ಪುಟಗಳು

ಬುಧವಾರ, ಫೆಬ್ರವರಿ 17, 2010

HAL Museum ನೋಡಿದೆ

V: ಮತ್ತೆ.. ಹೇಗಿತ್ತು ವೀಕೆಂಡು?

ನಾನು: ಇವತ್ತಾಗಲೇ ಬುಧವಾರ ಆಯ್ತು, ಈಗ ಕೇಳ್ತಾ ಇದ್ದೀಯ?

V: ಯಾವತ್ತಾದ್ರೇನು? ಈಗೇನ್ ಹೇಳ್ತಿಯೋ ಇಲ್ವೋ.

ನಾನು: ಇರ್ಲಿ ಸಮಾಧಾನ, ಹೇಳ್ತೀನಿ ನಂಗೇನು, ಕೇಳೋದು ನಿನ್ ತಾನೇ. ವೀಕೆಂಡು ಸ್ಪೆಷಲ್ ಏನಿಲ್ಲ. ಹಿಂಗೆ ಸುತ್ತಾಡಿದ್ದಷ್ಟೇ.

V: ಅದೇ ಕೇಳಿದ್ದು, ಎಲ್ಲಿ ಸುತ್ತಿದೆ ಅಂತ.

ನಾನು: ಶನಿವಾರ ಆಫೀಸ್ಗೆ ಹೋಗಿದ್ದೆ. ಕೆಲಸ ಜಾಸ್ತಿ ಇತ್ತು. ಹೋಗಲೇ ಬೇಕಿತ್ತು.

V: ಸರಿ, ಭಾನುವಾರ?

ನಾನು: ಹಾಂ, ಭಾನುವಾರದಲ್ಲಿ ಸ್ಪೆಷಲ್ ಇದೆ. ಹೇಳ್ತೀನಿ.

V: ಹುಂ...

ನಾನು: ಸುಮಾರು ೬ ತಿಂಗಳ ಹಿಂದೆ ಲಕ್ಷ್ಮಿಯವರ ಪಿಕಾಸಾ ಆಲ್ಬಂ ನೋಡ್ತಾ ಇದ್ದೆ. ಅದರಲ್ಲಿ ಅವರು ಹೆಚ್.ಎ.ಎಲ್. ಮ್ಯೂಸಿಯಂ ಫೋಟೋಸ್ ಹಾಕಿದ್ರು.

V: ಅವ್ರು ಇನ್ನೂ ಸುಮಾರೆಲ್ಲ ಫೋಟೋ ಹಾಕಿದಾರೆ. ಅದ್ಕೆ ?

ನಾನು: ಸ್ವಲ್ಪ ಹೇಳೋತನ್ಕ ...ಂಡು ಕೇಳು.

V: ಸರಿ.

ನಾನು: ಆ ಫೋಟೋಗಳನ್ನ ನೋಡಿ ನಂಗೂ ಕೂಡ ಅಲ್ಲಿಗೆ ಹೋಗ್ಬೇಕು ಅಂತ ಆಸೆ ಆಗಿತ್ತು. ಯಾವಾಗ ಟೈಂ ಸಿಗುತ್ತೋ ಅಂತ ಕಾಯ್ತಾ ಇದ್ದೆ. ಆದ್ರೆ ಹಂಗೇ ಹೋಗ್ಬೇಕು ಹೋಗ್ಬೇಕು ಅನ್ಕೊಂಡು ಮರ್ತೋಗಿತ್ತು.

V: ಆ ಮ್ಯೂಸಿಯಂಲ್ಲಿ ಏನ್ ವಿಶೇಷ ಅಷ್ಟೊಂದು?

ನಾನು: ಏನ್ ವಿಶೇಷನಾ? ಎಲ್ಲಾ ವಿಶೇಷನೇ ಅಲ್ಲಿ. ಅದು ವಿಮಾನಗಳ ಮ್ಯೂಸಿಯಂ. HAL heritage museum ಅಂತ.

V: ಸರಿ. ಮರ್ತೋಗಿತ್ತು ಅಂದ್ಯಲ್ಲ ಮತ್ತೆ ಹೇಗೆ ನೆನಪಾಯ್ತು.

