ಪುಟಗಳು

ಶುಕ್ರವಾರ, ಜುಲೈ 4, 2008

ಕನ್ನಡದ್ದು ಟೈಂಪಾಸ್ ಸಾಹಿತ್ಯವಾಗಬೇಕಾ?

ಹಿಂಗೆ ಹೇಳ್ತೀನಿ ಅಂತ ಬೇಜಾರಾಗ್ಬೇಡ. ನೀನು "ರಾಶಿ ಚೊಲೋ ಇದ್ದು ಓದು" ಅಂತ ಒಂದು ಪುಸ್ತಕ ಕೊಟ್ಟಿದ್ದೆಯಲ್ಲ ಅದು ೨೦ ಪುಟ ಓದೋತನಕ ಬೇಜಾರಾಗಿ ಹೋಯಿತು. ಅದೇನು ಕಾಣಿಸಿತೆ ನಿಂಗದರಲ್ಲಿ ’ಚೊಲೋ ಇದ್ದು’ ಅನ್ನುವಂತದ್ದು? ಮತ್ತದೇ ಹಳೇ ಕಾಲದ ಹಳ್ಳಿ ಕಥೆ! ಅದೇ ಅತ್ತೆ, ಮಾವ, ಅನಾಥ, ಕೆಲಸ, ಮದುವೆ, ಸಂಸಾರ. ಅವರ್ಯಾರೋ ಯುವ ಬರಹಗಾರರಂತೆ. ಯುವ ಬರಹಗಾರರೆಂದ ಮೇಲೆ ಈಗಿನ ಕಾಲಕ್ಕೆ ತಕ್ಕಂತೆ ಸಮಕಾಲೀನ ಕಥೆಯೊಂದನ್ನು ತೆಗೆದುಕೊಂಡು ಏನಾದರೂ ಬರೆದಿರುತ್ತಾರೆನೋ ಎಂದು ಆಸಕ್ತಿಯಿಂದ ಓದಿದರೆ ಏನೂ ಇಲ್ಲ. ಮೂವತ್ತು ವರುಷದ ಹಿಂದಿನ ಸಾಹಿತ್ಯದಂತಿದೆ. ಆ ಕಾಲದ ಮನಸ್ಥಿತಿ, ಸಮಾಜಸ್ಥಿತಿಗೆ ತಕ್ಕಂತೆ ಇದ್ದುದರಿಂದಲೇ ಆವಾಗಿನ ಸಾಮಾಜಿಕ, ಸಾಂಸಾರಿಕ ಕತೆ, ಪುಸ್ತಕಗಳು ಅಷ್ಟು ಇಷ್ಟವಾದದ್ದು ಜನರಿಗೆ ಎಂಬುದು ಗೊತ್ತು. ಆದರೆ ಈಗೂ ಅದೇ ಬರೆಯುತ್ತಾ ಕೂತರೆ ಜನರಿಗೆ ಆಸಕ್ತಿ ಎಲ್ಲಿ ಉಳಿಯುತ್ತದರಲ್ಲಿ ಹೇಳು?

ಏನಾಗಿದೆ ನಮ್ಮ ಕನ್ನಡ ಬರಹಗಾರರಿಗೆ ಎಂಬುದೇ ತಿಳಿಯುವುದಿಲ್ಲ. ಹೆಚ್ಚಿನವರ ಕಥೆ, ಬರಹಗಳೇನೇ ಇದ್ದರೂ ಅದೇ ಅದೇ ಹಳೇ ವರಾತಗಳ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆ. ಹೋಗಲಿ ಹಳೇ ತಲೆಮಾರಿನ ಲೇಖಕರ ಬಗ್ಗೆ ತಕರಾರಿಲ್ಲ. ಆದರೆ ಈಗಿನ ಲೇಖಕರದ್ದೂ ಅದೇ ಸ್ಥಿತಿ. ಅವನ್ಯಾರೋ ಸಾಫ್ಟ್ ವೇರಿನವನಂತೆ, ಮತ್ಯಾರೋ ಬ್ಯಾಂಕ್ ಉದ್ಯೋಗಿಯಂತೆ, ಮತ್ತೊಬ್ಬ ಪತ್ರಕರ್ತ ಕಂ ಬರಹಗಾರನಂತೆ.. ಎಲ್ಲರೂ ಕೊರೆಯುವುದು ಅಥವಾ ಕೊರೆಯಲು ಪ್ರಯತ್ನಿಸುವುದು ಮತ್ತದೇ ಸಂಸಾರ, ಸಮಾಜ, ಪ್ರೀತಿ ಪ್ರೇಮದ ಕಥೆಗಳನ್ನ. ಕನ್ನಡ ಸಾಹಿತ್ಯ ಎಂದರೆ ಒಂದು ರೀತಿ ಟೈಂ ಪಾಸ್ ಸಾಹಿತ್ಯ ಆಗಿದೆಯೇ ಹೊರತು ವಿಷಯಾಧಾರಿತವಾಗಲೀ, ಜ್ಞಾನಾಧಾರಿತವಾಗಲೀ, ಸುದ್ದಿ ಕೇಂದ್ರಿತವಾಗಾಗಲೀ, ಸಮಕಾಲೀನ ವಿಷಯ, ವಿಚಾರಗಳನ್ನು ಹೊತ್ತಾಗಲೀ ಬರುವುದೇ ಕಡಿಮೆ. ಎಲ್ಲರೂ ಜೋತು ಬೀಳುವುದು ಅದೇ ಗುಲ್ ಮೊಹರ್ ಗಿಡಕ್ಕೆ ಮತ್ತು ಅದ್ಯಾವುದೋ ದೂರದೂರಿಂದ ಬಂದವರಿಗೂ ಅದೇನೇನೋ ಅನುಭೂತಿ ಆಗುವುದು ಗಾಂಧಿ ಬಜಾರಿನಲ್ಲಿ ಮಾತ್ರ !!

ಶಿವರಾಮ ಕಾರಂತರ ಸಾಹಿತ್ಯವನ್ನು ಓದಿರಬೇಕು ನೀನು. ಅವರು ಕೈಯಾಡಿಸದ ಸಾಹಿತ್ಯ ಪ್ರಾಕಾರಗಳಿಲ್ಲ. ಅತ್ತ ಶುದ್ಧ ಸಾಮಾಜಿಕ ಕಥೆಗಳ ಜೊತೆಗೆ ವಿಜ್ಞಾನ ಪುಸ್ತಕಗಳನ್ನೂ ಸಮರ್ಥವಾಗಿ ಕನ್ನಡದಲ್ಲಿ ಬರೆದರು. ಅವರ ಕಾಲಕ್ಕೆ ಸಮಕಾಲೀನ ವಿಷಯಗಳನ್ನೊಂಳಗೊಂಡ ರಾಜಕೀಯ, ಚಿಗುರಿಕೊಳ್ಳುತ್ತಿದ್ದ ಕೈಗಾರೀಕರಣ, ಅದರ ನೆರಳಲ್ಲೇ ಬದಲಾದ ನಮ್ಮ ಸಾಮಾಜಿಕ ಪರಿಸ್ಥಿತಿ ಎಲ್ಲವನ್ನೂ ಅಳವಡಿಸಿ ಬರೆಯುತ್ತಿದ್ದರು. ನಿನ್ನ ಫೇವರೇಟ್ ಲೇಖಕ ಪೂ.ಚಂ.ತೇ ಸಾಹಿತ್ಯವಂತೂ ಚಾರಿತ್ರಿಕ, ವೈಜ್ಞಾನಿಕ, ಮಾಹಿತಿಗಳ ಆಗರವಲ್ವಾ? ಕರ್ವಾಲೋ, ಜುಗಾರಿಕ್ರಾಸ್ ಗಳಲ್ಲಿ ಕಥೆಗಳ ಜೊತೆಗೆ ಒಂಥರಾ ಅದ್ಬುತವೆನಿಸುವ ವಿಷಯಗಳೆಷ್ಟಿದ್ದವು ಹೇಳು. ಅವರ ಮಿಲೇನಿಯಮ್ ಸೀರಿಸ್ ಓದಿಯೇ ಎಷ್ಟು ವಿಷಯಗಳನ್ನು ತಿಳಿದುಕೊಂಡಿಲ್ಲ ನಾವು. ಇಡೀ ಪ್ರಪಂಚವನ್ನೇ ಸುತ್ತಿಸಿಬಿಟ್ಟಿದ್ದಾರೆ. ಭೈರಪ್ಪನವರ ಸಾಹಿತ್ಯ ಓದಿದರೆ ಅದರಲ್ಲಿ ಅದೆಷ್ಟು ಅಧ್ಯಯನ ಶೀಲತೆ ತುಂಬಿರುತ್ತದಲ್ವಾ? ಎಷ್ಟು ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಳ್ಳಬಹುದು. ಎಷ್ಟು ಸತ್ಯಗಳನ್ನು ಅರಿಯಬಹುದು.


ಅದೇ ಈಗಿನ ಲೇಖಕರನ್ನು ನೋಡು. ಕನ್ನಡ ಸಾಹಿತ್ಯವೆಂದರೆ ಅದೇ ’ಜುಟ್ಟಿನ ಮಲ್ಲಿಗೆ’ ಸಾಹಿತ್ಯವೆಂದು ತೀರ್ಮಾನಿಸಿಬಿಟ್ಟಂತಿದೆ. ಒಬ್ಬ ಅಂಕಣ ಕಾರ ಬರೆಯಲು ಶುರು ಮಾಡಿದ ಎಂದರೆ ಅಡಿಗರು ಹಿಂಗೆಂದರು, ಬೇಂದ್ರೆ ಹಾಗೆಂದರು, ಯೇಟ್ಸ್ ಅದು ಬರೆದ, ಶೇಕ್ಸ್ ಪಿಯರ್ ಇದು ಬರೆದ ಎಂದು ಬರೆದೇ ತುಂಬಿಬಿಡುತ್ತಾನೆಯೇ ಹೊರತು ತಾನು ಏನನ್ನುತ್ತೇನೆ ಎಂಬುದನ್ನೇ ಹೇಳುವುದಿಲ್ಲ. ಇನ್ನು ಕೆಲವರದ್ದು ನೋಡಬೇಕು. ಯಾವುದೋ ಇಂಗ್ಲೀಷ್ ಪುಸ್ತಕ ಓದಿಕೊಂಡು ಬರುವುದು, ಅಥವಾ ಇಂಗ್ಲೀಷ್ ಸಿನಿಮಾ ನೋಡಿಕೊಂಡು ಬರುವುದು , ನಂತರ ಅದರಲ್ಲಿನ ಕೆಲವು ಸಾಲುಗಳನ್ನು ಉಲ್ಲೇಖಿಸಿ ಆಹ್ ಅದ್ಭುತವಾಗಿದೆ ಎಂದು ಬರೆದುಬಿಡುವುದು. ತಮ್ಮ ಇಂಗ್ಲೀಷ್ ಪಾಂಡಿತ್ಯ ಪ್ರದರ್ಶನದ ಜೊತೆ ಕನ್ನಡದಲ್ಲಿ ಏನೂ ಬರುತ್ತಿಲ್ಲ ಎಂದು ಕೊರಗುವುದು. ಕೆಲವೊಮ್ಮೆ ನೋಡಿದ್ರೆ ಅವರಿಗೆ ಕನ್ನಡ ಓದುವಾಗ ಏನೂ ಭಾವನೆಗಳೇ ಬರೋಲ್ವೇನೋ ಅನ್ನಿಸಿಬಿಡತ್ತೆ. ಸರಿ ನೀನೆ ಬರೆಯಯ್ಯ ಎಂದು ಕೂರಿಸಿದರೆ ಆತ ಬರೆಯುವುದು ಮತ್ತದೇ ಗೊಡ್ಡು ಕಥೆ - ಪಟ್ಟಣದಿಂದ ೪೦ ಕಿ.ಮೀ ದೂರದಲ್ಲಿ ಮುಖ್ಯರಸ್ತೆಯಿಂದ ೩ ಮೈಲಿ ನೆಡೆದುಕೊಂಡು ಹೋಗಿ ಸೇರುವ ಕಾಡಿನ ನಡುವೆಯ ಹಳ್ಳಿಯೊಂದರಲ್ಲಿ ತೋಟದ ಮನೆಯ ದೇವರ ಕೋಣೆಯಲ್ಲಿ ವಿಶ್ವನಾಥ ಶಾಸ್ತ್ರಿಗಳು ಮೂಗು ಹಿಡಿದುಕೊಂಡು ಸಂಧ್ಯಾವಂದನೆ ಮಾಡುತ್ತಿದ್ದರು, ಹಿತ್ತಲಲ್ಲಿ ಅವರ ಹೆಂಡತಿ ಅತ್ತೆಯನ್ನು ಶಪಿಸುತ್ತ ಮುಸುರೆ ತಿಕ್ಕುತ್ತಿದ್ದಳು" ಎಂಬುದು.! ಮತ್ತೂ ಕೆಲವರಿಗೆ ತಾವು ’ಢಿಫರೆಂಟ್’ ಆಗಿ ಬರೆಯಬೇಕೆಂಬ ಚಪಲ. ಹಾಗೆ ಢಿಪರೆಂಟ್ ಆಗಿ ಬರೆಯುವುದೆಂದರೆ ಯಾರಿಗೂ ಅರ್ಥವಾಗದ ಹಾಗೆ ಬರೆಯುವುದೋ ಅಥವ ಕಥೆಗಳನ್ನು ಅರ್ಧ ಬರೆದು ಮುಕ್ತಾಯ ಕೊಟ್ಟುಬಿಡುವುದೋ ಅಂದುಕೊಂಡಿದ್ದಾರೆ. ಅದರಲ್ಲೂ ಮತ್ತದೇ ವಿಷಯ.. ಪ್ರೀತಿ, ಪ್ರೇಮ, ಗಂಡ, ಹೆಂಡತಿ, ಹಾದರ, ಡೈವೋರ್ಸು, ಮದುವೆ, ಮಾರಲ್ಸು, ಎಥಿಕ್ಸು.... ಕರ್ಮಕಾಂಡ! ಅವತ್ತಿನ ಒಂದು ಕಾರ್ಯಕ್ರಮದಲ್ಲಿ ಹಿರಿಯರೊಬ್ಬರು ವ್ಯಂಗ್ಯವಾಡಿದ್ದನ್ನು ನೀನೂ ಕೇಳಿಸಿಕೊಂಡೆಯಲ್ಲ .. ಕನ್ನಡದಲ್ಲಿ ೧೦ ವರುಷ ಕವನಗಳನ್ನು ಬರೆಯುವುದನ್ನು ನಿಷೇಧಿಸಿಬಿಡಬೇಕು ಅಂತ.. ಸ್ವಲ್ಪ ಜಾಸ್ತಿ ಆಯ್ತು ಅನ್ನಿಸಿದರೂ ಅದೆಷ್ಟು ಸರಿ ಅನ್ನಿಸಿಬಿಡುತ್ತದೊಮ್ಮೊಮ್ಮೆ. ಬರೆಯಲೆ ಬೇಕಂತಿದ್ದರೆ ಮನೆಯಲ್ಲಿ ದನ ಕರು ಹಾಕಿತು ಎಂದು ಬರೆದರೆ ಸಾಕು, ಅದು ಬೆದೆಗೆ ಬಂದಾಗಿನಿಂದ ಹಿಡಿದು ಕರ ಹೇಗೆ ಹಾಕಿತು ಅಂತೆಲ್ಲಾ ವಿವರಿಸಿ ಕೊರೆಯುವುದು ಬೇಡ ಎಂದು ಮತ್ತೊಬ್ಬರು ಹೇಳಿದಾಗ ನೀನು ಜೋರಾಗಿ ನಕ್ಕಿದ್ದೆ.

