ಪುಟಗಳು

ಗುರುವಾರ, ಡಿಸೆಂಬರ್ 24, 2009

ಇದು ದೇಶಭಕ್ತಿಯ ಚಾದರದೊಳಗಿನ ಹಾದರವಲ್ಲ

ಕೆಲದಿನಗಳ ಹಿಂದೆ ವಿನಾಯಕ ಕೋಡ್ಸರ ಅವರು ತಮ್ಮ ಬ್ಲಾಗಿನಲ್ಲಿ ಈ ಲವ್ ಜಿಹಾದ್, ಮತಾಂತರ ಮುಂತಾದ ವಿಷಯಗಳು ಕೆಲ ಬ್ಲಾಗಿಗರಿಗೂ ಹೇಗೆ ತಮ್ಮ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ, ತಮ್ಮ ಸೋಗಲಾಡಿ ಜಾತ್ಯತೀತತೆ ತೋರಿಸಿಕೊಳ್ಳುವ ಅಂಶಗಳಾಗಿವೆ ಎಂದು ಬರೆಯುತ್ತಾ ಆಜಾದಿ ಬಚಾವೋ ಎಂಬ ಆಂದೋಲನದ ಬಗ್ಗೆ ಪ್ರಸ್ತಾಪಿಸಿ ಅದು ಈಗ ದೇಶದಲ್ಲಿ ಅಕ್ಷರಶಃ ಸತ್ತಿದೆ ಎಂದಿದ್ದರು.

ನಾನು ಪೀಯೂಸಿನಲ್ಲಿದ್ದ ದಿನಗಳು. ಆಜಾದೀ ಬಚಾವೋ ಎಂಬ ಆಂದೋಲನ ಜೋರಾಗಿ ನೆಡೆಯುತ್ತಿತ್ತು. ನನಗೆ ಇದರ ವಿಚಾರಗಳನ್ನು ಮೊದಲು ಪರಿಚಯಿಸಿದ್ದು ’ಹಾಯ್ ಬೆಂಗಳೂರು’ ಪತ್ರಿಕೆ. ಅದರಲ್ಲಿ ಒಂದು ಅಂಕಣ ಬರುತ್ತಿತ್ತು. ರಾಜೀವ ದೀಕ್ಷಿತ ಎಂಬ ಮನುಷ್ಯ ದೇಶದೆಲ್ಲೆಡೆ ತಿರುಗುತ್ತಿದ್ದರು. ಹೋದಲ್ಲೆಲ್ಲಾ ದೇಶಪ್ರೇಮದ ಸಂಚಲನ ಮೂಡಿಸುತ್ತಿದ್ದರು. ಈಗಿನ ಪ್ರಧಾನಿ ಆಗಿನ ವಿತ್ತಮಂತ್ರಿ ಮನಮೋಹನ ಸಿಂಗರನ್ನು ಉದಾರೀಕರಣದ ವಿಷಯವಾಗಿ ಕೆಡವಿಕೊಳ್ಳುತ್ತಿದ್ದರು. ಭಾರತವೆಂಬ ದೇಶಕ್ಕೆ ಸ್ವಾಂತಂತ್ರ್ಯ ಎಂಬುದು ಬಂದು ಅರ್ಧ ಶತಮಾನವಾಗಿ ಈಗ ಮತ್ತೆ ವಿದೇಶಿ ವ್ಯಾಪಾರಿ ಕಂಪನಿಗಳಿಂದ ಹೇಗೆ ಬೇರೆ ದೇಶಗಳ ಅದರಲ್ಲೂ ಮುಖ್ಯವಾಗಿ ಅಮೆರಿಕಾದ ಹಿಡಿತದಲ್ಲೇ ಇದ್ದೇವೆ ಎಂಬುದನ್ನು ನಿರೂಪಿಸುತ್ತಿದ್ದರು. ಹನ್ನೆರಡು ರೂಪಾಯಿ ಕೊಟ್ಟು ಆ ಕೆಟ್ಟ ಪೆಪ್ಸಿ ಕುಡಿದು ನಿಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವುದಲ್ಲದೇ ಲಾಭವೆಲ್ಲಾ ಅಮೆರಿಕಾಗೆ ಹೋಗುವಂತೆ ಯಾಕ್ರೀ ಮಾಡ್ತೀರಾ, ಕುಡಿಯುವುದಾದರೆ ಐದೇ ರೂಪಾಯಿ ಕೊಟ್ಟು ಎಳ್ನೀರು ಕುಡಿಯಿರಿ, ಹಣ್ಣಿನ ರಸ ಕುಡಿಯಿರಿ, ಆರೋಗ್ಯಕ್ಕೂ ಒಳ್ಳೆಯದೂ, ನಮ್ಮ ರೈತನಿಗೂ ಒಳ್ಳೆಯದು, ದೇಶಕ್ಕೂ ಒಳ್ಳೆಯದು ಎನ್ನುತ್ತಿದ್ದರು. ಎಂ.ಎನ್.ಸಿ.ಗಳ ಬಂಡವಾಳ ಬಿಚ್ಚಿಡುತ್ತಿದ್ದರು. ಅವರು ಭಾರತದ ಇತಿಹಾಸ, ವೈಭವಗಳ ಸತ್ಯಾಸತ್ಯತೆಗಳನ್ನು ಅಂಕಿಅಂಶಗಳ ಸಮೇತ ವಿವರಿಸುತ್ತಿದ್ದರೆ ಕೇಳಿದವರ ರಕ್ತ ಬಿಸಿಯಾಗುತ್ತಿತ್ತು.

ರಾಜೀವ ದೀಕ್ಷಿತರು ಅದ್ಭುತ ಮಾತುಗಾರರು. ನಮ್ಮಲ್ಲಿ ಚಕ್ರವರ್ತಿ ಸೂಲಿಬೆಲೆ ಯವರ ಮಾತುಗಳನ್ನು ಕೇಳಿರಬಹುದು. ಅವರು ಮಾತಾಡುತ್ತಿದ್ದರೆ ಅದನ್ನು ಕೇಳಿದ ಎಂತಹ ನರಸತ್ತವನಲ್ಲೂ ದೇಶಭಕ್ತಿ, ಧರ್ಮಜಾಗೃತಿ ಪುಟಿಯಲಾರಂಭಿಸುತ್ತದೆ. ಈ ರಾಜೀವ ದೀಕ್ಷಿತರೂ ಹಾಗೆಯೇ. ಅವರ ಮಾತು ಕೇಳಿದ ಯಾರಲ್ಲೇ ಆದರೂ ದೇಶಪ್ರೇಮ ಹೆಚ್ಚಾಗುತ್ತಿತ್ತು. ಪುಗ್ಸಟ್ಟೆ ಭಾವನಾತ್ಮಕವಾಗಿ ಮಾತನಾಡದೇ ಎಲ್ಲವನ್ನೂ ದಾಖಲೆಗಳ ಸಮೇತ ವಿವರಿಸುತ್ತಿದ್ದ ಆತನ ಮಾತಿನ ಮೋಡಿಗೆ ಒಳಗಾದ, ವಿಚಾರಗಳನ್ನು ಒಪ್ಪಿಕೊಂಡ ಲಕ್ಷಾಂತರ ಜನರಲ್ಲಿ ನಾನೂ ಒಬ್ಬನಾಗಿದ್ದೆ. ಅಷ್ಟಕ್ಕೂ ಆ ಆಂದೋಲನದ ಬಹಳ ಸರಳವಾಗಿತ್ತು. ಯಾರನ್ನೂ ಹೊಡಿ ಬಡಿ ಕಡಿ ಸುಡು ಅನ್ನುವುದಾಗಿರಲಿಲ್ಲ. ಉದಾರೀಕರಣ, ಜಾಗತೀಕರಣದ ಹೆಸರಿನಲ್ಲಿ ನಮ್ಮ ದೇಶಕ್ಕೆ ಬಂದ ಕಂಪನಿಗಳು ಲೂಟಿ ಮಾಡುತ್ತಿರುವ ಪರಿಯನ್ನು ವಿವರಿಸಿ ಅದಕ್ಕೆ ಕಡಿವಾಣ ಹಾಕುವಂತೆ ಪ್ರೇರೇಪಿಸುತ್ತಿದ್ದರು. ನಮ್ಮದೇ ಸಂಪನ್ಮೂಲ, ನಮ್ಮದೇ ಜನ, ನಮ್ಮದೇ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಕೊನೆಗೇ ನಮ್ಮಿಂದಲೇ ಲಾಭವನ್ನು ತೆಗೆದು ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗುವ ಆ ಮೂಲಕ ಈ ದೇಶದ ಆರ್ಥಿಕತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ ಕಂಪನಿಗಳ ವಿರುದ್ಧ ಜನರನ್ನು ಸಂಘಟಿಸುತ್ತಿದ್ದರು. ಹೈ ಟೆಕ್ನಾಲಜಿ ಹೆಸರಿನಲ್ಲಿ ಇಲ್ಲಿ ಬಂದು ಉಪ್ಪು, ಚಿಪ್ಸು, ಸಾಫ್ಟ್ ಡ್ರಿಂಕ್ಸ್ ಮುಂತಾದ ಜೀರೋ ಟೆಕ್ನಾಲಜಿ ವಸ್ತುಗಳನ್ನು ದುಬಾರಿ ಬೆಲೆಯಲ್ಲಿ ನಮಗೇ ಮಾರಿ, ಲಾಭವನ್ನು ತಮ್ಮ ದೇಶಕ್ಕೆ ತಲುಪಿಸಿ ನಮ್ಮನ್ನು ಮಂಗ ಮಾಡುತ್ತಿವೆ ಈ ಕಂಪನಿಗಳು, ಆದ್ದರಿಂದ ನಮ್ಮ ಭಾರತೀಯ ಕಂಪನಿಗಳ, ಭಾರತೀಯ ಪ್ರಾಡಕ್ಟುಗಳನ್ನೇ ಬಳಸಿ, ನಮ್ಮ ಸಂಪತ್ತು ನಮ್ಮಲೇ ಉಳಿಯುವಂತೆ ಮಾಡಿ ಎನ್ನುತ್ತಿದ್ದರು. ಎಂ.ಎನ್.ಸಿ.ಗಳ ದುಡ್ಡಿನ ಆರ್ಭಟಕ್ಕೆ, ಕುತಂತ್ರಗಳಿಗೆ ನಮ್ಮ ದೇಶದ ಕಂಪನಿಗಳು, ರೈತರು, ಸಂಸ್ಕೃತಿ ಮುಂತಾದವು ಸದ್ದಿಲ್ಲದೇ ಮುಗಿದುಹೋಗುತ್ತಿವೆ ಎನ್ನುತ್ತಾ ಭಾರತೀಯ ಕಂಪನಿಗಳ ಪಟ್ಟಿಯನ್ನು ಹಂಚುತ್ತಿದ್ದರು.

ಮನೆಯಲ್ಲಿ ಆ ಪಟ್ಟಿಯನ್ನು ನನ್ನ ಕೋಣೆಯ ಗೋಡೆಗೆ ಅಂಟಿಸಿಕೊಂಡಿದ್ದೆ. ಅಪ್ಪನಿಗೂ ಇವೇ ಕಂಪನಿಯ ಸಾಮಾನು ತೆಗೆದುಕೊಂಡು ಬಾ ಎಂದು ತಾಕೀತು ಮಾಡುತ್ತಿದ್ದೆ. ನಾನು ಹಾಸನದಲ್ಲಿ ಎಂಜಿನಿಯರಿಂಗ್ ಓದುತ್ತಿರುವಾಗ ಅವರ ಭಾಷಣ ಕೇಳಿ ಸ್ವಯಂಪ್ರೇರಿತನಾಗಿ ಭಾಷಣದ ಪ್ರತಿಗಳನ್ನು, ಭಾರತೀಯ ಕಂಪನಿಗಳ, ಪ್ರಾಡಕ್ಟುಗಳ ಪಟ್ಟಿಯನ್ನು ಫೋಟೋಕಾಪಿ ಮಾಡಿಸಿ ಮನೆಗಳಿಗೆ, ಶಾಲೆಗಳಿಗೆ ಹಂಚಿದ್ದು ನೆನಪಿದೆ. ಹಾಸ್ಟೆಲ್ಲಿನಲ್ಲೂ ಈ ಬಗ್ಗೆ ಬಹಳ ಚರ್ಚೆಗಳಾಗಿ ಬಹಳಷ್ಟು ಹುಡುಗರು ಸ್ವದೇಶಿ ವಸ್ತುಗಳನ್ನೇ ಬಳಸಲು ತೀರ್ಮಾನ ತೆಗೆದುಕೊಂಡಿದ್ದೆವು. ಇದೆಲ್ಲುದರ ಪರಿಣಾಮವೇ ಏನೋ ಅಥವಾ ನನಗಿಷ್ಟವಿಲ್ಲದಿರುವುದರಿಂದವೇನೋ, ನನಗೆ ಇವತ್ತಿಗೂ ಪೆಪ್ಸಿ ಮುಂತಾದ ಸಾಫ್ಟ್ ಡ್ರಿಂಕ್ ಗಳನ್ನು ಕುಡಿಯಲು ಮನಸ್ಸು ಬರುವುದಿಲ್ಲ. ಇವತ್ತಿಗೂ ಸಾಮಾನುಗಳನ್ನು ಕೊಳ್ಳುವಾಗ ಗುಣಮಟ್ಟ, ಬೆಲೆ ಜೊತೆಗೆ ಅದನ್ನು ತಯಾರು ಮಾಡಿದ ಕಂಪನಿಯನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತೇನೆ. ಅಪೇಕ್ಷೆಗೆ ತಕ್ಕನಾದ್ದು ಸಿಗದಿದ್ದರೆ ಬೇರೆ ಮಾತು.

ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಈ ಜಾಗತೀಕರಣಕ್ಕೆ ನಾವೆಷ್ಟು ಸಿಲುಕಿಕೊಂಡಿದ್ದೇವೆಂದರೆ ಅದರ ವಿರುದ್ಧ ಮಾತನಾಡುವುದೇ ಹಾಸ್ಯಾಸ್ಪದವಾಗಿಬಿಡುತ್ತದೆ. ಆವತ್ತು ಹಾಸ್ಟೆಲ್ ಹತ್ತಿರದ ನಮ್ಮ ರೆಗ್ಯುಲರ್ ಅಂಗಡಿಯ ಉದಯಣ್ಣ "ಏನ್ರೀ, ನಿಮ್ ಹಾಸ್ಟೆಲ್ ಹುಡುಗ್ರು ಈಗ ಬರೀ ಬಬೂಲ್, ಮಿಸ್ವಾಕ್ ಟೂತ್ ಪೇಸ್ಟ್ ಕೇಳ್ತಾರೆ, ಕ್ಯಾಂಪ್ಕೋ ಚಾಕ್ಲೇಟೇ ಕೊಡಿ ಅಂತಾರೆ, ಸದ್ಯ ಐ.ಟಿ.ಸಿ. ಮಾತ್ರ ಬಚಾವಾಗಿದೆ :)" ಅಂದಿದ್ದನ್ನು ಕೇಳಿ ಸಂಭ್ರಮ ಪಟ್ಟಿದ್ದು, ಚಳವಳಿ ಯಶಸ್ವಿಯಾಯಿತೆಂದು ಬೀಗಿದ್ದು ನೆನಪಿಸಿಕೊಂಡರೆ ಈಗ ಪಿಚ್ಚೆನಿಸುತ್ತದೆ. ಇವತ್ತು ವಿದೇಶಿ ಕಂಪನಿಗಳು ನಮಗೆ ಉದ್ಯೋಗ ಕೊಟ್ಟು, ಸಂಬಳ ಕೊಟ್ಟು ಅದರ ಹತ್ತು ಪಟ್ಟು ಲಾಭ ತೆಗೆದುಕೊಂಡು ಹೋಗುತ್ತಿವೆ ಎಂದು ನಮಗೆ ಗೊತ್ತು. ( ಇಲ್ಲಿ software, I.T ಬಗ್ಗೆ ಹೇಳುತ್ತಿಲ್ಲ). ಆದರೆ ನಾವು ಏನೂ ಮಾಡುವ ಸ್ಥಿತಿಯಲ್ಲಿಲ್ಲ. MNCಗಳನ್ನು ಓಡಿಸಿ ಎಂದರೆ ನಮ್ಮ ಅನ್ನಕ್ಕೇ ನಾವು ಕಲ್ಲು ಹಾಕಿಕೊಂಡಂತೆ. ಹಾಗಲ್ಲ ಹೀಗೆ ಅಂತ ಈಗ ಏನೋ ಹೇಳಲು ಹೋದರೆ "ನಿಮ್ಮ ಭಾವಮೈದ ಅಮೆರಿಕಾದಲ್ಲಿಲ್ವಾ, ನೀವು ಉಪಯೋಗಿಸುವ ಜೀಮೇಲ್ , ಯಾಹೂ ಮೇಲ್ ಎಲ್ಲಾ ಅಮೆರಿಕಾದ್ದಲ್ವಾ" ಅಂತ ಕೆಲವರು ಬಾಲಿಶವಾಗಿ ಕೇಳಿಬಿಡುತ್ತಾರೆ. ಸ್ವಾಮೀ, ಆಗಂತುಕನನ್ನು ಮನೆಯ ವರಾಂಡದೊಳಗೆ ಕೂರಿಸುವುದಕ್ಕೂ, ಬೆಡ್ ರೂಮಿಗೆ ಕರೆದೊಯ್ಯುವುದಕ್ಕೂ ವ್ಯತ್ಯಾಸ ಗೊತ್ತಾ ನಿಮಗೆ, ಕಂಪ್ಯೂಟರ್ ಕೊಟ್ಟಿದ್ದಾರೆ ಅಂತ ಉಪ್ಪನ್ನೂ ತೆಗೆದುಕೊಳ್ಳಬೇಕಾ? ಅಂತ ಕೇಳೋಣವೆನಿಸುತ್ತದೆ. ಜಾಗತೀಕರಣದ ಬಗ್ಗೆ ಕಥೆ-ವ್ಯಥೆ ಬರೆದು ಬಹುಮಾನ ಗಿಟ್ಟಿಸಿಕೊಂಡವರು ಅದರಲ್ಲಿ ತಮ್ಮ ಪಾತ್ರವೇನು ಎಂಬುದನ್ನು ಚಪ್ಪಾಳೆ ಸದ್ದಿನ ಅನಂತರವಾದರೂ ವಿಮರ್ಶಿಸಿಕೊಂಡಿದ್ದಾರಾ ಗೊತ್ತಿಲ್ಲ.

ಈ ದೇಶದಲ್ಲಿ ಕ್ರಾಂತಿಯಾಗಲು ಸಾಧ್ಯವೇ ಇಲ್ಲ. ಅಂತೆಯೇ ರಾಜೀವ ದೀಕ್ಷಿತರ ಚಳುವಳಿಯು ಮುಂದುವರೆಯಲಿಲ್ಲ. ಇವತ್ತು ರಾಜೀವ ದೀಕ್ಷಿತರು ಎಲ್ಲಿ ಹೋದರು ಎಂಬ ಸುಳಿವೂ ಬಹುತೇಕರಿಗೆ ಇಲ್ಲ. ಅವರು ಭ್ರಮನಿರಸನಗೊಂಡು ಚಳುವಳಿ ಕೈಬಿಟ್ಟರು ಅಂತ ಕೆಲವರೆನ್ನುತ್ತಾರೆ, ಸರ್ಕಾರವೇ ಆತನನ್ನು ಹತ್ತಿಕ್ಕಿತು ಅನ್ನುತ್ತಾರೆ, ಅಮೆರಿಕಾದ MNCಗಳಿಂದ ದೂರು ಹೋಗಿ FBI ನಿಂದ ಬೆದರಿಕೆಗೊಳಗಾದರು ಅನ್ನುತ್ತಾರೆ, ಜೊತೆಗೆ ಇನ್ನೂ ಕೆಲವು ನೆಗೆಟಿವ್ ಆರೋಪಗಳೂ ಇದೆ. ಅದೇನೇ ಇರಲಿ. ಸ್ವದೇಶಿ ಚಳುವಳಿಯ ಬಗ್ಗೆ, ಆ ವಿಚಾರಗಳ ಬಗ್ಗೆ ’ಆಜಾದಿ’ ಎಂಬ ಪುಸ್ತಕವೊಂದು ಭಾವನಾ ಪ್ರಕಾಶನದಿಂದ ಪ್ರಕಟಗೊಂಡಿದೆ. ಆ ಪುಸ್ತಕದ ಮುನ್ನುಡಿಯಲ್ಲಿ ರವಿ ಬೆಳಗೆರೆ ಹೇಳಿರುವಂತೆ ಹೇಳುವುದಾದರೆ, "ಎಲ್ಲಾ ಚಳುವಳಿಗಳೂ ಯಶಸ್ವಿಯಾಗಲಿಕ್ಕಿಲ್ಲ, ಎಲ್ಲಾ ನೇತಾರರೂ ಮಹಾತ್ಮಾ ಗಾಂಧಿಗಳಾಗಲಿಕ್ಕಿಲ್ಲ. ಆದರೆ ಪ್ರತೀ ಚಳುವಳಿಯೂ ಭಾರತವನ್ನು ಪ್ರಗತಿಯತ್ತ ಒಂದು ಹೆಜ್ಜೆಯಿಡುವಂತೆ ಮಾಡುತ್ತದೆ. ಅಷ್ಟರ ಮಟ್ಟಿಗಿನ ಸಾರ್ಥಕತೆ ಈ ಚಳುವಳಿಗೆ ಸಿಕ್ಕಿದೆ". ಆದ್ದರಿಂದ ನಾನು ಹೇಳುವುದಿಷ್ಟೆ, ಆ ಚಳುವಳಿ ಸಂಘಟನಾತ್ಮಕ ನೆಲೆಯಲ್ಲಿ ಸತ್ತಿರಬಹುದು, ಅದರ ರೂವಾರಿ ಈಗಿಲ್ಲದಿರಬಹುದು. ಆದರೆ ಲಕ್ಷಾಂತರ ಜನರಲ್ಲಿ ವೈಯಕ್ತಿಕ ನೆಲೆಯಲ್ಲಿ ಸ್ವದೇಶೀ ಚಳುವಳಿ ಇನ್ನೂ ಬದುಕಿದೆ. ಇದು ದೇಶಭಕ್ತಿಯ ಚಾದರದೊಳಗಿನ ಹಾದರವಲ್ಲ.

ಬುಧವಾರ, ಡಿಸೆಂಬರ್ 9, 2009

ಮಾಯಾಪುಟ್ಟಿ ಮತ್ತು ಬ್ಯಾರ್ರಿಮರಿ

ಕೆಲದಿನಗಳ ಹಿಂದೆ ಒಂದು ಕಾರ್ಟೂನ್ ನೋಡಿದ್ದೆ. "Maya, the bee". ಅದೊಂದು ಜೇನ್ನೊಣಗಳ ಪುಟ್ಟ ಸಾಮ್ರಾಜ್ಯ. ಅಲ್ಲೊಂದು ’ಮಾಯಾ’ ಎನ್ನುವ ಹೆಣ್ಣುಮಗು (ಜೇನ್ನೊಣದಮರಿ ಅನ್ನಬಹುದಾ? ) . ಅಸಾಧ್ಯ ತರಲೆ. ಎಲ್ಲದರಲ್ಲೂ ಕುತೂಹಲ. ಪ್ರಶ್ನೆಗಳನ್ನು ಕೇಳಿ ಕೇಳೀ ಎಲ್ಲರ ತಲೆಕೆಡಿಸುವ ಚತುರೆ. ನಾನು ಹೇಗೆ ಹುಟ್ಟಿದೆ, ನಾವೇಕೆ ಹೀಗೆ ಎನ್ನುವುದರಿಂದ ಹಿಡಿದು ಹೊರಗಿನ ಜಗತ್ತಿನಲ್ಲಿ ಏನಿದೆ ಎಂದು ತಿಳಿದುಕೊಳ್ಳುವ, ತಾನೂ ಹೊರಗೆ ಹೋಗಿ ಸುತ್ತಬೇಕೆಂಬ ಹಂಬಲಿ. ತಮ್ಮ ಗೂಡಿನ ಎಲ್ಲಾ ಚಟುವಟಿಕೆಗಳನ್ನು, ಗೂಡಿನಲ್ಲಿ ಹುಟ್ಟುವ ತಂಗಿ ತಮ್ಮಂದಿರನ್ನು ಬೆರಗುಗಣ್ಣಿನಿಂದ ನೋಡುವುದು, ದಿನಾ ಟೀಚರು ಪಾಠ ಮಾಡುವಾಗ ಕಿಟಕಿಯಿಂದ ಹೊರಗೆ ನೋಡುತ್ತಾ ಕನಸು ಕಾಣುತ್ತಾ ಕೂರುವುದು ಅದರ ಅಭ್ಯಾಸ. ಗೂಡಿನಿಂದ ಹೊರಗೆ ಹೋದರೆ ನಮಗೆ ಅಪಾಯ ತಪ್ಪಿದ್ದಲ್ಲ ಎಂದು ಪದೇ ಪದೇ ದೊಡ್ಡ ಜೇನುಗಳೂ ಎಚ್ಚರ ಕೊಡುತ್ತಿದರೂ ಸಹ ಒಂದು ದಿನ ಬಿರುಗಾಳಿಯಿಂದ ಮಾಯಾ ಗೂಡಿನ ಹೊರಗೆ ಬಿದ್ದುಬಿಡುತ್ತದೆ. ಅಲ್ಲಿ ಅದು ನಿಜವಾದ ಜಗತ್ತನ್ನು ಕಾಣುತ್ತಾ ಹೋಗುತ್ತದೆ. ತನ್ನ ಗೆಳೆಯರೊಂದಿಗೆ ಏನೇನೋ ಸಾಹಸಗಳನ್ನು ಮಾಡುತ್ತದೆ. ಜೇನ್ನೊಣಗಳ ಶತ್ರುಗಳಾದ ಕಣಜಗಳ ಕೈಗೆ ಸಿಕ್ಕುಬೀಳುತ್ತದೆ. ಕೊನೆಯಲ್ಲಿ ಅದು ಗೂಡಿಗೆ ಹಿಂದಿರುಗಿ ಒಂದು ಜವಾಬ್ದಾರಿಯುತ ಪ್ರಜೆಯಾಗುತ್ತದೆ. ಆ ಪುಟ್ಟ ಮಾಯಾ, ಅದರ ಬುದ್ಧಿವಂತಿಕೆ, ಅದರ ಮುದ್ದು ಮಾತುಗಳು, ಅದರ ಗೆಳೆಯರಾದ ವಿಲ್ಲಿ ಬೀ ಮತ್ತು ಫ್ಲಿಪ್ ಮಿಡತೆ ಎಲ್ಲವೂ ಚಂದ ಚಂದ. ಇದು Die Biene Maja ಎಂಬ ಜರ್ಮನ್ ಕಾಮಿಕ್ ಪುಸ್ತಕ ಸರಣಿಯ ಬಹಳ ಹಳೆಯ ಟೀವಿ ಅವತರಣಿಕೆಯಂತೆ. ***

ಹಾಗೆ ಎರಡ್ಮೂರು ವಾರಗಳ ಕೆಳಗೆ HBO ನಲ್ಲಿ ಒಂದು ಇದೇ ರೀತಿಯ ಅನಿಮೇಷನ್ ಮೂವಿ ಒಂದು ಬಂದಿತ್ತು. Bee Movie ಅಂತ ಅದರ ಹೆಸರು. ಸಾಮಾನ್ಯವಾಗಿ ನಾನು ಅನಿಮೇಷನ್ ಮೂವಿಗಳು ತೀರ ಗೊಂಬೆ ಗೊಂಬೆ ಆಟದ ತರ ಇದ್ದರೆ ನೋಡಲು ಹೋಗುವುದಿಲ್ಲ. ಆದರೆ ಅವತ್ತು ಈ ಬೀ ಮೂವಿ ನನ್ನನ್ನು ಹಿಡಿದಿಟ್ಟಿತ್ತು. ಅದರಲ್ಲಿ Barry ಎನ್ನುವ ಪುಟ್ಟದೊಂದು ಜೇನು. ಬೀ ಕಾಲೇಜಿನಲ್ಲಿ ಓದಿದ ನಂತರ ಅದನ್ನು ಜೇನು ತಯಾರಿಸುವ ಕೆಲಸಕ್ಕೆ ಹಚ್ಚಲಾಗುತ್ತದೆ. ಅಲ್ಲಿ ಒಂದೊಂದು ಕೆಲಸಗಳೂ ಇಂತಿಂತವರೇ ಮಾಡಬೇಕು ಎಂದು ಹಂಚಲ್ಪಟ್ಟಿರುತ್ತದೆ. ಹೊರಗೆ ಹೋಗಿ ಹೂವಿನಿಂದ ಮಕರಂದ ಸಂಗ್ರಹಿಸಿಕೊಂಡು ಬರುವ ಕೆಲಸ ಕೆಲಸಗಾರ ಜೇನುಗಳದ್ದಾಗಿರುತ್ತದೆ. ಅಲ್ಲಿ ಅದರ ತಲೆಯಲ್ಲಿ ಒಂದೇ ಕೊರೆತ. ನಾನು ಜೀವನವಿಡೀ ಹೀಗೇ ಇರಬೇಕಾ? ಇದೇ ಕೆಲಸ ಮಾಡಬೇಕಾ? ತಾನೂ ಹೊರಗೆ ಹೋಗಬೇಕು, ಎಲ್ಲಾ ನೋಡಬೇಕು ಎಂದು. ಇದೇ ಆಸೆಯೊಂದಿಗೆ ಅವಕಾಶ ಮಾಡಿಕೊಂಡು ಹೊರಗೆ ಬರುತ್ತದೆ. ನಗರದಲ್ಲಿ ಕಷ್ಟಕ್ಕೆ ಸಿಕ್ಕಿ ಪರದಾಡುತ್ತದೆ. ಮನುಷ್ಯರೆಲ್ಲರೂ ಕೂಡ ತನ್ನನ್ನು ಹೊಡೆಯಲು ಬರುವುದನ್ನು ನೋಡಿ ಗಾಬರಿಯಾಗುತ್ತದೆ. ಒಂದೇ ಹೊಡೆತಕ್ಕೆ ಪಡ್ಚ ಆಗಿಹೋಗಬೇಕಾಗಿದ್ದ ಬ್ಯಾರಿಯನ್ನು ಒಂದು ಹುಡುಗಿ ಕಾಪಾಡುತ್ತಾಳೆ. ಇದು ಅವಳ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುತ್ತದೆ. ಮುಂದೆ ಅದಕ್ಕೆ ಮನುಷ್ಯ ತಮ್ಮನ್ನು ಓಡಿಸಿ ತಾವು ತಯಾರು ಮಾಡುವ ಜೇನನ್ನೆಲ್ಲಾ ದೋಚಿಕೊಳ್ಳುತ್ತಾನೆ ಎಂದು ತಿಳಿಯುತ್ತದೆ.. ಮನುಷ್ಯರಿಗೆ ಪಾಠ ಕಲಿಸಲು ತೀರ್ಮಾನಿಸುತ್ತದೆ. ಹೀಗೇ ಮುಂದುವರೆಯುತ್ತಾ ಕತೆಯು ಮನುಷ್ಯ ಮತ್ತು ಜೇನ್ನೊಣಗಳಲ್ಲಿ ಇರುವ ಸಂಬಂಧ ತಿಳಿಸಿಕೊಡುತ್ತದೆ. ಇದು ೨೦೦೭ ರಲ್ಲಿ ತಯಾರಾದ ಸಿನೆಮಾ. ***

ಈ ಕಾರ್ಟೂನ್ ಮತ್ತು ಅನಿಮೇಷನ್ ಮೂವಿಗಳು ಸುಮ್ಮನೇ ಒಂದು time pass fun ಎನ್ನುವಂತಿದ್ದರೂ ಸಹ ಎಷ್ಟು ಚೆನ್ನಾಗಿ ನಿರೂಪಿಸಲ್ಪಟ್ಟಿದೆಯೆಂದರೆ ಮನರಂಜನೆಯ ಜೊತೆಗೆ ಜೇನ್ನೊಣಗಳ ಗೂಡು, ಅವುಗಳ ಜೀವನ ವ್ಯವಸ್ಥೆ, ಅವುಗಳ ಕೆಲಸ, ಇನ್ನಿತರ ಚಟುವಟಿಕೆಗಳ ಬಗ್ಗೆ ಪೂರ್ತಿ ಮಾಹಿತಿಯೂ ನಮಗೇ ಗೊತ್ತಿಲ್ಲದಂತೆ ಮನಸ್ಸಿನಲ್ಲಿ ದಾಖಲಾಗಿಬಿಡುತ್ತದೆ. ಅದನ್ನು ನೋಡುವ ಮಕ್ಕಳು(ದೊಡ್ಡವರೂ ಕೂಡ) ಪ್ರಕೃತಿಯ ಬಗ್ಗೆ, ಜೇನುಗಳ ಬಗ್ಗೆ ಒಂದು ಪ್ರೀತಿ ಬೆಳೆಸಿಕೊಳ್ಳುವಂತಿದೆ. ಪ್ರಕೃತಿ, ಪ್ರಾಣಿಗಳ ಬಗ್ಗೆ ಆಸಕ್ತಿ ಬೆಳೆಸುವಂತಹ, ಪ್ರೀತಿ ಕರುಣೆ ಬೆಳೆಸುವಂತಹ, ವಿಷಯಗಳನ್ನು ತಿಳಿಸಿಕೊಡುವಂತಹ ಇಂತಹ ಕಾರ್ಯಕ್ರಮಗಳು ನನಗೆ ಖುಷಿ ಕೊಡುತ್ತವೆ. ಸಾಧ್ಯವಾದರೆ ನೀವೂ ನೋಡಿ. ಮುಂದಿನ ಬಾರಿ ಜೇನೊಂದು ಹಾರಿಬಂದಾಗ ಕೈಗೆ ಸಿಕ್ಕ ವಸ್ತುವಿನಿಂದ ಅದನ್ನು ಹೊಡೆಯಲು ನೋಡದೇ ನಿಮಗೆ ಅದರಲ್ಲೊಂದು ಪುಟ್ಟ ಮಾಯಾ ಕಾಣುವಂತಾದರೆ ಅಥವಾ ನಿಮ್ಮ ಮಕ್ಕಳಿಗೆ ಅದು ತನ್ನ ಗೆಳೆಯ ಬ್ಯಾರಿ ಎನ್ನಿಸುವಂತಾದರೆ ಸಾರ್ಥಕ.

ಶುಕ್ರವಾರ, ಡಿಸೆಂಬರ್ 4, 2009

ಪ್ರೆಸ್ ಕ್ಲಬ್ ಬಾರ್ & ರೆಸ್ಟೋರಂಟ್ ?

ಕನ್ನಡ ಓದುಗರು ಒಂದಲ್ಲಾ ಒಂದು ಕಡೆ ಈ ’ಪ್ರೆಸ್ ಕ್ಲಬ್’ ಎಂಬ ಹೆಸರನ್ನು ಕೇಳಿಯೇ ಇರುತ್ತಾರೆ. ನಾನು ಸಣ್ಣವನಿದ್ದಾಗಿಂದ ಗಮನಿಸಿದ್ದೇನಂದರೆ ಪತ್ರಕರ್ತರ, ಬರಹಗಾರರ ಲೇಖನಗಳಲ್ಲಿ, ವರದಿಗಳಲ್ಲಿ ಈ ಪ್ರೆಸ್ ಕ್ಲಬ್ ಸುಮಾರು ಬಾರಿ ಕಾಣಿಸಿಕೊಳ್ಳುತ್ತಿತ್ತು. ಅದೂ ಅಲ್ಲದೇ ಕೆಲವರು ಮಾತನಾಡುವಾಗಲೂ ಪ್ರೆಸ್ ಕ್ಲಬ್ ನಲ್ಲಿ ಅದಾಯಿತು ಇದಾಯಿತು, ಅಲ್ಲಿ ಅವರೆಲ್ಲಾ ಸೇರುತ್ತಿದ್ದರು, ಮಾತಾಡುತ್ತಿದ್ದರು ಎಂದೆಲ್ಲಾ ಹೇಳುತ್ತಿರುವುದನ್ನೂ ಕೇಳಿದ್ದೆ. ವಿಷಯ ಏನು ಅಂದರೆ, ದೇವರಾಣೆ ನನಗೆ ಈ ಪ್ರೆಸ್ ಕ್ಲಬ್ ಅಂದರೆ ಏನು ಅಂತಲೇ ಗೊತ್ತಿರಲಿಲ್ಲ. ನಾನು ಅದನ್ನ ಒಂದು ಬಾರ್ ಅಂಡ್ ರೆಸ್ಟೋರೆಂಟ್ ಇರಬೇಕು ಅಂದುಕೊಂಡಿದ್ದೆ. ಈ ಸಿನೆಮಾ ಮಂದಿಗೆ ಕಾನಿಷ್ಕ ಹೋಟೆಲ್ ಇದ್ದಂತೆ, ಬರವಣಿಗೆ ಲೋಕದವರಿಗೆ ಪ್ರೆಸ್ ಕ್ಲಬ್ ಅನ್ನಿಸಿತ್ತು. ಇದಕ್ಕೆ ಕಾರಣವೂ ಇದೆ. ಯಾರೇ ಆದರೂ ಪ್ರೆಸ್ ಕ್ಲಬ್ ಬಗ್ಗೆ ಉಲ್ಲೇಖಿಸುವಾಗಲೂ ಕೂಡ ತಾವು ಪ್ರೆಸ್ ಕ್ಲಬ್ ನಲ್ಲಿ ಕೂತು ಕುಡಿಯುತ್ತಾ ಇದ್ವಿ, ಅಪರಾತ್ರಿವರೆಗೆ ಕುಡಿಯುತ್ತಿದ್ವಿ, ಆ ಲೇಖಕ ಅಲ್ಲಿ ಕುಡೀತಿದ್ರು, ಈ ಲೇಖಕ ಅಲ್ಲಿ ಕುಡಿಯುತ್ತಾ ಮೀಟಿಂಗು ಮಾಡ್ತಿದ್ರು ಅಂತ ಮಾತ್ರ ಬರೆಯುತ್ತಿದ್ದರು. ಪ್ರೆಸ್ ಕ್ಲಬ್ ವಿಷಯ ಬಂತು ಅಂದರೆ ಅದು ’ಕುಡಿತ’ಕ್ಕೆ ಮಾತ್ರ ಸಂಬಂಧಿಸಿದ್ದಾಗಿರುತ್ತಿತ್ತು! ಆದಕ್ಕೇ ಸಹಜವಾಗಿ ಅದು ಬಾರ್ ಅಂಡ್ ರೆಸ್ಟೋರೆಂಟೇ ಇರಬೇಕು ಅನಿಸಿತ್ತು. ಬೆಂಗಳೂರಿಗೆ ಬಂದ ಹೊಸತರಲ್ಲಿ ನಾನು ಕೆಲಸ ಮಾಡುತ್ತಿದ್ದ ಕಂಪನಿ ಅಲ್ಲೇ ವಿಧಾನಸೌಧದ ಹತ್ತಿರವಿದ್ದುದರಿಂದ ಕೆಲವೊಮ್ಮೆ ಮಧ್ಯಾಹ್ನ ಊಟಕ್ಕೆ ಆದಾಯ ತೆರಿಗೆ ಇಲಾಖೆ ಕ್ಯಾಂಟೀನಿಗೆ ಹೋಗುತ್ತಿದ್ದೆವು. ಅಲ್ಲಿನ ಕಿಟಕಿಯಿಂದ ಪ್ರೆಸ್ ಕ್ಲಬ್ ಅಂಗಳ ನೇರವಾಗಿ ಕಾಣುತ್ತದೆ. ಅಲ್ಲಿಯೂ ಕಾಣುತ್ತಿದ್ದುದು ಅದೇ ದೃಶ್ಯ, ಒಂದಿಷ್ಟು ಜನ ಹೊರಗೆ ಮೇಜುಗಳ ಮೇಲೆ ಜೇನು ಬಣ್ಣದ ದ್ರವವನ್ನು ಇಟ್ಟುಕೊಂಡು ಮಾತಾಡುತ್ತಾ ಕುಳಿತಿರುತ್ತಿದ್ದರು. ಅಲ್ಲಿಗೆ ನಿಜವಾಗಿಯೂ ಇದು ಬಾರ್ ಅಂಡ್ ರೆಸ್ಟೋರೆಂಟೇ ಅಂತ ನಂಬಿಕೊಂಡಿದ್ದೆ. ಆಮೇಲೆ ಒಮ್ಮೆ ಅಲ್ಲಿ ಸಿನೆಮಾ ಮಹೂರ್ತ ಒಂದಕ್ಕೆ ಹೋಗುವ ಪ್ರಮೇಯ ಬಂದಿತ್ತು. ಅವತ್ತು ಪ್ರೆಸ್ ಕ್ಲಬ್ಬನ್ನು ಹತ್ತಿರದಿಂದ ನೋಡಲು ಅವಕಾಶ ಸಿಕ್ಕಿತ್ತು... ಆದರೆ ಅವತ್ತು ವಿಪರೀತ ಜನರಿದ್ದುದರಿಂದ ಮತ್ತು ನನಗೆ ಸಿಗಬೇಕಾದವರು ಸಿಕ್ಕಿದುದರಿಂದ ಹಾಗೇಯೇ ಮೇಲ್ಮೇಲೆ ನೋಡಿ ಹೊರಟುಬಿಟ್ಟಿದ್ದೆ. ’ಪ್ರೆಸ್ ಕ್ಲಬ್’ ಬಗ್ಗೆ ಸಂಶಯ ಪೂರ್ತಿ ಹೋಗಿರಲಿಲ್ಲ.

ಈಗೊಂದು ಒಂದೂವರೆ ವರ್ಷದ ಕೆಳಗೆ ಪತ್ರಕರ್ತೆ ಗೆಳತಿಯೊಬ್ಬಳ ಜೊತೆ ಮಾತಾಡುತ್ತಿರುವಾಗ ಅವಳು ಪ್ರೆಸ್ ಕ್ಲಬ್ ನಲ್ಲಿ ಊಟಕ್ಕೆ ಹೋಗಿದ್ದೆ ಅಂದಾಗ ಆಶ್ಚರ್ಯವಾಗಿ ಅದರ ಬಗ್ಗೆ ಕೇಳಲಾಗಿ ಪ್ರೆಸ್ ಕ್ಲಬ್ ಅಂದ್ರೆ ಏನೂಂತ ನಿಜ ವಿಷಯ ಗೊತ್ತಾಯ್ತು.
ಅದಕ್ಕೇ ಹೇಳೋದು.. ಈ ಪತ್ರಕರ್ತರ ಸಾವಾಸ ಅಲ್ಲ .. ಏನು ಬರೆದರೂ ಜನ ತಪ್ಪು ತಿಳ್ಕೊಳ್ಳೋ ಹಾಗೇ ಬರೀತಾರೆ.

ಇದೇನು ’ಸೂರ್ಯಂಗೇ ಟಾರ್ಚಾ’ ಅನ್ನುವ ತರಹ ’ಪ್ರೆಸ್ ಕ್ಲಬ್ಬಿಗೇ ರಿಪೋರ್ಟಾ’ ಅಂತೀರಾ? ಏನಿಲ್ಲ, ಅಜ್ಞಾನ ನನ್ನದು ಅಷ್ಟೆ!

ಸೋಮವಾರ, ನವೆಂಬರ್ 16, 2009

ಥಟ್ ಅಂತ ಹೇಳಿ

ಒಮ್ಮೊಮ್ಮೆ ಹೀಗೆ. ನಾವು ಮಾಡಿದ ಕೆಲಸಗಳು ನಮಗೇ ಇಷ್ಟವಾಗಿಬಿಡುವುದುಂಟು. ಅದರಲ್ಲಿ ಇದೂ ಒಂದು.

ಸೌಂದರ್ಯ ಅನ್ನುವುದನ್ನು ಪ್ರಕೃತಿ ಎಲ್ಲಿ ಬೇಕಾದರಲ್ಲೆಲ್ಲಾ ಇಟ್ಟಿದೆ. ಹೀಗೆ... ನಮ್ಮೂರಿನಲ್ಲಿ ಮನೆ ಹತ್ತಿರ ಕಂಡಾಗ ಮಂಡಿಯೂರಿ ಕ್ಲಿಕ್ಕಿಸಿದ ಫೋಟೋ ಇದು. ತೀರಾ ಬೆಂಗಳೂರಿನಂತಹ ನಗರಗಳಲ್ಲಿ ಹುಟ್ಟಿಬೆಳೆದ ಕೆಲವರನ್ನು ಬಿಟ್ಟು ಎಲ್ಲರೂ ಇದನ್ನು ನೋಡಿಯೇ ಇರುತ್ತಾರೆ. ಇದು ಯಾವ ಹೂವೆಂದು ನಿಮಗೆ ಗೊತ್ತಾಯ್ತಾ? ಥಟ್ ಅಂತ ಹೇಳಿ :)

ಶನಿವಾರ, ಅಕ್ಟೋಬರ್ 24, 2009

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ! :)

ನಮ್ಮ ವಾರಗೆಯ ಹುಡುಗರಿಗೆ ಇದೊಂಥರಾ ಸಂಕ್ರಮಣದ ಕಾಲ. ಸಂಕಷ್ಟದ ಕಾಲ ಅಂತಲೂ ಹೇಳಬಹುದು. ವೃಶ್ಚಿಕ ರಾಶಿಗೆ ಚಂದ್ರನ ಪ್ರವೇಶವಾಗಿದೆ. ಶುಕ್ರ ಆರನೇ ಮನೆಯಿಂದ ಏಳನೇ ಮನೆಗೆ ಕಾಲಿಡುತ್ತಿದ್ದಾನೆ. ಅತ್ತ ಶನಿಯೂ ಏಳನೇ ಮನೆಗೇ ದಾಟಲಾಗುತ್ತದಾ ನೋಡುತ್ತಿದ್ದಾನೆ. ರಾಹು ಕೇತುಗಳು ಯಾವಾಗ ಯಾರನ್ನು ಯಾವ ಮನೆಯಲ್ಲಿ ಆಕ್ರಮಿಸುವುದು ಎಂದು ಹೊಂಚುಹಾಕುತ್ತಿವೆ. ಒಟ್ಟಾರೆ ಹೇಳಬೇಕೆಂದರೆ ’ಟೈಮ್ ಬಂದಿದೆ’. ಹ್ಮ್.. ಹೌದು..ಒಬ್ಬೊಬ್ಬರಿಗೇ ಮನೆಯಲ್ಲಿ ಮಾತುಗಳು ಕೇಳಿಬರುತ್ತಿವೆ. ಮಗ ವಯಸ್ಸಿಗೆ ಬಂದಿದ್ದಾನೆ !

ಮೊದಲನೇ ಕೆಟಗರಿಯಲ್ಲಿ ಈ ವರ್ಷದಲ್ಲೇ ಕೆಲವು ಗೆಳೆಯರ ಮದುವೆ ಆಗಿಹೋಯಿತು. ಲವ್ ಮಾಡಿಕೊಂಡವರು, ಮನೆಯಲ್ಲಿ ಹಿರಿಯ ಮಗನಾಗಿದ್ದವರು, ಮನೆಯಲ್ಲಿ ಅಪ್ಪ ಅಮ್ಮಂದಿರಿಗೆ ವಯಸ್ಸಾಗಿ ಮನೆಗೆ ಸೊಸೆ ಬೇಕು ಅನ್ನಿಸಿದವರು, ಇವ್ಯಾವುದೂ ಇಲ್ಲದೇ ಹಾಗೇ ಸುಮ್ಮನೇ ಮದುವೆ ಬೇಕು ಎನಿಸಿದವರು ಮುಂತಾದ ಕೆಲವರು ಜೋಡಿ ಜೀವಗಳಾದರು. ಈ ವರ್ಷದಿಂದ ಹುಡುಕಾಟ ಶುರುಮಾಡಿದರೆ ಮುಂದಿನ ವರ್ಷಕ್ಕಾದರೂ ಮದುವೆಯಾಗಬಹುದು ಎಂದು ಶುರುಮಾಡಿದ ಕೆಲವರಿಗೆ ಬೇಗನೆ ಹುಡುಗಿ ಸಿಕ್ಕು ಮದುವೆ ಊಟ ಹಾಕಿಸಿಬಿಟ್ಟರು. ಯಾವಾಗಲೂ ಜೊತೆಗೇ ಓತ್ಲಾ ಹೊಡೆಯುತ್ತಿದ್ದವನು ನಾಳೆ ಸಿಗ್ತೀಯಾ ಅಂತ ಕೇಳಿದರೆ "ಸ್ವಲ್ಪ ಕೆಲಸ ಇದೆ ಕಣೋ ಬರಕ್ಕಾಗಲ್ಲ" ಅನ್ನುತ್ತಾನೆ. ಹೀಗೆ ಸಿಕ್ಕು ಮಾತಾಡುತ್ತಿದ್ದಾಗ ಫೋನ್ ಬಂದು "ಇಲ್ಲೇ ಇದ್ದೀನಿ, ಹತ್ತು ನಿಮಿಷ, ಬಂದೆ" ಅಂದರೆ ಆಕಡೆ ಇರುವುದು ಹೈಕಮಾಂಡೇ ಸೈ.

