ಪುಟಗಳು

ಬುಧವಾರ, ಡಿಸೆಂಬರ್ 31, 2008

ಅಂತೂ ಸಾಧಿಸಿದೆ ’ಮೌನವ್ರತ’ !

ಮೊನ್ನೆ ಡಿಸೆಂಬರ್ ೨೫ ಕ್ಕೆ ಬಹುದಿನಗಳ ಒಂದು ಕನಸು ಈಡೇರಿತು. ಇದಕ್ಕಾಗಿ ಸುಮಾರು ವರ್ಷಗಳಿಂದ ಪ್ರಯತ್ನ ಪಟ್ಟಿದ್ದೆ. ಅಷ್ಟಕ್ಕೂ ಇದು ಚಂದ್ರಯಾನದಂತಹ ದೊಡ್ಡ ಕನಸಲ್ಲ. ಒಂದೇ ಒಂದು ಚಿಕ್ಕ ಪ್ರಯೋಗವಷ್ಟೆ. ಅದೇನೆಂದರೆ ಒಂದಿಡೀ ದಿನ ಒಂದು ಶಬ್ದವನ್ನೂ ಮಾತಾಡದೇ ಉಳಿದುಬಿಡುವುದು. ಅದರರ್ಥ ಒಂದು ದಿನದ ಮೌನವ್ರತ!

ಹೌದು. ಈ ಒಂದು ದಿನದ ಮೌನವ್ರತ ಮಾಡಬೇಕೆಂದು ಯಾವಾಗಲೋ ಅಂದುಕೊಂಡಿದ್ದೆ. ಇಷ್ಟು ದಿನಗಳಾದರೂ ಸಾಧ್ಯವಾಗಿರಲಿಲ್ಲ. ಈ ಮೌನವ್ರತವೆಂದರೆ ಯಾರಜೊತೆಯೂ ಮಾತಾಡದೇ ಇದ್ದು ಬಿಡುವುದು ಮಾತ್ರವಲ್ಲ, ಬದಲಾಗಿ ನಮ್ಮೊಳಗಿನ ’ಅವನ’ ಜೊತೆ ಮಾತಾಡಿಕೊಳ್ಳುವುದಂತೆ! ಇದ್ಯಾಕೋ ಅರ್ಥವಾದಂತೆ ಕಂಡರೂ ಅದು ಅರ್ಥವಾಯಿತೆನಿಸಿರಲಿಲ್ಲ. ಸ್ವಾಮೀಜಿಗಳು, ಆಧ್ಯಾತ್ಮ ಜೀವಿಗಳು ಮತ್ತು ಕೆಲವು ಲೌಕಿಕರೂ ಕೂಡ ಈ ಮೌನವ್ರತ ಮಾಡುತ್ತಾರೆ. ಕೆಲವರದ್ದು ಕೆಲವು ಗಂಟೆಗಳಾಗಿದ್ದರೆ ಇನ್ನು ಕೆಲವರದ್ದು ಕೆಲವು ದಿನಗಳವರೆಗೆ. ಮತ್ತೂ ಕೆಲವರದ್ದು ವಾರದಲ್ಲಿ ಅಥವಾ ತಿಂಗಳಲ್ಲಿ ಇಂತಹ ನಿರ್ದಿಷ್ಟ ದಿನ ಎನ್ನುವಂತದ್ದು. ರಾಮಕೃಷ್ಣ ಹೆಗಡೆಯವರು ಜನತಾದಳದಿಂದ ಉಚ್ಛಾಟಿತರಾದಾಗ ತೀವ್ರ ಬೇಸರಗೊಂಡು ೪೦ ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ವಾರಕ್ಕೊಂದು ದಿನದ ಮೌನವ್ರತವನ್ನು ಮುರಿದು ತಮ್ಮ ನೋವನ್ನು , ಅದಕ್ಕೆ ಕಾರಣಾದವರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದರಂತೆ !

