ಪುಟಗಳು

ಬುಧವಾರ, ಆಗಸ್ಟ್ 6, 2008

ಎಲೆಶೆಟ್ಟಿ

ನಿನ್ನೆ ಮನೆಯ ಬಾಲ್ಕನಿಯಲ್ಲಿ ನಿಂತಿದ್ದಾಗ ಭುಜದ ಹಿಂಭಾಗದಲ್ಲಿ ಏನೋ ಬಂದು ಕುಳಿತಂತಾಗಿ ತಿರುಗಿ ನೋಡಿದೆ. ಹಸಿರು ಬಣ್ಣದ ಕೀಟವೊಂದು ಕಾಣಿಸಿತು, ಮಿಡತೆಯಿರಬೇಕು ಇನ್ನೇನು ಹಾರಿಹೋಗುತ್ತದೆ ಎಂದು ಕೈಯನ್ನು ಭುಜದ ಮೇಲಿಟ್ಟೆ. ಉಹುಂ, ಅದು ಹಾರಲಿಲ್ಲ. ಹಾಗೆಯೇ ನಿಧಾನಕ್ಕೆ ಕೈಮೇಲೆ ಹತ್ತಿಸಿಕೊಂಡು ನೋಡಿದರೆ ಎಲೆಶೆಟ್ಟಿ! ಬೆಂಗಳೂರಿನಲ್ಲಿ ನಾನಿದನ್ನು ಕಂಡಿರಲಿಲ್ಲ. ಇದಕ್ಕೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರನ್ನು ಹೇಳುತ್ತಾರೆ. ನನ್ನ ಅಮ್ಮ ಹೇಳಿಕೊಟ್ಟ ಹೆಸರು ಎಲೆಶೆಟ್ಟಿ. ಇದು ಯಾವಾಗಲೂ ಗಿಡದ ಎಲೆಗಳ ಮಧ್ಯೆಯೇ ಇರುವುದರಿಂದ ಆ ಹೆಸರಿರಬಹುದು. ’ಶೆಟ್ಟಿ’ ಎಂಬ ಪದ ಯಾಕೆ ಸೇರಿತೆಂದು ಗೊತ್ತಿಲ್ಲ. ನಿಸರ್ಗವು ಅದೇ ಎಲೆಗಳ ಬಣ್ಣವನ್ನು ಕೊಟ್ಟಿರುವುದರಿಂದ ಇದು ಗಿಡದ ಮಧ್ಯೆ ಇದ್ದಾಗ ಕಂಡುಹಿಡಿಯುವುದು ಭಾರೀ ಕಷ್ಟ.

ಈ ಎಲೆಶೆಟ್ಟಿ ನನಗೆ ಮೊದಲಿಂದಲೂ ಒಂದು ರೀತಿ ಇಷ್ಟದ ಕೀಟ. ಪ್ರಾಥಮಿಕ ಶಾಲೆಯಲ್ಲಿದ್ದಾಗ ಮೊದಲ ಬಾರಿ ಇದನ್ನು ನೋಡಿದ್ದು. ಬೇಲಿ ಸಂದಿಯಲ್ಲಿ ಇದನ್ನು ನೋಡಿದ್ದ ನಾನೂ ನನ್ನ ಗೆಳೆಯರು ಇದ್ಯಾವುದೋ ಏನೋ ಹೆಚ್ಚು ಕಡಿಮೆಯಾಗಿ ಹುಟ್ಟಿದ ಅಥವಾ ಬೆಳೆದ (genetic mutation ಅನ್ನುತ್ತಾರೆ ಅಂತ pucನಲ್ಲಿ ಗೊತ್ತಾಯಿತು) ಹುಳ ಇರಬೇಕು ಅಂದುಕೊಂಡು ಅದಕ್ಕೆ ’ವಿಚಿತ್ರ ಜೀವಿ’ ಎಂದು ನಾಮಕರಣ ಮಾಡಿ ಒಂದು ಕೊಟ್ಟೆಯಲ್ಲಿ ಹಾಕಿಕೊಂಡು ಹೋಗಿ ಹುಡುಗರಿಗೆಲ್ಲಾ ತೋರಿಸಿದ್ದೆವು. ನಂತರ ಅದೇ ರೀತಿಯ ಸುಮಾರು ಶೆಟ್ಟಿಗಳನ್ನು ನೋಡಿದ ಮೇಲೆ ಇಂತದ್ದೊಂದು ಕೀಟವಿದೆ ಎಂದು ತಿಳಿದಿತ್ತು.

