ಪುಟಗಳು

ಮಂಗಳವಾರ, ಡಿಸೆಂಬರ್ 7, 2010

'ಪ್ರಣತಿ' ಪ್ರಬಂಧ ಸ್ಪರ್ಧೆ


ಸಾಹಿತ್ಯ, ಸಂಸ್ಕೃತಿ, ಪ್ರಕೃತಿ - ಅಂಶಗಳನ್ನು ಧ್ಯೇಯವಾಗಿಸಿಕೊಂಡಿರುವ ‘ಪ್ರಣತಿ’ ಸಂಸ್ಥೆ (http://www.pranati.in/) ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ.

ವಿದ್ಯಾರ್ಥಿಗಳು ‘ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ’ ಎಂಬ ವಿಷಯದ ಮೇಲೆ ೨೦೦೦ ಪದಗಳಿಗೆ ಮೀರದಂತೆ ಪ್ರಬಂಧವನ್ನು ಸ್ಫುಟವಾದ ಕೈಬರಹದಲ್ಲಿ ಅಥವಾ ಡಿ.ಟಿ.ಪಿ. ಮಾಡಿ ಕಳುಹಿಸಬಹುದು.

ಪ್ರಬಂಧದ ಜೊತೆ ನಿಮ್ಮ ಕಾಲೇಜ್ ಐಡೆಂಟಿಟಿ ಕಾರ್ಡ್‌ನ ಪ್ರತಿ ಇರಿಸುವುದು ಕಡ್ಡಾಯ.

ಸಂಪಾದಕ ಮಂಡಲಿ ಮತ್ತು ವಿಷಯ ತಜ್ಞರಿಂದ ಆಯ್ದ ಪ್ರಬಂಧಕ್ಕೆ ಸೂಕ್ತ ಬಹುಮಾನ ನೀಡಲಾಗುತ್ತದೆ.

ಪ್ರಬಂಧವನ್ನು ಈ ವಿಳಾಸಕ್ಕೆ ಕಳುಹಿಸಬಹುದು ಅಥವಾ ಇ-ಮೇಲ್ ಮಾಡಬಹುದು.

ಪ್ರಣತಿ, ನಂ. ೪೪೮/ಎ,
೮ನೇ ಮೇನ್, ೭ನೇ ಕ್ರಾಸ್,
ತ.ರಾ.ಸು. ರಸ್ತೆ, ಹನುಮಂತನಗರ,
ಬೆಂಗಳೂರು - ೫೬೦ ೦೧೯.
 
ಇ-ಮೇಲ್: prabandha@pranati.in.
 
ಕೊನೆಯ ದಿನಾಂಕ: ೩೦ ಡಿಸೆಂಬರ್ ೨೦೧೦ 

ಯಾವುದೇ ಮಾಹಿತಿಗೆ: ೯೬೧೧೪೫೮೬೯೮ / ೯೯೮೦೦೨೨೫೪೮.
 
ನೀವು ಕಾಲೇಜು ವಿದ್ಯಾರ್ಥಿಯಾಗಿದ್ದರೆ ನೀವೇ ಭಾಗವಹಿಸಿ. ಇಲ್ಲವೇ, ನಿಮ್ಮ ಪರಿಚಿತ ವಿದ್ಯಾರ್ಥಿಗಳಿಗೆ ತಿಳಿಸಿ.

ಮಂಗಳವಾರ, ಅಕ್ಟೋಬರ್ 19, 2010

ಹಳೆಯ ’ಕಸ್ತೂರಿ’ಗಳು ಬೇಕಾ?

ಕನ್ನಡದ ಹಲವಾರು ಹಳೆಯ ಮ್ಯಾಗಜೀನ್ ಗಳಲ್ಲಿ ಹುಬ್ಬಳ್ಳಿಯ ಲೋಕಶಿಕ್ಷಣ ಟ್ರಸ್ಟ್ ನ 'ಕಸ್ತೂರಿ' ಮ್ಯಾಗಜೀನ್ ಕೂಡ ಒಂದು. ಇದು ಅರ್ಧ ಶತಮಾನದಿಂದ ಪ್ರಕಟವಾಗುತ್ತಿದೆ.  ರೀಡರ್ಸ್ ಡೈಜೆಸ್ಟ್ ಮಾದರಿಯ ಪತ್ರಿಕೆಯೊಂದನ್ನು ಕನ್ನಡದಲ್ಲಿ ತರಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಶುರುವಾಗಿ, ಇವತ್ತು ರೀಡರ್ಸ್ ಡೈಜೆಸ್ಟ್ ಮ್ಯಾಗಜಿನ್ನೇ ಬಾಗಿಲು ಹಾಕಿಕೊಳ್ಳುವ ಪರಿಸ್ಥಿತಿ ತಲುಪಿದ್ದರೂ ನಮ್ಮ ’ಕಸ್ತೂರಿ’ ಮಾತ್ರ ತಡೆಯಿಲ್ಲದೇ ನೆಡೆಯುತ್ತಿದೆ. ಪತ್ರಿಕೋದ್ಯಮದ ಹಲವು ಘಟಾನುಘಟಿಗಳೆಲ್ಲಾ ಇದರಲ್ಲಿ ಕೆಲಸ ಮಾಡಿದ್ದಾರೆ. ಉತ್ತರಕರ್ನಾಟಕದ ಬಹುತೇಕ ವಿದ್ಯಾವಂತರ ಮನೆಗಳಲ್ಲಿ ಮೊದಲಿನಿಂದಲೂ ಕಸ್ತೂರಿ ಒಂಥರಾ ಸಹಜ ಓದಿನ ಮ್ಯಾಗಜೀನ್. ಕತೆ, ಅನುಭವ, ಲಲಿತ ಪ್ರಬಂಧ, ಹಾಸ್ಯಗಳಿಂದ ಹಿಡಿದು ಜ್ಞಾನ-ವಿಜ್ಞಾನ, ಇತಿಹಾಸ, ಫಿಕ್ಷನ್, ಆಧ್ಯಾತ್ಮ, ಪರಿಸರ, ವೈದ್ಯಕೀಯ ಮುಂತಾದ ಎಲ್ಲಾ ರೀತಿಯ ವಿಷಯಗಳನ್ನೂ ತುಂಬಿಕೊಂಡು ಬರುವ ಕಸ್ತೂರಿಯ ಪ್ರತಿ ಸಂಚಿಕೆಯೂ ಒಂದು ವಿಶೇಷ ಡೈಜೆಸ್ಟ್. ವಿಷಯ ವೈವಿಧ್ಯಗಳು, ಮಾಹಿತಿಪೂರ್ಣ ಲೇಖನಗಳು ಅದರ ಹೈಲೈಟ್ಸ್.


ವಿಷಯ ಏನೆಂದರೆ, ನಮ್ಮ ಮನೆಯಲ್ಲಿಯೂ ಎಷ್ಟೋ ವರ್ಷಗಳಿಂದ ಕಸ್ತೂರಿ ಓದುತ್ತಿದ್ದೇವೆ. ಹಿಂದಿನ ಹಲವು ವರ್ಷಗಳ ಕಸ್ತೂರಿಗಳು ಮನೆಯಲ್ಲಿ ಇವೆ. ಎಷ್ಟೋ ಸಲ ಅದನ್ನು ರದ್ದಿಗೆ ಹಾಕಬೇಕು ಅನಿಸಿದ್ದರೂ ಅಷ್ಟು ಮಾಹಿತಿಗಳ ಪುಸ್ತಕಗಳನ್ನು ಸುಮ್ಮನೇ ವ್ಯರ್ಥವಾಗಿ ರದ್ದಿಗೆ ಹಾಕಲು ಮನಸಾಗದೇ ಹಾಗೇ ಇದೆ. ಈಗೊಂದು ಆರೇಳು ವರ್ಷಗಳ ಹಿಂದೆ ರವಿಬೆಳಗೆರೆಯವರು 'ಓ ಮನಸೇ' ಎಂಬ ಪತ್ರಿಕೆ ಮತ್ತೆ ಶುರುಮಾಡಲು ಹೊರಟಿದ್ದಾಗ ಹಳೆಯ ಕಸ್ತೂರಿಗಳನ್ನು ಯಾರಾದರೂ ಕೊಡುವುದಾದರೆ ಕೊಳ್ಳುವುದಾಗಿ ಪ್ರಕಟಿಸಿದ್ದರು. ಆಗಲೂ ಕೊಡಲು ಮನಸ್ಸಿಲ್ಲದೇ ಹಾಗೇ ಇಟ್ಟುಕೊಂಡಿದ್ದರ ಪರಿಣಾಮ ಇವತ್ತು ಸುಮಾರು ೧೫ ವರ್ಷಗಳ 'ಕಸ್ತೂರಿ' ಮನೆಯ ಪೆಟ್ಟಿಗೆಯಲ್ಲಿ ಸಂಗ್ರಹವಾಗಿದೆ. ಈ ಬಾರಿ ಮನೆಗೆ ಹೋದಾಗ ಇನ್ನೂ ಇದನ್ನು ಇಟ್ಟುಕೊಳ್ಳುವುದು ಬೇಡ, ರದ್ದಿಗೆ ಹಾಕೇ ಬಿಡೋಣ ಅಂತ ಹೊರಟವನಿಗೆ ಅದಕ್ಕೂ ಮೊದಲು ಯಾರಿಗಾದರೂ ಪ್ರಯೋಜನವಾಗುವುದಿದ್ದರೆ ಒಮ್ಮೆ ಕೇಳಿನೋಡೋಣ ಎನ್ನಿಸಿತು.
 
ಆದ್ದರಿಂದ ಈ ಬ್ಲಾಗ್ ಓದಿದವರು, ಯಾರಾದರೂ ಆಸಕ್ತರು, ಪತ್ರಿಕೆಗಳಲ್ಲಿ ಕೆಲಸ ಮಾಡುವವರು, ಸಂಗ್ರಹಕಾರರು ಅಥವಾ ಮತ್ಯಾರಿಗೇ ಆಗಲಿ ಹಳೆಯ ಕಸ್ತೂರಿಗಳು (೧೯೯೪ರಿಂದ ೨೦೦೯) ಬೇಕೆನಿಸಿದರೆ, ಅದರಿಂದ ಉಪಯೋಗವಾಗುತ್ತದೆ ಎಂದೆನಿಸಿದರೆ ನನ್ನನ್ನು ಸಂಪರ್ಕಿಸಿ ಅಥವಾ ಈ ಬಗ್ಗೆ ಏನಾದರೂ ಸಲಹೆಗಳಿದ್ದರೆ ತಿಳಿಸಿ.

ಬೋಂಡಾಬಜ್ಜಿ ಕಟ್ಟೋರ್ಯಾರೂ ಕೇಳ್ಬೇಡಿ, ಅದಕ್ಕೆ ಮಾತ್ರ ಕೊಡಲ್ಲ ;)
 
 
ವಿಕಿಪಿಡಿಯಾದಲ್ಲಿ ಕಸ್ತೂರಿ

ಬುಧವಾರ, ಅಕ್ಟೋಬರ್ 6, 2010

ಭೈರಪ್ಪ ಎಂಬ STAR WRITER

ಪ್ರಕಟವಾದ ಮೊದಲನೇ ವಾರವೇ ಮೂರು ಮುದ್ರಣ, ಅಧಿಕೃತವಾಗಿ ಪುಸ್ತಕ ಬಿಡುಗಡೆ ಮಾಡಿದ್ದು ಎಂಟನೇ ಮುದ್ರಣ, ಪ್ರಕಟವಾಗುವ ಮೊದಲೇ ಬುಕ್ಕಿಂಗ್, ಎಲ್ಲಾ ಪ್ರತಿಗಳು ಖಾಲಿ, ಬೆಲೆ ದುಬಾರಿಯಾದರೂ ಎಲ್ಲಾ ಕಡೆ ಪುಸ್ತಕಗಳ ಜೋರು ಮಾರಾಟ, ಪತ್ರಿಕೆಗಳಲ್ಲಿ ಚರ್ಚೆ, ವಾದ, ವಿವಾದ, ಸಮರ್ಥನೆ, ದೂಷಣೆ - ಇಷ್ಟು ಹೇಳುತ್ತಿದ್ದಂತೆ ಎಲ್ಲರಿಗೂ ತಿಳಿದುಬಿಡುತ್ತದೆ. ಇದು ಇತ್ತೀಚೆಗೆ ಕನ್ನಡ ಸಾಹಿತ್ಯ ಲೋಕದ ವಿದ್ಯಮಾನ. ಅದು ಎಸ್.ಎಲ್. ಭೈರಪ್ಪನವರ ’ಕವಲು’ ಕಾದಂಬರಿ. ೨೩ ಮುದ್ರಣಗಳನ್ನು ಕಂಡ ಅವರ ಹಿಂದಿನ ಕಾದಂಬರಿ 'ಆವರಣ'ದ ವಿಷಯವಂತೂ ಹೇಳುವುದೇ ಬೇಡ. ಬಹುಶಃ ಈ ಮಟ್ಟಿಗೆ ಸಂಚಲನ ಉಂಟು ಮಾಡುವ ಮತ್ತೊಬ್ಬ ಬರಹಗಾರ ಭಾರತದಲ್ಲಿಲ್ಲ. ಆ ಮಟ್ಟಿಗೆ ಜನಪ್ರಿಯ. ಎಲ್ಲಾ ವಯೋಮಾನದ ಓದುಗರನ್ನು ಹೊಂದಿರುವ ಲೇಖಕರಲ್ಲೊಬ್ಬರು. ಅಧ್ಯಯನ ಶೀಲ, ಸಮರ್ಪಣಾ ಮನೋಭಾವದ ಕಾದಂಬರಿಕಾರರಾಗಿ, ಅದ್ಭುತ ಬರಹಗಾರರಾಗಿ ಭೈರಪ್ಪನವರು ಪ್ರಸಿದ್ಧಿ. ಪಕ್ಕದ ರಾಜ್ಯದ ಸಾಹಿತ್ಯ ಲೋಕದಲ್ಲೇನಾಗುತ್ತಿದೆ ಎಂದು ಸರಿಯಾಗಿ ಗೊತ್ತಾಗದಿರುವ ಈ ಪರಿಸ್ಥಿತಿಯಲ್ಲೂ ಇವರ ಹಲವಾರು ಕಾದಂಬರಿಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದಗೊಳ್ಳುತ್ತವೆ.

ನಾನು ಓದಿದ ಇವರ ಮೊದಲ ಕಾದಂಬರಿ 'ಧರ್ಮಶ್ರೀ'. ಅದಾದ ಮೇಲೆ ಅವರ ಅಂಚು, ದಾಟು, ಪರ್ವ, ವಂಶವೃಕ್ಷ, ನಿರಾಕರಣ, ಜಲಪಾತ, ಸಾರ್ಥ ಮುಂತಾದ ಹಲವು ಕಾದಂಬರಿಗಳನ್ನು ಓದಿದ್ದೇನೆ. ಒಂದೊಂದೂ ಕೂಡ ವಿಷಯಗಳ ಆಗರವಾಗಿ ಕಂಡಿವೆ. ಇನ್ನೂ ಕೆಲವು ಓದುವುದು ಬಾಕಿ ಇವೆ. ಘಟನೆಗಳನ್ನು ಕತೆಯಂತೆ ಹೇಳಿಬಿಡಬಹುದು, ಕಾಲ್ಪನಿಕ ಕತೆಗಳನ್ನು ಹೆಣೆದುಬಿಡಬಹುದು ಆದರೆ ಅದರಲ್ಲಿನ ಪಾತ್ರಗಳ ಮನಸ್ಸಿನ ತುಮುಲಗಳನ್ನು, ಸಮಾಜ, ಧರ್ಮ, ಸಂಪ್ರದಾಯ ಸಂಬಂಧಿತ ಸಂಗತಿಗಳನ್ನು ಚಿತ್ರಿಸುವುದು ಮಾತ್ರ ಎಲ್ಲರಿಗೂ ಸಾಧ್ಯವಿಲ್ಲ. ಅದನ್ನು ಸಮರ್ಥವಾಗಿ ಮಾಡುವುದರಿಂದಲೇ ಭೈರಪ್ಪನವರು ಅತ್ಯಂತ ಯಶಸ್ವಿ ಬರಹಗಾರರೆನ್ನಬಹುದು. ಭೈರಪ್ಪನವರ ಬರವಣಿಗೆಯ ವಿಷಯಗಳು ಎಷ್ಟರ ಮಟ್ಟಿಗೆ ಸೂಕ್ಷ್ಮವಾಗಿರುತ್ತವೆ ಎಂದರೆ ಅವು ಮೇಲ್ನೋಟಕ್ಕೆ ಸುಮ್ಮನೇ ಕಥೆಯಾಗಿದ್ದರೂ ಅದು ಸರಿಯಾಗಿ ಅರ್ಥವಾಗಲು ಅಂತಹ ಸನ್ನಿವೇಶಗಳನ್ನು, ಪರಿಸ್ಥಿತಿಗಳನ್ನು, ಮನಸ್ಥಿತಿಯನ್ನು ಸ್ವತಃ ಅನುಭವಿಸಿರಬೇಕು, ಇಲ್ಲವೇ ಕಂಡಿರಬೇಕು. ಆವಾಗಲಷ್ಟೇ ಅದು ಇನ್ನೂ ಚೆನ್ನಾಗಿ ತಾಗಬಲ್ಲುದು. ಜೊತೆಗೆ ಅವರ ಕಾದಂಬರಿಗಳ ವಿಷಯ ವ್ಯಾಪ್ತಿ ಮತ್ತು ಆಳ ಎಂತವರಿಗೂ ಹೊಸ ಹೊಸ ಲೋಕಗಳನ್ನು, ಸತ್ಯಗಳನ್ನು ತೋರಿಸಿಕೊಡುವಂತವು.

ಅವರು ಬರೆಯುವ ವಿಷಯಗಳು ಕೆಲವರ ಬುದ್ಧಿಗೆ ನಿಲುಕದೇ ಇರಬಹುದು, ಇಷ್ಟೇ ಅನ್ನಿಸಬಹುದು, ಒಪ್ಪಿಗೆಯಾಗದಿರಬಹುದು, ಕೆಲವರಿಗೆ ಎಲ್ಲಾ ಬಿಟ್ಟು ಬರೀ 'ಅದು' ಮಾತ್ರ ಕಾಣಬಹುದು, ಆ ವಾದಿ, ಈ ವಿರೋಧಿ ಎಂದೆಲ್ಲಾ ಹಣೆಪಟ್ಟಿ ಕಟ್ಟಿ ಲಬೋ ಲಬೋ ಎನ್ನಬಹುದು, ಪುಸ್ತಕ ಮಾರಾಟ, ಜನಪ್ರಿಯತೆ ಇವು ಗುಣಮಟ್ಟದ ಮಾನದಂಡವಲ್ಲ ಅಂತ ವಾದಿಸಬಹುದು, ಪೂರ್ವಗ್ರಹಗಳಿರಬಹುದು, ’ಆವರಣ’ದ ಆಫ್ಟರ್ ಎಫೆಕ್ಟುಗಳೂ ಇರಬಹುದು ಅಥವಾ ಅದು ನಿಜವೇ ಆಗಿರಬಹುದು. ಇರಲಿ. ಎಷ್ಟೋ ಜನಕ್ಕೆ 'ಪರ್ವ' ಇಷ್ಟವಾಗುವುದಿಲ್ಲ, ಮತ್ಯಾರಿಗೋ 'ಕವಲು' ಸಮಾಧಾನವಾಗುವುದಿಲ್ಲ. ಅದೆಲ್ಲಾ ಅವರವರ ಮನೋಭಾವಕ್ಕೆ ಸಂಬಂಧಿಸಿದ್ದು. ಒಟ್ಟಿನಲ್ಲಿ ಅವರ ವಿರೋಧಿಗಳೂ ಕೂಡ ನಿರ್ಲಕ್ಷಿಸಲಾಗದ ಬರಹಗಾರ. ನೀವು ರೈಟಿಸ್ಟ್ ಅನ್ನುವ ಆರೋಪವಿದೆಯಲ್ಲಾ ಅಂತ ಸಂದರ್ಶನದಲ್ಲಿ ಭೈರಪ್ಪನವರಿಗೆ ಕೇಳಿದ್ದಕ್ಕೆ, "ನನಗೆ ರೈಟು ಲೆಫ್ಟು ಅನ್ನುವುದರಲ್ಲಿ ನಂಬಿಕೆಯಿಲ್ಲ. ಆದರೆ ನೀವು ರೈಟ್ ಅಥವಾ ರಾಂಗ್ ಅನ್ನುವ ಅರ್ಥದಲ್ಲಿ ಕೇಳುತ್ತೀರೆಂದಾದರೆ, ಹೌದು ನಾನು ರೈಟಿಸ್ಟು" ಎಂದರು. ಹೌದು, ನನಗೂ ಸೇರಿದಂತೆ ಬಹುತೇಕ ಓದುಗರಿಗೆ ಈ ರೈಟು ಲೆಫ್ಟು ಬೇಡ, ನಮಗೆ ಬೇಕಾಗಿರುವುದು ರೈಟ್ ಆಗಿ ಬರೆಯುವ ರೈಟರ್ ಗಳು ಮಾತ್ರ.

ಯಾರೇ ಕನ್ನಡ ಪುಸ್ತಕ ಓದುವಿಕೆಯಲ್ಲಿ ಆಸಕ್ತಿ ತೋರಿಸಿದ್ದಾದರೆ ನಾನು ಅವರಿಗೆ ಮೊದಲು ಸಲಹೆ ಮಾಡುವುದು ಭೈರಪ್ಪ ಮತ್ತು ತೇಜಸ್ವಿಯವರ ಪುಸ್ತಕಗಳನ್ನು. ಅದನ್ನು ಓದಿದವ ತಾನಾಗೇ ಓದುವಿಕೆಯನ್ನು ಮುಂದುವರೆಸಿಕೊಂಡು ಹೋಗುತ್ತಾನೆಂದು ಗ್ಯಾರಂಟಿ ಹೇಳಬಹುದು. ಬೆಂಗಳೂರು ಮಂಗಳೂರು ಶಿವಮೊಗ್ಗದಂತಹ ಊರುಗಳಲ್ಲಿ ಬಿಟ್ಟರೆ ಬೇರೆ ಕಡೆಗಳಲ್ಲಿ ಪುಸ್ತಕ ಓದುಗರ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಅದಕ್ಕೆ ಹಲವು ಕಾರಣಗಳಿವೆ. ನಮ್ಮ ಪತ್ರಿಕೆಗಳು ಕೂಡ ಇವತ್ತಿಗೂ ಸಾಹಿತ್ಯವನ್ನು ಸಪ್ಪೆಸಾರಿನಂತೆಯೇ ಬಡಿಸುತ್ತಾ ಬಂದಿವೆ. ನಮ್ಮಲ್ಲಿ ಬಹಳ ಜನ ಉತ್ತಮ ಬರಹಗಾರರಿದ್ದಾರೆ. ಇಷ್ಟೆಲ್ಲಾ ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳು ಇದ್ದರೂ ಪುಸ್ತಕಗಳ ಪ್ರಚಾರಕ್ಕೆ ಮತ್ತು ಓದುವಿಕೆಯನ್ನು ಜನಪ್ರಿಯಗೊಳಿಸಲು ಹೆಚ್ಚು ಪ್ರಯತ್ನ ಮಾಡಿದಂತೆ ಕಾಣುವುದಿಲ್ಲ. ಈ ಪರಿಸ್ಥಿತಿಯಲ್ಲೂ ಒಬ್ಬ ಲೇಖಕನನ್ನು ಜನ ಅಷ್ಟು ಇಷ್ಟಪಟ್ಟು ಕಾದು ಓದುತ್ತಾರೆನ್ನುವುದು ಸಾಮಾನ್ಯ ಸಂಗತಿಯಲ್ಲ. ಇಂತಹ ಲೇಖಕರು ಕರ್ನಾಟಕದಲ್ಲಿರುವುದು ನಮ್ಮ ಹೆಮ್ಮೆ.


ಅವರೊಬ್ಬ ಸ್ಟಾರ್ ರೈಟರ್ !

ಮಂಗಳವಾರ, ಆಗಸ್ಟ್ 31, 2010

" ಆ ಮತ್ತೊಂದು ಬಾಗಿಲು "

"ಸ್ವಲ್ಪ ಹೊತ್ತು, ಇನ್ನೇನು ಚಿಕ್ಕಮ್ಮ ಬಂದೇ ಬಿಡ್ತಾರೆ" ಅಂದಳು ಆ ಹುಡುಗಿ.

ಆಕೆ ಸುಮಾರು ಹದಿನೈದು ಹದಿನಾರು ವರ್ಷದವಳಂತೆ ಕಂಡಳು.

ನಟ್ಟೆಲ್ ಸುಮ್ಮನೇ ಕೂತ.

"ಅಲ್ಲಿವರೆಗೆ ನಾವಿಬ್ರೂ ಮಾತಾಡೋಣ, ಏನಾದ್ರೂ ಮಾತಾಡಿ", ಅಂದಳು ಹುಡುಗಿ.

ಆ ಹುಡುಗಿಯ ಉತ್ಸಾಹಕ್ಕೆ ತೊಂದರೆ ಮಾಡಲು ಅವನಿಗೂ ಇಷ್ಟವಾಗಲಿಲ್ಲ. ಆಕೆಯ ಚಿಕ್ಕಮ್ಮ ಬರುವವರೆಗೂ ಕಾಯೋಣ ಎಂದುಕೊಂಡ. ಆದರೆ ಹೀಗೆ ಸುಮ್ಮನೇ ಅಪರಿಚಿತರ ಮನೆಗೆ ಹೋಗುವುದು, ಅವರ ಮನೆಯಲ್ಲಿ ಕೂರುವುದರಿಂದ ಅವನು ಆ ಹಳ್ಳಿಗೆ ಬಂದ ಉದ್ದೇಶಕ್ಕೆ ಏನಾದರೂ ಸಹಾಯವಾಗುವುದಾ ಎಂದು ಮನಸ್ಸಿನಲ್ಲೇ ಪ್ರಶ್ನೆ ಹಾಕಿಕೊಂಡ.