ಇತ್ತೀಚೆಗಂತೂ ಗೆಳೆಯರು ಸಿಕ್ಕಾಗ ಕೆಲವು ಕುಶಲ ಮಾತುಕತೆಗಳಾದ ಮೇಲೆ ಮಾತು ಮದುವೆಯ ಕಡೆಗೇ ಹೊರಳುತ್ತದೆ. ಹುಡುಗಿ ನೋಡ್ತಾ ಇದ್ದಾರಾ? ಮದುವೆ ಸೆಟ್ಲಾಯ್ತಾ? ಯಾವಾಗ ಮದುವೆ ಇತ್ಯಾದಿ ಮಾತುಗಳು ಸಾಮಾನ್ಯವಾಗಿವೆ. ಸದ್ಯಕ್ಕೆ ಖಾಲಿಯಾಗಲು ಶುರುವಾಗಿರುವ ನಮ್ಮ ಬ್ಯಾಚಿನ ಹುಡುಗರು ಮುಂದಿನ ವರ್ಷದ ಬೇಸಿಗೆಯಲ್ಲಂತೂ ಮಾರ್ಕೆಟ್ ನಲ್ಲಿ ಹಾಟ್ ಕೇಕ್ ಗಳು. ಮುಂದಿನ ವರ್ಷ ಮುಗಿಯುವುದರೊಳಗಾಗಿ ಅರ್ಧದಷ್ಟು ಜನ ಖಾಲಿಯಾಗಿರುತ್ತಾರೆ. ಅದರ ಮುಂದಿನ ವರ್ಷದೊಳಗಂತೂ ಫುಲ್ ಸ್ವೀಪ್. ಇನ್ನು ನಮ್ಮ ವಾರಗೆಯ ಹುಡುಗಿಯರಂತೂ ಸೋಲ್ಡ್ ಔಟ್ ಆಗಿ ಹೋಗಿ ಎಲ್ಲರೂ ಆಂಟಿಯರಾಗಿಬಿಟ್ಟಿದ್ದಾರೆ! ಆರ್ಕುಟ್ಟಿನ ಆಲ್ಬಮ್ಮಿನಲ್ಲಿ ಮುದ್ದು ಮುಖದ ಮಗುವಿನ ಫೋಟೋಗಳು ಅಪ್ ಲೋಡ್ ಆಗಲಾರಂಭಿಸಿವೆ!

ಎರಡನೇ ಕೆಟಗರಿಯಲ್ಲಿ ಈಗಾಗಲೇ ಹುಡುಗಿ ನಿಕ್ಕಿಯಾಗಿರುವವರು, ನಿಶ್ಚಿತಾರ್ಥ ಆಗಿರುವವರು, ಮದುವೆ ಮಹೂರ್ತ ಫಿಕ್ಸ್ ಆದವರು ಇದ್ದಾರೆ. ಮಹೂರ್ತ ಫಿಕ್ಸ್ ಆದವರು ಮದುವೆ ಆಮಂತ್ರಣದ ಪತ್ರಿಕೆ ಮಾಡಿಸುವ ತಯಾರಿಯಲ್ಲಿ, ಹಂಚುವ ಕೆಲಸದಲ್ಲಿ ತೊಡಗಿದ್ದಾರೆ. ಈ ನವೆಂಬರ್ ನಲ್ಲೇ ಸುಮಾರಷ್ಟು ವಿಕೆಟ್ಟುಗಳು ಬೀಳಲಿವೆ. ಹುಡುಗಿ ಫಿಕ್ಸ್ ಆಗಿರುವವರು ಸದ್ಯಕ್ಕೆ ಫೋನಿನಲ್ಲಿ ಬಿಜಿ ಬಿಜಿ. ಫೋನ್ ಕಾಲ್ ಬಂದೊಡನೆ ಅವರ ದನಿ ಬದಲಾವಣೆಯಲ್ಲೇ ಗೊತ್ತಾಗಿ ಬಿಡುತ್ತದೆ ಅದು ಯಾರ ಫೋನ್ ಎಂದು. "ಸರಿ, ನೀನು ಹೋಗಪ್ಪ" ಎಂದು ನಾವೇ ಕಳಿಸಿಕೊಡುತ್ತೇವೆ. ಅವರ ರಾತ್ರಿ ಕಾರ್ಯಾಚರಣೆಯೂ ಜೋರಾಗಿ ನೆಡೆಯುತ್ತಿರುತ್ತದೆ. ಇಷ್ಟು ಗಂಟೆಯಿಂದ ಇಷ್ಟು ಗಂಟೆಯವರೆಗೆ ಟೈಮ್ ಸ್ಲಾಟ್ ಅದಕ್ಕೆಂದೇ ಮೀಸಲಾಗಿದೆ. ಆದರೆ ಆ ಸ್ಲಾಟ್ ಮೀರಿಹೋಗುವುದೇ ಹೆಚ್ಚು. ಫೋನಿಗಂಟಿಕೊಂಡ ಹುಡುಗನಿಗೆ ಸದ್ಯಕ್ಕೆ ಕೆಲಸ, ಊಟ, ಇನ್ನಿತರ ಕೆಲಸಗಳೆಡೆಗೆ ಒಲವಿಲ್ಲ. ಟೆರೇಸು, ಆಫೀಸಿನ ಕಾನ್ಫರೆನ್ಸ್ ರೂಮು, ಬಾಗಿಲು ಹಾಕಿಕೊಂಡ ಕೋಣೆ ಎಲ್ಲೆಂದರಲ್ಲಿ ಚಂದಾದಾರ ಕಾರ್ಯನಿರತವಾಗಿದ್ದಾನೆ ! ಹುಡುಗಿ ಇದೇ ಊರಿನಲ್ಲಿದ್ದರೆ ವೀಕೆಂಡಿಗೆ ಬೆಳಗ್ಗೆ ಮಾಯವಾದ ಹುಡುಗ ರಾತ್ರಿ ಬಂದಾಗ "ಎಲ್ಲಿಗೆ ಹೋಗಿದ್ಯೋ?" ಅಂದರೆ ಸುಮ್ಮನೇ ನಗುತ್ತಾನೆ. ಮೊದಲು ಯಾವುದೋ ಸಿಕ್ಕಿದ ಅಂಗಿ ನೇತಾಕಿಕೊಂಡು ಊರು ಸುತ್ತುತ್ತಿದ್ದವನು ಈಗ ಸ್ವಲ್ಪ ಟ್ರಿಮ್ ಆಗಿದ್ದಾನೆ.

ಮೂರನೇ ಕೆಟಗರಿಯಲ್ಲಿ, ಸದ್ಯಕ್ಕೆ ನೆಟ್ ವರ್ಕ್ ಫ್ರೀ ಇರುವ ಗೆಳೆಯರ ಹುಡುಗಿ ಹುಡುಕಾಟ ಶುರುವಾಗಿದೆ. ಅಪ್ಪ ಅಮ್ಮ, ಬಂಧುಗಳ ಕಡೆಯಿಂದ ’ಒಳ್ಳೆಯ’ ಹುಡುಗಿಯರ ಸಮಾಚಾರ ಬಂದು ತಲುಪುತ್ತದೆ. ಜಾತಕ, ಫೊಟೋಗಳು ಕೈಸೇರುತ್ತಿವೆ, ಕೈಬದಲಾಗುತ್ತಿವೆ. ಇಂಟರ್ವ್ಯೂಗಳು ನೆಡೆಯುತ್ತಿವೆ. ಯಾವ ಹಬ್ಬವೂ ಇಲ್ಲದೇ ಸುಮ್ಮನೇ ಊರಿಗೆ ಹೊರಟ ಎಂದರೆ ಹುಡುಗ ಚಾ, ಉಪ್ಪಿಟ್ಟು ಸಮಾರಾಧನೆಗೇ ಹೋಗಿದ್ದಾನೆ ! ಹುಡುಗಿಯರ ಡಿಮಾಂಡುಗಳು, ಅವರು ಹಾಕುವ ಕಂಡೀಷನ್ ಗಳನ್ನು ಕೇಳಿದರೆ ಭಯವಾಗುತ್ತದೆ ಅನ್ನುತ್ತಾರೆ. ಕೆಲವರು ಯಾಕೋ ವ್ಯವಾರ ಕುದುರ್ಲಿಲ್ಲ ಅಂತ ವಾಪಾಸ್ಸು ಬಂದರೆ ಕೆಲವರು ಸಿಹಿ ಸುದ್ದಿ ಕೊಟ್ಟು ಎರಡನೇ ಕೆಟಗರಿಗೆ ಭಡ್ತಿ ಪಡೆಯುತ್ತಿದ್ದಾರೆ.

ನಾಲ್ಕನೇ ಕೆಟಗರಿಯಲ್ಲಿ, ಮನೆಯಲ್ಲಿ ಮದುವೆಯಾಗಬೇಕಾದ ಅಕ್ಕ, ಅಣ್ಣ, ಅಥವಾ ತಂಗಿ ಇರುವವರು, ’ಈಗಲೇ ಬೇಡ ಇರಿ’ ಎಂದು ಅಪ್ಪ ಅಮ್ಮರಿಗೆ ತಾಕೀತು ಮಾಡಿದವರು, ’ಸದ್ಯಕ್ಕೆ ಬೇಡ’ ಅನ್ನಿಸಿ ಸುಮ್ಮನಿರುವವರು, ಯಾವುದೇ ರೀತಿಯ ಒತ್ತಡ ಇಲ್ಲದವರು. ಅವರಿಗೆಲ್ಲಾ ತಮ್ಮೊಳಗೇ ಬಿಸಿ ಹತ್ತಿಕೊಳ್ಳದಿದ್ದರೂ ಸುತ್ತಮುತ್ತಲಿನ ಕಾವು ತಾಗುತ್ತಿದೆ, ತಳಮಳಗಳಾಗುತ್ತಿವೆ.

ಎಂತ ಹುಡುಗಿ ಹುಡುಕಿಕೊಳ್ಳಬೇಕು? ಗೊಂದಲ. ಅದಕ್ಕೂ ಮೊದಲು ತನ್ನ ಬಗ್ಗೆ ತನಗೇ ಗೊಂದಲ. ಈಗಲೇ ಮದುವೆಯಾಗಿಬಿಡಬೇಕಾ, ಅಗತ್ಯವಿದೆಯಾ? ತನಗೊಂದು ಸರಿಯಾದ ಕೆಲಸವಿದೆಯಾ, ಇದ್ದರೂ ಗಟ್ಟಿಯಿದೆಯಾ, ಬರುವ ಸಂಬಳ ಸಾಲುತ್ತದಾ? ಮದುವೆಯಾಗಿ ಸಂಸಾರ ನಿಭಾಯಿಸಬಲ್ಲ ಜವಾಬ್ದಾರಿ ಬಂದಿದೆಯಾ? ಅದೇನೋ ಮದುವೆಯಾದರೆ ಜವಾಬ್ದಾರಿ ತಾನಾಗೇ ಬರುತ್ತದಂತೆ. ಇಂದ್ರ ಚಂದ್ರ ಎಂದುಕೊಂಡು ಬಂದ ಹುಡುಗಿಗೆ ಇವನನ್ನು ಯಾಕಾದರೂ ಕಟ್ಟಿಕೊಂಡೆ ಎಂಬಂತಾಗಬಾರದಲ್ಲ. ಅದಕ್ಕೂ ಮೊದಲು ಹುಡುಗಿ ತನ್ನನ್ನು ಒಪ್ಪಿಕೊಳ್ಳಬೇಕಲ್ಲ. ಬರೀ ವಯಸ್ಸಾಗಿಬಿಟ್ಟರೆ ಸಾಕಾ? ಮದುವೆಯಾಗಲು ತಯಾರಿದ್ದೇನೆ ಅನ್ನಲಿಕ್ಕಾದರೂ ಒಂದು ಮಟ್ಟಿಗಿನ ಅರ್ಹತೆ ಬೇಕಲ್ಲ..... ಮುಂದುವರೆಯುತ್ತವೆ ಗೊಂದಲಗಳು. ಹುಡುಗಿಯ ರೂಪ ಕಾಣುತ್ತದೆ, ಗುಣ ಕಾಣುವುದಿಲ್ಲ, ಹುಡುಗಿಯ ಮನೆತನ ನೋಡುವುದಾ? ಜಾಸ್ತಿ ಓದಿದವಳು ಬೇಕಾ? ಕೆಲಸದಲ್ಲಿರುವವಳು ಬೇಕಾ? ಮಾವನ ಮನೆ ಕಡೆ ’ಚೆನ್ನಾಗಿರಬೇಕು’ ಇದು ಕೆಲವು ಹುಡುಗರ ಆಸೆ. ಈ ನಗರಗಳಲ್ಲಿ ನಾವೊಬ್ಬರೇ ದುಡಿದರೆ ಸಾಕಾಗೋದಿಲ್ಲ, ಅವಳೂ ಕೆಲಸಕ್ಕೆ ಹೋಗುತ್ತಿರಬೇಕು ಇದು ಇನ್ನು ಹಲವರ ಅಭಿಪ್ರಾಯ. ಬೇರೆ ಯಾವ ಕೆಲಸದಲ್ಲಿದ್ದರೂ ಓ.ಕೆ , ಆದರೆ ಈ ಐ.ಟಿ. ಹುಡುಗೀರು ಮಾತ್ರ ಖಂಡಿತ ಬೇಡ, ಇದು ಮತ್ತೂ ಕೆಲವರ ದೃಢ ನಿರ್ಧಾರ. ಕಾಲ್ ಸೆಂಟರಿನವರಂತೂ ದೂರ ದೂರ. ರೂಪ, ಹಣ, ಹಿನ್ನೆಲೆ, ಮನೆತನ, ದುಡಿಮೆಗಿಂತ ನನಗಂತೂ ಬೇಕಾಗಿರುವುದು ಒಂದು ’ಡೀಸೆಂಟ್ ಹುಡುಗಿ’ ಎನ್ನುವುದು ಸಾಮಾನ್ಯ. ಇದೆಲ್ಲಾ ತಲೆಬಿಸಿಯೇ ಬೇಡ ಎಂದು ಅಪ್ಪ ಅಮ್ಮನಿಗೇ ಎಲ್ಲಾ ಬಿಟ್ಟು ಕೆಲವರು ಆರಾಮಾಗಿದ್ದಾರೆ. ಅವರು ಕೈ ತೋರಿಸಿದವರಿಗೇ ಇವರದ್ದೂ ಜೈ. ಇದೆಲ್ಲುದರ ಜೊತೆಗೆ ಹುಡುಗಿಯರು ಬಯಸುವುದು ಏನನ್ನು, ಎಂತವರನ್ನು ಎಂಬ ನಾನಾ ಉತ್ತರಗಳ, ಉತ್ತರಗಳಿಲ್ಲದ, ಇದ್ದರೂ ಸಿಗದ, ಸಿಕ್ಕರೂ ಅರ್ಥವಾಗದ, ಅರ್ಥವಾದರೂ ಸ್ಪಷ್ಟವಾಗದ ಪ್ರಶ್ನೆ ಇದ್ದೇ ಇರುತ್ತದೆ.. ಗೆಳೆಯನೊಬ್ಬ ದಾರಿಯಲ್ಲಿ ಸಿಗುವ ಹುಡುಗಿರನ್ನೆಲ್ಲಾ ಕಣ್ಣಲ್ಲೇ ಅಳೆಯಲು ಶುರುಮಾಡಿದ್ದಾನೆ. ಯಾರನ್ನೋ ತೋರಿಸಿ ಇವಳ ತರಹ ಇದ್ರೆ ಓ.ಕೆ. ಅನ್ನುತ್ತಾನೆ. ನಾವೂ ಕೂಡ ಕಂಡ ಹುಡುಗಿಯರನ್ನೆಲ್ಲಾ ತೋರಿಸಿ "ಇದು ಹೆಂಗೋ? ನಿಂಗೆ ಓ.ಕೆ. ನಾ?" ಅನ್ನುತ್ತೇವೆ. ಆಪ್ತ ಗೆಳೆಯರು ಮಾತಿಗೆ ಕುಳಿತಾಗ ಹುಡುಗಿಯರ ಬಗ್ಗೆ, ಹೆಂಡತಿ ಬಗ್ಗೆ, ಹೇಗಿರಬೇಕು ಎನ್ನುವುದರ ಬಗ್ಗೆ, ಯಾರಾದರೆ ಯಾವರೀತಿ advantage ಮತ್ತು disadvantage ಎನ್ನುವುದರ ಬಗ್ಗೆ, ಮುಂದೆ ಹೇಗೆ ಎಂಬ ಬಗ್ಗೆ ಚರ್ಚೆ ಬಂದು ಹೋಗುತ್ತದೆ.. (ಅದು ಹುಡುಗರ ಲೋಕದ ಸೀಕ್ರೇಟುಗಳಾದ್ದರಿಂದ ವಿವರಗಳನ್ನು ಇಲ್ಲಿ ಬರೆಯುವಂತಿಲ್ಲ! :)) ಕೊನೆಗೆ ಏನೇ ನೋಡಿ, ಏನೇ ಲೆಕ್ಕಾಚಾರ ಹಾಕಿ ಮದುವೆಯಾದರೂ ’ನಿಜರೂಪ’ ದರ್ಶನ ಮದುವೆಯಾದ ಅನಂತರವೇ ಎಂಬ ಸತ್ಯದ ಅರಿವು ಎಲ್ಲರಲ್ಲಿದೆ! ಜೊತೆಗೆ ಮದುವೆಯಾಗುವವಳು ಸರಿಯಾಗಿ ಸೆಟ್ ಆಗ್ತಾಳೋ ಇಲ್ವೋ ಎಂಬ ಚಿಂತೆ!

ಈಗಾಗಲೇ ಮದುವೆಯಾದವರಿಗೆ, ದೊಡ್ಡವರಿಗೆ ಇದೆಲ್ಲಾ ತಮಾಷೆ ಎನಿಸಬಹುದು. ಇದುವರೆಗೆ ಹೇಳಿದ್ದೆಲ್ಲಾ ಏನಿದ್ದರೂ ತೀರ ಹೊರನೋಟ ಮಾತ್ರ. ಮನಸಿನ ಒಳಗಿನ ತಾಕಲಾಟಗಳು ನೂರು ನೂರು. ಮುಂದಿನ ತಿಂಗಳು ಮದುವೆ ಇರುವ ಗೆಳೆಯನೊಬ್ಬನಿಗೆ "ನೀವು ಸದ್ಯದಲ್ಲೇ ಮದ್ವೆ ಆಗ್ತಾ ಇದ್ದೀರ, ಏನನ್ನಿಸ್ತಿದೆ ನಿಮ್ಗೆ ?’ ಅಂತ ಟೀವಿ ನೈನ್ ಸ್ಟೈಲ್ ನಲ್ಲಿ ಕೇಳಿದಾಗ ಅವನು ಉತ್ತರಿಸಿದ್ದು ಹೀಗೆ. " ಟೆನ್ಷನ್ ಆಗ್ತಾ ಇದೆ, ಜೊತೆಗೆ ನನ್ನ ಸ್ವಾತಂತ್ರ್ಯ ಕಳೆದುಹೋಗ್ತಾ ಇದೆ ಅನ್ನಿಸ್ತಿದೆ, ಆದರೆ ಆ ಕಳ್ಕೊಳದ್ರಲ್ಲೂ ಒಂಥರಾ ಸುಖ ಇದೆ!" .

ಅದಕ್ಕೇ ಹೇಳಿದ್ದು, ಇದೊಂಥರಾ ಸಂಕ್ರಮಣದ ಜೊತೆಜೊತೆಗೇ ಸಂಕಷ್ಟದ ಕಾಲ!

ಗುರುವಾರ, ಅಕ್ಟೋಬರ್ 15, 2009

ನೂರುಸಾವಿರ ಸಾವಿನ ನೆನಪು !

ಇತಿಹಾಸ ಭೀಕರ. ಅಧಿಕಾರ, ಆಸೆ ಯುದ್ಧಕ್ಕೆ ದಾರಿಮಾಡಕೊಡಬಹುದು. ಅನ್ಯಾಯ, ಸೇಡು ದ್ವೇಷಕ್ಕೆ, ಜೊತೆಗೆ ಎಂತಹ ಕ್ರೌರ್ಯಕ್ಕೂ ಕಾರಣವಾಗಬಲ್ಲುದು.

"ಎಲ್ಲರೂ ನಿಂತು ನೋಡುತ್ತಿದ್ದರು, ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ, ಯಾರೂ ಹಿಟ್ಲರನ ವಿರುದ್ಧ ದಂಗೆಯೇಳಲಿಲ್ಲ" ಎನ್ನುತ್ತಾಳೆ ಜರ್ಮನಿಯಿಂದ ಓಡಿಬಂದು ಭಾರತದಲ್ಲಿ ಆಶ್ರಯ ಪಡೆದ ಯಹೂದಿ ಹ್ಯಾನಾ. ಅವತ್ತು ಹಿಟ್ಲರ ಯಹೂದಿಯರ ವಿರುದ್ಧ ಕಾರ್ಯಾಚರಣೆಗೆ ಇಳಿದಾಗ ಜರ್ಮನರು ಅದನ್ನು ವಿರೋಧಿಸಲಿಲ್ಲವಾ, ಎಲ್ಲರಿಗೂ ಅವ ಮಾಡುತ್ತಿರುವುದು ಸರಿಯೆಂದೇ ಅನ್ನಿಸಿಬಿಟ್ಟಿತ್ತಾ? ಆ ಮಟ್ಟಿಗೆ ರೋಸಿಹೋಗಿದ್ದರಾ? ಅಥವಾ ಹೆದರಿ ಸುಮ್ಮನಾಗಿದ್ದರಾ? ಗೊತ್ತಿಲ್ಲ. ಒಟ್ಟಿನಲ್ಲಿ ಹಿಟ್ಲರ್ ಗೆ ಬೆಂಬಲವಿತ್ತು. ಹಿಟ್ಲರನಿಂದ ತಪ್ಪಿಸಿಕೊಂಡು ಓಡಿದ ಹಲವು ಯಹೂದಿಯರು ಜಗತ್ತಿನ ಹಲವು ದೇಶಗಳಲ್ಲಿ ಆಶ್ರಯ ಪಡೆದರು. ಭಾರತದಲ್ಲೂ ಕೂಡ, ಬೆಂಗಳೂರಿನಲ್ಲೂ ಕೂಡ. ಸಿ.ವಿ.ರಾಮನ್ ರವರು ಯಹೂದಿ ವಿಜ್ಞಾನಿಗಳನ್ನು ಇಲ್ಲಿನ I.I.Sc. ಗೆ ಆಹ್ವಾನಿಸಿದ್ದರು. ತನ್ನ ಮಗಳ ಜೊತೆ ವಿಜ್ಞಾನಿಯೊಬ್ಬರು ಬೆಂಗಳೂರಿಗೆ ಬರುತ್ತಾರೆ. ಆ ಯಹೂದಿ ಹುಡುಗಿಯ fiction ಕಥೆಯೇ ’ಯಾದ್ ವಶೇಮ್’.


'ಯಾದ್ ವಶೇಮ್' ಕಥೆ ಶುರುವಾಗುವುದು ಬೆಂಗಳೂರಿನ ಗೋರಿಪಾಳ್ಯದ ಯಹೂದಿ ಸ್ಮಶಾನದಿಂದ. ಜರ್ಮನಿಯಿಂದ ತಂದೆಯೊಂದಿಗೆ ಬಂದ ಹ್ಯಾನಾ ಇಲ್ಲಿನವಳೇ ಆಗಿಹೋಗುತ್ತಾಳೆ. ತನಗೆ ಆಶ್ರಯ ನೀಡಿದ ಕುಟುಂಬದ ಹಿಂದು ಹುಡುಗನನ್ನು ಮದುವೆಯಾಗುತ್ತಾಳೆ. ಜನಾಂಗ ದ್ವೇಷಕ್ಕೆ ಬಲಿಯಾಗಿ ಬದುಕು ಕಳೆದುಕೊಂಡು ಬಂದ ಅವಳು ಭಾರತ ದೇಶದಲ್ಲಿ ಎಷ್ಟೊಂದು ವೈರುಧ್ಯಗಳ ನಡುವೆ ಎಲ್ಲರೂ ಅವರವರಾಗಿಯೇ ಉಳಿಯಲು ಸಾಧ್ಯವಿರುವ ವಾತಾವರಣದ ಬಗ್ಗೆ ಹೆಮ್ಮೆ ಪಡುತ್ತಾಳೆ. "ತಾನು ತಾನಾಗಿ, ಅವರು ಅವರಾಗಿಯೂ, ನಾವು ಒಂದಾಗಬಹುದಾದ ಧರ್ಮ ನಿರಪೇಕ್ಷ ನಾಡು ಈ ಭಾರತ" ಎಂಬ ಸತ್ಯ ಎಲ್ಲೆಲ್ಲೂ ಕಾಣುತ್ತದೆ ಅವಳಿಗೆ.

ಜರ್ಮನಿ ಬಿಟ್ಟು ಬರುವ ಸಮಯದಲ್ಲಿ ಅನಿವಾರ್ಯವಾಗಿ ಅಗಲಿದ ತನ್ನ ತಾಯಿ,ತಂಗಿ,ತಮ್ಮಂದಿರನ್ನು ದಶಕಗಳ ಅನಂತರ ಹ್ಯಾನಾ ಹುಡುಕಿಕೊಂಡು ಹೋಗುತ್ತಾಳೆ. ಅವರು ಏನಾದರು ಎಂಬ ಕತೆಯು ಜರ್ಮನಿ, ಹಿಟ್ಲರ್, ಯಹೂದಿಗಳ ವಿರುದ್ಧ ಅವನ ಅಂತಿಮ ಪರಿಹಾರ, ಅಮೆರಿಕಾ ಎಲ್ಲಾ ಕಡೆ ಸುತ್ತಿಸಿಕೊಂಡು ಬರುತ್ತದೆ. ನಾಜಿ ಕ್ಯಾಂಪಿನ ಆ ಕ್ರೌರ್ಯ ಮನುಷ್ಯನಾದ ಯಾರನ್ನೇ ಆದರೂ ಬೆಚ್ಚಿ ಬೀಳಿಸದಿರಲು ಸಾಧ್ಯವಿಲ್ಲವೇ ಇಲ್ಲ. ಹಿಟ್ಲರನ ದ್ವೇಷಕ್ಕೆ ಸಿಕ್ಕ ಯಹೂದಿಗಳು ಕಸಾಯಿಖಾನೆಯ ಪ್ರಾಣಿಗಳಂತಾದರು. ಪ್ರಯೋಗಗಳಿಗೆ ವಸ್ತುಗಳಾದರು. ೬೦ ಲಕ್ಷ ಜನ ಎಲ್ಲಾ ತರಹದ ಹಿಂಸೆಗಳಿಗೆ ಬಲಿಯಾಗಿ ಗ್ಯಾಸ್ ಛೇಂಬರಿನಲ್ಲಿ ಒದ್ದಾಡಿ ಒಲೆಗಳಲ್ಲಿ ಕಟ್ಟಿಗೆಗಳಾಗಿ ಉರಿದುಹೋದರು. ಅನಂತರ ಯಹೂದಿಯರಿಗಾಗಿಯೇ ಇಸ್ರೇಲ್ ದೇಶ ಹುಟ್ಟಿಕೊಂಡಿತು. ಹುಡುಕಾಟದ ಕೊನೆಯಲ್ಲಿ ಹ್ಯಾನಾ ಇಸ್ರೇಲ್ ತಲುಪುತ್ತಾಳೆ. ಹೊರದಬ್ಬಿಸಿಕೊಂಡ ಯಹೂದಿ ಜನ ತಮ್ಮದೇ ಆದ ಭೂಮಿಗೆ ಕಾದಿದ್ದರು, ಪಡೆದುಕೊಂಡರು ನಿಜ. ಆದರೆ ಇಲ್ಲಿ ಅವರು ಮಾಡಿದ್ದಾದರೂ ಏನು? ಯಾವ ಜನ ತಮಗಾದ ಅನ್ಯಾಯ, ದ್ವೇಷ, ಹಿಂಸೆ ಬೇರೆಯವರಿಗಾಗಬಾರದೆಂದು ಆಶಿಸಬೇಕಿತ್ತೋ ಅವರೇ ಪ್ಯಾಲಿಸ್ಟೇನಿ ಅರಬ್ಬರ ಭೂಮಿಯನ್ನು ಕಸಿದುಕೊಂಡರು. ವಿರೋಧಿಸಿದವರು ಉಗ್ರರಾದರು, ಹೊಸಕಿ ಹಾಕಲ್ಪಟ್ಟರು. ಇಸ್ರೇಲಿಗಳು ಇದು ತಮ್ಮ ಸ್ವಾತಂತ್ರ್ಯ ಹೋರಾಟವೆಂದರು, ಇದು ತಮಗೆ ದೇವರು ಕೊಟ್ಟ ಹಕ್ಕಿನ ಭೂಮಿ ಎಂದರು. ಇವತ್ತಿಗೂ ಅಲ್ಲಿ ಹಿಂಸೆ ನಿಂತಿಲ್ಲ. ನೆಮ್ಮದಿಯ ಬಾಳು ಯಾರಿಗೂ ಇಲ್ಲ. "ನಮ್ಮ ಬದುಕುವ ಹಕ್ಕು ಇನ್ನೊಬ್ಬರ ಸಾವಿನ ಮೇಲೆ ನಿಲ್ಲಬೇಕಾ?" ಎನ್ನುತ್ತಾಳೆ ಹ್ಯಾನಾ.

"ಇದ್ದವರು, ಗೆದ್ದವರು ಇತಿಹಾಸ ಬರೆಯುತ್ತಾರೆ,ಅವರು ಹೇಳಿದ್ದೇ ಇತಿಹಾಸವಾಗುತ್ತದೆ". ಜರ್ಮನಿಯಲ್ಲಿ ನಾಜೀ ಕ್ರೌರ್ಯ ನೆಡೆದೇ ಇಲ್ಲವೆಂಬಂತೆ ಇತಿಹಾಸವನ್ನು ಗುಡಿಸುವ ಪ್ರಯತ್ನ. ಜರ್ಮನಿಯ ಹೊಲೋಕಾಸ್ಟಿನ ಮ್ಯೂಸಿಯಮ್ಮನ್ನು ವಾಷಿಂಗ್ಟನ್ನಿನಲ್ಲಿಟ್ಟು ನಾಜಿ ಕ್ರೌರ್ಯದ ವಿರುದ್ಧ ಫೋಸು ಕೊಡುವ ಅಮೆರಿಕಾ ತಾನು ಕೊಂದು ಹಾಕಿದ ಲಕ್ಷ ಲಕ್ಷ ರೆಡ್ ಇಂಡಿಯನ್ನರ ಬಗ್ಗೆ, ಅಣುಬಾಂಬಿನಲ್ಲಿ ಬೆಂದುಹೋದ ಜಪಾನೀಯರ ಬಗ್ಗೆ ಪಿಟಿಕ್ಕೆನ್ನುವುದಿಲ್ಲ. ಇರಾಕಿನಲ್ಲಿ, ಅಫ್ಘ್ಹಾನಿಸ್ತಾನದಲ್ಲಿ, ಕ್ಯೂಬಾದಲ್ಲಿ ತನ್ನ ಅನಾಚಾರಗಳ ಬಗ್ಗೆ ಸಾಕ್ಷಿಗಳನ್ನು ಉಳಿಸುವುದಿಲ್ಲ.


ಹಳೇ ಬೆಂಗಳೂರಿನ ಚಿತ್ರಣ, ಬ್ರಿಟಿಷ್ ಆಡಳಿತದಲ್ಲಿ ವಿಶ್ವಯುದ್ಧದಲ್ಲಿ ಪರೋಕ್ಷವಾಗಿ ಪಾಲ್ಗೊಳ್ಳಬೇಕಾದ ಭಾರತ, ಹೆಚ್.ಎ.ಎಲ್ ವಿಮಾನ ಕಾರ್ಖಾನೆ ಸ್ಥಾಪನೆಯ ಘಟನೆಗಳು, ಯಹೂದಿ ಮತ್ತು ಇಸ್ಲಾಂ ಧರ್ಮಗಳು, ಡಕಾವ್ ನಾಜಿ ಕ್ಯಾಂಪ್, ಹಿಟ್ಲರನ ಆ ದಿನಗಳು, ಅಮೆರಿಕಾದ ನಸುಗುನ್ನಿಯಾಟ, ಮೂರೂ ಧರ್ಮಗಳ ಸಂಧಿ ಜೆರುಸಲೇಂ, ಇವತ್ತಿನ ಇಸ್ರೇಲಿನ ಸ್ಥಿತಿಯ ನಡುವೆಯ ಕತೆ ಚಾಮರಾಜಪೇಟೆಯ ಕೌಟುಂಬಿಕ ವಾತಾವರಣದಲ್ಲೇ ಬಿಚ್ಚಿಕೊಳ್ಳುತ್ತದೆ, ನಡೆಯುತ್ತದೆ. ಎಲ್ಲೆಲ್ಲೂ ಅತಿರೇಕಕ್ಕೆ ಹೋಗದಂತೆ, ಅತ್ಯಂತ ಸಮತೋಲನವಾಗಿ ಹಲವು ಮಾಹಿತಿಗಳ ವಾಸ್ತವದ ನೋಟ ಈ ಪುಸ್ತಕದ ವಿಶೇಷತೆ. ನಿಜವಾದ ವ್ಯಕ್ತಿಗಳು ಹಲವು ಪಾತ್ರಗಳು, ಜೊತೆಗೆ ಪೂರಕ ಚಿತ್ರಗಳು. ಕೊನೆಗೆ ಮುಗಿಸುವಾಗ, "ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಿಬಿಡಬಲ್ಲ, ಜರ್ಮನಿ, ಅಮೆರಿಕಾ, ಭಾರತ, ನಮ್ಮ ನಡುವೆ, ಕೊನೆಗೆ ನಮ್ಮೊಳಗೇ" ಎನ್ನುತ್ತಾರೆ ನೇಮಿಚಂದ್ರ. ಇಲ್ಲ ಅನ್ನಿಸಲು ಸಾಧ್ಯವೇ ಇಲ್ಲ.

ಸಂಬಂಧಪಟ್ಟ ದೇಶ, ಸ್ಥಳಗಳಿಗೆಲ್ಲಾ ಸ್ವತಃ ಭೇಟಿ ಕೊಟ್ಟು ವಿವರಗಳನ್ನು ಸಂಗ್ರಹಿಸಿರುವ ಲೇಖಕರು ಇದನ್ನು ಸುಮ್ಮನೇ ಒಂದು ಕಾದಂಬರಿಯಾಗಿಸದೇ ಬಹಳ informative ಆಗಿ ಬರೆದಿದ್ದಾರೆ. ಈ ಪುಸ್ತಕ ನಾನು ಓದಿದ ಅದ್ಭುತ ಪುಸ್ತಕಗಳಲ್ಲೊಂದು.

**********

ಟಿಪ್ಪಣಿ:

ಹಿಟ್ಲರ್ - ಜಗತ್ತು ಎಂದೆಂದಿಗೂ ಮರೆಯಲಾಗದ ಸರ್ವಾಧಿಕಾರಿ. ಹಿಟ್ಲರನ ಬಗ್ಗೆ ಅತಿರಂಜಿತ ಸುದ್ದಿಕತೆಗಳೇನೇ ಇರಲಿ, ಯಹೂದಿಯರ ವಿರುದ್ಧ ಹೊಲೋಕಾಸ್ಟ್ ಎಂಬ ಅಮಾನವೀಯತೆಗೆ ಇಳಿಯದಿದ್ದರೆ ಜಗತ್ತಿನ ಸಮರ್ಥ ನಾಯಕರಲ್ಲೊಬ್ಬ ಎನಿಸಿಕೊಳ್ಳುವ ಅವಕಾಶವಿದ್ದವನು. ನಮಗೆ ಇದುವರೆಗೂ ಹಿಟ್ಲರನ ಬಗ್ಗೆ ಇಂಗ್ಲೀಷ್ ಮಾಧ್ಯಮಗಳು ಅದರಲ್ಲೂ ಅಮೆರಿಕಾದ ಮಾಧ್ಯಮಗಳು ಕೊಟ್ಟಿರುವ ರಾಕ್ಷಸ ಚಿತ್ರಣ ಸಹಜ. ಅವರಿಗಾಗದ್ದವರನ್ನು, ಅವರಿಗೆ ತಲೆಬಾಗದವರನ್ನು, ಅವರ ವಿರುದ್ಧ ನಿಂತವರನ್ನು ದೊಡ್ಡ ಮನುಕುಲ ಕಂಟಕರು ಎಂಬಂತೆ ಚಿತ್ರಿಸಿ ಜಗತ್ತಿಗೆ ಪ್ರಚಾರ ಮಾಡುವುದು ಅಮೆರಿಕಾದ ಮಾಧ್ಯಮಗಳ ಗುಣ. ಅದಕ್ಕೆ ರಷ್ಯಾ, ಕ್ಯೂಬಾ, ಕೊರಿಯಾ, ಚೀನಾ ಉದಾಹರಣೆಗಳು. ಹಿಟ್ಲರನೂ ಕೂಡ ಹೊರತಲ್ಲ. ಇಂತವನಿಗೆ ಅದ್ಯಾಕೆ ಯಹೂದಿಯರ ವಿರುದ್ಧ ಅಂತಹ ದ್ವೇಷವಿತ್ತು ಎಂಬುದು ನಮಗೆ ಕೊಟ್ಟಿರುವ ಚಿತ್ರಣಗಳಿಗಿಂತ ಸ್ವಲ್ಪ ಬೇರೆ. ಅದಕ್ಕೆ ಹಿಟ್ಲರನೇ ಬರೆದಿರುವ 'ಮೈನ್ ಕಾಂಫ್' ಪುಸ್ತಕದಲ್ಲಿ ಉತ್ತರವಿದೆ. ಅದು ಹಿಟ್ಲರ್ ಎಂತಹ ಉತ್ತಮ ರಾಜಕೀಯ ಚಿಂತಕನಾಗಿದ್ದ, ನೋಟ ಹೊಂದಿದ್ದ ಎಂದು ಸ್ಪಷ್ಟಪಡಿಸುತ್ತದೆ. ಜರ್ಮನಿಯಲ್ಲಿ ಪ್ರತಿಯೊಂದರಲ್ಲೂ ಯಹೂದಿಯರ ಹಿಡಿತ ಯಾವ ರೀತಿ ಇತ್ತೆಂದರೆ ಜರ್ಮನ್ನರು ಎರಡನೇ ದರ್ಜೆ ನಾಗರಿಕರಾಗಿ ಹೋಗಿದ್ದರು. ವ್ಯಾಪಾರ, ರಾಜಕೀಯ, ಸಾಮಾಜಿಕ ಜೀವನದಲ್ಲೆಲ್ಲಾ ಯಹೂದಿಗಳದ್ದೇ ಹಿಡಿತ. ಮಾಧ್ಯಮಗಳು ಕೂಡ ಅವರ ಅಂಕೆಯಲ್ಲೇ ಕುಣಿಯುತ್ತಿದ್ದವು. ಅದು ಯಾವ ಮಟ್ಟಕ್ಕಿತ್ತೆಂದರೆ ಜರ್ಮನಿಯ ಮಿಲಿಟರಿಯ ಸೈನಿಕರಿಗೆ ತಾಯ್ನಾಡಲ್ಲೇ ಬೆಂಬಲವಿಲ್ಲದೇ ಹೋರಾಡುವ ಸ್ಥೈರ್ಯ ಇಂಗಿಹೋಗಿತ್ತು. ಜರ್ಮನ್ನರ ಆತ್ಮಾಭಿಮಾನ ಸತ್ತು ಹೋಗಿತ್ತು. ಏಕೆಂದರೆ ಅನ್ಯಾಯಕ್ಕೊಳಗಾಗಿ ಸಹಿಸಿಕೊಂಡು ಸುಮ್ಮನಿದ್ದರೆ ಸೌಹಾರ್ದ. ಪ್ರತಿಭಟಿಸಿದರೆ ಸಂಕುಚಿತ, ಅಸಮರ್ಥ. ಇದರ ವಿರುದ್ಧ ಸಿಡಿದವನೇ ಹಿಟ್ಲರ್. ಇದಕ್ಕೆಲ್ಲಾ ಕೊನೆಹಾಡಿ ಜರ್ಮನ್ನರಾದ ತಮ್ಮದೂ ಕೂಡ ಯಾವ ಯಹೂದಿಗಳಿಗೂ ಕಡಿಮೆಇಲ್ಲದಂತಹ ಶ್ರೇಷ್ಠ ಜನಾಂಗ ಎಂದು ತೋರಿಸಲು, ಸಾಧಿಸಲು ಹೋದವನು ಹಿಟ್ಲರ್. ಆದರೆ ಅದಕ್ಕೆ ಅವನನುಸರಿಸಿದ ಮಾರ್ಗ ಮಾತ್ರ ಕ್ಷಮಿಸಲಾರದ್ದಾಯಿತು. ಇವತ್ತಿಗೂ ಕೂಡ ಜಗತ್ತಿನ ದೊಡ್ಡ ದೊಡ್ಡ ವ್ಯಾಪಾರಗಳಲ್ಲಿ ಯಹೂದಿಯರ ಹಿಡಿತವಿದೆ. ಆದರೆ ಯಾವುದೇ ನೆಲದಲ್ಲಾಗಲೀ ಅಲ್ಲಿನವರಿಗೆ ನ್ಯಾಯವಾಗಿ ಸಿಗಬೇಕಾದ್ದು ಸಿಗದೇ ಹೋದಾಗ ಅಲ್ಲಿನ ನೆಲದ ಜನರು ಪ್ರಕಟಗೊಳ್ಳುವುದೇ ಹಿಟ್ಲರನ ರೂಪದಲ್ಲಿ. ಎಲ್ಲರೊಳಗೊಬ್ಬ ಹಿಟ್ಲರ್ ಇದ್ದೇ ಇದ್ದಾನೆ.

****

ಮಾಹಿತಿ ಮೂಲ:
ಪುಸ್ತಕಗಳು : Mein Kampf (Adolf Hitler), Yadvashem (Nemichandra)
Documentary movie: Occupation 101 and some websites

ಗುರುವಾರ, ಅಕ್ಟೋಬರ್ 8, 2009

’ಯಾದ್ ವಶೇಮ್’ ಗುಂಗಿನಲ್ಲಿ....

ಕಾರ್ಪೋರೇಷನ್ ಸರ್ಕಲ್ಲಿನ ಎರಡೆರಡು ಸಿಗ್ನಲ್ಲುಗಳನ್ನು ದಾಟಿಕೊಂಡು ಬನ್ನಪ್ಪ ಗಾರ್ಡನ್ನಿನ ಪಕ್ಕದ ರಸ್ತೆಯಲ್ಲಿ ಕಾವೇರಿಭವನದ ಎದುರಿಗೆ ಬರುತ್ತಿದ್ದ ಹಾಗೇ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೆಂಪು ಸಿಗ್ನಲ್ಲು. ನಿಲ್ಲಿಸಿದೆ ಬೈಕು. ೧೧೨ ಸೆಕೆಂಡು ಬಾಕಿ!  ಗಾಡಿ ಆಫ್ ಮಾಡಿದೆ. . ಎಡಗಡೆ ವೀರಾಂಜನೇಯ ಸ್ವಾಮಿ ದೇವಸ್ಥಾನ. ಅದು ಯಲಹಂಕ ಬಾಗಿಲಂತೆ! ಅದರ ಈಚೆ ಕಡೆ ರಾಜಕುಮಾರ್ ಹೆಬ್ಬಾಗಿಲು, ಆಚೆ ವಿಶ್ವೇಶ್ವರಯ್ಯ ಹೆಬ್ಬಾಗಿಲು ಎಂದು ದೊಡ್ಡದಾಗಿ ಬರೆದಿರುವ ಕಮಾನುಗಳು. ಅದರ ಮೂಲಕ ಅವೆನ್ಯೂ ರಸ್ತೆಗೆ ಪ್ರವೇಶ. ಬಲಬದಿಯಲ್ಲೊಂದು ಟ್ರಾಫಿಕ್ ಪೋಲೀಸ್ ಗೂಡು. ಖಾಲಿ ಇದೆ. ಅಲ್ಲೇ ದೇವರ್ಯಾವುದೆಂದು ಗೊತ್ತಾಗದ ಗುಡಿಯೊಂದಿದೆ. ಮುಂದೆ ಬಿಳಿ ಗೋಡೆಯ ಕಪ್ಪು ಕಂಡಿಗಳ ಎತ್ತರದ ಮೈಸೂರು ಬ್ಯಾಂಕು. ಆಕಡೆ ಈಕಡೆ ಬೆಂಗಳೂರು ವಿಶ್ವವಿದ್ಯಾಲಯದ ಕೆಂಪು ಕೆಂಪು ಕಟ್ಟಡಗಳು. ಮಹಾನಗರ ಪಾಲಿಕೆ ಗೋಡೆಗಳ ಮೇಲೆಲ್ಲಾ ಸುಂದರ ಕುಂಚ ಚಿತ್ತಾರ. ವಿಧಾನಸೌಧ ಕಡೆಯಿಂದ ಬರುವ ರಸ್ತೆಯಿಂದ ಅವೆನ್ಯೂ ರಸ್ತೆಗೆ ಹರಿಯುತ್ತಿವೆ ವಾಹನಗಳು. ಆತಂಕದಲ್ಲಿ ರಸ್ತೆ ದಾಟುತ್ತಿದ್ದಾರೆ ಜನ.
*****

ಆಗಸ್ಟ್ ೯, ೧೯೪೨, ಕ್ವಿಟ್ ಇಂಡಿಯಾ ಚಳುವಳಿ. ಗಾಂಧೀಜಿ ಸಮಗ್ರ ರಾಷ್ಟ್ರಕ್ಕೆ ಕರೆಕೊಟ್ಟಿದ್ದರು. ಗಾಂಧಿಯವರನ್ನು, ಇತರ ಮುಖಂಡರನ್ನು ಬೆಳಗ್ಗೆ ಬಂಧಿಸಿದ್ದರು. ಸುದ್ದಿ ತಿಳಿದದ್ದೇ ತಡ, ಚಿಕ್ಕಲಾಲ್ ಬಾಗ್ ನಲ್ಲಿ ಸಾರ್ವಜನಿಕ ಸಭೆ ಸೇರಿತ್ತು. ಎಚ್.ಸಿ.ಸೂರ್ಯನಾರಾಯಣ ರಾವ್, ಕೆಂಗಲ್ ಹನುಮಂತಯ್ಯ, ಎಸ್.ಡಿ.ಶಂಕರ್, ಕೆ.ರಾಮಸ್ವಾಮಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಬಂಧನವನ್ನು ಖಂಡಿಸಿದ್ದರು. ’ಭಾರತ ಬಿಟ್ಟು ತೊಲಗಿ’ ಕರೆಕೊಟ್ಟಿದ್ದರು. ಅದೋ ವಿಧ್ಯಾರ್ಥಿಗಳು ತರಗತಿಗಳಿಂದ ಹೊರಬಂದರು. ಸೆಂಟ್ರಲ್ ಕಾಲೇಜಲ್ಲಿ ಓದೋ ನನ್ನ ಗೆಳೆಯರ ಅಣ್ಣಂದಿರೇನೋ ಮೆರವಣಿಗೆ ಹೊರಡ್ತಾರೆ ಅಂತಾ ಗೊತ್ತಾಗಿ ನಾನೂ ದೌಡಾಯಿಸಿದೆ. ಮೈಸೂರು ಬ್ಯಾಂಕ್ ಚೌಕದಲ್ಲಿ ನಿಷೇದಾಜ್ಞೆ. ನಾವೋ ’ಬ್ರಿಟಿಷರೆ ಭಾರತ ಬಿಟ್ಟು ತೊಲಗಿ’ ಕೂಗು ಹಾಕಿಕೊಂಡು ಬರುತ್ತಾ ಇದ್ದೇವೆ. ಪೋಲೀಸರು ಬಂದರು, ದೊಣ್ಣೆ ಹಿಡಿದು ಬಡಿದರು. ಕುದುರೆ ಮೇಲಿನ ಪೋಲೀಸರು ನಮ್ಮ ಮೇಲೆ ಕುದುರೆ ದೌಡಾಯಿಸಿದಾಗ ಸತ್ತೆನೋ ಕೆಟ್ಟೆನೋ ಅಂತಾ ಓಡಲೆತ್ನಿಸಿದೆ. ಕಾಲಿಗೆ ಬಲವಾದ ಏಟು ಬಿದ್ದು ನರಳುವಂತಾಯಿತು. ಎಲ್ಲರನ್ನೂ ಬಂಧಿಸಿ ಸೆಂಟ್ರಲ್ ಜೈಲಿಗೆ ಒಯ್ದರು. ಕುದುರೆ ಮೇಲೆ ಪೋಲೀಸರ ನೋಡಿ, ಎಷ್ಟೋ ಕಡೆ ಅಕ್ಕಪಕ್ಕದ ರಸ್ತೆಯಲ್ಲಿದ್ದ ಹೆಂಗಸರು ಮೊರದಲ್ಲಿ ರಾಗಿ ಬೀದಿಗೆ ಎರಚಿದ್ದರು. ಕುದುರೆಗಳೂ ಜಾರಿ ಜಾರಿ ಬೀಳತೊಡಗಿದವು. ...........

