ಪುಟಗಳು

ಮಂಗಳವಾರ, ಜೂನ್ 3, 2008

ನಕ್ಸಲೀಯರೇ ಬೆಂಗಳೂರಿಗೆ ಬನ್ನಿ !

ನಕ್ಸಲೀಯರೇ ಬೆಂಗಳೂರಿಗೆ ಬನ್ನಿ.

ಹೀಗೊಂದು ಕರೆ ಕೊಡುವುದು ಎಷ್ಟು ಸರಿಯೋ ಗೊತ್ತಿಲ್ಲ. ಏಕೆಂದರೆ ಕಾನೂನಿಂದ ನೀವು ನಿಷೇಧಿತರು. ಜನರನ್ನು ಸಾಯಿಸುವ ಕೊಲೆಗಡುಕರು. ಕೆಲವರು ನೀವು ಚೀನಾ ದೇಶದ ಬೆಂಬಲಿತರೆಂದೂ ಹೇಳುತ್ತಾರೆ. ಇರಲಿ.

ನಕ್ಸಲ್ಬಾರಿಯ ಮೂಲ ಅಲ್ಲೆಲ್ಲೋ ಬಿಹಾರದಲ್ಲಂತೆ. ಆದರೆ ನೀವು ಪ್ರಸಿದ್ಧಿಯಾಗಿದ್ದು ಮಾತ್ರ ಆಂಧ್ರದಲ್ಲಿ. ಬಡವರ ಉದ್ಧಾರಕ್ಕಾಗಿ ಜಮೀನ್ದಾರರ ದೌರ್ಜನ್ಯ, ಶೋಷಣೆಯ ವಿರುದ್ಧ ಶಸ್ತ್ರ ಸಹಿತರಾಗಿ ಹೋರಾಡುತ್ತೀವೆಂದು ಹೇಳಿಕೊಳ್ಳುತ್ತಾ ಆಂಧ್ರದಲ್ಲಿ ನೆಲೆಯೂರಿದಿರಿ. ಮೊದ ಮೊದಲು ಭ್ರಷ್ಟ ಅಧಿಕಾರಿಗಳನ್ನ, ರಾಜಕಾರಣಿಗಳನ್ನು ಮುಲಾಜಿಲ್ಲದೇ ಹೊಸಕಿ ಹಾಕಿದ ನೀವು ಒಂದಿಷ್ಟು ಪ್ರದೇಶದಲ್ಲಿ ಭಾರೀ ಜನಮನ್ನಣೆಯನ್ನೂ ಗಳಿಸಿಕೊಂಡಿರಿ. ನಿಜಕ್ಕೂ ಜಮೀನ್ದಾರರ ನೂರಾರು ವರ್ಷಗಳ ದಬ್ಬಾಳಿಕೆಯಿಂದ ಸೋತುಹೋಗಿದ್ದ ಜನಕ್ಕೆ ಆಶಾಕಿರಣವಾದಿರಿ. ನಿಮ್ಮ ಗುಂಪನ್ನು ವಿದ್ಯಾವಂತರೂ, ಮೇಧಾವಿಗಳೂ ಮುನ್ನಡೆಸುತ್ತಿದ್ದಾರೆಂಬ ಕಾರಣಕ್ಕಾಗಿ ಮಾಮೂಲಿ ಬಂಡುಕೋರರಾಗದೇ ಒಂದು ವಿಶಿಷ್ಟ ಛಾಪು ಮೂಡಿಸಿದಿರಿ. ಚುನಾವಣೆಯ ದಿಕ್ಕನ್ನೇ ಬದಲಾಯಿಸುವಷ್ಟು ಬಲಿಷ್ಠರಾದಿರಿ. ಆದರೆ ಬರುಬರುತ್ತಾ ಯಾವಾಗ ತೀರ ಅಮಾಯಕ ಜನರನ್ನು, ನಿಮಗಾಗದವರನ್ನು, ನಿಮ್ಮ ಪರ ಕೆಲಸ ಮಾಡದವರನ್ನು, ಕಾನೂನು ರಕ್ಷಕರಾದ ಪೋಲೀಸರನ್ನು ಕೊಲ್ಲುವುದು, ಪೋಲೀಸ್ ಠಾಣೆಯನ್ನು ಸ್ಪೋಟಿಸುವುದು, ರೈಲನ್ನು ಅಪಹರಿಸುವುದು, ಜನಪ್ರತಿನಿಧಿಗಳನ್ನು ಕೊಲ್ಲುವುದು, ಸಾಮೂಹಿಕ ಕಗ್ಗೊಲೆ ಮಾಡುವುದು ನಿಮ್ಮ ಕೆಲಸವಾಗಿ ಹೋಯಿತೋ ಆಗ ಈ ದೇಶದ ಭದ್ರತೆಗೇ ಧಕ್ಕೆ ಬರುವಂತಾಗಿ ಹೋಯಿತು. ಆದರೂ ನಿಧಾನಕ್ಕೆ ಆಂಧ್ರ ಗಡಿಯಿಂದ ನಮ್ಮ ಕರ್ನಾಟಕದೊಳಕ್ಕೂ ಕಾಲಿಟ್ಟಿರಿ.

ನೀವು ಕರ್ನಾಟಕದೊಳಕ್ಕೆ ಬರುವ ಮೊದಲೇ ಇಲ್ಲಿ ನಿಮಗೆ ಒಳಗೊಳಗೇ ಗುಪ್ತ ವೇದಿಕೆ ಸಿದ್ಧವಾಗಿತ್ತು ಎಂಬುದು ನಿಜ. ಇಲ್ಲಿನ ನಿಮ್ಮ ಸಿದ್ಧಾಂತದ ಅನುಯಾಯಿಯಳು, ನಿಮ್ಮ ಹೋರಾಟದ ಅಭಿಮಾನಿಗಳೂ ಆದ ಕೆಲವು ಪತ್ರಿಕೆಗಳ ಸಂಪಾದಕರುಗಳು, ಕೆಲ ವಿಶ್ವವಿದ್ಯಾಲಯದ ಪ್ರೊಫೆಸರುಗಳು, ಕೆಲ ಸಂಘಗಳೂ ನಿಮ್ಮನ್ನು ಸಂಭ್ರಮದಿಂದ ಪರೋಕ್ಷವಾಗಿ ಬರಮಾಡಿಕೊಂಡದ್ದು, ಈಗಲೂ ನಿಮ್ಮನ್ನೆ ಬೆಂಬಲಿಸುತ್ತಿರುವುದು ಸುಳ್ಳಲ್ಲ. ಹೀಗೆ ಬಡವರ, ಬುಡಕಟ್ಟುಜನರ, ಶೋಷಣೆಗೊಳಗಾದವರ ಸಹಾಯಕ್ಕೆಂದು ಹೇಳಿಕೊಳ್ಳುತ್ತಾ ಬಂದ ನೀವು ಸೀದ ನಮ್ಮ ಮಲೆನಾಡಿಗೇ ಹೊಕ್ಕು ಕುಳಿತು ಮಲೆನಾಡಿಗರಲ್ಲಿ ಆತಂಕ ಮೂಡಿಸಿದಿರಿ. ಎಷ್ಟೋ ಶತಮಾನಗಳಿಂದ ಭೂತಾಯಿಯ ಸೇವೆ ಮಾಡಿಕೊಂಡು ಕೃಷಿ, ಸಂಬಂಧಿತ ಕೆಲಸಗಳಿಂದ ಬದುಕು ಕಂಡುಕೊಂಡಿದ್ದವರು ನಮ್ಮ ಮಲೆನಾಡಿಗರು. ನೀವು ಇಲ್ಲಿಗೆ ಬಂದು ಹಲವು ವರ್ಷಗಳೇ ಕಳೆದು ಹೋದವು. ಆದರೆ ಮಾಡಿದ್ದಾದರೂ ಏನು? ಕಾಡಿನಲ್ಲಿ ಅಡಗಿ ಕುಳಿತು ಹಳ್ಳಿಗರನ್ನು, ನಿಮಗಾಗದವರನ್ನು, ಪೋಲೀಸರನ್ನು ಕೊಂದಿದ್ದೇ ಬಂತು ವಿನಃ ಯಾವ ಉದ್ಧಾರದ ಕಾರ್ಯಗಳೂ ಆಗಲಿಲ್ಲ. ಇದ್ದಷ್ಟರಲ್ಲೇ,ಸಿಕ್ಕಷ್ಟರಲ್ಲೇ ತೃಪ್ತಿ ಪಡುತ್ತಾ ಯಾರಿಗೂ ತೊಂದರೆ ಮಾಡದೇ ಬದುಕುತ್ತಿದ್ದ ಮಲೆನಾಡಿನ ಹಸಿರಿನ ಮಧ್ಯೆ ಕೆಂಪು ಕಲೆಗಳಾದವು. ಬಡವರ ಉದ್ಧಾರಕರೆಂದು ಹೇಳಿಕೊಂಡೇ ಬಂದ ನಿಮ್ಮಿಂದ ಬಡವರಿಗೆ ನೇರವಾಗಿ ನಯಾಪೈಸೆ ಲಾಭ ಆಗಲಿಲ್ಲ. ಒಂದೆಡೆ ಸರ್ಕಾರ, ಇನ್ನೊಂದೆಡೆ ನೀವು ಎಲ್ಲ ಸೇರಿ ಆತಂಕ, ಅಭದ್ರತೆ ಹೆಚ್ಚಾಯಿತೇ ಹೊರತು ಇನ್ನೇನಾಗಲಿಲ್ಲ. ಅಸಲಿಗೆ ನಮ್ಮ ಮಲೆನಾಡಿನಲ್ಲಿ ನೀವೆಣಿಸಿದ ಮಟ್ಟಿಗೆ ಜಮೀನ್ದಾರಿತನವಾಗಲೀ, ಬಡಜನರ ಶೋಷಣೆಯಾಗಲೀ ಇರಲೇ ಇಲ್ಲ. ಜಗತ್ತಿನೆಲ್ಲೆಡೆ ಇರುವಂತೆ ಕೆಲಸ ಮಾಡಿಸುವ ಮಾಲೀಕವರ್ಗ, ದುಡಿಯುವ ಕೆಲಸದ ವರ್ಗವಷ್ಟೆ ಇರುವುದು. ಆದರೂ ನೀವು ಹೆದರಿಸುವುದು, ಬೆಂಕಿ ಹಚ್ಚುವುದು, ಕೊಲ್ಲುವುದು ಇವೆಲ್ಲವುಗಳಿಂದ ಮಲೆನಾಡಿನ ನೆಮ್ಮದಿಯ ವಾತಾವರಣ ಹಾಳಾಗಲು ಕಾರಣರಾದಿರಿ. ನಿಮ್ಮವರನ್ನು ಪೋಲೀಸರು ಕೊಂದರು, ನೀವು ಅವರನ್ನು ಕೊಂದಿರಿ. ಕೊಲೆಗಳೇ ಕಾಯಕವಾಯಿತು.