"ನಿಂಗೆ ಅಲ್ಯಾರೂ ಪರಿಚಯದವರಿಲ್ಲ. ಅದು ಸಣ್ಣ ಹಳ್ಳಿ. ಆ ಊರಿನಲ್ಲಿ ಜನ ಕಡಿಮೆ ಇದ್ದಾರೆ. ಮನೆಗಳಂತೂ ಒಂದಂಕ್ಕೊಂದು ದೂರ ದೂರ ಇವೆ. ಸುಮ್ಮನೇ ಒಬ್ಬನೇ ಹೋಗಿ ಯಾರೂ ಪರಿಚಯ ಇಲ್ಲದಿದ್ದರೆ ಆ ಊರಿನ ಭೂತಗಳ ಜೊತೆ ನೀನೂ ಭೂತದ ತರಹ ಒಬ್ಬನೇ ಬದುಕಬೇಕಾಗಬಹುದು. ನನಗೆ ಪರಿಚಯದವರು ಕೆಲವರು ಅಲ್ಲಿದ್ದಾರೆ. ಕೆಲವು ಒಳ್ಳೆಯ ಜನರಿದ್ದಾರೆ. ನಿನಗೆ ನನ್ನ ಪರಿಚಯ ಪತ್ರ ಕೊಡ್ತೀನಿ. ಅವರಿಗೆ ಇದನ್ನು ತೋರಿಸಿ ಪರಿಚಯ ಮಾಡಿಕೋ", ಎಂದು ಅವನು ಈ ಹಳ್ಳಿಗೆ ಬರುವುದಕ್ಕಿಂತ ಮೊದಲು ಅವನ ಅಕ್ಕ ಹೇಳಿದ್ದಳು..

ಅಕ್ಕ ಹೇಳಿದ್ದ ಒಳ್ಳೆಯ ಜನರಲ್ಲಿ ಈ ಹುಡುಗಿಯ ಚಿಕ್ಕಮ್ಮನೂ ಇರಬಹುದಾ ಎಂದು ನಟ್ಟೆಲ್ ಯೋಚಿಸಿದ .

ಇವನು ಏನೂ ಮಾತಾಡದೇ ಕುಳಿತದ್ದನ್ನು ನೋಡಿ ಆ ಪುಟ್ಟ ಹುಡುಗಿ ಕೇಳಿದಳು, "ಈ ಊರಿನಲ್ಲಿ ನಿಮಗೆ ಯಾರೂ ಪರಿಚಯದವರಿಲ್ವಾ?"

"ಇಲ್ಲಮ್ಮ , ಈ ಊರಿನ ಜನ ಇರಲಿ, ಒಂದು ಭೂತ ಕೂಡ ಪರಿಚಯ ಇಲ್ಲ,

"ಹಾಗಿದ್ದರೆ ನನ್ನ ಚಿಕ್ಕಮ್ಮನೂ ನಿಮಗೆ ಗೊತ್ತಿಲ್ಲ ಅಂತ ಆಯಿತು" ಅಂದಳು ಹುಡುಗಿ.

"ಇಲ್ಲ, ಬರೀ ಅವರ ಹೆಸರು, ವಿಳಾಸ ಅಷ್ಟೇ ನನಗೆ ಗೊತ್ತಿರುವುದು, ನನ್ನ ಅಕ್ಕ ಐದು ವರ್ಷಗಳ ಹಿಂದೆ ಇಲ್ಲೇ ಹತ್ತಿರದಲ್ಲಿ ಇದ್ದಳಂತೆ. ಅವಳು ಈ ಹಳ್ಳಿಗೆ ಕಳಿಸಿದಳು", ಎಂದು ಉತ್ತರಿಸಿದ.

ಅವನಿಗೆ ಆ ಚಿಕ್ಕಮ್ಮ ಎಷ್ಟು ವಯಸ್ಸಿನವಳು, ಮದುವೆ ಆದವಳೋ, ವಿಧವೆಯೋ ಏನೂ ಗೊತ್ತಿರಲಿಲ್ಲ. ಆದರೂ ಆ ಮನೆಯನ್ನು ಗಮನಿಸಿದಾಗ ಯಾರೋ ಗಂಡಸರಂತೂ ಇರುವ ಮನೆ ಎಂದು ಅಂದಾಜಾಯಿತು.

ಮತ್ತೆ ಸುಮ್ಮನೇ ಕೂತ.

ಹುಡುಗಿ ಮಾತನಾಡಿದಳು, "ಮೂರು ವರ್ಷದ ಹಿಂದೆ ಆ ದುರಂತ ನೆಡೆದದ್ದು, ಪಾಪ, ಚಿಕ್ಕಮ್ಮ ಆವಾಗಿನಿಂದ ಒಂಥರಾ ಆಗಿಹೋಗಿದ್ದಾರೆ".

"ದುರಂತ? ಏನದು?", ಕೇಳಿದ ನಟ್ಟೆಲ್.

"ಅಲ್ಲಿರುವ ಬಾಗಿಲು ನೋಡಿದ್ದೀರಾ?", ನಟ್ಟೆಲ್ ನೋಡಿದ, ಅವರು ಕುಳಿತ ಜಗುಲಿಯಲ್ಲಿ ಪಕ್ಕದಲ್ಲಿ ಮತ್ತೊಂದು ದೊಡ್ಡ ಬಾಗಿಲಿತ್ತು, ಪೂರ್ತಿ ತೆರೆದಿತ್ತು.

ಆ ಕಡೆಯಿಂದ ಹೊರಗೆ ಹೋಗುವ ದಾರಿ ಕಾಣುತ್ತಿತ್ತು.

"ಈ ಚಳಿಯಲ್ಲೂ ಆ ಬಾಗಿಲು ಯಾಕೆ ಹಾಗೆ ತೆರೆದಿಟ್ಟಿದ್ದಾರೆ ಅಂತ ನೀವು ಯೋಚಿಸಬಹುದು", ಬಾಗಿಲನ್ನೇ ನೋಡುತ್ತಾ ಕೇಳಿದಳು ಹುಡುಗಿ.

ನಟ್ಟೆಲ್ ಗೆ ಆಶ್ಚರ್ಯವಾಯಿತು. ಈಕೆಯ ಚಿಕ್ಕಮ್ಮನ ಬಗ್ಗೆ ಹೇಳುತ್ತಿರುವ ಘಟನೆಗೂ ಆ ಬಾಗಿಲಿಗೂ ಏನೋ ಸಂಬಂಧ ಇರಬಹುದೆಂದುಕೊಂಡ.

ಹುಡುಗಿ ಮುಂದುವರೆಸಿದಳು, "ಇವತ್ತಿನ ಸರಿಯಾಗಿ ಮೂರು ವರ್ಷದ ಹಿಂದೆ ಚಿಕ್ಕಮ್ಮನ ಗಂಡ, ಅವಳ ಇಬ್ಬರು ತಮ್ಮಂದಿರು ಕಾಡಿಗೆ ಬೇಟೆಗೆ ಹೋಗಿಬರುತ್ತೇವೆಂದು ಇದೇ ಬಾಗಿಲಿನ ಮೂಲಕ ಹೋದವರು ಹಿಂದಿರುಗಿ ಬರಲೇ ಇಲ್ಲ!. ಅವರು ಎಲ್ಲಿ ಹೋದರೆಂಬುದೂ ಗೊತ್ತಾಗಲಿಲ್ಲ. ಹೊಳೆ ದಾಟುವಾಗ ಕೊಚ್ಚಿಕೊಂಡು ಹೋಗಿರಬೇಕು ಅಂದರು ಮೊದಲು. ಆದರೆ ಆ ಹೊಳೆ ಅಂಥಾ ದೊಡ್ಡದೇನೂ ಅಲ್ಲ. ಯಾರೂ ಯಾವತ್ತೂ ಅದರಲ್ಲಿ ಸತ್ತಿಲ್ಲ. ಅಂದ ಮೇಲೆ ಇವರು ಕೊಚ್ಚಿಕೊಂಡು ಹೋಗಲು ಸಾಧ್ಯವಿರಲಿಲ್ಲ. ಅಮೇಲೆ ತಿಳಿದದ್ದು, ಅವರು ಅಲ್ಲಿನ ಜೌಗಿನ ನೆಲದಲ್ಲಿ ಹೂತು ಸತ್ತುಹೋದ್ರಂತೆ. ಒಟ್ಟಿನಲ್ಲಿ ಕೊನೆಗೂ ಅವರ ದೇಹಗಳೂ ಸಿಗಲಿಲ್ಲ". ಹುಡುಗಿಯ ಧ್ವನಿಯಲ್ಲಿ ಬದಲಾವಣೆ ಆಗಿದ್ದನ್ನು ನಟ್ಟೆಲ್ ಗಮನಿಸಿದ.

"ಅವತ್ತಿಂದ ಚಿಕ್ಕಮ್ಮ ಅವರು ಬರೋದನ್ನೇ ಕಾಯುತ್ತಿದ್ದಾರೆ, ಯಾವತ್ತೋ ಒಂದು ದಿನ ಬಂದೇ ಬರ್ತಾರೆ ಅಂತ ನಂಬಿಕೊಂಡಿದ್ದಾರೆ, ಅವರ ಗಂಡ, ತಮ್ಮಂದಿರು ಮತ್ತು ಅವರ ಪ್ರೀತಿಯ ನಾಯಿ ಮರಿ ವಾಪಸ್ಸು ಬರುವುದನ್ನೇ ಪ್ರತಿದಿನ ಕಾಯ್ತಿರ್ತಾರೆ. ಅವರಿಗಾಗೇ ಆ ಬಾಗಿಲನ್ನು ದಿನಾ ಸಂಜೆ ತೆಗೆದಿಟ್ಟಿರುತ್ತಾರೆ. ಹೋಗುವಾಗ ಚಿಕ್ಕಪ್ಪ ಬಿಳೀ ರೈನ್ ಕೋಟು ಹಾಕಿಕೊಂಡಿದ್ದರಂತೆ, ಅವರ ಚಿಕ್ಕ ತಮ್ಮ ಜೋರಾಗಿ ಹಾಡು ಹೇಳುತ್ತಾ ಚಿಕ್ಕಮ್ಮನನ್ನು ಅಣಗಿಸುತ್ತಾ ಹೋದನಂತೆ. ಇದನ್ನು ಚಿಕ್ಕಮ್ಮ ಯಾವಾಗ್ಲೂ ಹೇಳ್ತಿರ್ತಾರೆ. ಅದನ್ನು ಕೇಳೀ ಕೇಳೀ ಒಬ್ಬಳೇ ಕೂತಿದ್ದಾಗ ನನಗೂ ಒಂದು ದಿನ ಇದೇ ಬಾಗಿಲಲ್ಲಿ ಅವರು ಹಾಗೇ ನೋಡನೋಡುತ್ತಿದ್ದಂತೆ ಬಂದುಬಿಡುತ್ತಾರೆನೋ ಅನ್ನಿಸಿಬಿಡುತ್ತದೆ."

ಮಾತಾಡುತ್ತಿದ್ದವಳ ಧ್ವನಿ ಸಣ್ಣದಾಯಿತು. ಕಣ್ಣಲ್ಲಿ ನೀರು ತುಂಬಿಕೊಂಡಿತು.

*****

ಅಷ್ಟರಲ್ಲೇ ಒಂದು ಹೆಂಗಸು ಮುಂದಿನ ಬಾಗಿಲಿನಿಂದ ಅವಸರದಲ್ಲಿ ಒಳಗೆ ಬಂದಳು. ನಟ್ಟೆಲ್ ನನ್ನು ನೋಡಿ ಅವನನ್ನು ಇಷ್ಟು ಹೊತ್ತು ಕಾಯಿಸಿದ್ದಕ್ಕೆ ಮೂರ್ನಾಲ್ಕು ಬಾರಿ ಕ್ಷಮೆ ಕೇಳಿದಳು. ಆ ಹೆಂಗಸೇ ಆ ಹುಡುಗಿಯ ಚಿಕ್ಕಮ್ಮ ಎಂದು ನಟ್ಟೆಲ್ ನಿಗೆ ತಿಳಿಯಿತು. ತಾನು ಬಂದಿದ್ದು ಇವಳಿಗೆ ಹೇಗೆ ಗೊತ್ತಾಯಿತು ಎಂದು ಯೋಚಿಸಿದ ನಟ್ಟೆಲ್, ತಾನು ಮನೆಯೊಳಗೆ ಬರುವುದನ್ನು ನೋಡಿದ ಯಾರೋ ಹೋಗಿ ಹೇಳಿರಬಹುದು ಎಂದುಕೊಂಡ.

"ನಮ್ಮ ಪುಟ್ಟಿ ನಿಮ್ಮ ಜೊತೆ ಚೆನ್ನಾಗಿ ಮಾತಾಡ್ತಾ ಇದ್ದಳಾ, ಕಾಯುವಾಗ ಏನೂ ಬೇಸರವಾಗಲಿಲ್ಲ ತಾನೆ?" ಎಂದು ಕೇಳಿದಳು ಆ ಹೆಂಗಸು.

"ಇಲ್ಲ, ಬಹಳ ಚೆನ್ನಾಗಿ ಮಾತಾಡುತ್ತಾಳೆ, ಹೊತ್ತು ಹೋದದ್ದೇ ತಿಳಿಯಲಿಲ್ಲ" ಎಂದ ನಟ್ಟೆಲ್.

ಆ ಹೆಂಗಸು ಹುಡುಗಿ ತೋರಿಸಿದ್ದ ದೊಡ್ಡ ಬಾಗಿಲನ್ನೇ ತೋರಿಸುತ್ತಾ ಕೇಳಿದಳು, "ಆ ದೊಡ್ಡ ಬಾಗಿಲು ತೆಗೆದೇ ಇತ್ತು, ಅಲ್ಲಿಂದ ಗಾಳಿ ಬೀಸುತ್ತದೆ, ನಿಮಗೆ ಚಳಿಯಾಗಿರಬಹುದು, ನನ್ನ ಗಂಡ, ತಮ್ಮಂದಿರು ಬರುವ ಹೊತ್ತಾಯಿತು, ಅವರು ಬೇಟೆಗೆ ಹೋದವರು ಈ ಕಡೆ ಬಾಗಿಲಿನಿಂದ ಬರುತ್ತಾರೆ, ಅದಕ್ಕೇ ತೆರೆದಿಟ್ಟಿದ್ದೆ",

ನಟ್ಟೆಲ್ ನಿಗೆ ಆಶ್ಚರ್ಯವಾಯಿತು, ಸಣ್ಣಗೆ ಭಯವೂ ಆಯಿತು.

"ಕೊಳಕು ಕಾಲುಗಳಲ್ಲೇ ಒಳಬಂದು ಇಲ್ಲೆಲ್ಲಾ ಮಣ್ಣು ಮಾಡ್ತಾರೆ, ಎಷ್ಟು ಬಾರಿ ಹೇಳಿದರೂ ಕೇಳಲ್ಲ, ನೀವು ಗಂಡಸರೇ ಹೀಗೆ ಅಲ್ವೆ?" ಎಂದು ನಕ್ಕಳು. ಅವರ ಬೇಟೆಯ ಬಗ್ಗೆ, ಇತ್ತೀಚೆಗೆ ಯಾವುದೂ ಹಕ್ಕಿಗಳು ಸರಿಯಾಗಿ ಬೇಟೆಗೆ ಸಿಗದಿರುವ ಬಗ್ಗೆ, ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಬಾತುಕೋಳಿಗಳ ಬಗ್ಗೆ ಒಂದೇ ಸಮನೆ ಏನೇನೋ ಹೇಳಿದಳು. ಮಾತನಾಡುವಾಗಲೂ ಅವಳ ಕಣ್ಣು ಆ ತೆರೆದ ಬಾಗಿಲ ಕಡೆಗೇ ಇದ್ದವು. ಮನೆಗೆ ಅತಿಥಿಯಾಗಿ ಬಂದಿದ್ದ ನಟ್ಟೆಲ್ ನ ಕುಶಲ ವಿಚಾರಿಸುವುದರ ಬಗ್ಗೆ ಆಕೆಗೆ ಹೆಚ್ಚಿನ ಗಮನ ಇದ್ದಂತಿರಲಿಲ್ಲ. ಆಗಾಗ ಬಾಗಿಲಿನ ಬಳಿ ಬಗ್ಗಿ ಕಣ್ಣು ಕಿರಿದಾಗಿಸಿ ನೋಡುತ್ತಿದ್ದಳು. ಅವಳ ಗಂಡ, ತಮ್ಮಂದಿರು ಹೋಗಿ ಸರಿಯಾದ ಮೂರು ವರ್ಷವಾದ ದಿನಕ್ಕೇ ನಟ್ಟೆಲ್ ಅವರ ಮನೆಗೆ ಭೇಟಿ ಕೊಟ್ಟದ್ದು ಕೇವಲ ಕಾಕತಾಳೀಯವಾಗಿತ್ತು.

ನಟ್ಟೆಲ್ ತಾನಾಗೇ ತನ್ನ ಪರಿಸ್ಥಿತಿಯನ್ನು ವಿವರಿಸತೊಡಗಿದ."ನನಗೆ ನಗರದ ವಾತಾವರಣದಿಂದ ದೂರ ಹೋಗಿ ಇರುವಂತೆ ವೈದ್ಯರು ಹೇಳಿದ್ದಾರೆ. ಅಲ್ಲೇ ಇದ್ದರೆ ಹೆಚ್ಚು ಕಾಲ ಬದುಕುವುದಿಲ್ಲ, ಆದ್ದರಿಂದ ಯಾವುದಾದರೂ ಹಳ್ಳಿಗೆ ಹೋಗಿ ಇರಿ ಎಂದಿದ್ದಾರೆ. ಅದಕ್ಕೇ ಇಲ್ಲಿಗೆ ಬಂದಿದ್ದೇನೆ. ನನ್ನ ಖಾಯಿಲೆಗೆ ಇಂತಹ ಸ್ಥಳದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕಂತೆ. ಜೊತೆಗೆ ನನ್ನ ಮನಸ್ಸಿಗೆ ಹೆಚ್ಚಿನ ಒತ್ತಡ ಅಥವಾ ಆಘಾತ ಆಗಬಾರದಾದೆಂದೂ ಹೇಳಿದ್ದಾರೆ. ನನ್ನ ಅಕ್ಕನಿಗೆ ಈ ಹಳ್ಳಿ ಗೊತ್ತಿದ್ದರಿಂದ ಈ ಇಲ್ಲಿಗೆ ಕಳಿಸಿಕೊಟ್ಟಳು".

"ಅಲ್ನೋಡಿ, ಅವರು ಬಂದೇ ಬಿಟ್ಟರು" , ಅವನು ಮಾತಾಡುತ್ತಿದ್ದಂತೇ ಆ ಹೆಂಗಸು ಆ ದೊಡ್ಡ ಬಾಗಿಲಿನ ಕಡೆ ನೋಡುತ್ತಾ ಜೋರಾಗಿ ಹೇಳಿದಳು. "ಅಂತೂ ಬೇಗನೇ ಬಂದರು, ರಾತ್ರಿ ಊಟದ ಹೊತ್ತಿಗಾದರೂ ಬರುತ್ತಾರೋ ಇಲ್ಲವೋ ಅಂದುಕೊಂಡಿದ್ದೆ, ಇವತ್ತೂ ಮೈಯೆಲ್ಲಾ ಕೊಳೆ ಮಾಡಿಕೊಂಡೇ ಬಂದಿರ್ತಾರೆ" .

ಈ ಬಾರಿ ನಟ್ಟೆಲ್ ಗೆ ಆಶ್ಚರ್ಯದ ಜೊತೆ ಜೋರು ಭಯವಾಗತೊಡಗಿತು. ಅವರೆಲ್ಲಾ ಸತ್ತುಹೋಗಿ ಮೂರುವರ್ಷವಾಯಿತು ಎಂದು ಸ್ವಲ್ಪ ಹೊತ್ತಿನ ಮುಂಚೆ ಹುಡುಗಿ ಹೇಳಿದ್ದಳು. ಇಷ್ಟು ಹೊತ್ತು ಈ ಪಾಪದ ಹೆಂಗಸು ತನ್ನ ಗಂಡ, ತಮ್ಮಂದಿರ ನೆನಪಿನಲ್ಲಿ ಏನೋ ಹೇಳುತ್ತಿದ್ದಾಳೆ ಅಂದುಕೊಂಡಿದ್ದ. ಈಗ ನೋಡಿದರೆ ಅವರು ಬರುತ್ತಿದ್ದಾರೆ ಅನ್ನುತ್ತಿದ್ದಾಳೆ!. ಸಣ್ಣಗೆ ನಡುಕ ಶುರುವಾಯಿತು. ಆ ಹುಡುಗಿಯ ಕಡೆ ನೋಡಿದ. ಆ ಹುಡುಗಿಯೂ ಹೆದರಿದಂತೆ ಕಂಡಳು. ಆಕೆಯೂ ಆತಂಕದಿಂದ ಆ ಬಾಗಿಲಿನ ಕಡೆಗೇ ನೋಡುತ್ತಿದ್ದಳು. ನಟ್ಟೆಲ್ ತಡೆಯಲಾರದೇ ಎದ್ದು ಹೋಗಿ ಬಾಗಿಲಿನಿಂದ ನೋಡಿದ. ದೂರದಲ್ಲಿ ಮಬ್ಬುಗತ್ತಲಿನಲ್ಲಿ ಮೂರು ಆಕೃತಿಗಳು ಬರುತ್ತಿದ್ದವು. ಆ ಹುಡುಗಿ ಹೇಳಿದ ರೀತಿಯಲ್ಲೇ ಒಬ್ಬ ಬಿಳೀ ರೈನ್ ಕೋಟು ತೊಟ್ಟಿದ್ದ, ಹುಡುಗನೊಬ್ಬ ಯಾವುದೋ ಹಾಡನ್ನು ಜೋರಾಗಿ ಹೇಳುತ್ತಿದ್ದ. ಆ ಮೂರು ಜನರ ಜೊತೆಯಲ್ಲೇ ನಾಯಿಯೊಂದು ಪುಟಪುಟನೇ ಓಡುತ್ತಾ ಬರುತ್ತಿತ್ತು.

ನಟ್ಟೆಲ್ ನಿಗೆ ವಿಪರೀತ ಭಯವಾಗತೊಡಗಿತು. ಎದೆ ಜೋರಾಗಿ ಹೊಡೆದುಕೊಳ್ಳತೊಡಗಿತು. ಆ ಮನೆಯ ವಾತಾವರಣ ಏಕೋ ಸರಿಯಿಲ್ಲ ಅನ್ನಿಸಿತು. ಗಂಟಲು ಒಣಗಿತು. ಆ ಹೆಂಗಸು, ಮತ್ತು ಹುಡುಗಿಯನ್ನು ತಿರುಗಿ ನೋಡಲೂ ಭಯವಾಗಿ ತನ್ನ ಕೋಲು ಮತ್ತು ಕೈಚೀಲವನ್ನು ಎತ್ತಿಕೊಂಡವನೇ ಮುಂದಿನ ಬಾಗಿಲಿನಿಂದ ಹೊರಕ್ಕೆ ಓಡಿದ. ರಸ್ತೆ ನಿರ್ಜನವಾಗಿತ್ತು. ತೋಚಿದ ಕಡೆ ಓಡಿದ. ಓಡುವಾಗ ದಾರಿಯಲ್ಲಿ ಬರುತ್ತಿದ್ದ ಸೈಕಲ್ ಒಂದಕ್ಕೆ ಅಡ್ಡಸಿಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡ.

ಈಗ ಇಲ್ಲಿ ಆ ಮೂರೂ ಜನ ತೆರೆದ ಬಾಗಿಲಿನಿಂದ ಮನೆ ಒಳಗೆ ಬಂದರು. ಬಿಳೀಕೋಟು ತೊಟ್ಟಿದ್ದ ವ್ಯಕ್ತಿ ಆ ಹೆಂಗಸಿಗೆ ಹೇಳಿದ, "ನೋಡು ಇವತ್ತು ಬೇಗನೇ ಬಂದುಬಿಟ್ಟೆವು. ಮನೆಗೆ ಯಾರೋ ಬಂದಂತಿತ್ತಲ್ಲ, ನಾವು ಬರುತ್ತಿದ್ದಂತೆ ಮುಂದಿನ ಗೇಟು ತೆರೆದು ಓಡಿಹೋದರು?"

"ಅವನ್ಯಾರೋ ನಗರದಿಂದ ಬಂದಿದ್ದಾನಂತೆ. ಅವನಿಗೇನೋ ಖಾಯಿಲೆಯಂತೆ. ಹಳ್ಳಿಗೆ ಹೋಗಿ ಇರಬೇಕೆಂದು ಡಾಕ್ಟರು ಹೇಳಿದ್ದಾರಂತೆ. ತನ್ನ ಖಾಯಿಲೆ ಬಗ್ಗೆ ಏನೋ ಹೇಳುತ್ತಿದ್ದ. ನೀವು ಬರುತ್ತಾ ಇದ್ದದ್ದು ನೋಡಿ ಅವನ ಕತೆಯೆಲ್ಲಾ ನಿಂತು ಹೋಯ್ತು. 'ಹೋಗಿ ಬರ್ತೇನೆ' ಅಂತ ಕೂಡ ಹೇಳದೇ ಯಾವುದೋ ಭೂತ ಕಂಡವನಂತೆ ಹೆದರಿ ಹಾಗೇ ಓಡಿಬಿಟ್ಟ, ವಿಚಿತ್ರ ಮನುಷ್ಯ", ಅಂದಳು ಹೆಂಗಸು.

