ಪುಟಗಳು

ಬುಧವಾರ, ಡಿಸೆಂಬರ್ 19, 2007

ನಾನು ಪಾಪಿ, ಅವಳು ರಾತ್ರಿ ಬೆತ್ತಲೆ ಮಲಗ್ತಾಳಂತೆ !!

ನಾನು ಪಾಪಿ, ನನ್ನ ಏಸು ಸ್ವಾಮಿ ಕಾಪಾಡ್ತಾನೆ!

ಮೊನ್ನೆ ಸಂಜೆ ಆಫೀಸು ಮುಗಿಸಿಕೊಂಡು ನಡೆದುಕೊಂಡು ಹೋಗುತ್ತಿದ್ದೆ. ನನ್ನ ಸ್ನೇಹಿತನೊಬ್ಬನನ್ನು ಭೇಟಿಯಾಗಬೇಕಾಗಿತ್ತು. ಕೆಲಸ ಮಾಡಿ(!) ಸುಸ್ತಾಗಿದ್ದರಿಂದಲೋ ಏನೋ ಮುಖ ಸಪ್ಪೆಯಾಗಿತ್ತು ಅನ್ನಿಸುತ್ತದೆ. ಯಾವನೋ ಒಬ್ಬ ಹುಡುಗ ಬಂದ. ಜೀನ್ಸ್ ಪ್ಯಾಂಟ್, ಟೀ ಷರ್ಟು, ಜಾಕೆಟ್ ಹಾಕಿ ಬೆಳ್ಳಗೆ ಇದ್ದ. "ಹಲೋ..ಐಯಾಮ್ ದೀಪಕ್" ಅಂದ. ನಾನು "ಒ.ಕೆ ಹೇಳಿ" ಅಂದೆ. "ಐ ವಾಂಟ್ ಟು ಟಾಕ್ ಟು ಯು ಅಬೋಟ್ ಜೀಸಸ್ ಕ್ರೈಸ್ಟ್" ಅಂದ. ನನಗೆ ಆಶ್ಚರ್ಯ. ಅಯ್ಯೋ ಇವನ...ನ್, ರಸ್ತೆಲ್ಲಿ ಹೋಗ್ತಾ ಇರೋನ್ನ ನಿಲ್ಸಿ ಕ್ರಿಸ್ತನ ಬಗ್ಗೆ ಮಾತಾಡ್ಬೇಕು ಅಂತಾನಲ್ಲಪ್ಪ ಅಂದುಕೊಂಡು "ಯಾಕೆ?" ಅಂದೆ. "ಯೂ ಸೀಮ್ಸ್ ಟು ಬಿ ವೆರಿ ಡಿಪ್ರೆಸ್ಡ್ , ಐ ಥಿಂಕ್ ಜೀಸಸ್ ಕ್ಯಾನ್ ಮೇಕ್ ಯು ರಿಲಾಕ್ಸ್ಡ್" ಅಂದ. ಅವನನ್ನು ಸರಿಯಾಗಿ ಮಾತಾಡಿಸಿ ಕ್ಲಾಸ್ ತಗೊಳ್ಳಬೇಕೆಂಬ ಆಸೆಯಾಯಿತು, ಆದರೆ ಗೆಳೆಯ ಕಾಯುತ್ತಿದ್ದರಿಂದ ಹೋಗಬೇಕಿತ್ತು ಬೇಗ. "ನಂಗೆ ಆಸಕ್ತಿ ಇಲ್ಲ" ಅಂದೆ. "ಒ.ಕೆ ನೋ ಪ್ರಾಬ್ಲೆಮ್, ಕೀಪ್ ಇಟ್ ವಿತ್ ಯು" ಅಂದು ಒಂದು ಕರಪತ್ರ ಕೊಟ್ಟ. ಜೇಬಿಗೆ ಹಾಕಿಕೊಂಡೆ. ರಾತ್ರಿ ಮನೆಗೆ ಬಂದು ಅದನ್ನು ತೆಗೆದು ನೋಡಿದರೆ ಅದರಲ್ಲಿದ್ದುದ್ದು ಈ ಕೆಳಗಿನ ವಾಕ್ಯಗಳು..

