ಪುಟಗಳು

ಬುಧವಾರ, ಮೇ 16, 2007

ಅರೇಂಜ್ಡ್ ಮ್ಯಾರೇಜ್ - ಕಥೆ

ಇಂದಿನ ಯುವಜನಾಂಗದ ದೃಷ್ಟಿಯಲ್ಲಿ ಅರೇಂಜ್ಡ್ ಮ್ಯಾರೇಜ್ ಎಂಬುದು ಅರ್ಥ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯವಾಗಿ ಇಂಗ್ಲೀಷಿನಲ್ಲಿ ನಾನು ಓದಿದ ಸಣ್ಣ ಕಥೆಯೊಂದನ್ನು ಕನ್ನಡದಲ್ಲಿ ಓದಿಸುವ ಪ್ರಯತ್ನ ಮಾಡಿದ್ದೇನೆ


=======================================================

ದಟ್ಟವಾದ ಗಿಡಮರಗಳ ಮಧ್ಯ ಒದ್ದೆಯಾದ ಮಣ್ಣಿನ ದಾರಿಯಲ್ಲಿ ಅವಳು ನಿಧಾನಕ್ಕೆ ಹೆಜ್ಜೆ ಹಾಕುತ್ತಿದ್ದಳು. ಪಕ್ಕದಲ್ಲಿ ಬರುತ್ತಿದ್ದವನು ತನ್ನ ಗಂಡ ಎಂದಷ್ಟೆ ಅವಳಿಗೆ ಗೊತ್ತಿತ್ತು. ಅವನು ಬಹಳ ಖುಷಿಯಾಗಿ, ದೂರದಲ್ಲೆಲ್ಲೋ ಆಡುತ್ತಿದ್ದ ಮಕ್ಕಳನ್ನು ನೋಡುತ್ತಾ ಬರುತ್ತಿದ್ದ. ಅವಳ ಕೈಯ ಮೆಹಂದಿ ಎರಡು ದಿನಗಳ ಸಂಭ್ರಮವನ್ನು ನೆನಪಿಸುತ್ತಿತ್ತು.


ಹೇಯ್. ಅಲ್ನೋಡು..! ಆಶ್ಚರ್ಯದಿಂದ ಏನನ್ನೋ ತೋರಿಸುತ್ತಾ ಅವನು ಕೂಗಿದ. ಅವನು ತೋರಿಸಿದೆಡೆಗೆ ನೋಡಿದಳು. ಸುಂದರವಾದ ಬಣ್ಣ ಬಣ್ಣದ ಬಲೂನುಗಳಿಂದ ಆಕಾಶವು ತುಂಬಿ ಹೋಗಿತ್ತು. ಮಕ್ಕಳು ಆಕಾಶವನ್ನು ನೋಡುತ್ತಾ ಕುಣಿಯುತ್ತಿದ್ದರು. ಇವನು ಅದರಲ್ಲೇ ಪೂರ್ತಿ ಮುಳುಗಿಹೋಗಿದ್ದ. ಹೌದು, ಬಣ್ಣಗಳೆಂದರೆ ಯಾವಾಗಲೂ ಖುಷಿ ಕೊಡುವಂತದ್ದು.. ಆದರೆ ಈಗೇಕೋ ಹಾಗೆ ಅನಿಸುತ್ತಿಲ್ಲ. ಏಕೆಂದರೆ ಅವಳು ಅವಳ ಗೆಳತಿಯರೊಂದಿಗೆ ಇಲ್ಲ, ಅಪ್ಪ-ಅಮ್ಮಂದಿರೊಂದಿಗಿಲ್ಲ, ತನ್ನ ಸಹೋದ್ಯೋಗಿಗಳೊಂದಿಗೂ ಇಲ್ಲ. ಇದು ಶಾಲೆಯ ಅಥವಾ ಕಂಪನಿಯಿಂದ ಬಂದ ಪ್ರವಾಸವಾಗಿರಲಿಲ್ಲ. ಇದು ಅವಳ ಜೀವನದ ಪ್ರಶ್ನೆಯಾಗಿತ್ತು ಮತ್ತು ಅವಳ ಬದುಕನ್ನು ಈ ಹುಡುಗನೊಟ್ಟಿಗೆ ಒತ್ತಾಯಪೂರ್ವಕವಾಗಿ ಸೇರಿಸಲಾಗಿತ್ತು. ಒಂದು ರೀತಿಯ ಒಬ್ಬಂಟಿತನ, ಅಸಮಾಧಾನ ಮನಸ್ಸನ್ನು ಕಾಡುತ್ತಿತ್ತು. ತಾನು ಮದುವೆಯಾದ ಹುಡುಗನ ಹೆಸರು ಮತ್ತು ಕೆಲಸ ಇಷ್ಟು ಬಿಟ್ಟು ಮತ್ತೇನೂ ಅವಳಿಗೆ ಸರಿಯಾಗಿ ಗೊತ್ತೇ ಇರಲಿಲ್ಲ. ಆ ಹುಡುಗನನ್ನು ಇದಕ್ಕೂ ಮೊದಲು ಅವಳು ನೋಡಿದ್ದು ಒಮ್ಮೆ ಮಾತ್ರ . ಒಂದೆರಡು ಬಾರಿ ಮಾತಾಡಿದ್ದಳು ಅಷ್ಟೆ. ಎಲ್ಲವೂ ಬಹಳ ತರಾತುರಿಯಲ್ಲಿ ನಡೆದು, ಅವಳು ಉಸಿರು ಬಿಡುವುದರೊಳಗೆ ಎಲ್ಲವೂ ಮುಗಿದುಹೋಗಿತ್ತು. ಈಗ ಮದುವೆಯಾದ ಆ ಹುಡುಗನೊಂದಿಗೆ ಒಂದು ಗಿರಿಧಾಮಕ್ಕೆ ಬಂದಿದ್ದಳು. ಇಷ್ಟು ದಿನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡ ಇವರು ಈಗ ಯಾರೋ ಗುರುತು ಪರಿಚಯ ಇಲ್ಲದವನ ಜೊತೆ ತಮ್ಮ ಮಗಳನ್ನು ಮದುವೆ ಮಾಡಿ ಈ ರೀತಿ ಅದು ಹೇಗೆ ಇಷ್ಟು ದೂರ ಒಬ್ಬಂಟಿಯಾಗಿ ಕಳುಹಿಸಿದರು ಎಂದು ಮನಸ್ಸಿನಲ್ಲಿ ಅಪ್ಪ ಅಮ್ಮರಿಗೆ ಶಾಪ ಹಾಕುತ್ತಾ ಸುಮ್ಮನೇ ಅವನೆಡೆಗೆ ನೋಡುತ್ತಾ ಯೋಚಿಸಿದಳು. "ಈ ಹುಡುಗನಿಗೆ ತನ್ನ ಜೊತೆಗಿರುವವಳು ತನ್ನ ಹೆಂಡತಿ ಎಂದು ಅರ್ಥ ಆಗಿದೆಯೆ?ಅಪರಿಚಿತ ಹುಡುಗಿಯೊಬ್ಬಳನ್ನು ಈ ಹುಡುಗ ಅರ್ಥಮಾಡಿಕೊಳ್ಳುತ್ತಾನಾ, ನನ್ನ ಭಾವನೆಗಳನ್ನು ಗೌರವಿಸುತ್ತಾನಾ, ಪ್ರೀತಿ ಮಾಡುತ್ತಾನಾ, ಬಾಳುತ್ತಾನಾ!"


