ಪುಟಗಳು

ಬುಧವಾರ, ಆಗಸ್ಟ್ 29, 2007

ಬೋಡಿಲಿಂಗ

ಭರ್ರೆನ್ನುತ್ತಾ ಬರುತ್ತದೆ ಬಿ.ಎಂ.ಟಿ.ಸಿ ಬಸ್ಸು. ತಕ್ಷಣವೇ ಏನೋ ಆಯಿತೆನ್ನುವ ಹಾಗೆ ಜನರ ಗುಂಪು ಆ ಕಡೆಗೆ ಓಡುತ್ತದೆ. ಒಂದೇ ಸಮನೆ ಬಾಗಿಲಲ್ಲಿ ನೂಕಾಟ, ತಳ್ಳಾಟ, ತಿಕ್ಕಾಟ. ಎಲ್ಲರಿಗೂ ಸೀಟು ಹಿಡಿಯುವ ತವಕ. ಡ್ರೈವರ್ರು, ಕಂಡಕ್ಟರ್ರು ಮೂಕ ಪ್ರೇಕ್ಷಕರು. ದಿನಾ ಸಾಯುವವರಿಗೆ ಅತ್ತೂ ಅತ್ತೂ ಅವರೂ ಸತ್ತಿದ್ದಾರೆ. ಹೇಗೋ ಸಾವರಿಸಿಕೊಂಡು ಈತನೂ ಹತ್ತುತ್ತಾನೆ. ಬಾಗಿಲಲ್ಲೇ ಮುಕುರಿಕೊಂಡ ಜನ. ಒಳಗೆ ಜಾಗವಿದ್ದರೂ ಅಲ್ಲೇ ಅಂಟು ಹಾಕಿಕೊಂಡು ನಿಂತಿದ್ದಾರೆ. ಕೇಳಿದರೆ ಎಲ್ಲರೂ ನೆಕ್ಸ್ಟ್ ಸ್ಟಾಪು ! “ಒಳಗೆ ಹೋಗ್ರಿ, ಹಿಂದಕ್ಕೆ ಹೋಗ್ರಿ ಖಾಲಿ ಇದೆ....” ಕಂಡಕ್ಟರನ ಕೂಗು ಅರಣ್ಯ ರೋದನ. ಇವನ ದುರಾದೃಷ್ಟ . ಸೀಟಂತೂ ಇಲ್ಲ. ಸೀಟು ಸಿಕ್ಕವರಿಗೆಲ್ಲಾ ಏನೋ ತೃಪ್ತಿ. ಇನ್ನು ಕೆಲವೆ ಹೊತ್ತಿನಲ್ಲಿ ಆ ಸೀಟಿಗೂ ನಮಗೂ ಸಂಬಂಧವಿಲ್ಲವೆಂದು ಗೊತ್ತಿದ್ದರೂ ತಾವು ಹಿಡಿದಿರುವುದು ಸಿಂಹಾಸನವೇನೋ ಎಂಬಂತ ಭಾವ.“ಯೋ ನಿಂಗ್ಯಾವನಯ್ಯ ಬ್ಯಾಗ್ ಇಡಕ್ಕೇಳಿದ್ದು ? ಸಿಟಿ ಬಸ್ಸಲ್ಲಿ ರಿಸರ್ವೇಷನ್ ಇಲ್ಲ ಹೋಗಯ್ಯ” ಮೂರನೇ ಸಾಲಿನಲ್ಲೇನೋ ಜಗಳ. ಅದರೆಡೆಗೊಂದು ಈತನ ನಿಸ್ತೇಜ ನೋಟ. ನಿಂತುಕೊಳ್ಳಲಾದರೂ ಒಳ್ಳೆ ಜಾಗ ಸಿಗುತ್ತದೆಯೊ ಎಂದು ನೋಡಿದವನಿಗೆ ಹಿಂದುಗಡೆ ಕೊನೆ ಕಂಬವೊಂದು ಆಶಾಕಿರಣ. ಅವಸವಸರವಾಗಿ ಹೋಗಿ ಆ ಕಂಬಕ್ಕೆ ಬೆನ್ನು ಚೆಲ್ಲಿದವನಿಂದ ಒಂದು ಸಣ್ಣ ನಿಟ್ಟುಸಿರು.

