ಪುಟಗಳು

ಗುರುವಾರ, ಫೆಬ್ರವರಿ 21, 2008

ಮುಖಕ್ಕೆ ಮಂಗಳಾರತಿಯೇ ಯಾಕೆ?!

ಎಲ್ಲರಿಗೂ ಗೊತ್ತಿರುವಂತೆ ನಮ್ಮಲ್ಲಿ ನಂಬಿಕೆಗಳು, ಆಚರಣೆಗಳು, ಸಂಪ್ರದಾಯಗಳು ಬಹಳ. ದೇವರ ವಿಷಯದಲ್ಲೇ ತೆಗೆದುಕೊಂಡರೆ ಹಣ್ಣು ಕಾಯಿ ಇಂದ ಹಿಡಿದು ನರಬಲಿ ಕೊಡುವ ಮಟ್ಟದವರೆಗೂ ದೇವರನ್ನು ಸಂಪ್ರೀತಿಗೊಳಿಸುವ ಹಲವಾರು ನಂಬಿಕೆಗಳಿವೆ. ಸಾಮಾನ್ಯ ಸತ್ಯನಾರಾಯಣ ಪೂಜೆಯಂತ ಆಚರಣೆಗಳು ಒಂದೆಡೆಯಾದರೆ ದೇವರಿಗೆ ಮುಡಿಪಿಟ್ಟ ಬಲಿಯೊಂದು ಸತ್ತು ಬದುಕಿ ಬರುವ 'ಹೀಗೂ ಉಂಟೆ' ಎನಿಸುವ ವಿಚಿತ್ರಗಳು ಇನ್ನೊಂದೆಡೆ. ಆದರೆ ಇಂತಹ ಈ ಆಚರಣೆಗಳು, ಸಂಪ್ರದಾಯಗಳು ಎಲ್ಲ ಹೇಗೆ ರೂಢಿಯಾಯಿತು ಎಂದು ಹುಡುಕಲು ಹೊರಟರೆ ಕೆಲವೊಂದಕ್ಕೆ ಯಾವುದೇ ಕಾರಣವಾಗಲಿ, ಹಿನ್ನೆಲೆಯಾಗಲಿ ತಿಳಿಯುವುದೇ ಕಷ್ಟ. ಕೆಲವಕ್ಕೆ ಕಾರಣ, ಹಿನ್ನೆಲೆ ಗೊತ್ತಾದರೂ ಸಹ ಅದರ ಅರ್ಥ, ಅವಶ್ಯಕತೆ, ಪ್ರಸ್ತುತತೆ ಗೊತ್ತಾಗುವುದಿಲ್ಲ. ಇದಕ್ಕೆ ಕಾರಣ ತಲೆಮಾರುಗಳ ನಡುವಿನ ಕಮ್ಯುನಿಕೇಶನ್ ಗ್ಯಾಪ್ ಇರಬಹುದು ಎನಿಸುತ್ತದೆ. ಎಷ್ಟೋ ಜನಕ್ಕೆ ತಾವು ಯಾಕೆ ಮಾಡುತ್ತಿದ್ದೇವೆ ಎಂದೇ ತಿಳಿದಿರುವುದಿಲ್ಲ. ಕೆಲವರಿಗೆ ಗೊತ್ತಿದ್ದರೂ ಹೇಳುವುದಿಲ್ಲ. ಇನ್ನೂ ಹಲವಾರು ಆಚರಣೆ, ವಿಧಿವಿಧಾನಗಳು ಕೇವಲ ರೂಢಿಯಿಂದಲೂ ಬಂದದ್ದುಂಟು. ಅಜ್ಜ ಮಾಡುತ್ತಿದ್ದ, ಅಪ್ಪ ಮಾಡುತ್ತಿದ್ದ ಅದಕ್ಕೆ ತಾನೂ ಮಾಡಬೇಕು ಎನ್ನುವವರೇ ಹೆಚ್ಚು.

ನಾನು ಶಾಲೆಯಲ್ಲಿದ್ದಾಗ ಶಿಕ್ಷಕರೊಬ್ಬರು ನಮ್ಮ ಸುಮಾರಷ್ಟು ಆಚರಣೆಗಳು ಹೇಗೆ ರೂಢಿಗೆ ಬಂದವು ಎನ್ನುವುದಕ್ಕೆ ಉದಾಹರಣೆಯಾಗಿ ಒಂದು ಕಥೆಯನ್ನು ಹೇಳುತ್ತಿದ್ದರು.

