ಪುಟಗಳು

ಗುರುವಾರ, ಫೆಬ್ರವರಿ 11, 2010

ಓದಿನೊಂದಿಗಿಷ್ಟು ಹರಟೆ...

ಒಂದೊಂದೇ ಪುಸ್ತಕಗಳನ್ನು ಓದಿ ಎತ್ತಿಡುತ್ತಿದ್ದೇನೆ. ಎಷ್ಟೋ ದಿನಗಳಿಂದ ಪೆಟ್ಟಿಗೆಯಲ್ಲಿ ಬೆಚ್ಚಗೆ ಕುಳಿತಿದ್ದ, ಓದದೇ ಬಾಕಿ ಉಳಿದುಹೋಗಿದ್ದ ಪುಸ್ತಕಗಳೆಲ್ಲಾ ಮೋಕ್ಷ ಕಾಣುತ್ತಿವೆ. ಪುಸ್ತಕದಂಗಡಿಗಳಿಗೆ ಹೋಗಿ ಇಷ್ಟ ಪಟ್ಟು ಕೊಂಡಿದ್ದ ಪುಸ್ತಕಗಳು, ಎಲ್ಲೋ ಪುಸ್ತಕ ಜಾತ್ರೆಯಿಂದ ತಂದಿಟ್ಟುಕೊಂಡಿದ್ದವು, ಅಕ್ಕ ಕೊಟ್ಟ ಕಾದಂಬರಿಗಳು, ಗೆಳತಿ ಕೊಟ್ಟ ದೇವುಡು ’ಮಹಾ’ ಸರಣಿ ಮುಂತಾದವುಗಳೆಲ್ಲಾ ಖಾಲಿಯಾದವು. ಈ ಎರಡು ತಿಂಗಳಲ್ಲಿ ಓದಿ ಮುಗಿಸಿದ ಪುಸ್ತಕಗಳು ಸರಿಸುಮಾರು ೨೦! Thanx to b.m.t.c. vajra . ಟ್ರಾಫಿಕ್ ಮತ್ತು ಸುಸ್ತನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಬೈಕನ್ನು ಮನೆಲ್ಲಿಟ್ಟು ಬಸ್ಸಿನಲ್ಲೇ ಪ್ರಯಾಣಿಸಬೇಕೆಂದು ತೀರ್ಮಾನಿಸಿದ್ದರಿಂದ ದಿನಕ್ಕೆ ಏನಿಲ್ಲವೆಂದರೂ ೩ ಗಂಟೆ ದೊರೆಯುತ್ತಿದೆ. ಒಂದುಕಾಲದಲ್ಲಿ ಕೈಕಾಲು ನಜ್ಜುಗುಜ್ಜಾಗಿಸಿಕೊಂಡು ಸಿಟಿಬಸ್ಸುಗಳಲ್ಲಿ ಜೋತಾಡಿಕೊಂಡು ಓಡಾಡಿದವನೇ ನಾನು. ಆದರೆ ಸದ್ಯ ನಾನಿರುವ ಏರಿಯಾದಿಂದ ಈಗಿನ ನನ್ನ ಕಂಪನಿಯಿರುವ ರೂಟಿನಲ್ಲಿ ನೇರ ವೋಲ್ವೋ ಬಸ್ಸುಗಳಿವೆ. ಈ ವಜ್ರ ಬಸ್ಸುಗಳಲ್ಲಿ ಕುಳಿತುಕೊಂಡರೆ ನೆಮ್ಮದಿಯ ಪ್ರಯಾಣ. ಸಿಕ್ಕ ವೀಕೆಂಡುಗಳೆಲ್ಲಾ ಯಾವುದ್ಯಾವುದೊ ಕೆಲಸಗಳಲ್ಲಿ, ತಿರುಗಾಟಗಳಲ್ಲಿ ಕಳೆದುಹೋಗುತ್ತಿರಲು ದಿನಾ ಸಿಗುವ ಇಂತಹ ಅಮೂಲ್ಯ ಸಮಯ ವ್ಯರ್ಥ ಮಾಡಿಕೊಳುವುದರಲ್ಲಿ ಅರ್ಥವಿಲ್ಲ ಎನ್ನಿಸಿ ಪುಸ್ತಕ ರಾಶಿಗೆ ಕೈಹಾಕಿದ್ದೆ. ಕೈಯಲ್ಲೊಂದು ಪುಸ್ತಕ ಹಿಡಿದು ಊರ ಚಿಂತೆಗಳೆಲ್ಲಾ ಡ್ರೈವರಿಗೊಬ್ಬನಿಗೇ ಇರಲಿ ಎಂಬಂತೆ ತಣ್ಣಗೆ ಕುಳಿತುಕೊಂಡರೆ ಹೊರಗಿನ ಜಗತ್ತು ಸುಮ್ಮನೇ ಆತಂಕಪಡುವ ವಿಚಿತ್ರದಂತೆ. ಒಂದೊಂದು ಪುಸ್ತಕಗಳೂ ಒಂದೊಂದು ಹೊಸ ಹೊಸ ಲೋಕವನ್ನು, ಹಲವಾರು ಹೊಸ ಲೋಕಗಳನ್ನು ಬಿಚ್ಚಿಡುತ್ತವೆ. ಕೆಲವು ಆ ಲೋಕದೊಳಗೆ ಕರೆದುಕೊಂಡುಹೋಗಿ ಸುತ್ತಿಸಿದರೆ ಇನ್ನೂ ಕೆಲವು ಬಾಗಿಲಲ್ಲಿ ನಿಲ್ಲಿಸುತ್ತವೆ. ಓದುತ್ತಾ ಓದುತ್ತಾ ಕೆಲವು ಪುಸ್ತಕಗಳು ಸುಖ ಕೊಡುತ್ತವೆ, ಬೆರಗಾಗಿಸುತ್ತವೆ, ನಗುತರಿಸುತ್ತವೆ, ಆತಂಕಗೊಳಿಸುತ್ತವೆ, ಕಣ್ತುಂಬಿಸುತ್ತವೆ. ವಿಷಯಗಳು ಮನಸೊಳಗೆ ಕೂತು ಬಿಡುತ್ತವೆ. ಕಲ್ಪನೆಗಳು ಕುಣಿದಾಡುತ್ತವೆ. ಬರೆಯುವ ಆಸೆಗೆ ಸ್ಪೂರ್ತಿಯಾಗುತ್ತವೆ. ಕೆಲವೊಮ್ಮೆ ಬರೆದವನ ಮೇಲೆ ಮನಸು ಮುನಿಸಿಕೊಳ್ಳುತ್ತದೆ. ಎಲ್ಲೋ ಒಂದು ಸಾಲಿನಂಚಿನಲ್ಲಿ ಅವಳ ನೆನಪಾಗಿಬಿಡುತ್ತದೆ. ಅವಳಿಗೆ ಇದನ್ನು ಹೇಳಬೇಕೆನ್ನಿಸುತ್ತದೆ. ಜೊತೆಗಿದ್ದರೆ ಚೆನ್ನಾಗಿತ್ತು ಅಂದುಕೊಳ್ಳುತ್ತೇನೆ. ಒಟ್ಟಿಗೇ ಕೂತು ಓದಬಹುದಿತ್ತು ಎನಿಸುತ್ತದೆ. ಮುಳುಗಿಹೋಗುತ್ತೇನೆ.