ಅಲ್ಲ, ಇದೆಲ್ಲಾ ಭಾವನೆಯ ವಿಷಯಗಳು ಬರಹಗಳಲ್ಲಿ ಇರುವುದು ಬೇಡವೆಂದು ನಾನು ಹೇಳುತ್ತಿಲ್ಲ . ಆದ್ರೆ ಬರೇ ಅದೇ ಆಗಿಬಿಟ್ಟರೆ ಏನು ಚಂದ ಹೇಳು. ಈಗೇನೋ ಪರ್ವಾಗಿಲ್ಲ, ಹಳೇ ತಲೆಮಾರಿನ ಓದುಗರೂ ಬೇಕಾದಷ್ಟಿರುವುದರಿಂದ ನಡೆಯುತ್ತದೆ. ಆದರೆ ಈಗಿನ ಕಾಲಕ್ಕೆ ತಕ್ಕಂತೆ, ಈಗಿನ ಯುವ ಜನಾಂಗಕ್ಕೆ ತಕ್ಕಂತೆ ಕಥೆಗಳನ್ನೋ, ಬರಹಗಳನ್ನೋ ಬರೆಯುವುದು ಬಿಟ್ಟು ಅಜ್ಜಿ ಕತೆಗಳನ್ನೇ ಬರೆಯುತ್ತಿದ್ದರೆ ಮುಂದಿನ ಪೀಳಿಗೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಕಳೆದುಕೊಂಡು ಬಿಡುತ್ತಾರಲ್ವೇನೆ ?. ಚಾರ್ಲಿ ಸೆಂಟಿನ ಈ ಯುಗದಲ್ಲಿ ಇನ್ನೂ "ನೀ ಮುಡಿದ ಮಲ್ಲಿಗೆ ಹೂವು ...." ಅಂತ ಬರೆಯುತ್ತಾ ಕೂತರೆ ಜಡೆಯೇ ಇಲ್ಲದ ಹುಡುಗಿರನ್ನು ನೋಡುತ್ತ ಬೆಳೆಯುವ ಈಗಿನ ಮಕ್ಕಳಿಗೆ ಅದು ಇಷ್ಟವಾಗುವುದು ಹೇಗೆ ಹೇಳು? ಹಾಗಂತ ಅವರಿಗೆ ಮಲ್ಲಿಗೆ ಘಮದ ಪರಿಚಯವೇ ಬೇಡವಾ ಅಂತ ಕೇಳುತ್ತೀಯಾ? ಅದಕ್ಕೆ ಅರ್ಧ ಶತಮಾನದ ಸಾಹಿತ್ಯ ಇದೆ. ಅದನ್ನು ಓದಿಸಿದರಾಯಿತು. ಮತ್ತೆ ಮತ್ತೆ ಅದನ್ನೇ ಬರೆಯಬೇಕಿಲ್ಲ ಅಲ್ಲವಾ? ಆ ಕೆಲವು ಇಂಗ್ಲೀಷು ಪುಸ್ತಕಗಳು ಹೇಗಿರುತ್ತವೆ ನೋಡಿದ್ದೀಯಾ. ಅದೇ ಹಿಂದಿನ ವರುಷ ಕೊಟ್ಟಿದ್ದೆಯಲ್ಲ ’ಫೈವ್ ಪಾಯಿಂಟ್ ಸಮ್ ಒನ್’, ’ಒನ್ ನೈಟ್ ಅಟ್ ಕಾಲ್ ಸೆಂಟರ್’ ಅವುಗಳಲ್ಲಿ ಏನಿವೆ ಹೇಳು. ಆದರೂ ಅವು ಲಕ್ಷಾಂತರ ಮಾರಾಟವಾದವು. ಇಂಗ್ಲೀಷಿನ ಮಾರ್ಕೆಟ್ಟು ದೊಡ್ಡದು ಎಂಬುದೊಂದೇ ಕಾರಣವಲ್ಲ ಅದಕ್ಕೆ. ಅದಕ್ಕೆ ಮುಖ್ಯ ಕಾರಣ ಅವರು ಆರಿಸಿಕೊಂಡಿದ್ದು ಸಮಕಾಲೀನ ವಿಷಯ. ಯುವಜನಾಂಗಕ್ಕೆ ಸಂಬಂಧ ಪಟ್ಟಿದ್ದು. ಆ ಕತೆಯ ಜೊತೆಜೊತೆಯಲ್ಲೆ ಅದೆಷ್ಟು ಭಾವನೆಗಳಿಂದ ಹಿಡಿದು ಜಾಗತೀಕರಣ, ಶಿಕ್ಷಣ, ಸಮಾಜ, ಸಂಬಂಧ ಇನ್ನಿತರ ಅದೆಷ್ಟು ಸಮಕಾಲೀನ ವಿಷಯಗಳಿವೆ. ಅದನ್ನೂ ಕೂಡ ಗೇಲಿ ಮಾಡಿ ಮೈ ಪರಚಿಕೊಂಡು ಬರೆದಿದ್ದರು ನಮ್ಮ ಕನ್ನಡದ ಲೇಖಕರೊಬ್ಬರು. ಲಿಂಕ್ ಕಳಿಸುತ್ತೇನೆ ಓದುವಿಯಂತೆ. ರಾಮಾಯಣದಲ್ಲಿ ರಾಮ ಕೊನೆಗೆ ಸೀತೆ ಬೆಂಕಿಗೆ ಹಾರುವಂತೆ ಮಾಡಿದ್ದು ದೊಡ್ಡ ತಪ್ಪು ಎಂದು ಇನ್ನೂ ಸ್ತ್ರೀವಾದದ ಚರ್ಚೆ ಮಾಡುತ್ತಾ ಕೂರುವುದರಲ್ಲೇನು ಅರ್ಥವಿದೆ?! ರಾಮಾಯಣವೇನು ಬದಲಾಗುವುದಿಲ್ಲ ಅಲ್ಲವಾ?


ಮತ್ತೇನಿಲ್ಲ. ಕನ್ನಡದಲ್ಲೂ ಫ್ಯಾಂಟಸಿ, ಫಿಕ್ಷನ್, ರೊಮ್ಯಾನ್ಸ್, ಸಾಹಸ ಇತ್ಯಾದಿ ... ಒಟ್ಟಾಗಿ ಹೊಸ ಪೀಳಿಗೆಯನ್ನು ಆಕರ್ಷಿಸುವ, ಹಿಡಿದಿಡುವ ಪುಸ್ತಕಗಳು ಮುಖ್ಯವಾಹಿನಿಯಲ್ಲೇ ಬಂದರೆಷ್ಟು ಚಂದ ಅಲ್ವಾ?. ಆದರೇನು ಮಾಡುವುದು, ನಮ್ಮ ಕೆಲವರು ಅಂತಹ ಸಾಹಿತ್ಯವನ್ನು ಜಂಕ್ ಸಾಹಿತ್ಯವೆಂದು ಕರೆದು ಯಾರೂ ಓದದಂತೆ ಮಾಡಿಬಿಡುತ್ತಾರೆ.! ಬದಲಾಗಬೇಕು ಇದು. ಎಲ್ಲ ವಿಷಯಗಳ ಬಗ್ಗೆ ಕನ್ನಡದಲ್ಲೇ ಸಿಗುವಂತಾಗಬೇಕು. ಅದೇ ಹೊಸ ಬಾಟಲಿಯಲ್ಲಿ ಹಳೇ ಹೆಂಡ ತುಂಬಿ ತುಂಬಿ ಕೊಡುವುದರ ಬದಲು ಈಗಿನ ಕಾಲದ ಕಥಾವಸ್ತು, ಸನ್ನಿವೇಶಗಳನ್ನು ಒಳಗೊಂಡಿರುವ ಕತೆ ಕಾದಂಬರಿಗಳು ಬರಬೇಕು. ಮಾಹಿತಿಪೂರ್ಣ ಬರಹಗಳು, ಪುಸ್ತಕಗಳು ಬೇಕು. ವಿಜ್ಞಾನ ಬರಹಗಳು ಬರಬೇಕು. ಅಡುಗೆ, ಕೃಷಿಯಿಂದ ಹಿಡಿದು ದೇಶವಿದೇಶ, ಪರಮಾಣು, ನಕ್ಷತ್ರಗಳವರೆಗೂ ಪ್ರಸ್ತುತ ವಿಷಯಗಳ ಬಗ್ಗೆ, ಪ್ರಸ್ತುತ ಕ್ಷೇತ್ರಗಳ ಬಗ್ಗೆ ಹೆಚ್ಚು ಹೆಚ್ಚು ಬರಹಗಳು ಬರಬೇಕು. ಸುಮ್ಮನೆ ಒಂದೊಂದಕ್ಕೆ ಒಂದೊಂದು ಭಾಷೆಯ ಮೊರೆ ಹೋಗುವುದು ತಪ್ಪಬೇಕು. ಏನಿಲ್ಲ, ಬರೆಯುವವರೆಲ್ಲರು ಅವರವರು ಓದುತ್ತಿರುವ, ಕೆಲಸ ಮಾಡುತ್ತಿರುವ ಕ್ಷೇತ್ರಗಳ ಬಗ್ಗೆ, ಇನ್ನಿತರ ಆಸಕ್ತಿಯ ವಿಷಯಗಳ ಬಗ್ಗೆಯೇ ಬರೆದರೆ ಸಾಕು ಎಷ್ಟೋ ಸಹಾಯವಾಗುತ್ತದೆ.. ನಮ್ಮವರಿಗೆ ಎಲ್ಲವೂ ನಮ್ಮ ಭಾಷೆಯಲ್ಲೆ ಸಿಗುತ್ತಿದೆ ಎಂದು ಮನವರಿಕೆಯಾಗಬೇಕು. ಈ ರೀತಿ ಬರಹಗಳು ಇಲ್ಲವೇ ಇಲ್ಲ ಅಂತ ಏನೂ ಇಲ್ಲ. ಬೇಕಾದಷ್ಟಿವೆ , ಆದರೆ ಮುಖ್ಯವಾಹಿನಿಗೆ ಬರುತ್ತಿಲ್ಲ. ಪರಿಚಯವಾಗುತ್ತಿಲ್ಲ, ಪ್ರಚಾರ ದೊರೆಯುತ್ತಿಲ್ಲ, ಉಪಯೋಗವಾಗುತ್ತಿಲ್ಲ. ಊಟದಲ್ಲಿ ಕೋಸಂಬರಿ ಇರಲಿ, ಕೋಸಂಬರಿಯೇ ಊಟವಾಗುವುದು ಬೇಡ. ಮೇಲಾಗಿ ಈಗಿನ ಪೀಳಿಗೆಗೆ ಕೋಸಂಬರಿಗಿಂತ ಚಿಪ್ಸ್ ಇಷ್ಟ. ಮನೆಯಲ್ಲಿ ಒಳ್ಳೆಯ ಚಿಪ್ಸ್ ಸಿಗಲಿಲ್ಲವೆಂದರೆ ಅವರು Lays ಮೊರೆಹೋಗುವುದಂತೂ ಖಾತ್ರಿ. ಹೀಗಾಗದಿರಲಿ ಮತ್ತು ನಮ್ಮ ಯುವ ಬರಹಗಾರರು ಈ ನಿಟ್ಟಿನಲ್ಲಿ ಮುಂದುವರೆಯಲಿ ಎಂಬುದಷ್ಟೆ ನನ್ನ ಆಶಯ.

"ಇಷ್ಟೆಲ್ಲಾ ಮಾತಾಡ್ತೀಯಲ, ನೀನೆ ಬರೆಯೋ ನೋಡೋಣ" ಅಂತೀಯಾ ಅಲ್ವಾ ನೀನು :)

24 ಕಾಮೆಂಟ್‌ಗಳು:

Harish - ಹರೀಶ ಹೇಳಿದರು...

ಬಂಡಾಯ ಅಭ್ಯರ್ಥಿ!

ಅನಾಮಧೇಯ ಹೇಳಿದರು...

ಕನ್ನಡದಲ್ಲಿ ವೈವಿಧ್ಯಮಯ ಸಾಹಿತ್ಯ ಬರಬೇಕು ಅನ್ನೋ ನಿಮ್ಮ ವಾದ ಒಪ್ಪತಕ್ಕದ್ದೇ. ಆದರೆ ಇಂಗ್ಲಿಷ್ ಸಾಹಿತ್ಯ/ಸಿನಿಮಾ ಜೊತೆ ಕನ್ನಡವನ್ನು ಹೋಲಿಸೋದು ಸರಿಯಲ್ಲ. ಇಂಗ್ಲಿಷ್ ಸಾಹಿತ್ಯ/ಸಿನಿಮಾ ವನ್ನು ಪ್ರಪಂಚದ ವಿವಿದ ದೇಶಗಳ ಜನ ಮಾಡುವುದರಿಂದ ಸಹಜವಾಗಿ ಅದರಲ್ಲಿ ವೈವಿಧ್ಯತೆ ಹೆಚ್ಚು.

ಒಂದು ಸಲಾ ಬೇರೆಲ್ಲಾ ದೇಶಗಳ ಸಾಹಿತ್ಯವನ್ನು ಓದಿಕೊಂಡು ಬನ್ನಿ. ಆಮೇಲೆ, ವಿಶ್ವನಾಥರಾಯರು ಮೂಗು ಹಿಡಿದುಕೊಂಡು ಸಂಧ್ಯಾವಂದನೆ ಮಾಡುವ ಕತೆ ಇಷ್ಟವಾಗದಿದ್ದರೆ ಹೇಳಿ.

ಏಕತಾನತೆ ಒಂದು ದಿನ ಬೋರ್ ಹೊಡೆಸೇ ತೀರುತ್ತೆ. ಆಗಾಗ್ಗೆ ಬದಲಾವಣೆ ಮಾಡುತ್ತಿರೋದೇ ಇರುವ ಉಪಾಯ.

-ಶೇಷಾದ್ರಿ

ಶ್ರೀನಿಧಿ.ಡಿ.ಎಸ್ ಹೇಳಿದರು...

ಅರೆಬೆಂದ ಬರಹ.

ಎಲ್ಲವನ್ನೂ ನೀನೇ ಹೇಳುತ್ತೀಯ! ಬರೀತಿಲ್ಲ ಅಂತಲೂ, ಬರದಕ್ಕೆ ಪ್ರಚಾರ ಸಿಗ್ತಾ ಇಲ್ಲ ಅಂತಲೂ.. ಕನ್ನಡದಲ್ಲಿ ಬರ್ತಾ ಇರೋ ಅದೆಷ್ಟು ಹೊಸ ಪುಸ್ತಕಗಳನ್ನ ನೀನು ಓದ್ತ ಇದ್ದೀಯ ಅಂತ ನಂಗೆ ಗೊತ್ತಿಲ್ಲ. ವಸುಧೇಂದ್ರರ ಛಂದ ಪುಸ್ತಕ ಹೊರ ತರ್ತಿರೋ ಪುಸ್ತಕಗಳು, ಕೆ.ಎನ್.ಗಣೇಶಯ್ಯರ ಬರಹಗಳು.. ಜೋಗಿಯವರ ಬರಹಗಳು, ಅಶೋಕ ಹೆಗಡೆ, ವಿವೇಕ ಶಾನುಭಾಗ, ಎಷ್ಟ್ ಜನ ಹೊಸ ತರ ಬರೀತಿದಾರೆ ಮಾರಾಯ!ಅಂಕಿತ ಪ್ರಕಾಶನ ಅದೆಷ್ಟು ವೈವಿಧ್ಯಮಯ ಸಾಹಿತ್ಯ ಹೊರತರ್ತಿದೆ ಗೊತ್ತಾ?

ನಮ್ಮ ಕೆಲವರು ಅಂತಹ ಸಾಹಿತ್ಯವನ್ನು ಜಂಕ್ ಸಾಹಿತ್ಯವೆಂದು ಕರೆದು ಯಾರೂ ಓದದಂತೆ ಮಾಡಿಬಿಡುತ್ತಾರೆ.!- ಯಾರೋ ಇದು? ನನಗೆ ತಿಳಿದ ಹಾಗೆ ಕನ್ನಡ ಸಾಹಿತ್ಯ ಕ್ಷೇತ್ರ ಹೊಸ ಬರಹಗಾರರನ್ನ ಸ್ವಾಗತಿಸುತ್ತಿದೆ, ಪ್ರೋತ್ಸಾಹ ಸಿಗ್ತಿದೆ.