ನಾನು: ಒಹ್, ಅದಾ, ಯಾದ್ ವಶೇಮ್ ಪುಸ್ತಕ ಓದಿದ್ನಲ್ಲ.

V: ಹುಂ. ಓದಿ ಅದೇನೋ ಇಷ್ಟುದ್ದ ಬ್ಲಾಗ್ ಬೇರೆ ಬರ್ದಿದ್ದಿಯಲ್ಲ.

ನಾನು: ಯೆಸ್.. ಆ ಪುಸ್ತಕದಲ್ಲಿ HAL ವಿಷ್ಯ, ಅದು ಸ್ಥಾಪನೆಯಾಗಿದ್ದು, ಆ ಘಟನೆಗಳು ಎಲ್ಲಾ ಬರತ್ತೆ. ಅದನ್ನ ಓದಿ ಮತ್ತೆ ನೆನ್ಪಾಗಿತ್ತು. ಹೋಗಲೇಬೇಕು ಅಂತ ಅನ್ನಿಸ್ಬಿಡ್ತು.

V: ಮತ್ತೆ ನೀನು HAL ನಲ್ಲಿ ಪ್ರಾಜೆಕ್ಟ್ ಮಾಡ್ತೀನಿ ಅಂತ ೩ ತಿಂಗ್ಳು ಮಣ್ಣು ಹೊತ್ತಿದ್ಯಲ್ಲ , ಆಗ ಆ ವಿಷ್ಯ ಗೊತ್ತಿರ್ಲಿಲ್ವಾ?

ನಾನು: ಇಲ್ಲ, ಆವಾಗಿನ್ನೂ ಹುಡುಗ್ ಬುದ್ದಿ ನೋಡು, ಯಾವಾಗ್ ಹೊರಗ್ಬರ್ತಿವೋ, ಊರ್ ಸುತ್ತಕ್ಕೆ ಹೋಗ್ತಿವೋ ಅಂತಿದ್ವಿ. ಪಕ್ಕದಲ್ಲೇ ವಿಮಾನ ನಿಲ್ಸಿದ್ರೂ ಅದರ ಕಡೆಗೆ ಜಾಸ್ತಿ ಗಮನ ಕೊಡದೆ ಬೇರೆ ಕಡೆ ಗಮನ ಕೊಡ್ತಿದ್ವಿ.

V: :-)

ನಾನು: :-)

V: ಮುಂದೆ?

ನಾನು: ಅದೇ ಮೊನ್ನೆ ಭಾನುವಾರ ಹೋಗೋಣ ಅನ್ಕೊಂಡೆ. ಒಬ್ನೇ ಹೋಗಕ್ಕೆ ಬೇಜಾರು. ಅದಕ್ಕೆ ಯಾರಾದ್ರು ಹುಡುಗ್ರನ್ನ ಟೈ ಅಪ್ ಮಾಡ್ಕಬೇಕು ಅನ್ಕೊಂಡು ಕೇಳಿದೆ ಹುಡುಗ್ರನ್ನ.

V: ಯಾರೂ ಬರಕ್ಕೆ ರೆಡಿ ಆಗ್ಲಿಲ್ಲ ಅಲ್ವಾ? :)

ನಾನು: ಹುಂ. ನಿಂಗೆ ಹೆಂಗೆ ಗೊತಾಯ್ತು?!

V: ನಂಗೊತ್ತಿಲ್ವಾ ನಿಮ್ ಹುಡುಗ್ರ ಹಣೆಬರ, ನಿಂ ಹುಡುಗ್ರು ಸಿನೆಮಾಗೆ ಹೋಗಣ ಅಂದ್ರೆ ಅಲ್ಲೇ ಗಾಡಿ ತಿರುಗಿಸಿ ಹೊರಟುಬಿಡ್ತಾರೆ. ರಾತ್ರಿ ಇನ್ನೆಲ್ಲೋ ಹೋಗಾಣ ಅಂದ್ರೆ ಸಂಜೆನೇ ಜರ್ಕಿನ್ ಹಾಕ್ಕೊಂಡು ರೆಡಿಯಾಗ್ಬಿಡ್ತಾರೆ. ಇಂತ ಕಡೆ ಹೋಗೋಣ ಅಂದ್ರೆ ಮಾತ್ರ ಯಾರೂ ಬರಲ್ಲ.