you need salvation becoz of ur sin. you r not only a sinner by birth thru Adam, but also by ur choice. As a sinner, u r without God and without hope. Sin brings death and eternal separation from God. ಮಧ್ಯ ನರಕಕ್ಕೆ ಹೋದ ಶ್ರೀಮಂತನ ಕಥೆಯೊಂದಿದೆ.. ಅವನು ಈಗಲೂ ನರಕದಲ್ಲಿದ್ದಾನಂತೆ ! Bible shows how simple it is to escape the eternal fire of hell. Sin has a price and God must punish sin. Becoz u have sinned against Him , u must bear ur punishment or accept Christ's substitutionary death on the cross of Calvary. Jesus Christ, the perfect Son of God, was the only man who ever lived a sinless life. .... Jesus loves u and died to save u from ur sins.....Every lost sinner is going to hell, but God offers u the gift of salvation thru the blood of Christ.... If u will accept Jesus Christ as ur Saviour,please pray this prayer...................... Jesus is knocking at the door of ur heart.Will u let him in? ಇತ್ಯಾದಿ ಇತ್ಯಾದಿ....

ಮಧ್ಯೆ ಮಧ್ಯೆ ಸುಮಾರು ಬೈಬಲ್ಲಿನ ಸಾಲುಗಳನ್ನು ಉದಾಹರಿಸಿದ್ದಾರೆ . ಕೆಳಗೆ ಇ ಮೇಲ್ ವಿಳಾಸ ಕೊಟ್ಟಿದ್ದಾರೆ.


ಇದನ್ನು ಓದಿ ನನಗೆ ನಿಜವಾಗಿಯೂ ಪಾಪ ಭೀತಿ ಕಾಡತೊಡಗಿದೆ, ಚಿಕ್ಕವನಿದ್ದಾಗಲಿಂದ ಅದೇನೇನು ಪಾಪ ಮಾಡಿದ್ದಿನೋ, ಅದೆಂತಾ ನರಕಕ್ಕೆ ಹೋಗುತ್ತೇನೋ, ನನ್ನ ಕಾಪಾಡುವವರು ಯಾರೂ ಇಲ್ಲವೇನೋ ಅನ್ನಿಸತೊಡಗಿದೆ। ರಾತ್ರಿ ಎಲ್ಲಾ ಅದೇ ಕನಸು ಬಿದ್ದು , ಕನಸಿನಲ್ಲಿ ಪ್ರಜ್ವಲವಾದ ಬೆಳಕಿನ ಮಧ್ಯದಿಂದ ಸ್ವಾಮಿ ಏಸು ಬಂದು ’ಬಾ ಮಗು’ ಎಂದು ಕರೆಯುತ್ತಿರುವಂತೆ ಆಗುತ್ತಿದೆ। ಇವತ್ತೊ ನಾಳೆಯೋ ನಾನು ಏಸುವಿನ ಮೊರೆ ಹೋಗಿ ಕ್ರೈಸ್ತನಾಗಿ ನನ್ನ ಪಾಪಗಳನ್ನೆಲ್ಲಾ ತೊಳೆದುಕೊಳ್ಳಲು ಆರಂಭಿಸುತ್ತೇನೆ। ಅಬ್ಬಾ ಎಂತ ನೆಮ್ಮದಿಯ ಜೀವನ !!. .......................................

................................................................................

................................................................................

ಒ.ಕೆ ಒ.ಕೆ, ಈಗ ತಮಾಷೆ ಸಾಕು. ಈ ಮತಾಂತರ ಎಷ್ಟು ಗಂಭೀರ ವಿಷಯವೆನ್ನುವುದು ನಿಮಗೆ ಗೊತ್ತೇ ಇದೆ.