ಮೊನ್ನೆ ಹೀಗಾಯಿತು. ಬಸ್ಸಿನಲ್ಲಿ ಕೊನೆಯಿಂದ ಎರಡನೇ ಸಾಲಿನಲ್ಲಿ ಇವತ್ತೇ ಇದನ್ನು ತಿಂದು ಮುಗಿಸಿಬಿಡಬೇಕು ಎಂಬಂತೆ ನಾನು ಪುಸ್ತಕ ಹಿಡಿದುಕೊಂಡು ಕುಳಿತಿದ್ದೆ. ಯಾರೋ ಪಕ್ಕದಲ್ಲಿ ಬಂದು ನಿಂತಂತಾಯಿತು. ಯಾರೋ ಇರಬೇಕೆಂದು ಸುಮ್ಮನಿದ್ದೆ. ಎರಡು ಸೆಕೆಂಡು ಬಿಟ್ಟು ಭುಜ ತಟ್ಟಿತು ಆಸಾಮಿ. ತಿರುಗಿ ನೋಡಿದರೆ ನನ್ನ ಹಳೇ ಗೆಳೆಯ! ನಿಂತು ನಗುತ್ತಿದ್ದ. ಅವನನ್ನು ಭೇಟಿಯಾಗಿ ತೀರಾ ೬ ವರ್ಷಗಳೇ ಕಳೆದುಹೋಗಿದ್ದವು. ಹಾಸ್ಟೆಲ್ ನಲ್ಲಿ ಒಟ್ಟಿಗೇ ೪ ವರ್ಷವಿದ್ದೆವು. ಆಮೇಲೆ ಸಿಕ್ಕಿರಲಿಲ್ಲ. "ಹಾಸ್ಟೇಲ್ ನಲ್ಲಿ ಒಂದು ದಿನವಾದ್ರೂ ಇದೇ ಲೆವೆಲ್ಲಿಗೆ textbooks ಓದಿದ್ರೆ ಎಲ್ಲೋ ಇರ್ತಿದ್ದಲ್ಲೋ ನೀನು" ಅಂತ ಕಿಚಾಯಿಸಿದ. "ಈಗ್ಲೂ ಅಂತದ್ದೇನೂ ಆಗಿಲ್ಲ, ಬಾ" ಅಂತ ಕೂರಿಸಿದೆ. ಪುಸ್ತಕ ಮಡಚಿಟ್ಟು ಭರ್ತಿ ಮಾತಾಡಿದೆವು. ರಾತ್ರಿ ೩ ಗಂಟೆ ತನಕ ಆಡುತ್ತಿದ್ದ ಕೇರಂನಿಂದ ಹಿಡಿದು ನಮ್ ಅಡುಗೆ ಭಟ್ಟರ ವೆಜೆಟೇಬಲ್ ಉಪ್ಪಿಟ್ಟಿನವರೆಗೂ ನೆನಪುಗಳನ್ನೆಲ್ಲಾ ರಿವೈಂಡ್ ಮಾಡಿಕೊಂಡೆವು. ಅವನು textbook ಬಿಟ್ಟು ಒಂದು ಸುದ್ದಿ ಪತ್ರಿಕೆಯನ್ನೂ ಓದದ ಪುಣ್ಯಾತ್ಮ. ಅದೇ ವಿಷ್ಯ ಕೇಳಿದ್ದಕ್ಕೆ ಈಗ Bangalore Times ಮಾತ್ರ ಓದ್ತೀನಿ ಅಂತ ಒಪ್ಪಿಕೊಂಡ. ನಗಾಡಿಕೊಂಡೆವು.