ನಾನು: ಹೌದು. :(

V: ಪಾಪ, ಮತ್ತೇನ್ ಮಾಡಿದೆ?

ನಾನು: ನಂಗೆ ಕಿಣಿ ನೆನಪಾಯ್ತು. ಅವನಿಗೆ ಫೋನ್ ಮಾಡಿದೆ. ಅವನಿಗೆ ಇಂತದ್ರಲ್ಲೆಲ್ಲಾ ಸ್ವಲ್ಪ ಆಸಕ್ತಿ ಇದೆ. ಅದೂ ಅಲ್ದೇ ನಮ್ದೇ ಸಬ್ಜೆಕ್ಟು ಅವನದ್ದೂ. ಈ ತರ ಜಾಗಗಳಿಗೆಲ್ಲಾ ಹೋಗ್ಬೇಕಾದ್ರೆ ಸ್ವಲ್ಪ ಇದರ ಬಗ್ಗೆ ಜ್ಞಾನ ಇರೋರನ್ನ ಕರ್ಕೊಂಡೋದ್ರೆ ನೋಡ್ತಾ ನೋಡ್ತಾ ಚರ್ಚೆ ಮಾಡಕ್ಕೆ ಚೆನ್ನಾಗಿರತ್ತೆ.

V: ಕಿಣಿ ಇರೋದು ತ್ಯಾಗರಾಜ ನಗರ ಅಲ್ವಾ? ಬರ್ತೀನಿ ಅಂದ್ನಾ.

ನಾನು: ಹುಂ. ಅವನೂ ಫ್ರೀ ಇದ್ದ. ಸರಿ, ಸೀದಾ ಮ್ಯೂಸಿಯಂಗೇ ಬರ್ತೀನಿ, ನೀನೂ ಬಂದ್ಬಿಡು ಅಂದ.

V: ಗುಡ್, ಆಮೇಲೆ?

ನಾನು: ಮದ್ಯಾನ ಊಟ ಮಾಡಿ ಬೈಕ್ ಹತ್ತಿದೆ. ಹಂಗೇ ಕಾರ್ಪೋರೇಷನ್ ದಾಟಿ , ಎಂ.ಜಿ.ರೋಡ್ ದಾಟಿ ಹೋದೆ ಹೋದೆ... ಹೋದೆ... ಹೋಗ್ತಾ ಇದ್ದೆ.. ಮುರುಗೇಶ್ ಪಾಳ್ಯದ ಹತ್ರ ಹೋಗ್ತಿದ್ದ ಹಾಗೇ ಕಿಣಿ ಫೋನ್ ಬಂತು. ನಾನು ಆಗ್ಲೇ ತಲುಪಿದ್ದೀನಿ, ಎಲ್ಲಿದ್ದೀಯಾ ನೀನು ಅಂದ. ಇಲ್ಲೇ ಇದ್ದೀನಿ ೫ ನಿಮಿಷ ಬಂದೆ ಅಂತ ಮಾಮೂಲಿ ಕಾಗೆ ಹಾರ್ಸಿ, ಹೆಚ್.ಎ.ಎಲ್. ಮೇನ್ ಗೇಟ್ ದಾಟಿ, ಫೌಂಡ್ರಿ ದಾಟಿ, ಹೆಲಿಕಾಪ್ಟರ್ ಡಿವಿಷನ್ ದಾಟಿ ಮಾರತ್ ಹಳ್ಳಿ ರಸ್ತೆಲ್ಲಿ ಹಾಗೇ ಮುಂದೆ ಹೋದ್ಮೇಲೆ ಅಂತೂ ತಲುಪಿದೆ. ನಮ್ಮನೆಯಿಂದ ಬರೋಬ್ಬರಿ ಇಪ್ಪತ್ತು ಕಿಲೋಮೀಟರು!

V: ಓಹ್ , ಅಲ್ಲಾ ಇರೋದು ಅದು?

ನಾನು: ಹುಂ. ಅಲ್ಲಿ ಬಸವ ನಗರ ಕಡೆಗೆ ಟರ್ನ್ ಇದೆ. ಅದರ ಪಕ್ಕದಲ್ಲೇ ಹೆಚ್.ಎ.ಎಲ್ . ಹೆರಿಟೇಜ್ ಮ್ಯೂಸಿಯಂ.