ಅದುವರೆಗೂ ಸುಮ್ಮನಿದ್ದ ಹುಡುಗಿ ನಗುತ್ತಾ ಹೇಳಿದಳು, "ಅವನು ನಮ್ಮ ನಾಯಿ ಕಂಡು ಹೆದರಿರಬೇಕು. ನನಗೆ ಹೇಳಿದ್ದ, ಅವನಿಗೆ ನಾಯಿ ಕಂಡರೆ ಮೊದಲಿಂದಲೂ ಹೆದರಿಕೆಯಂತೆ. ಒಂದು ಸಲ ಅವನು ಎಲ್ಲೋ ರಾತ್ರಿ ಒಬ್ಬನೇ ಹೋಗುವಾಗ ಕತ್ತಲಿನಲ್ಲಿ ನಾಯಿಗಳು ಧಾಳಿ ಮಾಡಿದವಂತೆ. ಅವುಗಳಿಂದ ತಪ್ಪಿಸಿಕೊಳ್ಳಲು ಓಡಿ ದಾರಿ ತಪ್ಪಿ ಸ್ಮಶಾನದೊಳಕ್ಕೆ ನುಗ್ಗಿ ಯಾವುದೋ ಗೋರಿಯಲ್ಲಿ ಅಡಗಿ ಕುಳಿತಿರಬೇಕಾಯಿತಂತೆ. ರಾತ್ರಿಯೆಲ್ಲಾ ನಾಯಿಗಳ ಭಯದೊಂದಿಗೆ ಸ್ಮಶಾನದಲ್ಲೇ ಕುಳಿತಿದ್ದನಂತೆ. ಅವತ್ತಿಂದ ನಾಯಿ ಎಂದರೆ ಅವನಿಗೆ ಇನ್ನೂ ಭಯವಂತೆ".

"ಯಾರಿಗೇ ಆದ್ರೂ ಹಾಗೆಲ್ಲಾ ಆದರೆ ಭಯ ಆಗೇ ಆಗುತ್ತೆ ಅಲ್ವಾ?" ಆಕೆಯ ಧ್ವನಿ ತಣ್ಣಗೆ ಅತ್ಯಂತ ಸಹಜವಾಗಿತ್ತು.

****

ಮನಸಿಗೆ ಬಂದಂತೆ ಕತೆಕಟ್ಟಿ, ತಕ್ಷಣಕ್ಕೆ ಅದನ್ನೇ ನಿಜವೆಂಬಂತೆ ಹೇಳುವುದರಲ್ಲಿ ಅವಳು ನಿಸ್ಸೀಮಳಾಗಿದ್ದಳು.

-------------------

Saki ಎಂಬ ಕಾವ್ಯನಾಮದಿಂದ ಪ್ರಸಿದ್ಧಿಯಾಗಿರುವ ಬ್ರಿಟಿಷ್ ಲೇಖಕ Hector Hugh Munro (1870 – 1916), ಸಣ್ಣ ಕತೆಗಳ ಮಾಸ್ಟರ್ ಎಂದು ಕರೆಯಲ್ಪಡುವಾತ. ಆತನ ಹಲವಾರು ಸಣ್ಣಕತೆಗಳು ಇಂದಿಗೂ ಅತೀ ಹೆಚ್ಚು ಓದಿಸಿಕೊಂಡ ಖ್ಯಾತಿ ಹೊಂದಿವೆ. ಕುತೂಹಲ ಹುಟ್ಟಿಸುವ ನಿರೂಪಣೆ ಆತನ ಕತೆಗಳ ವಿಶೇಷತೆ. The Open Window ಎಂಬುದು ಅವರ ಬಹಳ ಪ್ರಸಿದ್ಧ ಕತೆ. ಇಂಗ್ಲಿಷಿನಲ್ಲಿ ಈ ಕತೆಯ ಕೊನೆಯ ಸಾಲು ಆ ಕಾಲದಲ್ಲಿ ಬಲು ಪ್ರಸಿದ್ಧವಾಗಿ ಇಂಗ್ಲಿಷ್ ಭಾಷಾಸಂಪತ್ತಿಗೆ ಸೇರಿಸಲ್ಪಟ್ಟಿತು ಎಂದು ವಿಕಿಪಿಡಿಯಾ ಹೇಳುತ್ತದೆ. ಆ ಕತೆಯ ಕನ್ನಡಾನುವಾದ ಇದು.

(ಆಗಸ್ಟ್ ’ಸಖಿ’ ಮ್ಯಾಗಜೀನ್ ನಲ್ಲಿ ಪ್ರಕಟವಾಗಿದ್ದು).

ಶನಿವಾರ, ಜುಲೈ 31, 2010

" ವ್ಯವಹಾರ "

ಧ್ಯಾಹ್ನ ಸೂರ್ಯನ ಉರಿಬಿಸಿಲು ಸುರಿದಿತ್ತು. ಕಣ್ಣಿನ ನಿಲುಕಿನವರೆಗೂ ಹೊಲಗದ್ದೆಗಳು ಹರಡಿದ್ದವು. ಮರಗಳ ಸಾಲಿನಿಂದ ಬೇರ್ಪಡಿಸಲ್ಪಟ್ಟ ಆ ಹೊಲಗಳಲ್ಲಿ ಹಳದಿ ಗೋಧಿ, ಮಾಸಲು ಹಸಿರು ಓಟ್, ದಟ್ಟ ಹಸಿರಿನ ಕ್ಲೋವರ್ ಮುಂತಾದ ಬೆಳೆಗಳು ನಳನಳಿಸುತ್ತಿದ್ದವು. ದೂರದಲ್ಲಿ, ಒಂದು ದೊಡ್ಡ ಇಳಿಜಾರಿನ ಮೇಲ್ತುದಿಯಲ್ಲಿ ಅಸಂಖ್ಯ ರಾಸುಗಳ ಹಿಂಡು ಮೇಯುತ್ತಿದ್ದವು. ಕೆಲವು ನಿಂತು, ಕೆಲವು ಕೂತು ಮೆಲುಕು ಹಾಕುತ್ತಿದ್ದವು. ಬಿಸಿಲಿನ ಝಳಕ್ಕೆ ದೊಡ್ಡ ದೊಡ್ಡ ಕಣ್ಣುಗಳನ್ನು ಪಿಳುಕಿಸುತ್ತಾ ಒಂದು ಸರೋವರದಂತೆ ಹರಡಿಕೊಂಡಿದ್ದವು.

ಇಬ್ಬರು ಹೆಂಗಸರು, ಅಮ್ಮ ಮಗಳು, ಒಬ್ಬರ ಹಿಂದೊಬ್ಬರು ಬಿರುಸಾಗಿ ದನಗಳ ಹಿಂಡಿನೆಡೆಗೆ ನೆಡೆಯುತ್ತಿದ್ದಾರೆ. ಇಬ್ಬರ ಕೈಯಲ್ಲೂ ಎರಡೆರಡು ದೊಡ್ಡ ಹಿತ್ತಾಳೆಯ ಪಾತ್ರೆಗಳಿವೆ. ಅವರ ಒಂದೊಂದು ಹೆಜ್ಜೆಗೂ ಆ ಲೋಹದ ಪಾತ್ರೆಗಳು ಸೂರ್ಯನ ಬೆಳಕಿಗೆ ಫಳಕ್ಕನೆ ಮಿಂಚುತ್ತಿವೆ. ಆ ಇಬ್ಬರು ಮಾಲಿವೋಯಿರೆ* ಹೆಂಗಸರು ಏನೂ ಮಾತನಾಡದೇ ಹಾಲು ಕರೆಯಲು ಬರುತ್ತಿದ್ದಾರೆ. ಹಸುಗಳ ಹಿಂಡಿನೆಡೆಗೆ ಬಂದೊಡನೆ ತಮ್ಮ ಕೈಲಿದ್ದ ಪಾತ್ರೆಗಳನ್ನು ಕೆಳಗಿಟ್ಟರು. ಸಾಲಿನಲ್ಲಿ ಮುಂದೆ ಕೂತು ಮೆಲುಕು ಹಾಕುತ್ತಿದ್ದ ಎರಡು ಹಸುಗಳ ಪಕ್ಕೆಯ ಮೇಲೆ ಕೋಲಿನಿಂದ ಮೆಲ್ಲಗೆ ತಟ್ಟಿದರು. ಅವು ತಮ್ಮ ಮುಂಗಾಲುಗಳನ್ನು ಊರಿ ಅನಂತರ ತಮ್ಮ ಹಿಂಭಾರವನ್ನು ಎತ್ತುತ್ತಾ ನಿಧಾನಕ್ಕೆ ಎದ್ದವು. ಹಿಂದಿನ ಕಾಲುಗಳ ಮಧ್ಯೆ ಭಾರದಿಂದ ಜೋತುಬಿದ್ದಂತಹ ಸಮೃದ್ಧವಾದ ಕೆಚ್ಚಲು ತೂಗುತ್ತಿತ್ತು. ಹಸುಗಳ ಹೊಟ್ಟೆಯಡಿ ಮಂಡಿಯೂರಿ ಪಾತ್ರೆಗಳನ್ನಿಟ್ಟು ಹಾಲು ಕರೆಯಲು ಶುರುಮಾಡಿದರು. ಒಂದೊಂದು ಬಾರಿ ಹಿಂಡಿದಾಗಲೂ ಹಾಲು ಪಿಚಕಾರಿಯಂತೆ ಹಾರಿ ಪಾತ್ರೆ ತುಂಬಿಸುತ್ತಾ ಹೋದಂತೆ ಹಳದಿ ನೊರೆ ಮೇಲೇರುತ್ತಾ ಬಂತು. ಇದೇ ರೀತಿ ಸಾಲಿನಲ್ಲಿರುವ ಕೊನೆಯ ಹಸುವಿನ ತನಕ ಎಲ್ಲಾ ಹಸುಗಳ ಹಾಲನ್ನು ಹಿಂಡುತ್ತಾ ಹೋದರು ಅಮ್ಮ ಮತ್ತು ಮಗಳು. ಒಂದೊಂದು ಹಸುವಿನ ಹಾಲು ಕರೆದಾದ ಮೇಲೂ ಅವುಗಳನ್ನು ಹಸಿರು ಹುಲ್ಲಿನೆಡೆಗೆ ಕರೆದೊಯ್ದು ಮೇಯ್ದುಕೊಳ್ಳಲು ಬಿಡುತ್ತಿದ್ದರು.

ಎಲ್ಲಾ ಮುಗಿದಾದ ಮೇಲೆ ಹಾಲು ತುಂಬಿದ ದೊಡ್ಡ ಪಾತ್ರೆಗಳನ್ನು ಹೊತ್ತುಕೊಂಡು ನಿಧಾನಕ್ಕೆ ನಡೆಯುತ್ತಾ ಮನೆಯ ಕಡೆ ಹೊರಟರು. ಅಮ್ಮ ಮುಂದೆ ನೆಡೆಯುತ್ತಿದ್ದಳು. ಮಗಳು ಹಿಂದೆ. ಸ್ವಲ್ಪ ದೂರ ನೆಡೆಯುತ್ತಿದ್ದಂತೆ ಇದ್ದಕ್ಕಿದ್ದ ಹಾಗೇ ಹಿಂದೆ ನೆಡೆಯುತ್ತಿದ್ದ ಮಗಳು ತನ್ನ ಹೊರೆಯನ್ನೆಲ್ಲಾ ಥಟ್ಟನೆ ಕೆಳಕ್ಕಿಟ್ಟು ಕುಸಿದು ಕುಳಿತುಬಿಟ್ಟಳು. ಮುಂದೆ ನೆಡೆಯುತ್ತಿದ್ದ ಮಾಲಿವೋಯಿರೆ ಹೆಂಗಸು, ತನ್ನ ಮಗಳ ಹೆಜ್ಜೆ ಸಪ್ಪಳ ನಿಂತುದ್ದನ್ನು ಗಮನಿಸಿ, ಹಿಂದಿರುಗಿ ನೋಡಿದಳು. ಅವಳಿಗೆ ಆಶ್ಚರ್ಯವಾಯಿತು.

"ಏನಾಯ್ತು ನಿಂಗೆ?" ಕೇಳಿದಳು ಅಮ್ಮ.

ಕೆಂಚು ಕೂದಲಿನ, ಕೆಂಪುಕೆನ್ನೆಯ ಮಗಳು ಸೆಲೆಸ್ಟಿ ಒದೆ ತಿಂದ ಮಗುವಿನಂತೆ ಮುಖ ಮಾಡಿಕೊಂಡು ಸಣ್ಣಗೆ ಅಳುತ್ತಾ ಕೂತಿದ್ದಳು. ಉರಿಬಿಸಿಲಿನಲ್ಲಿ ಬಸವಳಿದ ಅವಳ ಮುಖ ಬೆಂಕಿ ಕೆಂಡದಂತಾಗಿತ್ತು.

"ನನ್ನ ಕೈಯಲ್ಲಿ ಈ ಪಾತ್ರೆ ಹೊತ್ತುಕೊಂಡು ಬರಲಿಕ್ಕಾಗಲ್ಲ"

ಅಮ್ಮ ತನ್ನ ಮಗಳನ್ನು ಸಂಶಯದಿಂದ ನೋಡಿದಳು.

"ಏನು ತೊಂದರೆ ನಿಂಗೆ ಹೇಳು", ಕೇಳಿದಳು.

"ಇದು ಬಹಳಾ ಭಾರ, ನನ್ನ ಕೈಲಾಗೋಲ್ಲ, ಸುಸ್ತಾಗ್ತಿದೆ". ಭಾರದ ಎರಡು ಹಾಲಿನ ಪಾತ್ರೆಗಳನ್ನ ನೆಲದ ಮೇಲೆ ಇಟ್ಟು ಅದರ ಮಧ್ಯದಲ್ಲಿ ಕುಳಿತು ತನ್ನ ಬಟ್ಟೆಯಲ್ಲಿ ಮುಖ ಮುಚ್ಚಿಕೊಂಡು ಸೆಲೆಸ್ಟಿ ಉತ್ತರಿಸಿದಳು. ದನಿ ಉಡುಗಿಹೋಗಿತ್ತು. ದುಃಖ ತುಂಬಿತ್ತು.

"ಯಾಕೆ ಏನಾಗಿದೆ ನಿಂಗೆ ಹೇಳು" ಮತ್ತೊಮ್ಮೆ ಕೇಳಿದಳು ಅಮ್ಮ.

ಮಗಳು ಸಣ್ಣಗೆ ಮುಲುಗಿದಳು. "ನಾನೀಗ ಬಸುರಿ, ನನ್ನ ಹೊಟ್ಟೆಯಲ್ಲಿ ಮಗು ಇದೆ". ಇಷ್ಟು ಹೇಳಿ ಒಂದೇ ಸಮನೆ ಜೋರಾಗಿ ಅಳಲಾರಂಭಿಸಿದಳು.

ಇದ್ದಕ್ಕಿದ್ದ ಹಾಗೇ ಇದನ್ನು ಕೇಳಿದ ಅಮ್ಮ ಸ್ವಲ್ಪ ಹೊತ್ತು ಏನು ಹೇಳಬೇಕೆಂದು ತೋಚದೇ ದಂಗಾಗಿ ನಿಂತಳು. ಸುಧಾರಿಸಿಕೊಂಡು ತನ್ನ ಕೈಲಿದ್ದ ಭಾರವನ್ನು ಕೆಳಗಿಟ್ಟು "ನಿನ್ನ ಹೊಟ್ಟೆಯಲ್ಲಿ ಮಗು ಇದೆಯಾ? ಇದು ಹೇಗಾಯ್ತು? ಹಾಳಾದವಳೇ" ಎಂದು ಬೈಯತೊಡಗಿದಳು.

ಮಾಲಿವೋಯಿರೆಗಳು ಸಮಾಜದಲ್ಲಿ ಒಳ್ಳೆಯ ಗೌರವ ಹೊಂದಿದ, ನಿಯತ್ತಿನ ವ್ಯಾಪಾರದ, ಸಾಕಷ್ಟು ಸಂಪತ್ತುಳ್ಳ ರೈತರಾಗಿದ್ದರು. ಅವರಿಗೆ ಊರಿನಲ್ಲಿ ಒಳ್ಳೆಯ ಹೆಸರಿತ್ತು.

ಬಿಳುಚಿದ ಮುಖದೊಡನೆ ತಾಯಿ ಅಳುತ್ತಿದ್ದ ಮಗಳನ್ನು ನೋಡಿದಳು. "ಇದು ಹೇಗಾಯ್ತು ಹೇಳು, ದರಿದ್ರ ರಂಡೆ" ಎಂದು ತಾನೂ ಅಳುತ್ತಾ ಕೂಗಲು ಶುರುಮಾಡಿದಳು.

ಅಮ್ಮನ ಈ ಅವತಾರ ನೋಡಿದ ಮಗಳು ಸೆಲೆಸ್ಟಿ ಹೆದರಿದಳು.

ಆ ತಾಯಿ ಯೋಚಿಸತೊಡಗಿದಳು. ತನ್ನ ಮಗಳನ್ನು ಈ ಸ್ಥಿತಿಗೆ ತಂದಿಟ್ಟವರು ಯಾರಿರಬಹುದು. ಮೊದಲೇ ಗೊತ್ತಾಗಿದ್ದರೆ ಅದನ್ನು ತೆಗೆಸಿ ಹಾಕಿಬಿಡಬಹುದಿತ್ತು. ಆದರೂ ಈಗಲೂ ಕಾಲ ಮಿಂಚಿಲ್ಲ. ಇಂತಹ ಕೆಲಸ ಮಾಡಿಕೊಂಡಿರುವುದು ತನ್ನ ಮಗಳು ಒಬ್ಬಳೇ ಏನಲ್ಲ. ಆದರೆ ಸಮಾಜದಲ್ಲಿ ಗೌರವ ಹೊಂದಿರುವ ತಮಗೆ ಈ ವಿಷಯದಲ್ಲಿ ಜನರನ್ನು ಎದುರಿಸುವುದು ಅಷ್ಟು ಸುಲಭವಲ್ಲ.

"ಯಾರದು ಹೇಳು, ಹಾದರಗಿತ್ತಿ" ಮತ್ತೆ ಕೂಗಿದಳು.

ಅಳುತ್ತಾ ಕೂತಿದ್ದ ಸೆಲೆಸ್ಟಿ ಏನಾದರಾಗಲಿ ಹೇಳಲೇಬೇಕೆಂದುಕೊಂಡು ಒಂದು ಕ್ಷಣಕ್ಕೆ ಧೈರ್ಯ ತಂದುಕೊಂಡು ನಡುಗುವ ದನಿಯಲ್ಲಿ ಹೇಳಿದಳು.

"ಇದು ಪೋಲೈಟ್ ನಿಂದ ಆಗಿದ್ದು"

ಮಗಳ ಮಾತು ಕೇಳಿ ತಾಯಿಗೆ ಸಿಟ್ಟು ತಾರಕಕ್ಕೇರಿತು. ಮಗಳ ಬಳಿ ನುಗ್ಗಿದವಳೇ ಅವಳನ್ನು ಹೊಡೆಯತೊಡಗಿದಳು. ಕಾಲುಗಳ ನಡುವೆ ಮುಖ ಮುಚ್ಚಿಕೊಂಡು ಕೂತ ಸೆಲೆಸ್ಟಿಗೆ ತಲೆ ಮೇಲೆ, ಬೆನ್ನಿನ ಮೇಲೆ ಎಲ್ಲಾ ಕಡೆ ತಾಯಿಯ ಮುಷ್ಟಿಯ ಗುದ್ದುಗಳು ಬಿದ್ದವು.

ಏನೋ ಗಲಾಟೆಯಾಗುತ್ತಿದ್ದುದನ್ನು ಕೇಳಿದ ಹಸುಗಳು ಮೇಯುವುದನ್ನು ನಿಲ್ಲಿಸಿ ಒಮ್ಮೆ ತಲೆ ಎತ್ತಿ ಈ ಕಡೆಗೆ ನೋಡಿದವು. ಇವರಿಗೆ ಹತ್ತಿರವಿದ್ದ ಹಸು ತನ್ನ ಕುತ್ತಿಗೆ ಉದ್ದ ಮಾಡಿ ಒಮ್ಮೆ ಹೂಂಕರಿಸಿತು.

ಸುಸ್ತಾಗುವವರೆಗೂ ಹೊಡೆದು ತಾಯಿ ಕುಸಿದು ಕೂತಳು. ಸ್ವಲ್ಪ ಹೊತ್ತಿಗೆ ಕೋಪವು ಇಳಿದು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಪಡತೊಡಗಿದಳು.

"ಇದು ಹೇಗೆ ಸಾಧ್ಯ? ನಿನಗೆ ಬುದ್ದಿ ಇಲ್ಲ. ಆ ಪೋಲೈಟ್ ನಿನಗೆ ಏನೋ ಮೋಸ ಮಾಡಿದ್ದಾನೆ, ದರಿದ್ರದವನು, ಅಯ್ಯೋ ದೇವರೇ" ಎಂದಳು.

ಹೊಡೆತ ತಿಂದು ನೆಲದ ಮೇಲೆ ಬಿದ್ದುಕೊಂಡಿದ್ದ ಸೆಲೆಸ್ಟಿ ಹಾಗೆಯೇ ಸಣ್ಣಗೆ ಹೇಳಿದಳು, "ನಾನು ಅವನಿಗೆ ದುಡ್ಡು ಕೊಡುತ್ತಿರಲಿಲ್ಲ" .

ಅಮ್ಮನಿಗೆ ಈಗ ಅರ್ಥವಾಯಿತು.

****

ಪ್ರತಿವಾರದಲ್ಲಿ ಎರಡು ದಿನ, ಅಂದರೆ, ಬುಧವಾರ ಮತ್ತು ಶನಿವಾರ, ಅವರು ಬೆಳೆದ ಕೆಲವು ಬೆಳೆಗಳನ್ನು, ಕೋಳಿಗಳನ್ನು, ಮೊಟ್ಟೆಗಳನ್ನು ತೆಗೆದುಕೊಂಡು ಮಾರಲು ಪಟ್ಟಣಕ್ಕೆ ಸೆಲೆಸ್ಟಿ ಹೋಗುತ್ತಿದ್ದಳು. ಅದಕ್ಕಾಗಿ ಅವಳು ಪೋಲೈಟ್ ನ ಕುದುರೆಗಾಡಿಯನ್ನೇ ಆಶ್ರಯಿಸಿದ್ದಳು. ಅದರಲ್ಲೇ ಅವಳು ಹೋಗಿಬರಬೇಕಾಗಿತ್ತು. ಬೆಳಗ್ಗೆ ಮುಂಜಾನೆಯೇ ಎರಡು ದೊಡ್ಡ ಬುಟ್ಟಿಗಳನ್ನು ಹೊತ್ತುಕೊಂಡು ಹೊರಡುತ್ತಿದ್ದಳು. ಒಂದರಲ್ಲಿ ಡೈರಿ ಉತ್ಪನ್ನಗಳು, ಮತ್ತೊಂದರಲ್ಲಿ ಕೋಳಿಗಳನ್ನು ತುಂಬಿಕೊಂಡು ದೊಡ್ಡರಸ್ತೆವರೆಗೆ ನೆಡೆದುಕೊಂಡು ಹೋಗಿ ಅಲ್ಲಿ ಪಟ್ಟಣಕ್ಕೆ ಹೋಗಲು ಬಂಡಿಗಾಗಿ ಕಾಯುತ್ತಿದ್ದಳು. ರಸ್ತೆ ಪಕ್ಕದಲ್ಲೇ ತನ್ನ ಸಾಮಾನುಗಳನ್ನು ರಾಶಿಹಾಕಿಕೊಂಡು ಕುಲಿತಿರುತ್ತಿದ್ದಳು. ಹಳದಿ ಬಣ್ಣದ ಗಾಡಿ ಕುಂಟುತ್ತಾ ಬರುತ್ತಿತ್ತು. ಆ ಗಾಡಿಯನ್ನು ಓಡಿಸುವ ಮನುಷ್ಯ ಪೋಲೈಟ್ ಇನ್ನೂ ಯುವಕ. ಕೊಳಕು ಬಟ್ಟೆಗಳನ್ನು ಹಾಕಿಕೊಂಡು, ಬಿಸಿಲಿನಲ್ಲಿ ಸೀದುಹೋದಂತೆ ಕಾಣುತ್ತಿದ್ದ. ಇವಳನ್ನು ಕಾಣುತ್ತಲೇ ಅಷ್ಟು ದೂರದಿಂದಲೇ ತನ್ನ ಚಾಟಿ ಬೀಸುತ್ತಾ ಕೂಗುತ್ತಿದ್ದ, "ಗುಡ್ ಮಾರ್ನಿಂಗ್ ಮೇಡಂ ಸೆಲೆಸ್ಟಿ, ಚೆನ್ನಾಗಿದ್ದೀರಾ"...? ತಕ್ಷಣವೇ ಸೆಲೆಸ್ಟಿ ಎದ್ದು ತನ್ನ ಸಾಮಾನುಗಳನ್ನೆಲ್ಲಾ ಒಂದೊಂದಾಗಿ ಎತ್ತಿ ಕೊಡುತ್ತಿದ್ದಳು. ಪೋಲೈಟ್ ಅದನ್ನೆಲ್ಲಾ ಬಂಡಿಯಲ್ಲಿ ಹಾಕಿಕೊಂಡು ಅನಂತರ ಕೆಳಗಿಳಿದು ಅವಳನ್ನು ಬಂಡಿ ಹತ್ತಿಸುತ್ತಿದ್ದ. ಹತ್ತಿಸುವಾಗ ಅವಳ ನಯವಾದ ಕಾಲುಗಳು ದರ್ಶನವಾಗುತ್ತಿದ್ದಂತೇ ತಮಾಷೆ ಮಾಡುತ್ತಿದ್ದ, "ಕಾಲುಗಳು ಮೊದಲಿಗಿಂತ ಸಣ್ಣವೇನೂ ಆಗಿಲ್ಲ".

ಅದನ್ನು ಕೇಳಿ ಅವಳು ಅವಳು ನಗುತ್ತಿದ್ದಳು.