ಹಾಗೆಯೇ ಕೈಮೇಲೆ ಕೂರಿಸಿಕೊಂಡೇ ಅದರ ಮುಖವನ್ನು ನೋಡಿದೆ. ಅದೂ ನನ್ನನ್ನೇ ನೋಡಿತು. ಇಷ್ಟಿಷ್ಟು ದೊಡ್ಡ ಕಣ್ಣುಗಳನ್ನು ಬಿಟ್ಟುಕೊಂಡು ಮರುಕ ಹುಟ್ಟಿಸುವಂತೆ ಮಾಡಿತು. ಈ ಎಲೆಶೆಟ್ಟಿಯಲ್ಲಿ ನನಗೆ ಅದರ ವಿಚಿತ್ರ ದೇಹಕ್ಕಿಂತ ಅದರ ಮುಖ, ಭಂಗಿಗಳೇ ಆಶ್ಚರ್ಯವೆನಿಸುವುದು. ಮುಂದಿನ ಎರಡು ಕೈಗಳನ್ನು ಆಡಿಸುತ್ತಾ ಒಂದು ಸಾರಿ ಆಡಲು ಕರೆಯುವ ಮಗುವಿನಂತೆ, ಮತ್ತೊಂದು ಸಾರಿ ಗಂಡನ ಮೇಲೆ ಮುನಿಸಿಕೊಂಡ ಹೆಂಡತಿಯಂತೆ, ಇನ್ನೊಮ್ಮೆ ಏನೋ ನಿಂದು ಎಂದು ಕೇಳುವ ಗೆಳೆಯನಂತೆ, ಇವನ್ಯಾರಪ್ಪಾ ಎಂದು ನೋಡುವ ಅಪರಿಚಿತನಂತೆ, ನಿನ್ ಮಾತಾಡ್ಸಲ್ಲ ಹೋಗು ಎನ್ನುವ ಗೆಳತಿಯಂತೆ, ಚಪ್ಪಲಿಕದ್ದು ಸಿಕ್ಕಿಬಿದ್ದು ಬಿಟ್ಟುಬಿಡಿ ಎಂದು ಗೋಗರೆಯುವ ಪುಟ್ಟ ಹುಡುಗನಂತೆ ಹೀಗೆ ಹಲವು ರೀತಿ ಅನಿಸುತ್ತದೆ. ಅದು ಎಲೆ ಮೇಲೆ ಕುಳಿತಿದ್ದಾಗ ಅದನ್ನು ನೋಡಿದರೆ ಅದೂ ಕೂಡ ಅದರ ಕುತ್ತಿಗೆಯನ್ನು ತಿರುಗಿಸಿ ನಮ್ಮನ್ನೇ ನೋಡಿ ಯಾರೋ ಬಂದರಲ್ಲಾ ಅಂದುಕೊಂಡು ’ಹಾಯ್ ’ ಎಂದು ಮಾತಾಡಿಸುವಂತೆ ಮುಖ ಮಾಡುತ್ತದೆ. ಇದು ನನಗೊಬ್ಬನಿಗೇನಾ ಅಥವಾ ಎಲ್ಲರಿಗೂ ಅನಿಸುತ್ತದಾ ಕೇಳಲು ಹೋಗಿಲ್ಲ ಇದುವರೆಗೂ. ಎಲೆಶೆಟ್ಟಿ ಮರಿಗಳಂತೂ ಭಾರೀ ಮುದ್ದುಮುದ್ದಾಗಿರುತ್ತವೆ.

