ಪುಟಗಳು

ಶುಕ್ರವಾರ, ಡಿಸೆಂಬರ್ 19, 2008

ಕವಿತೆಗಳು ಮತ್ತು ನಾನು

"Most people ignore most poetry because most poetry ignores most people." - Adrian Mitchell

ಅಪರಾತ್ರಿಯಲ್ಲಿ ಏನೋ ಓದುತ್ತಾ ಕುಳಿತಿರುವಾಗ ಈ ಸಾಲಿಗೆ ಎಡವಿದೆ. ತಮಾಷೆ ಎನಿಸಿತು. ನಿಜವೂ ಅನ್ನಿಸಿತು!

ಈ ಸಾಲು ನನಗೆ ವೈಯಕ್ತಿಕವಾಗಿ ಕವನಗಳ ಮೇಲೆ ಆಸಕ್ತಿ ಕಡಿಮೆ ಇರುವುದಕ್ಕೆ ವಿವರಣೆ ಒದಗಿಸಿತಾ? ಗೊತ್ತಿಲ್ಲ. ಮೊದಲಿಂದಲೂ ನನ್ನನ್ನು ಯಾವುದೇ ರೀತಿಯ ಕವನಗಳೂ ಕೂಡ ಅಷ್ಟಾಗಿ ಸೆಳೆದದ್ದೇ ಇಲ್ಲ. ನನ್ನಂತೆಯೇ ಬಹಳ ಜನಕ್ಕೂ ಕೂಡ ಹಾಗೆಯೇ. ಅದು ಏಕೆ ಹಾಗಿರಬಹುದು ಅಂತ ಮತ್ತೊಮ್ಮೆ ಯೋಚಿಸುವಂತೆ ಮಾಡಿತು ಈ ಸಾಲು.

ಮೂಲತಃ ಈ ಕವನಗಳು ಯಾವುದಾದರೊಂದು ವಿಷಯದ ಬಗ್ಗೆ ಸಂಕೀರ್ಣವಾದ ರೀತಿಯಲ್ಲಿ ಹೇಳಲು ಅತಿಯಾದ ಪ್ರಯತ್ನವನ್ನು ಮಾಡುತ್ತವೆ. ನಿಜವಾಗಿಯೂ ಅದನ್ನು ರಚಿಸಿದವರು ಏನು ಹೇಳಲು ಹೊರಟಿದ್ದಾರೆ ಅಥವಾ ಏನು ಹೇಳುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಒಂದು ಬೇರೆಯದೇ ತರನಾದ ಮನಃಸ್ಥಿತಿ, ಭಾವ ಬೇಕಾಗುತ್ತದೆ ಅನಿಸುತ್ತದೆ. ಅದು ಗದ್ಯದಂತೆ ಸರಳ, ನೇರ ಹಾಗೂ ಸುಮ್ಮನೇ ಓದಿಬಿಡುವಂತದ್ದಲ್ಲ.

ನನ್ನನ್ನು ಹಿಡಿದಿಟ್ಟ ತೀರ ಕೆಲವು ಕವನಗಳೆಂದರೆ ಹಾಸ್ಯ, ಪ್ರಾಸದಿಂದ ಕೂಡಿದಂತವು. ಜೊತೆಗೆ ಕೆಲವೇ ಕೆಲವು ನೇರ ಅರ್ಥ ಕೊಡುವಂತಹ ಕವನಗಳು.

