ಪುಟಗಳು

ಸೋಮವಾರ, ನವೆಂಬರ್ 26, 2007

ಇದು ಕಲ್ಪನೆಯಲ್ಲ,ನಿಜವೂ ಅಲ್ಲ ಮತ್ತು ನನಗೆ ತಲೆಯೂ ಕೆಟ್ಟಿಲ್ಲ!!

ಆಫೀಸ್ ಮುಗಿಸಿಕೊಂಡು ನನ್ನ ಗೆಳೆಯನ ಜೊತೆಗೆ ಅವನ ಮನೆಗೆ ಹೋದೆ. ಟ್ರಾಫಿಕ್ಕಿನಲ್ಲಿ ಸುಮಾರು ಹೊತ್ತು ಕಳೆದಿದ್ದರಿಂದ ಇಬ್ಬರಿಗೂ ಬಹಳ ಸುಸ್ತಾಗಿತ್ತು. ಹೀಗೆಯೇ ಅದೂ ಇದೂ ಮಾತಾಡುತ್ತಾ ಕೊನೆಗೆ ಅಡುಗೆ ಮಾಡುವ ಯೋಚನೆ ಬಂತು. ಇನ್ನೇನು ಇಲ್ಲಿಯೇ ಊಟ ಮಾಡಿ ನಾನು ಮನೆಗೆ ಹೋಗುವೆ ಎಂದು ಅನ್ನ ಸಾರು ಮಾಡಲು ತೀರ್ಮಾನಿಸಿದೆವು. ಹೀಗೇ ಮಾತಾಡುತ್ತಾ ಮಾತಾಡುತ್ತಾ ಒಂದು ಹಂತದ ಅಡುಗೆ ಮುಗಿಯಿತು. ಅಷ್ಟರಲ್ಲಿ ಯಾವುದೋ ಒಂದು ಸಾಮಾನು ತೆಗೆದುಕೊಂಡು ಬರುತ್ತೇನೆಂದು ನನ್ನ ಸ್ನೇಹಿತ ಅಂಗಡಿಗೆ ಹೋದ. ಸರಿ, ನಾನು ಸುಮ್ಮನೆ ಅವನ ಮನೆಯನ್ನೆಲ್ಲಾ ನೋಡುತ್ತಾ ಇದ್ದೆ. ಅವನ ಪುಸ್ತಕಗಳ ಸಂಗ್ರಹದಲ್ಲಿ ಹಲವು ಒಳ್ಳೆ ಒಳ್ಳೆಯ ಪುಸ್ತಕಗಳು ಕಣ್ಣಿಗೆ ಬಿದ್ದವು. ಅದರಲ್ಲಿ ಒಂದು ಹಸಿರು ಬಣ್ಣದ ಪುಸ್ತಕ ನನ್ನನ್ನು ಆಕರ್ಷಿಸಿತು. ಕೈಗೆತ್ತಿಕೊಂಡೆ. ಅದರ ಮೇಲೊಂದು ವಿಲಕ್ಷಣ ಮನುಷ್ಯ ಮುಖವೊಂದರ ಚಿತ್ರವಿತ್ತು. ಯಾವುದೋ ಅರ್ಥವಾಗದ ಭಾಷೆಯಲ್ಲಿ ಏನೋ ಬರೆದಿದ್ದರು. ಹೇಗಿದೆ ನೋಡೋಣ ಎಂದು ಓದಲು ಶುರುಮಾಡಿದೆ. ಆ ತಕ್ಷಣ ಅಡುಗೆ ಮನೆಯಲ್ಲೇನೋ ಸದ್ದಾಯಿತು. ಪುಸ್ತಕ ಅಲ್ಲೇ ಇಟ್ಟು ಅಡುಗೆ ಮನೆಗೆ ಹೋದರೆ ಯಾರೋ ಹೆಂಗಸೊಬ್ಬಳು ಏನೋ ಮಾಡುತ್ತಿದ್ದಳು. ನನ್ನನ್ನು ನೋಡಿ "ಇದೇನು ಇಷ್ಟೆಲ್ಲಾ ಅಕ್ಕಿ ಹಾಕಿದಿರಾ, ಯಾಕೆ ಇಷ್ಟು?" ಎಂದು ಕೇಳಿದಳು. ಅದಕ್ಕೆ ನಾನು "ನಾನೂ ಇವತ್ತು ಇಲ್ಲಿಯೇ ಊಟ ಮಾಡುತ್ತೇನೆ ಅದಕ್ಕೇ" ಎಂದೆ. ಅವಳನ್ನು ನಾನು ಇದುವರೆಗೂ ನೋಡಿರಲಿಲ್ಲ. ಇವಳು ಇಲ್ಲಿಗೇಕೆ ಬಂದಳು ಎಂದು ನನಗೆ ಅರ್ಥವಾಗಲಿಲ್ಲ. ನನ್ನನ್ನು ನೀವು ಯಾರೆಂದು ಕೇಳಲೂ ಇಲ್ಲ ! ಒಂದು ಪ್ರಶ್ನಾರ್ಥಕ ಅಥವಾ ಆಶ್ಚರ್ಯದ ಭಾವ ಕೂಡ ಅವಳ ಮುಖದಲ್ಲಿ ಸುಳಿಯಲಿಲ್ಲ. ಅವಳಿಗೆ ಮಾತ್ರ ಆ ಮನೆ, ಅಡುಗೆ ಮನೆ ಬಹಳ ಪರಿಚಯವಿದ್ದಂತೆ ಅವಳು ಅವಳ ಪಾಡಿಗೆ ಅಡುಗೆ ಮುಂದುವರೆಸಿದಳು. ಅವಳು ನನ್ನ ಸ್ನೇಹಿತನ ಹೆಂಡತಿಯಿರಬೇಕೆಂದುಕೊಂಡೆ. ಅರೆ! ಇವನ್ಯಾವಾಗ ಮದುವೆಯಾದ, ಯಾರಿಗೂ ಹೇಳಿಯೇ ಇಲ್ಲವಲ್ಲ ಎಂದು ಆಶ್ಚರ್ಯ ಪಡುತ್ತಾ ಬಂದ ಮೇಲೆ ವಿಚಾರಿಸ ಬೇಕೆಂದು ಮತ್ತೆ ಹೋಗಿ ಆ ಪುಸ್ತಕವನ್ನು ಕೈಗೆತ್ತಿಕೊಂಡೆ. ಆ ಪುಸ್ತಕದ ಹಾಳೆಗಳೆಲ್ಲಾ ಒಂದು ರೀತಿ ಹಳದಿ ಬಣ್ಣದಲ್ಲಿದ್ದವು. ಅಲ್ಲೆ ಒರಗಿ ಕುಳಿತುಕೊಂಡು ಓದಲು ಶುರುಮಾಡಿದೆ. ಕಥೆ ಬಹಳ ಚೆನ್ನಾಗಿತ್ತು. ಅದರಲ್ಲೇ ತಲ್ಲೀನನಾಗಿಬಿಟ್ಟೆ.