ಉಳ್ಳವರದ್ದು ಕಿತ್ತುಕೊಂಡು ಇಲ್ಲದಿರುವವರಿಗೆ ಹಂಚಬೇಕು ಎನ್ನುವ ನಿಮ್ಮ ಸಿದ್ಧಾಂತವೇ ವಿಚಿತ್ರ. ಹಾಗೇನಾದರೂ ಎಲ್ಲರಲ್ಲೂ ಒಂದೇ ರೀತಿಯ ಸಂಪತ್ತು ಇರಬೇಕು ಅಂತಾಗಿದ್ದರೆ ಈ ಜಗತ್ತು ಹೀಗಿರುತ್ತಿತ್ತೆ? ಹಾಗೇ ಆಗಬೇಕಂತಿದ್ದರೆ ಈಗ ವಿಷಯಕ್ಕೆ ಬರೋಣ, ನೀವು ನಿಜವಾಗಿಯೂ ಜನರ ಉದ್ಧಾರಕ್ಕಾಗೇ ಹೋರಾಟ ಮಾಡುತ್ತಿದ್ದರೆ, ಭೂಮಾಲೀಕರ , ಜಮೀನುದಾರರ ವಿರುದ್ಧ ಹೋರಾಡುವವರಾಗಿದ್ದರೆ ಬೆಂಗಳೂರಿಗೆ ಬನ್ನಿ. ಇವತ್ತು ಬೆಂಗಳೂರೆಂಬುದು ಯಾವ ರೀತಿ ಬೆಳೆದು ನಿಂತಿದೆ ಎಂಬುದು ಕಾಡಿನಲ್ಲಿ ಕೂತಿದ್ದರೂ ನಿಮ್ಮ ಗಮನಕ್ಕೆ ಬರದೇ ಏನೂ ಹೋಗಿಲ್ಲ. ಅಸಲಿಗೆ ಕರ್ನಾಟಕದಲ್ಲಿ ’ಜಮೀನುದಾರ’, 'ಜಮೀನುದಾರಿತನ’ ಎನ್ನುವುದು ಇರುವುದಾದರೆ ಇವತ್ತು ಬೆಂಗಳೂರಲ್ಲಿ ಮಾತ್ರ! ಇಲ್ಲಿ ಭೂಮಿಯ ಬೆಲೆಗಳು, ಮನೆಗಳ ಬೆಲೆಗಳು ಯಾವ ರೀತಿ ಆಕಾಶಕ್ಕೇರಿವೆಯೆಂದರೆ ಸಾಮಾನ್ಯ ಜನ ಮುಟ್ಟಲೂ ಸಾಧ್ಯವಾಗುತ್ತಿಲ್ಲ. ಒಂದಿಷ್ಟು ರಿಯಲ್ ಎಸ್ಟೇಟ್ ಧಣಿಗಳು, ರಾಜಕಾರಣಿಗಳ ವ್ಯವಸ್ಥಿತ ಕೆಲಸಗಳಿಂದಾಗಿ ಜನರಿಗೆ ಸ್ವಂತ ನೆಲೆಯೊಂದನ್ನು ಮಾಡಿಕೊಳ್ಳಲು ಸಾಧ್ಯವೇ ಇಲ್ಲದಂತೆ ಆಗಿ ಹೋಗಿದೆ. ಬೇರೆ ಊರಿನಲ್ಲಿ ಬರೀ ಬಡವರು ಮಾತ್ರ ಬಡವರಾಗಿದ್ದರೆ, ಇಲ್ಲಿನ ಭೂಮಿ, ಮನೆ ಬೆಲೆಯ ಮುಂದೆ ಬಡವರಿಂದ ಮೇಲ್ಮಧ್ಯಮ ವರ್ಗದವರ ತನಕವೂ ಎಲ್ಲರೂ ಬಡವರೇ! ಸರ್ಕಾರದಿಂದ ವಿದೇಶಿ ಕಂಪನಿಗಳಿಗೆ ಮಣೆ ಹಾಕುವುದಕ್ಕಾಗಿ ರೈತರ ಜಮೀನು ಗಳನ್ನು ಕಸಿದುಕೊಳ್ಳಲಾಗುತ್ತಿದೆ. ತೀರ ಕೆರೆಗಳನ್ನೂ ಮುಚ್ಚಿಹಾಕಿ, ರೈತರಿಗೆ ಆಮಿಷ ತೋರಿಸಿ ಭೂಮಿಯನ್ನು ಸೈಟುಗಳನ್ನಾಗಿ ಮಾರಾಟ ಮಾಡಲಾಗುತ್ತಿದೆ, ದೊಡ್ಡ ದೊಡ್ಡ ಕಟ್ಟಡಗಳನ್ನೆಬ್ಬಿಸಲಾಗುತ್ತಿದೆ. ರೈತರು ವ್ಯವಸ್ಥಿತವಾಗಿ ಭೂಹೀನರಾಗಿ ಸ್ವಾವಲಂಬನೆ ಕಳೆದುಕೊಳ್ಳುತ್ತಿದ್ದಾರೆ. ಕೆಲವರು ಮಾತ್ರ ದಿನೇ ದಿನೇ ಕೊಬ್ಬುತ್ತಲೇ ಇದ್ದಾರೆ. ಭ್ರಷ್ಟಾಚಾರ, ಮೋಸಗಳಿಗೆ ಕಡಿವಾಣವೆ ಹಾಕುವವರಿಲ್ಲ. ಎಲ್ಲರಿಗೂ ಈ ಕೆಟ್ಟ ಬೆಳವಣಿಗೆಯ ಕಾರಣ, ಪರಿಣಾಮದ ಅರಿವಿದ್ದರೂ ಎಲ್ಲರೂ ಅಸಹಾಯಕರು. ಯಾವ ಕಾನೂನಿಗೂ ನಿಲುಕದಂತೆ ನಡೆಯುತ್ತಿರುವ ಈ ದರೋಡೆಯನ್ನ ನಿಮ್ಮ ಗಮನಕ್ಕೆ ತೆಗೆದುಕೊಳ್ಳಿ. ಬರೀ ಕಾಡಿನಲ್ಲಿರುವವರಷ್ಟೆ ಶೋಷಿತರಲ್ಲ, ನಗರಗಳಲ್ಲೂ ಇದ್ದಾರೆ. ನಿಜಹೇಳಬೇಕೆಂದೆರೆ ಇಲ್ಲಿಯೇ ಶೋಷಣೆಯ ಎಲ್ಲಾ ಮುಖಗಳೂ ಇವೆ. ನೀವು ಜನರ ಉದ್ಧಾರಕ್ಕಾಗಿ ಹೋರಾಡುವವರೇ ಆಗಿದ್ದರೆ ನಿಮ್ಮ ಅಗತ್ಯ ಕಾಡಿಗಿಂತ ಈ ನಾಡಿಗೆ ಬಹಳ ಇದೆ. ನೀವಷ್ಟೂ ಜನರೂ ಬರಬೇಕೆಂದೇನೂ ಇಲ್ಲ, ನಿಮ್ಮದೊಂದು ತುಕಡಿಯನ್ನು ಇಲ್ಲಿಗೆ ಕಳಿಸಿಕೊಡಿ. ಭೂಗಳ್ಳರ ಕೊಬ್ಬನ್ನು ಬಸಿದು ಅದರಿಂದ ಜನಸಾಮಾನ್ಯರ ಮನೆ ದೀಪ ಹಚ್ಚುವಂತ ಕೆಲಸ ಮಾಡುವುದಕ್ಕಾದರೆ ಮಾಡಿ. ಅಭಿವೃದ್ಧಿ, ಪ್ರಗತಿಯ ತೆರೆಯ ಹಿಂದೆ ನೆಡೆಯುತ್ತಿರುವ ಅನಾಚಾರಗಳನ್ನು ನಿಲ್ಲಿಸಿ. ಈ ಬೆಂಗಳೂರಿನಲ್ಲಿ ನಿಮಗೆ ಅಡಗಿಕೊಳ್ಳಲು ಮಲೆನಾಡಿನ ಕಾಡಿನಂತಹ ಜಾಗ ಸಿಗಲಾರದೆಂಬ ಭಯ ಬೇಡ. ಇಲ್ಲಿ ಪಾಕಿಸ್ತಾನದ ಏಜೆಂಟರು, ಭಯೋತ್ಪಾದಕರು, ಇನ್ನು ಎಂತೆಂತವರೋ ಯಾರಿಗೂ ಗೊತ್ತಾಗದಂತೆ ಇದ್ದಾರಂತೆ. ಅಂದ ಮೇಲೆ ನಿಮಗೇನೂ ಕಷ್ಟವಾಗಲಿಕ್ಕಿಲ್ಲ. ಹಾಗೂ ಆಗದಿದ್ದರೆ ನಿಮ್ಮ ಬುದ್ಧಿ ಜೀವಿ ಬೆಂಬಲಿಗರಿದ್ದಾರಲ್ಲ ಅವರೇನಾದರೂ ವ್ಯವಸ್ಥೆ ಮಾಡಿಯಾರು. ತಾನು ದೇವರನ್ನು ನಂಬುವುದಿಲ್ಲ ಎಂದು ಹೇಳಿಕೊಳ್ಳುತ್ತ, ಆ ದೇವರಿಗೂ ಸಿಗಲಾರದಂತೆ ನಿಮ್ಮನ್ನು ಇರಿಸಿಕೊಳ್ಳಬಲ್ಲೆ ಮನೆ ಬಿಟ್ಟು ಓಡಿ ಬನ್ನಿ ಎಂದು ಪ್ರೇಮಿಗಳಿಗೆ ಕರೆಕೊಡುವ ಬಡಾಯಿ ಸಂಪಾದಕರು, ಪತ್ರಿಕೋದ್ಯಮವನ್ನು ಹಾದರವಾಗಿಸಿದ ಕೆಲ ವಂಶವಾಹಿ ಪತ್ರಕರ್ತ ಪತ್ರಕರ್ತೆಯರು, ಅನೇಕಾನೇಕ ಪ್ರಶಸ್ತಿ ವಿಜೇತರೂ, ಕಾರ್ಯಕರ್ತರೂ ಇದ್ದಾರೆ. ಅವರ ಮಕ್ಕಳೆಲ್ಲ ವಿದೇಶದಲ್ಲಿದ್ದಾರೆ. ಬೇರೆಯವರ ಮಕ್ಕಳು ನಕ್ಸಲರಾಗಿ ಕಾಡುಸೇರುವುದನ್ನು ಕೊಲೆಮಾಡುವುದನ್ನು ಮಾತ್ರ ಬೆಂಬಲಿಸುತ್ತಾರೆ ಅವರು. ಇರಲಿ. ಆ ನಂತರ ನೋಡಿ, ಜನಬೆಂಬಲ ತಾನಾಗಿಯೇ ದಕ್ಕುತ್ತದೆ. ಯಾವ ಜನರು ನಕ್ಸಲೀಯರೆಂದರೆ ಕೊಲೆಗಡುಕರೆನ್ನುತ್ತಿದ್ದರೋ ಅವರೇ ಪೂಜಿಸತೊಡಗುತ್ತಾರೆ. ನಂತರ ಜನಮನ್ನಣೆ ಸಿಕ್ಕ ಮೇಲೆ ಪ್ರಜಾಪ್ರಭುತ್ವದೊಳಗೆ ಕಾಲಿಡಿ. ನಿಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ. ಈ ಮೂಲಕ ಸರ್ಕಾರದಲ್ಲಿ ಪಾಲ್ಗೊಂಡು ರಾಜ್ಯ, ದೇಶ ಉದ್ಧಾರ ಮಾಡಿ.

