ಪುಟಗಳು

ಶನಿವಾರ, ಅಕ್ಟೋಬರ್ 24, 2009

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ! :)

ನಮ್ಮ ವಾರಗೆಯ ಹುಡುಗರಿಗೆ ಇದೊಂಥರಾ ಸಂಕ್ರಮಣದ ಕಾಲ. ಸಂಕಷ್ಟದ ಕಾಲ ಅಂತಲೂ ಹೇಳಬಹುದು. ವೃಶ್ಚಿಕ ರಾಶಿಗೆ ಚಂದ್ರನ ಪ್ರವೇಶವಾಗಿದೆ. ಶುಕ್ರ ಆರನೇ ಮನೆಯಿಂದ ಏಳನೇ ಮನೆಗೆ ಕಾಲಿಡುತ್ತಿದ್ದಾನೆ. ಅತ್ತ ಶನಿಯೂ ಏಳನೇ ಮನೆಗೇ ದಾಟಲಾಗುತ್ತದಾ ನೋಡುತ್ತಿದ್ದಾನೆ. ರಾಹು ಕೇತುಗಳು ಯಾವಾಗ ಯಾರನ್ನು ಯಾವ ಮನೆಯಲ್ಲಿ ಆಕ್ರಮಿಸುವುದು ಎಂದು ಹೊಂಚುಹಾಕುತ್ತಿವೆ. ಒಟ್ಟಾರೆ ಹೇಳಬೇಕೆಂದರೆ ’ಟೈಮ್ ಬಂದಿದೆ’. ಹ್ಮ್.. ಹೌದು..ಒಬ್ಬೊಬ್ಬರಿಗೇ ಮನೆಯಲ್ಲಿ ಮಾತುಗಳು ಕೇಳಿಬರುತ್ತಿವೆ. ಮಗ ವಯಸ್ಸಿಗೆ ಬಂದಿದ್ದಾನೆ !

ಮೊದಲನೇ ಕೆಟಗರಿಯಲ್ಲಿ ಈ ವರ್ಷದಲ್ಲೇ ಕೆಲವು ಗೆಳೆಯರ ಮದುವೆ ಆಗಿಹೋಯಿತು. ಲವ್ ಮಾಡಿಕೊಂಡವರು, ಮನೆಯಲ್ಲಿ ಹಿರಿಯ ಮಗನಾಗಿದ್ದವರು, ಮನೆಯಲ್ಲಿ ಅಪ್ಪ ಅಮ್ಮಂದಿರಿಗೆ ವಯಸ್ಸಾಗಿ ಮನೆಗೆ ಸೊಸೆ ಬೇಕು ಅನ್ನಿಸಿದವರು, ಇವ್ಯಾವುದೂ ಇಲ್ಲದೇ ಹಾಗೇ ಸುಮ್ಮನೇ ಮದುವೆ ಬೇಕು ಎನಿಸಿದವರು ಮುಂತಾದ ಕೆಲವರು ಜೋಡಿ ಜೀವಗಳಾದರು. ಈ ವರ್ಷದಿಂದ ಹುಡುಕಾಟ ಶುರುಮಾಡಿದರೆ ಮುಂದಿನ ವರ್ಷಕ್ಕಾದರೂ ಮದುವೆಯಾಗಬಹುದು ಎಂದು ಶುರುಮಾಡಿದ ಕೆಲವರಿಗೆ ಬೇಗನೆ ಹುಡುಗಿ ಸಿಕ್ಕು ಮದುವೆ ಊಟ ಹಾಕಿಸಿಬಿಟ್ಟರು. ಯಾವಾಗಲೂ ಜೊತೆಗೇ ಓತ್ಲಾ ಹೊಡೆಯುತ್ತಿದ್ದವನು ನಾಳೆ ಸಿಗ್ತೀಯಾ ಅಂತ ಕೇಳಿದರೆ "ಸ್ವಲ್ಪ ಕೆಲಸ ಇದೆ ಕಣೋ ಬರಕ್ಕಾಗಲ್ಲ" ಅನ್ನುತ್ತಾನೆ. ಹೀಗೆ ಸಿಕ್ಕು ಮಾತಾಡುತ್ತಿದ್ದಾಗ ಫೋನ್ ಬಂದು "ಇಲ್ಲೇ ಇದ್ದೀನಿ, ಹತ್ತು ನಿಮಿಷ, ಬಂದೆ" ಅಂದರೆ ಆಕಡೆ ಇರುವುದು ಹೈಕಮಾಂಡೇ ಸೈ.

ಇತ್ತೀಚೆಗಂತೂ ಗೆಳೆಯರು ಸಿಕ್ಕಾಗ ಕೆಲವು ಕುಶಲ ಮಾತುಕತೆಗಳಾದ ಮೇಲೆ ಮಾತು ಮದುವೆಯ ಕಡೆಗೇ ಹೊರಳುತ್ತದೆ. ಹುಡುಗಿ ನೋಡ್ತಾ ಇದ್ದಾರಾ? ಮದುವೆ ಸೆಟ್ಲಾಯ್ತಾ? ಯಾವಾಗ ಮದುವೆ ಇತ್ಯಾದಿ ಮಾತುಗಳು ಸಾಮಾನ್ಯವಾಗಿವೆ. ಸದ್ಯಕ್ಕೆ ಖಾಲಿಯಾಗಲು ಶುರುವಾಗಿರುವ ನಮ್ಮ ಬ್ಯಾಚಿನ ಹುಡುಗರು ಮುಂದಿನ ವರ್ಷದ ಬೇಸಿಗೆಯಲ್ಲಂತೂ ಮಾರ್ಕೆಟ್ ನಲ್ಲಿ ಹಾಟ್ ಕೇಕ್ ಗಳು. ಮುಂದಿನ ವರ್ಷ ಮುಗಿಯುವುದರೊಳಗಾಗಿ ಅರ್ಧದಷ್ಟು ಜನ ಖಾಲಿಯಾಗಿರುತ್ತಾರೆ. ಅದರ ಮುಂದಿನ ವರ್ಷದೊಳಗಂತೂ ಫುಲ್ ಸ್ವೀಪ್. ಇನ್ನು ನಮ್ಮ ವಾರಗೆಯ ಹುಡುಗಿಯರಂತೂ ಸೋಲ್ಡ್ ಔಟ್ ಆಗಿ ಹೋಗಿ ಎಲ್ಲರೂ ಆಂಟಿಯರಾಗಿಬಿಟ್ಟಿದ್ದಾರೆ! ಆರ್ಕುಟ್ಟಿನ ಆಲ್ಬಮ್ಮಿನಲ್ಲಿ ಮುದ್ದು ಮುಖದ ಮಗುವಿನ ಫೋಟೋಗಳು ಅಪ್ ಲೋಡ್ ಆಗಲಾರಂಭಿಸಿವೆ!