V: ಆಮೇಲೆ ?

ನಾನು: ಇನ್ನೇನು, ಸೀದಾ ಟಿಕೆಟ್ ಕೌಂಟರ್ ಗೆ ಹೋಗಿ ಟಿಕೆಟ್ ತಗಂಡ್ವಿ. ವಾರದ ಎಲ್ಲಾ ದಿನಗಳೂ ತೆರೆದಿರುತ್ತದೆ ಅಂತ ಬೋರ್ಡ್ ಹಾಕಿದ್ರು. ಟಿಕೇಟು ಒಂದಕ್ಕೆ ೨೫ ರೂಪಾಯಿ. ಕ್ಯಾಮೆರಾ ಇದ್ರೆ ಅದ್ಕೆ ೧೦ ರುಪಾಯಿ. ನಮ್ಮತ್ರ ಫೋನ್ ಕ್ಯಾಮರಾ ಇತ್ತು. ಅದ್ನ ಯೂಸ್ ಮಾಡ್ತೀರಾ ಅಂತ ಕೇಳ್ದ. ಇಲ್ಲ ಸಾರ್, ಜೇಬಿಂದ ಹೊರಗ್ ತೆಗೆಯೋದೆ ಇಲ್ಲ ಅಂದ್ವಿ. ೨೦ ರೂಪಾಯಿ ಉಳ್ತಾಯ ಆಯ್ತು. :)

V: ಆಹಾಹಾ, ದೊಡ್ಡ ಸಾಧನೆ ಬಿಡು. ಮನೆಲ್ಲೇ ಕೂತಿದ್ರೆ ಇನ್ನೂ ೫೦ ರೂಪಾಯಿ ಉಳ್ತಾಯ ಆಗಿರೋದಲ್ಲ.

ನಾನು: no jokes plz..

V: :D ಒಳಗೆ ಹೆಂಗಿದೆ , ಏನೇನಿತ್ತು?

ನಾನು: ಸೂಪರ್ರಾಗಿದೆ. ಕಳ್ದೋಗ್ಬಿಟ್ವಿ. ೪೦ ರ ದಶಕದಿಂದ ಇವತ್ತಿನವರೆಗೂ ಹೆಚ್.ಎ.ಎಲ್ ಗೆ related ಎಲ್ಲಾ ಅಪರೂಪದ ಫೋಟೋಗಳಿವೆ. ಬೇಜಾನ್ ಟೆಕ್ನಿಕಲ್ ವಿಷ್ಯಗಳು, ಎಲ್ಲಾ ವಿಮಾನಗಳ prototypes, models ಇವೆ. .HAL ತಯಾರು ಮಾಡಿರೋ ಪುಷ್ಪಕ್, ಕಿರಣ್, ಮರುತ್, MiG-21, Light Combat Aircraft, Bomber ಮುಂತಾದ ವಿಮಾನಗಳು ಮತ್ತು ಚೇತಕ್, ಚೀತಾ ಮುಂತಾದ ಹೆಲಿಕಾಪ್ಟರ್ ಗಳದ್ದು scaledown models, ಕೆಲವೊಂದು ೧:೧ ಮಾಡೆಲ್ ಗಳನ್ನೂ ಇಟ್ಟಿದ್ದಾರೆ. ಎಲ್ಲಾದನ್ನೂ ಮುಟ್ಟಿ, ಮೂಸಿ ನೋಡ್ಬೋದು. :)


V: ಸುಪರ್.. ಎಲ್ಲಾ ನೋಡಿದೆ ಅಂತೂ. ಎಷ್ಟೋ ದಿನಗಳ ಆಸೆ ಪೂರೈಸಿಕೊಂಡೆ.

ನಾನು: ಹೌದು. ಗುಬ್ಬಚ್ಚಿ ತರ ಇರೋ ವಿಶ್ವೇಶ್ವರಯ್ಯನವರ ಫೋಟೋ ನೋಡಿ ಎಷ್ಟು ಖುಷಿ ಆಯ್ತು ಗೊತ್ತಾ? ಸಂಜೆ ೫ ಗಂಟೆಗೆ ಬಾಗ್ಲಾಕ್ತೀವಿ ಅಂದ್ರು. ನಾವು ಅಲ್ಲೇ ಒಳಗಡೆ ಕ್ಯಾಂಟೀನಲ್ಲಿ ಕೆಟ್ಟದೊಂದು ಟೀ ಕುಡ್ದು ಹೊರಟ್ವಿ.