ಹಾಗೇ ಓದುತ್ತಿದ್ದಂತೆ ಆ ಕಥೆಯೆಲ್ಲವು ಒಂದು ಸಿನೆಮಾದ ರೂಪದಲ್ಲಿ ನೋಡುತ್ತಿರುವಂತೆ ಭಾಸವಾಗತೊಡಗಿತು। ಸಿನೆಮಾದಲ್ಲಿ ಒಂದು ಊರಿನ ದೃಶ್ಯ ಕಂಡು ಬಂತು. ಆ ಊರು ಒಂದು ರೀತಿ ಹಳೇ ಕಾಲದ ಊರಿನಂತಿತ್ತು. ಅದು ಮಳೆಗಾಲವೆಂಬಂತೆ ಕಾಣುತ್ತಿತ್ತು. ಊರೆಲ್ಲಾ ಹಸಿರಿನಿಂದ ತುಂಬಿದ್ದು ಊರಿನ ಕಟ್ಟಡಗಳೆಲ್ಲಾ ಕರಿ ಕಲ್ಲಿನಿಂದ ಕಟ್ಟಲ್ಪಟ್ಟಿದ್ದವು. ಜನರೆಲ್ಲರೂ ನೀಳವಾದ ಕಪ್ಪು ಬಣ್ಣದ ಉಡುಪುಗಳನ್ನು ಧರಿಸಿ ಓಡಾಡುತ್ತಿದ್ದರು. ಇಡೀ ಊರಿನಲ್ಲಿ ಎಲ್ಲಿ ನೋಡಿದರೂ ಹಸಿರು ಕಪ್ಪು ಬಣ್ಣವೇ ಕಾಣುತ್ತಿತ್ತು. ಅಲ್ಲಿನ ಜನರೆಲ್ಲರೂ ಚೈನಾದವರ ರೀತಿ ಮಂಗೋಲಾಯ್ಡ್ ಜನರಾಗಿದ್ದರು. ಹಾಗೇ ನೋಡುತ್ತಾ ನೋಡುತ್ತಾ ನಾನೂ ಆ ಊರಿನೊಳಗೆ ಪ್ರವೇಶಿಸಿಬಿಟ್ಟೆ. ಈಗ ನಾನು ಸಿನೆಮಾ ನೋಡುತ್ತಿರಲಿಲ್ಲ, ನಾನು ಆ ಊರಿನೊಳಗೇ ಇದ್ದೆ. ಯಾವುದೋ ಹಳೆ ಕಟ್ಟಡದ ಗೋಡೆಯೊಂದರ ಮೇಲೆ ನಿಂತಿದ್ದೆ. ನಾನು ನೋಡುತ್ತಿದ್ದಂತೆಯೇ ಅಲ್ಲಿ ಒಬ್ಬ ಕಪ್ಪು ನಿಲುವಂಗಿ ಧರಿಸಿದ್ದ ಮನುಷ್ಯನೊಬ್ಬ ಕಲಾಷ್ನಿಕೋವ್ ಮಾದರಿಯ ಬಂದೂಕನ್ನು ಕೈಯಲ್ಲಿ ಹಿಡಿದುಕೊಂಡು ಬಂದ. ಅವನಿಗೆ ನಾನು ನೋಡುತ್ತಿರುವುದು ಗೊತ್ತಿರಲಿಲ್ಲ. ಬಂದವನೇ ಅಲ್ಲೇ ಪಕ್ಕದ ಗೋಡೆಯೊಂದರ ಹಿಂದೆ ನಿಂತಿದ್ದ ವ್ಯಕ್ತಿಯೊಬ್ಬನ ತಲೆಗೆ ಗುಂಡು ಹೊಡೆದು ಸಾಯಿಸಿಬಿಟ್ಟ. ಅವನು ಮಾಡಿದ ಕೊಲೆಯನ್ನು ಯಾರೂ ನೋಡಲಿಲ್ಲ ಎಂದು ಅವನು ಅಂದುಕೊಂಡಿದ್ದ ಆದರೆ ಅದೇ ಸಮಯಕ್ಕೆ ಅಲ್ಲಿಗೆ ಬಂದಿದ್ದ ಪುಟ್ಟ ಹುಡುಗನೊಬ್ಬ ಆ ಕೊಲೆಯನ್ನು ನೋಡಿಬಿಟ್ಟಿದ್ದ. ಅದು ಕೊಲೆಗಾರನಿಗೂ ತಿಳಿದು ಹೋಯಿತು. ಬಂದೂಕಿನ ಸಮೇತ ಆ ಹುಡುಗನ ಹತ್ತಿರ ಹೋದವನು ಆ ಹುಡುಗನನ್ನು ಯಾಕೋ ಸುಮ್ಮನೇ ಬಿಟ್ಟುಬಿಟ್ಟ. ಈಗ ಕೊಲೆಯ ವಿಷಯ ಗೊತ್ತಿದ್ದುದ್ದು ನಾವು ಮೂರು ಜನಕ್ಕೆ ಮಾತ್ರ. ನನಗೆ ಗೊತ್ತಿರುವ ವಿಷಯ ಇನ್ಯಾರಿಗೂ ಗೊತ್ತಿಲ್ಲ. ಆ ಪುಟ್ಟ ಹುಡುಗ ಅದನ್ನು ನೋಡಿದ್ದರೂ ಅವನಿಗೆ ಅದೇನೆಂದು ತಿಳಿದೂ ಇಲ್ಲ. ಆದ್ದರಿಂದ ಆ ಕೊಲೆ ವಿಷಯ ಹೊರಬರಲಿಲ್ಲ. ಆದರೆ ಆ ಕೊಲೆಗಾರ ಮಾತ್ರ ಪುಟ್ಟ ಹುಡುಗನ ಮೇಲೆ ಕಣ್ಣಿಟ್ಟು ಕಾಯುತ್ತಲೇ ಇದ್ದ.

