ಪುಟಗಳು

ಸೋಮವಾರ, ಫೆಬ್ರವರಿ 11, 2008

ಕೀ ಕೀ ಕೀ ಕರ್ಮಕಾಂಡದ ಕಥೆಯಿದು....

ಅದ್ಯಾಕೋ ಗೊತ್ತಿಲ್ಲ. ಇತ್ತೀಚೆಗೆ ನಾನು ಮಾಡುವ ಕೆಲಸಗಳಿಗಿಂತ ಆಗಾಗ ಮಾಡಿಕೊಳ್ಳುವ ಎಡವಟ್ಟುಗಳದ್ದೇ ಜಾಸ್ತಿ ತೂಕ ! ಇದು ಅಂತಹುದೇ ಎಡವಟ್ಟಿನ ಒಂದು ಪ್ರಸಂಗ. ಕೀ ಕಳೆದುಕೊಂಡೋ, ಕೀ ಬಿಟ್ಟು ಬಂದೋ ಪಜೀತಿ ಪಟ್ಟ ಪ್ರಸಂಗಗಳು ಹಲವರದ್ದು ಹಲವಾರಿರಬಹುದು. ಆದರೆ ಕೀ ಕಣ್ಣಿಗೇ ಕಾಣುತ್ತಿದ್ದರೂ ನಾನು ಪಟ್ಟಪಾಡು ಇದು. ;)

ಆಗಿದ್ದು ಇಷ್ಟು . ನಮ್ಮ ಮನೆಯ ಜೋತಾಡುವ ಬೀಗಕ್ಕೆ ಎರಡು ಕೀ ಗಳಿವೆ. ಒಂದು ನನ್ನ ಹತ್ತಿರ ಇರುತ್ತದೆ ಇನ್ನೊಂದು ನನ್ನ ರೂಂ ಮೇಟ್ ಹತ್ತಿರ ಇರುತ್ತದೆ. ಮೊನ್ನೆ ನನ್ನ ರೂಂ ಮೇಟು ಕೀ ಕಳೆದುಕೊಂಡ. ಸೋ.. ಉಳಿದದ್ದು ಒಂದೇ ಕೀ. ಏನು ಮಾಡುವುದು ಅಂತ ಯೋಚನೆ ಮಾಡಿದಾಗ, ನನಗಿಂತ ಅವನು ತಡವಾಗಿ ಆಫೀಸಿಗೆ ಹೋಗುವುದರಿಂದ ನನ್ನ ಕೀಯನ್ನು ಅವನು ಇಟ್ಟುಕೊಂಡು ಅವನು ಹೋಗುವಾಗ ಬೀಗ ಹಾಕಿ ಕೀಯನ್ನು ಕಿಟಕಿಯಲ್ಲಿ ಇಟ್ಟು ಹೋಗುವುದು, ಸಂಜೆ ನಾನು ಬೇಗ ಬರುವುದರಿಂದ ಕಿಟಕಿಯಲ್ಲಿಟ್ಟ ಕೀ ತೆಗೆದುಕೊಳ್ಳುವುದು ಎಂದು ತೀರ್ಮಾನವಾಯಿತು. ಸರಿ.. ನಿನ್ನೆ ಸಂಜೆ ಮಾಮೂಲಿನಂತೆ ಆಫೀಸು ಮುಗಿಸಿಕೊಂಡು ಮನೆಗೆ ಹೋದೆ. ಅಲ್ಲಿಯವರೆಗೆ ಎಲ್ಲವು ಚೆನ್ನಾಗಿಯೇ ಇತ್ತು. ಅಂದುಕೊಂಡಂತೆಯೆ ಕೀ ಕಿಟಕಿಯಲ್ಲಿ ಇಟ್ಟು ಹೋಗಿದ್ದ. ನಾನು ಯಾವುದೋ ಹಾಡು ಹೇಳುತ್ತಾ ಎಲ್ಲೋ ನೋಡಿಕೊಂಡು ಸ್ಟೈಲಾಗಿ ಕಿಟಕಿಯಲ್ಲಿದ್ದ ಕೀ ತೆಗೆದುಕೊಳ್ಳಲು ಕೈ ಹಾಕಿದೆ. ಅಲ್ಲೇ ಆಗಿದ್ದು ಎಡವಟ್ಟು. ನನ್ನ ಹಾಡಿನ ಲಹರಿಗೂ ನನ್ನ ಸ್ಟೈಲಿಗೂ ಕೀಗೂ ಹೊಂದಾಣಿಕೆಯಾಗಲಿಲ್ಲ ಅನ್ನಿಸುತ್ತದೆ. ಅದು ಕೈ ಹಿಡಿತಕ್ಕೆ ಸಿಕ್ಕದೇ ಕಿಟಕಿಯಿಂದ ರೂಮಿನೊಳಗೆ ಬಿದ್ದೇ ಹೋಯಿತು. ನನ್ ಗ್ರಾಚಾರ !.

