ಪುಟಗಳು

ಸೋಮವಾರ, ಜುಲೈ 13, 2009

ಆಧುನಿಕ ಬುದ್ಧನ ಅಲೆದಾಟ

ಆತ ಆಧುನಿಕ ಬುದ್ಧ ! ಅಮೆರಿಕಾದ ವಿಶ್ವವಿದ್ಯಾಲಯವೊಂದರ ೨೨ ವರ್ಷದ ಆ ಹುಡುಗ ಪದವಿ ಮುಗಿದ ಮೇಲೆ ಅಪ್ಪ ಅಮ್ಮನ ಹೊಸ ಕಾರಿನ ಉಡುಗೊರೆಯನ್ನು ನಿರಾಕರಿಸುತ್ತಾನೆ. ಈ ಲೌಕಿಕ ಬದುಕಿನ ವ್ಯಾಮೋಹಗಳ ಬಗ್ಗೆ ಅಸಹ್ಯ ಅವನಿಗೆ. ಅಪ್ಪ ಅಮ್ಮಂದಿರ ಭೋಗಜೀವನ, ಅಧಿಕಾರ ಗುಣಗಳ ಬಗ್ಗೆ ಅಸಮಾಧಾನ. ನಗರದ ಬದುಕಿನಿಂದ, ನಾಗರೀಕತೆಯಿಂದ ದೂರ ಹೋಗಿ ಪ್ರಕೃತಿಯಲ್ಲಿ ಯಾವ ಗುರಿಯೂ ಇಲ್ಲದಂತೆ ನೈಸರ್ಗಿಕವಾಗಿ ಬದುಕುವುದೇ ನಿಜವಾದ ಅಸ್ತಿತ್ವ ಎಂಬ ಆಸೆಯಿಂದ ಹೊರಟುಬಿಡುತ್ತಾನೆ. ತನ್ನ ಬ್ಯಾಂಕ್ ಕಾರ್ಡ್, ಐಡೆಂಟಿಟಿ ಕಾರ್ಡ್ ಎಲ್ಲವನ್ನೂ ನಾಶಪಡಿಸಿ, ತನ್ನ ಉಳಿತಾಯದ ಹಣವನ್ನು ದಾನಮಾಡಿ ತನ್ನ ಕಾರನ್ನು ಕೂಡ ಎಲ್ಲೋ ಬಿಟ್ಟು ತನ್ನಲ್ಲಿ ಉಳಿದಿದ್ದ ಸ್ವಲ್ಪ ಹಣವನ್ನೂ ಸುಟ್ಟು ಹಾಕಿ ತಂದೆತಾಯಿಗಳಿಗೂ ತಿಳಿಸದೇ ತನ್ನ ಒಂದಿಷ್ಟು ವಸ್ತು, ಸಲಕರಣೆಗಳೊಡನೆ ಜೋಗಿಜಂಗಮನಂತೆ ಕಾಲ್ನಡಿಗೆಯಲ್ಲೇ ಪ್ರಕೃತಿಯೆಡೆಗೆ ಪ್ರಯಾಣ ಬೆಳೆಸುತ್ತಾನೆ. ನಗರದಿಂದ ಹೊರಟು ಅವನ ಗುರಿಯಾಗಿದ್ದ ಅಲಾಸ್ಕಾ ಕಾಡನ್ನು ತಲುಪುವವರೆಗಿನ ಆ ಹುಡುಗನ ಎರಡು ವರ್ಷಗಳ ಅಲೆದಾಟ, ದಾರಿಯಲ್ಲಿ ಅವನು ಭೇಟಿಯಾಗುವ ಜನಗಳು, ಏರ್ಪಡುತ್ತಿದ್ದ ಸಂಬಂಧಗಳ ಬಂಧಕ್ಕೆ ಸಿಲುಕದೇ ಮುಂದುವರೆಯುವುದು, ಆತನ ಸಾಹಸಗಳು, ಕೊನೆಗೆ ಅಲಾಸ್ಕಾದ ಕಾಡುಗಳಲ್ಲಿ ಆತ ಸವೆಸುವ ದಿನಗಳ ಕಥೆ ಇದು.