ಎರಡನೇ ಕೆಟಗರಿಯಲ್ಲಿ ಈಗಾಗಲೇ ಹುಡುಗಿ ನಿಕ್ಕಿಯಾಗಿರುವವರು, ನಿಶ್ಚಿತಾರ್ಥ ಆಗಿರುವವರು, ಮದುವೆ ಮಹೂರ್ತ ಫಿಕ್ಸ್ ಆದವರು ಇದ್ದಾರೆ. ಮಹೂರ್ತ ಫಿಕ್ಸ್ ಆದವರು ಮದುವೆ ಆಮಂತ್ರಣದ ಪತ್ರಿಕೆ ಮಾಡಿಸುವ ತಯಾರಿಯಲ್ಲಿ, ಹಂಚುವ ಕೆಲಸದಲ್ಲಿ ತೊಡಗಿದ್ದಾರೆ. ಈ ನವೆಂಬರ್ ನಲ್ಲೇ ಸುಮಾರಷ್ಟು ವಿಕೆಟ್ಟುಗಳು ಬೀಳಲಿವೆ. ಹುಡುಗಿ ಫಿಕ್ಸ್ ಆಗಿರುವವರು ಸದ್ಯಕ್ಕೆ ಫೋನಿನಲ್ಲಿ ಬಿಜಿ ಬಿಜಿ. ಫೋನ್ ಕಾಲ್ ಬಂದೊಡನೆ ಅವರ ದನಿ ಬದಲಾವಣೆಯಲ್ಲೇ ಗೊತ್ತಾಗಿ ಬಿಡುತ್ತದೆ ಅದು ಯಾರ ಫೋನ್ ಎಂದು. "ಸರಿ, ನೀನು ಹೋಗಪ್ಪ" ಎಂದು ನಾವೇ ಕಳಿಸಿಕೊಡುತ್ತೇವೆ. ಅವರ ರಾತ್ರಿ ಕಾರ್ಯಾಚರಣೆಯೂ ಜೋರಾಗಿ ನೆಡೆಯುತ್ತಿರುತ್ತದೆ. ಇಷ್ಟು ಗಂಟೆಯಿಂದ ಇಷ್ಟು ಗಂಟೆಯವರೆಗೆ ಟೈಮ್ ಸ್ಲಾಟ್ ಅದಕ್ಕೆಂದೇ ಮೀಸಲಾಗಿದೆ. ಆದರೆ ಆ ಸ್ಲಾಟ್ ಮೀರಿಹೋಗುವುದೇ ಹೆಚ್ಚು. ಫೋನಿಗಂಟಿಕೊಂಡ ಹುಡುಗನಿಗೆ ಸದ್ಯಕ್ಕೆ ಕೆಲಸ, ಊಟ, ಇನ್ನಿತರ ಕೆಲಸಗಳೆಡೆಗೆ ಒಲವಿಲ್ಲ. ಟೆರೇಸು, ಆಫೀಸಿನ ಕಾನ್ಫರೆನ್ಸ್ ರೂಮು, ಬಾಗಿಲು ಹಾಕಿಕೊಂಡ ಕೋಣೆ ಎಲ್ಲೆಂದರಲ್ಲಿ ಚಂದಾದಾರ ಕಾರ್ಯನಿರತವಾಗಿದ್ದಾನೆ ! ಹುಡುಗಿ ಇದೇ ಊರಿನಲ್ಲಿದ್ದರೆ ವೀಕೆಂಡಿಗೆ ಬೆಳಗ್ಗೆ ಮಾಯವಾದ ಹುಡುಗ ರಾತ್ರಿ ಬಂದಾಗ "ಎಲ್ಲಿಗೆ ಹೋಗಿದ್ಯೋ?" ಅಂದರೆ ಸುಮ್ಮನೇ ನಗುತ್ತಾನೆ. ಮೊದಲು ಯಾವುದೋ ಸಿಕ್ಕಿದ ಅಂಗಿ ನೇತಾಕಿಕೊಂಡು ಊರು ಸುತ್ತುತ್ತಿದ್ದವನು ಈಗ ಸ್ವಲ್ಪ ಟ್ರಿಮ್ ಆಗಿದ್ದಾನೆ.

ಮೂರನೇ ಕೆಟಗರಿಯಲ್ಲಿ, ಸದ್ಯಕ್ಕೆ ನೆಟ್ ವರ್ಕ್ ಫ್ರೀ ಇರುವ ಗೆಳೆಯರ ಹುಡುಗಿ ಹುಡುಕಾಟ ಶುರುವಾಗಿದೆ. ಅಪ್ಪ ಅಮ್ಮ, ಬಂಧುಗಳ ಕಡೆಯಿಂದ ’ಒಳ್ಳೆಯ’ ಹುಡುಗಿಯರ ಸಮಾಚಾರ ಬಂದು ತಲುಪುತ್ತದೆ. ಜಾತಕ, ಫೊಟೋಗಳು ಕೈಸೇರುತ್ತಿವೆ, ಕೈಬದಲಾಗುತ್ತಿವೆ. ಇಂಟರ್ವ್ಯೂಗಳು ನೆಡೆಯುತ್ತಿವೆ. ಯಾವ ಹಬ್ಬವೂ ಇಲ್ಲದೇ ಸುಮ್ಮನೇ ಊರಿಗೆ ಹೊರಟ ಎಂದರೆ ಹುಡುಗ ಚಾ, ಉಪ್ಪಿಟ್ಟು ಸಮಾರಾಧನೆಗೇ ಹೋಗಿದ್ದಾನೆ ! ಹುಡುಗಿಯರ ಡಿಮಾಂಡುಗಳು, ಅವರು ಹಾಕುವ ಕಂಡೀಷನ್ ಗಳನ್ನು ಕೇಳಿದರೆ ಭಯವಾಗುತ್ತದೆ ಅನ್ನುತ್ತಾರೆ. ಕೆಲವರು ಯಾಕೋ ವ್ಯವಾರ ಕುದುರ್ಲಿಲ್ಲ ಅಂತ ವಾಪಾಸ್ಸು ಬಂದರೆ ಕೆಲವರು ಸಿಹಿ ಸುದ್ದಿ ಕೊಟ್ಟು ಎರಡನೇ ಕೆಟಗರಿಗೆ ಭಡ್ತಿ ಪಡೆಯುತ್ತಿದ್ದಾರೆ.

ನಾಲ್ಕನೇ ಕೆಟಗರಿಯಲ್ಲಿ, ಮನೆಯಲ್ಲಿ ಮದುವೆಯಾಗಬೇಕಾದ ಅಕ್ಕ, ಅಣ್ಣ, ಅಥವಾ ತಂಗಿ ಇರುವವರು, ’ಈಗಲೇ ಬೇಡ ಇರಿ’ ಎಂದು ಅಪ್ಪ ಅಮ್ಮರಿಗೆ ತಾಕೀತು ಮಾಡಿದವರು, ’ಸದ್ಯಕ್ಕೆ ಬೇಡ’ ಅನ್ನಿಸಿ ಸುಮ್ಮನಿರುವವರು, ಯಾವುದೇ ರೀತಿಯ ಒತ್ತಡ ಇಲ್ಲದವರು. ಅವರಿಗೆಲ್ಲಾ ತಮ್ಮೊಳಗೇ ಬಿಸಿ ಹತ್ತಿಕೊಳ್ಳದಿದ್ದರೂ ಸುತ್ತಮುತ್ತಲಿನ ಕಾವು ತಾಗುತ್ತಿದೆ, ತಳಮಳಗಳಾಗುತ್ತಿವೆ.