ಅಲ್ಲಿಂದ ಶುರುವಾಯಿತು ಪರದಾಟ. ಆಗಲೇ ಕತ್ತಲಾಗಿತ್ತು. ಸುಸ್ತಾಗಿತ್ತು ಬೇರೆ. ಕೀ ಇಲ್ಲದೇ ಮನೆಯೊಳಗೆ ಹೋಗುವುದು ಹೇಗೆ ! ಆದರೆ ಈಗ ಅದನ್ನು ತೆಗೆದುಕೊಳ್ಳುವುದಾದರೂ ಹೇಗೆ ? ಕೀ ಒಳಗೆ ನೆಲದ ಮೇಲೆ ಬಿದ್ದು ಟನ್ ಟನ್ ಶಬ್ದ ಮಾಡಿದ್ದು ಕೇಳಿಸಿತ್ತು. ರೂಮಿನಲ್ಲಿ ಕತ್ತಲು. ಹಾಗೆಯೇ ಕಿಟಕಿಯ ಸರಳುಗಳಿಗೆ ಮೂತಿ ಒತ್ತಿ ಎಲ್ಲಾದರೂ ಕೀ ಕಾಣುತ್ತದಾ ನೋಡಿದೆ. ಕಣ್ಣು ಕಿರಿದು ಮಾಡಿ ನೋಡಿದೆ .. ಊಹೂಂ.. ಕಾಣಲಿಲ್ಲ . ಏನಾದರೂ ಬೆಳಕು ಬೇಕು ಎಂದುಕೊಳ್ಳುವಾಗ ಕಿಸೆಯಲ್ಲಿದ್ದ ಮೊಬೈಲ್ ಫೋನ್ ನೆನಪಾಯಿತು. ಅದರ ಫ್ಲಾಷ್ ಲೈಟನ್ನೇ ಹಾಕಿ ಕಿಟಕಿಯಲ್ಲಿಟ್ಟು ನೋಡಿದಾಗ ಅಷ್ಟು ದೂರದಲ್ಲಿ ನನ್ನ ಮುದ್ದು ಕೀ ತಣ್ಣಗೆ ಮಲಗಿರುವುದು ಕಾಣಿಸಿತು. ಸುಮಾರು ದೂರದಲ್ಲಿ ಬಿದ್ದಿತ್ತು ಕೀ. ಸದ್ಯ ಎಲ್ಲಿ ಇದೆ ಅಂತಾದರೂ ಗೊತ್ತಾಯಿತು ಎಂದುಕೊಂಡು ಹೇಗೆ ತೆಗೆಯುವುದು ಎಂಬ ಆಲೋಚನೆಯಲ್ಲಿ ತೊಡಗಿದೆ.

