿ ಸೌಮ್ಯತೆಯೂ ಮುಖ್ಯ ಪಾತ್ರ ವಹಿಸುವ ಹಾಗೆ ಪ್ರಕೃತಿಯ ಸ್ನಿಗ್ದತೆಗೆ ನೀರವತೆಯ ಪಾತ್ರ ಹಿರಿದು. ನಿಗೂಢತೆಯ ಅನುಭವಕ್ಕೂ ದೇವರಿಗೋ ದೆವ್ವಕ್ಕೋ ಮತ್ಯಾವುದೋ ಕತೆಗಳಿಗೋ ಸಂಬಂಧವಿರಬೇಕಂತಿಲ್ಲ. ಅಂತಹ ನೀರವತೆಯಲ್ಲಿ ನಿಗೂಢತೆಯ ಅನುಭವವಾಗಲು ಯಾವ ಕಾರಣಗಳೂ ಬೇಕಿಲ್ಲ.

ಅಜ್ಜನ ಮನೆ ಇರುವ ಕಡೆ ಸುತ್ತಲೂ ಬೆಟ್ಟಗಳಿವೆ. ಪ್ರತೀ ಬಾರಿ ನಾನು ಹೋದಾಗಲೂ ಆ ಬೆಟ್ಟಗಳಿಗೊಂದು ಭೇಟಿ ಕೊಡದಿದ್ದರೆ ಸಮಾಧಾನವಿರುವುದಿಲ್ಲ. ಅದನ್ನು ಹತ್ತಲು ತೋಟ ದಾಟಿ ಸ್ವಲ್ಪ ದೂರ ಹೋಗಬೇಕು. ತೋಟದಲ್ಲಿ ಹಬ್ಬಿದ ಸೌತೆಬಳ್ಳಿಯಲ್ಲಿ ನಾಲ್ಕು ಸೌತೆಮಿಡಿ ಕಿತ್ತುಕೊಂಡು ತಿನ್ನುತ್ತಾ, ಕಟ್ಟಿರುವೆಗಳ ಸಾಲಿನಲ್ಲಿ ಕಾಣದೇ ಕಾಲಿಟ್ಟು ಹಾರಿ, ಅಡಕೆ ಮರಕ್ಕೆ ಕಟ್ಟಿದ ಜೇಡರ ಬಲೆ ಮುಖಕ್ಕೆ ರಾಚಿಸಿಕೊಂಡು ತೋಟದ ಕೊನೆ ತಲುಪಿದರೆ ಚಿಕ್ಕ ನೀರಿನ ತೊರೆ ಸುಮ್ಮನೇ ಹರಿಯುತ್ತಲೇ ಇದೆ. ಅದರ ಮಡುವಿನಲ್ಲಿ ಪುಟ್ಟ ಪುಟ್ಟ ನೂರಾರು ಮೀನುಗಳು. ಜೀಬ್ರಾ ಮೀನು, ಹುಲಿ ಮೀನು, ಬೆಂಕಿ ಮೀನು! ಯಾರು ತಂದು ಬಿಟ್ಟರು ಅದನ್ನು? ಅವಕ್ಕೆ ಅದೇ ಪ್ರಪಂಚ. ಗೊತ್ತಿಲ್ಲದೇ ಅಲ್ಲೇ ಹುಟ್ಟಿವೆ, ಅಲ್ಲೇ ಸಾಯುತ್ತವೆ. ಸಂಕ ದಾಟಿ ಬ್ಯಾಣಕ್ಕೆ ಕಾಲಿಟ್ಟ ಕೂಡಲೇ ಒಂದಿಷ್ಟು ಹಕ್ಕಿಗಳು ಪುರ್ರನೇ ಹಾರಿ ಹೋದ ಸದ್ದು. ಹಾಗೇ ನೆಡೆಯುತ್ತಾ ಹೋಗುತ್ತಿದ್ದರೆ ಇವನ್ಯಾರೋ ಆಗಂತುಕ ಬಂದಿದ್ದಾನೆ ಎಂದು ಒಂದು ಹಕ್ಕಿ ಕೂಗಿ ಎಚ್ಚರಿಸುತ್ತಲೇ ಇದೆ. ಬೇಕೆಂದರೂ ಕಣ್ಣಿಗೆ ಬೀಳದ ನವಿಲು ಹೊತ್ತಲ್ಲದ ಹೊತ್ತಿನಲ್ಲಿ ಎಲ್ಲೋ ನಿಂತು ಕೇಗುಡುತ್ತದೆ. ಹಿಂದಿನ ಬಾರಿ ತನ್ನ ದೊಡ್ಡ ಕೊಕ್ಕಿನಲ್ಲಿ ಹಣ್ಣೊಂದನ್ನು ಕಚ್ಚಿಕೊಂಡ ಮಂಗಟ್ಟೆ (ಹಾರ್ನ್ ಬಿಲ್)ಯೊಂದು ಕಾಣಿಸಿ ವಿಪರೀತ ಖುಷಿಯಾಗಿತ್ತು. ಅಲ್ಲಿರುವ ಸುಮಾರು ಬೆಟ್ಟಗಳಲ್ಲಿ ಎಲ್ಲಕ್ಕೂ ದಾರಿಗಳಿಲ್ಲ. ಸುಮಾರು ದೂರ ಮರಗಳನ್ನೂ, ಬಿದಿರ ಮೆಳೆಗಳನ್ನೂ ದಾಟಿ, ಹುಲ್ಲಿನ ಮಧ್ಯೆ ಕಾಲುದಾರಿ ಇರುವ ತನಕ ಹೋಗಿ ಗುಡ್ಡದ ಬುಡ ತಲುಪಿದರೆ ಅಲ್ಲಿಂದ ಮುಂದಿನ ಆಯ್ಕೆ ನಮ್ಮದು.