ಕಂಬಕ್ಕೊರಗಿಯೇ ಈತ ಒಮ್ಮೆ ಸುತ್ತಲೂ ಕಣ್ಣು ಹಾಯಿಸುತ್ತಾನೆ. ಯಾರಾದರೂ ಮುಂದಿನ ಸ್ಟಾಪಿನಲ್ಲಿ ಇಳಿಯಬಹುದಾ, ತನಗೆ ಸೀಟು ಸಿಗುತ್ತದಾ? ಅವನ್ಯಾವನದೋ ಕೈಯಲ್ಲಿ ದೊಡ್ಡ ಚೀಲ, ಅವನು ಖಂಡಿತ ಇಳಿಯುವುದಿಲ್ಲ, ಬ್ಯಾಗಿನೊಳಗೆ ಕೈಹಾಕಿ ನೋಟ್ಸು ತೆಗೆಯುತ್ತಿರುವ ಕಾಲೇಜು ಹುಡುಗ, ಕೈಯಲ್ಲಿ ವಿಜಯ ಕರ್ನಾಟಕ ಹಿಡಿದು ಸೆಟ್ಲಾಗಿರುವ ಅಂಕಲ್ಲು, ಎಪ್ಫೆಮ್ ಕೇಳಲು ಕಿವಿಗೆ ಇಯರ್ ಫೋನ್ ತುರುಕಿಕೊಳ್ಳುತ್ತಿರುವ ಯುವಕ, ಕೊನೆಯ ಸಾಲಿನ ಅಷ್ಟೂ ಸೀಟುಗಳನ್ನು ಆಕ್ರಮಿಸಿ ಯುದ್ಧ ಗೆದ್ದವರಂತೆ ಕೂತು “ಲೇ ಕಿಟ್ಕಿ ತೆಗಿಲೇ, ಸರಿಲೇ ಆಕಡಿ, ಮಂದಾಕಿನಿ ಸಾಂಗ್ ಹಾಕ್ಲೇ....” ಎಂದು ಗದ್ದಲ ಮಾಡುತ್ತಿರುವ ಉತ್ತರ ಕರ್ನಾಟಕದ ಹುಡುಗರು... ಉಹೂಂ ಯಾರೂ ಹತ್ತಿರದಲ್ಲಿ ಇಳಿಯುವ ಲಕ್ಷಣ ಕಾಣುತ್ತಿಲ್ಲ. ಅವನಿಗೆ ಆ ಕಂಬವೇ ಗತಿ.

ರೈಟ್ ರೈಟ್ ..... ಎಂಟ್ರಿ ಹಾಕಿಸಿ ದಡಬಡಾಯಿಸಿ ಹತ್ತಿದ ಕಂಡಕ್ಟರ್ ಕೂಗಿನ ಬೆನ್ನಲ್ಲೇ ಬಸ್ಸು ಸ್ಟಾರ್ಟಾಗುತ್ತದೆ. ತುಂಬಿ ಹರಿಯುತ್ತಿರುವ ಟ್ರಾಫಿಕ್ಕಿಗೆ ಬಸ್ಸಿನ ಸೇರ್ಪಡೆಯಾಗುತ್ತದೆ. "ಯಾರ್ರೀ ಟಿಕೆಟ್, ಪಾಸ್ ನವ್ರೆಲ್ಲಾ ಕೈಯಲ್ಲಿ ಹಿಡ್ಕಳ್ರಿ.. ಎಲ್ಲಿಗ್ರೀ ನಿಮ್ದು...ಚಿಲ್ರೆ ಕೊಡ್ರಿ... " ಅನ್ನುತ್ತಾ ಕಂಡಕ್ಟರನ ಆಗಮನ, ಅಬ್ಬರ. "ಪಾಸ್ ಪಾಸ್ ಪಾಸ್ ಪಾಸ್ ...." ಹಿಂದಿನ ಸಾಲಿನ ಹುಡುಗರೆಲ್ಲಾ ಕೈ ಎತ್ತುತ್ತಾರೆ. “ತೆಗ್ದು ತೋರ್ಸ್ಬೇಕು ಎಲ್ರೂ” ಅನ್ನುತ್ತಲೇ ಉಳಿದವರಿಗೆಲ್ಲಾ ಟಿಕೆಟ್ ಕೊಟ್ಟು ಕಂಡಕ್ಟರ್ ನಿರ್ಗಮನ ಮುಂದೆ ಹೆಂಗಸರ ಕಡೆಗೆ. ಬಾಗಿಲಲ್ಲಿ ನಿಂತವರಿಗೆ ರೂಢಿಯಂತ “ಒಳಗೋಗ್ರಿ ಖಾಲಿ ಇದೆ, ಇಲ್ಲಿ ನಿಂತ್ಕಂಡ್ಯಾಕ್ರೀ ಸಾಯ್ತೀರಾ” ಎಂಬ ಬೈಗುಳ.