ಈ ಕೀಟ ಅದೇನು ತಿನ್ನುತ್ತದೆಯೋ, ಇದು ಆಹಾರ ಸರಪಳಿ/ಆಹಾರ ಜಾಲದಲ್ಲಿ ಎಲ್ಲಿದೆಯೋ, ಮೊಟ್ಟೆ-ಮರಿ, ಆಯಸ್ಸು, ವಯಸ್ಸು, ವಾಸ, ನಾಶ ಇನ್ನಿತರ ವಿವರಗಳೇನೂ ತಿಳಿದುಕೊಳ್ಳಲು ಹೋಗಿಲ್ಲ. ಹಕ್ಕಿಗಳ ಬಾಯಲ್ಲಿ(ಕೊಕ್ಕಲ್ಲಿ) ಇದು ಒದ್ದಾಡುವುದನ್ನು ನೋಡಿದ್ದೇನೆ. ಈ ನಿಸರ್ಗ ಎಷ್ಟು ಅದ್ಭುತ ಸೃಷ್ಟಿಗಳ ಆಗರ, ಈ ಭೂಮಿಗೆ ಎಷ್ಟೆಲ್ಲಾ ತರಹದ ಹಕ್ಕುದಾರರಿದ್ದಾರೆ ಅನಿಸುತ್ತದೆ. ಏನೇ ಆಗಲಿ ಎಲೆಶೆಟ್ಟಿ.. ಚೋ ಕ್ಯೂಟ್ ಎಂದುಕೊಂಡು ಪಕ್ಕದ ಮರದ ಎಲೆಯ ಮೇಲೆ ದಾಟಿಸಿದೆ. ಅದು ಒಮ್ಮೆ ತಿರುಗಿ ನೋಡಿ ಥ್ಯಾಂಕ್ಸ್ ಎಂದಂತೆನಿಸಿತು. :)


ಚಿತ್ರ ಕೃಪೆ: internet

23 ಕಾಮೆಂಟ್‌ಗಳು:

Harish - ಹರೀಶ ಹೇಳಿದರು...

ನನ್ನಮ್ಮ ಹೇಳ್ಕೊಟ್ಟಿದ್ದು "ಬಾಳೆಕಾಯಿ ಶೆಟ್ಟಿ" ಅಂತ. ಒಟ್ನಲ್ಲಿ ಇದು ಶೆಟ್ಟಿ ಜಾತಿ ;-)

>> ಚಿತ್ರ ಕೃಪೆ: internet

ಆಹಾ! ಇಂಟರ್ನೆಟ್ ಧನ್ಯ ಆತು...

ಅನಾಮಧೇಯ ಹೇಳಿದರು...

ಎಲೆ ಶೆಟ್ಟಿ - 'ಎಲೇ' ಶೆಟ್ಟಿ ಎಂದೂ ಕೂಗಲ್ಲೇ ಅಡ್ಡಿ ಇಲ್ಲೇ. ಅದರಲ್ಲೇ ಚಂದ ಇಪ್ಪದಕ್ಕೆ ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ. dangerous ಆಗಿ ಕಾಮ್ಬದಕ್ಕೆ ಸಾಧು ಶೆಟ್ಟಿ, ಶರದ್ ಶೆಟ್ಟಿ ಎಂದೂ ಕರೆಯಬಹುದು. ತುಂಬ ರಿಚ್ ಇದ್ದರೆ ಆರ್.ಏನ್.ಶೆಟ್ಟಿ. ಬ್ಯಾರೆ ಎಲೇ ಶೆಟ್ಟಿ ಗಳಿಗೆ treatment ಕೊಡದಾದ್ರೆ ಡಾ.ದೇವಿದಾಸ್ ಶೆಟ್ಟಿ.

ಸುಶ್ರುತ ದೊಡ್ಡೇರಿ ಹೇಳಿದರು...

ನಾವೂ ಬಾಳೆಕಾಯ್ ಶೆಟ್ಟಿ ಅಂತ ಕರೀತಿದ್ದದ್ದು ಇದನ್ನ.. ತೀರಾ ಸಣ್ಣಕಿದ್ದಾಗ ಮುಟ್ಟಕ್ಕೆ ಹೆದ್ರಿಕ್ಯಾಗ್ತಿತ್ತು.. ಆಮೇಲೆ ಇದೇನಾದ್ರೂ ಮನೆ ಒಳಗೆ ಬಂದ್ರೆ ಹಿಡ್ದು ಹೊರಗ್ ಹಾಕಿ ಬರೋ ಕೆಲಸ ನಂದೇ ಆಗಿತ್ತು! :-)

ಇಂಟರ್ನೆಟ್ಟಲ್ಲಿ ಹೆಂಗೆ ಸಿಕ್ಚು? ಇಂಗ್ಲೀಷಲ್ಲಿ ಏನಂತ ಕರಿತ ಇದನ್ನ?