V: ಒಟ್ನಲ್ಲಿ ಚೆನ್ನಾಗಿತ್ತು ಅನ್ನು. ಒಂದು ಹೊತ್ತಿಗೇನೂ ಮೋಸ ಇಲ್ಲ.

ನಾನು: ಹೌದು. ಒಂದು ಹೊತ್ತಿಗೆ ಖಂಡಿತ ಮೋಸ ಇಲ್ಲ. ಫ್ಯಾಮಿಲಿ ಕರ್ಕಂಡೂ ಹೋಗ್ಬೋದು, ವಿಮಾನ ನೋಡಿ ಮಕ್ಳು ಮರಿನೂ ಖುಷಿ ಪಡ್ತವೆ. ಸುತ್ತಲೂ ಒಳ್ಳೇ ಲಾನ್ ಇದೆ. ಬಹಳ ಜನ ಫ್ಯಾಮಿಲಿ ಜೊತೆಗೇ ಬಂದಿದ್ರು ಅಲ್ಲಿ.

V: ಸರಿ, ಆಮೇಲೆ ಸೀದಾ ಮನೆಗೆ ಬಂದ್ರಾ?

ನಾನು: ಅದು ನಮ್ ಹಣೆಲ್ಲಿ ಬರ್ದಿಲ್ಲ. ಸುಮ್ನೆ ಮತ್ತೆ ಬಂದ ದಾರಿಲ್ಲೇ ಹೋಗೋದು ಬೇಡ, ಆಕಡೆ ಬಸವ ನಗರ, ವಿಜ್ಞಾನ ನಗರ ಎಲ್ಲಾ ನೋಡ್ಕೊಂಡು ಹೋಗಣ ಅಂತ ಆ ಕಡೆಯಿಂದ ಸುತ್ಕೊಂಡು ಅಲ್ಲೇ ಎಲ್ಲೋ ಬೇಕರಿಯಲ್ಲಿ ತಿಂಡಿ ತಿಂದ್ವಿ.

V: ಆಮೇಲೆ?

ನಾನು: ಆಮೇಲೆ, ನಿನ್ನ ದಾರಿ ನೀ ನೋಡ್ಕೋ , ನನ್ ದಾರಿ ನಾ ನೋಡ್ಕೋತೀನಿ ಅಂತ ಟ್ರಾಫಿಕ್ ನಲ್ಲಿ ಬೆರೆತು ಹೋದ್ವಿ.

V: ಅಂತೂ ಬೆಂಗಳೂರಿಗೆ ಬಂದು ಇಷ್ಟು ವರ್ಷ ಆದ್ಮೇಲೆ ನೋಡಿದೆ.

ನಾನು: ಹ್ಮ್.. ಇದೇ ತರ ಬೆಂಗಳೂರಲ್ಲಿ ನೋಡುವಂತದ್ದು ಇನ್ನೂ ತುಂಬಾ ಇದೆ. ಇಲ್ಲಿರೋರಿಗೇ ಸರಿಯಾಗಿ ಗೊತ್ತಿರಲ್ಲ. ಗೊತ್ತಿದ್ರೂ ಹೋಗಕ್ಕೆ ಮನಸು ಮಾಡೋಲ್ಲ.

V: hmm. ಪರ್ವಾಗಿಲ್ಲ. ಚೆನ್ನಾಗಿತ್ತು ನಿನ್ ಮ್ಯೂಸಿಯಂ.

ನಾನು: ಸರಿ.. ಮ್ಯೂಸಿಯಂ ಬಗ್ಗೆ ಜಾಸ್ತಿ ವಿಷಯ ಬೇಕಂದ್ರೆ ಇದನ್ನ ಓದು..
http://www.aeroinfo.org.in/india/halmuseum.html .

****************

ಈ Writing Style ಕೃಪೆ : Zindagi Calling blog :-)

11 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ- ಹೇಳಿದರು...