ಇದೆಲ್ಲಾ ಏನು ನಮಗೆ ಗೊತ್ತಿರದ ವಿಷಯವೇನಲ್ಲ, ನಮ್ಮ ಗುರಿಯೇ ಬೇರೆಯಿದೆ, ನಮಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ, ನಾವು ನಂಬಿಕೊಂಡಿರುವ ಮಾವೋ ಸಿದ್ಧಾಂತವೇ ಸರಿ, ಎಲ್ಲದಕ್ಕೂ ಶಸ್ತ್ರಗಳಿಂದಲೇ ಉತ್ತರ ಕೊಡುತ್ತೇವೆ, ಕೊಲೆಗಳನ್ನು ಮಾಡಿಯೇ ಕೆಂಪು ಬಾವುಟ ಹಾರಿಸುತ್ತೇವೆ ಎನ್ನುವುದಾದರೆ ... ಊಹೂಂ..ಶಸ್ತ್ರಗಳಿಂದ ಈ ದೇಶವನ್ನು, ಹೋಗಲಿ ದೇಶದ ಯಾವುದಾದರೊಂದು ಭಾಗವನ್ನು ಕೂಡ ಭೌಗೋಳಿಕವಾಗಲೀ, ಹಿಂಸೆಯ ಸೈದ್ಧಾಂತಿಕತೆಯಿಂದಾಗಲೀ ಆಕ್ರಮಿಸಿಕೊಳ್ಳಲು ನಿಮಗೇ ಯಾಕೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಆ ಕನಸು ಇದ್ದರೆ ಬಿಟ್ಟು ಬಿಡುವುದು ಲೇಸು. ಬಂದೂಕಿನಿಂದ ಶಾಶ್ವತ ಪರಿಹಾರ ಅಸಾಧ್ಯ. ಅದು ಇನ್ನಷ್ಟು ತೊಂದರೆಗಳನ್ನುಂಟು ಮಾಡುವುದೇ ಹೊರತು ಇನ್ನೇನು ಆಗದು. ನಿಮ್ಮ ಹಿಂದೆ ಚೀನಾ ದೇಶದ ವ್ಯವಸ್ಥಿತ ಕುತಂತ್ರ , ಬೆಂಬಲ ಕೆಲಸ ಮಾಡುತ್ತಿದೆ ಎಂಬುದು ಖಾತ್ರಿಯಾದರಂತೂ ಮುಗಿದೇ ಹೋಯಿತು. ಏಕೆಂದರೆ ಈ ದೇಶದಲ್ಲಿ ಪ್ರಾಣಕ್ಕಿಂತಲೂ ಹೆಚ್ಚಿನ ದೇಶಭಕ್ತಿ ಇಟ್ಟುಕೊಂಡಿರುವ ಜನರು ಬಹಳಷ್ಟಿದ್ದಾರೆ, ದೇಶಭಕ್ತ ರಾಜಕೀಯ ಪಕ್ಷಗಳಿವೆ, ಎಲ್ಲದಕ್ಕಿಂತ ಹೆಚ್ಚಾಗಿ ಈ ದೇಶಕ್ಕೊಂದು ಪ್ರಚಂಡ ಸೇನೆ ಇದೆ ಮತ್ತು ಅದರಲ್ಲಿ ವೀರ ಸೈನಿಕರಿದ್ದಾರೆ. ಎಚ್ಚರ.

*******************************************************
ಜೂನ್ ೦೬ - ೨೦೦೮ thatskannada.comನಲ್ಲಿ - ನಕ್ಸಲೀಯರೇ ಬೆಂಗಳೂರಿಗೆ ಬನ್ನಿ.

22 ಕಾಮೆಂಟ್‌ಗಳು:

ಕಟ್ಟೆ ಶಂಕ್ರ ಹೇಳಿದರು...

ಲೇಖನ ಬಹಳ ಸ್ಟ್ರಾಂಗ್ ಆಗಿ ಬಂದಿದೆ ವಿಕಾಸ. ಕೀಪ್ ಇಟ್ ಅಪ್. ಈ ಥರ ಬರೆದು, ಅಪರೂಪಕ್ಕೆ ನನ್ನನ್ನು ಸ್ವಲ್ಪ ಯೋಚನೆ ಮಾಡಲು ತಲೆ ಓಡಿಸೋ ಹಾಗೆ ಮಾಡ್ತೀಯಾ. ಧನ್ಯವಾದಗಳು.

ಭೂಮಾಲಿಕರ ದೌರ್ಜನ್ಯ, ಶೋಷಣೆ, ದಬ್ಬಾಳಿಕೆಯನ್ನು ಹತ್ತಿಕ್ಕಲು ಪಿ. ಸೀತಾರಾಮಯ್ಯ, ಪ್ವ್ಗ್ (ಪೀಪಲ್ಸ್ ವಾರ ಗ್ರೂಪ್) ಅನ್ನು, ಮಾವೋ ಚಳುವಳಿಯಿಂದ ಪ್ರೇರಿತರಾಗಿ 1980 ರಲ್ಲಿ ಶುರು ಮಾಡಿದ್ದು. ಅದಾದ ಮೇಲೆ ಅಲ್ಲೇ ಗುಂಪುಗಾರಿಕೆ ಶುರು ಆಗಿ, ಇವತ್ತು ಏನೇನೋ ಆಗಿದೆ. ಬಿಡಿ ಅದನ್ನು.

ಇನ್ನು ಬೆಂಗಳೂರಲ್ಲಿ ಇರೋ ಸಮಸ್ಯೆಗಳು ಸಾಲದೆಂದು, ಲ್ಯಾಂಡ್ ಮಾಫಿಯಾ ವಿರುದ್ಧ ಹೊರಾಡೋದಕ್ಕೆ ಇವ್ರು ಬರಬೇಕಾ ? ಬೇಡ ಗುರೂ. ಸರಕಾರ ಸರಿಯಾಗಿ ತನ್ನ ಕೆಲ್ಸ ಮಾಡ್ಕೊಂಡು, ಇಂಥವರನ್ನು ಮಟ್ಟ ಹಾಕಿದ್ರೆ ಸಾಕು. ಜನರೂ ಕೂಡಾ ಇವತ್ತು "ಊರಿಗೆ ಊರು ಹತ್ತಿ ಉರುದ್ರೆ, ಶ್ಯಾನುಭೋಗರ.........." ಅನ್ನೋ ಥರ ಆಗಿದಾರೆ. ಪೂರ್ತಿಯಾಗಿ ಅಲ್ಲದ್ರಿದ್ರೂ ನಾನೂ ಕೂಡ ಕೆಲವು ವಿಷಯದಲ್ಲಿ ಹೀಗೇನೆ. ನೋಡುವಾ, ನಮ್ಮ ಭವ್ಯ ಭಾರತದ ಮುಂದಿನ ಪರಿಸ್ಥಿತಿ ಹೆಂಗೋ ಅಂದು.