******************************************

"ಅಮ್ಮಾ ಈ ರೀತಿ ಎಲ್ಲಾ ಸರಿ ಆಗಲ್ಲ, ದಯವಿಟ್ಟು ನಿಲ್ಲಿಸು ಇದನ್ನ", ಅವಳು ಕೊನೆಯ ಗಳಿಗೆವರೆಗೂ ತನ್ನ ತಾಯಿಗೆ ಹೇಳುತ್ತಲೇ ಇದ್ದರೆ ಅವಳಮ್ಮ ಅದಕ್ಕೆ ಕಿವಿಗೊಡದೆ ಮಗಳಿನ ಕೇಶ ಶೃಂಗಾರದಲ್ಲಿ ತೊಡಗಿದ್ದರು. ರಾತ್ರಿಯೆಲ್ಲಾ ಅತ್ತು ಅತ್ತು ಬಾಡಿದ ಅವಳ ಮುಖಕ್ಕೆ ಪುನಃ ಕಾಂತಿ ತರಿಸುವ ಪ್ರಯತ್ನವೆಂಬಂತೆ ಎರಡು-ಮೂರು ಸಾರಿ ಮೇಕಪ್ ಮಾಡಬೇಕಾಗಿತ್ತು. ಆದರೆ ಈಗ ಬಹಳ ತಡವಾಗಿಹೋಗಿತ್ತು. ಇನ್ನು ಸ್ವಲ್ಪ ಹೊತ್ತಿಗೆ ಅವಳ ಮದುವೆ. ಆ ಮದುವೆಯ ಮುಂಜಾನೆ ಒಂದು ದುಃಸ್ವಪ್ನದಂತೆ ಭಾಸವಾಗಿತ್ತು. ಜೀವನದಲ್ಲಿ ಮೊದಲನೇ ಬಾರಿ ಅವಳಿಗೆ ತಾನು ಯಾರನ್ನಾದರೂ ಪ್ರೀತಿ ಮಾಡಿ ಮದುವೆಯಾಗಬೇಕಿತ್ತು ಎನಿಸಿತ್ತು. ತನಗೆ ಮನಸ್ಸಿಗೆ ಹಿತವೆನಿಸುವ, ಅವನ ಹೆಸರು ಹಿಡಿದು ಕೂಗಿ ತನ್ನ ಗೆಳತಿಯರಿಗೆಲ್ಲಾ ಪರಿಚಯ ಮಾಡಿಕೊಡುವಂತಹ, ನಂಬಿಕೆ ಇರುವಂತಹ ಒಬ್ಬ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸುತ್ತಿತ್ತು. ಅವಳು ಯಾರನ್ನಾದರೂ ಪ್ರೀತಿಸಿ ಅವನನ್ನೆ ಮದುವೆಯಾಗಿತ್ತೇನೆ ಎಂದಿದ್ದರೆ ಅವಳ ತಂದೆ-ತಾಯಿಗಳು ಬೇಡವೆನ್ನುತ್ತಿರಲಿಲ್ಲ. ಆದರೆ ಅವಳು ಇದುವರೆಗೂ ಯಾರನ್ನೂ ಅದರಲ್ಲೂ ಯಾವ ಹುಡುಗನನ್ನೂ ಭಾವನಾತ್ಮಕವಾಗಿ ಹಚ್ಚಿಕೊಂಡಿರಲೇ ಇಲ್ಲ. ತನ್ನ ಗೆಳೆಯರೊಂದಿಗೆ ಸ್ನೇಹದಿಂದ ವರ್ತಿಸುತ್ತಾ, ಆಟ ಆಡುತ್ತಾ, ಕೀಟಲೆ ಮಾಡುತ್ತಾ ಆರಾಮಾಗಿದ್ದಳೇ ಹೊರತು ಯಾರೊಂದಿಗೂ ಆ ರೀತಿಯ ಬೇರೆ ಭಾವನೆಗಳು ಅವಳಿಗೆ ಯಾವತ್ತೂ ಬಂದಿರಲಿಲ್ಲ. ಈಗ ಮದುವೆಯ ವಯಸ್ಸಿಗೆ ಬಂದ ಮೇಲೆ ಸಹಜವಾಗಿಯೇ ಮಗಳಿಗೆ ಹುಡುಗನನ್ನು ಹುಡುಕಿ ಮದುವೆ ಮಾಡುವ ಕರ್ತವ್ಯ ತಂದೆ-ತಾಯಿಯರಿಗೆ ಬಂದಿತ್ತು. ತಮ್ಮ ಮಗಳಿಗೆ ಯೋಗ್ಯ ವರನನ್ನು ಹುಡುಕಲು ಬಹಳ ಕಷ್ಟ ಪಟ್ಟಿದ್ದರು. ಜಾತಿ, ಜಾತಕ, ಒಳ್ಳೆಯ ಕುಟುಂಬ, ಸುರೂಪಿ, ಒಳ್ಳೆ ಆದಾಯ ಹೀಗೆ ಹತ್ತು ಹಲವು ವಿಷಯಗಳ ಆಧಾರದ ಮೇಲೆ ಹುಡುಗನನ್ನು ಹುಡುಕಿದ್ದರು. ಅಂತೂ ಅವರ ಪ್ರಯತ್ನ ೮ ತಿಂಗಳ ನಂತರ ಫಲ ಕೊಟ್ಟಿತ್ತು. ಆದರೆ ಅವಳು ತನ್ನ ತಂದೆಗೆ ಹೇಳಿಬಿಟ್ಟಿದ್ದಳು. ಈ ಹುಡುಗನನ್ನು ನೋಡಿದರೆ ನನಗೆ ಯಾವುದೇ ಭಾವನೆಗಳು ಬರುತ್ತಿಲ್ಲ. ತನಗೆ ಅವನು ದಿನಾ ನೋಡುವ ಹುಡುಗರಂತೆ, ಚಾಟ್ ರೂಮಿನಲ್ಲಿ ಸಿಗುವ ಯಾರೋ ಒಬ್ಬನಂತೆ, ಯಾರೋ ಒಬ್ಬ ಅಪರಿಚಿತ ಮನುಷ್ಯನೇ ಹೊರತು ಬೇರೇನೂ ಅನಿಸಿರಲಿಲ್ಲ. ಅವಳ ತಂದೆ ಇಬ್ಬರನ್ನೂ ಪರಸ್ಪರ ಭೇಟಿಯಾಗಲು ಹೇಳಿದ್ದರು, ನಿಮ್ಮ ಇಷ್ಟ ಕಷ್ಟಗಳನ್ನು ಚರ್ಚಿಸಿ ಒಪ್ಪಿಗೆ ಮಾಡಿಕೊಳ್ಳಿ ಎಂದು ಅವಕಾಶ ಕೊಟ್ಟಿದ್ದರು. ಅದರಂತೆಯೇ ಭೇಟಿಯೋ ಆಯಿತು, ಮಾತಾಡಿಯೂ ಆಯಿತು. ಅದು ಅವಳಿಗೆ ತನ್ನ ಕಂಪನಿಯ ಯಾವುದೋ ಮೀಟಿಂಗಿನಂತೆ, ಸೆಮಿನಾರಿನಂತೆ ಅಷ್ಟೆ ಅನಿಸಿತ್ತು. ಬರುತ್ತಿದ್ದಂತೆ ತಂದೆ ಕೇಳಿದ್ದರು, "ಅವನೊಟ್ಟಿಗೆ ಮಾತಾಡಿದೆಯಾ, ಹೇಗನ್ನಿಸಿತು, ಹುಡುಗ ಒಳ್ಳೆಯವನು ತಾನೆ, ಚೆನಾಗಿ ಮಾತಾಡಿದನೆ?" ಅದೂ ಇದೂ ಕೇಳಿದರು. ಇನ್ನೇನು ಹೇಳುವುದು, ಎಲ್ಲಾದಕ್ಕೂ ಹೂಂ ಎಂದು ತಲೆಯಾಡಿಸಿದ್ದಳು. ಹೇಳುವುದಕ್ಕೆ ಏನಾದರೂ ಇದ್ದರೆ ತಾನೆ! ಮನಸ್ಸಿನಲ್ಲಿ ಮಾತ್ರ "ಅವನು ಕೊಡಿಸಿದ ಐಸ್ ಕ್ರೀಂ ಭಾರಿ ಚೆನಾಗಿತ್ತು" ಅಂದುಕೊಂಡು ಸುಮ್ಮನೆ ಎದ್ದು ಬಂದಿದ್ದಳು.ಅವಳ ತಂದೆ-ತಾಯಿಗಳು, ಬಂಧುಗಳು ಎಲ್ಲಾ ಚರ್ಚಿಸಿ, ಅವಳಿಗೆ ತನ್ನ ಜೀವನ ಸಂಗಾತಿ ಆಗುವವನನ್ನು ಅರ್ಥಮಾಡಿಕೊಳ್ಳಲು ಅವಕಾಶ ಕೊಟ್ಟಾಯಿತು. ಇನ್ನು ಮದುವೆ ಮಾಡಲು ತೊಂದರೆ ಏನಿಲ್ಲ ಎಂದು ನಿರ್ಧರಿಸಿದ್ದರು. ಮದುವೆಯ ಸಿದ್ಧತೆ ಭರದಿಂದ ಸಾಗಿತ್ತು. ನೋಡನೋಡುತ್ತಿದ್ದಂತೆ ಮದುವೆಯ ದಿನ ಬಂದೇ ಬಿಟ್ಟಿತ್ತು. ಮದುವೆಯ ಸಂಭ್ರಮ ಮುಗಿಲು ಮುಟ್ಟಿತ್ತು. ಮದುವೆ ಮನೆಯ ತುಂಬಾ ಜನಗಳು, ಹಬ್ಬದ ವಾತಾವರಣ. ಮದುವೆ ಹಾಲಿನಲ್ಲಿ ಮಕ್ಕಳು ಕುಣಿದು, ಓಡುತ್ತಾ, ಕೂಗಾಡುತ್ತಾ ಆಡುತ್ತಿದ್ದರೆ, ಹೆಂಗಸರಿಗೆಲ್ಲಾ ರೇಷ್ಮೆ ಸೀರೆಯ ಸಂಭ್ರಮ. ಹಿತವಾದ ಗುಲಾಬಿಯ, ಮಲ್ಲಿಗೆಯ ಪರಿಮಳ.. ಸಣ್ಣಗೆ ಕೇಳಿ ಬರುತ್ತಿದ್ದ ಮಂಗಳ ವಾದ್ಯದ ಸದ್ದು, ಮಂತ್ರೋದ್ಘೋಷದ ಮಧ್ಯೆ ಅವಳ ಕೊರಳಿಗೆ ತಾಳಿ ಬಿದ್ದಿತ್ತು. ನಂತರ ಯಥಾಪ್ರಕಾರ ಫೋಟೊಗಳಿಗೆ, ವಿಡಿಯೋ ಗೆ ಸಂಬಂಧಿಕರ, ಗೆಳೆಯರ ಜೊತೆ ನಿಂತು ಕೃತಕ ನಗೆ ಬೀರುವುದು ಎಲ್ಲಾ ಮುಗಿದಿತ್ತು. ಈಗ ಅವಳು ಅವನ ಹೆಂಡತಿ. ಸಮಾಜ ಮತ್ತು ಕಾನೂನಿನ ಪ್ರಕಾರ ಅವರಿಬ್ಬರು ದಂಪತಿಗಳು. ತಂದೆ-ತಾಯಿಯರಿಗೆ ತಮ್ಮ ಕರ್ತವ್ಯ ಭಾರ ಇಳಿದಂತೆ ನಿಟ್ಟುಸಿರು ಬಿಟ್ಟಿದ್ದರು. ತುಂಬಿದ ಮದುವೆ ಮನೆಯಿಂದ ಜನರೆಲ್ಲಾ ಒಬ್ಬೊಬ್ಬರಾಗಿ ಖಾಲಿ ಯಾಗಿ ಈಗ ಅವರಿಬ್ಬರೂ ಹೊಸ ಜಗತ್ತಿನ , ಹೊಸ ಬದುಕಿನ ಪ್ರಾರಂಭದಲ್ಲಿ ನಿಂತಿದ್ದರು.************************************