ಒಂದೂರಿನಲ್ಲಿ ಒಬ್ಬ ಮನುಷ್ಯನಿದ್ದ, ಅವನಿಗೆ ದಿನವೂ ದೇವರ ಪೂಜೆ ಮಾಡುವ ಅಭ್ಯಾಸ. ಅವರ ಮನೆಯಲ್ಲಿ ಬೆಕ್ಕೊಂದಿತ್ತು. ಅದು ಮನೆಯೊಳಗೆಲ್ಲ ತಿರುಗಾಡಿಕೊಂಡು ಹಾಯಾಗಿತ್ತು. ಆದರೆ ಪೂಜೆಯ ಸಮಯದಲ್ಲಿ ದೇವರ ಮನೆಗೂ ಬಂದು ಮೈ ತಾಗಿಸುವುದು, ಪೂಜಾ ಸಾಮಗ್ರಿಗಳನ್ನು ಮೂಸುವುದು, ನೆಕ್ಕುವುದು ಮಾಡುತಿತ್ತು. ದಿನವೂ ಎಷ್ಟು ಪ್ರಯತ್ನ ಪಟ್ಟರೂ ಅದರ ಕಾಟ ತಪ್ಪಿಸಲಾಗದೆ ಕೊನೆಗೆ ಆ ಮನುಷ್ಯ ದಿನವೂ ಪೂಜೆಯ ಸಮಯ ಬಂದಾಗ ಆ ಬೆಕ್ಕನ್ನು ಹಿಡಿದು ಒಂದು ಬುಟ್ಟಿಯಲ್ಲಿ ಮುಚ್ಚಿ ಅದರ ಮೇಲೆ ದಪ್ಪದೊಂದು ಕಲ್ಲನ್ನು ಹೇರಿ ಬೆಕ್ಕು ಹೊರಬರದಂತೆ ಮಾಡಿ ಪೂಜೆಗೆ ಕೂರುತ್ತಿದ್ದ. ಇದರಿಂದ ಪೂಜೆ ಮುಗಿಯುವ ವರೆಗೂ ಬೆಕ್ಕಿನ ಕಾಟ ತಪ್ಪುತ್ತಿತ್ತು. ಪೂಜೆ ಮುಗಿದ ನಂತರ ಬೆಕ್ಕನ್ನು ಹೊರಬಿಡುತ್ತಿದ್ದ.

ಆ ಮನುಷ್ಯನ ಮಗನೊಬ್ಬನಿದ್ದ. ಅಪ್ಪನ ಮರಣದಿಂದ ಪೂಜೆಯ ಹೊಣೆ ಅವನ ಮೇಲೆ ಬಿತ್ತು. ತನ್ನ ಅಪ್ಪ ಪೂಜೆಯ ಸಮಯದಲ್ಲಿ ಬೆಕ್ಕನ್ನು ಬುಟ್ಟಿಯಲ್ಲಿ ಮುಚ್ಚಿಡುವುದನ್ನು ಸಣ್ಣವನಿದ್ದಾಗಲಿಂದ ನೋಡಿದ್ದ ಅವನು ಅದೂ ಕೂಡ ಪೂಜೆಯ ಜೊತೆಗೆ ಮಾಡುವ ವಿಧಾನವೆಂದೇ ತಿಳಿದಿದ್ದ. ಅವನು ಅಪ್ಪನನ್ನು ಅದಕ್ಕೆ ಕಾರಣವನ್ನು ಕೇಳಿರಲಿಲ್ಲ, ಅಪ್ಪ ಹೇಳಿರಲೂ ಇಲ್ಲ. ಅದರಂತೆ ಅವನೂ ಕೂಡ ಅದೇ ರೀತಿ ಬೆಕ್ಕನ್ನು ಹಿಡಿದು ಬುಟ್ಟಿಯಲ್ಲಿ ಮುಚ್ಚಿಟ್ಟು ಪೂಜೆ ಕೆಲಸ ಮಾಡುತ್ತಿದ್ದ. ಸ್ವಲ್ಪ ದಿನಗಳ ನಂತರ ಆ ಬೆಕ್ಕೂ ಸತ್ತು ಹೋಗಿದ್ದರಿಂದ ಇವನು ಆ ಪದ್ಧತಿಯನ್ನು ಬಿಡಬಾರದೆಂಬ ಉದ್ದೇಶದಿಂದ ಬೇರೆ ಬೆಕ್ಕೊಂದನ್ನು ತಂದು ಸಾಕಿ ಪೂಜೆ ಮಾಡುವ ಸಮಯಕ್ಕೆ ಬುಟ್ಟಿಯಲ್ಲಿ ಮುಚ್ಚಿಟ್ಟು ಅಪ್ಪನ ಸಂಪ್ರದಾಯವನ್ನು ಪಾಲಿಸುತ್ತಿದ್ದ. ಇದು ಹೀಗೆ ಮುಂದುವರೆಯಿತು.

ನಂತರ ಮೊಮ್ಮಗನ ಸರದಿ ಬಂದಾಗ ಅವನಿಗೂ ಕೂಡ ಪೂಜೆ ಸಮಯದಲ್ಲಿ ಬೆಕ್ಕನ್ನು ಮುಚ್ಚಿಡುವ ಅವನ ಅಪ್ಪನ ಸಂಪ್ರದಾಯ ಮುಂದುವರೆಸಿಕೊಂಡು ಹೋಗಬೇಕೆಂಬ ಆಸೆಯಿದ್ದರೂ ಸಹ ಆ ಸಮಯದಲ್ಲಿ ಅವನಿಗೆ ಬೆಕ್ಕುಗಳ್ಯಾವೂ ಸಿಗಲಿಲ್ಲ. ಕೊನೆಗೆ ಯಾರ ಹತ್ತಿರವೋ ಹೀಗೀಗೆ ತನ್ನ ಮನೆಯ ಸಂಪ್ರದಾಯವಿತ್ತು ಎಂದಾಗ, ಯಾವುದೇ ಕಾರಣಕ್ಕೂ ಆ ಸಂಪ್ರದಾಯ ನಿಲ್ಲಬಾರದು, ಜೀವಂತ ಬೆಕ್ಕು ಇಲ್ಲದಿದ್ದರೂ ಪರವಾಗಿಲ್ಲ ಒಂದು ಬೆಕ್ಕಿನ ಬೊಂಬೆಯನ್ನಾದರೂ ಮಾಡಿ ಬುಟ್ಟಿಯಲ್ಲಿ ಮುಚ್ಚಿಡುವ ವಿಧಾನ ಸರಿಯೆಂಬ ಉಚಿತ ಸಲಹೆ ದೊರೆಯಿತು. ಅದರಂತೆ ಅವನು ಬೆಕ್ಕಿನ ಬೊಂಬೆ ತಂದು ಪೂಜೆ ವಿಧಾನ ಮುಂದುವರೆಸಿದ......