ನಿಮ್ಮವನು,
ಕಟ್ಟೆ ಶಂಕ್ರ
http://somari-katte.blogspot.com

Shashanka G P (ಉನ್ಮುಖಿ) ಹೇಳಿದರು...

ಸಾಮಾನ್ಯವಾಗಿ ನಕ್ಸಲರಲ್ಲಿ Artsನ ವಿದ್ಯಾರ್ಥಿಗಳೇ ಹೆಚ್ಚು ಅಲ್ವಾ? Engineers, Doctors ಮು೦ತಾದ Proffesionals ಇದ್ರಲ್ಲಿ ಕಡಿಮೆ.
.
ಯಾವುದೇ engineering ವಿದ್ಯಾರ್ಥಿಯನ್ನು ಮಾತನಾಡಿಸಿ ನೋಡಿ, ಆತನಲ್ಲಿ ಎಡಪ೦ಥೀಯ ಚಿ೦ತನೆಗಳು ಅಪರೂಪ. ನನಗನ್ನಿಸೋದು ಯಾರಿಗೆ ಹಣ ಗಳಿಸೋ ಅವಕಾಶಗಳು ಹೆಚ್ಚೋ ಅವ್ರು practising capitalistಗಳಾಗಿರೋದೇ ಹೆಚ್ಚು. ಇನ್ನುಳಿದವರು ಎಷ್ಟೇ ಕಷ್ಟ ಬಿದ್ದರೂ ಒಬ್ಬ ಸಾಮಾನ್ಯ software engineerನ ಮಟ್ಟಕ್ಕೆ ಸ೦ಪಾದಿಸುವುದು ದೂರದ ಮಾತು. ಹಾಗಾಗಿ ಈ ಕುರಿತಾದ ಒ೦ದು ಅ೦ತರ್ಹಿತ ಮತ್ಸರವೇ ವ್ಯಕ್ತಿಗಳನ್ನು ನಕ್ಸಲರನ್ನಾಗಿ ಮಾಡುವುದೇನೋ ಎ೦ದು ನನ್ನ ಭಾವನೆ.

ತೇಜಸ್ವಿನಿ ಹೆಗಡೆ- ಹೇಳಿದರು...

ವಿಕಾಸ,

ನನಗೆ ನಿಜಕ್ಕೂ ನಿನ್ನ ಬಗ್ಗೆ ಕಾಳಜಿಯಾಗ್ತಾ ಇದ್ದು. ಒಂದೆಡೆ ಭೂಮಾಲಿಕರ ಕೆಂಗಣ್ಣು ಇನ್ನೊಂದೆಡೆ ನಕ್ಸಲೀಯರ ಬಂದೂಕು...ಇಬ್ಬರನ್ನೂ ಎದುರು ಹಾಯ್ಕಂಜೆ ಈ ಲೆಖನದಿಂದ! ಹುಶಾರಗಿರು ಮರಾಯಾ...!

Jokes apart. ಚಿಂತನಾಶೀಲ ಲೇಖನ. ನಿಜ ನೀ ಹೇಳಿದ್ದು... ಬಂದೂಕಿನಿಂದ, ಹಿಂಸೆಯಿಂದ ಯಾವ ದೇಶವನ್ನೂ ವಶಪಡಿಸಿಕೊಳ್ಳಲು ಆಗುವುದಿಲ್ಲ. ಹಾಗೆ ಆಗುವುದಿದ್ದರೆ ಬ್ರಿಟೀಷರ ಕಾಲದಲ್ಲೇ ಆಗಬಹುದಿತ್ತು. ಆದರೆ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ಗಾಂಧೀಜಿಯವರ ಸತ್ಯಾಗ್ರಹದಿಂದದಲೇ, ಅಹಿಂಸಾ ಮರ್ಗದಿಂದಲೇ! ಅದ್ರೆ ಒಂದು ಪ್ರೆಶ್ನೆ.."ದೇಶ ಭಕ್ತ ರಾಜೀಕೀಯ ಪಕ್ಷಗಳಿವೆ" ಹೇಳಿದ್ದಿ. ಅದು ಎಷ್ಟರ ಮಟ್ಟಿಗೆ ನಿಜವೆಂದು. ಕೆಲವೊಂದು ಪಕ್ಷದಲ್ಲಿ ಬೆರಳೆಣಿಕೆಯಷ್ಟು ಜನ ಅಪ್ಪಟ ದೇಶಭಕ್ತರಿರಬಹುದೇನೋ....ಸರಿ ತಾನೆ??!

ಅಮರ ಹೇಳಿದರು...

ವಿಕಾಸ ಸಮಯೋಚಿನ ಬರಹ ಇದು, ಒಂದು ಕಡೆ ತೊಟ್ಟಿಲನ್ನು ತೂಗುತ್ತ ಮಗುವನ್ನು ಜಿಗಟುವ ತಲೆಮಾಸಿತ ಪತ್ರಕರ್ತರ ಬಣ್ಣದ ಮಾತುಗಳಿಗೆ ನನ್ನದೊಂದು ದಿಕ್ಕಾರ. ಇವರು ಮಾಡೊದೆಲ್ಲ ಮನೆಹಾಳ ಕೆಲಸ ಆದರೆ ಪುಟಗಳಗಟ್ಟಲೆ ತಾವು ಸತ್ಯವಂತರು ಅಂತ ಪುಣ್ಯಕೊಟಿ ಸ್ಟೈಲ್ ಫೋಸ್ ಕೊಡೊ ಜನ. ಇನ್ನು ತನ್ನ ಸುತ್ತ ಮುತ್ತಲಿನವರ ಅಥವ ತನ್ನ ಮನೆಯವರ ಉದ್ದಾರ ಮಾಡಲಾದಲೆ , ಭಾಷಣಗಳಲ್ಲೆ ಕ್ರಾಂತಿ ಮಾಡೊ ಮಂದಿಯನ್ನ ನಂಬಿ ಕಾಡಿನಲ್ಲಿ ಅಡಗಿ ಕೂತವರನ್ನ ದೇವರೆ ಕಾಪಾಡಬೇಕು. ಇದೆ ವಿಚಾರಗಳನ್ನ ತೇಜಸ್ವಿಯವರು ಜುಗಾರಿ ಕ್ರಾಸ್ ಮತ್ತೆ ಚಿದಂಬರ ರಹಸ್ಯ ದಲ್ಲಿ ಬರೆದಿರೋದು ಅಲ್ವ.
-ಅಮರ

ಸುಪ್ರೀತ್.ಕೆ.ಎಸ್. ಹೇಳಿದರು...

ವಿಕಾಸ್,
ನಿಮ್ಮ ಲೇಖನದಲ್ಲಿ ಗಂಭೀರ ಚಿಂತನೆಯ ಪ್ರಯತ್ನ ಹಾಗೂ sarcasm ಒಟ್ಟಿಗೇ ಬೆರೆತು ಚೌ ಚೌ ಆಗಿಬಿಟ್ಟಿದೆ, ಕೆಲವು ಕಡೆ ನಿಮ್ಮ ನಿಲುವಿನ ಬಗ್ಗೆ ಗೊಂದಲ್ವೂ ಎದ್ದು ಕಾಣುತ್ತದೆ.

ಇರಲಿ, ಮಾವೋವಾದಕ್ಕೂ ಮಾರ್ಕ್ಸ್ ಪ್ರತಿಪಾದಿಸಿದ ಕಮ್ಯುನಿಸಮ್ಮಿಗೂ ವ್ಯತ್ಯಾಸವೇನು ಎಂದು ನನಗೆ ಗೊತ್ತಿಲ್ಲ ಆದರೆ ಮಾರ್ಕ್ಸ್ ಪ್ರತಿಪಾದಿಸಿದ ಕಮ್ಯುನಿಸ್ಟ್ ಚಿಂತನೆ ತೀರಾ ಅಪ್ರಯೋಗಾತ್ಮಕವಾದದ್ದು. ಕಾರಣ ಇಷ್ಟೇ, ಅವನ ಪ್ರಕಾರ ಏನೂ ಇಲ್ಲದವರಿಗೆ ಶ್ರೀಮಂತರಿಂದ ಕಿತ್ತು ಕೊಡುವುದು ನ್ಯಾಯಯುತವಾದ ಹೋರಾಟ. ಆದರೆ ಜಗತ್ತಿನಲ್ಲಿ ಯಾರೂ ಏನೂ ಇಲ್ಲದವರಾಗಿರುವುದಿಲ್ಲ. ಕಳೆದುಕೊಳ್ಳಲು ಏನೂ ಇಲ್ಲದವರು ಸಿಕ್ಕುವುದಿಲ್ಲ.