ಆಸಕ್ತಿಯಿಂದ ಓದುತ್ತಾ ಕ್ರಮಿಸಿದ ಹಾದಿಯ ಅರಿವಿಲ್ಲದೇ ಇಳಿಯುವ ಸ್ಟಾಪು ಬಂದುಬಿಡುತ್ತದೆ. ಇಷ್ಟು ಬೇಗ ಯಾಕಾದರೂ ತಲುಪಿದೆನೋ ಎನ್ನಿಸಿದರೂ ಓದುತ್ತಿದ್ದ ಆ ಪುಟದ ತುದಿಯನ್ನು ಕಿವಿಯಂತೆ ಮಡಚಿ ಒಳಗಿಟ್ಟುಕೊಳ್ಳುತ್ತೇನೆ. ಅವತ್ತಿನ ಮಟ್ಟಿಗೆ ಮನಸ್ಸು ತಾಜಾ ತಾಜಾ. ’ಆವರಣ’ ಪುಸ್ತಕದ ವಿವಾದದಿಂದಲೇ ಯಾವತ್ತೂ ಓದದ ನನ್ನ ಸುಮಾರು ಗೆಳೆಯರಿಗೂ ಓದುವ ಪರಿಚಯ ಮಾಡಿಸಿದ ತೃಪ್ತಿ ನನಗಿದೆ. ಅವರು ಪುಸ್ತಕಗಳನ್ನು ಕೊಳ್ಳುವುದಿಲ್ಲವಾದರೂ ನನ್ನ ಬಳಿ ಎರವಲು ಪಡೆದು ಓದುತ್ತಾರೆ. ಇರಲಿ. ಓದುತ್ತಾ ಹೋದರೆ ಇಡೀ ಜನ್ಮಕ್ಕೂ ಮುಗಿಯದಷ್ಟಿದೆ. ಇದೊಂದು ಹಸಿವು. ಹಾಗಂತ ನಾನು ತೀರ ಹುಳು ಏನಲ್ಲ. ಯಾವಾಗಲೂ ಓದುತ್ತಾ ಇರಬೇಕು ಅಂತಲೂ ಅನಿಸುವುದಿಲ್ಲ. ಆದರೂ ಇದ್ದಷ್ಟು ಹೊತ್ತು ಪುಸ್ತಕಗಳು ಕೊಡುವ ಸಾಂಗತ್ಯವನ್ನು ಮತ್ತ್ಯಾರು ತಾನೆ ಕೊಡಲು ಸಾಧ್ಯ? ಅನುಭವಿಸುವುದು ಮುಖ್ಯವಷ್ಟೆ.

22 ಕಾಮೆಂಟ್‌ಗಳು:

ಪೂರ್ಣಿಮಾ ಭಟ್ಟ, ಸಣ್ಣಕೇರಿ ಹೇಳಿದರು...

I agree!

ತೇಜಸ್ವಿನಿ ಹೆಗಡೆ- ಹೇಳಿದರು...