ನನ್ನ ಮೌನವ್ರತಕ್ಕೆ ಯಾವುದೇ ಆಧ್ಯಾತ್ಮಿಕ ಉದ್ದೇಶವಂತೂ ಇರಲಿಲ್ಲ. ಅದೇನಿದ್ದರೂ ಒಂದು ವೈಯಕ್ತಿಕ ಅಪ್ಪಟ ಕುತೂಹಲದ ಪ್ರಯೋಗ ಮಾತ್ರವಾಗಿತ್ತು. ಮನೆಯಲ್ಲಿದ್ದಾಗ ಅಪ್ಪ ಅಮ್ಮ ಮಕ್ಕಳು ಮರಿ ಅವರು ಇವರು ಎಂದು ಸುತ್ತಮುತ್ತ ಎಲ್ಲರೂ ಇರುತ್ತಿದ್ದುದರಿಂದ ಇಡೀ ದಿನ ಮೌನವಾಗಿರಲು ಸಾಧ್ಯವಿಲ್ಲವೆಂದು ಗೊತ್ತಿದ್ದರಿಂದ ಪ್ರಯತ್ನಿಸಲು ಹೋಗಿರಲಿಲ್ಲ. ಹಾಸ್ಟೆಲಿನಲ್ಲಿದ್ದಾಗಂತೂ ಅದು ಕನಸೇ ಹೌದು. ಬೆಂಗಳೂರು ಸೇರಿಕೊಂಡ ಮೇಲೆ ಒಂದು ದಿನ ಸಾಧಿಸಿಬಿಟ್ಟೆ ಎನ್ನುವಷ್ಟರಲ್ಲಿ ಮುರಿದಿದ್ದೆ. ಮೊಬೈಲ್ ಫೋನು ಆಫ್ ಮಾಡಿಟ್ಟು ಸಂಜೆಯವರೆಗೆ ತೆಪ್ಪಗಿದ್ದವನು ಒಂದು ರೌಂಡು ಲೈಬ್ರರಿಗೆ ಹೋಗಿ ಬರೋಣವೆಂದು ಹೊರಟು ರಸ್ತೆಯಲ್ಲಿ ಬೈಕಿಗೆ ಯಾವನೋ ಅಡ್ಡಬಂದು ಆಯಾಚಿತವಾಗಿ ಮಾತು ಹೊರಬಂದು ಮೌನವ್ರತವು ಮರೆತು ಹೋಗಿ ಬೇರೇನೋ ಆಗಿಹೋಗಿತ್ತು. ಈಗ್ಯಾಕೆ ಸುಮ್ನೆ ಇದೆಲ್ಲಾ, ಮುಂದೆ ಮದುವೆಯಾದಮೇಲೆ ಮಾಡಿದರಾಯಿತು ಅನ್ನಿಸಿದ್ದೂ ಇದೆ. ಆದರೂ ತೀರ ಒಂದಿಡೀ ದಿನ ಮೂಕನಂತೆ ಇರುತ್ತೇನೆಂದರೆ ಹೆಂಡತಿಯಾದವಳು ತಲೆ ಮೇಲೆ ಮೊಟಕಿದರೆ ಕಷ್ಟ ಎನಿಸಿತ್ತು. ದಿನವೂ ಪ್ರೀತಿ ಮಾಡಲು ಅಥವಾ ಜಗಳಾಡಲಾದರೂ ಸ್ವಲ್ಪವಾದರೂ ಮಾತಾಡಲೇ ಬೇಕಾಗುತ್ತದೆ ಎಂದು ಸುಮ್ಸುಮ್ನೇ ಗೊತ್ತಿಲ್ಲದ ಕಲ್ಪನೆ!  ಅದು ಬಿಡಿ. ಈ ಮೌನವ್ರತಕ್ಕೆ ಒಂದು ಏಕಾಂತ ಬೇಕು. ಇನ್ನೊಬ್ಬರ ಜೊತೆ ಇರುವಾಗ ಅಥವಾ ಎಲ್ಲರೂ ಇರುವಾಗ ಮೌನವ್ರತ ಮಾಡಿದರೆ ಅದು ಅವರಿಗೆ ಒಂದು ರೀತಿ ಕಿರಿಕಿರಿಯೆನಿಸುವುದು ಸಹಜ. ಆದ್ದರಿಂದ ಸಂದರ್ಭಕ್ಕಾಗಿ ಕಾಯುತ್ತಿದ್ದೆ. ಮೊದಲೂ ಕೆಲವೊಮ್ಮೆ ಸರಿಯಾದ ಸಂದರ್ಭ ಸಿಕ್ಕಿತ್ತೇನೋ, ಆದರೆ ಆವಾಗ ನನಗೆ ಮೌನವ್ರತದ ನೆನಪೇ ಬಂದಿರಲಿಲ್ಲ.

ಈ ಸಾರ್ತಿ ದೂರದೇಶವೊಂದರಲ್ಲಿ ಅಪರಿಚಿತ ಜನಗಳ ಮಧ್ಯೆ ಅವರ ಭಾಷೆ ತಿಳಿಯದ ನಾನು ಇದ್ದೆ. ಆಫೀಸಿನಲ್ಲಿ ಬೇಕಾದಷ್ಟೆ ಮಾತು, ಹೋಟೇಲಿನಲ್ಲಿ ನಾಲ್ಕು ಮಾತು, ಹೊರಗೆಲ್ಲಾದರೂ ಹೋದರೆ ಅಗತ್ಯವಿದ್ದರಷ್ಟೇ ಬಂದಷ್ಟು ಮಾತು. ಮೌನವ್ರತಕ್ಕೆ ಒಳ್ಳೆಯ ವಾತಾವರಣ ಕಲ್ಪಿಸಿಕೊಟ್ಟಿತ್ತು. ಆದ್ದರಿಂದ ಡಿಸೆಂಬರ್ ೨೫ನ್ನು ಇದಕ್ಕೆ ಆರಿಸಿಕೊಂಡೆ. ಆಫೀಸು ರಜ. ಬೇರೆಲ್ಲಾ ರಜ. ಹೋಟೇಲಿನ ರೂಮು ನನ್ನ ಕಾರಸ್ಥಾನವಾಗಿತ್ತು. ಸರಿ, ಫೋನು ಆಫ್ ಮಾಡಿಟ್ಟೆ. ಬೆಳಗ್ಗೆ ಎದ್ದವನು ಹೋಟೆಲ್ ರಿಸೆಪ್ಷನ್ ನಲ್ಲಿ ಕೇವಲ ಒಂದು ಸ್ಮೈಲು ಖರ್ಚು ಮಾಡಿ ಸೈಲೆಂಟಾಗಿ ಒಂದು ರೌಂಡ್ ವಾಕಿಂಗ್ ಹೋಗಿ ಬಂದು ತಿಂಡಿತಿಂದು ರೂಮಿನಲ್ಲಿ ಸೆಟ್ಲಾದೆ. ನಂತರ ಪುಸ್ತಕದಲ್ಲಿ ಮುಳುಗಿಹೋದೆ. ಅರ್ರೇ ಇವತ್ತು ಕ್ರಿಸ್ಮಸ್ ಎಂದು ನೆನಪಾಗಿ ನೋಡಿಕೊಂದು ಬರೋಣ ಆಚರಣೆ ಹೇಗಿರುತ್ತದೆ ಎಂದು ಹೊರಟೆ. ಎಲ್ಲಾ ರಸ್ತೆಗಳೂ ನಿರ್ಜನವಾಗಿದ್ದವು. ಅಂಗಡಿಗಳೆಲ್ಲವೂ ಬಾಗಿಲು ಹಾಕಿತ್ತು. ಎಲ್ಲರೂ ಚರ್ಚಿನಲ್ಲಿ ಸೆಟ್ಲಾಗಿದ್ದರೋ ಅಥವಾ ಮನೆಯಲ್ಲಿದ್ದರೋ ಗೊತ್ತಿಲ್ಲ. ಇಡೀ ನಗರ ಬಂದ್ ಆದಂತಿತ್ತು. ತಿರುಗಿ ಬಂದಾಗ ಹಸಿವಾಗುತ್ತಿತ್ತು. ಊಟದ ಸಮಯವಾಗಿತ್ತು. ಘಮ ಘಮ ಎಂದು ಎಂ.ಟಿ.ಆರ್ ಅನ್ನ ತಯಾರಾಯಿತು. ಉಂಡು ಮಲಗಿದೆ. ಕುಡಿದು ಮಲಗಿದಂತಹ ನಿದ್ದೆ! ಸಂಜೆ ಎದ್ದೆ. ಚಾಟಿಂಗ್ ಮಾಡುವುದರಿಂದ ಮೌನವ್ರತಕ್ಕೇನು ತೊಂದರೆಯಾಗುವುದಿಲ್ಲ ಎಂದುಕೊಂಡು ಅಳುಕಿನಿಂದಲೇ ಆನ್ ಲೈನ್ ಬಂದು ಹರಟಿದೆ. ರಾತ್ರಿ ಊಟ, ಮತ್ತೆ ಪುಸ್ತಕದೊಂದಿಗೆ ಕೊನೆಗೊಂಡಿತ್ತು ಆ ದಿನ! ಎಷ್ಟು ಸರಳವಾಗಿ ಕಳೆದುಹೋಗಿತ್ತೆಂದರೆ ಈ ದಿನಕ್ಕೆ ನಿಜವಾಗಲೂ ೨೪ ಗಂಟೆಯಿತ್ತಾ ಎಂದು ಆಶ್ಚರ್ಯವಾಗಿತ್ತು.! ಪುಣ್ಯಕ್ಕೆ ಯಾರೂ ನನ್ನನ್ನು ಮಾತಾಡಿಸಿರಲಿಲ್ಲ ಕೂಡ. ಮೌನವ್ರತ ಯಶಸ್ಸು ಕಂಡಿತ್ತು.

