ಪುಟಗಳು

ಗುರುವಾರ, ಮಾರ್ಚ್ 20, 2008

ಈದ್ ದಿನವೇ ಹೊಡೆದಾಡಿದರು ’ಬಂಧು-ಬಾಂಧವರು’!

ಅವತ್ತು ಈದ್ ಮಿಲಾದ್ ಹಬ್ಬ. ಶುಕ್ರವಾರವಾ? ಗೊತ್ತಿಲ್ಲ. ಮುಸ್ಲಿಮರ ಎಲ್ಲಾ ಹಬ್ಬಗಳು ಶುಕ್ರವಾರವೇ ಇರುತ್ತವಾ? ಗೊತ್ತಿಲ್ಲ. ನಮಗಂತೂ ಶಾಲೆಗೆ ರಜ. ಆದರೂ ಅವತ್ತು ಶಾಲೆಗೆ ಹೋಗಬೇಕಿತ್ತು. ಖೊ ಖೋ ಪ್ರಾಕ್ಟೀಸಿಗೆ ಬರಲು ಹೇಳಿದ್ದರು. ದಿನಾ ಸೈಕಲ್ ಹೊಡೆದುಕೊಂಡು ಹೋಗುತ್ತಿದ್ದುದರಿಂದ ಇವತ್ತು ಸೈಕಲ್ ಬೇಡ ಬಸ್ಸಿನಲ್ಲೇ ಹೋಗೋಣ ಎನಿಸಿ ೧೧ ಗಂಟೆಯ ಹೊತ್ತಿಗೆ ಮನೆಯಿಂದ ಹೊರಟೆ. ಬಸ್ಟಾಪು ತಲುಪಿಕೊಂಡೆ. ಸಾಮಾನ್ಯವಾಗಿ ೧೫ ನಿಮಿಷಕ್ಕೆ ಬರುವ ವೆಂಕಟೇಶ್ವರ ಬಸ್ಸು ಅವತ್ತು ಅರ್ಧ ಗಂಟೆಯಾದರೂ ಬರಲಿಲ್ಲ. ಮುಕ್ಕಾಲು ಗಂಟೆಯಾಯಿತು. ಅಷ್ಟರಲ್ಲಿ ತಣ್ಣಗೆ ಹರಿಯುತ್ತಿದ್ದ ರಸ್ತೆಗಳಲ್ಲಿ ಯಾಕೋ ಸ್ವಲ್ಪ ಚಟುವಟಿಕೆ ಜಾಸ್ತಿಯಾದಂತೆ ಕಂಡುಬಂತು. ನನ್ನಂತೆಯೇ ಬಸ್ಸಿಗೆ ಕಾಯುತ್ತಿದ್ದ ನಾಲ್ಕು ಜನ ಪೇಟೆ ಏರಿಯಾದಲ್ಲಿ ಏನೋ ಆಗಿದೆಯಂತೆ, ಬಸ್ಸುಗಳನ್ನೆಲ್ಲಾ ಅಲ್ಲೇ ತಡೆಹಿಡಿದಿದ್ದಾರಂತೆ ಎಂದು ಮಾತಾಡಿಕೊಳ್ಳುವುದು ಕೇಳಿಸಿತು. ನಡೆದುಕೊಂಡೇ ಶಾಲೆಗೆ ಹೋಗಿಬಿಡಲೇ ಎಂದು ಯೋಚಿಸಿದೆ. ಅಷ್ಟರಲ್ಲಿ ಒಂದಿಷ್ಟು ಜನ ಕೂಗುತ್ತಾ ಓಡಿ ಹೋದರು. ಎಂಟತ್ತು ಬೈಕುಗಳಲ್ಲಿ ಜನ ವೇಗವಾಗಿ ಪೇಟೆಯ ಕಡೆಗೆ ಹೋದರು. ಅಲ್ಲಿದ್ದ ನಮಗೆ ಏನೆಂದರೇನೂ ಅರ್ಥಾಗಲಿಲ್ಲ. ಅಷ್ಟರಲ್ಲೇ ನಾವು ನಿಂತಿದ್ದ ಸ್ಥಳಕ್ಕೆ ವೇಗವಾಗಿ ಬಂದ ಆಟೋದವನೊಬ್ಬ ಗಕ್ಕನೇ ಬ್ರೇಕು ಹಾಕಿ ನಿಲ್ಲಿಸಿ ಪೇಟೆ ಏರಿಯಾದಲ್ಲಿ ಸಿಕ್ಕಾ ಪಟ್ಟೆ ಗಲಾಟೆ ಆಗ್ತಿದೆ, ಹಿಂದೂ-ಮುಸ್ಲಿಂ ಗಲಾಟೆಯಂತೆ, ಈ ಕಡೆಗೂ ಬರುತ್ತಾ ಇದ್ದಾರೆ, ಆದಷ್ಟು ಬೇಗ ಮನೆ ಸೇರ್ಕೊಳ್ಳಿ" ಎಂದು ಹೇಳಿ ಅಷ್ಟೇ ವೇಗವಾಗಿ ಹೊರಟು ಹೋದ. ಅಷ್ಟಾಗಿದ್ದೇ ತಡ ಒಬ್ಬೊಬ್ಬರೇ ಅಲ್ಲಿಂದ ಖಾಲಿಯಾದರು. ನಾನೂ ಮನೆ ಕಡೆ ಹೊರಟೆ. ಒಂದು ಹದಿನೈದು ನಿಮಿಷ ದೂರವಿತ್ತು ನಮ್ಮ ಮನೆ. ಹೆಜ್ಜೆ ಹಾಕಿದೆ. ಹೋಗುವಾಗ ಪೋಲೀಸ್ ಪೇದೆಯೊಬ್ಬ ಎಲ್ಲಿ ಮನೆ ಅಂದ, ಇಲ್ಲೇ ಹತ್ತಿರದಲ್ಲಿ ಅಂದೆ. "ಬೇಗ ಮನೆಗೆ ಹೋಗು, ತಿರುಗಾಡ್ಬೇಡ " ಅಂದ. ಸರಿ ಅಂದು ಮನೆಗೆ ಹೋದೆ.

