ಪುಟಗಳು

ಗುರುವಾರ, ಡಿಸೆಂಬರ್ 4, 2008

ರಹಸ್ಯ ಲಿಪಿ !

ಅದು ನಮ್ಮ ತರಗತಿಯಲ್ಲಿ ಸಿಂಧೂ ಬಯಲಿನ ನಾಗರಿಕತೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ ಎಂದೇ ಹೇಳಬಹುದು. ಭೂಗೋಳವನ್ನೂ, ಇತಿಹಾಸವನ್ನೂ ಪಾಠ ಮಾಡುತ್ತಿದ್ದ ನಾರಾಯಣ ಗೌಡ ಮೇಷ್ಟ್ರು ನಮ್ಮನ್ನೂ ಅದೇ ಕಾಲಕ್ಕೆ ಕೊಂಡೊಯ್ದುಬಿಡುತ್ತಿದ್ದರು. ಅದರ ರೋಚಕತೆ ನನ್ನಲ್ಲಿ ಇತಿಹಾಸದ ಬಗ್ಗೆ ವಿಶೇಷ ಆಸಕ್ತಿಯನ್ನು ಹುಟ್ಟುಹಾಕಿತ್ತು. ಹರಪ್ಪಾ, ಮೊಹೆಂಜಾದಾರೋ ಕಾಲದ ಲಿಪಿಗಳನ್ನು ಪುಸ್ತಕದಲ್ಲಿ ಕೊಟ್ಟಿದ್ದರು. ಆ ಲಿಪಿಗಳನ್ನು ಇನ್ನೂ ಯಾರಿಗೂ ಓದಲು ಆಗಿಲ್ಲ ಎಂದು ತಿಳಿದು ಆಶ್ಚರ್ಯವಾಗಿತ್ತು. ಒಮ್ಮೆ ’ಸುಧಾ’ ವಾರಪತ್ರಿಕೆಯಲ್ಲಿ ಇದರ ವಿಷಯವಾಗಿ ಬಂದ ಬರಹವೊಂದನ್ನು ನಾನು ಕತ್ತರಿಸಿ ಇಟ್ಟುಕೊಂಡುದುದನ್ನು ನೋಡಿದ ಅಪ್ಪ ಸಿಂಧೂ ಬಯಲಿನ ನಾಗರಿಕತೆ ವಿಷಯವಾಗಿ ಪುಸ್ತಕವೊಂದನ್ನು ಕೂಡ ತಂದುಕೊಟ್ಟಿದ್ದರು. ಆವಾಗಿನಿಂದ ಹಳೆಯ ಕಾಲದ ನಾಗರಿಕತೆಗಳ ಬಗ್ಗೆ, ಹಳೆಯ ಭಾಷೆ, ಲಿಪಿಗಳ ಬಗ್ಗೆ ವಿಶೇಷ ಕುತೂಹಲ ಬೆಳೆದು ಬಂತು. ಬೇಲೂರು, ಹಳೇಬೀಡು, ಬೆಳಗೊಳ ಮುಂತಾದ ಕಡೆಗಳಲ್ಲಿ ಕಾಣಿಸುವ ಹಳೆಗನ್ನಡ ಶಾಸನ ಬರಹಗಳನ್ನು ಓದುವಂತಾಗಬೇಕು ಎಂಬ ಆಸೆ ಬೆಳೆದಿತ್ತು. ನಮ್ಮ ಊರಿನಲ್ಲಿ ಇರುವ ೧೨ ನೇ ಶತಮಾನದ ಹಳೆಯ ದೇವಸ್ಥಾನಕ್ಕೆ ಹೋದಾಗಲೆಲ್ಲಾ ಅಲ್ಲಿನ ಶಾಸನದಲ್ಲಿರುವ ಹಳೆಗನ್ನಡ ಲಿಪಿಯನ್ನು ನೋಡುತ್ತಾ ನಿಲ್ಲುವುದು, ಅದನ್ನು ಓದುವುದಕ್ಕೆ ಪ್ರಯತ್ನಿಸುವುದು ನೆಡೆದಿತ್ತು. ಅದೇ ಸಮಯಕ್ಕೆ ಸರಿಯಾಗಿ ಮನೆಯ ಹತ್ತಿರ ಏನೋ ಅಗೆಯುವಾಗ ನಾಣ್ಯವೊಂದು ಸಿಕ್ಕಿತ್ತು. ಮಣ್ಣು ಮೆತ್ತಿಕೊಂಡು, ತುಕ್ಕು ಹಿಡಿದ ಕಬ್ಬಿಣದ ಬಿಲ್ಲೆಯಂತಿದ್ದ ಆ ನಾಣ್ಯವು ಪೂರ್ತಿ ಅಸ್ಪಷ್ಟವಾಗಿದ್ದು ಎಷ್ಟೇ ತಿಕ್ಕಿ ತೊಳೆದರೂ ಕೂಡ ಸರಿಯಾಗಿ ಕಾಣಿಸದಂತಿತ್ತು. ಅಪ್ಪನಿಗೆ ಅದನ್ನು ತೋರಿಸಿದಾಗ ಅವರು ನನ್ನ ಉತ್ಸಾಹವನ್ನು ಕಂಡು ಅವರಿಗೆ ಪರಿಚಯವಿದ್ದ ಇತಿಹಾಸದ ಪ್ರಾಧ್ಯಾಪಕರ ಮನೆಗೆ ಒಂದು ದಿನ ಕರೆದುಕೊಂಡು ಹೋಗಿದ್ದರು. ಅವರು ಅದನ್ನು ಪರೀಕ್ಷಿಸಿ ಅವರಲ್ಲಿದ್ದ ದ್ರಾವಣವೊಂದರಿಂದ ಅದನ್ನು ಸ್ವಚ್ಛಮಾಡಿ ನೋಡಿ ಆಶ್ಚರ್ಯದಿಂದ ಇದು ಟಿಪ್ಪೂಸುಲ್ತಾನನ ಕಾಲದ ತಾಮ್ರದ ನಾಣ್ಯ ವೆಂದು ಊಹಿಸಿ, ಅದಕ್ಕೆ ಪೂರಕವಾಗಿ ಅದರಲ್ಲಿ ಪರ್ಷಿಯನ್ ಭಾಷೆಯ ಲಿಪಿಯಿದ್ದದ್ದನ್ನೂ, ಇನ್ನೊಂದು ಬದಿಯಲ್ಲಿ ಆನೆಯ ಚಿತ್ರ ಇದ್ದದ್ದನ್ನೂ ತೋರಿಸಿ ಹುಷಾರಾಗಿ ಇಟ್ಟುಕೊಳ್ಳುವಂತೆ ಹೇಳಿದ್ದರು. ಅಪ್ಪನಿಗೆ ನಾನು ಪದೇ ಪದೇ ಇತಿಹಾಸದ ಬಗ್ಗೆ ಪ್ರಶ್ನೆಗಳನ್ನು ಹಾಕಿ ಕುತೂಹಲ ತೋರಿಸುತ್ತಿದ್ದುದರಿಂದ ನೀನು ದೊಡ್ಡವನಾದಮೇಲೆ ಪ್ರಾಗಿತಿಹಾಸಜ್ಞ ಆಗುವಿಯಂತೆ ಎಂದು ಹುರಿದುಂಬಿಸಿದ್ದರು. ಕರ್ನಾಟಕದ ಕೆಲವೇ ಇತಿಹಾಸಜ್ಞರಲ್ಲಿ ಒಬ್ಬರಾದ ನನ್ನ ಸೋದರಜ್ಜನ ಬಳಿ ಹಳೆಗನ್ನಡ ಓದುವುದನ್ನು ಕಲಿಸಿಕೊಡುವಂತೆ ಕೇಳುವುದಾಗಿ ಕೂಡ ಭರವಸೆ ಕೊಟ್ಟಿದ್ದರು.