ಆದರೂ ಕೂಡ ನನಗೆ ಸ್ಥೂಲಶರೀರದ ಬಾಯಿಮಾತನ್ನಷ್ಟೇ ನಿಲ್ಲಿಸಲು ಸಾಧ್ಯವಾಗಿದ್ದು. ಮನಸು ಮಾತ್ರ ಮಾತಾಡುತ್ತಲೇ ಇತ್ತು. ನೂರಾರು ಯೋಚನೆಗಳು ತಲೆಯಲ್ಲಿ ಗಿರಕಿ ಹೊಡೆಯುತ್ತಲೇ ಇದ್ದವು. ಈ ಮನಸಿನ ಮಾತುಗಳನ್ನು ನಿಲ್ಲಿಸಲು ಸಾಧ್ಯವಾದಾಗ ಸೂಕ್ಷ್ಮಶರೀರದ ಜಾಗೃತಿ ಸಾಧ್ಯವಂತೆ. ಇದರ ಬಗ್ಗೆ ಇನ್ನೂ ತಿಳಿದುಕೊಳ್ಳಬೇಕಿದೆ. ಈ ವಿಷಯವಾಗಿ ಮತ್ತು ಮೌನವ್ರತದ ವಿಧಿವಿಧಾನಗಳ ಬಗ್ಗೆ, ನಿಯಮಗಳ ಬಗ್ಗೆ, ಪ್ರಯೋಜನಗಳ ಬಗ್ಗೆಯೂ ತಿಳಿದುಕೊಳ್ಳಬೇಕಿದೆ. ಬಲ್ಲವರಿಂದ ಮಾಹಿತಿ, ಮಾರ್ಗದರ್ಶನ ಅಪೇಕ್ಷಿಸುತ್ತಿದ್ದೇನೆ. ಈ ಬ್ಲಾಗ್ ಓದಿದವರಲ್ಲಿ ಯಾರಿಗಾದರೂ ಮೌನವ್ರತದ ಅಭ್ಯಾಸ, ಆಸಕ್ತಿ, ಮಾಹಿತಿ ಇದ್ದರೆ ದಯವಿಟ್ಟು ಇಲ್ಲಿ ಕಮೆಂಟಿನಲ್ಲಾದರೂ ಅಥವಾ ವೈಯಕ್ತಿಕವಾಗಿ ಇ ಮೇಲ್ ಮಾಡಿ ತಿಳಿಸಿ ಎಂದು ಕೋರುತ್ತಿದ್ದೇನೆ.

****************************************************************

ಎಲ್ಲರಿಗೂ ೨೦೦೯ ಹೊಸ ವರುಷದ ಶುಭ ಹಾರೈಕೆಗಳೊಂದಿಗೆ ೨೦೦೮ ರ ಬ್ಲಾಗ್ ಕ್ಯಾಲೆಂಡರ್ ಮಗುಚಿ ಹಾಕುತ್ತಿದ್ದೇನೆ.

****************************************************************

29 ಕಾಮೆಂಟ್‌ಗಳು:

sunaath ಹೇಳಿದರು...

ವಿಕಾಸ,
ಹೊಸ ವರ್ಷದ ಶುಭಾಶಯಗಳು.
ಹೊಸ ವರ್ಷದಾಗ ಮೌನವ್ರತ ಬ್ಯಾಡ ಬಿಡ್ರಿ.

ಅಮರ ಹೇಳಿದರು...

"ಮುಂದಿನ್ ವರ್ಸವಾದ್ರು ಬೆಂಗ್ಳೂರಿಗ್ ಬಾರಪ್ಪ" :P.... ಹೊಸ ವರುಷದ ಶುಭಾಶಯ ಮಿತ್ರ :)

ಅನಾಮಧೇಯ ಹೇಳಿದರು...