ಮನೆಗೆ ಹೋದಾಗ ಅಕ್ಕ ಪಕ್ಕದ ಮನೆಗಳ ಜನರೆಲ್ಲಾ ಹೊರಗೆ ನಿಂತು ಮಾತಾಡುತ್ತಿದ್ದರು. ಗಲಾಟೆಯ ಸುದ್ದಿ ಹಬ್ಬುತ್ತಿತ್ತು. ಪ್ರತಿವರ್ಷ ಈದ್ ಮಿಲಾದ್ ದಿನ ಮುಸ್ಲಿಮರು ಊರಿನ ಮುಖ್ಯ ಬೀದಿಗಳಲ್ಲಿ ದೊಡ್ಡ ಮೆರವಣಿಗೆ ಮಾಡುತ್ತಾರೆ. ಅಂತೆಯೇ ಈ ಸಲವೂ ಹೊರಟಿದ್ದರು. ಪೇಟೆ ಏರಿಯಾಕ್ಕೆ ಬಂದಾಗ ಯಾವುದೋ ಅಂಗಡಿಯವರಿಗೂ ಮೆರವಣಿಗೆಯಲ್ಲಿದ್ದವರಿಗೂ ಏನೋ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದು ಜಗಳವಾಯಿತಂತೆ. ಅವರು ಅಂಗಡಿಗಳ ಬಾಗಿಲು ಹಾಕುವಂತೆ ಒತ್ತಾಯಿಸಿದರಂತೆ. ಇವರು ಮುಸ್ಲಿಮರಿಗೆ ಬೈದರಂತೆ. ಸಿಟ್ಟಿಗೆದ್ದ ಅವರು ಅಂಗಡಿಗಳ ಮೇಲೆ ಕಲ್ಲು ತೂರಿದರಂತೆ. ಇದಕ್ಕೆ ಪ್ರತಿಯಾಗಿ ಅಂಗಡಿಯವರೊಂದಿಷ್ಟು ಜನ ಮೆರವಣಿಗೆ ಮೇಲೆ ಕಲ್ಲು ಹೊಡೆದರಂತೆ. ಅಂತೆ ಕಂತೆಗಳಿಗಿಂತ ಬೇರೆ ಕಾರಣ ಬೇಕೆ? ಕೈ ಮಿಲಾಯಿಸಿದರು. ಮುಸ್ಲಿಮರು ಸಿಕ್ಕಾಪಟ್ಟೆ ಸಂಖ್ಯೆಯಲ್ಲಿದ್ದುದ್ದರು, ಅದೂ ಅಲ್ಲದೇ ಎಲ್ಲರೂ ಈದ್ ಮಿಲಾದಿನ ಜೋಶ್ ನಲ್ಲಿದ್ದರಿಂದ ಸಮಾಧಾನ ಮಾಡುವವರೂ ಯಾರೂ ಇರಲಿಲ್ಲ. ಪೇಟೆ ಏರಿಯಾದ ಹಿಂದೂ ವರ್ತಕರು, ಜನರೆಲ್ಲ ಮೆರವಣಿಗೆಯಲ್ಲಿದ್ದ ಜನರ ಮೇಲೆ ಮುಗಿಬಿದ್ದರು. ಮುಸ್ಲಿಮರು ತಾವೇನು ಕಡಿಮೆ ಎಂಬಂತೆ ತಲವಾರು ತರಿಸಿಕೊಂಡು ಹೊಡೆದಾಟಕ್ಕೆ ನಿಂತುಬಿಟ್ಟರು. ಗಲಾಟೆ ಶುರುವಾಗಿಯೇ ಹೋಯಿತು. ಪೇಟೆ ಪ್ರದೇಶವಿಡೀ ರಣರಂಗವಾಯಿತು.

ಅನ್ವರ್ ಕಾಲೋನಿ ಎಂಬುದು ಮುಸ್ಲಿಮರೇ ಪೂರ್ತಿ ಇರುವ ಪ್ರದೇಶ. ಪೇಟೆಗೆ ಹತ್ತಿರವಿದೆ. ಈದ್ ಮೆರವಣಿಗೆ ಮೇಲೆ ಕಲ್ಲು ಬಿತ್ತಂತೆ ಎಂಬ ಸುದ್ದಿ ತಿಳಿದದ್ದೇ ತಡ ಅನ್ವರ್ ಕಾಲೋನಿಗೆ ಕಾಲೋನಿಯೇ ಬೀದಿಗಿಳಿದುಬಿಟ್ಟಿತು. ರಸ್ತೆಯಲ್ಲಿದ್ದ ಒಂದೆರಡು ಹಿಂದೂಗಳ ಅಂಗಡಿಗಳನ್ನ ಉಡಾಯಿಸಿದರು. ಎದುರುಗಡೆಯೇ ಇದ್ದ ಹಿಂದೂಗಳ ಟಾಕೀಸ್ ಒಂದಕ್ಕೆ ಧಾಳಿಯಿಟ್ಟರು. ಪರದೆಗೆ ಬೆಂಕಿ ಹಚ್ಚಿದರು. ಜನರೆಲ್ಲಾ ಹೊರಗೆ ಓಡಲಾರಂಭಿಸಿದಾಗ ಎಲ್ಲಾ ಬಾಗಿಲುಗಳಲ್ಲೂ ನಿಂತು ಹಿಂದೂಗಳನ್ನು ಹುಡುಕಿ ಹುಡುಕಿ ಬಡಿದರು. ಹುಡುಗಿಯರ ಮೈಮುಟ್ಟದಿದ್ದರೂ ಆಭರಣಗಳನ್ನು ದೋಚಿದರು. ಹುಡುಗರ ಕೈಯನ್ನು ನೆಲದ ಮೇಲಿರಿಸಿ ಕಬ್ಬಿಣದ ಸರಳಿನಿಂತ ಮೂಳೆ ಪುಡಿಯಾಗುವಂತೆ ಜಪ್ಪಿದರು. ಪಾರ್ಕಿಂಗ್ ಲಾಟಿನಲ್ಲಿದ್ದ ಗಾಡಿಗಳಿಗೆಲ್ಲಾ ಬೆಂಕಿ ಹಚ್ಚಲಾಯಿತು. ಒಟ್ಟಿನಲ್ಲಿ ಯಾರಿಗೆ ಏನಾಯಿತು ಎಂದು ಗೊತ್ತಾಗುವುದಕ್ಕೆ ಮೊದಲೇ ಎಲ್ಲಾ ಆಗಿ ಹೋಗಿತ್ತು. ಸಿನೆಮಾ ನೋಡಲು ನಮ್ಮ ಮನೆ ಲೈನಿನ ಹುಡುಗನೊಬ್ಬ ಹೋಗಿದ್ದ. ಇದ್ದಕ್ಕಿಂದ್ದಂತೇ ಗಲಾಟೆ ಶುರುವಾದಾಗ ಹೇಗೋ ತಪ್ಪಿಸಿಕೊಂಡು ಹಿಂದಿನ ೮ ಅಡಿ ಎತ್ತರದ ಗೋಡೆಯನ್ನು ಹಾರಿಕೊಂಡು ಕಾಲು ಉಳುಕಿಸಿಕೊಂಡು ಬಂದು ನಡೆದುದ್ದನ್ನು ಹೇಳುತ್ತಾ ಇದ್ದರೆ ನಮ್ಮ ಇಡೀ ಬೀದಿಯ ಜನರೆಲ್ಲಾ ಹಲ್ಲು ಕಡಿಯುತ್ತಾ ಅವನ ಮನೆ ಮುಂದೆ ಗುಂಪುಗೂಡಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದರು. ವಿಪರ್ಯಾಸವೆಂದರೆ ಅವತ್ತು ಪ್ರದರ್ಶನವಾಗುತ್ತಿದ್ದುದು 'ಕ್ರಾಂತಿವೀರ್' ಎಂಬ ಹಿಂದಿ ಸಿನೆಮಾ. ಅದರಲ್ಲಿಯೂ ಹಿಂದೂ ಮುಸ್ಲಿಂ ಗಲಾಟೆಯ ಜೊತೆಗೆ ಕೊನೆಗೆ ಎಲ್ಲರನ್ನೂ ಒಂದುಗೂಡಿಸುವ ಕತೆ ಇದೆ.