ಈ ಕಥೆಯೂ ನಿಜವಾಗಿರಬೇಕೆನಿಲ್ಲ, ಆದರೆ ಅದರ ಒಟ್ಟು ಸಾರಾಂಶ ಮತ್ತು ಅದರ ಹಿಂದೆ ಅರ್ಥವಿರುವುದೂ ಸ್ಪಷ್ಟವಾಗಿದೆ.

ಹಾಗಂತ ನಮ್ಮ ಎಲ್ಲ ಆಚರಣೆಗಳೂ ಮೂಢವಾದದ್ದು ಅಂತೇನು ಇಲ್ಲ. ನಮ್ಮ ಸುಮಾರು ಆಚರಣೆಗಳು ಕಾಲಕ್ಕನುಗುಣವಾಗಿ ವೈಜ್ಞಾನಿಕ, ನೈತಿಕ, ಸಾಮಾಜಿಕ ಪ್ರಜ್ಞೆಯ ಆಧಾರವನ್ನು ಹೊಂದಿವೆ. ಆದರಲ್ಲಿ ಕೆಲವು ಆನಂತರ ಅತಿರಂಜಿತವಾಗಿರುವುದೂ, ಉತ್ಪ್ರೇಕ್ಷೆಗೊಳಗಾಗಿರುವುದೂ ಹೌದು. ಇವುಗಳ ಮಧ್ಯದಲ್ಲೇ ಅನೇಕ ಮೂಢನಂಬಿಕೆಗಳೂ ಬೇರೂರಿ ವೈಯಕ್ತಿಕವಾಗಿ ಮತ್ತು ಸಮಾಜಕ್ಕೆ ಪೀಡೆಗಳಾಗಿ ಉಳಿದಿರುವುದನ್ನು ಕಾಣಬಹುದು. ಇದೆಲ್ಲ ಏನೇ ಇದ್ದರೂ, ಇಂದು ಎಲ್ಲ ಸಂಪ್ರದಾಯಗಳನ್ನು, ಆಚರಣೆಗಳನ್ನು, ವಿಧಿವಿಧಾನಗಳನ್ನು, ನಿಯಮಗಳನ್ನು ಕೇವಲವಾಗಿ ನೋಡುವ, ಸಾರಾಸಗಟಾಗಿ ತಳ್ಳಿಹಾಕಿ, ಹೀಗಳೆದು, ತನಗೆ ನಂಬಿಕೆ ಇಲ್ಲ ಎಂದು negative ವಿಚಾರವಾದಿಯಂತೆ ವರ್ತಿಸುವ ಬದಲು ಸ್ವಲ್ಪ ಗೌರವ ದೃಷ್ಟಿಯಿಂದ, ಕಾಲಕ್ಕನುಗುಣವಾಗಿ, ಬೇರೆಯವರ ಭಾವನೆಗಳಿಗೆ ಧಕ್ಕೆ ಬರದಂತೆ ವೈಜ್ಞಾನಿಕತೆಯನ್ನಿಟ್ಟುಕೊಂಡೇ ವಿಮರ್ಶೆ ಮಾಡುವ ಬುದ್ಧಿ ಬೆಳೆಸಿಕೊಂಡರೆ ಒಳ್ಳೆಯದು. ಅಷ್ಟಕ್ಕೂ ಜಗತ್ತಿನಲ್ಲಿ ಎಲ್ಲವೂ ವಿಜ್ಞಾನವೇ ಯಾಕಾಗಿರಬೇಕು?!! ಕಲೆಗೆ, ಭಾವನೆಗಳಿಗೆ, ನಂಬಿಕೆಗೆ, ರೂಢಿಗಳಿಗೆ, ಬೆಲೆಯೇ ಇರಬಾರದೇಕೆ?

ಕಣ್ಣಿಗೇ ಕಾಣದ ಎಲೆಕ್ಟ್ರಾನ್, ಪ್ರೋಟಾನ್ ಗಳ ಬಗ್ಗೆ ಗ್ರಂಥಗಳನ್ನೇ ಓದಿ ತಿಳಿದುಕೊಳ್ಳುವ, ಎಷ್ಟೋ ಲಕ್ಷ ಜ್ಯೋತಿರ್ವರ್ಷಗಳಷ್ಟು ದೂರವಿರುವ ನಕ್ಷತ್ರವೊಂದರ ಬಗ್ಗೆ ಕುತೂಹಲ ತಳೆಯುವ, ಸಂಬಂಧವಿಲ್ಲದ ದೂರ ದೇಶದ ರಾಜಕೀಯದ ಬಗ್ಗೆ ವಿಶ್ಲೇಷಿಸುವ, ಅದ್ಯಾವುದೋ ಐಟಂ ಗರ್ಲ್ ಒಬ್ಬಳಿಗೆ ಯಾವನೋ ಮುತ್ತು ಕೊಟ್ಟರೆ ಅದರ ಬಗ್ಗೆ ಗಂಟೆಗಟ್ಟಲೆ ಚರ್ಚಿಸುವ ನಾವು ದಿನಾ ನೋಡುವ ದೇವರಿಗೆ ಮಂಗಳಾರತಿ ಮಾಡುವ ಅಭ್ಯಾಸ ಯಾಕೆ, ಹೇಗೆ ಬಂತು, ಮನೆಯ ಬಾಗಿಲಿನ ತೋರಣಕ್ಕೆ ಮಾವಿನ ಎಲೆಯನ್ನೇ ಯಾಕೆ ಕಟ್ಟುತ್ತಾರೆ ಎಂಬಂತಹ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೆ ಒಂದು ಚಿಕ್ಕ ಪ್ರಯತ್ನವನ್ನು ಕೂಡ ಮಾಡುವುದಿಲ್ಲವೆನ್ನುವುದೇ ಆಶ್ಚರ್ಯ ಹಾಗೂ ವಿಪರ್ಯಾಸ. ಅಷ್ಟಕ್ಕೂ ಇವೆಲ್ಲಾ 'ತಿಳಿದುಕೊಂಡು ಏನಾಗಬೇಕಿದೆ?' ಅನ್ನಿಸುತ್ತದೇನೋ ಅಥವಾ ತಿಳಿಯಲು ಸಮಯ, ವ್ಯವಧಾನವಿಲ್ಲವೇನೋ!