ಇದೇ ಸಂದರ್ಭದಲ್ಲಿ ಚಾಲ್ತಿಗೆ ಬಂದಿದ್ದು ’ರಹಸ್ಯ ಲಿಪಿ’! ಕೆಲವೇ ಜನರಿಗೆ ಓದಲು, ಬರೆಯಲು ಬರುವಂತಹ ರಹಸ್ಯ ಲಿಪಿಯೊಂದು ಇವತ್ತಿಗೂ ಕೂಡ ಇದೆಯೆಂದೂ, ಸ್ವಲ್ಪ ಪ್ರಯತ್ನಪಟ್ಟರೆ ದೊರಕಿಸಿಕೊಳ್ಳಬಹುದೆಂದೂ ನಮ್ಮ ಕ್ಲಾಸಿನಲ್ಲಿ ಸುದ್ದಿ ಹಬ್ಬಿತ್ತು. ನನ್ನಂತೆಯೇ ಸ್ವಲ್ಪ ಆಸಕ್ತಿಯುಳ್ಳ ಹುಡುಗರು ಅದರ ಹುಡುಕಾಟದಲ್ಲಿ ತೊಡಗಿ ದಿನಕ್ಕೊಂದು ಸುದ್ದಿ ತೇಲಿಬಿಡುತ್ತಿದ್ದರು. ಸಂದೀಪ ತನಗೆ ತನ್ನ ಅಜ್ಜನ ಮೂಲಕ ಆ ಲಿಪಿ ಗೊತ್ತಿದೆ ಎಂದು ಹೇಳಿಕೊಂಡಿದ್ದ. ವಿಚಿತ್ರವಾದುದನ್ನೇನೋ ಬರೆಯುತ್ತಿದ್ದ. ಆದರೆ ಅದನ್ನು ಯಾರಿಗೂ ಹೇಳಿಕೊಡುವುದು ಸಾಧ್ಯವಿಲ್ಲವೆಂದು ಅವನು ಖಂಡತುಂಡವಾಗಿ ಹೇಳಿದ ಮೇಲೆ ಅವನ ಮನ ಒಲಿಸುವ ಕೆಲಸ ಕೈಬಿಟ್ಟೆವು. ಅದ್ಯಾವುದೋ ಹಳೇ ಅಂಗಡಿಯಲ್ಲಿ ರಹಸ್ಯ ಲಿಪಿಯ ಪುಸ್ತಕವೊಂದು ಸಿಗುವುದೆಂಬ ಖಚಿತ(!) ಮಾಹಿತಿಯ ಬೆನ್ನು ಹಿಡಿದು ಒಂದು ದಿನ ಹೋಗಿಬರುವುದೆಂದೂ ತೀರ್ಮಾನಿಸಿಕೊಂಡು ಆ ಅಂಗಡಿ ಹುಡುಕಿಕೊಂಡು ಅಲೆದು ಸುಸ್ತಾಗಿ ವಾಪಾಸ್ ಬಂದಿದ್ದೆವು. ಬರುಬರುತ್ತಾ ಈ ರಹಸ್ಯ ಲಿಪಿಯ ಸುದ್ದಿ ತಣ್ಣಗಾಗಿ ಎಲ್ಲರೂ ಮರೆತರಾದರೂ ನಾನು ಮತ್ತು ನನ್ನ ಗೆಳೆಯರಾದ ರವಿ, ಶಶಿ ಮೂವರೂ ಸೇರಿ ರಹಸ್ಯ ಲಿಪಿ ಸಿಗದಿದ್ದರೇನಂತೆ, ನಾವೇ ಒಂದು ರಹಸ್ಯ ಲಿಪಿ ರೂಪಿಸಿಕೊಳ್ಳೋಣವೆಂದೂ ಅದರಲ್ಲೇ ಬರೆದು ಎಲ್ಲರಿಗೂ ಆಶ್ಚರ್ಯಗೊಳಿಸೋಣವೆಂದೂ ಯೋಜನೆಹಾಕಿದೆವು. ಅದರಂತೆಯೇ ಕೆಲವು ಪ್ರಯೋಗಗಳನ್ನು ಮಾಡಿ ಸುಮಾರು ದಿನಗಳ ವರೆಗೆ ಯಾವುದೂ ಸರಿಯಾಗದೇ ಅವರಿಬ್ಬರೂ ಮರೆತರು, ನಾನೂ ಹೆಚ್ಚು ಕಡಿಮೆ ಕೈಬಿಟ್ಟಿದ್ದೆ. ಆದರೂ ನನ್ನ ಮನಸ್ಸಿನಿಂದ ಪೂರ್ತಿ ದೂರವಾಗಿರಲಿಲ್ಲ.