ಆಕಡೆ ಪೇಟೆಯಲ್ಲಿ ಅವ್ಯಾಹತವಾಗಿ ಗಲಾಟೆ ಮುಂದುವರೆದಿತ್ತು. ಪೇಟೆಯಲ್ಲಿರುವ ಮುಸ್ಲಿಮರ ಎಲ್ಲಾ ಅಂಗಡಿಗಳೂ ಧಾಳಿಗೆ ತುತ್ತಾದವು. ಬೆಂಕಿಯಲ್ಲಿ ಕರಟಿ ಹೋದವು. ಸೈಕಿಲ್ ಶಾಪು, ಗ್ಯಾರೇಜು, ಬಾಳೆಕಾಯಿ ಮಂಡಿ, ಹಾರ್ಡ್ ವೇರ್ ಅಂಗಡಿ, ಮಾಂಸದಂಗಡಿ ಇನ್ನಿತರ ಮುಸ್ಲಿಮರ ದೂಖಾನುಗಳು ಸಂಜೆಯವರೆಗೂ ಲೂಟಿಗೊಳಗಾದವು. ಹಿಂದೂಗಳ ಅನೇಕ ಅಂಗಡಿಗಳೂ ದೋಚಲ್ಪಟ್ಟವು. ಈದ್ ಮಿಲಾದ್ ದಿನ ಹಾಗೆ ಮುಗಿದಿತ್ತು.

ಎರಡನೆ ದಿನ.

ನಮ್ಮೂರಿನಲ್ಲಿ ಒಂದು ನದಿ ಹರಿಯುತ್ತದೆ. ನದಿಯ ಈಚೆಗಿನ ಪ್ರದೇಶವಲ್ಲಾ ಹಳೇ ಊರಿನ ಪ್ರದೇಶ, ಅದಕ್ಕೆ ಹಳೇನಗರವೆನ್ನುತ್ತಾರೆ. ಆಚೆಗಿನ ಪ್ರದೇಶವೆಲ್ಲಾ ಕಾರ್ಖಾನೆ, ಅದರ ಕ್ವಾಟ್ರಸ್ ಇತ್ಯಾದಿಗಳು ಇರುವ ಪ್ರದೇಶ. ಅದಕ್ಕೆ ಹೊಸನಗರವೆನ್ನುತ್ತಾರೆ. ಹಿಂದಿನ ದಿನ ಬರೇ ಪೇಟೆ ಏರಿಯಾದಲ್ಲಿ ನೆಡೆದಿದ್ದ ಗಲಾಟೆ ಹಳೇನಗರದ ಎಲ್ಲ ಏರಿಯಾಗಳಿಗೂ ಹಬ್ಬಿತು. ಹಿಂದಿನ ದಿನ ಹಿಂದೂಗಳೂ ಕೂಡ ಚೆನ್ನಾಗಿಯೇ ಬಡಿಸಿಕೊಂಡಿದ್ದರಿಂದ ಇವತ್ತು ಮುಸ್ಲಿಮರನ್ನು ಮುಗಿಸಿಯೇ ತೀರಬೇಕು ಎಂಬಂತೆ ಹಳದಮ್ಮನ ಕೇರಿ, ಖಂಡೇರಾಯನ ತೋಟ, ಭೂತನ ಗುಡಿ, ಹೊಸಮನೆ, ಸಂತೇಮೈದಾನ, ಚಾಮೇಗೌಡ ಲೈನ್, ಗಾಂಧೀನಗರ, ಹೊಸಮನೆ, ಸುಭಾಷ್ ನಗರ ಮುಂತಾದ ಏರಿಯಾಗಳಲ್ಲಿ ಹಿಂದೂಗಳು ಮುಸ್ಲಿಮರ ಮನೆ, ಅಂಗಡಿಗಳನ್ನು ಗುರಿಯಾಗಿರಿಸಿಕೊಂಡು ಬೀದಿಗಿಳಿದರು. ಕಡಿಮೆ ಸಂಖ್ಯೆಯಲ್ಲಿದ್ದ ಪೋಲೀಸರಿಗೆ ಗಲಭೆ ನಿಯಂತ್ರಣಕ್ಕೆ ತರುವ ದಾರಿಯೂ ಇರಲಿಲ್ಲ. ಎಲ್ಲ ಸಣ್ಣ ಸಣ್ಣ ರಸ್ತೆಗಳ, ಒತ್ತೊತ್ತಾಗಿನ ಮನೆಗಳ ಪ್ರದೇಶಗಳಾದ್ದರಿಂದ ಎಲ್ಲಿ ಗಲಭೆ ನೆಡೆಯುತ್ತಿದೆ ಎಂದೇ ಪೋಲೀಸರಿಗೆ ತಿಳಿಯುತ್ತಿರಲಿಲ್ಲ. ಒಂದು ಕಡೆ ಜನರನ್ನು ಚದುರಿಸುತ್ತಿದ್ದಂತೇ ಇನ್ನೂ ನಾಲ್ಕು ಕಡೆಗಳಲ್ಲಿ ಶುರುವಾಗುತ್ತಿತ್ತು. ಲಾಟೀಚಾರ್ಜಿಗೂ ಬಗ್ಗದೇ ಮುಂದುವರೆಯಿತು. ಮುಸ್ಲಿಮರು ತಮ್ಮ ತಮ್ಮ ಏರಿಯಾಗಳಲ್ಲಿ ಕಾವಲು ನಿಂತರು. ಅನ್ವರ್ ಕಾಲೋನಿಯನ್ನು ಮುಟ್ಟಲು ಹಿಂದೂಗಳಿಗೆ ಸಾಧ್ಯವಿಲ್ಲವೆಂದು ಅವರಿಗೆ ಗೊತ್ತಿತ್ತು. ಖಾಜಿ ಮೊಹಲ್ಲಾ, ಟಿ.ಕೆ. ರೋಡು, ಮಾರ್ಕೆಟ್ಟು ಇತ್ಯಾದಿ ಕಡೆಗಳಲ್ಲಿದ್ದ ತಮ್ಮ ಮನೆ , ಜನರನ್ನು ರಕ್ಷಿಸಿಕೊಳ್ಳಲು ನಿಂತರು. ಅವರಿಗೆ ಧಾಳಿಗಿಂತ ತಮ್ಮ ರಕ್ಷಣೆಯೇ ಮುಖ್ಯವಾದ ಸ್ಥಿತಿ ಇತ್ತು. ಹಿಂದೂಗಳು ಹಳೇನಗರ ಪ್ರದೇಶದ ತುಂಬಾ ದಾಂಗುಡಿ ನೆಡೆಸಿದರು. ರಸ್ತೆ ಮಧ್ಯದಲ್ಲಿ ಟಯರುಗಳನ್ನಿಟ್ಟು ಬೆಂಕಿಹಚ್ಚಿದರು. ಸೌದೆ ಡೀಪೋ ಒಂದಕ್ಕೆ ಬೆಂಕಿ ಹಚ್ಚಲಾಯಿತು. ಮುಸ್ಲಿಮರ ಏರಿಯಾಕ್ಕೆ ಹೋಗುತ್ತದೆ ಎಂಬ ಒಂದೇ ಒಂದು ಕಾರಣದಿಂದ ತೀರ್ಥರಾಮೇಶ್ವರ ಬಸ್ಸನ್ನು ಸುಟ್ಟು ಕರಕಲಾಗಿಸಿದರು.