ಎಂತ ಹುಡುಗಿ ಹುಡುಕಿಕೊಳ್ಳಬೇಕು? ಗೊಂದಲ. ಅದಕ್ಕೂ ಮೊದಲು ತನ್ನ ಬಗ್ಗೆ ತನಗೇ ಗೊಂದಲ. ಈಗಲೇ ಮದುವೆಯಾಗಿಬಿಡಬೇಕಾ, ಅಗತ್ಯವಿದೆಯಾ? ತನಗೊಂದು ಸರಿಯಾದ ಕೆಲಸವಿದೆಯಾ, ಇದ್ದರೂ ಗಟ್ಟಿಯಿದೆಯಾ, ಬರುವ ಸಂಬಳ ಸಾಲುತ್ತದಾ? ಮದುವೆಯಾಗಿ ಸಂಸಾರ ನಿಭಾಯಿಸಬಲ್ಲ ಜವಾಬ್ದಾರಿ ಬಂದಿದೆಯಾ? ಅದೇನೋ ಮದುವೆಯಾದರೆ ಜವಾಬ್ದಾರಿ ತಾನಾಗೇ ಬರುತ್ತದಂತೆ. ಇಂದ್ರ ಚಂದ್ರ ಎಂದುಕೊಂಡು ಬಂದ ಹುಡುಗಿಗೆ ಇವನನ್ನು ಯಾಕಾದರೂ ಕಟ್ಟಿಕೊಂಡೆ ಎಂಬಂತಾಗಬಾರದಲ್ಲ. ಅದಕ್ಕೂ ಮೊದಲು ಹುಡುಗಿ ತನ್ನನ್ನು ಒಪ್ಪಿಕೊಳ್ಳಬೇಕಲ್ಲ. ಬರೀ ವಯಸ್ಸಾಗಿಬಿಟ್ಟರೆ ಸಾಕಾ? ಮದುವೆಯಾಗಲು ತಯಾರಿದ್ದೇನೆ ಅನ್ನಲಿಕ್ಕಾದರೂ ಒಂದು ಮಟ್ಟಿಗಿನ ಅರ್ಹತೆ ಬೇಕಲ್ಲ..... ಮುಂದುವರೆಯುತ್ತವೆ ಗೊಂದಲಗಳು. ಹುಡುಗಿಯ ರೂಪ ಕಾಣುತ್ತದೆ, ಗುಣ ಕಾಣುವುದಿಲ್ಲ, ಹುಡುಗಿಯ ಮನೆತನ ನೋಡುವುದಾ? ಜಾಸ್ತಿ ಓದಿದವಳು ಬೇಕಾ? ಕೆಲಸದಲ್ಲಿರುವವಳು ಬೇಕಾ? ಮಾವನ ಮನೆ ಕಡೆ ’ಚೆನ್ನಾಗಿರಬೇಕು’ ಇದು ಕೆಲವು ಹುಡುಗರ ಆಸೆ. ಈ ನಗರಗಳಲ್ಲಿ ನಾವೊಬ್ಬರೇ ದುಡಿದರೆ ಸಾಕಾಗೋದಿಲ್ಲ, ಅವಳೂ ಕೆಲಸಕ್ಕೆ ಹೋಗುತ್ತಿರಬೇಕು ಇದು ಇನ್ನು ಹಲವರ ಅಭಿಪ್ರಾಯ. ಬೇರೆ ಯಾವ ಕೆಲಸದಲ್ಲಿದ್ದರೂ ಓ.ಕೆ , ಆದರೆ ಈ ಐ.ಟಿ. ಹುಡುಗೀರು ಮಾತ್ರ ಖಂಡಿತ ಬೇಡ, ಇದು ಮತ್ತೂ ಕೆಲವರ ದೃಢ ನಿರ್ಧಾರ. ಕಾಲ್ ಸೆಂಟರಿನವರಂತೂ ದೂರ ದೂರ. ರೂಪ, ಹಣ, ಹಿನ್ನೆಲೆ, ಮನೆತನ, ದುಡಿಮೆಗಿಂತ ನನಗಂತೂ ಬೇಕಾಗಿರುವುದು ಒಂದು ’ಡೀಸೆಂಟ್ ಹುಡುಗಿ’ ಎನ್ನುವುದು ಸಾಮಾನ್ಯ. ಇದೆಲ್ಲಾ ತಲೆಬಿಸಿಯೇ ಬೇಡ ಎಂದು ಅಪ್ಪ ಅಮ್ಮನಿಗೇ ಎಲ್ಲಾ ಬಿಟ್ಟು ಕೆಲವರು ಆರಾಮಾಗಿದ್ದಾರೆ. ಅವರು ಕೈ ತೋರಿಸಿದವರಿಗೇ ಇವರದ್ದೂ ಜೈ. ಇದೆಲ್ಲುದರ ಜೊತೆಗೆ ಹುಡುಗಿಯರು ಬಯಸುವುದು ಏನನ್ನು, ಎಂತವರನ್ನು ಎಂಬ ನಾನಾ ಉತ್ತರಗಳ, ಉತ್ತರಗಳಿಲ್ಲದ, ಇದ್ದರೂ ಸಿಗದ, ಸಿಕ್ಕರೂ ಅರ್ಥವಾಗದ, ಅರ್ಥವಾದರೂ ಸ್ಪಷ್ಟವಾಗದ ಪ್ರಶ್ನೆ ಇದ್ದೇ ಇರುತ್ತದೆ.. ಗೆಳೆಯನೊಬ್ಬ ದಾರಿಯಲ್ಲಿ ಸಿಗುವ ಹುಡುಗಿರನ್ನೆಲ್ಲಾ ಕಣ್ಣಲ್ಲೇ ಅಳೆಯಲು ಶುರುಮಾಡಿದ್ದಾನೆ. ಯಾರನ್ನೋ ತೋರಿಸಿ ಇವಳ ತರಹ ಇದ್ರೆ ಓ.ಕೆ. ಅನ್ನುತ್ತಾನೆ. ನಾವೂ ಕೂಡ ಕಂಡ ಹುಡುಗಿಯರನ್ನೆಲ್ಲಾ ತೋರಿಸಿ "ಇದು ಹೆಂಗೋ? ನಿಂಗೆ ಓ.ಕೆ. ನಾ?" ಅನ್ನುತ್ತೇವೆ. ಆಪ್ತ ಗೆಳೆಯರು ಮಾತಿಗೆ ಕುಳಿತಾಗ ಹುಡುಗಿಯರ ಬಗ್ಗೆ, ಹೆಂಡತಿ ಬಗ್ಗೆ, ಹೇಗಿರಬೇಕು ಎನ್ನುವುದರ ಬಗ್ಗೆ, ಯಾರಾದರೆ ಯಾವರೀತಿ advantage ಮತ್ತು disadvantage ಎನ್ನುವುದರ ಬಗ್ಗೆ, ಮುಂದೆ ಹೇಗೆ ಎಂಬ ಬಗ್ಗೆ ಚರ್ಚೆ ಬಂದು ಹೋಗುತ್ತದೆ.. (ಅದು ಹುಡುಗರ ಲೋಕದ ಸೀಕ್ರೇಟುಗಳಾದ್ದರಿಂದ ವಿವರಗಳನ್ನು ಇಲ್ಲಿ ಬರೆಯುವಂತಿಲ್ಲ! :)) ಕೊನೆಗೆ ಏನೇ ನೋಡಿ, ಏನೇ ಲೆಕ್ಕಾಚಾರ ಹಾಕಿ ಮದುವೆಯಾದರೂ ’ನಿಜರೂಪ’ ದರ್ಶನ ಮದುವೆಯಾದ ಅನಂತರವೇ ಎಂಬ ಸತ್ಯದ ಅರಿವು ಎಲ್ಲರಲ್ಲಿದೆ! ಜೊತೆಗೆ ಮದುವೆಯಾಗುವವಳು ಸರಿಯಾಗಿ ಸೆಟ್ ಆಗ್ತಾಳೋ ಇಲ್ವೋ ಎಂಬ ಚಿಂತೆ!