ಹೀಗಿದ್ದಾಗ ಒಂದು ದಿನ ಈ ಲಿಪಿಯ ಬಗ್ಗೆ ಯೋಚಿಸುತ್ತಲೇ ಕನ್ನಡ ವರ್ಣಮಾಲೆಯ ಆಧಾರದ ಮೇಲೆ ಚಿನ್ಹೆಗಳ ಮೂಲಕ ಈ ಲಿಪಿಯನ್ನು ರೂಪಿಸಿದರೆ ಹೇಗೆ ಎಂಬ ಉಪಾಯ ಹೊಳೆಯಿತು. ಚಿನ್ಹೆಗಳು ಅಂದರೆ ಏನು ಬಳಸಿಕೊಳ್ಳುವುದು? ಒಂದೊಂದು ಅಕ್ಷರಕ್ಕೂ ಬೇರೆ ಬೇರೆಯ ಚಿನ್ಹೆಗಳನ್ನು ಬಳಸಿದರೆ ನೆನಪಿಟ್ಟುಕೊಳ್ಳುವುದು ಬಹಳ ಕಷ್ಟ. ಚಿನ್ಹೆಗಳನ್ನು ಬರೆಯುವುದೂ, ಓದುವುದೂ ಸುಲಭವಲ್ಲ. ಹಾಗಾಗಿ ಅತಿಸುಲಭವಾಗಿ ಬರೆಯುವಂತಹ ಕಡ್ಡಿ ಮನುಷ್ಯನ ಚಿತ್ರವನ್ನು ಬಳಸಿಕೊಳ್ಳುವುದೆಂದು ತೀರ್ಮಾನಿಸಿದೆ. ಅದೇ ರೀತಿ ಒಂದೊಂದು ಅಕ್ಷರಕ್ಕೂ ಕಡ್ಡಿ ಮನುಷ್ಯನ ಚಿತ್ರದ ಚಿನ್ಹೆ ಬಳಸಿ ನೆನಪಿಟ್ಟುಕೊಳ್ಳಬಹುದಾದಂತಹ ಸಣ್ಣ ಸಣ್ಣ ಬದಲಾವಣೆಗಳ ಮೂಲಕ ರೂಪಿಸಬಹುದು ಎಂಬ ಯೋಚನೆಯ ಮೇರೆಗೆ ರಹಸ್ಯ ಲಿಪಿಯನ್ನು ರಚಿಸಲು ಕುಳಿತೆ. ಮೊದಲು ಅ, ಆ , ಇ, ಈ ಇಂದ ಅಂ, ಅಃ ವರೆಗೂ ಒಂದೊಂದಕ್ಕೂ ಒಂದೊಂದು ಚಿನ್ಹೆಗಳನ್ನು ರೂಪಿಸಿದೆ. ನಂತರ ಕ, ಖ, ಗ, ಘ.. ದಿಂದ ಪ, ಪ, ಬ, ಭ, ಮ ವರೆಗೆ ಇನ್ನೊಂದಿಷ್ಟು, ಯ, ರ,ಲ, ವ ದಿಂದ ಕ್ಷ, ಜ್ಞ ವರೆಗೆ ಮತ್ತೊಂದಿಷ್ಟು ಚಿನ್ಹೆ ರೂಪಿಸಿದೆ. ಎಲ್ಲವೂ ಕೂಡ ಕಡ್ಡಿ ಮನುಷ್ಯನ ಚಿತ್ರದಲ್ಲಿಯೇ ಇತ್ತು. ನಂತರ ಕ,ಕಾ,ಕಿ,ಕೀ ಯಿಂದ ಕಂ, ಕಃ ವರೆಗೆ ಎಲ್ಲಾ ವ್ಯಂಜನಗಳಿಗೆ ಅನ್ವಯವಾಗುವಂತೆ ಪೂರ್ತಿ ವರ್ಣಮಾಲೆಯನ್ನು ನನ್ನ ಕಡ್ಡಿ ಲಿಪಿಗೆ ತರುವುದರಲ್ಲಿ ಯಶಸ್ವಿಯಾದೆ. ಅನಂತರ ಇದನ್ನೇ ಸ್ವಲ್ಪ ಸ್ವಲ್ಪ ಸುಧಾರಿಸುತ್ತ ಹೋಗಿ ಮೂರ್ನಾಲ್ಕು ಪ್ರಯತ್ನಗಳ ನಂತರ ಆರಾಮಾಗಿ ನೆನಪಿಟ್ಟುಕೊಳ್ಳುವಂತಹ, ಸುಲಭವಾಗಿ ಬರೆಯಬಹುದಾದಂತಹ ಲಿಪಿಯೊಂದನ್ನು ನಾನೇ ಹುಟ್ಟು ಹಾಕಿದ್ದು ನೋಡಿ ನನಗೇ ಆಶ್ಚರ್ಯವಾಗಿತ್ತು ! ಅದನ್ನು ನನ್ನ ಪುಟ್ಟ ಡೈರಿಯೊಂದರಲ್ಲಿ ಬರೆದಿಟ್ಟುಕೊಂಡು ಗೌಪ್ಯವಾಗಿರಿಸಿಕೊಂಡಿದ್ದೆ. ಎಷ್ಟೊ ದಿನಗಳವರೆಗೆ ಸುಮ್ಮನೇ ಅದರಲ್ಲಿಯೇ ಏನೇನನ್ನೋ ಬರೆಯುವುದನ್ನು, ಓದುವುದನ್ನೂ ಮಾಡುತ್ತಾ ಖುಷಿಪಡುತ್ತಿದ್ದೆ. ಕ್ರಮೇಣ ಅದರಲ್ಲಿ ಆಸಕ್ತಿ ಕಡಿಮೆಯಾಗುತ್ತಾ ಹೋಗಿ ಕೊನೆಗೆ ಅದರ ಬಳಕೆಯೂ ನಿಂತು ಹೋಯಿತು. ಇಂಗ್ಲೀಷ್ ಎ,ಬಿ,ಸಿ,ಡಿ..ಆಧಾರದ ಮೇಲೆ ರಹಸ್ಯ ಲಿಪಿ ರೂಪಿಸಲು ಸ್ಕೆಚ್ ಹಾಕಿದ್ದು ಅರ್ಧಕ್ಕೇ ನಿಂತುಹೋಗಿತ್ತು.