"ಗಟ್ಟಿಯಾಗಿ ಕುಳಿತುಕೋ ಹುಡುಗಿ" ಎಂದು ಹೇಳಿ ಕುದುರೆಗಳನ್ನು ಹೊರಡಿಸುತ್ತಿದ್ದ. ಸೆಲೆಸ್ಟಿ ತನ್ನ ಪರ್ಸಿನಿಂದ ಐದು ಪೆನ್ನಿ* ನಾಣ್ಯಗಳನ್ನು ತೆಗೆಯುತ್ತಿದ್ದಳು.. ಮೂರು ಪೆನ್ನಿ ಅವಳ ಪ್ರಯಾಣದ ದರ ಮತ್ತು ಎರಡು ಪೆನ್ನಿ ಸಾಮಾನುಗಳಿಗಾಗಿ. ಅದನ್ನು ಪೋಲೈಟ್ ಗೆ ಕೊಡುತ್ತಿದ್ದಳು. . ಅದನ್ನು ತೆಗೆದುಕೊಂಡು ಅವನು ತುಂಟತನದಿಂದ ಕಣ್ಣುಹೊಡೆದು ಕೇಳುತ್ತಿದ್ದ, "ಇವತ್ತು ಏನಾದ್ರೂ ಆಟ ಆಡೋಣವೇ?"

ಅಷ್ಟು ದುಡ್ಡುಕೊಟ್ಟು ಪ್ರಯಾಣ ಮಾಡುವುದು ಸೆಲೆಸ್ಟಿಗೆ ಜಾಸ್ತಿ ಎನಿಸುತ್ತಿತ್ತು. ಎರಡು ಮೈಲು ಪ್ರಯಾಣಕ್ಕೆ ಅರ್ಧ ಫ್ಯ್ರಾಂಕ್*ಗಳಷ್ಟು ಹಣವನ್ನು ಕೊಡಲು ದುಬಾರಿಯೆನಿಸುತ್ತಿತ್ತು .

"ನನ್ನಂತಾ ಒಳ್ಳೆಯ ಗಿರಾಕಿಯಿಂದ ನೀನು ಮೂರು ಪೆನ್ನಿಗಳಿಗಿಂತ ಜಾಸ್ತಿ ತೆಗೆದುಕೊಳ್ಳಬಾರದಪ್ಪಾ", ಒಂದು ದಿನ ದುಡ್ದು ಕೊಡುತ್ತಾ ಅವಳು ಕೇಳಿದಳು.

ಪೋಲೈಟ್ ನಗುತ್ತಾ ಹೇಳಿದ. "ಬರೀ ಮೂರು ಪೆನ್ನಿಗಳಾ? ನಿನ್ನ ಬೆಲೆ ಅದಕ್ಕಿಂತಾ ಜಾಸ್ತಿ ಸುಂದರಿ !"

ಅವಳು ಮತ್ತೆ ಹೇಳಿದಳು. "ನೀನು ನನ್ನಿಂದಲೇ ತಿಂಗಳಿಗೆ ಎರಡು ಫ್ಯ್ರಾಂಕ್ ಗಳಷ್ಟು ಸಂಪಾದಿಸುತ್ತೀಯ."

ಕುದುರೆಗಳ ಬೆನ್ನ ಮೇಲೆ ಚಾಟಿಯಾಡಿಸುತ್ತಾ ಆತ ಹೇಳಿದ, "ಒಂದು ಕೆಲಸ ಮಾಡೋಣ, ನಾನು ನಿನ್ನ ಸೇವೆ ಮಾಡುತ್ತೇನೆ, ನಾವು ನಿನ್ನ ದುಡ್ದಿನ ಬದಲಾಗಿ ಆಟ ಆಡೋಣ"

"ಆಟ? ಹಾಗಂದ್ರೆ ಏನು ?" ಅವಳು ಮುಗ್ಧವಾಗಿ ಕೇಳಿದಳು.

ಪೋಲೈಟ್ ಜೋರಾಗಿ ನಕ್ಕ.

ಆಟ ಅಂದ್ರೆ ಅದೊಂಥರಾ ಆಟ, ನಮ್ಮಿಬ್ಬರ ಆಟ, ಸಂಗೀತವಿಲ್ಲದೇ ಕುಣಿಯುವಂತದ್ದು, ಹುಡುಗ ಹುಡುಗಿ ಆಟ.

ಅವಳಿಗೆ ಅದು ಈಗ ಅರ್ಥವಾಗಿ ನಾಚಿಕೆಯಿಂದ ಮುಖ ಕೆಂಪಾಯಿತು. "ನಂಗೆ ಅಂತಹ ಆಟ ಎಲ್ಲಾ ಬೇಡ" ಅವಳು ಹೇಳಿದಳು.

ಪೋಲೈಟ್ ಮತ್ತದೇ ತುಂಟ ದನಿಯಲ್ಲಿ ಘೋಷಿಸಿದ, "ಒಂದಲ್ಲಾ ಒಂದು ದಿನ ಬಂದೇ ಬರ್ತೀಯ ಸುಂದರಿ, ಆಟ ಆಡೇ ಆಡ್ತೀವಿ" .

ಅದಾದ ಮೇಲೆ ಪ್ರತಿ ಬಾರಿ ಪ್ರಯಾಣಿಸುವಾಗಲೂ ಅವಳು ದುಡ್ಡು ಕೊಡಲು ಹೋದಾಗಲೆಲ್ಲಾ "ಇವತ್ತು ಆಟ ಆಡೋಣವೇ" ಎಂದು ಕೇಳುತ್ತಿದ್ದ. ಅವಳೂ ಕೂಡ ತಮಾಷೆಯಾಗಿ "ಇವತ್ತು ಬೇಡ ಪೋಲೈಟ್, ಇನ್ನೊಂದು ದಿನ ಆಡೋಣ" ಎನ್ನುತ್ತಿದ್ದಳು. ಸರಿ ಎಂದು ಅವನು ನಗುತ್ತಿದ್ದ.

ಸೆಲೆಸ್ಟಿ ಮನಸ್ಸಿನಲ್ಲೇ ಲೆಕ್ಕ ಹಾಕಿದ್ದಳು. ಈ ಎರಡು ವರ್ಷಗಳಲ್ಲಿ ಅವನು ಪೋಲೈಟನಿಗೆ ನಲ್ವತ್ತೆಂಟು ಫ್ಯ್ರಾಂಕ್ ಗಳನ್ನು ಕೊಟ್ಟಿದ್ದಳು. ಇನ್ನೂ ಎರಡು ವರ್ಷಗಳು ಹೀಗೇ ಹೋದರೆ ಸುಮಾರು ನೂರು ಫ್ಯ್ರಾಂಕ್ ಗಳನ್ನು ಅವನಿಗೆ ಕೊಟ್ಟಂತಾಗುತ್ತಿತ್ತು. ಅದು ದೊಡ್ಡ ಮೊತ್ತವಾಗಿತ್ತು.

ಒಂದು ದಿನ ಹೀಗೆ ಅವರಿಬ್ಬರೇ ಹೋಗುತ್ತಿದ್ದಾಗ ಆತ ಎಂದಿನಂತೆ ಮತ್ತೆ ಕೇಳಿದ , "ಇನ್ನೂ ನಾವು ಆಟ ಆಡೇ ಇಲ್ಲ"

"ಇವತ್ತು ಆಡೋಣ" ಅವಳು ಉತ್ತರಿಸಿದಳು. ಗಾಡಿಯ ಬಿಳಿ ಕುದುರೆ ಒಮ್ಮೆ ತನ್ನ ಎರಡೂ ಕಾಲುಗಳನ್ನು ಮೇಲೆತ್ತಿ ಕೆನೆಯಿತು. ಅವಳಿಗೆ ಒಮ್ಮೆ ತಾನಿದ್ದ ಸ್ಥಳವೇ ನಡುಗಿದಂತಾಯಿತು. "ಬಾ ಹುಡುಗೀ ಬಾ..." ಎಂದು ಪೋಲೈಟನ ದನಿ ಪ್ರತಿಧ್ವನಿಸಿತು. ಗಾಡಿಯ ಬೇರೆ ಯಾವ ಶಬ್ದವೂ ಕೇಳದಂತಾಯಿತು. ಸೆಲೆಸ್ಟಿಗೆ ಸ್ವಲ್ಪ ಕಾಲ ಮೈ ಭಾರವಾಗಿ ನಿಧಾನಕ್ಕೆ ಹಗುರಾಗುತ್ತಾ ಹೋಯಿತು.

ಅನಂತರ ಅವಳಿಗೆ ತಾನು ಬಸುರಿಯಾಗಿರುವುದು ಗೊತ್ತಾದಾಗ ಮೂರು ತಿಂಗಳಾಗಿತ್ತು.

****

ಇದೆಲ್ಲವನ್ನೂ ಅಳುತ್ತಾ ತನ್ನ ತಾಯಿಗೆ ಹೇಳಿದಳು.

ತಾಯಿ ಕೇಳಿದಳು, "ಎಷ್ಟು ಉಳಿತಾಯ ಮಾಡಿದೆ?"

"ನಾಲ್ಕು ತಿಂಗಳು, ಅಂದರೆ ಒಟ್ಟು ಎಂಟು ಫ್ಯ್ರಾಂಕ್" ಉತ್ತರಿಸಿದಳು ಸೆಲೆಸ್ಟಿ.

ಮತ್ತೆ ತಾಯಿಗೆ ಕೋಪ ನೆತ್ತಿಗೇರಿ ಮಗಳಿಗೆ ಸರಿಯಾಗಿ ಬಡಿದಳು.

"ಈ ವಿಷಯ ಅವನಿಗೆ ಹೇಳಿದ್ದೀಯಾ?"

"ಇಲ್ಲ ಹೇಳಿಲ್ಲ"

"ಯಾಕೆ ಹೇಳಿಲ್ಲ?"

"ಈ ವಿಷಯ ಗೊತ್ತಾದರೆ ಅವನು ಇನ್ಮುಂದೆ ಹಣ ಕೇಳಬಹುದು!"

ತಾಯಿ ಸ್ವಲ್ಪಹೊತ್ತು ಸುಮ್ಮನೇ ಯೋಚಿಸಿದಳು. ಒಂದು ನಿಟ್ಟುಸಿರಿಟ್ಟು ಹಾಲಿನ ಪಾತ್ರೆಗಳನ್ನು ಎತ್ತಿಕೊಂಡಳು.

"ಎದ್ದೇಳು, ಮನೆಗೆ ನೆಡಿ" ಎಂದು ಮಾತು ನಿಲ್ಲಿಸಿದವಳು ಮತ್ತೆ ಮುಂದುವರೆಸಿದಳು.

"ಅವನಿಗೆ ಈ ವಿಷಯ ಹೇಳಲು ಹೋಗಬೇಡ, ಆರೆಂಟು ತಿಂಗಳು ಅವನಿಗೇ ಈ ವಿಷಯ ಗೊತ್ತಾಗುವವರೆಗೂ ಹಣ ಕೊಡುವುದು ಬೇಡ"

ಸೆಲೆಸ್ಟಿ ನಿಧಾನಕ್ಕೆ ಎದ್ದು ನಿಂತಳು. ಅತ್ತೂ ಅತ್ತೂ ಕಣ್ಣುಗಳು ಊದಿಕೊಂಡಿದ್ದವು. ಭಾರವಾದ ಹೆಜ್ಜೆಯಿಡುತ್ತಾ ನೆಡೆಯತೊಡಗಿ ಗೊಣಗಿಕೊಂಡಳು.

"ಆಯ್ತು, ಖಂಡಿತ ನಾನು ಅವನಿಗೆ ಹೇಳೋಲ್ಲ".

=============================
(ಇಂಗ್ಲೀಷ್ ನಿಂದ ಅನುವಾದಿತ)

ಮೂಲ ಕತೆ: Confessing
ಲೇಖಕ: Guy de Maupassant


*ಫ್ರ್ಯಾಂಕ್ಸ್ (Francs)/ ಪೆನ್ನಿ (Penny) = ಹಳೆಯ ಫ್ರೆಂಚ್ ಕರೆನ್ಸಿಗಳು
*ಮಾಲಿವೋಯಿರೆ = ಫ್ರಾನ್ಸ್ ದೇಶದ ಒಂದು ಜನಜಾತಿ

ಬುಧವಾರ, ಜೂನ್ 30, 2010

ಮಳೆಗಾಲಕ್ಕೆ....

ಬ್ಲಾಗ್ ಒಣಗಿ ನಿಂತಿದೆ. ಮಳೆಗಾಲ ಶುರುವಾಗುತ್ತದೆ, ನೀರು ಹರಿಯುತ್ತದೆ ಎಂದು ಕಾಯುತ್ತಿದ್ದರೆ ಒಂದ್ನಾಲ್ಕು ದಿನ ಹನಿ ಉದುರಿಸಿ ಮಳೆ ನಾಪತ್ತೆಯಾಗಿದೆ. Only few people can feel the rain, others just get wet ಅಂತ ಉಪನಿಷತ್ತಿನಲ್ಲಿ ಒಂದು ಮಾತಿದೆ :) . ಅದು ಆಗಾಗ ಎಸ್ಸೆಮ್ಮೆಸ್ಸಿನಲ್ಲೂ ಹರಿದಾಡುತ್ತಿರುತ್ತದೆ. ಆದರೆ ಬೆಂಗಳೂರಿನಲ್ಲಿ feeling the rain ಯಾಕೋ ಕಷ್ಟ. ಇಲ್ಲೇನಿದ್ದರೂ feel ಅಲ್ಲ fear ಮಾತ್ರ. ಆಫೀಸಿನಲ್ಲಿ ಕೂತಾಗ ಹೊರಗೆ ಮಳೆ ಶುರುವಾದರೆ ಒಂದು ಬಿಸಿಬಿಸೀ ಕಾಫಿ ಹಿಡಿದುಕೊಂಡು ಕಿಟಕಿಯಿಂದ ಹೊರಗೆ ನೋಡುತ್ತಾ ಹಿತವಾಗುವ ಹೊತ್ತಿಗೆ ಆತಂಕವೂ ಶುರುವಾಗುತ್ತದೆ. ಯಾವ ರಸ್ತೆಯಲ್ಲಿ ನೀರು ತುಂಬಿಕೊಂಡಿದೆಯೋ, ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಆಗಿದೆಯೋ, ಮನೆಗೆ ಹೊರಡಬಹುದಾ, ಹೊರಟರೆ ಇವತ್ತಿಗೇ ತಲುಪಬಹುದಾ ಹೀಗೇ ಹಲವಾರು. ಮಳೆ ನಿಂತಮೇಲೆ ಮಿಜಿಮಿಜಿಗುಡುವ ರಸ್ತೆಗಳು, ಸಿಟಿಬಸ್ಸುಗಳು, ವಾಹನ ಸವಾರಿಯೆಂಬ ಸರ್ಕಸ್ಸು ನೆನೆಸಿಕೊಂಡರೆ ಮಳೆಯ feelಗಿಂತ fear ಜಾಸ್ತಿ. ಇರಲಿ.

ಈ ಮಳೆಯ ಬಗ್ಗೆ ಸಾಕಷ್ಟು ಬ್ಲಾಗುಗಳಲ್ಲಿ ಬರಹಗಳಲ್ಲಿ ನೀರು ಹರಿದಿದೆ. ಮತ್ತೆ ನಾನು ಹರಿಸುವುದಕ್ಕೆ ಹೋಗುವುದಿಲ್ಲ. ಮನೆಗೆ ಹೋಗದೇ ರಾಶಿ ದಿನಗಳಾಗಿವೆ. ಪ್ರತೀಸಲವೂ ಈ ಬಾರಿ ನಾಲ್ಕು ದಿನ ಪೂರ್ತಿ ವಿಶ್ರಾಂತಿ ತೆಗೆದುಕೊಂಡುಬಿಡೋಣ ಸುಖವಾಗಿ ಎಂದು ಹೋಗುವುದೇನೋ ಹೌದು. ಆದರೆ ಒಂದೆರಡು ದಿನ ಮಲಗಿ, ಎದ್ದು, ಟೀವಿ ರಿಮೋಟ್ ಹಿಡಿದು ಚಾನಲ್ಲುಗಳನ್ನು ಇಪ್ಪತ್ನಾಲ್ಕು ಸಲ ಬದಲಾಯಿಸಿ, ಅಕ್ಕ ಪಕ್ಕದವರನ್ನೆಲ್ಲಾ ಮಾತನಾಡಿಸಿ, ಊರು ತಿರುಗಿ ಆಗುತ್ತಿದ್ದಂತೆಯೇ ಮತ್ತೆ ಕಾಲು ಕೆರೆಯುತ್ತದೆ. ಎಲ್ಲಾದ್ರೂ ಹೋಗೋಣ ಅನ್ನುತ್ತೇನೆ. ಅಪ್ಪ ತಿರುಗಾಡಲು ಸದಾ ತಯಾರು. ಸ್ಥಳಗಳ ಪಟ್ಟಿ ಕೊಟ್ಟುಬಿಡುತ್ತಾರೆ. ಅಮ್ಮ ಮಾತ್ರ 'ಈ ಮಳೆಲ್ಲಿ ಎಲ್ಲೂ ತಿರ್ಗಲ್ ಹೋಗದ್ ಬೇಡ, ಸುಮ್ನೆ ಮನೆಲ್ ಇರಿ" ಅನ್ನುತ್ತಾಳೆ. ಕೇಳೋರ್ಯಾರು ?

ವಾಪಸ್ಸು ಬೆಂಗ್ಳೂರಿಗೆ ಬಂದ ಮೇಲೆ ಒಂದು ಮಾನ್ಸೂನ್ ಟ್ರೆಕ್ಕು, ಒಂದಿಷ್ಟು ತಿರುಗಾಟ. ಜೊತೆಗೆ ಎರಡು ದಿನ ಶೀತ, ಒಂದು ಸಣ್ಣ ಜ್ವರ optional. ಈ ಬಾರಿ ಮಳೆಗಾಲದಲ್ಲಿ ಗದ್ದೆ ನೆಟ್ಟಿ ಮಾಡುವ ವಾರದಲ್ಲಿ ಅಜ್ಜನ ಮನೆಗೂ ಹೋಗಬೇಕು. ಪ್ರಕೃತಿಯ ಮೇಲೆ ಪ್ರೀತಿ ಜಾಸ್ತಿಯಾಗುತ್ತಲೇ ಇದೆ. ಗಮ್ಯವೆಲ್ಲಿದೆಯೋ ಗೊತ್ತಿಲ್ಲ !

ಯಾವುದಕ್ಕೂ, ಬಾ ಮಳೆಯೇ ಬಾ....

ಸೋಮವಾರ, ಮೇ 17, 2010

ಸಿನೆಮಾ ನೋಡ್ಬೇಕು

ಈ ಬೆಂಗಳೂರಿನಲ್ಲಿ ನೋಡಬೇಕೆನಿಸಿದ ಸಿನೆಮಾಗಳು ಅದ್ಯಾವ ಟಾಕೀಸಲ್ಲಿ ಇರುತ್ತದೋ ಗೊತ್ತಾಗುವುದಿಲ್ಲ, ಪತ್ರಿಕೆಯಲ್ಲಿ ಹಾಕಿದ ಟಾಕೀಸಿಗೆ ಹೋದರೆ ಬೇರೆ ಯಾವುದೋ ಸಿನೆಮಾ ಇರುತ್ತದೆ. ವಾರದ ದಿನಗಳಲ್ಲಿ ಹೋಗಲು ಆಗುವುದಿಲ್ಲ. ವಾರಾಂತ್ಯಗಳಲ್ಲಿ ಹಂಗೂ ಸರಿಯಾಗಿ ಗೊತ್ತುಮಾಡಿಕೊಂಡು ಹೋದರೆ ಟಿಕೇಟು ಸಿಗುವ ಖಾತ್ರಿ ಇರುವುದಿಲ್ಲ. ಟಿಕೇಟು ಸಿಗುವ ಟಾಕೀಸುಗಳು ಹತ್ತಿರವಿರುವುದಿಲ್ಲ. ಸ್ವಲ್ಪ ಚೆನ್ನಾಗಿ ಓಡುತ್ತಿದೆ ಅಂತಾದರೆ ಟಾಕೀಸಿನವರೇ ಬ್ಲ್ಯಾಕ್ ಟಿಕೆಟ್ ಮಾರುತ್ತಿರುತ್ತಾರೆ. ಬುಕ್ ಮಾಡಿಸಿಕೊಂಡು ಹೋಗೋಣವೆಂದರೆ ಅವತ್ತು ನಾನೇ ಎಲ್ಲಾದರೂ ಬುಕ್ ಆಗಿ ಹೋಗಿರುತ್ತೇನೆ. ಸುಮಾರು ದಿನಗಳ ನಂತರ ಹೋದರಾಯಿತೆಂದು ಬಿಟ್ಟರೆ ಟಾಕೀಸುಗಳಿಂದ ತೆಗೆದೇ ಬಿಟ್ಟಿರುತ್ತಾರೆ. ಕೊನೆಗೆ ಎಲ್ಲಾ ಸರಿಯಾದರೂ ನಮಗೇ ಟೈಮ್ ಇರುವುದಿಲ್ಲ ಅಥವಾ ಜೊತೆಗ್ಯಾರೂ ಸಿಗುವುದಿಲ್ಲ! ಆದ್ದರಿಂದ ಬೆಂಗಳೂರಿಗೆ ಬಂದಮೇಲೆ ಎಷ್ಟೋ ಒಳ್ಳೊಳ್ಳೆ ಸಿನೆಮಾಗಳು ಹೀಗೇ ನೋಡಲಾಗದೇ ತಪ್ಪಿಹೋದದ್ದಿದೆ. ಇರಲಿ. ಒಟ್ನಲ್ಲಿ ನಮಗೇನು ಮಾಡಕ್ಕಾಗುವುದಿಲ್ಲವೋ ಅದಕ್ಕೆ ನೆಪ ಹೇಳಬೇಕು ಹೀಗೆ ಅಷ್ಟೆ.

ಸದ್ಯಕ್ಕೆ ನೋಡಬೇಕಾದ ಸಿನೆಮಾಗಳು

ಪೃಥ್ವಿ : ಅದೇನು ವಿಪರ್ಯಾಸವೋ, ವಿಧಿಲಿಖಿತವೋ, ವಿಪರೀತವೋ ಗೊತ್ತಿಲ್ಲ, ನಾನು ಟಾಕೀಸಿನಲ್ಲಿ ನೋಡಿದ ಪುನೀತ್ ಚಿತ್ರವೆಂದರೆ ’ಆಕಾಶ್’ ಒಂದೇ. ಅದೂ ಕೂಡ ಯಾವತ್ತೋ ಹೊತ್ತು ಕಳೆಯಲು ನವರಂಗ ಟಾಕೀಸಿನಲ್ಲಿ ೧೦೦ ದಿನ ಆದಮೇಲೆ ಹೋಗಿದ್ದು. ಮತ್ಯಾವುದೋ ಕಾರಣಕ್ಕೋಸ್ಕರ ’ಅರಸು’ ಚಿತ್ರಕ್ಕೆ ಹೋಗಬೇಕೆಂದಿದ್ದರೂ ಮೇಲೆ ಹೇಳಿದ ಕಾರಣಗಳಲ್ಲಿ ಯಾವುದೋ ಒಂದರಿಂದ ಅದು ತಪ್ಪಿ ಹೋಯಿತು. ಈಗ ಪೃಥ್ವಿ ನೋಡಬೇಕು. ಈ ಸಿನೆಮಾ ಬಗ್ಗೆ ಕೆಲವ್ರು ಓ.ಕೆ ಅಂದ್ರು, ಕೆಲವ್ರು ಸೂಪರ್ ಅಂದ್ರು, ಕೆಲವರು ಇನ್ನೇನೋ ಅಂದರು. ಅದೆಲ್ಲಾ ಗೊತ್ತಿಲ್ಲ. ಪ್ರಚಲಿತ ಘಟನೆಗಳ, ಸಮಕಾಲೀನ ಕತೆಯ ಸಿನೆಮಾಗಳು ಹೀಗೆ ಕಮರ್ಶಿಯಲ್ಲಾಗಿ ಬರಬೇಕು. ನೋಡ್ಬೇಕಾದ ಸಿನೆಮಾಗಳ ಪಟ್ಟಿಗೆ ಇದು ಸೇರಿದೆ.

ಇಜ್ಜೋಡು: ನೋಡಿದವರ್ಯಾರೂ ಚೆನ್ನಾಗಿದೆ ಅನ್ನಲಿಲ್ಲ. ಆದ್ರೂ ನನಗೆ ನೋಡಬೇಕು ಅನ್ನಿಸಿಬಿಟ್ಟಿದೆ. ಸತ್ಯು ಸಿನೆಮಾ ಎನ್ನುವುದು ಒಂದು ಕಾರಣವೆಂದೂ, ಮೀರಾ ಜಾಸ್ಮಿನ್ ಮತ್ತೊಂದು ಪ್ರಬಲ ಕಾರಣವೆಂದೂ ಡೌಟು ! ;) ಆದರೆ ಯಾವ ಟಾಕೀಸಿನಲ್ಲೂ ಇರುವುದು ಖಾತ್ರಿ ಇಲ್ಲ. ಇದ್ದರೂ ನಾ ಹೋಗುವುದ್ಯಾವಾಗ ಅಂತ ನನಗೇ ಖಾತ್ರಿ ಇಲ್ಲ.

ಬೊಂಬಾಟ್ ಕಾರ್: ಈ ಗ್ರಾಫಿಕ್ಸ್ ಸಿನೆಮಾ ಡಿಫರೆಂಟಾಗಿ ಇರಬಹುದು, ಹೊಸ ಪ್ರಯೋಗ ಅನ್ನಿಸಿದೆ. ಇದ್ನೂ ನೋಡ್ಬೇಕು ಅನ್ಕೊಂಡಿದ್ದೀನಿ. ಮಕ್ಕಳ ಚಿತ್ರ ಅಂತ ಮೂಗು ಮುರಿದರೆ ನನಗೇನಾಗಬೇಕಿಲ್ಲ. ಟಾಮ್ ಅಂಡ್ ಜೆರ್ರಿ, ರೋಡ್ ರನ್ನರ್ ಶೋದಂತಹ ಕಾರ್ಟೂನುಗಳನ್ನು, ಅನಿಮೇಶನ್ ಮೂವಿಗಳನ್ನು ಆನಂದಿಸುವ ನನಗೆ ಮಕ್ಕಳ ಚಿತ್ರ ನೋ ಪ್ರಾಬ್ಲೆಮ್. ಸದ್ಯದಲ್ಲೇ ’ಬೊಂಬೆಯಾಟವಯ್ಯಾ’ ಅನ್ನುವ ಕನ್ನಡದ ಮೊದಲ ಅನಿಮೇಶನ್ ಮೂವಿ ಬರ್ತಾ ಇದೆ ಅನ್ನೋದು ಬಿಸಿಬಿಸಿ ಖುಷಿ ಸುದ್ದಿ.