********

’ಯಾದ್ ವಶೇಮ್’ ಪುಸ್ತಕದ ಗುಂಗಿನಲ್ಲಿದ್ದ ನನಗೆ ಅದರಲ್ಲಿದ್ದ ಈ ಸಾಲುಗಳು ನೆನಪಿಗೆ ಬಂದವು. ಆಗಿನ ಮೈಸೂರು ಬ್ಯಾಂಕ್ ಸರ್ಕಲ್ ಹೇಗಿತ್ತು. ಎಲ್ಲಿಂದ ಬಂದಿರಬಹುದು ಮೆರವಣಿಗೆ. ಅದರಲ್ಲಿದ್ದ ಪ್ರತಿಯೊಬ್ಬನಲ್ಲೂ ದೇಶ ಸ್ವತಂತ್ರವಾಗಬೇಕೆಂಬ ಛಲ. ’ಭಾರತ ಬಿಟ್ಟು ತೊಲಗಿ’ ಘೋಷಣೆ. ಈಚೆ ಕಡೆಯಿಂದ ಕುದುರೆ ಮೇಲೆ ಬಂದ ಬ್ರಿಟಿಷರು. ಬಡಿಯುತ್ತಿದ್ದಾರೆ ಹೋರಾಟಗಾರರನ್ನು.. ಚದುರಿದ ಮೆರವಣಿಗೆಯಿಂದ ಜನ ಕಿತ್ತೂ ಬಿದ್ದೂ ಓಡುತ್ತಿದ್ದಾರೆ. ನಾವು ನಿಂತು ನೋಡುತ್ತಿದ್ದೇವೆ. ಎಲ್ಲಾ ಅಸ್ಪಷ್ಟ. ಇನ್ನು ೧೦ ಸೆಕೆಂಡು ಬಾಕಿ. ಹಸಿರು ದೀಪ ಬೀಳುತ್ತದೆ.

ಸೋಮವಾರ, ಸೆಪ್ಟೆಂಬರ್ 21, 2009

ಬಿದ್ದ ಹೆಲಿಕಾಪ್ಟರ್ ಎದ್ದದ್ದು ಹೇಗೆ?

ಆಂಧ್ರದಲ್ಲಿ ಹೆಲಿಕಾಪ್ಟರ್ ಬಿದ್ದದ್ದು, ಅದರಲ್ಲಿದ್ದ ರೆಡ್ಡಿಗಾರು ಕಥೆ ಮುಗಿದದ್ದು ಎಲ್ಲಾ ಸುದ್ದಿ ಈಗ ಹಳೆಯದಾಯಿತು. ಆಗ ಹೆಲಿಕಾಪ್ಟರ್ ಬಿದ್ದದ್ದು ಹೇಗೆ ಎಂದು ಚರ್ಚೆಗಳಾದವು. ಹವಾಮಾನ, ಪೈಲಟ್ ತಪ್ಪು, ನಿರ್ವಹಣೆ ದೋಷ ಇನ್ನೂ ಏನೇನೋ ಕಾರಣಗಳಿದ್ದವು. ಇರಲಿ. ಹೆಲಿಕಾಪ್ಟರು ಹೇಗೋ ಬಿತ್ತು, ಅದು ಒ.ಕೆ. ಆದರೆ ಈ ವಿಷಯದಲ್ಲಿ ನನ್ನ ಕುತೂಹಲ ತಿರುಗಿದ್ದು ಈ ಹೆಲಿಕಾಪ್ಟರ್ ಹಾರುವುದು ಹೇಗೆ ಎಂದು! ಇದುವರೆಗೂ ಹೆಲಿಕಾಪ್ಟರ್ ಹಾರುವ ಬಗ್ಗೆ ಬರೀ ಜೆನೆರಲ್ಲಾಗಿ ಗೊತ್ತಿತ್ತು. ಆದರೆ ಟೆಕ್ನಿಕಲ್ಲಾಗಿ ಅದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಂಡಿರಲಿಲ್ಲ. ಆದ್ದರಿಂದ ಈ ವಿಷಯದ ಬೆನ್ನು ಬಿದ್ದು ಕೆಲ ಪುಸ್ತಕ, ವೆಬ್ ಸೈಟು ಗಳಿಂದ ಇದರ ಬಗ್ಗೆ ತಿಳಿದುಕೊಂಡೆ. ಅದರ ಫಲವೇ ಈ ಚಿಕ್ಕ ಬರಹ. ಇದರಲ್ಲಿ ತೀರಾ ತಾಂತ್ರಿಕ ವಿಷಯಗಳನ್ನು ಆದಷ್ಟು avoid ಮಾಡಿದ್ದೇನೆ.

ಹಿಂದೆ ಒಮ್ಮೆ ’ವಿಮಾನವನ್ನು ಹಾರಿಸುವುದರಲ್ಲಿ ರೆಕ್ಕೆ ಹೇಗೆ ಕೆಲಸ ಮಾಡುತ್ತದೆ ' ಎಂಬ ವಿಷಯವಾಗಿ ಬರೆದಿದ್ದೆ. ಆಗ ಇಂತದ್ದೆಲ್ಲಾ ಗೂಗಲ್ ನಲ್ಲಿ ಹುಡುಕಿದರೆ ಬೇಕಾದಷ್ಟು ಸಿಗುತ್ತದೆ. ಎಲ್ಲಿಂದಲೋ ಮಾಹಿತಿ ತಂದು (ಕದ್ದು!) ಹಾಕಿದ್ದೀಯ ಎಂದು ಗೆಳೆಯನೊಬ್ಬನಿಂದ ಟೀಕೆ ಬಂದಿತ್ತು. ಹೌದು, ವಿಜ್ಞಾನ ಜಗತ್ತಿನಲ್ಲಿ ಒಂದು ಸಾರ್ವಕಾಲಿಕ ಸತ್ಯದ ಮಾತಿದೆ. Energy can neither be created nor be destroyed , it can only be converted from one form to another ಅಂತ. ಇದನ್ನು ಮಾಹಿತಿ (information)ಗೂ ಅನ್ವಯಿಸಿಕೊಳ್ಳಬಹುದು. ಅದನ್ನು ಹೊಸತಾಗಿ ಹುಟ್ಟು ಹಾಕಲು ಸಾಧ್ಯವಿಲ್ಲ, ಅದನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತರಬಹುದಷ್ಟೆ. ತಿಳಿದುಕೊಂಡ ಮಾಹಿತಿಯನ್ನು ದಾಖಲಿಸುವ ಪ್ರಯತ್ನ ಮತ್ತು ಓದಿದವರಿಗೆ ಅರ್ಥವಾದರೆ ಆಗಲಿ ಎಂಬ ಆಶಯ . ಇದರಿಂದ ಆಸಕ್ತಿ ಬಂದು ಯಾರಾದರೂ ಇನ್ನೂ ಹೆಚ್ಚು ತಿಳಿದುಕೊಳ್ಳಲು ಹೊರಡುವುದಾದರೆ ಆಲ್ ದಿ ಬೆಸ್ಟ್ ಅಷ್ಟೆ.

ಈಗ ವಿಷಯಕ್ಕೆ ಬಂದರೆ, ಹೆಲಿಕಾಪ್ಟರ್ ಗೆ ವಿಮಾನದಷ್ಟು ಸಾಗಿಸುವ ಸಾಮರ್ಥ ಇಲ್ಲ ಅನ್ನುವುದನ್ನು ಬಿಟ್ಟರೆ ಉಳಿದ ಎಲ್ಲಾ ಸಂದರ್ಭಗಳಲ್ಲಿ ವಿಮಾನಕ್ಕಿಂತ ಉಪಯೋಗಕಾರಿ. ಇದಕ್ಕೆ ರನ್ ವೇ ಬೇಕಿಲ್ಲ, ಇಳಿಯಲು ದೊಡ್ಡ ಜಾಗ ಬೇಕಿಲ್ಲ. ಇದು ನಿಂತ ಜಾಗದಿಂದಲೇ ಹಾಗೇ ಮೇಲೇರಬಲ್ಲುದು ಮತ್ತು ಹಾಗೇ ಇಳಿಯಬಲ್ಲುದು. ಗಾಳಿಯಲ್ಲಿ ಹಾಗೇ ನಿಲ್ಲಬಲ್ಲುದು. ಎಡ ಬಲ ಹೇಗೆ ಬೇಕಾದರೂ ತಿರುಗಬಲ್ಲುದು , ಮುಂದೆ ಹೋಗುವುದಲ್ಲದೇ ಹಿಂದೆ (reverse) ಕೂಡ ಚಲಿಸಬಲ್ಲುದು.

ಹೆಲಿಕಾಪ್ಟರ್ ಗೆ ಬೇಕಾದ್ದು ಮೂರು ರೀತಿಯ ಬಲಗಳು.

ಒಂದು, ಅದರ ಭಾರವನ್ನು ದಿಕ್ಕರಿಸಿ ಮೇಲೆರಲು ಬೇಕಾದ ಎತ್ತುವ ಬಲ.
ಎರಡನೇಯದು ಅದನ್ನು ಮುಂದಕ್ಕೆ ಹಿಂದಕ್ಕೆ ಎಡಕ್ಕೆ ಬಲಕ್ಕೆ ಚಲಿಸುವಂತೆ ಮಾಡುವ ಬಲ.
ಮೂರನೆಯದು ಅಡ್ಡವಾದ ದಿಕ್ಕಿನಲ್ಲಿ ಅದರ ಸಮತೋಲನ ಕಾಯಲು ಬೇಕಾದ ಮತ್ತೊಂದು ಬಲ.


ಹೆಲಿಕಾಪ್ಟರ್ ನಲ್ಲಿ ಮುಖ್ಯವಾಗಿ ಎರಡು ರೀತಿಯ ರೋಟರ್(rotor)ಗಳಿರುತ್ತವೆ. ಒಂದು ಅದರ ತಲೆ ಮೇಲಿರುವ ದೊಡ್ಡ ರೆಕ್ಕೆಗಳ ರೋಟರ್ ಮತ್ತು ಬಾಲದಲ್ಲಿರುವ ಚಿಕ್ಕ ರೋಟರ್. ಹೆಲಿಕಾಪ್ಟರ್ ಮೇಲೇರಲು ಮತ್ತು ಮುಂದೆ ಹೋಗಲು ಬೇಕಾಗುವ ಮೇಲಿನ ಎರಡು ರೀತಿಯ ಬಲಗಳನ್ನು ಒದಗಿಸುವುದು ದೊಡ್ಡ ರೋಟರ್. ಆ ರೋಟಾರ್ ನ ರೆಕ್ಕೆಗಳು ವಾಯುಫಲಕ (airfoil) ಆಕಾರದಲ್ಲೇ ಇರುತ್ತವೆ. ಇದು ಕೆಲಸ ಮಾಡುವುದು ಬರ್ನಾಲಿ ತತ್ವದಿಂದ. (airfoil ಬಗ್ಗೆ ಈ ಮೊದಲು ನಾ ಬರೆದದ್ದನ್ನು ಇಲ್ಲಿ ಓದಿದರೆ ಅರ್ಥವಾಗಬಹುದು). ವಿಮಾನದಲ್ಲಿ ರೆಕ್ಕೆಗಳು ಸ್ಥಿರವಾಗಿದ್ದು ಇಡೀ ವಿಮಾನದ ಚಲನೆಯಿಂದ ಮಾತ್ರ ರೆಕ್ಕೆಗಳು lift ಕೊಡಲು ಸಾಧ್ಯ. ಆದರೆ ಹೆಲಿಕಾಪ್ಟರಿನಲ್ಲಿ ರೆಕ್ಕೆಗಳನ್ನು ತಿರುಗಿಸಿ ಆ lifting force ಉತ್ಪತ್ತಿ ಮಾಡುತ್ತಾರೆ. Airfoil ಆಕಾರದಲ್ಲಿರುವ ರೆಕ್ಕೆಗಳು ತಿರುಗಿದಾಗ ಅವು ಗಾಳಿಯನ್ನು ಸೀಳಿ ರೆಕ್ಕೆಯ ಕೆಳಭಾಗಕ್ಕಿಂತ ಮೇಲುಗಡೆ ಕಡಿಮೆ ಒತ್ತಡ ಉಂಟು ಮಾಡಿ ಇಡೀ ಹೆಲಿಕಾಪ್ಟರನ್ನು ಮೇಲಕ್ಕೆ ಎತ್ತುತ್ತವೆ..

ಈಗ ಬಾಲದಲ್ಲಿರುವ ಚಿಕ್ಕ ರೋಟಾರ್ ಕಡೆಗೆ ಬಂದರೆ, ಹೆಲಿಕಾಪ್ಟರಿನ ಮೇಲಿನ ದೊಡ್ಡ ರೆಕ್ಕೆಗಳು ತಿರುಗಿದಾಗ ಆ ತಿರುಗುವ ಬಲ ಎಷ್ಟು ಜೋರಾಗಿರುತ್ತದೆ ಎಂದರೆ ಅದನ್ನು ಹಾಗೇ ಬಿಟ್ಟರೆ ರೆಕ್ಕೆಗಳು ತಿರುಗುವ ಉಲ್ಟಾ ದಿಕ್ಕಿನಲ್ಲಿ ಹೆಲಿಕಾಪ್ಟರ್ ಬಾಡಿ ತಿರುಗಲು ಶುರುವಾಗಿಬಿಡುತ್ತದೆ. ಅದು torque effect. ಈ ರೀತಿ ಆಗದಂತೆ ತಡೆಯಲು ಬಾಲದ ಚಿಕ್ಕ ರೋಟರ್ ಬೇಕು. ದೊಡ್ಡ ರೆಕ್ಕೆಗಳು ತಿರುಗಲು ಶುರುವಾದ ಕೂಡಲೇ ಅದರಿಂದಲೇ ಈ ಚಿಕ್ಕ ರೆಕ್ಕೆಗಳೂ ತಿರುಗುಲು ಶುರುವಾಗುತ್ತವೆ. ಈ ಬಾಲದ ರೆಕ್ಕೆಗಳ ತಿರುಗುವಿಕೆ ತಲೆ ಮೇಲಿನ ರೆಕ್ಕೆಗಳಿಗೆ ಲಂಬವಾಗಿ ಇರುತ್ತದೆ. . ಇದು ಹೆಲಿಕಾಪ್ಟರ್ ಉಲ್ಟಾ ದಿಕ್ಕಿನಲ್ಲಿ ತಿರುಗಿ ಬೀಳದಂತೆ ವಿರುದ್ಧ ದಿಕ್ಕಿನಲ್ಲಿ ಬಲವನ್ನು ಉತ್ಪತ್ತಿ ಮಾಡಿ ಸಮತೋಲನ ಕಾಪಾಡುತ್ತದೆ. ಮೇಲಿನ ಚಿತ್ರದಲ್ಲಿ ತಿರುಗುವಿಕೆಯ ದಿಕ್ಕುಗಳನ್ನು ಗುರುತಿಸಿದೆ.

ಹೆಲಿಕಾಪ್ಟರನ್ನು ಮೇಲೆ ಹಾರಿಸಿದ್ದಾಯಿತು, ಉಲ್ಟಾ ತಿರುಗಿ ಬೀಳದಂತೆ ಹಿಡಿದುಕೊಂಡದ್ದಾಯಿತು. ಈಗ ಅದನ್ನು ಎಡಕ್ಕೆ ಬಲಕ್ಕೆ ಮುಂದಕ್ಕೆ ಹಿಂದಕ್ಕೆ ಚಲಿಸಿ ಆಮೇಲೆ ಕೆಳಕ್ಕೆ ಇಳಿಸೋಣ. Airfoil ಆಕಾರದ ರೆಕ್ಕೆಗಳು ಎತ್ತುವ ಬಲ ಉತ್ಪತ್ತಿ ಮಾಡಲು ಅವು ತಿರುಗಿದಾಗ ಅವು ಗಾಳಿಯನ್ನು ಒಂದು ನಿರ್ದಿಷ್ಟ ಕೋನದಲ್ಲಿ ಗಾಳಿಯನ್ನು ಬಡಿಯುವುದು ಮುಖ್ಯ. ಇದಕ್ಕೆ angle of attack ಅನ್ನುತ್ತಾರೆ. ಈ ಕೋನ ಬದಲಾದಂತೆ ಆ ಎತ್ತುವ ಬಲ, ಎತ್ತುವ ದಿಕ್ಕು ಬದಲಾಗುತ್ತದೆ. ಹೆಲಿಕಾಪ್ಟರಿನಲ್ಲಿ ರೆಕ್ಕೆಗಳ angle of attackಅನ್ನು ಅವು ತಿರುಗುತ್ತಿದ್ದಂತೆಯೇ ಎಲ್ಲಾ ರೆಕ್ಕೆಗಳಿಗೂ ಒಟ್ಟಿಗೇ ಅಥವಾ ಒಂದೊಂದಕ್ಕೆ ಮಾತ್ರ ಬದಲಿಸಲು ಸಾಧ್ಯವಿರುವ ವ್ಯವಸ್ಥೆ ಇರುತ್ತದೆ. ಅಂದ್ರೆ rotor wing/wings can be tilted and swivelled as it spins around. ಹೆಲಿಕಾಪ್ಟರನ್ನು ಕೆಳಗಿಳಿಸಬೇಕಾದಾಗ ಎಲ್ಲ ರೆಕ್ಕೆಗಳ angle of attack ನ್ನು ಒಟ್ಟಿಗೆ ಬದಲಿಸಿದಾಗ ಅದು ಹೆಲಿಕಾಪ್ಟರನ್ನು ಕೆಳಕ್ಕೆ ತಳ್ಳುತ್ತದೆ. ಬಲಕ್ಕೆ ತಿರುಗಬೇಕು ಅಂದಾಗ ಬಲಭಾಗದಲ್ಲಿ ಬರುವ ರೆಕ್ಕೆಯ ಕೋನ ಬದಲಾಯಿಸುತ್ತಾರೆ, ಆಗ ಅಲ್ಲಿ ಒಂದು ಕಡೆ ಅಸಮತೋಲನ ಉಂಟಾಗಿ ಆ ಕಡೆಗೆ ಹೆಲಿಕಾಪ್ಟರ್ ತಿರುಗುತ್ತದೆ. ಇದೇ ರೀತಿ ಎಡಕ್ಕೆ ತಿರುಗುವಾಗ ಎಡ ಭಾಗದ ರೆಕ್ಕೆಯ ಕೋನ ಬದಲಿಸಿ ತಿರುಗಿಸುತ್ತಾರೆ. ಮುಂದೆ ಹೋಗಬೇಕಾದಾಗ ಹೆಲೆಕಾಪ್ಟರಿನ ರೆಕ್ಕೆಗಳ ಕೋನ ಯಾವ ರೀತಿ ಇರುತ್ತದೆಂದರೆ ಗಾಳಿಯು ಅದಕ್ಕೆ ಬಡಿದಾಗ ಅದು ಹೆಲಿಕಾಪ್ಟರನ್ನು ಮುಂದಕ್ಕೆ ದೂಡುತ್ತದೆ. ಅದೇ ರೀತಿ ಹಿಂದಕ್ಕೆ ಚಲಿಬೇಕಾದಾಗಲೂ ಕೂಡ. ಇದೆಲ್ಲುದರ ಹೊರತಾಗಿ ಹೆಲಿಕಾಪ್ಟರಿನ ಮೂತಿಯನ್ನು ಎಡಕ್ಕೆ ಬಲಕ್ಕೆ ಹೊರಳಿಸಲು ಬಾಲದ ರೆಕ್ಕೆಗಳ ತಿರುಗುವ ವೇಗದಲ್ಲಿ ಹೆಚ್ಚು ಕಡಿಮೆ ಮಾಡಿ ಅಸಮತೋಲನ ಉಂಟುಮಾಡುವುದರಿಂದ ಸಾಧ್ಯವಾಗುತ್ತದೆ. ಒಟ್ಟಾರೆ ಇವೆಲ್ಲಾ ಚಲನೆ, ನಿಯಂತ್ರಣಗಳ ಕಾಂಬಿನೇಷನ್ ನಲ್ಲಿ ಹೆಲಿಕಾಪ್ಟರ್ ಚಲಿಸುತ್ತದೆ.

ಹೆಲಿಕಾಪ್ಟರಿನ ಕಾರ್ಯವೈಖರಿ ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಲು ತಾಂತ್ರಿಕವಾಗಿ ಆಳವಾಗಿ ಅರ್ಥ ಮಾಡಿಕೊಳ್ಳಬೇಕು. ನಾವು ಕಾರ್ ಓಡಿಸುವಾಗ ಕ್ಲಚ್, ಗೇರ್, ಆಗ್ಸೆಲೆರೇಟರ್ ಬಳಸಿದಂತೆ ಹೆಲಿಕಾಪ್ಟರ್ ಪೈಲಟ್ ಕೆಲವು ಲೀವರ್, ಪೆಡಲ್ ಗಳ ಮೂಲಕ ಇದಿಷ್ಟನ್ನೂ ಸಾಧಿಸಬೇಕಾಗುತ್ತದೆ. ಆದ್ದರಿಂದಲೇ ಹೆಲಿಕಾಪ್ಟರನ್ನು ನೆಡೆಸಲು, ಎಲ್ಲಾ ರೀತಿಯಲ್ಲಿ ಕಂಟ್ರೋಲ್ ಮಾಡಲು ಸಿಕ್ಕಾಪಟ್ಟೆ ಪರಿಣಿತಿ ಬೇಕಾಗುತ್ತದೆ. ಇದರ ಜೊತೆಗೆ ಹೆಲಿಕಾಪ್ಟರಿನ ಎಲ್ಲಾ ಭಾಗಗಳು ಒಳ್ಳೆಯ ಸ್ಥಿತಿಯಲ್ಲಿರುವುದೂ ಮತ್ತು ಹೆಲಿಕಾಪ್ಟರ್ ಹಾರುವ, ಹಾರಿಸಲು ಸಾಧ್ಯವಾಗುವಂತಹ ವಾತಾವರಣ ಇರುವುದೂ ಮುಖ್ಯ. ಇವಿಷ್ಟರಲ್ಲಿ ಯಾವುದರಲ್ಲಿ ಸ್ವಲ್ಪ ಏರುಪೇರಾದರೂ ರೆಡ್ದಿಗಾರುಗೆ ಆದ ಸ್ಥಿತಿ ಆಗುತ್ತದೆ.

ಚಿತ್ರಗಳು: ಎಲ್ಲಿಂದಲೋ ಎತ್ತಿದ್ದು.

ಬರೆದ ಮಾಹಿತಿಗಳೇನಾದರೂ ತಪ್ಪಾಗಿದ್ದರೆ ಅದನ್ನು ತಿದ್ದಲು ಬಲ್ಲವರಿಗೆ ಸ್ವಾಗತವಿದೆ. ಈ ವಿಷಯದಲ್ಲಿ ಇನ್ನಿತರ ಪೂರಕ ಮಾಹಿತಿಗಳಿಗೂ ಸ್ವಾಗತ.

ಗುರುವಾರ, ಆಗಸ್ಟ್ 27, 2009

something.. for sale here !Any comments ?!! :-)

ಹೊಸೂರು ರಸ್ತೆಗೆ ಬಿದ್ದಿದ್ದೇನೆ

ಹೊಸೂರು ರಸ್ತೆಗೆ ಬಿದ್ದಿದ್ದೇನೆ. ಹಿಂದೊಮ್ಮೆ ಒಂದು ಇಮೇಲ್ ಬಂದಿತ್ತು. "life is like hosur road, there are no shortcuts!" ನಿಜ... ಐ.ಟಿ. ಯವರ ಮೇಲೆ ಸ್ವಲ್ಪ ಪ್ರೀತಿ ಬಂದಿದೆ. ಹಗಲು ರಾತ್ರಿ ಕೆಲಸ ಮಾಡುತ್ತಾರೆ ಎಂದಲ್ಲ ಅಥವಾ ಏನೋ ತಂತ್ರಜ್ಞಾನ ಕಡಿದು ಕಟ್ಟೆ ಹಾಕುತ್ತಾರೆ ಅಂತಲೂ ಅಲ್ಲ. ಬದಲಾಗಿ ಆ ರಸ್ತೆಯಲ್ಲಿ ಹೋಗಿ ಬಂದು ಕೆಲಸ ಮಾಡುತ್ತಾರಲ್ಲ ಎಂದು! ನಾನು ಇದುವರೆಗೂ ಕೆಲಸ ಮಾಡಿದ ಕಂಪನಿಗಳು ನಗರ ಮಿತಿಯ ಒಳಗೇ ಇದ್ದುದರಿಂದ ಓಡಾಡಲು ಅಷ್ಟೇನೂ ತೊಂದರೆಯಾಗಿರಲಿಲ್ಲ. ನಿಧಾನವಾದರೂ ತಾಸಿನೊಳಗೆ ತಲುಪುವಂತಿತ್ತು. ಆದರೆ ಈ ಹೊಸೂರು ರಸ್ತೆಗೆ ಇದೇ ಮೊದಲು ಬಂದಿರುವುದು ನಾನು. ನಾನಿರುವ ಏರಿಯಾದಿಂದ ಬಹಳ ದೂರ. ಜೊತೆಗೆ ಇಲ್ಲಿಂದ ಅಲ್ಲಿಗೆ ಹೋಗುವ ರಸ್ತೆಗಳೆಲ್ಲವೂ busy ರಸ್ತೆಗಳು. ಬೈಕ್ ನಲ್ಲಿ ಹೋದರೆ ತಾಸುಗಟ್ಟಲೇ ಹೋಗುತ್ತಲೇ ಇರಬೇಕು, ಹೋಗುತ್ತಾ ಹೋಗುತ್ತಾ ತಮಿಳುನಾಡಿಗೇ ಹೋಗಿಬಿಡುತ್ತೇನಾ ಅಂತ ಭಯವಾಗುತ್ತದೆ. ಸಿಟಿ ಬಸ್ಸಿನಲ್ಲಿ ಹೋದರೆ ಮಧ್ಯಾಹ್ನವಾದರೂ ತಲುಪುತ್ತೇನಾ ಇಲ್ಲವಾ ಅಥವಾ ಸಂಜೆ ವಾಪಸ್ ಹೊರಟರೆ ಮಧ್ಯರಾತ್ರಿಗಾದರೂ ಮನೆ ತಲುಪುತ್ತೇನಾ ಅಂತ ಸಂಶಯ ಶುರುವಾಗಿಬಿಡುತ್ತದೆ. ಇದು ನಗರದ ಮಿತಿಯೊಳಗೇ ಬರುವುದರಿಂದ ಕಂಪನಿಸಾರಿಗೆ ವ್ಯವಸ್ಥೆ ಇಲ್ಲ ಎಂದು ಕಂಪನಿಯವರು ಕೈಎತ್ತಿದ್ದಾರೆ. ಮೊದಲು ನನ್ನ ಸ್ನೇಹಿತರು ಕೆಲವರು ಹೊಸೂರು ರಸ್ತೆ ಟ್ರಾಫಿಕ್ ಬಗ್ಗೆ ಹೇಳುವುದನ್ನು ಕೇಳಿದಾಗ ಅಯ್ಯೋ ಪಾಪ ಅನ್ನಿಸುತ್ತಿತ್ತು. ಈಗ ನಾನೇ ಅಯ್ಯೋ ಪಾಪ ಆಗಿದ್ದೇನೆ. ಇದನ್ನೇ ಗೆಳೆಯರಿಗೆ ಹೇಳಿದರೆ ನಿನ್ನ ಕಂಪನಿ ಬಹಳ ಹತ್ತಿರವಿದೆ, ನಿನ್ನ ಪರಿಸ್ಥಿತಿ ಎಷ್ಟೋ ಪರವಾಗಿಲ್ಲ , ಇಷ್ಟಕ್ಕೇ ನೀನು ಹೀಗೆ ಅತ್ತರೆ ದಿನಾ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಇನ್ನೂ ಮುಂದೆ ಓಡಾಡುವವರ ಪಾಡು ಗೊತ್ತಾ ಅನ್ನುತ್ತಾರೆ. ಅವರು ಹೇಳುವ ಪ್ರಕಾರ ಈಗ ಹೊಸೂರು ರಸ್ತೆ ಎಷ್ಟೋ ಪರವಾಗಿಲ್ಲವಂತೆ. ಬಹಳ ಅಗಲ ಮಾಡಿದ್ದಾರಂತೆ. ಕೆಲ ಸಿಗ್ನಲ್ಲುಗಳಲ್ಲಿ, ಕ್ರಾಸಿಂಗ್ ಗಳಲ್ಲಿ ಮಾತ್ರ ತೊಂದರೆ ಇದೆಯಂತೆ. ಹೌದು, ಏನೋ ರಸ್ತೆ ಕೆಲಸ ನೆಡೆಯುತ್ತಲೇ ಇದೆ. ಅದರಿಂದಲೇ ಅರ್ಧ ಟ್ರಾಫಿಕ್ ದಟ್ಟಣೆ. ಒಂದು ಫೈ ಓವರ್ ಕಟ್ಟುವಿಕೆಯೂ ನೆಡೆಯುತ್ತಿದೆ. ಅದು ಸೀದ ಇನ್ಫೋಸಿಸ್ ಒಳಗೇ ಇಳಿಯುತ್ತದಂತೆ! :) ಅದು ತಯಾರಾದ ಆದ ಮೇಲೆ ಅದರಲ್ಲಿ ಓಡಾಡಲು ಟೋಲ್ ಉಂಟಂತೆ. ಅದು ಖಾಲಿ ಹೊಡೆಯುವ ಎಲ್ಲಾ ಲಕ್ಷಣಗಳೂ ಈಗಲೇ ಕಾಣಿಸುತ್ತಿದೆ. ನೋಡಬೇಕು. ಪಾಪ, ಇಂತ ರಸ್ತೆಗಳಲ್ಲಿ ದಿನವಿಡೀ ಬಸ್ ಓಡಿಸುವ ಬಿ.ಎಂ.ಟಿ.ಸಿ ಬಸ್ ಚಾಲಕರ ಶ್ರಮಕ್ಕೊಂದು ದೊಡ್ಡ ನಮಸ್ಕಾರ. peak hourನಲ್ಲಿ ಇಂಚಿಂಚಾಗಿ ಚಲಿಸುವುದಿದೆಯಲ್ಲ ಅದು ಮೈ ಪರಚಿಕೊಳ್ಳುವಂತೆ ಮಾಡುತ್ತದೆ. ಸಂಜೆ ಎಲ್ಲರಿಗೂ ಮನೆಗೆ ಹೋಗಲು ಅದೇನೂ ಅವಸರವೋ. ಬಸ್, ಕಾರು, ಬೈಕ್ ಗಳಲ್ಲಿ ಎಲ್ಲರೂ ಹೇಗೆಗೆ ಆಗುತ್ತದೋ ಹಾಗೆಲ್ಲಾ ನುಗ್ಗುವುದನ್ನೂ ನೋಡಿಯೇ ಆನಂದಿಸಬೇಕು! ಅಲ್ಲೇ ಹತ್ತಿರದಲ್ಲಿ ಮನೆ ಮಾಡೋಣವೆಂದರೆ ನಾನಾ ತೊಡಕುಗಳು.

ದಿನಾ ೩-೪ ತಾಸು ರಸ್ತೆಯಲ್ಲಿ ಕಳೆಯುವುದಿದೆಯಲ್ಲ, ಅದರಂತಹ ಟೈಮ್ ವೇಸ್ಟು ಬೇರೆ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅದು ಎಂತವನ ಸತ್ವವನ್ನೂ, ಉತ್ಸಾಹವನ್ನೂ ಉಡುಗಿಸಿಬಿಡುತ್ತದೆ.......ಇದೆಲ್ಲುದರ ಪರಿಣಾಮವಾಗಿ ಸದ್ಯದಲ್ಲೇ ಬಸವೇಶ್ವರ ನಗರ ಒಳ್ಳೆ ಹುಡುಗನೊಬ್ಬನನ್ನು ಕಳೆದುಕೊಳ್ಳಲಿದೆಯಾ? ಗೊತ್ತಿಲ್ಲ, ಕಾದು ನೋಡಬೇಕು. :-)

ಮಂಗಳವಾರ, ಆಗಸ್ಟ್ 4, 2009

ಗೆಳೆಯರ ಪುಸ್ತಕ ಬಿಡುಗಡೆ - ಖುಶಿ ಮತ್ತು ಕರೆಯ

ಒಟ್ನಲ್ಲಿ, ಹೀಗೆಲ್ಲ ಆಗಿ ಹೀಗೆಲ್ಲ ಆಗಿದೆ. ಮತ್ತು...... ನಮಗೂ ಖುಶಿಯಾಗಿದೆ! :-)

ಗೆಳೆಯರಾದ ಶ್ರೀನಿಧಿ.D.S ಮತ್ತು ಸುಶ್ರುತ ದೊಡ್ಡೇರಿ ಬರೆದಿರುವ ಪುಸ್ತಕಗಳು ಬಿಡುಗಡೆಯಾಗುತ್ತಿವೆ.ಸುಚಿತ್ರಾ ಫಿಲ್ಮ್ ಸೊಸೈಟಿ ವಿಳಾಸ ಇಂತಿದೆ.
# 36, 9th Main, BV Karanth Road, II Stage,
Banashankari, Bengaluru - 560 070.

ಇದೇ ಭಾನುವಾರ ಎಲ್ಲರೂ ಅಲ್ಲಿ ಸಿಗೋಣ ಬನ್ನಿ..

ಶುಕ್ರವಾರ, ಜುಲೈ 31, 2009

ಭದ್ರಾವತಿಯೆಂದರೆ.....


ನನ್ನೂರು...
ಭದ್ರಾವತಿಯೆಂದರೆ ಬೆಂಕಿಪುರ. ಭದ್ರಾವತಿಯೆಂದರೆ ಬೆವರ ಬೇಸಿಗೆ, ಅಬ್ಬರದ ಮಳೆ, ಮಲೆನಾಡ ಜಗುಲಿ. ಭದ್ರಾವತಿಯೆಂದರೆ 'ಉಕ್ಕಿನ ನಗರಕ್ಕೆ ಸುಸ್ವಾಗತ' ಬೋರ್ಡು, ಬೈಪಾಸ್ ಪರೇಡು. ಭದ್ರಾವತಿಯೆಂದರೆ ಕಬ್ಬಿಣ, ಕಾಗದ ಕಾರ್ಖಾನೆ, ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ಭದ್ರಾವತಿಯೆಂದರೆ ಸುಣ್ಣದ ಹಳ್ಳಿ ಸ್ಪಟಿಕ ಭದ್ರೆ, ತ್ಯಾಜ್ಯದ ಕರಿನೀರು. ಭದ್ರಾವತಿಯೆಂದರೆ ನೆಮ್ಮದಿಯ ರೈತರ ನೀರಾವರಿ ಗದ್ದೆ, ಪಕ್ಷೇತರ ರಾಜಕೀಯ. ಭದ್ರಾವತಿಯೆಂದರೆ ಬಸ್ಟ್ಯಾಂಡು, ಮಳೆಗಾಲಕ್ಕೆ ಮುಳುಗುವ ಹೊಸ ಸೇತುವೆ, ಶತಮಾನದ ಹಳೆ ಸೇತುವೆ. ಭದ್ರಾವತಿಯೆಂದರೆ ಕೂಗುವ ಕಾರ್ಖಾನೆ ಸೈರನ್ನು, ತೆರೆದುಕೊಳ್ಳುವ ಗೇಟು, ಟ್ರಾಫಿಕ್ ತುಂಬಿದ ಡಬ್ಬಲ್ ರೋಡು ಹತ್ತೇ ನಿಮಿಷಕ್ಕೆ ಖಾಲಿ ಖಾಲಿ. ಭದ್ರಾವತಿಯೆಂದರೆ ಕಾರ್ಮಿಕ ಸಂಘ, ಚುನಾವಣೆ, ರಾಜಕೀಯ ಪ್ರವೇಶದ ಗರಡಿ ಮನೆ. ಭದ್ರಾವತಿಯೆಂದರೆ ರಣಜಿ ಸ್ಟೇಡಿಯಂ, ಎಗ್ಸಿಬಿಷನ್, ಪಟಾಕಿ ಸದ್ದಿಗೆ ಬೆಚ್ಚಿ ಬಿದ್ದ ಅಯ್ಯಪ್ಪ. ಭದ್ರಾವತಿಯೆಂದರೆ ಸಿಲ್ವರ್ ಜುಬಿಲಿ ಕಾಲೇಜಿನ ಪೋಲಿ ಹುಡುಗರು, ಸಾಯಿಬಾಬಾ ಮಂದಿರದ ಅಖಂಡ ಭಜನೆ. ಭದ್ರಾವತಿಯೆಂದರೆ ಹೊಯ್ಸಳರ ನರಸಿಂಹಸ್ವಾಮಿ ದೇವಸ್ಥಾನ, ಅದರೆದುರಿನ ಮುದುಕಿಯಂಥ ತೇರು, ಬಿಂಜಲಿನಲ್ಲಿ ಮೂಲೆ ಸೇರಿದ ಜೇಡ. ಭದ್ರಾವತಿಯೆಂದರೆ ಬುಲ್ಡೆಕಾಯಿ ಆಯುವ, ಸೈಕಲ್ ರೇಸಿನ ಶಾಲೆ ಮಕ್ಕಳು. ಭದ್ರಾವತಿಯೆಂದರೆ ಮಿಲಿಟರಿ ಕ್ಯಾಂಪಿನ ಗುಡಿ ಶ್ರೀನಿವಾಸನೆದುರು ಸಂಜೆ ಸೂರ್ಯನ ಕೆಂಪುಕೆನ್ನೆಯ ಮಂದಹಾಸ. ಭದ್ರಾವತಿಯೆಂದರೆ ವಿಜಯದಶಮಿ, ಕನಕಮಂಟಪದ ಅಲಂಕಾರ ದೇವರ ಎದುರಲ್ಲಿ ಬನ್ನಿಕಡಿತ. ಭದ್ರಾವತಿಯೆಂದರೆ ಬಿ.ಎಚ್. ರೋಡು, ಒಂದೇ ರೂಟಿನ ವೆಂಕಟೇಶ್ವರ ಸಿಟಿ ಬಸ್ಸು, ಲಾರಿಗಳ ರಾತ್ರಿ ರಥೋತ್ಸವ. ಭದ್ರಾವತಿಯೆಂದರೆ ಬೆಣಚು ಕಲ್ಲು, ಅದಿರು ಮಣ್ಣು, ಕಾಗೆ ಕಣ್ಣು. ಭದ್ರಾವತಿಯೆಂದರೆ ಶಿಸ್ತಿನ ಕಾಲೋನಿ, ಹಳೇನಗರದ ಸಂದಿ, ಆನೆಪಾರ್ಕು, ಜನ್ನಾಪುರದ ಜಂಗುಳಿ. ಭದ್ರಾವತಿಯೆಂದರೆ ವೆಂಕಟೇಶ್ವರ ಟಾಕೀಸಿನ ಕನ್ನಡ ಪಿಚ್ಚರು, ಮುಂಜುನಾಥ ಟಾಕೀಸಿನ ಇಂಗ್ಲೀಷ್ ಪಿಚ್ಚರು. ಭದ್ರಾವತಿಯೆಂದರೆ ಭಾನುವಾರದ ಸಂತೆ, ಸಂಜೆಗಳ ಕಂತೆ, ತಿಳಿಯದ ಚಿಂತೆ . ಭದ್ರಾವತಿಯೆಂದರೆ ಪದ್ಮನಿಲಯದ ಮಸಾಲೆದೋಸೆ, ಸರ್ಕಲ್ಲಿನ ಪಾನಿಪೂರಿ ಗಾಡಿ, ಸ್ಪೆಷಲ್ ಚುರ್ ಮುರಿ. ಭದ್ರಾವತಿಯೆಂದರೆ ಮರೆತುಹೋಗಿರುವ ಬಡಕ್ಕೆಲ ಕೃಷ್ಣಭಟ್ಟರು. ಭದ್ರಾವತಿಯೆಂದರೆ ಗೆಸ್ಟ್ ಹೌಸಿನ ನಾಗಲಿಂಗ ಹೂವಿನ ಮರ, ತಣ್ಣನೆ ಈಜು, ಹಸಿರು ಹುಲ್ಲು. ಭದ್ರಾವತಿಯೆಂದರೆ ನಾಲ್ಕು ಬಾಗಿಲುಗಳ, ಮೂರುಪಾಳಿಗಳ, ನೂರು ಪಾತಳಿಗಳ ಪೇಲವ ಕವಿತೆ. ಭದ್ರಾವತಿಯೆಂದರೆ .....

ಜಯಂತ ಕಾಯ್ಕಿಣಿಯವರ 'ಶಬ್ದತೀರ'' ಪುಸ್ತಕದ 'ಅಂಕೋಲೆಯೆಂದರೆ..' ಎಂಬ ಬರಹದಿಂದ ಪ್ರೇರಿತ.

ಗುರುವಾರ, ಜುಲೈ 23, 2009

ಮರ ಬೆಳೆಯುತ್ತಿದೆ..

ಈಗ ಅದು ಮರ. ಎಲ್ಲ ದಿಕ್ಕಿಗೂ ಕೊಂಬೆ ಚಾಚಿಕೊಂಡು ಇಷ್ಟೆತ್ತರಕ್ಕೆ ಬೆಳೆದಿದೆ. ಹೂವು ಬಿಡುತ್ತದೆ, ಕಾಯಾಗುತ್ತದೆ. ಎಲೆ ಉದುರುತ್ತವೆ, ಮತ್ತೆ ಚಿಗುರುತ್ತವೆ. ಹಕ್ಕಿಗಳು ಕೂರುತ್ತವೆ, ಕೂಗುತ್ತವೆ. ಗೂಡು ಕಟ್ಟುತ್ತವೆ, ಮರಿಗಳು ಕಣ್ಬಿಡುತ್ತವೆ. ಅಳಿಲುಗಳು ಸರಿದಾಡುತ್ತವೆ. ದನಕರುಗಳು ತಣ್ಣಗೆ ನೆರಳಿನಲ್ಲಿ ನಿಂತು ಮೆಲುಕು ಹಾಕುತ್ತವೆ. ಮಳೆ ಬಂದಾಗ ಮುದುರಿ ನಿಲ್ಲುತ್ತವೆ. ತರಕಾರಿ ಗಾಡಿಯವ ನಿಂತು ಬೆವರು ಒರೆಸಿಕೊಂಡು ಮುಂದುವರೆಯುತ್ತಾನೆ. ಸೊಪ್ಪಿನ ಹೆಂಗಸು ಬುಟ್ಟಿ ಕೆಳಗಿಳಿಸಿ ಉಶ್ಶೆಂದು ಒರಗಿಕೊಳ್ಳುತ್ತಾಳೆ. ಮಕ್ಕಳ ಸಂಜೆಯ ಉಪ್ಪಿನಾಟದ ಕಂಬವಾಗುತ್ತದೆ, ಒಮ್ಮೊಮ್ಮೆ ಕ್ರಿಕೆಟಿನ ವಿಕೆಟ್ ಆಗುತ್ತದೆ.

೧೫ ವರುಷಗಳ ಹಿಂದೆ ಅದು ಒಂದು ಸಸಿ. ಒಂದು ಕಡ್ಡಿ, ಅದರಲ್ಲಿ ಎಣಿಸಿ ಹತ್ತು ಎಲೆಗಳು. ನಾವು ಹೊಸದಾಗಿ ಮನೆ ಕಟ್ಟಿದಾಗ ಸಸಿ ನೆಟ್ಟು ಹೋಗಿದ್ದರು. ಅಲ್ಲಿನ ಮಣ್ಣಿಗೆ ಕಚ್ಚಿಕೊಂಡ ದಿನದಿಂದಲೇ ಎಲೆ ಮೂಡಿಸುತ್ತಾ ಚಿಗುರತೊಡಗಿತ್ತು. ಇಡೀ ರಸ್ತೆಯಲ್ಲಿನ ಎಲ್ಲ ಗಿಡಗಳನ್ನು ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಹಿರಿಯರು ನಾವು ಹುಡುಗರಿಗೆ ವಹಿಸಿಕೊಟ್ಟಿದ್ದರು. ಪ್ರತಿವರ್ಷದ ಮಳೆಗೆ ಸಾಯದಂತೆ, ಬಿಸಿಲಿಗೆ ಒಣಗದಂತೆ, ದನ ಕುರಿಗಳ ಬಾಯಿ ಸೇರದಂತೆ, ದನಕಾಯುವ ಹುಡುಗರು ಮುರಿದು ಹಾಕದಂತೆ ಕಾಯ್ದದ್ದು ಸಾರ್ಥಕ. ಸಣ್ಣ ಸಸಿಯಿದ್ದಾಗ ದನಕರುಗಳು ತಿನ್ನದಿರಲೆಂದು ಬೇಲಿ ಹಾಕುತ್ತಾರೆ, ಆದರೆ ಅದೇ ಸಸಿ ಬೆಳೆದು ಮರವಾದಮೇಲೆ ದನಕರುಗಳನ್ನು ಅದಕ್ಕೇ ಕಟ್ಟಿಹಾಕುತ್ತಾರೆ. ರಸ್ತೆ ಮರಗಳಿಂದ ನಳನಳಿಸುತ್ತಿದೆ. ದೀಪಾವಳಿಯಲ್ಲಿ ಎದುರು ಮನೆ ನೀಲಕಂಠ ಮಾವ ಮರಕ್ಕೆ ಪಟಾಕಿ ಸರ ಕಟ್ಟಿ ಹಚ್ಚಿದಾಗ ಪಾಪ ಅದಕ್ಕೆ ಎಷ್ಟು ನೋವಾಗುತ್ತದೇನೋ, ಹೆದರಿಕೊಂಡ ಅಳಿಲು ಯಾವ ಮೂಲೆ ಸೇರಿದೆಯೇನೋ.!