ನಮ್ಮ ಮನೆ ಟೆರೇಸಿನ ಮೇಲೆ ನಿಂತುಕೊಂಡು ನೋಡಿದರೆ ಊರಿಗೆ ಊರೇ ಯುದ್ಧಭೂಮಿಯಂತೆ ಜನ ಅಲ್ಲಿಂದಿಲ್ಲಿಗೆ ಕೋಲು, ಸರಳು, ಕತ್ತಿ ಗಳನ್ನು ಹಿಡಿದುಕೊಂಡು ಓಡುವುದು ಕಾಣುತ್ತಿತ್ತು. ಅಲ್ಲಲ್ಲಿ ಹಚ್ಚಿದ ಬೆಂಕಿ, ದೂರದಲ್ಲಿ ಏಳುತ್ತಿರುವ ಕಪ್ಪು ದಟ್ಟ ಹೊಗೆ, ಪೋಲೀಸ್ ಜೀಪಿನ ಸೈರನ್ ಶಬ್ದ..... . ಎದುರು ಮನೆಯ ಅಂಕಲ್ ಒಬ್ಬರು ಬೇಡ ಬೇಡವೆಂದರೂ ಗಲಾಟೆ ನೋಡಿಕೊಂಡು ಬರುತ್ತೇನೆಂದು ಹೋದವರು ಮಧ್ಯಾಹ್ನದ ಹೊತ್ತಿಗೆ ಹಣೆಯಲ್ಲಿ ರಕ್ತ ಸುರಿಸಿಕೊಳ್ಳುತ್ತಾ ಬಂದು ವರದಿ ಮಾಡಿದರು.

ಮನೆ ಹತ್ತಿರದಲ್ಲಿ ಹಳೆಯ, ಕಲ್ಲಿನಿಂದ ಕಟ್ಟಿದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನವೊಂದಿದೆ. ಅದರಲ್ಲಿ ಅರ್ಧ ಕೆತ್ತಿದ, ಒಡೆದು ಹೋದ ಶಿಲ್ಪಗಳೇ ಹೆಚ್ಚು. ೧೨ ನೇ ಶತಮಾನದಲ್ಲಿ ಆ ದೇವಾಲಯ ಕಟ್ಟುತ್ತಿದ್ದಾಗ ಊರಿನ ಮೇಲೆ ಮುಸ್ಲಿಂ ರಾಜನ ಧಾಳಿ ನೆಡೆಯಿತಂತೆ. ಹೊಯ್ಸಳ ಶೈಲಿಯ ಆ ದೇವಸ್ಥಾನದ ಕೆಲಸ ಅಲ್ಲಿಗೇ ನಿಂತುಹೋಯಿತಂತೆ. ಮುಸ್ಲಿಂ ಸೈನಿಕರು ದೇವಾಲಯದ ಶಿಲ್ಪಗಳನ್ನು ಒಡೆದು ಹಾಕಿದರಂತೆ. ಆನಂತರ ದೇವಸ್ಥಾನದ ಪಕ್ಕದಲ್ಲೇ ಮಸೀದಿ ಕಟ್ಟಿದರಂತೆ. ದೇವಸ್ಥಾನದ ಅರ್ಚಕರ ಮನೆ ಮಸೀದಿ ಗೋಡೆಗೆ ತಾಗಿಕೊಂಡೇ ಇದೆ. ದೇವಸ್ಥಾನದ ಪಕ್ಕದಲ್ಲಿ ಮುಸ್ಲಿಮರ ಓಣಿಗಳಿವೆ. ಅದೇನಾಯಿತೋ ಏನೋ ಒಟ್ಟಿನಲ್ಲಿ ಮುಸ್ಲಿಮರು ಹಿಂದೂಗಳೂ ಕೂಡಿಕೊಂಡಿದ್ದಾರೆ. ಎಲ್ಲ ಕಡೆಗಳಲ್ಲೂ ಗಲಾಟೆ ಶುರುವಾದಾಗ ಅಲ್ಲಿನ ಹಿಂದೂ ಮುಸ್ಲಿಮರು ಇಬ್ಬರೂ ಸೇರಿ ಗಲಭೆಕೋರರು ತಮ್ಮ ಏರಿಯಾ ಒಳಬರದಂತೆ ಕಾವಲು ನಿಂತರು. ಎಷ್ಟಂದರೂ ಶತಮಾನಗಳಿಂದ ಒಟ್ಟಿಗೆ ಬದುಕಿದ ರೂಢಿಯಾದ ಜನ. ಅವರಿಗೆ ಇದ್ಯಾವ ಹೊಡೆದಾಟವೂ ಬೇಕಾಗಿರಲಿಲ್ಲ. ಹಾಗಾಗಿ ಅಲ್ಲಿ ಹೆಚ್ಚಿನ ಯಾವ ಹಾನಿಯೂ ಆಗಲಿಲ್ಲ.

ಮೂರನೇ ದಿನ.