ಈಗಾಗಲೇ ಮದುವೆಯಾದವರಿಗೆ, ದೊಡ್ಡವರಿಗೆ ಇದೆಲ್ಲಾ ತಮಾಷೆ ಎನಿಸಬಹುದು. ಇದುವರೆಗೆ ಹೇಳಿದ್ದೆಲ್ಲಾ ಏನಿದ್ದರೂ ತೀರ ಹೊರನೋಟ ಮಾತ್ರ. ಮನಸಿನ ಒಳಗಿನ ತಾಕಲಾಟಗಳು ನೂರು ನೂರು. ಮುಂದಿನ ತಿಂಗಳು ಮದುವೆ ಇರುವ ಗೆಳೆಯನೊಬ್ಬನಿಗೆ "ನೀವು ಸದ್ಯದಲ್ಲೇ ಮದ್ವೆ ಆಗ್ತಾ ಇದ್ದೀರ, ಏನನ್ನಿಸ್ತಿದೆ ನಿಮ್ಗೆ ?’ ಅಂತ ಟೀವಿ ನೈನ್ ಸ್ಟೈಲ್ ನಲ್ಲಿ ಕೇಳಿದಾಗ ಅವನು ಉತ್ತರಿಸಿದ್ದು ಹೀಗೆ. " ಟೆನ್ಷನ್ ಆಗ್ತಾ ಇದೆ, ಜೊತೆಗೆ ನನ್ನ ಸ್ವಾತಂತ್ರ್ಯ ಕಳೆದುಹೋಗ್ತಾ ಇದೆ ಅನ್ನಿಸ್ತಿದೆ, ಆದರೆ ಆ ಕಳ್ಕೊಳದ್ರಲ್ಲೂ ಒಂಥರಾ ಸುಖ ಇದೆ!" .

ಅದಕ್ಕೇ ಹೇಳಿದ್ದು, ಇದೊಂಥರಾ ಸಂಕ್ರಮಣದ ಜೊತೆಜೊತೆಗೇ ಸಂಕಷ್ಟದ ಕಾಲ!

ಗುರುವಾರ, ಅಕ್ಟೋಬರ್ 15, 2009

ನೂರುಸಾವಿರ ಸಾವಿನ ನೆನಪು !

ಇತಿಹಾಸ ಭೀಕರ. ಅಧಿಕಾರ, ಆಸೆ ಯುದ್ಧಕ್ಕೆ ದಾರಿಮಾಡಕೊಡಬಹುದು. ಅನ್ಯಾಯ, ಸೇಡು ದ್ವೇಷಕ್ಕೆ, ಜೊತೆಗೆ ಎಂತಹ ಕ್ರೌರ್ಯಕ್ಕೂ ಕಾರಣವಾಗಬಲ್ಲುದು.

"ಎಲ್ಲರೂ ನಿಂತು ನೋಡುತ್ತಿದ್ದರು, ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ, ಯಾರೂ ಹಿಟ್ಲರನ ವಿರುದ್ಧ ದಂಗೆಯೇಳಲಿಲ್ಲ" ಎನ್ನುತ್ತಾಳೆ ಜರ್ಮನಿಯಿಂದ ಓಡಿಬಂದು ಭಾರತದಲ್ಲಿ ಆಶ್ರಯ ಪಡೆದ ಯಹೂದಿ ಹ್ಯಾನಾ. ಅವತ್ತು ಹಿಟ್ಲರ ಯಹೂದಿಯರ ವಿರುದ್ಧ ಕಾರ್ಯಾಚರಣೆಗೆ ಇಳಿದಾಗ ಜರ್ಮನರು ಅದನ್ನು ವಿರೋಧಿಸಲಿಲ್ಲವಾ, ಎಲ್ಲರಿಗೂ ಅವ ಮಾಡುತ್ತಿರುವುದು ಸರಿಯೆಂದೇ ಅನ್ನಿಸಿಬಿಟ್ಟಿತ್ತಾ? ಆ ಮಟ್ಟಿಗೆ ರೋಸಿಹೋಗಿದ್ದರಾ? ಅಥವಾ ಹೆದರಿ ಸುಮ್ಮನಾಗಿದ್ದರಾ? ಗೊತ್ತಿಲ್ಲ. ಒಟ್ಟಿನಲ್ಲಿ ಹಿಟ್ಲರ್ ಗೆ ಬೆಂಬಲವಿತ್ತು. ಹಿಟ್ಲರನಿಂದ ತಪ್ಪಿಸಿಕೊಂಡು ಓಡಿದ ಹಲವು ಯಹೂದಿಯರು ಜಗತ್ತಿನ ಹಲವು ದೇಶಗಳಲ್ಲಿ ಆಶ್ರಯ ಪಡೆದರು. ಭಾರತದಲ್ಲೂ ಕೂಡ, ಬೆಂಗಳೂರಿನಲ್ಲೂ ಕೂಡ. ಸಿ.ವಿ.ರಾಮನ್ ರವರು ಯಹೂದಿ ವಿಜ್ಞಾನಿಗಳನ್ನು ಇಲ್ಲಿನ I.I.Sc. ಗೆ ಆಹ್ವಾನಿಸಿದ್ದರು. ತನ್ನ ಮಗಳ ಜೊತೆ ವಿಜ್ಞಾನಿಯೊಬ್ಬರು ಬೆಂಗಳೂರಿಗೆ ಬರುತ್ತಾರೆ. ಆ ಯಹೂದಿ ಹುಡುಗಿಯ fiction ಕಥೆಯೇ ’ಯಾದ್ ವಶೇಮ್’.