ಆ ಮರದ ಕೆಳಗೆ ಸುಮ್ಮನೇ ನಿಲ್ಲುತ್ತೇನೆ. ಎಲೆಗಳು ಬೀಸಿದ ಗಾಳಿಗೆ ಹಿತವೆನಿಸುತ್ತದೆ. ಹಕ್ಕಿಗಳಿಗೆ ಕಿವಿಯಾಗುತ್ತೇನೆ. ಸಂಭ್ರಮಗೊಳ್ಳುತ್ತೇನೆ, ಕಾರಣವಿಲ್ಲದೇ ಹೆದರುವ ಅಳಿಲನ್ನು ನೋಡಿ ನಗುತ್ತೇನೆ. ಆಗ ಇಷ್ಟೇ ಇಷ್ಟಿದ್ದ ಈ ಸಸಿ ಎಷ್ಟು ದೊಡ್ಡ ಮರ ಆಗಿದೆ, ಕೈಯಾರೆ ನೀರು ಹಾಕಿದ, ಬೇಲಿಕಟ್ಟಿ ಕಾಯ್ದ, ಕಣ್ಣೆದುರಿಗೇ ಬೆಳೆದ ಮರ ಎಷ್ಟು ಖುಷಿ ಕೊಡುತ್ತದೆ ಗೊತ್ತಾ ಅಂತ ಅಪ್ಪನಿಗೆ ಹೇಳುತ್ತೇನೆ. ನೀನು ಕೂಡ ಇಷ್ಟೇ ಇಷ್ಟು ಇದ್ದೆ , ಈಗ ನನ್ನ ಕಣ್ಣೆದುರಿಗೇ ಹೇಗೆ ಬೆಳೆದಿದ್ದೀಯ ಗೊತ್ತಾ ಅನ್ನುತ್ತಾರೆ. ಅಮ್ಮ ದನಿಗೂಡಿಸುತ್ತಾಳೆ. ಮರದ ಯಾವ ಕೊಂಬೆಯನ್ನೂ ಕಡಿಯಬೇಡಿ, ಗೆದ್ದಲು ಹತ್ತದಂತೆ ನೋಡಿಕೊಳ್ಳಿ ಅನ್ನುತ್ತೇನೆ. ಫೋನು ಮಾಡಿದಾಗಲೆಲ್ಲಾ "ಹುಷಾರಾಗಿ ಗಾಡಿ ಓಡ್ಸು", "ಆರೋಗ್ಯ ನೋಡ್ಕೋ", ಅದೂ ಇದೂ ಅಂತ ಇಪ್ಪತ್ತು ಸಾರಿ ಅನ್ನುವ ಅಮ್ಮನ ತಲ್ಲಣ ಸ್ವಲ್ಪ ಸ್ವಲ್ಪವೇ ಅರ್ಥಾಗುತ್ತಿದೆ.

ಮರ ಇನ್ನೂ ಬೆಳೆಯುವುದಿದೆ, ಬೆಳೆಯುತ್ತದೆ. ಫೋನಿಗೆ ಸಂದೇಶವೊಂದು ಬಂದಿದೆ. ಯಾರೋ ಹಾರೈಸಿದ್ದಾರೆ. .

ಗುರುವಾರ, ಜುಲೈ 16, 2009

ಟೀವಿ ಧಾರಾವಾಹಿಯಲ್ಲೊಂದು ಬ್ಲಾಗ್ !

ಟೀವಿಯಲ್ಲಿ ಧಾರಾವಾಹಿಗಳಿಗೋಸ್ಕರವೇ ಸಮಯ ಎತ್ತಿಟ್ಟು ನೋಡುತ್ತಿದ್ದ ಕಾಲವೊಂದಿತ್ತು. ಆಗ ಧಾರಾವಾಹಿಗಳು ಹಿತಮಿತವಾಗಿ ವಾರಕ್ಕೊಂದೊಂದೇ ಎಪಿಸೋಡುಗಳಂತೆ ಬರುತ್ತಿದ್ದವು. ಗುಣಮಟ್ಟವೂ ಚೆನ್ನಾಗಿರುತ್ತಿತ್ತು. ಅಥವಾ ಆಗ ಇದ್ದುದೊಂದೇ ದೂರದರ್ಶನವಾದ್ದರಿಂದ ಹಾಗನಿಸುತ್ತೋ ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಧಾರಾವಾಹಿಗಳು ಖುಷಿ ಕೊಡುತ್ತಿದ್ದವು. ನನಗೆ ಸಣ್ಣವನಿದ್ದಾಗ ಗುಂಗುರು ಕೂದಲಿನ ರವಿಕಿರಣ್ ಧಾರಾವಾಹಿಯನ್ನು ತಪ್ಪದೇ ನೋಡುತ್ತಿದ್ದ ನೆನಪಿದೆ. ಅನಂತರ ಹಲವು ಛಾನಲ್ ಗಳು ಶುರುವಾದ ಮೇಲೆ ಧಾರಾವಾಹಿಗಳು ದಿನದಿನವೂ ಬಂದು ಅದರಲ್ಲಿ ಆಸಕ್ತಿ ಕಡಿಮೆಯಾಗುತ್ತಾ ಹೋಯಿತು. ಪೀಯುಸಿ ರಜದಲ್ಲಿ ಭಕ್ತಿಯಿಂದ ನೋಡಿದ ಧಾರಾವಾಹಿಯೆಂದರೆ 'ಮಾಯಾಮೃಗ'. ಆಮೇಲೆ ಡಿ.ಡಿ.ಯಲ್ಲಿ 'ಸಾಧನೆ' ಎಂಬ ಸೀರಿಯಲ್ಲನ್ನು ನೋಡುತ್ತಿದ್ದೆ. ಒಳ್ಳೊಳ್ಳೆ ಕಲಾವಿದರ ತಂಡವಿದ್ದ ಅದೂ ಕೂಡ ಆಮೇಲೆ ಬೋರಾಯಿತು. ಆಮೇಲೆ ಎಂಜಿನಿಯರಿಂಗ್ ಸೇರಿ ಮನೆಯಿಂದ ಹೊರಬಿದ್ದ ಮೇಲೆ ಧಾರಾವಾಹಿ ನೋಡುವ ಅಭ್ಯಾಸ ತಪ್ಪಿಹೋಯಿತು. ’ಗೃಹಭಂಗ ’ಎಂಬ ಧಾರಾವಾಹಿಯನ್ನು ನೋಡುತ್ತಿದ್ದುದು ಸ್ವಲ್ಪ ನೆನಪಿದೆ. ಆಮೇಲೆ ಬೆಂಗಳೂರಿಗೆ ಬಿದ್ದ ಮೇಲೆ ಚಿಕ್ಕಪ್ಪನ ಮನೆಯಲ್ಲಿದ್ದೆ. ನಮ್ಮ ಚಿಕ್ಕಮ್ಮ ಧಾರಾವಾಹಿ ಭಕ್ತೆ. ತೀರಾ ಸಂಜೆ ೬ ರಿಂದಲೇ ಹಿಡಿದು ರಾತ್ರೆ ೧೦ ರ ವರೆಗೆ ಧಾರಾವಾಹಿಗಳ ಮೇಲೆ ಧಾರಾವಾಹಿಗಳು. ಆಗ ಅನಿವಾರ್ಯವಾಗಿ ಕುಂಕುಮಭಾಗ್ಯ, ಕನ್ಯಾದಾನ ಇತ್ಯಾದಿಗಳಿಂದ ಮಾನಸಿಕ ಅತ್ಯಾಚಾರಕ್ಕೊಳಗಾಗಿ ಧಾರಾವಾಹಿಗಳೆಂದರೆ ಅಲರ್ಜಿ ಆಗಿಹೋಗಿತ್ತು. ಈ ಆಘಾತದಿಂದ ಸ್ವಲ್ಪ relief ಕೊಟ್ಟು ಗುಣವಾಗಿಸಿದ್ದು ’ಮೂಡಲಮನೆ’ ಮತ್ತು 'ಮನ್ವಂತರ', 'ಮುಕ್ತ'ದ ಕೋರ್ಟ್ ಕೇಸುಗಳು. ಆಗ "ಬಸವರಾಜು, ಆ ಫೈಲ್ ತಗೊಂಡು ಬಾರಪ್ಪ" ಅನ್ನುವಾಗ ಕೇಸ್ ಏನಾಗುತ್ತೋ ಅನ್ನುವ ಕುತೂಹಲ ಇತ್ತು. ಈಗ "ಲಿಂಗರಾಜು, ಆ ಫೈಲ್ ಕೊಡಪ್ಪ" ಅನ್ನುವ ಹೊತ್ತಿಗೆ ರಾಜು ಮರ್ಡರ್ ಮಾಡಿಸಿದ್ದು ಮಿಶ್ರಾನೇ, ಅವನಿಗೆ ಶಿಕ್ಷೆ ಆಗೇ ಆಗುತ್ತದೆ ಅನ್ನೋದು ಎಂತವರಿಗೂ ಗೊತ್ತಾಗಿ ಹೋಗಿತ್ತು. ಶಾಂಭವಿ ಮೇಡಂಗೆ ಮದ್ವೆ ಆದ್ರೆ ಆಗಲಿ ಬಿಟ್ರೆ ಬಿಡ್ಲಿ, ಸದ್ಯಕ್ಕೆ ನಾನಂತೂ ಟೀವಿಯಿಂದಲೇ ಮುಕ್ತ ಮುಕ್ತ.... :)

ಇದೆಲ್ಲಾ ಯಾಕೆ ನೆನಪಾಯ್ತಂದ್ರೆ ಕೆಲದಿನಗಳ ಹಿಂದೆ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿರುವ ಪ್ರೀತಿಯ ಗೆಳೆಯನೊಬ್ಬ ನಮ್ಮ ಧಾರಾವಾಹಿಗೊಂದು ಬ್ಲಾಗ್ ಮಾಡಿದ್ದೇವೆ ನೋಡೋ ಅಂದ. ನನಗೆ ಆಶ್ಚರ್ಯ ಆಯಿತು. ಅರೆರೆ ಧಾರಾವಾಹಿಗೆ ಎಂತಾ ಬ್ಲಾಗಪ್ಪಾ ಅಂತ. ಪ್ರತಿ ಎಪಿಸೋಡಿನ ಕಥೆಯನ್ನೂ ಬರೆದು ಹಾಕುತ್ತಿರಬಹುದು ಅಂದುಕೊಂಡೆ. ಆದರೆ ಅದು ಹಾಗಲ್ಲ, ಒಂದು ವಿಭಿನ್ನ ರೀತಿಯ ಪ್ರಯೋಗ ಮಾಡಿದ್ದಾರೆ. ಖುಷಿಯಾಯಿತು. 'ಜೋಗುಳ' ಅಂತ ಧಾರಾವಾಹಿ ಹೆಸರು, ಜೀ ಕನ್ನಡದಲ್ಲಿ ದಿನಾ ಎಂಟೂವರೆಗೆ ಬರುತ್ತದೆ. 'ಕುಟುಂಬ' ಮತ್ತು 'ಪ್ರೀತಿ ಇಲ್ಲದ ಮೇಲೆ' ಎಂಬ ಜನಪ್ರಿಯ ಧಾರಾವಾಹಿಗಳ ವಿನು ಬಳಂಜ ಮತ್ತು ನರೇಶ್ ತಂಡದ ಧಾರಾವಾಹಿ ಅದು. ಅದರಲ್ಲಿ ವಾಸು ಎಂಬ ಮುಖ್ಯ ಪಾತ್ರ ಪ್ರೇಯಸಿ ದೇವಕಿ ಜೊತೆಗಿನ misunderstandingನಿಂದ ಭಗ್ನಪ್ರೇಮಿ ಆಗಿರುತ್ತಾನಂತೆ. ವಾಸು ಅಮೇರಿಕಾಕ್ಕೆ ಹೋದ ಮೇಲೆ ತನ್ನ ಪ್ರೇಯಸಿಯ ನೆನಪಲ್ಲಿ ದಿನಾ ಬ್ಲಾಗ್ ಬರೆಯುತ್ತಾನೆ. ಅವನು ದೇವಕಿಗೆ ದಿನಾ ತನ್ನ ನೋವನ್ನು, ಪ್ರೀತಿಯನ್ನು ತೋಡಿಕೊಳ್ಳುತ್ತಾನೆ. ಧಾರಾವಾಹಿ ತಂಡದವರು ಅದನ್ನು ರಿಯಲ್ಲಾಗಿಯೂ ಬರೆಯುತ್ತಿದ್ದಾರೆ. ಧಾರಾವಾಹಿಯಲ್ಲೇ ಕತೆಗೆ ಪೂರಕವಾಗಿ ಒಮ್ಮೊಮ್ಮೆ ಬ್ಲಾಗ್ ತೋರಿಸುತ್ತಾರೆ ಕೂಡ. ಆದ್ದರಿಂದ ಇದೊಂತರಾ ನಿಜವಾಗಿಯೂ ಅಸ್ತಿತ್ವದಲ್ಲಿರುವ ಧಾರಾವಾಹಿ ಪಾತ್ರ. sstrange ! ಮೊನ್ನೆ ಧಾರಾವಾಹಿ ಸೆಟ್ ಗೆ ಹೋಗಿ ಅವರ ಜೊತೆ ಮಾತಾಡಿ ಇಂತಹ ಐಡಿಯಾ ಅಳವಡಿಸಿಕೊಂಡದ್ದಕ್ಕೆ ಮೆಚ್ಚುಗೆ ಹೇಳಿದೆ. ಆಗ ಅವರು "ಎಲ್ಲಿದೀರ್ರಿ ನೀವು, ನಾವಾಗ್ಲೇ ಚಾಟಿಂಗ್ ಕೂಡ ತೋರಿಸಿದ್ದೇವೆ ಧಾರಾವಾಹಿಯಲ್ಲಿ" ಅಂದರು ! ಏನೇ ಆಗಲಿ ಕಾಲಕ್ಕೆ ತಕ್ಕುದಾದ ಗುಡ್ ಕ್ರಿಯೇಟಿವಿಟಿ ಕಣ್ರಿ. ಧಾರಾವಾಹಿ ತಂಡಕ್ಕೆ ಶುಭಹಾರೈಕೆಗಳು. ಅಂದ ಹಾಗೆ, ಬ್ಲಾಗ್ ಕೊಂಡಿ ಇಲ್ಲಿದೆ ನೋಡಿ : ನನ್ನ ದೇವಕಿ.

******************

ಕನ್ನಡದ ಮೊಟ್ಟಮೊದಲ ವೆಬ್ ಸೈಟ್ ಖ್ಯಾತಿಯ ಗಣಕತಜ್ಞ ಡಾ.ಪವನಜ ಅವರು ಕನ್ನಡಪ್ರಭದಲ್ಲಿ ಪ್ರತಿಸೋಮವಾರ ಒಂದು ಅಂಕಣ ಬರೆಯುತ್ತಾರೆ. ಗಣಕಿಂಡಿ ಅಂತ ಅದರ ಹೆಸರು. ಕನ್ನಡ ಭಾಷೆಯನ್ನೂ ಚೆನ್ನಾಗಿ ತಿಳಿದುಕೊಂಡಿರುವ ಅವರು ಕಂಪ್ಯೂಟರ್ ನಲ್ಲಿ ಕನ್ನಡ ತರುವಲ್ಲಿ ಸಾಕಷ್ಟು ಕೆಲಸ ಮಾಡಿರುವವರು. ಈ ಸಲದ ಅಂಕಣದಲ್ಲಿ internetಗೆ ಕನ್ನಡದಲ್ಲಿ 'ಅಂತರ್ಜಾಲ' ಎಂಬ ಪದ ಸರಿಯೋ, ’ಅಂತರಜಾಲ’ ಸರಿಯೋ ಎಂಬುದರ ಬಗ್ಗೆ ಬರೆದಿದ್ದಾರೆ. ನನಗೆ ಮೊದಲಿಂದಲೂ ಇದೊಂದು ಸಂಶಯವಿತ್ತು. ಅಂತರ್ಜಾಲ ಅಂದರೆ intranet ಆಗುತ್ತದೆ. ಆದರೆ internet ಗೆ ಅಂತರ್ಜಾಲ ಎಂದು ಬಳಸುತ್ತಾರಲ್ಲ ಅಂತ. ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಮೇಲೆ ತಪ್ಪು ತಿದ್ದಿಕೊಳ್ಳಬೇಕು. ಗಣಕ ಮತ್ತು ಅಂತರಜಾಲ ಸಂಬಂಧಿತ ಬಹಳಷ್ಟು ಉಪಯುಕ್ತ ಮಾಹಿತಿಗಳು ಈ ಅಂಕಣದಲ್ಲಿ ಬರುತ್ತವೆ. ಇದರ ಬ್ಲಾಗ್ ಕೂಡ ಮಾಡಿಟ್ಟಿದ್ದಾರೆ. ಆ ಭರಪೂರ ಮಾಹಿತಿಗಳ ತಾಣ ಇಲ್ಲಿದೆ: ಗಣಕಿಂಡಿ.

ಸೋಮವಾರ, ಜುಲೈ 13, 2009

ಆಧುನಿಕ ಬುದ್ಧನ ಅಲೆದಾಟ

ಆತ ಆಧುನಿಕ ಬುದ್ಧ ! ಅಮೆರಿಕಾದ ವಿಶ್ವವಿದ್ಯಾಲಯವೊಂದರ ೨೨ ವರ್ಷದ ಆ ಹುಡುಗ ಪದವಿ ಮುಗಿದ ಮೇಲೆ ಅಪ್ಪ ಅಮ್ಮನ ಹೊಸ ಕಾರಿನ ಉಡುಗೊರೆಯನ್ನು ನಿರಾಕರಿಸುತ್ತಾನೆ. ಈ ಲೌಕಿಕ ಬದುಕಿನ ವ್ಯಾಮೋಹಗಳ ಬಗ್ಗೆ ಅಸಹ್ಯ ಅವನಿಗೆ. ಅಪ್ಪ ಅಮ್ಮಂದಿರ ಭೋಗಜೀವನ, ಅಧಿಕಾರ ಗುಣಗಳ ಬಗ್ಗೆ ಅಸಮಾಧಾನ. ನಗರದ ಬದುಕಿನಿಂದ, ನಾಗರೀಕತೆಯಿಂದ ದೂರ ಹೋಗಿ ಪ್ರಕೃತಿಯಲ್ಲಿ ಯಾವ ಗುರಿಯೂ ಇಲ್ಲದಂತೆ ನೈಸರ್ಗಿಕವಾಗಿ ಬದುಕುವುದೇ ನಿಜವಾದ ಅಸ್ತಿತ್ವ ಎಂಬ ಆಸೆಯಿಂದ ಹೊರಟುಬಿಡುತ್ತಾನೆ. ತನ್ನ ಬ್ಯಾಂಕ್ ಕಾರ್ಡ್, ಐಡೆಂಟಿಟಿ ಕಾರ್ಡ್ ಎಲ್ಲವನ್ನೂ ನಾಶಪಡಿಸಿ, ತನ್ನ ಉಳಿತಾಯದ ಹಣವನ್ನು ದಾನಮಾಡಿ ತನ್ನ ಕಾರನ್ನು ಕೂಡ ಎಲ್ಲೋ ಬಿಟ್ಟು ತನ್ನಲ್ಲಿ ಉಳಿದಿದ್ದ ಸ್ವಲ್ಪ ಹಣವನ್ನೂ ಸುಟ್ಟು ಹಾಕಿ ತಂದೆತಾಯಿಗಳಿಗೂ ತಿಳಿಸದೇ ತನ್ನ ಒಂದಿಷ್ಟು ವಸ್ತು, ಸಲಕರಣೆಗಳೊಡನೆ ಜೋಗಿಜಂಗಮನಂತೆ ಕಾಲ್ನಡಿಗೆಯಲ್ಲೇ ಪ್ರಕೃತಿಯೆಡೆಗೆ ಪ್ರಯಾಣ ಬೆಳೆಸುತ್ತಾನೆ. ನಗರದಿಂದ ಹೊರಟು ಅವನ ಗುರಿಯಾಗಿದ್ದ ಅಲಾಸ್ಕಾ ಕಾಡನ್ನು ತಲುಪುವವರೆಗಿನ ಆ ಹುಡುಗನ ಎರಡು ವರ್ಷಗಳ ಅಲೆದಾಟ, ದಾರಿಯಲ್ಲಿ ಅವನು ಭೇಟಿಯಾಗುವ ಜನಗಳು, ಏರ್ಪಡುತ್ತಿದ್ದ ಸಂಬಂಧಗಳ ಬಂಧಕ್ಕೆ ಸಿಲುಕದೇ ಮುಂದುವರೆಯುವುದು, ಆತನ ಸಾಹಸಗಳು, ಕೊನೆಗೆ ಅಲಾಸ್ಕಾದ ಕಾಡುಗಳಲ್ಲಿ ಆತ ಸವೆಸುವ ದಿನಗಳ ಕಥೆ ಇದು.

ಆ ಹುಡುಗ ಹೆದ್ದಾರಿಗಳಲ್ಲಿ ಸಿಗುವ ಗಾಡಿಗಳಲ್ಲಿ ಪ್ರಯಾಣ ಮಾಡುತ್ತಾ ಅಲೆಮಾರಿ ಹಿಪ್ಪಿ ದಂಪತಿಗಳ ಒಡನಾಟದಲ್ಲಿ ಕಾಲ ಕಳೆಯುತ್ತಾನೆ. ಒಬ್ಬ ಉತ್ಸಾಹಿ ರೈತನ ಹೊಲದಲ್ಲಿ ಅವನೊಂದಿಗೆ ಬೇಸಾಯ, ಕಟಾವಿನಲ್ಲಿ ತೊಡಗುತ್ತಾ ಮೈಮರೆಯುತ್ತಾನೆ, ಸಂತೋಷ ಅನುಭವಿಸುತ್ತಾನೆ. ಷೋಡಶಿಯ ದೇಹಕ್ಕೆ ಸೋಲದೇ ತಪ್ಪಿಸಿಕೊಳ್ಳುತ್ತಾನೆ. ಉಕ್ಕಿ ಹರಿಯುವ ನದಿಯಲ್ಲಿ ದೋಣಿ ನೆಡೆಸುತ್ತಾ ಮೆಕ್ಸಿಕೋ ತಲುಪಿ ಅಲ್ಲಿಂದ ರೈಲು ಹಿಡಿದು ಹಿಂದಿರುಗಿ ಬರುತ್ತಾನೆ. ದಾರಿಯಲ್ಲೆಲ್ಲೋ ಸಿಗುವ ಮುದುಕನ ಜೊತೆ ದಿನಕಳೆದು ಅವನಲ್ಲಿ ಜೀವನೋತ್ಸಾಹ ಮೂಡಿಸುತ್ತಾನೆ, ತನ್ನ ಬದುಕಿನ ಉದ್ದೇಶದ ಬಗ್ಗೆ ತಿಳಿಸುತ್ತಾನೆ. ಇವನನ್ನು ದತ್ತು ಪಡೆಯುವುದಾಗಿ ಮಕ್ಕಳಿಲ್ಲದ ಆ ಮುದುಕ ಬೇಡಿಕೆ ಇಟ್ಟಾಗ ಅದನ್ನು ನಯವಾಗಿ ಮುಂದೂಡಿ ತನ್ನ ಗುರಿಯಾದ ಅಲಾಸ್ಕಾದ ಕಾಡುಗಳಿಗೆ ಹೋಗಿಬಿಡುತ್ತಾನೆ. ತನ್ನ ಪ್ರಯಾಣದುದ್ದಕ್ಕೂ ನದಿ, ಸಮುದ್ರ, ಬೆಟ್ಟ, ಗುಡ್ಡ, ಗಿಡಮರಗಳ ಸಾಂಗತ್ಯವನ್ನು ಅನುಭವಿಸುತ್ತಾನೆ. ಅದರೊಳಗೆ ಬೆರೆಯುತ್ತಾನೆ. ಅಲಾಸ್ಕಾದ ಹಿಮಕಾಡುಗಳನ್ನು ತಲುಪಿದಾಗ ನಿಜವಾದ ಪ್ರಕೃತಿಯೊಡನೆ ಅವನ ಜೀವನ ಶುರುವಾಗುತ್ತದೆ. ಅಲ್ಲಿ ಅವನಿಗೆ ಯಾರೋ ತೊರೆದು ಹೋದ ಚಿಕ್ಕ ಬಸ್ ಒಂದು ಅನಿರೀಕ್ಷಿತವಾಗಿ ದೊರೆತು ಅದನ್ನೇ ಮನೆಯನ್ನಾಗಿ ಮಾಡಿಕೊಳ್ಳುತ್ತಾನೆ. ಒಂದಿಷ್ಟು ದಿನಗಳು ಚೆನ್ನಾಗಿ ನೆಡೆದರೂ ಸಹ ಅನಂತರ ಅಲ್ಲಿನ ಪ್ರಕೃತಿಯ ಕಠೋರತೆ ಹವಾಮಾನ ಕಾಲ ವೈಪರೀತ್ಯದೊಂದಿಗೆ ಅನುಭವವಾಗಲು ಶುರುವಾಗುತ್ತದೆ. ಇಷ್ಟು ದಿನ ಆಹಾರವಾಗಿದ್ದ ಪ್ರಾಣಿಗಳು ಸಿಗದೇ ಪರದಾಡುತ್ತಾನೆ. ಕ್ರಮೇಣ ಈ ಪ್ರಕೃತಿಯೊಳಗೊಂದಾಗಿ ಬದುಕಲು ತನ್ನ ತಯಾರಿ ಸಾಲದು ಎಂದೆನಿಸಿದಾಗ ಅಲ್ಲಿಂದ ಹಿಂದಿರುಗಿ ಬರುವ ಪ್ರಯತ್ನಕ್ಕೆ ತುಂಬಿಹರಿಯುತ್ತಿರುವ ನದಿ ಅಡ್ಡಲಾಗಿ ಅನಿವಾರ್ಯವಾಗಿ ಅಲ್ಲೇ ಉಳಿಯಬೇಕಾಗುತ್ತದೆ. ಹಣವಿದ್ದಾಗ ಎಲ್ಲವೂ ಸುಲಭ ನಿಜ, ಆದರೆ ತನ್ನ ಜೀವನದ ಅತ್ಯಂತ ರೋಮಾಂಚನದ ಕ್ಷಣಗಳು ದೊರೆತಿದ್ದು ಒಂದೇ ಒಂದು ಪೈಸೆಯೂ ಇಲ್ಲದ ಸಮಯದಲ್ಲಿ ಎನ್ನುವ ನಂಬಿಕೆಯ ಆತನಿಗೆ ಮನುಷ್ಯ ಪ್ರಕೃತಿಯನ್ನು ಪ್ರೀತಿಸುವಷ್ಟೇ ಅದರ ಬಗ್ಗೆ ಹೆದರಿಕೆಯನ್ನೂ ಕೂಡ ಇಟ್ಟುಕೊಳ್ಳಬೇಕು ಎನ್ನುವುದು ಅರಿವಾಗುವಾಗ ತೀರ ತಡವಾಗಿರುತ್ತದೆ. ಆಹಾರ ಸಿಗದೇ ಇರುವ ಸ್ಥಿತಿ ಬಂದಾಗ ತಾನು ಕೊಂಡುಹೋಗಿದ್ದ ಪುಸ್ತಕಗಳ ಸಹಾಯದಿಂದ ತಿನ್ನುವಂತಹ ಗಿಡಗೆಡ್ಡೆಗಳ ಹುಡುಕಾಟದಲ್ಲಿ ತೊಡಗಿ ಎಡವಿ ವಿಷಕಾರಿ ಸಸ್ಯವೊಂದನ್ನು ತಿಂದು ಜೀರ್ಣಶಕ್ತಿ ನಾಶವಾಗುತ್ತದೆ. ಆತನ ಕೊನೆದಿನಗಳು, ಅವನು ಪಡುವ ಪಾಡು ಪ್ರಕೃತಿಯ ಶಕ್ತಿಗೆ ಸಾಕ್ಷಿಯಾಗುತ್ತವೆ. ನಿಜವಾದ ಸಂತೋಷ ಎಂಬುದು ಸಿಗುವುದು ಅದನ್ನು ಹಂಚಿಕೊಂಡಾಗ ಮಾತ್ರ ಎಂಬ ಷರಾವನ್ನು ಬರೆದು ತಾನೇ ಬಯಸಿ ತಂದುಕೊಂಡಿದ್ದ ಏಕಾಂತ ಜೀವನದಿಂದ ಸಾವಿನ ಮೂಲಕ ಮುಕ್ತಿ ಹೊಂದುತ್ತಾನೆ. ಅಲ್ಲಿಯವರೆಗಿನ ತನ್ನ ಅಲೆದಾಟದ ಪ್ರತಿ ದಿನವನ್ನೂ ಡೈರಿಯಲ್ಲಿ ದಾಖಲಿಸಿಟ್ಟಿರುತ್ತಾನೆ.

ಇನ್ ಟು ದಿ ವೈಲ್ಡ್ (In to the Wild)- ೨೦೦೭ ರ ಈ ಇಂಗ್ಲೀಷ್ ಸಿನೆಮಾ ಕ್ರಿಸ್ಟೋಫರ್ ಮೆಕ್ಯಾಂಡ್ಲೆಸ್ ಎಂಬ ಹುಡುಗನ ನಿಜ ಜೀವನದ ಕಥೆಯನ್ನೊಳಗೊಂಡ ಜಾನ್ ಕ್ರಾಕೋರ್ ಎಂಬುವರಿಂದ ಬರೆಯಲ್ಪಟ್ಟ ಅದೇ ಹೆಸರಿನ ಪುಸ್ತಕದ ಮೇಲೆ ಆಧರಿತವಾಗಿದೆ.  ಶಾನ್ ಪೆನ್ (Sean Penn) ನಿರ್ದೇಶನದ ಈ ಸಿನೆಮಾದಲ್ಲಿ ಅಲೆಗ್ಸಾಂಡರ್ ಸುಪರ್ ಟ್ರ್ಯಾಂಪ್ ಹೆಸರಿನ ಮುಖ್ಯ ಪಾತ್ರದಲ್ಲಿ ಎಮಿಲೆ ಹರ್ಷ್ (Emile Hirsch) ನಟಿಸಿದ್ದಾನೆ. ಸಿನೆಮಾದಲ್ಲಿ ಕೆಲವು ಸ್ವಗತಗಳು, ಮಾತುಗಳು ಸ್ವಲ್ಪ ಕಾವ್ಯಮಯವಾಗಿದ್ದು ಪ್ರತಿಯೊಂದು ಭಾಗವೂ, ದೃಶ್ಯವೂ ಸುಂದರವಾಗಿ ನಿರೂಪಿಸಲ್ಪಟ್ಟಿವೆ. ನಿಸರ್ಗವನ್ನು ತೆರೆಯಲ್ಲಿ ತೋರಿಸಿರುವ ಪರಿ ಮತ್ತು ಅರ್ಥಪೂರ್ಣ ಸಂಭಾಷಣೆಗಳು ಇಷ್ಟವಾಗುತ್ತವೆ. ಮನುಷ್ಯನ ಜೀವನ, ಸಂಬಂಧಗಳು, ಸ್ವಾತಂತ್ರ್ಯ, ವೈರಾಗ್ಯ ಮತ್ತು ಪ್ರಕೃತಿಯನ್ನು ಜೋಡಿಸುವ ಸೇತುವೆಯೆನಿಸುತ್ತದೆ. ಸಿನೆಮಾ ಮುಗಿದಾದ ಮೇಲೆ ಸ್ವಲ್ಪ ಹೊತ್ತು ಮೌನ, ಒಂದು ಏಕಾಂತತೆ ಬೇಕೆನಿಸುವುದು ಸಿನೆಮಾ ನಮ್ಮನ್ನು ತಾಗುವುದರ ಪರಿಣಾಮವಿರಬಹುದು.

********

ಸಿನೆಮಾದ ಇಡೀ ಕಥೆಯನ್ನೇ ಹೇಳಿಬಿಟ್ಟಿದ್ದೇನೆ ಎಂದುಕೊಳ್ಳಬೇಡಿ. ಇಂತಹ ಸಿನೆಮಾಗಳಲ್ಲಿ ಕಥೆ, ಕೈಮಾಕ್ಸ್ , ಇನ್ನಿತರ ಸಂಗತಿಗಳು ಗೌಣ. ಇದು ಒಂಥರಾ Concept ಸಿನೆಮಾ. Presentation ಮುಖ್ಯ. ನಂಗಂತೂ ಬೇಜಾನ್ ಇಷ್ಟ ಆಯ್ತು , ನಿಮಗೂ ಆಗಬಹುದೇನೋ ನೋಡಿ. (೧೨ಜುಲೈ೦೯ ಕನ್ನಡಪ್ರಭದ ಸಾಪ್ತಾಹಿಕ ಪ್ರಭದಲ್ಲಿ ಈ ಬರಹ ಸಂಕ್ಷಿಪ್ತ ರೂಪದಲ್ಲಿ ಪ್ರಕಟವಾಗಿದೆ)

ಸೋಮವಾರ, ಜುಲೈ 6, 2009

ವಿದ್ಯೆ ಮತ್ತು ಔದ್ಯಮಿಕತೆ

ಇತ್ತೀಚೆಗೆ ಇ-ಮೇಲಿನಲ್ಲಿ ಸಣ್ಣ ಕಥೆಯೊಂದು ಬಂದಿತ್ತು. ಅದು ಹೀಗಿದೆ. ಒಬ್ಬ ಹುಡುಗ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಆಫೀಸ್ ಬಾಯ್ ಕೆಲಸ ಕೇಳಿಕೊಂಡು ಹೋಗಿರುತ್ತಾನೆ. ಅಲ್ಲಿನ admin ಇವನನ್ನು ಸಂದರ್ಶನ ಮಾಡಿ ಇವನು ಕೆಲಸಕ್ಕೆ ಲಾಯಕ್ಕಿದ್ದಾನೆ ಎಂದು ತೀರ್ಮಾನಿಸುತ್ತಾನೆ. ಅನಂತರ ಆ ಹುಡುಗನ ಹತ್ತಿರ ನಿನ್ನ ಇ-ಮೇಲ್ ಐಡಿ ಕೊಡು ಅದಕ್ಕೊಂದು ಅರ್ಜಿ ಕಳಿಸುತ್ತೇನೆ, ಅದನ್ನು ತುಂಬಿ ಕಳಿಸಿದ ಮೇಲೆ ನಿನಗೆ ಅಪಾಯಿಟ್ಮೆಂಟ್ ಲೆಟರ್ ಕಳಿಸುತ್ತೇನೆ ಅದರ ಪ್ರಿಂಟ್ ತೆಗೆದುಕೊಂಡು ಬಂದು ನೀನು ಇಲ್ಲಿ ಸೇರಿಕೊಳ್ಳಬಹುದು ಎನ್ನುತ್ತಾನೆ. ಆಗ ಆ ಹುಡುಗ "ನನಗೆ ಯಾವುದೇ ಇಮೇಲ್ ಐಡಿ ಇಲ್ಲ ಮತ್ತು ನನಗೆ ಇಂಟರ್ನೆಟ್ ಬಳಕೆಯೂ ಗೊತ್ತಿಲ್ಲ" ಎನ್ನುತ್ತಾನೆ. ಆಗ ಆ ಅಡ್ಮಿನ್ ಈ ಕಾಲದಲ್ಲಿ ಇಮೇಲ್ ಐಡಿ ಇಲ್ಲ ಎಂದ ಮೇಲೆ ನಿನ್ನ ಅಸ್ತಿತ್ವಕ್ಕೇ ಬೆಲೆಯೇ ಇಲ್ಲ ನೀನು ಇಲ್ಲಿ ಕೆಲಸ ಮಾಡಲು ನಾಲಾಯಕ್ ಎಂದು ಬೈದು ಓಡಿಸುತ್ತಾನೆ. ಏನು ಮಾಡುವುದು ಎಂದು ತಿಳಿಯದೇ ಹುಡುಗ ಹೊರಗೆ ಬಂದು ಸ್ವಲ್ಪ ಹೊತ್ತು ಯೋಚಿಸುತ್ತಾನೆ. ಅವನ ಜೇಬಿನಲ್ಲಿ ೫೦ ರೂಪಾಯಿ ಮಾತ್ರ ಇರುತ್ತದೆ. ಅದು ಇನ್ನು ಒಂದು ದಿನಕ್ಕೆ ಸಾಕು. ಆಮೇಲೆ ಹೇಗೆ ಎಂದು ಯೋಚಿಸಿ ಒಂದು ತೀರ್ಮಾನಕ್ಕೆ ಬಂದು ಸೀದ ಟೊಮ್ಯಾಟೋ ಮಾರುಕಟ್ಟೆಗೆ ಹೋಗಿ ೧೦ ಕೆ.ಜಿ ಟೊಮ್ಯಾಟೋ ಕೊಂಡು ಅದನ್ನು ಮನೆ ಮನೆಗೆ ಮಾರುತ್ತಾನೆ. ಲಾಭ ಮಾಡಿಕೊಳ್ಳುತ್ತಾನೆ, ಹೀಗೆ ಮಾರನೇ ದಿನ ಇನ್ನೂ ಹೆಚ್ಚು ಮಾರಿ ಇನ್ನೂ ಹೆಚ್ಚಿನ ಲಾಭ ಬರುತ್ತದೆ. ಹೀಗೆಯೇ ನಿಷ್ಠೆಯಿಂದ ದುಡಿದು ಒಳ್ಳೆಯ ಲಾಭದಿಂದ ಅವನೇ ಒಂದು ತಳ್ಳುಗಾಡಿ ತೆಗೆದುಕೊಳ್ಳುತ್ತಾನೆ, ಅನಂತರ ಒಂದು ಲಗ್ಗೇಜ್ ಆಟೋ, ಟ್ರಕ್ ಹೀಗೆ ಮುಂದುವರೆಯುತ್ತಾ ಹೋಗಿ ಬೇರೆ ಬೇರೆ ವ್ಯಾಪಾರಗಳಲ್ಲೂ ತೊಡಗಿ ೫ ವರ್ಷಗಳ ನಂತರ ಆ ಊರಿನ ಪ್ರಮುಖ ವ್ಯಾಪಾರಿಗಳಲ್ಲಿ ಒಬ್ಬನಾಗುತ್ತಾನೆ. ಒಂದು ದಿನ ಅವನಿಗೆ ತನ್ನ ಕುಟುಂಬಕ್ಕೆ ವಿಮೆ ಮಾಡಿಸಬೇಕು ಎಂಬ ಯೋಚನೆ ಬಂದು ವಿಮಾ ಏಜೆಂಟೊಬ್ಬನನ್ನು ಮನೆಗೆ ಕರೆಯುತ್ತಾನೆ. ಅರ್ಜಿ ಎಲ್ಲ ತುಂಬಿ ಆದ ಮೇಲೆ ಆ ಏಜೆಂಟ್ ಇದ್ದವನು ನಿಮ್ಮ ಇಮೇಲ್ ಐಡಿ ಕೊಡಿ ಎಂದು ಕೇಳಿದಾಗ ನನಗೆ ಯಾವ ಇಮೇಲ್ ಐಡಿಯೂ ಇಲ್ಲ, ನೆಟ್ ಬಳಕೆಯೂ ಗೊತ್ತಿಲ್ಲ ಎನ್ನುತ್ತಾನೆ. ಆಗ ವಿಮಾ ಏಜೆಂಟನು ನೀವು ಇಷ್ಟು ದೊಡ್ಡ ಬಿಸಿನೆಸ್ ಮನ್ ಆಗಿ ಒಂದು ಇಮೇಲ್ ಐಡಿ ಇರದೇ ಇರುವುದು ಆಶ್ಚರ್ಯ, ಆದರೂ ಇಷ್ಟು ಯಶಸ್ವಿಯಾಗಿದ್ದೀರಿ, ಇನ್ನು ನಿಮಗೆ ಇಂಟರ್ನೆಟ್ ಬಳಕೆ ಗೊತ್ತಿದ್ದರೆ ಇನ್ನೂ ಏನಾಗುತ್ತಿದ್ದಿರಿ ಎನ್ನುತ್ತಾನೆ. ಆಗ ಅವನು ನಿಟ್ಟುಸಿರಿಟ್ಟು "ದುರದೃಷ್ಟಕ್ಕೆ ನಾನು ಇಮೇಲ್ ಐಡಿಯೊಂದನ್ನು ಮಾಡಿಕೊಂಡಿದ್ದರೆ ಇವತ್ತು ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಆಫೀಸ್ ಬಾಯ್ ಆಗಿರುತ್ತಿದ್ದೆ" ಎನ್ನುತ್ತಾನೆ.

ಈ ಕತೆಯನ್ನು ಯಾವುದೇ ಉದ್ದೇಶಕ್ಕೆ ಬರೆದಿರಬಹುದು. ಆದರೆ ಇದು ಬಿಂಬಿಸುವುದು ಒಬ್ಬ ಉದ್ಯಮಿ ಹುಟ್ಟುವ ಅಂಶವನ್ನು. ಒಬ್ಬ ಸಾಮಾನ್ಯ ಮನುಷ್ಯ ಉದ್ಯಮಿಯಾಗಿ, ಮಾಲೀಕನಾಗಿ ಬೆಳೆಯಲು ಕಾರಣಗಳನ್ನು, ಪರಿಸ್ಥಿತಿಗಳನ್ನು ಈ ಕತೆಗಳು ಸೂಕ್ಷ್ಮವಾಗಿ ತಿಳಿಸಿಕೊಡುತ್ತವೆ. ಉದ್ಯಮಿ ಎಂದ ಮಾತ್ರಕ್ಕೆ ಟಾಟಾ, ಬಿರ್ಲಾ, ನೀಲೇಕಣಿ, ನಾಣಿಗಳೇ ಆಗಬೇಕಂತಿಲ್ಲ. ಇವತ್ತು ನಮ್ಮ ಸುತ್ತಮುತ್ತಲೇ ಇರುವ ಸಾವಿರಾರು ವ್ಯಾಪಾರಸ್ಥರೂ, ಬಗೆಬಗೆಯ ಬಿಸಿನೆಸ್ ಗಳನ್ನು ನೆಡೆಸುತ್ತಿರುವವರೂ ಕೂಡ ಉದ್ಯಮಿಗಳೇ. ತಂದೆಯಿಂದ ಬಂದ ಬಿಸಿನೆಸ್ ಅನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಕೆಲವೇ ಕೆಲವರನ್ನು ಹೊರತುಪಡಿಸಿದರೆ ಎಲ್ಲರೂ ಕೂಡ ಒಬ್ಬ ಉದ್ಯಮಿಯಾಗಿ ರೂಪುಗೊಳ್ಳಲು ಕಾರಣ ಒಂದಲ್ಲಾ ಒಂದು ರೀತಿಯ ಪರಿಸ್ಥಿತಿಯೇ ಕಾರಣವಾಗಿರುತ್ತದೆ ಮತ್ತು ಮುಖ್ಯವಾಗಿ ಅವರಲ್ಲಿರುವ ರಿಸ್ಕ್ ತೆಗೆದುಕೊಂಡು ಮುನ್ನುಗ್ಗಿರುವ ಗುಣ ಕಾರಣವಾಗಿರುತ್ತದೆ. ಈ ರೀತಿಯ ಪರಿಸ್ಥಿತಿಗೆ, ರಿಸ್ಕ್ ತೆಗೆದುಕೊಂಡು ಬೆಳೆದಿರುವುದಕ್ಕೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿರಬಹುದು ಅಥವಾ ಛಲದಿಂದ ಆಗಿರಬಹುದು. ನನ್ನ ಗೆಳೆಯನೊಬ್ಬ ಕೆಲಸ ಮಾಡುವ ಕಂಪನಿಯ ಮುಖ್ಯಸ್ಥರ ಜೊತೆ ಮಾತನಾಡುವ ಅವಕಾಶ ಸಿಕ್ಕಿತ್ತು. ವರ್ಷಕ್ಕೆ ಕೋಟ್ಯಂತರ ರೂಪಾಯಿಗಳ ಆದಾಯವಿರುವ ಅವರು ತಾವು ಉದ್ಯಮಿಯಾಗಿ ಬೆಳೆದಿದ್ದರ ಬಗ್ಗೆ ಹೇಳಿದರು. "ನಾನು ಬಿ.ಕಾಂ. ಜಸ್ಟ್ ಪಾಸಾಗಿ ಯಾವುದೋ ಒಂದು ಕಂಪನಿಯಲ್ಲಿ ಸಣ್ಣ ಸಂಬಳವೊಂದಕ್ಕೆ ಕೆಲಸಕ್ಕೆ ಸೇರಿಕೊಂಡೆ, ಮುಂದೆ ಓದುವ ಅನುಕೂಲ ಇರಲಿಲ್ಲ, ಎಲ್ಲರೂ ನನ್ನನ್ನು ಆಗ ವೇಸ್ಟ್ ಎಂದು, ಇವನ ಕೈಯಲ್ಲಿ ಏನೂ ಆಗುವುದಿಲ್ಲವೆಂದೂ ದೂಷಿಸುತ್ತಿದ್ದರು, ಅವಮಾನದಿಂದ ಕುಗ್ಗಿಹೋಗುತ್ತಿದ್ದೆ, ಆದರೆ ಹಾಗೆಯೇ ಒಂದೊಂದಾಗಿ ಅನುಭವಗಳನ್ನು ಪಡೆದುಕೊಂಡು ಒಮ್ಮೆ ಅವಕಾಶ ಸಿಕ್ಕಾಗ ರಿಸ್ಕ್ ತೆಗೆದುಕೊಂಡು ನುಗ್ಗಿಬಿಟ್ಟೆ, ಮೊದಲ ದಿನಗಳಲ್ಲಿ ಬಹಳ ಕಷ್ಟವಾದರೂ ಆನಂತರ ನಾ ನೆಡೆದದ್ದೇ ಹಾದಿಯಾಯಿತು, ಇವತ್ತು ಈ ಮಟ್ಟಿಗೆ ಬೆಳೆದಿದ್ದೇನೆ, ಕೋಟಿರೂಪಾಯಿಗೆ ತೂಗುತ್ತೇನೆ ಎಂದು ಹೇಳಿಕೊಳ್ಳಲು ನನಗ್ಯಾವ ಅಹಂಕಾರವೂ ಇಲ್ಲ , ಸಂಕೋಚವೂ ಇಲ್ಲ. ಆದರೆ ಅವತ್ತು ನನ್ನನ್ನು ಹೀಯಾಳಿಸಿದವರು ಯಾವ ಸ್ಥಿತಿಯಲ್ಲಿದ್ದಾರೋ ಅದೇ ಸ್ಥಿತಿಯಲ್ಲಿದ್ದಾರೆ". ಹೀಗೆ ಹೇಳಿದ ಅವರು ನೆಡೆಸುತ್ತಿರುವುದು ತಾವು ಓದಿದ್ದಕ್ಕೆ ಸ್ವಲ್ಪವೂ ಸಂಬಂಧವಿಲ್ಲದ ಟ್ರಾನ್ಸ್ ಫಾರ್ಮರ್ ತಯಾರಿಕಾ ಕಾರ್ಖಾನೆ! ಇವೆಲ್ಲವನ್ನೂ ಸುಮ್ಮನೇ ಅವಲೋಕಿಸಿದಾಗ ಸದ್ಯದ ಸಮಾಜದಲ್ಲಿ ಹೆಚ್ಚು ಹೆಚ್ಚು ಓದಿರುವರಿಗಿಂತಲೂ ಕಡಿಮೆ ಓದಿದವರೇ ಉದ್ಯಮಿಗಳಾಗಿರುವ ಉದಾಹರಣೆ ಬಹಳ. ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಸಾವಿರಾರು ಕೈಗಾರಿಕೆಗಳು ಇದಕ್ಕೆ ಒಳ್ಳೆಯ ಉದಾಹರಣೆಗಳು. ಇಲ್ಲಿ ತುಂಬ ಕಡಿಮೆ ಓದಿದವರು, ಯಾವುದೇ ವಿಶೇಷ, ವೃತ್ತಿಪರ ಕೋರ್ಸುಗಳನ್ನು ಮಾಡದೇ ಇರುವವರು ಇವತ್ತು ಉದ್ಯಮಿಗಳಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ. ಎಲ್ಲ ಉದ್ಯಮಿಗಳನ್ನು ಕೇಳಿದರೂ ಕೂಡ ಅವರದ್ದೆಲ್ಲಾ ಸಾಮಾನ್ಯವಾಗಿ ಒಂದೇ ಉತ್ತರವಿರುತ್ತದೆ. ಈ ಮಟ್ಟಿಗೆ ಅವರು ಬೆಳೆಯಲು ಕಾರಣ ಅನಿವಾರ್ಯತೆ, ಅನುಭವ, ಪೂರಕ ಪರಿಸ್ಥಿತಿ, ಅದೃಷ್ಟ ಹಾಗೂ ಅದಕ್ಕೆ ತಕ್ಕುನಾದ, ಸರಿಯಾಗಿ ಬಳಸಿಕೊಂಡ ಶ್ರಮ. ಇನ್ಫೋಸಿಸ್ ನ ನಂದನ್ ನೀಲೇಕಣಿಯವರೂ ಕೂಡ ತಾವು ಬರೆದಿರುವ ಪುಸ್ತಕದಲ್ಲಿ ತಮ್ಮನ್ನು ’ಆಕಸ್ಮಿಕ ಉದ್ಯಮಿ’ ಎಂದೇ ಕರೆದುಕೊಳ್ಳುತ್ತಾರೆ.

