ಪುಟಗಳು

ಸೋಮವಾರ, ನವೆಂಬರ್ 26, 2007

ಇದು ಕಲ್ಪನೆಯಲ್ಲ,ನಿಜವೂ ಅಲ್ಲ ಮತ್ತು ನನಗೆ ತಲೆಯೂ ಕೆಟ್ಟಿಲ್ಲ!!

ಆಫೀಸ್ ಮುಗಿಸಿಕೊಂಡು ನನ್ನ ಗೆಳೆಯನ ಜೊತೆಗೆ ಅವನ ಮನೆಗೆ ಹೋದೆ. ಟ್ರಾಫಿಕ್ಕಿನಲ್ಲಿ ಸುಮಾರು ಹೊತ್ತು ಕಳೆದಿದ್ದರಿಂದ ಇಬ್ಬರಿಗೂ ಬಹಳ ಸುಸ್ತಾಗಿತ್ತು. ಹೀಗೆಯೇ ಅದೂ ಇದೂ ಮಾತಾಡುತ್ತಾ ಕೊನೆಗೆ ಅಡುಗೆ ಮಾಡುವ ಯೋಚನೆ ಬಂತು. ಇನ್ನೇನು ಇಲ್ಲಿಯೇ ಊಟ ಮಾಡಿ ನಾನು ಮನೆಗೆ ಹೋಗುವೆ ಎಂದು ಅನ್ನ ಸಾರು ಮಾಡಲು ತೀರ್ಮಾನಿಸಿದೆವು. ಹೀಗೇ ಮಾತಾಡುತ್ತಾ ಮಾತಾಡುತ್ತಾ ಒಂದು ಹಂತದ ಅಡುಗೆ ಮುಗಿಯಿತು. ಅಷ್ಟರಲ್ಲಿ ಯಾವುದೋ ಒಂದು ಸಾಮಾನು ತೆಗೆದುಕೊಂಡು ಬರುತ್ತೇನೆಂದು ನನ್ನ ಸ್ನೇಹಿತ ಅಂಗಡಿಗೆ ಹೋದ. ಸರಿ, ನಾನು ಸುಮ್ಮನೆ ಅವನ ಮನೆಯನ್ನೆಲ್ಲಾ ನೋಡುತ್ತಾ ಇದ್ದೆ. ಅವನ ಪುಸ್ತಕಗಳ ಸಂಗ್ರಹದಲ್ಲಿ ಹಲವು ಒಳ್ಳೆ ಒಳ್ಳೆಯ ಪುಸ್ತಕಗಳು ಕಣ್ಣಿಗೆ ಬಿದ್ದವು. ಅದರಲ್ಲಿ ಒಂದು ಹಸಿರು ಬಣ್ಣದ ಪುಸ್ತಕ ನನ್ನನ್ನು ಆಕರ್ಷಿಸಿತು. ಕೈಗೆತ್ತಿಕೊಂಡೆ. ಅದರ ಮೇಲೊಂದು ವಿಲಕ್ಷಣ ಮನುಷ್ಯ ಮುಖವೊಂದರ ಚಿತ್ರವಿತ್ತು. ಯಾವುದೋ ಅರ್ಥವಾಗದ ಭಾಷೆಯಲ್ಲಿ ಏನೋ ಬರೆದಿದ್ದರು. ಹೇಗಿದೆ ನೋಡೋಣ ಎಂದು ಓದಲು ಶುರುಮಾಡಿದೆ. ಆ ತಕ್ಷಣ ಅಡುಗೆ ಮನೆಯಲ್ಲೇನೋ ಸದ್ದಾಯಿತು. ಪುಸ್ತಕ ಅಲ್ಲೇ ಇಟ್ಟು ಅಡುಗೆ ಮನೆಗೆ ಹೋದರೆ ಯಾರೋ ಹೆಂಗಸೊಬ್ಬಳು ಏನೋ ಮಾಡುತ್ತಿದ್ದಳು. ನನ್ನನ್ನು ನೋಡಿ "ಇದೇನು ಇಷ್ಟೆಲ್ಲಾ ಅಕ್ಕಿ ಹಾಕಿದಿರಾ, ಯಾಕೆ ಇಷ್ಟು?" ಎಂದು ಕೇಳಿದಳು. ಅದಕ್ಕೆ ನಾನು "ನಾನೂ ಇವತ್ತು ಇಲ್ಲಿಯೇ ಊಟ ಮಾಡುತ್ತೇನೆ ಅದಕ್ಕೇ" ಎಂದೆ. ಅವಳನ್ನು ನಾನು ಇದುವರೆಗೂ ನೋಡಿರಲಿಲ್ಲ. ಇವಳು ಇಲ್ಲಿಗೇಕೆ ಬಂದಳು ಎಂದು ನನಗೆ ಅರ್ಥವಾಗಲಿಲ್ಲ. ನನ್ನನ್ನು ನೀವು ಯಾರೆಂದು ಕೇಳಲೂ ಇಲ್ಲ ! ಒಂದು ಪ್ರಶ್ನಾರ್ಥಕ ಅಥವಾ ಆಶ್ಚರ್ಯದ ಭಾವ ಕೂಡ ಅವಳ ಮುಖದಲ್ಲಿ ಸುಳಿಯಲಿಲ್ಲ. ಅವಳಿಗೆ ಮಾತ್ರ ಆ ಮನೆ, ಅಡುಗೆ ಮನೆ ಬಹಳ ಪರಿಚಯವಿದ್ದಂತೆ ಅವಳು ಅವಳ ಪಾಡಿಗೆ ಅಡುಗೆ ಮುಂದುವರೆಸಿದಳು. ಅವಳು ನನ್ನ ಸ್ನೇಹಿತನ ಹೆಂಡತಿಯಿರಬೇಕೆಂದುಕೊಂಡೆ. ಅರೆ! ಇವನ್ಯಾವಾಗ ಮದುವೆಯಾದ, ಯಾರಿಗೂ ಹೇಳಿಯೇ ಇಲ್ಲವಲ್ಲ ಎಂದು ಆಶ್ಚರ್ಯ ಪಡುತ್ತಾ ಬಂದ ಮೇಲೆ ವಿಚಾರಿಸ ಬೇಕೆಂದು ಮತ್ತೆ ಹೋಗಿ ಆ ಪುಸ್ತಕವನ್ನು ಕೈಗೆತ್ತಿಕೊಂಡೆ. ಆ ಪುಸ್ತಕದ ಹಾಳೆಗಳೆಲ್ಲಾ ಒಂದು ರೀತಿ ಹಳದಿ ಬಣ್ಣದಲ್ಲಿದ್ದವು. ಅಲ್ಲೆ ಒರಗಿ ಕುಳಿತುಕೊಂಡು ಓದಲು ಶುರುಮಾಡಿದೆ. ಕಥೆ ಬಹಳ ಚೆನ್ನಾಗಿತ್ತು. ಅದರಲ್ಲೇ ತಲ್ಲೀನನಾಗಿಬಿಟ್ಟೆ.