"ಬಾ ಇಲ್ಲಿ ಕೂರೋಣ"..

ಅವನು ಅವಳ ಕೈಯನ್ನು ಮೃದುವಾಗಿ ಹಿಡಿದೆಳೆಯುತ್ತಾ ಒಂದು ಕಲ್ಲಿನ ಬೆಂಚಿನೆಡೆಗೆ ಕರೆದ. ಆಗಷ್ಟೆ ಬಿದ್ದ ಸಣ್ಣ ಮಳೆಯಿಂದ ಕಲ್ಲಿನ ಬೆಂಚು ಇನ್ನೂ ಸ್ವಲ್ಪ ಒದ್ದೆ ಇತ್ತು .. ಕೂತಾಗ ತಣ್ಣನೆ ಅನುಭವ.

"ಏನು ಯೋಚನೆ ಮಾಡ್ತಾ ಇದಿಯಾ? ನಿನಗೆ ಈ ಮದುವೆ ಇಷ್ಟ ಇರಲಿಲ್ಲವೇ?"

ಇದ್ದಕ್ಕಿದ್ದಂತೆ ಅನಿರೀಕ್ಷಿತ ಪ್ರಶ್ನೆ ಅವನಿಂದ! ತಾನು ಉತ್ತರಿಸಬೇಕೆ? ಸುಮ್ಮನಿರಬೇಕೆ? ಏನೂ ಹೇಳಲು ಮನಸ್ಸಾಗುತ್ತಿಲ್ಲ! ಅವಳ ಮನಸ್ಸು ತಾನು ಹಿಂದಿನ ತಿಂಗಳು ತನ್ನ ಕಂಪನಿಯಲ್ಲಿ ನಡೆಸಿಕೊಟ್ಟ ಒಂದು ಕಾರ್ಯಕ್ರಮದ ಬಗ್ಗೆ ಯೋಚಿಸುತ್ತಿತ್ತು. ಅದರಲ್ಲಿ ಎಲ್ಲರೂ ಕೇಳುತ್ತಿದ್ದ ಪ್ರಶ್ನೆಗಳಿಗೆ ಎಷ್ಟು ವಿಶ್ವಾಸದಿಂದ ನಗುನಗುತ್ತಾ ಉತ್ತರಿಸುತ್ತಿದ್ದೆ. ಈಗೇಕೆ ಆಗುತ್ತಿಲ್ಲ!! ಅವಳು ಉತ್ತರಿಸದೇ ಸುಮ್ಮನೇ ಉಳಿದಳು.