ಗಲಭೆ ನಿಲ್ಲುವ ಇಲ್ಲವೇ ಕಡಿಮೆಯಾಗುವ ಯಾವುದೇ ಸೂಚನೆ ಕಂಡುಬರಲಿಲ್ಲ. ಲಾಟೀಚಾರ್ಜು, ಅಶ್ರುವಾಯು, ಗಾಳಿಯಲ್ಲಿ ಗುಂಡು ಎಲ್ಲವೂ ಆಯಿತು. ಜಿಲ್ಲಾ ಕೇಂದ್ರದಿಂದ ಹೆಚ್ಚಿನ ಪೋಲೀಸರು ಜಾಲರಿ ವ್ಯಾನಿನಲ್ಲಿ ಬಂದಿಳಿದರು. ಹೆಲ್ಮೆಟ್ ಹಾಕಿಕೊಂಡು, ಕೋಲು ಹಿಡಿದುಕೊಂಡು ತಿರುಗಿದರು. ಆದರೆ ಅಷ್ಟರಲ್ಲಿ ನದಿಯಾಚೆಗಿನ ಹೊಸನಗರಕ್ಕೂ ಗಲಾಟೆ ಹಬ್ಬಿತ್ತು. ಜನ್ನಾಪುರ, ಸಿದ್ದಾಪುರ, ಜಿಂಕ್ ಲೈನು, ಮಿಲ್ಟ್ರಿಕ್ಯಾಂಪ್, ಮಾರಮ್ಮನ ಗುಡಿ, ಹುತ್ತಾಕಾಲೋನಿ, ನ್ಯೂಕಾಲೋನಿ ಎಲ್ಲಾ ಕಡೆಗಳಲ್ಲಿ ಲೂಟಿ ಶುರುವಾಗಿತ್ತು. ಇಷ್ಟಾದರೂ ಹಿಂದೂಗಳಾಗಲೀ ಮುಸ್ಲೀಮರಾಗಲೀ ಹೆಂಗಸರ ಮೈ ಮುಟ್ಟಿರಲಿಲ್ಲವಂತೆ. ನಿಜವೋ ಸುಳ್ಳೋ ಆದರೆ ಅವತ್ತು ಮಾತ್ರ ಮುಸ್ಲಿಮರು ಎರಡು ಹಿಂದೂ ಯುವತಿಯರನ್ನು ರೇಪ್ ಮಾಡಿದರಂತೆ ಎಂಬ ಸುದ್ದಿ ಊರೆಲ್ಲೆಲ್ಲಾ ಹರಡಿತು. ಬೆಂಕಿಗೆ ಪೆಟ್ರೋಲ್ ಸುರಿದಂತಾಯಿತು. ಇಲ್ಲಿವರೆಗೆ ಅಂಬೇಡ್ಕರ್ ಕಾಲೋನಿಯ ಹುಡುಗರು ಗಲಾಟೆಗೆ ಬಂದಿರಲಿಲ್ಲವಂತೆ. ಕೊನೆಗೆ ಯಾವನೋ ಒಬ್ಬ ತನ್ನ ಪ್ಯಾಂಟು ಬಿಚ್ಚಿ ನಿಂತು "ಅಲ್ಲಿ ಅವರು ನಮ್ಮ ಹೆಣ್ಣುಮಕ್ಕಳನ್ನ ಮುಟ್ಟುತ್ತಾ ಇದ್ದಾರೆ, ನಿಮಗೆಲ್ಲಾ ಇದು ಇಲ್ಲವೇನ್ರೋ, ಬನ್ರೋ"ಎಂದು ಹೀಯಾಳಿಸಿದನಂತೆ. ಕೆರಳಿದ ಅವರು ಪ್ರಚಂಡ ಪಡೆಯೊಡನೆ ಫೀಲ್ಡಿಗಿಳಿದು ಬಿಟ್ಟರು. ಗೋಲಿಬಾರಿನ ಆದೇಶ ಹೊರಬಿತ್ತು. ಎಂದಿನಂತೆ ಇಬ್ಬರು ಅಮಾಯಕರು ಬಲಿಯಾದರು. ರೈಲ್ವೆ ಹಳಿ ಹತ್ತಿರದ ಮಸೀದಿಯೊಂದಕ್ಕೆ ನುಗ್ಗಿದ ಜನರು ಅದರ ಮೇಲಿದ್ದ ಹಸಿರು ಧ್ವಜಗಳನ್ನು ಕಿತ್ತೊಗೆದು ತ್ರಿವರ್ಣ ಧ್ವಜ ಹಾರಿಸಿದರು!

ಇತ್ತ ಮನೆಗಳಲ್ಲಿ ಹಾಲು ಕೂಡ ಇಲ್ಲದ ಪರಿಸ್ಥಿತಿ ಉಂಟಾಗಿ ಮಕ್ಕಳು ಅಳಲು ಶುರುವಾಗುತ್ತಿದ್ದಂತೇ ನಿಷೇದಾಜ್ಞೆಯೂ ಜಾರಿಯಾಗಿತ್ತು. ನೀಲಿ ಮಿಲಿಟರಿ ಯೂನಿಫಾರ್ಮಿನ ರಾಪಿಡ್ ಆಕ್ಷನ್ ಫೋರ್ಸಿನವರು ಬಂದರು. ನೀಟಾಗಿ ಒಂದು ಪಥಸಂಚಲನ ನೆಡೆಸಿದರು. ಪೋಲೀಸರು ಜೀಪಿನಲ್ಲಿ ನಿಷೇದಾಜ್ಞೆ ಬಗ್ಗೆ ಎಚ್ಚರಿಸುತ್ತಾ ತಿರುಗಿದರು. ನಂತರ ಅಲ್ಲಿ ರಾರಾಜಿಸಿದ್ದು ಹಿಂದೂಗಳೂ ಅಲ್ಲ ಮುಸ್ಲಿಮರೂ ಅಲ್ಲ. ಪೋಲೀಸರು ಮತ್ತು ಆರ್. ಎ. ಎಫ್ ನವರು. ಊರಿನ ತುಂಬಾ ಚದುರಿ ಗಲಭೆಕೋರರ ಮೈ ನೀಲಿಗಟ್ಟಿಸಿದರು. ಕೆಲವೊಂದು ಏರಿಯಾಗಳ ತಲೆಬಾಗಿಲಲ್ಲಿ ನಿಂತು ಗುಂಪು ಒಳಗೆ ಅಥವಾ ಹೊರಗೆ ಹೋಗದಂತೆ ದಿಗ್ಭಂಧನ ಹಾಕಿದರು. ಸೂಕ್ಷಪ್ರದೇಶಗಳನ್ನೆಲ್ಲಾ ವಶಕ್ಕೆ ತೆಗೆದುಕೊಂಡರು. ನಿಧಾನಕ್ಕೆ ಸಂಜೆಯ ಹೊತ್ತಿಗೆ ಬಹುಮಟ್ಟಿಗೆ ನಿಯಂತ್ರಣಕ್ಕೆ ಬಂತು ಗಲಭೆ. ನಿಷೇದಾಜ್ಞೆಯಂತೂ ಹೇಗೂ ಇತ್ತು. ರಾತ್ರಿಯ ಹೊತ್ತಿಗೆ ರಸ್ತೆಗಳು ನಿರ್ಜನವಾಗುವಂತೆ ಮಾಡಿಬಿಟ್ಟರು. ನಿಜ ಹೇಳಬೇಕೆಂದರೆ ಇನ್ನು ಇಡೀ ಊರಿನಲ್ಲಿ ಸುಡಲು, ಒಡೆಯಲು ಮುಸ್ಲಿಮರ ಯಾವುದೇ ಅಂಗಡಿಯಾಗಲೀ ಇರಲಿಲ್ಲ! ಅವತ್ತು ರಾತ್ರಿಯ ದಿಲ್ಲಿ ದೂರದರ್ಶನದ ಇಂಗ್ಲೀಷ್ ನ್ಯೂಸಿನಲ್ಲಿ ನಮ್ಮ ಊರನ್ನು ಗಲಭೆ ಪೀಡಿತ ಪ್ರದೇಶವೆಂದು ಕೆಂಪು ಗುರುತುಹಾಕಿ ತೋರಿಸಿದರು.

ನಾಲ್ಕನೆಯ ದಿನ.