ಮತ್ತೆ ಅಷ್ಟಕ್ಕೂ ಬರೆಯೋದು ಅವರವರ ಭಾವಕ್ಕೆ ಬಿಟ್ಟ ವಿಚಾರ! ಚಾರ್ಲಿ ಸೆಂಟಿನ ಯುಗ ಅಂತ, ನನ್ನಂತವನು ಕವನ ಬರೆಯೋದು ಬಿಡೋಕೆ ಬರೋದಿಲ್ಲ!!

Vijay Joshi ಹೇಳಿದರು...

ಮೊದಲಿಗೆ ಇಂತಹ ಚಿಂತನಾರ್ಹ ಲೇಖನವನ್ನು ಕೊಟ್ಟಿದ್ದಕ್ಕೆ ವಿಕಾಸ್ ಹೆಗಡೆಯವರಿಗೆ ಧನ್ಯವಾದಗಳು.
ನಾನು ಕನ್ನಡ ಸಾಹಿತ್ಯದ ವಿದ್ಯಾರ್ಥಿಯಲ್ಲ. ಹಾಗಾಗಿ ಸಾಹಿತ್ಯದ ಬಗ್ಗೆ ಅಕಾಡೆಮಿಕ್ ಆಗಿ ಮಾತನಾಡಲು ಬರುವುದಿಲ್ಲ.
ನಾನು ಕಂಡಂತೆ ಕನ್ನಡದಲ್ಲಿ ವಿಜ್ಞಾನಕ್ಕೆ ಸಂಬಂದಪಟ್ಟ ಪುಸ್ತಕಗಳ ತೀವ್ರ ಕೊರತೆಯಿದೆ. ಕನ್ನಡಿಗರು ಕಂಪ್ಯೂಟರಿನ ವಿಚಾರದಲ್ಲಿ ಜಗತ್ತಿನಲ್ಲೇ ಹೆಸರುಮಾಡಿದ್ದರೂ ಕನ್ನಡದಲ್ಲಿ ಕಂಪ್ಯೂಟರಿನ ಸಮಗ್ರ ಪರಿಚಯ ಮಾಧಿಸುವ ಒಂದೇ ಒಂದು ಒಳ್ಳೆಯ ಪುಸ್ತಕವಿದೆಯೇ? ಇದ್ದರೆ ದಯವಿಟ್ಟು ತಿಳಿಸಿ.
ಕನ್ನಡ ಪತ್ರಿಕೆಗಳಲ್ಲೂ ಕೂಡ ಅಂತಾರಾಷ್ಟ್ರೀಯ ವಿಚಾರಗಳ ಕುರಿತು ವೈಚಾರಿಕ ಲೇಖನಗಳು ಬರುವುದು ಬಹಳ ಅಪರೂಪ. ಇದಕ್ಕೆ ಕಾರಣವೇನು?
ಜಾಗತೀಕರಣದ ಇಂದಿನ ಯುಗದಲ್ಲೂ ಹಳ್ಳಿಗಾಡಿನ ಕಥೆಗಳನ್ನು ಮಾತ್ರ ಓದಿಕೊಂಡಿದ್ದರೆ ಸಾಕೆ?

ಸುಪ್ರೀತ್.ಕೆ.ಎಸ್. ಹೇಳಿದರು...

ವಿಕಾಸ್,
ಲೇಖನದ ವಿಷಯ ಶ್ರೀನಿಧಿ ತಿಳಿಸಿದ ಹಾಗೆ ಅರೆಬೆಂದ ಹಾಗೆ ಇದ್ದರೂ ಅದನ್ನು ನಿರೂಪಿಸುವ ವಿಧಾನದಲ್ಲಿನ ಚಾಣಾಕ್ಷ್ಯತೆಯನ್ನು ಮೆಚ್ಚದಿರಲು ಸಾಧ್ಯವಾಗಲಿಲ್ಲ!
ಕನ್ನಡದಲ್ಲಿ ವೈವಿಧ್ಯತೆಗೆ ಕೊರತೆಯಿಲ್ಲ. ಒಟ್ಟು ಸಮಾಜದ ಬೆಳವಣಿಗೆಯನ್ನು, ಸ್ಥಿತಿಗತಿಯನ್ನು ಗಮನದಲ್ಲಿರಿಸಿಕೊಂಡು ನೋಡಿದರೆ ಕನ್ನಡ ಬೇರಾವ ಭಾಷೆಗೂ ಕಡಿಮೆಯಿಲ್ಲ.
ಕಾವ್ಯದ, ಸಾಹಿತ್ಯದ ಉದ್ದೇಶ ಏನು ಎಂಬುದನ್ನು ಅರಿತುಕೊಂಡರೆ ಕಾದಂಬರಿ ಮಾಹಿತಿಪೂರ್ಣವಾಗಿರಬೇಕು, ಕಾದಂಬರಿ ಮಾಡರ್ನಾಗಿರಬೇಕು ಎಂಬ ಅಪೇಕ್ಷೆಗಳು ಹುಟ್ಟುವುದಿಲ್ಲ.
ಇನ್ನು ಚೇತನ್ ಭಗತ್ ಬಗ್ಗೆ ಯಾರೋ ಏನನ್ನೋ ಬರೆದಿದ್ದಾರೆ ಎಂದು ಪಾಸಿಂಗ್ ಕಮೆಂಟ್ ಮಾಡಿದ್ದೀರಲ್ಲ, ಆತನೊಬ್ಬನೇ ಪ್ರಸ್ತುತ ಸಂಗತಿಗಳ ಬಗ್ಗೆ ಬರೆಯುತ್ತಿಲ್ಲ. ಅನೇಕರು ಇದ್ದಾರೆ. ಆದರೆ ಆತನ ಪ್ರಚಾರದ ಗಿಮಿಕ್ಕುಗಳಿಂದ ಅವನ ಪುಸ್ತಕಗಳು ಸೇಲಾಗಿವೆ. ಆತನೇ ಸಂದರ್ಶನವೊಂದರಲ್ಲಿ ‘ನಾನು ನನ್ನ ಪುಸ್ತಕಗಳನ್ನು ಚಪ್ಪಲಿ ಮಾರಿದಂತೆ ಮಾರುತ್ತೇನೆ. ಚಪ್ಪಲಿಯನ್ನು ಕೊಂಡುಕೊಳ್ಳುವವರು ಅದನ್ನು ಧರಿಸಬೇಕು, ಆದರೆ ಪುಸ್ತಕವನ್ನು ಓದಲೇ ಬೇಕಿಲ್ಲ.’ ಎಂದಿದ್ದಾನೆ. ಇಂಥವರನ್ನು ಗೇಲಿ ಮಾಡದೆ ಇನ್ನೇನು ಮಾಡಬಹುದು.
ಉಳಿದಂತೆ ಬಹುತೇಕ ಆರೋಪಗಳಿಗೆ ನಿಮ್ಮ ಸೀಮಿತ ಆಸಕ್ತಿ ಹಾಗೂ ತಿಳುವಳಿಕೆ ಕಾರಣವೆನ್ನಬಹುದು. ಆದರೆ ನಿಮ್ಮ ಲೇಖನದ spirit ಪ್ರಶ್ನಾತೀತವಾದದ್ದು.

ಸಿಂಧು Sindhu ಹೇಳಿದರು...

ವಿಕಾಸ್,

ಸುಪ್ರೀತರ ಅಭಿಪ್ರಾಯವೇ ನನ್ನದೂ ಕೂಡ.
ಎಲ್ಲರಿಗೂ ಅವರದ್ದೇ ಆಸಕ್ತಿ ಮತ್ತು ಅಭಿವ್ಯಕ್ತಿ ಇರುತ್ತದೆ. ಯಾರೊಬ್ಬರದೂ ತಪ್ಪು/ಅತ್ಯುತ್ತಮ ಅಂತ ಅಳೆಯುವ ಒಂದೇ ಒಂದು ಮಾಪನ ಎಲ್ಲೂ ಇರುವುದಿಲ್ಲ.
ಮತ್ತು ನೀವು ಈಗ ಬರೆದಿರುವ ವಿಷಯವನ್ನೇ ಹಲವರು ಹಲಶೈಲಿಯಲ್ಲಿ ಎಲ್ಲಾ ಕಾಲದಲ್ಲೂ ಬರೆಯುತ್ತ ಬಂದಿದ್ದಾರೆ. ನಾವು ಸುವರ್ಣ ಯುಗ ಅಂದುಕೊಂಡ ಕಾಲದಲ್ಲೂ ಈ ಆರೋಪವಿತ್ತು.

ಇದಕ್ಕೆ ಕೆ.ಎಸ್.ನರಸಿಂಹಸ್ವಾಮಿಯವರ ಒಂದು ಸಾಲು ಸರಿಯಾಗಿ ಹೋಲುತ್ತದೆ. "ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ"

ಕನ್ನಡ ಸಾಹಿತ್ಯವೆಂದರೆ ಬರಿಯ ಬ್ಲಾಗ್ ಸಾಹಿತ್ಯ ಅಲ್ಲ. ಬ್ಲಾಗ್ ಒಂದು ವೈಯಕ್ತಿಕ ನೆಲೆಯಲ್ಲಿ ಹರಡುತ್ತ ಹೋಗುವ ಕಟ್ಟೆಬದಿಯ ಮಾತಿನಂತೆ ಇರುವುದೂ ನಿಜ. ಅದು ಅದರ ಒಂದು ಮಿತಿಯಿರಬಹುದು. ಹಾಗಂತ ಸಾರಾಸಗಟಾಗಿ ಕನ್ನಡ ಸಾಹಿತ್ಯವನ್ನೇ ಗುಡಿಸಿ ಬಿಸಾಕುವಂತಹದೇನೂ ನಡೆದಿಲ್ಲ. ದಯವಿಟ್ಟು ಇತ್ತೀಚಿನ ಕೆಲ ಪ್ರಕಟಣೆಗಳನ್ನು ಓದಿ ನೋಡಿ ನಂತರ ಬರೆಯಿರಿ.
ನವಕರ್ನಾಟಕದ ಹಲವು ವೈಜ್ಞಾನಿಕ ಪುಸ್ತಕಗಳು, ಅಂಕಿತದವರ ಸಾಹಿತ್ಯ ಪ್ರೀತಿ, ಇವರಲ್ಲದೆ ಎಲ್ಲ ಕಾಲಕ್ಕೂ ಹೊಸಬರು ಮತ್ತು ಹಳಬರ ಕೃತಿಗಳನ್ನು ಪ್ರಕಟಿಸುತ್ತಲೇ ಬಂದಿರುವ ಅಭಿನವ,ಛಂದ,ಸಾಹಿತ್ಯ ಭಂಡಾರ, ಗೀತಾ, ಎಲ್ಲವೂ ಸಾಕಷ್ಟು ಮೌಲಿಕ ಪುಸ್ತಕಗಳನ್ನು ಹೊರತಂದಿವೆ.
ಇಂಗ್ಲಿಷಿನ ಎಷ್ಟೊಂದು ವೈವಿಧ್ಯಮಯ ಪುಸ್ತಕಗಳು ಕನ್ನಡಕ್ಕೆ ಅನುವಾದಗೊಂಡಿವೆ. ನಮ್ಮ ಪ್ರಾಣಿ ಪಕ್ಷಿ ಸಂಕುಲಕ್ಕೆ, ಅರಣ್ಯ ಸಂಪತ್ತಿಗೆ ಸಂಬಂಧಿಸಿದ ಪುಸ್ತಕಗಳ ಸರಮಾಲೆಯೇ ಇದೆ.
ಮತ್ತು ಅವವೇ ಮದುವೆ,ಸಂಸಾರ,ಬಾಲ್ಯ,ನೆನಪು , ಪ್ರೀತಿ, ಗುಲ್ಮೊಹರ್, ಗಾಂಧಿಬಜಾರ್, ನದೀತೀರ, ಇವುಗಳನ್ನಾಧರಿತಗೊಂಡ ಕತೆಕವಿತೆಗಳು ನಮ್ಮ ಸುತ್ತಲೂ ಇರುವ ಬದುಕು ಮತ್ತು ಜೀವನಪ್ರೀತಿಯನ್ನೇ ಹೇಳುತ್ತಿವೆ. ಎಲ್ಲರೂ ಪೂಚಂತೇ, ಕಾರಂತರಾಗುವುದು ತೀರಾ ಬಯೋಟೆಕ್ ಐಡಿಯಾ ಆಯಿತು. :)

’ವಿಕಾಸವಾದ’ದ ತಿರುಳೇ - ಮೂಲಸ್ಥಿತಿಯ ನೆಲೆಗಟ್ಟಿನಲ್ಲಿ ಆಯಾ ಕಾಲಕ್ಕೆ ತಕ್ಕಂತೆ ಬದಲಾಗುವ ಸಶಕ್ತ ಅಭಿವ್ಯಕ್ತಿ. ಅದು ಜೀವವಿರಬಹುದು, ಭಾವವಿರಬಹುದು, ವಿಚಾರ/ವಿಜ್ಞಾನ/ತಿಳುವಳಿಕೆ/ಶಕ್ತಿ/ಅನ್ಯಾಯ ಎಲ್ಲವೂ. ಬದಲಾಗುತ್ತಿರುತ್ತದೆ. ನಮಗೆ ಬದಲಾಗಿರುವುದನ್ನು ನೋಡುವ ಕಣ್ಣು ಮತ್ತು ಮನಸ್ಥಿತಿ ಬೇಕು.


ನಿಮ್ಮ ವಿಷಯ ನಿರೂಪಣೆಯ ಪ್ರತಿಭೆಗೆ ನನ್ನ ಅಭಿನಂದನೆಗಳು ಕೂಡಾ.

ಪ್ರೀತಿಯಿಂದ
ಸಿಂಧು

ವಿಕಾಸ್ ಹೆಗಡೆ/Vikas Hegde ಹೇಳಿದರು...

@ಹರೀಶ,
ಬಂಡಾಯವಲ್ಲ ಮಾರಾಯ, ನಮ್ಮ ಪಕ್ಷ ಇನ್ನೂ ಚೆನ್ನಾಗಿ ಬೆಳೆಯಲಿ ಎಂಬ ಆಸೆ.

@ಶೇಷಾದ್ರಿ
ನಿಮ್ಮಭಿಪ್ರಾಯಕ್ಕೆ ಧನ್ಯವಾದಗಳು. ನಾನು ಕೊನೆಗೆ ಒಂದೆರಡು ಇಂಗ್ಲೀಷ್ ಪುಸ್ತಕಗಳನ್ನು ಉಲ್ಲೇಖಿಸಿದ್ದು ಅವರ ಕತೆ ವಿಷಯದ ಆಯ್ಕೆಯ ಬಗ್ಗೆ ತಿಳಿಸಲು. ಉಳಿದಹಾಗೆ ಇಂಗ್ಲೀಷ್-ಕನ್ನಡ ಹೋಲಿಕೆ ಸರಿಯಲ್ಲ ಎಂಬುದು ಹೌದು. ವಿಶ್ವನಾಥರಾಯ ಗುಂಪಿನ ಕತೆಗಳು ದಶಕಗಳಿಂದ ಬೇಕಾದಷ್ಟು ಬಂದಿವೆ. ಅವು ಇಷ್ಟವೂ ಹೌದು, ಅಮೂಲ್ಯವೂ ಹೌದು. ಇರಲಿ. ಆದರೆ ಇನ್ನೂ ಅದೇ ಬರೆಯುತ್ತಿದ್ದರೆ ಈಗಿನ ಕತೆ, ಬರಹಗಳು ಬರುವುದು ಯಾವಾಗ, ಮುಂದಿನ ಪೀಳಿಗೆಗೆ ಆಸಕ್ತಿ ಕೆರಳಿಸಿ, ಉಳಿಸುವುದು ಹೇಗೆ ಅಂತ ನನ್ನ ಆತಂಕ!