ಇದರರ್ಥ ಬೇರೆ ರೀತಿಯ ಕವನಗಳು ಅಥವಾ ಒಟ್ಟಾರೆ ಕಾವ್ಯ ಎನ್ನುವುದನ್ನು ಹೀನೈಸುವುದಲ್ಲ ಅಥವಾ ಕವಿತೆಗಳೆಂದರೆ ಅರ್ಥವಿಲ್ಲದವು ಎಂದಲ್ಲ. ಎಷ್ಟೋ ಪುಟಗಳಲ್ಲಿ ಬರೆಯಬೇಕಾದ ಅಥವಾ ಎಷ್ಟೇ ಪುಟಗಳಲ್ಲೂ ಸಹ ಬರೆಯಲಾಗದ ಭಾವನೆಗಳನ್ನು, ವಿಷಯಗಳನ್ನು ಅದಕ್ಕಿಂತ ಪರಿಣಾಮಕಾರಿಯಾಗಿ ಪುಟ್ಟ ಪುಟ್ಟ ಕೆಲವು ಸಾಲುಗಳಲ್ಲೇ ಮೂಡಿಸಿಬಿಡುವಂತಹದೇ ಈ ಕವನಗಳು. ಇಂತಹ ಕಲೆಯುಳ್ಳ, ಪ್ರತಿಭೆಯುಳ್ಳ ಹಲವಾರು ಜನರು ನಮ್ಮ ನಡುವೆ ಇದ್ದರು, ಇದ್ದಾರೆ ಎಂಬುದು ನಿಜ. ಆದರೆ in general ಆಗಿ ಇದೆಲ್ಲುದರ ಸಾರಾಂಶವನ್ನು ಮೊದಲು ಹೇಳಿದ ವಾಕ್ಯವು ಬಿಂಬಿಸುವಂತೆ ನನಗೆ ಅನಿಸಿದ್ದು ಮತ್ತದೇ ಆಸಕ್ತಿಯ ಕೊರತೆಯ ನೆಪವಿರಬಹುದು. :)

Cheers!

ಅಣ್ಣನ ಅನಿಸಿಕೆ ನನ್ನ ಅನಿಸಿಕೆ ಕೂಡ: Subject  from Mahesh Hegade's Blog - 'Poetry'

14 ಕಾಮೆಂಟ್‌ಗಳು:

shivu K ಹೇಳಿದರು...

ವಿಕಾಸ್,

ಕವನದ ಬಗ್ಗೆ ನಿಮ್ಮ ಅಭಿಪ್ರಾಯ ಸರಿಯಾಗಿದೆ. ಅದು ನನ್ನದು ಕೂಡ. ಕೆಲವು ಕ್ಲಿಷ್ಟ ಕವಿತೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಕಷ್ಟ. ಬರೆದವರ ಉದ್ದೇಶವೇನಿರುತ್ತದೆ ಗೊತ್ತಾಗುವುದಿಲ್ಲ. ಅದು ಅವರಿಗೆ ಮಾತ್ರ ಅರ್ಥವಾಗಲಿ ಅಂತಲೋ ಇತರರಿಗೆ ಅರ್ಥವಾಗದಿದ್ದಾಗ ತಾವು ಮೇದಾವಿಗಳು ಅಂತ ತೋರಿಕೆಯೋ ತಿಳಿಯದು. ಇದೆಲ್ಲಾವನ್ನು ಬಿಟ್ಟು ನನಗೂ ಕೆಲವು ಸರಳವಾದ ಮಾನವೀಯ ಸಂಭಂದಿ ಕವನಗಳು, ಕಲ್ಪನೆ, ಕನಸುಗಳ ಕವನಗಳು ಇಷ್ಟವಾಗುತ್ತ್ವವೆ.

ಸಂದೀಪ್ ಕಾಮತ್ ಹೇಳಿದರು...

ನಂದೂ ಇದೇ ಕೇಸು!
ನೀನು ಹೇಳಿದ ಹಾಗೆ ಕ್ಲಿಷ್ಟಕರವಾಗಿ ಬರೆಯೋದೆ ಕವಿತೆ ಅಂದುಕೊಂಡಿದ್ದಾರೆ ಜನ.

ನನಗಂತೂ ಸಿನೆಮಾ ಹಾಡುಗಳೆ ಇಷ್ಟ ಆಗುತ್ತೆ.ಬಹುಷ ಸಂಗೀತವೂ ಸೇರಿರೋದ್ರಿಂದ ಇರ್ಬೇಕು.

’ಯಾವ ಮೋಹನ ಮುರಳಿ ಕರೆಯಿತು’ ಹಾಡು ಓದೋದಕ್ಕಿಂತ ’ಅಮೆರಿಕ ಅಮೆರಿಕ ’ ಚಿತ್ರದಲ್ಲಿ ಆ ಹಾಡು ಕೇಳೋಕೆ ಖುಷಿಯಾಗುತ್ತೆ ನಂಗೆ(ಓಹ್ ಖುಷಿ ಅಂದ್ನಾ?? sad song ಅಲ್ವಾ ಅದು!)

shreeshum ಹೇಳಿದರು...