ಅವನೆ ಮುಂದುವರೆಸಿದ .."ನಿನಗೆ ಗೊತ್ತಾ ... ನಾನು ಕೂಡ ಇಂತಹ ಮದುವೆಗೆ ತಯಾರಿರಲಿಲ್ಲ...."

"ಅಯ್ಯೋ ದೇವರೆ ..ಏನಿದು!! ಇದನ್ನು ಅವನೇ ಹೇಳುತ್ತಿದ್ದಾನಾ ಅಥವಾ ನಾನೇ ಯೋಚನೆ ಮಾಡುತ್ತಾ ಜೋರಾಗಿ ಹೇಳಿಬಿಟ್ಟೆನಾ" !! ಅವಳಿಗೇ ತಿಳಿಯಲಿಲ್ಲ.

"ಅವನ ಈ ಮಾತಿನ ಅರ್ಥ ಏನು, ಅವನಿಗೆ ನಾನು ಇಷ್ಟ ಇಲ್ಲವಾ, ಅವನು ಒತ್ತಾಯಪೂರ್ವಕವಾಗಿ ನನ್ನನ್ನು ಮದುವೆಯಾದನೆ? ಅಥವಾ ನನ್ನ ಮನಸ್ಸಿನ ಯೋಚನೆ ನನ್ನ ಮುಖಭಾವದಿಂದ ಅವನಿಗೆ ತಿಳಿದು ಹೋಯಿತಾ!!"

ಅವನ ಮುಖವನ್ನೇ ನೋಡಿದಳು.

ಅವನು ಕಿರುನಗೆಯೊಂದಿಗೆ ಮುಂದುವರೆಸಿದ...

"ನಾನು ನನ್ನ ಹುಡುಗಿಯನ್ನು ನಾನೇ ಹುಡುಕಿಕೊಳ್ಳಬೇಕು ಅಂತ ಇದ್ದೆ.. ಮನಸ್ಸಿಗೆ ಒಪ್ಪುವಂತಹ ಹುಡುಗಿಯನ್ನು ನೋಡಿ ಪ್ರೀತಿ ಮಾಡಿ ನಾನು ಅವಳ ಜೊತೆ ಸುತ್ತಾಡಬೇಕು, ಅವಳಿಗೆ ಶಾಪಿಂಗ್ ಮಾಡಿಸಬೇಕು, ತಮಾಷೆ ಮಾಡಿ ನಗಬೇಕು, ಅವಳೊಂದಿಗೆ ವಾದ ಮಾಡಬೇಕು, ಸುಖ-ದುಃಖ ಹಂಚಿಕೊಳ್ಳಬೇಕು, ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು, ಒಟ್ಟಿನಲ್ಲಿ ಅವಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು.. ಆಮೇಲೆ ಅವಳನ್ನ ಮದುವೆಯಾಗಿ ಅವಳೊಂದಿಗೆ ಜೀವನ ಮಾಡಬೇಕು ಅಂತ ಆಸೆ ಪಟ್ಟಿದ್ದೆ. ಬೇರೆ ರೀತಿಯ ಮದುವೆ ಏನಿದ್ದರೂ ಎಲ್ಲಾ ಸುಮ್ಮನೆ ನಾಟಕದಂತೆ ಆಗುತ್ತದೆ ಅಂತ ನನ್ನ ಭಾವನೆ ಆಗಿತ್ತು. ನಾನು ಅದಕ್ಕೆ ತಯಾರಿರಲಿಲ್ಲ. ಆದರೆ ನನ್ನ ಕೆಲಸದ ಮೇಲಿನ ಪ್ರೀತಿಯಿಂದ ಅದರಲ್ಲೆ ಮುಳುಗಿಬಿಟ್ಟೆ. ನನಗೆ ನನ್ನ ಹುಡುಗಿಯನ್ನು ಹುಡುಕಿಕೊಳ್ಳಲು ಸಮಯವೇ ಸಿಗಲಿಲ್ಲ. ಅದರ ಬಗ್ಗೆ ಯೋಚನೆ ಮಾಡಲೂ ಮನಸ್ಸು ಬರದೆ ಹೋಯಿತು. ಆದರೆ ಮದುವೆಯ ವಯಸ್ಸು ಆಗುತ್ತಿದ್ದಂತೆ ಮನೆಯಲ್ಲಿ ಹೆಣ್ಣು ಹುಡುಕಲು ಪ್ರಾರಂಭಿಸಿದಾಗಲೇ ನಾನು ಎಚ್ಚೆತ್ತುಕೊಂಡಿದ್ದು. ಆದರೆ ಆಗ ಸಮಯ ಮಿಂಚಿ ಹೋಗಿತ್ತು. ಕೊನೆಗೆ ನಮ್ಮ ಅಪ್ಪ ಅಮ್ಮ ಯಾರನ್ನು ಹುಡುಕಿತ್ತಾರೋ ಅವಳನ್ನೇ ಮದುವೆಯಾಗುವುದು ಎಂದುಕೊಂಡು ಸುಮ್ಮನಾಗಿಬಿಟ್ಟೆ. ಅದನ್ನು ಬಿಟ್ಟು ಬೇರೇ ಏನನ್ನೂ ಮಾಡಲು ನನ್ನಿಂದ ಸಾದ್ಯವಿರಲಿಲ್ಲ. ಮದುವೆಗೆ ಮುಂಚೆ ನಮಗೆ ಮಾತನಾಡಲು ಅವಕಾಶ ಕೊಟ್ಟಾಗ ನಿನಗೆ ನನ್ನೊಂದಿಗೆ ಮಾತಾಡುವುದು, ಸಮಯ ಕಳೆಯುವುದು ಕಷ್ಟ, ಕಿರಿಕಿಯಾಗುತ್ತಿದ್ದುದು ನನಗೆ ಅರ್ಥ ಆಗುತ್ತಿತ್ತು. ಒಟ್ಟಿನಲ್ಲಿ ಈ ರೀತಿ ಅಪರಿಚಿತನೊಂದಿಗೆ ಇದ್ದಕ್ಕಿದ್ದಂತೆ ಬದುಕನ್ನು ಹೊಂದಿಸಿಕೊಳ್ಳಲು ನಿನಗೆ ಇಷ್ಟವಿಲ್ಲದಿರುವುದು ತಿಳಿಯುತ್ತಿತ್ತು. ಏಕೆಂದರೆ ನನಗೂ ಅದೇ ರೀತಿ ಆಗುತ್ತಿತ್ತು. ನಾವಿಬ್ಬರೂ ಅಪರಿಚಿತರು. ಆದರೆ ಏನು ಮಾಡುವುದು, ನನಗೆ ನಿನ್ನನ್ನು ಸಾಕಷ್ಟು ಅರ್ಥ ಮಾಡಿಕೊಳ್ಳಲು ಆ ಸಮಯದಲ್ಲಿ ಸಾಧ್ಯವಿರಲಿಲ್ಲ. ನನ್ನ ಬಗ್ಗೆ ನಿನಗೆ ನಂಬಿಕೆ ಬರಿಸಲು, ನಿನಗೆ ನನ್ನ ಬಗ್ಗೆ ತಿಳಿಸಲು ಆ ಸಮಯದಲ್ಲಿ ಸಾಧ್ಯವಿರಲಿಲ್ಲ. ಎಲ್ಲವೂ ತರಾತುರಿಯಲ್ಲಿ ನಡೆದು ಹೋಯಿತು. ಆದರೆ ಈಗಲೂ ಕಾಲ ಮಿಂಚಿಲ್ಲ. ನನ್ನ ಮುಂದೆ ಇನ್ನೂ ಅಗಾಧವಾಗ ಜೀವನವಿದೆ. ಅದರಲ್ಲಿ ನಿನ್ನನ್ನು ಪ್ರೀತಿಸಲು, ನೋಡಿಕೊಳ್ಳಲು, ನಿನ್ನ ನಂಬಿಕೆಯಲ್ಲಿ ಬದುಕಲು ಬೇಕಾದಷ್ಟು ಸಮಯವಿದೆ. ನಾನು ಇದುವರೆಗೂ ಹುಡುಕುತ್ತಿದ್ದ ಹುಡುಗಿ ಯಾರೋ ಅಲ್ಲ. ಅದು ನೀನೆ ಅಂದು ಕೊಳ್ಳುತ್ತೇನೆ".