ಹ್ಮ್ಂ... ಇದು ನಿಜವಾದ "ವಿಕಾಸವಾದ". ಹಿಂದಿನ ಪೋಸ್ಟಿನಲ್ಲಿ ಸಾವು-ನೋವು-ಗೋಳು ಎಂದೆಲ್ಲಾ ಬರೆದದ್ದು ನೋಡಿ ಗೊಂದಲಕ್ಕೊಳಗಾಗಿದ್ದೆ...:)

ನಿಜ. ಪುಸ್ತಕದಂತಹ ಅತ್ಯುತ್ತಮ ಮಿತ್ರ ಬೇರೊಬ್ಬನಿಲ್ಲ. ನಾವು ಬೇಕೆಂದಾಗ, ಬೇಕಾದಲ್ಲಿ, ಬೇಕಾದ ರೀತಿಯಲ್ಲಿ ನಮಗೆ ಒದಗುವ ಏಕೈಕ ಸಾಥಿ ಪುಸ್ತಕವೊಂದೇ. ಉತ್ತಮ ಪುಸ್ತಕ ಎಂದೂ ಯಾರನ್ನೂ ಕೈ ಬಿಡುವುದಿಲ್ಲ. ಪ್ರತಿದಿನ ೩ ತಾಸು ಓದಿಗಾಗಿ ಮೀಸಲಿಡುವ ನಿನ್ನ ಯತ್ನಕ್ಕೆ ಬಹು ಮೆಚ್ಚುಗೆಯಾಯಿತು...ಜೊತೆಗೆ ಸ್ವಲ್ಪ ಮಾತ್ಸರ್ಯ ಕೂಡ :)

[ಅಂದ ಹಾಗೆ ಒಂದು ದಿನ ‘ಅವಳ’ ಜೊತೆಗೂ ಪುಸ್ತಕವೊಂದನ್ನು ಓದುತ್ತಾ ಹೋಗುವ ಭಾಗ್ಯ ಬೇಗ ಬರಲೆಂದು ಹಾರೈಸುವೆ... :-p]

ಶಂಕರ ಪ್ರಸಾದ ಹೇಳಿದರು...

ನಿಜ ವಿಕ್ಕಿ,
ಬಿಎಂಟೀಸಿ ಡ್ರೈವರುಗಳಿಗೆ ನೀನು ಈ ವಿಚಾರಕ್ಕಾದ್ರೂ ಥ್ಯಾಂಕ್ಸ್ ಹೇಳಬೇಕು.
ನಾವು ದಿನಾಲು ಆಫೀಸಿಗೆ ನಮ್ಮ ಬೈಕನ್ನು ಓಡಿಸಿ ಓಡಿಸಿ, ಮನೆಗೆ ಬಂದೊಡನೆ ಉಂಡು ಮಲಗೋ ಸನ್ನಾಹದಲ್ಲಿ ಇರ್ತೀವಿ.
ಧೂಳು ಹಿಡಿದು ಕೂತಿದ್ದ ಪುಸ್ತಕಗಳಿಗೆ ಪುನಃ ಗಾಳಿ ಕುಡಿಯುವ ಸಂದರ್ಭ ಸಿಕ್ಕಿದೆ.

PS : ಬಹಳ ವರ್ಷದ ತರುವಾಯ ಪುನಃ ಕಾರಂತರ "ಮರಳಿ ಮಣ್ಣಿಗೆ", ಹಾಗು ಹೊಸತಾಗಿ ಕುಂ ವೀರಭದ್ರಪ್ಪ ನವರ "ರಾಯಲ ಸೀಮಾ", ಹಾಗು ಸ್ವಾಮಿ ರಾಮ್ ರವರ "ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ" ಓದಿ ಮುಗಿಸಿದೆ. "ರಾಯಲ ಸೀಮಾ" ಓದು, ಚೆನ್ನಾಗಿದೆ.

ಕಟ್ಟೆ ಶಂಕ್ರ

shivu ಹೇಳಿದರು...

ನಾನ್ಯಾವಾಗ ಈ ರೀತಿ ಪುಸ್ತಕ ಹಿಡಿದು ಕೂರುವುದು. ಬಹುಶಃ ನಮ್ಮ ರಸ್ತೆಯಲ್ಲಿ ಮೆಟ್ರೋ ರೈಲು ಓಡಾಡುವಾಗ ಸಾಧ್ಯವಾಗಬಹುದೇನೋ..ಈ ವಿಚಾರದಲ್ಲಿ ನೀವು ಮುಂದಿದ್ದೀರಿ..

roopa ಹೇಳಿದರು...

ವಿಕಾಸ್ ಅವರೆ ,
ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ.ಪುಸ್ತಕ ಓದುವಾಗಿನ ಸುಖ ವರ್ಣನೆಗೆ ಸಿಲುಕದಷ್ಟು . ನೀವು "ಅವಳ ಒಡನೆ ಓದ ಬೇಕು" ಎ೦ದು ಹೇಳಿದ್ದು ನಿಮ್ಮ ದುಬಾರಿ ಕನಸು ಎ೦ದು ಕಾಣುತ್ತದೆ.:-) :-) :-) ..ಆ ದುಬಾರಿಯಾದ ಕನಸು ನನಸಾಗಲಿ ಎ೦ದು ಹಾರೈಸುತೇನೆ. ಯಾವಾಗಿನ ಹಾಗೆ ಒಳ್ಳೆಯ ಬರಹ.