೧೦ ನಿಮಿಷ, ೧೫ ನಿಮಿಷ, ೨೦ ನಿಮಿಷ ಆಯಿತು...ಬಸ್ಸು ಹೋಗುತ್ತಿದೆ..... ಸ್ಟಾಪುಗಳಲ್ಲಿ ನಿಂತು ಜನರನ್ನು ಹತ್ತಿಸಿಕೊಳ್ಳುತ್ತಾ, ಇಳಿಸುತ್ತಾ. ಈತ ಕೊನೆ ಕಂಬದಲ್ಲಿ ಅಂಟಿಕೊಂಡಿದ್ದಾನೆ. ಕಾಲುಗಳಲ್ಲಿ ಸಣ್ಣ ನೋವು. ಅದನ್ನು ಮರೆಯಲು ಹಾಡು ಕೇಳೋಣವೆಂದು ಎಪ್ಫೆಮ್ ಕಿವಿಗಿಟ್ಟುಕೊಳ್ಳುತ್ತಾನೆ. 'ಓನ್ಲಿ ಕನ್ನಡ ಸಾಂಗ್ಸ್ ಅಷ್ಟೆ' ಎಂದು ಇಂಗ್ಲೀಷಿನಲ್ಲಿ ಅರಚುತ್ತಿರುವ ಚಾನೆಲ್ ಒಂದನ್ನು ಟ್ಯೂನ್ ಮಾಡುತ್ತಾನೆ. ಅದರಲ್ಲಿ ಅದೇ “ಏನೋ ಒಂಥರಾಆಆಆಆಆಆಆಅ....” ಹಾಡು. ದಿನಾ ಅದನ್ನೇ ಕೇಳಿ ಕೇಳಿ ಬೇಜಾರಾಗಿ ಏನೋ ಒಂಥರಾ ಆಗುತ್ತಿದೆ. ಬಸ್ಸು ಸಾಗುತ್ತಿದೆ.