ಮೊನ್ನೆ ಮನೆಯಲ್ಲಿ ನನ್ನ ಹಳೇ ಸಂಗ್ರಹವನ್ನೆಲ್ಲಾ ತೆಗೆದು ಗುಡ್ಡೆ ಹಾಕಿಕೊಂಡು ಕುಳಿತಿದ್ದಾಗ ಆ ಡೈರಿಯೂ ಕೂಡ ಸಿಕ್ಕಿತು. ಇದನ್ನು ಬ್ಲಾಗ್ ಗೆ ಹಾಕೋಣವೆನಿಸಿತು.

ಈ ಕೆಳಗಿನವು ನಾನೇ ರೂಪಿಸಿದ್ದ ’ರಹಸ್ಯ ಲಿಪಿ’. ಹಾಗೇ ಫೋಟೋ ತೆಗೆದು ಹಾಕಿದ್ದೇನೆ. ದಕ್ಕಿಸಿಕೊಳ್ಳಿ :)**

**

**

28 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ- ಹೇಳಿದರು...

ವಿಕಾಸ್,

"ಚೆಸನ್ನಾಸಗಿಸದ್ದು ಲೇಸಖಸನ. ಇಸಷ್ಟಸವಾಸಯ್ತು.."

ಇದು ಬಾಲ್ಯದಲ್ಲಿ ನಾವು ಮಾತಾಡಿಕೊಳ್ಳುತ್ತಲಿದ್ದ ರಹಸ್ಯ ಭಾಷೆಯ ಒಂದು ಸ್ಯಾಂಪಲ್ :) ನಿನ್ನ ಈ ಲೇಖನ ನನ್ನನ್ನು ನನ್ನ ಬಾಲ್ಯಕ್ಕೆ ಕೊಂಡೊಯ್ದಿತು. ಪ್ರತಿಯೊಂದು ಅಕ್ಷರಕ್ಕೂ ನಡುವೆ "ಸ"ಕಾರವನ್ನೋ ಇಲ್ಲಾ"ನ"ಕಾರವನ್ನೋ ಹಾಕಿ ಪಟಪಟನೆ ಮಾತಾಡಿಕೊಳ್ಳುತ್ತಿದ್ದರೆ ಎದುರು ಕಡೆಯವರು ತಬ್ಬಿಬ್ಬಾಗುತ್ತಿದ್ದರು :) ದೊಡ್ಡವರ ಮುಂದೆ ಹೇಳಬಾರದಂತಿರುವ ವಿಷಗಳನ್ನು ಅವರ ನಡುವೆಯೇ ಅಂಜಿಕೆ ಇಲ್ಲದೇ ಈ ಬಾಷೆಯಲ್ಲಿ ನಾನು ಹಾಗೂ ನನ್ನ ಚಿಕ್ಕಪ್ಪನ ಮಕ್ಕಳು ಮಾತಾಡುತ್ತಿದ್ದೆವು :) ಆದರೆ ಈಗ ಎಷ್ಟೇ ಪ್ರಯತ್ನ ಪಟ್ಟರೂ ಮಾತಾಡಲಾಗದು. ಮರೆತು ಬಿಟ್ಟಿದ್ದೇವೆ!

ತುಂಬಾ ಒಳ್ಳೆಯ ಆಸಕ್ತಿ. ರಹಸ್ಯಲಿಪಿಯೇನಾದರೂ ಸಿಕ್ಕದರೆ ಖಂಡಿತ ನನಗೂ ಹೇಳು ಮತ್ತೆ...?!

shreeshum ಹೇಳಿದರು...

ಒಳ್ಳೆಯ ವಿಷಯ. ಜಪಾನ್ ಭಾಷೆಯಂತೆ ಇದೆ. ಈಗ ಮತ್ತೆ ಹೊಸರೂಪ ಕೊಡಬಹುದಿತ್ತು.

ಚಿತ್ರಾಕರ್ಕೇರಾ, ದೋಳ್ಪಾಡಿ ಹೇಳಿದರು...

ಒಳ್ಳೆ ಹವ್ಯಾಸ. ನಾನು ಚಿಕ್ಕವಳಿರುವಾಗ ಲಿಪಿಗಳ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ರಾಮಾಯಣ, ಮಹಾಭಾರತ ಕಥಾ ಆಧರಿತ ಚಿತ್ರಗಳನ್ನು ಸಂಗ್ರಹಿಸುವ ಅಭ್ಯಾಸ. ನಮ್ಮಮ್ಮ ಓದಿಲ್ಲಾಂದ್ರೂ ಅಂಥ ಪುಸ್ತಕಗಳನ್ನು ಅಂಗಡಿಗಟ್ಟಲೆ ಅಲೆದಾಡಿ ತಂದುಕೊಡುತ್ತಿದ್ದರು. ಏನೂ ಕ್ಲಾಸಿನಲ್ಲಿದ್ದ ಟಾಲೆಂಟು, ಆಸಕ್ತಿ ಬೆಂಗಳೂರಿಗೆ ಬಂದ ಮೇಲೆ ಎಲ್ಲೋಯ್ತು?
ಏನೋ ಸಂಶೋಧಕನಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ ಮಾರಾಯ..ಅದಿರಲಿ ರಹಸ್ಯ ಲಿಪಿ ಸಿಕ್ರೆ..ಪ್ರೆಸ್ ಮೀಟ್ ಕರೆದು ಎಲ್ಲಾ ಹೇಳಿಬಿಡಿ ಆಯಿತಾ?
-ಚಿತ್ರಾ

Ranjith ಹೇಳಿದರು...

""%‍ಽ*)(()_((ಽ*%%ಽ*(ಽ%॓॓*%*~‍ಽ""

ಇದು ನಂದು. ಭಯ ಬೀಳ್ಬೇಡಿ...ಲೇಖನ ತುಂಬಾ ಚೆನ್ನಾಗಿದೆ ಅಂತ ನನ್ನ ರಹಸ್ಯಲಿಪಿಯಲ್ಲಿ ಹೇಳಿದೆ..:)

ಸಂದೀಪ್ ಕಾಮತ್ ಹೇಳಿದರು...