Vrata anta mADadidrU mauna nanna atyanta preetiya havyAsa. heege AgAga manasoLagU mAtADade maunavAgiddubiDO abhyAsa nanagide. idu nijavAGlU adBhuta relaxation kodatte. mattomme try mADi nODu.

HAPPY 2009! :)

- AKKA

ತೇಜಸ್ವಿನಿ ಹೆಗಡೆ- ಹೇಳಿದರು...

ವಿಕಾಸ್,

ನಿನಗೂ ಶುಭಾಶಯಗಳು. ಆರಾಮಿದ್ದೆ ಅಲ್ದಾ? ಇದ್ದಕಿದ್ದಂತೆ ಮೌನವ್ರತ, ಧ್ಯಾನ ಎಲ್ಲಾ ಶುರು ಮಾಡ್ಕಂಜೆ!!? ಒಂದ್ವೇಳೆ ಇನ್ನೊಂದ್ಸಲ ಮೌನವ್ರತ ಮಾಡಿದ್ರೆ ಯಾವ ದಿನ ಹೇಳಿ ಮೊದ್ಲೆ ಹೇಳು ನಂಗೆ.. ನಾ ತಪ್ಪದೇ ಆ ದಿನ ಫೋನ್ ಮಾಡ್ತಿ :)

ನಿಜಕ್ಕೂ ಇದೊಂದು ಒಳ್ಳೆಯ ಅಭ್ಯಾಸ. ಆಸಕ್ತಿಕರ ಅನಿಸ್ತು. ನಾ ಅಂತೂ ಸಧ್ಯಕ್ಕೆ ಮಾಡ್ವಾಂಗಿಲ್ಲೆ. ಅದಿತಿ ಒಪ್ಪಿಗೆ ಬೇಕು ನೋಡು :)

shreeshum ಹೇಳಿದರು...

ನಮ್ಮೊಳಗೂ ಮಾತನಾಡದಿರಲು ಸಾಧ್ಯವಾದರೆ ಅದು ನಿಜವಾದ ಮೌನವಂತೆ. ಅದು ಹಾಗೆಲ್ಲ ದಿನವಿಡಿ ಇರಲೂ ಸಾಧ್ಯವಿಲ್ಲವಂತೆ. ಆದರೂ ನಿಮ್ಮ ಪ್ರಯತ್ನ ಕಷ್ಟಸಾಧ್ಯದ್ದೇ. ಒಮ್ಮೆ ಬೆಂಗಳೂರಿಗೆ ಬಂದಮೇಲೂ ಹೀಗೊಂದು ಮೌನ ಇದ್ದು ನೋಡಿ. ನಮ್ಮವರು ಹತ್ತಿರ ಇದ್ದರೂ ಮಾತನಾಡದೆ ಇರುವುದು ಬಲು ಕಷ್ಟ. ಅದು ಸಾದ್ಯವಾದರೆ ಬಲು ಮಜ.
ಹಾಗೆಯೇ ಒಂದಿಡೀ ದಿವಸ ಉಪವಾಸವಿರುವುದರಲ್ಲಿಯೂ ಮಜ ಇದೆ.

shivu K ಹೇಳಿದರು...

ವಿಕಾಶ್,

ಹೊಸ ವರ್ಷದ ಶುಭಾಶಯಗಳು..

ನೀವು ಮಾಡಿದ ಮೌನ ವ್ರತ ಪೂರ್ಣವಾದ ಮೌನ ವ್ರತವಲ್ಲ. ಅದಕ್ಕೆ ಸಾಧನೆ ಬೇಕು. ಮೌನವೆಂದರೆ ಮಾತಿಗೆ ಮಾತ್ರವಲ್ಲದೆ ಮನಸ್ಸಿಗೂ ಮತ್ತು ಬುದ್ದಿಗೂ ಪೂರ್ತಿ ರಜೆ ಕೊಡಬೇಕು. ಅದಕ್ಕೆ ಕೆಲವು ದಿನಗಳ ತಿಂಗಳ ದ್ಯಾನ ಮತ್ತು ಪ್ರಾಣಯಾಮದ ಸಹಾಯ ಬೇಕು. ಅದನ್ನು ಮೊದಲು ಕಲಿಯಿರಿ. ನಂತರ ಮೌನವ್ರತ ಸಾಧನೆ ಸುಲಭ. ಅದರ ಬಗ್ಗೆ ನಿಮಗೆ ಮೇಲ್ ಮಾಡಿ ಅದಕ್ಕೆ ಬೇಕಾದ ಶಿಬಿರ, ತರಗತಿಯ ವಿಳಾಸವನ್ನು ತಿಳಿಸುತ್ತೇನೆ...ಆಯ್ತಾ !

ಅನಾಮಧೇಯ ಹೇಳಿದರು...

ningEnO aagirOdantu haudu...
Enaadru maaDko.
Siri

ಯಜ್ಞೇಶ್ (yajnesh) ಹೇಳಿದರು...

ವಿಕಾಸ, ಉತ್ತಮ ಪ್ರಯತ್ನ. ನಮ್ಮನ್ನು ನಾವು ಅರಿಯಲು ಆಗಾಗ್ಗೆ ಇಂತಹ ಮೌನವ್ರತಗಳ ಅವಶ್ಯಕತೆಯಿದೆ. ಆದರೆ ಅದನ್ನು ಪ್ರಯತ್ನಪಟ್ಟು ಮಾಡದೇ ಅದೊಂದು ಅಭ್ಯಾಸವಾದರೆ ಉತ್ತಮವೆಂಬುದು ನನ್ನ ವ್ಯಯಕ್ತಿಕ ಅನಿಸಿಕೆ. ಎಷ್ಟೋ ಜನ ನಾನು ಗಂಭೀರವಾಗಿರಬೇಕು ಅಂತ ಮನಸ್ಸಿಗೆ ಕಡಿವಾಣ ಹಾಕ್ಕೊಂಡಿರ್ತಾರೆ. ಬಲವಂತವಾಗಿ ನಮ್ಮನ್ನು ನಿಗ್ರಹಿಸಿಕೊಳ್ಳೋದ್ರಿಂದ ಎನೂ ಪ್ರಯೋಜನವಿಲ್ಲ.