ಮೊದಲನೆಯದಾಗಿ ಆ ಕೀಗೆ ಯಾವುದೇ ಬಂಚ್ ಆಗಲೀ ಏನಾಗಲೀ ಹಾಕಿರಲಿಲ್ಲ. ಅದು ಖಾಲಿ ಚಪ್ಪಟೆ ಕೀ ಅಷ್ಟೆ. ಎರಡನೆಯದಾಗಿ ದೂರದಲ್ಲಿ ಬಿದ್ದಿದ್ದರಿಂದ ಅಷ್ಟು ದೂರ ತಲುಪುವಂತ ಕೋಲು ಬೇಕಿತ್ತು. ಆದರೆ ಕೋಲಿನಿಂದ ಕೀಯನ್ನು ತೆಗೆಯುವುದು ಹೇಗೆ. ಕೀ ತಲೆಯಲ್ಲಿ ಒಂದು ಸಣ್ಣ ತೂತನ್ನು ಬಿಟ್ಟರೆ ಸಿಕ್ಕಿಸಲು ಬೇರೇನೂ ಇಲ್ಲ. ಒಂದು ಗಟ್ಟಿ ತಂತಿ ಹಾಕಿ ಎತ್ತಲು ಸಾಧ್ಯವೇ ಯೋಚಿಸಿದೆ. ಊಹೂಂ.. ಕೀ ಬಿದ್ದದ್ದು ನೆಲದ ಮೇಲೆ, ತಂತಿಯನ್ನು ತೂತೂಳಗೆ ಹಾಕಿ ಎತ್ತಲು ಸಾಧ್ಯವೆ ಇಲ್ಲ. ಕೋಲಿಗೆ ದಾರ ಕಟ್ಟಿ ಕುಣಿಕೆ ಹಾಕಿ ಎತ್ತಿದರೆ ? ಊಹೂಂ.. ಕುಣಿಕೆ ಬೀಳಿಸಲು ಸಾಧ್ಯವಿಲ್ಲ , ಕರ್ಮಕಾಂಡ, ಏನು ಮಾಡುವುದೀಗ ?. ಸರ್ಕಲ್ಲಿನ ಹತ್ತಿರ ಹೋಗಿ ಕೀ ಮಾಡುವವವನನ್ನು ಕರೆದುಕೊಂಡು ಬರಲೇ ಎಂದು ಯೋಚಿಸಿದೆ. ಇಷ್ಟೊತ್ತಿಗಾಗಲೇ ಆತ ಅಂಗಡಿ ಎತ್ತಿರುತ್ತಾನೆ ಎಂದು ಗೊತ್ತಾಯಿತು. ಇವತ್ತು ರಾತ್ರಿ ಗೆಳೆಯರ ಮನೆಯೇ ಗತಿ ಅನ್ನಿಸಿತು. ಆದರೆ ಪಾಪ ನನ್ನ ರೂಂ ಮೇಟು ಬರುವುದು ರಾತ್ರಿ ೧ ಗಂಟೆಗೆ. ಅವನು ಎಲ್ಲಿ ಹೋಗಬೇಕು ರಾತ್ರಿ? ಹಾಗಿದ್ದರೆ ಇದ್ದದ್ದು ಎರಡೇ ಆಯ್ಕೆ. ಒಂದೋ hacksaw ಬ್ಲೇಡು ತಂದು ಕುಯ್ಯಬೇಕು, ಇಲ್ಲ ಅಂದರೆ ಬೀಗ ಒಡೆಯಬೇಕು. ಸುಸ್ತಾಗಿದ್ದುದರಿಂದ ಕುಯ್ಯುತ್ತಾ ಕೂರುವಷ್ಟು ತಾಳ್ಮೆಯಾಗಲೀ , ಚೈತನ್ಯ ವಾಗಲೀ ಇರಲಿಲ್ಲ. ಅದೂ ಬೇರೆ ದಪ್ಪವಿದೆ. ಕತ್ತಲಲ್ಲಿ ಕುಯ್ಯುತ್ತ ಕೂತರೆ ಎಷ್ಟು ಹೊತ್ತು ಕುಯ್ಯಬೇಕೋ ಏನೋ ! ಇನ್ನೇನು ಹಾಗಿದ್ದರೆ ಬೀಗ ಒಡೆಯುವುದೊಂದೇ ದಾರಿ ಎಂದು ತೀರ್ಮಾನ ಮಾಡಿದೆ. ಮನೆ ಓನರ್ ಅನುಮತಿ ಬೇಕಿತ್ತು. ಜೊತೆಗೆ ಒಡೆಯಲು ಏನಾದರೂ ಸಾಮಗ್ರಿ ಬೇಕಿತ್ತು. ಹಾಸ್ಟೆಲ್ಲಿನಲ್ಲಿದ್ದಾಗಲಂತೂ ಇಂತ ಪ್ರಕರಣಗಳು ತಿಂಗಳಿಗೊಂದಾದರೂ ಆಗುತ್ತಲೇ ಇರುತ್ತಿತ್ತು. ಯಾರಾದರೂ ಕೀ ಕಳೆದುಕೊಳ್ಳುವುದು. ಕೊನೆಗೆ ಬೀಗವನ್ನು ಒಡೆದುಹಾಕುವುದು. ಹುಡುಗರಂತೂ ಬೀಗ ಒಡೆಯಲು ತುದಿಗಾಲಿನಲ್ಲಿ ನಿಂತಿರುತ್ತಿದ್ದರು. ೪ ಏಟಿಗೆ ಒಡೆದು ಹಾಕಿ ಬೀಗುತ್ತಿದ್ದರು. ನನಗೂ ಸ್ವಲ್ಪ ಅನುಭವವೂ ಇತ್ತು.

ಸರಿ... ಓನರ್ ಅಜ್ಜಿಯ ಮುಂದೆ ಹೋಗಿ ನಿಂತೆ. ಹೀಗೀಗೆ ಹೀಗೀಗೆ ಆಗೋಗಿದೆ ಏನ್ ಮಾಡ್ಲಿ ಒಡೆದಾಕ್ತೀನಿ ಅಂದೆ. ತೆಗೆಯಕ್ಕಾಗಲ್ವೇಪ್ಪಾ ಹಾಗೇನೆ? ನೋಡಿದ್ಯೆನಪ್ಪಾ ಸರಿಯಾಗಿ ಅಂದರು. ಇಲ್ಲ ಅಜ್ಜಿ ದೂರ ಬಿದ್ದಿದೆ. ಅದೂ ಅಲ್ದೆ ಬಂಚ್ ಕೂಡ ಇಲ್ಲ , ಬರೀ ಕೀ ಅಂದೆ. ಅವರು ಸ್ವಲ್ಪ ಹೊತ್ತು ಗೊಣಗಾಡಿ ಸರಿ ಅದೆಂಗೆ ಒಡೆದಾಕ್ತೀಯೋ ಹಾಕೂ.. ಆದ್ರೆ ಬಾಗಿಲಿಗೆ, ಚಿಲಕಕ್ಕೆ ಏನಾದ್ರೂ ಡ್ಯಾಮೇಜ್ ಆದ್ರೆ ನೀನೇ ಹಾಕಿಸಿಕೊಡಬೇಕು ನೋಡಪ್ಪಾ ಅಂದರು. ಚಿಲಕವನ್ನು ಬಾಗಿಲಿಗೆ ಸಿಕ್ಕಾಪಟ್ಟೆ ರಿವೆಟ್ಟುಗಳನ್ನು ಹೊಡೆದು ಕೂಡಿಸಿದ್ದರು. ಬಾಗಿಲು ಬೇರೆ ತುಂಬಾ ವೀಕು. ನಾನು ಬೀಗ ಒಡೆಯಲು ಹೋಗಿ ಬಾಗಿಲೇ ಒಡೆದು ಹೋಗಿ ಇನ್ನು ಕಾರ್ಪೆಂಟರ್ ಹಿಡಿದು , ರಿಪೇರಿ ಮಾಡಿಸಿ.. ಅಯ್ಯೋ ಇದ್ಯಾವ ಕರ್ಮನಪ್ಪ ಅನ್ನಿಸಿತು. ಆಯ್ತು ಅಜ್ಜಿ.. ನಾನು ಇನ್ನೂ ಹೆಂಗಾದ್ರೂ ತೆಗಿಯಕ್ಕಾಗತ್ತಾ ನೋಡ್ತೀನಿ, ಇಲ್ಲಾಂದ್ರೆ ಒಡಿತೀನಿ ಅಂದು ವಾಪಸ್ ಬಂದೆ. 5 ನಿಮಿಷ ಸುಮ್ಮನೇ ದಿಕ್ಕು ತೋಚದಂತೆ ನಿಂತೆ. ಸಂಜೆಯ ಟ್ರಾಫಿಕ್ಕಿನ ತಲೆಬಿಸಿ ಜೊತೆಗೆ ಇದೊಂದು ಎಕ್ಸ್ ಟ್ರಾ ಉಡುಗೊರೆಯಾಗಿತ್ತು !