ಆ ಹುಡುಗ ಹೆದ್ದಾರಿಗಳಲ್ಲಿ ಸಿಗುವ ಗಾಡಿಗಳಲ್ಲಿ ಪ್ರಯಾಣ ಮಾಡುತ್ತಾ ಅಲೆಮಾರಿ ಹಿಪ್ಪಿ ದಂಪತಿಗಳ ಒಡನಾಟದಲ್ಲಿ ಕಾಲ ಕಳೆಯುತ್ತಾನೆ. ಒಬ್ಬ ಉತ್ಸಾಹಿ ರೈತನ ಹೊಲದಲ್ಲಿ ಅವನೊಂದಿಗೆ ಬೇಸಾಯ, ಕಟಾವಿನಲ್ಲಿ ತೊಡಗುತ್ತಾ ಮೈಮರೆಯುತ್ತಾನೆ, ಸಂತೋಷ ಅನುಭವಿಸುತ್ತಾನೆ. ಷೋಡಶಿಯ ದೇಹಕ್ಕೆ ಸೋಲದೇ ತಪ್ಪಿಸಿಕೊಳ್ಳುತ್ತಾನೆ. ಉಕ್ಕಿ ಹರಿಯುವ ನದಿಯಲ್ಲಿ ದೋಣಿ ನೆಡೆಸುತ್ತಾ ಮೆಕ್ಸಿಕೋ ತಲುಪಿ ಅಲ್ಲಿಂದ ರೈಲು ಹಿಡಿದು ಹಿಂದಿರುಗಿ ಬರುತ್ತಾನೆ. ದಾರಿಯಲ್ಲೆಲ್ಲೋ ಸಿಗುವ ಮುದುಕನ ಜೊತೆ ದಿನಕಳೆದು ಅವನಲ್ಲಿ ಜೀವನೋತ್ಸಾಹ ಮೂಡಿಸುತ್ತಾನೆ, ತನ್ನ ಬದುಕಿನ ಉದ್ದೇಶದ ಬಗ್ಗೆ ತಿಳಿಸುತ್ತಾನೆ. ಇವನನ್ನು ದತ್ತು ಪಡೆಯುವುದಾಗಿ ಮಕ್ಕಳಿಲ್ಲದ ಆ ಮುದುಕ ಬೇಡಿಕೆ ಇಟ್ಟಾಗ ಅದನ್ನು ನಯವಾಗಿ ಮುಂದೂಡಿ ತನ್ನ ಗುರಿಯಾದ ಅಲಾಸ್ಕಾದ ಕಾಡುಗಳಿಗೆ ಹೋಗಿಬಿಡುತ್ತಾನೆ. ತನ್ನ ಪ್ರಯಾಣದುದ್ದಕ್ಕೂ ನದಿ, ಸಮುದ್ರ, ಬೆಟ್ಟ, ಗುಡ್ಡ, ಗಿಡಮರಗಳ ಸಾಂಗತ್ಯವನ್ನು ಅನುಭವಿಸುತ್ತಾನೆ. ಅದರೊಳಗೆ ಬೆರೆಯುತ್ತಾನೆ. ಅಲಾಸ್ಕಾದ ಹಿಮಕಾಡುಗಳನ್ನು ತಲುಪಿದಾಗ ನಿಜವಾದ ಪ್ರಕೃತಿಯೊಡನೆ ಅವನ ಜೀವನ ಶುರುವಾಗುತ್ತದೆ. ಅಲ್ಲಿ ಅವನಿಗೆ ಯಾರೋ ತೊರೆದು ಹೋದ ಚಿಕ್ಕ ಬಸ್ ಒಂದು ಅನಿರೀಕ್ಷಿತವಾಗಿ ದೊರೆತು ಅದನ್ನೇ ಮನೆಯನ್ನಾಗಿ ಮಾಡಿಕೊಳ್ಳುತ್ತಾನೆ. ಒಂದಿಷ್ಟು ದಿನಗಳು ಚೆನ್ನಾಗಿ ನೆಡೆದರೂ ಸಹ ಅನಂತರ ಅಲ್ಲಿನ ಪ್ರಕೃತಿಯ ಕಠೋರತೆ ಹವಾಮಾನ ಕಾಲ ವೈಪರೀತ್ಯದೊಂದಿಗೆ ಅನುಭವವಾಗಲು ಶುರುವಾಗುತ್ತದೆ. ಇಷ್ಟು ದಿನ ಆಹಾರವಾಗಿದ್ದ ಪ್ರಾಣಿಗಳು ಸಿಗದೇ ಪರದಾಡುತ್ತಾನೆ. ಕ್ರಮೇಣ ಈ ಪ್ರಕೃತಿಯೊಳಗೊಂದಾಗಿ ಬದುಕಲು ತನ್ನ ತಯಾರಿ ಸಾಲದು ಎಂದೆನಿಸಿದಾಗ ಅಲ್ಲಿಂದ ಹಿಂದಿರುಗಿ ಬರುವ ಪ್ರಯತ್ನಕ್ಕೆ ತುಂಬಿಹರಿಯುತ್ತಿರುವ ನದಿ ಅಡ್ಡಲಾಗಿ ಅನಿವಾರ್ಯವಾಗಿ ಅಲ್ಲೇ ಉಳಿಯಬೇಕಾಗುತ್ತದೆ. ಹಣವಿದ್ದಾಗ ಎಲ್ಲವೂ ಸುಲಭ ನಿಜ, ಆದರೆ ತನ್ನ ಜೀವನದ ಅತ್ಯಂತ ರೋಮಾಂಚನದ ಕ್ಷಣಗಳು ದೊರೆತಿದ್ದು ಒಂದೇ ಒಂದು ಪೈಸೆಯೂ ಇಲ್ಲದ ಸಮಯದಲ್ಲಿ ಎನ್ನುವ ನಂಬಿಕೆಯ ಆತನಿಗೆ ಮನುಷ್ಯ ಪ್ರಕೃತಿಯನ್ನು ಪ್ರೀತಿಸುವಷ್ಟೇ ಅದರ ಬಗ್ಗೆ ಹೆದರಿಕೆಯನ್ನೂ ಕೂಡ ಇಟ್ಟುಕೊಳ್ಳಬೇಕು ಎನ್ನುವುದು ಅರಿವಾಗುವಾಗ ತೀರ ತಡವಾಗಿರುತ್ತದೆ. ಆಹಾರ ಸಿಗದೇ ಇರುವ ಸ್ಥಿತಿ ಬಂದಾಗ ತಾನು ಕೊಂಡುಹೋಗಿದ್ದ ಪುಸ್ತಕಗಳ ಸಹಾಯದಿಂದ ತಿನ್ನುವಂತಹ ಗಿಡಗೆಡ್ಡೆಗಳ ಹುಡುಕಾಟದಲ್ಲಿ ತೊಡಗಿ ಎಡವಿ ವಿಷಕಾರಿ ಸಸ್ಯವೊಂದನ್ನು ತಿಂದು ಜೀರ್ಣಶಕ್ತಿ ನಾಶವಾಗುತ್ತದೆ. ಆತನ ಕೊನೆದಿನಗಳು, ಅವನು ಪಡುವ ಪಾಡು ಪ್ರಕೃತಿಯ ಶಕ್ತಿಗೆ ಸಾಕ್ಷಿಯಾಗುತ್ತವೆ. ನಿಜವಾದ ಸಂತೋಷ ಎಂಬುದು ಸಿಗುವುದು ಅದನ್ನು ಹಂಚಿಕೊಂಡಾಗ ಮಾತ್ರ ಎಂಬ ಷರಾವನ್ನು ಬರೆದು ತಾನೇ ಬಯಸಿ ತಂದುಕೊಂಡಿದ್ದ ಏಕಾಂತ ಜೀವನದಿಂದ ಸಾವಿನ ಮೂಲಕ ಮುಕ್ತಿ ಹೊಂದುತ್ತಾನೆ. ಅಲ್ಲಿಯವರೆಗಿನ ತನ್ನ ಅಲೆದಾಟದ ಪ್ರತಿ ದಿನವನ್ನೂ ಡೈರಿಯಲ್ಲಿ ದಾಖಲಿಸಿಟ್ಟಿರುತ್ತಾನೆ.

