ಪುಟಗಳು

ಗುರುವಾರ, ಅಕ್ಟೋಬರ್ 15, 2009

ನೂರುಸಾವಿರ ಸಾವಿನ ನೆನಪು !

ಇತಿಹಾಸ ಭೀಕರ. ಅಧಿಕಾರ, ಆಸೆ ಯುದ್ಧಕ್ಕೆ ದಾರಿಮಾಡಕೊಡಬಹುದು. ಅನ್ಯಾಯ, ಸೇಡು ದ್ವೇಷಕ್ಕೆ, ಜೊತೆಗೆ ಎಂತಹ ಕ್ರೌರ್ಯಕ್ಕೂ ಕಾರಣವಾಗಬಲ್ಲುದು.

"ಎಲ್ಲರೂ ನಿಂತು ನೋಡುತ್ತಿದ್ದರು, ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ, ಯಾರೂ ಹಿಟ್ಲರನ ವಿರುದ್ಧ ದಂಗೆಯೇಳಲಿಲ್ಲ" ಎನ್ನುತ್ತಾಳೆ ಜರ್ಮನಿಯಿಂದ ಓಡಿಬಂದು ಭಾರತದಲ್ಲಿ ಆಶ್ರಯ ಪಡೆದ ಯಹೂದಿ ಹ್ಯಾನಾ. ಅವತ್ತು ಹಿಟ್ಲರ ಯಹೂದಿಯರ ವಿರುದ್ಧ ಕಾರ್ಯಾಚರಣೆಗೆ ಇಳಿದಾಗ ಜರ್ಮನರು ಅದನ್ನು ವಿರೋಧಿಸಲಿಲ್ಲವಾ, ಎಲ್ಲರಿಗೂ ಅವ ಮಾಡುತ್ತಿರುವುದು ಸರಿಯೆಂದೇ ಅನ್ನಿಸಿಬಿಟ್ಟಿತ್ತಾ? ಆ ಮಟ್ಟಿಗೆ ರೋಸಿಹೋಗಿದ್ದರಾ? ಅಥವಾ ಹೆದರಿ ಸುಮ್ಮನಾಗಿದ್ದರಾ? ಗೊತ್ತಿಲ್ಲ. ಒಟ್ಟಿನಲ್ಲಿ ಹಿಟ್ಲರ್ ಗೆ ಬೆಂಬಲವಿತ್ತು. ಹಿಟ್ಲರನಿಂದ ತಪ್ಪಿಸಿಕೊಂಡು ಓಡಿದ ಹಲವು ಯಹೂದಿಯರು ಜಗತ್ತಿನ ಹಲವು ದೇಶಗಳಲ್ಲಿ ಆಶ್ರಯ ಪಡೆದರು. ಭಾರತದಲ್ಲೂ ಕೂಡ, ಬೆಂಗಳೂರಿನಲ್ಲೂ ಕೂಡ. ಸಿ.ವಿ.ರಾಮನ್ ರವರು ಯಹೂದಿ ವಿಜ್ಞಾನಿಗಳನ್ನು ಇಲ್ಲಿನ I.I.Sc. ಗೆ ಆಹ್ವಾನಿಸಿದ್ದರು. ತನ್ನ ಮಗಳ ಜೊತೆ ವಿಜ್ಞಾನಿಯೊಬ್ಬರು ಬೆಂಗಳೂರಿಗೆ ಬರುತ್ತಾರೆ. ಆ ಯಹೂದಿ ಹುಡುಗಿಯ fiction ಕಥೆಯೇ ’ಯಾದ್ ವಶೇಮ್’.