ಹಾಗೇ ಓದುತ್ತಿದ್ದಂತೆ ಆ ಕಥೆಯೆಲ್ಲವು ಒಂದು ಸಿನೆಮಾದ ರೂಪದಲ್ಲಿ ನೋಡುತ್ತಿರುವಂತೆ ಭಾಸವಾಗತೊಡಗಿತು। ಸಿನೆಮಾದಲ್ಲಿ ಒಂದು ಊರಿನ ದೃಶ್ಯ ಕಂಡು ಬಂತು. ಆ ಊರು ಒಂದು ರೀತಿ ಹಳೇ ಕಾಲದ ಊರಿನಂತಿತ್ತು. ಅದು ಮಳೆಗಾಲವೆಂಬಂತೆ ಕಾಣುತ್ತಿತ್ತು. ಊರೆಲ್ಲಾ ಹಸಿರಿನಿಂದ ತುಂಬಿದ್ದು ಊರಿನ ಕಟ್ಟಡಗಳೆಲ್ಲಾ ಕರಿ ಕಲ್ಲಿನಿಂದ ಕಟ್ಟಲ್ಪಟ್ಟಿದ್ದವು. ಜನರೆಲ್ಲರೂ ನೀಳವಾದ ಕಪ್ಪು ಬಣ್ಣದ ಉಡುಪುಗಳನ್ನು ಧರಿಸಿ ಓಡಾಡುತ್ತಿದ್ದರು. ಇಡೀ ಊರಿನಲ್ಲಿ ಎಲ್ಲಿ ನೋಡಿದರೂ ಹಸಿರು ಕಪ್ಪು ಬಣ್ಣವೇ ಕಾಣುತ್ತಿತ್ತು. ಅಲ್ಲಿನ ಜನರೆಲ್ಲರೂ ಚೈನಾದವರ ರೀತಿ ಮಂಗೋಲಾಯ್ಡ್ ಜನರಾಗಿದ್ದರು. ಹಾಗೇ ನೋಡುತ್ತಾ ನೋಡುತ್ತಾ ನಾನೂ ಆ ಊರಿನೊಳಗೆ ಪ್ರವೇಶಿಸಿಬಿಟ್ಟೆ. ಈಗ ನಾನು ಸಿನೆಮಾ ನೋಡುತ್ತಿರಲಿಲ್ಲ, ನಾನು ಆ ಊರಿನೊಳಗೇ ಇದ್ದೆ. ಯಾವುದೋ ಹಳೆ ಕಟ್ಟಡದ ಗೋಡೆಯೊಂದರ ಮೇಲೆ ನಿಂತಿದ್ದೆ. ನಾನು ನೋಡುತ್ತಿದ್ದಂತೆಯೇ ಅಲ್ಲಿ ಒಬ್ಬ ಕಪ್ಪು ನಿಲುವಂಗಿ ಧರಿಸಿದ್ದ ಮನುಷ್ಯನೊಬ್ಬ ಕಲಾಷ್ನಿಕೋವ್ ಮಾದರಿಯ ಬಂದೂಕನ್ನು ಕೈಯಲ್ಲಿ ಹಿಡಿದುಕೊಂಡು ಬಂದ. ಅವನಿಗೆ ನಾನು ನೋಡುತ್ತಿರುವುದು ಗೊತ್ತಿರಲಿಲ್ಲ. ಬಂದವನೇ ಅಲ್ಲೇ ಪಕ್ಕದ ಗೋಡೆಯೊಂದರ ಹಿಂದೆ ನಿಂತಿದ್ದ ವ್ಯಕ್ತಿಯೊಬ್ಬನ ತಲೆಗೆ ಗುಂಡು ಹೊಡೆದು ಸಾಯಿಸಿಬಿಟ್ಟ. ಅವನು ಮಾಡಿದ ಕೊಲೆಯನ್ನು ಯಾರೂ ನೋಡಲಿಲ್ಲ ಎಂದು ಅವನು ಅಂದುಕೊಂಡಿದ್ದ ಆದರೆ ಅದೇ ಸಮಯಕ್ಕೆ ಅಲ್ಲಿಗೆ ಬಂದಿದ್ದ ಪುಟ್ಟ ಹುಡುಗನೊಬ್ಬ ಆ ಕೊಲೆಯನ್ನು ನೋಡಿಬಿಟ್ಟಿದ್ದ. ಅದು ಕೊಲೆಗಾರನಿಗೂ ತಿಳಿದು ಹೋಯಿತು. ಬಂದೂಕಿನ ಸಮೇತ ಆ ಹುಡುಗನ ಹತ್ತಿರ ಹೋದವನು ಆ ಹುಡುಗನನ್ನು ಯಾಕೋ ಸುಮ್ಮನೇ ಬಿಟ್ಟುಬಿಟ್ಟ. ಈಗ ಕೊಲೆಯ ವಿಷಯ ಗೊತ್ತಿದ್ದುದ್ದು ನಾವು ಮೂರು ಜನಕ್ಕೆ ಮಾತ್ರ. ನನಗೆ ಗೊತ್ತಿರುವ ವಿಷಯ ಇನ್ಯಾರಿಗೂ ಗೊತ್ತಿಲ್ಲ. ಆ ಪುಟ್ಟ ಹುಡುಗ ಅದನ್ನು ನೋಡಿದ್ದರೂ ಅವನಿಗೆ ಅದೇನೆಂದು ತಿಳಿದೂ ಇಲ್ಲ. ಆದ್ದರಿಂದ ಆ ಕೊಲೆ ವಿಷಯ ಹೊರಬರಲಿಲ್ಲ. ಆದರೆ ಆ ಕೊಲೆಗಾರ ಮಾತ್ರ ಪುಟ್ಟ ಹುಡುಗನ ಮೇಲೆ ಕಣ್ಣಿಟ್ಟು ಕಾಯುತ್ತಲೇ ಇದ್ದ.