ನನ್ನ ಪಾಲಿಗೂ ಕವನ
ಮರಗಳಿಲ್ಲದ ವನ
ನಾನೂ ಹೇಳುವೆ ನ

ಶಾಂತಲಾ ಭಂಡಿ ಹೇಳಿದರು...

ವಿಕಾಸ...
ಗದ್ಯ ಊಟವಿದ್ದಂತೆ, ಪದ್ಯ ಮಾತ್ರೆಯ ಹಾಗೆ ಅಂತ ಬಲ್ಲವರು ಹೇಳುತ್ತಾರೆ.
ಆಯಾ ರೋಗಗಳಿಗೆ ಅದದೇ ಮಾತ್ರೆಗಳೇ ಸೂಕ್ತವಾಗುವ ಹಾಗೆ ಆಯಾ ಮನಸ್ಸಿಗೆ ಅಂತಹದೇ ಪದ್ಯ ಇಷ್ಟವಾಗುತ್ತದೆ.
ಗದ್ಯ ತನ್ನನ್ನು ತಾನೇ ವಿವರಿಸಿಕೊಳ್ಳುತ್ತ ತಾನೇ ಅರ್ಥಕೊಟ್ಟುಕೊಳ್ಳುತ್ತದೆ. ಅದೇ ಪದ್ಯ ಅಥವಾ ಗದ್ಯಶೈಲಿಯ ಪದ್ಯ/ಕಾವ್ಯ ತನ್ನನ್ನು ತಾನಾಗೇ ವಿವರಿಸಿಕೊಳ್ಳದೆ ಅರ್ಥವನ್ನು ಅವರವರ ಭಾವಕ್ಕೆ ಬಿಟ್ಟು ತಿರುಳನ್ನು ರಚನೆಕಾರನೊಳಗೇ ಉಳಿಸಿ ಸುಮ್ಮನಿದ್ದುಬಿಡುತ್ತದೆಯಲ್ಲದೆ ಅಲ್ಲಿ ತನ್ನ ವಿಶೇಷತೆಯನ್ನು ಕಾಯ್ದುಕೊಳ್ಳುತ್ತದೆ. ಗದ್ಯ ರಚನೆಗೆ ಯಾವುದೇ ಚೌಕಟ್ಟಿಲ್ಲ, ಆದರೆ ಗದ್ಯದ ಅರ್ಥಕ್ಕೆ ಚೌಕಟ್ಟಿದೆ, ಅದೇನು ಅರ್ಥ ಹೇಳಿಕೊಳ್ಳುತ್ತದೆಯೋ ಅಷ್ಟೇ ಅರ್ಥಕ್ಕೆ ಸೀಮಿತವಾಗಿಬಿಡುತ್ತದೆ. ಆದರೆ ಪದ್ಯ ರಚನೆಗೆ ಚೌಕಟ್ಟಿದೆಯೇ ಹೊರತಾಗಿ ಅದರ ಅರ್ಥಕ್ಕಿಲ್ಲ. ಪದ್ಯದ ಅರ್ಥ ವ್ಯಾಪ್ತಿ ಓದುಗನ ಮನಸ್ಸಿನ ವಿಶಾಲತೆಯ ವಿಸ್ತಾರದುದ್ದಕ್ಕೂ ಹಬ್ಬಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಗದ್ಯ ಎಷ್ಟೇ ಅರ್ಥಕೊಟ್ಟರೂ ಲೇಖಕನ ಅರ್ಥಕ್ಕೆ ಮೀರಿ ಮುನ್ನಡೆಯುವುದಿಲ್ಲ. ಆದರೆ ಪದ್ಯದ ಅರ್ಥ ಓದುಗನ ಸ್ವಂತದ್ದಾಗಿ ಅರಗಿಸಿಕೊಳ್ಳುತ್ತಾ ಹೋದಂತೆ ಓದುಗನಿಗೆ ತನ್ನದೇ ಅರ್ಥವನ್ನು ಕಲ್ಪಿಸಿಕೊಳ್ಳುವ ಸ್ವಾತಂತ್ರ್ಯ ಕೊಡುತ್ತದೆ. ಅದಕ್ಕೇ ಪದ್ಯ ಇಷ್ಟಪಟ್ಟು ಓದುವವರಿಗೆ ಗದ್ಯಕ್ಕಿಂತ ಖುಷಿಕೊಡುತ್ತದೆ, ತನ್ನ ಜೊತೆಯಾಗುತ್ತದೆ.