ಹಾಡು ಬೇಜಾರಾಗಿದೆ. ಕಂಬಕ್ಕೊರಗಿಕೊಂಡೇ ಸುತ್ತಲಿನ ಜನರನ್ನು ನೋಡುತ್ತಾನೆ. ಕಿಟಕಿಯಿಂದ ಹೊರಗೆ ನೋಡುತ್ತಾ ಸುಮ್ಮನೇ ಕುಳಿತವರ ಮುಖದಲ್ಲಿ ಶೂನ್ಯಭಾವ, ಇಯರ್ ಫೋನ್ ಕಿವಿಗಿಟ್ಟಿಕೊಂಡು ಸುಮ್ಮನೇ ಕಣ್ಣು ಮುಚ್ಚಿದ್ದಾರೊ ಅಥವಾ ನಿದ್ದೆ ಮಾಡಿದ್ದಾರೋ ಗೊತ್ತಾಗದ ಜನ,ವಿಜಯ ಕರ್ನಾಟಕ ಹಿಡಿದುಕೊಂಡವನು ಕೊನೆಯ ಪುಟಕ್ಕೆ ಬಂದಿದ್ದಾನೆ, ಅವನು ಮುಗಿಸಿದ ಕೂಡಲೇ ಇಸಿದುಕೊಳ್ಳಲು ಪಕ್ಕದವನ ತವಕ, ನೋಟ್ಸು ತಿರುವಿ ಹಾಕುತ್ತಿರುವ ಕಾಲೇಜು ಹುಡುಗನ ಮುಖದಲ್ಲಿ ಯಾವುದೋ ಪರೀಕ್ಷೆಯ ಆತಂಕ, ಜೋಲು ಮುಖಗಳು, ತನಗ್ಯಾರಾದರೂ ಸೀಟು ಬಿಟ್ಟು ಕೊಡುವರೇನೋ ಎಂದು ಎಲ್ಲಾ ಕಡೆ ತಿರುತಿರುಗಿ ನೋಡುತ್ತಿರುವ ಮುದುಕ, ಯಾರೊಂದಿಗೋ ಫೋನಿನಲ್ಲಿ ಮಾತಾಡುತ್ತಾ, ನಗುತ್ತಿರುವವರು, ಸೀಟೊಂದಕ್ಕೆ ಒರಗಿ ನಿಂತವನ ಜೋಳಿಗೆಯಂತಾ ಚೀಲದಿಂದ ಏನೋ ಸೋರುತ್ತಿದೆ, ಬಹುಶಃ ಊಟದ ಡಬ್ಬಿಯಿಂದ ಸಾರೋ ನೀರೋ ಇರಬೇಕು, ಹಿಂದೆ ಕೇಕೆ ಮುಂದುವರಿಸಿರುವ ಹುಡುಗರು.... ಹೀಗೇ ಏನೇನೋ , ಯಾರ್ಯಾರೋ . ಎಲ್ಲಾ ದಿನಾ ಕಾಣುವಂತವೇ ಅಂದುಕೊಂಡು ಮುಖ ಕೆಳಕ್ಕೆ ಹಾಕುತ್ತಿರುವಾಗ ಎಫ್ಫೆಮ್ ನಲ್ಲಿ ಅಣ್ಣಾವ್ರ ಹಾಡು..."ಮಾನವನಾಗಿ ಹುಟ್ಟಿದ ಮೇಲೆ ಏನೇನು ಕಂಡಿ, ಸಾಯೋತನಕ..... " ಅವನ ಮನಸ್ಸಿಗೆ ಖುಷಿಯೆನಿಸಿ ಮತ್ತೆ ಎಪ್ಫೆಮ್ನಲ್ಲಿ ತಲ್ಲೀನನಾಗುತ್ತಾನೆ.

ಇದ್ದಕ್ಕಿದ್ದಂತೇ ಬಾಗಿಲಿನ ಪಕ್ಕದ ಸೀಟಿನಲ್ಲಿ ಏನೋ ಜಗಳ, ಕೂಗಾಟ. ಎಲ್ಲರೂ ಅಲ್ಲಿ ನೋಡುತ್ತಾರೆ. ೪ ಜನ ತಮಿಳಿನಲ್ಲಿ ಏನೊ ಮಾತಾಡುತ್ತಿದ್ದಾರೆ. ಈತನಿಗೆ ತಿಳಿಯುತ್ತಿಲ್ಲ. ಆದರೂ ಅದು ಜಗಳವಲ್ಲ. ಅವರು ಮಾತಾಡುವುದೇ ಹಾಗೇ ಎಂದು ತಿಳಿಯುತ್ತದೆ, ಸಮಾಧಾನವಾಗುತ್ತದೆ. ಬಾಗಿಲಿನಲ್ಲಿ ಬಿಹಾರಿಯೊಬ್ಬ ಕೂಗುತ್ತಿದ್ದಾನೆ. ಒಳಗೆಲ್ಲೋ ಕುಳಿತ ಅವನ ಸ್ನೇಹಿತನನ್ನು ಕರೆಯುತ್ತಿದ್ದಾನೆ. ಅವರಿಗೆ ತಾವು ಹತ್ತಿದ್ದೆಲ್ಲಿ, ಇಳಿಯುವುದೆಲ್ಲಿ ಎನ್ನುವುದೂ ಗೊತ್ತಿಲ್ಲ. ಸ್ವಲ್ಪ ಹೊತ್ತು ಕಿರುಚಾಡಿ ಸುಮ್ಮನಾಗುತ್ತಾರೆ. ಯಾರದ್ದೋ ನೋಕಿಯಾ ಫೋನು ಕಿವಿ ಕೊರೆಯುವಂತೆ ಮೊಳಗುತ್ತದೆ. ಎತ್ತಿಕೊಂಡವನಿಂದ ತನ್ನ ಬಾಸಿಗೆ ಇಂಗ್ಲೀಷಿನಲ್ಲಿ ಸುಳ್ಳುಗಳ ಸುರಿಮಳೆ. ಅವನ ಮಾತಿನಿಂದ ಅವನ್ಯಾವುದೋ ವ್ಯಾಪಾರ ಮಾಡುವವನೆಂದು ತಿಳಿಯುತ್ತದೆ. ಅದೋ ಆ ೧ ಸಾಲು ಆಚೆ ಇಬ್ಬರು ಇಳಿಯಲು ಏಳುತ್ತಿದ್ದಾರೆ. ತಕ್ಷಣವೇ ಸೀಟಿಗೆ ಪೈಪೋಟಿ. ಈತನೂ ವಿಫಲ ಯತ್ನ ನೆಡೆಸುತ್ತಾನೆ. ಮತ್ತೆ ಅದೇ ಕಂಬವೇ ಗತಿಯಾಗುತ್ತದೆ. ಮತ್ತೆ ಪ್ರಯಾಣ ಮುಂದುವರೆಯುತ್ತದೆ. ಕಾಲು ನೋವು ಜೋರಾಗುತ್ತಿದೆ. ಕೈಗಳು ಸೋಲುತ್ತಿವೆ. ನಿಲ್ಲುತ್ತಾ, ಓಡುತ್ತಾ, ಮುಗ್ಗರಿಸುತ್ತಾ ಬಸ್ಸು ಸಾಗುತ್ತಿದೆ.