ಎಲ್ಲರಿಗೂ ಮುಂಚಿತವಾಗಿ ಕ್ರಿಸ್ ಮಸ್ ಶುಭಾಶಯಗಳು :-)

***********************************


ಅವಳು ರಾತ್ರಿ ಬೆತ್ತಲೆ ಮಲಗ್ತಾಳಂತೆ !!

ಒಂದು ಸುದ್ದಿ ಕೇಳಿ। ಯಾವುದೋ ವಿದೇಶದ ಆಟಗಾರನೊಬ್ಬನ ಹೆಂಡತಿ ರಾತ್ರಿ ಮಲಗುವಾಗ ಏನು ಉಡುಪು ಧರಿಸುತ್ತಾಳಂತ ನಿಮಗೆ ಗೊತ್ತೆ? ಇಲ್ಲ ಅಲ್ವಾ? ಹೇಳ್ತೀನಿ ಕೇಳಿ. ಅವಳು ಏನೂ ಹಾಕ್ಕೊಳ್ದೆ ಬೆತ್ತಲೆ ಮಲಗ್ತಾಳಂತೆ !!. ಅವಳ ಗಂಡನಂತಾ ಗಂಡಸಿನ ಜೊತೆ ಯಾರೇ ಆದ್ರೂ ಕೂಡ ಹಾಗೇ ಮಲಗ್ತಾರಂತೆ !!ಥೂ॥ ಇದೇನಕ್ಕೆ ಹೇಳ್ತೀದಿನಿ, ಮಾನ ಮರ್ಯಾದೆ ಏನಿಲ್ವಾ ಅಂತೀರಾ? ಅಥವಾ ಅವ್ಳು ಏನಾರೂ ಮಾಡ್ಕೊಳ್ಲಿ ,ಹೆಂಗಾರೂ ಮಲ್ಕೊಳ್ಲಿ ನಮ್ಗೇನು , ಇಂತ ಸುದ್ದಿ ಎಲ್ಲಾ ಯಾಕೆ ಅಂತೀರಾ? ಹಾಗಿದ್ರೆ ಇದು ನಾನು ಹೇಳ್ತಾ ಇರೋದಲ್ಲ. ಇದು ಹೆಚ್ಚು ಪ್ರಸಾರವಿರುವ ಭಾರತದ ಪ್ರಸಿದ್ಧ ಪತ್ರಿಕೆ xxxxx xx xxxxxದಲ್ಲಿ ಮೊನ್ನೆ ಮೊನ್ನೆ ಬಂದ ಸುದ್ದಿ. ಇಂತ ಸುದ್ದಿಗಳನ್ನ ಓದೋಕೆ ನಾವು ದುಡ್ಡು ಕೊಟ್ಟು ಪತ್ರಿಕೆ ತಗೋಬೇಕಾ? ಒಂದು ಪತ್ರಿಕೆಯಲ್ಲಿ ಈ ರೀತಿ ಸುದ್ದಿ ಹಾಕ್ಬೇಕಾ? ತಾನು ಬೆತ್ತಲೆ ಮಲಗ್ತೀನಿ ಅಂತ ಯಾವಳೋ ವಿದೇಶದಲ್ಲಿ ಹೇಳಿದ್ರೆ ಅದನ್ನ ನಮ್ಮ ದೇಶದ ಪತ್ರಿಕೆಲ್ಲಿ ಹಾಕಿ ನಮಗೆ ಓದಿಸ್ಬೇಕಾ? ಮತ್ತು ಆ ಸುದ್ದಿ ಪ್ರಕಟಿಸಿದವರು ತಮ್ಮ ಹೆಂಡತಿಯರು ರಾತ್ರಿ ಹೇಗೆ ಮಲಗ್ತಾರೆ ಅಂತ ಪತ್ರಿಕೆಯಲ್ಲಿ ಹಾಕ್ತಾರಾ ? ಹೀಗಂತ ನಿಮಗೆ ಸ್ವಲ್ಪನಾದ್ರೂ ಅನಿಸಿದರೆ, ಆ ತಲೆಹಿಡುಕ ಪತ್ರಿಕೆಯನ್ನ ನೀವು ಕೊಂಡುಕೊಳ್ತಾ ಇದ್ರೆ, ದಯವಿಟ್ಟು ನಿಲ್ಸಿ. ನಾನು ಯಾವ ಪತ್ರಿಕೆ ಬಗ್ಗೆ ಮಾತಾಡ್ತಿದಿನಿ ಅಂತ ನಿಮ್ಗಾಗ್ಲೇ ಗೊತ್ತಾಗಿದೆ ಅನ್ಕೊತಿನಿ. ಮತ್ತೆ ಅದು ಅಷ್ಟು ಜನಪ್ರಿಯ ಆಗಿದೆ ಅಂದ್ರೆ, ಜನ ಅಂತಹ ಸುದ್ದೀನೆ ಇಷ್ಟ ಪಡ್ತಾರೆ ಅಂತ ಅರ್ಥ ಅಲ್ವಾ ಅಂತ ಕೇಳ್ತಿರಾ?! then i m sorry. :(