ನಾನು, ನನ್ನ ಕನಸು: ಬಿಡುಗಡೆಯಾಗುತ್ತಿದ್ದಂತೇ ಒಳ್ಳೊಳ್ಳೇ ಅಭಿಪ್ರಾಯಗಳು ತುಂಬಿ ಹರಿದು ಬರ್ತಾ ಇವೆ. ಕಥೆ, ಕೊಸರು, ಅಭಿನಯ, ಸಂಭಾಷಣೆ ಇತ್ಯಾದಿ ಇತ್ಯಾದಿ ಎಲ್ಲಾ ಸೂಪರಂತೆ. ಮನೆಮಂದಿಯೆಲ್ಲಾ ನೋಡಬಹುದಾದ ಚಿತ್ರವಂತೆ. ಸದ್ಯಕ್ಕೆ ಮನೆ, ಮಂದಿ ಅಂತ ಯಾರೂ ಇಲ್ಲದಿರುವುದರಿಂದ ನಾವೇ ಕೆಲವು ಮಂದಿ ಹೋಗಿಬರಬೇಕು. ತೀರಾ ಅಳಿಸಲೆಂದೇ ಮಾಡಿದ ಸೆಂಟಿಮೆಂಟಿನ ಚಿತ್ರಗಳು ನನಗೆ ಸರಿಹೋಗುವುದಿಲ್ಲ. ಅದು ನೈಜತೆಯಿಂದ ಕೂಡಿದ್ದರೆ, ಒಂದು ಲೆವೆಲ್ ನಲ್ಲಿದ್ದರೆ ಓ.ಕೆ. ’ನಾನು ನನ್ನ ಕನಸು’ ಎಲ್ಲಾ ಹದವಾಗಿರುವ ಕ್ವಾಲಿಟಿ ಸಿನೆಮಾ ಅಂತೆ.

ಮುಂದೆ ಬರುವ ಎರಡು ವೀಕೆಂಡು ಮದುವೆ, ಮುಂಜಿ ಅಂತ ಬುಕ್ಕಾಗಿ ಹೋಗಿದೆ. ಅದನ್ನು ಮುಗಿಸಿಕೊಂಡು ಊರು ಸುತ್ತಿಕೊಂಡು ವಾಪಸ್ಸು ಬರುವವರೆಗೂ ೪ರಲ್ಲಿ ಎರಡಾದರೂ ಇನ್ನೂ ಸಿನೆಮಾ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುತ್ತವೆ ಎಂಬ ಭರವಸೆ ಇದೆ. ತಪ್ಪಿಹೋದರೆ ಡಿ.ವಿ.ಡಿ. ಗತಿ.

ನೋಡ್ಲೇಬೇಕು.

ಮಂಗಳವಾರ, ಮೇ 11, 2010

ಮೂರು ವರ್ಷವಾಯ್ತು

ಟಿಪಿಕಲ್ ಹುಡುಗರಂತೆ ಬರ್ತ್ ಡೇಗಳು ನನಗೆ ನೆನಪಿರುವುದಿಲ್ಲ. ತೀರಾ ಒಂದೆರಡು ಆಪ್ತರು ಹುಟ್ಟಿದ ದಿನ ಬಿಟ್ಟರೆ ಮತ್ಯಾರದ್ದೂ ನನಗೆ ನೆನಪಿಟ್ಟುಕೊಳ್ಳಲಾಗಿಲ್ಲ. ಇದರಲ್ಲಿ ನಾನು ನಿರ್ಗುಣಂ ನಿರ್ವಿಷೇಶಂ. ಇದರಿಂದಲೇ ಹಲವಾರು ಬಾರಿ ಮುನಿಸು, ರಮಿಸು ಎಲ್ಲಾ ಆಗಿದೆ. ಆದರೂ ಆ ವಿಷಯದಲ್ಲಿ ಇನ್ನೂ ನಾನು ಅಜೇಯಂ ಅಚಿಂತ್ಯಂ, ಬಹುಶಃ ಅನಂತಂ. ಆದರೆ ಅದ್ಯಾಕೋ ಗೊತ್ತಿಲ್ಲ ನನ್ನ ಬ್ಲಾಗ್ ವಿಷಯದಲ್ಲಿ ಮಾತ್ರ ಹಾಗಾಗುವುದಿಲ್ಲ. ಈ ಎರಡೂ ವರ್ಷ ನೀಟಾಗಿ ನೆನಪಿತ್ತು. ಮೂರನೇ ವರ್ಷವೂ ಒಂದು ವಾರದ ಕೆಳಗೆ ನೆನಪಿತ್ತು, ಆದರೆ ಆಮೇಲೆ ಮರೆತೇ ಹೋಯಿತು. ನಿನ್ನೆ ರಾತ್ರಿ ತರಾಸು 'ವಿಜಯೋತ್ಸವ' ಕಾದಂಬರಿ ಓದುತ್ತಾ ಮೆಹರ್ಬಾನುವಿನ ಸೌಂದರ್ಯ ಕಲ್ಪಿಸಿಕೊಳ್ಳುತ್ತಿರುವಾಗಲೇ ಇವತ್ತು ಬ್ಲಾಗ್ ನ ಹುಟ್ಟಿದ ಹಬ್ಬ ಎಂದು ನೆನಪಾಗಿ ಬಿಡ್ತು! ಮರೆತಿದ್ದಕ್ಕೆ ಸಂಕಟವಾದರೂ ಕೂಡ ತೀರ ಬೆಂಗಳೂರಿನಂತೆ ಸೆಪ್ಟೆಂಬರಿನ ಗಣೇಶೋತ್ಸವವನ್ನು ನವೆಂಬರಿನಲ್ಲಿ ಮಾಡುವಷ್ಟು ತಡವೇನೂ ಆಗಿರಲಿಲ್ಲವಾದ್ದರಿಂದ ಸಮಾಧಾನವಾಯ್ತು.

ಹೌದು. ನಿನ್ನೆ ಅಂದರೆ ಮೇ ೧೦ ಕ್ಕೆ ನನ್ನ ಬ್ಲಾಗು ಶುರುವಾಗಿ ಮೂರು ವರ್ಷಗಳಾಯ್ತು. ಬ್ಲಾಗ್ ಲೋಕದ ಹಲವಾರು ಹಿರಿಕಿರಿಯರ ಮಧ್ಯೆ ನಾನು ನಿಂತಿದ್ದೇನೆ. ಹಿಂದಿನ ವರ್ಷಕ್ಕಿಂತ ಕಡಿಮೆ ಪೋಸ್ಟ್ ಗಳನ್ನು ಹಾಕಿದ್ದೇನೆ ಎಂಬುದು ಒಂದು ಹೈಲೈಟು. ಮೂರು ವರ್ಷಗಳಾದರೂ ನೂರು ಪೋಸ್ಟು ತಲುಪಿಲ್ಲ ಎನ್ನುವುದು ಮತ್ತೊಂದು ಹೈಲೈಟು! ನಾನು ಬ್ಲಾಗ್ ಬರೆಯುವ ವಿಷಯ ಕೆಲವು ಆಪ್ತರಿಗೂ, ಸಂಬಂಧಿಕರಿಗೂ ತಿಳಿದುಹೋಗಿರುವುದರಿಂದ, ಬ್ಲಾಗ್ ಕೊಂಡಿಯೂ ಸಿಕ್ಕಿರುವುದರಿಂದ ಸ್ವಲ್ಪ ತೊಂದರೆಯಾಗಿದೆ ಎಂದೇ ಹೇಳಬಹುದು. ನಾವು ಬರೆಯುವುದನ್ನು ತೀರ ಹತ್ತಿರದವರೆಲ್ಲಾ ಓದಲು ಶುರುಮಾಡಿಬಿಟ್ಟರೆ ಮುಕ್ತವಾಗಿ ಬರೆಯಲು ತೊಂದರೆಯಾಗುತ್ತದೆ ಎಂದು ಅವತ್ತು ನಾನೂ ಮತ್ತು ಕಡಲ ತೀರದ ಕಾಮತ್ ಮಾಮ್ಸ್ ಮಾತಾಡಿಕೊಂಡಿದ್ದೆವು. ಹೌದು, ಅದು ನಿಜ, ಇರಲಿ, ಏನೂ ಮಾಡಕ್ಕಾಗಲ್ಲ. ಹೇಗೋ ಸಂಭಾಳಿಸಿಕೊಳ್ಳುವುದೊಂದೇ ಬಾಕಿ.

ಯಾವುದೋ ಕಾಲಘಟ್ಟದಲ್ಲಿ ನಿಂತು ಸಂಭ್ರಮಿಸುವಾಗ ವೈಯಕ್ತಿಕ ವಿಷಯಗಳನ್ನಷ್ಟೇ ನೋಡಿಕೊಳ್ಳದೇ ಜೊತೆಗೆ ಸಂಬಂಧಪಟ್ಟ ವಾತಾವರಣದ ವಿಷಯಗಳ ಬದಲಾವಣೆಗಳ ಬೆಳವಣಿಗೆಗಳ ಬಗ್ಗೆಯೂ ಅವಲೋಕಿಸಬಹುದು ಅಂತ ಅಡಿಗರು ಹೇಳುತ್ತಿದ್ದರು. ಕನ್ನಡದಲ್ಲಿ ಇವತ್ತು ಸಾವಿರಾರು ಬ್ಲಾಗ್ ಗಳು ಇವೆ. ಬ್ಲಾಗ್ ಎಂದರೆ ಪತ್ರಿಕೆಯಂತೆ, ಬ್ಲಾಗ್ ಎಂದರೆ ಪುಸ್ತಕದಂತೆ, ಬ್ಲಾಗ್ ಎಂದ ಘನ ಗಂಭೀರ ಸಾಹಿತ್ಯದಂತೆ ಬರೀ ಕತೆ ಕವನ ವಿಚಾರ ವಿಶ್ಲೇಷಣೆಗಳನ್ನೇ ಬರೆಯಬೇಕು ಎಂಬುದರಿಂದ ಕ್ರಮೇಣ ಹೊರಬಂದಂತೆ ಕಾಣುತ್ತಿರುವ ಕನ್ನಡ ಬ್ಲಾಗ್ ಲೋಕದಲ್ಲಿ ವೈವಿಧ್ಯಗಳು ಸಿಕ್ಕಾಪಟ್ಟೆ ಬರುತ್ತಿವೆ. ಸಂತೋಷ. ಆದರೂ ಕೂಡ ಬಹಳಷ್ಟು ಕಡೆ ಯಾಕೋ ಹೇಳುವ ವಿಷಯವನ್ನು ಸ್ವಲ್ಪ ಕಾವ್ಯಮಯವಾಗಿಯೇ ಹೇಳುವ ಪ್ರಯತ್ನ ಕಾಣುತ್ತಿದೆ. ತಮ್ಮ ಬ್ಲಾಗ್ ಅನ್ನು ತಿದ್ದಿ ತೀಡಿ ಅಲಂಕಾರ ಮಾಡಿ ಮನೆಗಿಂತಲೂ ಓರಣವಾಗಿಟ್ಟುಕೊಳ್ಳುವ ಮಂದಿಯಿಂದ ಹಿಡಿದು ಅಲ್ಲಿ ಇಲ್ಲಿ ಅಲ್ಲಲ್ಲಿ ಎಲ್ಲೆಲ್ಲೋ ಪ್ರಕಟವಾದ ಅವರ ಚಂದದ ಬರಹಗಳನ್ನು ಹಾಕುವವರೂ ಇದ್ದಾರೆ. ಎಲ್ಲರಿಗೂ ಇರುವಂತೆ ನನ್ನ ಅಣ್ಣನೊಬ್ಬ ಅಮೆರಿಕಾದಲ್ಲಿದ್ದಾನೆ. ಅವನು ಬ್ಲಾಗ್ ಎಂಬುದು ಬಳಕೆಗೆ ಬಂದ ಕಾಲದಿಂದಲೇ ಬ್ಲಾಗುವುದನ್ನು ಶುರುಮಾಡಿದವನು. ಬ್ಲಾಗ್ ಎಂಬುದು ೧೦ ರಿಂದ ೨೦ ನಿಮಿಷದಲ್ಲಿ ಬರೆಯುವಂತದ್ದೂ ಮತ್ತು ೫ ನಿಮಿಷದಲ್ಲಿ ಓದಿ ಮುಗಿಸುವಂತದ್ದೂ ಆಗಿರಬೇಕು ಅಂತ ಆತ ಹೇಳುತ್ತಿರುತ್ತಾನೆ. ಇರಲಿ ಬಿಡಿ. ನಾವು ಹೀಗೆಲ್ಲಾ ಮಿತಿ ಹಾಕಿಕೊಳ್ಳುವುದು ಬೇಡ. ದಿನಾ ದಿನಾ ಹೊಸ ಹೊಸ ಬ್ಲಾಗಿನ ಕೊಂಡಿಗಳು ಸಿಗುತ್ತಿವೆ. ನನ್ನ ಗೂಗಲ್ ರೀಡರ್ ಒಂದು ಸಮೃದ್ಧ ಪತ್ರಿಕೆಯಂತಾಗಿದೆ. ಬ್ಲಾಗ್ ಗಳಲ್ಲಿ ಬಹುಸಂಖ್ಯೆಯಲ್ಲಿ ಪತ್ರಕರ್ತರು ಕಾಲಿಟ್ಟಿದ್ದು, ಓದುಗರು ನಾಡಿನ ಪತ್ರಿಕೆಗಳ ಅಪದ್ಧಗಳನ್ನು ಬ್ಲಾಗ್ ಗಳಲ್ಲೇ ಝಾಡಿಸುತ್ತಿರುವುದೂ, ಶರ್ಮಣ್ಣ ತಮ್ಮ ಬ್ಲಾಗಿನಲ್ಲೇ ತಮ್ಮ ಆಸ್ತಿ ಅಫಿಡವಿಟ್ಟು ಸಲ್ಲಿಸಿದ್ದು ವಿಶೇಷವಾಗಿದೆ. ಈ ಪ್ಯಾರಾದ ಮೊದಲನೇ ಸಾಲಿನಲ್ಲಿರುವಂತೆ ಅಡಿಗರು ಅದ್ಯಾವಾಗ ಹಾಗೆ ಹೇಳಿದ್ರು ಅಂತ ಅನುಮಾನವೇನಾದ್ರೂ ಬಂತಾ? ನಾನು ನೆನಪಿಸಿಕೊಂಡಿದ್ದು ಕವಿ ಗೋಪಾಲಕೃಷ್ಣ ಅಡಿಗರಲ್ಲ, ಅದು ಪ್ರಕಾಶ ನಗರದ ೨೩ನೇ ಕ್ರಾಸಿನ ಮೂಲೆಯಲ್ಲಿ ಹೋಟೆಲ್ ಇಟ್ಟಿರುವ ಅಡಿಗರ ಮಾತು. ;)

ಈ ವರ್ಷವೂ ಬ್ಲಾಗಿನಿಂದ ಕೆಲವು ಹೊಸ ಗೆಳೆಯರು ಸಿಕ್ಕಿದ್ದಿದೆ. ಎಂದಿನಂತೆ ನನ್ನ ಆಸಕ್ತಿ , ಹವ್ಯಾಸ, ಚಟುವಟಿಕೆಗಳಿಗೆ ಬ್ಲಾಗ್ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ ಮಾಡುತ್ತಿದೆ. ಹೇಳಿಕೊಂಡರೆ ಕೇಳಿಸಿಕೊಂಡವರಿಗೆ ಸವಿ ಅನ್ನಿಸಬಹುದಾದ ಹೇಳಿಕೊಳ್ಳಲಾಗದ ತಲೆನೋವೊಂದು ಅನುಭವವಾಗಿದೆ. ಹಿಂದೊಮ್ಮೆ ಬ್ಲಾಗ್ ಕಮೆಂಟ್ ವಿಷಯದಲ್ಲಿ ವಿದೇಶದಲ್ಲಿರುವ ವಿ-ಜ್ಞಾನಿಯೊಬ್ಬರು ಹಾಕಿರುವ ಧಮಕಿ ಇನ್ನೂ ನೆನಪಿದೆ. ಕೆಲಸ, ಓದು ಬರವಣಿಗೆ ನಡೆಯುತ್ತಲಿದೆ. ಬರೆಯುವ ವಿಷಯದಲ್ಲಿ ನಾನು ಸೋಮಾರಿ ಏನಲ್ಲದಿದ್ದರೂ ಬರೆಯುವುದರಲ್ಲಿ ತಾಳ್ಮೆ ಸ್ವಲ್ಪ ಕಡಿಮೆ ಇದೆ. ಇದು ಮುಂದುವರೆಯಲಿದೆ ಎಂಬುದೇ ಸದ್ಯದ ಭರವಸೆ. ಬರಹ ಸಾಫ್ಟ್ ವೇರಿಗೂ, ಗೂಗಲ್ ಬ್ಲಾಗ್ ಸ್ಪಾಟಿಗೂ, ಬ್ಲಾಗಿಗೆ ಹಿಟ್ ಮೇಲ್ ಹಿಟ್ ಕೊಡುತ್ತಿರುವ ಎಲ್ಲಾ ರೀತಿಯ ಓದುಗರಿಗೂ ನನ್ನ ಪ್ರೀತಿ, ಕೃತಜ್ಞತೆ, ಧನ್ಯವಾದಗಳಿವೆ.

****

ಹಿಂದಿನ ಎರಡು ವರ್ಷ..

'ವರ್ಷ ಕಳೆಯಿತು'
ವಿಕಾಸದ ಹಾದಿಯಲ್ಲಿ ೨ ವರ್ಷ!

ಗುರುವಾರ, ಏಪ್ರಿಲ್ 22, 2010

ಮತ್ತೆ ಹುಲಿಕಣಿವೆಯಲ್ಲಿ....

ನೀರವ ಪ್ರಕೃತಿಯಲ್ಲಿ ನಿಗೂಢತೆಯ ಅನುಭವವಾಗುತ್ತದೆಂದು ಹೇಳಿದ್ದೆನಷ್ಟೆ. ಅದು ಅಂತಹ ಪ್ರಕೃತಿಯು ತನ್ನಿಂದ ದೂರವಿದ್ದವರಿಗೆ ಒದಗಿಸಿಕೊಡುವ ನಿಗೂಢತೆ. ನಿಶ್ಯಬ್ದತೆ ಇದ್ದಾಗ ನಿಗೂಢತೆ ಸಹಜ. ಅಲ್ಲಿಯೇ ಹುಟ್ಟಿಬೆಳೆದವರನ್ನು ಕೇಳಿದರೆ ಅವರಿಗೆ ಅಲ್ಲಿ ಯಾವ ನಿಗೂಢತೆಯೂ ಕಾಣದೇ ಹೋದೀತು. ಅಂತಹುದೇ ಪರಿಸರದಿಂದ ಬಂದು ನಗರ ಸೇರಿಕೊಂಡ ಕೆಲವರಿಗೆ ಇಲ್ಲಿನ ರೈಲ್ವೇ ಸ್ಟೇಶನ್ನು, ಶಾಪಿಂಗ್ ಮಾಲುಗಳೇ ಎಲ್ಲಿಲ್ಲದ ಅನುಭೂತಿ ಕೊಡುವ ಹಾಗೆ ಪಟ್ಟಣ ನಗರಗಳಲ್ಲಿ ಬೆಳೆದವರಿಗೆ ಆ ವಾತಾವರಣ ಅದ್ಭುತ ಅನುಭೂತಿಗಳನ್ನು ಒದಗಿಸಿಕೊಡಬಹುದು. ಸೌಂದರ್ಯದಲ್ಲಿ ಸೌಮ್ಯತೆಯೂ ಮುಖ್ಯ ಪಾತ್ರ ವಹಿಸುವ ಹಾಗೆ ಪ್ರಕೃತಿಯ ಸ್ನಿಗ್ದತೆಗೆ ನೀರವತೆಯ ಪಾತ್ರ ಹಿರಿದು. ನಿಗೂಢತೆಯ ಅನುಭವಕ್ಕೂ ದೇವರಿಗೋ ದೆವ್ವಕ್ಕೋ ಮತ್ಯಾವುದೋ ಕತೆಗಳಿಗೋ ಸಂಬಂಧವಿರಬೇಕಂತಿಲ್ಲ. ಅಂತಹ ನೀರವತೆಯಲ್ಲಿ ನಿಗೂಢತೆಯ ಅನುಭವವಾಗಲು ಯಾವ ಕಾರಣಗಳೂ ಬೇಕಿಲ್ಲ.

ಅಜ್ಜನ ಮನೆ ಇರುವ ಕಡೆ ಸುತ್ತಲೂ ಬೆಟ್ಟಗಳಿವೆ. ಪ್ರತೀ ಬಾರಿ ನಾನು ಹೋದಾಗಲೂ ಆ ಬೆಟ್ಟಗಳಿಗೊಂದು ಭೇಟಿ ಕೊಡದಿದ್ದರೆ ಸಮಾಧಾನವಿರುವುದಿಲ್ಲ. ಅದನ್ನು ಹತ್ತಲು ತೋಟ ದಾಟಿ ಸ್ವಲ್ಪ ದೂರ ಹೋಗಬೇಕು. ತೋಟದಲ್ಲಿ ಹಬ್ಬಿದ ಸೌತೆಬಳ್ಳಿಯಲ್ಲಿ ನಾಲ್ಕು ಸೌತೆಮಿಡಿ ಕಿತ್ತುಕೊಂಡು ತಿನ್ನುತ್ತಾ, ಕಟ್ಟಿರುವೆಗಳ ಸಾಲಿನಲ್ಲಿ ಕಾಣದೇ ಕಾಲಿಟ್ಟು ಹಾರಿ, ಅಡಕೆ ಮರಕ್ಕೆ ಕಟ್ಟಿದ ಜೇಡರ ಬಲೆ ಮುಖಕ್ಕೆ ರಾಚಿಸಿಕೊಂಡು ತೋಟದ ಕೊನೆ ತಲುಪಿದರೆ ಚಿಕ್ಕ ನೀರಿನ ತೊರೆ ಸುಮ್ಮನೇ ಹರಿಯುತ್ತಲೇ ಇದೆ. ಅದರ ಮಡುವಿನಲ್ಲಿ ಪುಟ್ಟ ಪುಟ್ಟ ನೂರಾರು ಮೀನುಗಳು. ಜೀಬ್ರಾ ಮೀನು, ಹುಲಿ ಮೀನು, ಬೆಂಕಿ ಮೀನು! ಯಾರು ತಂದು ಬಿಟ್ಟರು ಅದನ್ನು? ಅವಕ್ಕೆ ಅದೇ ಪ್ರಪಂಚ. ಗೊತ್ತಿಲ್ಲದೇ ಅಲ್ಲೇ ಹುಟ್ಟಿವೆ, ಅಲ್ಲೇ ಸಾಯುತ್ತವೆ. ಸಂಕ ದಾಟಿ ಬ್ಯಾಣಕ್ಕೆ ಕಾಲಿಟ್ಟ ಕೂಡಲೇ ಒಂದಿಷ್ಟು ಹಕ್ಕಿಗಳು ಪುರ್ರನೇ ಹಾರಿ ಹೋದ ಸದ್ದು. ಹಾಗೇ ನೆಡೆಯುತ್ತಾ ಹೋಗುತ್ತಿದ್ದರೆ ಇವನ್ಯಾರೋ ಆಗಂತುಕ ಬಂದಿದ್ದಾನೆ ಎಂದು ಒಂದು ಹಕ್ಕಿ ಕೂಗಿ ಎಚ್ಚರಿಸುತ್ತಲೇ ಇದೆ. ಬೇಕೆಂದರೂ ಕಣ್ಣಿಗೆ ಬೀಳದ ನವಿಲು ಹೊತ್ತಲ್ಲದ ಹೊತ್ತಿನಲ್ಲಿ ಎಲ್ಲೋ ನಿಂತು ಕೇಗುಡುತ್ತದೆ. ಹಿಂದಿನ ಬಾರಿ ತನ್ನ ದೊಡ್ಡ ಕೊಕ್ಕಿನಲ್ಲಿ ಹಣ್ಣೊಂದನ್ನು ಕಚ್ಚಿಕೊಂಡ ಮಂಗಟ್ಟೆ (ಹಾರ್ನ್ ಬಿಲ್)ಯೊಂದು ಕಾಣಿಸಿ ವಿಪರೀತ ಖುಷಿಯಾಗಿತ್ತು. ಅಲ್ಲಿರುವ ಸುಮಾರು ಬೆಟ್ಟಗಳಲ್ಲಿ ಎಲ್ಲಕ್ಕೂ ದಾರಿಗಳಿಲ್ಲ. ಸುಮಾರು ದೂರ ಮರಗಳನ್ನೂ, ಬಿದಿರ ಮೆಳೆಗಳನ್ನೂ ದಾಟಿ, ಹುಲ್ಲಿನ ಮಧ್ಯೆ ಕಾಲುದಾರಿ ಇರುವ ತನಕ ಹೋಗಿ ಗುಡ್ಡದ ಬುಡ ತಲುಪಿದರೆ ಅಲ್ಲಿಂದ ಮುಂದಿನ ಆಯ್ಕೆ ನಮ್ಮದು.