ನನ್ನ ದೊಡ್ಡಪ್ಪ ಸುಮಾರು ನಲವತ್ತು + ವರ್ಷಗಳಿಂದ ಏಕಾದಶಿಯ ದಿನ ಮೌನವ್ರತ ಮತ್ತು ಉಪವಾಸ ಮಾಡ್ತಾಯಿದ್ದಾರೆ. ಧ್ಯಾನದ ಬಗ್ಗೆ ಸ್ವಲ್ಪ ಆಸಕ್ತಿ ಬಂದರೆ ಮೌನ ತಾನಾಗೆ ಬರುತ್ತದೆ.

ಅನಾಮಧೇಯ ಹೇಳಿದರು...

ಹೊಸ ವರ್ಷದ ಶುಭಾಶಯಗಳು ವಿಕಾಸ್!
ಓಹೋಹೋ.... ಮೌನವ್ರತ...ಹ್ಮ್ಮ್ ... ಒಳ್ಳೇದು.
ನಾನೂ ಆಗಾಗ ಪ್ರಯತ್ನ ಪಟ್ಟಿದ್ದಿದೆ. ಆದ್ರೆ ಮೌನ ನನ್ನಿಂದಾಗದ ಮಾತು! ;-)
ಹಾಗಾಗಿ ಹೊಸ ವರ್ಷದಿಂದ ಮಾತನ್ನೇ ಸ್ವಲ್ಪ ಕಡಿಮೆ ಮಾಡ್ಕೋಬೇಕು ಅಂದ್ಕೊಂಡಿದ್ದೀನಿ :) :)

-ವೈಶಾಲಿ
http://kenecoffee.wordpress.com/

ಚಿತ್ರಾ ಕರ್ಕೇರಾ ದೋಳ್ಪಾಡಿ.. ಹೇಳಿದರು...

ಹೊಸ ವರುಷದ ಶುಭಾಶಯಗಳು..ಎಲ್ಲಾ ವ್ರತ ಮುಗಿದು ಮೌನವ್ರತನೂ ಶುರುವಾಯಿತಾ? ಸೂಪರ್ ಬರಹ..
-ತುಂಬುಪ್ರೀತಿ,
ಚಿತ್ರಾ

mruthyu ಹೇಳಿದರು...

ಮನಸ್ಸು ಸುಮ್ಮನಿರುವುದು ಮೌನ. ಮನಸ್ಸಿನ ಕಂಪನದ ವ್ಯಕ್ತ ರೂಪ ಮಾತು. ಭಾವನೆಗಳು, ವಿಚಾರಗಳು ಇವೆಲ್ಲ ಮನಸ್ಸಿನ ಕಂಪನದ ಸೂಚಕ. ಇಂದ್ರಿಯಗಳು ಗ್ರಹಿಸಿ, ಮನಸ್ಸಿಗೆ ರವಾನಿಸುವ ಮಾಹಿತಿಗಳು, ನಮ್ಮ ಅರಿವು ಮತ್ತು ಅನುಭವಕ್ಕೆ ಕಾರಣ. ಈ ಮಾಹಿತಿಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ, ವಿಂಗಡಿಸಿ, ತನ್ನ ಪೂರ್ವ ಹಿನ್ನೆಲೆಗೆ ತಕ್ಕಂತೆ ಪ್ರತಿಕ್ರಿಯೆ ವ್ಯಕ್ತಪಡಿಸುವುದು ಮನಸ್ಸಿನ ಕಂಪನದ ಕಾರಣ. ಮಾಹಿತಿಗಳಲ್ಲಿ ಜಗತ್ತು ಜನಿಸುತ್ತದೆ. ಈ ಮಾಹಿತಿಗಳ ಸಂಪರ್ಕ ಕಡಿದುಕೊಳ್ಳುವುದರಿಂದ ಮೌನ ಸಾಧ್ಯ. ಮನಸ್ಸನ್ನು ಮನಸ್ಸಿನ ಜತೆಯೇ ಇರಿಸಿಕೊಂಡಾಗ, ಹೊರಗಿಂದ ಬರುವ ಮಾಹಿತಿಗಳಿಗೆ ಪ್ರತಿಕ್ರಿಯೆ ಇಲ್ಲವಾಗುವುದರಿಂದ, ಮನಸ್ಸಿನ ಕಂಪನ ನಿಂತು ಮೌನ ಹುಟ್ಟುತ್ತದೆ.
ಸುಮ್ಮನೆ ಕೂತು ನಿಮ್ಮ ಮನಸ್ಸಿನ ಚಟುವಟಿಕೆಗಳನ್ನು ಗಮನಿಸುತ್ತಾ ಹೋಗಿ. ಮೌನ ಲಭ್ಯ.
(ಮನಸ್ಸಿನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನಿಮಗೆ ಬೇಕಾಗಿದ್ದರೆ, ಮಾಂಡೂಕ್ಯ ಉಪನಿಷತ್ ಅಭ್ಯಾಸ ಮಾಡಿ. ಅಷ್ಟೆಕ್ಕೆಲ್ಲ ಅವಕಾಶ ಇಲ್ಲದಿದ್ದರೆ, ನನಗೆ ತಿಳಿಸಿ. ನನ್ನ ಈ ಲೇಖನಕ್ಕೆ ನಾನೇ ವಿಸ್ತಾರವಾದ ಒಂದು ಟೀಕೆಯನ್ನು ಬರೆದು, ನನ್ನ ಬ್ಲಾಗ್ ನಲ್ಲಿ, ನನಗೆ ಖುಷಿ ಬಂದ ದಿನ ಹಾಕಿಬಿಡುತ್ತೇನೆ. ನೀವೊಬ್ಬರಾದರೂ ಅದನ್ನು ಓದುತ್ತೀರಿ ಎಂಬ ವಿಶ್ವಾಸವೂ ನನಗಿರುತ್ತೆ ! )

Harish - ಹರೀಶ ಹೇಳಿದರು...