!ದೆಗಿನ್ನಾಚೆ ಳಹಬ ನಖಲೇ

ಹೇ ವಿಕಾಸ ಹೇಗೂ ಡೈರಿ ಫೋಟೊ ತೆಗೆದಿದ್ದೀಯಾ ಅಲ್ವ ಬೇರೆ ಪುಟಗಳ ಫೋಟೋ ಮೈಲ್ ಮಾಡು ನೋಡೋಣ ’ಸಾಧಾರಣ ಲಿಪಿಯಲ್ಲಿ ಏನು ’ರಹಸ್ಯ’ ಬರೆದಿದ್ದೀಯಾ ಅಂತ ’ (just kidding !)

Lakshmi S ಹೇಳಿದರು...

nimage code language and cryptography nalli olle bhavishya ide. continue maadi :)

ಅಂತರ್ವಾಣಿ ಹೇಳಿದರು...

ವಿಕಾಸ್,

ಲೇಖನ ಚನ್ನಾಗಿದೆ.

ಕಡ್ಡಿ ಮನುಷ್ಯ ಸೂಪರ್!!!

ಹಂಸಾನಂದಿ Hamsanandi ಹೇಳಿದರು...

ಚೆನ್ನಾಗಿದೆ. Arthur Conan Doyle ರ The Mystery of Dancing Men ನೆನಪಾಯ್ತು :)

Harish - ಹರೀಶ ಹೇಳಿದರು...

ನಂಗನೂ ತೇಜಕ್ಕ ಹೇಳ್ದಂಗೆ ಮಾತಾಡ್ತಿದ್ಯ.. ಆದ್ರೆ ನಂಗ ಉಪಯೋಗಿಸ್ತಾ ಇದ್ದಿದ್ದು "ಪ"...

ನನ್ನ ಆರ್ಕುಟ್ ಪ್ರೊಫೈಲ್ ಅಲ್ಲಿ ಲಾಗಾಯ್ತಿಂದನೂ ಒಂದು ರಹಸ್ಯ ಲಿಪಿ ಇದ್ದು.. ನೋಡಿದ್ಯಾ? ;-)

ಇದುವರೆಗೆ ನಂಗೆ ರಾಶಿ ಇಷ್ಟ ಆಗಿದ್ದು ಅಂದ್ರೆ ಸುಧಾದಲ್ಲಿ ಬಂದಿದ್ದ ಒಂದು ನೀಳ್ಗತೆ. ಅದರಲ್ಲಿ ಕಥೆಗೆ ಪೂರಕವಾಗಿ ರಹಸ್ಯ ಲಿಪಿ ಇತ್ತು. ಅದು ನಾನು ಓದಿದ್ದು ಪ್ರಾಥಮಿಕ ಶಾಲೆಯಲ್ಲಿದ್ದಾಗ. ಈಗ ಗೊತ್ತಾಯ್ದು ಅಲ್ಲಿ ಇದ್ದಿದ್ದು substitution cipher ಅಂತ..

ನಿನ್ನ ಡೈರಿ ಅಲ್ಲಿ ಫೆಬ್ರುವರಿ ೧೯೮೭ ಅಂತ ಇದ್ದು.. ಆವಾಗ ನಿಂಗೆ ಓದಕ್ಕೆ/ಬರ್ಯಕ್ಕೆ ಬರ್ತಿತ್ತಾ ಗುರುವೇ?

ಅನಾಮಧೇಯ ಹೇಳಿದರು...

ವಿಕಾಸ,
ಎಸ್ ಎಸ್ ಎಲ್ಸಿ ಇರ್ತ ನಾನೂ ಒಂದು ರಹಸ್ಯ ಲಿಪಿ ಕಂಡ್ ಹಿಡಿದಿದ್ದೆ. ನನ್ ಫೆಂಡ್ಸ್ ಎಲ್ಲ ಅವರವರ ಕೈ ಮೇಲೆ ತಮ್ಮ ಬಾಯ್ ಫ್ರೆಂಡ್ ಹೆಸರು ಬರೆಸ್ಕೊಳೋಕೆ ಮುಗಿ ಬೀಳ್ತಿದ್ರು! ಜೊತೆಗೆ ಒಂದೊಂದು ಖಾರ ಹಚ್ಚಿದ ಕಿತ್ತಳೆ ಹಣ್ಣೂ/ ಐಸ್ ಕ್ಯಾಂಡಿಯ ಲಂಚ!
- ಚೇತನಾ

ಶಾಂತಲಾ ಭಂಡಿ ಹೇಳಿದರು...

ವಿಕಾಸ...
ರಹಸ್ಯಲಿಪಿಯೊಂದನ್ನ ಕಂಡುಹಿಡಿದು ಅದನ್ನ ಓದುವ ಅವಕಾಶ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ :-)
ನಿರೂಪಣೆ ಚಂದ.

@ ಹರೀಶ
"ನಿನ್ನ ಡೈರಿ ಅಲ್ಲಿ ಫೆಬ್ರುವರಿ ೧೯೮೭ ಅಂತ ಇದ್ದು.. ಆವಾಗ ನಿಂಗೆ ಓದಕ್ಕೆ/ಬರ್ಯಕ್ಕೆ ಬರ್ತಿತ್ತಾ ಗುರುವೇ?"
ನಾನು ಸಣ್ಣಕ್ಕಿರಕ್ಕರೆ ಅಪ್ಪಂಗೆ ಬ್ಯಾಡದೇ ಇರ ಹೋದ್ವರ್ಷದ್ದೋ, ಅಥವಾ ಮತ್ತೂ ಹಳೆಯದೋ ಡೈರಿ ಅಪ್ಪನತ್ರೆ ತಗತ್ತಿದ್ದಿ. ಅದನ್ನ ಉಪಯೋಗಿಸದು ಮತ್ತೆರಡು ವರ್ಷ ಹಳತಾದ ಮೇಲೆ. ಬಹುಷ: ವಿಕಾಸನೂ ಹಾಂಗೆ ಮಾಡ್ತಿದ್ನೇನ ಅಂದ್ಕಂಡಿ.

