ಪುಟಗಳು

ಬುಧವಾರ, ಜನವರಿ 27, 2010

ಸಾವು

ಸಾವಿನ ಬಗ್ಗೆ ನೀವು ಯಾವಾಗಾದರೂ ಯೋಚಿಸಿದ್ದೀರಾ? ಕೆಲವರು ಯೋಚಿಸಿರಬಹುದು, ಕೆಲವರು ಈಗ್ಯಾಕೆ ಅವೆಲ್ಲಾ ಅನ್ನಬಹುದು. ಆದರೆ ಈ ಮಧ್ಯವಯಸ್ಸು ಅನ್ನುವುದು ಸಾವಿನ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಈ ವಯಸ್ಸಿನಲ್ಲೇ ಹೆಚ್ಚಿನ ಸಾವಿನ ಸುದ್ದಿಗಳನ್ನು ಕೇಳಬೇಕಾಗುತ್ತದೆ. ಕೆಲವರಿಗೆ ಅಪ್ಪ ಅಮ್ಮಂದಿರ ಸಾವನ್ನು ನೋಡಬೇಕಾಗುತ್ತದೆ. ನಾವು ಚಿಕ್ಕವರಿದ್ದಾಗಿನಿಂದ ನೋಡಿದ, ನಮ್ಮನ್ನು ಆಡಿಸಿದ, ಬೆಳೆಸಿದ ವ್ಯಕ್ತಿಗಳು ತೀರಿಕೊಳ್ಳುತ್ತಾರೆ. ನಾವು ಬಾಲ್ಯದಲ್ಲಿದ್ದಾಗ ನಮ್ಮ ತಂದೆತಾಯಿಯರು, ಸಂಬಂಧಿಕರು, ಆಪ್ತರನೇಕರು ಅವರ ಮಧ್ಯವಯಸ್ಸು ಮತ್ತು ಅದನ್ನು ದಾಟಿದ ಹಂತದಲ್ಲಿರುತ್ತಾರೆ. ನಾವು ಈ ವಯಸ್ಸಿಗೆ ಬರುವ ಹೊತ್ತಿಗೆ ಅವರಿಗೆ ವಯಸ್ಸಾಗಿರುತ್ತದೆ. ಗಟ್ಟಿಗಿತ್ತಿ ಅಮ್ಮ ತೀರಾ ಸುಸ್ತಾದವಳಂತೆ ಕಾಣುತ್ತಾಳೆ, ಸೂಪರ್ ಮ್ಯಾನ್ ಆಗಿದ್ದ ಅಪ್ಪನ ಹಣೆಯ ಮೇಲೆ ನೆರಿಗೆಗಳು ಮೂಡಿರುತ್ತವೆ. ಆಗ ಹೆದೆಯೇರಿಸಿದ ಬಿಲ್ಲಿನಂತಿದ್ದ ಮಾವನನ್ನು ಈಗ ಮುರುಟಿ ಹಾಸಿಗೆಯಲ್ಲಿ ಮಲಗಿರುವ ಪರಿಸ್ಥಿತಿಯಲ್ಲಿ ನೋಡಬೇಕಾಗುತ್ತದೆ. ಆಗ ಹೆಗಲಿನ ಮೇಲೆ ಕೂರಿಸಿಕೊಂಡು ತೋಟ ಸುತ್ತಿಸುತ್ತಿದ್ದ ಚಿಕ್ಕಪ್ಪನಿಗೆ ಇವತ್ತು ಅದ್ಯಾವುದೋ ಖಾಯಿಲೆ. ಅಮ್ಮಂನಂತಿದ್ದ ದೊಡ್ಡತ್ತೆ ಕ್ಯಾನ್ಸರ್ ಹೊತ್ತು ಒಣಗಿಹೋಗಿ ಮಲಗಿದ್ದ ದೃಶ್ಯ ಪದೇ ಪದೇ ನೆನಪಾಗುತ್ತದೆ. ಇವತ್ತು ಬೆಳಗ್ಗೆ ವಾಕಿಂಗಿಗೆ ಹೋಗಿದ್ದಾಗಲೇ ಸಂಬಂಧಿಕರೊಬ್ಬರು ಹಾರ್ಟ್ ಅಟ್ಯಾಕ್ ಆಗಿ ತೀರಿಹೋದರಂತೆ ಎಂಬ ಕೆಟ್ಟ ಸುದ್ದಿ ಬಂದು ತಲುಪುತ್ತದೆ. ಅವರ ಮಡಿಲಲ್ಲಿ ಬೆಳೆದ ನಾವು ಇವತ್ತು ಇನ್ಯಾವುದೋ ದೂರದ ಊರಿನ ಮಡಿಲಿನಲ್ಲಿರುತ್ತೇವೆ.

ನಾವು ಹುಟ್ಟಿ ಬೆಳೆಯುತ್ತಾ ಇರುವಾಗ ಬೇರೆ ಬೇರೆ ಹಂತಗಳಲ್ಲಿ ನಾವು ಪ್ರೀತಿಸಿದ, ಗೌರವಿಸಿದ, ಒಡನಾಡಿದ, ನಮ್ಮ ಆದರ್ಶವಾಗಿ ಕಂಡ ಹಿರಿಯರನೇಕರು ನಮ್ಮನ್ನು ಬಿಟ್ಟುಹೋಗಿ ಅನಾಥಭಾವ ಕಾಡುತ್ತದೆ. ಯೌವ್ವನವನ್ನು ದಾಟಿ ಮಧ್ಯವಯಸ್ಸಿಗೆ ಬರುತ್ತಾ ಸಾವಿನ ಸುದ್ದಿಗಳು ಹೆಚ್ಚಾಗುತ್ತಾ ಹೋಗುತ್ತವೆ. ಕೆಲವೊಂದು ಸಾವುಗಳು ಮನಸನ್ನು ಕಲಕುತ್ತವೆ. ವಿಚಲಿತರನ್ನಾಗಿಸುತ್ತವೆ. ಇವೆಲ್ಲವೂ ಅನಿವಾರ್ಯವಾಗಿ, ಸಹಜವಾಗಿ ಆಗುವುದಾದರೂ ಕೂಡ ಅನಂತರ ಅವರಿಲ್ಲದೇ ಮನೆ, ಮನ ಭಣ ಭಣ ಎನ್ನುತ್ತದೆ. ನಾವು ಯಾಕೆ ಹುಟ್ಟಿದ್ದು ಅನ್ನುವುದು ಯಾರಿಗೂ ಗೊತ್ತಿಲ್ಲ. ಹುಟ್ಟು ಸಾವುಗಳ ಬಗ್ಗೆ ಪೂರ್ತಿ ತಿಳಿದುಕೊಳ್ಳಲು ಹೋದರೆ ಅದೇ ಜೀವನದಲ್ಲಿ ಕೆಲವೊಮ್ಮೆ ನೆಮ್ಮದಿ ಕೆಡಿಸಿಬಿಡುತ್ತದೆ. ಆದ್ದರಿಂದ ನಮ್ಮ ಉಳಿದ ಜೀವನವನ್ನು ಹೇಗೆ ಅತ್ಯುತ್ತಮವೆನಿಸುವಂತೆ ನಡೆಸಬೇಕು ಎಂಬುದಕ್ಕೆ ಸಾವು ಅನ್ನುವುದನ್ನು ಒಂದು ಎಚ್ಚರಿಕೆಯನ್ನಾಗಿ ತೆಗೆದುಕೊಂಡು ಮುನ್ನಡೆಯುತ್ತಾ ಹೋಗಬೇಕಷ್ಟೆ.

Subject from Mahesh Hegade's Blog