ಈಗ ಆ ಪುಟ್ಟ ಹುಡುಗ ದೊಡ್ಡವನಾಗಿದ್ದ, ಕೊಲೆಗಾರ ಒಂದು ದೊಡ್ಡ ಕರಿ ನಾಯಿಯ ರೂಪ ಹೊಂದಿ ಆ ಹುಡುಗನ ಜೊತೆಯೇ ಇರುತ್ತಿದ್ದ. ನಾನೂ ಕೂಡ ಅವರೊಡನೆ ಸೇರಿಕೊಂಡಿದ್ದೆ. ನಾವು ಮೂರು ಜನ ಕೂಡಿ ಸುಮ್ಮನೇ ಸುತ್ತುತ್ತಿದ್ದೆವು. ನಾವು ಇದ್ದುದ್ದು ’ಕಾಶಿ’ ನಗರದಲ್ಲಿ ಎಂದು ತಿಳಿಯಿತು. ಇನ್ನೂ ಅದು ಹಳೇ ರಾಜರ ಕಾಲದ ಊರಿನಂತಿತ್ತು. ಆ ಊರಿನಲ್ಲಿ ಸಂತೆ ನೆಡೆಯುವಾಗ ಹಾಕಿಕೊಳ್ಳುವಂತಹ ಅಂಗಡಿಗಳೇ ಜಾಸ್ತಿಯಾಗಿದ್ದವು. ಜನ ಅಲ್ಲಿಂದಿಲ್ಲಿಗೆ ಸುಮ್ಮನೇ ತಿರುಗಾಡುತ್ತಿದ್ದರು. ಇಡೀ ಕಾಶಿ ನಗರಕ್ಕೆ ಕೇಳಿಸುವಂತೆ ದೊಡ್ಡ ದೊಡ್ಡ ಲೌಡ್ ಸ್ಪೀಕರ್ ಗಳು ಇದ್ದವು. ನಾವು ಅಲ್ಲೇ ಊರ ಪಕ್ಕದಲ್ಲೇ ಇರುವ ನದೀ ತೀರದ ಕಟ್ಟೆಯೊಂದಕ್ಕೆ ಹೋದಾಗ ಇದ್ದಕ್ಕಿಂದ್ದಂತೇ ಆ ಸ್ಪೀಕರ್ ನಲ್ಲಿ ಕನ್ನಡ ಸಿನೆಮಾವೊಂದರ ಸಂಭಾಷಣೆಗಳು ಬರತೊಡಗಿದವು. ಅದು ಇಡೀ ಕಾಶಿ ನಗರಕ್ಕೇ ಕೇಳಿಸುತ್ತಿತ್ತು. ಇದು ಯಾವುದೋ ಇನ್ನೂ ಬಿಡುಗಡೆಯಾಗದ ಸಿನೆಮಾ, ಉಪೇಂದ್ರ ನಾಯಕ ನಟ ಎಂದು ಯಾರೋ ಹೇಳಿದರು. ಸ್ವಲ್ಪ ಹೊತ್ತಾದ ಮೇಲೆ ಉಪೇಂದ್ರನ ಮಾತುಗಳು ಶುರುವಾಗುತ್ತಿದ್ದಂತೇ ಇಡೀ ನಗರಕ್ಕೆ ನಗರವೇ ಹರ್ಷೋದ್ಗಾರ ಮಾಡಿತು. ! ಇಲ್ಲೂ ಕನ್ನಡ, ಉಪೇಂದ್ರ ಇಷ್ಟು ಪ್ರಸಿದ್ಧಿಯಾಗಿದೆಯಲ್ಲ ಎಂದು ನಾನು ಆಶ್ಚರ್ಯ, ಹೆಮ್ಮೆ ಪಟ್ಟುಕೊಂಡೆ.