ನನ್ನ ಹಳೇ ಆಫೀಸಿನಲ್ಲಿ ಒಬ್ಬ ಫ್ರೆಂಡ್ ಇದ್ದ. ಅವನಿಗೆ ವಿಪರೀತ ಟ್ರೆಕ್ಕಿಂಗ್ ಚಟ. ಕರ್ನಾಟಕದಲ್ಲಿರುವ ಸಿಕ್ಕ ಸಿಕ್ಕ ಗುಡ್ಡಬೆಟ್ಟಗಳನ್ನೆಲ್ಲಾ ಹತ್ತಿಳಿದಿದ್ದಾನೆ. ವೀಕೆಂಡು ಬಂದರೆ ಸಾಕು ಚಂದಾದಾರ ವ್ಯಾಪ್ತಿ ಪ್ರದೇಶದ ಹೊರಗೆ ! ಇಲ್ಲಿದ್ದು ಏನ್ರೋ ಮಾಡ್ತೀರಾ ಬನ್ರೋ ಟ್ರೆಕ್ಕಿಂಗ್ ಮಾಡಣ ಅಂತ ನಮಗೂ ಕರೆಯುತ್ತಿದ್ದ. ಅವನಿಗೂ ಮದುವೆಯಾಯಿತು. ಅದ್ಯಾಕೋ ಟ್ರೆಕ್ಕಿಂಗ್ ನಿಲ್ಲಿಸಿಬಿಟ್ಟ. ಆಮೇಲೆ ನಾವು ಅವನಿಗೆ ಈಗ ಮನೆಲ್ಲೇ ಟ್ರೆಕ್ಕಿಂಗ್ ಜೋರಾ? ಪಾಪ ಗುಡ್ಡ ಹತ್ತಿ ಸುಸ್ತಾಗಿದಿಯ ಅಂತ ತಮಾಷೆ ಮಾಡ್ತಿದ್ವಿ. :)

ಅದು ಇರಲಿ. ಹುಲಿಕಣಿವೆಯಲ್ಲಿ ಒಮ್ಮೆ ಹೀಗೆ ಬೆಟ್ಟ ಹತ್ತಲು ಹೋಗುತ್ತಿರುವಾಗ ಸೌದೆಹೊರೆ ಹೊತ್ತುಕೊಂಡು ಬರುತ್ತಿದ್ದ ರಾಮ ಸಿಕ್ಕಿಬಿಟ್ಟ. ಹೆಗಡ್ರು ಎಲ್ ಹೊಂಟಿದೀರಿ ಅಂದ. ಹೀಂಗೆ ಗುಡ್ಡ ಹತ್ತಿ ಬರೋಣ ಅಂತ ಹೋಗ್ತಿದ್ದೇನೆ ಅಂದೆ. ಅಲ್ಲೆಂತ ಇದೆ ಅಂತ ಹತ್ತಕ್ ಹೋಗ್ತೀರಾ ಮಾರಾರ್ರೇ ನೀವು ಬೆಂಗ್ಳೂರವ್ರು ಅಂದ. ಸುಮ್ಮನೇ ನಕ್ಕೆ. ಅಲ್ಲಿ ಏನೂ ಇಲ್ಲ ಅಂತಲೇ ಹೋಗ್ತಾ ಇರೋದು ಅಂತ ಮನಸ್ಸಿನಲ್ಲೇ ಅಂದುಕೊಂಡೆ. ದಳದಳನೆ ಬೆವರು ಹರಿಸುತ್ತಾ ಏದುಸಿರು ಬಿಡುತ್ತಾ ಬೆಟ್ಟದ ತುದಿ ತಲುಪಿದರೆ ಅಲ್ಲೊಂದು ಒಂಟಿ ಬೆಟ್ಟದನೆಲ್ಲಿ ಮರ. ನೆಟ್ಟವರ್ಯಾರೂ ಅಲ್ಲ. ಕೊಯ್ಯುವರಿಲ್ಲ. ಯಾರಾದರೂ ಬೆಟ್ಟ ಹತ್ತಿ ಬಂದರೆ ಅವರಿಗೆ ಸ್ವಾಗತ ಕೋರಿ ದಣಿವಾರಿಸಲು ನಿಂತಂತಿದೆ. ಅದಕ್ಕೆ ಬೇಸರವಿಲ್ಲ. ಬೆಟ್ಟದ ತುದಿಯಂತೂ ನೀರವತೆಯ ಉತ್ತುಂಗ! ಅಲ್ಲಿ ಗಾಳಿ ಬೀಸುತ್ತಲೇ ಇದೆ. ಪ್ರಳಯವಾಗಿ ಬೇರೆ ಎಲ್ಲ ಜೀವಿಗಳೂ ನಾಶವಾಗಿ ಬರೀ ನಾನೊಬ್ಬನೇ ಉಳಿದರೆ ಹೇಗಿರಬಹುದು ಎಂಬಂತಹ ಏಕಾಂತತೆ.

ಹಾಗಂತ ಈ ಎಲ್ಲಾ ಪ್ರದೇಶಗಳೇನು ಅಲ್ಲಿನ ವಾಸಿಗಳಿಗೆ ಖಂಡಿತಾ ಸ್ವರ್ಗ ಲೋಕದ ತುಂಡಲ್ಲ. ಅಲ್ಲಿನ ತೊಂದರೆ ಅಲ್ಲಿನವರಿಗೇ ಗೊತ್ತು. ಬೇಸಿಗೆಯಲ್ಲಿ ಒಂದು ತೊಂದರೆಯಾದರೆ ಮಳೆಗಾಲದಲ್ಲಿ ಇನ್ನೂ ಇನ್ನೇನೋ ಜಾಸ್ತಿ ತೊಂದರೆ. ಎಲ್ಲಾ ಸಹಿಸಿಕೊಳ್ಳೋಣವೆಂದರೆ ಮತ್ತೇನೋ ನಾಗರಿಕತೆಯ ಸೌಲಭ್ಯದ ತೊಂದರೆ. ಸಮಸ್ಯೆಗಳು ಎಲ್ಲಿಲ್ಲ ಹೇಳಿ? ಅದೆಲ್ಲಾ ಬದಿಗಿಟ್ಟು ಮತ್ತೆ ಈಗ ನಿಗೂಢತೆಯ ವಿಷಯಕ್ಕೆ ಬಂದರೆ, ರಾತ್ರಿಯಿಡೀ ಹೈಮಾಸ್ ದೀಪಗಳ ಬೆಳಕಲ್ಲಿರುವವರಿಗೆ ಕಗ್ಗತ್ತಲ ಕಲ್ಪನೆಯಾಗಲೀ, ಸಿಟಿ ಮಧ್ಯದಲ್ಲಿ ಸ್ಮಶಾನ ನೋಡಿದವರಿಗೆ ’ಸ್ಮಶಾನ ಮೌನ’ ಎಂಬ ಪದದ ಅರ್ಥವಾಗಲೀ ತಿಳಿಯುವುದಕ್ಕೆ ಹೇಗೆ ತಾನೆ ಸಾಧ್ಯ! ನಾವು ನಗರಗಳಲ್ಲಿ ಕೂತು ನೂರು ಭಾಷಣ ಕುಟ್ಟಬಹುದು. ಮಾನವಾತೀತ ಶಕ್ತಿಗಳಾಗಲೀ, ಮತ್ಯಾವುದೋ ಶಕ್ತಿಯಾಗಲೀ, ವಿಚಿತ್ರಗಳಾಗಲೀ ಇಲ್ಲವೇ ಇಲ್ಲ ಎಂದು ತಳ್ಳಿಹಾಕಿಬಿಡಬಹುದು. ಎಲ್ಲದಕ್ಕೂ ವಿಜ್ಞಾನವನ್ನು ತಗುಲಿಸಿ ಅದರಲ್ಲಿನ ರೋಚಕತೆಯನ್ನು ಇಷ್ಟೇನಾ ಅನ್ನಿಸಿಬಿಡಬಹುದು. ಆದರೆ ಯಾರ ಹಂಗಿಲ್ಲದೇ ನೆಡೆದು ಹೋಗುತ್ತಿರುವ ಮಲೆನಾಡಿನ ಇಂತಹ ಪ್ರಕೃತಿಯ, ಮಳೆಗಾಲದ ರಾತ್ರಿಗಳ, ಅಸಂಖ್ಯ ಜೀವಿಗಳ ಚಕ್ರವನ್ನು ನೋಡಿದರೆ ಮನುಷ್ಯ ಪ್ರಕೃತಿಯನ್ನು ಪೂಜಿಸುವುದಕ್ಕೆ, ಅದರ ಬಗ್ಗೆ ನೂರು ಭಾವನೆಗಳನ್ನು, ನಂಬಿಕೆಗಳನ್ನು, ಹೆದರಿಕೆಗಳನ್ನು ಇಟ್ಟುಕೊಂಡದ್ದಕ್ಕೆ, ಕಣ್ಣಿಗೆ ಕಾಣದ ಶಕ್ತಿಗಳಿಗಾಗಿ ತವಕಿಸುವುದಕ್ಕೆ ಕಾರಣಗಳಂತೂ ಸ್ಪಷ್ಟವಾಗುತ್ತದೆ. ಒಟ್ಟಾರೆ ಇವೆಲ್ಲವೂ ಎಷ್ಟೇ ವಿವರಣೆಯ ಜೊತೆ ಬಂದರೂ ಅನುಭವಿಸುವ ಮನಸ್ಸಿನ ಮೇಲೆ ಅವಲಂಬಿತವಷ್ಟೆ. ಹಾಗಾಗಿ ಈ ಹುಲೀಕಣಿವೆ ಎಲ್ಲೆಡೆಯೂ ಇರಬಹುದು, ಇಲ್ಲದಿರಬಹುದು. ಆಸಕ್ತಿ ಅಚ್ಚರಿಗಳಿಂದ ಅದನ್ನು ಹುಡುಕಿಕೊಳ್ಳುವುದು ಅವರಿಗವರಿಗೆ ಬಿಟ್ಟಿದೆ.

ಶುಕ್ರವಾರ, ಏಪ್ರಿಲ್ 16, 2010

ಹುಲಿಕಣಿವೆ

ನನ್ನ ಅಜ್ಜನ ಮನೆಯಿರುವುದು ಒಂದು ಪುಟ್ಟ ಹಳ್ಳಿ. ಪುಟ್ಟ ಹಳ್ಳಿ ಎಂದರೆ ಮಲೆನಾಡಿನ ಹಳ್ಳಿಗಳನ್ನು ನೋಡದವರಿಗೆ ಅದು ಕಲ್ಪನೆಗೂ ಬರುವುದಿಲ್ಲ. ಏಕೆಂದರೆ ಅಲ್ಲಿರುವುದು ಕೇವಲ ಮೂರು ಮನೆಗಳು. ಹೌದು , ಮೂರೇ ಮನೆಗಳು.! ಶಿರಸಿಯಿಂದ ೧೬ ಕಿ.ಮಿ.ದೂರ ಬಂದು, ಮತ್ತೆ ಒಳಗೆ ೪ ಕಿ.ಮಿ. ಹಾಯ್ದರೆ ಅಲ್ಲಿ ಒಂದು ಕತ್ತರಿ(ಕ್ರಾಸ್)ಯಲ್ಲಿ ಬಸ್ಸಿಳಿದುಕೊಳ್ಳಬೇಕು. ಆನಂತರ ಸುಮಾರು ೨ ಕಿ.ಮಿ ನೆಡೆದು ಹೋಗಿ ಒಂದು ಇಳಿಜಾರಿನಲ್ಲಿ ಉರುಳಿದರೆ ಸಿಗುವುದು ಮನೆ. ಭೌಗೋಳಿಕವಾಗಿ ಕಣಿವೆ ಎನ್ನುವಂತಹ ಜಾಗದಲ್ಲಿದೆ. ಅಲ್ಲಿ ಹಿಂದೆ ಹುಲಿಗಳು(!) ಓಡಾಡುತ್ತಿದ್ದವಂತೆ. ಅದಕ್ಕೇ ಮನೆಯಿರುವ ಜಾಗಕ್ಕೆ ಹುಲೀಕಣಿವೆ ಎಂಬ ಹೆಸರಿದೆ. ಅಲ್ಲೇ ಸ್ವಲ್ಪ ದೂರದ ಇನ್ನೊಂದು ಹಳ್ಳಿಯಲ್ಲಿ ಕೂಡು ಕುಟುಂಬವಿತ್ತಂತೆ. ೪೦ ವರ್ಷಗಳ ಹಿಂದೆ ಕೂಡುಕುಟುಂಬ ಹಿಸ್ಸೆಯಾದ ಮೇಲೆ ಅಜ್ಜನ ಪಾಲಿಗೆ ಇಲ್ಲಿ ತೋಟ ಮಾಡಿ ನೆಲೆಕಂಡುಕೊಳ್ಳಬೇಕಾಗಿ ಬಂತು. ಸಾಮಾನ್ಯವಾಗಿ ಕಣಿವೆಗಳಲ್ಲಿ ಸದಾ ನೀರು ಹರಿಯುತ್ತಿರುತ್ತದೆ. ಅಡಿಕೆ ತೋಟಕ್ಕೆ ಸ್ವಲ್ಪ ಥಂಡಿ ಬೇಕಿರುವುದರಿಂದ ಅಡಿಕೆ ತೋಟಗಳನ್ನು ಇಂತಹ ಪ್ರದೇಶದಲ್ಲೇ ಮಾಡುತ್ತಾರಂತೆ. ಪಟ್ಟಣಗಳಲ್ಲಿ ಬೆಳೆದ ನಮಗೆ ಮೊದಲೆಲ್ಲಾ ಇಂತಹ ಜಾಗಗಳಲ್ಲಿ ಯಾಕಪ್ಪಾ ಮನೆ ಕಟ್ಟಿಕೊಂಡಿದ್ದಾರೆ ಅನ್ನಿಸುತ್ತಿತ್ತು. ಮಲೆನಾಡಿನ ಬಹುತೇಕ ಹಳ್ಳಿಗಳು ಇದೇ ರೀತಿ. ಶತಮಾನಗಳ ಹಿಂದೆ ಇಂತಹ ದುರ್ಗಮ ಸ್ಥಳಗಳಲ್ಲಿ, ಅಷ್ಟು ಒಳಗೆ ಹೋಗಿ ಅಲ್ಲಿನ ಪ್ರಶಸ್ತ ಜಾಗಗಳನ್ನು ಹುಡುಕಿ ತೋಟ ಮಾಡಿದ್ದಾರೆ. ಈಗ ರಸ್ತೆಯಿದೆ, ವಿದ್ಯುತ್ ಇದೆ, ಎಲ್ಲಾ ರೀತಿ ಸಂಪರ್ಕಗಳಿವೆ. ಆಗ ಇಲ್ಲಿ ಬಂದು ನೆಲೆಸಿದಾಗ ಏನಿತ್ತು? ದಟ್ಟ ಕಾಡು, ಬೆಟ್ಟ ಗುಡ್ಡಗಳು, ಅವುಗಳಲ್ಲೇ ಕಾಲುದಾರಿ. ಮಳೆಗಾಲಕ್ಕಂತೂ ದೇವರೇ ಗತಿ. ಅಂತದ್ದರಲ್ಲಿ ಇಂತಹ ಜಾಗಗಳಲ್ಲಿ ಹೋಗಿ ಕೃಷಿ ಮಾಡಿ ಬದುಕು ಕಂಡುಕೊಂಡದ್ದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಮನೆಯ ಕೆಲವೇ ಅಡಿಗಳ ದೂರದಲ್ಲಿ ಮಾರಿಕಲ್ಲುಗಳಿವೆ. ಸಾಮಾನ್ಯವಾಗಿ ’ಮಾರಿ’ ಎಂಬುದು ನಾವು ಪೂಜಿಸುವ ದೇವರಲ್ಲ. ಆದರೂ ಅಲ್ಲಿ ಹೇಗೆ ಮಾರಿ ಕಲ್ಲು ಬಂತು ಎಂಬುದಕ್ಕೆ ಅಜ್ಜಿ ಹೇಳಿದ ಪ್ರಕಾರ, ಹಿಂದೆ ಆಗ ಅಲ್ಲಿ ನಾಯಕರ ಪೈಕಿಯ ಕೆಲವು ಜನ ಇದ್ದರಂತೆ. (’ನಾಯಕರು ’ ಎಂಬುದೊಂದು ಮಲೆನಾಡಿನ ಕಡೆಯ ಜನಾಂಗ). ಆ ನಾಯಕರು ಮಾರಿ ಕಲ್ಲುಗಳನ್ನು ಪೂಜಿಸುತ್ತಿದ್ದರಂತೆ. ಅವರಿಗೆ ಬೇರೆ ಕಡೆ ವ್ಯವಸ್ಥೆ ಮಾಡಿಕೊಟ್ಟು ಇವರು ಮನೆಕಟ್ಟಿಸಿದರಂತೆ. ಅವರು ಹೋದ ಮೇಲೆ ಅವರು ಪೂಜಿಸುತ್ತಿದ್ದ ಮಾರಿಗೆ ಧಕ್ಕೆಯಾಗಬಾರದೆಂದು ಅಜ್ಜ ಕಟ್ಟೆ ಕಟ್ಟಿಸಿ ಅವುಗಳಿಗೆ ಒಂದು ಸ್ಥಾನ ಮಾಡಿಕೊಟ್ಟ. ಹೇಳಿ ಕೇಳಿ ಮಾರಿ ಎಂದರೆ ರಕ್ತ ಬಲಿಯ ದೇವರು. ಅದರಂತೆಯೇ ಮೊದಲೆರಡು ವರ್ಷ ಕೋಳಿಯನ್ನು ಕುಯ್ಯಿಸಿದ್ದರಂತೆ! ಆಮೇಲೆ ಕಾಶಿಯಿಂದ ಬಂದ ಜೋಯ್ಸರೊಬ್ಬರು ಈಗ ಈ ಮಾರಿ ನಮ್ಮ ದೇವರಾಗಿರುವುದರಿಂದ ರಕ್ತಬಲಿ ನಿಲ್ಲಿಸಬಹುದೆಂದೂ, ನಮ್ಮ ನೈವೇದ್ಯವನ್ನೇ ಅರ್ಪಿಸಬಹುದೆಂದೂ ಸಲಹೆ ಕೊಟ್ಟದ್ದರಿಂದ ಆಗಿನಿಂದ ವರ್ಷಕ್ಕೊಮ್ಮೆ ಕೋಳಿಬಲಿ ಇಲ್ಲದೇ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ.

ಅರ್ಧ ಫರ್ಲಾಂಗು ದೂರ ಇರುವ ಚಿಕ್ಕಪ್ಪನ ಮನೆ, ಆ ಕಡೆ ಒಂದಿಪ್ಪತ್ತು ಹೆಜ್ಜೆ ದೂರ ಇರುವ ಮತ್ತೊಬ್ಬ ಚಿಕ್ಕಪ್ಪನ ಮನೆಗಳೇ ಅಲ್ಲಿನ ಮಿಕ್ಕೆರಡು ಮನೆಗಳು. ಬೇರೆ ಮನೆಗಳು ಕಾಣಬೇಕೆಂದರೆ ಸುಮಾರು ಮುಕ್ಕಾಲು ಕಿ.ಮಿ. ದೂರ ಹೋಗಬೇಕು. ಅಜ್ಜನ ಮನೆಯಿರುವ ವಾತಾವರಣದಲ್ಲಿ ನಿಶ್ಯಬ್ದತೆಯದೇ ಕಾರುಬಾರು. ಯಾರಾದರೂ ಜೋರಾಗಿ ಮಾತಾಡಿದರೆ, ಅಪರೂಪಕ್ಕೊಮ್ಮೆ ಏನಾದರೂ ಗಾಡಿಗಳು ಬಂದರೆ, ಮತ್ತೇನೋ ಜೋರು ಶಬ್ದವಾದರಷ್ಟೆ ಅಲ್ಲಿ ಶಬ್ದ. ಅದಿಲ್ಲದಿದ್ದರೆ ಬರೀ ಗಾಳಿಯ ಸುಯ್ಯ್ ಶಬ್ದ, ಬೀಸಿದ ಗಾಳಿಗೆ ಒಮ್ಮೆ ಮರಗಿಡಗಳೆಲ್ಲಾ ತೂಗಿ ತಾರಾಡುವ ಶಬ್ದ, ಕೊಟ್ಟಿಗೆಯಲ್ಲಿ ಕಟ್ಟಿದ ಆಕಳಿನ ಅಂಬಾ.., ಹಾಕಿದ ಹುಲ್ಲನ್ನು ಎಳೆದೆಳೆದು ತಲೆ ಕೊಡವಿಕೊಂಡಾಗಿನ ಕೊರಳಿನ ಗಂಟೆ ಶಬ್ದವಷ್ಟೆ. ಮನೆಯ ಮುಂದೆ ಅಂಗಳವಿದೆ. ಅಡಕೆ ಒಣಗಿಸಲು ಬಿಟ್ಟಿರುವ ಅಂಗಳ. ಮಳೆಗಾಲದಲ್ಲಿ ಧೋ ಧೋ ಮಳೆಗೆ ಅಂಗಳದ ತುಂಬೆಲ್ಲಾ ನೀರು. ರಾತ್ರಿ ಹೊರಗೆ ಬಂದರೆ ಮಿಣುಕು ಹುಳುಗಳು ಫಳ ಫಳನೆ ದೊಂದಿ ಹೊತ್ತಿಸುತ್ತಾ ಹಾರುತ್ತಿರುತ್ತವೆ. ರಾತ್ರಿಯೆಲ್ಲಾ ಮರಗಳ ಹಿಂದಿನಿಂದ ಹಾರುತ್ತಾ ಹಾರುತ್ತಾ ಬಂದು ಅಂಗಳದಲ್ಲಿ ಮಿಂಚಿ ಮತ್ತೆಲ್ಲೋ ಹಾರುತ್ತಾ ಮರೆಯಾಗಿ ಎಲ್ಲಿಗೆ ಹೋಗುತ್ತವೋ ಗೊತ್ತಿಲ್ಲ. ಅಂತಹ ಪ್ರಕೃತಿಯಲ್ಲಿ, ಆ ನೀರವ ವಾತಾವರಣದ ರಾತ್ರಿಯಲ್ಲಿ ಮಿಣುಕು ಹುಳುಗಳು ಕಟ್ಟಿಕೊಡುವ ಪ್ರಪಂಚವಿದೆಯಲ್ಲಾ, ಅದು ಮಾತ್ರ ಅದ್ಬುತ. ಚಳಿಗಾಲದಲ್ಲಿ ಬೆಳಗಾಗೆದ್ದರೆ ಎತ್ತರೆತ್ತರ ಹುಲ್ಲಿನ ಮೇಲೆಲ್ಲಾ ಇಬ್ಬನಿ. ಅಲ್ಲಿದ್ದಾಗ ಹೊರಗೆ ಒಂದು ಪ್ರಪಂಚವಿದೆ ಎನ್ನುವುದು ಮರೆತು ಹೋಗಿರುತ್ತದೆ. ರಾತ್ರಿಯ ಕಗ್ಗತ್ತಲಲ್ಲಿ ಕೂಗುವ ಸಾವಿರ ಜೀರುಂಡೆಗಳ ದನಿ ಒಮ್ಮೊಮ್ಮೆ ಇದ್ದಕ್ಕಿದ್ದಂತೇ ಸ್ತಬ್ಧವಾದಾಗ ಜಗತ್ತೇ ನಿಂತು ಹೋದಂತೆ! ಅಲ್ಲಿನ ಪ್ರಕೃತಿಯಲ್ಲೇನೋ ನಿಗೂಢತೆ ಅನುಭವವಾಗುತ್ತದೆ.

ಗುರುವಾರ, ಮಾರ್ಚ್ 18, 2010

ಏನೋ ಗೊತ್ತಿಲ್ಲ

ವಾಕ್ಯಗಳನ್ನು ಗುಡ್ಡೆ ಹಾಕಿಕೊಂಡು ಕುಳಿತಿದ್ದೇನೆ,
ಎಲ್ಲವೂ ಆ ನೆನಪುಗಳ ಹಾಗೆ ತಿರುಗುಮುರುಗು.
ಒಂದಕ್ಕೊಂದನ್ನು ಜೋಡಿಸಲು ಪ್ರಯತ್ನಪಡುತ್ತಿದ್ದೇನೆ,
ಅವಳನ್ನು ಕತೆಯಾಗಿಸಿ ನಿಟ್ಟುಸಿರಿಡಲಾಗುತ್ತಿಲ್ಲ.
ಕತೆಗೊಂದು ಹುಟ್ಟುಕೊನೆಗಳ ಅಗತ್ಯವೇ ಇಲ್ಲವೀಗ,
ಎಲ್ಲೋ ಕತೆ ಹುಟ್ಟಿಬಿಡಬಹುದು,
ಕೊನೆಯೇ ಇಲ್ಲದೆ ಮತ್ತೆ ಶುರುವಾಗಿಬಿಡಬಹುದು,
ಶುರುವಾದದ್ದು ಕೊನೆಯಾಗದೇ ಇರಬಹುದು,
ಆದರೆ ಕತೆ ಕೊನೆಯಾಗಿದೆ ಈಗ.
ಎಲ್ಲಾ ಕತೆಗಳು ಒಂದೇ, ಮಗ್ಗುಲುಗಳು ಬೇರೆ,
ಕತೆ ಹೇಳುವುದಕ್ಕೂ, ಬರೆಯುವುದಕ್ಕೂ,
ಕಾಣುವುದಕ್ಕೂ, ಅದು ನೆಡೆಯುವುದಕ್ಕೂ ವ್ಯತ್ಯಾಸವಿದೆ,
ಕತೆಯೊಳಗಿನ ಪಾತ್ರವಾಗಿಬಿಟ್ಟೆ ನಾನು.
ಪ್ರೀತಿಯ ಮೊದಲ ಹಂತಕ್ಕೆ ನೂರು ಕಾರಣ,
ಎರಡನೆ ಹಂತವೆಂದರೆ ನಿಷ್ಕಲ್ಮಶ ಕಾಳಜಿಯೊಂದೇ.
ಪ್ರೀತಿ ತೋರಿಸಲು ಬರುವುದಿಲ್ಲವೋ
ಪ್ರೀತಿ ಅರ್ಥ ಆಗುವುದಿಲ್ಲವೋ ಗೊತ್ತಾಗಲಿಲ್ಲ,
ಎದುರಿಗೇ ಕೂತರೂ ಏನೂ ಮಾತಾಡಲಾಗಲಿಲ್ಲ,
ಕತೆಯ ಪಾತ್ರಗಳ ಮನಸ್ಸು ತಿಳಿಯುವುದಿಲ್ಲ.
ಇದ್ದಾಗ ಸಿಗದೇ ಇಲ್ಲದಿದ್ದಾಗ ನಿನ್ನ ಮಿಸ್ ಮಾಡಿಕೊಂಡೆ,
ಅನ್ನುವುದು ಎಂಥಾ ಮೋಸ, ಹುಡುಗಿ ಸಿಕ್ಕಂತೆಯೂ ಸಿಗಲಿಲ್ಲ,
ನದಿಯೂ ಇಲ್ಲ ಸಾಗರವೂ ಇಲ್ಲ, ಮಳೆಯೂ ನಿಂತಿಲ್ಲ,
ಆದರೂ ಬರಡು ಭೂಮಿ, ಏನೋ ಗೊತ್ತಿಲ್ಲ.