ಎರಡ್ಮೂರು ದಿನಗಳಿಂದ ಅಗತ್ಯ ವಸ್ತುಗಳ ಪೂರೈಕೆ ನಿಂತುಹೋಗಿತ್ತು. ಲಾರಿ ಬಸ್ಸುಗಳನ್ನು ಹೊರಗಿನ ಬೈಪಾಸು ರಸ್ತೆಯಿಂದಲೇ ಕಳಿಸಲಾಗುತ್ತಿತ್ತು. ಈ ದಿನ ಬೆಳಗ್ಗೆ ಹಾಲು ಇನ್ನಿತರ ಅಗತ್ಯ ವಸ್ತುಗಳನ್ನು ಕೊಳ್ಳಲು ಒಂದೆರಡು ಗಂಟೆ ಕಾಲಾವಕಾಶ ಕೊಟ್ಟರು. ಅದಾದ ನಂತರ ಮತ್ತೆ ನಿಷೇದಾಜ್ಞೆ. ಯಾರೂ ಮನೆಯಿಂದ ಹೊರಗೆ ಕಾಲಿಡುವಂತಿರಲಿಲ್ಲ. ಇದೇ ವಿಷಯವಾಗಿ ಕೋರ್ಟಿಗೆ ಹೊರಟಿದ್ದ ಸರ್ಕಾರಿ ವಕೀಲರನ್ನು ಕಾಗದ ಪತ್ರಗಳನ್ನು ತೋರಿಸಿದರೂ ಕೂಡ ಆರ್. ಎ. ಎಫ್ ನವರು ಕೆಡವಿ ಬಡಿದರಂತೆ ! ಮಕ್ಕಳು ಮನೆಯೊಳಗೆ ಕೂರಲಾಗದೇ ಆಡಲು ಹೊರಬಂದು ಪೋಲೀಸ್ ಜೀಪಿನ ಸದ್ದು ಕೇಳಿದ ಕೂಡಲೇ ಒಳಗೆ ಓಡುತ್ತಿದ್ದರು. ಅವತ್ತು ಅಲ್ಲಲ್ಲಿ ಸಣ್ಣ ಸಣ್ಣ ಘಟನೆಗಳನ್ನು ಬಿಟ್ಟರೆ ಬಹುತೇಕ ಶಾಂತವಾಗಿತ್ತು ಊರು.

ಐದನೇ ದಿನ ಶುರುವಾಗಿತ್ತು. ಪೂರ್ತಿ ತಣ್ಣಗಾಗಿತ್ತು ಊರು. ನಿಷೇದಾಜ್ಞೆ ತೆರವಾಗಿ ಸೆಕ್ಷನ್ ೧೪೪ ಹಾಕಲಾಯಿತು. ಅಂಗಡಿ ಬಾಗಿಲುಗಳನ್ನು ತೆಗೆಯಲಾಯಿತು. ನಂತರ ಸೆಕ್ಷನ್ ೧೪೪ ಕೂಡ ತೆಗೆದುಹಾಕಲಾಗಿ ಎಲ್ಲಾ ಶಾಲೆ, ಕಾಲೇಜು, ಕಛೇರಿ, ಬ್ಯಾಂಕುಗಳು ಶುರುವಾದವು. ಸುಟ್ಟು ಕರಕಲಾದ ಅಂಗಡಿಗಳನ್ನು, ಒಡೆದುಹಾಕಿದ ಮನೆಗಳನ್ನು ಎಲ್ಲರೂ ಸೇರಿಯೇ ಸ್ವಚ್ಛ ಮಾಡುತ್ತಿದ್ದ ನೋಟ ಊರಿನಲ್ಲೆಲ್ಲಾ ಕಂಡುಬಂತು. ನಮ್ಮ ತರಗತಿಯಲ್ಲಿ ರೆಹಮಾನ್ ಎಂಬ ಹುಡುಗನೊಬ್ಬನಿದ್ದ. ಅವನ ಮನೆಯನ್ನೂ, ಅಂಗಡಿಯನ್ನೂ ಸುಟ್ಟುಹಾಕಿದ್ದರಂತೆ. ಅವರು ಊರು ಬಿಟ್ಟು ಯಾವುದೋ ಹಳ್ಳಿಗೆ ಹೋಗಿದ್ದರಂತೆ. ಒಂದು ವಾರದ ನಂತರ ಶಾಲೆಗೆ ಬಂದ. ಸಂಜೆ ವಾಕಿಂಗಿಗೆ ಹೊರಟಿದ್ದ ಹಿಂದಿನ ಮನೆಯ ತಾತ ದೊಡ್ಡ ಸಾಧನೆಯೆಂಬಂತೆ ಹೇಳುತ್ತಿದ್ದರು. "೮ ವರ್ಷದ ಹಿಂದೆ ಇದೇ ರೀತಿ ಗಲಾಟೆಯಾಗಿತ್ತು, ಆವಾಗ ಹಿಂದೂಗಳು ಹೊಡೆಸಿಕೊಂಡಿದ್ದರು, ಈ ಬಾರಿ ಸೇಡು ತೀರಿಸಿಕೊಂಡರು ಬಿಡಿ"!!.

ನಂತರದ ದಿನಗಳಲ್ಲಿ ಮತ್ತೆ ಮಸೀದಿಗಳಲ್ಲಿ 'ಅಲ್ಲಾ ಹೋ ಅಕ್ಬರ್' ಕೇಳಿಸಿತು. ಮೊದಲೇ ಹತ್ತಿರವಾಗದ ಮನಸುಗಳನ್ನು ಇನ್ನೂ ದೂರ ಮಾಡಿದ ಹೀಗೊಂದು ಕೋಮುಗಲಭೆ ನಮ್ಮೂರಿನ ಇತಿಹಾಸದಲ್ಲಿ ದಾಖಲಾಯಿತು.

**********

ನಾಳೆ ಈದ್ ಮಿಲಾದ್ ಹಬ್ಬವಂತೆ. ಹೋಳಿ, ಗುಡ್ ಫ್ರೈಡೆಯೂ ಕೂಡ.

ಶುಭಾಶಯಗಳು ಎಲ್ಲರಿಗೂ ;)

ಜಾಲಿಗರ ಸಭೆ - ಝಲಕ್ಕು, ಕಿರಿಕ್ಕು

ಮೊನ್ನೆ ಮಾರ್ಚ್ ೧೬, ೦೮ ಭಾನುವಾರ ’ಕನ್ನಡ ಜಾಲಿಗರ ಸಭೆ’ ನೆಡೆಯಿತಲ್ಲ, ಅದು ಹೇಗಿತ್ತು, ಏನಾಯಿತು, ಹೇಗಿರಬೇಕಿತ್ತು, ಹೇಗಿರಬಾರದಿತ್ತು ಅಂತ ಹಲವರು ಹಲವು ರೀತಿಯಲ್ಲಿ ಹೇಳಿದ್ದಾರೆ. ಎಲ್ಲರ ಅಭಿಪ್ರಾಯವೇ ಮುಂದಿನ ಕೆಲಸಗಳಿಗೆ ಮಾರ್ಗದರ್ಶಿ ಎನ್ನುವ ಆಶಯದೊಂದಿಗೆ ಕೆಲವು ಲಿಂಕುಗಳನ್ನು ಸಂಗ್ರಹಿಸಿದ್ದೇನೆ.