ಈಗ ಆ ಪುಟ್ಟ ಹುಡುಗ ದೊಡ್ಡವನಾಗಿದ್ದ, ಕೊಲೆಗಾರ ಒಂದು ದೊಡ್ಡ ಕರಿ ನಾಯಿಯ ರೂಪ ಹೊಂದಿ ಆ ಹುಡುಗನ ಜೊತೆಯೇ ಇರುತ್ತಿದ್ದ. ನಾನೂ ಕೂಡ ಅವರೊಡನೆ ಸೇರಿಕೊಂಡಿದ್ದೆ. ನಾವು ಮೂರು ಜನ ಕೂಡಿ ಸುಮ್ಮನೇ ಸುತ್ತುತ್ತಿದ್ದೆವು. ನಾವು ಇದ್ದುದ್ದು ’ಕಾಶಿ’ ನಗರದಲ್ಲಿ ಎಂದು ತಿಳಿಯಿತು. ಇನ್ನೂ ಅದು ಹಳೇ ರಾಜರ ಕಾಲದ ಊರಿನಂತಿತ್ತು. ಆ ಊರಿನಲ್ಲಿ ಸಂತೆ ನೆಡೆಯುವಾಗ ಹಾಕಿಕೊಳ್ಳುವಂತಹ ಅಂಗಡಿಗಳೇ ಜಾಸ್ತಿಯಾಗಿದ್ದವು. ಜನ ಅಲ್ಲಿಂದಿಲ್ಲಿಗೆ ಸುಮ್ಮನೇ ತಿರುಗಾಡುತ್ತಿದ್ದರು. ಇಡೀ ಕಾಶಿ ನಗರಕ್ಕೆ ಕೇಳಿಸುವಂತೆ ದೊಡ್ಡ ದೊಡ್ಡ ಲೌಡ್ ಸ್ಪೀಕರ್ ಗಳು ಇದ್ದವು. ನಾವು ಅಲ್ಲೇ ಊರ ಪಕ್ಕದಲ್ಲೇ ಇರುವ ನದೀ ತೀರದ ಕಟ್ಟೆಯೊಂದಕ್ಕೆ ಹೋದಾಗ ಇದ್ದಕ್ಕಿಂದ್ದಂತೇ ಆ ಸ್ಪೀಕರ್ ನಲ್ಲಿ ಕನ್ನಡ ಸಿನೆಮಾವೊಂದರ ಸಂಭಾಷಣೆಗಳು ಬರತೊಡಗಿದವು. ಅದು ಇಡೀ ಕಾಶಿ ನಗರಕ್ಕೇ ಕೇಳಿಸುತ್ತಿತ್ತು. ಇದು ಯಾವುದೋ ಇನ್ನೂ ಬಿಡುಗಡೆಯಾಗದ ಸಿನೆಮಾ, ಉಪೇಂದ್ರ ನಾಯಕ ನಟ ಎಂದು ಯಾರೋ ಹೇಳಿದರು. ಸ್ವಲ್ಪ ಹೊತ್ತಾದ ಮೇಲೆ ಉಪೇಂದ್ರನ ಮಾತುಗಳು ಶುರುವಾಗುತ್ತಿದ್ದಂತೇ ಇಡೀ ನಗರಕ್ಕೆ ನಗರವೇ ಹರ್ಷೋದ್ಗಾರ ಮಾಡಿತು. ! ಇಲ್ಲೂ ಕನ್ನಡ, ಉಪೇಂದ್ರ ಇಷ್ಟು ಪ್ರಸಿದ್ಧಿಯಾಗಿದೆಯಲ್ಲ ಎಂದು ನಾನು ಆಶ್ಚರ್ಯ, ಹೆಮ್ಮೆ ಪಟ್ಟುಕೊಂಡೆ.