***************************************

ಬಡಜೋಗಿಯ ಹಾಡು

ಇದು ಯಾರು ರಚಿಸಿದ್ದೋ ಗೊತ್ತಿಲ್ಲ. ಎಲ್ಲೋ ಓದಿದಾಗ ಯಾಕೋ ಬಹಳ ಇಷ್ಟವಾಯಿತು. ಇದರ ಲೇಖಕರಿಗೊಂದು ಧನ್ಯವಾದ ಹೇಳುತ್ತಾ ಅದನ್ನು ಇಲ್ಲಿ ಹಾಕುತ್ತಿದ್ದೇನೆ.

ಸುಖಕ್ಕಾಗಿ ಕಾತರಿಸುವ
ಕೋಟ್ಯಂತರ ಜನಕ್ಕೆ ಹಣ ನೆಲ
ಹೊನ್ನು ಬೇಕು.
ಕೆಲವರಿಗೆ ಪ್ರೀತಿ
ಎಲ್ಲೋ ಕಾಣದ ಕೆಲವರಿಗೆ ಕುಗ್ರಾಮದ
ಹಿತ್ತಿಲೊಂದರ ಹೂವು
ಬಡಜೋಗಿಯ ಹಾಡು.

ಸೋಮವಾರ, ನವೆಂಬರ್ 26, 2007

ಇದು ಕಲ್ಪನೆಯಲ್ಲ,ನಿಜವೂ ಅಲ್ಲ ಮತ್ತು ನನಗೆ ತಲೆಯೂ ಕೆಟ್ಟಿಲ್ಲ!!