ವರದಿಗಳು :
ಬೆಂಗಳೂರಿನಲ್ಲಿ ಕನ್ನಡ ಬ್ಲಾಗಿಗಳ ಮುಖಾಮುಖಿ - ದಟ್ಸ್ ಕನ್ನಡ
ಬಸವನಗುಡಿಗೆ ಭರಪೂರ ಬಂದಿಳಿದ ಬ್ಲಾಗಿಗರು - ಕೆಂಡಸಂಪಿಗೆ
ಬೆಂಗಳೂರಿನಲ್ಲಿ ಕನ್ನಡ ಬ್ಲಾಗರ್‌ಗಳ ಕಲರವ - ವೆಬ್ ದುನಿಯಾಅಭಿಪ್ರಾಯಗಳು:
ಚೆನ್ನಾಗಾಯ್ತು ಅಂದವರು
ಕನ್ನಡ ಜಾಲಿಗರ ಮೀಟ್‌ - ಒಂದಷ್ಟು ಮೆಲುಕು - ಇದರಲ್ಲಿರುವುದು ಕನ್ನಡವೋ ಇಂಗ್ಲೀಷೋ ಕೇಳಬೇಡಿ ;-)
ಕನ್ನಡದ ಕತ್ತಲೆಗೆ ಬ್ಲಾಗೀ ಟಾರ್ಚು :ಒಂದು ಬ್ಲಾಗೀ ಮಿಲನ
ಬೆಳಗಲಿ ಹೀಗೆ..
ಆದಿತ್ಯವಾರದ ಆ ಸಂಜೆ - ಕನ್ನಡ ಬ್ಲಾಗಿಗರ ಭೇಟಿ
ಮನಸ್ಸಿನ ಪುಟದಲ್ಲಿಂದು...
ಬೆಂಗಳೂರು ಅಂಗಳದಲ್ಲಿ ಬ್ಲಾಗಿಗರ ಕಲರವಇನ್ನೂ ಚೆನ್ನಾಗಿರಬೇಕಿತ್ತು ಅಂದವರು
ನಿರಾಶೆ ಮೂಡಿಸಿದ ಕೂಟ - ನೇರ, ದಿಟ್ಟ, ನಿರಂತರ ;)
ಬ್ಲಾಗರ್ಸ್ ಮಿಲನಸರಿ, ತಪ್ಪುಗಳ ಬ್ಲಾಗಿಗರ ಕಾಳಗದ ’ಲಘು’ ವರದಿ.


*************

ಭಾರತದ ಬೇರೆ ಯಾವುದಾದರೂ ಭಾಷೆಯ ಜಾಲಿಗರ ಸಭೆ ಈ ಮೊದಲು ನಡೆದಿತ್ತಾ ಎನ್ನುವುದು ನನ್ನ ಪ್ರಶ್ನೆ. ಹಾಗಾಗದಿದ್ದಲ್ಲಿ ಸಿಲಿಕಾನ್ ಕಣಿವೆಯಲ್ಲಿ ಭಾರತದ ಮತ್ತೊಂದು ’ಪ್ರಥಮ’ ದಾಖಲಾದಂತೆ. ಕನ್ನಡದ ’ಪ್ರಥಮ’ವಂತೂ ದಾಖಲಾಗಿದೆ. ಏನೇ ಆಗಲಿ, ಇದನ್ನು ಸಂಘಟಿಸಿದ ಪ್ರಣತಿಗೊಂದು ವಿಶೇಷ ಧನ್ಯವಾದ.

ಬುಧವಾರ, ಮಾರ್ಚ್ 12, 2008

ಹುಡ್ಗೀರು, ಕರ್ಚೀಫು ಮತ್ತು ಜೆನೆರಲ್ ನಾಲೆಡ್ಜು

ಯಾವುದಾದ್ರೂ ವಿಷಯದ ಬಗ್ಗೆ ಗೊತ್ತಿಲ್ಲದಿದ್ದಾಗ ಅಥವಾ ಯಾವುದಾದ್ರೂ ವಿಷಯದ ಬಗ್ಗೆ ಸಂಶಯವಿದ್ದಾಗ, ಕುತೂಹಲವಿದ್ದಾಗ ಅದನ್ನ ಗೊತ್ತಿದ್ದವರ ಹತ್ತಿರ ಒಂದಲ್ಲ ಹತ್ತು ಬಾರಿ ಬೇಕಾದ್ರೂ ಕೇಳಿ ತಿಳ್ಕೋಬೇಕು ಅಂತ ಶಾಲೆಯಲ್ಲಿದ್ದಾಗ ಮಿಸ್ಸು ಹೇಳ್ಕೊಟ್ಟಿದ್ರು. ನಂಗೂ ಅದೇ ಅಭ್ಯಾಸ.

ಮೊನ್ನೆ ಒಂದು ಸಂಶಯ ಬಂತು. ಎಷ್ಟು ಯೋಚಿಸಿದ್ರೂ ತಿಳಿಯಲಿಲ್ಲ. ಅದು ಹುಡ್ಗೀರಿಗೆ ಸಂಬಂಧಿಸಿದ್ದು ಅಂದಮೇಲೆ ಹುಡುಗರಿಗೆ ಕೇಳಿದ್ರೆ ಸರಿಯಾಗಿ ಗೊತ್ತಾಗೋಲ್ಲ ಅಂತ ಹುಡುಗಿಯರನ್ನೇ ಕೇಳಿದೆ, ತಿಳಿದುಕೊಂಡೆ. ಬರೇ ನಾನು ತಿಳ್ಕೊಂಡ್ರೆ ಏನು ಬಂತು. ಅದನ್ನ ನಾಲ್ಕು ಜನರಿಗೂ ತಿಳಿಸೋದು ಬೇಡ್ವೆ? ಅದ್ಕೇ ಬ್ಲಾಗಿಗೂ ಹಾಕಿದೆ.

ಇದು ಸುಮ್ನೆ ಜೆನರಲ್ ನಾಲೆಡ್ಜಿಗಾಗಿ. ಗಮನಿಸಿ, ಉತ್ತರಗಳ್ಯಾವುವೂ ರೀಲಲ್ಲ, ಎಲ್ಲಾ ರಿಯಲ್ಲೇ ! ಡೌಟಿದ್ದವ್ರು ನನ್ ಫೋನ್ ಇನ್ ಬಾಕ್ಸ್ ನೋಡ್ಬೋದು ;). ಆವರಣ(bracket)ದಲ್ಲಿರೋದು ಮನಸಿನ ಮಾತು.


ಸಂಶಯ/ಪ್ರಶ್ನೆ: ಹುಡ್ಗೀರು ಕೈಯಲ್ಲಿ ಯಾವಾಗ್ಲೂ ಕರ್ಚೀಫು ಹಿಡ್ಕೊಂಡಿರ್ತಾರಲ್ಲ ಯಾಕೆ?

ಉತ್ತರ ೧ : ಅದೊಂಥರಾ ಸೆಕ್ಯುರಿಟಿ ಫೀಲಿಂಗ್ ಕೊಡತ್ತೆ . (ಹಾಗಿದ್ರೆ ಕೋಲು ಹಿಡ್ಕೊಂಡ್ರೆ ಇನ್ನೂ ಒಳ್ಳೆದೇನೋಪ)

ಉ ೨ : ಹುಡುಗರ ಕಣ್ಣೀರು ಒರ್ಸೋಕೆ. (ಅಬ್ಬಾ, ಒಪ್ಕೋಬೇಕಾದ್ದೆ ಇದು)

ಉ ೩ : ನಮ್ಗೆ ಪಾಕೇಟ್ ಇರೋಲ್ಲ, ಅದ್ಕೆ. (ಹ್ಮ್.. ಹೌದಲ್ವಾ !)