ವಿಕಾಸಾನಂದ ಸ್ವಾಮಿಗಳೆ, ತಾವು ಮಾಡಿದ್ದು ಮೌನವೃತ ಅಲ್ಲ, ಮೌನವ್ರತ...

ಶಾಂತಲಾ ಭಂಡಿ ಹೇಳಿದರು...

ವಿಕಾಸ...

ನೀ ಆವತ್ತು ಮೌನವ್ರತ ಆಚರಿಸಿರೋದಕ್ಕೆ ಸಾಕ್ಷಿ ಬೇಕಿದ್ರೆ ನಾನೂ ಇದ್ದಿ. ಆವತ್ತು ಮಾತಾಡಕರೆ ಹೇಳಿದ್ಯಲ ‘ಇವತ್ತು ಮೌನವ್ರತ ಆಚರಿಸ್ತಾ ಇದ್ದಿ’ ಅಂತ :-)
(ತಮಾಷೆಗೆ ಹೇಳಿದಿ)
****

ನೀನು ಮೌನವ್ರತ ಆಚರಿಸಿದ್ದನ್ನ ಚಂದವಾಗಿ ಹಂಚಿಕೊಂಡಿದ್ದಕ್ಕೆ ಧನ್ಯವಾದ. ಈ ಬರಹ ಓದಿದ ಮೇಲೆ ಆಸಕ್ತಿ ಬರ್ತಾ ಇದ್ದು,
ನಾನೂ ಯಾವತ್ತಾದ್ರೂ ಮೌನವ್ರತ ಆಚರಿಸಲೆ ಆಗ್ತ ಅಂತ ನೋಡವ್ವು. ಮಕ್ಕಳುಮರಿ ಎಲ್ಲ ಕಟ್ಗ್ಯಂಡು ನಂಗಕ್ಕೆ ಹೆಂಗಸ್ರಿಗೆ ಮೌನವ್ರತ ಸ್ವಲ್ಪ ಕಷ್ಟದ ಕೆಲ್ಸನೇಯ :-(

ವಿಕಾಸ್ ಹೆಗಡೆ ಹೇಳಿದರು...

ಸುನಾಥ ಕಾಕಾ, ಥ್ಯಾಂಕ್ಯೂ

ಅಮರ, :-)

ಅಕ್ಕ, ಹೌದಾ! ಪ್ರಯತ್ನ ಮಾಡ್ತೇನೆ. ಥ್ಯಾಂಕ್ಯೂ.

ತೇಜಕ್ಸ್, ಫೋನ್ ಆಫ್ ಮಾಡಿಡ್ತಿ ಗ್ಯಾರಂಟಿ. ಅಂದಂಗೆ ಫುಲ್ ಆರಾಮಿದ್ದಿ ಏನ್ ತೊಂದ್ರೆ ಇಲ್ಲೆ ಸದ್ಯಕ್ಕೆ!

ಶ್ರೀ.ಶಂ., ನೋಡ್ತೇನೆ ಏನೇನಾಗತ್ತೋ ಅಂತ.


ಸಿರಿ, ಆಯ್ತು, ಏನಾದ್ರು ಮಾಡ್ಕೋತೀನಿ. ಆದ್ರೆ ಏನೂ ಆಗಿಲ್ಲ ’ಅಂತಾದ್ದು’.

ಯಜ್ಞೇಶ್, ಹೌದು ಅದು ಸ್ವಾಭಾವಿಕವಾಗಿದ್ದರೆ ಬಹಳ ಚೆನ್ನಾಗಿರುತ್ತದೆ. ಪ್ರಯತ್ನಿಸುತ್ತೇನೆ.

ಕೆನೆಕಾಫಿ ವೈಶಾಲಿ, ;-) ಥ್ಯಾಂಕ್ಸ್

ಹರೀಶ್, ತಿಳಿಸಿದ್ದಕ್ಕೆ ಥ್ಯಾಂಕ್ಸ್. ಎಲ್ಲಾ ತಿದ್ದಿದ್ದೇನೆ ಈಗ.

ಶಾಂತಲಾ, ಮಕ್ಕಳು ಮರಿ ಇಲ್ದಿರೋ ನಮಗೇ ಕಷ್ಟ ಆದ್ಮೇಲೆ ನಿಮ್ಗೆ ಇನ್ನೂ ಕಷ್ಟ ಬಿಡಿ. ಆದ್ರೂ ನೀವು ಬೇರೆ ತರದಲ್ಲೇ ಮಾಡ್ಲಕ್ಕೇನೋ. ಇರ್ಲಿ.

ವಿಕಾಸ್ ಹೆಗಡೆ ಹೇಳಿದರು...

ಶಿವು, ಥ್ಯಾಂಕ್ಯು.. ನಿಮಗೆ ಮೇಲ್ ಮಾಡುತ್ತೇನೆ. ತಿಳಿಸಿಕೊಡಿ.