'ಯಾದ್ ವಶೇಮ್' ಕಥೆ ಶುರುವಾಗುವುದು ಬೆಂಗಳೂರಿನ ಗೋರಿಪಾಳ್ಯದ ಯಹೂದಿ ಸ್ಮಶಾನದಿಂದ. ಜರ್ಮನಿಯಿಂದ ತಂದೆಯೊಂದಿಗೆ ಬಂದ ಹ್ಯಾನಾ ಇಲ್ಲಿನವಳೇ ಆಗಿಹೋಗುತ್ತಾಳೆ. ತನಗೆ ಆಶ್ರಯ ನೀಡಿದ ಕುಟುಂಬದ ಹಿಂದು ಹುಡುಗನನ್ನು ಮದುವೆಯಾಗುತ್ತಾಳೆ. ಜನಾಂಗ ದ್ವೇಷಕ್ಕೆ ಬಲಿಯಾಗಿ ಬದುಕು ಕಳೆದುಕೊಂಡು ಬಂದ ಅವಳು ಭಾರತ ದೇಶದಲ್ಲಿ ಎಷ್ಟೊಂದು ವೈರುಧ್ಯಗಳ ನಡುವೆ ಎಲ್ಲರೂ ಅವರವರಾಗಿಯೇ ಉಳಿಯಲು ಸಾಧ್ಯವಿರುವ ವಾತಾವರಣದ ಬಗ್ಗೆ ಹೆಮ್ಮೆ ಪಡುತ್ತಾಳೆ. "ತಾನು ತಾನಾಗಿ, ಅವರು ಅವರಾಗಿಯೂ, ನಾವು ಒಂದಾಗಬಹುದಾದ ಧರ್ಮ ನಿರಪೇಕ್ಷ ನಾಡು ಈ ಭಾರತ" ಎಂಬ ಸತ್ಯ ಎಲ್ಲೆಲ್ಲೂ ಕಾಣುತ್ತದೆ ಅವಳಿಗೆ.