'ಯಾದ್ ವಶೇಮ್' ಕಥೆ ಶುರುವಾಗುವುದು ಬೆಂಗಳೂರಿನ ಗೋರಿಪಾಳ್ಯದ ಯಹೂದಿ ಸ್ಮಶಾನದಿಂದ. ಜರ್ಮನಿಯಿಂದ ತಂದೆಯೊಂದಿಗೆ ಬಂದ ಹ್ಯಾನಾ ಇಲ್ಲಿನವಳೇ ಆಗಿಹೋಗುತ್ತಾಳೆ. ತನಗೆ ಆಶ್ರಯ ನೀಡಿದ ಕುಟುಂಬದ ಹಿಂದು ಹುಡುಗನನ್ನು ಮದುವೆಯಾಗುತ್ತಾಳೆ. ಜನಾಂಗ ದ್ವೇಷಕ್ಕೆ ಬಲಿಯಾಗಿ ಬದುಕು ಕಳೆದುಕೊಂಡು ಬಂದ ಅವಳು ಭಾರತ ದೇಶದಲ್ಲಿ ಎಷ್ಟೊಂದು ವೈರುಧ್ಯಗಳ ನಡುವೆ ಎಲ್ಲರೂ ಅವರವರಾಗಿಯೇ ಉಳಿಯಲು ಸಾಧ್ಯವಿರುವ ವಾತಾವರಣದ ಬಗ್ಗೆ ಹೆಮ್ಮೆ ಪಡುತ್ತಾಳೆ. "ತಾನು ತಾನಾಗಿ, ಅವರು ಅವರಾಗಿಯೂ, ನಾವು ಒಂದಾಗಬಹುದಾದ ಧರ್ಮ ನಿರಪೇಕ್ಷ ನಾಡು ಈ ಭಾರತ" ಎಂಬ ಸತ್ಯ ಎಲ್ಲೆಲ್ಲೂ ಕಾಣುತ್ತದೆ ಅವಳಿಗೆ.

ಜರ್ಮನಿ ಬಿಟ್ಟು ಬರುವ ಸಮಯದಲ್ಲಿ ಅನಿವಾರ್ಯವಾಗಿ ಅಗಲಿದ ತನ್ನ ತಾಯಿ,ತಂಗಿ,ತಮ್ಮಂದಿರನ್ನು ದಶಕಗಳ ಅನಂತರ ಹ್ಯಾನಾ ಹುಡುಕಿಕೊಂಡು ಹೋಗುತ್ತಾಳೆ. ಅವರು ಏನಾದರು ಎಂಬ ಕತೆಯು ಜರ್ಮನಿ, ಹಿಟ್ಲರ್, ಯಹೂದಿಗಳ ವಿರುದ್ಧ ಅವನ ಅಂತಿಮ ಪರಿಹಾರ, ಅಮೆರಿಕಾ ಎಲ್ಲಾ ಕಡೆ ಸುತ್ತಿಸಿಕೊಂಡು ಬರುತ್ತದೆ. ನಾಜಿ ಕ್ಯಾಂಪಿನ ಆ ಕ್ರೌರ್ಯ ಮನುಷ್ಯನಾದ ಯಾರನ್ನೇ ಆದರೂ ಬೆಚ್ಚಿ ಬೀಳಿಸದಿರಲು ಸಾಧ್ಯವಿಲ್ಲವೇ ಇಲ್ಲ. ಹಿಟ್ಲರನ ದ್ವೇಷಕ್ಕೆ ಸಿಕ್ಕ ಯಹೂದಿಗಳು ಕಸಾಯಿಖಾನೆಯ ಪ್ರಾಣಿಗಳಂತಾದರು. ಪ್ರಯೋಗಗಳಿಗೆ ವಸ್ತುಗಳಾದರು. ೬೦ ಲಕ್ಷ ಜನ ಎಲ್ಲಾ ತರಹದ ಹಿಂಸೆಗಳಿಗೆ ಬಲಿಯಾಗಿ ಗ್ಯಾಸ್ ಛೇಂಬರಿನಲ್ಲಿ ಒದ್ದಾಡಿ ಒಲೆಗಳಲ್ಲಿ ಕಟ್ಟಿಗೆಗಳಾಗಿ ಉರಿದುಹೋದರು. ಅನಂತರ ಯಹೂದಿಯರಿಗಾಗಿಯೇ ಇಸ್ರೇಲ್ ದೇಶ ಹುಟ್ಟಿಕೊಂಡಿತು. ಹುಡುಕಾಟದ ಕೊನೆಯಲ್ಲಿ ಹ್ಯಾನಾ ಇಸ್ರೇಲ್ ತಲುಪುತ್ತಾಳೆ. ಹೊರದಬ್ಬಿಸಿಕೊಂಡ ಯಹೂದಿ ಜನ ತಮ್ಮದೇ ಆದ ಭೂಮಿಗೆ ಕಾದಿದ್ದರು, ಪಡೆದುಕೊಂಡರು ನಿಜ. ಆದರೆ ಇಲ್ಲಿ ಅವರು ಮಾಡಿದ್ದಾದರೂ ಏನು? ಯಾವ ಜನ ತಮಗಾದ ಅನ್ಯಾಯ, ದ್ವೇಷ, ಹಿಂಸೆ ಬೇರೆಯವರಿಗಾಗಬಾರದೆಂದು ಆಶಿಸಬೇಕಿತ್ತೋ ಅವರೇ ಪ್ಯಾಲಿಸ್ಟೇನಿ ಅರಬ್ಬರ ಭೂಮಿಯನ್ನು ಕಸಿದುಕೊಂಡರು. ವಿರೋಧಿಸಿದವರು ಉಗ್ರರಾದರು, ಹೊಸಕಿ ಹಾಕಲ್ಪಟ್ಟರು. ಇಸ್ರೇಲಿಗಳು ಇದು ತಮ್ಮ ಸ್ವಾತಂತ್ರ್ಯ ಹೋರಾಟವೆಂದರು, ಇದು ತಮಗೆ ದೇವರು ಕೊಟ್ಟ ಹಕ್ಕಿನ ಭೂಮಿ ಎಂದರು. ಇವತ್ತಿಗೂ ಅಲ್ಲಿ ಹಿಂಸೆ ನಿಂತಿಲ್ಲ. ನೆಮ್ಮದಿಯ ಬಾಳು ಯಾರಿಗೂ ಇಲ್ಲ. "ನಮ್ಮ ಬದುಕುವ ಹಕ್ಕು ಇನ್ನೊಬ್ಬರ ಸಾವಿನ ಮೇಲೆ ನಿಲ್ಲಬೇಕಾ?" ಎನ್ನುತ್ತಾಳೆ ಹ್ಯಾನಾ.