@ಜೋಶಿ,
ನನ್ನ ಲೇಖನದ ಉದ್ದೇಶ ಅರ್ಥಮಾಡಿಕೊಂಡದ್ದಕ್ಕೆ ಥ್ಯಾಂಕ್ಯೂ. ನಾನೂ ಸಾಹಿತ್ಯದ ವಿದ್ಯಾರ್ಥಿಯಲ್ಲ ಅಥವಾ ಇನ್ಯಾವುದೇ ಸಾಹಿತ್ಯ ಟೀಕಿಸಲು ವಿಶೇಷ ಅರ್ಹತೆಗಳೂ ಇಲ್ಲ. ಆದರೂ ಒಬ್ಬ ಅಪ್ಪಟ ಕನ್ನಡ ಸಾಹಿತ್ಯ ಓದುಗ, ಅಭಿಮಾನಿಯಾಗಿ ಬರೆದಿದ್ದಷ್ಟೆ. ನೀವು ಕೇಳಿರುವ ಪ್ರಶ್ನೆಯನ್ನು ಎಲ್ಲರಿಗೂ ಕೇಳಬಯಸುತ್ತೇನೆ.

ಗಣೇಶ್ ಕೆ ಹೇಳಿದರು...

ಕೊಂಚ ಖಾರವಾಗೇ ಹೇಳಿದ್ದರೂ, ಕಹಿ ಸತ್ಯದ ಅನಾವರಣವಿದೆ. ಇದನ್ನ ಹಲವರು ಒಪ್ಪದಿರಬಹುದು. ಕನ್ನಡ ಸಾಹಿತ್ಯ ಅಜರಾಮರ, ಚಲನೆ ನಿರಂತರ ಎಂದೆಲ್ಲಾ ಬೆನ್ನು ತಟ್ಟಿಕೊಳ್ಳಬಹುದು.

ಆದರೆ, ವಾಸ್ತವವೇ ಬೇರೆ. ಕನ್ನಡದಲ್ಲಿ ಪ್ರಯೋಗಶೀಲತೆಯ ನವನವೀನ ಬರಹಗಳ ಕೊರತೆ ತುಂಬಾ ಇದೆ. ವಾಸ್ತವ ಪ್ರತಿಸ್ಪಂದಿಯಾದ ಸಮಾಜ ಮುಖಿ ಬರಹಗಳು ಇಂದಿನ ಅವಶ್ಯಕತೆ. ಅದನ್ನೆಲ್ಲಾ ಬಿಟ್ಟು ಹಳೇ ಪುರಾಣಗಳನ್ನೇ ಹೇಳುತ್ತಾ ಹೋದರೆ, ಅದೂ ಹಳೇ ನಿರೂಪಣೆಯಲ್ಲೇ ಕಾಲ ಹಾಕಿದರೆ ಬದಲಾಗುತ್ತಿರುವ ಪರಿಸ್ಥಿತಿಗೆ ಬರಹದ ವಸ್ತು, ವಿಚಾರಗಳು ಬದಲಾಗದಿದ್ದರೆ, ಹಿನ್ನಡಿಗೆಗೆ ಕಾರಣವಾಗುತ್ತದೆ ಇಲ್ಲವೇ ನಿಶ್ಚಲತೆಗೆ ಕಾರಣವಾಗುತ್ತದೆ.

ನಾನು ಇಲ್ಲಿ ಕಥೆ, ಕವನ ಕಾದಂಬರಿ ಬರೆಯುವರನ್ನ ಹೀಗಳೆಯುತ್ತಿಲ್ಲ. ಅದರಲ್ಲೂ ಹೊಸತನ ಮೂಡಿಬರಲೆಂದು ಆಶಿಸುತ್ತೇನೆ. ಬರೆಯುವುದು ಎಲ್ಲರ ಹಕ್ಕು. ಹೇಗೇ ಬರೆಯಲಿ. ಅದನ್ನ ಸರಿ ತಪ್ಪು, ತಮ್ಮ ಅನಿಸಿಕೆಗಳನ್ನ ತೋರ್ಪಡಿಸಬಹುದೇ ಹೊರತು ನೀ ಹೀಗೇ ಬರೆಯಬೇಕು ಎನ್ನಲಿಕ್ಕಾಗುವುದಿಲ್ಲ. ನಮ್ಮ ಜನ ಎಡವುವುದೇ ಇಲ್ಲಿ. ನೀ ಹೀಗೆ ಬರೆಯಬಾರದಿತ್ತು ಅನ್ನೋ ಪುಕ್ಕಟೆ ಸಲಹೆ ಕೊಡೋ ಬದಲು ನಿನ್ನ ಅದ್ಯತೆ, ಆಸಕ್ತಿ ಈ ಕಡೆ ಹರಿಯಲಿ ಎಂದು ಉಪಯುಕ್ತ ಸಲಹೆ ಕೊಡಲಿ ಯಾರು ಬೇಕಾದ್ರೂ ಸ್ವೀಕರಿಸುತ್ತಾರೆ. ಸಹ ಬರಹಗಾರರು, ಬರಹಗಾರ್ತಿಯರು ವಾಸ್ತವ ಒಪ್ಪಿಕೊಳ್ಳುವುದು ಕಷ್ಟ ಎನ್ನೋದು ಈ ಪ್ರತಿಕ್ರಿಯೆಗಳಿಂದ ತಿಳಿಯಬಹುದು.

ಇನ್ನೊಂದು. established ಆದ ಯಾವ ಬರಹಗಾರರೂ ಈಗ ಬರೆಯುತ್ತಿಲ್ಲ. ಬರೆಯುತ್ತಿದ್ದರೂ ಅದು ಕೇವಲ ಬಿಡಿ ಬರಗಳಿರಬಹುದು ಅಥವಾ ಪ್ರತಿಕ್ರಿಯೆಗಳಿರಬಹುದು ಅಷ್ಟೆ. ಕೆಲವೇ ಕೆಲವು ಮಂದಿ ಬರೆಯುತ್ತಿದ್ದಾರೆ.

ಬರೆದರೂ ಮಾರ್ಕೆಟ್ ಮಾಡಬಲ್ಲ ಛಾತಿ ಯಾರಿಗೂ ಇಲ್ಲ. ಯುವ ಬರಹಗಾರರು ಕೇವಲ ಪ್ರೀತಿ, ಪ್ರೇಮ, ಭಗ್ನ ಪ್ರೇಮ ಇವಿಷ್ಟೇ ಗಮನಿಸುತ್ತಿದ್ದಾರೆ. ಆದ್ರೆ, ಇವೆಲ್ಲವೂ ಜೀವನಾವಶ್ಯಕ. ಆದರೆ, ಇವಿಷ್ಟೇ ಅಲ್ಲ..!

ಚೇತನ್ ಭಗತ್ ರ ಪುಸ್ತಕ ನಾನು ಓದಿಲ್ಲ. ಆತ ಐ.ಐ.ಟಿ, ಐ.ಐ.ಎಂ ನಲ್ಲಿ ಓದಿದ ಮಾತ್ರಕ್ಕೇ ಆತನ ಪುಸ್ತಕನ ಜನ ಕೊಂಡುಕೊಳ್ಳಲಿಲ್ಲ. ಬೆಸ್ಟ್ ಸೆಲ್ಲರ್ ಆಗಲಿಲ್ಲ. ಆತ ಬರೀ ಮಾರ್ಕೆಟ್ ಮಾಡಿದ. ಅದರಲ್ಲಿ quality ಇಲ್ಲ ಅಂತಾ ಜರಿಯೋರು ತಮ್ಮ ಪುಸ್ತಕಗಳನ್ನೂ ಅದೇ ರೀತಿಯಲ್ಲಿ ಮಾರ್ಕೆಟ್ ಮಾಡಬಹುದಲ್ಲ. ಕೈಗೆ ಸಿಗದ ದ್ರಾಕ್ಷಿ ಹುಳಿ ಎನ್ನೋದು ನಿಜ.

ನಮ್ಮ ಗ್ರಹಿಕೆಗಳೇ ತಪ್ಪಾಗಿವೆ. ಬರೆದಿದ್ದೆಲ್ಲವೂ ಸಾಹಿತ್ಯವಾಗಬೇಕು, ಸಾಹಿತ್ಯವೇ ಆಗಬೇಕು ಎಂಬ ಹಂಬಲ ಏಕೆ? ಸಾಹಿತ್ಯ ಅನ್ನೊ ಪದ fiction ನ್ನ ಪ್ರತಿಬಿಂಬಿಸಬಹುದು. ನನಗೆ ಬರವಣಿಗೆ, ಬರಹ ಅನ್ನೋ ಪದಗಳು ಸಮಕಾಲೀನತೆಯನ್ನ ಸೂಚಿಸುತ್ತವೆ ಅಂತ ನನಗನ್ನಿಸುತ್ತದೆ. ವಿಜ್ಞಾನ ಸಾಹಿತ್ಯ ಅನ್ನೋದಕ್ಕಿಂತ ವಿಜ್ಞಾನ ಬರಹಗಳು ಅನ್ನೋದು ಹೆಚ್ಚು ಸೂಕ್ತ ಅನ್ನೋದು ನನ್ನ ಅಭಿಮತ.

ಕುವೆಂಪುರವರ ಕಾಲಕ್ಕೆ ಕವನ ಸಂಕಲನಗಳನ್ನ ಲಕ್ಷ ಪ್ರತಿ ಹಾಕಿಸುತ್ತಿದ್ದರು. ಖರ್ಚಾಗುತ್ತಿದ್ದವು. ಈಗ ಸಾವಿರ ಹಾಕಿಸಿದರೇ ಖರ್ಚು ಮಾಡುವುದು ಏಳು ಹನ್ನೊಂದು ಆಗುತ್ತದೆ. ಕ್ವಾಲಿಟೀ, ಕ್ವಾಂಟಿಟಿ ಇವೆಲ್ಲವುಗಳಿಗಿಂತ ಮುಖ್ಯವಾಗಿ ಇಲ್ಲಿ ಮಾರ್ಕೆಟ್ ಫ್ಯಾಕ್ಟರ್ ಮುಖ್ಯವೆನಿಸುತ್ತದೆ. ನಾವು ನಮ್ಮ ಬ್ಲಾಗುಗಳ ಸ್ಟ್ಯಾಟಿಸ್ಟಿಕ್ಸ್ ನೋಡೋಲ್ವಾ ಹಾಗೆ.

ಓದುಗರ ಆದ್ಯತೆಗಳು ಬದಲಾಗಿವೆ. ಅದನ್ನ ಸೂಕ್ಷ್ಮವಾಗಿ ಗಮನಿಸಿ, ಗ್ರಹಿಸಿ ಅನುಷ್ಟಾನಕ್ಕೆ ತಂದು ಅನುಸ್ಠಾಪಿಸಿದರೆ ಬದಲಾವಣೆಯ ಸ್ವೀಕಾರ ಕಷ್ಟಕರವೇನಲ್ಲ.

ಗಣೇಶ್.ಕೆ

ವಿಕಾಸ್ ಹೆಗಡೆ/Vikas Hegde ಹೇಳಿದರು...

@ಶ್ರೀನಿಧಿ & ಸುಪ್ರೀತ್

ಈ ಅರೆಬೆಂದ ಬರಹವನ್ನು ನಿಮ್ಮ ಕಮೆಂಟುಗಳ ಶಾಖದಿಂದ ಪೂರ್ತಿ ಬೇಯಿಸಿದ್ದಕ್ಕೆ ಧನ್ಯವಾದಗಳು.

ನಿಧಿ, ಬರೀತಿಲ್ಲ ಅಂತ ಹೇಳಿದ್ದರ ಅರ್ಥ ಪೂರ್ತಿ ಸೊನ್ನೆ ಪ್ರಮಾಣ ಅಂತ ಅಲ್ಲ. ಬಹಳ ಕಡಿಮೆ ಅಂತ ಮತ್ತು ಕನ್ನಡ ಅಂದ ಕೂಡ್ಲೆ ಕತೆ ಕವನ ಅನ್ನೋದೇ ಮುಖ್ಯವಾಹಿನಿಯಲ್ಲಿ ಬರ್ತಿದೆ ಅನ್ನೋದು ಎಲ್ಲರಿಗೂ ತಿಳಿದಿರೋ ಸತ್ಯ. ಅದೇ ಅಂಕಿತ ಪುಸ್ತಕದ ಪ್ರಕಾಶ್ ರವರನ್ನು ಒಮ್ಮೆ ಹೋಗಿ ಕನ್ನಡ ಪುಸ್ತಕದ ಮಾರಾಟದ ಬಗ್ಗೆ ಕೇಳಿ ನೋಡು ಗೊತ್ತಾಗುತ್ತದೆ ಕನ್ನಡದ ’ವೈವಿಧ್ಯಮಯ” ಸಾಹಿತ್ಯದ ಕತೆ. ಹೊಸಾ ತರ ಬರೆಯೋದು ಅಂದ್ರೆ ಹೊಸ ಬಾಟಲಿಯಲ್ಲಿ ಹಳೇ ಮದ್ಯ ತುಂಬಿಕೋಡೋದಲ್ಲ ಮಾರಾಯ. ಹೊಸ ವಿಷಯಗಳನ್ನೇ ಬರೀಬೇಕು ಎಂಬುದು ನನ್ನಾಸೆ. ಕನ್ನಡ ಸಾಹಿತ್ಯ ಪ್ರಪಂಚ ಹೊಸಬರನ್ನ ಪ್ರೋತ್ಸಾಹಿಸುತ್ತಿಲ್ಲ ಅಂತ ನಾನು ಹೇಳಿಲ್ಲ, ಆದ್ರೆ ಅದೇ ರೀತಿ ಹೊಸತನವನ್ನೂ ಹೆಚ್ಚು ಹೆಚ್ಚು ಪ್ರೋತ್ಸಾಹಿಸಲಿ ಅಂತ ನನ್ನಾಸೆ. ಕೆಲವರು ಮಾಡುತ್ತಿದ್ದಾರೆ ಒಪ್ಪಿಕೊಳ್ತೇನೆ. ಬರೆಯೋದು ಅವರವರ ಭಾವಕ್ಕೆ ಬಿಟ್ಟ ವಿಚಾರ!! ಹ್ಮ್.. ’ನಾನು ನನ್ನಿಷ್ಟ ನಿಂಗೇನು ’..ಎನ್ನುವ ಈ ಧೋರಣೆಯಿಂದಲೇ ಇವತ್ತು ಹೀಗಾಗಿರೋದು. ನೀವು ಕವನ ಬರೆಯೋದು ತಪ್ಪು ಅಂತ ಹೇಳಿಲ್ಲ ಆದರೆ ಜೊತೆಜೊತೆಗೆ ಆ HR tips, fakemails ತರಹದ ವಿಷಯಗಳು ಜಾಸ್ತಿ ಬರಬೇಕು ಎಂಬುದು ಲೇಖನದ ಸಾರಾಂಶ.


ಸುಪ್ರೀತು, ಚೇತನ್ ಭಗತ್ ನ ಸಂದರ್ಶನದಲ್ಲಿ ಏನು ಹೇಳಿದ್ದಾನೆ ಎಂಬುದು ಈ ಲೇಖನದ ಉದ್ದೇಶಕ್ಕೆ ಯಾವ ಸಂಬಂಧವೂ ಇಲ್ಲ. ಅವನ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಅವನೊಬ್ಬನೇ ಬರೆಯುತ್ತಿದ್ದಾನೆ ಅಂತ ಅರ್ಥ ಬರುತ್ತಾ? ಉದಾಹರಣೆ ಕೊಡುವಾಗ ಎಲ್ಲ ಲೇಖಕರ ಹೆಸರನ್ನೂ ಹೇಳಲಿಕ್ಕಾಗುವುದಿಲ್ಲವಲ್ಲ! ನಾನು ಅವನ ಪುಸ್ತಕಗಳನ್ನು ಉಲ್ಲೇಖಿಸಿದ್ದು ಕತೆ ವಿಷಯ ಆಯ್ಕೆ ಬಗ್ಗೆ ಮತ್ತು ಅದರಲ್ಲಿನ ಯುವಜನಾಂಗವನ್ನು ಆಕರ್ಷಿಸುವ ವಿಷಯಗಳ ಬಗ್ಗೆ. ಅವನ ಹೆಸರನ್ನೂ ಹೇಳಿಲ್ಲ! ಅಷ್ಟಕ್ಕೂ ಈಗಿನ ಕಾಲದಲ್ಲಿ ಕ್ವಾಲಿಟಿ ಎಷ್ಟು ಮುಖ್ಯವೋ ಪ್ರಚಾರ, ಗಿಮಿಕ್ಕು ಅಷ್ಟೆ ಮುಖ್ಯ ಎಂಬುದು ಯುವಕನಾಗಿ ನಿಮಗೆ ಗೊತ್ತಿರಬಹುದು. ಕನ್ನಡಕ್ಕೆ ೭ ಜ್ಞಾನ ಪೀಠ, ಕವಿರಾಜ ಮಾರ್ಗ, ವಚನಗಳು ಅಂತ ಹೇಳುತ್ತಾ ಮುಂದಿನ ಪೀಳಿಗೆಯನ್ನು ಆಕರ್ಷಿಸೋಕಾಗೋಲ್ಲ ಎಂಬುದು ಕಟು ಸತ್ಯ...ಹ್ಮ್.. ನನ್ನ ಆಸಕ್ತಿ ಸೀಮಿತ ವಾಗಿದ್ದರೆ ಇಷ್ಟು ತಲೆಕೆಡಿಸಿಕೊಳ್ಳುತ್ತಿದ್ದನಾ ಕನ್ನಡ ಸಾಹಿತ್ಯದ ಬಗ್ಗೆ ! ನನಗೇನು ಬೇಕೋ ಇಂಗ್ಲೀಷಿನಲ್ಲಿ ಸಿಗುತ್ತಿತ್ತು, ಓದಿಕೊಂಡು ಸುಮ್ನಾಗುತ್ತಿದ್ದೆ . ತಿಳುವಳಿಕೆ ಬಗ್ಗೆ ಒಪ್ಪಿಕೊಳ್ತೀನಿ. ಸರ್ವಜ್ಞ ಅಂತೂ ಅಲ್ಲ, ಹಾಗಂತ ಅಜ್ಞನೂ ಅಲ್ಲ :) ನಿಮ್ಮಗಳಿಂದ ಹೆಚ್ಚು inputs ಸಿಕ್ಕಿದರೆ ಅದೇ ಖುಷಿ. thanxx

ಸುಪ್ರೀತ್.ಕೆ.ಎಸ್. ಹೇಳಿದರು...

ವಿಕಾಸ್
ಉದಾಹರಣೆಗಳನ್ನು ಕೊಡುವಾಗ ನಮ್ಮ ಉದಾಹರಣೆಗಳ ಹಿನ್ನೆಲೆ, ಅವರ ಅವಕಾಶಗಳು ಹಾಗೂ ನಮ್ಮ ಸ್ಥಿತಿಗತಿಯನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂಬುದು ನನ್ನ ಆಶಯ. ಇಂಗ್ಲೀಷಿನ ಸಹಜವಾದ ವಿಸ್ತಾರವಾದ ಪಾಪುಲೇಶನ್‌ನಲ್ಲಿ ಭೌಗೋಳಿಕ, ಸಾಂಸ್ಕೃತಿಕ ವೈವಿಧ್ಯತೆ, ಅನುಭವ ಜಗತ್ತಿನ ವೈವಿಧ್ಯತೆಯ ಜೊತೆಗೆ ಮಾರುಕಟ್ಟೆಯ ವೈವಿಧ್ಯತೆಯೂ ಸೇರಿಕೊಂಡಿರುತ್ತದೆ.
ಮಾರ್ಕೆಟಿಂಗ್ ಬಗ್ಗೆ ಮಾತನಾಡುವಾಗ ನಾವು ಅದನ್ನು ಸಾಹಿತ್ಯದ ಕಂಟೆಂಟ್‌ನ ಚರ್ಚೆಯಿಂದ ಹೊರಗಿಡುವುದು ಒಳ್ಳೆಯದು. ಇಲ್ಲಿ ಆರೋಪವಿರುವುದು ಕನ್ನಡದ ಸಾಹಿತ್ಯದ ಬಗ್ಗೆ. ಇಂಗ್ಲೀಷಿನಲ್ಲಿ ಹೊರಬರುತ್ತಿರುವ ಸಾಹಿತ್ಯದಲ್ಲಿ ಭಾರತೀಯರ ಬರವಣಿಗೆಯನ್ನೂ ವಿದೇಶಿಯರ ಬರವಣಿಗೆಯನ್ನು ಹೋಲಿಸಿ ನೋಡಿದರೆ ನಮಗೆ ವಾಸ್ತವದ ಚಿತ್ರಣ ಸಿಕ್ಕುತ್ತದೆ.
ಹೊಸತನ ಬೇಕು, ವೈವಿಧ್ಯತೆಗೆ ಮನ್ನಣೆ ಸಿಗಬೇಕು ಎಂಬ ಭಾವಗಳು ನಮ್ಮ ಆಶಯಗಳಾಗಿದ್ದರೆ, ನಮಗೆ ಸ್ಪೂರ್ತಿಯಾಗಿದ್ದರೆ ಚೆನ್ನ ಅದು ಆರೋಪವಾಗಬಾರದು ಎಂಬುದು ನನ್ನ ಅಭಿಪ್ರಾಯ. ತಪ್ಪಿದ್ದಲ್ಲಿ ಕ್ಷಮಿಸಿ...

ತೇಜಸ್ವಿನಿ ಹೆಗಡೆ- ಹೇಳಿದರು...

ವಿಕಾಸ್,

ಮೊದಲಿಗೆ ‘ಕನ್ನಡ’ಸಾಹಿತ್ಯದ ಪ್ರತಿ ನಿನಗಿರುವ ಕಾಳಜಿ, ಅಭಿಮಾನ ಹಾಗೂ ಆಸಕ್ತಿಗಳನ್ನು ಕಂಡು ತುಂಬಾ ಸಂತೋಷವಾಯಿತು. ಪ್ರಗತಿಪರ ಚಿಂತನೆಗಳಿರಬೇಕಾದದ್ದು ಒಳ್ಳೆಯದೇ. ಲೇಖನದ ಓಘ ನಿರೂಪಣಾ ಶೈಲಿ ಎಲ್ಲವೂ ಮೆಚ್ಚುವಂತಿವೆ. ಅಭಿನಂದನೆಗಳು ಇದಕ್ಕೆ.

ಆದರೆ, ಈ ಲೇಖನದಲ್ಲಿ ಹಲವಷ್ಟು ದ್ವಂದ್ವ ಹಾಗೂ ವಿರೋಧಾಭಾಸಗಳಿವೆ ಎಂಬುದು ನನ್ನ ಅಭಿಪ್ರಾಯ. "ಏನಾಗಿದೆ ನಮ್ಮ ಕನ್ನಡ ಬರಹಗಾರರಿಗೆ..." "ಎಲ್ಲರೂ ಕೊರೆಯುವುದು ಅಥವಾ ಕೊರೆಯಲು ಪ್ರಯತ್ನಿಸುವುದು ಮತ್ತದೇ ಸಂಸಾರ, ಸಮಾಜ, ಪ್ರೀತಿ ಪ್ರೇಮದ ಕಥೆಗಳನ್ನ.." - ಎಂದೆಲ್ಲಾ ಬರೆಯುತ್ತಾ ಎಲ್ಲಾ ಯುವಬರಹಗಾರರನ್ನು/ಈಗಿನ ಲೇಖಕರನ್ನೆಲ್ಲಾ ಜವಾಬ್ದಾರಿ ರಹಿತರು, ಕೇವಲ ಪ್ರೀತಿ, ಪ್ರೇಮ, ಸಂಸಾರಗಳ ಕುರಿತು ಮಾತ್ರ ಬರೆಯುವವರು ಎಂದು ಆರೋಪಿಸದಂತಾಗದೇ? ಹೀಗೆ ಸಾರ್ವಜನೀಕರಣಗೊಳಿಸುವಿಕೆಯಿಂದ ಕೆಲವರ ತಪ್ಪುಗಳು ಹಲವರ ಹೆಗಲೇರಿದಂತಾಗದೇ?

ಇನ್ನು ಕಥೆಯಾಗಲೀ, ಕವನವಾಗಲೀ, ಲೇಖನವಾಗಲೀ..ಯಾವುದೇ ರೀತಿಯ ಬರಹವಾಗಲಿ, ಅದು ಆಯಾ ಲೇಖಕನ ಅನುಭೂತಿಗೆ, ಅನುಭವಕ್ಕೆ ಬಂದದ್ದಾಗಿರುತ್ತದೆ ಎಂಬುದು ನನ್ನ ಅಭಿಮತ. ತಾವು ಅನುಭವಿಸದ, ನೋಡದ, ಕಾಣದ ವಿಷಯವನ್ನು ಕೇವಲ ಕಲ್ಪನೆಯ ಮೂಲಕ ಬರಯಲು ತುಂಬಾ ಕಷ್ಟಸಾಧ್ಯ. ಹಾಗೆ ಬಂದದ್ದು ಕೂಡಾ ಸತ್ಯಕ್ಕೆ ದೂರವಾಗಿರುತ್ತದೆ.. ಜೊಳ್ಳೆನಿಸಬಹುದೆಂದೂ ನನ್ನ ಅನಿಸಿಕೆ.

ಇಂದಿನ ವೈಜ್ಞಾನಿಕತೆ ಹೊಂದುವಂತಹ ಬರಹಗಳನ್ನು ಬರೆದರೆ ಮಾತ್ರ ಕನ್ನಡಸಾಹಿತ್ಯ ಬೆಳೆಯುತ್ತದೆ/ಉಳಿಯುತ್ತದೆ ಎನ್ನುವುದು ತೀರಾ ತಪ್ಪು. ವಿಜ್ಞಾನ ನಿಂತಿರುವುದೇ ನಮ್ಮ ಪುರಾತನ ತತ್ವಗಳ ಮೇಲೆಯೇ. ಹಾಗಾಗಿ ಹಳೆತರ ಜೊತೆ ಹೊಸದು ಬೆಸೆದರೆಯೇ ಬೇರು ಗಟ್ಟಿಯಾಗುವುದು ಅಲ್ಲವೇ? ಯಾವುದೇ ಸಾಹಿತ್ಯ ಕಾಲದಮೇಲೆ ನಿಂತಿಲ್ಲ. ಕಾಲದಜೊತೆ ಹರಿಯುತ್ತದೆ ಬೆಳೆಯುತ್ತದೆ. ಕಾಲ ಹಳತೆನಿಸಿದರೂ ಸಾಹಿತ್ಯ ಹಳತೆನಿಸದು.

(೧೦ ವರುಷಗಳ ಕಾಲ ಕನ್ನಡದಲ್ಲಿ ಕವನ ಬರೆಯುವುದನ್ನು ನಿಷೇಧಿಸಬೇಕೆಂದು ಹೇಳಿದ ಆ ಹಿರಿಯರ(?) ಪರಿಚಯ ಕೇಳಬಹುದೇ? :-) )

ವಿಕಾಸ್ ಹೆಗಡೆ/Vikas Hegde ಹೇಳಿದರು...

ಸಿಂಧು ಅಕ್ಕ,

ನಿಮ್ಮಭಿಪ್ರಾಯಕ್ಕೆ ಧನ್ಯವಾದಗಳು. ಹಲವು ಪ್ರಕಾಶನಗಳು ಹತ್ತು ಹಲವು ರೀತಿಯ ವಿಷಯಗಳ ಸಾಹಿತ್ಯದ ಪುಸ್ತಕಗಳನ್ನ ಹೊರತರುತ್ತಿವೆ ನಿಜ. ಆದರೆ ಹೆಚ್ಚಿನವರೆಲ್ಲರೂ ಕೂಡ ಈಗಲೂ ವಿಷಯಾಧಾರಿತ ಪುಸ್ತಕಗಳೆಂದರೆ ಇಂಗ್ಲೀಷಿನೆಡೆಗೇ ಮುಖ ಮಾಡುತ್ತಾರೆ. ಭಾವನಾ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕನ್ನಡವನ್ನು prefer ಮಾಡುತ್ತಾರೆ. ಕನ್ನಡ ಸಾಹಿತ್ಯ ಕಾಲಕ್ಕೆ ತಕ್ಕ ವೇಗದಲ್ಲಿ ಬದಲಾಗುತ್ತಿಲ್ಲವಾದ್ದರಿಂದ ಕ್ರಮೇಣ ಇಂದಿನ, ಮುಂದಿನ ಪೀಳಿಗೆ ಕನ್ನಡ ಸಾಹಿತ್ಯದಿಂದ ದೂರ ಹೋಗಿಬಿಡುತ್ತಾರೆನೋ ಎಂಬ ಆತಂಕ ನನ್ನದು. ಅದಕ್ಕೆ ಕಾರಣ ಇಂಗ್ಲೀಷ್ ಮಾಧ್ಯಮದ ಶಿಕ್ಷಣ ಒಂದೆಡೆಯಾದರೆ ಅವರನ್ನು ಆಕರ್ಷಿಸುವ ಸಾಹಿತ್ಯದ ಕೊರತೆ ಮತ್ತು ಆ ಸಾಹಿತ್ಯವಿದ್ದರೂ ಅದನ್ನು ಸಮರ್ಥವಾಗಿ ಪ್ರಚಾರ ಮಾಡುವ ಕೊರತೆ. ಒಟ್ಟು ಕಾರಣ ಬಹುತೇಕರ ಸ್ಟೀರಿಯೋಟೈಪ್ ಸಾಹಿತ್ಯ. ಸಿಂಧು ಅಕ್ಕ, ಕೆ. ಗಣೇಶರ ಕಮೆಂಟು ನಿಮ್ಮ ಅಭಿಪ್ರಾಯಕ್ಕೆ ಸರಿಯಾದ ಉತ್ತರವಾಗಬಹುದೇನೋ ಅನ್ನಿಸಿತು.


@ಗಣೇಶ್
exactly. ur opinion matches mine.
ಓದುಗರ ಆದ್ಯತೆಗಳು ಬದಲಾಗಿವೆ. ಅದನ್ನ ಸೂಕ್ಷ್ಮವಾಗಿ ಗಮನಿಸಿ, ಗ್ರಹಿಸಿ ಅನುಷ್ಟಾನಕ್ಕೆ ತಂದು ಅನುಸ್ಠಾಪಿಸಿದರೆ ಬದಲಾವಣೆಯ ಸ್ವೀಕಾರ ಕಷ್ಟಕರವೇನಲ್ಲ ಎಂಬುದು ಪರಮಸತ್ಯ. ಅ ಆದ್ಯತೆಗಳ ಬದಲಾವಣೆ ಈಗಿನ್ನೂ ಪೂರ್ತಿಯಾಗಿಲ್ಲ. ಆದರೆ ಮುಂದೆ ಬರುಬರುತ್ತಾ ಸಂಪೂರ್ಣ ಬದಲಾಗುವುದರೊಳಗೆ ಅನುಷ್ಠಾನಕ್ಕೆ ತರದಿದ್ದರೆ ಕೈತಪ್ಪಿಹೋಗುತ್ತದೇನೊ. ನಿಮ್ಮಭಿಪ್ರಾಯಕ್ಕೆ , ಕಮೆಂಟಿಸಿದ್ದಕ್ಕೆ ಧನ್ಯವಾದಗಳು.


@supreeth
yes, ಒಪ್ಪಿಕೊಳ್ತೇನೆ. ಆದರೆ ಮಾರ್ಕೆಟಿಂಗ್ ಜೋರಾಗಿ ಮಾಡಬೇಕಾದರೆ content ಕೂಡ ಅಷ್ಟೆ ಗಟ್ಟಿಯಿದ್ದರೆ ಮಾತ್ರ ಯಶಸ್ವಿಯಾಗುತ್ತದೆ.