ಜರ್ಮನಿ ಬಿಟ್ಟು ಬರುವ ಸಮಯದಲ್ಲಿ ಅನಿವಾರ್ಯವಾಗಿ ಅಗಲಿದ ತನ್ನ ತಾಯಿ,ತಂಗಿ,ತಮ್ಮಂದಿರನ್ನು ದಶಕಗಳ ಅನಂತರ ಹ್ಯಾನಾ ಹುಡುಕಿಕೊಂಡು ಹೋಗುತ್ತಾಳೆ. ಅವರು ಏನಾದರು ಎಂಬ ಕತೆಯು ಜರ್ಮನಿ, ಹಿಟ್ಲರ್, ಯಹೂದಿಗಳ ವಿರುದ್ಧ ಅವನ ಅಂತಿಮ ಪರಿಹಾರ, ಅಮೆರಿಕಾ ಎಲ್ಲಾ ಕಡೆ ಸುತ್ತಿಸಿಕೊಂಡು ಬರುತ್ತದೆ. ನಾಜಿ ಕ್ಯಾಂಪಿನ ಆ ಕ್ರೌರ್ಯ ಮನುಷ್ಯನಾದ ಯಾರನ್ನೇ ಆದರೂ ಬೆಚ್ಚಿ ಬೀಳಿಸದಿರಲು ಸಾಧ್ಯವಿಲ್ಲವೇ ಇಲ್ಲ. ಹಿಟ್ಲರನ ದ್ವೇಷಕ್ಕೆ ಸಿಕ್ಕ ಯಹೂದಿಗಳು ಕಸಾಯಿಖಾನೆಯ ಪ್ರಾಣಿಗಳಂತಾದರು. ಪ್ರಯೋಗಗಳಿಗೆ ವಸ್ತುಗಳಾದರು. ೬೦ ಲಕ್ಷ ಜನ ಎಲ್ಲಾ ತರಹದ ಹಿಂಸೆಗಳಿಗೆ ಬಲಿಯಾಗಿ ಗ್ಯಾಸ್ ಛೇಂಬರಿನಲ್ಲಿ ಒದ್ದಾಡಿ ಒಲೆಗಳಲ್ಲಿ ಕಟ್ಟಿಗೆಗಳಾಗಿ ಉರಿದುಹೋದರು. ಅನಂತರ ಯಹೂದಿಯರಿಗಾಗಿಯೇ ಇಸ್ರೇಲ್ ದೇಶ ಹುಟ್ಟಿಕೊಂಡಿತು. ಹುಡುಕಾಟದ ಕೊನೆಯಲ್ಲಿ ಹ್ಯಾನಾ ಇಸ್ರೇಲ್ ತಲುಪುತ್ತಾಳೆ. ಹೊರದಬ್ಬಿಸಿಕೊಂಡ ಯಹೂದಿ ಜನ ತಮ್ಮದೇ ಆದ ಭೂಮಿಗೆ ಕಾದಿದ್ದರು, ಪಡೆದುಕೊಂಡರು ನಿಜ. ಆದರೆ ಇಲ್ಲಿ ಅವರು ಮಾಡಿದ್ದಾದರೂ ಏನು? ಯಾವ ಜನ ತಮಗಾದ ಅನ್ಯಾಯ, ದ್ವೇಷ, ಹಿಂಸೆ ಬೇರೆಯವರಿಗಾಗಬಾರದೆಂದು ಆಶಿಸಬೇಕಿತ್ತೋ ಅವರೇ ಪ್ಯಾಲಿಸ್ಟೇನಿ ಅರಬ್ಬರ ಭೂಮಿಯನ್ನು ಕಸಿದುಕೊಂಡರು. ವಿರೋಧಿಸಿದವರು ಉಗ್ರರಾದರು, ಹೊಸಕಿ ಹಾಕಲ್ಪಟ್ಟರು. ಇಸ್ರೇಲಿಗಳು ಇದು ತಮ್ಮ ಸ್ವಾತಂತ್ರ್ಯ ಹೋರಾಟವೆಂದರು, ಇದು ತಮಗೆ ದೇವರು ಕೊಟ್ಟ ಹಕ್ಕಿನ ಭೂಮಿ ಎಂದರು. ಇವತ್ತಿಗೂ ಅಲ್ಲಿ ಹಿಂಸೆ ನಿಂತಿಲ್ಲ. ನೆಮ್ಮದಿಯ ಬಾಳು ಯಾರಿಗೂ ಇಲ್ಲ. "ನಮ್ಮ ಬದುಕುವ ಹಕ್ಕು ಇನ್ನೊಬ್ಬರ ಸಾವಿನ ಮೇಲೆ ನಿಲ್ಲಬೇಕಾ?" ಎನ್ನುತ್ತಾಳೆ ಹ್ಯಾನಾ.

"ಇದ್ದವರು, ಗೆದ್ದವರು ಇತಿಹಾಸ ಬರೆಯುತ್ತಾರೆ,ಅವರು ಹೇಳಿದ್ದೇ ಇತಿಹಾಸವಾಗುತ್ತದೆ". ಜರ್ಮನಿಯಲ್ಲಿ ನಾಜೀ ಕ್ರೌರ್ಯ ನೆಡೆದೇ ಇಲ್ಲವೆಂಬಂತೆ ಇತಿಹಾಸವನ್ನು ಗುಡಿಸುವ ಪ್ರಯತ್ನ. ಜರ್ಮನಿಯ ಹೊಲೋಕಾಸ್ಟಿನ ಮ್ಯೂಸಿಯಮ್ಮನ್ನು ವಾಷಿಂಗ್ಟನ್ನಿನಲ್ಲಿಟ್ಟು ನಾಜಿ ಕ್ರೌರ್ಯದ ವಿರುದ್ಧ ಫೋಸು ಕೊಡುವ ಅಮೆರಿಕಾ ತಾನು ಕೊಂದು ಹಾಕಿದ ಲಕ್ಷ ಲಕ್ಷ ರೆಡ್ ಇಂಡಿಯನ್ನರ ಬಗ್ಗೆ, ಅಣುಬಾಂಬಿನಲ್ಲಿ ಬೆಂದುಹೋದ ಜಪಾನೀಯರ ಬಗ್ಗೆ ಪಿಟಿಕ್ಕೆನ್ನುವುದಿಲ್ಲ. ಇರಾಕಿನಲ್ಲಿ, ಅಫ್ಘ್ಹಾನಿಸ್ತಾನದಲ್ಲಿ, ಕ್ಯೂಬಾದಲ್ಲಿ ತನ್ನ ಅನಾಚಾರಗಳ ಬಗ್ಗೆ ಸಾಕ್ಷಿಗಳನ್ನು ಉಳಿಸುವುದಿಲ್ಲ.