ನಂತರದ್ದು ಯಾವುದೋ ಮುಖ್ಯ ಸ್ಟಾಪು. ಬಸ್ಸು ನಿಲ್ಲುತ್ತಿದ್ದಂತೇ ಸುಮಾರು ಜನ ಇಳಿಯುತ್ತಾರೆ. ಈತನಿಗೆ ಕಂಬದಿಂದ ಮುಕ್ತಿ. ಕಿಟಕಿ ಪಕ್ಕದ ಸೀಟಿನಲ್ಲಿ ನೆಮ್ಮದಿಯಿಂದ ಪವಡಿಸುತ್ತಾನೆ. ಇಳಿದಷ್ಟೆ ಜನ ಮತ್ತೆ ಹತ್ತುತ್ತಾರೆ. ಬಸ್ಸು ಹೊರಡುತ್ತದೆ. ಸಹಜವಾಗಿ ದೃಷ್ಟಿ ಬಸ್ಸಿನ ಮುಂಭಾಗದತ್ತ ಹೊರಳುತ್ತದೆ. ಕಣ್ಣು ಅರಳುತ್ತದೆ. ರೇಷ್ಮೆ ಕೂದಲ ಹುಡುಗಿ !. ಮುಂದಕ್ಕೆ ಮುಖ ಮಾಡಿಕೊಂಡು ನಿಂತಿದ್ದಾಳೆ, ಹಿಂದಿನಿಂದ ಸಕತ್ ಫಿಗರ್ ! ಮುಖ ನೋಡುವ ಆಸೆಯಾಗುತ್ತದೆ. ಅರೆ, ಇಷ್ಟು ಹೊತ್ತು ಇವಳ್ಯಾಕೆ ಕಾಣಲಿಲ್ಲ ಎಂದುಕೊಳ್ಳುತ್ತಿರುವಾಗಲೇ ಡ್ರೈವರ್ ಕೆಟ್ಟದಾಗಿ ಬ್ರೇಕು ಹಾಕುತ್ತಾನೆ ಯಾರನ್ನೋ ಬೈಯುತ್ತಾನೆ, ಮುಂದೆ ಸಾಗುತ್ತಾನೆ. ಈತನಿಗೆ ಆ ಹುಡುಗಿಯ ಮುಖ ನೋಡುವ ಕುತೂಹಲ. ಆಕೆ ಒಂದು ಸ್ವಲ್ಪವೂ ಹಿಂದೆ ತಿರುಗುತ್ತಿಲ್ಲ. ಗೊಂಬೆಯಂತೆ ನಿಂತಿದ್ದಾಳೆ. ಹೊತ್ತು ಕಳೆದಂತೆ ಕುತೂಹಲ ಜಾಸ್ತಿಯಾಗುತ್ತದೆ. ಕಾಯುತ್ತಾನೆ. ಕಾದೂ ಕಾದು ಬೇಸರ ಶುರುವಾಗುತ್ತದೆ. ಇದ್ದಕ್ಕಿದ್ದ ಹಾಗೇ ಯಾವುದೋ ಹುಡುಗಿ ಯಾರನ್ನೋ ಕರೆಯುತ್ತಾಳೆ. ಅಲ್ಲಿವರೆಗೆ ಮುಂದೆ ನೋಡುತ್ತಾ ನಿಂತಿದ್ದ ಹುಡುಗಿ ಹಿಂದಕ್ಕೆ ತಿರುಗುತ್ತಾಳೆ. ಈತನಿಗೆ ನಿರಾಸೆ. ಆ ಹುಡುಗಿ ನೋಡಲೂ ಚೂರೂ ಚೆನ್ನಾಗಿಲ್ಲ. ಹಿಂದಿನಿಂದ ಮಾತ್ರ ಸೊಗಸು. ಮನಸ್ಸಿನಲ್ಲೇ ಥತ್ ಎಂದುಕೊಂಡು ಕೂರುತ್ತಾನೆ.ಹೊರಗೆ ತಲೆಕೆಡಿಸುವ ಟ್ರಾಫಿಕ್ಕು. ದಿನಾ ನೋಡಿ ಅಭ್ಯಾಸವಿರುವುದರಿಂದ ಅದರೆಡೆಗೆ ವಿಶೇಷ ಗಮನ ಹೋಗುವುದಿಲ್ಲ. ಆಗ ನೆನಪಾಗುತ್ತದೆ ತಾನು ಟೈಂಪಾಸಿಗೆ ಓದಲು ತಂದಿರುವ ಪುಸ್ತಕ. ಕವರಿನಿಂದ ಪುಸ್ತಕ ತೆಗೆದು ಓದಲು ತೊಡಗುತ್ತಾನೆ. ಕಥೆ ಆಸಕ್ತಿ ಕೆರಳಿಸುತ್ತಿದೆ. ಬಸ್ಸಿನಲ್ಲಿ ಏನಾಗುತ್ತಿದೆ ಎಂಬ ಪರಿವೆಯಿಲ. ಅದರ ಅಗತ್ಯವೂ ಇಲ್ಲ. ಆದರೆ ಸ್ವಲ್ಪ ಹೊತ್ತಿನಲ್ಲೇ ಕಣ್ಣುಗಳೇಕೋ ಸೋಲುತ್ತವೆ. ಗಮನವಿಟ್ಟು ಓದಲಾಗುತ್ತಿಲ್ಲ. ಹಾಗೆಯೇ ಸೀಟಿಗೆ ತಲೆಯಾನಿಸುತ್ತಾನೆ. ಕಣ್ಣುಗಳು ತಾನಾಗೇ ಮುಚ್ಚಿಕೊಳ್ಳುತ್ತವೆ. ನಿದ್ದೆಗೆ ಜಾರುತ್ತಾನೆ. ಯಾವುದೋ ಸಿಗ್ನಲ್ಲಿನಲ್ಲಿ ಹಾಕಿದ ಬ್ರೇಕಿಗೆ ತಟ್ಟನೇ ಎಚ್ಚರಾಗುತ್ತದೆ. ತೊಡೆಮೇಲಿದ್ದ ಪುಸ್ತಕ ಬಿಡಿಸಿ ಮತ್ತೆ ಓದಲು ತೊಡಗುತ್ತಾನೆ. ಸ್ವಲ್ಪ ಹೊತ್ತಿನಲ್ಲೇ ಆತ ಇಳಿಯುವ ಸ್ಟಾಪು ಬರುತ್ತದೆ. ಮುಖ ಒರೆಸಿಕೊಂಡು ಬಾಗಿಲಿನ ಹತ್ತಿರ ಹೋಗುತ್ತಾನೆ. ಬಸ್ಸು ನಿಲ್ಲುತ್ತದೆ. 'ಸ್ವಯಂಚಾಲಿತ ಬಾಗಿಲು, ಕೈಯಿಂದ ತೆಗೆಯಲು ಪ್ರಯತ್ನಿಸಬೇಡಿ' ಎಂದು ಬರೆದಿರುವ ಬಾಗಿಲುಗಳು ತೆರೆದುಕೊಳ್ಳುತ್ತದೆ. ಆತನು ಇಳಿಯುತ್ತಾನೆ. ಬಸ್ಸು ಮುಂದೆ ಸಾಗುತ್ತದೆ.