Sree ಹೇಳಿದರು...

bookku, vajra - samepinchu! aadre bus'u jayanagara-gandhibazar sambhramadalli bartirOvaaga kiTakiyindaache kaNNu eLyatte. biTre volvlo rideu best time to catch up on reading:)
bike biTTu bus hattiddakke ondu ispeciall shabhash!:))

ವನಿತಾ / Vanitha ಹೇಳಿದರು...

wow...good to know that u have got volvo bus to ur work place:)
ನಾನು ಕೂಡ ಬಸ್ ನಲ್ಲಿ ಓದೋ ಜಾತಿ..ಬರೀ ೧೦ ನಿಮಿಷ ಮನೆಯಿಂದ ಆಫೀಸ್ ಗೆ, ಒಂದು ದಿನ 'thousand splendid suns' ಓದ್ತಾ ಇದ್ದೆ..ಸಡನ್ ಆಗಿ ಕಣ್ಣಲ್ಲಿ ನೀರು!!!..ಯಾರೂ ನೋಡ್ತಿಲ್ಲ ಎಂದು ಖಚಿತಪಡಿಸ್ಕೊಂಡು ಬುಕ್ ಬ್ಯಾಗ್ ಸೇರಿತು..Enjoy reading:)

Chaithrika ಹೇಳಿದರು...

Good one.

Nanage pusthaka oduvaaga bus swalpa kulukaadidaroo hotte tholesidanthagutthade. Eshto saari odalu horatu sothiddene. Nimage odalu sadhya vaaguvudu nanna drishtiyinda ondu bhagya.

sunaath ಹೇಳಿದರು...

ಬಸ್ಸುಗಳಲ್ಲಿ ಅಲ್ಲದೆ, ಬೇರೆಲ್ಲಿ ಪುಸ್ತಕ ಓದಲು ಆದೀತು?
ಅದಕ್ಕಾದರೂ ಬಸ್ಸುಗಳಲ್ಲಿ ಓಡಾಡಬೇಕು!

ರಾಜೀವ ಹೇಳಿದರು...

ಇತ್ತೀಚಿಗೆ ಒಂದು ಪುಸ್ತಕ ಓದಿ ಮುಗಿಸುವುದಕ್ಕೆ ಒಂದು ವರುಷ ಬೆಕಾಗುತ್ತಿದೆ ನನಗೆ :-(
ನನ್ನ ಮನೆಯಿಂದ ಕಛೇರಿಗೆ ವಜ್ರ ಸಾಗುವುದಿಲ್ಲ. ಹೀಗೆಲ್ಲಾ ಬರೆದು ನನ್ನ ಹೊಟ್ಟೆ ಉರಿಸ್ಬೇಡ್ರಿ ವಿಕಾಸ್ ;-)

ಸುಪ್ತವರ್ಣ ಹೇಳಿದರು...

ಈ ಮಟ್ಟಿಗೆ ನಾನು ದುರದೃಷ್ಟವಂತ. ಬಸ್ಸಲ್ಲಿ ಕೂತು ಪುಸ್ತಕವನ್ನು ಸುಮ್ಮನೆ ದಿಟ್ಟಿಸಿದರೂ ಸಾಕು, ನನಗೆ ತಲೆನೋವು ಬಂದೇ ಬಿಡುತ್ತದೆ!

Lakshmi S ಹೇಳಿದರು...

ಜೀವಾತ್ಮಗಳಿಗೆ ಮೋಕ್ಷ ಇದೆ ಅಂತ ಗೊತ್ತಿತ್ತು...ನಿಮ್ಮಿಂದ ಪುಸ್ತಕಗಳಿಗೂ ಮೋಕ್ಷ ಸಿಗುತ್ತಿದೆ, ಪುಸ್ತಕಗಳಿಗೆ ಮೋಕ್ಷ ಕೊಡುವುದು ಸಾಧ್ಯ ಅಂತ ಕೇಳಿ ಇದೊಂದು ಹೊಸ ಸಿದ್ಧಾಂತವೆಂದೆಣಿಸಿ, ಇದರ ಬಗ್ಗೆ ಸಂಶೋಧನೆ ಮಾಡುವ ನಿರ್ಧಾರ ಮಾಡಿದ್ದೇನೆ. ಎಮ್.ಫಿಲ್ಲು ಮುಗಿಯಲಿ, ಆಮೇಲೆ ಈ ವಿಷಯಕ್ಕೇನೆ ಮೋಕ್ಷ :p

ಹೋದ ಪೋಸ್ಟಿನ ಹಾಗೆ ಸಧ್ಯ heart attack ಮಾಡಿಸಿಲ್ಲವಾದ್ದರಿಂದ ನೀವು ನೀವೆ ಎಂದು ನಮಗೆ ಧೃಡವಾಗಿದೆ :D

Parisarapremi ಹೇಳಿದರು...