ಹಳೇ ಬೆಂಗಳೂರಿನ ಚಿತ್ರಣ, ಬ್ರಿಟಿಷ್ ಆಡಳಿತದಲ್ಲಿ ವಿಶ್ವಯುದ್ಧದಲ್ಲಿ ಪರೋಕ್ಷವಾಗಿ ಪಾಲ್ಗೊಳ್ಳಬೇಕಾದ ಭಾರತ, ಹೆಚ್.ಎ.ಎಲ್ ವಿಮಾನ ಕಾರ್ಖಾನೆ ಸ್ಥಾಪನೆಯ ಘಟನೆಗಳು, ಯಹೂದಿ ಮತ್ತು ಇಸ್ಲಾಂ ಧರ್ಮಗಳು, ಡಕಾವ್ ನಾಜಿ ಕ್ಯಾಂಪ್, ಹಿಟ್ಲರನ ಆ ದಿನಗಳು, ಅಮೆರಿಕಾದ ನಸುಗುನ್ನಿಯಾಟ, ಮೂರೂ ಧರ್ಮಗಳ ಸಂಧಿ ಜೆರುಸಲೇಂ, ಇವತ್ತಿನ ಇಸ್ರೇಲಿನ ಸ್ಥಿತಿಯ ನಡುವೆಯ ಕತೆ ಚಾಮರಾಜಪೇಟೆಯ ಕೌಟುಂಬಿಕ ವಾತಾವರಣದಲ್ಲೇ ಬಿಚ್ಚಿಕೊಳ್ಳುತ್ತದೆ, ನಡೆಯುತ್ತದೆ. ಎಲ್ಲೆಲ್ಲೂ ಅತಿರೇಕಕ್ಕೆ ಹೋಗದಂತೆ, ಅತ್ಯಂತ ಸಮತೋಲನವಾಗಿ ಹಲವು ಮಾಹಿತಿಗಳ ವಾಸ್ತವದ ನೋಟ ಈ ಪುಸ್ತಕದ ವಿಶೇಷತೆ. ನಿಜವಾದ ವ್ಯಕ್ತಿಗಳು ಹಲವು ಪಾತ್ರಗಳು, ಜೊತೆಗೆ ಪೂರಕ ಚಿತ್ರಗಳು. ಕೊನೆಗೆ ಮುಗಿಸುವಾಗ, "ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಿಬಿಡಬಲ್ಲ, ಜರ್ಮನಿ, ಅಮೆರಿಕಾ, ಭಾರತ, ನಮ್ಮ ನಡುವೆ, ಕೊನೆಗೆ ನಮ್ಮೊಳಗೇ" ಎನ್ನುತ್ತಾರೆ ನೇಮಿಚಂದ್ರ. ಇಲ್ಲ ಅನ್ನಿಸಲು ಸಾಧ್ಯವೇ ಇಲ್ಲ.

ಸಂಬಂಧಪಟ್ಟ ದೇಶ, ಸ್ಥಳಗಳಿಗೆಲ್ಲಾ ಸ್ವತಃ ಭೇಟಿ ಕೊಟ್ಟು ವಿವರಗಳನ್ನು ಸಂಗ್ರಹಿಸಿರುವ ಲೇಖಕರು ಇದನ್ನು ಸುಮ್ಮನೇ ಒಂದು ಕಾದಂಬರಿಯಾಗಿಸದೇ ಬಹಳ informative ಆಗಿ ಬರೆದಿದ್ದಾರೆ. ಈ ಪುಸ್ತಕ ನಾನು ಓದಿದ ಅದ್ಭುತ ಪುಸ್ತಕಗಳಲ್ಲೊಂದು.