ಆಫೀಸ್ ಮುಗಿಸಿಕೊಂಡು ನನ್ನ ಗೆಳೆಯನ ಜೊತೆಗೆ ಅವನ ಮನೆಗೆ ಹೋದೆ. ಟ್ರಾಫಿಕ್ಕಿನಲ್ಲಿ ಸುಮಾರು ಹೊತ್ತು ಕಳೆದಿದ್ದರಿಂದ ಇಬ್ಬರಿಗೂ ಬಹಳ ಸುಸ್ತಾಗಿತ್ತು. ಹೀಗೆಯೇ ಅದೂ ಇದೂ ಮಾತಾಡುತ್ತಾ ಕೊನೆಗೆ ಅಡುಗೆ ಮಾಡುವ ಯೋಚನೆ ಬಂತು. ಇನ್ನೇನು ಇಲ್ಲಿಯೇ ಊಟ ಮಾಡಿ ನಾನು ಮನೆಗೆ ಹೋಗುವೆ ಎಂದು ಅನ್ನ ಸಾರು ಮಾಡಲು ತೀರ್ಮಾನಿಸಿದೆವು. ಹೀಗೇ ಮಾತಾಡುತ್ತಾ ಮಾತಾಡುತ್ತಾ ಒಂದು ಹಂತದ ಅಡುಗೆ ಮುಗಿಯಿತು. ಅಷ್ಟರಲ್ಲಿ ಯಾವುದೋ ಒಂದು ಸಾಮಾನು ತೆಗೆದುಕೊಂಡು ಬರುತ್ತೇನೆಂದು ನನ್ನ ಸ್ನೇಹಿತ ಅಂಗಡಿಗೆ ಹೋದ. ಸರಿ, ನಾನು ಸುಮ್ಮನೆ ಅವನ ಮನೆಯನ್ನೆಲ್ಲಾ ನೋಡುತ್ತಾ ಇದ್ದೆ. ಅವನ ಪುಸ್ತಕಗಳ ಸಂಗ್ರಹದಲ್ಲಿ ಹಲವು ಒಳ್ಳೆ ಒಳ್ಳೆಯ ಪುಸ್ತಕಗಳು ಕಣ್ಣಿಗೆ ಬಿದ್ದವು. ಅದರಲ್ಲಿ ಒಂದು ಹಸಿರು ಬಣ್ಣದ ಪುಸ್ತಕ ನನ್ನನ್ನು ಆಕರ್ಷಿಸಿತು. ಕೈಗೆತ್ತಿಕೊಂಡೆ. ಅದರ ಮೇಲೊಂದು ವಿಲಕ್ಷಣ ಮನುಷ್ಯ ಮುಖವೊಂದರ ಚಿತ್ರವಿತ್ತು. ಯಾವುದೋ ಅರ್ಥವಾಗದ ಭಾಷೆಯಲ್ಲಿ ಏನೋ ಬರೆದಿದ್ದರು. ಹೇಗಿದೆ ನೋಡೋಣ ಎಂದು ಓದಲು ಶುರುಮಾಡಿದೆ. ಆ ತಕ್ಷಣ ಅಡುಗೆ ಮನೆಯಲ್ಲೇನೋ ಸದ್ದಾಯಿತು. ಪುಸ್ತಕ ಅಲ್ಲೇ ಇಟ್ಟು ಅಡುಗೆ ಮನೆಗೆ ಹೋದರೆ ಯಾರೋ ಹೆಂಗಸೊಬ್ಬಳು ಏನೋ ಮಾಡುತ್ತಿದ್ದಳು. ನನ್ನನ್ನು ನೋಡಿ "ಇದೇನು ಇಷ್ಟೆಲ್ಲಾ ಅಕ್ಕಿ ಹಾಕಿದಿರಾ, ಯಾಕೆ ಇಷ್ಟು?" ಎಂದು ಕೇಳಿದಳು. ಅದಕ್ಕೆ ನಾನು "ನಾನೂ ಇವತ್ತು ಇಲ್ಲಿಯೇ ಊಟ ಮಾಡುತ್ತೇನೆ ಅದಕ್ಕೇ" ಎಂದೆ. ಅವಳನ್ನು ನಾನು ಇದುವರೆಗೂ ನೋಡಿರಲಿಲ್ಲ. ಇವಳು ಇಲ್ಲಿಗೇಕೆ ಬಂದಳು ಎಂದು ನನಗೆ ಅರ್ಥವಾಗಲಿಲ್ಲ. ನನ್ನನ್ನು ನೀವು ಯಾರೆಂದು ಕೇಳಲೂ ಇಲ್ಲ ! ಒಂದು ಪ್ರಶ್ನಾರ್ಥಕ ಅಥವಾ ಆಶ್ಚರ್ಯದ ಭಾವ ಕೂಡ ಅವಳ ಮುಖದಲ್ಲಿ ಸುಳಿಯಲಿಲ್ಲ. ಅವಳಿಗೆ ಮಾತ್ರ ಆ ಮನೆ, ಅಡುಗೆ ಮನೆ ಬಹಳ ಪರಿಚಯವಿದ್ದಂತೆ ಅವಳು ಅವಳ ಪಾಡಿಗೆ ಅಡುಗೆ ಮುಂದುವರೆಸಿದಳು. ಅವಳು ನನ್ನ ಸ್ನೇಹಿತನ ಹೆಂಡತಿಯಿರಬೇಕೆಂದುಕೊಂಡೆ. ಅರೆ! ಇವನ್ಯಾವಾಗ ಮದುವೆಯಾದ, ಯಾರಿಗೂ ಹೇಳಿಯೇ ಇಲ್ಲವಲ್ಲ ಎಂದು ಆಶ್ಚರ್ಯ ಪಡುತ್ತಾ ಬಂದ ಮೇಲೆ ವಿಚಾರಿಸ ಬೇಕೆಂದು ಮತ್ತೆ ಹೋಗಿ ಆ ಪುಸ್ತಕವನ್ನು ಕೈಗೆತ್ತಿಕೊಂಡೆ. ಆ ಪುಸ್ತಕದ ಹಾಳೆಗಳೆಲ್ಲಾ ಒಂದು ರೀತಿ ಹಳದಿ ಬಣ್ಣದಲ್ಲಿದ್ದವು. ಅಲ್ಲೆ ಒರಗಿ ಕುಳಿತುಕೊಂಡು ಓದಲು ಶುರುಮಾಡಿದೆ. ಕಥೆ ಬಹಳ ಚೆನ್ನಾಗಿತ್ತು. ಅದರಲ್ಲೇ ತಲ್ಲೀನನಾಗಿಬಿಟ್ಟೆ.