ಅವನು ಅವಳ ಕಣ್ಣುಗಳನ್ನೆ ಆಳವಾಗಿ ನೋಡುತ್ತಾ ಕೇಳಿದ.


" ಈಗ ಹೇಳು ನೀನು ನನ್ನನ್ನು ಪ್ರೀತಿಸ್ತೀಯಾ?"


ಅವಳ ಕಣ್ಣಿಂದ ನೀರ ಹನಿಯೊಂದು ಜಾರಿತು. ತನ್ನ ತಂದೆ-ತಾಯಿಗಳು ತನಗೆ ನಿಜವಾಗಿಯೂ 'ಯೋಗ್ಯ' ಹುಡುಗನನ್ನೇ ಹುಡುಗನನ್ನೆ ಹುಡುಕಿದ್ದಾರೆ ಅನ್ನಿಸಿತು. ಮನಸ್ಸಿನಲ್ಲಿಯೇ ಅಪ್ಪ-ಅಮ್ಮರಿಗೆ ನಮಸ್ಕಾರ ಮಾಡಿದಳು. "ನನ್ನನ್ನು ಪ್ರೀತಿಸುತ್ತೀಯಾ" ಎಂದು ಅವನು ಕೇಳಿದ ಪ್ರಶ್ನೆಗೆ ಉತ್ತರ ಕೊಡುವ ಅಗತ್ಯ ಕಾಣಿಸಲಿಲ್ಲ. ಇಬ್ಬರಿಗೂ ಅದರ ಉತ್ತರ ತಿಳಿದಿತ್ತು.

ಅವನು ಅವಳ ಹೆಗಲ ಮೆಲೆ ಕೈ ಹಾಕಿ, ಅವಳು ಅವನ ಭುಜಕ್ಕೊರಗಿ ನಡೆಯುತ್ತಿದ್ದರೆ ಮುಳುಗುತ್ತಿದ್ದ ಸೂರ್ಯ ಅಲ್ಲಿ ಪ್ರಾರಂಭಗೊಂಡ ಹೊಸ ಬದುಕೊಂದಕ್ಕೆ ಸಾಕ್ಷಿಯಾಗಿದ್ದ. ಹಿತವಾದ ತಂಗಾಳಿ ಬೀಸುತ್ತಾ ಮರಗಿಡಗಳು ತೂಗಾಡುತ್ತಾ ಪ್ರಕೃತಿಮಾತೆ ಹೊಸ ದಾಂಪತ್ಯಕ್ಕೆ ಎದೆತುಂಬಿ ಹಾರೈಸಿದ್ದಳು.

ಶುಕ್ರವಾರ, ಮೇ 11, 2007

ನಾಲ್ಕನೇ ಕ್ಲಾಸಿನಲ್ಲಿ Love Propose !!

ಬಹಳಷ್ಟು ಜನರಿಗೆ ತಮ್ಮ ತಮ್ಮ ಬಾಲ್ಯ ಜೀವನದ ನೆನಪುಗಳು, ಶಾಲೆಯ ದಿನಗಳ ನೆನಪುಗಳು ಅಮರ ಮಧುರ. ಆಗ ಇರುತ್ತಿದ್ದ, ಬರುತ್ತಿದ್ದ ಭಾವನೆಗಳು, ನಮ್ಮದೇ ಆದ ಇತಿ ಮಿತಿಯ ಪ್ರಪಂಚದೊಳಗೆ ಮೆರೆಯುತ್ತಿದ್ದುದು ಎಲ್ಲಾ ಈಗ ನೆನಪಿಸಿಕೊಂಡರೆ ಏನೋ ಒಂದು ರೀತಿಯ ಹಿತಾನುಭವ. ಅಂಥದರಲ್ಲಿ ನನಗೆ ನನ್ನ ನಾಲ್ಕನೇ ಕ್ಲಾಸಿನ ಲವ್ ಸ್ಟೋರಿಯೊಂದು ಎಂದಿಗೂ ಮರೆಯಲಾಗದ ಘಟನೆ. ಆಗಿನ್ನೂ ಪ್ರೀತಿ ಪ್ರೇಮದ ಬಗ್ಗೆ ಏನೂ ಗೊತ್ತಿರದಿದ್ದರೂ ಏನೋ ಒಂಥರಾ ಕುತೂಹಲ. ಭಾನುವಾರ ಬರುತ್ತಿದ್ದ ಸಿನೆಮಾ, ಶುಕ್ರವಾರ ಬರುತ್ತಿದ್ದ ಚಿತ್ರಗೀತೆಗಳು, ಮತ್ತು ಕೆಲವು ಧಾರಾವಾಹಿಗಳು ಇವಿಷ್ಟನ್ನೇ ನೋಡುತ್ತಾ ಅದರಲ್ಲೆ ಪ್ರೇಮದ ಕಲ್ಪನೆ ಮಾಡಿಕೊಂಡಿದ್ದ ಕಾಲ. ಅದರಲ್ಲೂ ಹೆಚ್ಚು ಪ್ರಭಾವ ಮಾಡಿದ್ದು ಅಂದರೆ ಪ್ರೇಮವೇ ಮುಖ್ಯವಾಗಿರುವ ರವಿಚಂದ್ರನ್ ಚಿತ್ರಗಳು.