ಮಲೆನಾಡಿನಲ್ಲಿ ಶೋಷಣೆ ಯಾವ ಪ್ರಮಾಣದಲ್ಲಿದೆ ಎಂಬ ಬಗ್ಗೆ ನೀವೇ ಹೇಳಬೇಕು. ಆದರೆ ಬೆಂಗಳೂರಿನಂತಹ ನಗರಗಳಲ್ಲಿ ಶೋಷಣೆ ನಡೀತಿದೆ ಎಂಬ ವಾದಗಳು ಬಾಲಿಶವಾದವು. ಸೈಟುಗಳ ಬೆಲೆ ಏರುತಿರುವುದಕ್ಕೆ ಆರ್ಥಿಕ ಕಾರಣಗಳಿವೆ. ರಿಯಲ್ ಎಸ್ಟೇಟ್ ಕೂಡ ಒಂದು ಉದ್ಯಮ, ನೆನಪಿರಲಿ. ನಿಮಗೆ ಈ ಸಮಸ್ಯೆಗಳಿಗೆ ಪ್ರಾದೇಶಿಕ ವಾತಾವರಣಕ್ಕೆ ಸಂವೇದನೆಯನ್ನು ಕಳೆದುಕೊಂಡಿರುವ ವಿದೇಶಿ ಕಂಪೆನಿಗಳು, ನಮ್ಮವೇ ಆದ ಐಟಿ ಕಂಪೆನಿಗಳು, ಕಾಲ್ ಸೆಂಟರ್‌ಗಳು ಕಾರಣ ಅನ್ನಿಸುವುದಿಲ್ಲವೇ? ಸೈಟುಗಳ ಬೆಲೆಯೇರಿರುವುದಕ್ಕೆ, ನಗರಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದುದಕ್ಕೆ ಅವರ ಲೆಕ್ಕ ತಪ್ಪಿದ ಆದಾಯ ಕಾರಣವಲ್ಲವೇ? ಇವೆಲ್ಲವನ್ನೂ ಸರಿ ಪಡಿಸೋದಕ್ಕೆ ನೀವು ನಕ್ಸಲರನ್ನು ಕರೆದಿದ್ದೀರಾ? ಇಲ್ಲಿರುವುದು sarcasm ಎಂದುಕೊಂಡು ಸುಮ್ಮನಾಗಿರುವೆ.

ಸುಪ್ರೀತ್.ಕೆ.ಎಸ್

Sree ಹೇಳಿದರು...

ಸ್ಟ್ರಾಂಗ್ ಆಗಿ ಬರೆದಿದ್ದೀರ, ಆದ್ರೆ ವ್ಯಂಗ್ಯ ಎಲ್ಲೋ ಸ್ವಲ್ಪ ಫೋಕಸ್ ಹೋಗೋ ಹಾಗೆ ಮಾಡಿದೆಯೇನೋ ಅನ್ನಿಸ್ತು...ಆ ಬಗ್ಗೆ ಸುಪ್ರೀತ್ ಹೇಳಿದ್ದಾರೆ, ಆದ್ರಿಂದ ಮತ್ತೆ ವಿವರಣೆಗೆ ಹೋಗಲ್ಲ. ಮತ್ತೆ ’ದೇಶಭಕ್ತ ರಾಜಕೀಯ ಪಕ್ಷಗಳು’?? ನೀವು ಭಾರತದಲ್ಲೇ ಇದೀರಾ ಅಲ್ವಾ?;)

ಇಲ್ಲಿ ಶಶಾಂಕ ಕಮೆಂಟಿಸಿರೋದು ನೋಡಿ ನಗಬೇಕೋ ಅಳಬೇಕೋ ಗೊತ್ತಾಗ್ಲಿಲ್ಲ! ಆರ್ಟ್ಸ್ ತೊಗೊಂಡು ಸಂಪಾದನೆ ಕಮ್ಮಿ ಅನ್ನೋ ಮತ್ಸರಕ್ಕೆ ಎಡಪಂಥೀಯ ಚಿಂತನೆ ಬರುತ್ತಾ??!! ಪ್ರೊಫೆಶನಲ್ ಡಿಗ್ರೀಗೆ ಹೋಗೋ ಅವಕಾಶ ಸಿಗದವರು ಮಾತ್ರ ಆರ್ಟ್ಸ್ ತೊಗೋತಾರಾ? ಆರ್ಟ್ಸ್ ತೊಗೊಳ್ಳೋದೂ ಒಂದು ಆಯ್ಕೆ ಅಲ್ವಾ?! ಆ ಆಯ್ಕೆ ಮಾಡೋವಾಗ ಒಬ್ಬ ಇಂಜಿನಿಯರ್ ಅಷ್ಟು ಸಂಪಾದಿಸೋಕೆ ಆಗಲ್ಲ ಅನ್ನೋ ಅರಿವು ಇರುತ್ತಲ್ವಾ? ಇಷ್ಟೆಲ್ಲಾ ಬೇಕಾಬಿಟ್ಟಿ ಜೆನರಲೈಸೇಶನ್ನುಗಳನ್ನ ಮಾಡಬಾರದಲ್ವಾ!

foryou ಹೇಳಿದರು...

ಈಗಾಗ್ಲೇ ಬೆಂಗಳೂರಲ್ಲಿದ್ದಾರೆ ಅಂತ ಸುದ್ದಿ. ನೀನು ಹೀಗೆ ಕರೆ ಕೊಟ್ಟಿರೋದು ಅವ್ರಿಗೆ ಗೊತ್ತಾದ್ರೆ " ಯಾಕ್ಲಾ ಮಗ " ಅಂತ ಬಂದ್ ಗಿಂದಾರೋ ಮಾರಾಯ, ಹುಷಾರು. ಅದೂ ಅಲ್ದೆ ಅವ್ರಿಗೆ ಆಗ್ದೆ ಇರೋ ಬಿ ಜೆ ಪಿ ಸರ್ಕಾರ ಬ್ಯಾರೆ ಬಂದಿದೆ.
ಅಂದ ಹಾಗೆ
ಖಾತೆ ಹಂಚಿಕೆ ಕ್ಯಾತೆ ಬಗ್ಗೆ ಏನ್ ಹೇಳ್ತೀಯ?!!!

Vijay Joshi ಹೇಳಿದರು...

ರೊಚ್ಚಿಗೆದ್ದು ಬರೆದಂತಿದೆ ನಿಮ್ಮ ಬರಹ. ನೀವು ಹೇಳಿದ್ದು ನಿಜ, ನಕ್ಸಲ್ ಸಮರ್ಥಕರು ತಮ್ಮ ಮಕ್ಕಳನ್ನು ಯಾವತ್ತಿಗೂ ನಕ್ಸಲರನ್ನಾಗಲು ಬಿಡುವುದಿಲ್ಲ. ನಕ್ಸಲೀಯರನ್ನು ಸಮರ್ಥಿಸಿಕೊಳ್ಳುತ್ತಾ ತನ್ನ ಮಗನನ್ನು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕಾಲೇಜೊಂದರಲ್ಲಿ ಓದಿಸುತ್ತಿರುವ ಖ್ಯಾತ 'ಸಮಾಜ ಸೇವಕ'ನೊಬ್ಬನನ್ನು ನಾನು ಹತ್ತಿರದಿಂದ ಕಂಡಿದ್ದೇನೆ.

kalash_siya ಹೇಳಿದರು...

ವಿಕಾಸ್ ಬರಹ ಚೆನ್ನಾಗಿದೆ....... keep it up... ಭಾರತದ ಎಲ್ಲಾ ದೊಡ್ಡ ಮೆಟ್ರೊ ಸಿಟಿಗಳ್ ಸಮಸ್ಯೆಗಳ ಪರಿಹಾರ್ ವಂದೆ,ಎಲ್ಲಾ software enginners,doctors,accontant, scientist,mechanic etc, i mean comman man should stop buying lands and flats for atleast one year and goverment should bring act to stop selling all agriculture lands and provide farmers better irrigation, loan and build platform where farmers can sell their product to end customer to elimate middle agents so that farmers to have enough money and not to sell their precious land to money rich people. if this can happen ರಿಯಲ್ ಎಸ್ಟೆಟ್ ಅಥವಾ ಭೊಮಾಲಿಕರು and anti social elements involved in spoiling ecology of India and economic conidtion of comman man will come to their kneels...... ನಕ್ಸಲೀಯರು ರೆಸ್ಟ್ ತಗೊಬಹುದು ಹಿಂಸೆ ಬಿಟ್ಟು.

Harish - ಹರೀಶ ಹೇಳಿದರು...

ಯಾರೇನ್ ಮಾಡಿದ ಗುರುವೇ ನಿಂಗೆ? ಇಂಥ ಭಯಂಕರ ಯೋಚನೆ ಮಾಡಿದ್ದೆ?

ಭ್ರಷ್ಟಾಚಾರವನ್ನ ಸದೆಬಡಿದರೆ ಮಾತ್ರ ಇವೆಲ್ಲದಕ್ಕೂ ಪರಿಹಾರ ಸಿಗೋದು ಅನ್ನೋದು ನನ್ನ ಅಭಿಪ್ರಾಯ. ಅಲ್ಲದೆ ಇಲ್ಲಿ ಸುಪ್ರೀತ್ ಹೇಳಿದಂತೆ ಸಿಕ್ಕಾಪಟ್ಟೆ ಖರ್ಚು ಮಾಡುವ, ಹಾಸಿಗೆ "ಇದ್ದಷ್ಟೂ" ಕಾಲು ಚಾಚುವ (ಇದರ ಬಗ್ಗೆ ಸುಮಾರು ಬರ್ಯದು ಇದ್ದು, ಆದಷ್ಟು ಬೇಗ ಬರೀತಿ) ಮಂದಿಯೇ ಬೆಲೆ ಹೆಚ್ಚಾಗಲು ಕಾರಣ. ನಮ್ಮ ಮೇಲೆ ನಮಗೆ ಹಿಡಿತ ಇದ್ದರೆ ಇವೆಲ್ಲವಕ್ಕೂ ಕಡಿವಾಣ ಹಾಕ್ಲಕ್ಕೆನೋ...

Ramesh BV (ಉನ್ಮುಖಿ) ಹೇಳಿದರು...

ಆರ್ಥಿಕ ಅಸಮಧಾನವೇ ನಕ್ಸಲ್ ಮನೋವೃತ್ತಿಗೆ ಕಾರಣವಾಗಿರುವಾಗ ಪರಿಹಾರ, ಅತ್ಯಂತ ಬಡವನೆನಿಸಿದವನೂ ಊಟ, ವಸತಿ, ಆರೋಗ್ಯ,ವಿದ್ಯೆ ಗಳು ಸುಲಭ ಕಷ್ಟದಲ್ಲಿ ಸಿಗುವಂತಹ ಸ್ಥಿತಿ ನಿರ್ಮಾಣವಾಗಬೇಕಾದುದಷ್ಟೆ. ಈ ನಿಟ್ಟಿನಲ್ಲಿ ಇದಾಗಲೇ ಸಾಕಷ್ಟು ಬೆಳವಣಿಗೆ ಆಗಿದೆ. ಉತ್ತಮವಾಗುತ್ತಿರುವ ಸ್ಥಿತಿಯೂ ಸ್ಪಷ್ಟವಾಗಿದೆ.