ಇನ್ ಟು ದಿ ವೈಲ್ಡ್ (In to the Wild)- ೨೦೦೭ ರ ಈ ಇಂಗ್ಲೀಷ್ ಸಿನೆಮಾ ಕ್ರಿಸ್ಟೋಫರ್ ಮೆಕ್ಯಾಂಡ್ಲೆಸ್ ಎಂಬ ಹುಡುಗನ ನಿಜ ಜೀವನದ ಕಥೆಯನ್ನೊಳಗೊಂಡ ಜಾನ್ ಕ್ರಾಕೋರ್ ಎಂಬುವರಿಂದ ಬರೆಯಲ್ಪಟ್ಟ ಅದೇ ಹೆಸರಿನ ಪುಸ್ತಕದ ಮೇಲೆ ಆಧರಿತವಾಗಿದೆ.  ಶಾನ್ ಪೆನ್ (Sean Penn) ನಿರ್ದೇಶನದ ಈ ಸಿನೆಮಾದಲ್ಲಿ ಅಲೆಗ್ಸಾಂಡರ್ ಸುಪರ್ ಟ್ರ್ಯಾಂಪ್ ಹೆಸರಿನ ಮುಖ್ಯ ಪಾತ್ರದಲ್ಲಿ ಎಮಿಲೆ ಹರ್ಷ್ (Emile Hirsch) ನಟಿಸಿದ್ದಾನೆ. ಸಿನೆಮಾದಲ್ಲಿ ಕೆಲವು ಸ್ವಗತಗಳು, ಮಾತುಗಳು ಸ್ವಲ್ಪ ಕಾವ್ಯಮಯವಾಗಿದ್ದು ಪ್ರತಿಯೊಂದು ಭಾಗವೂ, ದೃಶ್ಯವೂ ಸುಂದರವಾಗಿ ನಿರೂಪಿಸಲ್ಪಟ್ಟಿವೆ. ನಿಸರ್ಗವನ್ನು ತೆರೆಯಲ್ಲಿ ತೋರಿಸಿರುವ ಪರಿ ಮತ್ತು ಅರ್ಥಪೂರ್ಣ ಸಂಭಾಷಣೆಗಳು ಇಷ್ಟವಾಗುತ್ತವೆ. ಮನುಷ್ಯನ ಜೀವನ, ಸಂಬಂಧಗಳು, ಸ್ವಾತಂತ್ರ್ಯ, ವೈರಾಗ್ಯ ಮತ್ತು ಪ್ರಕೃತಿಯನ್ನು ಜೋಡಿಸುವ ಸೇತುವೆಯೆನಿಸುತ್ತದೆ. ಸಿನೆಮಾ ಮುಗಿದಾದ ಮೇಲೆ ಸ್ವಲ್ಪ ಹೊತ್ತು ಮೌನ, ಒಂದು ಏಕಾಂತತೆ ಬೇಕೆನಿಸುವುದು ಸಿನೆಮಾ ನಮ್ಮನ್ನು ತಾಗುವುದರ ಪರಿಣಾಮವಿರಬಹುದು.