ಇನ್ಯಾವುದಾದರೂ ಮಾರ್ಗಗಳಿದೆಯಾ ಯೋಚಿಸಲು ಶುರು ಮಾಡಿದೆ. ಕಿಟಕಿಯಿಂದ ಉದ್ದ ಕೋಲು ಹಾಕಿ ಕೀ ಹೇಗಾದರೂ ಕೋಲಿಗೆ ಅಂಟಿಕೊಳ್ಳುವಂತೆ ಮಾಡಿದರೆ ತೆಗೆಯಬಹುದೆಂದು ಗೊತ್ತಿತ್ತು. ಬೀಗ ಒಡೆಯುವುದಕ್ಕಿಂತ ಇದೇ ಒಳ್ಳೆ ಪ್ರಯತ್ನದಂತೆ ಅನಿಸಿತು . ಆದರೆ ಅಂಟಿಕೊಳ್ಳುವಂತೆ ಮಾಡುವುದು ಹೇಗೆ? ಮ್ಯಾಗ್ನೆಟ್ ನೆನಪಾಯಿತು. ಕೋಲಿಗೆ ಮ್ಯಾಗ್ನೆಟ್ ಕಟ್ಟಿ... ಅದು ಆಗದ ಕೆಲಸ, ಯಾಕೆಂದರೆ ಕೀ ತಾಮ್ರದ್ದಿತ್ತು. ಆದರೂ ಒಳಗೆ ಕಬ್ಬಿಣ ಇರುತ್ತದೆ ಪ್ರಯತ್ನಿಸೋಣ ಎನ್ನಿಸಿದರೂ ಈಗ ಮ್ಯಾಗ್ನೇಟ್ ಎಲ್ಲಿಂದ ತರುವುದು !. ನಂತರ ಇನ್ಯಾವುದಾದರೂ ಸುಲಭವಾಗಿ ದೊರಕಿಸಿಕೊಳ್ಳುವಂತಹ ವಸ್ತುಗಳಿವೆಯೆ ಯೋಚಿಸಿದೆ. ಸೋಪು? ಕೋಲಿಗೆ ಕಟ್ಟಿ ಕೀ ಮೇಲೆ ಒತ್ತಿ ಹಿಡಿದು ಅಂಟಿಸಿ..ಊಹೂಂ... ಆಗಲ್ಲ. ಗ್ರೀಸು?... ಅಂಟಿಕೊಳ್ಳಲ್ಲ. ಮೇಣ?.. ಊಹೂಂ.. ಅದೂ ಅಂಟಿಕೊಳ್ಳಲ್ಲ. ಫೆವಿಕ್ವಿಕ್ಕು? ಚಿಟಿಕೆಯಲ್ಲೇ ಅಂಟಿಸುವುದೇನೋ ನಿಜ ಆದರೆ ಅದನ್ನು ಕೋಲಿಗೆ ಹಾಕಿ, ಕೋಲನ್ನು ಕಿಟಕಿಯೊಳಗೆ ಹಾಕಿ ಕೀ ತಡಕಾಡುವುದರಲ್ಲೆ ಒಣಗಿ ಹೋಗಿರುತ್ತದೆ...ಡಾಂಬರು?..ಸಿಗುವುದಿಲ್ಲ ಈಗ..ಎಂ.ಸೀಲು?!.. ಇದ್ಯಾಕೋ ಅತೀ ಆಯ್ತು.. ಪ್ಚ್.. ಏನು ಮಾಡುವುದು ಗೊತ್ತಾಗದೆ ಹತಾಶೆಯಿಂದ ಬಾಲ್ಕನಿಯಲ್ಲೇ ನಿಂತು ಕೆಳಗೆ ರಸ್ತೆ ನೋಡಲಾರಂಭಿಸಿದೆ. ಜನ ಎಲ್ಲ ಅವರವರದ್ದೇ ಲೋಕದಲ್ಲಿದ್ದರು. ನನ್ನ ಪರಿಸ್ಥಿತಿಯ ಅರಿವು ಯಾರಿಗೂ ಇರಲಿಲ್ಲ. ಬೀಡಾಡಿ ದನವೊಂದು ರಸ್ತೆ ಮಧ್ಯ ಕುಳಿತು ನೆಮ್ಮದಿಯಿಂದ ಮೆಲುಕು ಹಾಕುತ್ತಿತ್ತು.. ಥಟ್ಟನೇ ನನ್ನ ತಲೆಯಲ್ಲಿ ದೀಪ ಹತ್ತಿಕೊಂಡಿತು. ಓಹ್.. ನಾವು ಮೆಲುಕು ಹಾಕುವ ವಸ್ತುವೊಂದಿದೆಯಲ್ಲ ಅದನ್ನೇ ನನ್ನ ಕೀ ಪಡೆಯಲು ಬಳಸಿದರೆ ಆಗುತ್ತದೆ , ಖಂಡಿತ ಕೀ ಅದಕ್ಕೆ ಅಂಟಿಕೊಳ್ಳುತ್ತದೆ ಎನ್ನಿಸಿತು. ಖುಷಿಯಾಯಿತು..