ಹುಷಾರು ಕಣ್ರೀ, ಬಸ್ಸಲ್ಲಿ ಹೆಚ್ಚಿಗೆ ಓದ್ಬೇಡಿ! ಕಣ್ಣು ಹಾಳಾಗುತ್ತೆ!! :-D

ಸುಶ್ರುತ ದೊಡ್ಡೇರಿ ಹೇಳಿದರು...

But I dont like reading in buses. ನಂಗೆ ಕಿಟಕಿ ಪಕ್ಕ ಕೂತು ಹೊರಗಡೆ ನೋಡ್ತಿರೋದೇ ಇಷ್ಟ. ಆ ಚಲಿಸೋ ಚಿತ್ರಗಳಲ್ಲಿ ನನ್ನ ಜ್ಞಾನಕ್ಕೆ-ಮನಸ್ಸಿಗೆ ಪುಸ್ತಕದಲ್ಲಿರೋದಕ್ಕಿಂತ ಹೆಚ್ಚಿನ ಐಟೆಮ್ಸ್ ಸಿಕ್ತಾವೆ.

ಸುಮ ಹೇಳಿದರು...

ಸುಶ್ರುತ ಹೇಳಿದಂತೆ ನನಗೂ ಬಸ್ಸಿನಲ್ಲಿ ಕಿಟಕಿಯಿಂದ ಹೊರನೋಡುತ್ತಾ ಕೂರುವುದು , ಬಸ್ಸು ಹತ್ತಿಳಿಯುವ ವಿವಿಧ ರೀತಿಯ ಜನರನ್ನು ಗಮನಿಸುವುದು ಇಷ್ಟ. ಓದಬೇಕೆಂದುಕೊಂಡರೂ ಸಾಧ್ಯವಾಗುವುದಿಲ್ಲ. ನಿಮಗೆ ಸಾಧ್ಯವಾಗುತ್ತದಲ್ಲ! ಗ್ರೇಟ್.

ದಿನಕರ ಮೊಗೇರ.. ಹೇಳಿದರು...

ಸಮಯ ಎಲ್ಲಿ ಸಿಕ್ಕರೂ ಅಮೂಲ್ಯವೇ..... ಸದುಪಯೋಗ ಪಡಿಕೊಂಡಿದ್ದೀರಿ.... ಚೆನ್ನಾಗಿದೆ ನಿಮ್ಮ ನಿರೂಪಣೆ ....

shreeshum ಹೇಳಿದರು...

ಒಂಥರಾ ಮಜ ಬರದ್ದೇ ವಿಕಾಸ ಓದೋದನ್ನ. ರವಿ ಬೆಳೆಗೆರೆ ಸ್ಟೈಲ್ ಬಹಳ ಬ್ಬೈಂಡಪ.. ಅಥವಾ ಯನಗೆ ಹಂಗೆ ಅನ್ಸಿತ್ತಾ ಯಂತ.

ಶ್ರೀನಿಧಿ.ಡಿ.ಎಸ್ ಹೇಳಿದರು...

ನಿನ್ನ ದಿವ್ಯ ಬರವಣಿಗೆ ಓದಿ, ಮನಸ್ಸು ಪ್ರಫುಲ್ಲ!:D ಶ್ರೀಶಂ ಜೀ, ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತ.

ಓದಪಾ ಓದು, ನಾನು ದಿನಾ ಒಂದ್ ತಾಸು ಮನೆಲೇ ಏನಾರೂ ಓದ್ತಿ, ಆದ್ರೆ, ಈ ಸಿನಿಮಾ ನೋಡ ಚಟ ಶುರುವಾಗಿ ಸ್ವಲ್ಪ ಸಮಸ್ಯೆ ಆಯ್ದು..

ಅನಾಮಧೇಯ ಹೇಳಿದರು...

ನಾನು ಮತ್ತೆ ಓದ್ಲಿಕ್ಕೆ ಶುರು ಮಾಡಬೇಕು ಅಂದುಕೊಳ್ಳುತ್ತ ೩-೪ ತಿಂಗಳು ಆಯ್ತಪ್ಪೊ! ನಿನ್ನ ಬರವಣಿಗೆಯಿಂದ ಪ್ರೇರಣೆ ಪಡೆದು ಮತ್ತೆ ಓದಲು ಶುರುಮಾಡುತ್ತೇನಾ? ಕಾದು ನೋಡಬೇಕು!!!! ಹಾಗೇನಾದ್ರು ಆದ್ರೆ ನೀನು ಫಲಶ್ರುತಿ ಅಂತಾ ಮತ್ತೊಂದು ಲೇಖನ ಬರೆಯಬಹುದು!
ವಿನಾಯಕ ಕೋಡ್ಸರ

ಲೋದ್ಯಾಶಿ ಹೇಳಿದರು...