ಇದಕ್ಕೆ ಉಲ್ಟಾ ಪರಿಸ್ಥಿತಿ ಎಂದರೆ ಇವತ್ತಿನ ವಿದ್ಯಾವಂತರದ್ದು. ಇವತ್ತು ಮಾರುಕಟ್ಟೆಯಲ್ಲಿ ಹಲವು ಕೋರ್ಸುಗಳಿವೆ. ಮ್ಯಾನೇಜ್ ಮೆಂಟ್ ಕೋರ್ಸುಗಳಿವೆ. ಆದರೆ ಅದರಲ್ಲಿ ತಯಾರಾಗಿ ಬರುತ್ತಿರುವ ವಿದ್ಯಾವಂತರಲ್ಲಿ ಈ ಉದ್ಯಮಿ ಗುಣಗಳೇ(enterpreneurship qualities) ಕಂಡುಬರುತ್ತಿಲ್ಲ ಎನ್ನುವುದು ಕಟು ಸತ್ಯ. ಅವೆಲ್ಲವೂ ಹೆಚ್ಚೆಂದರೆ ಮೆನೇಜರ್ ಗಳನ್ನು ತಯಾರು ಮಾಡುತ್ತಿವೆಯೇ ಹೊರತು Entrepreneur ಗಳನ್ನಲ್ಲ. ಇವತ್ತು ವಾಣಿಜ್ಯ, ಕಲೆ, ಎಂಜಿನಿಯರಿಂಗ್ ಎಲ್ಲಾ ಕೋರ್ಸ್ ಗಳಲ್ಲೂ ಕೂಡ managementಬಗ್ಗೆ, Entrepreneurship ಬಗ್ಗೆ ಪಠ್ಯಗಳಿವೆ. ಆದರೆ ಅವು ಕೇವಲ ಥಿಯರಿಗಳಾಗೇ ಉಳಿಯುತ್ತಿರುವುದು ವಿಪರ್ಯಾಸ. ಈ ಥಿಯರಿಗಳನ್ನು ಓದಿಕೊಂಡು ಬಂದ ಯುವಕ ಯುವತಿಯರು ಯಾವುದೋ ಕಂಪನಿಯಲ್ಲಿ ಅಥವಾ ಮತ್ತೆಲ್ಲೋ ಒಬ್ಬ ಸಾಮಾನ್ಯ ಉದ್ಯೋಗಿಯಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟುಬಿಡುತ್ತಾರೆ. ಅದಕ್ಕೆ ಕಾರಣ ಆಕರ್ಷಕ ಸಂಬಳ, ಸವಲತ್ತುಗಳು ಹಲವಿರಬಹುದು. ಆದರೆ ಇಲ್ಲಿ ಪ್ರಶ್ನೆಯೆಂದರೆ ವಿದ್ಯೆ ಎನ್ನುವುದು ಅವನನ್ನು ಆ ಔದ್ಯಮಿಕತೆಯಿಂದ ದೂರ ಇಡುತ್ತಿದೆಯೇ ಎಂಬುದು. ದೊಡ್ಡ ದೊಡ್ಡ ಉದ್ಯಮಿಗಳಾದವರು, ಆಗುವವರು ಮ್ಯಾನೇಜ್ ಮೆಂಟ್ ಬಗ್ಗೆಯಾಗಲೀ, ಔದ್ಯಮಿಕತೆ ಬಗ್ಗೆಯಾಗಲೀ ಯಾವುದೇ ಪುಸ್ತಕಗಳನ್ನು ಓದಿರುವುದಿಲ್ಲ, ಯಾವುದೇ ಪದವಿ ಪಡೆದಿರುವುದಿಲ್ಲ. ಆದರೆ ಪುಸ್ತಕ ಓದಿದವರು, ಪದವಿ ಪಡೆದವರು ಉದ್ಯಮಿಗಳಾಗುತ್ತಿಲ್ಲ. ೧೦೦% ಈ ಸ್ಥಿತಿ ಇಲ್ಲದಿರಬಹುದು , ಆದರೆ ಬಹುತೇಕ ಈ ರೀತಿ ಇದೆ. ಪ್ರಸಕ್ತ ಉದ್ಯಮಿಗಳು ಪುಸ್ತಕ ಓದುತ್ತಾ ಕೂತಿದ್ದರೆ ಖಂಡಿತ ಆ ಮಟ್ಟಿಗೆ ಬೆಳೆಯಲೂ ಸಾಧ್ಯವಾಗುತ್ತಿರಲಿಲ್ಲ. ಎಲ್ಲರಂತೆ ಅವರೂ ಕೂಡ ಸಾಮಾನ್ಯ ನೌಕರರಾಗಿಬಿಡುತ್ತಿದ್ದರೆನೋ! stay hungry, stay foolish ಎನ್ನುವ ಪುಸ್ತಕವೊಂದಿದೆ. ನಮ್ಮ ದೇಶದ ದೊಡ್ಡ ದೊಡ್ಡ ಐ‌ಐ‌ಎಂ ಗಳಲ್ಲಿ ಓದಿದ ಹಲವು ಪದವಿಧರರು ಉದ್ಯಮಿಗಳಾಗಿ ಬೆಳೆದಿರುವ ಯಶೋಗಾಥೆಯ ಕತೆಗಳಿವೆ. ಆದರೆ ಪ್ರತಿವರ್ಷ ಹೊರಬರುವ ಪದವೀಧರರ ಸಂಖ್ಯೆಗೆ ಹೋಲಿಸಿದರೆ ಉದ್ಯಮಿಗಳಾದವರ ಸಂಖ್ಯೆ ತೀರಾ ಕಡಿಮೆ ಇದೆ. ಇದು ಹೇಳುವಷ್ಟು ಸುಲಭವಲ್ಲ , ಇದಕ್ಕೆ ಆಸಕ್ತಿಯಿಂದ ಹಿಡಿದು ಬಂಡವಾಳದ ತನಕ ಹಲವಾರು constraintಗಳಿವೆ ನಿಜ. ಆದರೂ ಕೂಡ ತುಲನಾತ್ಮಕವಾಗಿ ನಮ್ಮ ದೇಶದಲ್ಲಿ ಔದ್ಯಮಿಕತೆ ಎಂಬುದಕ್ಕೆ ವಿದ್ಯೆಯೇ constraint ಆಗುತ್ತಿದೆಯೇ ಎಂಬ ಅನುಮಾನ ಸಹಜವೆನಿಸುತ್ತದೆ. ಅದು ಯುವಜನಾಂಗವನ್ನು ಕಣ್ಣು ಕಟ್ಟಿದ ಕುದುರೆಯಂತೆ ಒಂದೇ ದಿಕ್ಕಿನಲ್ಲಿ ಯೋಚಿಸುವಂತೆ ಮಾಡುತ್ತಿದೆ. ಇವತ್ತು ಜಗತ್ತಿನಲ್ಲಿ ದೊಡ್ಡ ದೊಡ್ಡ ಉದ್ಯಮಗಳನ್ನು ಕಟ್ಟಿ ಬೆಳೆಸಿದ, ಹೆಸರು ಮಾಡಿರುವ, ಸಾಧನೆ ಮಾಡಿರುವ ಬಹುತೇಕ ಜನರು ಹೆಚ್ಚು ಓದಿರದಂತವರೇ ಆಗಿದ್ದಾರೆ. ಹೆಚ್ಚು ಓದಿದವರು, ಪದವಿ ಪಡೆದವರು ಯಾವುದೋ ಕಂಪನಿ ಕೆಲಸಗಳಲ್ಲಿ ತೊಡಗಿಕೊಂಡರೆ ದೊಡ್ಡಸ್ತಿಕೆ ಎಂಬ ಸಾಮಾಜಿಕ ಅಂಶವೂ ಕೂಡ ಅವರನ್ನು ಹಿಡಿದಿಡುತ್ತಿದೆ. ಹಾಗೆಂದು ಹೆಚ್ಚಿನ ವಿದ್ಯೆಯಿಲ್ಲದೇ ಕೂರುವುದು, ಓದದಿರುವುದು ಮೂರ್ಖತನವಾಗುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ವಿದ್ಯೆಯ ಜೊತೆಜೊತೆಗೆ ಬೇರುಮಟ್ಟದ ಚಿಂತನೆಗಳನ್ನು ವಿದ್ಯಾವಂತ ಯುವಕರಲ್ಲಿ ಬೆಳೆಸುವ ಅಗತ್ಯವಿದೆ. ಉದ್ಯಮಿಯಾಗಲು ಇರುವ ಅವಕಾಶಗಳು, ಸೌಲಭ್ಯಗಳು, ಜಾಗತಿಕ ಮಾರುಕಟ್ಟೆಗಿಂತ ಹೆಚ್ಚಾಗಿ ನಮ್ಮ ದೇಶದ ಹಾಗೂ ನಮ್ಮ ಸುತ್ತಲಿನ ಸಾಮಾನ್ಯ ಮಾರುಕಟ್ಟೆಯ ಬಗೆಗಿನ ಅರಿವು ಮುಖ್ಯವಾಗಿ ಬೇಕಾಗಿದೆ.

ಇದರಲ್ಲಿ ಯಾವುದೂ conclusion ಅಲ್ಲ, ಸುಮ್ಮನೇ ಯೋಚನೆಯನ್ನು ಹಂಚಿಕೊಂಡದ್ದಷ್ಟೆ.

ಮಂಗಳವಾರ, ಜೂನ್ 30, 2009

ಕನಸು ಬಿತ್ತು

ನನಗೊಂದು ಕನಸು ಬಿತ್ತು
ಅದರಲ್ಲಿ ನಾ ಅಳಿಲಾಗಿದ್ದೆ
ದಿಕ್ಕೇ ಇಲ್ಲದೆ ಓಡುತ್ತಿದ್ದೆ
ಮರದ ತುದಿಯವರೆಗೂ ಹತ್ತಿದ್ದೆ

ಮತ್ತೊಂದು ಕನಸು ಬಿತ್ತು
ಮನೆ ಅಂಗಳದ ತುಂಬೆಲ್ಲಾ ಹಾವುಗಳು
ಬಾಲದ ಮೇಲೆ ನಿಂತು ಕುಣಿಯುತ್ತಿದ್ದವು
ಮಧ್ಯದ ಕರಿನಾಗರ ನನ್ನನ್ನೇ ನೋಡುತ್ತಿತ್ತು

ಅಳಿಲು ಓಡುತ್ತಾ ಗುಂಡಿಯಲ್ಲಿ ಬಿತ್ತು
ಕರಿನಾಗರವ ಕಂಡು ದಿಗಿಲಾಗಿತ್ತು
ಅಳಿಲಿನ ಸ್ವಪ್ನ ಅಪರೂಪವಂತೆ
ಹಾವಿನ ಸ್ವಪ್ನ ಶುಭಸೂಚಕವಂತೆ !

ವಿ.ಸೂ : ಇದನ್ನು ಕವನವೆಂದು ತಪ್ಪು ತಿಳಿಯಬಾರದು. :)

ಗುರುವಾರ, ಜೂನ್ 25, 2009

ನನಗಂತೂ ಅನಿಸಿದೆ !

ನಿನಗೆ ಅನ್ನಿಸಿದೆಯೋ ಗೊತ್ತಿಲ್ಲ. ನನಗಂತೂ ಅನಿಸಿದೆ. ಉಹುಂ, ಬಿಡುವಿದ್ದಾಗ ಪ್ರೀತಿಸುವುದು ಪ್ರೀತಿಯಲ್ಲ. ಹೋಗಲಿ ಇಲ್ಲಿ ಪ್ರೀತಿ ವಿಷಯ ಬೇಡ. ಬಿಡುವಿದ್ದಾಗ ಮಾತ್ರ ಇರುವುದು ಸ್ನೇಹವಲ್ಲ. ಗೆಳೆತನದಲ್ಲಿ ಬಂದಾಗ ಭರಿಸಿಕೋ ಎನ್ನುವುದು ತರವಲ್ಲ. ನದಿಯು ಸಮುದ್ರವನ್ನು ಸೇರುವಲ್ಲಿನ ಮೇಲ್ಮೈ ಪ್ರಶಾಂತತೆಯನ್ನು ನೀನು ನಿರ್ಲಿಪ್ತತೆ ಎನ್ನುವುದಾದರೆ ನಿನಗೆ ಒಳಗಿನ ಚಕ್ರಸುಳಿಗಳ ಅರಿವಿಲ್ಲ. ಆಚೆಯ ದಡದ ಭೋರ್ಗರೆಯುತ್ತಿರುವ ಅಲೆಗಳು ಕಾಣುತ್ತಿಲ್ಲ. ಏಕೆಂದರೆ ಈ ದಡದಲ್ಲೇ ಮಲಗಿಬಿಟ್ಟೆ ನೀನು. ಎಚ್ಚರಗೊಳಿಸುವ ಗೋಜಿಗೆ ಸಮಯ ಕಳೆದುಹೋದಾಗ ಅದು ಸಾಯುವ ಸ್ಥಿತಿ ತಲುಪಿತ್ತು. ಮಳೆಗಾಲದಲ್ಲಿ ಮಾತ್ರ ತುಂಬಿ ಹರಿದುದ್ದನ್ನು ನದಿ ಎಂದುಕೊಂಡೆನೋ ಎಂದು ಬೇಸರವಾಗುತ್ತಿದೆ. ಬೇಸಿಗೆ ಸೃಷ್ಟಿಸಿದ ಬರದ ಗಾಳಿಗೆ ಹರಿವಿನ ಪಾತ್ರವೂ ಮುಚ್ಚಿಹೋಗುತ್ತಿದೆ. ಸಂಬಂಧಗಳು ಅಸಡ್ಡೆ, ನಿರ್ಲಕ್ಷದ ಹೊರತಾಗಿ ಕೆಲವೇ ಕೆಲವು ಸಣ್ಣ ಸೂಚನೆಯನ್ನಾದರೂ ಉಳಿಸುತ್ತವೆ. ಮತ್ತೆ ಮಳೆ ಹನಿಯುವುದಾ ನದಿ ತುಂಬಿ ಹರಿಯುವುದಾ ಪ್ರಶ್ನೆ ಕೇಳಿಕೊಳ್ಳಲೂ ಮನಸಾಗುತ್ತಿಲ್ಲ. ಮೋಡ ಕಟ್ಟುವ ಸುಳಿವೇ ಇಲ್ಲ. ಹನಿ ಹನಿಗೂ ಗೋಗರೆಯುವದರಲ್ಲಿ ಅರ್ಥವಿಲ್ಲ. ಪರಸ್ಪರ ತತ್ವಕ್ಕೆ ಬೆಲೆಯಿಲ್ಲದ ಕಡೆ ಬೆಲೆ ಕೊಟ್ಟು ಕೊಟ್ಟು ಈಗಿನ ಆಬದಿಯ ನಿರಾಳತೆ ಕಂಡು ದಂಗಾಗಿದ್ದೇನೆ. ಗುದ್ದಿದ್ದು ಸಮಾಧಾನವಾಗಿಲ್ಲ, ಆದರೆ ಬೆನ್ನು ತಿರುಗಿಸಿ ಹೋದ ಬೆನ್ನಿನ ಹಿಂದೆ ಬಿದ್ದು ಅಭ್ಯಾಸವಿಲ್ಲ. ಬಲವಂತದ ಬಳ್ಳಿಯಾಗಿ ಸುತ್ತಿಕೊಂಡಿದ್ದ ವಿಷಾದ ಭಾವ. ಎಲ್ಲವನ್ನೂ ನಿರ್ಧರಿಸಿ ಆಗಿರುವಾಗ ಮತ್ತೇನು ಹೇಳುವುದು ಫಲವಿಲ್ಲ ಎಂದು ನುಣುಚಿಕೊಂಡೆಯಾ? ಕೆಲವೊಂದು ಸಂದರ್ಭಗಳಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳದೇ ಇರುವುದೇ ಒಳ್ಳೆಯ ನಿರ್ಧಾರವೆನ್ನುತ್ತಾರೆ. ಅದೇ ರೀತಿ ನಾನೂ ಕೂಡ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬಾರದೆಂದು ನಿರ್ಧರಿಸಿದ್ದೆ. ಆದರೆ ಈಗ ಏನಾದರೊಂದು ನಿರ್ಧರಿಸಿಬಿಡಬೇಕು ಎಂಬ ನಿರ್ಧಾರಕ್ಕೆ ಬರೋಣವೆನಿಸುತ್ತಿದೆ. ನೀ ಕೊಟ್ಟ ಎರಡು ರೂಪಾಯಿ ನಾಣ್ಯ ಪರ್ಸಿನ ಒಳಖಾನೆಯಲ್ಲಿ ಹಾಗೇ ಇದೆ. ಅದಕ್ಕೆ ಇನ್ನೆರಡೂವರೆ ರೂಪಾಯಿ ಸೇರಿಸಿದರೆ ಅದು ನನ್ನೆದೆಯ ದಹಿಸಿ, ಭಾರ ಇಳಿಸಿ, ಬೂದಿಯಾಗುತ್ತದೆ. ನಾ ಅಂತವನೇನಲ್ಲ!

ಗುರುವಾರ, ಮೇ 21, 2009

ಆರ್ಕುಟ್ ಮದುವೆ !

ಆರ್ಕುಟ್ ನಲ್ಲಿ ಇವನು ಅವಳ ಪ್ರೊಫೈಲ್ ನೋಡುವುದು , ಅವಳು ಇವನ ಪ್ರೊಫೈಲ್ ನೋಡುವುದು... recent visitors ಪಟ್ಟಿಯಲ್ಲಿ ದಿನವೂ ಹೆಸರು ಕಾಣುತ್ತಿತ್ತು. ಹೀಗೆ ಮೂರು ತಿಂಗಳು ನಡೆಯಿತು. ಅಷ್ಟರಲ್ಲಿ ಹೊಸ ವರ್ಷ ಬಂದಿತ್ತು. ಕೊನೆಗೆ ಹುಡುಗ ಒಂದು ಸ್ಕ್ರಾಪ್ ಹಾಕಿಯೇ ಬಿಟ್ಟ, "ಹೊಸ ವರ್ಷದ ಶುಭಾಶಯಗಳು". ತಕ್ಷಣವೇ ಉತ್ತರ ಬಂದಿತ್ತು ಹುಡುಗಿಯಿಂದ - "ಅಂತು ಇಷ್ಟು ದಿನಗಳಾದ ಮೇಲೆ ಸ್ಕ್ರಾಪ್ ಹಾಕಿದ್ರಲ್ಲ ". ಮುಂದುವರೆಯಿತು ಮಾತು ಕತೆ. ಮಾತಿಂದ ಪರಿಚಯ...., ಭೇಟಿ...., ಇಷ್ಟ...., ಸ್ನೇಹ, ಸ್ನೇಹದಿಂದ ಪ್ರೀತಿ.....

ಎಷ್ಟು ದಿನ ಅಂತ ಬರೀ ಪ್ರೀತಿ ಮಾಡಿಕೊಂಡಿರಲು ಸಾಧ್ಯ ? ವರ್ಷಕ್ಕಿಂತಲೂ ಹಳೆಯ ಪ್ರೀತಿ ಪೂರ್ತಿ ಮಾಗಿತ್ತು . ಯಾವುದೇ ಆತುರಕ್ಕೆ ಬೀಳದೆ ಇಬ್ಬರೂ ಒಬ್ಬರಿಗೊಬ್ಬರು ಎಲ್ಲಾ ರೀತಿಯಲ್ಲೂ ಸಂಪೂರ್ಣ ಒಪ್ಪಿಗೆಯಾದ ನಂತರವೇ ಬದುಕಿನಲ್ಲೂ ಜೊತೆಯಾಗುವ ನಿರ್ಧಾರ ಮಾಡಿದರು. As usual ಸ್ವಲ್ಪ ಜಗ್ಗಾಟದ ನಂತರ ಹಿರಿಯರ ಒಪ್ಪಿಗೆಯೂ ದೊರೆಯಿತು. ದೊರೆಯಲೇಬೇಕಿತ್ತು !

ಮೊನ್ನೆ ಮೊನ್ನೆ ಗೆಳೆಯನ ಮದುವೆ ಆಯಿತು. ಯಾಕೋ ಟೆನ್ಶನ್ ಆಗ್ತಿದೆ ಕಣ್ರೋ ಅಂತ ಮದುವೆ ಹಿಂದಿನ ದಿನದವರೆಗೂ ಅಲವತ್ತುಕೊಳುತ್ತಿದ್ದ. ಹನಿಮೂನಿಗೆ ಎಲ್ಲಿಗೆ ಹೋಗೋದು ಅಂತ ಗೊತ್ತಾಗದೆ, ನೀವೆ ಎಲ್ಲಾದ್ರೂ ಬುಕ್ ಮಾಡಿಸಿಕೊಡ್ರೋ ಅಂತ ನಮ್ಮನ್ನು ಕಷ್ಟಕ್ಕೆ ಸಿಲುಕಿಸಿದ್ದ. ಮದುವೆ ದಿನ ಇಷ್ಟಗಲ ನಗು ತೋರಿಸುತ್ತಾ ನಿಂತ ಅವರಿಬ್ಬರ ಸಂಭ್ರಮ ನೋಡುವಂತಿತ್ತು. ಮದುವೆ ಮುಗಿಸಿ ನಾವು ಬೆಂಗಳೂರಿಗೆ ತಿರುಗಿ ಬಂದು ನಾಲ್ಕು ದಿನದ ನಂತರ ಫೋನ್ ಮಾಡಿದರೆ "ಲೋ, ರೋಮಿಂಗ್ ನಲ್ಲಿದಿನಿ , ಸಖತ್ ಛಾರ್ಜ್ ಆಗತ್ತೆ, ಇಡ್ರೋ ಫೋನು" ಅಂತ ದಬಾಯಿಸಿದ್ದ. "ಆಯ್ತು ಬಿಡಪ್ಪಾ, ನಿನ್ ಛಾರ್ಜ್ ಖಾಲಿ ಮಾಡಲ್ಲ, ಬೇಕಾಗತ್ತೆ ನಿಂಗೆ" ಅಂತ ನಾವು ನಗಾಡಿದ್ದೆವು. ಮಧುಚಂದ್ರದಿಂದ ಮರಳಿ ಬಂದು ಈಗ ಟೆನ್ಶನ್ ಫ್ರೀ ಆಗಿದ್ದಾನೆ. :)

ನಮ್ಮೆಲ್ಲಾ ಗೆಳೆಯರ ಪರವಾಗಿ, ನಮ್ಮ ಕಟ್ಟೆ ಬಳಗದ ಪರವಾಗಿ ಅವರಿಬ್ಬರ ಮುಂದಿನ ಜೀವನಕ್ಕೆ ಶುಭಹಾರೈಕೆಗಳು. Happy married lifeu. :-)ಮುಂದೆ ಈ ರೀತಿ ಸುದ್ದಿಗಳು ಇನ್ನೂ ಜಾಸ್ತಿ ಜಾಸ್ತಿ ಬರುವ ಚಾನ್ಸ್ ಇದೆ. ಅಪ್ಪ ಅಮ್ಮಂದಿರ ಕೆಲಸ ಕಮ್ಮಿ ಮಾಡುತ್ತಿರೋ ಸೋಶಿಯಲ್ ನೆಟ್ವರ್ಕ್ ಸೈಟ್ ಗಳಿಗೆ thanx ಹೇಳಬೇಕೋ ಅಥವಾ ಹುಡುಗ್ರು ದಾರಿ ತಪ್ಪುತ್ತಾ ಇದ್ದಾರೆ ಅಂತ ಆತಂಕ ಪಡಬೇಕೋ ಎಂಬ ತೀರ್ಮಾನ ಅವರಿಗವರಿಗೆ ಬಿಟ್ಟದ್ದು.

ಬುಧವಾರ, ಮೇ 13, 2009

ವಿಕಾಸದ ಹಾದಿಯಲ್ಲಿ ೨ ವರ್ಷ!

ಬೇರೆ ಏನೋ ಬರೆದು ಕೊನೆಗೆ ಆ ವಿಷಯಕ್ಕೆ ಬರಲಾ? ಅಥವಾ ಮೊದಲೇ ಆ ವಿಷಯ ಹೇಳಿ ನಂತರ ಮತ್ತೇನೋ ಹೇಳಲಾ? ವಿಷಯದ ಬಗ್ಗೆ ಹೇಳುತ್ತಾ ಜೊತೆಗೆ ವಿಶ್ಲೇಷಣೆ, ಉಪದೇಶ, ನೀತಿಸಂಹಿತೆ, ಸಂಯಮ, ಸುಡುಗಾಡು ಶುಂಠಿ...

ಏನೂ ಬೇಡ. ನೇರವಾಗಿ ವಿಷಯಕ್ಕೇ ಬರುತ್ತೇನೆ. ಇವತ್ತಿಗೆ ಸರಿಯಾಗಿ ನನ್ನ ಈ ಬ್ಲಾಗ್ ಶುರುಮಾಡಿ ೨ ವರ್ಷ ೩ ದಿನ ಆಯಿತು. ಮೊದಲ ವರ್ಷ ಕಳೆದಾಗ 'ವರ್ಷ ಕಳೆಯಿತು' ಎಂದು ಬರೆದಿದ್ದೆ. ಈ ಎರಡು ವರ್ಷ ಕಳೆದಾಗಲೂ '೨ ವರ್ಷ ಕಳೆಯಿತು' ಎನ್ನುವುದಕ್ಕಿಂತ ಹೆಚ್ಚಿನದೇನೂ ಆಗಿಲ್ಲ ಅಂತ ಅನ್ನಿಸಿದರೂ ಒಂದಷ್ಟು ಬದಲಾವಣೆಗಳು ಆಗಿವೆ, ತಿರುವುಗಳು ಕಂಡಿವೆ ಎಂದಷ್ಟೇ ಹೇಳಬಲ್ಲೆ. ಹಲವು ಬಾರಿ ಯಾಕೆ ಬೇಕಾಗಿತ್ತು ಈ ಬ್ಲಾಗ್ ಅನ್ನಿಸಿದೆ. ಮರುಕ್ಷಣವೇ ಇದರಲ್ಲೇ ಖುಷಿ ಅನ್ನಿಸಿದೆ. ಬ್ಲಾಗ್ ಅಂದಾಕ್ಷಣ ಬರಹದ ಜೊತೆ ಓದುಗರೂ ಅಷ್ಟೇ ಮುಖ್ಯ. ಬ್ಲಾಗ್ ಎಂದರೆ ಎಷ್ಟೇ ನಮಗೆ ನಾವು ಬರೆದುಕೊಳ್ಳುವುದು ಅದೂ ಇದೂ ಅಂತ ಏನೇ ಅಂದರೂ ಕೂಡ ಓದುಗರಿಲ್ಲದಿದ್ದಲ್ಲಿ ಡೈರಿಯಲ್ಲಿ ಬರೆದು ಒಳಗೆ ಇಡುವುದಕ್ಕೂ ಇದಕ್ಕೂ ವ್ಯತ್ಯಾಸವಿರುತ್ತಿರಲಿಲ್ಲ ಮತ್ತು ಇಷ್ಟು ಬರೆಯಲು ಮನಸ್ಸಾಗುತ್ತಲೂ ಇರಲಿಲ್ಲ. ಬ್ಲಾಗ್ ಬರೆಯುತ್ತಾ ಎರಡು ವರ್ಷ ಕಳೆದಿದ್ದರೂ ಕೂಡ ಮೇ ೧೦, ೨೦೦೭ ರಂದು ಮೊದಲ ಪೋಸ್ಟ್ ಹಾಕುವಾಗ ಇದ್ದ ದುಗುಡ ಈಗಲೂ ಪ್ರತಿಯೊಂದು ಪೋಸ್ಟ್ ಹಾಕುವಾಗಲೂ ಇರುತ್ತದೆ. ಮೊದಲೆಲ್ಲಾ ಮನಸಿಗೆ ಬಂದಿದ್ದನ್ನು ಕೆಚ್ಚಿ ಕೆಡವಿಹಾಕಬಹುದಿತ್ತು ಆದರೆ ಈಗ ಫಿಲ್ಟರ್ ಹಾಕಿಕೊಳ್ಳಲೇ ಬೇಕಾದ ಕೆಲವು ಅನಿವಾರ್ಯಗಳಿವೆ. ಆಫೀಸಲ್ಲೋ ಮತ್ತೆಲ್ಲೋ ಕೂತು ಕುಟ್ಟಿದ್ದು ಸರಿಯಾಗಿದೆಯಾ? ಬ್ಲಾಗ್ ಗೆ ಹಾಕುವಂತಿದೆಯಾ? ಓದುವ ಕೆಲವರಿಗಾದರೂ ಸರಿಯೆನಿಸುತ್ತಾ? ಹೀಗೆ ಹಲವು ಯೋಚನೆಗಳು ಪ್ರತಿಬಾರಿಯೂ ಇದ್ದೇ ಇರುತ್ತವೆ. ಯಾವುದೋ ಮನಃಸ್ಥಿತಿಯಲ್ಲಿ ಬರೆದದ್ದು ಅನಂತರ ಸರಿಯಾಗಿಲ್ಲ ಅನ್ನಿಸಿ ಬದಲಾಯಿಸಿದ್ದಿದೆ. ಎಲ್ಡೆಕ್ರೆ ಹೊಲ ಮಧ್ಯ ಬಾವಿ ಒಂಥರಾ ಪರವಾಗಿಲ್ಲ ಅನ್ನಿಸಿದೆ. ನನ್ನಲ್ಲಿ ಓದು, ಬರವಣಿಗೆಯನ್ನು ಕಾಯ್ದುಕೊಳ್ಳಲು ಒಂದು ರೀತಿ ಈ ಬ್ಲಾಗ್ ಕಾರಣ ಎಂದೂ, ಜೊತೆಗೆ ತೆರೆದುಕೊಳ್ಳಲು ಒಂದು ವೇದಿಕೆಯಾಗಿ ಸಹಾಯ ಮಾಡಿದ್ದೂ ಈ ಬ್ಲಾಗ್ ಎಂದೂ ಸಂತೋಷದಿಂದ ಹೇಳಿಕೊಳ್ಳುತ್ತಿದ್ದೇನೆ. ಈ ಸಂದರ್ಭದಲ್ಲಿ ವಿಕಾಸವಾದಕ್ಕೂ, ಹಲವು ರೂಪಗಳಲ್ಲಿರುವ ಎಲ್ಲಾ ಓದುಗರಿಗೂ ಪ್ರೀತಿಯಿಂದ ಥ್ಯಾಂಕ್ಸ್. :-)

ಗುರುವಾರ, ಏಪ್ರಿಲ್ 16, 2009

ರೆಕ್ಕೆ ಇದ್ದರೆ ಸಾಕೆ.......

ಹಕ್ಕಿಗೆ ರೆಕ್ಕೆ ಯಾಕಿರತ್ತೆ?................ ಹಾರೋದಕ್ಕೆ.

ಸರಿ.

ವಿಮಾನಕ್ಕೆ ರೆಕ್ಕೆ ಯಾಕಿರತ್ತೆ? ..........ಹಾರೋದಕ್ಕೆ ..

o.k. ಸರಿ.

ಹಕ್ಕಿ ಹೇಗೆ ಹಾರತ್ತೆ? ...............ರೆಕ್ಕೆ ಬಡಿದು ಹಾರುತ್ತೆ.

o.k. ಇದೂ ಸರಿ.

ರೆಕ್ಕೆ ಬಡಿಯದೇ ಇದ್ರೂ ವಿಮಾನ ಹೇಗೆ ಹಾರುತ್ತೆ? ...

ಹೋಗ್ಲಿ, ಆ ರೆಕ್ಕೆ ವಿಮಾನಾನ ಹೇಗೆ ಹಾರಿಸುತ್ತೆ? ......

ರೆಕ್ಕೆ ಇಲ್ಲದಿದ್ರೆ ವಿಮಾನ ಹಾರದೇ ಇಲ್ವಾ? ವಿಮಾನದಲ್ಲಿ ರೆಕ್ಕೆಗಳ ಕೆಲ್ಸ ಏನು?
........... .. ...

ಹೀಗೆಲ್ಲಾ ಯೋಚಿಸಿದ್ದೀರಾ?.. ಯೋಚಿಸಿದ್ರೆ ಗುಡ್ . ಯೋಚಿಸಿ ಇದರ ಬಗ್ಗೆ ತಿಳ್ಕೊಂಡಿದ್ದೀರಾ?.... ಹೌದಾದರೆ ವೆರಿ ಗುಡ್.

ಇದುವರೆಗೂ ಇದು ನಿಮ್ಮ ಯೋಚನೆಗೇ ಬಂದಿಲ್ವಾ? ಹಾಗಿದ್ರೆ ವೆರಿ ವೆರಿ ಗುಡ್.

ಬನ್ನಿ ಕೂತ್ಕೊಳ್ಳಿ, ಈಗ ನಾನು ಇದೇ ವಿಷ್ಯ ಹೇಳಕ್ಕೆ ಹೋಗ್ತಿದ್ದೀನಿ.


******

ರೆಕ್ಕೆ ವಿಷಯ ಮಾತಾಡಕಿಂತ ಮೊದಲು ಒಂದು ವಿಷಯ ತಿಳ್ಕಳಣ. ವಿಮಾನ ಹಾರೋದಕ್ಕೆ ಏನ್ ಬೇಕು ಅಂತ.

ಇದು ಸಿಂಪಲ್. ವಿಮಾನ ಹಾರೋದಕ್ಕೆ ಬೇಕಾಗಿರದು ಎರಡೇ ಎರಡು ತರದ ಬಲ(force)ಗಳು. ಒಂದಕ್ಕೆ thrust(ನೂಕು) ಅಂತಾರೆ, ಇನ್ನೊಂದಕ್ಕೆ lift(ಎತ್ತು) ಅಂತಾರೆ.

ವಿಮಾನ ಗಾಳಿಯನ್ನು ಸೀಳ್ಕೊಂಡು, ಗಾಳಿಯ ಪ್ರತಿರೋಧವನ್ನು ಎದುರಿಸ್ಕೊಂಡು ಮುಂದೆ ಹೋಗೋದಕ್ಕೆ ಬೇಕಾಗುವ ಬಲ thrust. ಇದ್ನ ಎಂಜಿನ್ ಗಳು ಮತ್ತು ಪ್ರೊಪೆಲ್ಲರ್ ಗಳ ಸಹಾಯದಿಂದ ಉತ್ಪತ್ತಿ ಮಾಡ್ತಾರೆ. ಇದು ’ಮುನ್ನುಗ್ಗುವ’ force.

ಅದೇ ರೀತಿ, ವಿಮಾನ ತನ್ನ ಭಾರಕ್ಕೆ ಕೆಳಗೆ ಬೀಳದಂತೆ, ಗುರುತ್ವಾಕರ್ಷಣ ಶಕ್ತಿಯನ್ನ ಮೆಟ್ಟಿನಿಂತು ಆಕಾಶದಲ್ಲಿ ತೇಲಲು ಬೇಕಾದ ಬಲ lift. ಈ ಲಿಫ್ಟ್ ಕ್ರಿಯೇಟ್ ಮಾಡೋದು ರೆಕ್ಕೆಗಳ ಕೆಲಸ. ಇದು ’ಮೇಲೆತ್ತುವ’ force.

ಹೇಗೆ ರೆಕ್ಕೆಗಳು ಲಿಫ್ಟ್ ಕ್ರಿಯೇಟ್ ಮಾಡ್ತವೆ ಅನ್ನೋದನ್ನ ನೋಡೋಣ.
ವಿಮಾನದ ರೆಕ್ಕೆಗಳ ಅಡ್ಡ ಕೊಯ್ತ(cross section,ಅಂದರೆ ರೆಕ್ಕೆಯನ್ನು ಕತ್ತರಿಸಿದಾಗ ಕಾಣುವ) ಆಕಾರ ಮೇಲೆ ತೋರಿಸಿದ ಚಿತ್ರದಂತಿರುತ್ತೆ. ಇದಕ್ಕೆ ವಾಯುಫಲಕ(aerofoil) ಅಂತಾರೆ. ಈ ಆಕಾರದಲ್ಲಿ ಒಂದು ವಿಷೇಶ ಇದೆ. ಗಾಳಿ ಬೀಸುವ ಎದುರು ದಿಕ್ಕಿನಲ್ಲಿ ಇದರ ಮೊಂಡು ಭಾಗ ಇರುತ್ತೆ. ಬೀಸುವ ಗಾಳಿ ಈ ಮೊಂಡು ಭಾಗಕ್ಕೆ ಬಡಿದು ರೆಕ್ಕೆಯ ಎರಡೂ ಬದಿಗೆ split ಆಗತ್ತೆ. ವಾಯುಫಲಕ ಮೇಲ್ಗಡೆ ಭಾಗ ಡೊಂಕಾಗಿರೋದ್ರಿಂದ(curved shape), ಒಂದು ನಿರ್ದಿಷ್ಟ ಕೋನದಲ್ಲಿ ಗಾಳಿ ಬಡಿದಾಗ ಅಲ್ಲಿ ಗಾಳಿಯ flow ವೇಗವಾಗಿ ಆಗತ್ತೆ. ಕೆಳಭಾಗದಲ್ಲಿ comparitively ನಿಧಾನಕ್ಕೆ ಗಾಳಿಯ ಹರಿವು ಇರತ್ತೆ. (ಇದ್ಯಾಕೆ ಹಿಂಗೇ ಆಗತ್ತೆ ಅಂತ ಕೇಳುವಂಗಿಲ್ಲ. ಅದು ನೈಸರ್ಗಿಕವಾಗಿ ಆಗುವಂತದ್ದು ಮತ್ತು ಅದನ್ನು ತಿಳಿದುಕೊಳ್ಳಬೇಕು ಅಂದ್ರೆ ಏರೋಡೈನಮಿಕ್ಸ್, ಫಿಸಿಕ್ಸ್ ಎಲ್ಲಾ ಓದ್ಕೊಂಡು ಬರ್ಬೇಕು. ಅವೆಲ್ಲಾ ಸಹವಾಸ ಬೇಡ ಸದ್ಯಕ್ಕೆ). ರೆಕ್ಕೆಯ ಮೇಲ್ಗಡೆ ಜಾಗದಲ್ಲಿ ಗಾಳಿ ವೇಗವಾಗಿ ಹಾಯ್ದು ಹೋಗೋದ್ರಿಂದ ಅಲ್ಲಿ ಒತ್ತಡ ಕಡಿಮೆ(pressure decrease) ಆಗುತ್ತೆ . ಆಗ ರೆಕ್ಕೆಯ ಕೆಳಗಡೆ ಮತ್ತು ಮೇಲ್ಗಡೆ ಜಾಗಗಳ ಮಧ್ಯ ಒತ್ತಡದ ವ್ಯತ್ಯಾಸ(pressure difference) ಉಂಟಾಗುತ್ತದೆ. ಈ ವ್ಯತ್ಯಾಸದಿಂದ ಕೆಳಗಿನ ಗಾಳಿ ರೆಕ್ಕೆಯನ್ನ ಮೇಲಕ್ಕೆ ತಳ್ಳುತ್ತೆ. ಅದಕ್ಕೇ ’ಎತ್ತುವ ಬಲ’ (lift force) ಅನ್ನುವುದು. ರೆಕ್ಕೆಯೇ ಆಗ್ಬೇಕು ಅಂತಿಲ್ಲ, ಈ ರೀತಿ ಚಲಿಸುವ ಗಾಳಿ ಒಂದು ಕೋನದಲ್ಲಿ ತಾಕಿದಾಗ ಯಾವುದೇ ವಸ್ತುವಾದ್ರೂ ಕೂಡ ಮೇಲೇಳುತ್ತದೆ. ಆದ್ರೆ ಆದಷ್ಟು ಕಡಿಮೆ ಪ್ರತಿರೋಧದಿಂದ ಮೇಲೆ ಏಳಲು ಈ aerofoil ಆಕಾರ ಸಹಾಯಕಾರಿಯಾಗಿದೆ. ಅದಕ್ಕೋಸ್ಕರವೇ ವಿಮಾನದ ರೆಕ್ಕೆಯನ್ನ ಆ ಆಕಾರದಲ್ಲಿ ತಯಾರು ಮಾಡಿರ್ತಾರೆ. ಈ ಮೇಲಕ್ಕೆ ಎತ್ತುವ ಬಲ ಗುರುತ್ವಾಕರ್ಷಣ ಶಕ್ತಿಗಿಂತ ಜಾಸ್ತಿ ಇರುವ ಹಾಗೆ ಎರಡೂ ಕಡೆ ಅಗಲವಾದ ರೆಕ್ಕೆಗಳನ್ನು ವಿನ್ಯಾಸ ಮಾಡಿರ್ತಾರೆ. ಆದ್ದರಿಂದ ಇವು ವಿಮಾನಾನ್ನ ಗಾಳಿಯಲ್ಲಿ ತೇಲಿಸಿ ಹಿಡಿದುಕೊಳ್ತವೆ. ಇಷ್ಟೆ ವಿಮಾನದ ರೆಕ್ಕೆಗಳ ಕೆಲಸ .

********

ಅರ್ಥಾಯ್ತಾ? ತಲೆ ಕೆಡ್ತಾ? fine.

ಥಿಯರಿ ಓದಿದ್ರೆ ಅರ್ಥಾಗೋದು ಸ್ವಲ್ಪ ಕಷ್ಟ. ಆದ್ರೆ ಕಣ್ಣಾರೆ ನೋಡಿದರೆ ಅರ್ಥ ಮಾಡ್ಕೊಳ್ಳದು ಸುಲಭ ಅಲ್ವಾ. ಇಲ್ನೋಡಿ ಈ ಕೆಳಗಿನ ಮಾಡೆಲ್. ರೆಕ್ಕೆಯ aerofoil ಆಕಾರ ಮತ್ತು ಒತ್ತಡದ ವ್ಯತ್ಯಾಸ ಉಂಟಾಗೋದನ್ನ ಇದರಲ್ಲಿ ಪ್ರಾಕ್ಟಿಕಲ್ಲಾಗಿ ನೋಡ್ಬೋದು. ಇದರಲ್ಲಿ ಮುಂದಿರುವ ಕೊಳವೆಯಿಂದ ಬರುವ ಗಾಳಿಗೆ ಸರಿಯಾಗಿ ರೆಕ್ಕೆಯನ್ನು ಎತ್ತಿ ಹಿಡಿದರೆ pressure difference ಉಂಟಾಗಿ ಕೆಳಗಿನ ಕೊಳವೆಯಲ್ಲಿರುವ ಚೆಂಡು ಮೇಲೆ ಬರೋದನ್ನ ನೋಡ್ಬೋದು.

ಇದು ಇರೋದು ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂ ನಲ್ಲಿ. ಇದೇ ರೀತಿ ಅಲ್ಲಿ ಬಯಾಲಜಿ, ಸೆಟಲೈಟ್ಸ್, ಹಿಸ್ಟರಿ, , ಎಲೆಕ್ಟ್ರಾನಿಕ್ಸ್, ವಿಜ್ಞಾನ, ಸಾಮಾನ್ಯಜ್ಞಾನ, ಮೆಷಿನ್ಸ್, ಎಂಜಿನ್ಸ್, ಅದು ಇದು, ಹಾಳುಮೂಳು ಮಣ್ಣು ಮಸಿ ಅಂತ ಏನೇನೇನೇನೋ ಇದೆ. 3D theatre ಒಳಗೆ ಹೋದ್ರೆ ಬೇಜಾನ್ ಮಜಾ ಇರತ್ತೆ, ಮಕ್ಕಳಿಗಂತೂ ಖುಷಿಯೋ ಖುಷಿ ಆಗತ್ತೆ. ಇಂತಹ ಹತ್ತು ಹಲವಾರು ವಿಷಯಗಳನ್ನು ತಿಳಿದುಕೊಳ್ಬೇಕು, ನೋಡಿ ಆನಂದ ಪಡಬೇಕು ಅಂತ ಆಸಕ್ತಿ ಇರೋರಿಗೆ, ಎಲ್ಲಾ ವಿದ್ಯಾರ್ಥಿಗಳಿಗೆ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅದರಲ್ಲೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಒಳ್ಳೇ ಜಾಗ . ಫ್ರೀ ಇದ್ದಾಗ ಆದ್ರೆ ಒಮ್ಮೆ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಹೋಗ್ಬನ್ನಿ. ಒತ್ತಾಯ ಏನಿಲ್ಲ. :)

ಮಂಗಳವಾರ, ಏಪ್ರಿಲ್ 14, 2009

ಟೀವೀ ನೈನೂ ಮತ್ತು ’ಚಂದ್ರಯಾನ’ವೂ..

ನಿನ್ನೆ ರಾತ್ರಿ ೧೦:೩೦, ಅಪ್ಪನ ಫೋನಿಂದ ಮೆಸೇಜು ಬಂತು - "ನಿನ್ನನ್ನ TV9ನಲ್ಲಿ ನೋಡಿದೆವು! "

ಎದೆ ಧಸಕ್ ಎಂದಿತು. ಚಂದನದಲ್ಲೋ, ಕಸ್ತೂರಿಯಲ್ಲೋ, ಈ ಟೀವಿಯಲ್ಲೋ ನೋಡಿದೆ ಎಂದಿದ್ದರೆ ಏನಾಗುತ್ತಿರಲಿಲ್ಲ. ಆದರೆ ಹೇಳಿ ಕೇಳಿ ಅದು ಟೀವಿ ನೈನು! ಸುದ್ದಿಯನ್ನು ಮನರಂಜನೆಯಂತೆ ಕೊಟ್ಟು, ಮನರಂಜನೆಯನ್ನು ಅತಿರೇಕ ಮಾಡಿ, ಅತಿರೇಕವನ್ನು ಮಾಮೂಲಿನಂತೆ ದಿನವಿಡೀ ತೋರಿಸಿ ’ಉತ್ತಮ ಸಮಾಜಕ್ಕಾಗಿ’ ದುಡಿಯುತ್ತಿರುವ ಅಪರೂಪದ ವಾಹಿನಿ ಅದು. ಅಂದ ಮೇಲೆ ಗಾಬರಿಯಾಗದೇ ಇರುತ್ತದೆಯೇ. ಅವರ ಕ್ಯಾಮೆರಾ ಎಲ್ಲೆಲ್ಲಿ ಇರುತ್ತದೋ ಯಾರಿಗೆ ಗೊತ್ತು. ನಾವು ಹುಡುಗರು ಎಲ್ಲೆಲ್ಲೋ ನಿಂತಿರುತ್ತೇವೆ, ಏನೇನೋ ಮಾಡುತ್ತಿರುತ್ತೇವೆ. ಇನ್ಯಾವುದೋ ವರದಿಯ ಸಂದರ್ಭದಲ್ಲಿ ಅಕಸ್ಮಾತಾಗಿಯೋ , ಉದ್ದೇಶಪೂರ್ವಕವಾಗಿಯೋ ನಮ್ಮ ಮೇಲೆ ಕ್ಯಾಮೆರಾ ಕಣ್ಣು ಬಿದ್ದು ಅದು ಬೇರೆ ಏನೋ ಅರ್ಥ ಕೊಟ್ಟು ಬ್ರೇಕಿಂಗ್ ನ್ಯೂಸ್ ಆಗಿಹೋಯಿತಾ ಎಂದು ಹೆದರಿಕೆಯಾಯಿತು.