**********

ಟಿಪ್ಪಣಿ:

ಹಿಟ್ಲರ್ - ಜಗತ್ತು ಎಂದೆಂದಿಗೂ ಮರೆಯಲಾಗದ ಸರ್ವಾಧಿಕಾರಿ. ಹಿಟ್ಲರನ ಬಗ್ಗೆ ಅತಿರಂಜಿತ ಸುದ್ದಿಕತೆಗಳೇನೇ ಇರಲಿ, ಯಹೂದಿಯರ ವಿರುದ್ಧ ಹೊಲೋಕಾಸ್ಟ್ ಎಂಬ ಅಮಾನವೀಯತೆಗೆ ಇಳಿಯದಿದ್ದರೆ ಜಗತ್ತಿನ ಸಮರ್ಥ ನಾಯಕರಲ್ಲೊಬ್ಬ ಎನಿಸಿಕೊಳ್ಳುವ ಅವಕಾಶವಿದ್ದವನು. ನಮಗೆ ಇದುವರೆಗೂ ಹಿಟ್ಲರನ ಬಗ್ಗೆ ಇಂಗ್ಲೀಷ್ ಮಾಧ್ಯಮಗಳು ಅದರಲ್ಲೂ ಅಮೆರಿಕಾದ ಮಾಧ್ಯಮಗಳು ಕೊಟ್ಟಿರುವ ರಾಕ್ಷಸ ಚಿತ್ರಣ ಸಹಜ. ಅವರಿಗಾಗದ್ದವರನ್ನು, ಅವರಿಗೆ ತಲೆಬಾಗದವರನ್ನು, ಅವರ ವಿರುದ್ಧ ನಿಂತವರನ್ನು ದೊಡ್ಡ ಮನುಕುಲ ಕಂಟಕರು ಎಂಬಂತೆ ಚಿತ್ರಿಸಿ ಜಗತ್ತಿಗೆ ಪ್ರಚಾರ ಮಾಡುವುದು ಅಮೆರಿಕಾದ ಮಾಧ್ಯಮಗಳ ಗುಣ. ಅದಕ್ಕೆ ರಷ್ಯಾ, ಕ್ಯೂಬಾ, ಕೊರಿಯಾ, ಚೀನಾ ಉದಾಹರಣೆಗಳು. ಹಿಟ್ಲರನೂ ಕೂಡ ಹೊರತಲ್ಲ. ಇಂತವನಿಗೆ ಅದ್ಯಾಕೆ ಯಹೂದಿಯರ ವಿರುದ್ಧ ಅಂತಹ ದ್ವೇಷವಿತ್ತು ಎಂಬುದು ನಮಗೆ ಕೊಟ್ಟಿರುವ ಚಿತ್ರಣಗಳಿಗಿಂತ ಸ್ವಲ್ಪ ಬೇರೆ. ಅದಕ್ಕೆ ಹಿಟ್ಲರನೇ ಬರೆದಿರುವ 'ಮೈನ್ ಕಾಂಫ್' ಪುಸ್ತಕದಲ್ಲಿ ಉತ್ತರವಿದೆ. ಅದು ಹಿಟ್ಲರ್ ಎಂತಹ ಉತ್ತಮ ರಾಜಕೀಯ ಚಿಂತಕನಾಗಿದ್ದ, ನೋಟ ಹೊಂದಿದ್ದ ಎಂದು ಸ್ಪಷ್ಟಪಡಿಸುತ್ತದೆ. ಜರ್ಮನಿಯಲ್ಲಿ ಪ್ರತಿಯೊಂದರಲ್ಲೂ ಯಹೂದಿಯರ ಹಿಡಿತ ಯಾವ ರೀತಿ ಇತ್ತೆಂದರೆ ಜರ್ಮನ್ನರು ಎರಡನೇ ದರ್ಜೆ ನಾಗರಿಕರಾಗಿ ಹೋಗಿದ್ದರು. ವ್ಯಾಪಾರ, ರಾಜಕೀಯ, ಸಾಮಾಜಿಕ ಜೀವನದಲ್ಲೆಲ್ಲಾ ಯಹೂದಿಗಳದ್ದೇ ಹಿಡಿತ. ಮಾಧ್ಯಮಗಳು ಕೂಡ ಅವರ ಅಂಕೆಯಲ್ಲೇ ಕುಣಿಯುತ್ತಿದ್ದವು. ಅದು ಯಾವ ಮಟ್ಟಕ್ಕಿತ್ತೆಂದರೆ ಜರ್ಮನಿಯ ಮಿಲಿಟರಿಯ ಸೈನಿಕರಿಗೆ ತಾಯ್ನಾಡಲ್ಲೇ ಬೆಂಬಲವಿಲ್ಲದೇ ಹೋರಾಡುವ ಸ್ಥೈರ್ಯ ಇಂಗಿಹೋಗಿತ್ತು. ಜರ್ಮನ್ನರ ಆತ್ಮಾಭಿಮಾನ ಸತ್ತು ಹೋಗಿತ್ತು. ಏಕೆಂದರೆ ಅನ್ಯಾಯಕ್ಕೊಳಗಾಗಿ ಸಹಿಸಿಕೊಂಡು ಸುಮ್ಮನಿದ್ದರೆ ಸೌಹಾರ್ದ. ಪ್ರತಿಭಟಿಸಿದರೆ ಸಂಕುಚಿತ, ಅಸಮರ್ಥ. ಇದರ ವಿರುದ್ಧ ಸಿಡಿದವನೇ ಹಿಟ್ಲರ್. ಇದಕ್ಕೆಲ್ಲಾ ಕೊನೆಹಾಡಿ ಜರ್ಮನ್ನರಾದ ತಮ್ಮದೂ ಕೂಡ ಯಾವ ಯಹೂದಿಗಳಿಗೂ ಕಡಿಮೆಇಲ್ಲದಂತಹ ಶ್ರೇಷ್ಠ ಜನಾಂಗ ಎಂದು ತೋರಿಸಲು, ಸಾಧಿಸಲು ಹೋದವನು ಹಿಟ್ಲರ್. ಆದರೆ ಅದಕ್ಕೆ ಅವನನುಸರಿಸಿದ ಮಾರ್ಗ ಮಾತ್ರ ಕ್ಷಮಿಸಲಾರದ್ದಾಯಿತು. ಇವತ್ತಿಗೂ ಕೂಡ ಜಗತ್ತಿನ ದೊಡ್ಡ ದೊಡ್ಡ ವ್ಯಾಪಾರಗಳಲ್ಲಿ ಯಹೂದಿಯರ ಹಿಡಿತವಿದೆ. ಆದರೆ ಯಾವುದೇ ನೆಲದಲ್ಲಾಗಲೀ ಅಲ್ಲಿನವರಿಗೆ ನ್ಯಾಯವಾಗಿ ಸಿಗಬೇಕಾದ್ದು ಸಿಗದೇ ಹೋದಾಗ ಅಲ್ಲಿನ ನೆಲದ ಜನರು ಪ್ರಕಟಗೊಳ್ಳುವುದೇ ಹಿಟ್ಲರನ ರೂಪದಲ್ಲಿ. ಎಲ್ಲರೊಳಗೊಬ್ಬ ಹಿಟ್ಲರ್ ಇದ್ದೇ ಇದ್ದಾನೆ.