ಗುರುವಾರ, ಮಾರ್ಚ್ 11, 2010

ತಪ್ಪಲ್ಲದ ತಪ್ಪುಗಳು

ಕೆಲದಿನಗಳಿಂದ ಸ್ವಾಮಿ ನಿತ್ಯಾನಂದರ ಬಗ್ಗೆ ಏನೇನೋ ಜೋಕ್ ಸಂದೇಶಗಳು ನನ್ನ ಫೋನ್ ಗೆ ಬಂದಿದ್ದವು. ಇವತ್ತು ಬೆಳಗ್ಗೆ ಅದನ್ನೇ ನಾನು ನನ್ನ friendsಗೆಲ್ಲಾ ಫಾರ್ವರ್ಡ್ ಮಾಡುತ್ತಿದ್ದೆ. ಅದನ್ನು ಕಳಿಸುವಾಗ ಅವರ ಬಗ್ಗೆ , ಆ ಘಟನೆಯ ಬಗ್ಗೆ ಯಾವ ಯೋಚನೆಯೂ ಇಲ್ಲದೇ ಸುಮ್ಮನೇ ತಮಾಷೆಗಾಗಿ ಕಳಿಸುತ್ತಿದ್ದೆ. ಸ್ವಲ್ಪ ಹೊತ್ತಿನಲ್ಲೇ ಗೆಳತಿ ಫೋನ್ ಮಾಡಿದಳು. ಇದ್ಯಾಕೆ ಹೀಗೆಲ್ಲಾ ಕಳಿಸ್ತಿದ್ದೀಯ, ಮಾಡ್ದೋರ ಪಾಪ ಆಡ್ದೋರ ಬಾಯಲ್ಲಿ ಅಂತಾರೆ, ಹೀಗೆ ಸುಮ್ಮನೇ ಇನ್ನೊಬ್ಬರನ್ನು ತಮಾಷೆ ಮಾಡಿಕೊಳ್ಳುವುದು ತಪ್ಪಲ್ವಾ ಅಂದಳು. ನನಗೂ ಹೌದು ಅನ್ನಿಸಿತು. ಇದು ಚಿಕ್ಕ ತಪ್ಪು ಎನ್ನಬಹುದು. ನನಗೂ, ಯಾರಿಗೂ ತೊಂದರೆ ಮಾಡದ ಚಿಕ್ಕ ತಪ್ಪು. ತಲೆಕೆಡಿಸಿಕೊಳ್ಳಬೇಕಾದ್ದೇನೂ ಇರದ, ಅಲ್ಲೇ ಬಿಟ್ಟು ಬಿಡುವ ತಪ್ಪು. ಅದಿರಲಿ.

****

ಆದರೆ ಜೀವನದಲ್ಲಿ ಒಮ್ಮೊಮ್ಮೆ ಎಂತಹ ತಪ್ಪುಗಳಾಗಿ ಬಿಡುತ್ತವೆಂದರೆ ಅದು ನಮ್ಮ ಜೀವನದ ಗತಿಯನ್ನೇ ಬದಲಾಯಿಸಿಬಿಡುತ್ತವೆ. ಆ ತಪ್ಪು ಮಾಡುವಾಗ ಅದು ನಮಗೆ ನಿಜವಾಗಲೂ ತಪ್ಪು ಅಂತ ಅನ್ನಿಸಿರುವುದಿಲ್ಲ. ನಿಜವಾಗಲೂ ಅದು ಆಗ ’ತಪ್ಪು’ ಅನ್ನುವಂತದ್ದು ಆಗಿರುವುದೇ ಇಲ್ಲ. ಇಲ್ಲಿ ತಪ್ಪು ಅಂದರೆ ಯಾರಿಗೋ ತೊಂದರೆಯಾಗುವ, ಯಾರಿಗೋ ಮೋಸ ಮಾಡಿದ ತಪ್ಪು ಅಂತಲ್ಲ. ನಮ್ಮದೇ ಜೀವನಕ್ಕೆ, ನಮ್ಮದೇ ಬೆಳವಣಿಗೆಗೆ ತೊಡಕಾಗುವಂತಹ, ನಮ್ಮದೇ ನೆಮ್ಮದಿ ಕೆಡಿಸಿಕೊಳ್ಳುವಂತಹ ತಪ್ಪುಗಳು (mistakes). ಅವತ್ತಿನ ಸನ್ನಿವೇಶಕ್ಕೆ ತಕ್ಕನಾಗಿ ಮಾಡಿದ ಕೆಲಸ, ಅವತ್ತು ತೆಗೆದುಕೊಂಡ ತೀರ್ಮಾನ, ಅವತ್ತು ಇಟ್ಟ ಹೆಜ್ಜೆ ತಪ್ಪಾಗಿತ್ತು ಅಂತ ಎಷ್ಟೋ ಕಾಲವಾದ ಮೇಲೆ ಅರಿವಾಗಲು ಶುರುವಾಗುತ್ತದೆ. ಆದರೆ ಕಾಲ ಮೀರಿರುತ್ತದೆ. ಅದು ಎಲ್ಲೋ ತೊಡಗಿಸಿದ ಬಂಡವಾಳ ಇರಬಹುದು, ಆರಿಸಿಕೊಂಡ ಕ್ಷೇತ್ರ, ಉದ್ಯೋಗ ಆಗಿರಬಹುದು, ಬೆಳೆಸಿಕೊಂಡ ಸ್ನೇಹ/ಸಂಬಂಧ/ಸಹವಾಸವಿರಬಹುದು, discontinue ಮಾಡಿದ ಹವ್ಯಾಸ, ಕಲೆ, ಕಳೆದ ಸಮಯ ಮತ್ತಿನ್ನೇನೋ ಆಗಿರಬಹುದು. ಅವು ನಮ್ಮ ನಿರೀಕ್ಷೆಯ ಹೊರತಾಗಿ ನೆಡೆದಾಗ, ನಾವು ಊಹಿಸಿದ ದಾರಿಯಲ್ಲಿ ಸಾಗದಿದ್ದಾಗ, ತೊಂದರೆ ಕೊಡಲಾರಂಭಿಸಿದಾಗ, ಕಳೆದುಕೊಂಡದ್ದು ಮತ್ತೆ ಸಿಗುವುದಿಲ್ಲ ಎಂಬಂತಾದಾಗ ಅಷ್ಟರಲ್ಲಿ ಆಗಬೇಕಾದ ಡ್ಯಾಮೇಜು ಆಗಿಹೋಗಿ ಅದನ್ನು ಸರಿಪಡಿಸಿಕೊಳ್ಳುವ ದಾರಿ ತೀರಾ ಕ್ಷೀಣವಾಗಿರುತ್ತದೆ ಅಥವಾ ಇಲ್ಲವಾಗಿರುತ್ತದೆ. ಹಾಗಂತ ಜೀವನವೇನೂ ಬರಬಾದೆದ್ದಿರುವುದಿಲ್ಲ. ಒಂದು ಸೀದಾ ಸಾದಾ ಹಾದಿಯಲ್ಲಿ ಸಾಗಿಬಂದ ಸಾಧಾರಣ ಬದುಕು, ಭವಿಷ್ಯ ಇನ್ನೂ ಒಳ್ಳೆಯದಾಗಿರುತ್ತಿತ್ತು ಎಂಬಂತಿರುತ್ತದೆ. ಸಾಮರ್ಥ್ಯ ಇದ್ದರೂ ಬಳಸಿಕೊಳ್ಳದೇ, ಮಾಡುವುದನ್ನು ಸರಿಯಾಗಿ ಮಾಡದೇ, ಗೊತ್ತಿದ್ದೂ ಗೊತ್ತಿದ್ದೂ ಹೀಗ್ಯಾಕೆ ಆಗಲು ಬಿಟ್ಟೆವು ಅನ್ನಿಸುತ್ತದೆ.

ಅವತ್ತು ತಪ್ಪೆನಿಸದೇ ಹೋದದ್ದು ಇವತ್ತು ಅಷ್ಟೆಲ್ಲಾ ತಪ್ಪು ಅನ್ನಿಸಬೇಕಾದರೆ ಆವತ್ತು ಆ ಹೆಜ್ಜೆ ಏಕೆ ಇಟ್ಟೆವು ಎಂಬುದನ್ನು ಯೋಚಿಸಿದರೆ ಅದಕ್ಕೆ ಕಾರಣಗಳು ಹಲವು. ಅದು ಅಜ್ಞಾನ ಇರಬಹುದು, ಅನಿವಾರ್ಯತೆ ಇರಬಹುದು, ಅನುಭವದ, ದೂರದೃಷ್ಟಿಯ, ಪ್ರೌಢಿಮೆ ಕೊರತೆ ಇರಬಹುದು, ಬದಲಾದ ಸನ್ನಿವೇಶ ಇರಬಹುದು, ಪರಿಸ್ಥಿತಿಯ ಗತಿ ಇರಬಹುದು, ಆತುರಕ್ಕೆ ಬಿದ್ದದ್ದಿರಬಹುದು, ಇದ್ಯಾವುದೂ ಇಲ್ಲದೇ ಸುಮ್ಮನೇ ಆಗಿಹೋಗಿರಬಹುದು. ಈ ರೀತಿಯ ವೈಯಕ್ತಿಕ ತಪ್ಪುಗಳ ಪ್ರಭಾವ ಅನಂತರದ ಹಂತಗಳಲ್ಲಿ ನಮ್ಮ ಸಾಮಾಜಿಕ, ಕೌಟುಂಬಿಕ, ಆರ್ಥಿಕ ಜೀವನದ ಮೇಲೂ ಕಾಣಿಸುತ್ತದೆ. ಇಂತಹ ತಪ್ಪುಗಳು ಯಾವ ಪಶ್ಚಾತಾಪಕ್ಕೂ, ಯಾವ ಆತ್ಮವಿಮರ್ಶೆಗೂ ನಿಲುಕದೇ, ಮನಸಿದ್ದರೆ ಮಾರ್ಗ.. ತಪ್ಪುಗಳಿಂದ ಕಲಿಯಿರಿ.. ಎಂಬ ಸೂತ್ರಗಳಿಗೂ ಸಿಲುಕದೇ ಒಂದು ಕೊರಗನ್ನು ಹಾಗೇ ಉಳಿಸಿಬಿಡುತ್ತವೆ. ಇವು ತಪ್ಪಲ್ಲದ ತಪ್ಪುಗಳು.

*****

ನಂಗೊತ್ತು, ಹೀಗೆಲ್ಲಾ ಬರೆದಿದ್ದಕ್ಕೆ ನೀವೆಲ್ಲಾ ಸ್ವಾಮಿ ವಿಕಾಸಾನಂದ ಅದೂ ಇದೂ ಅಂತೀರ! :)

ಬುಧವಾರ, ಫೆಬ್ರವರಿ 17, 2010

HAL Museum ನೋಡಿದೆ

V: ಮತ್ತೆ.. ಹೇಗಿತ್ತು ವೀಕೆಂಡು?

ನಾನು: ಇವತ್ತಾಗಲೇ ಬುಧವಾರ ಆಯ್ತು, ಈಗ ಕೇಳ್ತಾ ಇದ್ದೀಯ?

V: ಯಾವತ್ತಾದ್ರೇನು? ಈಗೇನ್ ಹೇಳ್ತಿಯೋ ಇಲ್ವೋ.

ನಾನು: ಇರ್ಲಿ ಸಮಾಧಾನ, ಹೇಳ್ತೀನಿ ನಂಗೇನು, ಕೇಳೋದು ನಿನ್ ತಾನೇ. ವೀಕೆಂಡು ಸ್ಪೆಷಲ್ ಏನಿಲ್ಲ. ಹಿಂಗೆ ಸುತ್ತಾಡಿದ್ದಷ್ಟೇ.

V: ಅದೇ ಕೇಳಿದ್ದು, ಎಲ್ಲಿ ಸುತ್ತಿದೆ ಅಂತ.

ನಾನು: ಶನಿವಾರ ಆಫೀಸ್ಗೆ ಹೋಗಿದ್ದೆ. ಕೆಲಸ ಜಾಸ್ತಿ ಇತ್ತು. ಹೋಗಲೇ ಬೇಕಿತ್ತು.

V: ಸರಿ, ಭಾನುವಾರ?

ನಾನು: ಹಾಂ, ಭಾನುವಾರದಲ್ಲಿ ಸ್ಪೆಷಲ್ ಇದೆ. ಹೇಳ್ತೀನಿ.

V: ಹುಂ...

ನಾನು: ಸುಮಾರು ೬ ತಿಂಗಳ ಹಿಂದೆ ಲಕ್ಷ್ಮಿಯವರ ಪಿಕಾಸಾ ಆಲ್ಬಂ ನೋಡ್ತಾ ಇದ್ದೆ. ಅದರಲ್ಲಿ ಅವರು ಹೆಚ್.ಎ.ಎಲ್. ಮ್ಯೂಸಿಯಂ ಫೋಟೋಸ್ ಹಾಕಿದ್ರು.

V: ಅವ್ರು ಇನ್ನೂ ಸುಮಾರೆಲ್ಲ ಫೋಟೋ ಹಾಕಿದಾರೆ. ಅದ್ಕೆ ?

ನಾನು: ಸ್ವಲ್ಪ ಹೇಳೋತನ್ಕ ...ಂಡು ಕೇಳು.

V: ಸರಿ.

ನಾನು: ಆ ಫೋಟೋಗಳನ್ನ ನೋಡಿ ನಂಗೂ ಕೂಡ ಅಲ್ಲಿಗೆ ಹೋಗ್ಬೇಕು ಅಂತ ಆಸೆ ಆಗಿತ್ತು. ಯಾವಾಗ ಟೈಂ ಸಿಗುತ್ತೋ ಅಂತ ಕಾಯ್ತಾ ಇದ್ದೆ. ಆದ್ರೆ ಹಂಗೇ ಹೋಗ್ಬೇಕು ಹೋಗ್ಬೇಕು ಅನ್ಕೊಂಡು ಮರ್ತೋಗಿತ್ತು.

V: ಆ ಮ್ಯೂಸಿಯಂಲ್ಲಿ ಏನ್ ವಿಶೇಷ ಅಷ್ಟೊಂದು?

ನಾನು: ಏನ್ ವಿಶೇಷನಾ? ಎಲ್ಲಾ ವಿಶೇಷನೇ ಅಲ್ಲಿ. ಅದು ವಿಮಾನಗಳ ಮ್ಯೂಸಿಯಂ. HAL heritage museum ಅಂತ.

V: ಸರಿ. ಮರ್ತೋಗಿತ್ತು ಅಂದ್ಯಲ್ಲ ಮತ್ತೆ ಹೇಗೆ ನೆನಪಾಯ್ತು.

ನಾನು: ಒಹ್, ಅದಾ, ಯಾದ್ ವಶೇಮ್ ಪುಸ್ತಕ ಓದಿದ್ನಲ್ಲ.

V: ಹುಂ. ಓದಿ ಅದೇನೋ ಇಷ್ಟುದ್ದ ಬ್ಲಾಗ್ ಬೇರೆ ಬರ್ದಿದ್ದಿಯಲ್ಲ.

ನಾನು: ಯೆಸ್.. ಆ ಪುಸ್ತಕದಲ್ಲಿ HAL ವಿಷ್ಯ, ಅದು ಸ್ಥಾಪನೆಯಾಗಿದ್ದು, ಆ ಘಟನೆಗಳು ಎಲ್ಲಾ ಬರತ್ತೆ. ಅದನ್ನ ಓದಿ ಮತ್ತೆ ನೆನ್ಪಾಗಿತ್ತು. ಹೋಗಲೇಬೇಕು ಅಂತ ಅನ್ನಿಸ್ಬಿಡ್ತು.

V: ಮತ್ತೆ ನೀನು HAL ನಲ್ಲಿ ಪ್ರಾಜೆಕ್ಟ್ ಮಾಡ್ತೀನಿ ಅಂತ ೩ ತಿಂಗ್ಳು ಮಣ್ಣು ಹೊತ್ತಿದ್ಯಲ್ಲ , ಆಗ ಆ ವಿಷ್ಯ ಗೊತ್ತಿರ್ಲಿಲ್ವಾ?

ನಾನು: ಇಲ್ಲ, ಆವಾಗಿನ್ನೂ ಹುಡುಗ್ ಬುದ್ದಿ ನೋಡು, ಯಾವಾಗ್ ಹೊರಗ್ಬರ್ತಿವೋ, ಊರ್ ಸುತ್ತಕ್ಕೆ ಹೋಗ್ತಿವೋ ಅಂತಿದ್ವಿ. ಪಕ್ಕದಲ್ಲೇ ವಿಮಾನ ನಿಲ್ಸಿದ್ರೂ ಅದರ ಕಡೆಗೆ ಜಾಸ್ತಿ ಗಮನ ಕೊಡದೆ ಬೇರೆ ಕಡೆ ಗಮನ ಕೊಡ್ತಿದ್ವಿ.

V: :-)

ನಾನು: :-)

V: ಮುಂದೆ?

ನಾನು: ಅದೇ ಮೊನ್ನೆ ಭಾನುವಾರ ಹೋಗೋಣ ಅನ್ಕೊಂಡೆ. ಒಬ್ನೇ ಹೋಗಕ್ಕೆ ಬೇಜಾರು. ಅದಕ್ಕೆ ಯಾರಾದ್ರು ಹುಡುಗ್ರನ್ನ ಟೈ ಅಪ್ ಮಾಡ್ಕಬೇಕು ಅನ್ಕೊಂಡು ಕೇಳಿದೆ ಹುಡುಗ್ರನ್ನ.

V: ಯಾರೂ ಬರಕ್ಕೆ ರೆಡಿ ಆಗ್ಲಿಲ್ಲ ಅಲ್ವಾ? :)

ನಾನು: ಹುಂ. ನಿಂಗೆ ಹೆಂಗೆ ಗೊತಾಯ್ತು?!

V: ನಂಗೊತ್ತಿಲ್ವಾ ನಿಮ್ ಹುಡುಗ್ರ ಹಣೆಬರ, ನಿಂ ಹುಡುಗ್ರು ಸಿನೆಮಾಗೆ ಹೋಗಣ ಅಂದ್ರೆ ಅಲ್ಲೇ ಗಾಡಿ ತಿರುಗಿಸಿ ಹೊರಟುಬಿಡ್ತಾರೆ. ರಾತ್ರಿ ಇನ್ನೆಲ್ಲೋ ಹೋಗಾಣ ಅಂದ್ರೆ ಸಂಜೆನೇ ಜರ್ಕಿನ್ ಹಾಕ್ಕೊಂಡು ರೆಡಿಯಾಗ್ಬಿಡ್ತಾರೆ. ಇಂತ ಕಡೆ ಹೋಗೋಣ ಅಂದ್ರೆ ಮಾತ್ರ ಯಾರೂ ಬರಲ್ಲ.

ನಾನು: ಹೌದು. :(

V: ಪಾಪ, ಮತ್ತೇನ್ ಮಾಡಿದೆ?

ನಾನು: ನಂಗೆ ಕಿಣಿ ನೆನಪಾಯ್ತು. ಅವನಿಗೆ ಫೋನ್ ಮಾಡಿದೆ. ಅವನಿಗೆ ಇಂತದ್ರಲ್ಲೆಲ್ಲಾ ಸ್ವಲ್ಪ ಆಸಕ್ತಿ ಇದೆ. ಅದೂ ಅಲ್ದೇ ನಮ್ದೇ ಸಬ್ಜೆಕ್ಟು ಅವನದ್ದೂ. ಈ ತರ ಜಾಗಗಳಿಗೆಲ್ಲಾ ಹೋಗ್ಬೇಕಾದ್ರೆ ಸ್ವಲ್ಪ ಇದರ ಬಗ್ಗೆ ಜ್ಞಾನ ಇರೋರನ್ನ ಕರ್ಕೊಂಡೋದ್ರೆ ನೋಡ್ತಾ ನೋಡ್ತಾ ಚರ್ಚೆ ಮಾಡಕ್ಕೆ ಚೆನ್ನಾಗಿರತ್ತೆ.

V: ಕಿಣಿ ಇರೋದು ತ್ಯಾಗರಾಜ ನಗರ ಅಲ್ವಾ? ಬರ್ತೀನಿ ಅಂದ್ನಾ.

ನಾನು: ಹುಂ. ಅವನೂ ಫ್ರೀ ಇದ್ದ. ಸರಿ, ಸೀದಾ ಮ್ಯೂಸಿಯಂಗೇ ಬರ್ತೀನಿ, ನೀನೂ ಬಂದ್ಬಿಡು ಅಂದ.

V: ಗುಡ್, ಆಮೇಲೆ?

ನಾನು: ಮದ್ಯಾನ ಊಟ ಮಾಡಿ ಬೈಕ್ ಹತ್ತಿದೆ. ಹಂಗೇ ಕಾರ್ಪೋರೇಷನ್ ದಾಟಿ , ಎಂ.ಜಿ.ರೋಡ್ ದಾಟಿ ಹೋದೆ ಹೋದೆ... ಹೋದೆ... ಹೋಗ್ತಾ ಇದ್ದೆ.. ಮುರುಗೇಶ್ ಪಾಳ್ಯದ ಹತ್ರ ಹೋಗ್ತಿದ್ದ ಹಾಗೇ ಕಿಣಿ ಫೋನ್ ಬಂತು. ನಾನು ಆಗ್ಲೇ ತಲುಪಿದ್ದೀನಿ, ಎಲ್ಲಿದ್ದೀಯಾ ನೀನು ಅಂದ. ಇಲ್ಲೇ ಇದ್ದೀನಿ ೫ ನಿಮಿಷ ಬಂದೆ ಅಂತ ಮಾಮೂಲಿ ಕಾಗೆ ಹಾರ್ಸಿ, ಹೆಚ್.ಎ.ಎಲ್. ಮೇನ್ ಗೇಟ್ ದಾಟಿ, ಫೌಂಡ್ರಿ ದಾಟಿ, ಹೆಲಿಕಾಪ್ಟರ್ ಡಿವಿಷನ್ ದಾಟಿ ಮಾರತ್ ಹಳ್ಳಿ ರಸ್ತೆಲ್ಲಿ ಹಾಗೇ ಮುಂದೆ ಹೋದ್ಮೇಲೆ ಅಂತೂ ತಲುಪಿದೆ. ನಮ್ಮನೆಯಿಂದ ಬರೋಬ್ಬರಿ ಇಪ್ಪತ್ತು ಕಿಲೋಮೀಟರು!

V: ಓಹ್ , ಅಲ್ಲಾ ಇರೋದು ಅದು?

ನಾನು: ಹುಂ. ಅಲ್ಲಿ ಬಸವ ನಗರ ಕಡೆಗೆ ಟರ್ನ್ ಇದೆ. ಅದರ ಪಕ್ಕದಲ್ಲೇ ಹೆಚ್.ಎ.ಎಲ್ . ಹೆರಿಟೇಜ್ ಮ್ಯೂಸಿಯಂ.

V: ಆಮೇಲೆ ?

ನಾನು: ಇನ್ನೇನು, ಸೀದಾ ಟಿಕೆಟ್ ಕೌಂಟರ್ ಗೆ ಹೋಗಿ ಟಿಕೆಟ್ ತಗಂಡ್ವಿ. ವಾರದ ಎಲ್ಲಾ ದಿನಗಳೂ ತೆರೆದಿರುತ್ತದೆ ಅಂತ ಬೋರ್ಡ್ ಹಾಕಿದ್ರು. ಟಿಕೇಟು ಒಂದಕ್ಕೆ ೨೫ ರೂಪಾಯಿ. ಕ್ಯಾಮೆರಾ ಇದ್ರೆ ಅದ್ಕೆ ೧೦ ರುಪಾಯಿ. ನಮ್ಮತ್ರ ಫೋನ್ ಕ್ಯಾಮರಾ ಇತ್ತು. ಅದ್ನ ಯೂಸ್ ಮಾಡ್ತೀರಾ ಅಂತ ಕೇಳ್ದ. ಇಲ್ಲ ಸಾರ್, ಜೇಬಿಂದ ಹೊರಗ್ ತೆಗೆಯೋದೆ ಇಲ್ಲ ಅಂದ್ವಿ. ೨೦ ರೂಪಾಯಿ ಉಳ್ತಾಯ ಆಯ್ತು. :)

V: ಆಹಾಹಾ, ದೊಡ್ಡ ಸಾಧನೆ ಬಿಡು. ಮನೆಲ್ಲೇ ಕೂತಿದ್ರೆ ಇನ್ನೂ ೫೦ ರೂಪಾಯಿ ಉಳ್ತಾಯ ಆಗಿರೋದಲ್ಲ.

ನಾನು: no jokes plz..

V: :D ಒಳಗೆ ಹೆಂಗಿದೆ , ಏನೇನಿತ್ತು?