ಹೀಗೆ ಆತನ ಒಂದು ಪ್ರಯಾಣ, ಒಂದು ಬೆಳಗ್ಗೆ ಈ ಬರಹದಂತೆಯೇ ಯಾವುದೇ ವಿಶೇಷವಿಲ್ಲದೇ ಮುಗಿದುಹೋಗುತ್ತದೆ.

ಕೋಟಿ ಲಿಂಗಗಳ ಮಧ್ಯದಲ್ಲೆಲ್ಲೋ ಒಂದು ಬೋಡಿ ಲಿಂಗ ಪೂಜೆಯಿಲ್ಲದೇ ಕೊರಗುತ್ತಿದೆ...ಸೊರಗುತ್ತಿದೆ.

9 ಕಾಮೆಂಟ್‌ಗಳು:

Pradeep ಹೇಳಿದರು...

Vikas,

It was nice reading this one too. Can you please post your writings more frequently (offcours without affecting your writing style).

The special part of this post is that you are rightly admitted that there is no speciality in the story but I enjoyed reading thru it.

Ranju ಹೇಳಿದರು...

ವಿಕಾಸ್,
ಲೇಖನ ಚನ್ನಾಗಿದೆ ಆದರೂ ಒಂದು ಚೂರು ಬೋರ್ ಹೋಡೆಸಿತು.
ನಾನು ಬೆಂಗಳೂರಿಗೆ ಮೊದಲನೇ ಸಾರಿ ಕೆಲಸ ಹುಡುಕಿ ಬಂದಾಗ ಮೊದಲ ಸಾರಿ ಬಿ ಟಿ ಮ್ ಬಸ್ ಹತ್ತಿದ ದಿನವೇ ಅದರಲ್ಲಿ ಮಾರಾಮಾರಿ ಜಗಳ ನೆಡೆಯುತ್ತಿತ್ತು. ಅಬ್ಬಾ ಅವರ ಭಾಷೆಯೋ! ಹೆದರಿ ಹೊಗಿದ್ದೆ ಇಲ್ಲಿ ಹೆಂಗಪ್ಪಾ ಜೀವನ ಮಾಡುವುದು? ಅಂತ ಯೋಚಿಸಿ. ಆಮೇಲೆ ಆ ಕೊರಮಂಗಲದಿಂದ ವಿಜಯನಗರಕ್ಕೆ ಓಡಾಡುವಾಗಿನ ನನ್ನ ಸ್ಥಿತಿ ನಿಜಕ್ಕೂ ಕರುಣಾಮಯ. ಅದರಲ್ಲೂ ಆ 171 ಬಸ್ಸಲ್ಲಿ ಡ್ರೈವರ್ ಕಂಡಕ್ಟರ್ ಇಬ್ಬರೂ ಒಬ್ಬನೇ ದಿನ ಜಗಳ ಕಾಮನ್.
ನಿಮ್ಮ ಬ್ಲಾಗ್ ಇತ್ತೀಚೆಗೆ ಅಪ್ ಡೇಟ್ ಆಗುತ್ತಿಲ್ಲಾ. ಯಾಕೆ?

ಶಂಕರ ಪ್ರಸಾದ ಹೇಳಿದರು...

ಇತ್ತೀಚಿಗೆ ಬೈಕ್‌ನಲ್ಲಿ ಓಡಾಡಿ ಓಡಾಡಿ, ಬಸ್ಸಿನ ಒಂದು ಅನುಭವ ಪಡೆದು ಬಹಳ ದಿನಗಳಾಯ್ತು.
ತುಂಬಾ ಚೆನ್ನಾಗಿ ಬರೆದಿರುವೆ ವಿಕಾಸ್. ನಂಗೆ ಹಳೆಯ ದಿನಗಳು ಜ್ಞಾಪಾಕಕ್ಕೆ ಬಂದವು.
ಹೀಗೆ ಮುಂದುವರೆಯಲಿ ಗೆಳೆಯ

ನಿಮ್ಮವನು,
ಕಟ್ಟೆ ಶಂಕ್ರ

Karthik ಹೇಳಿದರು...