*************************

Feb 25th Thatskannadaದಲ್ಲಿ : ಆಚರಣೆಗಳಿಗೆ ಕಿಂಚಿತ್ತೂ ಬರವಿಲ್ಲ. ಆದರೆ ಅರ್ಥ ಗೊತ್ತೇ?

ಸೋಮವಾರ, ಫೆಬ್ರವರಿ 11, 2008

ಕೀ ಕೀ ಕೀ ಕರ್ಮಕಾಂಡದ ಕಥೆಯಿದು....

ಅದ್ಯಾಕೋ ಗೊತ್ತಿಲ್ಲ. ಇತ್ತೀಚೆಗೆ ನಾನು ಮಾಡುವ ಕೆಲಸಗಳಿಗಿಂತ ಆಗಾಗ ಮಾಡಿಕೊಳ್ಳುವ ಎಡವಟ್ಟುಗಳದ್ದೇ ಜಾಸ್ತಿ ತೂಕ ! ಇದು ಅಂತಹುದೇ ಎಡವಟ್ಟಿನ ಒಂದು ಪ್ರಸಂಗ. ಕೀ ಕಳೆದುಕೊಂಡೋ, ಕೀ ಬಿಟ್ಟು ಬಂದೋ ಪಜೀತಿ ಪಟ್ಟ ಪ್ರಸಂಗಗಳು ಹಲವರದ್ದು ಹಲವಾರಿರಬಹುದು. ಆದರೆ ಕೀ ಕಣ್ಣಿಗೇ ಕಾಣುತ್ತಿದ್ದರೂ ನಾನು ಪಟ್ಟಪಾಡು ಇದು. ;)

ಆಗಿದ್ದು ಇಷ್ಟು . ನಮ್ಮ ಮನೆಯ ಜೋತಾಡುವ ಬೀಗಕ್ಕೆ ಎರಡು ಕೀ ಗಳಿವೆ. ಒಂದು ನನ್ನ ಹತ್ತಿರ ಇರುತ್ತದೆ ಇನ್ನೊಂದು ನನ್ನ ರೂಂ ಮೇಟ್ ಹತ್ತಿರ ಇರುತ್ತದೆ. ಮೊನ್ನೆ ನನ್ನ ರೂಂ ಮೇಟು ಕೀ ಕಳೆದುಕೊಂಡ. ಸೋ.. ಉಳಿದದ್ದು ಒಂದೇ ಕೀ. ಏನು ಮಾಡುವುದು ಅಂತ ಯೋಚನೆ ಮಾಡಿದಾಗ, ನನಗಿಂತ ಅವನು ತಡವಾಗಿ ಆಫೀಸಿಗೆ ಹೋಗುವುದರಿಂದ ನನ್ನ ಕೀಯನ್ನು ಅವನು ಇಟ್ಟುಕೊಂಡು ಅವನು ಹೋಗುವಾಗ ಬೀಗ ಹಾಕಿ ಕೀಯನ್ನು ಕಿಟಕಿಯಲ್ಲಿ ಇಟ್ಟು ಹೋಗುವುದು, ಸಂಜೆ ನಾನು ಬೇಗ ಬರುವುದರಿಂದ ಕಿಟಕಿಯಲ್ಲಿಟ್ಟ ಕೀ ತೆಗೆದುಕೊಳ್ಳುವುದು ಎಂದು ತೀರ್ಮಾನವಾಯಿತು. ಸರಿ.. ನಿನ್ನೆ ಸಂಜೆ ಮಾಮೂಲಿನಂತೆ ಆಫೀಸು ಮುಗಿಸಿಕೊಂಡು ಮನೆಗೆ ಹೋದೆ. ಅಲ್ಲಿಯವರೆಗೆ ಎಲ್ಲವು ಚೆನ್ನಾಗಿಯೇ ಇತ್ತು. ಅಂದುಕೊಂಡಂತೆಯೆ ಕೀ ಕಿಟಕಿಯಲ್ಲಿ ಇಟ್ಟು ಹೋಗಿದ್ದ. ನಾನು ಯಾವುದೋ ಹಾಡು ಹೇಳುತ್ತಾ ಎಲ್ಲೋ ನೋಡಿಕೊಂಡು ಸ್ಟೈಲಾಗಿ ಕಿಟಕಿಯಲ್ಲಿದ್ದ ಕೀ ತೆಗೆದುಕೊಳ್ಳಲು ಕೈ ಹಾಕಿದೆ. ಅಲ್ಲೇ ಆಗಿದ್ದು ಎಡವಟ್ಟು. ನನ್ನ ಹಾಡಿನ ಲಹರಿಗೂ ನನ್ನ ಸ್ಟೈಲಿಗೂ ಕೀಗೂ ಹೊಂದಾಣಿಕೆಯಾಗಲಿಲ್ಲ ಅನ್ನಿಸುತ್ತದೆ. ಅದು ಕೈ ಹಿಡಿತಕ್ಕೆ ಸಿಕ್ಕದೇ ಕಿಟಕಿಯಿಂದ ರೂಮಿನೊಳಗೆ ಬಿದ್ದೇ ಹೋಯಿತು. ನನ್ ಗ್ರಾಚಾರ !.