ಸಂಪಾದನೆ (ಹಣ, ವಿದ್ಯೆ, ಖ್ಯಾತಿ, ಶಾಂತಿ, ಭೋಗ, ಜೀವನ) ಮನದ ಛಲ. ಪ್ರತಿಯೊಬ್ಬರಿಗೂ ಬೇರೆಯದೆ ತೆರನಾದ ದೃಷ್ಟಿಗಳುಂಟು.ಎಲ್ಲರಿಗಿರುವುದು ಅದೇ ಭೂಮಿ, ಆಕಾಶ. ಭೋಗ ಯೋಗಗಳ ಸೃಷ್ಟಿ ಅವರವರ ದೃಷ್ಟಿ ಸಂಪಾದನೆ. ಮಾತ್ಸರ್ಯ ಸಲ್ಲದು. ಇದೇ ಹೀನ ಘೋರ ಕೃತ್ಯಗಳಿಗೆ ಉದ್ರೇಕಕ.

ಎಲ್ಲಿಯೋ, ಯಾವುದೋ ಪೈಶಾಚಿಕ ಆಡಳಿತದ ವಿರುದ್ಧ ತಳೆದ ಬಂಡಾಯವಾದಗಳನ್ನು, ಇಂದಿನ ಸಬಲವಾಗುತ್ತಿರುವ ನಮ್ಮ ಪ್ರಜಾಪ್ರಭುತ್ವದಮೇಲೆ ಅಂಧದೃಷ್ಟಿಯಲ್ಲಿ ಸಮರ್ಥನೆ ಮಾಡುವವರ ಬಗೆಗೆ ನನ್ನ ವಿಷಾದವಿದೆ. ಒಂದು ದೃಷ್ಟಿಯಲ್ಲಿ ಇದು ಅವರಿಗಿರುವ ಪಬ್ಲಿಸಿಟಿ ಮನೋವ್ಯಥೆಯ ರೂಪ ಎನಿಸುತ್ತದೆ. ಸಮಾಜದ ಎಲ್ಲರಿಗೂ ಸಮಾನ ಅವಕಾಶನೀಡುತ್ತಿರುವ, ಹಿಂದೆ ಬಿದ್ದವರ ಎತ್ತುತ್ತಿರುವ, ಈ ವಿಶಾಲ ಆದರ್ಶದ ಪ್ರಜಾತಂತ್ರಕ್ಕಿಂತ ಇನ್ಯಾವ ಆಡಳಿತ ತಂತ್ರ ಇತಿಹಾಸವನ್ನು ಕಂಡಿರುವ ನಮಗೆ ಬೇಕು? ಕಂಸ್ಟ್ರಕ್ಟಿವ್ ಪ್ರಯೋಗಗಳೇ ತೆವಳುತ್ತಿರುವಾಗ ಡಿಸ್ಟ್ರಕ್ಟಿವ್ ಪ್ರಯೋಗಗಳು ಅಧೋಗತಿ, ಅಶಾಂತಿಯಲ್ಲದೆ ಮತ್ತೇನು ಮಾಡಬಲ್ಲವು?


ಈಗ ಹಿಂದೆಂದಿಗಿಂತಲೂ ಅವಕಾಶಗಳು ಮುಕ್ತವಾಗಿವೆ, ವಿದ್ಯೆಗಾಗಲಿ ನಂತರದ ಸಂಪಾದನೆಗಳಿಗಾಗಲಿ. ಸ್ವಚ್ಛ ಪ್ರಯತ್ನಗಳಷ್ಟೇ ಬೇಕುಗಳು. ಇವುಗಳನ್ನು ಇನ್ನೂ ಸುಲಭ ಸಾಧ್ಯಗೊಳಿಸುತ್ತಿರುವ (Technologically, Economically, Morally) ಎಲ್ಲಾ ಸರ್ಕಾರೀ, ಸಹಕಾರೀ, ಸ್ವಯಂಸೇವಕ ಪ್ರಯತ್ನಗಳಿಗೆ ಬೆಂಬಲಿಗರಾಗಿ, ಅವಕಾಶ ಸಿಕ್ಕಾಗ ಕಾರ್ಯನ್ಮುಖರಾಗಿ ಇನ್ನೂ ಹಸನಾದ ಸಮಾಜದ ಬೆಳವಣಿಗೆಯಲ್ಲಿ ಸಹಕರಿಸುತ್ತ, ಕಾಯೋಣ, ಬಾಳೋಣ.

Shashanka G P (ಉನ್ಮುಖಿ) ಹೇಳಿದರು...

ಶ್ರೀ ಅವರೆ, ನಿಮ್ಮ ಆಪಾದನೆಗೆ -
[ಆರ್ಟ್ಸ್ ತೊಗೊಂಡು ಸಂಪಾದನೆ ಕಮ್ಮಿ ಅನ್ನೋ ಮತ್ಸರಕ್ಕೆ ಎಡಪಂಥೀಯ ಚಿಂತನೆ ಬರುತ್ತಾ?] ಬ೦ದೇ ಬರುತ್ತೆ ಅ೦ತ ಹೇಳ್ಲಿಲ್ಲ ನಾನು. ಇದೊ೦ದು Generalisation ಖ೦ಡಿತ ಅಲ್ಲ. ಒ೦ದು ಸಾಧ್ಯತೆಯ ಬಗ್ಗೆ ಹೇಳಿದೆ ಅಷ್ಟೇ. ಎಡಪ೦ಥೀಯರಿ೦ದ ವಿಕೃತಗೊ೦ಡ ಇತಿಹಾಸ ಪಠ್ಯಗಳು ಮತ್ತು ಅವರ ಚಿ೦ತನೆಗಳೇ ತು೦ಬಿರುವ ಸಾಹಿತ್ಯಕ್ಕೆ ಹೆಚ್ಚಾಗಿ ತೆರೆದುಕೊಳ್ಳುವವರು ಕಲಾ ವಿದ್ಯಾರ್ಥಿಗಳೇ. ವೃತ್ತಿಪರ ಶಿಕ್ಷಣ ಪಡೆದವರಲ್ಲಿ ಈ ಸಾಧ್ಯತೆ ಕಡಿಮೆ. ಅವರ ಗಮನವೇನಿದ್ದರೂ ಬ೦ಡವಾಳದ ಸೃಷ್ಟಿಯ, ಉಪಯೋಗದ ಬಗ್ಗೆ; ತಾನು, ತನ್ನ ಮನೆ, ಕಾರು, ಬ೦ಗಲೆ ಇವುಗಳು ಮಾತ್ರವೇ ಅವರನ್ನು ಆಕರ್ಷಿಸಬಲ್ಲವು. ಅವರಿಗೆ ದೇಶ, ಸಮಾಜ, ಸ೦ಪದ್ವಿತರಣೆ ಇತ್ಯಾದಿಗಳೆಲ್ಲ ತಲೆಯ ಮೇಲೆ ಹಾಯ್ದು ಹೋಗುವ೦ತ ಸ೦ಗತಿಗಳು. ಓಶೊರ "Beware of Socialism" ಕೃತಿಯನ್ನೊಮ್ಮೆ ಓದಿದರೆ, ನಾ ಹೇಳಿದ ಸ೦ಗತಿಗಳ ಹಿನ್ನೆಲೆಯನ್ನು ನೋಡಬಲ್ಲಿರಿ. ಆಸಕ್ತಿಯಿದ್ದರೆ ಆ e-bookಅನ್ನು mail ಮಾಡುವೆ.

[ಪ್ರೊಫೆಶನಲ್ ಡಿಗ್ರೀಗೆ ಹೋಗೋ ಅವಕಾಶ ಸಿಗದವರು "ಮಾತ್ರ" ಆರ್ಟ್ಸ್ ತೊಗೋತಾರಾ?] ನಾನು ಮಾಡದೇ ಇರುವ generalisation ನೀವು ಮಾಡಿದ್ದೀರಿ. ತಮ್ಮ ಆಸಕ್ತಿಯ ಕಾರಣವಾಗಿ Artsಅನ್ನು ಒ೦ದು ಆಯ್ಕೆಯಾಗಿ ತೆಗೆದುಕೊಳ್ಳುವವರನ್ನು ಬಿಟ್ಟರೆ , ಇತರರು ಅದನ್ನು ಪರಿಸ್ಥಿತಿಯ ಅನಿವಾರ್ಯತೆಗಳಿಗಾಗಿ ಆರಿಸಿಕೊಳ್ಳುವವರು. ಇದುವರೆಗಿನ ನನ್ನ ಅನುಭವ ಹೀಗೆಯೇ ಇದೆ. ಪ್ರಾಚ್ಯ ವಸ್ತು ಸ೦ಶೋಧನೆ, ಸಾಹಿತ್ಯ ಕೃಷಿ ಮು೦ತಾಗಿ ಉದ್ದೇಶಗಳನ್ನು ಇಟ್ಟುಕೊ೦ಡು ಕಲಾವಿದ್ಯಾರ್ಥಿಗಳಾಗುವವರ ಸ೦ಖ್ಯೆ ಎಷ್ಟಿದೆ ಹೇಳಿ. ಎಲ್ಲಿಯೋ ನಿಮ್ಮ೦ಥವರು ಕೆಲವರು ಇದಕ್ಕೆ ಅಪವಾದವೆನ್ನುವ೦ತಿರಬಹುದು (ಬಹುಶಃ ಅದಕ್ಕೇ ನಿಮಗೆ ಸಿಟ್ಟು ಬ೦ತೇನೋ)

[ಆರ್ಟ್ಸ್ ತೊಗೊಳ್ಳೋದೂ ಒಂದು ಆಯ್ಕೆ ಅಲ್ವಾ?! ಆ ಆಯ್ಕೆ ಮಾಡೋವಾಗ ಒಬ್ಬ ಇಂಜಿನಿಯರ್ ಅಷ್ಟು ಸಂಪಾದಿಸೋಕೆ ಆಗಲ್ಲ ಅನ್ನೋ ಅರಿವು ಇರುತ್ತಲ್ವಾ?] ಒಬ್ಬ ಇಂಜಿನಿಯರ್ ಅಷ್ಟು ಸಂಪಾದಿಸೋಕೆ ಆಗಲ್ಲ ಅನ್ನೋ ಅರಿವು ಇದ್ದ ಮಾತ್ರಕ್ಕೆ ವ್ಯಕ್ತಿಸಹಜ ದೌರ್ಬಲ್ಯಗಳನ್ನು ಎಲ್ಲರೂ ಮೀರಬಲ್ಲರು ಅರ್ಥ ಛಾಯೆ ಇರುವ generalisation ನೀವು ಮಾಡಿದ್ದು ಹೇಗೆ?