ನಂತರ ಆ ಹುಡುಗ ನಮಗೆ ಸಮುದ್ರದಲ್ಲಿ ತಿಮಿಂಗಲಗಳನ್ನು ತೋರಿಸುತ್ತೀನಿ ಎಂದು ಕರೆದುಕೊಂಡು ಹೋದ। ಸುಮಾರು ನೀಲ ತಿಮಿಂಗಿಲಗಳು ಸಮುದ್ರ ತೀರದ ಹತ್ತಿರವೇ ಆಡುತ್ತಿದ್ದವು. ನಾನು ಅಲ್ಲೇ ಕೊಂಡುಕೊಂಡ ಬೋಂಡಾವನ್ನು ತಿನ್ನುತ್ತಾ ಜೊತೆಗಿದ್ದ ಕರಿ ನಾಯಿಗೂ ಎಸೆಯುತ್ತಿದ್ದೆ. ಅದು ಹಾರಿ ಹಾರಿ ಹಿಡಿದು ತಿನ್ನುತ್ತಿತ್ತು. ಹಾಗೆ ಒಮ್ಮೆ ಒಂದು ಬೋಂಡಾವನ್ನು ಅರ್ಧಕ್ಕೆ ಕಚ್ಚಿ ತಿಂದು ಕೈಯಲ್ಲಿ ಉಳಿದಿದ್ದ ಅರ್ಧ ಭಾಗವನ್ನು ನೋಡಿದೆ. ಅದು ಮಾಂಸದಿಂದ ಮಾಡಿದಂತಿತ್ತು. ಸಸ್ಯಾಹಾರಿಯಾದ ನಾನು ಮಾಂಸವನ್ನು ತಿಂದುಬಿಟ್ಟೆನಲ್ಲಾ ಎಂದು ಕೈಯಲ್ಲಿದ್ದುದನ್ನು ಬಿಸಾಡಿದೆ. ಬಹಳ ಬೇಜಾರಾಗುತ್ತಿತ್ತು. ಬಿಸಾಡಿದ ಭಾಗವನ್ನು ಗಮನವಿಟ್ಟು ನೋಡಿದೆ. ಆವಾಗ ತಿಳಿಯಿತು ಅದು ಮುಸುಕಿನ ಜೋಳದ ಬೋಂಡವೆಂದು ! ಸದ್ಯ, ಮಾಂಸ ತಿನ್ನಲಿಲ್ಲವೆಂದು ಸಮಾಧಾನವಾಯಿತು. ನಂತರ ಎಲ್ಲರೂ ಊಟಕ್ಕೆ ಹೋದೆವು. ಒಂದು ಜಾಗದಲ್ಲಿ ನೂರಾರು ಜನ ಉಣ್ಣುತ್ತಿದ್ದರು. ನಾವೂ ಕುಳಿತುಕೊಂಡೆವು. ನಮ್ಮ ಹಿಂದೆಯೇ ಬಚ್ಚಲುಕೋಣೆಗಳಿದ್ದವು. ಅಂತಹ ಜಾಗದಲ್ಲಿ ಊಟಕ್ಕೆ ಹಾಕಿದ್ದರು. ಹವ್ಯಕ ಕನ್ನಡ ಮಾತಾಡುವ ಕೇಸರಿ ಪಂಚೆ ಉಟ್ಟುಕೊಂಡ ಜನರು ನಮಗೆ ಅನ್ನ, ತಿಳಿಸಾರು ಬಡಿಸಿದರು. ಮಾತಾಡುತ್ತಾ ಊಟ ಮುಗಿಸಿ ನಿದ್ದೆ ಹೋಗಿಬಿಟ್ಟೆ.