"ಇದ್ದವರು, ಗೆದ್ದವರು ಇತಿಹಾಸ ಬರೆಯುತ್ತಾರೆ,ಅವರು ಹೇಳಿದ್ದೇ ಇತಿಹಾಸವಾಗುತ್ತದೆ". ಜರ್ಮನಿಯಲ್ಲಿ ನಾಜೀ ಕ್ರೌರ್ಯ ನೆಡೆದೇ ಇಲ್ಲವೆಂಬಂತೆ ಇತಿಹಾಸವನ್ನು ಗುಡಿಸುವ ಪ್ರಯತ್ನ. ಜರ್ಮನಿಯ ಹೊಲೋಕಾಸ್ಟಿನ ಮ್ಯೂಸಿಯಮ್ಮನ್ನು ವಾಷಿಂಗ್ಟನ್ನಿನಲ್ಲಿಟ್ಟು ನಾಜಿ ಕ್ರೌರ್ಯದ ವಿರುದ್ಧ ಫೋಸು ಕೊಡುವ ಅಮೆರಿಕಾ ತಾನು ಕೊಂದು ಹಾಕಿದ ಲಕ್ಷ ಲಕ್ಷ ರೆಡ್ ಇಂಡಿಯನ್ನರ ಬಗ್ಗೆ, ಅಣುಬಾಂಬಿನಲ್ಲಿ ಬೆಂದುಹೋದ ಜಪಾನೀಯರ ಬಗ್ಗೆ ಪಿಟಿಕ್ಕೆನ್ನುವುದಿಲ್ಲ. ಇರಾಕಿನಲ್ಲಿ, ಅಫ್ಘ್ಹಾನಿಸ್ತಾನದಲ್ಲಿ, ಕ್ಯೂಬಾದಲ್ಲಿ ತನ್ನ ಅನಾಚಾರಗಳ ಬಗ್ಗೆ ಸಾಕ್ಷಿಗಳನ್ನು ಉಳಿಸುವುದಿಲ್ಲ.


ಹಳೇ ಬೆಂಗಳೂರಿನ ಚಿತ್ರಣ, ಬ್ರಿಟಿಷ್ ಆಡಳಿತದಲ್ಲಿ ವಿಶ್ವಯುದ್ಧದಲ್ಲಿ ಪರೋಕ್ಷವಾಗಿ ಪಾಲ್ಗೊಳ್ಳಬೇಕಾದ ಭಾರತ, ಹೆಚ್.ಎ.ಎಲ್ ವಿಮಾನ ಕಾರ್ಖಾನೆ ಸ್ಥಾಪನೆಯ ಘಟನೆಗಳು, ಯಹೂದಿ ಮತ್ತು ಇಸ್ಲಾಂ ಧರ್ಮಗಳು, ಡಕಾವ್ ನಾಜಿ ಕ್ಯಾಂಪ್, ಹಿಟ್ಲರನ ಆ ದಿನಗಳು, ಅಮೆರಿಕಾದ ನಸುಗುನ್ನಿಯಾಟ, ಮೂರೂ ಧರ್ಮಗಳ ಸಂಧಿ ಜೆರುಸಲೇಂ, ಇವತ್ತಿನ ಇಸ್ರೇಲಿನ ಸ್ಥಿತಿಯ ನಡುವೆಯ ಕತೆ ಚಾಮರಾಜಪೇಟೆಯ ಕೌಟುಂಬಿಕ ವಾತಾವರಣದಲ್ಲೇ ಬಿಚ್ಚಿಕೊಳ್ಳುತ್ತದೆ, ನಡೆಯುತ್ತದೆ. ಎಲ್ಲೆಲ್ಲೂ ಅತಿರೇಕಕ್ಕೆ ಹೋಗದಂತೆ, ಅತ್ಯಂತ ಸಮತೋಲನವಾಗಿ ಹಲವು ಮಾಹಿತಿಗಳ ವಾಸ್ತವದ ನೋಟ ಈ ಪುಸ್ತಕದ ವಿಶೇಷತೆ. ನಿಜವಾದ ವ್ಯಕ್ತಿಗಳು ಹಲವು ಪಾತ್ರಗಳು, ಜೊತೆಗೆ ಪೂರಕ ಚಿತ್ರಗಳು. ಕೊನೆಗೆ ಮುಗಿಸುವಾಗ, "ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಿಬಿಡಬಲ್ಲ, ಜರ್ಮನಿ, ಅಮೆರಿಕಾ, ಭಾರತ, ನಮ್ಮ ನಡುವೆ, ಕೊನೆಗೆ ನಮ್ಮೊಳಗೇ" ಎನ್ನುತ್ತಾರೆ ನೇಮಿಚಂದ್ರ. ಇಲ್ಲ ಅನ್ನಿಸಲು ಸಾಧ್ಯವೇ ಇಲ್ಲ.

ಸಂಬಂಧಪಟ್ಟ ದೇಶ, ಸ್ಥಳಗಳಿಗೆಲ್ಲಾ ಸ್ವತಃ ಭೇಟಿ ಕೊಟ್ಟು ವಿವರಗಳನ್ನು ಸಂಗ್ರಹಿಸಿರುವ ಲೇಖಕರು ಇದನ್ನು ಸುಮ್ಮನೇ ಒಂದು ಕಾದಂಬರಿಯಾಗಿಸದೇ ಬಹಳ informative ಆಗಿ ಬರೆದಿದ್ದಾರೆ. ಈ ಪುಸ್ತಕ ನಾನು ಓದಿದ ಅದ್ಭುತ ಪುಸ್ತಕಗಳಲ್ಲೊಂದು.

**********

ಟಿಪ್ಪಣಿ:

ಹಿಟ್ಲರ್ - ಜಗತ್ತು ಎಂದೆಂದಿಗೂ ಮರೆಯಲಾಗದ ಸರ್ವಾಧಿಕಾರಿ. ಹಿಟ್ಲರನ ಬಗ್ಗೆ ಅತಿರಂಜಿತ ಸುದ್ದಿಕತೆಗಳೇನೇ ಇರಲಿ, ಯಹೂದಿಯರ ವಿರುದ್ಧ ಹೊಲೋಕಾಸ್ಟ್ ಎಂಬ ಅಮಾನವೀಯತೆಗೆ ಇಳಿಯದಿದ್ದರೆ ಜಗತ್ತಿನ ಸಮರ್ಥ ನಾಯಕರಲ್ಲೊಬ್ಬ ಎನಿಸಿಕೊಳ್ಳುವ ಅವಕಾಶವಿದ್ದವನು. ನಮಗೆ ಇದುವರೆಗೂ ಹಿಟ್ಲರನ ಬಗ್ಗೆ ಇಂಗ್ಲೀಷ್ ಮಾಧ್ಯಮಗಳು ಅದರಲ್ಲೂ ಅಮೆರಿಕಾದ ಮಾಧ್ಯಮಗಳು ಕೊಟ್ಟಿರುವ ರಾಕ್ಷಸ ಚಿತ್ರಣ ಸಹಜ. ಅವರಿಗಾಗದ್ದವರನ್ನು, ಅವರಿಗೆ ತಲೆಬಾಗದವರನ್ನು, ಅವರ ವಿರುದ್ಧ ನಿಂತವರನ್ನು ದೊಡ್ಡ ಮನುಕುಲ ಕಂಟಕರು ಎಂಬಂತೆ ಚಿತ್ರಿಸಿ ಜಗತ್ತಿಗೆ ಪ್ರಚಾರ ಮಾಡುವುದು ಅಮೆರಿಕಾದ ಮಾಧ್ಯಮಗಳ ಗುಣ. ಅದಕ್ಕೆ ರಷ್ಯಾ, ಕ್ಯೂಬಾ, ಕೊರಿಯಾ, ಚೀನಾ ಉದಾಹರಣೆಗಳು. ಹಿಟ್ಲರನೂ ಕೂಡ ಹೊರತಲ್ಲ. ಇಂತವನಿಗೆ ಅದ್ಯಾಕೆ ಯಹೂದಿಯರ ವಿರುದ್ಧ ಅಂತಹ ದ್ವೇಷವಿತ್ತು ಎಂಬುದು ನಮಗೆ ಕೊಟ್ಟಿರುವ ಚಿತ್ರಣಗಳಿಗಿಂತ ಸ್ವಲ್ಪ ಬೇರೆ. ಅದಕ್ಕೆ ಹಿಟ್ಲರನೇ ಬರೆದಿರುವ 'ಮೈನ್ ಕಾಂಫ್' ಪುಸ್ತಕದಲ್ಲಿ ಉತ್ತರವಿದೆ. ಅದು ಹಿಟ್ಲರ್ ಎಂತಹ ಉತ್ತಮ ರಾಜಕೀಯ ಚಿಂತಕನಾಗಿದ್ದ, ನೋಟ ಹೊಂದಿದ್ದ ಎಂದು ಸ್ಪಷ್ಟಪಡಿಸುತ್ತದೆ. ಜರ್ಮನಿಯಲ್ಲಿ ಪ್ರತಿಯೊಂದರಲ್ಲೂ ಯಹೂದಿಯರ ಹಿಡಿತ ಯಾವ ರೀತಿ ಇತ್ತೆಂದರೆ ಜರ್ಮನ್ನರು ಎರಡನೇ ದರ್ಜೆ ನಾಗರಿಕರಾಗಿ ಹೋಗಿದ್ದರು. ವ್ಯಾಪಾರ, ರಾಜಕೀಯ, ಸಾಮಾಜಿಕ ಜೀವನದಲ್ಲೆಲ್ಲಾ ಯಹೂದಿಗಳದ್ದೇ ಹಿಡಿತ. ಮಾಧ್ಯಮಗಳು ಕೂಡ ಅವರ ಅಂಕೆಯಲ್ಲೇ ಕುಣಿಯುತ್ತಿದ್ದವು. ಅದು ಯಾವ ಮಟ್ಟಕ್ಕಿತ್ತೆಂದರೆ ಜರ್ಮನಿಯ ಮಿಲಿಟರಿಯ ಸೈನಿಕರಿಗೆ ತಾಯ್ನಾಡಲ್ಲೇ ಬೆಂಬಲವಿಲ್ಲದೇ ಹೋರಾಡುವ ಸ್ಥೈರ್ಯ ಇಂಗಿಹೋಗಿತ್ತು. ಜರ್ಮನ್ನರ ಆತ್ಮಾಭಿಮಾನ ಸತ್ತು ಹೋಗಿತ್ತು. ಏಕೆಂದರೆ ಅನ್ಯಾಯಕ್ಕೊಳಗಾಗಿ ಸಹಿಸಿಕೊಂಡು ಸುಮ್ಮನಿದ್ದರೆ ಸೌಹಾರ್ದ. ಪ್ರತಿಭಟಿಸಿದರೆ ಸಂಕುಚಿತ, ಅಸಮರ್ಥ. ಇದರ ವಿರುದ್ಧ ಸಿಡಿದವನೇ ಹಿಟ್ಲರ್. ಇದಕ್ಕೆಲ್ಲಾ ಕೊನೆಹಾಡಿ ಜರ್ಮನ್ನರಾದ ತಮ್ಮದೂ ಕೂಡ ಯಾವ ಯಹೂದಿಗಳಿಗೂ ಕಡಿಮೆಇಲ್ಲದಂತಹ ಶ್ರೇಷ್ಠ ಜನಾಂಗ ಎಂದು ತೋರಿಸಲು, ಸಾಧಿಸಲು ಹೋದವನು ಹಿಟ್ಲರ್. ಆದರೆ ಅದಕ್ಕೆ ಅವನನುಸರಿಸಿದ ಮಾರ್ಗ ಮಾತ್ರ ಕ್ಷಮಿಸಲಾರದ್ದಾಯಿತು. ಇವತ್ತಿಗೂ ಕೂಡ ಜಗತ್ತಿನ ದೊಡ್ಡ ದೊಡ್ಡ ವ್ಯಾಪಾರಗಳಲ್ಲಿ ಯಹೂದಿಯರ ಹಿಡಿತವಿದೆ. ಆದರೆ ಯಾವುದೇ ನೆಲದಲ್ಲಾಗಲೀ ಅಲ್ಲಿನವರಿಗೆ ನ್ಯಾಯವಾಗಿ ಸಿಗಬೇಕಾದ್ದು ಸಿಗದೇ ಹೋದಾಗ ಅಲ್ಲಿನ ನೆಲದ ಜನರು ಪ್ರಕಟಗೊಳ್ಳುವುದೇ ಹಿಟ್ಲರನ ರೂಪದಲ್ಲಿ. ಎಲ್ಲರೊಳಗೊಬ್ಬ ಹಿಟ್ಲರ್ ಇದ್ದೇ ಇದ್ದಾನೆ.

****

ಮಾಹಿತಿ ಮೂಲ:
ಪುಸ್ತಕಗಳು : Mein Kampf (Adolf Hitler), Yadvashem (Nemichandra)
Documentary movie: Occupation 101 and some websites

ಗುರುವಾರ, ಅಕ್ಟೋಬರ್ 8, 2009

’ಯಾದ್ ವಶೇಮ್’ ಗುಂಗಿನಲ್ಲಿ....

ಕಾರ್ಪೋರೇಷನ್ ಸರ್ಕಲ್ಲಿನ ಎರಡೆರಡು ಸಿಗ್ನಲ್ಲುಗಳನ್ನು ದಾಟಿಕೊಂಡು ಬನ್ನಪ್ಪ ಗಾರ್ಡನ್ನಿನ ಪಕ್ಕದ ರಸ್ತೆಯಲ್ಲಿ ಕಾವೇರಿಭವನದ ಎದುರಿಗೆ ಬರುತ್ತಿದ್ದ ಹಾಗೇ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೆಂಪು ಸಿಗ್ನಲ್ಲು. ನಿಲ್ಲಿಸಿದೆ ಬೈಕು. ೧೧೨ ಸೆಕೆಂಡು ಬಾಕಿ!  ಗಾಡಿ ಆಫ್ ಮಾಡಿದೆ. . ಎಡಗಡೆ ವೀರಾಂಜನೇಯ ಸ್ವಾಮಿ ದೇವಸ್ಥಾನ. ಅದು ಯಲಹಂಕ ಬಾಗಿಲಂತೆ! ಅದರ ಈಚೆ ಕಡೆ ರಾಜಕುಮಾರ್ ಹೆಬ್ಬಾಗಿಲು, ಆಚೆ ವಿಶ್ವೇಶ್ವರಯ್ಯ ಹೆಬ್ಬಾಗಿಲು ಎಂದು ದೊಡ್ಡದಾಗಿ ಬರೆದಿರುವ ಕಮಾನುಗಳು. ಅದರ ಮೂಲಕ ಅವೆನ್ಯೂ ರಸ್ತೆಗೆ ಪ್ರವೇಶ. ಬಲಬದಿಯಲ್ಲೊಂದು ಟ್ರಾಫಿಕ್ ಪೋಲೀಸ್ ಗೂಡು. ಖಾಲಿ ಇದೆ. ಅಲ್ಲೇ ದೇವರ್ಯಾವುದೆಂದು ಗೊತ್ತಾಗದ ಗುಡಿಯೊಂದಿದೆ. ಮುಂದೆ ಬಿಳಿ ಗೋಡೆಯ ಕಪ್ಪು ಕಂಡಿಗಳ ಎತ್ತರದ ಮೈಸೂರು ಬ್ಯಾಂಕು. ಆಕಡೆ ಈಕಡೆ ಬೆಂಗಳೂರು ವಿಶ್ವವಿದ್ಯಾಲಯದ ಕೆಂಪು ಕೆಂಪು ಕಟ್ಟಡಗಳು. ಮಹಾನಗರ ಪಾಲಿಕೆ ಗೋಡೆಗಳ ಮೇಲೆಲ್ಲಾ ಸುಂದರ ಕುಂಚ ಚಿತ್ತಾರ. ವಿಧಾನಸೌಧ ಕಡೆಯಿಂದ ಬರುವ ರಸ್ತೆಯಿಂದ ಅವೆನ್ಯೂ ರಸ್ತೆಗೆ ಹರಿಯುತ್ತಿವೆ ವಾಹನಗಳು. ಆತಂಕದಲ್ಲಿ ರಸ್ತೆ ದಾಟುತ್ತಿದ್ದಾರೆ ಜನ.
*****