ನಂತರ ಆ ಹುಡುಗ ನಮಗೆ ಸಮುದ್ರದಲ್ಲಿ ತಿಮಿಂಗಲಗಳನ್ನು ತೋರಿಸುತ್ತೀನಿ ಎಂದು ಕರೆದುಕೊಂಡು ಹೋದ। ಸುಮಾರು ನೀಲ ತಿಮಿಂಗಿಲಗಳು ಸಮುದ್ರ ತೀರದ ಹತ್ತಿರವೇ ಆಡುತ್ತಿದ್ದವು. ನಾನು ಅಲ್ಲೇ ಕೊಂಡುಕೊಂಡ ಬೋಂಡಾವನ್ನು ತಿನ್ನುತ್ತಾ ಜೊತೆಗಿದ್ದ ಕರಿ ನಾಯಿಗೂ ಎಸೆಯುತ್ತಿದ್ದೆ. ಅದು ಹಾರಿ ಹಾರಿ ಹಿಡಿದು ತಿನ್ನುತ್ತಿತ್ತು. ಹಾಗೆ ಒಮ್ಮೆ ಒಂದು ಬೋಂಡಾವನ್ನು ಅರ್ಧಕ್ಕೆ ಕಚ್ಚಿ ತಿಂದು ಕೈಯಲ್ಲಿ ಉಳಿದಿದ್ದ ಅರ್ಧ ಭಾಗವನ್ನು ನೋಡಿದೆ. ಅದು ಮಾಂಸದಿಂದ ಮಾಡಿದಂತಿತ್ತು. ಸಸ್ಯಾಹಾರಿಯಾದ ನಾನು ಮಾಂಸವನ್ನು ತಿಂದುಬಿಟ್ಟೆನಲ್ಲಾ ಎಂದು ಕೈಯಲ್ಲಿದ್ದುದನ್ನು ಬಿಸಾಡಿದೆ. ಬಹಳ ಬೇಜಾರಾಗುತ್ತಿತ್ತು. ಬಿಸಾಡಿದ ಭಾಗವನ್ನು ಗಮನವಿಟ್ಟು ನೋಡಿದೆ. ಆವಾಗ ತಿಳಿಯಿತು ಅದು ಮುಸುಕಿನ ಜೋಳದ ಬೋಂಡವೆಂದು ! ಸದ್ಯ, ಮಾಂಸ ತಿನ್ನಲಿಲ್ಲವೆಂದು ಸಮಾಧಾನವಾಯಿತು. ನಂತರ ಎಲ್ಲರೂ ಊಟಕ್ಕೆ ಹೋದೆವು. ಒಂದು ಜಾಗದಲ್ಲಿ ನೂರಾರು ಜನ ಉಣ್ಣುತ್ತಿದ್ದರು. ನಾವೂ ಕುಳಿತುಕೊಂಡೆವು. ನಮ್ಮ ಹಿಂದೆಯೇ ಬಚ್ಚಲುಕೋಣೆಗಳಿದ್ದವು. ಅಂತಹ ಜಾಗದಲ್ಲಿ ಊಟಕ್ಕೆ ಹಾಕಿದ್ದರು. ಹವ್ಯಕ ಕನ್ನಡ ಮಾತಾಡುವ ಕೇಸರಿ ಪಂಚೆ ಉಟ್ಟುಕೊಂಡ ಜನರು ನಮಗೆ ಅನ್ನ, ತಿಳಿಸಾರು ಬಡಿಸಿದರು. ಮಾತಾಡುತ್ತಾ ಊಟ ಮುಗಿಸಿ ನಿದ್ದೆ ಹೋಗಿಬಿಟ್ಟೆ.