ವಿಕಾಸ್ ಹೆಗಡೆ ಹೇಳಿದರು...

@ತೇಜಕ್ಸ್,
ಓಹ್, ನಿಮ್ದು ರಹಸ್ಯ ಆಡುಭಾಷೆ.

@ಶ್ರೀಶಂ,
ಹೊಸರೂಪ..ಹ್ಮ್.. ಕೊಡಣ :)

@ಚಿತ್ರಾ,
ಬೆಂಗಳೂರಿಗೆ ಬಂದ್ಮೇಲೆ ಬೇರೆ ಟ್ಯಾಲೆಂಟು ಜಾಸ್ತಿ ಆಗಿ ಹಳೇದೆಲ್ಲಾ ಬಿಟ್ಟೋಗಿದೆ. ದೇವ್ರಾಣೆ, ಯಾರಿಗೆ ಹೇಳಿದ್ರೂ ಪ್ರೆಸ್ ನವರಿಗೆ ಮಾತ್ರ ಹೇಳಲ್ಲ :)ಹ್ಹ ಹ

@ರಂಜಿತ್,
ಸ್ಥಳದಲ್ಲೇ ಸೃಷ್ಟಿ!

@ಸಂದೀಪ,
ಸುಮ್ನಿರಪ್ಪ,ಅಪ್ಪಿ ತಪ್ಪಿ TV9ಗೇನಾದ್ರೂ ಸಿಕ್ ಬಿಟ್ರೆ ಒಂದ್ವಾರ ಬ್ರೇಕಿಂಗ್ ನ್ಯೂಸು!

@ಲಕ್ಷ್ಮಿ,
ಆಶೀರ್ವಾದ ಮಾಡಿ . :)

@ಅಂತರ್ವಾಣಿ,
:)thanx

@ಹರೀಶ್,
ಹ್ಹ ಹ್ಹ, ಕೆಳಗೆ ಶಾಂತಲಕ್ಕ ನಿಂಗೆ ಉತ್ತರಿಸಿದ್ದಾರೆ :)

@ಹಂಸಾನಂದಿ,
ಓಹ್, ನಾನೂ ಓದ್ಬೇಕಾಯ್ತು ಅದನ್ನ.

@ಚೇತನಾ,
ಆಂ! ಎಸ್ಸೆಸ್ಸೆಲ್ಸಿಯಲ್ಲೇ ಬಾಯ್ ಫ್ರೆಂಡ್ಸು! ಅಬ್ಬಾ, ಡೆಲ್ಲಿ ಪಬ್ಲಿಕ್ ಸ್ಕೂಲಲ್ಲಾ ಓದಿದ್ದು? :)

@ಶಾಂತಲಾ ಭಂಡಿ,
ಓದಿದ್ದಕ್ಕೂ ಥ್ಯಾಂಕ್ಸ್ , ಚಂದದ ಕಾಮೆಂಟ್ :)
ಹರೀಶಂಗೆ ಕೊಟ್ಟ ಉತ್ತರ ಸರಿ ಇದ್ದು.

ಅನಾಮಧೇಯ ಹೇಳಿದರು...

ನಾವೂ ಮಾತಾಡ್ತಾ ಇದ್ದೆವು... ಆದರೆ ಅದು ‘ಕ’ ಸೇರಿಸಿ ಮಾತಾಡೋ ಭಾಷೆ...
ತುಂಬಾ ಚೆನ್ನಾಗಿ ಬರ್ದಿದ್ದೀಯ

ಕಟ್ಟೆ ಶಂಕ್ರ ಹೇಳಿದರು...

ಚೆನ್ನಾಗಿದೆ ಚೆನ್ನಾಗಿದೆ..
ನಾವು ಕೂಡ ಇದೆ ರೀತಿ ಮಾಡ್ತಾ ಇದ್ವಿ, ಆದ್ರೆ ಲಿಪಿಯಿಂದ ಅಲ್ಲಾ, "ಪ" ಭಾಷೆ, "ಟ" ಭಾಷೆ etc.
ಮನೆಯಲ್ಲಿ ಇದೆ ರೀತಿ ಮಾತಾಡಿ ಅಪ್ಪನಿಂದ ಸರಿಯಾಗಿ ಒದೆ ತಿಂದಿದ್ದೂ ಇದೆ.
ಅದಕ್ಕೆ ಹೇಳೋದು "Those were the days...." ಅಂತಾ, ಅಲ್ವೇ ವಿಕ್ಕಿ ?

ಕಟ್ಟೆ ಶಂಕ್ರ

Harish - ಹರೀಶ ಹೇಳಿದರು...

ಛೆ! ನನ್ನ ರಹಸ್ಯ ಲಿಪಿ ನಿಮ್ಮಿಬ್ರಿಗೂ ಅರ್ಥ ಆಗಲ್ಲೆ. ನಾ ಕೇಳಿದ್ದು ೧೯೮೭ ಫೆಬ್ರುವರಿಯಲ್ಲಿ ನಿಂಗೆ ಓದಕ್ಕೆ ಬರತಿತ್ತ ಅಂತ..

ಶಂಕ್ರಣ್ಣ, ಮಾತಾಡಿದ್ದು ಓಕೆ, ಹೊಡೆತ ತಿಂದಿದ್ದು ಯಾಕೆ? :-)

ವಿಕಾಸ್ ಹೆಗಡೆ ಹೇಳಿದರು...

@ಹರೀಶ,
oh, specific ಆಗಿರ್ಬೇಕಲ್ವಾ.
೧೯೮೭ ಫ್ರೆಬ್ರವರಿಯಲ್ಲಿ ನಂಗೆ ಓದಕ್ಕೆ, ಬರೆಯಕ್ಕೆ ಬರುತ್ತಿರಲಿಲ್ಲ.:)

ಯಜ್ಞೇಶ್ (yajnesh) ಹೇಳಿದರು...