ರೆಹಮಾನ್, ಆ ಹುಡುಗ್ರು ಅಲ್ಲಿ ಎಷ್ಟೊತ್ತಿಂದ ನಿಂತಿದಾರೆ?
.................................
ಅವರ ಕೈಯಲ್ಲಿ ಏನೋ ವೈಟ್ ಕಲರ್ ವಸ್ತು ಇದೆಯಲ್ಲ, ಅದು ಏನೂಂತ ಹೇಳಕ್ಕಾಗತ್ತಾ?
.................................
ಅವರು ಇನ್ನೂ ಅಲ್ಲೇ ಎಷ್ಟು ಹೊತ್ತು ನಿಂತಿರ್ತಾರೆ ಅಂತ ಹೇಳ್ತೀರಾ
...............

ಹೀಗೆಲ್ಲಾ ಅವರ ವರದಿಗಾರ-ಸ್ಟುಡಿಯೋ ಮಧ್ಯೆ ಸಂಭಾಷಣೆ ಕಲ್ಪಿಸಿಕೊಂಡು ದಿಗಿಲಾದೆ. ಯಾವುದಕ್ಕೆ ಏನು ರೆಕ್ಕೆಪುಕ್ಕ ಸೇರಿಸಿ, ಮಸಾಲೆ ಅರೆದು, ಬಣ್ಣ ಹಚ್ಚಿ ತೋರಿಸಿಬಿಡುತ್ತಾರೋ ಯಾರಿಗೆ ಗೊತ್ತು ನಮ್ ಗ್ರಾಚಾರ! :)

ಕೆಲವರ್ಷಗಳ ಹಿಂದೆ ಹೀಗೇ ಆಗಿತ್ತು. ನಾನು ಮೊದಲು ಕೆಲಸ ಮಾಡುತ್ತಿದ್ದ ಕಂಪನಿಯ ಕ್ಯಾಂಪಸ್ಸಿನಲ್ಲೇ ಕಾಲ್ ಸೆಂಟರ್ ಒಂದಿತ್ತು. ಆಗ ಅದ್ಯಾವುದೋ ಕಾಲ್ ಸೆಂಟರ್ ಹುಡುಗಿಯನ್ನು ಕ್ಯಾಬ್ ಚಾಲಕನೊಬ್ಬ ಎತ್ತಾಕಿಕೊಂಡು ಹೋಗಿ ರೇಪ್ & ಕೊಲೆ ಮಾಡಿದ ಘಟನೆ ಹಸಿಹಸಿಯಾಗಿತ್ತು. ಕ್ರೈಂ ಡೈರಿ, ಸ್ಟೋರಿ ಮುಂತಾದ ಕ್ಯಾಮೆರಾಗಳು ಕಾಲ್ ಸೆಂಟರ್ ಗಳ ಹಿಂದೆ ಬಿದ್ದಿದ್ದವು. ನಮಗೂ ಎರಡನೇ ಪಾಳಿ ಇರುತ್ತಿದ್ದುದ್ದರಿಂದ ರಾತ್ರಿ ೧ ರ ವರೆಗೆ ಆಫೀಸಿನಲ್ಲೇ ಇರಬೇಕಾಗುತ್ತಿತ್ತು. ಆಗಾಗ ಗಾಳಿ ಸೇವನೆಗೆಂದು, ನಿದ್ದೆ ಬರದಿರಲೆಂದು ನಾವು ಹೊರಗೆ ಹೋಗುತ್ತಿದ್ದೆವು. ಅದೇ ಜಾಗಕ್ಕೆ ಕಾಲ್ ಸೆಂಟರಿನ ಹುಡುಗ ಹುಡುಗಿಯರೂ ಬರುತ್ತಿದ್ದರು.

ಆ ಹುಡುಗಿಯರ ಅಸ್ತವ್ಯಸ್ತ ಬಟ್ಟೆಗಳು, ಅವರು ಸೇದುತ್ತಿದ್ದ ಪ್ಯಾಕುಗಟ್ಟಲೇ ಸಿಗರೇಟುಗಳು, ಯಾವ ಮುಲಾಜೂ ಇಲ್ಲದಂತೆ ಹುಡುಗಿಯರ ಮೈಮೇಲೆ ಎಲ್ಲೆಲ್ಲೋ ಹರಿದಾಡುತ್ತಿದ್ದ ಹುಡುಗರ ಕೈಗಳು, ಮಬ್ಬುಗತ್ತಲಲ್ಲಿ ಪರಸ್ಪರ ದಾಹ ತೀರಿಸಿಕೊಳ್ಳುತ್ತಿದ್ದ ತುಟಿಗಳು, ಚಳಿಗಾಲದ ಹೀಟ್ ಟ್ರಾನ್ಸ್ ಫರ್ ಗಳು ಎಲ್ಲವನ್ನೂ ಸುತ್ತಮುತ್ತಲೇ ನೋಡುತ್ತಿದ್ದೆವು. ಎಥ್ನಿಕ್ ಡೇ ಹೆಸರಲ್ಲಿ ಕಾಲ್ ಸೆಂಟರ್ ಹುಡುಗೀರು ಸೀರೆ ಉಟ್ಟುಕೊಂಡು ಬಂದಾಗ ಮಾತ್ರ ನಮಗೆ ಬಹಳ ಸಂಕಟವಾಗುತ್ತಿತ್ತು. ಅದ್ಯಾಕೆ ನೆಟ್ಟಗೆ ಸೀರೆ ಉಟ್ಟುಕೊಂಡು ಬರುತ್ತಿರಲಿಲ್ವಾ ಅಂತೀರಾ? ಇಲ್ಲ ಹಾಗೇನಿಲ್ಲ , ಪಾಪ ಸರಿಯಾಗೇ ಸೀರೆ ಉಟ್ಟುಕೊಂಡೇ ಬಂದಿರ್ತಿದ್ರು, ಆದರೆ ಹುಡುಗೀರು ಸೀರೆ ಉಟ್ಟುಕೊಂಡು ಸಿಗರೇಟ್ ಸೇದುವುದನ್ನು ನೋಡೋಕಾಗೋಲ್ಲ ಕಣ್ರೀ. ಬೇಕಿದ್ರೆ ಜೀನ್ಸ್ ಟೀಶರ್ಟ್ ಅಥವಾ ಇನ್ನೇನನ್ನೋ ಹಾಕಿಕೊಂಡು ಸೇದಿದರೆ ಅದು ನೋಡೆಬಲ್.

ನೀವು ಹುಡುಗರು ಯಾವ ಬಟ್ಟೆ ಬೇಕಿದ್ರೂ ಹಾಕಿಕೊಂಡು ಏನ್ ಬೇಕಾದ್ರೂ ಮಾಡ್ತೀರಾ, ಹುಡುಗಿಯರಿಗೆ ಮಾತ್ರ ಕಟ್ಟು ಪಾಡು, ಶೋಷಣೆ, ದೌರ್ಜನ್ಯ ಅದು ಇದು ಅಂತ ಸ್ತ್ರೀವಾದಿಗಳು ಮೂದಲಿಸಿದರೂ ಪರ್ವಾಗಿಲ್ಲ, ಸೀರೆ ಉಟ್ಟುಕೊಂಡರೆ ಸಭ್ಯರೆಂಬ ಭಾವನೆಯೋ ಅಥವಾ ಸೀರೆ ಉಟ್ಟಿರುವವರೆಲ್ಲಾ ಅಮ್ಮಂದಿರಂತೆ ಎಂಬ ಮುಗ್ಧತೆಯೋ ಗೊತ್ತಿಲ್ಲ, ನಮಗೆ ಆ ಸೀರೆ ಮೇಲೆ ಚಿಕ್ಕಂದಿನಿಂದ ಏನೋ ಗೌರವ. ಇರ್ಲಿ ಬಿಡಿ. ಯಾರಿಗೂ ಏನೂ ಹೇಳುವ ಹಾಗಿಲ್ಲ, ಎಲ್ಲರೂ ೨೧ ನೇ ಶತಮಾನದವರರು, modern, forward, broad minded and independent. They know what is right and wrong. They don't want moral policing by anybody.

ಇದೇನು ಇಂಗ್ಲೀಷ್ ಬಂತು ಮಧ್ಯದಲ್ಲಿ !. ಹೋಗ್ಲಿ ಬಿಡಿ.. ಅದೆಲ್ಲ ವಿಷ್ಯ ಬೇಡ ಈಗ .

ನಮ್ಮ ತಲೆಬಿಸಿ ಇದ್ದದ್ದು ಟೀವಿ ಕ್ಯಾಮೆರಾಗಳ ಬಗ್ಗೆ ಮಾತ್ರ. ಅವರು ಎಲ್ಲೋ ಕ್ಯಾಮೆರಾ ಇಟ್ಟು ಫೋಕಸ್ ಮಾಡಿ ಕಾಲ್ ಸೆಂಟರ್ ಜನರ ಜೊತೆ ನಮ್ಮನ್ನೂ ಸೇರಿಸಿ ಟೀವಿನಲ್ಲಿ ತೋರಿಸಿ ಅದನ್ನು ನಮ್ಮೂರಲ್ಲೆಲ್ಲಾ ನೋಡಿ ಫಜೀತಿಯಾಗಿ ಬಿಡುತ್ತದೆ ಎಂಬ ಭಯ ಇತ್ತು. ಈ ಬ್ಲಾಗ್, ಇಂಟರ್ನೆಟ್ ನಲ್ಲೆಲ್ಲಾ ಏನೇ ಬರೆದುಕೊಂಡರೂ ಪರ್ವಾಗಿಲ್ಲ , ಯಾರೂ ಓದಲ್ಲ. ಆದರೆ ಟೀವಿ ಮಾತ್ರ ಹಾಗಲ್ಲ ನೋಡಿ. :)

ಯಾವುದೋ ವಿಷಯ ಹೇಳಲು ಹೋಗಿ ಏನೋ ಹೇಳುತ್ತಾ ಕೂತೆ. ನೀವೂ ಅದನ್ನು ಓದುತ್ತಾ ಕೂತಿರಿ. ಅಸಲು ವಿಷಯ ಇನ್ಮುಂದಿದೆ.

ಎಲೆಕ್ಟ್ರಾನಿಕ್ ಮಾಧ್ಯಮಗಳ ಈ ಕಾಲದಲ್ಲಿ ನಿನ್ನೆಯ ಸುದ್ದಿ ಇವತ್ತಿಗೆ ಹಳತಾಗಿ ಹೋಗಿರುತ್ತದೆ. ಏನಾದರೂ ಘಟನೆಗಳು ನೆಡೆದಾಗ ಅವು ಹಸಿ ಇರುವಾಗಲೇ ಅದನ್ನು ಸರಿಯಾಗಿ ಬಳಸಿಕೊಳ್ಳುವುದು ಒಳ್ಳೆಯದು. ಇಂಗ್ಲೀಷ್ ಬರವಣಿಗೆಯ ಜಗತ್ತು ಇದನ್ನು ಯಾವತ್ತೋ ಅಳವಡಿಸಿಕೊಂಡಿದೆ. ಆದರೆ ಕನ್ನಡ ಜಗತ್ತು ಈಗೀಗ ಅಳವಡಿಸಿಕೊಳ್ಳುತ್ತಿದೆ. (ಅಥವಾ ಮೊದಲೇ ಅಳವಡಿಸಿಕೊಂಡಿದ್ದರೆ ನನ್ನ ಅಜ್ಞಾನವೆಂದು ಮನ್ನಿಸಿ). ಅಮೆರಿಕಾದಲ್ಲಿ ಟ್ವಿನ್ ಟವರ್ ದುರಂತ ಆದಾಗ ಕೆಲವೇ ತಿಂಗಳುಗಳಲ್ಲಿ ಆ ಘಟನೆಯದ ವಿವರಗಳನ್ನೊಳಗೊಂಡ ಹಲವಾರು ದಪ್ಪ ದಪ್ಪ ಪುಸ್ತಕಗಳು ಬಂದವು. ಆ ಘಟನೆ ಇನ್ನೂ ಜನರ ಮನಸಲ್ಲಿ ಹಸಿಯಿದ್ದುದರಿಂದ ಪುಸ್ತಕಗಳು ಬಿಸಿಬಿಸಿಯಾಗಿ ಖರ್ಚಾದವು. ಕನ್ನಡದಲ್ಲೂ ಕೂಡ ಮೊನ್ನೆ ಮೊನ್ನೆ ದೈತ್ಯ ಬರಹಗಾರ ರವಿ ಬೆಳಗೆರೆಯವರು ಮುಂಬೈ ಘಟನೆಯನ್ನು ವಿಷಯವಾಗಿರಿಸಿಕೊಂಡು ’ಮೇಜರ್ ಸಂದೀಪ್ ಹತ್ಯೆ’ ಎಂಬ ಪುಸ್ತಕ ಬರೆದು ಬಿಡುಗಡೆ ಮಾಡಿದರು. ಇದು ಭಾವನೆಗಳನ್ನು encash ಮಾಡಿಕೊಳ್ಳುವುದು ಎಂದು ಕೆಲವರು ಟೀಕಿಸಿದರೂ ಕೂಡ ಅಂತಹ ಘಟನೆಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳಲು, ಜನರ ಮನಸಲ್ಲಿ ಇಳಿಯಲು ಸಹಕಾರಿಯಾಗುತ್ತವೆ.

ಈಗ ’ಚಂದ್ರಯಾನ’ದ ವಿಷಯಕ್ಕೆ ಬರೋಣ. ಕೆಲ ತಿಂಗಳುಗಳ ಹಿಂದೆ ನಮ್ಮ ವಿಜ್ಞಾನಿಗಳು ಚಂದ್ರಯಾನ-೧ ಯೋಜನೆಯನ್ನು ಯಶಸ್ವಿಯಾಗಿ ಕೈಗೊಂಡರು. ಇದು ಭಾರತದ ಹೆಮ್ಮೆಯ ಸಾಧನೆ. ನಿನ್ನೆ ’ಚಂದ್ರಯಾನ’ ಪುಸ್ತಕ ಬಿಡುಗಡೆಯಾಯಿತು. ಟೀವಿ ನೈನ್ ಉದ್ಯೋಗಿ ಶ್ರೀ ಶಿವಪ್ರಸಾದ್ ಮತ್ತು ಮಿತ್ರರು ಇಸ್ರೋ ಚಂದ್ರಯಾನದ ಯೋಜನೆಯ ವಿಷಯವನ್ನಿಟ್ಟುಕೊಂಡು ಪುಸ್ತಕ ಬರೆದಿದ್ದಾರೆ. ಕನ್ನಡ ಬರವಣಿಗೆ ಲೋಕದಲ್ಲಿ ಮಾಹಿತಿ ಸಾಹಿತ್ಯದ ಅಗತ್ಯತೆ ದೃಷ್ಟಿಯಿಂದ ಈ ಪುಸ್ತಕ ನಿಜವಾಗಿಯೂ ಒಂದು ಒಳ್ಳೆಯ ಸಾಮಗ್ರಿಯಾಗಿ ಹೊರಬಂದಿದೆ. ಈ ಪುಸ್ತಕದಲ್ಲಿ ಚಂದ್ರನ ಬಗ್ಗೆ ವಿವರಗಳಿವೆ, ಮತ್ತೊಮ್ಮೆ ದೇಶ ದೇಶಗಳ ನಡುವೆ space race ಶುರುವಾಗಲು ಕಾರಣವಾದ ’ಚಂದ್ರಯಾನ-೧’ ಯೋಜನೆಯನ್ನು ಹಂತ ಹಂತವಾಗಿ ವಿವರಿಸಲಾಗಿದೆ. ಮಾನವ ಚಂದ್ರನ ಮೇಲೆ ಏಕೆ ಅಷ್ಟು ಆಸಕ್ತಿ ತೋರಿಸುತ್ತಿದ್ದಾನೆ, ಚಂದ್ರನನ್ನು ಎಟುಕಿಸಿಕೊಂಡರೆ ಮನುಕುಲಕ್ಕೆ ಮುಂದೆ ಆಗುವ ಪ್ರಯೋಜನಗಳೇನು ಎಂಬುದಕ್ಕೆ ಇದುವರೆಗೂ ಜನಸಾಮಾನ್ಯರಿಗೆ ಗೊತ್ತೇ ಇರದ ರೋಚಕ ವಿಷಯಗಳಿವೆ. ಜೊತೆಗೆ ಭಾರತದ ಬಾಹ್ಯಾಕಾಶ, ಉಪಗ್ರಹ ಕ್ಷೇತ್ರದ ಹುಟ್ಟು ಬೆಳವಣಿಗೆಗಳ ವಿಷಯಗಳು ಮತ್ತು ವಿಶ್ವದ ಬಾಹ್ಯಾಕಾಶದ ಚಟುವಟಿಕೆಗಳ ವಿಷಯಗಳನ್ನೂ ಒಳಗೊಂಡಿದೆ. ಕೇರಳದ ’ತುಂಬಾ’ ಎಂಬ ಅತೀ ಕುಗ್ರಾಮವೊಂದರಲ್ಲಿ ಒಂದು ಹಳೇ ಚರ್ಚನ್ನೇ ಕಛೇರಿ ಮಾಡಿಕೊಂಡು ದನದ ಕೊಟ್ಟಿಗೆಯಲ್ಲಿ ಜೋಡಣೆ ಮಾಡಿ ಸೈಕಲ್ ನಲ್ಲಿ ಸಾಗಿಸಿ ಭಾರತದ ಮೊಟ್ಟ ಮೊದಲ ರಾಕೆಟನ್ನು ಆಕಾಶಕ್ಕೆ ಯಶಸ್ವಿಯಾಗಿ ಹಾರಿಸಿದ ಘಟನೆಯನ್ನು ಓದುತ್ತಾ ಹೋದಂತೆ ಅಕ್ಷರಶಃ ರೋಮಾಂಚನವಾಗುತ್ತದೆ. ದೇಶಕ್ಕೋಸ್ಕರ ಅಮೆರಿಕದ ಉನ್ನತ ಹುದ್ದೆಗಳನ್ನು ತೊರೆದು ಬಂದ ವಿಜ್ಞಾನಿಗಳು, ಇಸ್ರೋ(ISRO) ಸಂಸ್ಥೆಯ ಹುಟ್ಟು, ಬೆಳವಣಿಗೆ ಎಂತವರಲ್ಲೂ ಆಶ್ಚರ್ಯ, ಹೆಮ್ಮೆ ಮೂಡಿಸದೇ ಇರಲಾರದು. ಬಾಹ್ಯಾಕಾಶದ ಬಗ್ಗೆ ವಿವರಗಳು, ಗಗನಯಾತ್ರೆಯ ಒಳಹೊರಗು, ಅಮೆರಿಕಾ - ರಷ್ಯಾ ಶೀತಲ ಸಮರದಿಂದ ಶುರುವಾದ ಸ್ಪರ್ಧೆ, ಚಂದ್ರನ ಬಗ್ಗೆ ಇರುವ ಕಥೆಗಳು, ನಂಬಿಕೆಗಳು, ಇದಕ್ಕೆ ಸಂಬಂಧಪಟ್ಟ ಜಗತ್ತಿನ ಸ್ವಾರಸ್ಯಕರ ಘಟನೆಗಳು ಮುಂತಾದ ಹಲವು ವಿಷಯಗಳಿಂದ ಪುಸ್ತಕವು ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ.


ಚಂದ್ರಯಾನದಂತಹ ಯೋಜನೆಗಳ ಬಗ್ಗೆ ಜನರಲ್ಲಿ ಆಸಕ್ತಿ, ಗೌರವ ಮೂಡಿಸಲು, ಮಕ್ಕಳನ್ನು, ಯುವಕರನ್ನು ಇಂತಹ ಕ್ಷೇತ್ರಗಳ ಕಡೆಗೆ ಸೆಳೆಯಲು, ಸಂಶೋಧನಾ ಕೆಲಸಗಳ ಬಗ್ಗೆ ಆಸಕ್ತಿ ವಹಿಸುವಂತೆ ಮಾಡಲು ಇಂತಹ ಪುಸ್ತಕಗಳ ಅಗತ್ಯ ಬಹಳ ಇದೆ. ಪ್ರೌಢಶಾಲಾ ಮಟ್ಟದಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರಿಗೂ ಸಹಕಾರಿಯಾಗಬಲ್ಲ, ಅಗತ್ಯವಾಗಿ ಓದಬೇಕಾದ ಪುಸ್ತಕ ಇದು. ಅಬ್ದುಲ್ ಕಲಾಂರವರು ಇದನ್ನು ಮೊದಲೇ ಅನೌಪಚಾರಿಕವಾಗಿ ಬಿಡುಗಡೆ ಮಾಡಿ ಶಭಾಷ್ಗಿರಿ ಕೊಟ್ಟಿದ್ದಾರೆ. ಇಂತಹ ಹೆಚ್ಚು ಹೆಚ್ಚು ಪುಸ್ತಕಗಳು ಬರಲಿ ಎಂದು ಆಸೆ ಪಡೋಣ.

ಇದರ ಜೊತೆಗೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷ ದರ್ಶಿ ನೂರು ವರ್ಷಕ್ಕಿಂತಲೂ ಹಿರಿಯರಾದ ಸುಧಾಕರ ಚತುರ್ವೇದಿಯವರಿಂದ ಶಿವಪ್ರಸಾದ್ ಅವರೇ ಬರೆದಿರುವ ’ಜಲಿಯನ್ ವಾಲಾಬಾಗ್’ ಎಂಬ ಪುಸ್ತಕವೂ ಬಿಡುಗಡೆಯಾಯಿತು. ನಾನಿನ್ನೂ ಓದಿಲ್ಲ.
*******************

ಇಷ್ಟೆಲ್ಲಾ ಮಾತಾಡಿ ಈಗ ಟೀವಿನೈನ್ ನಲ್ಲಿ ಅಪ್ಪ ಅಮ್ಮ ನನ್ನನ್ನು ಕಂಡದ್ದು ಹೇಗೆ ಅಂತಲೇ ಹೇಳಲಿಲ್ಲ ಅಲ್ವೇ?

ನಿನ್ನೆ ಚಂದ್ರಯಾನ ಮತ್ತು ಜಲಿಯನ್ ವಾಲಾಬಾಗ್ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಆಗ ಟೀವಿನೈನ್ ಕ್ಯಾಮರಾ ಪ್ರೇಕ್ಷಕರ ಗುಂಪನ್ನು ತೋರಿಸುವಾಗ ಅಲ್ಲೆಲ್ಲೋ ಮಧ್ಯದಲ್ಲಿ ಕೂತಿದ್ದ ನನ್ನನ್ನು ಕೂಡ ಫೋಕಸ್ ಮಾಡಿಬಿಟ್ಟಿದೆ. ಪುಸ್ತಕ ಬಿಡುಗಡೆ ಸುದ್ದಿಯನ್ನು ರಾತ್ರಿ ’ಜಸ್ಟ್ ಬೆಂಗಳೂರು’ ಎಂಬ ಕಾರ್ಯಕ್ರಮದಲ್ಲಿ ತೋರಿಸಿದ್ದಾರೆ. ಮನೆಯಲ್ಲಿ ಅಪ್ಪ ಅಮ್ಮ ಅದನ್ನು ನೋಡುವಾಗ ನಾನೂ ಅವರ ಕಣ್ಣಿಗೆ ಬಿದ್ದಿದ್ದೇನೆ ಅಷ್ಟೆ.

ಫೋನ್ ಮಾಡಿ ಇಷ್ಟು ವಿಷಯ ತಿಳಿದುಕೊಂಡ ನಂತರ ನಿರಾಳವೆನಿಸಿ ನಿದ್ದೆ ಹೋದೆ. :)

ಶುಕ್ರವಾರ, ಏಪ್ರಿಲ್ 3, 2009

ಬ್ಲಾಗ್ ಅಡುಗೆ !

ಕೆಲವು ಅಡುಗೆ ಬ್ಲಾಗ್ ಗಳನ್ನು ನೋಡುವುದು ಮೊದಲಿಂದಲೂ ನನಗೆ ಅಭ್ಯಾಸ. ಮಾತೆತ್ತಿದರೆ ಗೋಬಿ, ರೋಟಿ, ಕೇಕ್ ಅನ್ನದೇ, ಸುಮ್ಮನೇ ನಾರ್ಥ್ ಇಂಡಿಯನ್ನು, ಚೈನೀಸು, ಇಟಾಲಿಯನ್ನು ಅಂತ ಹೋಗದೇ ನಮ್ಮ ಕರ್ನಾಟಕದ ಸಾಂಪ್ರದಾಯಿಕ ಅಡುಗೆಗಳ ಬಗ್ಗೆ ಬರೆಯುವ ಬ್ಲಾಗ್ ಗಳು ಖುಷಿ ಕೊಡುತ್ತವೆ. ಪಾಕಚಂದ್ರಿಕೆ, ನನ್ ಪ್ರಪಂಚ, ಮನೆ ಅಡುಗೆ, My Chow Chow Bhath ಮುಂತಾದ ಅಡುಗೆ ಬ್ಲಾಗ್ ಗಳು ನನ್ನ ಓದಿನ ಪಟ್ಟಿಯಲ್ಲಿವೆ.

ಅವುಗಳಲ್ಲಿ ಇನ್ನೊಂದು ವಿಶಿಷ್ಟ ಬ್ಲಾಗ್ ರುಚಿ ರುಚಿ ಅಡುಗೆ. ಈ ಬ್ಲಾಗ್ ಅಮೆರಿಕದಲ್ಲಿರುವ ಕೃಷ್ಣವೇಣಿಯವರದ್ದು . ನಿಯಮಿತವಾಗಿ ವಾರಕ್ಕೆ ೫ ಪದಾರ್ಥಗಳನ್ನು ಮಾಡಿ ಬಡಿಸುವ ಇವರ ಅಡುಗೆಯಷ್ಟೇ ಬ್ಲಾಗ್ ಕೂಡ ಅಚ್ಚುಕಟ್ಟು. ಅಡುಗೆಯ ಪ್ರತಿಯೊಂದು ಹಂತವನ್ನೂ ಫೋಟೋ ತೆಗೆದು ಹಾಕುವ ಇವರ ಶ್ರದ್ಧೆ ದೊಡ್ಡದು. ಬಾಳೆದಿಂಡಿನ ಮಜ್ಜಿಗೆ ಹುಳಿಯಿಂದ ಹಿಡಿದು ಪತ್ರೊಡೆ ತನಕ, ಸೋರೆಕಾಯಿ ದೋಸೆಯಿಂದ ಹಿಡಿದು ಮಂಗಳೂರು ಬನ್ಸ್ ವರೆಗೆ ವಿಧವಿಧದ ರೆಸಿಪಿಗಳಿಗೆ ರುಚಿ ರುಚಿ ಅಡುಗೆ ಬ್ಲಾಗ್ ನೋಡಬಹುದು. ಸದ್ಯಕ್ಕೆ ಅಲ್ಲಿ ಬಿಸಿ ಬಿಸಿ ಹಯಗ್ರೀವ ತಯಾರಿದೆ.

ಅವತ್ತಿಂದ ಯೋಚಿಸುತ್ತಲೇ ಇದ್ದೇನೆ, ನಾನೂ ಒಂದು ಅಡುಗೆ ಬ್ಲಾಗ್ ಮಾಡಿದರೆ ಹೇಗೆ ಅಂತ ! ಹೇಗೂ ವರ್ಷವಿಡೀ ಬರೆದರೂ ಮುಗಿಯದಷ್ಟು ಅಮ್ಮನ ಅಡುಗೆಗಳಿವೆ. ನೋಡೋಣ, ಹೆದರೋ ಅಗತ್ಯವಿಲ್ಲ.. ಯಾವುದಕ್ಕೂ ಲೋಕಸಭೆ ಚುನಾವಣೆ ಮುಗಿಯಲಿ. :-)

**************

ಕನ್ನಡದಲ್ಲಿ ಪರಿಸರದ ಬಗ್ಗೆ ಯಾವುದಾದರೂ e-magazine ಇರಬಹುದಾ ಎಂದು ಹುಡುಕಿದ ನನಗೆ ಸಿಕ್ಕಿದ್ದು ’ನಿಸರ್ಗ’. ಚಂದ ಚಂದದ ಚಿತ್ರಗಳೊಂದಿಗೆ, ಪ್ರಕೃತಿ, ಜೀವಿಗಳ ಕುರಿತ ಬರಹಗಳೊಂದಿಗೆ ಪ್ರತಿ ತಿಂಗಳಿಗೊಮ್ಮೆ pdf format ನಲ್ಲಿ ಬರುವ ಇ-ಪತ್ರಿಕೆಗಾಗಿ ಇಲ್ಲಿ ಚಿಟುಕಿ - ನಿಸರ್ಗ

****************

Happy weekendu...

ಮಂಗಳವಾರ, ಮಾರ್ಚ್ 31, 2009

ಉದ್ಯಮಿಯ ಕಣ್ಣಲ್ಲಿ ಹೊಳೆಯುವ ಇಂಡಿಯಾ


ಇದುವರೆಗೂ ರಾಜಕಾರಣಿಗಳು, ವಿಚಾರವಾದಿಗಳು, ಧಾರ್ಮಿಕರು ಭಾರತವನ್ನು, ಭಾರತದ ಭವಿಷ್ಯವನ್ನು ಹಲವಾರು ರೀತಿ ಊಹಿಸಿಕೊಂಡಿರಬಹುದು. ಆದರೆ ಉದ್ಯಮಿಯೊಬ್ಬರ ಊಹೆಯ ಭಾರತ ಹೇಗಿರುತ್ತದೆ ಎಂಬ ಕಲ್ಪನೆ ಹೊಸದು. ಇದೇ ಕುತೂಹಲದಿಂದ ಕೈಗೆತ್ತಿಕೊಂಡಿದ್ದು ದೇಶದ ಪ್ರತಿಷ್ಠಿತ ಕಂಪನಿ ಇನ್ಫೊಸಿಸ್ ನ ಮುಖ್ಯಸ್ಥರಲ್ಲೊಬ್ಬರಾದ ನಂದನ್ ನೀಲೇಕಣಿಯವರಿಂದ ಇತ್ತೀಚೆಗೆ ಬರೆಯಲ್ಪಟ್ಟ ಪುಸ್ತಕ ’ಇಮ್ಯಾಜಿನಿಂಗ್ ಇಂಡಿಯಾ’.


’ಐಡಿಯಾಸ್ ಫಾರ್ ದಿ ನ್ಯೂ ಸೆಂಚುರಿ(ಹೊಸ ಶತಮಾನಕ್ಕೆ ವಿಚಾರಗಳು)’ ಎಂಬ ಅಡಿಬರಹದ ಈ ಪುಸ್ತಕದಲ್ಲಿ ನಂದನ್ ನೀಲೇಕಣಿಯವರು ವಿವಿಧ ಮಾಹಿತಿಗಳೊಂದಿಗೆ ಭಾರತವನ್ನು ಒಂದು ಭರವಸೆಯ ದೇಶವಾಗಿ ವಿಶ್ಲೇಷಿಸುತ್ತಾ ಹೋಗುತ್ತಾರೆ. ಭಾರತವು ಸ್ವಾತಂತ್ರ್ಯಾ ನಂತರ ಬೆಳೆದು ಬಂದ ರೀತಿ, ಭಾರತದ ಸಾಮಾಜಿಕ, ರಾಜಕೀಯ ಬದಲಾವಣೆಗಳು, ಜಗತ್ತು ಗುರುತಿಸುವ ದೇಶವಾಗಿ ಹೊರಹೊಮ್ಮಿದ ರೀತಿಯ ಜೊತೆಗೆ ಒಂದು ಅತ್ಯುತ್ತಮ ಮಾನವ ಸಂಪನ್ಮೂಲವುಳ್ಳ ದೇಶವಾಗಿ ಈ ಶತಮಾನದ ಮುಂದಿನ ವರ್ಷಗಳು ಭಾರತದ್ದೇ ಆಗಿರುತ್ತವೆ ಎಂಬ ವಿಶಿಷ್ಟ ಆಶಾಭಾವನೆಯನ್ನು ಮೂಡಿಸುತ್ತದೆ ಪುಸ್ತಕ. ಬರೀ ಭಾರತದಲ್ಲಿರುವ ಸಮಸ್ಯೆಗಳನ್ನು ಮಾತ್ರ ಗುರುತಿಸಿ ಟೀಕಿಸುವ ಕೆಲಸ ಮಾಡದೇ ಪ್ರತಿಯೊಂದಕ್ಕೂ ಸಕಾರಾತ್ಮಕವಾದ ಉಪಾಯಗಳನ್ನು ಯೋಚಿಸಿರುವುದು, ಆ ನಿಟ್ಟಿನಲ್ಲಿ ವಿಚಾರಗಳನ್ನು ಮಂಡಿಸಿರುವುದು ಈ ಪುಸ್ತಕದ ವಿಶೇಷ. ನೀಲೇಕಣಿಯವರು ಭಾರತದ ಜನಸಂಖ್ಯೆಯನ್ನು ಹೇಗೆ ಲಾಭಕರವಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದಬಹುದೆಂದು ತಿಳಿಸುತ್ತಾರೆ. ಜನಸಂಖ್ಯಾ ಶಾಸ್ತ್ರದ ಪ್ರಕಾರ ಇನ್ನು ಕೆಲವು ದಶಕಗಳಲ್ಲಿ ವರ್ಷಗಳಲ್ಲಿ ಭಾರತವು ಜಗತ್ತಿನಲ್ಲಿ ಅತಿಹೆಚ್ಚು ಯುವಜನಾಂಗವನ್ನು ಹೊಂದಿದ ದೇಶವಾಗಲಿದ್ದು ಇಡೀ ಜಗತ್ತಿಗೆ ಭಾರತವೆಂಬುದು ಒಂದು ಅನಿವಾರ್ಯ ಎಂಬ ಪರಿಸ್ಥಿತಿಯ ಸೃಷ್ಟಿಯ ಬಗ್ಗೆ ಹೇಳುತ್ತಾರೆ. ಈ ದೇಶದ ಮಕ್ಕಳಿಗೆ, ಯುವಕರಿಗೆ ಮೂಲಭೂತ ಸೌಕರ್ಯಗಳಿಂದ ಹಿಡಿದು, ಉನ್ನತ ವಿದ್ಯಾಭ್ಯಾಸ ಮುಂತಾದ ಸಂಪನ್ಮೂಲಗಳು ಎಟುಕುವಂತೆ ಮಾಡುವುದು ಅಗತ್ಯ ಎಂಬುದನ್ನು ಪುಸ್ತಕದಲ್ಲಿ ಪ್ರತಿಪಾದಿಸುತ್ತಾ ಹೋಗುತ್ತಾರೆ. ಖಂಡಿತ ಇದು ಇನ್ಪೋಸಿಸ್ ಹುಟ್ಟು, ಬೆಳವಣಿಗೆ, ಯಶೋಗಾಥೆಯ ಪುಸ್ತಕವಲ್ಲ.

’ಆಕಸ್ಮಿಕ ಉದ್ಯಮಿಯಿಂದ ಟಿಪ್ಪಣಿಗಳು’ ಎಂಬ ಮುನ್ನುಡಿಯಲ್ಲಿ "ನಿಮಗೆ ಇನ್ಪೋಸಿಸ್ ಒಳಗೆ ಇಷ್ಟು ಚಂದದ ರಸ್ತೆಗಳನ್ನು ಮಾಡಲು ಸಾಧ್ಯವಾದರೆ ಅದು ಹೊರಗೆ ಏಕೆ ಸಾಧ್ಯವಾಗಿಲ್ಲ" ಎಂಬ ವಿದೇಶೀಯನೊಬ್ಬನ ಪ್ರಶ್ನೆಯಿಂದಲೇ ಶುರುಮಾಡುತ್ತಾರೆ. ಇಲ್ಲಿನ ರಾಜಕೀಯ ವ್ಯವಸ್ಥೆಯ ಸಂಕೀರ್ಣತೆಗಳನ್ನು ತಿಳಿಸುತ್ತಾರೆ. ಚುನಾವಣೆಯ ವಿಷಯಕ್ಕೆ ಬಂದಾಗ ಇಲ್ಲಿ ಗೆಲ್ಲುವುದಷ್ಟೆ ಮುಖ್ಯವಾಗುವುದರಿಂದ ಒಬ್ಬ ಉದ್ಯಮಿಯಾಗಿ ರಾಜಕೀಯ ಕ್ಷೇತ್ರದ ಬಗ್ಗೆ ಬಹಳಷ್ಟು ಅರಿವಿದ್ದರೂ ಕೂಡ ತನ್ನಂತವರು ಈ ವ್ಯವಸ್ಥೆಯಲ್ಲಿ ’ಚುನಾಯಿತ’ರಾಗಲು ಅರ್ಹತೆಗಳಿಲ್ಲದಿರುವುದೇ ಕಾರಣ ಎಂಬ ಮಾತುಗಳು ಯೋಚನೆಗೆ ಹಚ್ಚುತ್ತವೆ. ನೆಹರು, ಇಂದಿರಾ ಯುಗ , ಭಾರತದಲ್ಲಿ ಜನಸಂಖ್ಯೆ ನಿಯಂತ್ರಣದ ವಿಫಲತೆ, ಕೈಗಾರಿಕೀಕರಣ, ಮತಬ್ಯಾಂಕ್ ರಾಜಕೀಯ , ಜಾತಿ, ಮೀಸಲಾತಿ ಮುಂತಾದ ರಾಜಕೀಯ, ಇತಿಹಾಸ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಸಂಕ್ಷಿಪ್ತ ವಿವರಣೆಯಿದ್ದು ಇತಿಹಾಸ ಕಾಲದಿಂದ ಈಗಿನವರೆಗೆ ಇಡೀ ಭಾರತದ ಬಗ್ಗೆ ಒಂದು ಸಮಗ್ರ ಚಿತ್ರಣವನ್ನು ಕಟ್ಟಿಕೊಡುತ್ತದೆ.

ಪುಸ್ತಕವು ನಾಲ್ಕು ಭಾಗಗಳನ್ನೊಳಗೊಂಡಿದೆ.

ಮೊದಲನೆಯ ಭಾಗವು ಬದಲಾದ ಭಾರತದ ಪ್ರಸ್ತುತ ಚಿತ್ರಣವನ್ನು ಒಳಗೊಂಡಿದೆ. ಇವತ್ತಿನ ಬದಲಾದ ಪರಿಸ್ಥಿತಿಯಲ್ಲಿ ಉದ್ಯಮಿಯಾಗಲು ಇರುವ ಮುಕ್ತ ಅವಕಾಶಗಳು, ಇಂಗ್ಲಿಷ್ ಭಾಷೆಯ, ಶಿಕ್ಷಣದ ಅಗತ್ಯತೆ, ಭಾರತದ ಮಾರುಕಟ್ಟೆಯನ್ನು ಜಗತ್ತಿಗೆ ತೆರೆದಿಡುವಿಕೆ ಮುಂತಾದ ವಿಷಯಗಳಿವೆ. ಭಾರತದಲ್ಲಿ ಜನ ಈಗ ಏನನ್ನು ಬಯಸುತ್ತಿದ್ದಾರೆ, ಎಷ್ಟೆಲ್ಲಾ ಸಾಂಸ್ಕೃತಿಕ, ಸಾಮಾಜಿಕ ವ್ಯತ್ಯಾಸಗಳ ನಡುವೆಯೂ ಇವತ್ತು ದೇಶದ ಜನರಲ್ಲಿ, ಕೊನೇಪಕ್ಷ ನಗರದ ಮತ್ತು ಮಧ್ಯಮ ವರ್ಗದ ಜನರಲ್ಲಿ ಒಂದು ಅನಿವಾರ್ಯ ಬಹುಮತವಿರುವಂತಹ ವಿಚಾರಗಳಿವೆ.

ಎರಡನೇಯ ಮತ್ತು ಮೂರನೆಯ ಭಾಗಗಳಲ್ಲಿ ಭಾರತದಲ್ಲಿ ಯಾವ ಯಾವ ಕ್ಷೇತ್ರಗಳಲ್ಲಿ ಬದಲಾವಣೆಗಳು ಆಗುತ್ತಿವೆ, ಬೆಳವಣಿಗೆಗಳು ಆಗಬೇಕಿದೆ ಎಂಬ ವಿಷಯವಿದೆ. ಸಾಕ್ಷರತೆ, ನಗರೀಕರಣ, ಇನ್ಫ್ರಾಸ್ಟ್ರಕ್ಚರ್, ಸಾರಿಗೆ, ದೂರಸಂಪರ್ಕ ಮುಂತಾದ ವಿಚಾರಗಳ ಬಗ್ಗೆ ಹೇಳಲಾಗಿದೆ. ಭಾರತವು ಮಾಹಿತಿ ತಂತ್ರಜ್ಞಾನಕ್ಕೆ ತೆರೆದುಕೊಂಡ ಬಗೆ , ಮಾಹಿತಿ ತಂತ್ರಜ್ಞಾನದ ಉಪಯೋಗ ಪಡೆದುಕೊಂಡ ಕ್ಷೇತ್ರಗಳು, ನಗರಗಳ ಬೆಳವಣಿಗೆಯ ಪ್ರಾಮುಖ್ಯತೆಯೊಂದಿಗೆ ಭಾರತವು ಇನ್ನು ಬರೀ ಹಳ್ಳಿಗಳ ದೇಶವಾಗಿ ಉಳಿದಿಲ್ಲ ಎಂಬ ಅನಿವಾರ್ಯ ಸತ್ಯದ ವಿಷಯಗಳಿವೆ. ಜೊತೆಗೆ ಮೀಸಲಾತಿ, ಎಡಬಲ ಸಿದ್ಧಾಂತಗಳು, ಬಣಗಳು, ವಿಶೇಷ ಆರ್ಥಿಕ ವಲಯದ ಪರ ವಿರೋಧಗಳು, ಕಾರ್ಮಿಕ ಸಂಘಟನೆ, ವಿಶ್ವವಿದ್ಯಾಲಯಗಳಲ್ಲಿನ ರಾಜಕೀಯ ಚಟುವಟಿಕೆಗಳು ಮುಂತಾದ ಭಾವನಾತ್ಮಕ ಸಂಘರ್ಷಗಳನ್ನೊಳಗೊಂಡ ಮತ್ತು ಒಮ್ಮತವಿಲ್ಲದ ವಿಚಾರಗಳು ಚರ್ಚಿಸಲ್ಪಟ್ಟಿವೆ.

ನಾಲ್ಕನೆಯ ಭಾಗವು ಭಾರತದ ಬಹಳಷ್ಟು ಸಮಸ್ಯೆಗಳ ಪರಿಹಾರ, ಸಮರ್ಥ ನಿಭಾಯಿಸುವಿಕೆಯ ಉಪಾಯಗಳೊಂದಿಗೆ ಅಭಿವೃದ್ಧಿಯ ಗುರಿಯು ದೂರದಲ್ಲಿ ಇಲ್ಲ ಎಂಬ ಭಾವನೆಯನ್ನು ತುಂಬುತ್ತದೆ. ಇದು ಬಹುಮುಖ್ಯವಾಗಿ ಮಾಹಿತಿ ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡು ಪ್ರಗತಿ ಹೊಂದಬಹುದು ಎಂದು ತಿಳಿಸಿಕೊಡುತ್ತದೆ. ಮಾಹಿತಿ ತಂತ್ರಜ್ಞಾನ ಎಂಬುದು ಬರೀ ವೈಭೋಗಕ್ಕಲ್ಲದೇ ಪ್ರತಿಯೊಂದಕ್ಕೂ ಪರಿಹಾರವಾಗಬಲ್ಲುದು ಎಂಬುದಕ್ಕೆ ಯಶಸ್ವಿ ’ಭೂಮಿ’ ಯೋಜನೆಯ ಉದಾಹರಣೆ ಕೊಡಲಾಗಿದೆ. ಪ್ರತಿಯೊಬ್ಬನಿಗೂ ನಿರ್ದಿಷ್ಟ ಗುರುತಿನ ಸಂಖ್ಯೆಯ (ನ್ಯಾಷನಲ್ ಐ.ಡಿ. ಸಿಸ್ಟಮ್) ಅನುಷ್ಠಾನ ಅತಿ ಅಗತ್ಯವಾಗಿ ಆಗಬೇಕಿದೆ ಎಂದು ತಿಳಿಸಿಕೊಡುತ್ತದೆ. ಇದು ಎಲ್ಲಾ ಯೋಜನೆಗಳೂ ಯಶಸ್ವಿಯಾಗಲು, ಯಾವ ಸಂಪನ್ಮೂಲವೂ ದುರುಪಯೋಗವಾಗದೇ ತಲುಪಬೇಕಾದವರನ್ನು ತಲುಪಲು, ಆರೋಗ್ಯ, ಕಾರ್ಮಿಕನಿಧಿ, ಪಿಂಚಣಿ ಮೊದಲಾದ ಸಾಮಾಜಿಕ ಭದ್ರತೆ ಒದಗಿಸಲು ಸಹಾಯಕಾರಿಯಾಗಬಲ್ಲುದು ಎಂಬುದನ್ನು ವಿವರಿಸಿದ್ದಾರೆ. ಪರಿಸರವನ್ನು ಕಾಯ್ದುಕೊಂದು, ವಿದ್ಯುತ್ ಮುಂತಾದ ಶಕ್ತಿ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಪಡೆದುಕೊಂಡಾಗ ದೇಶದ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ಸೂತ್ರಗಳನ್ನು ಒದಗಿಸಲಾಗಿದೆ. ಎಲ್ಲಾ ಯೋಜನೆಗಳೂ ಪ್ರತಿ ಮೂಲೆಯ ಹಳ್ಳಿಯಲ್ಲಿನ ಪ್ರತಿಯೊಬ್ಬರಿಗೂ ತಲುಪಲು ಒಂದು ಸಮರ್ಥ ಜಾಲದ ಅವಶ್ಯಕತೆ, ದೇಶದ ಮೂಲೆಯಲ್ಲಿನ ಪ್ರತಿಭೆಗಳನ್ನೂ ಕೂಡ ಮುಖ್ಯವಾಹಿನಿಯಲ್ಲಿ ಗುರುತಿಸಿ ಬೆಳೆಸುವ ವಾತಾವರಣ, ಸರಿಯಾದ ಕಾರ್ಯನೀತಿಗಳ ಜಾರಿ ಇನ್ನಿತರ ಕೆಲಸಗಳಿಂದ ಭಾರತದ ಆರ್ಥಿಕತೆಯನ್ನು ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು ಎಂಬ ಚಿಂತನೆಗಳಿವೆ.