**********

ಇದು ಕಥೆಯಲ್ಲ, ಕಲ್ಪನೆಯಲ್ಲ, ನಿಜನಡೆದದ್ದೂ ಅಲ್ಲ, ಇದಕ್ಕೆ ತಲೆಬುಡವಿಲ್ಲ, ಅರ್ಥವಂತೂ ಮೊದಲೇ ಇಲ್ಲ. ಆದರೆ ಇವಿಷ್ಟನ್ನೂ ನಾನು ಕಂಡಿದ್ದಂತೂ ಸುಳ್ಳಲ್ಲ. ಹಾಗಿದ್ದರೆ ಮತ್ತೇನಿರಬಹುದು ಇದು?! ಇಂತಹ, ಇದಕ್ಕಿಂತ ವಿಚಿತ್ರಗಳು ಎಲ್ಲರ ಅನುಭವಕ್ಕೂ ಬಂದಿರಬಹುದು. ಹೆಚ್ಚಾಗಿ ಇವು ನೆನಪಿನಲ್ಲಿ ಉಳಿಯುವುದಿಲ್ಲ. ಉಳಿದರೂ ಸ್ಪಷ್ಟವಾಗಿ ಏನೂ ನೆನಪಿರುವುದಿಲ್ಲ. ಅಪರೂಪಕ್ಕೊಮ್ಮೆ ಹೀಗೆ ಕಂಡದ್ದು ಅಷ್ಟೂ ನೆನಪಿನಲ್ಲುಳಿದು ಪರಮ ಆಶ್ಚರ್ಯ ಕೊಡುತ್ತದೆ. ಹಾಗಿದ್ದರೆ ಇದು ’ಏನು’ ಎಂದು ನಿಮಗೇನಾದರೂ ಗೊತ್ತಾಯಿತೆ?! :)

12 ಕಾಮೆಂಟ್‌ಗಳು:

ಸುಶ್ರುತ ದೊಡ್ಡೇರಿ ಹೇಳಿದರು...

Fantasy! ಚೆನ್ನಾಗಿಯೇ ಮೂಡಿಬಂದಿದೆ. ನೀನು ನೋಟ್ ಕೊಡದೆ, ಬೇರೆ ಟೈಟ್ಲ್ ಕೊಟ್ಟಿದ್ದಿದ್ದರೆ ಇನ್ನೂ ಚೆನ್ನಾಗಿರ್ತಿತ್ತು. Some content in your blog, which is out of 'Vikasavada'! Good. :-)

ರಂಜನಾ ಹೆಗ್ಡೆ ಹೇಳಿದರು...

ತುಂಬಾ ಚನ್ನಾಗಿ ಇದೆ ವಿಕ್ಕಿ,
nice one.
ತುಂಬಾ metured ಬರಹ. ಓದ್ತಾ ಓದ್ತಾ ನಂಗೆ ಏನೋ ಆದ ಹಾಗೆ ಆಯಿತು.
ಆ ಮಾಂಸ ಅಲ್ಲಾ ಮೆಕ್ಕೆ ಜೋಳ ಇದು ಮೊದಲೆಲ್ಲೋ ಕೇಳಿದ ಹಾಗೆ ಇತ್ತು. ನಿನ್ನ ನಿಜ ಜೀವನದ ಅನುಭವ ಇರಬಹುದು ಅಲ್ವಾ?
ಆದರು ಆ ಹೆಂಗಸು ಆ ಅಡುಗೆ ಮನೆಲಿ ಇತ್ತಲ್ಲಾ ಅದು ಹೆಂಗೆ ಮರಾಯಾ!?
ಬಾಕಿ ಎಲ್ಲಾ ಬುಕ್ ಓದಿ ಕಲ್ಪಿಸಿಕೊಂಡಿದ್ದು ಇರಬಹುದು ಆದರೆ ಆ ಹೆಂಗಸು?! ಕೇಳಿದ್ಯಾ ನಿನ್ನ ಫ್ರೆಂಡ್ ಗೆ ಅವಳು ಯಾರು ಅಂಥ.

ಶಂಕರ ಪ್ರಸಾದ ಹೇಳಿದರು...

