ಪುಟಗಳು

ಗುರುವಾರ, ಮಾರ್ಚ್ 18, 2010

ಏನೋ ಗೊತ್ತಿಲ್ಲ

ವಾಕ್ಯಗಳನ್ನು ಗುಡ್ಡೆ ಹಾಕಿಕೊಂಡು ಕುಳಿತಿದ್ದೇನೆ,
ಎಲ್ಲವೂ ಆ ನೆನಪುಗಳ ಹಾಗೆ ತಿರುಗುಮುರುಗು.
ಒಂದಕ್ಕೊಂದನ್ನು ಜೋಡಿಸಲು ಪ್ರಯತ್ನಪಡುತ್ತಿದ್ದೇನೆ,
ಅವಳನ್ನು ಕತೆಯಾಗಿಸಿ ನಿಟ್ಟುಸಿರಿಡಲಾಗುತ್ತಿಲ್ಲ.
ಕತೆಗೊಂದು ಹುಟ್ಟುಕೊನೆಗಳ ಅಗತ್ಯವೇ ಇಲ್ಲವೀಗ,
ಎಲ್ಲೋ ಕತೆ ಹುಟ್ಟಿಬಿಡಬಹುದು,
ಕೊನೆಯೇ ಇಲ್ಲದೆ ಮತ್ತೆ ಶುರುವಾಗಿಬಿಡಬಹುದು,
ಶುರುವಾದದ್ದು ಕೊನೆಯಾಗದೇ ಇರಬಹುದು,
ಆದರೆ ಕತೆ ಕೊನೆಯಾಗಿದೆ ಈಗ.
ಎಲ್ಲಾ ಕತೆಗಳು ಒಂದೇ, ಮಗ್ಗುಲುಗಳು ಬೇರೆ,
ಕತೆ ಹೇಳುವುದಕ್ಕೂ, ಬರೆಯುವುದಕ್ಕೂ,
ಕಾಣುವುದಕ್ಕೂ, ಅದು ನೆಡೆಯುವುದಕ್ಕೂ ವ್ಯತ್ಯಾಸವಿದೆ,
ಕತೆಯೊಳಗಿನ ಪಾತ್ರವಾಗಿಬಿಟ್ಟೆ ನಾನು.
ಪ್ರೀತಿಯ ಮೊದಲ ಹಂತಕ್ಕೆ ನೂರು ಕಾರಣ,
ಎರಡನೆ ಹಂತವೆಂದರೆ ನಿಷ್ಕಲ್ಮಶ ಕಾಳಜಿಯೊಂದೇ.
ಪ್ರೀತಿ ತೋರಿಸಲು ಬರುವುದಿಲ್ಲವೋ
ಪ್ರೀತಿ ಅರ್ಥ ಆಗುವುದಿಲ್ಲವೋ ಗೊತ್ತಾಗಲಿಲ್ಲ,
ಎದುರಿಗೇ ಕೂತರೂ ಏನೂ ಮಾತಾಡಲಾಗಲಿಲ್ಲ,
ಕತೆಯ ಪಾತ್ರಗಳ ಮನಸ್ಸು ತಿಳಿಯುವುದಿಲ್ಲ.
ಇದ್ದಾಗ ಸಿಗದೇ ಇಲ್ಲದಿದ್ದಾಗ ನಿನ್ನ ಮಿಸ್ ಮಾಡಿಕೊಂಡೆ,
ಅನ್ನುವುದು ಎಂಥಾ ಮೋಸ, ಹುಡುಗಿ ಸಿಕ್ಕಂತೆಯೂ ಸಿಗಲಿಲ್ಲ,
ನದಿಯೂ ಇಲ್ಲ ಸಾಗರವೂ ಇಲ್ಲ, ಮಳೆಯೂ ನಿಂತಿಲ್ಲ,
ಆದರೂ ಬರಡು ಭೂಮಿ, ಏನೋ ಗೊತ್ತಿಲ್ಲ.