ಇಡೀ ಪುಸ್ತಕವು ನೀಲೇಕಣೀಯವರ ಅಗಾಧ ಅಧ್ಯಯನ ಮತ್ತು ಅನನ್ಯ ಅನುಭವಗಳ ಫಲವಾಗಿ ಕಾಣುತ್ತದೆ. ಭಾರತದ ಕೊಳಕು, ಹುಳುಕುಗಳನ್ನು ಕೂಡ ದೂಷಣೆಯಲ್ಲದ ಧಾಟಿಯಲ್ಲಿ ಹೇಳಿರುವುದರಿಂದ ಓದಲು ಕಿರಿಕಿರಿಯಾಗುವುದಿಲ್ಲ. ಎಲ್ಲಾ ವಿಷಯಗಳನ್ನೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಿನ್ನೆಲೆಯಿಂದ ವಿಶ್ಲೇಷಿಸಲಾಗಿದ್ದು ಅದಕ್ಕೆ ಪರಿಹಾರಗಳೂ ಕೂಡ ಅದರಲ್ಲೇ ಇರುವುದನ್ನು ತೋರಿಸಲಾಗಿದೆ. ಒಟ್ಟಿನಲ್ಲಿ ಇಡೀ ಪುಸ್ತಕವು ಭಾರತ ಕೇಂದ್ರೀಕೃತವಾಗಿ ಎಲ್ಲಾ ವಿಷಯಗಳನ್ನೂ ಕೂಡ ಒಳಗೊಂಡಿದ್ದು ಒಂದು ಒಳ್ಳೆಯ ಅಧ್ಯಯನ ಸಾಮಗ್ರಿಯಾಗಬಲ್ಲುದು. ಆದರೆ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಜಾಗತೀಕರಣ ಮುಂತಾದವುಗಳನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಮತ್ತು ನಗರ ಆಧಾರಿತ ದೃಷ್ಟಿಯಲ್ಲಿ ಯೋಚಿಸಿದ ನಿಟ್ಟಿನಲ್ಲಿ ದೇಶದ ಬಹು ಅಗತ್ಯ ಕೃಷಿ ಕ್ಶೇತ್ರದ ಬೆಳವಣಿಗೆ ಬಗ್ಗೆ ಹೆಚ್ಚು ಒತ್ತು ನೀಡಲಾಗಿಲ್ಲ ಮತ್ತು ಭಾರತದ ಸಾಂಸ್ಕೃತಿಕ ನೆಲೆಗಟ್ಟನ್ನಾಗಲೀ, ಭಾರತೀಯ ಭಾಷೆಗಳ ಉಳಿಕೆ, ಬೆಳವಣಿಗೆಯನ್ನಾಗಲೀ ಗಣನೆಗೆ ತೆಗೆದುಕೊಂಡಿಲ್ಲ ಎಂದು ಅನ್ನಿಸುತ್ತದಾದರೂ ಕೂಡ ಆ ವಿಷಯಗಳು ಈ ಪುಸ್ತಕದ ವ್ಯಾಪ್ತಿಯಿಂದ ಹೊರಗಿನವು ಎಂದುಕೊಳ್ಳಬಹುದು. ಖುದ್ದು ನೀಲೇಕಣೀಯವರೇ ತಮ್ಮ ಪುಸ್ತಕದ ಮೊದಲಿನಲ್ಲಿ ಹೇಳಿಕೊಂಡಂತೆ ೫೦೦ ಚಿಲ್ಲರೆ ಪುಟಗಳ ಈ ಪುಸ್ತಕ ಖಂಡಿತ ಸಿನೆಮಾ, ಕ್ರಿಕೆಟ್ ನಂತಹ ರಂಜನೆಯ ವಿಷಯಗಳನ್ನು ಅಪೇಕ್ಷೇಪಡುವವರಿಗೆ ಅಲ್ಲವಾಗಿದ್ದು ಓದಲು ಅಪಾರವಾದ ಆಸಕ್ತಿ, ತಾಳ್ಮೆ ಬೇಡುತ್ತದೆ.

ಆದರೆ ಈ ರಿಸೆಷನ್ ಸಮಯದಲ್ಲಿ ಜಾಗತಿಕ ಮಾರುಕಟ್ಟೆ, ಸೇವೆಯನ್ನೇ ನಂಬಿಕೊಂಡು ಅಭಿವೃದ್ಧಿ ಹೊಂದಬಹುದೆಂಬ ಭಾವನೆ ಇಟ್ಟುಕೊಂಡು ಇದನ್ನು ಓದಿ ಆಶಾಭಾವನೆ ತಳೆಯಬೇಕೋ ಅಥವಾ ನೀಲೇಕಣಿಯವರಿಗೂ ಇದರ ಅರಿವಿರಲಿಲ್ಲ ಎಂದು ವ್ಯಥೆ ಪಡಬೇಕೋ ಎಂಬ ತೀರ್ಮಾನ ಓದುಗನಿಗೆ ಬಿಟ್ಟದ್ದು.!


(ಮಾರ್ಚ್ ೨೯, ೨೦೦೯ ಕನ್ನಡ(ಸಾಪ್ತಾಹಿಕ) ಪ್ರಭದ ’ಇಂಗ್ಲೀಷ್ ರೀಡರ್’ ಅಂಕಣ ಕ್ಕೆ ಬರೆದದ್ದು. )
.........................................................................

Off the record ತಕರಾರುಗಳು:


೧. ಕರ್ನಾಟಕದಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸುವುದನ್ನು, ತಮಿಳುನಾಡಿನಲ್ಲಿ ಶಿಕ್ಷಣದಲ್ಲಿ ತಮಿಳು ಭಾಷೆ ಕಡ್ಡಾಯ ಮಾಡುವುದನ್ನು ’language chauvinism'(ದುರಭಿಮಾನ, ಅತ್ಯಭಿಮಾನ) ಎನ್ನುತ್ತಾರೆ.
೨. ಬ್ರಿಟಿಷ್ ವೈಸ್ ರಾಯ್ ಗಳನ್ನು ಇನ್ನೂ ’Lord' ಎಂಬ ಗೌರವದೊಂದಿಗೆ ಸಂಬೋಧಿಸುತ್ತಾರೆ !
೩. ನಕ್ಸಲರು, ಭಜರಂಗದಳಗಳು ನಿರುದ್ಯೋಗಿ ಜನರಿಂದ ರೂಪುಗೊಂಡ left and right extremist organisation ಗಳು ಎನ್ನುತ್ತಾರೆ.
.............................................................................

ಸೋಮವಾರ, ಮಾರ್ಚ್ 23, 2009

ಶಿವಗಂಗೆ ಹಾಗೂ ನಂದಿಬೆಟ್ಟದ ಮಂಗಗಳು

"ಇಲ್ಲಿ ಸುತ್ತ ಮುತ್ತ ಬರೀ ಮಂಗಗಳ ಕಾಟ ಸಾರ್, ಏನೂ ಬೆಳೆಯಕ್ಕೆ ಆಗಲ್ಲ, ತೋಟ ಮಾಡಕ್ಕೆ ಆಗಲ್ಲ" ಎಂದು ತುಮಕೂರು ರಸ್ತೆಯಲ್ಲಿ ಒಬ್ಬರು ಹಳ್ಳಿಯವರು ಗೋಳಿಟ್ಟುಕೊಂಡಾಗ ಪರಿಸ್ಥಿತಿಯ ಅರಿವು ಅಷ್ಟಾಗಿ ಆಗಿರಲಿಲ್ಲ. ನಮ್ಮೂರಿನ ಕಡೆ ತೋಟಗಳಿಗೆ ಆಗಾಗ ಮಂಗಗಳು ಬರುವುದುಂಟು. ಅವು ಬಂದರೆ ಒಂದು ಗುಂಪಾಗಿ ಬರುತ್ತವೆ, ಸ್ವಲ್ಪ ಹೊತ್ತು ಅಲ್ಲೆ ಹಾರಾಡಿ ಕಿರುಚಾಡಿ ಕೈಗೆ ಸಿಕ್ಕಿದ್ದನ್ನು ಕಿತ್ತು ತಿಂದು ಹಾಗೆಯೇ ಮುಂದೆ ಹೋಗಿಬಿಡುತ್ತವೆ. ಹಾಗೂ ಕೂಡ ಅವುಗಳ ಕಾಟ ಜಾಸ್ತಿ ಆದರೆ ಶಬ್ದ ಮಾಡಿಯೋ, ಪಟಾಕಿ ಸಿಡಿಸಿಯೋ, ಹುಸಿ ಗುಂಡು ಹಾರಿಸಿಯೋ ಓಡಿಸಿಬಿಡುತ್ತಾರೆ. ಆದರೆ ಮನುಷ್ಯನ ಬಳಕೆ , ಅಭ್ಯಾಸ ಒಮ್ಮೆ ಆಗಿಬಿಟ್ಟರೆ ಅವುಗಳನ್ನು ಸಹಿಸುವುದೇ ಕಷ್ಟವಾಗಿಬಿಡುತ್ತದೆ ಎಂದು ತಿಳಿದಿದ್ದು ನನಗೆ ಶಿವಗಂಗೆ ಬೆಟ್ಟ ಮತ್ತು ನಂದಿಬೆಟ್ಟಗಳಲ್ಲಿ.

ಶಿವಗಂಗೆ ಬೆಟ್ಟ ಹತ್ತುವಾಗ ಈ ಮಂಗಗಳ ಜೊತೆ ಏಗುವುದೇ ಒಂದು ವಿಶಿಷ್ಟ ಅನುಭವ. ಹತ್ತುವಾಗ ಸೌತೆಕಾಯಿ, ಮಜ್ಜಿಗೆ, ಚುರುಮುರಿ ಮಾರಾಟ ಮಾಡುವವರೆಲ್ಲರೂ ಕೂಡ ಜೊತೆಗೆ ಒಂದು ನಾಯಿಯನ್ನು ಇಟ್ಟುಕೊಂಡಿರುತ್ತಾರೆ. "ಏನ್ ಮಾಡೋದು , ಮಂಗನ ಕಾಟ, ನಾಯಿ ಇದ್ರೆ ಅವು ಹತ್ರಕ್ಕೆ ಬರಲ್ಲ" ಅನ್ನುತ್ತಾರೆ. ಬೆಟ್ಟ ಹತ್ತುವಾಗ ಮೊದಲು ಸ್ವಲ್ಪ ದೂರ ಮಂಗಗಳ ಸುಳಿವು ಅಷ್ಟೆನೂ ಇರುವುದಿಲ್ಲ. ಮೇಲೆ ಹತ್ತುತ್ತಾ ಹೋದಂತೆ ಒಂದೊಂದೇ ಮಂಗಗಳು ಕಾಣಿಸಿಕೊಳ್ಳುತ್ತವೆ. ದೂರದಿಂದಲೇ ಅವು ಹತ್ತುತ್ತಿರುವವರ ಕೈಯಲ್ಲಿ ಏನಾದರೂ ಸಾಮಾನು ಇದೆಯಾ ಎಂದು ಗುರುತಿಸಿಕೊಳ್ಳುತ್ತವೆ. ಕೈಯಲ್ಲಿ ಪ್ಲಾಸ್ಟಿಕ್ ಕವರ್ ಇದ್ದರಂತೂ ಮುಗಿದೇ ಹೋಯಿತು, ಅದರಲ್ಲಿ ಖಾತ್ರಿಯಾಗಿ ತಿಂಡಿ ಇದೆ ಎಂದು ತಿಳಿದುಕೊಂಡುಬಿಡುತ್ತವೆ ಅವು. ಅದರಲ್ಲೂ ಅವುಗಳ ಮೊದಲ ಗುರಿ ಮಕ್ಕಳು ಮತ್ತು ಹೆಂಗಸರು. ಎಲ್ಲಿಂದಲೋ ಸುಯ್ಯನೇ ಓಡಿ ಬಂದ ಮಂಗವೊಂದು ಮಕ್ಕಳ ಕೈಯಲ್ಲಿದ್ದ ತಿಂಡಿಯನ್ನು ಕಿತ್ತುಕೊಂಡು ಓಡಿಬಿಡುತ್ತದೆ. ಏನಾಯಿತೆಂದು ಗೊತ್ತಾಗುವಷ್ಟರಲ್ಲಿ ಮರದ ಮೇಲಿರುತ್ತದೆ! ಒಂದು ವೇಳೆ ಅದು ಓಡಿ ಬರುವುದನ್ನು ನೋಡಿದರೂ ಕೂಡ ಭಯದಿಂದ ಮಕ್ಕಳು ಕಿರುಚಿಕೊಳ್ಳುತ್ತಿರುವಾಗಲೇ ಕೈಯಲ್ಲಿದ್ದ ಸಾಮಾನು ಮಂಗನ ಪಾಲಾಗಿರುತ್ತದೆ. ಹೆಂಗಸರೂ ಕೂಡ ಹೆದರಿಕೊಳ್ಳುವವರು ಎಂದು ಅವುಗಳಿಗೆ ಯಾವಾಗಲೋ ಗೊತ್ತಾಗಿಬಿಟ್ಟಂತಿದೆ. ನಾವು ಬೆಟ್ಟ ಹತ್ತುವಾಗ ಒಬ್ಬರ ವ್ಯಾನಿಟಿ ಬ್ಯಾಗಿಗೆ ಮಂಗವೊಂದು ಬಂದು ಜೋತು ಬಿತ್ತು. ಅದು ಕಡಿದಾದ ಏರಿನ ಜಾಗ. ಆ ಹೆಣ್ಣುಮಗಳು ಪಾಪ ಸುಮಾರು ಹೊತ್ತು ಜಗ್ಗಾಡಿ ಕೊನೆಗೂ ತನ್ನ ವ್ಯಾನಿಟಿ ಬ್ಯಾಗನ್ನು ಬಿಟ್ಟುಕೊಡಬೇಕಾಯಿತು. ಹಾಗಂತ ಗಂಡಸರಿಗೆ ಏನೂ ಮಾಡುವುದಿಲ್ಲ ಎಂದುಕೊಳ್ಳುವ ಹಾಗಿಲ್ಲ. ಗಂಡಸರ ಕೈಲಿದ್ದ ಸಾಮಾನುಗಳಿಗೆ ಒಂಟಿಯಾಗಿ ಹೋಗಿ ಕಿತ್ತುಕೊಳ್ಳುವುದು ಸ್ವಲ್ಪ ಅಪಾಯ ಎಂದು ಅವು ಅರಿತಿವೆ. ಗಂಡಸರು ಕೋಲು ತೆಗೆದುಕೊಂಡು ಬಾರಿಸಿಬಿಡುತ್ತಾರೆ ಎಂಬ ಭಯ ಇರಬಹುದು. ಅದಕ್ಕಾಗಿ ನಾಲ್ಕೈದು ಮಂಗಗಳು ಒಟ್ಟಾಗಿ ಧಾಳಿ ಇಡುತ್ತವೆ. ದೊಡ್ಡ ಗಡವ ಮಂಗಗಳಾದರೆ ನಾಲ್ಕೂ ಕಡೆಯಿಂದಲೂ ಸುತ್ತುವರೆದು ಹಲ್ಲು ತೋರಿಸಿ ಹೆದರಿಸಿ ಕೈಯಲಿದ್ದುದನ್ನು ಕಿತ್ತುಕೊಂಡು ಹೋಗುತ್ತವೆ. ಸಣ್ಣ ಮಂಗಗಳು ಗಮನವನ್ನು ಬೇರೆಡೆ ಸೆಳೆದು ಒಂದನ್ನು ಓಡಿಸುತ್ತಿದ್ದಾಗ ಇನ್ನೊಂದು ಬಂದು ಕಿತ್ತುಕೊಂಡು ಓಡಿಹೋಗುತ್ತದೆ! ನಾಲ್ಕು ಮಂಗಗಳು ಒಟ್ಟಿಗೆ ಬಂದ ಮೇಲೆ ಮುಗಿದೇ ಹೋಯಿತು, ಕೈಯಲ್ಲಿದ್ದುದನ್ನು ಕೊಡಲೇ ಬೇಕು. ಏನು ಕಿರುಚಿದರೂ, ಏನು ಹೆದರಿಸಿದರೂ, ಹೊಡೆಯಲು ಹೋದರೂ ಜಪ್ಪಯ್ಯ ಅನ್ನುವುದಿಲ್ಲ. ಅವುಗಳಿಗೆ ನಾವೇ ಹೆದರಿ ಒಪ್ಪಿಸಿಬಿಡುವಂತಹ ಸನ್ನಿವೇಶ ಬಂದುಬಿಡುತ್ತದೆ. ತೀರ ಕೋಲಿನಲ್ಲಿ ಹೊಡೆದೋ, ಕಲ್ಲು ತೂರಿಯೋ ಹೆದರಿಸಲು ನೋಡಿದರೆ ಅವುಗಳಿಂದ ಪರಚಿಸಿಕೊಳ್ಳುವುದು ಗ್ಯಾರಂಟಿ!

ಇಲ್ಲಿನ ಮಂಗಗಳು ನೀರಿನ ಬಾಟಲಿಯನ್ನು ಮಾತ್ರ ಮುಟ್ಟುವುದಿಲ್ಲ. ಅವಕ್ಕೆ ಮಿರಿಂದಾ, ಪೆಪ್ಸಿ, ಕೋಲಾಗಳೇ ಇಷ್ಟ. ಬಾಟಲಿಯಲ್ಲಿ ಬಣ್ಣದ ನೀರು ಕಂಡರೆ ಸಾಕು ಅವಕ್ಕೆ ಸ್ಕೆಚ್ ಹಾಕಿ ಕಿತ್ತುಕೊಂಡು ಓಡುವವರೆಗೂ ಅವಕ್ಕೆ ಸಮಾಧಾನವಿರುವುದಿಲ್ಲ. ನಾವು ಬೆಟ್ಟ ಹತ್ತುವಾಗ ಹೇಗಾದರೂ ಚೀಲದಲ್ಲಿದ್ದ ಒಂದು ಫ್ರೂಟಿ ಕುಡಿದುಬಿಡೋಣ ಎಂದು ಒಂದು ಕಲ್ಲು ಮಂಟಪದ ಒಳಗೆ ಕೂತೆವು. ಯಾರಿಗೂ ಕಾಣಿಸುತ್ತಿಲ್ಲ ಎಂಬ ಧೈರ್ಯ ನಮ್ಮದಾಗಿತ್ತು. ಇನ್ನೇನು ಚೀಲ ತೆಗೆಯುತ್ತಲೇ ಅದೆಲ್ಲಿತ್ತೋ ಒಂದು ಮಂಗ ಹಟಾತ್ತನೆ ಬಂದು ಗುರುಗುಡಲಾರಂಭಿಸಿತು. ಮತ್ತೆ ಬಾಟಲಿಯನ್ನು ಚೀಲದೊಳಗೆ ತುರುಕಿಕೊಂಡು ಹೊರಡಲು ನೋಡಿದರೆ ಆ ಬಾಟಲಿಯನ್ನು ಕೊಡದೇ ಇಲ್ಲಿಂದ ಹೋಗಲು ಬಿಡುವುದಿಲ್ಲ ಎಂಬಂತೆ ಮತ್ತೆರಡು ಮಂಗಗಳು ಧಾಳಿಗೆ ಸಜ್ಜಾಗಿ ನಿಂತಿದ್ದವು. ನಮ್ಮ ಯಾವ ಬೆದರಿಕೆಗೂ ಬಗ್ಗದೇ ಚೀಲವನ್ನು ಕೈಯಿಂದ ಕಿತ್ತುಕೊಂಡು ಅದರಲ್ಲಿದ್ದ ಫ್ರೂಟಿ ಬಾಟಲಿ ತೆಗೆದುಕೊಂಡು ಓಡಿದವು. ಆ ಬಾಟಲಿ ಸೀಲ್ ಆಗಿದೆ, ತೆಕ್ಕೊಡ್ತೀವಿ, ನೀವೆ ಕುಡ್ಕಳಿ ಅಂದರೂ ಕೂಡ ತೆಗೆದುಕೊಂಡು ಓಡಿ ಹೋಗಿ ಹೇಗೆ ಕುಡಿಯುವುದೋ ಗೊತ್ತಾಗದೇ ಕಚ್ಚಿ ತೂತು ಮಾಡಿ ಎಲ್ಲಾ ಸೋರಿಹೋಗುವಂತೆ ಮಣ್ಣು ಪಾಲು ಮಾಡಿ ನಮಗೂ ಇಲ್ಲ ಅವಕ್ಕೂ ಇಲ್ಲ ಮಾಡಿಬಿಟ್ಟವು. ಆರಾಮಾಗಿ ಸೌತೆಕಾಯಿ ಮೆಲ್ಲುತ್ತಲೋ, ಹಣ್ಣಿನ ಹಸ ಕುಡಿಯುತ್ತಲೋ ಬೆಟ್ಟ ಹತ್ತುವುದು ಶಿವಗಂಗೆಯಲ್ಲಿ ಸಾಧ್ಯವೇ ಇಲ್ಲದ ಮಾತು. ಅದೇನಿದ್ದರೂ ಮಂಗಗಳಿಗೇ ಸಲ್ಲತಕ್ಕದ್ದು. ಶಿವಗಂಗೆ ಬೆಟ್ಟದ ಮೇಲೆ ಏನಾದರೂ ತೆಗೆದುಕೊಂಡು ಹೋಗಬೇಕೆಂದರೆ ಬೆನ್ನಿಗೆ ಹಾಕಿಕೊಳ್ಳುವ ಚೀಲಗಳು ಒಳ್ಳೆಯದು. ಅದನ್ನು ಕಿತ್ತುಕೊಳ್ಳಲು ಬಹಳ ಕಷ್ಟ ಎಂದು ಮಂಗಗಳಿಗೆ ತಿಳಿದಿದೆಯೋ ಅಥವಾ ಅದನ್ನು ಬಿಡಿಸಿಕೊಳ್ಳುವಷ್ಟು ಡೆವೆಲಪ್ ಆಗಿಲ್ಲವೋ ಏನೋ ಗೊತ್ತಿಲ್ಲ, ಒಟ್ಟಿನಲ್ಲಿ ಬೆನ್ನಿಗೆ ಹಾಕಿಕೊಂಡ ಚೀಲ ಇದ್ದುದರಲ್ಲಿ ಸೇಫ್! ಆದರೆ ಅದರೊಳಗಿನ ತಿಂಡಿ , ಪಾನೀಯ ಏನಾದರೂ ತೆಗೆದು ಬಾಯಿಗೆ ಹಾಕಿಕೊಳ್ಳಲು ನೋಡಿದಿರೋ ಮಂಗಗಳು ಹಾಜರ್! ಶಿವಗಂಗೆಯ ಮಂಗಗಳಲ್ಲಿ ಗಡವ ಗಂಡು ಮಂಗಗಳ ಸಂಖ್ಯೆ ಜಾಸ್ತಿ ಇರುವುದರಿಂದ ಕಪಿಸೈನ್ಯ ಬಲಶಾಲಿಯಾಗಿದ್ದು ಮನುಷ್ಯರ ಆರ್ಭಟ ಏನೂ ಪ್ರಯೋಜನಕ್ಕೆ ಬರುವುದಿಲ್ಲ.


ಅನಂತರದ್ದು ನಂದಿಬೆಟ್ಟದ ಮಂಗಗಳು. ಇವುಗಳು ಶಿವಗಂಗೆ ಮಂಗಗಳಷ್ಟು ಉಗ್ರ ಸ್ವಭಾವದವಲ್ಲ ಮತ್ತು ಮನುಷ್ಯನ ಬಗ್ಗೆ ಸ್ವಲ್ಪ ಹೆದರಿಕೆಯನ್ನೂ ಇಟ್ಟುಕೊಂಡಿವೆ. ಕೈಯಲ್ಲಿದ್ದ ತಿಂಡಿ, ವಸ್ತುಗಳನ್ನು ನೋಡಿ ತೀರಾ ಯಾರೋ ಕರೆದಂತೆ ಕಿತ್ತುಕೊಳ್ಳಲು ಓಡಿಬರುತ್ತವಾದರೂ ಕೂಡ ಒಂದು ಕೋಲನ್ನೋ, ಕಲ್ಲನ್ನೋ ಕೈಗೆತ್ತಿಕೊಂಡರೆ ಸ್ವಲ್ಪ ದೂರ ಓಡಿಹೋಗುತ್ತವೆ. ಅಲ್ಲೇ ಕೂತು ಹಲ್ಲು ಕಿರಿದು ಹೆದರಿಸಲು ನೋಡುತ್ತವೇಯೇ ಹೊರತು ಹತ್ತಿರ ಬಂದು ಮೈಮೇಲೆ ಎರಗಿ ಸಾಹಸಗಳನ್ನು ಮಾಡಿ ರಿಸ್ಕ್ ತೆಗೆದುಕೊಳ್ಳಲು ಹೋಗುವುದಿಲ್ಲ. ನಾಲ್ಕೈದು ಮಂಗಗಳು ಬಂದರೂ ಕೂಡ ಹೆದರಿಸಿ ಓಡಿಸಬಹುದು. ನಾವು ನಂದಿಬೆಟ್ಟದಲ್ಲಿ ವಿಹರಿಸುವಾಗ ಕೈಯಲ್ಲಿ ದ್ರಾಕ್ಷಿ ಗೊನೆಯಿಟ್ಟುಕೊಂಡು ತಿನ್ನುತ್ತಾ ಒಂದು ಅರ್ಧ ಕಿ.ಮಿ. ದೂರದವರೆಗೂ ಮಂಗಗಳನ್ನು ಬೆದರಿಸಿ ಹತ್ತಿರ ಬರದಂತೆ ತಡೆಯಲು ಯಶಸ್ವಿಯಾದೆವು. ಶಿವಗಂಗೆಯ ಮಂಗಗಳಂತೆ ಇವು ಹಟಕ್ಕೆ ಬಿದ್ದು ಸಾಧಿಸುವುದಿಲ್ಲ, ಪ್ರಯತ್ನ ಪಡುತ್ತವೆ, ಸಿಕ್ಕರೆ ಬಿಡುವುದಿಲ್ಲ. ಇಲ್ಲಿನ ವ್ಯಾಪಾರಸ್ಥರಿಗೆ ಸ್ವಲ್ಪ ಕಷ್ಟ. ಕೋತಿ ಬಂದು ಎತ್ತಿಕೊಂಡು ಹೋಗದಂತೆ ಮೈಯೆಲ್ಲಾ ಕಣ್ಣಾಗಿ ಕಾಯುತ್ತಲೇ ಇರಬೇಕು. ಯಾಕೆಂದರೆ ಇಲ್ಲಿ ಮಂಗಗಳ ವಿಶೇಷವೆಂದರೆ ನಾಯಿ ಜೊತೆಗಿನ ಇವುಗಳ ಗೆಳೆತನ! ಶಿವಗಂಗೆ ಮಂಗಗಳು ನಾಯಿಯನ್ನು ಕಂಡರೆ ಮಾತ್ರ ಹೆದರಿಕೊಂಡು ದೂರ ಹೋಗುತ್ತವೆ. ಆದರೆ ನಂದಿಬೆಟ್ಟದ ಮಂಗಗಳು ನಾಯಿ ಜೊತೆಗೇ ಕುಳಿತು ತಿಂಡಿ ತಿನ್ನುತ್ತವೆ. ನಾಯಿಯೂ ಇವುಗಳನ್ನು ಓಡಿಸುವುದಿಲ್ಲ, ಇವೂ ನಾಯಿ ಇದೆ ಎಂದು ಟೆನ್ಷನ್ ತೆಗೆದುಕೊಳ್ಳುವುದಿಲ್ಲ. ಮೇಲಾಗಿ ಇಲ್ಲಿ ಗಡವ ಮಂಗಗಳು ಕಡಿಮೆ ಇರುವುದರಿಂದ ಕಪಿಸೈನ್ಯ ಅಷ್ಟು ಬಲಶಾಲಿ ಮತ್ತು ಅಪಾಯಕಾರಿಯಾಗಿಲ್ಲ.

ನಂದಿಬೆಟ್ಟದ ಸುತ್ತಮುತ್ತಲೂ ಸ್ವಲ್ಪ ಕಾಡು ಇರುವುದರಿಂದ ಮಂಗಗಳಿಗೆ ಅಲ್ಲಿ ಆಹಾರ ಹುಡುಕಿಕೊಳ್ಳುವ ಅವಕಾಶ ಇದೆ . ಆದರೆ ಶಿವಗಂಗೆಯಲ್ಲಿ ಆ ಅವಕಾಶ ಹೆಚ್ಚು ಇಲ್ಲವಾಗಿದ್ದು ಮನುಷ್ಯನಿಂದ ಆಹಾರ ಪಡೆಯುವ ಅನಿವಾರ್ಯತೆ ಇರುವುದರಿಂದ ಈ ರೀತಿ ಸ್ವಭಾವಗಳ ವ್ಯತ್ಯಾಸ ಬೆಳೆದು ಬಂದಿರಬಹುದು. ಒಟ್ಟಿನಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಮನುಷ್ಯನ ಒಡನಾಟಕ್ಕೆ ಬಿದ್ದ ಮಂಗಗಳ ನಡತೆ ಆಶ್ಚರ್ಯ ಮೂಡಿಸುತ್ತದೆ.

ಶುಕ್ರವಾರ, ಮಾರ್ಚ್ 13, 2009

ಚೆನ್ನೈ ರಿಕ್ಷಾದವನ ಲಾಜಿಕ್ಕು!

"ಪ್ಯಾರಿಸ್ ಸೆಂಟರ್ ಗೆ ಬರ್ತೀಯಾ" ಅಂತ ಚೆನ್ನೈನಲ್ಲಿ ರಿಕ್ಷಾದವನನ್ನು ಹಿಂದಿಯಲ್ಲಿ ಕೇಳಿದೆ.

"ಹಿಂದಿ ತೆರಿಯಾದು" ಅಂದ.

ಮತ್ತೆ ಪ್ಯಾರಿಸ್ ಸೆಂಟರ್ ಅಂತ ಕೈ ಸನ್ನೆ ಮಾಡಿ ತೋರಿಸಿದೆ.

"ಐವತ್ತು ರೂಪಾಯಿ ಆಗುತ್ತೆ" ಅಂದ ತಮಿಳಿನಲ್ಲಿ.

"ಮೂವತ್ತು ರೂಪಾಯಿ ತಗೋ , ಹತ್ತಿರವೇ ಇದೆಯಲ್ಲಾ" ಅಂದೆ ಹಿಂದಿಯಲ್ಲಿ.
ಮೀಟರ್ ಹಾಕಿದರೆ ಮೂವತ್ತೇ ಆಗುವಷ್ಟು ದೂರ ಇತ್ತು. ಆದರೆ ಚೆನ್ನೈಯಲ್ಲಿ ಮೀಟರ್ ಇಲ್ಲ!

"ಹಿಂದಿ ತೆರಿಯಾದು" ಅಂದ ಮತ್ತೆ.

"ಮುಪ್ಪತ್ತು ರುಪಾಯಿ ತಗೊಳಪ್ಪಾ" ಅಂದೆ ನನ್ನ ಮುರುಕು ತಮಿಳಿನಲ್ಲಿ.

"ಇಲ್ಲ ಸಾರ್,ನಲ್ವತ್ತು ರೂಪಾಯಿ ಕೊಡಿ" ಅಂದ.
ಸರಿ ಎಂದು ಹತ್ತಿ ಕುಳಿತೆ.

ಸ್ವಲ್ಪ ದೂರ ಹೋದ ಮೇಲೆ, ಸುಮ್ಮನೇ ಮಾತನಾಡಿಸಲು ಶುರುಮಾಡಿದೆ.
"ನೀವು ಹಿಂದಿಯಲ್ಲೇ ಹೇಳಿ ಸಾರ್, ಅರ್ಥಾಗತ್ತೆ, ನಾನು ತಮಿಳಿನಲ್ಲೇ ಉತ್ತರ ಕೊಡ್ತೀನಿ" ಅಂದ.

ಸುಮ್ನೆ ಒಂದು ಸೆಂಟಿ ಡೈಲಾಗು ಬಿಟ್ಟೆ.
"ಏನಪ್ಪ, ನಂಗೆ ತಮಿಳು ಬರಲ್ಲ ಅಂತ ಜಾಸ್ತಿ ದುಡ್ಡು ಕೇಳ್ತಿಯಾ? ಹೊರಗಡೆಯಿಂದ ಬಂದವರಿಗೆ ಹೀಗೆ ಮೋಸ ಮಾಡಬಾರದಲ್ವಾ?".

ಅವನು ಹೇಳಿದ, "ಅದು ಹಂಗಲ್ಲ ಸಾರ್, ನಂಗೆ ಹಿಂದಿ ತೆರಿಯಾದು, ನಿಮಗೆ ತಮಿಳು ತೆರಿಯಾದು, ಅದಕ್ಕೇ ೫೦ ರೂಪಾಯೂ ಬೇಡ, ೩೦ ರೂಪಾಯೂ ಬೇಡ, ಕಾಂಪ್ರೋಮೈಸ್ ಸಾರ್ , ೪೦ ರುಪೀಸ್" ಅಂದ!

ರಿಕ್ಷಾದವನ ಈ ಲಾಜಿಕ್ಕಿಗೆ ಮುಂದೆ ಏನು ಮಾತಾಡಬೇಕೋ ತಿಳಿಯದೇ ಸುಮ್ಮನೇ ಕುಳಿತೆ.

ಗುರುವಾರ, ಫೆಬ್ರವರಿ 19, 2009

ಸಿಗರೇಟ್ ಹೊಗೆ ಎಷ್ಟು ಚಂದ ಗೊತ್ತಾ ಅಪ್ಪಾ..

ಹದಿಹರೆಯದ ಮಗಳ ಕೋಣೆಯನ್ನು ನೋಡಿದ ತಂದೆಗೆ ಆಶ್ಚರ್ಯವಾಯಿತು. ಎಲ್ಲಾ ವಸ್ತುಗಳೂ ನೀಟಾಗಿ ಜೋಡಿಸಲ್ಪಟ್ಟಿದ್ದವು , ಹಾಸಿಗೆಯನ್ನು ನೀಟಾಗಿ ಇಡಲಾಗಿತ್ತು, ಬಟ್ಟೆ, ಪುಸ್ತಕಗಳು, ಡ್ರೆಸ್ಸಿಂಗ್ ಟೇಬಲ್ , ಒಟ್ಟಿನಲ್ಲಿ ಇಡೀ ಕೋಣೆ ಒಪ್ಪವಾಗಿತ್ತು. ಒಳಗೆ ಬಂದು ನೋಡಿದಾಗ ದಿಂಬಿನ ಮೇಲೆ ಒಂದು ಲಕೋಟೆ ಕಾಣಿಸಿತು. ಅದರ ಮೇಲೆ ’ಅಪ್ಪನಿಗೆ’ ಎಂದು ಬರೆಯಲಾಗಿತ್ತು. ಏನೋ ಒಂಥರಾ ತಳಮಳದಿಂದಲೇ ಅದನ್ನು ತೆಗೆದು ಓದಲು ಶುರುಮಾಡಿದರು.

ಪ್ರೀತಿಯ ಅಪ್ಪ,

ಈ ಪತ್ರವನ್ನು ಬಹಳ ಬೇಜಾರಿನಿಂದ ಬರೀತಾ ಇದ್ದೀನಿ. ನನ್ನ ಗೆಳೆಯ ಸ್ಯಾಂಡಿ ಜೊತೆ ಬದುಕಬೇಕು ಅಂತ ತೀರ್ಮಾನ ಮಾಡಿಕೊಂಡು ನಾನು ಮನೆ ಬಿಟ್ಟು ಹೋಗ್ತಾ ಇದ್ದೀನಿ. ನಿಮಗೆ, ಅಮ್ಮಂಗೆ ಹೇಳಿದರೆ ಬಹಳ ನೊಂದುಕೊಂಡು ರಂಪ ಮಾಡುತ್ತೀರಾ ಎನ್ನುವ ಕಾರಣದಿಂದ ಹೀಗೆ ಹೇಳದೇ ಹೊರಟು ಹೋಗ್ತಾ ಇದ್ದೀನಿ.

ನಂಗೆ ಸ್ಯಾಂಡಿ ಅಂದ್ರೆ ತುಂಬ ಇಷ್ಟ ಅಪ್ಪ, ಅವನಿಗೂ ನಾನು ಅಂದ್ರೆ ತುಂಬಾನೆ ಇಷ್ಟ. ನೀವು ಅವನನ್ನು ನೋಡಿದ್ರೆ ನಿಮಗೂ ಇಷ್ಟ ಆಗ್ತಾನೆ. ಅವನ ಉದ್ದ ಕೂದಲು, ಹರಿದ ಜೀನ್ಸು, ಅವನು ಮೈತುಂಬಾ ಹಾಕಿಸಿಕೊಂಡಿರೋ ಹಚ್ಚೆಗಳು, ಅವನ piercings... ಎಲ್ಲಾ ನನಗೆ ಬಹಳ ಬಹಳ ಇಷ್ಟ. ಅವನಿಗೆ ಸ್ವಲ್ಪ ಜಾಸ್ತಿ ವಯಸ್ಸಾಗಿದೆ (೪೦ ಜಾಸ್ತಿ ಏನಲ್ಲ ಅಲ್ವಾ ಅಪ್ಪ?), ಸರಿಯಾಗಿ ಒಂದು ಕೆಲಸ ಅನ್ನೋದು ಇಲ್ಲ , ಕೈಯಲ್ಲಿ ದುಡ್ಡು ಇಲ್ಲ ಅನ್ನೋದು ನಿಜ ಆದ್ರೂ ಕೂಡ ನಮ್ಮ ಸಂಬಂಧಕ್ಕೆ ಇಂತದ್ದೆಲ್ಲಾ ಅಡ್ಡಿಯಾಗೋಲ್ಲ ಅಪ್ಪಾ. ಜೀವನದಲ್ಲಿ ಬರೀ ಹಣ ಮುಖ್ಯ ಅಲ್ಲ ಅಂತ ನೀವೇ ಎಷ್ಟೋ ಸಲ ಹೇಳಿದ್ದೀರ, ಒಪ್ಪಿಕೊಳ್ತೀರಾ ಅಲ್ವಾ ಅಪ್ಪಾ? ಅವನ ಹತ್ತಿರ ಒಳ್ಳೇ ಸೀಡಿ ಕಲೆಕ್ಷನ್ ಇದೆ. ಅವನು ಬೈಕನ್ನ ಎಷ್ಟು ಫಾಸ್ಟಾಗಿ ಓಡಿಸ್ತಾನೆ ಅಂದ್ರೆ ಹಿಂದೆ ಕೂತ್ಕೊಂಡ್ರೆ ಗಾಳಿಯಲ್ಲಿ ಹಾರಿ ಹೋಗೋ ಅನುಭವ ಆಗ್ತಿರತ್ತೆ. ಅವನ ಕೈಯಲ್ಲಿ ಯಾವಾಗಲೂ ಉರೀತೀರೋ ಸಿಗರೇಟಿನ ಹೊಗೆ ಸುರುಳಿ ಸುರುಳಿಯಾಗಿ ಬರೋದನ್ನ ನೋಡೋಕೆ ಬಹಳ ಖುಷಿಯಾಗತ್ತೆ ನಂಗೆ. ಆ ರೀತಿ ರಿಂಗ್ಸ್ ಬಿಡೋದನ್ನ ನನಗೂ ಕಲಿಸುತ್ತಾ ಇದ್ದಾನೆ. ರಾತ್ರಿ ಎಲ್ಲಾ ಅವನ ಜೊತೆ, ಅವನ ಗೆಳೆಯರ ಜೊತೆ ಡ್ರಿಂಕ್ಸ್ ಪಾರ್ಟಿ ಮಾಡಿ ಕುಣಿಯೋದ್ರಲ್ಲಿ ಸಿಗುವ ಸಂತೋಷ ಜೀವನದಲ್ಲಿ ಬೇರೆ ಎಲ್ಲೂ ಸಿಗೋಲ್ಲ ಅನ್ನಿಸಿದೆ ನಂಗೆ. ಅವನಿಗೆ ಬಹಳ ಜನ ಗರ್ಲ್ ಫ್ರೆಂಡ್ಸ್ ಇದ್ದಾರಂತ ನಂಗೆ ಹೇಳಿದಾನೆ, ಆದ್ರೆ ಅವನು ನನ್ನನ್ನ ಮಾತ್ರ ಪ್ರೀತಿ ಮಾಡೋದು ಅಂತ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾನೆ, ನನ್ನ ಜೊತೆನೇ ಇರ್ತಾನೆ ಅಂತ ಮಾತು ಕೊಟ್ಟಿದ್ದಾನೆ.

ಆದರೆ ಬರೀ ಇಷ್ಟು ಮಾತ್ರಕ್ಕೆ ನಾನು ಅವನ ಜೊತೆ ಹೋಗ್ತಾ ಇಲ್ಲ. ನಾನು ಈಗ ಅವನಿಂದ ಪ್ರೆಗ್ನೆಂಟ್ ಆಗಿದ್ದೀನಿ . ಸ್ಯಾಂಡಿಗೆ ನಾನು ತಾಯಿ ಆಗೋದು ಬಹಳ ಇಷ್ಟ ಅಂತೆ, ಆಗ ಒಂದು ಕುಟುಂಬದ ತರಹ ಒಟ್ಟಿಗೆ,ಸಂತೋಷವಾಗಿರ್ಬೋದು ಅಂತ ಹೇಳಿದ್ದಾನೆ ಅವನು ನಂಗೆ. ಅವನಿಗೆ ನನ್ನಿಂದ ಇನ್ನೂ ಮಕ್ಕಳು ಬೇಕಂತೆ, ನಂಗೂ ಕೂಡ ಮಕ್ಕಳು ಅಂದ್ರೆ ಎಷ್ಟು ಇಷ್ಟ ಅಂತ ಗೊತ್ತಲ್ಲಪ್ಪ ನಿಮಗೆ. ಮೊದಲು ಅವನು ಅದೇನೋ ಬಿಸಿನೆಸ್ ಮಾಡ್ತಾ ಇದ್ದನಂತೆ , ಅದಕ್ಕೆ ಪೋಲೀಸರು ತೊಂದರೆ ಕೊಟ್ರು ಅಂತ ಈಗ ಇನ್ನೂ ಬೇರೆ ಏನೋ ಬಿಸಿನೆಸ್ ಶುರು ಮಾಡಬೇಕು ಅಂತ ಇದ್ದಾನೆ. ಆದಷ್ಟು ಬೇಗ ಅವನು ಸೆಟಲ್ ಆಗಿಬಿಡ್ತಾನೆ ಅಪ್ಪಾ. ಆಮೇಲೆ ನಾನೂ ಅವನೂ ಸುಖವಾಗಿ ಇರ್ತೀವಿ. ಅಮ್ಮನಿಗೂ ಇದೆಲ್ಲಾ ಹೇಳಿಬಿಡಿ.


ನಿಮ್ಮ ಪ್ರೀತಿಯ ಮಗಳು,
ಪುಟ್ಟಿಆ ಪುಟದ ಕೊನೆಯಲ್ಲಿ ಪು.ತಿ.ನೋ. ಎಂದು ಬರೆಯಲಾಗಿತ್ತು. ಕಣ್ಣಲ್ಲಿ ನೀರು ತುಂಬಿಕೊಂಡು ನಡುಗುವ ಕೈಗಳಿಂದಲೇ ಪುಟ ತಿರುಗಿಸಿ ನೋಡಿದರು.

ಅಪ್ಪ, ನೀವು ಓದಿದ್ದು ಯಾವುದೂ ನಿಜವಲ್ಲ, ನಾನು ಇಲ್ಲೇ ಪಕ್ಕ ಬೀದಿಯ ಫ್ರೆಂಡ್ ಮನೆಲ್ಲಿ ಇದ್ದೇನೆ. ಈ ಜಗತ್ತಿನಲ್ಲಿ ನನ್ನ ಮಾರ್ಕ್ಸ್ ಕಾರ್ಡ್ ಗಿಂತ ಕೆಟ್ಟದಾಗಿರೋದು, ದು:ಖ ಕೊಡುವಂತದ್ದು ಕೂಡ ಇದೆ ಅನ್ನೋದನ್ನ ನಿಮಗೆ ತಿಳಿಸಬೇಕಾದ್ದು ನನ್ನ ಉದ್ದೇಶವಾಗಿತ್ತು. ಅಲ್ಲೇ ಟೇಬರ್ ಡ್ರಾಯರ್ ನಲ್ಲಿ ನನ್ನ ಮಾರ್ಕ್ಸ್ ಕಾರ್ಡ್ ಇದೆ. ಅದಕ್ಕೆ ಸೈನ್ ಮಾಡಿಟ್ಟಿರಿ. ನಿಮ್ಮ ಕೋಪ ಇಳಿದಾದ ಮೇಲೆ ನಾನು ಮನೆಗೆ ಬಂದ್ರೆ ಏನೂ ತೊಂದರೆ ಇಲ್ಲ ಅನ್ನುವಾಗ ಫೋನ್ ಮಾಡಿ. I love u appaaa....


(ಇಂಗ್ಲೀಷ್ ನಿಂದ ಭಾವಾನುವಾದಿತ, ಲೇಖಕ ಅಜ್ಞಾತ)

ಸೋಮವಾರ, ಫೆಬ್ರವರಿ 16, 2009

ಜಿಂಬಾಬ್ವೆ ನೋಟು

೧)
ಎರಡನೇ ವಿಶ್ವಯುದ್ಧದ ನಂತರ ಜರ್ಮನಿಯ ಆರ್ಥಿಕ ಸ್ಥಿತಿ ಯಾವ ರೀತಿ ಹದಗೆಟ್ಟಿತ್ತಂದರೆ ಅಲ್ಲಿನ ಜನ ಚಹಾ ಕುದಿಸಲು ಕರೆನ್ಸಿ ನೋಟುಗಳನ್ನೇ ಬಳಸುತ್ತಿದ್ದರಂತೆ! ಇದನ್ನು ಎಲ್ಲೋ ಓದಿದ್ದಾಗ ಉತ್ಪ್ರೇಕ್ಷೆ ಅನಿಸಿತ್ತು. ಏನೇ ಆದರೂ ಹಾಗೆ ದುಡ್ಡು ಸುಡುತ್ತಾರೆಯೇ, ಸುಮ್ಮನೇ ನಮ್ಮ ಮಾಧ್ಯಮಗಳ ಹಾಗೆ ಕಡ್ಡಿಯನ್ನು ಗುಡ್ಡ ಮಾಡುತ್ತಾರೆ ಅಂದುಕೊಂಡಿದ್ದೆ. ಆದರೆ ಇತ್ತೀಚೆಗೆ ಜಿಂಬಾಬ್ವೆಯ ಪರಿಸ್ಥಿತಿ ತಿಳಿದ ಮೇಲೆ ಅದನ್ನು ನಂಬಲೇಬೇಕಿದೆ. ಜಿಂಬಾಬ್ವೆಯಲ್ಲಿ ಜನ *ಕ ಒರೆಸಿಕೊಳ್ಳಲೂ ಕೂಡ ಕಾಗದದ ಬದಲಿಗೆ ನೋಟುಗಳನ್ನೇ ಬಳಸಲು ಶುರುಮಾಡಿದ್ದರು. ಏಕೆಂದರೆ ಒಂದು ರೋಲ್ ಕಾಗದವನ್ನು ಕೊಂಡುಕೊಳ್ಳುವ ಬದಲು ಸಣ್ಣ ಮೌಲ್ಯದ ಕರೆನ್ಸಿ ನೋಟುಗಳನ್ನು ಬಳಸುವುದೇ ಕಡಿಮೆ ಖರ್ಚಾಗುತ್ತಿತ್ತು ಮತ್ತು ಏನೂ ಕೊಂಡುಕೊಳ್ಳಲು ಉಪಯೋಗವಿಲ್ಲದಂತಾಗಿರುವ ಸಣ್ಣ ನೋಟುಗಳ ಸದ್ಬಳಕೆ(!)ಯೂ ಆದಂತಾಗುತ್ತಿತ್ತು. (ಸಣ್ಣ ನೋಟುಗಳು ಎಂದರೆ ೫-೧೦ ಡಾಲರ್ ಅಲ್ಲ, ಬದಲಾಗಿ ಸಾವಿರಾರು ಡಾಲರ್ ಮೌಲ್ಯದ ಕರೆನ್ಸಿಯೂ ಕೂಡ ’ಸಣ್ಣ’ದೇ ಆಗಿಹೋಗಿದೆ ಅಲ್ಲಿ) ಕೊನೆಗೆ ಅಲ್ಲಿನ ಸರ್ಕಾರ ಹೀಗೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಬೇಕಾಯಿತು. ಆದರೂ ಬಳಕೆ ಮುಂದುವರೆದಿರಬಹುದು ಬಿಡಿ. ವಿಷಯ ಏನೆಂದರೆ ಅತಿಯಾದ ಹಣದುಬ್ಬರದಿಂದಾಗಿ ಜಿಂಬಾಬ್ವೆಯಲ್ಲಿ ಭಾರೀ ಮೌಲ್ಯದ ಕರೆನ್ಸಿಗಳನ್ನು ಪ್ರಿಂಟ್ ಮಾಡಲಾಗುತ್ತಿದೆ. ೫೦, ೧೦೦ ಮಿಲಿಯನ್ ಡಾಲರ್ ಗಳೆಲ್ಲಾ ಮುಗಿದು ಇತ್ತೀಚೆಗೆ ಅಲ್ಲಿ ೫೦೦ ಮಿಲಿಯನ್ ಡಾಲರ್ ಮೌಲ್ಯದ ನೋಟ್ ಬಿಡುಗಡೆ ಮಾಡಿದ್ದಾರೆ! ನಮ್ಮೂರಿನ ಶ್ರೀ ಗಣೇಶ್ ಅವರ ಸಂಗ್ರಹಕ್ಕೆ ಹೊಸತಾಗಿ ಬಂದ ಈ ನೋಟನ್ನು ನೋಡುವ ಅವಕಾಶ ನನಗೆ ಸಿಕ್ಕಿತ್ತು. ಈ ಕೆಳಗಿರುವುದು ಅದರ ಚಿತ್ರ. ಗುಣಮಟ್ಟದಲ್ಲಿ ಪಾಂಪ್ಲೆಟ್ ಕಾಗದದಂತಿದೆ.
*****

೨) ಶ್ರೀ K.N. ಗಣೇಶಯ್ಯ ಅವರ 'ಶಾಲಭಂಜಿಕೆ' ಪುಸ್ತಕದ ನಂತರ ಈಗ ಹೊಸ ಪುಸ್ತಕಗಳು ಬಂದಿವೆಯಂತೆ - ’ಕಪಿಲಿಪಿಸಾರ’ ಕಾದಂಬರಿ ಹಾಗೂ `ಪದ್ಮಪಾಣಿ’ ಕಥಾಸಂಕಲನ ’. ಓದಬೇಕು. ಶಾಲಭಂಜಿಕೆಯಲ್ಲಿ ಕಥಾವಸ್ತುಗಳೇ ಅಪರೂಪದ್ದು, ವಿಭಿನ್ನವಾದದ್ದು. ಐತಿಹಾಸಿಕ, ವೈಜ್ಞಾನಿಕ ಘಟನೆಗಳನ್ನೇ ಅವರು ಕತೆಗೆ ಅಳವಡಿಸಿರುವ ರೀತಿಯೂ ಅದ್ಭುತ. ಹೊಸತಾಗಿ ಬಂದಿರುವ ಪುಸ್ತಕಗಳ ಪರಿಚಯದಿಂದಲೇ ಆಸಕ್ತಿ ಕೆರಳಿದೆ. Worth buying & reading.