ಗುರೂ, ನೀನು ನೋಡಿದ್ದು ಕನಸೋ, ಕಲ್ಪನೆಯೋ ಏನೋ ಅರ್ಥ ಆಗ್ತಾ ಇಲ್ಲ. ಆದ್ರೆ, ನಿನಗೆ ಪುಸ್ತಕಗಳನ್ನು ಓದು ಅಭ್ಯಾಸ, ಹವ್ಯಾಸ ಇರೋದ್ರಿಂದ ಈ ಥರಾ ಕಲಸುಮೇಲೋಗರ ನಿದ್ರೆಯಿಲ್ಲದ ಕನಸು ಕಂಡಿರುವೆ.ನಿನ್ನ ಕನಸಿನಲ್ಲಿ ಕಂಡಿರುವ ಕಾಶಿ ನಗರವು ನನಗೆ "ಆವರಣ"ದ ಎಫೆಕ್ಟ್, ಇನ್ನು ಆ ಮಂಗೋಲದ ಜನರನ್ನು ಕಂಡದ್ದು ಗೊತ್ತಿಲ್ಲ, ಕಲಾಷ್ನಿಕೋವ್ನಿಂದ ಕೊಂದಿದ್ದು ಮೋಸ್ಟ್ಲಿ ರವಿ ಬೆಳಗೆರೆಯ "ಮುಸ್ಲಿಂ" ಓದಿದ್ದರ ಕಿಕ್ ಇರಬಹುದು. ಇನ್ನು ಕಾಶಿಯಲ್ಲಿ ಉಪೇಂದ್ರನ ಚಿತ್ರದ ಡೈಲಾಗ್ ಕೇಳಿದ್ದು ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು ಎಂಬ ಕನ್ನಡಾಭಿಮಾನವನ್ನು ಇಟ್ಟಿರುವ ನಿನ್ನ ಮನಸ್ಸನ್ನು ಬಿಂಬಿಸುತ್ತದೆ. ನೀನು ಕಂಡಿದ್ದು ಕಲ್ಪನೆಯೋ, ಕನಸೋ, ಹಗಲುಗನಸೋ ಅಂತ ತೀರ್ಮಾನಿಸಲು ಆಗಲ್ಲ..ಅಥವಾ ಅದನ್ನು "ಹುಚ್ಚಲ್ಲಾ ಬೆಪ್ಪಲ್ಲಾ, ಶಿವಲೀಲೆ" ಅಂಥಾರಲ್ಲ, ಅದಿರಬಹುದೇ ??? ಒಟ್ಟಿನಲ್ಲಿ ರಸವತ್ತಾಗಿದೆ. ಮನುಷ್ಯನ ಯೋಚನಾ ಲಹರಿಗೆ ಸೀಮೆಯಿಲ್ಲ ಎಂಬುದು ತಿಳಿಯುತ್ತದೆ. ನಂಗೂ ಕೂಡಾ ತುಂಬಾ ಸಲ ಹೀಗೆ ಅನುಭವ ಆಗಿದೆ, ಆದ್ರೆ ಹೇಳಿಕೊಂಡಿಲ್ಲಾ ಅಷ್ಟೇ..

---------------------------------
ನಿಮ್ಮವನು,

ಕಟ್ಟೆ ಶಂಕ್ರ

Seema ಹೇಳಿದರು...

ವಿಕಾಸ,
ಓದುತ್ತಾ ಹೋದಂತೆ ಒಳಗೇ ಸೇರಿಹೋದಂತೆ ಆಗುವ ಅನುಭವ ಚೆನ್ನಾಗಿದೆ. ಕನಸು ಅಂತ ಅನಿಸ್ತು. ಎಲ್ಲರಿಗೂ ಇಂಥ ಅಸಂಬದ್ಧ ಕನಸುಗಳು ಬೀಳುತ್ತವೆ. ಶಂಕರ ಅವರು ಹೇಳಿರುವಂತೆ ಅವೆಲ್ಲಾ ಕಾರಣಗಳೂ ಇರಬಹುದು. ನನಗೂ ಕೆಲವೊಮ್ಮೆ ಇಂಥ ಕನಸುಗಳು ಬೀಳುವುದುಂಟು. ಬರೆದಿರಲಿಲ್ಲ ಅಷ್ಟೇ. ನೀನು ಬರೆದಿದ್ದು ತುಂಬಾ ಚೆನ್ನಾಗಿದೆ. :)

Harish - ಹರೀಶ ಹೇಳಿದರು...

ತಲೆ ಬುಡ ಇಲ್ಲದಿದ್ದರೂ ನಿಜವಾಗಿಯೂ ಚೆನ್ನಾಗಿದೆ.
ಕನಸೋ ಇದು... ನನಸೋ ಇದು... :)

ಸುಪ್ರೀತ್.ಕೆ.ಎಸ್. ಹೇಳಿದರು...

ಬರಹದ ಕೊನೆಯಲ್ಲಿ ಇನ್ನೇನು...... ಎನ್ನುವಷ್ಟರಲ್ಲಿ ನನಗೆ ಎಚ್ಚರಾಗಿತ್ತು ಎನ್ನುವ ಸಾಲುಗಳಿಗಾಗಿ ಕಾಯುತ್ತಿದ್ದೆ... ನಿರಾಸೆಯಾಯಿತು.
ಬರಹ ಚೆನ್ನಾಗಿದೆ...

-------
http:// kalaravablog.blogspot.com

ಶೀಲಾ ಹೇಳಿದರು...