ಉ ೪ : ಹಿಡ್ಕೊಂಡಿರೋ ಹುಡ್ಗನ ಕೈ ಜಾರೋಗದೇ ಇರ್ಲಿ ಅಂತ ಕೈಬೆವರು ಒರೆಸಿಕೊಳ್ಲೋಕೆ. (ನೊ ಕಮೆಂಟ್ಸ್)

ಉ ೫ : ಕ್ಲೀನಾಗಿರೋಕೆ. ಅಂದ್ರೆ ಬೆವರು, ಕಣ್ಣೀರು ಎಲ್ಲಾ ಒರೆಸ್ಕೊಳ್ಳೋಕೆ. ಧೂಳು ಇದ್ದಾಗ ಮೂಗಿಗೆ ಹಿಡ್ಕೊಳೋಕೆ. (ಸರೀ, ಅದ್ಕೆ ಮೂರೊತ್ತೂ ಕೈಯಲ್ಲೇ ಯಾಕೆ ಹಿಡ್ಕೋಬೇಕು?)

ಉ ೬ : ನಾನಂತೂ ಹಿಡ್ಕೊಳಲ್ಲ, ನಂಗೆ ಯಾಕೆ ಅಂತನೂ ಗೊತ್ತಿಲ್ಲ. (ತಪ್ಪಾಯ್ತು, ಮುಂದೆ ಹೋಗ್ತೀನಿ, ಪಾಸ್... )

ಉ ೮ : ಯಾಕೇಂತ ಗೊತ್ತಿಲ್ಲ, ಹಂಗೆ ಸುಮ್ನೆ ಅಭ್ಯಾಸ... (ಓ ಹಾಗಾ.. ಒ.ಕೆ. ಮುಂದುವರೆಸಿ)

ಉ ೯ : ಹೌದು ಹುಡ್ಗೀರು ಯಾಕೆ ಹಿಡ್ಕೋತಾರೆ? ನೀನೆ ಹೇಳು (ಅದು ಗೊತ್ತಿದ್ರೆ ನಿಂಗ್ಯಾಕೆ ಕೇಳ್ತಿದ್ದೆ? ನೀನು ಹುಡ್ಗಿ ಅಲ್ವಾ)

ಉ ೧೦ : ಅದಕ್ಕೆ ತುಂಬಾ ಕಾರಣಗಳಿವೆ. (ಸರಿ ಅವೇನು ಅಂತ ಹೇಳ್ರೀ ಅಂದಾಗ..) ಎಲ್ಲಾದ್ರೂ ಕೂತ್ಕೋಬೇಕಾದಾಗ ಅದನ್ನ ಹಾಸ್ಕೊಂಡ್ರೆ ಬಟ್ಟೆ ಕೊಳೆಯಾಗೋಲ್ಲ, ನೀರು ಒರೆಸ್ಕೋಬೋದು, ಮುಖ, ಕೈ ಕೊಳೆ, ಧೂಳು, ಬೆವರು...
(ಅಯ್ಯೋ .. ಆಯ್ತು ಆಯ್ತು.. ಗೊತ್ತಾಯ್ತು)

************

ಅಂದ ಹಾಗೆ, ವಿಷಯ ತಿಳಿಸಿದ ಸಹೃದಯಿ ಗೆಳತಿಯರಿಗೆ, ಅಕ್ಕ ತಂಗಿಯರಿಗೆಲ್ಲಾ ಥ್ಯಾಂಕ್ಸ್ .

ಮತ್ತೇನಾದ್ರೂ ಕಾರಣ ಇರಬಹುದಾ.................??

ಗುರುವಾರ, ಮಾರ್ಚ್ 6, 2008

ಬನ್ನಿ , ಸಿಗೋಣ ಎಲ್ರೂ

ಖುಶಿಯೆನಿಸುತ್ತಿದೆ. ಕೆಲದಿನಗಳಿಂದ ಸಣ್ಣದಾಗಿ ಕೇಳಿ ಬರುತ್ತಿತ್ತು. ನಿನ್ನೆ ಖಾತ್ರಿಯಾಗಿದೆ. ಅಂತರ್ಜಾಲದಲ್ಲಿ ಕನ್ನಡದಲ್ಲಿ ಬರೆಯುವರರು, ಬಳಸುವವರು, ಓದುವವರು ಎಲ್ಲರನ್ನೂ ಮುಖತ: ಭೇಟಿ ಮಾಡಿಸುವ ಪ್ರಯತ್ನವೊಂದು ರೂಪುಗೊಂಡಿದೆ. ಕನ್ನಡದ ಮಟ್ಟಿಗೆ ಇದೊಂದು ರೀತಿಯ ಹೊಸ ಇತಿಹಾಸವಾಗುವಂತದ್ದೆ. ಈ ನಿಟ್ಟಿನಲ್ಲಿ ಸುಶ್ರುತ ಕೊಟ್ಟ ಮಾಹಿತಿಯನ್ನು ಯಥಾವತ್ತಾಗಿ ಹಾಕುತ್ತಿದ್ದೇನೆ.

******************************
ನಮಸ್ಕಾರ.

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!


ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.


ಅಲ್ಲಿ ಸಿಗೋಣ

***************************************

ಅದೂ ನಿಜವೆ. ಬರೀ ಕಮೆಂಟು, ಸ್ಕ್ರಾಪು, ಮೆಸೇಜು, ಮೇಲ್ ಇದೇ ಆಗೋಯ್ತು ಇಷ್ಟು ದಿನ. ಸ್ನೇಹ, ಪ್ರೀತಿ, ಜಗಳ ಎಲ್ಲ ಇಂಟರ್ನೇಟ್ಟಲ್ಲೇ ಎಷ್ಟು ದಿನ ಅಂತ ಮಾಡೋದು?. ಒಬ್ರಿಗೊಬ್ರು ಫೇಸ್ ಕಟ್ ನೋಡ್ಕೊಂಡು ಪರಿಚಯ ಮಾಡಿಕೊಂಡು ಸ್ವಲ್ಪ ಹೊತ್ತು ಮಾತಾಡಿ ಸಂಜೆ ಸಮಯ ಕಳೆಯೋಣ. ಫೀಲ್ಡಿನಲ್ಲಿರೋ ಕೆಲವು ಹಿರಿಯರು, ಪರಿಣಿತರು, ಅನುಭವಿಗಳು ಎಲ್ಲರೂ ಬರ್ತಿದಾರೆ, ತಿಳಿದುಕೊಳ್ಳೋದೂ ಬಹಳ ಇರುತ್ತೆ. ವಿಚಾರ/ಅಭಿಪ್ರಾಯ ವಿನಿಮಯ, ಸಮಾಲೋಚನೆ, ಹಿಂದಿನ ಮೆಲುಕು, ಮುಂದಿನ ಆಲೋಚನೆ, ಚರ್ಚೆ ಎಲ್ಲ ಮಾಡಬಹುದು. ತಾವೂ ಬನ್ನಿ ತಮ್ಮವರನ್ನೂ ಕರೆತನ್ನಿ. ;)