Seema ಹೇಳಿದರು...

ವಿಕಾಸ,
ನಂಗೂ ಇದರ ಪರಿಚಯ 'ಎಲೆ ಶೆಟ್ಟಿ' ಹೇಳೆಯ.
'ಎಲೆ ಚಿಟ್ಟೆ' ಜನರ ಬಾಯಲ್ಲಿ ಸಿಕ್ಕಿ 'ಎಲೆ ಶೆಟ್ಟಿ' ಆಗಿರಲಕ್ಕು ಹೇಳಿ ವಿಚಾರ ಮಾಡ್ಕ್ಯಂದು ಸುಮ್ನಿದ್ದಿದ್ದಿ!!

ಅನಾಮಧೇಯ ಹೇಳಿದರು...

Ele Shetty! Chooo Cute!
kelasa madi tale bisi adaga idna Odide. relax aytu.
E.S. mukha bhangigala vivbarane chenda ide.
~ Chetana Teerthahalli

ವಿಕಾಸ್ ಹೆಗಡೆ/Vikas Hegde ಹೇಳಿದರು...

@ಹರೀಶ
;-)

@anonymous
ಹ್ಹ ಹ್ಹ. ಸುನಿಲ್ ಶೆಟ್ಟಿ ಬಿಟ್ಟಿಗಿದ್ಯಲ್ಲೋ ! ಇಲ್ಲೆ ಲೋಕಲ್ ರೌಡಿ ತರ ಕಂಡ್ರೆ ಪ್ರಭಾಕರ್ ಶೆಟ್ಟಿ ಅನ್ನಲ್ಲು ಅಡ್ಡಿ ಇಲ್ಲೆ. :)

@ಸುಶ್ರುತ
ಇಂಟರ್ನೆಟ್ಟಲ್ಲಿ ಹುಳ ಸಿಕ್ಕಿದ್ದಿಲ್ಲೆ ಮಾರಾಯ. ಬರೀ ಚಿತ್ರ ಅಷ್ಟೆ :) ಹೆಂಗೆ ಅಂತನೂ ಹೇಳವ!! ಅಂಗ್ರೇಜಿಯಲ್ಲಿ praying mantis ಹೇಳ್ತ.

@ಸೀಮಕ್ಕ
ಹಾಂ.ಇದ್ದಿಕ್ಕು ನೋಡು. ಎಲೆಚಿಟ್ಟೆನೇ ಎಲೆಶೆಟ್ಟಿಯಾಗಿರವು.

@ಚೇತನಕ್ಕ
;-) thanx. ನಿಮ್ ತೀರ್ಥಳ್ಳಿ ಕಡೆ ಏನಂತಾರೆ ಇದಕ್ಕೆ ಅಂತ ಹೇಳಲೇ ಇಲ್ಲ !

ಯಜ್ಞೇಶ್ (yajnesh) ಹೇಳಿದರು...

ನಮ್ ಕಡೇ ಎಲೇ ಶೆಟ್ಟಿ ಅಂತ ಕರಿತಾ. ಲೇಖನ ಚೆನ್ನಾಗಿದ್ದು. ಅದಕ್ಕೆ ಎಲೆ ಶೆಟ್ಟಿ ಅಂತ ಎಂತಕೆ ಕರಿತಾ ಅಂತ ಊರಲ್ಲಿ ಯಾರಾದ್ರು ಅಜ್ಜ/ಅಜ್ಜಿ ಕೇಳಿದ್ರೆ ಗೊತ್ತಾಗ್ತೇನಾ! ನಂಗೆ ಮಾತ್ರ ಅದ್ರ ಕಂಡ್ರೆ ಹೆದ್ರಿಕೆ ಮಾರಾಯ.

ಇನ್ನೊಂದು ಕರಡದ ಮದ್ಯ ಇರ್ತಲ. ಸೇಮ್ ಇರ್ತು. ಆದ್ರೆ ಕಲರ್ ಬೇರೆ. ಸ್ವಲ್ಪ ಕಂದು ಬಣ್ಣ (ಕರಡದ ಕಲರ್). ಇದೇಯಾ ಎಂತು? ಬಹುಶಃ ಬೇಸ್ಗೆ ಕಾಲ್ದಲ್ಲಿ ಎಲೇ ಶೆಟ್ಟಿ ಒಣಗಿ ಹಂಗೆ ಕಾಣ್ತೇನಾ?