ನಾನು: ಸೂಪರ್ರಾಗಿದೆ. ಕಳ್ದೋಗ್ಬಿಟ್ವಿ. ೪೦ ರ ದಶಕದಿಂದ ಇವತ್ತಿನವರೆಗೂ ಹೆಚ್.ಎ.ಎಲ್ ಗೆ related ಎಲ್ಲಾ ಅಪರೂಪದ ಫೋಟೋಗಳಿವೆ. ಬೇಜಾನ್ ಟೆಕ್ನಿಕಲ್ ವಿಷ್ಯಗಳು, ಎಲ್ಲಾ ವಿಮಾನಗಳ prototypes, models ಇವೆ. .HAL ತಯಾರು ಮಾಡಿರೋ ಪುಷ್ಪಕ್, ಕಿರಣ್, ಮರುತ್, MiG-21, Light Combat Aircraft, Bomber ಮುಂತಾದ ವಿಮಾನಗಳು ಮತ್ತು ಚೇತಕ್, ಚೀತಾ ಮುಂತಾದ ಹೆಲಿಕಾಪ್ಟರ್ ಗಳದ್ದು scaledown models, ಕೆಲವೊಂದು ೧:೧ ಮಾಡೆಲ್ ಗಳನ್ನೂ ಇಟ್ಟಿದ್ದಾರೆ. ಎಲ್ಲಾದನ್ನೂ ಮುಟ್ಟಿ, ಮೂಸಿ ನೋಡ್ಬೋದು. :)


V: ಸುಪರ್.. ಎಲ್ಲಾ ನೋಡಿದೆ ಅಂತೂ. ಎಷ್ಟೋ ದಿನಗಳ ಆಸೆ ಪೂರೈಸಿಕೊಂಡೆ.

ನಾನು: ಹೌದು. ಗುಬ್ಬಚ್ಚಿ ತರ ಇರೋ ವಿಶ್ವೇಶ್ವರಯ್ಯನವರ ಫೋಟೋ ನೋಡಿ ಎಷ್ಟು ಖುಷಿ ಆಯ್ತು ಗೊತ್ತಾ? ಸಂಜೆ ೫ ಗಂಟೆಗೆ ಬಾಗ್ಲಾಕ್ತೀವಿ ಅಂದ್ರು. ನಾವು ಅಲ್ಲೇ ಒಳಗಡೆ ಕ್ಯಾಂಟೀನಲ್ಲಿ ಕೆಟ್ಟದೊಂದು ಟೀ ಕುಡ್ದು ಹೊರಟ್ವಿ.

V: ಒಟ್ನಲ್ಲಿ ಚೆನ್ನಾಗಿತ್ತು ಅನ್ನು. ಒಂದು ಹೊತ್ತಿಗೇನೂ ಮೋಸ ಇಲ್ಲ.

ನಾನು: ಹೌದು. ಒಂದು ಹೊತ್ತಿಗೆ ಖಂಡಿತ ಮೋಸ ಇಲ್ಲ. ಫ್ಯಾಮಿಲಿ ಕರ್ಕಂಡೂ ಹೋಗ್ಬೋದು, ವಿಮಾನ ನೋಡಿ ಮಕ್ಳು ಮರಿನೂ ಖುಷಿ ಪಡ್ತವೆ. ಸುತ್ತಲೂ ಒಳ್ಳೇ ಲಾನ್ ಇದೆ. ಬಹಳ ಜನ ಫ್ಯಾಮಿಲಿ ಜೊತೆಗೇ ಬಂದಿದ್ರು ಅಲ್ಲಿ.

V: ಸರಿ, ಆಮೇಲೆ ಸೀದಾ ಮನೆಗೆ ಬಂದ್ರಾ?

ನಾನು: ಅದು ನಮ್ ಹಣೆಲ್ಲಿ ಬರ್ದಿಲ್ಲ. ಸುಮ್ನೆ ಮತ್ತೆ ಬಂದ ದಾರಿಲ್ಲೇ ಹೋಗೋದು ಬೇಡ, ಆಕಡೆ ಬಸವ ನಗರ, ವಿಜ್ಞಾನ ನಗರ ಎಲ್ಲಾ ನೋಡ್ಕೊಂಡು ಹೋಗಣ ಅಂತ ಆ ಕಡೆಯಿಂದ ಸುತ್ಕೊಂಡು ಅಲ್ಲೇ ಎಲ್ಲೋ ಬೇಕರಿಯಲ್ಲಿ ತಿಂಡಿ ತಿಂದ್ವಿ.

V: ಆಮೇಲೆ?

ನಾನು: ಆಮೇಲೆ, ನಿನ್ನ ದಾರಿ ನೀ ನೋಡ್ಕೋ , ನನ್ ದಾರಿ ನಾ ನೋಡ್ಕೋತೀನಿ ಅಂತ ಟ್ರಾಫಿಕ್ ನಲ್ಲಿ ಬೆರೆತು ಹೋದ್ವಿ.

V: ಅಂತೂ ಬೆಂಗಳೂರಿಗೆ ಬಂದು ಇಷ್ಟು ವರ್ಷ ಆದ್ಮೇಲೆ ನೋಡಿದೆ.

ನಾನು: ಹ್ಮ್.. ಇದೇ ತರ ಬೆಂಗಳೂರಲ್ಲಿ ನೋಡುವಂತದ್ದು ಇನ್ನೂ ತುಂಬಾ ಇದೆ. ಇಲ್ಲಿರೋರಿಗೇ ಸರಿಯಾಗಿ ಗೊತ್ತಿರಲ್ಲ. ಗೊತ್ತಿದ್ರೂ ಹೋಗಕ್ಕೆ ಮನಸು ಮಾಡೋಲ್ಲ.

V: hmm. ಪರ್ವಾಗಿಲ್ಲ. ಚೆನ್ನಾಗಿತ್ತು ನಿನ್ ಮ್ಯೂಸಿಯಂ.

ನಾನು: ಸರಿ.. ಮ್ಯೂಸಿಯಂ ಬಗ್ಗೆ ಜಾಸ್ತಿ ವಿಷಯ ಬೇಕಂದ್ರೆ ಇದನ್ನ ಓದು..
http://www.aeroinfo.org.in/india/halmuseum.html .

****************

ಈ Writing Style ಕೃಪೆ : Zindagi Calling blog :-)

ಗುರುವಾರ, ಫೆಬ್ರವರಿ 11, 2010

ಓದಿನೊಂದಿಗಿಷ್ಟು ಹರಟೆ...

ಒಂದೊಂದೇ ಪುಸ್ತಕಗಳನ್ನು ಓದಿ ಎತ್ತಿಡುತ್ತಿದ್ದೇನೆ. ಎಷ್ಟೋ ದಿನಗಳಿಂದ ಪೆಟ್ಟಿಗೆಯಲ್ಲಿ ಬೆಚ್ಚಗೆ ಕುಳಿತಿದ್ದ, ಓದದೇ ಬಾಕಿ ಉಳಿದುಹೋಗಿದ್ದ ಪುಸ್ತಕಗಳೆಲ್ಲಾ ಮೋಕ್ಷ ಕಾಣುತ್ತಿವೆ. ಪುಸ್ತಕದಂಗಡಿಗಳಿಗೆ ಹೋಗಿ ಇಷ್ಟ ಪಟ್ಟು ಕೊಂಡಿದ್ದ ಪುಸ್ತಕಗಳು, ಎಲ್ಲೋ ಪುಸ್ತಕ ಜಾತ್ರೆಯಿಂದ ತಂದಿಟ್ಟುಕೊಂಡಿದ್ದವು, ಅಕ್ಕ ಕೊಟ್ಟ ಕಾದಂಬರಿಗಳು, ಗೆಳತಿ ಕೊಟ್ಟ ದೇವುಡು ’ಮಹಾ’ ಸರಣಿ ಮುಂತಾದವುಗಳೆಲ್ಲಾ ಖಾಲಿಯಾದವು. ಈ ಎರಡು ತಿಂಗಳಲ್ಲಿ ಓದಿ ಮುಗಿಸಿದ ಪುಸ್ತಕಗಳು ಸರಿಸುಮಾರು ೨೦! Thanx to b.m.t.c. vajra . ಟ್ರಾಫಿಕ್ ಮತ್ತು ಸುಸ್ತನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಬೈಕನ್ನು ಮನೆಲ್ಲಿಟ್ಟು ಬಸ್ಸಿನಲ್ಲೇ ಪ್ರಯಾಣಿಸಬೇಕೆಂದು ತೀರ್ಮಾನಿಸಿದ್ದರಿಂದ ದಿನಕ್ಕೆ ಏನಿಲ್ಲವೆಂದರೂ ೩ ಗಂಟೆ ದೊರೆಯುತ್ತಿದೆ. ಒಂದುಕಾಲದಲ್ಲಿ ಕೈಕಾಲು ನಜ್ಜುಗುಜ್ಜಾಗಿಸಿಕೊಂಡು ಸಿಟಿಬಸ್ಸುಗಳಲ್ಲಿ ಜೋತಾಡಿಕೊಂಡು ಓಡಾಡಿದವನೇ ನಾನು. ಆದರೆ ಸದ್ಯ ನಾನಿರುವ ಏರಿಯಾದಿಂದ ಈಗಿನ ನನ್ನ ಕಂಪನಿಯಿರುವ ರೂಟಿನಲ್ಲಿ ನೇರ ವೋಲ್ವೋ ಬಸ್ಸುಗಳಿವೆ. ಈ ವಜ್ರ ಬಸ್ಸುಗಳಲ್ಲಿ ಕುಳಿತುಕೊಂಡರೆ ನೆಮ್ಮದಿಯ ಪ್ರಯಾಣ. ಸಿಕ್ಕ ವೀಕೆಂಡುಗಳೆಲ್ಲಾ ಯಾವುದ್ಯಾವುದೊ ಕೆಲಸಗಳಲ್ಲಿ, ತಿರುಗಾಟಗಳಲ್ಲಿ ಕಳೆದುಹೋಗುತ್ತಿರಲು ದಿನಾ ಸಿಗುವ ಇಂತಹ ಅಮೂಲ್ಯ ಸಮಯ ವ್ಯರ್ಥ ಮಾಡಿಕೊಳುವುದರಲ್ಲಿ ಅರ್ಥವಿಲ್ಲ ಎನ್ನಿಸಿ ಪುಸ್ತಕ ರಾಶಿಗೆ ಕೈಹಾಕಿದ್ದೆ. ಕೈಯಲ್ಲೊಂದು ಪುಸ್ತಕ ಹಿಡಿದು ಊರ ಚಿಂತೆಗಳೆಲ್ಲಾ ಡ್ರೈವರಿಗೊಬ್ಬನಿಗೇ ಇರಲಿ ಎಂಬಂತೆ ತಣ್ಣಗೆ ಕುಳಿತುಕೊಂಡರೆ ಹೊರಗಿನ ಜಗತ್ತು ಸುಮ್ಮನೇ ಆತಂಕಪಡುವ ವಿಚಿತ್ರದಂತೆ. ಒಂದೊಂದು ಪುಸ್ತಕಗಳೂ ಒಂದೊಂದು ಹೊಸ ಹೊಸ ಲೋಕವನ್ನು, ಹಲವಾರು ಹೊಸ ಲೋಕಗಳನ್ನು ಬಿಚ್ಚಿಡುತ್ತವೆ. ಕೆಲವು ಆ ಲೋಕದೊಳಗೆ ಕರೆದುಕೊಂಡುಹೋಗಿ ಸುತ್ತಿಸಿದರೆ ಇನ್ನೂ ಕೆಲವು ಬಾಗಿಲಲ್ಲಿ ನಿಲ್ಲಿಸುತ್ತವೆ. ಓದುತ್ತಾ ಓದುತ್ತಾ ಕೆಲವು ಪುಸ್ತಕಗಳು ಸುಖ ಕೊಡುತ್ತವೆ, ಬೆರಗಾಗಿಸುತ್ತವೆ, ನಗುತರಿಸುತ್ತವೆ, ಆತಂಕಗೊಳಿಸುತ್ತವೆ, ಕಣ್ತುಂಬಿಸುತ್ತವೆ. ವಿಷಯಗಳು ಮನಸೊಳಗೆ ಕೂತು ಬಿಡುತ್ತವೆ. ಕಲ್ಪನೆಗಳು ಕುಣಿದಾಡುತ್ತವೆ. ಬರೆಯುವ ಆಸೆಗೆ ಸ್ಪೂರ್ತಿಯಾಗುತ್ತವೆ. ಕೆಲವೊಮ್ಮೆ ಬರೆದವನ ಮೇಲೆ ಮನಸು ಮುನಿಸಿಕೊಳ್ಳುತ್ತದೆ. ಎಲ್ಲೋ ಒಂದು ಸಾಲಿನಂಚಿನಲ್ಲಿ ಅವಳ ನೆನಪಾಗಿಬಿಡುತ್ತದೆ. ಅವಳಿಗೆ ಇದನ್ನು ಹೇಳಬೇಕೆನ್ನಿಸುತ್ತದೆ. ಜೊತೆಗಿದ್ದರೆ ಚೆನ್ನಾಗಿತ್ತು ಅಂದುಕೊಳ್ಳುತ್ತೇನೆ. ಒಟ್ಟಿಗೇ ಕೂತು ಓದಬಹುದಿತ್ತು ಎನಿಸುತ್ತದೆ. ಮುಳುಗಿಹೋಗುತ್ತೇನೆ.

ಮೊನ್ನೆ ಹೀಗಾಯಿತು. ಬಸ್ಸಿನಲ್ಲಿ ಕೊನೆಯಿಂದ ಎರಡನೇ ಸಾಲಿನಲ್ಲಿ ಇವತ್ತೇ ಇದನ್ನು ತಿಂದು ಮುಗಿಸಿಬಿಡಬೇಕು ಎಂಬಂತೆ ನಾನು ಪುಸ್ತಕ ಹಿಡಿದುಕೊಂಡು ಕುಳಿತಿದ್ದೆ. ಯಾರೋ ಪಕ್ಕದಲ್ಲಿ ಬಂದು ನಿಂತಂತಾಯಿತು. ಯಾರೋ ಇರಬೇಕೆಂದು ಸುಮ್ಮನಿದ್ದೆ. ಎರಡು ಸೆಕೆಂಡು ಬಿಟ್ಟು ಭುಜ ತಟ್ಟಿತು ಆಸಾಮಿ. ತಿರುಗಿ ನೋಡಿದರೆ ನನ್ನ ಹಳೇ ಗೆಳೆಯ! ನಿಂತು ನಗುತ್ತಿದ್ದ. ಅವನನ್ನು ಭೇಟಿಯಾಗಿ ತೀರಾ ೬ ವರ್ಷಗಳೇ ಕಳೆದುಹೋಗಿದ್ದವು. ಹಾಸ್ಟೆಲ್ ನಲ್ಲಿ ಒಟ್ಟಿಗೇ ೪ ವರ್ಷವಿದ್ದೆವು. ಆಮೇಲೆ ಸಿಕ್ಕಿರಲಿಲ್ಲ. "ಹಾಸ್ಟೇಲ್ ನಲ್ಲಿ ಒಂದು ದಿನವಾದ್ರೂ ಇದೇ ಲೆವೆಲ್ಲಿಗೆ textbooks ಓದಿದ್ರೆ ಎಲ್ಲೋ ಇರ್ತಿದ್ದಲ್ಲೋ ನೀನು" ಅಂತ ಕಿಚಾಯಿಸಿದ. "ಈಗ್ಲೂ ಅಂತದ್ದೇನೂ ಆಗಿಲ್ಲ, ಬಾ" ಅಂತ ಕೂರಿಸಿದೆ. ಪುಸ್ತಕ ಮಡಚಿಟ್ಟು ಭರ್ತಿ ಮಾತಾಡಿದೆವು. ರಾತ್ರಿ ೩ ಗಂಟೆ ತನಕ ಆಡುತ್ತಿದ್ದ ಕೇರಂನಿಂದ ಹಿಡಿದು ನಮ್ ಅಡುಗೆ ಭಟ್ಟರ ವೆಜೆಟೇಬಲ್ ಉಪ್ಪಿಟ್ಟಿನವರೆಗೂ ನೆನಪುಗಳನ್ನೆಲ್ಲಾ ರಿವೈಂಡ್ ಮಾಡಿಕೊಂಡೆವು. ಅವನು textbook ಬಿಟ್ಟು ಒಂದು ಸುದ್ದಿ ಪತ್ರಿಕೆಯನ್ನೂ ಓದದ ಪುಣ್ಯಾತ್ಮ. ಅದೇ ವಿಷ್ಯ ಕೇಳಿದ್ದಕ್ಕೆ ಈಗ Bangalore Times ಮಾತ್ರ ಓದ್ತೀನಿ ಅಂತ ಒಪ್ಪಿಕೊಂಡ. ನಗಾಡಿಕೊಂಡೆವು.

ಆಸಕ್ತಿಯಿಂದ ಓದುತ್ತಾ ಕ್ರಮಿಸಿದ ಹಾದಿಯ ಅರಿವಿಲ್ಲದೇ ಇಳಿಯುವ ಸ್ಟಾಪು ಬಂದುಬಿಡುತ್ತದೆ. ಇಷ್ಟು ಬೇಗ ಯಾಕಾದರೂ ತಲುಪಿದೆನೋ ಎನ್ನಿಸಿದರೂ ಓದುತ್ತಿದ್ದ ಆ ಪುಟದ ತುದಿಯನ್ನು ಕಿವಿಯಂತೆ ಮಡಚಿ ಒಳಗಿಟ್ಟುಕೊಳ್ಳುತ್ತೇನೆ. ಅವತ್ತಿನ ಮಟ್ಟಿಗೆ ಮನಸ್ಸು ತಾಜಾ ತಾಜಾ. ’ಆವರಣ’ ಪುಸ್ತಕದ ವಿವಾದದಿಂದಲೇ ಯಾವತ್ತೂ ಓದದ ನನ್ನ ಸುಮಾರು ಗೆಳೆಯರಿಗೂ ಓದುವ ಪರಿಚಯ ಮಾಡಿಸಿದ ತೃಪ್ತಿ ನನಗಿದೆ. ಅವರು ಪುಸ್ತಕಗಳನ್ನು ಕೊಳ್ಳುವುದಿಲ್ಲವಾದರೂ ನನ್ನ ಬಳಿ ಎರವಲು ಪಡೆದು ಓದುತ್ತಾರೆ. ಇರಲಿ. ಓದುತ್ತಾ ಹೋದರೆ ಇಡೀ ಜನ್ಮಕ್ಕೂ ಮುಗಿಯದಷ್ಟಿದೆ. ಇದೊಂದು ಹಸಿವು. ಹಾಗಂತ ನಾನು ತೀರ ಹುಳು ಏನಲ್ಲ. ಯಾವಾಗಲೂ ಓದುತ್ತಾ ಇರಬೇಕು ಅಂತಲೂ ಅನಿಸುವುದಿಲ್ಲ. ಆದರೂ ಇದ್ದಷ್ಟು ಹೊತ್ತು ಪುಸ್ತಕಗಳು ಕೊಡುವ ಸಾಂಗತ್ಯವನ್ನು ಮತ್ತ್ಯಾರು ತಾನೆ ಕೊಡಲು ಸಾಧ್ಯ? ಅನುಭವಿಸುವುದು ಮುಖ್ಯವಷ್ಟೆ.

ಬುಧವಾರ, ಜನವರಿ 27, 2010

ಸಾವು

ಸಾವಿನ ಬಗ್ಗೆ ನೀವು ಯಾವಾಗಾದರೂ ಯೋಚಿಸಿದ್ದೀರಾ? ಕೆಲವರು ಯೋಚಿಸಿರಬಹುದು, ಕೆಲವರು ಈಗ್ಯಾಕೆ ಅವೆಲ್ಲಾ ಅನ್ನಬಹುದು. ಆದರೆ ಈ ಮಧ್ಯವಯಸ್ಸು ಅನ್ನುವುದು ಸಾವಿನ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಈ ವಯಸ್ಸಿನಲ್ಲೇ ಹೆಚ್ಚಿನ ಸಾವಿನ ಸುದ್ದಿಗಳನ್ನು ಕೇಳಬೇಕಾಗುತ್ತದೆ. ಕೆಲವರಿಗೆ ಅಪ್ಪ ಅಮ್ಮಂದಿರ ಸಾವನ್ನು ನೋಡಬೇಕಾಗುತ್ತದೆ. ನಾವು ಚಿಕ್ಕವರಿದ್ದಾಗಿನಿಂದ ನೋಡಿದ, ನಮ್ಮನ್ನು ಆಡಿಸಿದ, ಬೆಳೆಸಿದ ವ್ಯಕ್ತಿಗಳು ತೀರಿಕೊಳ್ಳುತ್ತಾರೆ. ನಾವು ಬಾಲ್ಯದಲ್ಲಿದ್ದಾಗ ನಮ್ಮ ತಂದೆತಾಯಿಯರು, ಸಂಬಂಧಿಕರು, ಆಪ್ತರನೇಕರು ಅವರ ಮಧ್ಯವಯಸ್ಸು ಮತ್ತು ಅದನ್ನು ದಾಟಿದ ಹಂತದಲ್ಲಿರುತ್ತಾರೆ. ನಾವು ಈ ವಯಸ್ಸಿಗೆ ಬರುವ ಹೊತ್ತಿಗೆ ಅವರಿಗೆ ವಯಸ್ಸಾಗಿರುತ್ತದೆ. ಗಟ್ಟಿಗಿತ್ತಿ ಅಮ್ಮ ತೀರಾ ಸುಸ್ತಾದವಳಂತೆ ಕಾಣುತ್ತಾಳೆ, ಸೂಪರ್ ಮ್ಯಾನ್ ಆಗಿದ್ದ ಅಪ್ಪನ ಹಣೆಯ ಮೇಲೆ ನೆರಿಗೆಗಳು ಮೂಡಿರುತ್ತವೆ. ಆಗ ಹೆದೆಯೇರಿಸಿದ ಬಿಲ್ಲಿನಂತಿದ್ದ ಮಾವನನ್ನು ಈಗ ಮುರುಟಿ ಹಾಸಿಗೆಯಲ್ಲಿ ಮಲಗಿರುವ ಪರಿಸ್ಥಿತಿಯಲ್ಲಿ ನೋಡಬೇಕಾಗುತ್ತದೆ. ಆಗ ಹೆಗಲಿನ ಮೇಲೆ ಕೂರಿಸಿಕೊಂಡು ತೋಟ ಸುತ್ತಿಸುತ್ತಿದ್ದ ಚಿಕ್ಕಪ್ಪನಿಗೆ ಇವತ್ತು ಅದ್ಯಾವುದೋ ಖಾಯಿಲೆ. ಅಮ್ಮಂನಂತಿದ್ದ ದೊಡ್ಡತ್ತೆ ಕ್ಯಾನ್ಸರ್ ಹೊತ್ತು ಒಣಗಿಹೋಗಿ ಮಲಗಿದ್ದ ದೃಶ್ಯ ಪದೇ ಪದೇ ನೆನಪಾಗುತ್ತದೆ. ಇವತ್ತು ಬೆಳಗ್ಗೆ ವಾಕಿಂಗಿಗೆ ಹೋಗಿದ್ದಾಗಲೇ ಸಂಬಂಧಿಕರೊಬ್ಬರು ಹಾರ್ಟ್ ಅಟ್ಯಾಕ್ ಆಗಿ ತೀರಿಹೋದರಂತೆ ಎಂಬ ಕೆಟ್ಟ ಸುದ್ದಿ ಬಂದು ತಲುಪುತ್ತದೆ. ಅವರ ಮಡಿಲಲ್ಲಿ ಬೆಳೆದ ನಾವು ಇವತ್ತು ಇನ್ಯಾವುದೋ ದೂರದ ಊರಿನ ಮಡಿಲಿನಲ್ಲಿರುತ್ತೇವೆ.

ನಾವು ಹುಟ್ಟಿ ಬೆಳೆಯುತ್ತಾ ಇರುವಾಗ ಬೇರೆ ಬೇರೆ ಹಂತಗಳಲ್ಲಿ ನಾವು ಪ್ರೀತಿಸಿದ, ಗೌರವಿಸಿದ, ಒಡನಾಡಿದ, ನಮ್ಮ ಆದರ್ಶವಾಗಿ ಕಂಡ ಹಿರಿಯರನೇಕರು ನಮ್ಮನ್ನು ಬಿಟ್ಟುಹೋಗಿ ಅನಾಥಭಾವ ಕಾಡುತ್ತದೆ. ಯೌವ್ವನವನ್ನು ದಾಟಿ ಮಧ್ಯವಯಸ್ಸಿಗೆ ಬರುತ್ತಾ ಸಾವಿನ ಸುದ್ದಿಗಳು ಹೆಚ್ಚಾಗುತ್ತಾ ಹೋಗುತ್ತವೆ. ಕೆಲವೊಂದು ಸಾವುಗಳು ಮನಸನ್ನು ಕಲಕುತ್ತವೆ. ವಿಚಲಿತರನ್ನಾಗಿಸುತ್ತವೆ. ಇವೆಲ್ಲವೂ ಅನಿವಾರ್ಯವಾಗಿ, ಸಹಜವಾಗಿ ಆಗುವುದಾದರೂ ಕೂಡ ಅನಂತರ ಅವರಿಲ್ಲದೇ ಮನೆ, ಮನ ಭಣ ಭಣ ಎನ್ನುತ್ತದೆ. ನಾವು ಯಾಕೆ ಹುಟ್ಟಿದ್ದು ಅನ್ನುವುದು ಯಾರಿಗೂ ಗೊತ್ತಿಲ್ಲ. ಹುಟ್ಟು ಸಾವುಗಳ ಬಗ್ಗೆ ಪೂರ್ತಿ ತಿಳಿದುಕೊಳ್ಳಲು ಹೋದರೆ ಅದೇ ಜೀವನದಲ್ಲಿ ಕೆಲವೊಮ್ಮೆ ನೆಮ್ಮದಿ ಕೆಡಿಸಿಬಿಡುತ್ತದೆ. ಆದ್ದರಿಂದ ನಮ್ಮ ಉಳಿದ ಜೀವನವನ್ನು ಹೇಗೆ ಅತ್ಯುತ್ತಮವೆನಿಸುವಂತೆ ನಡೆಸಬೇಕು ಎಂಬುದಕ್ಕೆ ಸಾವು ಅನ್ನುವುದನ್ನು ಒಂದು ಎಚ್ಚರಿಕೆಯನ್ನಾಗಿ ತೆಗೆದುಕೊಂಡು ಮುನ್ನಡೆಯುತ್ತಾ ಹೋಗಬೇಕಷ್ಟೆ.

Subject from Mahesh Hegade's Blog