ಪಲ್ಲವಿ(ಹೆಸರು ಬದಲಾಯಿಸಿದೆ) ಎನ್ನುವಳೊಬ್ಬಳು ನಮ್ಮ ಜೊತೆಯಲ್ಲೆ ೧ ನೇ ಕ್ಲಾಸಿನಿಂದ ಓದುತ್ತಿದ್ದ ಒಂದು ಹುಡುಗಿಯಿದ್ದಳು. ಅವಳು ಸ್ವಲ್ಪ ಗೋಧಿ ಬಣ್ಣದಿಂದ ಮುದ್ದು ಮುದ್ದಾಗಿ ಇದ್ದು ಓದಿನಲ್ಲಿ ಮತ್ತಿತರ ಚಟುವಟಿಕೆಗಳಲ್ಲಿ ಮುಂದಿದ್ದುರಿಂದ ನಮ್ಮ ಕ್ಲಾಸಿಗೆ ಅಘೋಷಿತ ಹೀರೋಯಿನ್ ಆಗಿದ್ದಳು. ಮೊದಲಿನಿಂದಲೂ ಅವಳೆಡೆಗೆ ಸ್ವಲ್ಪ ಹೆಚ್ಚೇ ಅನ್ನಿಸುವ ಆಕರ್ಷಣೆಯಿತ್ತು. ಅವಳಿಗೇ ಲೈನ್ ಹಾಕುತ್ತಿದ್ದೆ, ಅವಳೂ ಸ್ವಲ್ಪ ಸ್ವಲ್ಪವಾಗಿ ಲೈನ್ ಕೊಡುತ್ತಿದ್ದಳು (ಅಂತ ನಾನು ಅಂದು ಕೊಂಡಿದ್ದೆನೋ ಏನೋ ಗೊತ್ತಿಲ್ಲ, ಯಾಕಂದ್ರೆ ಹುಡುಗಿಯರು ಸುಮ್ಮನೆ ನಕ್ಕರೆ, ಮಾತಾಡಿಸಿದರೆ ಸಾಕು.. ಬಿದ್ದೇ ಹೋದರು ಅಂದುಕೊಳ್ಳುವುದು ಹುಡುಗರ ಹುಟ್ಟು ಗುಣ).

ಹೀಗೇ ಇದ್ದಾಗ ನನಗೆ ಅವಳಿಗೆ ಪ್ರಪೋಸ್ ಮಾಡಬೇಕು ಅನ್ನುವ ಯೋಚನೆ ಬಂದುಬಿಟ್ಟಿತ್ತು. ಸರಿ.. ಒಂದು ದಿನ ಯಾವುದೋ ಒಂದು ವಿಷಯದ ಟೀಚರ್ ಬಂದಿರಲಿಲ್ಲವಾದ್ದರಿಂದ ಆಟ ಆಡಿಕೊಳ್ಳಲು ಹೊರಗೆ ಮೈದಾನಕ್ಕೆ ಬಿಟ್ಟಿದ್ದರು. ಒಂದು ಕಡೆ ಹುಡುಗಿರ ಗುಂಪು, ಇನ್ನೊಂದು ಕಡೆ ಹುಡುಗರ ಗುಂಪು ಆಡಿಕೊಳ್ಳುತ್ತಿತ್ತು. ಕೆಲವರು ಹರಟೆ ಹೊಡೆಯುತ್ತಾ ಕೂತಿದ್ದರು. ನಮ್ಮ ಪಲ್ಲವಿಯೂ ಕೂಡ ಗೆಳತಿಯರ ಜೊತೆ ಏನೋ ಮಾತಾಡುತ್ತಾ ನಗುತ್ತಾ ನಿಂತಿದ್ದಳು. ನನಗೆ ಇದೇ ಸರಿಯಾದ ಸಮಯ ಎನ್ನಿಸಿ ಸೀದಾ ಅವಳ ಹತ್ತಿರ ನಡೆದೆ. ನನಗೋ ಪೂರ್ತಿ ಕೈಕಾಲುಗಳೆಲ್ಲಾ ನಡುಗಲು ಆರಂಭಿಸಿತ್ತು. ಹೋಗಿ ಪಲ್ಲವಿ ಮುಂದೆ ನಿಂತೆ.. ಏನನ್ನು ಹೇಗೆ ಶುರುಮಾಡಬೇಕೋ ತಿಳಿಯಲಿಲ್ಲ. "ಪಲ್ಲವಿ, ನಾನು ನಿನ್ನನ್ನ ಪ್ರೀತಿ ಮಾಡ್ತಾ ಇದಿನಿ, ನಿನ್ನನ್ನೇ ಮದುವೆ ಮಾಡ್ಕೋತೀನಿ" ಅಂತ ಒಂದೇ ಉಸಿರಿನಲ್ಲಿ ಹೇಳಿಬಿಟ್ಟೆ. ಆವಾಗಿನ ಪಲ್ಲವಿಯ ಮುಖಭಾವ, ಸುತ್ತಲೂ ನಿಂತಿದ್ದ ಹುಡುಗಿರ ಮುಖದಲ್ಲಿ ಮೂಡಿದ ಭಾವನೆಗಳು ಇನ್ನೂ ನನ್ನ ಕಣ್ಣು ಗಳಲ್ಲಿ ಹಾಗೇ ಇದೆ.

ಸರಿ , ಹೀಗೆ ಹೇಳಿ ನಾನು ಏನು ಮಾಡಬೇಕು ಗೊತ್ತಾಗದೇ ವಾಪಸ್ ಬಂದು ಬಿಟ್ಟೆ. ಪಲ್ಲವಿ ಕಣ್ಣಲ್ಲಿ ನೀರು ತುಂಬಿಕೊಂಡು ಮೈದಾನದಿಂದ ಓಡಿದಳು. ನಾನು ಭಯದಿಂದ ಬೆಪ್ಪಾಗಿ ಕುಳಿತಿದ್ದೆ. ನಂತರ ಎಲ್ಲರೂ ಕ್ಲಾಸ್ ರೂಮಿಗೆ ಹೋದೆವು. ಇಡೀ ಕ್ಲಾಸ್ ತುಂಬಾ ಅದೇ ಗುಸು ಗುಸು. ನಾನು ಹೇಳುವುದೇನೋ ಹೇಳಿ ಬಿಟ್ಟಿದ್ದೆ, ಆದರೆ ಈಗ ಅದರ ನಂತರದ ಪರಿಣಾಮಗಳನ್ನು ನೆನಪಿಸಿಕೊಂಡು ಪೂರ್ತಿ ಭಯಗೊಂಡಿದ್ದೆ. ಈ ವಿಷಯ ಟೀಚರ್ ಗಳಿಗೆಲ್ಲಾ ಗೊತ್ತಾಗಿ, ಮನೆಯಲ್ಲಿ ಗೊತ್ತಾದರೆ ನನ್ನ ಮಾನ ಮರ್ಯಾದೆ(!) ಪ್ರಶ್ನೆ ಏನು ಎಂದು ಚಿಂತೆಗೊಳಗಾಗಿದ್ದೆ. ನನ್ನ ಭಯ ಸುಳ್ಳಾಗಲಿಲ್ಲ. ೫ ನಿಮಿಷಕ್ಕೆ ಹೆಡ್ ಮಾಸ್ಟರ್ ರಿಂದ ಬುಲಾವ್ ಬಂತು. ಪಲ್ಲವಿ ಅಳುತ್ತಾ ಸೀದ ಓಡಿದ್ದು ಹೆಡ್ ಮಾಸ್ಟರ್ ಹತ್ತಿರ ಎಂದು ತಿಳಿಯಿತು. ಹಾಗೇ ನಡುಗುತ್ತಾ ಹೊರಟೆ. ನಾನು ನನ್ನ ಬೆಂಚಿನಿಂದ ಹೊರಟು ನೆಡೆದುಕೊಂಡು ಬರುತ್ತಿದ್ದರೆ ಎಲ್ಲರೂ ಕೂಡ ಇವನು ವಾಪಸ್ ಬರುವಾಗ ಯಾವ ಆಕಾರದಲ್ಲಿರುತ್ತಾನೋ ಎಂದು ಕಲ್ಪಿಸಿಕೊಳ್ಳುತ್ತಿದ್ದರು. ಯಾಕೆಂದರೆ ನಮ್ಮ ಹೆಡ್ ಮಾಸ್ಟರ್ರು ಹೊಡೆಯುವುದನ್ನು ನೋಡಿದರೇ ಸಾಕು ಮಕ್ಕಳು ಚಡ್ಡಿ ಒದ್ದೆ ಮಾಡಿಕೊಳ್ಳುತ್ತಿದ್ದರು. ಇನ್ನು ಇಂತಹ 'ಲವ್ ಕೇಸಿ'ನಲ್ಲಿ ಸಿಕ್ಕಿಹಾಕಿಕೊಂಡ ನನ್ನ ಗತಿ ಏನಾಗಬಹುದು ಎಂದು ಎಲ್ಲರಿಗೂ ಭಯಮಿಶ್ರಿತ ಕುತೂಹಲ ಇತ್ತು.