ನನ್ನ ಹಳೇ ಆಫೀಸಿನಲ್ಲಿ ಒಬ್ಬ ಫ್ರೆಂಡ್ ಇದ್ದ. ಅವನಿಗೆ ವಿಪರೀತ ಟ್ರೆಕ್ಕಿಂಗ್ ಚಟ. ಕರ್ನಾಟಕದಲ್ಲಿರುವ ಸಿಕ್ಕ ಸಿಕ್ಕ ಗುಡ್ಡಬೆಟ್ಟಗಳನ್ನೆಲ್ಲಾ ಹತ್ತಿಳಿದಿದ್ದಾನೆ. ವೀಕೆಂಡು ಬಂದರೆ ಸಾಕು ಚಂದಾದಾರ ವ್ಯಾಪ್ತಿ ಪ್ರದೇಶದ ಹೊರಗೆ ! ಇಲ್ಲಿದ್ದು ಏನ್ರೋ ಮಾಡ್ತೀರಾ ಬನ್ರೋ ಟ್ರೆಕ್ಕಿಂಗ್ ಮಾಡಣ ಅಂತ ನಮಗೂ ಕರೆಯುತ್ತಿದ್ದ. ಅವನಿಗೂ ಮದುವೆಯಾಯಿತು. ಅದ್ಯಾಕೋ ಟ್ರೆಕ್ಕಿಂಗ್ ನಿಲ್ಲಿಸಿಬಿಟ್ಟ. ಆಮೇಲೆ ನಾವು ಅವನಿಗೆ ಈಗ ಮನೆಲ್ಲೇ ಟ್ರೆಕ್ಕಿಂಗ್ ಜೋರಾ? ಪಾಪ ಗುಡ್ಡ ಹತ್ತಿ ಸುಸ್ತಾಗಿದಿಯ ಅಂತ ತಮಾಷೆ ಮಾಡ್ತಿದ್ವಿ. :)