BMTC ವಜ್ರಕ್ಕೆ ಜೈ.

ಬಸ್ಸಲ್ಲಿಯೂ ನಿಲ್ಲಿಸದೇ ಓದಿದ್ದು ಅಂದ್ರೆ "FPS" ಅನ್ಸುತ್ತೆ. :) ಪುಸ್ತಕವನ್ನ ಓದಲಿಲ್ಲ ಅದೇ ಓದಿಸಿ ಕೊಂಡಿತ್ತು.

ಅನಾಮಧೇಯ ಹೇಳಿದರು...

ವಜ್ರದೊಳಗಿನ ಓದು ಕಾನ್ಸೆಪ್ಟು ಸಕ್ಕತ್..

ತೀರ್ಥಹಳ್ಳಿಯವನಾದ ಶ್ರೀಹರ್ಷ ಹೆಗಡೆ ಅನ್ನುವ ಗೆಳೆಯನಿದ್ದಾನೆ.. ಆತನದಂತೂ ನಿಮ್ಮದಕ್ಕಿಂತ ಸೂಪರ್. ಬಿ.ಎಮ್.ಟಿ.ಸಿ. ಬಸ್ಸಲ್ಲಿ, ವಿಥೌಟ್ ಏಸೀಲಿ, ಒಂದ್ಕೈಲಿ ಬಸ್ಸಿನ ರೈಲಿಂಗು, ಇನ್ನೊಂದ್ರಲ್ಲಿ ಕನ್ನಡ ಬುಕ್ಕು ಹಿಡ್ಕಂಡು, ನೇತಾಡ್ಕೊಂಡು, ಜೋತಾಡ್ಕಂಡು, ಕಲವ್ ಸಲ ಫುಟ್ ಬೋರ್ಡಲಿ, ಯಾರೇ ವಿಚಿತ್ರವಾಗಿ ನೋಡಲಿ.. ಕನ್ನಡ ಪುಸ್ತಕವನ್ನು ಮಜವಾಗಿ ಓದ್ತಾನೆ... ಪರ್ವದಂಥಾ ಪರ್ವತದಗಲದ ಪುಸ್ತಕವನೂ ಬಿ.ಎಮ್.ಟಿ.ಸಿ. ಬಸ್ಸಲ್ಲಿ ಓದಿ ಮುಗ್ಸಿದಾನೆ..

ನಾನು ಸದಾ ಅನ್ನುತ್ತಿರ್ತೇನೆ.. ಕನ್ನಡ ಲೇಖಕರಿಗೆ ನಿನ್ನದು "ಸ್ಟಾಂಡಿಂಗ್ ಅವೇಶನ್" ಬಿಡಯ್ಯ ಅಂತ ನನಗೆ ಹಾಗೆ ಓದಲಾಗದ ಹೊಟ್ಟೆಕಿಚ್ಚಲಿ..:)

ವಿ.ರಾ.ಹೆ. ಹೇಳಿದರು...

@ಪೂರ್ಣಿಮಾ, yes, u have to :)

@ತೇಜಸ್ವಿನಿ, ೩ ತಾಸು ಸಿಕ್ಕಿದ್ರೂ ಕೂಡ ಅದ್ರಲ್ಲಿ productive hours ೨ ತಾಸು ಸಿಕ್ರೆ ಹೆಚ್ಚು !
ಮಾತ್ಸರ್ಯ ಅರಿಷಡ್ವರ್ಗಗಳಲ್ಲಿ ಒಂದು. ಅದನ್ನು ಬಿಟ್ಟರೆ ಒಳ್ಳೇದು.:-) ನಿಮ್ಮ ಹಾರೈಕೆಗೆ ಥ್ಯಾಂಕ್ಸ್.

@ಶಂಕರಣ್ಣ, ನೀವ್ ಹೇಳಿದ್ದು ಹೌದು ನೋಡಿ. ನಿಮ್ಮ ಸಲಹೆ taken. thanks

@ಶಿವು, ಮೆಟ್ರೋ ರೈಲು ಭಾಳ ಫಾಸ್ಟು ಸಾರ್, ಅದ್ರಲ್ಲಿ ಹಿಂಗೆಲ್ಲಾ ಕೂತು ಸಾವಧಾನವಾಗಿ ಓದೋಕಾಗಲ್ಲ. ಇಳಿಯೋ ಸ್ಟಾಪು ಬಂದುಬಿಡ್ತದೆ. :-)

@ರೂಪಾ, ಥ್ಯಾಂಕ್ಯು, ದುಬಾರಿ ಕನಸು ನನಸಾಗೋ ಹಾರೈಕೆಗೆ ಮತ್ತೊಂದು ಥ್ಯಾಂಕ್ಸ್ :)

@ಶ್ರೀಮಾತಾ, ಕರೆಕ್ಟ್ , ನಿಮ್ಮ ಶಭಾಷ್ ಗೊಂದು ಥ್ಯಾಂಕ್ಸ್

@ವನಿತಾ, thank you...