ಅಳುಕುತ್ತಲೇ ಹೆಡ್ ಮಾಸ್ಟರ್ ಕೋಣೆಗೆ ಹೋಗಿ ನಿಂತೆ. ನೋಡಿದರೆ ಹೆಡ್ ಮಾಸ್ಟರ್ ಸೀಟಿನಲ್ಲಿ ನಮ್ಮ ಇನ್ನೊಬ್ಬರು ಹಿರಿಯ ಉಪಾದ್ಯಾಯರು ಕೂತಿದ್ದರು. ಒಳಗೆ ಬಾ ಎಂದು ಕರೆದು ಕುರ್ಚಿಯ ಮೇಲೆ ಕೂರಲು ಹೇಳಿದರು. ಪುಣ್ಯವಶಾತ್ ಅವತ್ತು ನಮ್ಮ ಉಗ್ರಗಾಮಿ ಹೆಡ್ ಮಾಸ್ಟರ್ರು ರಜ ಹೋಗಿದ್ದರಿಂದ ಅವತ್ತಿನ ಮಟ್ಟಿಗೆ ಇನ್ನೊಬ್ಬರು ಆ ಸೀಟಿನಲ್ಲಿದ್ದರು. ಈಗ ಸ್ವಲ್ಪ ನಿರಾಳವೆನಿಸಿತು. ಯಾಕೆಂದರೆ ಆ ಹಿರಿಯ ಉಪಾದ್ಯಾಯರು ೭೦ ವರುಷ ವಯಸ್ಸಿನವರು. ಅವರಿಗೆ ಕೋಪವು ಬರುತ್ತಿದ್ದುದೆ ಕಡಿಮೆ. ಇನ್ನು ನನಗಂತು ಹೊಡೆಯುವುದಿಲ್ಲ, ಹೆಚ್ಚೆಂದರೆ ಬೈದಾರು.. ಬೈಸಿಕೊಂಡರಾಯಿತು. ಆಮೇಲೆ ಸ್ವಲ್ಪ ಅತ್ತಂತೆ ಮಾಡಿ ಮನೆಗೆ ಹೇಳಬೇಡಿ ಸಾರ್ ಎಂದು ಬೇಡಿಕೊಂಡು ಬರುವುದು ಎಂದು ನಿಶ್ಚಯಿಸಿದೆ. ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ. ಅವರು ಒಂದು ಸ್ವಲ್ಪವೂ ಕೋಪವಿಲ್ಲದೆ ಏನಪ್ಪಾ ಪಲ್ಲವಿಗೆ ಮದುವೆ ಆಗ್ತೀನಿ ಅಂದ್ಯಂತೆ ಹೌದಾ ಎಂದರು. ನಾನು ಕಣ್ಣಲ್ಲಿ ನೀರು ತುಂಬಿಕೊಂಡು ಹೌದು ಎಂದೆ. ಅವರು ಆಗ ಶುರು ಮಾಡಿಕೊಂಡರು ... ನೋಡಪ್ಪಾ ನಿಂದಿನ್ನೂ ಚಿಕ್ಕ ವಯಸ್ಸು, ಈಗ ಪ್ರೀತಿ, ಮದುವೆ ಅಂತೆಲ್ಲಾ ತಲೆ ಕೆಡಿಸಿಕೊಳ್ಳಬೇಡ, ಈ ಸಿನಿಮಾ ಅದು ಇದು ಎಲ್ಲಾ ನೋಡಿ ಹಿಂಗೆಲ್ಲಾ ಆಡ್ತೀರಾ... ಮಕ್ಕಳನ್ನ ಈ ಟಿ.ವಿ ಗಳು ಹಾಳು ಮಾಡ್ತಿವೆ.. ಅದೂ ಇದೂ ಅಂತ ಒಂದು ೧೦ ನಿಮಿಷ ಏನೇನೋ ಹೇಳಿದರು. ನಾನು ಪೂರ್ತಿ ಸಪ್ಪೆ ಮೋರೆ ಹಾಕಿಕೊಂಡು ಹೌದು ಹೌದು ಎಂದು ತಲೆ ಹಾಕುತ್ತಿದ್ದೆ. ಎಲ್ಲಾ ಮಾತಾಡಿ ಮುಗಿಯಿತು. ನಿಮ್ಮ ಅಪ್ಪ ಅಮ್ಮಂಗೆ ಹೇಳುವುದಿಲ್ಲ ಹೆದರಬೇಡ ಹೋಗು ಎಂದು ಭರವಸೆ ಕೊಟ್ಟರು. ಸರಿ ಎಂದು ಹೊರಟೆ .. ಆಗ ಅವರು ಇನ್ನೊಂದು ಮಾತು ಹೇಳಿದರು.. ನಿಂಗೆ ಅವಳು ಅಷ್ಟೊಂದು ಇಷ್ಟ ಇದ್ದರೆ ದೊಡ್ಡವನಾದ ಮೇಲೂ ಅವಳ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಅವಳನ್ನೇ ಮದುವೆ ಆಗುವಿಯಂತೆ ಬಿಡು, ನಾನೇ ನಿಮ್ಮ ತಂದೆ ತಾಯಿಗೆ ಹೇಳುತ್ತೇನೆ ಎಂದರು. ಹೊರಡುವಾಗ ನನ್ನ ಕೈಯಲ್ಲಿ ಎರಡು ಚಾಕಲೇಟುಗಳನ್ನಿಟ್ಟು ನನಗೂ ನಿನ್ನ ವಯಸ್ಸಿನ ಮೊಮ್ಮಕ್ಕಳಿದ್ದಾರೆ ಎಂದು ಕೆನ್ನೆ ತಟ್ಟಿದರು. ನಾನು ಹ್ಹೆ ಹ್ಹೆ ಎಂದು ಪೇಲವ ನಗೆ ನಕ್ಕು ಬದುಕಿದೆಯಾ ಬಡ ಜೀವವೇ ಎಂದು ಹೊರಗೆ ಬಂದೆ.