ಹಾಗೇ ಓದುತ್ತಿದ್ದಂತೆ ಆ ಕಥೆಯೆಲ್ಲವು ಒಂದು ಸಿನೆಮಾದ ರೂಪದಲ್ಲಿ ನೋಡುತ್ತಿರುವಂತೆ ಭಾಸವಾಗತೊಡಗಿತು। ಸಿನೆಮಾದಲ್ಲಿ ಒಂದು ಊರಿನ ದೃಶ್ಯ ಕಂಡು ಬಂತು. ಆ ಊರು ಒಂದು ರೀತಿ ಹಳೇ ಕಾಲದ ಊರಿನಂತಿತ್ತು. ಅದು ಮಳೆಗಾಲವೆಂಬಂತೆ ಕಾಣುತ್ತಿತ್ತು. ಊರೆಲ್ಲಾ ಹಸಿರಿನಿಂದ ತುಂಬಿದ್ದು ಊರಿನ ಕಟ್ಟಡಗಳೆಲ್ಲಾ ಕರಿ ಕಲ್ಲಿನಿಂದ ಕಟ್ಟಲ್ಪಟ್ಟಿದ್ದವು. ಜನರೆಲ್ಲರೂ ನೀಳವಾದ ಕಪ್ಪು ಬಣ್ಣದ ಉಡುಪುಗಳನ್ನು ಧರಿಸಿ ಓಡಾಡುತ್ತಿದ್ದರು. ಇಡೀ ಊರಿನಲ್ಲಿ ಎಲ್ಲಿ ನೋಡಿದರೂ ಹಸಿರು ಕಪ್ಪು ಬಣ್ಣವೇ ಕಾಣುತ್ತಿತ್ತು. ಅಲ್ಲಿನ ಜನರೆಲ್ಲರೂ ಚೈನಾದವರ ರೀತಿ ಮಂಗೋಲಾಯ್ಡ್ ಜನರಾಗಿದ್ದರು. ಹಾಗೇ ನೋಡುತ್ತಾ ನೋಡುತ್ತಾ ನಾನೂ ಆ ಊರಿನೊಳಗೆ ಪ್ರವೇಶಿಸಿಬಿಟ್ಟೆ. ಈಗ ನಾನು ಸಿನೆಮಾ ನೋಡುತ್ತಿರಲಿಲ್ಲ, ನಾನು ಆ ಊರಿನೊಳಗೇ ಇದ್ದೆ. ಯಾವುದೋ ಹಳೆ ಕಟ್ಟಡದ ಗೋಡೆಯೊಂದರ ಮೇಲೆ ನಿಂತಿದ್ದೆ. ನಾನು ನೋಡುತ್ತಿದ್ದಂತೆಯೇ ಅಲ್ಲಿ ಒಬ್ಬ ಕಪ್ಪು ನಿಲುವಂಗಿ ಧರಿಸಿದ್ದ ಮನುಷ್ಯನೊಬ್ಬ ಕಲಾಷ್ನಿಕೋವ್ ಮಾದರಿಯ ಬಂದೂಕನ್ನು ಕೈಯಲ್ಲಿ ಹಿಡಿದುಕೊಂಡು ಬಂದ. ಅವನಿಗೆ ನಾನು ನೋಡುತ್ತಿರುವುದು ಗೊತ್ತಿರಲಿಲ್ಲ. ಬಂದವನೇ ಅಲ್ಲೇ ಪಕ್ಕದ ಗೋಡೆಯೊಂದರ ಹಿಂದೆ ನಿಂತಿದ್ದ ವ್ಯಕ್ತಿಯೊಬ್ಬನ ತಲೆಗೆ ಗುಂಡು ಹೊಡೆದು ಸಾಯಿಸಿಬಿಟ್ಟ. ಅವನು ಮಾಡಿದ ಕೊಲೆಯನ್ನು ಯಾರೂ ನೋಡಲಿಲ್ಲ ಎಂದು ಅವನು ಅಂದುಕೊಂಡಿದ್ದ ಆದರೆ ಅದೇ ಸಮಯಕ್ಕೆ ಅಲ್ಲಿಗೆ ಬಂದಿದ್ದ ಪುಟ್ಟ ಹುಡುಗನೊಬ್ಬ ಆ ಕೊಲೆಯನ್ನು ನೋಡಿಬಿಟ್ಟಿದ್ದ. ಅದು ಕೊಲೆಗಾರನಿಗೂ ತಿಳಿದು ಹೋಯಿತು. ಬಂದೂಕಿನ ಸಮೇತ ಆ ಹುಡುಗನ ಹತ್ತಿರ ಹೋದವನು ಆ ಹುಡುಗನನ್ನು ಯಾಕೋ ಸುಮ್ಮನೇ ಬಿಟ್ಟುಬಿಟ್ಟ. ಈಗ ಕೊಲೆಯ ವಿಷಯ ಗೊತ್ತಿದ್ದುದ್ದು ನಾವು ಮೂರು ಜನಕ್ಕೆ ಮಾತ್ರ. ನನಗೆ ಗೊತ್ತಿರುವ ವಿಷಯ ಇನ್ಯಾರಿಗೂ ಗೊತ್ತಿಲ್ಲ. ಆ ಪುಟ್ಟ ಹುಡುಗ ಅದನ್ನು ನೋಡಿದ್ದರೂ ಅವನಿಗೆ ಅದೇನೆಂದು ತಿಳಿದೂ ಇಲ್ಲ. ಆದ್ದರಿಂದ ಆ ಕೊಲೆ ವಿಷಯ ಹೊರಬರಲಿಲ್ಲ. ಆದರೆ ಆ ಕೊಲೆಗಾರ ಮಾತ್ರ ಪುಟ್ಟ ಹುಡುಗನ ಮೇಲೆ ಕಣ್ಣಿಟ್ಟು ಕಾಯುತ್ತಲೇ ಇದ್ದ.