ಯಾರಿಗಾದ್ರು ಇದ್ರ ಬಗ್ಗೆ ಗೊತ್ತಿದ್ದಾ?

*ಕರಡ ಅಂದ್ರೆ ಮಲೆನಾಡಿನಲ್ಲಿ ಗುಡ್ಡದ ಮೇಲೆ ಬೆಳೆಯೋ ಹುಲ್ಲು. ದನಕರ ತಿನ್ತಾ. ;)

ತೇಜಸ್ವಿನಿ ಹೆಗಡೆ- ಹೇಳಿದರು...

ವಿಕಾಸ್,

ಚಿತ್ರ ಚೊಲೋ ಇದ್ದು. ಟೈಮ್ ಪಾಸ್ ಆಗ್ತು ಓದಿ ಬಿಡು. ಎಲೆ ಶೆಟ್ಟಿ ಹೆಸ್ರು ನಂಗೆ ಗೊತ್ತಿಲ್ಲೆ. ಆದ್ರೆ ಮಂಗಳೂರ್ ಕಡೆ ಎಲ್ಲಾ ಇದ್ನ ಮಿಡತೆ ಹೇಳಿ ಕರೀತೋ.. ಮಿಡತೆ ಅಂದ್ರೆ ಸೀಸನ್ಗೆ ತಕ್ಕ ಕಲರ್ ಚೇಂಜ್ ಮಾಡ್ತು. ಗೋಸುಂಬೆ ಅಲ್ಲ ಮತ್ತೆ :)

ಅನಾಮಧೇಯ ಹೇಳಿದರು...

ಮಿಡತೆ ಕತೆ ಛೊಲೊ ಐತ್ರಿ..ನಮ್ಮ ಕಡೀಗೆ ಇದಕ್ಕ ಶಿವನ ಕುದರಿ ಅಂತಾರ ರೀ..ಅದು ಯಾಕ ಶಿವನ ಕುದುರಿ ಅಂತಾತಂತ ನನಗೂ ಗೊತ್ತಿಲ್ಲರಿ...ಆದರ ಎಲಿಶೆಟ್ಟಿ ಹೆಸರು ಮಸ್ತೈತಿ ರೀ....;D

ನಿಮ್ಮ,
ಗಿರೀಶ ರಾಜನಾಳ.

ವಿಕಾಸ್ ಹೆಗಡೆ/Vikas Hegde ಹೇಳಿದರು...

@ಯಜ್ಞೇಶಣ್ಣ
ಅದರಲ್ಲಿ ಬೇರೆ ಬೇರೆ ಜಾತಿ ಇರಬಹುದು. ಅದು ಇರುವ ಪರಿಸರಕ್ಕೆ ತಕ್ಕನಾಗಿ ಅದರ ಮೈಬಣ್ಣ ಇರಬಹುದು ಅಥವಾ ನೀ ಹೇಳಿದಂತೆ ಕಾಲಕ್ಕೆ ತಕ್ಕನಾಗಿ ಬಣ್ಣ ಬದಲಾಗಿರಬಹುದು. ಆ ಪಾಪದ ಹುಳ ಕಂಡ್ರೆ ಹೆದ್ರಿಕೆ ಎಂತಕ್ಕೆ ಮಾರಾಯ ! ;-)

@ತೇಜಕ್ಕ
ಏನು ಓದಿದ್ರೂ ಟೈಮು ಪಾಸ್ ಆಗೇ ಆಗ್ತು. ಟೈಮನ್ನ ಅಲ್ಲೇ ನಿಲ್ಸುವಂತಾದ್ದು ಏನಾರೂ ಓದಿದ್ಯ ಮತ್ತೆ?! ತಿಳಿದುಕೊಳ್ಳೋ ಆಸಕ್ತಿ ಇಲ್ಲದಿದ್ದರೆ ಬರೀ ಟೈಂ ಪಾಸು ಅಷ್ಟೆ :) ಅದ್ಯಾವ ಮಂಗ್ಳೂರು ನಿಮ್ದು. ಮಿಡತೆಗೂ ಇದಕೂ ವ್ಯತ್ಯಾಸ ಇಲ್ದಿದ್ದು? ಬೇರೆ ಏನಾರೂ ಹೆಸರಿದ್ದಿಕ್ಕು ಕೇಳ್ ನೋಡು.