ಅಂಗಡಿಗೆ ಹೋಗಿ ೩ ಚೂಯಿಂಗ್ ಗಮ್ ತೆಗೆದುಕೊಂಡೆ. ನಂತರ ಬೇಕಿದ್ದುದು ಒಂದು ಉದ್ದನೆಯ ಗಟ್ಟಿಯಾದ ಕೋಲು. ಹುಡುಕಲಾರಂಭಿಸಿದೆ. ಥೂ..ಈ ಬೆಂಗಳೂರಲ್ಲಿ ಕೋಲಿಗೂ ಬರ.! ಸರಿಯಾದದ್ದು ಎಲ್ಲೂ ಕಾಣಲಿಲ್ಲ. ಕೊನೆಗೆ ಅಲ್ಲೇ ಸ್ವಲ್ಪ ದೂರದಲ್ಲಿ ಮನೆ ಕಟ್ಟುತ್ತಿದ್ದುದು ಕಂಡು ಅಲ್ಲಿಗೆ ಹೋಗಿ ಒಂದು ಗಟ್ಟಿ ಗಳ ಎತ್ತಿಕೊಂಡು ಬಂದೆ. ಚೂಯಿಂಗೆ ಗಮ್ ಬಾಯಿಗೆ ಹಾಕಿಕೊಂಡು, ಸ್ವಲ್ಪ ಹೊತ್ತು ಕಚಪಚನೆ ಅಗೆದು , ಹೊರತೆಗೆದು ಕೋಲಿನ ತುದಿಗೆ ಸುತ್ತಿದೆ. ಮೊಬೈಲ್ ದೀಪ ಆನ್ ಮಾಡಿ ಕಿಟಕಿ ಒಳಗಿಂದ ಕೋಲು ಹಾಕಿ ಸ್ವಲ್ಪ ಹೊತ್ತು ತಡಕಾಡಿ ಕೀ ಮೇಲೆ ಒತ್ತಿ ಹಿಡಿದು ಮೇಲಕ್ಕೆತ್ತಿದೆ. ಜೊತೆಗೇ ಬಂತು ಕೀ. ಮೇಲೆತ್ತುವುದರಲ್ಲಿ ಕಳಚಿಕೊಂಡು ಮತ್ತೆ ಟಣ್ ಎಂದು ಬಿತ್ತು. ಒಂದೆರಡು ಸಾರಿ ಹೀಗೆ ಆಟವಾಡಿಸಿ ಕೊನೆಗೆ ಅಂಟಿಕೊಂಡು ಜಾಣ ಮರಿಯಂತೆ ಬಂತು. ನಿಧಾನಕ್ಕೆ ಕೋಲನ್ನು ಹೊರಗೆಳೆದುಕೊಂಡೆ.

ಊಫ್.. ಅಂತೂ ಕೀ ಸಿಕ್ಕಿತ್ತು. ಬೀಗವನ್ನೊಮ್ಮೆ ನೋಡಿದೆ. ಏನೂ ಗೊತ್ತಿಲ್ಲದ ಮಳ್ಳಿಯಂತೆ ಸುಮ್ಮನೇ ಜೋತುಬಿದ್ದಿತ್ತು. ಇವತ್ತೇ ನಿನ್ನ ಕೊನೆ ದಿವಸವಾಗಬೇಕಾಗಿತ್ತು. ಏನೋ ನನ್ನ ತಲೆ ಸ್ವಲ್ಪ ಓಡಿದ್ದರಿಂದ ಉಳಿದುಕೊಂಡೆ ಅಂದುಕೊಂಡು ಬೀಗ ತೆಗೆದು ಒಳಗೆ ಹೋಗಿ ಉಸ್ಸೆಂದು ಕೂತಾಗ ಏನೋ ಸಾಧನೆ ಮಾಡಿದ ಸಂತೃಪ್ತಿ.
*********
ಅದಿರ್ಲಿ.. ನಾನು ಬೇರೆ ಏನಾದರೂ ಮಾಡಬಹುದಿತ್ತಾ? ನಿಮಗೆ ಬೇರೆ ಏನಾದ್ರೂ ಉಪಾಯ ಹೊಳೆಯಿತೆ? ;-)

21 ಕಾಮೆಂಟ್‌ಗಳು:

Alpazna ಹೇಳಿದರು...