ಹ್ಮ್ಂ... ಅಂತೂ ಇಂತೂ ನೀನು copycat ಆದೆ ಅಂತಾಯ್ತು :) ಲಕ್ಷ್ಮಿ ಅವ್ರ ಹತ್ರ copy right ತಗೊಂಡಿದ್ದೀರಾ ಅಂದ್ಕೋತೀನಿ.. :-p ಹೊಸ ಹೊಸ ಪ್ರಯತ್ನ.. ಇರ್ಲಿ ಚೆನ್ನಾಗಿದೆ. ವಿಕಾಸವಾದಕ್ಕೆ ಅನ್ವರ್ಥವಾಗಿದೆ ಬಿಡಿ :)

ಶ್ರೀನಿಧಿ.ಡಿ.ಎಸ್ ಹೇಳಿದರು...

:D

ottu, ninge nin shailili baryad marthoidu heLaatu:D:D

Sree ಹೇಳಿದರು...

good boy! ee weekend bagge yaake ashTu particular aagi prashne kELdru gottaaytu thaane?:))

ಚಿತ್ರಾ ಹೇಳಿದರು...

ವಿಕಾಸ್,
ಚೆನ್ನಾಗಿತ್ತು . ಸಂಭಾಷಣೆಯ ರೂಪದಲ್ಲಿ ವಿವರಗಳು ! ನಾನು HAL museum ನೋಡಿಲ್ಲ . ಆದರೆ ಲೇಖನ ಓದುತ್ತಾ ೨೦೦೭ ರಲ್ಲಿ ಅಮೆರಿಕಾಕ್ಕೆ ಹೋದಾಗ ಸಿಯಾಟಲ್ ನಲ್ಲಿರ Flight Museum ಗೆ ಹೋಗಿದ್ದು ನೆನಪಾಯಿತು . ವಿಮಾನಗಳು ಹಾರಿ ಬಂದ ದಾರಿ .. ಎನ್ನಬಹುದೇನೋ . ರೈಟ್ಸ್ ಸಹೋದರರು ಆವಿಷ್ಕರಿಸಿದ ಮೊದಲ ವಿಮಾನದಿಂದ ಹಿಡಿದು , super Sonic ವಿಮಾನಗಳ ವರೆಗೆ ಎಲ್ಲ ಮುಖ್ಯ ವಿಮಾನಗಳ ಮಾಡೆಲ್ ಅಲ್ಲಿ ನೋಡ ಸಿಗುತ್ತವೆ. ಅವುಗಳಲ್ಲಿ ಕುಳಿತುಕೊಳ್ಳಬಹುದು .ಒಳಗೆ ಸೀಟ್, cock pit ಇತ್ಯಾದಿಗಳೂ ಆ ಕಾಲಕ್ಕೆ ಅನುಗುಣವಾಗಿ ಇವೆ. ಅಂದಿನ , ಗಗನ ಸಖಿಯರ , ಪೈಲಟ್ ಗಳ ಆಭೂಷಣ ,ಇತ್ಯಾದಿಗಳು ಬೆರಗುಗೊಳಿಸುತ್ತವೆ. ಯುದ್ಧ ವಿಮಾನಗಳ ಸಂಗ್ರಹ ಹಾಗೂ ಮಾಹಿತಿಯಂತೂ ಆಶ್ಚರ್ಯ ತರುತ್ತವೆ ! ಆ museum ಮೊದಲು ಬೋಯಿಂಗ್ ನವರ ಮೊದಲ ಕಾರಖಾನೆಯಾಗಿತ್ತಂತೆ. ಹಾಗಾಗಿ , ವಿಮಾನ ನಿರ್ಮಾಣ ಹಂತಗಳ drawing , blue print ಗಳನ್ನೂ ಸಹ ಜೋಪಾನವಾಗಿ ಪ್ರದರ್ಶಿಸಲಾಗಿದೆ .
ಲೇಖನ ಮತ್ತೊಮ್ಮೆ ನೆನಪುಗಳಿಗೆ ಜೀವ ತುಂಬಿತು

Parisarapremi ಹೇಳಿದರು...

Et tu Brute? (You too, Brutus?)