@ರಾಜನಾಳ

ಓಹ್, ಶಿವನ ಕುದುರಿ!. ಹೊಸ ಹೆಸ್ರು ಗೊತ್ತಾತ್ ನೋಡ್ರಿ. thanx :)

Vijay Joshi ಹೇಳಿದರು...

Nice article. But the article would have been more attractive if there were a little more scientific information about this insect.

I like this piece:-)

ವಿನಾಯಕ ಕೆ.ಎಸ್ ಹೇಳಿದರು...

ವಿಕಾಸ
ನಿಮ್ಮ ಇತ್ತೀಚಿನ ಬರಹ ನೋಡಿದರೆ ಪೂರ್ಣಚಂದ್ರ ತೇಜಸ್ವಿ ತಲೆ ಮೇಲೆ ಕೈ ಎಳೆದ ಹಾಗಿದೆ! ನಾನು ಇಂತಹ ಬರಹವನ್ನು ತುಂಬಾ ಇಷ್ಟಪಡುವೆ. ಸಾಧ್ಯವಾದಷ್ಟು ಇಂಥ ಸಂಗತಿಗಳನ್ನು ಹುಡುಕಿಕೊಂಡು ಬಂದು ಬರೆಯುವುದು ತುಂಬಾ ಒಳ್ಳೇಯ ಪ್ರಯತ್ನ. ಆ ಪ್ರಯತ್ನಕ್ಕೆ ನೀವು ಕೈ ಹಾಕುತ್ತೀರಿ ಎಂಬ ಆಶಯದೊಂದಿಗೆ
ವಿನಾಯಕ ಕೋಡ್ಸರ

ತೇಜಸ್ವಿನಿ ಹೆಗಡೆ- ಹೇಳಿದರು...

ವಿಕಾಸ್,

ನೀ ಕೇಳ್ದ ಪ್ರಶ್ನೆ ಸರಿಯಾಗಿ ಅರ್ಥ ಆಜಿಲ್ಲೆ ನೋಡು. ನನ್ನ ಪ್ರಕಾರ ಇದು ಮಿಡತೆ. ಇನ್ನು ನನ್ನ ಮಂಗ್ಳೂರಲ್ದಪ್ಪ ಅದು..:) ಆಸಕ್ತಿ ಇಲ್ದೇ ಯಾರೂ ಯಾವ್ದನ್ನೂ ಪೂರ್ತಿ ಓದ್ತವಿಲ್ಲೆ. ಟೈಂ ಪಾಸ್ ಅಪ್ಪುದು ಆಸಕ್ತಿಯಿಂದ ಎನಾರೂ ಮಾಡ್ದಾಗ ಇಲ್ಲಾ ಓದ್ದಾಗ :)

ವಿಕಾಸ್ ಹೆಗಡೆ/Vikas Hegde ಹೇಳಿದರು...

@JOSHI
thanQ, ನನ್ನ ಫೀಲಿಂಗ್ಸ್ ಹಂಚಿಕೊಳ್ಳೋಕೆ ಸುಮ್ನೆ ಒಂದು ’ಬ್ಲಾಗ್ ಬರಹ’ ಬರೆದೆ. ವೈಜ್ಞಾನಿಕ/ಇನ್ನಿತರ ವಿವರಗಳನ್ನುಳ್ಳ ’ಲೇಖನ’ ಬರೆಯೋ ಉದ್ದೇಶ ಇರಲಿಲ್ಲ.