****

ಮಾಹಿತಿ ಮೂಲ:
ಪುಸ್ತಕಗಳು : Mein Kampf (Adolf Hitler), Yadvashem (Nemichandra)
Documentary movie: Occupation 101 and some websites

12 ಕಾಮೆಂಟ್‌ಗಳು:

roopa ಹೇಳಿದರು...

ವಿಕಾಸ್.
ಬರಹ ತು೦ಬಾ ತು೦ಬಾ ಒಳ್ಳೆಯದಿದೆ . ಆದರೆ ವಿವರೆಣೆಯನ್ನು ಇನ್ನು ಜಾಸ್ತಿ ನೀಡಿದ್ದರೆ ಒಳ್ಳೆಯದಿತ್ತು ಎ೦ದು ಅನ್ನಿಸುತ್ತದೆ .
ಹಿಟ್ಲರ್ ನ ಹಿನ್ನಲೆ ತಿಳಿದ ಮೇಲೆ ,ಅವನು ಯಾಕೆ ಹಾಗೆ ಮಾಡಿದ ಎ೦ಬ ಕಾರಣ ತಿಳಿದ ಮೇಲೆ ಅವನ್ನು ಮಾಡಿದ್ದು ಸರಿಯೂ ತಪ್ಪೂ ಎ೦ಬ ಜಿಜ್ಞಾಸೇ ಮೂಡಿಸುತ್ತದೆ .
ಆದರೆ ಇತಿಹಾಸದ ಪಾಠವನ್ನು ನಾವು ಮರೆಯ ಬಾರದು . ನನಗೆ ತು೦ಬಾ ಇಷ್ಟವಾಯಿತು ಹೇಳಿದ ರೀತಿ . ಎಲ್ಲಿಯೂ ಹಿಟ್ಲರ್ ಮಾಡಿದ್ದು ಸರಿ ಅಥವಾ ತಪ್ಪು ಎ೦ದು ನಿಮ್ಮ ಅಬಿಪ್ರಾಯವನ್ನು ಹೇಳದೆ ಓದುಗರಿಗೆ ಬಿಟ್ಟಿದ್ದಿರಿ ..
ವ೦ದನೆಗಳು .

ವಿನುತ ಹೇಳಿದರು...

ಒಂದು ಉತ್ತಮ ಪುಸ್ತಕದ ಬಗ್ಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು. ಒಂದು ಸಾಮಾನ್ಯ ಹುಡುಗಿಯ ದೃಷ್ಟಿಯಿಂದ ಜರ್ಮನರ ಎರಡನೇ ವಿಶ್ವ ಯುದ್ದವನ್ನು ನೋಡುವುದಾದರೆ, "The Diary of a young girl - Anne Frank" ಒಂದು ಒಳ್ಳೆಯ ಪುಸ್ತಕವಾಗುತ್ತದೆ.
"ಜರ್ಮನ್ನರ ಆತ್ಮಾಭಿಮಾನ ಸತ್ತು ಹೋಗಿತ್ತು. ಏಕೆಂದರೆ ಅನ್ಯಾಯಕ್ಕೊಳಗಾಗಿ ಸಹಿಸಿಕೊಂಡು ಸುಮ್ಮನಿದ್ದರೆ ಸೌಹಾರ್ದ. ಪ್ರತಿಭಟಿಸಿದರೆ ಸಂಕುಚಿತ, ಅಸಮರ್ಥ................................ ಯಾವುದೇ ನೆಲದಲ್ಲಾಗಲೀ ಅಲ್ಲಿನವರಿಗೆ ನ್ಯಾಯವಾಗಿ ಸಿಗಬೇಕಾದ್ದು ಸಿಗದೇ ಹೋದಾಗ ಅಲ್ಲಿನ ನೆಲದ ಜನರು ಪ್ರಕಟಗೊಳ್ಳುವುದೇ ಹಿಟ್ಲರನ ರೂಪದಲ್ಲಿ....." ಭಾರತದಲ್ಲೂ ಈ ದಿನಗಳು ದೂರವಿಲ್ಲವೇನೋ ಅನಿಸುತ್ತಿದೆ!