Chaithrika ಹೇಳಿದರು...

Thanks for the information. ಬೆಂಗಳೂರಿಗೆ ಇನ್ನೂ ಸ್ವಲ್ಪ ಹೊಸಬಳೇ ಎನ್ನಬಹುದಾದ ನನಗೆ ಇವೆಲ್ಲ ನೋಡಬೇಕೆಂದು ಆಸೆ ಹುಟ್ಟಿಸಿತು ಈ ಬರಹ.

ಶಂಕರ ಪ್ರಸಾದ ಹೇಳಿದರು...

ಲೇಖನ ಯಥಾ ಪ್ರಕಾರ ಚೆನ್ನಾಗಿದೆ. ಬರೆದ ರೀತಿ "ಜಿಂದಗಿ ಕಾಲಿಂಗ್", ಇದಕ್ಕೆ ಕ್ರೆಡಿಟ್ ಕೂಡಾ ಕೊಟ್ಟಿದೀಯ.
ಇದರ ಒಡತಿ ಲಕ್ಷ್ಮಕ್ಕ ಏನಂದ್ರು ಇದಕ್ಕೆ ?

Karthik ಹೇಳಿದರು...

nicely written... Thanks

ಜಲನಯನ ಹೇಳಿದರು...

ಹೆಗ್ಡೆಯವರೇ, ನಿಮ್ಮಲ್ಲಿಗೆ ಪ್ರಥಮ ಹೆಜ್ಜೆ..ಪ್ರಕಾಶ್ ಗೂ ನಿಮಗೂ ಈ ಸಂಭಾಷಣೆಯ ಸೈಲಿಯ ಬರಹ ಕೂಡಿ ಬರುತ್ತೆ ಅನ್ಸುತ್ತೆ...ಇದೂ ಒಂದು ರೀತಿ ಸಿದ್ಧಹಸ್ತತೆ...ಚನ್ನಾಗಿದೆ ವೀಕೆಂಡ್ ಲೋಕಾಭಿರಾಮ...

ಮನಮುಕ್ತಾ ಹೇಳಿದರು...

ಒಳ್ಳೆಯ ಮಾಹಿತಿಯುಕ್ತ ಬರಹ... ಹಿಡಿಸಿತು.
ಬರೆಯುತ್ತಿರಿ. ಧನ್ಯವಾದಗಳು.

ವಿ.ರಾ.ಹೆ. ಹೇಳಿದರು...

@ತೇಜಸ್ವಿನಿ ಹೆಗಡೆ, ಸ್ಟೈಲ್ ಗೆಲ್ಲಾ ಕಾಪಿರೈಟ್ಸ್ ಇರಲ್ಲ ಕಣ್ರೀ. ಆದ್ರೂ ತಗೊಂಡಿದ್ದೀನಿ ಅವರತ್ರ. :)

@ಶ್ರೀನಿಧಿ,:-)

@ಶ್ರೀ, thanks. ಅಯ್ಯೋ ನಮ್ಗೂ ಆ ಡೇಟ್ ಗೂ ಸಂಬಂಧ ಇಲ್ಲ ಬಿಡಿ :-)

@ಚಿತ್ರಾ, ಅಬ್ಬಾ, ಪುಣ್ಯವಂತರು ನೀವು. ಅದರ ಬಗ್ಗೆ ತಿಳಿಸಿಕೊಟ್ಟದ್ದಕ್ಕೆ ಥ್ಯಾಂಕ್ಸ್. ಎಂದಾದರೂ ನಾನು ಅಲ್ಲಿಗೆ ಹೋದ್ರೆ ನೋಡೇ ನೋಡ್ತೀನಿ!


@ಪರಿಸರ, is it a spam? any how wikipedia says "Brutus is the cognomen of the Roman gens Junia, a prominent family of the Roman Republic". :-)

ಚೈತ್ರಿಕಾ, ಕಾರ್ತಿಕ್, Thank u..

ಜಲನಯನ, ಮನಮುಕ್ತಾ, welcome & thankx. ಬರುತ್ತಿರಿ.

ಶಂಕರ್, thank u, ಅವರು ಚೆನ್ನಾಗಿ ಕಾಪಿ ಹೊಡೀತೀರಿ ಅಂದ್ರು :)