ದಯವಿಟ್ಟು ನಗಲೂ ಬೇಡಿ ಅಳಲೂ ಬೇಡಿ. ಸಮಸ್ಯೆಯನ್ನು ನೋಡುವ ಹೊಸದೊ೦ದು ದೃಷ್ಟಿಕೋನ ಇರಬಲ್ಲುದು ಎ೦ದು ಒಪ್ಪಿಕೊ೦ಡರೆ ಸಾಕು.

ವಿಕಾಸ್ ಹೆಗಡೆ/Vikas Hegde ಹೇಳಿದರು...

@ಸುಪ್ರೀತ್
ಬೆಂಗಳೂರಂತ ನಗರಗಳಲ್ಲಿ ಶೋಷಣೆ ನೆಡಿಯುತ್ತದೆ ಅನ್ನೋದು ಬಾಲಿಶ ಎಂಬ ಮಾತೇ ಬಾಲಿಶ ಎನಿಸುತ್ತಿದೆ. ಎಲ್ಲಿದ್ದೀರಾ ಸ್ವಾಮಿ ನೀವು? ಕೈಕಾಲಿಗೆ ಸರಪಳಿ ಕಟ್ಟಿ ಹಾಕಿ ಕೆಲಸ ಮಾಡಿಸಿಕೊಳ್ಳುವುದು ಮಾತ್ರ ಶೋಷಣೆಯಲ್ಲ. ಅದಕ್ಕೆ ವಿವಿಧ ಮುಖಗಳಿವೆ. ಬೆಂಗಳೂರಿನಲ್ಲಿ ಇರುವ ಯಾವ ಪ್ರಾಬ್ಲೆಮ್ ಹೇಳಿದರೂ ಕೊನೆಗೆ ಅದಕ್ಕೆ ಕಾರಣ ಐ.ಟಿ ಕಂಪನಿಗಳು, ಕಾಲ್ಸೆಂಟರುಗಳೆ ಅನ್ನೋದನ್ನ ಒಪ್ಪಿಕೊಳ್ತೀರ. ಜೊತೆಗೆ ಅವುಗಳ ’ಅಭಿವೃದ್ಧಿ’ಯ ಹೆಸರಿನ ಹಿಂದಿನ ಆವಾಂತರಗಳನ್ನೂ ಸಮರ್ಥಿಸಿಕೊಳ್ಳುತ್ತೀರ!

ಇರಲಿ ಈ ಬಗ್ಗೆ ಇನ್ನೂ ಬರೆಯಬೇಕು... ಜೊತೆಗೆ ಕಮೆಂಟಿಸಿದವರೆಲ್ಲರಿಗೂ ಉತ್ತರ ಕೊಡೋ ಜವಾಬ್ದಾರಿ ಇದೆ.

ಸುಪ್ರೀತ್.ಕೆ.ಎಸ್. ಹೇಳಿದರು...

ವಿಕಾಸ್,
ನಾನು ಎಲ್ಲಿದ್ದೇನೆ ಎನ್ನುವುದು ಅಪ್ರಸ್ತುತ.
ಬೆಂಗಳೂರಿನಂತಹ ನಗರದಲ್ಲಿ ಶೋಷಣೆ ಯಾವ ಸ್ವರೂಪದಲ್ಲಿ ನಡೆಯುತ್ತಿದೆ? ಇಲ್ಲಿ ಶೋಷಿತರು ಯಾರು? ಶೋಷಣೆ ಮಾಡುತ್ತಿರುವವರು ಯಾರು? ಶೋಷಣೆಗೆ ಕಾರಣಗಳೇನು ಎಂಬುದನ್ನು ನಿಮ್ಮ ಲೇಖನದ ಹಿನ್ನೆಲೆಯಲ್ಲಿ ವಿವರಿಸಿದರೆ ಚರ್ಚೆಗೆ ಅವಕಾಶವಾಗುತ್ತದೆ.

ಸುಪ್ರೀತ್

ಅನಾಮಧೇಯ ಹೇಳಿದರು...

All effort should be made to rehabilitate people who have taken to Naxalism and bring them to mainstream life. If such people do not agree and still resort to violence, they should be hunted down without any mercy. There is no scope for Naxalism kind of fascism in democracy. If they had not hunted down Naxals as they did in West Bengal, today it would have been another Bihar.

ಪ್ರೇಮ-ಮಂದಿರ ಹೇಳಿದರು...

ನಕ್ಸಲೀಯರೇ ಬೆಂಗಳೂರಿಗೆ ಬನ್ನಿ, ಅನ್ನುತ್ತಲೇ ನೀವು ಅವರ ತಪ್ಪುಗಳನ್ನ ಕೂಡ ಎತ್ತಿ ತೋರಿಸಿದ್ದೀರಿ..ಅದಕ್ಕೆ ಈ ಲೆಖನ ತುಂಬಾ ಇಷ್ಟ ಆಯ್ತು....:)

Padmavathi ಹೇಳಿದರು...

ನಕ್ಸಲಿಯರೇ ಬೆಂಗಳೂರಿನ ಬನ್ನಿ ಲೇಖನ ಚೆನ್ನಾಗಿದೆ.
ಹೀಗೆಯೆ ಲೇಖನ ಮುಂದುವರೆಸು
ನನ್ನ ಹತ್ತಿರ ಒಬ್ಬರು ನಕ್ಕಲ್ ವಾದ ಸರಿ ಎಂದು ವಾದ ಮಾಡಿದ್ದರು ಅದಕ್ಕೆ ಇದು ಒಂದು ಒಳ್ಳೆಯ ಲೇಖನ ಅವರಿಗೆ ತೋರಿಸುತ್ತೇನೆ.
ನಾನು ವಿಜೈ ಜೋಶಿ ಅಮ್ಮ
ಪದ್ಮಾವತಿ ಜೋಶಿ

malnad hudgi ಹೇಳಿದರು...

sUUUperrrrrrrr... never thought u can write with such ferocity...article with weight, super sarcasam,witty.. totally ತುಂಬಾ ಇಷ್ಟ ಆಯ್ತು

ವಿಕಾಸ್ ಹೆಗಡೆ/Vikas Hegde ಹೇಳಿದರು...

ಎಲ್ಲರಿಗೂ ನಮಸ್ತೆ. ಮತ್ತು ಪ್ರತಿಕ್ರಿಯೆಗಾಗಿ ಧನ್ಯವಾದಗಳು.

ಕೆಲವರು ಅಂದಂತೆ ಲೇಖನವನ್ನು ನಿಜವಾಗಲೂ ವ್ಯಂಗ್ಯ(sarcasm) ಭರಿತವಾಗಿಯೇ ಬರೆದದ್ದು. ಆದರೆ ಅದರ ಹಿಂದಿನ ಆಶಯ ಬೇರೆಯದು. ನಮ್ಮ ರಾಜ್ಯಕ್ಕಾಗಲೀ ದೇಶಕ್ಕಾಗಲೀ ನಕ್ಸಲರ ಅವಶ್ಯಕತೆಯೇ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ ಅವರ ಸಿದ್ಧಾಂತ, ಹಿಂಸಾ ಹೋರಾಟ ಸಂಪೂರ್ಣ unpractical and unecessary. ಅವಶ್ಯಕತೆಯೇ ಇಲ್ಲದ ಕಡೆ ಹೋರಾಟವೆಂಬ ಹೆಸರಿನಿಂದ ಹಾಳುಮಾಡುವುದರ ಬದಲು ನಿಜವಾಗಿಯೂ ಕಾಳಜಿ ಇದ್ದರೆ ಅವಶ್ಯಕತೆ ಇದ್ದ ಕಡೆ ಹೋರಾಟ ಮಾಡುವಂತೆ ನಕ್ಸಲರಿಗೆ ವ್ಯಂಗ್ಯಭರಿತ ಕರೆಯ ಜೊತೆಗೆ ಅವರ ಹೋರಾಟವನ್ನು ಸಮರ್ಥಿಸುತ್ತಿರುವ ಕೆಲವ ಮುಖ್ಯ ವ್ಯಕ್ತಿಗಳ ಖಂಡನೆ ಲೇಖನದ ಉದ್ದೇಶ. ನಕ್ಸಲರಾಗಲು ಆರ್ಟ್ಸು, ಕಾಮರ್ಸು ವ್ಯತ್ಯಾಸ ಇಲ್ಲದಿದ್ದರೂ ತುಲನಾತ್ಮಕವಾಗಿ ನೋಡಿದರೆ ನಕ್ಸಲ್ ಒಲವಿರುವವರಲ್ಲಿ ಆರ್ಟ್ಸ್ ವಿಭಾಗದವರೇ ಜಾಸ್ತಿ ಎಂಬುದು ಸತ್ಯ. ಇದನ್ನು ನಕ್ಸಲ್ ಬೆಂಬಲಿಗರಿರುವ ಜಿಲ್ಲೆಗಳ ಕಡೆಗೆ ಬಂದರೆ ಗಮನಿಸಿಬಹುದು. ಶಶಾಂಕ್ ಕಾರಣ ಸಮೇತ ವಿವರಿಸಿದ್ದಾರೆ. ದೇಶಭಕ್ತ ರಾಜಕೀಯ ಪಕ್ಷಗಳ ಬಗ್ಗೆ ಶ್ರೀ, ತೇಜಕ್ಕ ಆಕ್ಷೇಪಿಸಿದ್ದಾರೆ.ಒ.ಕೆ ."ರಾಜಕೀಯ ಪಕ್ಷಗಳಲ್ಲಿ ದೇಶಭಕ್ತ ಜನರಿದ್ದಾರೆ" ಎಂದು ತಿದ್ದಿಕೊಳ್ಳೋಣ :)