********

ಸಿನೆಮಾದ ಇಡೀ ಕಥೆಯನ್ನೇ ಹೇಳಿಬಿಟ್ಟಿದ್ದೇನೆ ಎಂದುಕೊಳ್ಳಬೇಡಿ. ಇಂತಹ ಸಿನೆಮಾಗಳಲ್ಲಿ ಕಥೆ, ಕೈಮಾಕ್ಸ್ , ಇನ್ನಿತರ ಸಂಗತಿಗಳು ಗೌಣ. ಇದು ಒಂಥರಾ Concept ಸಿನೆಮಾ. Presentation ಮುಖ್ಯ. ನಂಗಂತೂ ಬೇಜಾನ್ ಇಷ್ಟ ಆಯ್ತು , ನಿಮಗೂ ಆಗಬಹುದೇನೋ ನೋಡಿ. (೧೨ಜುಲೈ೦೯ ಕನ್ನಡಪ್ರಭದ ಸಾಪ್ತಾಹಿಕ ಪ್ರಭದಲ್ಲಿ ಈ ಬರಹ ಸಂಕ್ಷಿಪ್ತ ರೂಪದಲ್ಲಿ ಪ್ರಕಟವಾಗಿದೆ)

9 ಕಾಮೆಂಟ್‌ಗಳು:

sunaath ಹೇಳಿದರು...