ವಿಕಾಸ್
ನಿನ್ನ ಅನುಭವ ಬಹುಶಃ ನಾವು ಗೀತೆಯಲ್ಲಿ ಓದಿದಂತಹ ಮಾಯೆಯಾಗಿರಬೇಕು. ಇಂತಹ ಅನುಭವ ಪಡೆಯಲು ನಾವೇನು ಬಹಳ ದೊಡ್ಡ ದೈವಭಕ್ತರಾಗಬೇಕಿಂದಿಲ್ಲ. ಆ ಅನುಭವವನ್ನು ನೀನು ಸರಿಯಾಗಿ ವಿಶ್ಲೇಷಿದರೆ ಮತ್ತೇನೋ ಹೊಳೆಯಬಹುದು. ಘಟನೆಯ ಉತ್ತರ ಭಾಗವನ್ನು ಬರೆದಿಲ್ಲವಾದರಿಂದ ಬಹುಶಃ ಎಲ್ಲವೂ ನಿನಗೆ ಸರಿಯಾಗಿ ಅರ್ಥವಾಗುವಷ್ಟರಲ್ಲೇ ಮಾಯವಾಗಿರಬಹುದು. ಇಂತಹ ಅನುಭವಗಳು ನಮಗೆ ಜೀವನವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, ಬದಲಿಸಲು ಕಾರಣವಾಗುತ್ತದೆ ಎಂದು ನನ್ನ ಅಭಿಪ್ರಾಯ. ಏನಾದರೂ ಇರಲಿ, ನೀನು ಇದನ್ನು ಬರೆದುದು ಓಳ್ಳೆಯದಾಯಿತು. ನಮಗೆ ಜೀವನವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ನೀನು ಸುಪ್ತದೀಪ್ತಿಯವರ ಬ್ಲಾಗ್ ನಲ್ಲಿ ಪುನ್ಃಜನ್ಮದ ಕ್ಯಾಂಪನ ಬಗ್ಗೆ ಓದಿದೆಯೇನೋ? ಬಹುಶಃ ನಿನ್ನ ಹಿಂದಿನ ಜನ್ಮ ಅನುಭವನೂ ಇರಬಹುದಲ್ಲವೆ? ಆ ಪುಸ್ತಕವು ಸಹಾಯ ಮಾಡಿತೆಂದು ತೋರುತ್ತದೆ

ಶಾಂತಲಾ ಭಂಡಿ ಹೇಳಿದರು...

ವಿಕಾಸ್ ಅವರೆ...
ಕನಸನ್ನು ನನಸೇನೋ ಎನಿಸುವಂತೆ ಬರೆದ ರೀತಿ......ವ್ಹಾವ್! ಎಷ್ಟು ಚೆನ್ನಾಗಿದೆ. ಕತೆಯಾಳಕ್ಕೆ ಇಳಿಸುತ್ತಾ, ಭೀತಿಯನ್ನು ಬಿಂಬಿಸಿ ಒಮ್ಮೆಲೇ ಕರಗಿಸಿಬಿಡುವಂತಿದೆ. ಅಬ್ಬಾ!
ತುಂಬಾ ಚೆನ್ನಾಗಿದೆ.

ಅನಾಮಧೇಯ ಹೇಳಿದರು...

ವಿಕಾಸ್,
ನಿಮ್ಮ ಈ ಅನುಭವವನ್ನು ಮನೋವಿಜ್ಞಾನ lucid dreaming ಎಂಬ ಹೆಸರಿನಿಂದ ಕರೆಯುತ್ತೆ. ಅದರ ಬಗ್ಗೆ ಕೊಂಚ ತಿಳಿದರೆ, ಸುಲಭವಾಗಿ ಹಿಂದಿನ ಜನ್ಮ, ಮುಂದಿನ ಜನ್ಮಗಳ ಬಗೆಗಿನ ಕಲ್ಪನೆಗಳು ಮರೆಯಾಗುತ್ತವೆ.
http://en.wikipedia.org/wiki/Lucid_dream
ಸುಪ್ರೀತ್

ವಿಕಾಸ್ ಹೆಗಡೆ ಹೇಳಿದರು...

ಸುಶ್ರುತ, ಹೌದ ಮಾರಾಯ, ಎಂತಾರು ಲೇಖನ ಬರೆಯದ್ಕಿಂತ ಅದ್ಕೆ ಶೀರ್ಷಿಕೆ ಕೊಡದೇ ಕಷ್ಟ ಮಾರಾಯ. :)
thanx

ರಂಜನಾ,ಎಲ್ಲೋ ಕೇಳ್ದಂಗಿದ್ದ !!! ಅದೆಂಗೆ ಮಾರಾಯ್ತಿ?!!
ಆ ಹೆಂಗಸಿನ ಬಗ್ಗೆ ನನ್ ಫ್ರೆಂಡ್ ಕೇಳಣ ಅಂದ್ರೆ ಅವ ಬರದ್ರೊಳಗೆ ನಾನೇ ಎಲ್ಲಿಗೋ ಹೋಗ್ಬಿಟಿದ್ನಲ್ಲ !! :)

ಶಂಕ್ರಣ್ಣ, ನಾನೂ ಕೂಡ ನಿನ್ನ ಹಾಗೇ ಯೋಚ್ನೆ ಮಾಡಿದ್ದೆ. ನೀವು ಹೇಳಿದ್ದು ಸರಿ ಅನ್ನಿಸ್ತು ನಂಗೆ.