ಅದು ಇರಲಿ. ಹುಲಿಕಣಿವೆಯಲ್ಲಿ ಒಮ್ಮೆ ಹೀಗೆ ಬೆಟ್ಟ ಹತ್ತಲು ಹೋಗುತ್ತಿರುವಾಗ ಸೌದೆಹೊರೆ ಹೊತ್ತುಕೊಂಡು ಬರುತ್ತಿದ್ದ ರಾಮ ಸಿಕ್ಕಿಬಿಟ್ಟ. ಹೆಗಡ್ರು ಎಲ್ ಹೊಂಟಿದೀರಿ ಅಂದ. ಹೀಂಗೆ ಗುಡ್ಡ ಹತ್ತಿ ಬರೋಣ ಅಂತ ಹೋಗ್ತಿದ್ದೇನೆ ಅಂದೆ. ಅಲ್ಲೆಂತ ಇದೆ ಅಂತ ಹತ್ತಕ್ ಹೋಗ್ತೀರಾ ಮಾರಾರ್ರೇ ನೀವು ಬೆಂಗ್ಳೂರವ್ರು ಅಂದ. ಸುಮ್ಮನೇ ನಕ್ಕೆ. ಅಲ್ಲಿ ಏನೂ ಇಲ್ಲ ಅಂತಲೇ ಹೋಗ್ತಾ ಇರೋದು ಅಂತ ಮನಸ್ಸಿನಲ್ಲೇ ಅಂದುಕೊಂಡೆ. ದಳದಳನೆ ಬೆವರು ಹರಿಸುತ್ತಾ ಏದುಸಿರು ಬಿಡುತ್ತಾ ಬೆಟ್ಟದ ತುದಿ ತಲುಪಿದರೆ ಅಲ್ಲೊಂದು ಒಂಟಿ ಬೆಟ್ಟದನೆಲ್ಲಿ ಮರ. ನೆಟ್ಟವರ್ಯಾರೂ ಅಲ್ಲ. ಕೊಯ್ಯುವರಿಲ್ಲ. ಯಾರಾದರೂ ಬೆಟ್ಟ ಹತ್ತಿ ಬಂದರೆ ಅವರಿಗೆ ಸ್ವಾಗತ ಕೋರಿ ದಣಿವಾರಿಸಲು ನಿಂತಂತಿದೆ. ಅದಕ್ಕೆ ಬೇಸರವಿಲ್ಲ. ಬೆಟ್ಟದ ತುದಿಯಂತೂ ನೀರವತೆಯ ಉತ್ತುಂಗ! ಅಲ್ಲಿ ಗಾಳಿ ಬೀಸುತ್ತಲೇ ಇದೆ. ಪ್ರಳಯವಾಗಿ ಬೇರೆ ಎಲ್ಲ ಜೀವಿಗಳೂ ನಾಶವಾಗಿ ಬರೀ ನಾನೊಬ್ಬನೇ ಉಳಿದರೆ ಹೇಗಿರಬಹುದು ಎಂಬಂತಹ ಏಕಾಂತತೆ.