@ಪದ್ಮಾವತಿ ಜೋಶಿಯವರಿಗೆ
ನೀವು ಬ್ಲಾಗ್ ಓದಿದ್ದು ಪ್ರತಿಕ್ರಯಿಸಿದ್ದು ವಿಶೇಷವಾಗಿ ಖುಷಿಯಾಯಿತು. ಏಕೆಂದರೆ ನಮ್ಮ ಅಮ್ಮಂದಿರ ವಯಸ್ಸಿನವರು ಕೂಡ ಬ್ಲಾಗ್ ಲೋಕಕ್ಕೆ ಕಾಲಿಡುತ್ತಿರುವುದು ಸಂತೋಷದ ವಿಚಾರ. ಥ್ಯಾಂಕ್ಸ್. ಬರುತ್ತಿರಿ.

@ಸುಪ್ರೀತ್
ನೀವು ಎಲ್ಲಿದ್ದೀರಿ ಎಂಬುದೆ mOst ಪ್ರಸ್ತುತ.
ಯಾಕೆಂದರೆ ನಮ್ಮ ಸುತ್ತ ಮುತ್ತ ಏನೂ ಶೋಷಣೆಗಳು ನೆಡೆಯದೇ ಇದ್ದಾಗ ನಮಗೆ ಜಗತ್ತಿನಲ್ಲೆಲ್ಲೂ ಶೋಷಣೆ ನೆಡೆಯುವುದೇನೋ ಅನ್ನಿಸಿಬಿಡುತ್ತದೆ. ಯಾಕೆಂದರೆ ನಮ್ಮ ಜಗತ್ತು ಸದ್ಯಕ್ಕೆ ’ಅಷ್ಟೆ’ ಮಿತಿಯೊಳಗಿರುತ್ತದೆ. ಒಮ್ಮೆ ಫೀಲ್ಡಿಗಿಳಿದಾಗ , ಅನುಭವಿಸಿದಾಗಲಷ್ಟೆ ಅರಿವಾಗುತ್ತಾ ಹೋಗುತ್ತದೆ. ನಾನು ಬೆಲೆ ಏರಿಕೆಗೆ ಕಾರಣವಾದ ಹೆಚ್ಚಿದ ಆದಾಯ , ಪ್ರಗತಿ ಇತ್ಯಾದಿಗಳನ್ನು ಪ್ರಶ್ನಿಸುತ್ತಿಲ್ಲ. ಅದನ್ನು ನೆಪವಾಗಿಟ್ಟುಕೊಂಡು ’ಅನಾಚಾರ’ಗಳನ್ನು ನೆಡೆಸುವುದನ್ನು ವಿರೋಧಿಸುತ್ತಿದ್ದೇನೆ. ರೈತನನ್ನು ಆಮಿಷವೊಡ್ಡಿ, ಬೆದರಿಸಿ ಭೂಮಿ ಪಡೆದುಕೊಳ್ಳುತ್ತಿರುವ, ಅದನ್ನು ನ್ಯಾಯವಾದ ಬೆಲೆ(ಬೆಂಗಳೂರಿನ ಮಟ್ಟ)ಗಿಂತ ಹೆಚ್ಚು ಬೆಲೆಗೆ ಮಾರುವ ’ವ್ಯವಸ್ಥಿತ’ ಕುತಂತ್ರದ ಹಿಂದಿರುವ ವ್ಯಕ್ತಿಗಳ ಬಗ್ಗೆ ವಿರೋಧ. ರಿಯಲ್ ಎಸ್ಟೇಟು ಒಂದು ಉದ್ಯಮವಾದ ಮಾತ್ರಕ್ಕೆ ಲಾಭ ಪಡೆಯಲು ಜನರನ್ನು ಸುಲಿಯಬೇಕೆಂದೇನೂ ಇಲ್ಲವಲ್ಲ.


thank you

ಏಕಾಂತ ಹೇಳಿದರು...

ನಮಸ್ತೆ... ವಿಕಾಸ್ ಅವರೇ...
ನಿಮ್ಮ ಮೆಚ್ಚುನುಡಿಗೆ ನಾನು ಋಣಿ. ಗ್ರಾಫಿಕ್ ಡಿಸೈಂನಿಂಗ್ ಬಗ್ಗೆ ಬಹಳಷ್ಟು ಕೋರ್ಸ್ಗಳಿವೆ. ಆದರೆ ನಾನು ಯಾವುದನ್ನೂ ಮಾಡಿಲ್ಲ.
ಅವು ತೀರಾ ದುಬಾರಿ ಹಾಗೂ ಹೆಚ್ಚೇನೂ ಕಲಿಯಲಾಗುವುದಿಲ್ಲ. ಆಸಕ್ತಿ ಇದ್ದರೆ ಸಾಕು ಖಂಡಿತಾ ಕಲೀಬಹುದು.
ನೆಟ್ನಲ್ಲಿ ಒಳ್ಳೊಳ್ಳೆ ಟ್ಯುಟೋರಿಯಲ್ಸ್ ಸಿಗುತ್ತೆ. ಕೋರ್ಸ್ ಮಾಡುವ ಮನಸ್ಸಿದ್ದರೆ, ಒಳ್ಳೆಯ ಸಂಸ್ಠೆ ಗೊತ್ತಿದ್ದರೆ ಖಂಡಿತಾ ಮಾಡಿ.

ವಿನಾಯಕ ಕೆ.ಎಸ್ ಹೇಳಿದರು...

ವಿಕಾಸರೇ
ತುಂಬಾ ತಡವಾಗಿ ಪ್ರತಿಕ್ರಿಯೆ ನೀಡಿದ್ದಕ್ಕೆ ಕ್ಷಮೆ ಇರಲಿ. ಉತ್ತಮ ಲೇಖನ. ಅಂದಹಾಗೇ ನಕ್ಸಲಿಸಂ ಯಾವತ್ತು ದೇಶದ ಯಶಸ್ವಿ ಹೋರಾಟ ಅನ್ನಿಸಿಕೊಳ್ಳಲಿಲ್ಲ. ನೀವು ನಕ್ಸಲಿಸಂ ಮೊದಲದಿನಗಳಲ್ಲಿ ಯಶಸ್ವಿ ಹೋರಾಟವಾಗಿತ್ತು ಅನ್ನುವಂತೆ ಮಾತಾಡಿದ್ದೀರಾ. ಕೇವಲ ನೀವು ಅಂತಾ ಅಲ್ಲ ಸಾಕಷ್ಟು ಜನ ಹಾಗೇ ಮಾತಾಡುತ್ತಾರೆ. ರಕ್ತ ಕ್ರಾಂತಿಯ ನಕ್ಸಲಿಸಂ ಮೊದಲಿನಿಂದಲೂ ಚೀನಾ ಕುಮ್ಮಕ್ಕಿನಿಂದಲೇ ಬೆಳೆದು ಬಂದ ಹೋರಾಟ. ಅವರ ನಿಲುವುಗಳು ಚೀನಾ ಪರವೇ ಹೊರತು ದೇಶದ ಪರವಲ್ಲ. ಅದು ಯಶಸ್ವಿ ಹೋರಾಟ ಎಂದು ಅವರು ಹೇಳಿಕೊಂಡು ತಿರುಗುತ್ತಾರೆ ಅಷ್ಟೆ. ಆ ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಭಾರತ ಚೀನಾ ಯುದ್ದದಲ್ಲಿ ನಕ್ಸಲರ ಪಾತ್ರ ಏನಿತ್ತು ಎಂಬುದು ಗುಟ್ಟಿನ ವಿಚಾರವೇನು ಅಲ್ಲ.
ವಿನಾಯಕ ಕೋಡ್ಸರ

ವಿಕಾಸ್ ಹೆಗಡೆ/Vikas Hegde ಹೇಳಿದರು...

@ವಿನಾಯಕ ಕೋಡ್ಸರ
thanx for information.
ನಕ್ಸಲರು ಮೊದ ಮೊದಲು ಯಶಸ್ವಿ ಅನಿಸಿಕೊಳ್ಳಲು, ಅವರಿಗೆ ಅಭಿಮಾನಿಗಳು ಹುಟ್ಟಿಕೊಳ್ಳಲು ಈ ತಪ್ಪುತಿಳುವಳಿಕೆಯೇ ಕಾರಣವಾಯಿತಾ ಅಂತ !! ಒಂದು ಕಾಲದಲ್ಲಿ ನಾನೂ ನಕ್ಸಲರೆಂದರೆ ಈ ಭ್ರಷ್ಟ ದೇಶವನ್ನು ಉದ್ದರಿಸಲು ಬಂದ ದೇವಮಾನವರೇನೋ ಅಂದುಕೊಂಡುಬಿಟ್ಟಿದ್ದೆ !