ಅಲ್ಲಿಂದ ಶುರುವಾಯಿತು ಪರದಾಟ. ಆಗಲೇ ಕತ್ತಲಾಗಿತ್ತು. ಸುಸ್ತಾಗಿತ್ತು ಬೇರೆ. ಕೀ ಇಲ್ಲದೇ ಮನೆಯೊಳಗೆ ಹೋಗುವುದು ಹೇಗೆ ! ಆದರೆ ಈಗ ಅದನ್ನು ತೆಗೆದುಕೊಳ್ಳುವುದಾದರೂ ಹೇಗೆ ? ಕೀ ಒಳಗೆ ನೆಲದ ಮೇಲೆ ಬಿದ್ದು ಟನ್ ಟನ್ ಶಬ್ದ ಮಾಡಿದ್ದು ಕೇಳಿಸಿತ್ತು. ರೂಮಿನಲ್ಲಿ ಕತ್ತಲು. ಹಾಗೆಯೇ ಕಿಟಕಿಯ ಸರಳುಗಳಿಗೆ ಮೂತಿ ಒತ್ತಿ ಎಲ್ಲಾದರೂ ಕೀ ಕಾಣುತ್ತದಾ ನೋಡಿದೆ. ಕಣ್ಣು ಕಿರಿದು ಮಾಡಿ ನೋಡಿದೆ .. ಊಹೂಂ.. ಕಾಣಲಿಲ್ಲ . ಏನಾದರೂ ಬೆಳಕು ಬೇಕು ಎಂದುಕೊಳ್ಳುವಾಗ ಕಿಸೆಯಲ್ಲಿದ್ದ ಮೊಬೈಲ್ ಫೋನ್ ನೆನಪಾಯಿತು. ಅದರ ಫ್ಲಾಷ್ ಲೈಟನ್ನೇ ಹಾಕಿ ಕಿಟಕಿಯಲ್ಲಿಟ್ಟು ನೋಡಿದಾಗ ಅಷ್ಟು ದೂರದಲ್ಲಿ ನನ್ನ ಮುದ್ದು ಕೀ ತಣ್ಣಗೆ ಮಲಗಿರುವುದು ಕಾಣಿಸಿತು. ಸುಮಾರು ದೂರದಲ್ಲಿ ಬಿದ್ದಿತ್ತು ಕೀ. ಸದ್ಯ ಎಲ್ಲಿ ಇದೆ ಅಂತಾದರೂ ಗೊತ್ತಾಯಿತು ಎಂದುಕೊಂಡು ಹೇಗೆ ತೆಗೆಯುವುದು ಎಂಬ ಆಲೋಚನೆಯಲ್ಲಿ ತೊಡಗಿದೆ.