ಸೋಮವಾರ, ಫೆಬ್ರವರಿ 9, 2009

ಕ್ಷೌರದ ಪಾಠ

ಈ ಬುದ್ದಿವಂತಿಕೆ ಅನ್ನುವುದು ಒಂಥರಾ ಜಾಸ್ತಿ ಪ್ರಮಾಣದ ಕಾಮನ್ ಸೆನ್ಸ್ ಅಷ್ಟೆ. ನಮ್ಮ ನಿತ್ಯದ ಸಂಗತಿಗಳಲ್ಲೇ ಗಮನಿಸಿದರೆ ಹಲವಾರು ತರಹದ ಬುದ್ಧಿವಂತಿಕೆಗಳು ನಮಗೇ ಗೊತ್ತಾಗುತ್ತದೆ. ಆದರೆ ಅದಕ್ಕೆ ನಮ್ಮನ್ನು ಸರಿಯಾಗಿ ಟ್ಯೂನ್ ಮಾಡಿಕೊಳ್ಳುವ ಮನಸಿರಬೇಕಷ್ಟೆ. ದಿನದಿನದ ಜೀವನದಲ್ಲೂ ಹೇಗೆ ಹಾಸ್ಯವನ್ನು ಕಂಡುಕೊಂಡು ಖುಷಿಪಡಬಹುದೋ ಅದೇ ರೀತಿ ಈ ಬುದ್ಧಿವಂತಿಕೆ ಅನ್ನುವುದು ಕೂಡ. ಒಂದು ಸಣ್ಣ ಉದಾಹರಣೆಯನ್ನೆ ತೆಗೆದುಕೊಳ್ಳೋಣ. ಕ್ಷೌರಿಕ ಶೇವ್ ಮಾಡುವುದಕ್ಕಿಂತ ಮೊದಲು ಗಡ್ಡಕ್ಕೆ ನೊರೆ ಹಚ್ಚುವುದು ಎಲ್ಲರಿಗೂ ಗೊತ್ತು. ಇದರಲ್ಲಿ ಒಂದು ಕಲಿಯುವಂತಹ ಬುದ್ದಿವಂತಿಕೆ ಇದೆ. ಇದರ ಬಗ್ಗೆ ಒಮ್ಮೆ ಮನಸಿಟ್ಟು ಯೋಚಿಸಿದರೆ, ಇದು ನಮಗೆ ಇನ್ನೊಬ್ಬರ ಜೊತೆಯಲ್ಲಿ ಹೇಗೆ ಸಂವಹಿಸಬೇಕು ಎಂಬುದನ್ನು ತಿಳಿಸುತ್ತದೆ. ಇಲ್ಲಿ ಕ್ಷೌರಿಕ ಎಂಬುವವನು ಏನೋ ಕಷ್ಟವಾದುದನ್ನು ಸಂವಹಿಸಲು ಬಯಸುತ್ತಿರುವವನು ಎಂದಿಟ್ಟುಕೊಂಡರೆ, ಶೇವಿಂಗ್ ಎನ್ನುವುದು ಆ ಸಂವಹನದ(communication) ಪ್ರಕ್ರಿಯೆಯಂತೆ. ಶೇವಿಂಗ್ ಮಾಡಿಸಿಕೊಳ್ಳುತ್ತಿರುವವರು ಆ ಸಂವಹನವು ತಲುಪಬೇಕಾದ ಮತ್ತು ಅದರ ಫಲಿತಾಂಶ ಕಾಣಬೇಕಾದಂತಹ ವ್ಯಕ್ತಿಯಾಗಿರುತ್ತಾರೆ. ಈ ಶೇವಿಂಗ್ ಎನ್ನುವುದನ್ನು ಸರಿಯಾಗಿ ಮಾಡದೇ ಇದ್ದರೆ ಅದು ಸ್ವಲ್ಪ ಅಪಾಯಕಾರಿಯೂ ಹೌದು. ಕೆಟ್ಟ ಶೇವಿಂಗಿನ ತೊಂದರೆಗಳನ್ನು ನಾವು ನಮ್ಮ ಜೀವನದಲ್ಲಿ ಅನುಭವಿಸಿಯೇ ಇರುತ್ತೇವೆ. ಗಡಿಬಿಡಿಯಲ್ಲಿ ಶೇವ್ ಮಾಡುವುದು, ಸರಿಯಾಗಿ ಹರಿತವಿಲ್ಲದ ಬ್ಲೇಡ್ ಗಳನ್ನು ಬಳಸುವುದು, ಇನ್ನೇನು ಶೇವಿಂಗ್ ಕ್ರೀಮ್ ಮುಗಿದುಹೋಗಿದೆ ಎಂದಾಗ ಅದರ ಟ್ಯೂಬನ್ನು ತಿಕ್ಕಿ ತಿಕ್ಕಿ ಹೊರಬಂದ ಸ್ವಲ್ಪವೇ ಕ್ರೀಮ್ ನಲ್ಲಿ ಶೇವಿಂಗ್ ಮುಗಿಸುವುದು ಇನ್ನೂ ಮುಂತಾದವುಗಳು ಒಳ್ಳೆಯ ಫಲಿತಾಂಶಗಳನ್ನು ಕೊಡುವುದಿಲ್ಲ. ಅದರಿಂದ ಒಂದು ಕಡೆ ಜಾಸ್ತಿ ಇನ್ನೊಂದು ಕಡೆ ಕಡಿಮೆ ಕೂದಲು ಇರುವ , ಚರ್ಮ ಕೊಯ್ದು ರಕ್ತ ಬರುವಂತಹ ದುರಂತಗಳನ್ನು ಕಾಣಬಹುದು.

ಈಗ ಈ ಶೇವಿಂಗ್ ವಿಷಯವನ್ನು ನಮ್ಮ ಕಮ್ಯುನಿಕೇಶನ್ ತತ್ವಕ್ಕೆ ಹೇಗೆ ಹೊಂದಿಸಿಕೊಳ್ಳಬಹುದೆಂದು ನೋಡೋಣ. ಇಲ್ಲಿ ನೊರೆಹಚ್ಚುವುದು ಅನ್ನುವುದು ಯಾವುದೇ ಒಂದು ಪರಿಸ್ಥಿತಿಯನ್ನು ಮೃದುಗೊಳಿಸಿಕೊಳ್ಳುವಂತಹ ಕೆಲಸಕ್ಕೆ ಹೋಲಿಸಬಹುದು. ಒಂದು ಕೆಟ್ಟ, ಅಪ್ರಿಯ ವಿಷಯ ಹೇಳುವುದಕ್ಕಿಂತ ಮೊದಲು ಒಂದು ಒಳ್ಳೆಯ ವಿಷಯವನ್ನೋ, ಒಳ್ಳೆಯ ಮಾತನ್ನೋ ಆಡಿದರೆ ಅದು ಒಂದು ಅಡಿಪಾಯ ಹಾಕಿಕೊಡುತ್ತದೆ. ಟೀಕೆಯನ್ನೋ, ವಿಮರ್ಶೆಯನ್ನೋ, ಬೈಗುಳವನ್ನೋ ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳುವುದರಿಂದ ಆ ವ್ಯಕ್ತಿ ಅದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಎರಡು ಚುಕ್ಕೆಗಳ ನಡುವಿನ ಹತ್ತಿರದ ದಾರಿ ಒಂದು ನೇರ ಗೆರೆಯೇ ಯಾವಾಗಲೂ ಆಗಿರಬೇಕಂತಿಲ್ಲ, ಅದು ಒಂದು ಡೊಂಕುಗೆರೆ(curve) ಕೂಡ ಆಗಿರಬಹುದು. ಯಾವುದಾದರೂ ವಿಷಯದ ಬಗ್ಗೆ ಅಥವಾ ಯಾರಾದರೂ ವ್ಯಕ್ತಿಯ ಬಗ್ಗೆ ಫೀಡ್ ಬ್ಯಾಕ್ ಕೊಡುವಾಗ ಪ್ರಸ್ತುತ ವಿಷಯ ಅಥವಾ ವ್ಯಕ್ತಿಯ ಬಗ್ಗೆ ಮೊದಲು ಒಂದೆರಡು ಒಳ್ಳೆಯ ಮಾತುಗಳನ್ನಾಡಿ ನಂತರ ಅದರಲ್ಲಿರುವ ನೆಗೆಟಿವ್ ವಿಷಯದ ಬಗ್ಗೆ ಮಾತನಾಡುವುದು ಜಾಣತನ. ಇದರಿಂದ ಅದು ತಲುಪಬೇಕಾದವರನ್ನು ಸರಿಯಾಗಿ ತಲುಪುತ್ತದೆ. ಮೊದಲು ಒಂದು ಸ್ವಲ್ಪ ಒಳ್ಳೆಯ ಮಾತುಗಳನ್ನಾಡಿದ್ದರಿಂದ ಆ ವ್ಯಕ್ತಿಯು ನಮ್ಮ ಟೀಕೆಯನ್ನು ಬಹುಮುಖ್ಯವೆಂದೇ ಪರಿಗಣಿಸಿ ಒಪ್ಪಿಕೊಳ್ಳುತ್ತಾನೆ. ಒಳ್ಳೆಯ ಮಾತುಗಳಿಂದ ನೊರೆಹಚ್ಚಿ ಮೃದುಗೊಳಿಸಿ ತಯಾರಿ ಮಾಡಿಕೊಂಡಿದ್ದರಿಂದ ಟೀಕೆಯ ಬ್ಲೇಡ್ ಬಹಳ ಹರಿತವಿಲ್ಲದಿದ್ದರೂ ಕೂಡ ಶೇವಿಂಗ್ ಎಂಬ ಪರಿಣಾಮ ಚೆನ್ನಾಗಿಯೇ ಆಗುತ್ತದೆ. ಹರಿತವಾದ ಬ್ಲೇಡ್ ಇದ್ದರಂತೂ, ಅಂದರೆ ಒಳ್ಳೆಯ ರಚನಾತ್ಮಕ ಟೀಕೆ ಮಾಡುವ ಸಾಮರ್ಥ್ಯ ಇದ್ದರಂತೂ ನಮ್ಮ ಕೆಲಸ ಬಹಳ ಸುಲಭವಾಗಿ ಆಗುವುದರ ಜೊತೆಗೆ ಫಲಿತಾಂಶವೂ ಒಳ್ಳೆಯದಾಗಿರುತ್ತದೆ. ಹರಿತವಾದ ಬ್ಲೇಡ್ ಇಲ್ಲದಿದ್ದಾಗ ಶೇವಿಂಗ್ ಮುಂಚೆ ನೊರೆಹಚ್ಚುವುದನ್ನು ಸ್ವಲ್ಪ ಜಾಸ್ತಿಯೇ ಮಾಡಬೇಕಾಗುತ್ತದೆ. ಆಗ ನುಣುಪಾದ ಶೇವ್ ಅಂದರೆ ನಮ್ಮೆದುರಿಗಿನ ವ್ಯಕ್ತಿ ನಮ್ಮ feedbackನ್ನು ಅಳವಡಿಸಿಕೊಂಡು ನಡೆದುಕೊಳ್ಳುತ್ತಾನೆಂದು ಅಪೇಕ್ಷಿಸಬಹುದು.

ಇಂಗ್ಲೀಷ್ ಮೂಲ: wisdom-its-everywhere-just-look-around

ಶುಕ್ರವಾರ, ಜನವರಿ 30, 2009

ಎಲ್ಡೆಕ್ರೆ ಹೊಲ, ಮಧ್ಯ ಬಾವಿ ಸಾಕು

ಒಂದು ವೈಯಕ್ತಿಕ ಟಿಪ್ಪಣಿ :


ಪುಟ್ಟಿ ಕೇಳಿದಳು. ಇದೆಲ್ಲಾ ಬರ್ಕಂಡು ಏನಾದ್ರೂ ಉಪ್ಯೋಗ ಆಗುತ್ತೆ ಅನ್ಕಂಡಿದಿಯಾ? ಅದ್ರಿಂದ ಏನೂ ಸಾಧನೆಯಾಗಲ್ಲ, ಯಾರೂ ಉದ್ಧಾರಾಗಲ್ಲ. ಸುಮ್ನೆ ಬ್ರ್ಯಾಂಡ್ ಆಗ್ತೀಯಾ ಅಷ್ಟೆ. ಅಷ್ಟು ಹೊತ್ತಿಗೆ ನಂಗೂ ಹಾಗೇ ಅನಿಸಿತ್ತು. ಸುಮ್ನೆ ಯಾಕೆ ಇವೆಲ್ಲಾ. ಈ ಧರ್ಮ, ಜಾತಿ, ಸಂಸ್ಕೃತಿ, ಸಮಾಜ, ರಾಜಕೀಯ, ಫೆಮಿನಿಸಂ, ಕಮ್ಯುನಿಸಂ , ಕ್ರಿಟಿಸಿಸಂ ಮುಂತಾದವುಗಳು ಬಗೆಹರಿಯದಂತವು. ಅವುಗಳ ಚರ್ಚೆ ವ್ಯರ್ಥ. ಚರ್ಚೆಗಳಿಂದ ಅಭಿಪ್ರಾಯ ಬದಲಿಸಿಕೊಳ್ಳೋ ಮನಃಸ್ಥಿತಿ ಅಥವಾ ಹೌದು ಅಂತ ಮನಃಪೂರ್ವಕವಾಗಿ ಒಪ್ಪಿಕೊಳ್ಳೋದು ಎಲ್ಲಾ ಶಂಕರಾಚಾರ್ಯರ ಕಾಲಕ್ಕೇ ಮುಗಿದು ಹೋಯಿತೇನೋ. ಸುಮ್ಮನೇ ಇದೆಲ್ಲಾ ವಾದ, ವಿವಾದ, ಟೀಕೆ, ವಿಮರ್ಶೆ, ಸಮಯ ಹಾಳು, ಮನಸ್ತಾಪ, ಮನಸು ಕೆಡಿಸಿಕೊಳ್ಳುವುದು, ವೈಯಕ್ತಿಕ ಸಂಬಂಧಗಳಲ್ಲಿ ಬೇಸರ, ಅನುಮಾನದ ನೆರಳು, ಸಿಟ್ಟು, ಸೆಡವು ..ಹ್ಮ್... ಯಾವುದೂ ಬೇಡ. ಸದ್ಯಕ್ಕೆ ಮಾಡಬೇಕಾದ ಕೆಲಸಗಳು ಬಹಳಷ್ಟಿವೆ, ವೃತ್ತಿಜೀವನದಲ್ಲಿ, ಕೌಟುಂಬಿಕ ಜೀವನದಲ್ಲಿ ಬೆಳೆಯಬೇಕಾದ್ದು ಅಗತ್ಯವಿದೆ, ಸಾಮಾಜಿಕ ಜವಾಬ್ದಾರಿಯಿದೆ, ಓದಬೇಕಾದ ಪುಸ್ತಕಗಳು , ನೋಡಬೇಕಾದ ಸಿನೆಮಾಗಳು ಸಾವಿರವಿದೆ, ಸುತ್ತಬೇಕಾದ ಸ್ಥಳಗಳು ನೂರಿವೆ, ಒಣಗಿನಿಂತಿರುವ ಹವ್ಯಾಸಗಳಿಗೆ ನೀರೆರೆಯಬೇಕಿದೆ, ಕಲಿಯಬೇಕಾದ್ದು ಮುಗಿಯದಷ್ಟಿದೆ. ನಮ್ ಪಾಡಿಗೆ ನಾವ್ ’ತಣ್ಣಗೆ ’ ಬರೆದುಕೊಂಡಿದ್ದರೆ ಆಯಿತು. ವಿಷಯ, ಮಾಹಿತಿ, ವಿಚಾರ ವಿನಿಮಯವಷ್ಟೆ ಸಾಕು. ಜನಗಣಮನ ಹಾಡೋಣ, ಎಲ್ಲರೂ ಒಂದಾಗೋಣ, ಊರ್ ಮೇಲೆ ಊರ್ ಬಿದ್ರೂ ..... ತಾನನಾನನಾ...

ಒಟ್ಟಾರೆ ಹೇಳಬೇಕಂದ್ರೆ , "ಮೊದ್ಲೇ ರಿಸೆಷನ್ ಟೈಮು, ನಮಗ್ಯಾಕ್ ಸ್ವಾಮಿ ಊರ್ ಉಸಾಬರಿ ಎಲ್ಲಾ? ನಮಿಗ್ ಬೇಕಾಗಿರದು ನಮ್ ಎಲ್ಡೆಕ್ರೆ ಹೊಲ, ಮಧ್ಯದಲ್ಲೊಂದು ಬಾವಿ. ಸರ್ಕಾರದವ್ರು ಕರೆಂಟ್ ಕೊಟ್ರೆ ಪಂಪ್ ಹಾಕಿಸ್ತೀನಿ, ಇಲ್ಲಾಂದ್ರೆ ಕೈಯಲ್ಲೇ ಹೊಡೀತೀನಿ. ರಾತ್ರಿ ಮುದ್ದೆ ಉಂಡು ನೆಮ್ಮದಿಯಾಗಿ ಮನಿಕ್ಕಂಡು ಬೆಳಗ್ಗೆದ್ದು ಗೇಯಕ್ಕೋಯ್ತಿನಿ . ನಮ್ ಹೊಲದಲ್ಲಿ ಸರಿಯಾಗಿ ಬೆಳೆ ಬಂದ್ಮೇಲೆ ಬೇರೆ ಮಾತು. ಅಷ್ಟೆ." :)


**********

ಬುಧವಾರ, ಜನವರಿ 28, 2009

ಜನವರಿ ಕಂತು

ಅವಧಿ ಬ್ಲಾಗ್ ನಿಂದ ಪರಿಚಿತವಾದ ಮೇ ಫ್ಲವರ್ ಮೀಡಿಯಾ ಹೌಸ್ ಗೆ ಹೋಗುವುದೆಂದರೆ ಒಂಥರಾ ಖುಷಿ. ಪಕ್ಕಾ ಪ್ರೊಫೆಷನಲ್ ವಾತಾವರಣದ ಜೊತೆ ಒಂದು ಆಪ್ತ ಸೊಗಡಿನ ವಾತಾವರಣ ಅಲ್ಲಿರುವುದೇ ಕಾರಣವಿರಬಹುದು. ಅದು ಒಂದು ಕಛೇರಿ ಎಂದು ತಿಳಿದಿದ್ದರೂ ಕೂಡ ಅಲ್ಲಿ ಹೋದೊಡನೆ ದೊಡ್ಡಮ್ಮನ ಮನೆಗೋ, ಚಿಕ್ಕಪ್ಪನ ಮನೆಗೋ ಹೋದ ಅನುಭವವಾಗಿಬಿಡುತ್ತದೆ. ಹೇಗೆಂದರೆ ದೊಡ್ಡಮ್ಮನ ಮನೆಗೆ ಹೋದಾಗ ಸೀದಾ ಅಡುಗೇ ಮನೆಗೇ ಹೋಗಿ ಹರಟುತ್ತೇವಲ್ಲ ಹಾಗೆ ಅಲ್ಲಿ ಸಿ.ಇ.ಒ.ಮೋಹನ್ ಸಾರ್ ಜೊತೆ ಹರಟಬಹುದು, ಅಡಿಗೆ ಮನೆಯಲ್ಲಿ ಫ್ರಿಡ್ಜು ತೆಗೆದು, ಡಬ್ಬಿ ಹುಡುಕಿ ತಿಂಡಿ ಕುರುಕಿಸುವಂತೆ ಅಲ್ಲಿ ವಿಧ ವಿಧದ ಕನ್ನಡ-ಇಂಗ್ಲೀಷ್ ಪುಸ್ತಕಗಳನ್ನು, ಪತ್ರಿಕೆಗಳನ್ನು ಹಿಡಿದು ಓದಬಹುದು, ಗೆಳೆಯರ ಜೊತೆ ಸೇರಿ "ಎಲ್ಲಿ ಮಗಾ, ಆ ಹುಡುಗಿ ಕಾಣ್ತನೇ ಇಲ್ವಲ್ಲಾ" ಎಂದು ಮಾತನಾಡುತ್ತಲೇ ಪುಸ್ತಕ ಕೈಯಲ್ಲಿ ಹಿಡಿದುಕೊಂಡೇ ಫೊಟೋಗೆ ಫೋಸು ಕೊಡಬಹುದು ! ಪ್ರಸ್ತುತ ಮಾರುಕಟ್ಟೆಯ, ಪ್ರಸ್ತುತ ಅಭಿರುಚಿಗಳ ಬಗ್ಗೆ ತಿಳಿದುಕೊಂಡು ಕೆಲಸ ಮಾಡುತ್ತಿರುವ ಕೆಲವೇ ಕೆಲವು ಮೀಡಿಯಾ ಸಂಸ್ಥೆಗಳಲ್ಲಿ ಮೇ ಫ್ಲವರ್ ಕೂಡ ಒಂದು.

****

ಮೊನ್ನೆ ಶನಿವಾರ ಸಂಜೆ ಸ್ಲಂ ಡಾಗ್ ಫಿಲಂ ಬಗ್ಗೆ Mayflowerನಲ್ಲಿ ಸಂವಾದವಿತ್ತು. ಈ ಕೆಲದಿನಗಳಿಂದ ಈ ಸ್ಲಂಡಾಗ್ ಬಗ್ಗೆ ಕೇಳಿ ಓದೀ ಬೇಜಾರು ಬಂದು ಹೋಗಿದೆ ನಿಜ. ಆದರೆ ಅಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬರುತ್ತಿರುವವರು ’ಪರಮೇಶ್ವರ್’ಎಂದು ತಿಳಿದಾಕ್ಷಣ ಆಸಕ್ತಿ ತಾನಾಗಿಯೇ ಮೂಡಿತ್ತು! ಈ ತಿಂಗಳ ಮೊದಲವಾರದಲ್ಲಿ ಕುಪ್ಪಳಿಯಲ್ಲಿ ’ಸಾಂಗತ್ಯ’ ತಂಡದವರು ನಡೆಸಿದ ಚಿತ್ರೋತ್ಸವದಲ್ಲಿ ಪರಮೇಶ್ವರರ ಮಾತುಗಳನ್ನು ಕೇಳಿದ್ದೆ. ಅವರ ಸಿನೆಮಾ ಜ್ಞಾನ, ಸಿನೆಮಾಗಳನ್ನು ಅವರು ಸಮತೋಲನವಾಗಿ , ಬರೀ ತೆರೆ ಮೇಲಿನದ್ದನ್ನಲ್ಲದೇ ಅದರ ಹಿನ್ನೆಲೆ ಸಮೇತ ವಿಶ್ಲೇಷಿಸುವ ರೀತಿ, ಪ್ರಶಸ್ತಿ, ಸನ್ಮಾನಗಳ ಹಿಂದಿನ ಉದ್ದೇಶ, ತಂತ್ರ, ಕುತಂತ್ರಗಳ ಬಗ್ಗೆ ಅವರ ಧೋರಣೆ ಬಹಳ ಇಷ್ಟವಾಗಿತ್ತು. ಅವರು ಈ ಸ್ಲಂ ಡಾಗ್ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲವಿತ್ತು.

ಮೂರು ವಾರಗಳ ಹಿಂದೆ ಇದೇ ಸ್ಲಂಡಾಗ್ ಅನ್ನು ನೋಡಿದ್ದೆ. ಬಹಳಷ್ಟು ಅಸ್ವಾಭಾವಿಕ, ಅವಾಸ್ತವಿಕ , ಕಾಕತಾಳೀಯ ಸನ್ನಿವೇಶಗಳನ್ನು ಹೆಣೆದು ಮಾಡಿದ ಈ ಸಿನೆಮಾ ಒಂದು ವಿಭಿನ್ನ ಕಥೆಯುಳ್ಳ ಸಿನೆಮಾ ಆಗಿತ್ತು. ಅದು ಸುಮ್ಮನೆ ಒಂದು ಒಳ್ಳೆಯ ಸಿನೆಮಾದಂತೆ ಅನ್ನಿಸಿತ್ತು. ಅದ್ಭುತವೆನಿಸುವಂತಹ ವಿಶೇಷಗಳೇನೂ ಕಾಣಿಸಿರಲಿಲ್ಲ. ಆದರೆ ಅದಕ್ಕೆ ಗೋಲ್ಡನ್ ಗ್ಲೋಬ್ ಘೋಷಣೆ, ಆಸ್ಕರ್ ಗೆ ನಾಮನಿರ್ದೇಶನ ಆಯಿತು . ಅದಾದ ಮೇಲೆ ಮಾಧ್ಯಮಗಳು ಅದನ್ನು ಹೊತ್ತುಕೊಂಡು ಕುಣಿದ ರೀತಿ, ಕೆಲವರು ಅದನ್ನು ಹೊಗಳಿದ/ಹೊಗಳುತ್ತಿರುವ ರೀತಿ, ವಿಪರೀತ ಚರ್ಚೆ, ಅಲ್ಲಿ ತೋರಿಸಿದ ಸ್ಲಂ ಮುಂತಾದ ದೃಶ್ಯಗಳಿಗೆ ವಿರೋಧ ವ್ಯಕ್ತವಾಗಿದ್ದನ್ನು ನೋಡಿ ನಾನು ಪೂರ್ತಿ ಸಿನೆಮಾ ಸರಿಯಾಗಿ ನೋಡಿದ್ದೆನಾ ಇಲ್ಲವಾ ಅಂತ ಅನುಮಾನವಾಗಿಬಿಟ್ಟಿತ್ತು.

ಯಾವುದೇ ಸಿನೆಮಾವನ್ನು ಎರಡನೇ ಬಾರಿ ನೋಡಲೇಬೇಕೆಂದು ನೋಡದ ನಾನು ಯಾವುದಕ್ಕೂ ಇರಲಿ ಎಂದು ಅವತ್ತು ಸ್ಲಂಡಾಗನ್ನು ಕೂಲಂಕುಷವಾಗಿ ಮತ್ತೊಂದು ಬಾರಿ ನೋಡಿಕೊಂಡು ಮೇಫ್ಲವರ್ ಗೆ ಹೋದೆ. ಪರಮೇಶ್ವರ್ ಅವರು ಎಂದಿನಂತೆ ತಮ್ಮ ಸಮತೋಲನ ಶೈಲಿಯಲ್ಲಿ ಸಿನೆಮಾವನ್ನು ಸಿನೆಮಾದ ರೀತಿಯಲ್ಲೇ ವಿಶ್ಲೇಷಿಸಿದರು, ಅವರ ವಿಶ್ಲೇಷಣೆಯಲ್ಲಿ ಪ್ರಶಸ್ತಿಯ ತೂಕವಾಗಲೀ, ಭಾರತದ ಕತ್ತಲ ಲೋಕದ ದರ್ಶನದ ವಿರೋಧವಾಗಲೀ ಕಾಣಲಿಲ್ಲ.

ನನಗನಿಸುವುದೇನೆಂದರೆ, ಮೊದಲಿಂದಲೂ ಕೂಡ ಭಾರತದ ಬಡತನ, ಸ್ಲಂ ಜೀವನ ಮುಂತಾದ ಎಲ್ಲವನ್ನೂ ಈ ಚಿತ್ರಕ್ಕಿಂತಲೂ ಪರಿಣಾಮಕಾರಿಯಾಗಿ ತೋರಿಸುವ ಹಲವು ಚಿತ್ರಗಳು ಬಂದು ಹೋಗಿವೆ. ಆದರೆ ಅದಕ್ಯಾವ ವಿರೋಧವಾಗಲೀ ವ್ಯಕ್ತವಾಗಿರಲಿಲ್ಲ. ಕಾರಣ ಅವು ಇದ್ದದ್ದು ಭಾರತೀಯ ಭಾಷೆಗಳಲ್ಲಿ ಮತ್ತು ಅವಕ್ಕೆ ಬೇರೆ ದೇಶಗಳು ಕೊಡುವ ಪ್ರಶಸ್ತಿಗಳ್ಯಾವುವೂ ಬಂದಿರಲಿಲ್ಲ. ಆಸ್ಕರ್ ಅಥವಾ ಗೋಲ್ಡನ್ ಗ್ಲೋಬ್ ನಂತಹ ಪ್ರಶಸ್ತಿಗಳಂತಹ ಪ್ರಶಸ್ತಿಗಳು ಬಂದಿವೆ ಎಂದಾಕ್ಷಣ ನಮಗೆ ಆ ಸಿನೆಮಾದಲ್ಲಿ ಇಲ್ಲದ ಅದ್ಭುತಗಳು ಕೂಡ ಕಾಣಲು ಶುರುವಾಗಿಬಿಡುತ್ತವೆ. ಅದರಲ್ಲಿರುವ ಪಾತ್ರಗಳಿಗೆ ಅದ್ಭುತ ಗುಣಗಳನ್ನು ನಾವು ನಾವಾಗೇ ಆರೋಪಿಸುತ್ತಾ ಹೋಗಿಬಿಡುತ್ತೇವೆ. ನಮಗೆ ಒಂದೊಂದು ಪಾತ್ರಗಳೂ, ಸನ್ನಿವೇಶಗಳೂ ಅಪ್ಯಾಯಮಾನವಾಗಿ ಕಾಣಲು ಶುರುವಾಗಿಬಿಡುತ್ತವೆ. ಅದಕ್ಕೆ ಪ್ರಶಸ್ತಿ ಎಂಬ ಪೂರ್ವಗ್ರಹವು ಕಾರಣವಾಗಿರುತ್ತದೆ, ಜೊತೆಗೆ ಆ ಪ್ರಶಸ್ತಿಗಳು ಸರ್ವಶ್ರೇಷ್ಠ ಎಂಬ ತಪ್ಪು ತಿಳುವಳಿಕೆಯೂ ಕಾರಣವಾಗಿರುತ್ತದೆ. ಈ ಸ್ಲಂಡಾಗ್ ವಿಷಯದಲ್ಲೂ ಹಾಗೇ ಆಗಿದೆ. ಅನಿಲ್ ಕಪೂರನ ಪಾತ್ರ ನಮ್ಮಲ್ಲಿರುವ ತಿಕ್ಕಲುತನದ ಪ್ರತಿನಿಧಿ ಅಂತ ಒಬ್ಬರಿಗನಿಸಿದರೆ, ಭಾರತದ ಬದುಕಿನ ನಿಜವಾದ ಚಿತ್ರಣವಿದು ಅಂತ ಇನ್ನೊಬ್ಬರಿಗನಿಸಿದೆ. ಪಾಪ , ಆ ನಿರ್ದೇಶಕ ಕೂಡ ಹಾಗೆಲ್ಲ ಅಂದುಕೊಂಡು ಸಿನೆಮಾ ಮಾಡಿರುತ್ತಾನೋ ಇಲ್ಲವೋ ಗೊತ್ತಿಲ್ಲ, ಆದರೆ ನಾವು ಮಾತ್ರ ಒಂದೊಂದಕ್ಕೂ ಒಂದೊಂದು ಅರ್ಥ ಕೊಡುತ್ತಾ ಹೋಗುತ್ತಿದ್ದೇವೆ. ಒಬ್ಬರು ಇದರಲ್ಲಿ ಹಳದಿ ಬಣ್ಣದ ಪರಿಣಾಮಕಾರಿ ಅದ್ಭುತ ಬಳಕೆಯಿದೆ, ಇದು ಹಳದಿ ಚಿತ್ರ ಎಂದು ವಿಶ್ಲೇಷಿಸಿದ್ದನ್ನು ನೋಡಿ ನಾನೂ, ಪುಟ್ಟಿ ಇಬ್ಬರೂ ಹಳದಿ ಬಣ್ಣದಷ್ಟೆ ನೀಲಿ ಬಣ್ಣವೂ ಇದೆಯಲ್ಲಾ, ಇದು ’ನೀಲಿ ಚಿತ್ರ’ವೂ ಹೌದು ಎಂದು ನಗಾಡಿಕೊಂಡಿದ್ದೆವು.(just kiddingu, ಅವರು ಮನ್ನಿಸಬೇಕು). ಆಸ್ಕರ್ ಬಂದರೆ ಹೆಮ್ಮೆ , ಬರದಿದ್ದರೆ ಟೊಮ್ಮೆ ಎಂದೆಲ್ಲಾ ಕೂಗಾಡುವ ಮೊದಲು ಅದೊಂದು Warner Bros. ನಿರ್ಮಾಣದ, ನಿರ್ದೇಶನದ ಚಿತ್ರ ಎಂದು ಅರಿತುಕೊಂಡರೆ ಒಳ್ಳೆಯದು. ಪ್ರಶಸ್ತಿ ಬಂದರೂ ಅದರಲ್ಲಿ ಭಾರತ ಹೆಮ್ಮ ಪಡುವುದಕ್ಕೆ ಅರ್ಥವೇ ಇಲ್ಲ! ವಿಧಾನ ಸೌಧ ಕಟ್ಟಿದ್ದು ನಾವೇ ಎಂದು ಕೇಂದ್ರ ಕಾರಾಗೃಹದ ಖೈದಿಗಳ ಸಂಭ್ರಮ ಪಟ್ಟಂತೆ ಅಷ್ಟೆ!


***************


ಇದರ ಜೊತೆಗೆ ಇನ್ನೊಂದು ವಿಷಯ ಬರೆಯಲೇ ಬೇಕು. ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಎಂಬ ಪುಸ್ತಕ ಬರೆದು ಬೂಕರ್ ಎಂಬ ಪ್ರಶಸ್ತಿ ಪಡೆದು ಮಾಧ್ಯಮಗಳಿಂದ ಅರುಧಂತಿ ರಾಯ್ ಒಂದು ನ್ಯಾಷನಲ್ ಫಿಗರ್ ಆಗಿಹೋದಂತೆ ಮೊನ್ನೆ ಮೊನ್ನೆ ವೈಟ್ ಟೈಗರ್ ಎಂಬ ಪುಸ್ತಕಕ್ಕೆ ಬೂಕರ್ ಬಂದು ಮತ್ತೆ ಮಾಧ್ಯಮಗಳು, ಕೆಲವು ಜನರು ಅದನ್ನು ಹೊತ್ತು ಕುಣಿದರು. ಅದರಲ್ಲೂ ಭಾರತದ ನೆಗೆಟಿವ್ ಬದಿಯ ಅನಾವರಣವಿದೆ ಎಂಬ ಕಾರಣದಿಂದ ವಿರೋಧವೂ ವ್ಯಕ್ತವಾಯಿತು. ೧೮ ವರ್ಷದ ಮಕ್ಕಳಿಂದ ಹಿಡಿದು ೮೦ ವರ್ಷದ ಮುದುಕರವರೆಗಿನವರೂ ಅದನ್ನು ವಿಮರ್ಶೆ ಮಾಡಿದ ಪರಿ ನೋಡಿ ಏನೋ ಅದ್ಭುತವೇ ಇರಬೇಕು ಎಂದು ಭಯ ಭಕ್ತಿಯಿಂದ ಆ ಪುಸ್ತಕವನ್ನೂ ಓದಿ ನೋಡಿದೆ.

ಕಥೆ ಹೂರಣ ಹೀಗಿದೆ. ಉತ್ತರಪ್ರದೇಶದ್ದೋ, ಬಿಹಾರದ್ದೋ ಹಳ್ಳಿಯಲ್ಲಿ ಬಡ ಕುಟುಂಬದಲ್ಲಿ ಹುಟ್ಟಿ ಭೂಮಾಲಿಕರ ದೌರ್ಜನ್ಯ ನೋಡುತ್ತಾ ಬೆಳೆದು ಆ ಹಳ್ಳಿಯಲ್ಲೇ ಅವನ ಜಾತಿಯಲ್ಲಿ ಇದ್ದುದರಲ್ಲಿ ಸ್ವಲ್ಪ ಓದು ಬರಹ ಕಲಿತವನೊಬ್ಬ ಶ್ರೀಮಂತರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡು ಅವರ ಜೊತೆ ದೆಹಲಿ ನಗರಕ್ಕೆ ಹೋಗಿ ನಗರದ ಬದುಕನ್ನೆಲ್ಲಾ ಪರಿಚಯ ಮಾಡಿಕೊಳ್ಳುತ್ತಾ ಹೋಗಿ ಕೊನೆಗೊಂದು ದಿನ ತನ್ನ ಮಾಲೀಕನನ್ನೇ ಕೊಂದು ಹಣ ಲಪಟಾಯಿಸಿ ಊರು ಬಿಟ್ಟು ಬೇರೆ ಎಲ್ಲೋ ಹೋಗಿ ವ್ಯವಹಾರ ಶುರು ಮಾಡಿ ತಾನೂ ಶ್ರೀಮಂತನಾಗಿಬಿಡುತ್ತಾನೆ. ಇದರ ಮಧ್ಯದಲ್ಲಿ ಸಣ್ಣದಾಗಿ ಹಳ್ಳಿಯ, ಬಡವರ ಕಷ್ಟದ ಬದುಕು, ಜಾತಿವ್ಯವಸ್ಥೆ, ಒಂದಿಷ್ಟು ರಾಜಕೀಯ, ಶ್ರೀಮಂತರ ಶೋಕಿ ಜೀವನಶೈಲಿ, ಮಾನವ ಸಂಬಂಧಗಳ ಬೆಸೆಯುವಿಕೆ ಬೇರ್ಪಡುವಿಕೆ ಮಸಾಲೆಗಳನ್ನು ಅರೆಯಲಾಗಿದೆ. ಈ ಪುಸ್ತಕದಲ್ಲಿ ಪ್ರತಿಯೊಂದು ಪಾತ್ರವೂ, ಸನ್ನಿವೇಶವೂ, ಘಟನೆಗಳೂ ಭಾರತೀಯರಾದ ನಮಗೆ ’ಹೊಸದು’ ಅಥವಾ ’ಬೇರೆ’ ತರದ್ದು ಅನ್ನಿಸುವುದೇ ಇಲ್ಲ. ಹುಟ್ಟಿದಾಗಿನಿಂದ ಇದನ್ನು ಹತ್ತಿರದಿಂದಲೇ, ಸುತ್ತಮುತ್ತಲೂ ಬೆಳೆಯುವ ನಮಗೆ ಇಂತಹ ಸಾಹಿತ್ಯಗಳನ್ನು ಓದಿ ಹಳಸಲು ಎನ್ನಿಸಿರುತ್ತದೆ. ಈ ಪುಸ್ತಕದ ಕತೆಯಂತೂ ಪಕ್ಕಾ ಅಮಿತಾಭನದ್ದೋ, ಮಿಥುನ್ ಚಕ್ರವರ್ತಿಯದ್ದೋ ಹಳೇ ಹಿಂದಿ ಸಿನೆಮಾವನ್ನೇ ನೋಡಿ ವಿವರವಾಗಿ ಬರೆದಂತಿದೆ.

ಇದೂ ಕೂಡ ತೀರಾ ಚೆನ್ನಾಗಿಲ್ಲ ಎಂದು ಪಕ್ಕಕ್ಕೆ ತಳ್ಳಬಿಡಬಹುದಾಂದಂತಹ ಪುಸ್ತಕ ಅಲ್ಲದಿದ್ದರೂ ಅದ್ಭುತವಾಗಿದೆ ಅನ್ನುವಂತದ್ದಂತೂ ಅಲ್ಲವೇ ಅಲ್ಲ ಎಂದು ಖಂಡಿತವಾಗಿ ಹೇಳಿಬಿಡಬಹುದು. ಅದರಲ್ಲಿರುವ ಕಥಾ ನಾಯಕ ಚೈನಾದ ಪ್ರಧಾನಿಯನ್ನುದ್ದೇಶಿಸಿ ಭಾರತದ ಕತ್ತಲೆ ಜಗತ್ತಿನ ಬಗ್ಗೆ ನೆಗೆಟಿವ್ ಧಾಟಿಯಲ್ಲಿ ಹೇಳುತ್ತಾ ಹೋಗುವಂತೆ ಇದನ್ನು ಬರೆದಿರುವುದನ್ನು ಬಿಟ್ಟರೆ ವೈಟ್ ಟೈಗರ್ = ಹಳೇ ಹಿಂದಿ ಸಿನೆಮಾದ ಕಥೆ + ತಮಿಳು ಸಿನೆಮಾದ ಕ್ಲೈಮಾಕ್ಸ್ ! ಕನ್ನಡದಲ್ಲಿ ಇಂಥದ್ದು ನೂರಾರು ಬಂದು ಹೋಗಿವೆ. ಆದರೂ ಕೂಡ ನಮ್ಮವರಿಗೆ ಇದು ಅದ್ಭುತ ಕಥೆಯುಳ್ಳ, ಅದ್ಭುತ ಪಾತ್ರಗಳುಳ್ಳ ಕಾದಂಬರಿ. ಕಾರಣ ’ಬೂಕರ್ ’. ಕೆಲದಿನಗಳ ಹಿಂದೆ ಉತ್ತರ ಭಾರತದ ಸಾಹಿತಿಯೊಬ್ಬರಿಗೆ ಜ್ಞಾನಪೀಠ ಬಂದಿತ್ತು. ಸ್ವಲ್ಪ ಅವರ ವಿಷಯ ತಿಳಿದುಕೊಳ್ಳೋಣ, ಅವರ ಕೃತಿಗಳ ಪರಿಚಯ ಮಾಡಿಕೊಳ್ಳೋಣ ಅಂತ ಹುಡುಕಿದರೆ.. ಉಹುಂ.. ಒಬ್ಬರದ್ದೂ ಅದರ ಬಗ್ಗೆ ಮಾತೇ ಇಲ್ಲ. ಅದೇ ಅರವಿಂದ ಅಡಿಗನ ಬಗ್ಗೆ ಹುಡುಕಿದರೆ ಅವ ಯಾವ ಪರ್ಫ್ಯೂಮ್ ಹಾಕುತ್ತಾನೆ ಎಂಬ ವಿಷಯ ಕೂಡ ಸಿಗಬಹುದೇನೋ! ಹೀಗೆಯೇ ಅರುಂಧತಿ ರಾಯ್ ಪುಸ್ತಕ ಕೂಡ ಒಂದು ಸಾಧಾರಣ ಮಟ್ಟಿಗೆ ಇದ್ದರೂ ಕೂಡ ಪ್ರಶಸ್ತಿ ಕಾರಣದಿಂದಲೇ ಅವರನ್ನು ’ಬುದ್ಧಿಜೀವಿ’ ವರ್ಗಕ್ಕೆ ಸೇರಿಸುವುದರಲ್ಲಿ ನಮ್ಮ ದೇಶದ ಮಾಧ್ಯಮಗಳ ಪಾತ್ರ ಹಿರಿದು. ಬೂಕರ್ ಎಂದರೆ ಜಗತ್ತಿನ ಸಾಹಿತ್ಯ ಲೋಕದ ಪರಮೋಚ್ಛ ಪ್ರಶಸ್ತಿ ಎಂಬಂತೆ ಮಾಧ್ಯಮಗಳು ಪ್ರಚಾರ ಕೊಡುತ್ತವೆ. ಆದರೆ ವಾಸ್ತವ ಅದಲ್ಲ.

************

ಅದ್ಯಾಕೋ ಗೊತ್ತಿಲ್ಲ, ಭಾರತೀಯರಿಗೆ ಮೊದಲಿಂದಲೂ ’ಫಾರಿನ್ ’ಗೆ ಹೋಗುವುದು ಅಂದರೆ ಅದು ಸಾಧನೆ, ಫಾರಿನ್ ಎಂದರೆ ದೇವಲೋಕ, ಅಲ್ಲಿಂದ ಗುರುತಿಸಲ್ಪಡುವುದು ಮೋಕ್ಷ ಪಡೆದಂತೆ ಎಂಬ ಭಾವನೆ. ಅದರಂತೆಯೇ ಆಸ್ಕರ್ ಪ್ರಶಸ್ತಿಗಾಗಲೀ, ಗೋಲ್ಡನ್ ಗ್ಲೋಬ್ ಗಾಗಲೀ, ಬೂಕರ್ ಗಾಗಲೀ ಮಾನದಂಡವೇನು, ಅದು ನಿಜವಾಗಿಯೂ ಜಾಗತಿಕ ಮಟ್ಟದ ಶ್ರೇಷ್ಠ ಪ್ರಶಸ್ತಿಗಳಾ ಎಂದು ತಲೆಕೆಡಿಸಿಕೊಳ್ಳದ ನಾವು ಅದನ್ನು ಜೀವಮಾನದ ಸಾಧನೆ ಎಂಬಂತೆ ಬಿಂಬಿಸಿ, ಆ ಕೃತಿಗಳನ್ನು ಅನಗತ್ಯವಾಗಿ ಮೆರೆಸಿ, ಅದನ್ನು ಪಡೆದವರನ್ನು ಭಾರತದಲ್ಲಿ ವಿಜೃಂಭಿಸಿ ಮಹತ್ವ ಕೊಟ್ಟುಬಿಡುತ್ತೇವೆ. ಒಟ್ಟಿನಲ್ಲಿ ಎಲ್ಲರೂ ಪಶ್ಚಿಮವೆಂಬ ಶಂಖದಿಂದ ಬಂದದ್ದೇ ತೀರ್ಥವೆಂದು ಕುಡಿದು ಕೈ ತಲೆಗೊರಸಿಕೊಂಡು ಧನ್ಯರಾಗಿಬಿಡುತ್ತೇವೆ.!

***************

ಸುಮ್ನೆ ಕ್ರಿಟಿಸಿಸಂ ಬರಿಯಕ್ಕೆ ಹೋಗ್ಬೇಡ ಅಂತ ಹತ್ತಿರದವರು ಹೇಳಿದ್ರು, ಆದರೂ ಬರೆದುಬಿಟ್ಟೆ.. ಇದು ಜನವರಿ ಕೋಟಾ!