@ಚೈತ್ರಿಕಾ, ಹ್ಮ್.. ಒಬ್ಬೊಬ್ಬರಿಗೊಂದುದು ತರಹ ಭಾಗ್ಯ. :)

@ಸುನಾಥ, ಹಾಗಂತೀರಾ? ಹೌದು :)

@ರಾಜೀವ, ಹ್ಹ ಹ್ಹ. ಅದಕ್ಕೇ ಹೇಳೋದು ಎಲ್ಲಾ ಪಡ್ಕೊಂಡು ಬಂದಿರ್ಬೇಕು ಅಂತ :)

@ಸುಪ್ತವರ್ಣ, ಛೇ, ಅನ್ಯಾಯ :(

@ಲಕ್ಷ್ಮಿ, ಜೀವಾತ್ಮಗಳಿಗೆ ಜನನಮರಣಗಳ ಸೈಕಲ್ ನಿಂದ ತಪ್ಪಿಸಿಕೊಂಡರೆ ಮೋಕ್ಷ ಅಂತೆ, ಅದೇ ರೀತಿ ಪುಸ್ತಕಗಳಿಗೆ ಓದಿಸಿಕೊಂಡರೆ ಅವು ಹುಟ್ಟಿದ ಉದ್ದೇಶ ಸಫಲವಾಗಿ ಮೋಕ್ಷ ಸಿಕ್ಕು ಮರುಜನ್ಮ ಇರೋದಿಲ್ವಂತೆ. ಈ ವಿಷ್ಯ abstract ಆಗಿಟ್ಟುಕೊಂಡು ೪ರಲ್ಲಿ ಒಂದು PhD ಮಾಡ್ಕೊಳ್ಳಿ :)

@ಪರಿಸರ, ನನ್ ಕಣ್ಣು ಇಸ್ಟ್ರಾಂಗು, ಆದ್ರೂ ನಿಮ್ ಎಚ್ಚರಿಕೆ ಕನ್ಸಿಡರ್ಡು

@ಸುಶ್ರುತ, @ಸುಮ, ಅದು ನಂಗೂ ಇಷ್ಟನೇ, ಆದ್ರೆ ತೀರಾ ದಿನಾ ಒಂದೇ ರೂಟಲ್ಲಿ ತಿಂಗ್ಳಾನುಗಟ್ಲೆ, ವರ್ಷಗಟ್ಲೆ ಮೂರ್ಮೂರು ತಾಸು ಅದನ್ನೇ ನೋಡಕ್ಕಾಗಲ್ಲ ಕಣ್ರೀ. ನಾ ಪುಸ್ತಕ ಓದ್ತಾ ಇದ್ರೂ ಮಧ್ಯ ಮಧ್ಯ ಅದನ್ನ ಮಾಡ್ತಾನೇ ಇರ್ತೀನಿ. thanks

@ದಿನಕರ, thank you.

@ಶ್ರೀ ಶಂ, ಹೌದಾ? ಸ್ಟೈಲ್ ಹಂಗೇ ಬಂದಿಕ್ಕು, ಅಥವಾ ನಿಂಗೇ ಹಂಗೆ ಅನ್ಸಿಕ್ಕು, ಎರಡೂ ಸಾಧ್ಯತೆ ಇದ್ದು :)

@ಶ್ರೀನಿಧಿ, :-) ಒಳ್ಳೇ ಸಿನೆಮಾ ನೋಡೋ ಚಟ ಇದ್ರೆ ಅಡ್ಡಿಲ್ಲೆ .

@ಕೋಡ್ಸರ, ಓದಕ್ ಶುರುಮಾಡದ್ ಹೆಚ್ಚೋ, ನಾ ಫಲಶ್ರುತಿ ಬರಿಯದು ಹೆಚ್ಚೋ. ಶುರುಮಾಡು.

@ಲೋದ್ಯಾಶಿ, ಬೇರೆದೂ ಪ್ರಯತ್ನಿಸಿ. FPSಗಿಂತ ಇಂಟರೆಸ್ಟಿಂಗ್ ಪುಸ್ತಕಗಳಿವೆ.

@ರಂಜಿತ್, ಹ್ಹ ಹ್ಹ. ಸ್ಟಾಂಡಿಂಗ್ ಅವೇಶನ್:) ನಂದೊಂದು ನಮಸ್ಕಾರ ತಿಳಿಸಿ ಅವ್ರಿಗೆ. thank you.