ಸೀಮಕ್ಕ,ಹೌದು.. ಎಂತೆತಾ ಅಸಂಬದ್ಧ ಇರ್ತು ಅಂದ್ರೆ ಒಂದೊಂದು ಸಲ... ಹ್ಮ್ಮ್.. ಹೇಳಲ್ಲಾಗ್ತಿಲ್ಲೆ ಬಿಡು ಅದು.
thank u :)

ಹರೀಶ್, thanx :)

ಶೀಲಕ್ಕ, ನಿಮ್ಮ ವಿವರಣೆ ಸೂಪರ್.. ನಾನು ಹೀಗೆಲ್ಲಾ ಕೂಡ ಇರ್ಬೋದು ಅಂತ ಯೋಚ್ನೆನೆ ಮಾಡಿರ್ಲಿಲ್ಲ ! thanx

ಶಾಂತಲಾ, thanx..ಓದಿದ್ದಕ್ಕೇ ಹೀಗಾದ್ರೆ ಇನ್ನು ಕನಸು ಬಿದ್ದಾಗ ನನಗೆ ಹೇಗೆ ಭೀತಿಯಾಗಿರಬಹುದೋ ನೀವೇ ಯೋಚಿಸಿ :)

ಸುಪ್ರೀತ್, ನೀವು ಕೊಟ್ಟ ಲಿಂಕ್ ಮೂಲಕ ’ಲ್ಯೂಸಿಡ್ ಡ್ರೀಮಿಂಗ್’ ಬಗ್ಗೆ ಓದಿದೆ. ನಾನು ಸುಮ್ನೆ ಕನಸು ಅಂತ ಬಿಟ್ಟಿದ್ದೆ, ಆದ್ರೆ ಅದನ್ನೂ ಕೂಡ ಅಧ್ಯಯನ ಮಾಡಿದ್ದಾರೆ ಅದಕ್ಕೂ ವಿವರಣೆ ಇದೆ ಅಂತ ನೋಡಿ ಆಶ್ಚರ್ಯ ಆಯಿತು. ಒಂದು ಒಳ್ಳೆ ಮಾಹಿತಿ ತಿಳಿದುಕೊಳ್ಳುವಂತೆ ಮಾಡಿದ್ದಕ್ಕೆ ಬಹಳ ಥ್ಯಾಂಕ್ಸ್.
ಏನಾರೂ ಒಂದು ಅನುಭವಕ್ಕೆ ಬಂದಾಗ ’ಅಬ್ಬಾ ಅದ್ಭುತ’ ಎಂದು ಸುಮ್ಮನೇ ಬಿಡುವುದಕ್ಕಿಂತ ಅದು ಹೇಗೆ, ಏಕೆ ಎಂದು ತಿಳಿದುಕೊಳ್ಳಬೇಕು ಎನ್ನುವ ನಿಮ್ಮ ಮನೋಭಾವದಿಂದ ನಾನೂ ಕಲಿತೆ.

ಅನಾಮಧೇಯ ಹೇಳಿದರು...

ವಿಕಾಸ, ಇಂತಹ ಅನುಭವಗಳು ಆಗಿಂದಾಗ್ಗೆ ಆಗ್ತಾ ಇರುತ್ವೆ. ಮತ್ತೆ ಕೆಲವೊಂದು ಸಲ ಭವಿಷ್ಯತ್ತಿನ ಬಗ್ಗೆ ಕನಸುಗಳು ಬೀಳುತ್ತಿರುತ್ತವೆ ಆದರೆ ಅವುಗಳು ಅರಿಯಾಗಿ ನೆನಪಿರುವುದಿಲ್ಲ. ಮತ್ತೇ ಅದೇ ಘಟನೆ ನೆಡೆದಾಗ ಅಥವಾ ನಾವೇ ಆ ಜಾಗಕ್ಕೆ(ಕನಸಿನಲ್ಲಿ ಕಂಡ ಜಾಗ)ಹೋದಾಗ ನಮಗಡು ಪರಿಚಿತ ಅನ್ನಿಸುತ್ತದೆ. ನನಗೆ ಈ ತರಹದ ಅನುಭವಗಳು ಆಗಿವೆ..ಹಾಗೂ ಚಿತ್ರವಿಚಿತ್ರ ನೀವು ಹೇಳಿದ ಹಾಗೆ ಕನಸುಗಳು ಕಲ್ಪನೆಗಳು ಆದದ್ದೂ ಉಂಟು. ಸಾಮಾನ್ಯವಾಗಿ ಇಂತಹ ಅನುಭವಗಳು ಎಲ್ಲಾರಿಗೂ ಆಗುತ್ತೆ ಮತ್ತು ಆಗ್ತಾಇರುತ್ತೆ ಅಲ್ವಾ.
ಆದರೂ ನೀ ನನ್ನ ಮರೆತೀದಿ ಅಂತ ಅನ್ಸಾಕತ್ತೇತಿ..
ಈ ಬರಹ ನನ್ನ ಕಲ್ಪನೆಗಳ ಲೋಕಕ್ಕೆ ಕರೆದೊಯ್ತು ಅಂತ ನಾನು ಬೇರೆ ಹೇಳಬೇಕಿಲ್ಲ...ತುಂಬ ಚೆನ್ನಾಗಿದೆ..ಬ್ಲಾಗ ಅಪಡೇಟ್ ಆಗಿಂದ ಒಂದು ಪತ್ರ ಕಳಿಸಪ್ಪಾ...ಗಿರೀಶ ರಾಜನಾಳ.

ವಿಕಾಸ್ ಹೇಳಿದರು...

ಗಿರೀಶ್, ಧನ್ಯವಾದಗಳು... ಖಂಡಿತ ತಿಳಿಸ್ತೀನಿ ಇನ್ಮೆಲೆ.