ಹಾಗಂತ ಈ ಎಲ್ಲಾ ಪ್ರದೇಶಗಳೇನು ಅಲ್ಲಿನ ವಾಸಿಗಳಿಗೆ ಖಂಡಿತಾ ಸ್ವರ್ಗ ಲೋಕದ ತುಂಡಲ್ಲ. ಅಲ್ಲಿನ ತೊಂದರೆ ಅಲ್ಲಿನವರಿಗೇ ಗೊತ್ತು. ಬೇಸಿಗೆಯಲ್ಲಿ ಒಂದು ತೊಂದರೆಯಾದರೆ ಮಳೆಗಾಲದಲ್ಲಿ ಇನ್ನೂ ಇನ್ನೇನೋ ಜಾಸ್ತಿ ತೊಂದರೆ. ಎಲ್ಲಾ ಸಹಿಸಿಕೊಳ್ಳೋಣವೆಂದರೆ ಮತ್ತೇನೋ ನಾಗರಿಕತೆಯ ಸೌಲಭ್ಯದ ತೊಂದರೆ. ಸಮಸ್ಯೆಗಳು ಎಲ್ಲಿಲ್ಲ ಹೇಳಿ? ಅದೆಲ್ಲಾ ಬದಿಗಿಟ್ಟು ಮತ್ತೆ ಈಗ ನಿಗೂಢತೆಯ ವಿಷಯಕ್ಕೆ ಬಂದರೆ, ರಾತ್ರಿಯಿಡೀ ಹೈಮಾಸ್ ದೀಪಗಳ ಬೆಳಕಲ್ಲಿರುವವರಿಗೆ ಕಗ್ಗತ್ತಲ ಕಲ್ಪನೆಯಾಗಲೀ, ಸಿಟಿ ಮಧ್ಯದಲ್ಲಿ ಸ್ಮಶಾನ ನೋಡಿದವರಿಗೆ ’ಸ್ಮಶಾನ ಮೌನ’ ಎಂಬ ಪದದ ಅರ್ಥವಾಗಲೀ ತಿಳಿಯುವುದಕ್ಕೆ ಹೇಗೆ ತಾನೆ ಸಾಧ್ಯ! ನಾವು ನಗರಗಳಲ್ಲಿ ಕೂತು ನೂರು ಭಾಷಣ ಕುಟ್ಟಬಹುದು. ಮಾನವಾತೀತ ಶಕ್ತಿಗಳಾಗಲೀ, ಮತ್ಯಾವುದೋ ಶಕ್ತಿಯಾಗಲೀ, ವಿಚಿತ್ರಗಳಾಗಲೀ ಇಲ್ಲವೇ ಇಲ್ಲ ಎಂದು ತಳ್ಳಿಹಾಕಿಬಿಡಬಹುದು. ಎಲ್ಲದಕ್ಕೂ ವಿಜ್ಞಾನವನ್ನು ತಗುಲಿಸಿ ಅದರಲ್ಲಿನ ರೋಚಕತೆಯನ್ನು ಇಷ್ಟೇನಾ ಅನ್ನಿಸಿಬಿಡಬಹುದು. ಆದರೆ ಯಾರ ಹಂಗಿಲ್ಲದೇ ನೆಡೆದು ಹೋಗುತ್ತಿರುವ ಮಲೆನಾಡಿನ ಇಂತಹ ಪ್ರಕೃತಿಯ, ಮಳೆಗಾಲದ ರಾತ್ರಿಗಳ, ಅಸಂಖ್ಯ ಜೀವಿಗಳ ಚಕ್ರವನ್ನು ನೋಡಿದರೆ ಮನುಷ್ಯ ಪ್ರಕೃತಿಯನ್ನು ಪೂಜಿಸುವುದಕ್ಕೆ, ಅದರ ಬಗ್ಗೆ ನೂರು ಭಾವನೆಗಳನ್ನು, ನಂಬಿಕೆಗಳನ್ನು, ಹೆದರಿಕೆಗಳನ್ನು ಇಟ್ಟುಕೊಂಡದ್ದಕ್ಕೆ, ಕಣ್ಣಿಗೆ ಕಾಣದ ಶಕ್ತಿಗಳಿಗಾಗಿ ತವಕಿಸುವುದಕ್ಕೆ ಕಾರಣಗಳಂತೂ ಸ್ಪಷ್ಟವಾಗುತ್ತದೆ. ಒಟ್ಟಾರೆ ಇವೆಲ್ಲವೂ ಎಷ್ಟೇ ವಿವರಣೆಯ ಜೊತೆ ಬಂದರೂ ಅನುಭವಿಸುವ ಮನಸ್ಸಿನ ಮೇಲೆ ಅವಲಂಬಿತವಷ್ಟೆ. ಹಾಗಾಗಿ ಈ ಹುಲೀಕಣಿವೆ ಎಲ್ಲೆಡೆಯೂ ಇರಬಹುದು, ಇಲ್ಲದಿರಬಹುದು. ಆಸಕ್ತಿ ಅಚ್ಚರಿಗಳಿಂದ ಅದನ್ನು ಹುಡುಕಿಕೊಳ್ಳುವುದು ಅವರಿಗವರಿಗೆ ಬಿಟ್ಟಿದೆ.

14 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ವಿಕಾಸ್, ಬಹಳ ಚೆನ್ನಾಗಿದೆ,

ತೇಜಸ್ವಿನಿ ಹೆಗಡೆ ಹೇಳಿದರು...

ತುಂಬಾ ಇಷ್ಟವಾಯಿತು. ನಿನ್ನ ಉತ್ತಮ ಪೋಸ್ಟ್‌ಗಳಲ್ಲಿ ಇದೂ ಒಂದು :)

"ಪ್ರಳಯವಾಗಿ ಬೇರೆ ಎಲ್ಲ ಜೀವಿಗಳೂ ನಾಶವಾಗಿ ಬರೀ ನಾನೊಬ್ಬನೇ ಉಳಿದರೆ ಹೇಗಿರಬಹುದು ಎಂಬಂತಹ ಏಕಾಂತತೆ." - Beautiful Line :)

shivu.k ಹೇಳಿದರು...

ವಿಕಾಶ್,

ಮತ್ತೆ ನನ್ನ ಕ್ಯಾಮೆರಾ ಆನ್ ಆಯಿತು. ನಿಮ್ಮ ಬರಹದ ಮಾತುಗಳನ್ನೆಲ್ಲಾ ಆ ದೃಷ್ಟಿಕೋನದಿಂದ ನೋಡಿದರೆ ಅದರ ಆನಂದವೇ ಬೇರೆ....ಅಷ್ಟರಲ್ಲಿ ನಿಮ್ಮ ಕಣಿವೆ ಕತೆಯೇ ಮುಗಿದುಹೋಯಿತಲ್ಲ...ನನ್ನ ಕ್ಯಾಮೆರಾ ಬ್ಯಾಟರಿ ಚಾಲ್ತಿಯಲ್ಲಿರುವುದರಿಂದ ನೀವು ಹೇಳಿದ ಮಂಗಟೆ ಹಕ್ಕಿಯ ಚಿತ್ರಕ್ಕಾಗಿ ಅದರ ಹಿಂದೆ ಬಿದ್ದಿದ್ದೇನೆ[ಮಂಡ್ಯದ ಸಮೀಪ ಒಂದು ಹಳ್ಳಿಯ ತೋಟದಲ್ಲಿ]. ಯಶಸ್ವಿಯಾದರೆ ತೋರಿಸುತ್ತೇನೆ..