ಆಗಸ್ಟ್ ೯, ೧೯೪೨, ಕ್ವಿಟ್ ಇಂಡಿಯಾ ಚಳುವಳಿ. ಗಾಂಧೀಜಿ ಸಮಗ್ರ ರಾಷ್ಟ್ರಕ್ಕೆ ಕರೆಕೊಟ್ಟಿದ್ದರು. ಗಾಂಧಿಯವರನ್ನು, ಇತರ ಮುಖಂಡರನ್ನು ಬೆಳಗ್ಗೆ ಬಂಧಿಸಿದ್ದರು. ಸುದ್ದಿ ತಿಳಿದದ್ದೇ ತಡ, ಚಿಕ್ಕಲಾಲ್ ಬಾಗ್ ನಲ್ಲಿ ಸಾರ್ವಜನಿಕ ಸಭೆ ಸೇರಿತ್ತು. ಎಚ್.ಸಿ.ಸೂರ್ಯನಾರಾಯಣ ರಾವ್, ಕೆಂಗಲ್ ಹನುಮಂತಯ್ಯ, ಎಸ್.ಡಿ.ಶಂಕರ್, ಕೆ.ರಾಮಸ್ವಾಮಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಬಂಧನವನ್ನು ಖಂಡಿಸಿದ್ದರು. ’ಭಾರತ ಬಿಟ್ಟು ತೊಲಗಿ’ ಕರೆಕೊಟ್ಟಿದ್ದರು. ಅದೋ ವಿಧ್ಯಾರ್ಥಿಗಳು ತರಗತಿಗಳಿಂದ ಹೊರಬಂದರು. ಸೆಂಟ್ರಲ್ ಕಾಲೇಜಲ್ಲಿ ಓದೋ ನನ್ನ ಗೆಳೆಯರ ಅಣ್ಣಂದಿರೇನೋ ಮೆರವಣಿಗೆ ಹೊರಡ್ತಾರೆ ಅಂತಾ ಗೊತ್ತಾಗಿ ನಾನೂ ದೌಡಾಯಿಸಿದೆ. ಮೈಸೂರು ಬ್ಯಾಂಕ್ ಚೌಕದಲ್ಲಿ ನಿಷೇದಾಜ್ಞೆ. ನಾವೋ ’ಬ್ರಿಟಿಷರೆ ಭಾರತ ಬಿಟ್ಟು ತೊಲಗಿ’ ಕೂಗು ಹಾಕಿಕೊಂಡು ಬರುತ್ತಾ ಇದ್ದೇವೆ. ಪೋಲೀಸರು ಬಂದರು, ದೊಣ್ಣೆ ಹಿಡಿದು ಬಡಿದರು. ಕುದುರೆ ಮೇಲಿನ ಪೋಲೀಸರು ನಮ್ಮ ಮೇಲೆ ಕುದುರೆ ದೌಡಾಯಿಸಿದಾಗ ಸತ್ತೆನೋ ಕೆಟ್ಟೆನೋ ಅಂತಾ ಓಡಲೆತ್ನಿಸಿದೆ. ಕಾಲಿಗೆ ಬಲವಾದ ಏಟು ಬಿದ್ದು ನರಳುವಂತಾಯಿತು. ಎಲ್ಲರನ್ನೂ ಬಂಧಿಸಿ ಸೆಂಟ್ರಲ್ ಜೈಲಿಗೆ ಒಯ್ದರು. ಕುದುರೆ ಮೇಲೆ ಪೋಲೀಸರ ನೋಡಿ, ಎಷ್ಟೋ ಕಡೆ ಅಕ್ಕಪಕ್ಕದ ರಸ್ತೆಯಲ್ಲಿದ್ದ ಹೆಂಗಸರು ಮೊರದಲ್ಲಿ ರಾಗಿ ಬೀದಿಗೆ ಎರಚಿದ್ದರು. ಕುದುರೆಗಳೂ ಜಾರಿ ಜಾರಿ ಬೀಳತೊಡಗಿದವು. ...........

********

’ಯಾದ್ ವಶೇಮ್’ ಪುಸ್ತಕದ ಗುಂಗಿನಲ್ಲಿದ್ದ ನನಗೆ ಅದರಲ್ಲಿದ್ದ ಈ ಸಾಲುಗಳು ನೆನಪಿಗೆ ಬಂದವು. ಆಗಿನ ಮೈಸೂರು ಬ್ಯಾಂಕ್ ಸರ್ಕಲ್ ಹೇಗಿತ್ತು. ಎಲ್ಲಿಂದ ಬಂದಿರಬಹುದು ಮೆರವಣಿಗೆ. ಅದರಲ್ಲಿದ್ದ ಪ್ರತಿಯೊಬ್ಬನಲ್ಲೂ ದೇಶ ಸ್ವತಂತ್ರವಾಗಬೇಕೆಂಬ ಛಲ. ’ಭಾರತ ಬಿಟ್ಟು ತೊಲಗಿ’ ಘೋಷಣೆ. ಈಚೆ ಕಡೆಯಿಂದ ಕುದುರೆ ಮೇಲೆ ಬಂದ ಬ್ರಿಟಿಷರು. ಬಡಿಯುತ್ತಿದ್ದಾರೆ ಹೋರಾಟಗಾರರನ್ನು.. ಚದುರಿದ ಮೆರವಣಿಗೆಯಿಂದ ಜನ ಕಿತ್ತೂ ಬಿದ್ದೂ ಓಡುತ್ತಿದ್ದಾರೆ. ನಾವು ನಿಂತು ನೋಡುತ್ತಿದ್ದೇವೆ. ಎಲ್ಲಾ ಅಸ್ಪಷ್ಟ. ಇನ್ನು ೧೦ ಸೆಕೆಂಡು ಬಾಕಿ. ಹಸಿರು ದೀಪ ಬೀಳುತ್ತದೆ.