ನಂಗಂತೂ ಬಸ್ ನಲ್ಲೇ ಹೋಗಿ ಬಂದಂಗಾಯ್ತು .. ಸೂಪರ್ ವಿಕಾಸ್ ..

SHASHI ಹೇಳಿದರು...

thumab chengidhe

Sanath ಹೇಳಿದರು...

ವಿಕಾಸ್ ,
ಚೆನ್ನಾಗಿದೆ ಬರಹ.
ಹೀಗೆ ಬರೆಯಿತ್ತಾ ಇರಿ..

ವಿಕಾಸ್ ಹೆಗಡೆ/ Vikas Hegde ಹೇಳಿದರು...

ಪ್ರದೀಪ್ ಥ್ಯಾಂಕ್ಸ್. ಇನ್ನೂ frequentಆಗಿ ಲೇಖನಗಳನ್ನ ಹಾಕೋಕೆ ಪ್ರಯತ್ನಿಸುತ್ತೇನೆ. ಕೊನೇ ಪಕ್ಷ ವಾರಕ್ಕೊಂದು. ನೋಡೋಣ. ಕೆಲಸ, ಓಡಾಟ, ಜವಾಬ್ದಾರಿಗಳ ಮಧ್ಯೆ ಸಾಧ್ಯವೋ ಇಲ್ಲವೋ ಗೊತ್ತಿಲ್ಲ .

ರಂಜನಾ ಥ್ಯಾಂಕ್ಸ್. ಓದಕ್ಕೇ ನಿಮಗೆ ಇಷ್ಟು ಬೋರ್ ಆದ್ಮೇಲೆ ಪಾಪ ಬಸ್ಸಲ್ಲಿ ಅವನಿಗೆ ಎಷ್ಟು ಬೋರಾಗಿರ್ಬೋದು ನೋಡು. ಅದೂ ಅಲ್ದೇ ಬೋರಾದ್ರೂ ಚೆನ್ನಾಗಿರೋದಂತೂ ಹೌದು ಬಿಡು . ಇತ್ತೀಚೆಗೆ ಬೇರೆ ಕೆಲ್ಸಗಳು ಜಾಸ್ತಿ ಆಗಿರೋದ್ರಿಂದ ಬ್ಲಾಗ್ ಅಪ್ಡೇಟ್ ಆಗ್ತಿಲ್ಲ.

ಶಂಕ್ರಣ್ಣ ಬಹಳ ಥ್ಯಾಂಕ್ಸ್, ಪ್ರೋತ್ಸಹವಿರಲಿ ಹೀಗೆ.

ಕಾರ್ತೀಕ್, ಈ ಬರಹ ಆ ಅನುಭವ ಕೊಡೋದ್ರಲ್ಲಿ ಸ್ವಲ್ಪನಾದ್ರೂ ಯಶಸ್ವಿ ಆಗಿದ್ರೆ ಧನ್ಯ ನಾನು. ಥ್ಯಾಂಕ್ಯು

ಶಶಿ, ಸನತ್ ಬಹಳ ಥ್ಯಾಂಕ್ಸ್.

ಶ್ರೀನಿಧಿ.ಡಿ.ಎಸ್ ಹೇಳಿದರು...

enta interesting agiro boring lekhana baradde maraya!:) very nice!

anand ಹೇಳಿದರು...

ಹೇ ವಿಕಾಸ್

ನಾನು ದಿನಾ ಮಾಡೊ ಪ್ರಯಾಣನ (ಪ್ರಯಾಸ) ಕಣ್ಣಿಗೆ ಕಟ್ಟೋ ಹಾಗೆ ಬರ್ದಿದಿರ

ಸ್ವಲ್ಪ ಪ್ಯಾ೦ತರಗಳ ಹಿತವಚನಗಳು ಇದ್ರೆ ಚೆನ್ನಾಗಿತ್ತು

ಧನ್ಯವಾದ