ವಿಕಾಸ,

ನಿನ್ನ ಲೇಖನ ನನ್ನ ಬಾಲ್ಯಕ್ಕೆ ತಗೊಂಡು ಹೋಯ್ತು.
ತೇಜಸ್ವಿನಿಯಕ್ಕ ಹೇಳಿದ ಹಾಗೆ ನಾವು ಮಾತಾಡ್ತ ಇದ್ದೆವು. ಈಗಲೂ ಮನೆಗೆ ಯಾರಾದ್ರು ಬಂದ್ರೆ ನಮ್ಮ ಸೀಕ್ರೇಟು(?) ಭಾಷೆ ಹೊರಗೆ ಬರತ್ತೆ.
"ಸವನುಕ ಸೊಡ್ಡಕ ಸಳ್ಳುಕ"
ಇದರ ಅರ್ಥ "ಅವನು ದೊಡ್ಡ ಮಳ್ಳು"
ಮೊದಲ ಅಕ್ಷರ "ಸ" ದಿಂದ ಪ್ರಾರಂಭ ಮಾಡಿ ಕೊನೆಗೆ "ಕ" ಸೇರ್ಸೋದು.

ಸೊತ್ತಾತಕ?

ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಸನ್ಯಾಸ ತಗೊಳ್ಳೋಕಿಂತ ಮುಂಚೆ ಗೋಕರ್ಣದಲ್ಲಿ ಓದಿದ್ದು. ಆಗ ಅವ್ರು ಒಂದು ಸೀಕ್ರೇಟ್ ಭಾಷೆ ಬಳ್ಸಿ ಡೈರಿ ಬರಿತಾಯಿದ್ದರು. ಕೊನೆಗೆ ಆ ಸೀಕ್ರೇಟ್ ಭಾಷೆ ನಮ್ಗೆಲ್ಲಾ ಗೊತ್ತಾಗಿ ಡೈರಿ ಬರಿಯೋದೇ ನಿಲ್ಸಿದ್ರು. ಈಗ ಅದು ಸರಿಯಾಗಿ ನೆನ್ಪಿಲ್ಲ.

"ಅಕೌಕಗೌ ಘನಶ್ಚೈವ ಚಟೌತಪೋ ನಮಜ್ಜಡೇ
ಯಶಾರಸಾ ಲಸಸ್ಚೈವ ಹವಳಾಕ್ಷಿ ಬದಾಂಯಿ"

ಸರಿಯಾಗಿ ನೆನ್ಪಿಲ್ಲ. ಒಂದೊಂದು ಅಕ್ಷರಕ್ಕೂ ಒಂದೊಂದು ಅರ್ಥವಿತ್ತು

ಲೇಖನ ಚೆನ್ನಾಗಿದೆ.

shreedevi kalasad ಹೇಳಿದರು...

ಡಿಫರೆಂಟ್ ಆಗಿದೆ. ಅಂದ ಹಾಗೆ ಅವತ್ತು ಹೇಳಿಕೊಟ್ಟಿದ್ನಲ್ಲ ಆ ರಹಸ್ಯ ಲಿಪಿ ಯಾರಿಗೂ ಹೇಳಿಕೊಟ್ಟಿಲ್ಲ ತಾನೆ?

shivu K ಹೇಳಿದರು...

ವಿಕಾಶ್ ಹೆಗಡೆಯವರೆ,
ನಿಮ್ಮ ಪ್ರಯತ್ನ ಬಲು ವಿಭಿನ್ನವಾದದು. ನನಗೂ ಹೀಗೆ ಹೊಸದೇನನ್ನಾದರೂ ಹುಡುಕುವುದು ಅಥವಾ ಅದರಲ್ಲಿ ತೊಡಗಿಸಿಕೊಳ್ಳುವುದು. ನೀವು ಮತ್ತೆ ಅದನ್ನು ಪ್ರಯತ್ನ ಪಡಿ. ಯಶಸ್ಸು ಸಿಗಬಹುದೆನಿಸುತ್ತದೆ.

ಮನಸ್ವಿ ಹೇಳಿದರು...

ಓಹ್ ರಹಸ್ಯ ಲಿಪಿ ತುಂಬಾ ಚನ್ನಾಗಿದೆ, ಲಿಪಿಯನ್ನು ರೂಪಿಸಲು ಎಷ್ಟು ದಿನ ತಗೊಂಡಿದ್ದಿರಿ ಕೇಳ ಬಹುದಾ, ನಾವು ಚಿಕ್ಕವರಿವಾಗ ಅಕ್ಷರಗಳನ್ನು ಉಲ್ಟಾ ಬರೆದು ಓದುತ್ತಿದ್ದೆವು. ...T2oq pniT23r3Tni Yr3v ಗೊತ್ತಾಗಲಿಲ್ವ.. ಕನ್ನಡಿ ಹಿಡಿದು ಕನ್ನಡಿಯಲ್ಲಿ ಓದಿ ನೋಡಿ!

ಹರಿಜೋಗಿ ಹೇಳಿದರು...

ನಮ್ಮೂರಲ್ಲಿ ನನ್ನ ಅಣ್ಣನ ಗೆಳೆಯರು ಒಂದು ವಿಚಿತ್ರ ಮಾತು ಬಳಸುತ್ತಿದ್ದರು. ಅವರು ಇಡೀ (ತುಳು) ಪದಗಳನ್ನು ತಿರುಗುಮುರುಗಾಗಿ ಉಚ್ಛರಿಸುತ್ತಿದ್ದರು. ಅವರೊಳಗೆ ಮಾತಾಡುವಾಗ ಅಥವಾ ಬೇರೆಯವರಿಗೆ ತಿಳಿಯದಹಾಗೆ ಏನಾದರೂ ಮಾತಾಡಲು ಅವರು ಇದನ್ನೆ ಉಪಯೋಗಿಸುತ್ತಿದ್ದರು. ನಾವು ಸಾಮಾನ್ಯವಾಗಿ ಮಾತಾಡುವಷ್ಟೇ ಸಲೀಸಾಗಿ ವೇಗವಾಗಿ ಮಾತಾಡುತ್ತಿದ್ದರು!! ನಿಮ್ಮದು ರಹಸ್ಯ ಲಿಪಿಯಾದರೆ ಅವರದು ರಹಸ್ಯ ಭಾಷೆ!!

ವೈಶಾಲಿ ಹೇಳಿದರು...