ಮೃತ್ಯು, ನೀವು ಹೇಳಿದ್ದು ನಿಧಾನಕ್ಕೆ ಅರ್ಥಾಗಬಹುದು. ಉಪನಿಷತ್ತು ಅಭ್ಯಾಸ ಮಾಡುವುದು ಸದ್ಯಕ್ಕೆ ಆಗುವುದಿಲ್ಲ ಅನಿಸುತ್ತದೆ. ಆದ್ದರಿಂದ ನೀವು ಹೇಳಿದಂತೆ ನಿಮಗೆ ಸಾಧ್ಯವಾದಾಗ ಅದರ ಬಗ್ಗೆ ಬರೆದು ಲಿಂಕ್ ಕೊಟ್ಟರೆ ಬಹಳ ಸಹಾಯವಾಗುತ್ತದೆ. ಥ್ಯಾಂಕ್ಯು..

ಶಾಂತಲಾ ಭಂಡಿ ಹೇಳಿದರು...

ವಿಕಾಸ ಅವರೆ...

"ಶಾಂತಲಾ, ಮಕ್ಕಳು ಮರಿ ಇಲ್ದಿರೋ ನಮಗೇ ಕಷ್ಟ ಆದ್ಮೇಲೆ ನಿಮ್ಗೆ ಇನ್ನೂ ಕಷ್ಟ ಬಿಡಿ. ಆದ್ರೂ ನೀವು ಬೇರೆ ತರದಲ್ಲೇ ಮಾಡ್ಲಕ್ಕೇನೋ. ಇರ್ಲಿ."

ಬೇರೆ ಥರ ಅನ್ನುವುದರ ಅರ್ಥ ಆಗಲಿಲ್ಲ. ಸ್ವಲ್ಪ ಬಿಡಿಸಿ ಹೇಳಿದ್ದರೆ ನನಗೂ ಅರ್ಥವಾಗುತ್ತಿತ್ತು.

ಅನಾಮಧೇಯ ಹೇಳಿದರು...

ಶಾಂತಲಕ್ಕ, ಅದರರ್ಥ ನಿಮಗೆ ಇಡೀ ದಿನ ಸಾಧ್ಯವಾಗದಿದ್ದರೂ ಕೆಲವು ಗಂಟೆಗಳ ಕಾಲ ಮಾಡಬಹುದೇನೋ ಅಂತ!

-ವಿಕಾಸ್

Shayari ಹೇಳಿದರು...

ವಿಕಾಸ್,

ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.ತುಂಬಾನೇ ಖುಷಿ ಕೊಡ್ತು ನಿಮ್ಮ ಲೇಖನಗಳು.ಇಷ್ಟೊಂದು ಜನ ಕನ್ನಡ ಬ್ಲಾಗ್ಸ್ ಬರಿಯುತ್ತಾರೆ ಅಂತ ಇವತ್ತೇ ಅರಿವಾದದ್ದು.Feeling good:)

Shree ಹೇಳಿದರು...

nimma blog ge idu nanna modl bhethi, channagide yella bharahaglu:) keep writing:)

ವಿಕಾಸ್ ಹೆಗಡೆ ಹೇಳಿದರು...

@shayari, welcome. thank you, i m also feeling good by ur comment:-)

@shree, welcome, thank you...


keep coming...

Madhooo ಹೇಳಿದರು...

ಬಹಳ ಆಸಕ್ತಿಕರ ವಿಷಯವನ್ನು ಆರಿಸಿಕೊಂಡಿದ್ದೀರಾ, ವಿಕಾಸ್.:) ನನಗೆ ಪರಿಚಯವಿದ್ದ ಎಷ್ಟೋ ಜನರು ೫ ನಿಮಿಷ ಕೂಡ ಮೌನ ಆಚರಿಸಲಾರರು. ಜೀವನದಲ್ಲಿ ಎಷ್ಟೋ ಉತ್ತರಗಳನ್ನು ಎಷ್ಟೋ ಸಲ ಮೌನದಲ್ಲಿ ಕಂಡುಕೊಂಡಿದ್ದೇನೆ. ಖಂಡಿತವಾಗಿ ಮೌನದಲ್ಲಿ ಶಾಂತಿ ಇದೆ. ಮನಸ್ಸಿನಲ್ಲಿ ನಡೆಯುವ ಮಾತುಕತೆ ಬಂಧ್ ಮಾಡಲು ಬಹಳ ಸಾಧನೆ ಬೇಕಂತೆ. ಆ ಸಾಧನೆಯ ಮೊದಲ ಹಂತ ನೀವು ದಾಟಿದ್ದೀರಿ.:)

ಸುಪ್ತದೀಪ್ತಿ suptadeepti ಹೇಳಿದರು...

ಹ್ಮ್! ಮೌನ!!
ಇವತ್ತೀಗ ಬೆಳಗ್ಗೆ ನನ್ನವರು ಆಫೀಸಿಗೆ ಹೋದಾಗಿನಿಂದ, ಅಂದ್ರೆ ಬೆಳಗ್ಗೆ ೮:೩೦-ರಿಂದ ಈಗ ಸಂಜೆ ೪-ರ ತನಕ ನನ್ನ ಸ್ವರ ನಾನೇ ಕೇಳಿಲ್ಲ! ಇನ್ನು ನನ್ನವರು ಬರೋದು ಇವತ್ತು ರಾತ್ರೆ ೮-ಕ್ಕೆ. ಅಲ್ಲೀತನಕವೂ ನನ್ನ ಸ್ವರಕ್ಕೆ ಬಿಡುಗಡೆಯಿಲ್ಲ. (ಎರಡು ಫೋನ್ ಬಂತು- ಎರಡೂ ಯಾವುದೋ ಕಮರ್ಷಿಯಲ್ ಕಾಲ್, ಉತ್ತರಿಸಲಿಲ್ಲ. ಅದು ಬಿಟ್ರೆ ಎಲ್ಲ ಮೌನವೇ, ಕೀಬೋರ್ಡ್ ಟಕಟಕಿಸಿದ್ದು ಹೊರತಾಗಿ.)
ಇದನ್ನು ಮೌನವ್ರತ ಅನ್ನಬಹುದೋ ಹೇಗೆ?