ಮೊದಲನೆಯದಾಗಿ ಆ ಕೀಗೆ ಯಾವುದೇ ಬಂಚ್ ಆಗಲೀ ಏನಾಗಲೀ ಹಾಕಿರಲಿಲ್ಲ. ಅದು ಖಾಲಿ ಚಪ್ಪಟೆ ಕೀ ಅಷ್ಟೆ. ಎರಡನೆಯದಾಗಿ ದೂರದಲ್ಲಿ ಬಿದ್ದಿದ್ದರಿಂದ ಅಷ್ಟು ದೂರ ತಲುಪುವಂತ ಕೋಲು ಬೇಕಿತ್ತು. ಆದರೆ ಕೋಲಿನಿಂದ ಕೀಯನ್ನು ತೆಗೆಯುವುದು ಹೇಗೆ. ಕೀ ತಲೆಯಲ್ಲಿ ಒಂದು ಸಣ್ಣ ತೂತನ್ನು ಬಿಟ್ಟರೆ ಸಿಕ್ಕಿಸಲು ಬೇರೇನೂ ಇಲ್ಲ. ಒಂದು ಗಟ್ಟಿ ತಂತಿ ಹಾಕಿ ಎತ್ತಲು ಸಾಧ್ಯವೇ ಯೋಚಿಸಿದೆ. ಊಹೂಂ.. ಕೀ ಬಿದ್ದದ್ದು ನೆಲದ ಮೇಲೆ, ತಂತಿಯನ್ನು ತೂತೂಳಗೆ ಹಾಕಿ ಎತ್ತಲು ಸಾಧ್ಯವೆ ಇಲ್ಲ. ಕೋಲಿಗೆ ದಾರ ಕಟ್ಟಿ ಕುಣಿಕೆ ಹಾಕಿ ಎತ್ತಿದರೆ ? ಊಹೂಂ.. ಕುಣಿಕೆ ಬೀಳಿಸಲು ಸಾಧ್ಯವಿಲ್ಲ , ಕರ್ಮಕಾಂಡ, ಏನು ಮಾಡುವುದೀಗ ?. ಸರ್ಕಲ್ಲಿನ ಹತ್ತಿರ ಹೋಗಿ ಕೀ ಮಾಡುವವವನನ್ನು ಕರೆದುಕೊಂಡು ಬರಲೇ ಎಂದು ಯೋಚಿಸಿದೆ. ಇಷ್ಟೊತ್ತಿಗಾಗಲೇ ಆತ ಅಂಗಡಿ ಎತ್ತಿರುತ್ತಾನೆ ಎಂದು ಗೊತ್ತಾಯಿತು. ಇವತ್ತು ರಾತ್ರಿ ಗೆಳೆಯರ ಮನೆಯೇ ಗತಿ ಅನ್ನಿಸಿತು. ಆದರೆ ಪಾಪ ನನ್ನ ರೂಂ ಮೇಟು ಬರುವುದು ರಾತ್ರಿ ೧ ಗಂಟೆಗೆ. ಅವನು ಎಲ್ಲಿ ಹೋಗಬೇಕು ರಾತ್ರಿ? ಹಾಗಿದ್ದರೆ ಇದ್ದದ್ದು ಎರಡೇ ಆಯ್ಕೆ. ಒಂದೋ hacksaw ಬ್ಲೇಡು ತಂದು ಕುಯ್ಯಬೇಕು, ಇಲ್ಲ ಅಂದರೆ ಬೀಗ ಒಡೆಯಬೇಕು. ಸುಸ್ತಾಗಿದ್ದುದರಿಂದ ಕುಯ್ಯುತ್ತಾ ಕೂರುವಷ್ಟು ತಾಳ್ಮೆಯಾಗಲೀ , ಚೈತನ್ಯ ವಾಗಲೀ ಇರಲಿಲ್ಲ. ಅದೂ ಬೇರೆ ದಪ್ಪವಿದೆ. ಕತ್ತಲಲ್ಲಿ ಕುಯ್ಯುತ್ತ ಕೂತರೆ ಎಷ್ಟು ಹೊತ್ತು ಕುಯ್ಯಬೇಕೋ ಏನೋ ! ಇನ್ನೇನು ಹಾಗಿದ್ದರೆ ಬೀಗ ಒಡೆಯುವುದೊಂದೇ ದಾರಿ ಎಂದು ತೀರ್ಮಾನ ಮಾಡಿದೆ. ಮನೆ ಓನರ್ ಅನುಮತಿ ಬೇಕಿತ್ತು. ಜೊತೆಗೆ ಒಡೆಯಲು ಏನಾದರೂ ಸಾಮಗ್ರಿ ಬೇಕಿತ್ತು. ಹಾಸ್ಟೆಲ್ಲಿನಲ್ಲಿದ್ದಾಗಲಂತೂ ಇಂತ ಪ್ರಕರಣಗಳು ತಿಂಗಳಿಗೊಂದಾದರೂ ಆಗುತ್ತಲೇ ಇರುತ್ತಿತ್ತು. ಯಾರಾದರೂ ಕೀ ಕಳೆದುಕೊಳ್ಳುವುದು. ಕೊನೆಗೆ ಬೀಗವನ್ನು ಒಡೆದುಹಾಕುವುದು. ಹುಡುಗರಂತೂ ಬೀಗ ಒಡೆಯಲು ತುದಿಗಾಲಿನಲ್ಲಿ ನಿಂತಿರುತ್ತಿದ್ದರು. ೪ ಏಟಿಗೆ ಒಡೆದು ಹಾಕಿ ಬೀಗುತ್ತಿದ್ದರು. ನನಗೂ ಸ್ವಲ್ಪ ಅನುಭವವೂ ಇತ್ತು.