@ತೇಜಸ್ವಿನಿ ಹೆಗಡೆ
ಅಭಿಪ್ರಾಯಕ್ಕೆ ಧನ್ಯವಾದಗಳು. ಸಾಹಿತ್ಯ ಕಾಲದ ಜೊತೆ ಹರಿಯುತ್ತದೆ, ಬದಲಾಗುತ್ತದೆ ನಿಜ. ಆದರೆ ಆ ವೇಗ ಕನ್ನಡದಲ್ಲಿ ಸಾಲದು. ಇನ್ನೂ ಆ ವೇಗಕ್ಕೆ ಹೊಂದಿಕೊಳ್ಳದಿದ್ದರೆ ಕಷ್ಟ. ಹಳತರ ಜೊತೆ ಹೊಸದು ಬೆಸೆಯಲಿ. ಆದರೆ ಹಳತನ್ನೇ ಹೊಸ ಹೊಸ ರೂಪದಲ್ಲಿ ಕೊಡುವುದು ಬೇಡ. ಅದರರ್ಥ ಎಲ್ಲರೂ ವೈಜ್ಞಾನಿಕ ಬರಹಗಳನ್ನೇ ಬರೆಯಬೇಕು ಅಂತ ಖಂಡಿತಾ ಅಲ್ಲ. ಇಂದಿನ ಬದಲಾದ ಕಾಲಕ್ಕೆ ತಕ್ಕ ಸನ್ನಿವೇಶಗಳನ್ನು, ಕಥಾ ವಸ್ತುಗಳನ್ನು ಅಳವಡಿಸಿ ಬರೆದರೆ ಚೆನ್ನ. ಒಬ್ಬೊಬ್ಬರ ಹೆಸರು ಉಲ್ಲೇಖಿಸಿ ಬರೆದರೆ ತಪ್ಪಾಗುವುದೆಂದು generalise ಮಾಡಿದ್ದೇನೆ ಅಷ್ಟೆ.

ಕವನ ನಿಷೇಧಿಸಬೇಕೆಂದು ಅವರು ತಮಾಷೆ ಮಾಡಿದ್ದಷ್ಟೆ. so... (?) , (!), ಪರಿಚಯ ಎಲ್ಲಾ ಬೇಡ ಬಿಡಿ :)

ಸಿಂಧು Sindhu ಹೇಳಿದರು...

ವಿಕಾಸ್,

ನಿಮಗೆ ನನ್ನ ಅಭಿಪ್ರಾಯ ವಿನಾಕಾರಣ ಹರಿತವಿದೆ ಎನ್ನಿಸಿದರೆ ದಯವಿಟ್ಟು ತಿಳಿಸಿ.
ನೀವು ಬರೆದ ಬರಹದಲ್ಲಿ ಮೊದಲು ಇರಿಸಿದ್ದ ತಲೆಬರಹ - ಕನ್ನಡದ್ದು ಟೈಂಪಾಸ್ ಸಾಹಿತ್ಯ - ನನಗೆ ತುಂಬ ಬೇಸರ ಉಂಟು ಮಾಡಿತು.
ಬರುತ್ತಿರುವ ಸಾಹಿತ್ಯ ಪ್ರಕಾರಗಳಿಗೆ ಹೆಚ್ಚಿನ ಓದುಗರಿಲ್ಲ ಅನ್ನುವುದು ಎಲ್ಲರೂ ಒಪ್ಪುವ ಮಾತು. ಹಾಗಂತ ಓದುಗರೇ ಇಲ್ಲ, ಮಾರ್ಕೆಟ್ ಇಲ್ಲ, ಮಾರ್ಕೆಟಿಂಗ್ ಸ್ಟ್ರಾಟಜಿ ಇಲ್ಲ ಅನ್ನುವುದು ಪೂರ್ಣ ಸತ್ಯವಲ್ಲ. ಅದಕ್ಕೆ ಸಾಹಿತ್ಯವನ್ನ, ಪ್ರಕಟಣೆಗಳನ್ನ ಹೊಣೆಮಾಡುವುದು ಸರಿಯಲ್ಲ ಅಂತ ನನ್ನಭಿಪ್ರಾಯ.
ನೀವೇ ಹೇಳಿದಂತೆ, ಗಮನಿಸಿರುವಂತೆ ಕನ್ನಡದಲ್ಲಿ ಇರುವ ಇತರ ಬರಹಗಳಿಗೆ ಎಷ್ಟು ಓದುಗರಿದ್ದಾರೆ? ಬೆಂಗಳೂರು, ಇಂಟೆಲೆಕ್ಚುಯಲ್ ಗ್ರೂಪ್ ಎಲ್ಲ ಬಿಡಿ, ಎಲ್ಲ ಕಡೆಯಲ್ಲೂ ಕನ್ನಡವನ್ನೇ ಓದಿ, ಅದರಿಂದಲೇ ವಿಷಯ ಸಂಗ್ರಹಣೆ ಮಾಡುವವರು ಯಾರು ಹೇಗೆ - ಬಹುತೇಕ ನಮ್ಮ ಮಹಿಳೆಯರು, ಮತ್ತು ಊರಿನಲ್ಲಿರುವ ಓದುವ ಅಭಿರುಚಿ ಇರುವ ಎಲ್ಲರೂ ಓದುವುದು ಕನ್ನಡ ಪತ್ರಿಕೆ, ಸಾಪ್ತಾಹಿಕ, ಮತ್ತು ಪುಸ್ತಕಗಳನ್ನೇ. ಅವರ ಆಸಕ್ತಿ ಅವಕಾಶ ಮಿತಿ ಏನು ಎಂಬುದು ಮುಖ್ಯ ಪ್ರಶ್ನೆ.

ಅಂಕಿತದಲ್ಲಿ, ಸ್ವಪ್ನಾದಲ್ಲಿ ಅಥವಾ ಇನ್ಯಾವುದೇ ಪುಸ್ತಕದಂಗಡಿಗಳಲ್ಲಿ ನಡೆಯುವ ಟಾಪ್ ಟೆನ್ ಪಟ್ಟಿಯನ್ನ ಮುಂದಿಟ್ಟುಕೊಂಡು ಕನ್ನಡ ಸಾಹಿತ್ಯವನ್ನೇ ಟೈಂಪಾಸ್ ಸಾಹಿತ್ಯ ಅನ್ನುವುದು ಸರಿಯಲ್ಲ.
ಸಾಹಿತ್ಯವಾಗಲಿ ಇತರೆ ಪುಸ್ತಕಗಳಾಗಲಿ ಏನು ಬೇಕು ಅಂತ ಓದುವ ನಮಗೆ ಗೊತ್ತಿರ್ಬೇಕು. ಇದನ್ನು ನೀವು ಓದಿದರೆ ನಿಮ್ಮ ಮೆದುಳಿನ ಬಲಭಾಗ ಚೆನ್ನಾಗಿ ಬೆಳೆಯುತ್ತದೆ, ಇದನ್ನು ಓದಿದರೆ ಅಳುಮುಂಜಿಯಾಗುತ್ತೀರಿ, ಇದನ್ನು ಓದಿದರೆ ಪ್ರಪಂಚ ಜ್ಞಾನ ಕೈಬೆರಳಲ್ಲಿರುತ್ತದೆ, ಮತ್ತು ಜ್ಞಾನವನ್ನು, ವಿಜ್ಞಾನವನ್ನು ತುಂಬುವುದೇ ಸಾಹಿತ್ಯದ ಪರಮಧ್ಯೇಯ ಇದೆಲ್ಲ ಮಿತಿಗಳನ್ನ ನಮಗೆ ನಾವೇ ಹಾಕಿಕೊಳ್ಳುವುದು ಯಾಕೆ?

ಎಲ್ಲ ಬಗೆಯ ತಿಳುವಳಿಕೆಗಳೂ, ಭಾವಾಭಿವ್ಯಕ್ತಿಗಳೂ, ಹೊಸ ಹೊಸ ವಿಚಾರಗಳೂ ಇರುವ ಆಕಾಶವೊಂದಕ್ಕೆ ಕಿಟಕಿ ಸಾಹಿತ್ಯ. ಬಗ್ಗಿ ನೋಡಿ, ನಮಗೆ ಬೇಕಾದ್ದನ್ನ ಮನತಣಿಯೆ ಸವಿಯುವ ಅವಕಾಶ ಇರಲಿ.

ನಿಮ್ಮ ಯೋಚನೆ ಸರಿಯಾದ ದಿಕ್ಕಿನಲ್ಲೆ ಹರಿದಿದೆಯಾದರೂ, ಇನ್ನೂ ಒಂದು ಸ್ವ್ಲಲ್ಪ ಯೋಚನೆ ಮಾಡಿ. ನಾವು ಕನ್ನಡ ಓದುವವರು, ಪ್ರೀತಿಸುವವರು ಮಾಡುಬಹುದಾದ ಒಳ್ಳೆಯ ಕೆಲ್ಸ ಎಂದರೆ, ಓದಿದ ಹಿಡಿಸಿದ ಪುಸ್ತಕಗಳನ್ನ (ಎಲ್ಲ ಬಗೆಯ) ಇತರರಿಗೆ/ಸ್ನೇಹಿತರಿಗೆ ಪರಿಚಯ ಮಾಡಿಸುವುದು. ಮಕ್ಕಳಿಗೆ ಕನ್ನಡ ಪುಸ್ತಕಗಳ ಲೋಕವನ್ನ ಪರಿಚಯಿಸುವುದು, ಮಕ್ಕಳ ಕಲ್ಪನೆಗಳಿಗೆ ರಂಗು ತುಂಬುವಾಗ ನಮ್ಮ ಸಂಸ್ಕೃತಿ ವೈವಿಧ್ಯತೆಗಳ ಬಣ್ಣವನ್ನೂ ತುಂಬುವುದು, ಮತ್ತು ನಾವು ನಮಗೆ ಆಸಕ್ತಿಯಿರುವ ಪುಸ್ತಕಗಳನ್ನ ಹುಡುಕಿ, ಕೊಂಡು ಅಥ್ವಾ ಲೈಬ್ರರಿಯಲ್ಲಿ ಓದುವುದು.

ಅದಿಲ್ಲದೆ ಸುಮ್ಮನೆ ಕನ್ನಡದಲ್ಲಿರುವುದೆಲ್ಲ ಟೈಂಪಾಸ್ ಸಾಹಿತ್ಯ, ಮಲ್ಲಿಗೆಯ ಬಳ್ಳಿ ಮನೆಯಂಗಳದಲ್ಲಿ ಇಲ್ಲದೆಯೇ, ಮಲ್ಲಿಗೆ ಕವಿತೆಯನ್ನೇನು ಓದುವುದು, ಅಥವಾ ಕನ್ನಡ ಸಾಹಿತ್ಯವೆಂದರೆ ಕವಿರಾಜ ಮಾರ್ಗವೊಂದೇ ಅಂದುಕೊಳ್ಳುವುದು ಎಲ್ಲ ಸ್ವಲ್ಪ ಎಕ್ಸ್ ಟ್ರೀಮ್ ವಿಚಾರ ಅಲ್ವಾ.

ಮಾಸ್ತಿಯವರ ಒಂದು ಕಾದಂಬರಿ - ಚನ್ನಬಸವನಾಯಕ - ಅಂತ. ಬಿದನೂರು(ನಗರ) ಸಂಸ್ಥಾನದ ಕೊನೆಯ ದಿನಗಳು, ಮೈಸೂರಿನ ಹೈದರನ ಆಳ್ವಿಕೆಯ ದಿನಗಳ ಬಗೆಗಿರುವ ಕಾದಂಬರಿ. ಬಹಳ ಹಳೆಯ ಕಾಲ ಮತ್ತು ಭಾಷೆ. ಆದರೆ ಆ ಕಾದಂಬರಿಯಲ್ಲಿ ಚಿತ್ರಿತವಾಗಿರುವ ಜನ ಜೀವನ, ನಡವಳಿಕೆ, ರಾಜಕೀಯ, ದೇಶಾಭಿಮಾನ, ಸಹೃದಯತೆ, ಇವೆಲ್ಲ ನಾವು ಇಂದೂ ನೋಡುತ್ತಿರುವ ವಿದ್ಯಮಾನಗಳೆ. ಆ ಕಾದಂಬರಿಯಲ್ಲಿ ಭಾವ ತುಂಬಿ ತುಳುಕುತ್ತಿದ್ದರೂ ಸತ್ಯ ಮತ್ತು ವಸ್ತುಸ್ಥಿತಿಯ ಬೇಲಿಯಲ್ಲಿದೆ.
ಕಾಲ ಮತ್ತು ದೇಶಕ್ಕೆ ಸಂಬಂಧಿಸಿದಂತೆ ಹಳೆಯದು ಅಂತ, ಇದರಲ್ಲಿ ವೈಜ್ಞಾನಿಕವಾದದ್ದೇನಿಲ್ಲ ಅಂತ, ಅದನ್ನು ಓದದೇ ಉಳಿದರೆ ಅದು ನಮಗೆ ನಾವೇ ಮಾಡಿಕೊಳ್ಳುವ ಅನ್ಯಾಯ.

ಆದ್ದರಿಂದ ಓದುವಾಗ ಮತ್ತು ಅದಕ್ಕಿಂತ ಹೆಚ್ಚಾಗಿ ಈ ಬಗ್ಗೆ ನಾಲ್ಕು ಜನರೊಂದಿಗೆ ಹಂಚಿಕೊಳ್ಳುವಾಗ ಮತ್ತು ಬರೆಯುವಾಗ ಸ್ವಲ್ಪ - ಸ್ವಲ್ಪೇ ಸ್ವಲ್ಪ ಹಿಡಿತವಿದ್ದರೆ ಚೆನ್ನು ಅಂತ ನನ್ನನಿಸಿಕೆ.

ಗಣೇಶ್ ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿಲ್ಲ. ಈ ಬಗ್ಗೆ ಸುಮ್ಮನೆ ಮಾತು ಮುಂದುವರಿಕೆ ಅವಶ್ಯಕತೆಯಿಲ್ಲ. ಸ್ಟೀರಿಯೋಟೈಪ್ ಅಲ್ಲದ ಸಾಹಿತ್ಯವೂ ಇದೆ, ಸಾಕಷ್ಟಿದೆ-ಅನ್ನುವುದು ನನ್ನ ಅನುಭವಕ್ಕೆ ಬಂದ ವಿಷಯ.

ಇದೆಲ್ಲ ಏನೇ ಆದರೂ ಒಂದು ವಿಚಾರಕ್ಕೆ ತಕ್ಕ ವಿಷಯವನ್ನ ಮಾತುಕತೆಗೆ ತಂದಿರುವ ನಿಮ್ಮ ಪ್ರಯತ್ನಕ್ಕೆ ವಂದನೆಗಳು.

ಪ್ರೀತಿಯಿಂದ
ಸಿಂಧು.

ಸಂತೋಷಕುಮಾರ ಹೇಳಿದರು...

"ಇಷ್ಟೆಲ್ಲಾ ಮಾತಾಡ್ತೀಯಲ, ನೀನೆ ಬರೆಯೋ ನೋಡೋಣ" ಅಂತೀಯಾ ಅಲ್ವಾ ನೀನು :)

ಕನಿಷ್ಟ ನಿನ್ನ ಬ್ಲಾಗಲ್ಲಾದ್ರೂ ಬರಿಯಪ್ಪಾ!