"ಒಳ್ಳೇ ಪುಸ್ತಕ ಒಂದಿದ್ರೆ ದಿನವಿಡೀ ಮೌನವಾಗಿರೋದು ದೊಡ್ಡ ಸಂಗ್ತಿಯೇನಲ್ಲ" ಅಂತ್ಹೇಳಿ ನಿನ್ನ ಗರಿಯನ್ನ ನಲುಗಿಸುವ ಉದ್ದೇಶ ನನಗಿಲ್ಲ! ಬಯಸಿದ್ದನ್ನು ಸಾಧಿಸಿದ್ದಕ್ಕೆ ಬೆನ್ನಿಗೊಂದು ನವಿರೇಟು.

Arshad Hussain M.H. ಹೇಳಿದರು...

ಪ್ರೀತಿಯ ವಿಕಾಸ್ ಹೆಗಡೆಯವರೇ

ಒಂದು ದಿನದ ಮೌನವ್ರತ ಸಾಧಿಸಿದ್ದಕ್ಕೆ ಅಭಿನಂದನೆಗಳು. ಉತ್ತಮ ಲೇಖನ ಲೇಖನ ಓದುತ್ತಿದ್ದಾಗ ಒಂದು ಜೋಕ್ ನೆನಪಾಯಿತು, ನಮ್ಮ ಚಿಕ್ಕಪ್ಪ ಯಾವಾಗಲೂ ಹೇಳುತ್ತಿರುತ್ತಾರೆ. ಜಗತ್ತಿನಲ್ಲಿ ಅತ್ಯಂತ ದೊಡ್ಡ ಸುಳ್ಳು ಯಾವುದು ಗೊತ್ತೇ? ಇಲ್ಲವೇ ಕೇಳಿ - ಬಾವಿಕಟ್ಟೆಯ ಬಳಿ ನಾಲ್ವರು ಹೆಂಗಸರು ಮೌನವಾಗಿ ನಿಂತಿದ್ದರಂತೆ- ನೀವು ಮಹಿಳೆಯಾಗಿಲ್ಲದಿರುವದರಿಂದಲೇ ಈ ಸಾಧನೆ ಸಾಧಿಸಲು ಸಾಧ್ಯವಾಯ್ತು ಎಂದು ಹೇಳಬಹುದು. ಲೇಖನದಲ್ಲಿ ಆ ಹೊರದೇಶದ ಪಟ್ಟಣ ಯಾವುದು ಅಂತ ಹೇಳಲೇ ಇಲ್ಲವಲ್ಲ? - ಅರ್ಶದ್ ಹುಸೇನ್. ದುಬೈ.

ವಿಕಾಸ್ ಹೆಗಡೆ ಹೇಳಿದರು...

ಮಧು, ಥ್ಯಾಂಕ್ಯು.. ಆದ್ರೆ ಸಾಧನೆ ಉದ್ದೇಶ ನನಗೇನೂ ಇಲ್ಲ. ಸುಮ್ನೆ ಕುತೂಹಲಕ್ಕೆ ಅಷ್ಟೆ. :)

ಸುಪ್ತದೀಪ್ತಿ, ನಿಮ್ಮದೇ ಪುಣ್ಯ ಬಿಡಿ. ನವಿರೇಟು ಸ್ವಲ್ಪ ಜೋರಾಗೇ ಬಿದ್ದಿದೆ, ಥ್ಯಾಂಕ್ಯು.. :)

ಅರ್ಷದ್, ವೆಲ್ಕಮ್ಮು.. ಇಟಲಿಯಲ್ಲಿ ನೇಪಲ್ಸ್ ಎಂಬ ನಗರದಲ್ಲಿ ’ವ್ರತ’ ಮಾಡಿದ್ದು ;-) .ಥ್ಯಾಂಕ್ಯು..

ಅನಾಮಧೇಯ ಹೇಳಿದರು...

Vikas,..Mounavritha innu bittilwa??
Blog updaate madi swamy.

ಚಿತ್ರಾ ಕರ್ಕೇರಾ ಹೇಳಿದರು...

ಹೀಗೇ ಮೌನವ್ರತ ಮಾಡಿದ್ರೆ ಉದ್ಧಾರವಾಗೋಲ್ಲ ಸರ್..ದಯವಿಟ್ಟು ಮೌನದ ಕದತೆರೆದು ಹೊರಬನ್ನಿ..ಹೊಸ ಪೋಸ್ಟ್ ಹಾಕಿ....(:)
-ಚಿತ್ರಾ

ಅನಾಮಧೇಯ ಹೇಳಿದರು...

Hmmm...ಕಾಕತಾಳಿಯವೇ ಇರಬಹುದು ...ನಿಮ್ಮ post ಓದುತ್ತಿರುವಾಗ ನನ್ನ system ಲಿ ಈ ಹಾಡು ಬರ್ತಿದೆ ..."ಮಣ್ಣಿನಾಳಗಳಲ್ಲಿ ಕಣ್ಣನೂರಿದ ಜೀವ ಅನ್ನದ ಹುಡುಕಾಟ ಇನ್ನು ಸಾಕು ..ನಿನ್ನೊಳಗೆ ನೀನಿನ್ನು ಮುಳುಗಬೇಕು ..ನುಡಿಮೆಟ್ಟಿ ಅರ್ಥದಲಿ ಏಳಬೇಕು ...."
ottinalli baraha chennagide..odisikondu hoogide.
Abhinandanegalu :)
Sunil.

ಅನಾಮಧೇಯ ಹೇಳಿದರು...
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಸಂತೋಷಕುಮಾರ ಹೇಳಿದರು...

ಮುಂದ? :)