ಶೆಟ್ಟರು (Shettaru) ಹೇಳಿದರು...

ವಿನುತ ಹೇಳಿದ್ದನ್ನೆ ನಾನು ಹೇಳಬಯಸಿದ್ದೆ, ಭಾರತದಲ್ಲೂ ಈ ದಿನಗಳು ದೂರವಿಲ್ಲವೇನೋ ಅನಿಸುತ್ತಿದೆ!

ಮತ್ತೆ ನೀವೇ ಬರೆದಂತೆ ನಮ್ಮೊಳಗೂ ಹಿಟ್ಲರ್ ಇದ್ದಾನೆ.

-ಶೆಟ್ಟರು

sunaath ಹೇಳಿದರು...

ಉತ್ತಮ ಪುಸ್ತಕದ ಮಾಹಿತಿ ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ಇದು ಮುಂದುವರಿಯಲಿ.

sunaath ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಲೋದ್ಯಾಶಿ ಹೇಳಿದರು...

ವಿಶೇಷವಾದ ಬರಹ. ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು. ಇಂತಹ ಇನ್ನಷ್ಟು ಬರಹ ಸಿಕ್ರೆ ಪ್ಲೀಸ್ ಹಾಕ್ರಿ.

Chaithrika ಹೇಳಿದರು...

ನನಗೂ ಇಷ್ಟವಾದ ಪುಸ್ತಕ ಇದು. ನನ್ನ Blog ನಲ್ಲಿ ಇದರ ಬಗ್ಗೆ ಅತಿ ಸಣ್ಣ ವಿವರಣೆ ಇದೆ.
ಶೀರ್ಷಿಕೆ: ಪುಸ್ತಕ ಪ್ರಿಯರಿಗಾಗಿ
ದಿನಾಂಕ: ನವಂಬರ 3, 2007, ಶನಿವಾರ.

ಅನಾಮಧೇಯ ಹೇಳಿದರು...

nice... yaad vashem puta khaali madtidene sirrr.

watch 'The Boy in the Striped Pyjamas' once. (hope u've already..) naanu yaad vashe odutta mattomme nodide..

ವಿ.ರಾ.ಹೆ. ಹೇಳಿದರು...

Thank you Roopa, Vinutha, Shettaru, Sunath kaka, Lodyashi, Chaitrika, Mahesh for ur kind opinions about the book and the write up.

Mahesh, I haven't seen the movie yet. will watch it soon.

Vinutha, namge adu(Anne Frank Diary) PUCnalli english non detail textnalli ittu.

" ಹೇಳಿದರು...

ಅದ್ಭುತ ವಿಕಾಸ್.
ನೇಮಿಚಂದ್ರರ ಪುಸ್ತಕ ಕುರಿತು ತುಂಬ ಚೆಂದನೆಯ ವಿಶ್ಲೇಷಣೆ ಮಾಡಿದ್ದೀರಿ. ನನ್ನ ಪುಸ್ತಕ ಪ್ರಪಂಚಕ್ಕೆ ಇನ್ನೊದು ನವಿಲು ಗರಿಯ ಸೇರ್ಪಡೆಗೆ ನೀವು ಕಾರಣರಾದಿರಿ.
ತುಂಬಾ ಥ್ಯಾಂಕ್ಸ್.

Narayan Bhat ಹೇಳಿದರು...

ಎಲ್ಲರೊಳಗೊಬ್ಬ ಹಿಟ್ಲರ್! ನಿಮ್ಮ ಬರವಣಿಗೆಯ ಶೈಲಿ, ಬರಹದ ಮೇಲಿನ ಹಿಡಿತ ಎಲ್ಲ ಹಿಡಿಸಿತು.

ರಂಜನಾ ಹೆಗ್ಡೆ ಹೇಳಿದರು...

thumba thanks book thumba channagi ide. thanks.