ಪದ್ಯಗಳು ಇಷ್ಟವಾಗೋಲ್ಲ ಅಂತ ಯಾರಾದರೂ ಹೇಳಿದರೆ ನಂಗೆ ಏನೆನ್ನಿಸುತ್ತದೆ ಗೊತ್ತಾ? ಚಾಕಲೇಟ್ ಇಷ್ಟವಿಲ್ಲ ಅಂತ ಹಟಮಾಡುವ ಮಗುವಿನ ಹಾಗೆ ಕಾಣಿಸುತ್ತಾರೆ.
‘ಕವಿತೆ ಅರ್ಥವಾಗೋಲ್ಲ’ ಅನ್ನುವ ಭಾವವನ್ನಿಟ್ಟುಕೊಂಡೇ ತುಂಬ ಜನ ಕವಿತೆಯನ್ನು ಓದುತ್ತಾರೆ, ಆ ಭಾವನೆಯೇ ಕವಿತೆಯ ಅರ್ಥವನ್ನು ಅವರ ಮನದಲ್ಲಿ ಮೂಡಿಸುವುದೇ ಇಲ್ಲವೇನೋ ಅಂತನ್ನಿಸುತ್ತದೆ . ‘ಕವಿತೆ ಅರ್ಥವಾಗೋಲ್ಲ’ ಅನ್ನುವ ಮನೋಭಾವನೆ ಮೊದಲು ದೂರವಾಗಬೇಕು, ಆಗ ಕವಿತೆ ಹಾಗೂ ಅದರ ಅರ್ಥ ನಮಗೆ ಹತ್ತಿರವಾಗುತ್ತದೆ.

ಬಿಳಿಹಾಳೆಯ ಮೇಲೆ ಅಕ್ಷರ ಮೂಡಿಸುವ ಲೇಖನಿಯೊಂದರಲ್ಲಿ ಮೇಜಿನ ಮೇಲೆ ತಿರುಗುತ್ತ ನರ್ತಿಸುವ ನಾಣ್ಯವೊಂದರ ಹೋಲಿಕೆಯ ಕಲ್ಪನೆ ಮೂಡುವ ಮನವಿರುವ ಲೇಖಕನೊಬ್ಬ ‘ಕವಿತೆ ಅರ್ಥವಾಗುವುದಿಲ್ಲ’ ಅಂತ ಹೇಳಿದರೂ ಆ ಲೇಖಕನೊಳಗಿರುವ ಕವಿ ಜೀವಂತವಾಗಿಯೇ ಇರುತ್ತಾನೆ.

ಒಂದು ಕವಿತೆಯನ್ನು ಇಷ್ಟಪಟ್ಟು ಓದಿ ನೋಡು, ಇಷ್ಟವಾಗದಿದ್ದರೆ ಹೇಳು :-)

ಪ್ರೀತಿಯಿಂದ,
-ಅಕ್ಕ.

ಅನಾಮಧೇಯ ಹೇಳಿದರು...

where is the old post? Why u deleted it?

nidhi

ಚಿತ್ರಾ ಕರ್ಕೇರಾ ದೋಳ್ಪಾಡಿ.. ಹೇಳಿದರು...