:D

Niranjan ಹೇಳಿದರು...

ಹಾಯ್ ...ವಿಷಯ ಮತ್ತು ನಿರೂಪಣೆ ಎರಡು ಚೆನ್ನಾಗಿ ಮಾಡಿದಿಯ . ಮತ್ತೆ ಕರ್ನಾಟಕದ ಕೆಲವೇ ಇತಿಹಾಸಜ್ಞರಲ್ಲಿ ಒಬ್ಬರಾದ ನಿನ್ನ ಸೋದರಜ್ಜನ ಬಗ್ಗೆ ಸ್ವಲ್ಪತಿಳಿಸು . ...

ಅನಾಮಧೇಯ ಹೇಳಿದರು...

ಹಾಯ್..ಹೇಗಿದ್ಯಾ..ಚೆನ್ನಾಗಿದ್ಯಾ? ನೀನು ಇಟಲಿಗೆ ಹೋಗಿಯಂತ ಗೊತ್ತಾತು. ನನ್ ಹತ್ರ ಹೆಳೇ ಇಲ್ವೇ? ಇರಲಿ ಬಿಡು..ಅಲ್ಲಿ ಖುಷಿಯಾಗಿರು..ಆರೋಗ್ಯ ನೋಡಿಕೋ..ನೆನಪಾದ್ರೆ ಪತ್ರ ಬರೆ. ಅದ್ಯಾಕೋ ಮತ್ತೆ ಮತ್ತೆ ಕಾಡುತ್ತೆ ನಿನ್ನ ನೆನಪು. ಅದ್ಕೆ ಇಲ್ಲಿ ಬಿಚ್ಚಿಟ್ಟೆ. ಸಾರಿ ಕಣೋ..ಡಿಸ್ಟರ್ಬ ಆಗಿದ್ದಕ್ಕೆ.
ಇಂತೀ..
ಪ್ರೀತಿಯ ನೀರಿ.(:)

ತೇಜಸ್ವಿನಿ ಹೆಗಡೆ- ಹೇಳಿದರು...

ವಿಕಾಸ್,

ರಹಸ್ಯ ಲಿಪಿ ಹಾಂಗೆಯಾ ಇನ್ನೆಂತೆಂಥಾ ರಹಸ್ಯಗಳನ್ನು ಬಚ್ಚಿಟ್ಟಿದ್ಯೋ ಎಂತೋ.. ?!! ನೀರಿನಾ ನಾ ಸರಿ ನೋಡ್ಕ್ಯತ್ತಿ ಹೆದ್ರಡ. ನೀ ಹೋಗ್ಬೇಕಿರೆ ಹೇಳಿಕ್ಕಿ ಹೋಗಿದ್ದು ನೆನ್ಪಿದ್ದು :)

ಸುಪ್ತದೀಪ್ತಿ suptadeepti ಹೇಳಿದರು...

ಚೆನ್ನಾಗಿದೆ, ಸ್ವಾರಸ್ಯಕರವಾಗಿದೆ ನಿನ್ನ ಲೇಖನ.

ನನ್ನ ಚಿಕ್ಕಮ್ಮನ ಮಕ್ಕಳು ತಮ್ಮೊಳಗೆ ಇಂಗ್ಲೀಷಲ್ಲಿ ಮಾತಾಡಿಕೊಳ್ಳುವಾಗ ಎಲ್ಲ ಸ್ವರಗಳ ಬದಲು ಪ್ ಸೇರಿಸಿ ಮಾತಾಡುತ್ತಿದ್ದರು. ಹಾಗೇನೇ, ನಾವು ಮೈಸೂರಲ್ಲಿದ್ದಾಗ ನನ್ನೆರಡು ಕಸಿನ್ಸ್ ನನ್ನ ಮಕ್ಕಳಿಗೆ ಇಂಥದ್ದೇ ಇನ್ನೊಂದೇನೋ ಸೇರಿಸಿ ಮಾತಾಡೋದನ್ನು ಹೇಳಿಕೊಟ್ಟಿದ್ದರು. ಆದ್ರೆ, ಇವೆರಡೂ ಭಾಷೆಗಳು ನನ್ನ ನಿಲುಕಿಗೆ ಸಿಕ್ಕಿರಲೇ ಇಲ್ಲ. ಅವ್ರೆಲ್ಲ ಮಾಮೂಲು ವೇಗದಲ್ಲೇ ಈ ಹೊಸ ಉಚ್ಚಾರಗಳನ್ನು ಉದುರಿಸುವಾಗ ಸುಮ್ಮನೇ ಬೆಪ್ಪಿಯಂತೆ ನೋಡುತ್ತಿದ್ದೆ, ನಕ್ಕುಬಿಡುತ್ತಿದ್ದವು ಮಕ್ಕಳು... ಆ ನಗುವ ಖುಷಿ ಮಾತ್ರ ಮಾಸಿಲ್ಲ.

sunaath ಹೇಳಿದರು...

ವಿಕಾಸ,
ನಿಮ್ಮ ರಹಸ್ಯಲಿಪಿ ಚೆನ್ನಾಗಿದೆ.
ನಾನೂ ಸಹ ಕಾಲೇಜಿನಲ್ಲಿದ್ದಾಗ,ನನ್ನ ಗೆಳೆಯನ ಜೊತೆಗೆ ರಹಸ್ಯಲಿಪಿಯೊಂದನ್ನು ರೂಪಿಸಿಕೊಂಡು ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದೆವು.
ಆ ಪುಣ್ಯಾತ್ಮ ದುರ್ಘಟನೆಯೊಂದರಲ್ಲಿ ತೀರಿಕೊಂಡಿದ್ದರಿಂದ ನನ್ನ ರಹಸ್ಯಲಿಪಿ ಈಗ ನಿರುಪಯೋಗಿಯಾಗಿದೆ.

Anand ಹೇಳಿದರು...

ವಿಕಾಸರವರೆ

ಓ ನೀವು ರಹಸ್ಯ ಲಿಪಿಯಲ್ಲಿ ಉನ್ನತ ವ್ಯಾಸಂಗಕ್ಕಾಗಿ BE (Mechanical) ಮಾಡಿದ್ರಾ