ಹ್ಮ್ಮ್...
ನಿಮಗೆ ಬೇಕಾಗಿದ್ದಿದ್ದು ಒಂದು ಉದ್ದನೆಯ ಕೋಲು ಮತ್ತು ಏನಾದರು ಅಂಟಿಕೊಳ್ಳುವಂತದ್ದು?

ಊಹೂಂ, ಬೇರೆ ಏನೂ ಹೊಳಿತಾ ಇಲ್ಲ!

ಅನಾಮಧೇಯ ಹೇಳಿದರು...

ಭಾರಿ ತಲೆ ಓಡ್ಸಿದ್ಯಲೋ ಮಾರಾಯ. ಯಾವಾಗಲೂ ಕೀಗೆ ೧-೨ duplicate ಮಾಡ್ಸಿ ಯಾರದ್ದಾರು ಹತ್ರ ಇಡವು.
ಇನ್ನೊಂದು ಅಂದ್ರೆ ನಂಬರ್ combination ಇಪ್ಪ ಲಾಕ್. ಬರಿ combination ನೆನಪು ಇದ್ರೆ ಸಾಕು. ನಿನಗೆ chewing gum ಐಡಿಯಾ ಕೊಟ್ಟ ಆ ದನಕ್ಕೆ ಒಂದು ಅರ್ಧ ಡಜನ್ ಬಾಳೆ ಹಣ್ಣು ಕೊಡು. ಪುಣ್ಯ ಬತ್ತು. ಆ ದನ ಎದ್ದು ಹೋಗಿದ್ರೆ ಬ್ಯಾರೆ ದನಕ್ಕೆ ಕೊಟ್ಟರು ಅಡ್ಡಿ ಇಲ್ಲೇ.

Seema ಹೇಳಿದರು...

ವಿಕಾಸ, Really great!
Orbit white use ಮಾಡ್ಜ್ಯ? ;)
ಎಷ್ಟೆಲ್ಲಾ ಉಪಾಯ ಮಾಡ್ಜೆ. ಇನ್ನೂ ಹೊಸದು ಯಂತೂ ಹೊಳಿತಾ ಇಲ್ಲೆ. ಏನೇ ಆದರೂ ದನಕ್ಕೆ ಬಾಳೆ ಹಣ್ಣು ಕೊಡ್ಸದು ಚೊಲೋ idea.

Keshav Kulkarni ಹೇಳಿದರು...

ವಿಕಾಸ್,

ಬರಹ ತುಂಬ ಚೆನ್ನಾಗಿದೆ. ಖುಷಿ ಆತು ಮಾರಾಯಾ..

ಕೇಶವ (www.kannada-nudi.blogspot.com)

lokesh ಹೇಳಿದರು...

ನಿಮ್ article ಒದ್ಬೇಕಾದ್ರೆ ನನ್ ತಲೆಲೀ ಎರಡು ideas ಬಂತು .....
ಒಂದು ನೀವ್ ಆಗ್ಲೇ ಯೂಸ್ ಮಾಡಿದ್ದೀರ ..... ಕೀ ಕಬ್ಬಿಣದ್ದು ಆಗಿದ್ದಿದ್ರೆ magnet ಬಳಸಬಹುದಿತ್ತು...

nice writing ...!!

ವಿಕಾಸ್ ಹೆಗಡೆ ಹೇಳಿದರು...

@ALPAZNA,
ಹ್ಹ ಹ್ಹ. ಈ ಮೋಟುಗೋಡೆ ಹುಡ್ರುನ್ನ ಎಲ್ಲಿಗ್ ಕರ್ಕಂಡೋಗ್ ಬಿಟ್ರೂ ಮತ್ತೆ ’ಅಲ್ಲಿಗೇ’ ಬತ್ತ ಮಾರಾಯ ;)

@anonymous, ಹ್ಹೆ ಹ್ಹೆ. thanx, ದನಕ್ಕೆ ಬರಿ ಬಾಳೆಹಣ್ಣೇನು, ಇನ್ನೂ ಎಂತಾರು ಸ್ಪೆಷಲ್ಲಾಗಿ ಕೊಡಕ್ಕಾಗ್ತಾ ನೋಡ್ತಾ ಇದ್ದಿ ;)

ಸೀಮಕ್ಕ, ಬೂಮರ್ ಯೂಸ್ ಮಾಡಿದ್ದು ;) ನಿನ್ recommondation also taken ;)

@ಕೇಶವಣ್ಣ,ಲೋಕೇಶ್,
welcome and ಮೆಚ್ಚಿಕೊಂಡಿದ್ದಕ್ಕೆ thanQ.
ಬರುತ್ತಿರಿ.

ಶಾಂತಲಾ ಭಂಡಿ ಹೇಳಿದರು...