ಎಷ್ಟು ಓದಿದ್ರೂ ತಲೆಗೆ ಹೋಗದ ಕವನಗಳನ್ನು ಓದಿ ಸುಮ್ನೆ ಯಾಕೆ ಸಮಯ ವ್ಯರ್ಥ ಮಾಡೋದು. ಏನಿದ್ರೂ ಸರಳ ಕವನಗಳು...ಅದ್ರಲ್ಲೂ ಬೇಜಾರು ಹಾಡುಗಳು ನಂಗಿಷ್ಟ. ಈಗ ಕವನಗಳೆಂದರೆ ಜನರಿಗೆ ಅರ್ಥವಾಗದ ಹಾಗೆ ಬರೆಯೋದು ಅಂದುಕೊಳ್ಳುವವರೇ ಹೆಚ್ಚು. ಇನ್ನು ಸಿನಿಮಾ ಹಾಡುಗಳು ಏನಿದ್ರೂ...ರೋಡಿಗಿಳಿ ರಾಧಿಕಾ..ಸೊಂಟ ಸೂಪರ್ರು..! ಆದ್ರೂ ಮುಂಗಾರು ಮಳೆ ಬಂದ ಮೇಲೆ 'ನಿಧಾನವಾಗಿ' ತೆವಳುವ ಹಾಡುಗಳು, ಕೆಲವೊಂದು ಒಳ್ಳೆ ಹಾಡುಗಳು ಬಂದಿರುವುದನ್ನು ಅಲ್ಲಗಳೆಯುವಂತಿಲ್ಲ.
-ತುಂಬುಪ್ರೀತಿ,
ಚಿತ್ರಾ

ಅಂತರ್ವಾಣಿ ಹೇಳಿದರು...

ವಿಕಾಸ್,
ಕವಿ ಮನಸ್ಸು ಕೆಲವೊಮ್ಮ ಅರ್ಥವಾಗೋದು ಕಷ್ಟ. ಎಷ್ಟೋ ಕವನಗಳಿಗೆ ಅನೇಕ ಜನರು ಅನೇಕ ರೀತಿ ಅರ್ಥ ಮಾಡಿಕೊಳ್ಳ ಬಹುದು.
ಉದಾ: "ಬಾನಲ್ಲು ನೀನೆ.. ಭುವಿಯಲ್ಲು ನೀನೆ" -> ಇದು ಪ್ರಿಯತಮನಿಗೆ / ಪ್ರಿಯತೆಮೆಗೆ / ದೇವರಿಗಾದರು ಅನ್ವಯವಾಗುತ್ತೆ.

"most poetry ignores most people." - ಈ ಮಾತನ್ನು ನಾ ಒಪ್ಪೋದಿಲ್ಲ. ಕವನವನ್ನು ಅರ್ಥ ಮಾಡಿಕೊಳ್ಳದೆ ಜನರು ಕವನಗಳನ್ನು ignore ಮಾಡುತ್ತಾರೆ.

Harish - ಹರೀಶ ಹೇಳಿದರು...

ಸರಿ...

ವಿಕಾಸ್ ಹೆಗಡೆ ಹೇಳಿದರು...

ಶಿವು, ಪ್ರತಿಕ್ರಿಯೆಗೆ ಧನ್ಯವಾದಗಳು

ಸಂದೀಪ್, ನಿಜ. ಸುಮಾರು ಕವನಗಳು ಜನರಿಗೆ ಪರಿಚಿತವಾದದ್ದೇ ಸಂಗೀತ ಬೆರೆತಮೇಲೆ.

ಶ್ರೀಶಂ, thanx

ಶಾಂತಲಕ್ಕ, ನೀ ಹೇಳಿದ್ದನ್ನೆಲ್ಲಾ ಸುಮ್ಮನೇ ಓದಿಕೊಂಡೆ. ಅರ್ಥವಾಯ್ತು. ಇನ್ಮುಂದೆ ಇಷ್ಟಪಟ್ಟು ಓದೋಕ್ಕಾಗತ್ತಾ ನೋಡ್ತೀನಿ. ಧನ್ಯವಾದಗಳು.