ಸರಿ... ಓನರ್ ಅಜ್ಜಿಯ ಮುಂದೆ ಹೋಗಿ ನಿಂತೆ. ಹೀಗೀಗೆ ಹೀಗೀಗೆ ಆಗೋಗಿದೆ ಏನ್ ಮಾಡ್ಲಿ ಒಡೆದಾಕ್ತೀನಿ ಅಂದೆ. ತೆಗೆಯಕ್ಕಾಗಲ್ವೇಪ್ಪಾ ಹಾಗೇನೆ? ನೋಡಿದ್ಯೆನಪ್ಪಾ ಸರಿಯಾಗಿ ಅಂದರು. ಇಲ್ಲ ಅಜ್ಜಿ ದೂರ ಬಿದ್ದಿದೆ. ಅದೂ ಅಲ್ದೆ ಬಂಚ್ ಕೂಡ ಇಲ್ಲ , ಬರೀ ಕೀ ಅಂದೆ. ಅವರು ಸ್ವಲ್ಪ ಹೊತ್ತು ಗೊಣಗಾಡಿ ಸರಿ ಅದೆಂಗೆ ಒಡೆದಾಕ್ತೀಯೋ ಹಾಕೂ.. ಆದ್ರೆ ಬಾಗಿಲಿಗೆ, ಚಿಲಕಕ್ಕೆ ಏನಾದ್ರೂ ಡ್ಯಾಮೇಜ್ ಆದ್ರೆ ನೀನೇ ಹಾಕಿಸಿಕೊಡಬೇಕು ನೋಡಪ್ಪಾ ಅಂದರು. ಚಿಲಕವನ್ನು ಬಾಗಿಲಿಗೆ ಸಿಕ್ಕಾಪಟ್ಟೆ ರಿವೆಟ್ಟುಗಳನ್ನು ಹೊಡೆದು ಕೂಡಿಸಿದ್ದರು. ಬಾಗಿಲು ಬೇರೆ ತುಂಬಾ ವೀಕು. ನಾನು ಬೀಗ ಒಡೆಯಲು ಹೋಗಿ ಬಾಗಿಲೇ ಒಡೆದು ಹೋಗಿ ಇನ್ನು ಕಾರ್ಪೆಂಟರ್ ಹಿಡಿದು , ರಿಪೇರಿ ಮಾಡಿಸಿ.. ಅಯ್ಯೋ ಇದ್ಯಾವ ಕರ್ಮನಪ್ಪ ಅನ್ನಿಸಿತು. ಆಯ್ತು ಅಜ್ಜಿ.. ನಾನು ಇನ್ನೂ ಹೆಂಗಾದ್ರೂ ತೆಗಿಯಕ್ಕಾಗತ್ತಾ ನೋಡ್ತೀನಿ, ಇಲ್ಲಾಂದ್ರೆ ಒಡಿತೀನಿ ಅಂದು ವಾಪಸ್ ಬಂದೆ. 5 ನಿಮಿಷ ಸುಮ್ಮನೇ ದಿಕ್ಕು ತೋಚದಂತೆ ನಿಂತೆ. ಸಂಜೆಯ ಟ್ರಾಫಿಕ್ಕಿನ ತಲೆಬಿಸಿ ಜೊತೆಗೆ ಇದೊಂದು ಎಕ್ಸ್ ಟ್ರಾ ಉಡುಗೊರೆಯಾಗಿತ್ತು !

ಇನ್ಯಾವುದಾದರೂ ಮಾರ್ಗಗಳಿದೆಯಾ ಯೋಚಿಸಲು ಶುರು ಮಾಡಿದೆ. ಕಿಟಕಿಯಿಂದ ಉದ್ದ ಕೋಲು ಹಾಕಿ ಕೀ ಹೇಗಾದರೂ ಕೋಲಿಗೆ ಅಂಟಿಕೊಳ್ಳುವಂತೆ ಮಾಡಿದರೆ ತೆಗೆಯಬಹುದೆಂದು ಗೊತ್ತಿತ್ತು. ಬೀಗ ಒಡೆಯುವುದಕ್ಕಿಂತ ಇದೇ ಒಳ್ಳೆ ಪ್ರಯತ್ನದಂತೆ ಅನಿಸಿತು . ಆದರೆ ಅಂಟಿಕೊಳ್ಳುವಂತೆ ಮಾಡುವುದು ಹೇಗೆ? ಮ್ಯಾಗ್ನೆಟ್ ನೆನಪಾಯಿತು. ಕೋಲಿಗೆ ಮ್ಯಾಗ್ನೆಟ್ ಕಟ್ಟಿ... ಅದು ಆಗದ ಕೆಲಸ, ಯಾಕೆಂದರೆ ಕೀ ತಾಮ್ರದ್ದಿತ್ತು. ಆದರೂ ಒಳಗೆ ಕಬ್ಬಿಣ ಇರುತ್ತದೆ ಪ್ರಯತ್ನಿಸೋಣ ಎನ್ನಿಸಿದರೂ ಈಗ ಮ್ಯಾಗ್ನೇಟ್ ಎಲ್ಲಿಂದ ತರುವುದು !. ನಂತರ ಇನ್ಯಾವುದಾದರೂ ಸುಲಭವಾಗಿ ದೊರಕಿಸಿಕೊಳ್ಳುವಂತಹ ವಸ್ತುಗಳಿವೆಯೆ ಯೋಚಿಸಿದೆ. ಸೋಪು? ಕೋಲಿಗೆ ಕಟ್ಟಿ ಕೀ ಮೇಲೆ ಒತ್ತಿ ಹಿಡಿದು ಅಂಟಿಸಿ..ಊಹೂಂ... ಆಗಲ್ಲ. ಗ್ರೀಸು?... ಅಂಟಿಕೊಳ್ಳಲ್ಲ. ಮೇಣ?.. ಊಹೂಂ.. ಅದೂ ಅಂಟಿಕೊಳ್ಳಲ್ಲ. ಫೆವಿಕ್ವಿಕ್ಕು? ಚಿಟಿಕೆಯಲ್ಲೇ ಅಂಟಿಸುವುದೇನೋ ನಿಜ ಆದರೆ ಅದನ್ನು ಕೋಲಿಗೆ ಹಾಕಿ, ಕೋಲನ್ನು ಕಿಟಕಿಯೊಳಗೆ ಹಾಕಿ ಕೀ ತಡಕಾಡುವುದರಲ್ಲೆ ಒಣಗಿ ಹೋಗಿರುತ್ತದೆ...ಡಾಂಬರು?..ಸಿಗುವುದಿಲ್ಲ ಈಗ..ಎಂ.ಸೀಲು?!.. ಇದ್ಯಾಕೋ ಅತೀ ಆಯ್ತು.. ಪ್ಚ್.. ಏನು ಮಾಡುವುದು ಗೊತ್ತಾಗದೆ ಹತಾಶೆಯಿಂದ ಬಾಲ್ಕನಿಯಲ್ಲೇ ನಿಂತು ಕೆಳಗೆ ರಸ್ತೆ ನೋಡಲಾರಂಭಿಸಿದೆ. ಜನ ಎಲ್ಲ ಅವರವರದ್ದೇ ಲೋಕದಲ್ಲಿದ್ದರು. ನನ್ನ ಪರಿಸ್ಥಿತಿಯ ಅರಿವು ಯಾರಿಗೂ ಇರಲಿಲ್ಲ. ಬೀಡಾಡಿ ದನವೊಂದು ರಸ್ತೆ ಮಧ್ಯ ಕುಳಿತು ನೆಮ್ಮದಿಯಿಂದ ಮೆಲುಕು ಹಾಕುತ್ತಿತ್ತು.. ಥಟ್ಟನೇ ನನ್ನ ತಲೆಯಲ್ಲಿ ದೀಪ ಹತ್ತಿಕೊಂಡಿತು. ಓಹ್.. ನಾವು ಮೆಲುಕು ಹಾಕುವ ವಸ್ತುವೊಂದಿದೆಯಲ್ಲ ಅದನ್ನೇ ನನ್ನ ಕೀ ಪಡೆಯಲು ಬಳಸಿದರೆ ಆಗುತ್ತದೆ , ಖಂಡಿತ ಕೀ ಅದಕ್ಕೆ ಅಂಟಿಕೊಳ್ಳುತ್ತದೆ ಎನ್ನಿಸಿತು. ಖುಷಿಯಾಯಿತು..