**********

ಇದು ಕಥೆಯಲ್ಲ, ಕಲ್ಪನೆಯಲ್ಲ, ನಿಜನಡೆದದ್ದೂ ಅಲ್ಲ, ಇದಕ್ಕೆ ತಲೆಬುಡವಿಲ್ಲ, ಅರ್ಥವಂತೂ ಮೊದಲೇ ಇಲ್ಲ. ಆದರೆ ಇವಿಷ್ಟನ್ನೂ ನಾನು ಕಂಡಿದ್ದಂತೂ ಸುಳ್ಳಲ್ಲ. ಹಾಗಿದ್ದರೆ ಮತ್ತೇನಿರಬಹುದು ಇದು?! ಇಂತಹ, ಇದಕ್ಕಿಂತ ವಿಚಿತ್ರಗಳು ಎಲ್ಲರ ಅನುಭವಕ್ಕೂ ಬಂದಿರಬಹುದು. ಹೆಚ್ಚಾಗಿ ಇವು ನೆನಪಿನಲ್ಲಿ ಉಳಿಯುವುದಿಲ್ಲ. ಉಳಿದರೂ ಸ್ಪಷ್ಟವಾಗಿ ಏನೂ ನೆನಪಿರುವುದಿಲ್ಲ. ಅಪರೂಪಕ್ಕೊಮ್ಮೆ ಹೀಗೆ ಕಂಡದ್ದು ಅಷ್ಟೂ ನೆನಪಿನಲ್ಲುಳಿದು ಪರಮ ಆಶ್ಚರ್ಯ ಕೊಡುತ್ತದೆ. ಹಾಗಿದ್ದರೆ ಇದು ’ಏನು’ ಎಂದು ನಿಮಗೇನಾದರೂ ಗೊತ್ತಾಯಿತೆ?! :)

ಶುಕ್ರವಾರ, ನವೆಂಬರ್ 2, 2007

ಚಿರಂಜೀವಿ ಮಗಳು ಓಡೋದ್ರೆ ನಮ್ಗೇನು ?