ಚಿತ್ರಾ, ಪ್ರತಿಕ್ರಿಯೆಗೆ ಧನ್ಯವಾದಗಳು

ಅಂತರ್ವಾಣಿ, ಹೌದು. ನನಗೂ ಕೂಡ ಆ ಸಾಲು ೧೦೦% ನಿಜ ಅಂತ ಅನ್ನಿಸಿಲ್ಲ. ಸುಮ್ನೆ ಯೋಚನೆ ಬಂದದಷ್ಟೆ ಹೀಗೆ. thanx

ಹರೀಶ, thanx , ಆದ್ರೆ ಎಂತ ಸರಿ? :)

ತೇಜಸ್ವಿನಿ ಹೆಗಡೆ- ಹೇಳಿದರು...

ವಿಕಾಸ್,

ಆಸಕ್ತಿ ಅನಾಸಕ್ತಿ ಅವರವರ ಮನಸಿಗೆ ಸಂಬಂಧಿಸಿದ್ದು. ನಮಗೆ ಒಂದು ವಿಷಯದಲ್ಲಿ ಆಸಕ್ತಿ ಇಲ್ಲದಿದ್ದರೆ. ಪ್ರಯತ್ನ ಪಟ್ಟಿ ಆಸಕ್ತಿ ತರುವುದು ಸಲ್ಲ. ಅದು ಅಪ್ರಯತ್ನವಾಗಿದ್ದರೆ ಒಳಿತು. ಇನ್ನು ನಮಗೆ ಅನಾಸಕ್ತಿ ಇರುವ ವಿಷಗಳೆಲ್ಲಾ ಕ್ಲಿಷ್ಟಕರವೆಂದೋ.. ಆ ವಿಷಯವೇ ಸರಿಯಾಗಿಲ್ಲವೆಂದೋ ಅಳೆಯುವುದು ತಪ್ಪು. ಅಭಿಪ್ರಾಯ ಯಾವತ್ತೂ ವೈಯಕ್ತಿಕವಾಗಿರುತ್ತದೆ. ಹಾಗಾಗಿ ನಾನು ಶಂಕರ್ ಅವರ ಮಾತನ್ನು ಸಂಪೂರ್ಣ ಒಪ್ಪುತ್ತೇನೆ.(ನೀನೂ ಒಪ್ಪಿರುವೆ:) )

ನಿನಗೆ ಕವನಗಳಲ್ಲಿ ಆಸಕ್ತಿ ಇಲ್ಲದಿದ್ದರೆ ಓದಬೇಡ. ಯಾವತ್ತು ಓದಬೇಕೆಂದು ಅನಿಸುವುದೋ ಆವತ್ತು ಆಸಕ್ತಿ ತನ್ನಿಂದ ತಾನೇ ಬರುವುದು. ಅಲ್ಲಿಯವರೆಗೂ ವಿಕಾಸವಾದ-ದಲ್ಲಿ ವಾದವನ್ನು ಕಾಣಿಸುತ್ತಿರು. ಒಂದೆಲ್ಲಒಂದು ದಿನ ಕವನ ವಿಕಸನವೂ ಆಗಬಹುದು. ಯಾರು ಬಲ್ಲರು???!!! :)

mruganayanee ಹೇಳಿದರು...

ಕವಿತೆ ಅರ್ಥವಾಗುವುದಿಲ್ಲ ಎನ್ನುವ ಮಾತೇ ಇಲ್ಲ. ಅರ್ಥವಾದಷ್ಟೇ ಕವಿತೆ.
ಕವಿತೆ ಭಾವಗಳನ್ನು ಮುಟ್ಟುತ್ತದೆ, ಅರ್ಥವಾಗಲಿಲ್ಲ ಅಂದುಕೊಂಡರೂ. ಅಷ್ಟಾದರೆ ಕವಿತೆ ಗೆದ್ದಂತೆ.

ವಿಕಾಸ್ ಹೆಗಡೆ ಹೇಳಿದರು...

@ನಯನಿ, ಇದೂ ಅರ್ಥಾಗ್ಲಿಲ್ಲ ನೋಡು :)

@ನಿಧಿ, ಸುಮ್ನೆ ಯಾಕೋ ಬ್ಯಾಡ ಅನ್ನಿಸ್ತು .

sunaath ಹೇಳಿದರು...

Poetry touches people and most poetry touches most people.

ವಿಕಾಸ್ ಹೆಗಡೆ ಹೇಳಿದರು...

@ಕಾಕಾ
:-) may be ! thanx