ಟಿ ಜಿ ಶ್ರೀನಿಧಿ ಹೇಳಿದರು...

ನಾನೂ ನೋಡ್ಬೇಕು ಕಣ್ರೀ ಹುಲಿಕಣಿವೇನ...

Subrahmanya ಹೇಳಿದರು...

ಸಿಗೂಡರಹಸ್ಯ ಬಯಲು ಮಾಡಿದ್ದಕ್ಕೆ ಥ್ಯಾಂಕ್ಯು. Once again ...ಒಂದು ಒಳ್ಳೆಯ ಲೇಖನ.

ಅನಾಮಧೇಯ ಹೇಳಿದರು...

>>ನಿಶ್ಯಬ್ದತೆ ಇದ್ದಾಗ ನಿಗೂಢತೆ ಸಹಜ.<<
>>ಹಾಗೇ ನೆಡೆಯುತ್ತಾ ಹೋಗುತ್ತಿದ್ದರೆ ಇವನ್ಯಾರೋ ಆಗಂತುಕ ಬಂದಿದ್ದಾನೆ ಎಂದು ಒಂದು ಹಕ್ಕಿ ಕೂಗಿ ಎಚ್ಚರಿಸುತ್ತಲೇ ಇದೆ.
ಪ್ರಳಯವಾಗಿ ಬೇರೆ ಎಲ್ಲ ಜೀವಿಗಳೂ ನಾಶವಾಗಿ ಬರೀ ನಾನೊಬ್ಬನೇ ಉಳಿದರೆ ಹೇಗಿರಬಹುದು ಎಂಬಂತಹ ಏಕಾಂತತೆ.<<
>>ಎಲ್ಲದಕ್ಕೂ ವಿಜ್ಞಾನವನ್ನು ತಗುಲಿಸಿ ಅದರಲ್ಲಿನ ರೋಚಕತೆಯನ್ನು ಇಷ್ಟೇನಾ ಅನ್ನಿಸಿಬಿಡಬಹುದು.<

ಅದ್ಭುತ ಸಾಲುಗಳು. ನಿಮ್ಮ ಬರಹಗಳಲ್ಲಿ ನನಗೆ ತುಂಬ ಇಷ್ಟವಾದುದರ ಪಟ್ಟಿಯಲ್ಲಿ ಈ ಲೇಖನ (ನೀರವತೆಯ) ಉತ್ತುಂಗ ಏರಿದೆ.

ನಿಮ್ಮ ಬರಹ "ವಿಕಾಸವಾದ"ದ್ದು ಹೌದು..:)

K.N.Aithal ಹೇಳಿದರು...

super!!! sakkattagi bardideera.Keep it up.

ಪಕ್ಕದ ಮನೆ ಹುಡುಗಾ ! ಹೇಳಿದರು...

ವಿಕಾಸ್,
Truly class apart !
ನಾನು ಚಿಕ್ಕವನಿರುವಾಗ ಕಾಡಲ್ಲಿರೋ ನನ್ನ ಅಜ್ಜಿ ಮನೆಗೆ ಹೋದಾಗ ಆಗ್ತಿದ್ದ ಅನುಭವಾನ್ನೆಲ್ಲ ಕಣ್ ಮುಂದೆ ತಂದು ನಿಲ್ಲಿಸಿದ್ರಿ. ನನ್ನ ಅಜ್ಜಿ ಮನೆ ಹತ್ರ ಅರಿಕಲ್ ಅಂತ ಒಂದು ಕರಿಕಲ್ಲಿನ ಬೆಟ್ಟ ಇತ್ತು, ಅದನ್ನ ಹತ್ತಿ ನೇಸರ ಮುಳುಗೋದನ್ನ ನೋಡೊದು ಅಂದ್ರೆ ಆಗ ನಮ್ಮ ಪಾಲಿಗೆ ದೊಡ್ಡ adventure. ಈಗಲೂ ಕೂಡಾ !
ಮುಂದುವರೆಯಲಿ ನಿಮ್ ಪಯಣ

Sree ಹೇಳಿದರು...

super!!!

mruganayanee ಹೇಳಿದರು...