@ವಿನಾಯಕ
ಹ್ಹೆ.ಹ್ಹೆ. ತಲೆ ಮೇಲೆ ಕೈ ಎಳೆಯದಿದ್ದರೂ ತೇಜಸ್ವಿ ನನ ಫೇವರೇಟ್ ಬರಹಗಾರರಲ್ಲೊಬ್ಬರು. ಚಿಕ್ಕವನಿದ್ದಾಗಿಂದ ಅವರ ಸಾಹಿತ್ಯದಿಂದ ಬಹಳ ಪ್ರಭಾವಿತನಾಗಿದ್ದಂತೂ ಹೌದು. ನನಗೂ ಈ ತರಹದ ಸಂಗತಿಗಳ ಬಗ್ಗೆ ಬರೆಯುವುದು ಇಷ್ಟ. ದಿನಾ ದಿನಾ ಇಂತಹುದ್ದನ್ನು ಕಾಣ್ತಾ ಇದ್ರೆ ಬರೆಯೋಣ ಅನ್ನಿಸುತ್ತೆ. ಆದ್ರೆ ಈ ಬೆಂಗಳೂರಲ್ಲಿ ಕಾಗೆ, ನಾಯಿ, ಇಲಿ ಬಿಟ್ರೆ ಬೇರೆ ಏನೂ ಕಾಣಿಸೋಲ್ಲ :) ಆದ್ರೂ ಪ್ರಯತ್ನಿಸುವೆ. thanQ

@ತೇಜಕ್ಸ್,
:-)

ಸಂದೀಪ್ ಕಾಮತ್ ಹೇಳಿದರು...

ಜಾಸ್ತಿ ವಿಷಯ ಗೊತ್ತಿದ್ರೂ ಬರೀಬೇಡ !
ನಾಳೆ ’ಆನಿಮಲ್ ಪ್ಲ್ಯನೆಟ್’ ನವ್ರು ನಿನ್ನನ್ನು ಹೈಜಾಕ್ ಮಾಡಿದ್ರೆ ಕಷ್ಟ!

ಚಿತ್ರಾ ಕರ್ಕೇರಾ ದೋಳ್ಪಾಡಿ.. ಹೇಳಿದರು...

ಚೆನ್ನಾಗಿದೆ..ಒಳ್ಳೆ ಮಾಹಿತಿ...
ನಮ್ ಕಡೆ ಮಿಡತೆ ಅನ್ತೀವಿ.ಮತ್ತೆ ನಮ್ ಕಡೆ ಶೆಟ್ಟಿ ಅಂದ್ರೆ 'ಶೆಟ್ರು, ಬಂಟ್ರು 'ಅಂತಾರೆ. ಒಳ್ಳೆ ವಿಜ್ಞಾನಿ ಆಗೋ ಲಕ್ಷಣಗಳು ಕಾಣುತ್ತಿವೆ..keep it up!
-ಚಿತ್ರಾ

Jagali bhaagavata ಜಗಲಿ ಭಾಗವತ ಹೇಳಿದರು...

ನಮ್ಮಲ್ಲಿದಕ್ಕೆ ’ರಾಮನ ಕುದುರೆ’ ಅಂತೀವಿ ಅನ್ಸತ್ತೆ. ಒಟ್ನಲ್ಲಿ ಎಂಥದೋ ’ಕುದುರೆ’ :-)

ತೇಜಸ್ವಿನಿ ಅಕ್ಕಯ್ಯ,
ಇದು ಮಿಡತೆ ಅಲ್ಲ. ’ನಿಂ’ ಮಂಗ್ಳೂರ್ ಬದೀಲಿ ಬೇರೆ ಎಂತೋ ಹೆಸ್ರು ಇದ್ದಿಕ್ಕು. ಇದು ತುಂಬ ಸ್ಲೋ ಮೋಶನ್ನಲ್ಲಿ ಓಡಾಡೋದು/ಹಾರೋದು, ಸ್ವಲ್ಪ ಉದ್ದಕಿರ್ತು. ತುಂಬ ನಿರುಪದ್ರವಿ ಕೀಟ. ಇದನ್ನ ಯಾವತ್ತೂ ನಾನು ಹಿಂಡುಗಟ್ಲೆ ನೋಡಿದ್ದೇ ಇಲ್ಲೆ. ಭುವನೇಶ್ವರಿ ಹೆಗಡೆಯವ್ರನ್ನ ಕೇಳಿ. ಅವ್ರಿಗೆ ಗೊತ್ತಿಕ್ಕು

ಅನಾಮಧೇಯ ಹೇಳಿದರು...