ಚೇತನ ಭಗತ ವಿಷ್ಯದಲ್ಲಿ ನಾನು ನಿನ್ನ ಪಾರ್ಟಿ.ಕುಣಿಯಾಕ ಬರದಾಕೇ ಮೈಯಲಾ ಪರಚಿಕೊಂದಂತೆ ಅಲ್ಲಲ್ಲಿ ಪರಚಿಕೊಂಡಿದಾರೆ. ಕನ್ನಡದಲ್ಲಿ ರವಿ ಬೆಳಗೆರೆಯ ಕಾದಂಬರಿಗಳಲ್ಲಿ ಎನಿರುತ್ತೆ ಮಣ್ಣು? ಅದನ್ನು ಯಾರಾದರೂ ಹೆಳ್ತಾರಾ? ಅವನ ಪತ್ರಿಕೇಯಲ್ಲಿ ಇವನು ಅವನನ್ನು ಮತ್ತು ಅವನ ಪತ್ರಿಕೆಯಲ್ಲಿ ಅವನು ಇವನನ್ನೂಹೊಗಳುತ್ತಾ ಕುಳಿತುಬಿಟ್ಟಿದಾರೆ, ಇದು ಗಿಮಿಕ್ಕ ಅಲ್ವಾ?
ಕೆಲವರು ಬರೀತಾ ಇರಬಹುದು ಆದ್ರೇ ಎಷ್ಟು ಜನ ಓದ್ತಾ ಇದ್ದಾರೇ ಅನ್ನೋದು ಮುಖ್ಯ ಅಲ್ವಾ? ಅಂದ್ರೇ ಒದುಗನಿಗೇ ಬೇಕಾದುದು ಬರತಾ ಇಲ್ಲಾ ಅಂತಲ್ಲವಾ?

ತೇಜಸ್ವಿನಿ ಹೆಗಡೆ- ಹೇಳಿದರು...

ಸಿಂಧು,

ನಿಮ್ಮ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಸಹಮತವಿದೆ. ಭೈರಪ್ಪನವರ ಆವರಣವಾಗಲೀ, ಕಾರಂತರ "ಮೂಕಜ್ಜಿಯ" ಕನಸುಗಳಾಗಲೀ ಎಂದೆಂದು ಹಳತೆನಿಸವು. ಕಾಲ ಬದಲಾದರೂ ಅವುಗಳಲ್ಲಿರುವ ವಿಷಯಗಳು ಹಳತೆನಿಸವು. ಟೈಂ ಪಾಸ್ ಅಂತೂ ಖಂಡಿತ ಅಲ್ಲ

SHREE (ಶ್ರೀ) ಹೇಳಿದರು...

ಸಿಂಧು, ತೇಜಸ್ವಿನಿ ಹೇಳಿದ್ದಕ್ಕೆ ನಂದೂ ಸಹಮತವಿದೆ. ಒಂದ್ಸಾರಿ ಸಪ್ನಾ ಬುಕ್ ಹೌಸ್ ಕಡೆ ಹೋಗಿ, ಯಾವ್ಯಾವುದು ಪುಸ್ತಕ ಇದೆ ಅಂತ ನೋಡಿದರೆ, ಎಲ್ಲಾ ರೀತಿಯ ಪುಸ್ತಕವೂ ಸಿಗುತ್ತದೆ - ಇಂಗ್ಲಿಷ್ ಕಾದಂಬರಿಗಳ ಲೆವೆಲಿನ ಫ್ಯಾಂಟಸಿ ಅಥವಾ ಸಾಹಸಯುಕ್ತ ಬರಹಗಳು ಮಾತ್ರ ಸ್ವಲ್ಪ ಕಡಿಮೆಯಿರಬಹುದು, ಅಥವಾ ಇದ್ದರೂ ಭಾಷೆ - ದೇಶ ಬದಲಾಗಿರಬಹುದು. ಅವುಗಳನ್ನು ಒಂದಕ್ಕೊಂದು ಹೋಲಿಸಲಾಗದು.

ಹಾಗೇ, ಈಗ ಮಾರಾಟ ಆಗ್ತಾ ಇರುವ ಟಾಪ್ ಟೆನ್ ಪುಸ್ತಕಗಳು ಯಾವುದಿವೆ, ಮತ್ತು ಬ್ಲಾಗ್-ಗಳಲ್ಲೇ ಇರಬಹುದು, ಯಾವ ರೀತಿಯ ಲೇಖನಗಳನ್ನು ಓದಲು ಮತ್ತು ಪ್ರತಿಕ್ರಿಯಿಸಲು ಜನ ಹೆಚ್ಚು ಆಸಕ್ತಿ ತೋರಿಸ್ತಾರೆ ಅಂತ ಗಮನಿಸಿ, ನಿಮ್ಮೆಲ್ಲ ಪ್ರಶ್ನೆಗಳಿಗೂ ಮೂಲಭೂತವಾದ ಉತ್ತರ ಸಿಕ್ಕೇ ಸಿಗ್ತದೆ.

ವಿಕಾಸ್ ಹೆಗಡೆ/Vikas Hegde ಹೇಳಿದರು...

@ಸಂತೋಷಕುಮಾರ
ಬರಾಬ್ಬರ್ ಹೇಳ್ದ್ರಿ ನೋಡಿ. ಥ್ಯಾಂಕ್ಸ್.
ಓದುಗರ ಆದ್ಯತೆಗಳು ಬದಲಾಗಿರ್ತವೆ. ಅದನ್ನು ಮನಗಾಣಬೆಕು.

@ತೇಜಸ್ವಿನಿ ಹೆಗಡೆ ಥ್ಯಾಂಕ್ಯೂ.... ಆದ್ರೆ ತಪ್ಪು ತಿಳ್ಕಬೇಡಿ.
ನಾನು ಹಿಂದಿನ ಸಾಹಿತ್ಯವನ್ನು ಅಥವಾ ಲೇಖಕರನ್ನು ಯಾವುದೇ ಕಾರಣಕ್ಕೂ ಟೀಕಿಸುತ್ತಿಲ್ಲ. ಭೈರಪ್ಪನವರು ಕಾಲಕ್ಕೆ ತಕ್ಕಂತೆಯೇ ಬರೆದಿದ್ದಾರೆ. ಆವರಣದಲ್ಲಿ ಕತೆ ಆರಂಭವಾಗುವುದೇ ಹೊಸಪೇಟೆಯ ಐ.ಬಿ.ಯಲ್ಲಿ. ಅದು ಈಗಿನ ಕಾಲವೇ. ಪ್ರೊ.ಶಾಸ್ತ್ರಿ ಈಗಿನವರೇ :). ಒಳಗಿನ ಕಥಾವಸ್ತು ಮಾತ್ರ ಇತಿಹಾಸದ್ದು. ನಾನು ಟೀಕಿಸಿದ್ದು ’ಈಗಿನ ’ ಕೆಲವು ಬರಹಗಾರರ ಸಾಹಿತ್ಯ ಇನ್ನೂ ಹಳೇ ಧಾಟಿಯಲ್ಲೇ ಇರುವುದನ್ನ.


@ಶ್ರೀ
thanx..ಆದರೆ ನಿಮಗೊಂದು ಮಾತು ಹೇಳಲಾ.
ಬ್ಲಾಗ್ ಲೋಕದಿಂದ ಮತ್ತು ಸಾಂಪ್ರದಾಯಿಕ ಸಾಹಿತ್ಯ ಲೋಕದಿಂದ ಹೊರಗೆ ಒಂದು ದೊಡ್ಡ ಸಂಖ್ಯೆಯ ಕನ್ನಡ ಜನತೆಯಿದೆ. ಈಗ ನಮಗೆ ನಿಮಗೆ ’ಸಂಸಾರ ಸಾಹಿತ್ಯ’ವೂ ಒ.ಕೆ ಅನಿಸಬಹುದು. ಆದ್ರೆ ಮುಂದಿನ ಪೀಳಿಗೆಗೆ ಅದು ಅಂತಹ ಆಕರ್ಷಣೆ ಉಳಿಸುವುದಿಲ್ಲ. ಇಂಗ್ಲೀಷಿನ ಲೆವೆಲ್ಲಿನದು ಕೊಡಲು ಸಾಧ್ಯವಾಗದಿದ್ದರೆ ಗ್ಯಾರಂಟಿ ಅವರು ಶಾಶ್ವತವಾಗಿ ದೂರವಾಗುತ್ತಾರೆ.


@ಸಿಂಧು ಅಕ್ಕ,

ಮೊದಲನೆಯದಾಗಿ ಇಷ್ಟು ತಾಳ್ಮೆ ವಹಿಸಿ ಉತ್ತರ ಬರೆದಿದ್ದಕ್ಕೆ ನಿಮಗೆ ಬಹಳ ಧನ್ಯವಾದಗಳು. ಇದರಿಂದಲೇ ನಿಮಗಿರುವ ಕನ್ನಡ ಸಾಹಿತ್ಯ ಪ್ರೀತಿ ತಿಳಿಯುತ್ತದೆ ಮತ್ತು ನೀವು ಇಷ್ಟು ವಿಷಯ ತಿಳಿಸಿಕೊಡುತ್ತಿರುವಾಗ ನಾನು ಅದನ್ನ ಅಲ್ಲಗಳೆಯಲಾಗುತ್ತಿಲ್ಲ. ನೀವು ನೇರವಾಗಿ ಗದರಿ ಬೇಕಿದ್ದರೂ ಕಾಮೆಂಟ್ ಮಾಡಬಹುದು. ನನಗೇನೂ ಬೇಜಾರಿಲ್ಲ. ಹ್ಮ್.. ನನ್ನ ತಲೆಬರಹ ಮತ್ತು ವಿಷಯ ಪ್ರಸ್ತುತಿಯನ್ನು ತಪ್ಪಾಗಿ ತಿಳಿದುಕೊಳ್ಳಬೇಡಿ. ಅದರಲ್ಲಿ ಹೀಗಳೆಯುವಿಕೆ ಏನೂ ಇಲ್ಲ, ನನ್ನದು ಪ್ರಾಮಾಣಿಕ ಕಳಕಳಿ. ನಾವು ಸಾಹಿತ್ಯ ಲೋಕದ ಟಚ್ ಇರುವವರಿಗೆ ಬೇರೆ ಬೇರೆ ಪ್ರಕಾಶನ, ಪುಸ್ತಕ, ವೈವಿಧ್ಯ ಎಲ್ಲಾ ಗೊತ್ತಿರುತ್ತದೆ. ಗೊತ್ತಿಲ್ಲದಿದ್ದರೆ ಮತ್ತೊಬ್ಬರನ್ನು ಕೇಳಿ ತಿಳಿದುಕೊಳ್ಳುತ್ತೇವೆ. ನೀವು ಹೇಳಿದಂತೆ ನಿಜಕ್ಕೂ ಇಷ್ಟೆಲ್ಲಾ ವೈವಿಧ್ಯಮಯ ಸಾಹಿತ್ಯವಿದೆಯೆಂದರೆ ಅದೇ ಖುಷಿ. ನಾನು ಏನೇ ಬೇಕೆಂದರೂ ಮೊದಲು ಕನ್ನಡದಲ್ಲಿ ಹುಡುಕಿಯೇ ಸಿಗದಿದ್ದರೆ ನಂತರ ಇಂಗ್ಲೀಷಿಗೆ ಹೋಗುತ್ತೇನೆ. ಆದರೆ ಹೊರಗೆ ಇನ್ನೊಂದು ದೊಡ್ಡ ಸಂಖ್ಯೆಯ ಕನ್ನಡಿಗರ ಗುಂಪಿದೆ. ಅವರು ಕನ್ನಡ ಎಂದರೆ ಭಾವ ಸಾಹಿತ್ಯ ಅಂತಲಷ್ಟೆ ತಿಳಿದುಕೊಂಡಿದ್ದಾರೆ ಮತ್ತು ವಿಷಯ ಸಾಹಿತ್ಯಕ್ಕೆ ಮತ್ತು ’ಆಕರ್ಷಕ ’ ಸಾಹಿತ್ಯಕ್ಕೆ ಕನ್ನಡದೆಡೆಗೆ ಮುಖ ಮಾಡುತ್ತಿಲ್ಲ. ಅವರನ್ನು ಸೆಳೆದು ಅವರಿಗೂ ಕನ್ನಡದಲ್ಲಿ ’ಎಲ್ಲವೂ’ ಲಭ್ಯವಿದೆ ಎಂಬ ನಂಬಿಕೆ ಬೆಳೆಸುವುದು ಮುಖ್ಯ. ಆ ನಿಟ್ಟಿನಲ್ಲಿ ಈಗಿನ ಲೇಖಕರ ಬರವಣಿಗೆ ಪೂರಕವಾಗಿರಲಿ ಎಂದು ನನ್ನ ಆಶಯ. ಎಲ್ಲರೂ ಕಾರಂತ, ಪೂಚಂತೇ, ಭೈರಪ್ಪ ಆಗದಿದ್ದರೂ ಅಂತಹವರ ಸಂಖ್ಯೆ ಜಾಸ್ತಿಯಾಗಲಿ ಎಂದು ಅಪೇಕ್ಷಿಸುವುದು ತಪ್ಪೇನಿಲ್ಲ ಅಲ್ಲವೆ?

****************************

@ತೇಜಸ್ವಿನಕ್ಕ & ಸಿಂಧಕ್ಕ
ನಾನು ಹೇಳುತ್ತಿರುವ ’ಹಳೇ ಕಾಲ’ ಎಂದರೆ ಇತಿಹಾಸದ ವಿಷಯವಾಗಿ ಬರೆಯಬಾರದು ಎಂದು ನೀವು ತಪ್ಪು ತಿಳಿದುಕೊಂಡಿರಿ ಅನಿಸುತ್ತದೆ. (ಮಾಸ್ತಿಯವರ ಉದಾರಹರಣೆ). ನಾನು ಹೇಳಿದ್ದು ಇನ್ನೂ ಹಳೇ ಕಾಲದಂತೆ ಅಥವಾ ಹಳೆಯ ಕಾಲದ ಸಂಸಾರ, ಸಮಾಜ , ಪ್ರೀತಿಗಾಗಿ ಹೋರಾಟ ಇನ್ನಿತರ ಕಥಾವಸ್ತು/ವಿಷಯವನ್ನಿಟ್ಟುಕೊಂಡು ಕತೆ , ಕಾದಂಬರಿ ಬರೆಯುವುದರ ಬಗ್ಗೆ. not history or history based novels. ನೀವು ಹೇಳಿದ ಉಳಿದ ವಿಷಯಗಳು ಅರ್ಥವಾಗಿದೆ. ವಂದನೆಗಳು.

********************************

ವಿನಾಯಕ ಕೆ.ಎಸ್ ಹೇಳಿದರು...