ಉಹು.. ಸಾಕಾಗ್ಲಿಲ್ಲ. ಇನ್ನೂ ಹೇಳಬಹುದಿತ್ತು ನೀನು. ಆ ಗುಡ್ಡದ ಮೇಲೆ ಕರೆದುಕೊಂಡು ಹೋಗಿ ’ನೀನೇ ಅರ್ಥ ಮಾಡಿಕ” ಎಂದು ಒಬ್ಬಳನ್ನೇ ಬಿಟ್ಟು ಹೋದ ಹಾಗೆ. ಅರ್ಥ ಮಾಡಿಕೊಳ್ಳಲು ಹೊರಟರೂ ಸಿಕ್ಕೂ ಸಿಗದ ಭಾವನೆ. ಅದನ್ನೇ ’ನಿಗೂಢ’ ಅಂದಿದ್ದಾ ನೀನು?

Parisarapremi ಹೇಳಿದರು...

oLLoLLe upamaalankaara baLsteerappa neevantu...

ಸುಧೇಶ್ ಶೆಟ್ಟಿ ಹೇಳಿದರು...

inthaha ondhu anubhava hulikaNiveyalli namagoo aagabEku endhu aase aaguvashtu chennagi barediddeera vikas....

ವಿ.ರಾ.ಹೆ. ಹೇಳಿದರು...

@ಪರಾಂಜಪೆ, ಥ್ಯಾಂಕ್ಸ್

@ತೇಜಸ್ವಿನಿ ಹೆಗಡೆ, ಥ್ಯಾಂಕ್ಸ್

@ಶಿವು, ಥ್ಯಾಂಕ್ಸ್,ನಿಮ್ಮ ಕ್ಯಾಮೆರಾ ಬ್ಯಾಟರಿ ಯಾವತ್ತೂ ಚಾಲ್ತಿಯಲ್ಲಿರಲಿ. ಕಾಯುತ್ತಿರ್ತೇವೆ ನಿಮ್ಮ ಫೋಟೋಗಳಿಗೆ.

@ಶ್ರೀನಿಧಿ, ಖಂಡಿತ

@ಸುಬ್ರಮಣ್ಯ, ಥ್ಯಾಂಕ್ಸ್, ನಿಗೂಢತೆಯೇನೂ ಇರಲಿಲ್ಲ. ಆದ್ರೂ ಬಯಲಾಯ್ತು. ಹ್ಹ ಹ್ಹ.

@ನೀಲುಹೂವು, ಥ್ಯಾಂಕ್ಸ್ ಬಾಸ್.

@ಐತಾಳ್, ಥ್ಯಾಂಕ್ಸ್

@ಪಕ್ಕದಮನೆ ವಸಂತ್, ಥ್ಯಾಂಕ್ಸ್ ;)

@ಶ್ರೀ, ಥ್ಯಾಂಕ್ಸೂ...

@ಮೃಗನಯನಿ, ಇಲ್ಲ ಅದನ್ನಲ್ಲ ನಿಗೂಢವೆಂದಿದ್ದು. actually ನನಗೆ ಅಷ್ಟು ಬರೆಯಲು ತಾಳ್ಮೆ ಇರಲಿಲ್ಲ ಅನ್ನಬಹುದು ಅಥವಾ ಅದನ್ನು ಅರ್ಥ ಮಾಡಿಸುವ ಹಾಗೆ ಬರೆಯಲು ಆಗಲೂ ಇಲ್ಲ ಅನ್ನಬಹುದು.

@ಪರಿಸರಪ್ರೇಮಿ, ಉಪಮಾಲಂಕಾರವೆ! for example?

@ಸುಧೇಶ್, ಹ್ಮ್.. ಅನುಭವ ಆಗ್ಲಿ ಆಗ್ಲಿ ;).. ಥ್ಯಾಂಕ್ಸ್

Chandru ಹೇಳಿದರು...

ತುಂಬ ಚೆನ್ನಾಗಿದೆ ,, ನಾ ಮಾಡಿದ ಚಾರಣಗಳು ಮತ್ತು ನಮ್ಮೂರನ್ನು ನೆನಪಿಸಿತ್ತು ನಿಮ್ಮ ಬ್ಲಾಗ್.