ಉತ್ತಮ ಸಿನೆಮಾದ ಬಗೆಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು.
ಓರ್ವ ತರುಣ ನಿಜಜೀವನವನ್ನು ಈ ರೀತಿ ಕಳೆದ ಎನ್ನುವದು ರೋಮಾಂಚನಗೊಳಿಸುತ್ತದೆ.

ರಾಜೀವ ಹೇಳಿದರು...

ನಿಮ್ಮ ಈ ಬ್ಲಾಗ್ ನೋಡಿ, ನನಗೆ ಇನ್ನೆರಡು ಸಿನೆಮಾಗಳು ನೆನಪಾದವು. "ಫಾರಸ್ಟ್ ಗಂಪ್" ಮತ್ತು "ವೊರ್ಲ್ದ್ಸ್ ಫಾಸ್ಟೆಸ್ಟ್ ಇಂಡಿಯನ್". ಸಮಯ ಸಿಕ್ಕಿದಾಗ ಇದನ್ನು ಕೂಡ ನೋಡುವೆ. ಥ್ಯಾಂಕ್ಸ್.

Pramod ಹೇಳಿದರು...

ಶಾನ್ ಪೆನ್ ಮೂವಿ ಕೂಡ ಡೈರೆಕ್ಟ್ ಮಾಡಿದ್ದಾನೆ ಅನ್ನೋದು ನಿಮ್ಮಿ೦ದಲೇ ಗೊತ್ತಾಗಿದ್ದು :) ನೋಡೇ ಬಿಡೋಣ ಫ್ರೀ ಇದ್ದಾಗ!

ವಿ.ರಾ.ಹೆ. ಹೇಳಿದರು...

ಸುನಾಥ್ ಕಾಕಾ, ಹೌದು ರೋಮಾಂಚನ, ಸಿನೆಮಾ ನೋಡಿ ಆದ್ರೆ.

ರಾಜೀವ, ಥ್ಯಾಂಕ್ಸ್

ಪ್ರಮೋದ್, ಓಹ್! ಆತ ಇನ್ನೂ ಏನು ಮಾಡಿದ್ದಾನೆ ?

ಅನಾಮಧೇಯ ಹೇಳಿದರು...

nodbeku pursottaadaaga e cinema...

shivu ಹೇಳಿದರು...

ಆಸಕ್ತಿಕರವಾಗಿದೆ.. ಬಿಡುವು ಮಾಡಿಕೊಂಡು ಈ ನೋಡುತ್ತೇನೆ...

Parisarapremi ಹೇಳಿದರು...

bahaLa thanks kaNree... nimm baayge sakre haaka!!

ಸುಪ್ತದೀಪ್ತಿ suptadeepti ಹೇಳಿದರು...

ಇತ್ತೀಚೆಗೆ ನನ್ನ ಗೆಳತಿಯೊಬ್ಬಳು ಈ ಚಿತ್ರದ ಬಗ್ಗೆ ಹೇಳಿದ್ದಳು (ಅವಳಿಗೆ ಈ ಪೊಸ್ಟ್ ಲಿಂಕ್ ಕಳಿಸುತ್ತೇನೆ). ಈಗ ಇಲ್ಲಿಯೂ ಓದಿದ ಮೇಲೆ ನೋಡಲೇಬೇಕೆನ್ನಿಸಿದೆ. ಥ್ಯಾಂಕ್ಸ್ ವಿಕ್ಕಿ.

ಅನಾಮಧೇಯ ಹೇಳಿದರು...

Awesome movie...no words 2 xplain..watch & feel it...