ಚಿರಂಜೀವವಲ್ಲದ ಸಂಬಂಧಗಳು - ಒಂದು ಯೋಚನೆ
ಮೊನ್ನೆ ಹೀಗೆ ಗೆಳೆಯರೆಲ್ಲಾ ಮಾತಾಡ್ತಾ ಕೂತಿದ್ದಾಗ ತೆಲುಗು ಚಿತ್ರನಟ ಚಿರಂಜೀವಿಯ ಮಗಳು ಓಡಿ ಹೋದ ವಿಷ್ಯ ಬಂತು. ಒಬ್ಬ ಅಂದ " ಹೇಳಿ ಕೇಳಿ ಚಿರಂಜೀವಿಯ ಮಗಳು ಅವಳು, ಅವ್ಳಿಗೇನು ಕಡಿಮೆ ಆಗಿತ್ತು ಮಾರಾಯ ಓಡೋಗಕ್ಕೆ?! " ಎಲ್ಲರೂ ದನಿಗೂಡಿಸಿದರು ಅದಕ್ಕೆ. ಎಲ್ಲರ ಬಾಯ್ಮುಚ್ಚಿಸುವಂತೆ ಮತ್ತೊಬ್ಬನಿಂದ ಬಂತು ಮಾತು "ಚಿರಂಜೀವಿ ಮಗಳಾದರೆ ಏನಂತೆ ಅವಳಿಗೂ ಏನೋ ಕೊರತೆ ಇತ್ತು ಅನ್ನಿಸುತ್ತೆ . ನಿಮಗೆ ಜೀವನದಲ್ಲಿ ಏನೂ ಕೊರತೆಯೇ ಇಲ್ವಾ ಆತ್ಮಸಾಕ್ಷಿಯಾಗಿ ಹೇಳಿ ?". ಒಂದಿಬ್ಬರು ಹಣದ ಕೊರತೆ ಇದೆ ಎಂದು ಒಪ್ಪಿಕೊಂಡರು. ನನ್ನನ್ನೂ ಹಿಡಿದು ಇನ್ನು ಕೆಲವರು ಎಲ್ಲವೂ ತೃಪ್ತಿಕರವಾಗಿದ್ದಂತೆ ಕಂಡರೂ ಹಾಗೆ ಹೊರಗಡೆ ಹೇಳಲಾಗದಂಥ ಏನೋ ಬೇಕು ಅನ್ನುವ ಕೊರತೆ ಇದೆ ನಮಗೂ ಇದೆ ಎಂದು ಒಪ್ಪಿಕೊಂಡೆವು. "ಹಾಗೆಯೇ ಚಿರಂಜೀವಿ ಮಗಳು ಕೂಡ. ಅವಳಿಗೆ ಎಲ್ಲಾ ಇದೆ ಅಂತ ನಮಗನಿಸಿದರೂ ಏನೋ ಕೊರತೆಯನ್ನು ಅವಳು ಅನುಭವಿಸುತ್ತಿದ್ದಳು ಅನಿಸುತ್ತದೆ. ಅವಳಿಗೆ ಬೇಕಾದ್ದು ಬೇರೆಲ್ಲೋ ಸಿಗುತ್ತದೆ ಎಂಬುದನ್ನು ಅವಳು ಯೋಚಿಸಿಯೇ ತೀರ್ಮಾನ ಮಾಡಿ ಹೋಗಿದ್ದಾಳೆ " ಎಂದ. ಅಲ್ಲಿಗೆ ಎಲ್ಲರೂ ಬಾಯಿ ಮುಚ್ಚಿಕೊಂಡರು. ಮಾತು ಬೇರೆಡೆಗೆ ಹೊರಳಿತು.

ನಾನು ಯೋಚಿಸುತ್ತಿದ್ದೆ. ಹಾಗಿದ್ದರೆ ಇಷ್ಟು ದಿನ ಇದ್ದುದರಲ್ಲಿ ಏನೋ ಕೊರತೆ ಕಂಡಾಗ ಅದನ್ನು ಬಿಟ್ಟು ಹೋಗಿ ಬಿಡುವುದು ನ್ಯಾಯವೇ? ಅಷ್ಟಕ್ಕೂ ಇವತ್ತು ಒಂದು ಕಡೆ ಕೊರತೆ ಕಂಡು ಬಿಟ್ಟು ಹೋದವರಿಗೆ ಅವರು ಹೋದಲ್ಲಿ ಮತ್ತೆ ಇನ್ನೇನೋ ಕೊರತೆ ಕಂಡುಬಂದರೆ ಅದನ್ನೂ ಬಿಟ್ಟು ಹೋಗಿಬಿಡುತ್ತಾರಾ. ಹಾಗಿದ್ದರೆ ಇದೊಂದು ಸಂಪೂರ್ಣ ಸ್ವಾರ್ಥದ ಪ್ರಕ್ರಿಯೆಯಲ್ಲದೇ ಮತ್ತಿನ್ನೇನು ! ಸ್ವಾರ್ಥ ಇರಬೇಕಾದ್ದು ಹೌದು. ಅದಿಲ್ಲದೆ ಮನುಷ್ಯ ಬೆಳೆಯಲು ಸಾಧ್ಯವೇ ಇಲ್ಲ ನಿಜ. ಆದರೆ ಇದು ಈಗಿರುವ ಕಂಪನಿಯಲ್ಲಿ ಸಂಬಳ, ಸೌಲಭ್ಯ ಕಡಿಮೆ ಎಂದು ಅದನ್ನು ಬಿಟ್ಟು ಬೇರೆ ಕಂಪನಿಗೆ ಹೋದಂತೆ ಅಲ್ಲ. ಇದು ನಮ್ಮ ರಕ್ತ, ಸ್ನೇಹ ಸಂಬಂಧಗಳಿಗೆ, ನಂಬಿಕೆ ವಿಶ್ವಾಸ ಪ್ರೀತಿ ಎನ್ನುವ ಭಾವನೆಗಳಿಗೆ ಸಮಾಧಿ ಕಟ್ಟುವ ಸ್ವಾರ್ಥ !