ವಿಕಾಸನದ್ದು ಸ್ವಲ್ಪ ವಿಭಿನ್ನವಾದ ಬ್ಲಾಗ್. ತಂತ್ರಜ್ಞಾನದ ಪರಮಾವಧಿಯೋ ಎಬಂತೆ ಬ್ಲಾಗ್ ಸಾಹಿತ್ಯ ಈ ದಶಕದಲ್ಲಿ ವಿಫುಲವಾಗಿ ಬೆಳೆಯುತ್ತಿದೆ. ಬಹಳಷ್ಟು ಬ್ಲಾಗ್ ಗಳು ಅದೇ ಹಳೆಯ ಪ್ರೇತಿ ಪ್ರೇಮ, ಕಾಮ, ಅತಿ ಭಾವುಕತೆಗಳನ್ನು ಬಂಧವಾಳವಾಗಿಸಿಕೊಂಡಿವೆ. ಇನ್ನು ಕೆಲವು ಇಂಗ್ಲಿಷ್ ಕವಿಗಳ ಬರಹಗಳನ್ನು ಉದ್ಘೋಶಿಸುವುದೋ ಅಥವಾ ಪಾಶ್ಚ್ಯಾತ್ಯ ಬರಹಗಳನ್ನು ಭಟ್ಟಿ ಇಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಿವೆ. ವಯಕ್ತಿಕ ಸಾಹಿತ್ಯ ಶತಮಾನಗಳಿಂದಲೂ ಸೃಷ್ಟಿ ಆಗುತ್ತಾ ಬಂದಿದೆ (ಕೌಶಿಕ ವಿಶ್ವಾಮಿತ್ರನಾಗುವುದರಿಂದ ಮೊದಲುಗೊಂಡು ರವಿ ಬಿ. ರವಿ ಬೆಳಗೆರೆ ಆಗುವ ತನಕ) ಹಾಗೂ ಬಹುಶ ಒಂದು ಸಂತೃಪ್ತ ಸ್ಥಿತಿಯನ್ನು ಈಗಾಗಲೇ ಮುಟ್ಟಿದೆ.

ಮತ್ತೆ ಹಳೆಯ ರಾಗಗಳನ್ನೀ ಹಾಡದೆ ಹೊಸ ವಿಷಯಗಳ ಬಗೆಗೆ ಬರೆಯುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ. ಮಾತ್ರವಲ್ಲ, ಬರಹದ ವೈವಿಧ್ಯ ಕೂಡಾ ಅದ್ಬುತವಾಗಿದೆ.
Osho!

ವಿಕಾಸ್ ಹೆಗಡೆ/Vikas Hegde ಹೇಳಿದರು...

@ಸಂದೀಪ
ಅದಕ್ಕಿಂತಾ ಪುಣ್ಯ ಬೇಕಾ?!

@ಚಿತ್ರಾ & ಭಾಗವತ್ರು
thanx. ಆದ್ರೆ ’ನಮ್ಮಲ್ಲಿ’ ಅಂದ್ರೆ ಎಲ್ಲಿ ಅಂತ ಹೇಳಿದ್ರೆ ಚೆನ್ನಾಗಿರ್ತಿತ್ತು. :) ರಾಮನ ಕುದುರೆ ಅಂತ ೪ನೇ ಹೆಸರೂ ಗೊತ್ತಾತು.

@OSho (original?!)
thanQ. :)

suchitra ಹೇಳಿದರು...

Hi! eleshetty took me to different world.What I feel is shetty means kirukula (sanna)vyapari and the insect looks like carrying the ele.So nam kade idke eleshettru endu respectfully kareta.Muddada shetty and muddada baraha.

ಸುಧೇಶ್ ಶೆಟ್ಟಿ ಹೇಳಿದರು...

ನಾವೆಲ್ಲಾ ಸಣ್ಣವರಿದ್ದಾಗ ’ಕುದುರೆ’ ಅ೦ತಿದ್ವಿ. ನಿಜ ಹೆಸ್ರು ಏನು ಅ೦ತ ಗೊತ್ತಿಲ್ಲ.

“ಸುಧೇಶ್ ಶೆಟ್ಟಿ’ ಮಾತ್ರ ಅಲ್ಲ 

ranjith ಹೇಳಿದರು...

tumbaa chennagide lekhana..:)

ವಿಕಾಸ್ ಹೆಗಡೆ/Vikas Hegde ಹೇಳಿದರು...

@suchitra, ranjith
thanQ ;)


@sudesh,
ಹೌದು ಬಿಡಿ, ಸುಧೇಶ್ ಶೆಟ್ಟಿ ಅಂತೂ ಅಲ್ವೆ ಅಲ್ಲ :)