ವಿಕಾಸ್ ಅವರೆ...
ಓದುವಾಗ ನನಗೂ ಸಹ ನೀವು ಅಳವಡಿಸಿಕೊಂಡ ಉಪಾಯವೇ ಹೊಳೆದಿತ್ತು. ಆದರೆ ಚುಯಿಂಗ್ ಗಮ್ ಅಂದ್ರೆ ಹೇಟ್ ಮಾಡೋ ನಾನು ಅದನ್ನ ಕಚ ಕಚನೆ ಅಗಿದು ಕೊಡಲು ಇನ್ನೊಬ್ಬ ವ್ಯಕ್ತಿಯೂ ಬೇಕಾಗುತ್ತೆಂದು ಯೋಚಿಸುತ್ತಿದ್ದೆ. ನಿಮಗೆ ಆ ತೊಂದ್ರೆ ಬಾರದೆ ಇದ್ದಿದ್ದು ಖುಷಿಕೊಟ್ಟಿತು.
ವಿವರಣೆ ತುಂಬಾ ಚೆನ್ನಾಗಿದೆ. ಕೊನೆಯಲ್ಲಿ ಬೀಗದ ಜೊತೆ ನೀವು ಮಾತಾಡಿದ್ದು ಇನ್ನೂ ಇಷ್ಟವಾಯ್ತು.

ಪುಚ್ಚಪ್ಪಾಡಿ ಹೇಳಿದರು...

ಚೂಯಿಂಗಮ್ ಹಾಗೂ ಉಪಯೋಗಕ್ಕೆ ಬರತ್ತಲ್ಲಾ? ನಂಗೂ ಇನ್ನೊಂದು ಯೋಚ್ನೆ ಹೊಳೀತು.

Avinash Siddeshware ಹೇಳಿದರು...

The idea was good. More than that The situation you handled was nice because, at that time our mind will get blocked And the way you expressed is beautiful........

ಶಂಕರ ಪ್ರಸಾದ ಹೇಳಿದರು...

ಹೇ ಮಗಾ, ಸೂಪರ್ ಕಣೋ..
ತುಂಬ ಇಷ್ಟ ಆಯ್ತು ನಿನ್ನ ಈ ಪೋಸ್ಟು.
ಸರಿಯಾಗಿ ತಲೆ ಓಡಿಸಿದ್ಯ ಬಿಡು. ದನ ಮೆಲುಕು ಹಾಕೊದನ್ನ ನೋಡಿ, ಪಾಠ ಕಲಿತಿರುವೆ, ಆ ದನಕ್ಕೆ ರಾಯಲ್ಟಿ ಕೊಡಪ್ಪ. ಇಲ್ಲಾಂದ್ರೆ ಮುಂದೆ ಕೋಲು ಹಾಕುದ್ರೂ ಸಿಗದೆ ಇರೋ ಅಷ್ಟು ದೂರ ಹೋಗಿ ಬೀಳುತ್ತೆ ನಿನ್ನ ಬೀಗದ ಕೈ.
ಇನ್ನೊಂದು, ಅದೇನು ನಿನಗೆ ಬೇಕಾಗಿದ್ದು ಉದ್ದನೆಯದ್ದು ಮತ್ತು ಅಂಟಿಕೊಲ್ಲುವಂಥದ್ದು ? ಸ್ವಲ್ಪ ನೋಡಿಕೊಂಡು ಬರಿ, ಅಭಾಸವಾಗುತ್ತೆ.
ಶಹಭಾಶ್. ಬರೆದಿರೋ ರೀತಿ ಕೂಡಾ ಚೆನ್ನಾಗಿದೆ.

-----------------------------------
ನಿಮ್ಮವನು,
ಕಟ್ಟೆ ಶಂಕ್ರ

ರಾಜೇಶ್ ನಾಯ್ಕ ಹೇಳಿದರು...

ವಿಕಾಸ್,
ಸೂಪರ್ ಐಡಿಯಾ!

ತೇಜಸ್ವಿನಿ ಹೆಗಡೆ ಹೇಳಿದರು...

ಕಥೆ ತುಂಬಾ ನೈಜವಾಗಿ ಬಂದಿದೆ. ಸ್ವತಃ ನಾನೇ ಕೀಗೋಸ್ಕರ ಪರದಾಡಿದಂತಹ ಅನುಭವವಾಯಿತು. ಖಂಡಿತ ಬೇರೇನೂ ಉಪಾಯ ನನಗಂತೂ ಹೊಳೆಯಲಿಲ್ಲ! ಭವಿಷ್ಯತ್ತಿನಲ್ಲಿ ಒಂದೊಮ್ಮೆ ನಾನೂ ಕೀ ಕಳೆದುಕೊಂಡರೆ, ಎನೆಲ್ಲಾ ಉಪಾಯ ಮಾಡಬಹುದೆಂದು ತಿಳಿಯಿತು ನಿಮ್ಮ ಕೀ ಕರ್ಮಕಾಂಡದಿಂದ. ;-)

ಚಿತ್ರಾ ಕರ್ಕೇರಾ ದೋಳ್ಪಾಡಿ.. ಹೇಳಿದರು...