ಗುರುವಾರ, ಮಾರ್ಚ್ 11, 2010

ತಪ್ಪಲ್ಲದ ತಪ್ಪುಗಳು

ಕೆಲದಿನಗಳಿಂದ ಸ್ವಾಮಿ ನಿತ್ಯಾನಂದರ ಬಗ್ಗೆ ಏನೇನೋ ಜೋಕ್ ಸಂದೇಶಗಳು ನನ್ನ ಫೋನ್ ಗೆ ಬಂದಿದ್ದವು. ಇವತ್ತು ಬೆಳಗ್ಗೆ ಅದನ್ನೇ ನಾನು ನನ್ನ friendsಗೆಲ್ಲಾ ಫಾರ್ವರ್ಡ್ ಮಾಡುತ್ತಿದ್ದೆ. ಅದನ್ನು ಕಳಿಸುವಾಗ ಅವರ ಬಗ್ಗೆ , ಆ ಘಟನೆಯ ಬಗ್ಗೆ ಯಾವ ಯೋಚನೆಯೂ ಇಲ್ಲದೇ ಸುಮ್ಮನೇ ತಮಾಷೆಗಾಗಿ ಕಳಿಸುತ್ತಿದ್ದೆ. ಸ್ವಲ್ಪ ಹೊತ್ತಿನಲ್ಲೇ ಗೆಳತಿ ಫೋನ್ ಮಾಡಿದಳು. ಇದ್ಯಾಕೆ ಹೀಗೆಲ್ಲಾ ಕಳಿಸ್ತಿದ್ದೀಯ, ಮಾಡ್ದೋರ ಪಾಪ ಆಡ್ದೋರ ಬಾಯಲ್ಲಿ ಅಂತಾರೆ, ಹೀಗೆ ಸುಮ್ಮನೇ ಇನ್ನೊಬ್ಬರನ್ನು ತಮಾಷೆ ಮಾಡಿಕೊಳ್ಳುವುದು ತಪ್ಪಲ್ವಾ ಅಂದಳು. ನನಗೂ ಹೌದು ಅನ್ನಿಸಿತು. ಇದು ಚಿಕ್ಕ ತಪ್ಪು ಎನ್ನಬಹುದು. ನನಗೂ, ಯಾರಿಗೂ ತೊಂದರೆ ಮಾಡದ ಚಿಕ್ಕ ತಪ್ಪು. ತಲೆಕೆಡಿಸಿಕೊಳ್ಳಬೇಕಾದ್ದೇನೂ ಇರದ, ಅಲ್ಲೇ ಬಿಟ್ಟು ಬಿಡುವ ತಪ್ಪು. ಅದಿರಲಿ.

****

ಆದರೆ ಜೀವನದಲ್ಲಿ ಒಮ್ಮೊಮ್ಮೆ ಎಂತಹ ತಪ್ಪುಗಳಾಗಿ ಬಿಡುತ್ತವೆಂದರೆ ಅದು ನಮ್ಮ ಜೀವನದ ಗತಿಯನ್ನೇ ಬದಲಾಯಿಸಿಬಿಡುತ್ತವೆ. ಆ ತಪ್ಪು ಮಾಡುವಾಗ ಅದು ನಮಗೆ ನಿಜವಾಗಲೂ ತಪ್ಪು ಅಂತ ಅನ್ನಿಸಿರುವುದಿಲ್ಲ. ನಿಜವಾಗಲೂ ಅದು ಆಗ ’ತಪ್ಪು’ ಅನ್ನುವಂತದ್ದು ಆಗಿರುವುದೇ ಇಲ್ಲ. ಇಲ್ಲಿ ತಪ್ಪು ಅಂದರೆ ಯಾರಿಗೋ ತೊಂದರೆಯಾಗುವ, ಯಾರಿಗೋ ಮೋಸ ಮಾಡಿದ ತಪ್ಪು ಅಂತಲ್ಲ. ನಮ್ಮದೇ ಜೀವನಕ್ಕೆ, ನಮ್ಮದೇ ಬೆಳವಣಿಗೆಗೆ ತೊಡಕಾಗುವಂತಹ, ನಮ್ಮದೇ ನೆಮ್ಮದಿ ಕೆಡಿಸಿಕೊಳ್ಳುವಂತಹ ತಪ್ಪುಗಳು (mistakes). ಅವತ್ತಿನ ಸನ್ನಿವೇಶಕ್ಕೆ ತಕ್ಕನಾಗಿ ಮಾಡಿದ ಕೆಲಸ, ಅವತ್ತು ತೆಗೆದುಕೊಂಡ ತೀರ್ಮಾನ, ಅವತ್ತು ಇಟ್ಟ ಹೆಜ್ಜೆ ತಪ್ಪಾಗಿತ್ತು ಅಂತ ಎಷ್ಟೋ ಕಾಲವಾದ ಮೇಲೆ ಅರಿವಾಗಲು ಶುರುವಾಗುತ್ತದೆ. ಆದರೆ ಕಾಲ ಮೀರಿರುತ್ತದೆ. ಅದು ಎಲ್ಲೋ ತೊಡಗಿಸಿದ ಬಂಡವಾಳ ಇರಬಹುದು, ಆರಿಸಿಕೊಂಡ ಕ್ಷೇತ್ರ, ಉದ್ಯೋಗ ಆಗಿರಬಹುದು, ಬೆಳೆಸಿಕೊಂಡ ಸ್ನೇಹ/ಸಂಬಂಧ/ಸಹವಾಸವಿರಬಹುದು, discontinue ಮಾಡಿದ ಹವ್ಯಾಸ, ಕಲೆ, ಕಳೆದ ಸಮಯ ಮತ್ತಿನ್ನೇನೋ ಆಗಿರಬಹುದು. ಅವು ನಮ್ಮ ನಿರೀಕ್ಷೆಯ ಹೊರತಾಗಿ ನೆಡೆದಾಗ, ನಾವು ಊಹಿಸಿದ ದಾರಿಯಲ್ಲಿ ಸಾಗದಿದ್ದಾಗ, ತೊಂದರೆ ಕೊಡಲಾರಂಭಿಸಿದಾಗ, ಕಳೆದುಕೊಂಡದ್ದು ಮತ್ತೆ ಸಿಗುವುದಿಲ್ಲ ಎಂಬಂತಾದಾಗ ಅಷ್ಟರಲ್ಲಿ ಆಗಬೇಕಾದ ಡ್ಯಾಮೇಜು ಆಗಿಹೋಗಿ ಅದನ್ನು ಸರಿಪಡಿಸಿಕೊಳ್ಳುವ ದಾರಿ ತೀರಾ ಕ್ಷೀಣವಾಗಿರುತ್ತದೆ ಅಥವಾ ಇಲ್ಲವಾಗಿರುತ್ತದೆ. ಹಾಗಂತ ಜೀವನವೇನೂ ಬರಬಾದೆದ್ದಿರುವುದಿಲ್ಲ. ಒಂದು ಸೀದಾ ಸಾದಾ ಹಾದಿಯಲ್ಲಿ ಸಾಗಿಬಂದ ಸಾಧಾರಣ ಬದುಕು, ಭವಿಷ್ಯ ಇನ್ನೂ ಒಳ್ಳೆಯದಾಗಿರುತ್ತಿತ್ತು ಎಂಬಂತಿರುತ್ತದೆ. ಸಾಮರ್ಥ್ಯ ಇದ್ದರೂ ಬಳಸಿಕೊಳ್ಳದೇ, ಮಾಡುವುದನ್ನು ಸರಿಯಾಗಿ ಮಾಡದೇ, ಗೊತ್ತಿದ್ದೂ ಗೊತ್ತಿದ್ದೂ ಹೀಗ್ಯಾಕೆ ಆಗಲು ಬಿಟ್ಟೆವು ಅನ್ನಿಸುತ್ತದೆ.