ಚಿರಂಜೀವಿಯನ್ನೇ ತೆಗೆದುಕೊಳ್ಳಿ ಅಥವಾ ಯಾವ ತಂದೆ ತಾಯಿಯನ್ನೇ ತೆಗೆದುಕೊಳ್ಳಿ, ಅವರು ಉದ್ದೇಶಪೂರ್ವಕವಾಗಿ ತಮ್ಮ ಮಕ್ಕಳಿಗೆ ಇಂತದ್ದನ್ನು ಕಡಿಮೆ ಮಾಡಬೇಕೆಂದು ಅಂದುಕೊಂಡಿರುವುದಿಲ್ಲ. ಇವತ್ತು ಚಿರಂಜೀವಿಯಂಥ ಚಿರಂಜೀವಿಯನ್ನೇ ತೊರೆದು ಅವನ ಮಗಳು ಇನ್ಯಾರೊಂದಿಗೋ ಓಡಿಹೋದಳೆಂದಳೆ ಅವಳಿಗೆ ತನ್ನ ತಂದೆ ತಾಯಿಯಿಂದ ದೊರೆಯದ ಏನೋ ಒಂದು ಮತ್ತೊಬ್ಬರಲ್ಲಿ ದೊರೆತಿದೆ ಎಂಬುದು ಎಷ್ಟು ಸತ್ಯವೋ ನಂತರ ಮತ್ತೇನೋ ಅವಳು ಬಯಸಿದ್ದು ಆ ಮತ್ತೊಬ್ಬನಲ್ಲಿ ಸಿಗದಿದ್ದಾಗ ಅವನನ್ನೂ ತೊರೆಯುತ್ತಾಳೆಂಬುದು ಅಷ್ಟೆ ಸತ್ಯವಲ್ಲವೆ!.

ಇದು ಬರಿ ಹುಡುಗಿಯರು ಈ ರೀತಿ ಮಾಡುತ್ತಾರೆ ಅಥವಾ ಚಿರಂಜೀವಿ ಮಗಳು ಮಾಡಿದಳು ಎಂಬ ಅರ್ಥವಲ್ಲ. ಇಂತವು ಬೇಕಾದಷ್ಟು ಸಾಮಾನ್ಯ ಜನರಲ್ಲೂ ನೆಡೆಯುತ್ತಲೇ ಇರುತ್ತದೆ. ಹುಡುಗರೂ ಕೂಡ ಇದರಿಂದ ಹೊರತಾಗಿಲ್ಲ. ಪ್ರೀತಿಯೆಂಬುದು ಸ್ವಾರ್ಥದ ಇನ್ನೊಂದು ಸ್ವಷ್ಟ ಮುಖವೆಂದು ಅಭಿಪ್ರಾಯ ಬರುವುದೇ ಆವಾಗ. ಯಾರಿಗಾದರೂ ನಾವು ನಮ್ಮ ಕೈಲಾದಷ್ಟೂ ಪ್ರೀತಿ ಕೊಟ್ಟರೂ ಕೂಡ ಅವರು ನಮ್ಮನ್ನೇ ಬಿಟ್ಟು ಹೋದಾಗ ನಾನು ಇಷ್ಟು ಪ್ರೀತಿ ಕೊಟ್ಟರೂ ಬಿಟ್ಟು ಹೋದರು ಎಂಬ ನೋವಿಗಿಂತ ಅವರ್ಯಾಕೆ ನಮ್ಮನ್ನು ಬಿಟ್ಟರು ನಮ್ಮ ಪ್ರೀತಿಯಲ್ಲಿ ಏನು ಕೊರತೆಯಿತ್ತು ಎನ್ನುವ ನೋವೇ ಹೆಚ್ಚಿರುತ್ತದೆಂಬ ಭಾವನೆ ನನ್ನದು. ನಮ್ಮಿಂದ ಅವರಿಗೆ ಏನು ಕೊರತೆಯಾಯಿತೆಂಬುದು ನಮಗೆ ತಿಳಿಯುವುದು ಹೇಗೆ ! ತಾನು ಏನು ಕಡಿಮೆ ಮಾಡಿದ್ದೇನೆಂದು, ಅಥವಾ ತಾನು ಕೊಡಲಾರದಂತಹುದ್ದನ್ನು ಇನ್ಯಾರೋ ಕೊಡುತ್ತಾರೆಂದುಕೊಂಡು ತನ್ನನ್ನೇ ಬಿಟ್ಟುಹೋದ ಮಗಳಿಂದ ಅಪ್ಪನಿಗೆ ತಾನೇನು ಕೊಡಬೇಕಿತ್ತು ಅಥವಾ ತನ್ನ ಮಗಳು ತನ್ನಿಂದೇನು ಬಯಸಿದ್ದಳು ಎಂದು ತಿಳಿಯುವುದು ಹೇಗೆ ! ಇದರಲ್ಲಿ ಎಲ್ಲವನ್ನೂ ಕೇಳಿ ಪಡೆಯಲು ಸಾಧ್ಯವಿಲ್ಲದಿರುವುದರಿಂದ ತಾವಾಗಿಯೇ ತಿಳಿದುಕೊಳ್ಳುವಂತದ್ದೂ ಬಹಳಷ್ಟಿರುತ್ತದೆ.