ಅಂಗಡಿಗೆ ಹೋಗಿ ೩ ಚೂಯಿಂಗ್ ಗಮ್ ತೆಗೆದುಕೊಂಡೆ. ನಂತರ ಬೇಕಿದ್ದುದು ಒಂದು ಉದ್ದನೆಯ ಗಟ್ಟಿಯಾದ ಕೋಲು. ಹುಡುಕಲಾರಂಭಿಸಿದೆ. ಥೂ..ಈ ಬೆಂಗಳೂರಲ್ಲಿ ಕೋಲಿಗೂ ಬರ.! ಸರಿಯಾದದ್ದು ಎಲ್ಲೂ ಕಾಣಲಿಲ್ಲ. ಕೊನೆಗೆ ಅಲ್ಲೇ ಸ್ವಲ್ಪ ದೂರದಲ್ಲಿ ಮನೆ ಕಟ್ಟುತ್ತಿದ್ದುದು ಕಂಡು ಅಲ್ಲಿಗೆ ಹೋಗಿ ಒಂದು ಗಟ್ಟಿ ಗಳ ಎತ್ತಿಕೊಂಡು ಬಂದೆ. ಚೂಯಿಂಗೆ ಗಮ್ ಬಾಯಿಗೆ ಹಾಕಿಕೊಂಡು, ಸ್ವಲ್ಪ ಹೊತ್ತು ಕಚಪಚನೆ ಅಗೆದು , ಹೊರತೆಗೆದು ಕೋಲಿನ ತುದಿಗೆ ಸುತ್ತಿದೆ. ಮೊಬೈಲ್ ದೀಪ ಆನ್ ಮಾಡಿ ಕಿಟಕಿ ಒಳಗಿಂದ ಕೋಲು ಹಾಕಿ ಸ್ವಲ್ಪ ಹೊತ್ತು ತಡಕಾಡಿ ಕೀ ಮೇಲೆ ಒತ್ತಿ ಹಿಡಿದು ಮೇಲಕ್ಕೆತ್ತಿದೆ. ಜೊತೆಗೇ ಬಂತು ಕೀ. ಮೇಲೆತ್ತುವುದರಲ್ಲಿ ಕಳಚಿಕೊಂಡು ಮತ್ತೆ ಟಣ್ ಎಂದು ಬಿತ್ತು. ಒಂದೆರಡು ಸಾರಿ ಹೀಗೆ ಆಟವಾಡಿಸಿ ಕೊನೆಗೆ ಅಂಟಿಕೊಂಡು ಜಾಣ ಮರಿಯಂತೆ ಬಂತು. ನಿಧಾನಕ್ಕೆ ಕೋಲನ್ನು ಹೊರಗೆಳೆದುಕೊಂಡೆ.

ಊಫ್.. ಅಂತೂ ಕೀ ಸಿಕ್ಕಿತ್ತು. ಬೀಗವನ್ನೊಮ್ಮೆ ನೋಡಿದೆ. ಏನೂ ಗೊತ್ತಿಲ್ಲದ ಮಳ್ಳಿಯಂತೆ ಸುಮ್ಮನೇ ಜೋತುಬಿದ್ದಿತ್ತು. ಇವತ್ತೇ ನಿನ್ನ ಕೊನೆ ದಿವಸವಾಗಬೇಕಾಗಿತ್ತು. ಏನೋ ನನ್ನ ತಲೆ ಸ್ವಲ್ಪ ಓಡಿದ್ದರಿಂದ ಉಳಿದುಕೊಂಡೆ ಅಂದುಕೊಂಡು ಬೀಗ ತೆಗೆದು ಒಳಗೆ ಹೋಗಿ ಉಸ್ಸೆಂದು ಕೂತಾಗ ಏನೋ ಸಾಧನೆ ಮಾಡಿದ ಸಂತೃಪ್ತಿ.
*********
ಅದಿರ್ಲಿ.. ನಾನು ಬೇರೆ ಏನಾದರೂ ಮಾಡಬಹುದಿತ್ತಾ? ನಿಮಗೆ ಬೇರೆ ಏನಾದ್ರೂ ಉಪಾಯ ಹೊಳೆಯಿತೆ? ;-)