ಆಮೇಲೆ ಬಹಳ ದಿನಗಳ ತನಕ ನಮ್ಮ ಶಾಲೆಯಲ್ಲಿ ಇದು ಭಾರೀ ಪ್ರಸಿದ್ದಿ ಪಡೆದ ಸುದ್ದಿಯಾಗಿತ್ತು. ಈಗಲೂ ಸಹ ನನ್ನ ಶಾಲೆಯ ಗೆಳೆಯರು ಸಿಕ್ಕಿದರೆ "ಎಲ್ಲಿ ನಿನ್ ನಾಲ್ಕನೆ ಕ್ಲಾಸ್ ಡವ್ವು" ಎಂದು ತಮಾಷೆ ಮಾಡುತ್ತಿರುತ್ತಾರೆ. ಆವಾಗೆಲ್ಲ ಪಲ್ಲವಿಯನ್ನು ನೆನೆಸಿಕೊಂಡು ನಗುತ್ತೇನೆ.

ಗುರುವಾರ, ಮೇ 10, 2007

ಬ್ಲಾಗ್ ಪ್ರವೇಶ

ನನಗೆ ಮೊದಲಿಂದ ಬರೆಯುವ, ಬರೆಯುತ್ತಿರುವ ಆಸೆ. ಚಿಕ್ಕ ವಯಸ್ಸಿನಿಂದಲೂ ಪತ್ರಿಕೆಗಳು, ಪುಸ್ತಕಗಳ ಮೇಲೆ ಏನೋ ಪ್ರೀತಿ. ನನಗೆ ಇದುವರೆಗೂ ಅಕ್ಷರಗಳೇ ಒಳ್ಳೆಯ ಮಿತ್ರರು. ಪತ್ರಿಕೆಗಳ ಮೇಲಿನ ಆಕರ್ಷಣೆಯಿಂದ ಮೊದಲು ಪತ್ರಕರ್ತನಾಗಬೇಕೆಂಬ ಆಸೆ ಇಟ್ಟುಕೊಂಡಿದ್ದೆ. ಆದರೆ ಕಾಲಕ್ರಮೇಣ ಅದು ಮಸುಕಾಯಿತು. ಕಾರಣಗಳು ಹಲವಾರು. ಆದರೆ ಬರೆಯುವ ಆಸೆ ಮಾತ್ರ ಮಸುಕಾಗಿಲ್ಲ. ಏನನ್ನು ಕಂಡರೂ ಅದರ ಬಗ್ಗೆ ಬರೆಯಬೇಕು ಅನಿಸುತ್ತದೆ. ಆದರೆ ಒಂದು ವಿಷಯದ ಬಗ್ಗೆ ಬರೆಯಬೇಕೆಂದು ಹೊರಟರೆ ಏನನ್ನು ಹೇಗೆ ಬರೆಯುವುದು ಎಂದು ನಿರ್ಧರಿಸುವುದೇ ಕಷ್ಟವಾಗುತ್ತದೆ. ಬೇರೆಯವರು ಬರೆದಿದ್ದಕ್ಕೆ ಉತ್ತರಗಳನ್ನು, ವಿಮರ್ಶೆಗಳನ್ನು ಚೆನ್ನಾಗಿ ಬರೆಯಬಲ್ಲೆ, ಚರ್ಚೆಗಳನ್ನು ಚೆನ್ನಾಗಿ ಮಾಡಬಲ್ಲೆ. ಹಲವಾರು ವಿಷಯಗಳು ತಲೆಯಲ್ಲಿದ್ದರೂ ಯಾವುದನ್ನೂ ಪೂರ್ತಿಯಾಗಿ ಬರಹರೂಪಕ್ಕೆ ಇಳಿಸಲು ಆಗುತ್ತಿಲ್ಲ. ಬರೆಯಲು ಶುರುಮಾಡಿ ಸ್ವಲ್ಪ ಹೊತ್ತಿಗೇ ಬೇಜಾರು ಬಂದು ಬಿಡುತ್ತದೆ. ಮೊದಲಾದರೆ ಬರದುದ್ದನ್ನೆಲ್ಲಾ ಸುಮ್ಮನೆ ಇಟ್ಟುಕೊಳ್ಳಬೇಕಿತ್ತು ಇಲ್ಲವೇ ಪತ್ರಿಕೆಗಳಿಗೆ ಕಳುಹಿಸಿ ನೀರೀಕ್ಷಿಸಬೇಕಿತ್ತು. ಆದರೆ ಈಗ ಹಾಗಿಲ್ಲ. ಅಂತರ್ಜಾಲವೆಂಬ ಲೋಕದ ಬ್ಲಾಗು ತಾಣಗಳು ಸುಮ್ಮನೆ ಬರೆಯುವವರಿಗೆ ಒಳ್ಳೆಯ ಅವಕಾಶವನ್ನು ಕಲ್ಪಿಸಿವೆ. ಬರೆದುದ್ದಲ್ಲಾ ಇಂಟರ್ನೆಟ್ಟಿನಲ್ಲಿ ಪುಕ್ಕಟೆ ಪ್ರಕಟಣೆ. ಎಲ್ಲಿಂದ ಬೇಕಾದರೂ ಯಾರು ಬೇಕಾದರೂ ಓದುವಂತೆ. ಓದಿ ಸಲಹೆ ನೀಡಲು, ಉತ್ತೇಜಿಸಲು, ಬೈಯಲು, ಜಗಳ ಆಡಲು, ಪ್ರೀತಿ ಮಾಡಲು ಸ್ನೇಹಿತರಿದ್ದಾರೆ, ಹಿತೈಷಿಗಳಿದ್ದಾರೆ ಎಂಬ ಧೈರ್ಯದೊಂದಿಗೆ ಬಿಟ್ಟು ಹೋಗಿದ್ದ ಬರೆಯುವ ಅಭ್ಯಾಸವನ್ನು ಪುನರಾರಂಭಿಸುವ ಪುಟ್ಟ ಪ್ರಯತ್ನ ಮಾಡುತ್ತಿದ್ದೇನೆ. ಆದ್ದರಿಂದ ಇನ್ನು ಮುಂದೆ ಏನನ್ನಾದರೂ ಮನಸಿಗೆ ತೋಚುವ ವಿಷಯಗಳನ್ನು ಬರೆಯುತ್ತಾ ಹೋಗುವುದು ಮತ್ತು ಬೇರೆ ಕೆಲವು ಇಷ್ಟವಾದ ವಿಷಯಗಳನ್ನು ಹಾಕುವುದು ಅಂದುಕೊಂಡಿದ್ದೇನೆ. ಎಷ್ಟು ಕಾರ್ಯಗತವಾಗುವುದೋ ಕಾಣೆ.