ಇದು ಎಲ್ಲಾ ಮಾನವ ಸಂಬಂಧಗಳಿಗೂ ಅನ್ವಯಿಸುವಂತದ್ದು. ಎಲ್ಲಾ ಸಂಬಂಧಗಳಲ್ಲೂ ಇಂತದ್ದೇ ಸ್ವಾರ್ಥವು ಬರುತ್ತಾ ಹೋದಾಗ ಯಾವ ಸಂಬಂಧಕ್ಕೂ ಅರ್ಥವಿಲ್ಲದಂತಾಗುವುದಿಲ್ಲವೆ? ವರ್ಷಗಟ್ಟಲೇ ಪ್ರೀತಿ ಮಾಡಿ ಯಾವುದೊ ಒಂದು ಬಾಲಿಶ ವಿಷಯಕ್ಕೆ ಬೇರಾದ ಪ್ರೇಮಕ್ಕೂ, ವರ್ಷಗಟ್ಟಲೇ ಸಂಸಾರ ಮಾಡಿ ಚಿಕ್ಕ ಜಗಳ ಬೆಳೆದು ವಿಚ್ಛೇದನದವರೆಗೆ ನೆಡೆದ ದಾಂಪತ್ಯಕ್ಕೂ ಅರ್ಥ ಕಳೆದು ಹೋಗುವುದೇ ಆವಾಗ. ಎಷ್ಟೋ ಕಾಲದಿಂದ ಜೊತೆ ಇದ್ದು, ಮನಸ್ಸಿಗೆ ಒಪ್ಪಿಗೆಯಾಗಿ ನಂತರ ಮತ್ಯಾವತ್ತೋ ಅವರ ಹೆಸರು ಕೇಳಿದರೆ ಕಿರಿಕಿರಿಯಾಗುವ ಸ್ಥಿತಿ ಬರುವದೇಕೆ? ಹಾಗಿದ್ದರೆ ಎಲ್ಲವೂ ನೀರಿನ ಮೇಲಿನ ಗುಳ್ಳೆಯಂತೆ ಅಂದುಕೊಂಡು ಯಾವುದನ್ನೂ ಹಚ್ಚಿಕೊಳ್ಳದೇ, ಯಾರಿಗೂ ಪ್ರೀತಿ ಕೊಡದೇ ಸಾಧ್ಯವಾದರೆ ತನ್ನನ್ನಷ್ಟೇ ತಾನು ಪ್ರೀತಿ ಮಾಡಿಕೊಂಡು ಬದುಕುವುದೇ ಜೀವನವಾ ? ಏಕೆಂದರೆ ನಿನ್ನೆ ’ನಿನ್ನ ಬಿಟ್ಟು ಹೇಗಿರಲಿ’ ಎಂದವರು ಇವತ್ತು ’ನಿನ್ನ ದ್ವೇಷಿಸುತ್ತೇನೆ’ ಅಂದು ನಾಳೆ ’ನೀನ್ಯಾರು?’ ಅನ್ನುವದಿಲ್ಲ ಎಂದೇನು ಖಾತರಿ?! ಹಾಗಿದ್ದರೆ better ಅನ್ನಿಸುವೆಡೆಗೆ ನೆಡೆದು ಹೋಗುವುದೂ ತಪ್ಪಾ?! ಯಾಕೆಂದರೆ ಯಾವ ಮಗಳಿಗೂ ತನ್ನಪ್ಪನಿಗೆ ತನ್ನನ್ನು ಪ್ರೀತಿ ಮಾಡು ಎಂದು ಗೋಗರೆಯಲಿಕ್ಕಂತೂ ಆಗದಿದ್ದರೂ ಆ ಪ್ರೀತಿ ಪಡೆಯುವದಕ್ಕಾಗಿ ಬೇರೊಬ್ಬನೊಂದಿಗೆ ಹೋಗುವದಕ್ಕಂತೂ ಸಾಧ್ಯವಿದೆಯಲ್ಲ !! ಅಂದರೆ ಒಟ್ಟಿನಲ್ಲಿ ಈ ಜಗತ್ತಿನಲ್ಲಿ ಯಾವುದೂ ’ಚಿರಂಜೀವಿ’(ಶಾಶ್ವತ) ಯಲ್ಲ !