ವಿಕಾಸವರೇ
ಒಳ್ಳೆಯ ಬರಹ ಮತ್ತು ಚರ್ಚಿಗೆ ಅರ್ಹವಾದ ವಿಚಾರ. ನಿಮ್ಮ ಇಡೀ ಲೇಖನದ ನಿಲುವು ಇಂದಿನ ಪೀಳಿಗೆ ಹೊಸತನದತ್ತ ಮುಖ ಮಾಡುತ್ತಿಲ್ಲ ಎಂಬ ಭಾವ ಎಂದು ಭಾವಿಸುತ್ತೇನೆ. ಸಾಹಿತ್ಯ ಎಂಬುದಕ್ಕೆ ನಾವೊಂದು ಚೌಕಟ್ಟನ್ನು ಕಲ್ಪಿಸಬಹುದಾ? ಇಲ್ಲಿ ಪ್ರತಿಕ್ರಿಯಿಸಿದವರಿಗೆ ನನ್ನ ಪ್ರಶ್ನೆ. ಯಾಕೆ ಈ ಪ್ರಶ್ನೆ ಕೇಳುತ್ತಿದ್ದೇನೆ ಎಂದರೆ ವಾಸ್ತವವಾಗಿ ನಮ್ಮ ದೈನಂದಿನ ಚಟುವಟಿಕೆಗಳೆಲ್ಲವೂ ವಿಜ್ಞಾನವೇ. ಆದರೆ ನಾವು ವಿಜ್ಞಾನ ಎಂದ್ರೆ ಲ್ಯಾಬು, ವಿಜ್ಞಾನ ಎಂದರೆ ಬಿಎಸ್‌ಸಿಯವರು ಓದುವಂತಹದ್ದು...ಹೀಗೆ ವಿಜ್ಞಾನದ ಕುರಿತಾಗಿ ಎಂತಹದ್ದೋ ಒಂದು ಕ್ಲಿಷ್ಟಕರ ಭಾವ ಸಮಾಜದಲ್ಲಿ ನೆಲೆಯೂರುವಂತೆ ಮಾಡಿದ್ದೇವೆ. ವಿಜ್ಞಾನ ಸಾಮಾನ್ಯನಿಂದ ದೂರವಾದ ವಿಚಾರ ಎಂಬಂತಹ ವಾತಾವರಣ ಸಮಾಜದಲ್ಲಿ ಮೂಡಿದೆ.
ನಮ್ಮ ಸಾಹಿತ್ಯವೂ ಇವತ್ತು ಹಾಗೇ ಆಗುತ್ತಿದೆ. ಅದಕ್ಕೆ ಕಾರಣ ನಮ್ಮ ಮಡಿವಂತಿಕೆ. ಬ್ಲಾಗ್‌ನಲ್ಲಿ ಕೆಲವರು ದಿನಚರಿಯನ್ನೆಲ್ಲಾ ಬರೆದುಕೊಳ್ಳುತ್ತಾರೆ ಅಂತಾ ಯಾರೋ ರಾಗ ಎಳೆದರು. ಅವರಿಗೆ ನನ್ನ ಪ್ರಶ್ನೆ ದಿನಚರಿಯೂ ಒಂದು ಸಾಹಿತ್ಯವಾಗಬಾರದೇಕೆ? ಕನ್ನಡ ಸಾಹಿತ್ಯದಲ್ಲಿ ವೈವಿದ್ಯತೆ ಇಲ್ಲ ಎಂದೆನಲ್ಲಾ ಆದರೆ ಇವತ್ತಿನ ಬರಹಗಾರರಲ್ಲಿ ವೈವಿದ್ಯತೆ ಕಳೆದುಹೋಗುತ್ತಿದೆ ಎಂದೆಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸಾಹಿತ್ಯ ಸಮಾಜಮುಖಿಯಾಗದಿದ್ದರೆ ನಾವೆಷ್ಟು ಗೀಚಿ ಪುಸ್ತಕ ಮಾಡಿ ಟ್ರಂಕಿನೊಳಗೆ ಇಟ್ಟುಕೊಂಡರೆ ಪ್ರಯೋಜನವೇನು ಅಲ್ವಾ?
ಮಾಸ್ತಿ, ಬೇಂದ್ರೆ, ಕುವೆಂಪು, ಡಿ.ವಿ.ಜಿ...ಇಂತಹ ಬರಹಗಾರರು ಇವತ್ತಿಗೂ ನಮ್ಮ ನಡುವೆ ಇದ್ದಾರಾ? ಅಥವಾ ಅವರುಗಳೇ ಬರೆದದ್ದನ್ನು ಹೊಸ ರೂಪದಲ್ಲಿ ಕಾಪಿ, ಪೇಸ್ಟ್ ಮಾಡುವವರೇ ಹೆಚ್ಚಾಗಿದ್ದಾರಾ ಎಲ್ಲರೂ ಒಮ್ಮೆ ಅವಲೋಕಿಸಬೇಕಿದೆ ಎಂದು ನನಗನ್ನಿಸುತ್ತದೆ.

ವಿಕಾಸ್ ಹೆಗಡೆ/Vikas Hegde ಹೇಳಿದರು...

ನಮಸ್ತೆ ವಿನಾಯಕ. ಕಮೆಂಟಿಸಿದ್ದಕ್ಕೆ, ನಿಮ್ಮಭಿಪ್ರಾಯಕ್ಕೆ ಧನ್ಯವಾದಗಳು. ನಿಜ, ನನಗೂ ಹಾಗೇ ಅನ್ನಿಸಿದ್ದುಂಟು . ಹಳಬರು ಬರೆದಂತೆ ಬರೆದರೆ ಅಥವಾ ಅದೇ ವಿಷಯಗಳನ್ನಿಟ್ಟುಕೊಂಡು ಬರೆದರೆ ಮಾತ್ರ ಸಾಹಿತ್ಯ ಹಾಗು ಅದು ಮಾತ್ರ ಸಾಹಿತ್ಯದ ಮುಖ್ಯವಾಹಿನಿಯೆಂದೋ ತಪ್ಪು ತಿಳಿದುಕೊಂಡಿದ್ದಾರಾ ನಮ್ಮ ಯುವಬರಹಗಾರರು ಅಂತ. !

ಶ್ರೀದೇವಿ ಕಳಸದ ಹೇಳಿದರು...

ವಿಕಾಸ್, ಅವರವರಿಗೆ ನಿಲುಕಿದ್ದನ್ನ ಅವರವರು ಅಭಿವ್ಯಕ್ತಿಗೊಳಿಸುತ್ತಾರೆ. ನೀವು ಬಹುಶಃ ಬ್ಲಾಗಲೋಕದಲ್ಲಷ್ಟೇ ವಿಹರಿಸಿ ಈ ಲೇಖನ ಬರೆದಂತಿದೆ. ಏನೇ ಆಗಲಿ ಸರಳವಾಗಿ ಓದಿಸಿಕೊಳ್ಳುವ ಶೈಲಿ ನಿಮ್ಮ ಬರೆವಣಿಗೆಯಲ್ಲಿತ್ತು. ಇದನ್ನ ಇಷ್ಟಕ್ಕೇ ನಿಲ್ಲಿಸದೇ ಕೆಲವು ಕಮೆಂಟುದಾರರು ನೀಡಿದ ಸಲಹೆ ಹಾಗೂ ಹೋಂವರ್ಕ್‌‌ನ್ನ ಅಚ್ಚುಕಟ್ಟಾಗಿ ಮಾಡಿ, ಮತ್ತೊಮ್ಮೆ ಇದೇ ವಿಷಯವಾಗಿ ವಿಸ್ತೃತವಾಗಿ ಬರೆಯಿರಿ. ನನಗಿನಿಸಿದಂತೆ ಈಗಾಗಲೇ ಪುಸ್ತಕದಂಗಡಿಗಳತ್ತ ಮುಖ ಮಾಡಿರಬಹುದು. ಒಳ್ಳೆಯದಾಗಲಿ

ಸಂದೀಪ್ ಕಾಮತ್ ಹೇಳಿದರು...

ಒಂದು ರೀತಿಯಲ್ಲಿ ಸಾಹಿತ್ಯ ಎನ್ನುವುದೆ ಟೈಂ ಪಾಸ್!!!
ಗೃಹಿಣಿಯರು ಮನೆ ಕೆಲಸ ಎಲ್ಲಾ ಮುಗಿದ ಮೇಲೆ ಟೈಂ ಪಾಸ್ ಗಾಗಿ ತ್ರಿವೇಣಿ ,ಸಾಯಿಸುತೆ, ಕಾದಂಬರಿ ಓದ್ತಾ ಇದ್ರು ಹಿಂದಿನ ಕಾಲದಲ್ಲಿ,ಆಗ ಟಿ.ವಿ ಹಾವಳಿ ಬೇರೆ ಇರಲಿಲ್ಲ.
ನಾನೂ ಆಗ ರಜಾ ದಿನಗಳಲ್ಲಿ ತುಂಬಾ ಪುಸ್ತಕಗಳನ್ನು ಓದ್ತಾ ಇದ್ದೆ.ಅದೂ ಟೈಂ ಪಾಸ್ ಗಾಗಿ.ಯಾಕಂದ್ರೆ ಅಜ್ಜನ ಮನೆಗೆ ಹೊಗೊದಿಕ್ಕೆ ನನ್ನ ಅಜ್ಜ ಬದುಕಿರ್ಲಿಲ್ಲ.
ಹೀಗೆ ಟೈಂ ಪಾಸ್ ಸಾಹಿತ್ಯವಾದ್ರೂ ಅದರಲ್ಲಿ ತಪ್ಪೇನಿಲ್ಲ ಅಲ್ವ??
ಆದ್ರೆ ಒಂದು ವೇಳೆ ಜನರ ಬಳಿ ಸಮಯವೇ ಇರದೆ,ಓದಲೇ ಬೇಕೆಂಬ ತುಡಿತದಿಂದಾಗಿ ಸಮಯ ಮಾಡಿಕೊಂಡು ಯವುದಾದರೂ ಪುಸ್ತಕ ಓದಿದ್ರೆ ,ಆ ಪುಸ್ತಕವನ್ನು ಮೆಚ್ಚಲೇ ಬೇಕು ಅಲ್ವ??
ಚೇತನ್ ಭಗತ್ ಮೊದಲನೆ ಕಾದಂಬರಿ ನನಗೆ ಇಷ್ಟ ಆಗಿತ್ತು !!ಆದ್ರೆ ಉಳಿದೆರಡು ಇಷ್ಟ ಆಗಿಲ್ಲ.
ಅದೂ ಅಲ್ದೆ ವಯಸ್ಸಾದ ಹಾಗೆ ನಮ್ಮ ಚಿಂತನೆಗಳು ಬದಲಾಗುತ್ತವೆ,ನಮ್ಮ ನೆಚ್ಹಿನ ಲೇಖಕರು ಬದಲಾಗ್ತಾರೆ.
ಚಿಕ್ಕಂದಿನಲ್ಲಿ ಚಂದಮಾಮ ಇಷ್ಟ ಆಗ್ತಾ ಇತ್ತು ,ಈಗ dalal street ಅಥವಾ outlook ಇಷ್ಟ ಆಗುತ್ತೆ.
ಮುಂಚೆ ಜನರ ಬಳಿ ಕಾಸೂ ಇರಲಿಲ್ಲ ,ಲೈಬ್ರೆರಿಯಲ್ಲಿ ಲಭ್ಯವಿರುವುದನ್ನೆ ಓದ್ಬೇಕಾಗಿತ್ತು.ಆದ್ರೆ ಈಗ ಅಷ್ಟಿಷ್ಟು ಕಾಸು ಓಡಾಡ್ತಾ ಇದೆ ,ಜನರ ಬಳಿ choice ಇದೆ.

ಅರುಣಾದ್ರಿ ಹೇಳಿದರು...

ವಿಕಾಸ್,
ಚೆನ್ನಾಗಿ ಹೇಳಿದ್ದಿರಾ..

ನನ್ನ ಆಫೀಸ್ ಅಲ್ಲಿರುವ ನನ್ನ ೨೦ ಜನ ಕನ್ನಡದ ಸ್ನೇಹಿತರಲ್ಲಿ ಕನ್ನಡ ಓದೋ ಅಭ್ಯಾಸ ಇರೋರೆ ಬರಿ ಇಬ್ಬರು. ಅವರು ಬರಿ ದಿನ ಪತ್ರಿಕೆ ಓದೋರು. ಕನ್ನಡ ಸಾಹಿತ್ಯ, ಕಥೆ , ಕವನ ಎಲ್ಲ ಅವರ ಪಾಲಿಗೆ ಜಂಕ್,, ಇದು ನನ್ನೊಬ್ಬನ ಮಾತಲ್ಲ,, ನಮ್ಮ ಜನರೇಶನ್ ನ ಹುಡುಗರಿಗೆ, ಹುಡುಗಿಯರಿಗೆ ಇವ್ಯಾವುದು ಬೇಕಿಲ್ಲ.. ಅವರು ಹ್ಯಾರಿ ಪಾಟರ್ ಗೆ ಅಡ್ವಾನ್ಸ್ ಬುಕಿಂಗ್ ಬೇಕಾದ್ರೆ ಮಾಡ್ತಾರೆ, ಆದ್ರೆ ಕನ್ನಡದ ಬರಹ ಪುಗ್ಸಟ್ಟೆ ಕೊಟ್ರು ಓದಲ್ಲ.. ಮೊದಲು ಅವಿಗೆಲ್ಲ ಕನ್ನಡ ಓದೋದು ಒಂದು fashion,, ಒಂದು style statement ಅನ್ನೋ ತರಹ ಆಗಬೇಕಿದೆ.

ಅದು ಆಗಬೇಕಂದ್ರೆ, ಕನ್ನಡ ಇ ಸದ್ಯಕ್ಕೆ ಜುಟ್ಟಿನ ಮಲ್ಲಿಗೆ ಭಾಷೆ ಆಗಿದೆ, ಅದು ಹೋಗಿ,, ಅದು ಹೊಟ್ಟೆಯ ಹಿಟ್ಟಿನ ಭಾಷೆ ಆಗಬೇಕು.. ಹಾಗಾದಾಗ್ಲೆ,, ಒಂದು ಭಾಷೆನ ತುಂಬಾ ಸೀರಿಯಸ್ ಆಗಿ ಜನ ತಿರುಗಾ ಕಲಿಯೋಕೆ ಶುರು ಮಾಡ್ತಾರೆ.. ಇದು ನನ್ನ ಅನಿಸಿಕೆ.

ಹೀಗೆ ಬರಿತಾ ಇರಿ..

ಮಂಗಳಾ ಹೇಳಿದರು...

ಕನ್ನಡವೆಂದರೆ ಬರಿ ಸಾಹಿತ್ಯವಲ್ಲ! ಅಂತ ಏನ್ ಗುರು ಬರದಿದ್ದು ನೆನಪು ಆಯ್ತು.. ಒಮ್ಮೆ ಹಾಗೆ ಕಣ್ಣು ಹಾಯಿಸಿ:
http://enguru.blogspot.com/2008/07/kalike-balake-mattu-ulike.html

-
ಮಂಗಳಾ

ವಿಕಾಸ್ ಹೆಗಡೆ/Vikas Hegde ಹೇಳಿದರು...

@ಶ್ರೀದೇವಿ ಕಳಸದ
ಧನ್ಯವಾದಗಳು, ನಿಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ.

@ಕಾಮತ್,
ಧನ್ಯವಾದ. ಆದ್ರೆ ಸಾಹಿತ್ಯ ಅಂದ್ರೆ ಬರೀ ಟೈಂಪಾಸ್ ಅಲ್ಲ, ಆಗಲೂ ಬಾರದು. ಈಗ dalal street ನ ಟೈಂಪಾಸ್ ಗೆ ಓದುತ್ತೀರಾ? ಓದೋಕೆ ಉದ್ದೇಶ, ತಿಳಿದುಕೊಳ್ಳೋಕೆ ವಿಷಯ ಇರುತ್ತದಲ್ವಾ? ನಾನು ಹೇಳಿದ್ದೂ ಅದೇ. ಮೊದಲಾದರೆ ಸಮಯವಿರ್ತಿತ್ತು. ಮೊದಲಿನವರ ಅಭಿರುಚಿ ಬೇರೆ ಇತ್ತು. ಆದರೆ ಈಗಲೂ ಅದೇ ಟೈಂಪಾಸ್ ಪುಸ್ತಕಗಳೇ ಬರ್ತಿದ್ರೆ ಆಕರ್ಷಣೆ ಉಳಿಯೋದಿಲ್ಲ ಅಂತ. ಕಾಲಕ್ಕೆ ತಕ್ಕನಾಗಿ, ಈಗಿನ ಪೀಳಿಗೆಯ ಅಭಿರುಚಿಗೆ ತಕ್ಕನಾಗಿ ಬರಲಿ ಅಂತ ಆಸೆ. ಈಗಿನ ಹುಡುಗ/ಹುಡುಗೀರಿಗೆ ಸಾಯಿಸುತೆ ಕಾದಂಬರಿ ಓದ್ಸೋಕಾಗತ್ತಾ ನೋಡಿ?

@ಅರುಣಾದ್ರಿ,
ಸರಿಯಾಗಿ ಹೇಳಿದ್ರಿ . ಧನ್ಯವಾದಗಳು.
ಬರೇ ಜುಟ್ಟಿನ ಮಲ್ಲಿಗೆ ಸಾಹಿತ್ಯದ/ಭಾಷೆಯ ಉಳಿವು ಭಾರೀ ಕಷ್ಟ ಇದೆ ಮುಂದೆ.

@ಮಂಗಳ
thanQ, ಆದ್ರೆ ನಾನದನ್ನು ಓದಿದ್ದೇನೆ ಮೊದಲೇ.
ಕನ್ನಡ ಅಂದ್ರೆ ಬರೀ ಸಾಹಿತ್ಯ ಅಲ್ಲ ಹೌದು. ಆದ್ರೆ ಕನ್ನಡದಲ್ಲಿ ಸಾಹಿತ್ಯವೂ ಇದೆ. ಅದಕ್ಕೆ ಮಹತ್ವವೂ ಇದೆ.