ಅವತ್ತು ತಪ್ಪೆನಿಸದೇ ಹೋದದ್ದು ಇವತ್ತು ಅಷ್ಟೆಲ್ಲಾ ತಪ್ಪು ಅನ್ನಿಸಬೇಕಾದರೆ ಆವತ್ತು ಆ ಹೆಜ್ಜೆ ಏಕೆ ಇಟ್ಟೆವು ಎಂಬುದನ್ನು ಯೋಚಿಸಿದರೆ ಅದಕ್ಕೆ ಕಾರಣಗಳು ಹಲವು. ಅದು ಅಜ್ಞಾನ ಇರಬಹುದು, ಅನಿವಾರ್ಯತೆ ಇರಬಹುದು, ಅನುಭವದ, ದೂರದೃಷ್ಟಿಯ, ಪ್ರೌಢಿಮೆ ಕೊರತೆ ಇರಬಹುದು, ಬದಲಾದ ಸನ್ನಿವೇಶ ಇರಬಹುದು, ಪರಿಸ್ಥಿತಿಯ ಗತಿ ಇರಬಹುದು, ಆತುರಕ್ಕೆ ಬಿದ್ದದ್ದಿರಬಹುದು, ಇದ್ಯಾವುದೂ ಇಲ್ಲದೇ ಸುಮ್ಮನೇ ಆಗಿಹೋಗಿರಬಹುದು. ಈ ರೀತಿಯ ವೈಯಕ್ತಿಕ ತಪ್ಪುಗಳ ಪ್ರಭಾವ ಅನಂತರದ ಹಂತಗಳಲ್ಲಿ ನಮ್ಮ ಸಾಮಾಜಿಕ, ಕೌಟುಂಬಿಕ, ಆರ್ಥಿಕ ಜೀವನದ ಮೇಲೂ ಕಾಣಿಸುತ್ತದೆ. ಇಂತಹ ತಪ್ಪುಗಳು ಯಾವ ಪಶ್ಚಾತಾಪಕ್ಕೂ, ಯಾವ ಆತ್ಮವಿಮರ್ಶೆಗೂ ನಿಲುಕದೇ, ಮನಸಿದ್ದರೆ ಮಾರ್ಗ.. ತಪ್ಪುಗಳಿಂದ ಕಲಿಯಿರಿ.. ಎಂಬ ಸೂತ್ರಗಳಿಗೂ ಸಿಲುಕದೇ ಒಂದು ಕೊರಗನ್ನು ಹಾಗೇ ಉಳಿಸಿಬಿಡುತ್ತವೆ. ಇವು ತಪ್ಪಲ್ಲದ ತಪ್ಪುಗಳು.

*****

ನಂಗೊತ್ತು, ಹೀಗೆಲ್ಲಾ ಬರೆದಿದ್ದಕ್ಕೆ ನೀವೆಲ್ಲಾ ಸ್ವಾಮಿ ವಿಕಾಸಾನಂದ ಅದೂ ಇದೂ ಅಂತೀರ! :)