ಬ್ಲಾಗ್ ಚೆನ್ನಾಗಿದೆ ವಿಕಾಸ್ ಅವರೇ.,,ನನ್ ಬ್ಲಾಗ್ ಗೆ ಬಂದಿದ್ದಕ್ಕೆ ತುಂಬಾ ಧನ್ಯವಾದಗಳು.ನಾನು ಬ್ಲಾಗ್ ಲೋಕಕ್ಕೆ ಹೊಸ ಮುಖ..
ನಿಮ್ಮ ಕೀ-ಫಜೀತಿ ಓದಿ ಖುಷಿಯಾಯಿತು..ಮಾತ್ರವಲ್ಲ ನಮ್ಮನೆ ಕೀ ತುಂಬಾ ಸಲ ನನಗೆ ಇದೇ ರೀತಿಯ ತೊಂದ್ರೆ ಕೊಟ್ಟಿದ್ದು ನೆನಪಾಯಿತು...
ಗೆಳತಿ,
ಚಿತ್ರಾ

ವಿಕಾಸ್ ಹೆಗಡೆ ಹೇಳಿದರು...

@ ಶಾಂತಲಾ, ಶಂಕ್ರಣ್ಣ, ತೇಜಸ್ವಿನಿ
thanx thanx.

@ ಅವಿನಾಶ್, ಪುಚ್ಚಪ್ಪಾಡಿ , ಚಿತ್ರಾ, ರಾಜೇಶ್ ನಾಯ್ಕರು
welcome and thanx .

ಬಹುಜನರ ಅಪೇಕ್ಷೆ ಮೇರೆಗೆ ನನಗೆ ಐಡಿಯಾ ಕೊಟ್ಟ ದನದ ಸನ್ಮಾನಕ್ಕೋಸ್ಕರ ಹುಡುಕಾಟ ಆರಂಭಗೊಂಡಿದೆ. ಸಿಗದೇ ಇದ್ದರೆ ಬೇರೆ ದನಕ್ಕೇ ಸನ್ಮಾನ ಮಾಡಲಾಗುವುದು ;) ಒಟ್ಟಿನಲ್ಲಿ ಸನ್ಮಾನವಂತೂ ಗ್ಯಾರಂಟಿ.

ಹಷ೯ (Harsha) ಹೇಳಿದರು...

mentos......!!"Dimak ki batti jalade" andre ideeya noodu..... olle idea kottidee :)

Praveen L V ಹೇಳಿದರು...

vikasaa

life nalli yavade kasta baarli ataava eethaara situations create adddre, solutions kodaa namma sutta mutthaane irutte... adanna thilkondu swalpa samaya pragne oopaugsuddre ellla situations gu paarihaara sigutte... aadddre i know astondu thaalme and samaya pragne ee bangalore anta oornalli baarudu late...

kalash_siya ಹೇಳಿದರು...

bhala khushi aitu ninna baraha oodi.... ninu baredidda style...nange poornachandra tejaswi nenapu bantu......... i will regularly read your posts.... vikas daily bariyappa....illi pune yalli daridra marathi yavar sangati yalli nanage kannda matadovare illa..... oodi samadhan aaitu

Kalash

ಅನಾಮಧೇಯ ಹೇಳಿದರು...

ondnaak keeli madisikondu itgobegu annudu gottatanu?naanu maruti kaarina keeli hanga madiseni. tilitalla?
veerendra

dinesh ಹೇಳಿದರು...

ಚೆನ್ನಾಗಿದೆ...ಕೀ ಕಥೆ..

ವಿಕಾಸ್ ಹೆಗಡೆ ಹೇಳಿದರು...

ಹರ್ಷ, ಹೌದು ನೋಡು ಹಂಗೇ ಆತು ;)

ಪ್ರವೀಣ, ಅಪರೂಪಕ್ಕೊಂದ್ಸಲ ಸೀರಿಯಸ್ಸಾಗಿ ಏನೋ ಹೇಳಿದಿಯಾ, ಒಪ್ಕೊತಿನಿ ನೀ ಹೇಳದನ್ನ ;)

@ ಕಲಶ್,
ಸಾರ್, thanks ಬಹಳ.
ದಿನಾ ಬರಿಬೇಕಾ ? ಅಯ್ಯಯ್ಯೋ!! ;-)

ವೀರೇಂದ್ರ, welcome and thanx.
ಹೌದ್ರಿ, ಈಗ್ ಬುದ್ಧಿ ಬಂದದ, ೪ ಕೀಲಿ ಮಾಡ್ಶಿಟ್ಟೀನಿ.
ಅದ್ರೂ.. ಗ್ರಾಚಾರ್ **೦ಡ್ ಮಾರೇ ತೋ ಖುದಾ ಕ್ಯಾ ಕರೇಗಾ? ;)

ದಿನೇಶ್, thanx ;)

ರಂಜನಾ ಹೆಗ್ಡೆ ಹೇಳಿದರು...

ಹಃ ಹಃ
ಈಗ ಎಂತು ಡುಪ್ಲಿಕೇಟ್ ಕೀ ಮಾಡಿಸ್ಕೆಂಡ್ರಾ ಇಲ್ಯಾ?
ಸಿಕ್ಕಾಪಟ್ಟೆ ತಲೆ ಓಡ್ಸಿದ್ದೆ. ನಂಗೆ ಮಾಗ್ನೆಟ್ ಐಡಿಯಾ ಹೋಳತ್ತು ಅಷ್ಟೆ.
ಈ ಚೂಯಿಂಗ್ ಗಮ್ ಐಡಿಯಾ ಬರಲೆ ಇಲ್ಲೆ ಸಕತ್.