ಈಗ ಆ ಪುಟ್ಟ ಹುಡುಗ ದೊಡ್ಡವನಾಗಿದ್ದ, ಕೊಲೆಗಾರ ಒಂದು ದೊಡ್ಡ ಕರಿ ನಾಯಿಯ ರೂಪ ಹೊಂದಿ ಆ ಹುಡುಗನ ಜೊತೆಯೇ ಇರುತ್ತಿದ್ದ. ನಾನೂ ಕೂಡ ಅವರೊಡನೆ ಸೇರಿಕೊಂಡಿದ್ದೆ. ನಾವು ಮೂರು ಜನ ಕೂಡಿ ಸುಮ್ಮನೇ ಸುತ್ತುತ್ತಿದ್ದೆವು. ನಾವು ಇದ್ದುದ್ದು ’ಕಾಶಿ’ ನಗರದಲ್ಲಿ ಎಂದು ತಿಳಿಯಿತು. ಇನ್ನೂ ಅದು ಹಳೇ ರಾಜರ ಕಾಲದ ಊರಿನಂತಿತ್ತು. ಆ ಊರಿನಲ್ಲಿ ಸಂತೆ ನೆಡೆಯುವಾಗ ಹಾಕಿಕೊಳ್ಳುವಂತಹ ಅಂಗಡಿಗಳೇ ಜಾಸ್ತಿಯಾಗಿದ್ದವು. ಜನ ಅಲ್ಲಿಂದಿಲ್ಲಿಗೆ ಸುಮ್ಮನೇ ತಿರುಗಾಡುತ್ತಿದ್ದರು. ಇಡೀ ಕಾಶಿ ನಗರಕ್ಕೆ ಕೇಳಿಸುವಂತೆ ದೊಡ್ಡ ದೊಡ್ಡ ಲೌಡ್ ಸ್ಪೀಕರ್ ಗಳು ಇದ್ದವು. ನಾವು ಅಲ್ಲೇ ಊರ ಪಕ್ಕದಲ್ಲೇ ಇರುವ ನದೀ ತೀರದ ಕಟ್ಟೆಯೊಂದಕ್ಕೆ ಹೋದಾಗ ಇದ್ದಕ್ಕಿಂದ್ದಂತೇ ಆ ಸ್ಪೀಕರ್ ನಲ್ಲಿ ಕನ್ನಡ ಸಿನೆಮಾವೊಂದರ ಸಂಭಾಷಣೆಗಳು ಬರತೊಡಗಿದವು. ಅದು ಇಡೀ ಕಾಶಿ ನಗರಕ್ಕೇ ಕೇಳಿಸುತ್ತಿತ್ತು. ಇದು ಯಾವುದೋ ಇನ್ನೂ ಬಿಡುಗಡೆಯಾಗದ ಸಿನೆಮಾ, ಉಪೇಂದ್ರ ನಾಯಕ ನಟ ಎಂದು ಯಾರೋ ಹೇಳಿದರು. ಸ್ವಲ್ಪ ಹೊತ್ತಾದ ಮೇಲೆ ಉಪೇಂದ್ರನ ಮಾತುಗಳು ಶುರುವಾಗುತ್ತಿದ್ದಂತೇ ಇಡೀ ನಗರಕ್ಕೆ ನಗರವೇ ಹರ್ಷೋದ್ಗಾರ ಮಾಡಿತು. ! ಇಲ್ಲೂ ಕನ್ನಡ, ಉಪೇಂದ್ರ ಇಷ್ಟು ಪ್ರಸಿದ್ಧಿಯಾಗಿದೆಯಲ್ಲ ಎಂದು ನಾನು ಆಶ್ಚರ್ಯ, ಹೆಮ್ಮೆ ಪಟ್ಟುಕೊಂಡೆ.

ನಂತರ ಆ ಹುಡುಗ ನಮಗೆ ಸಮುದ್ರದಲ್ಲಿ ತಿಮಿಂಗಲಗಳನ್ನು ತೋರಿಸುತ್ತೀನಿ ಎಂದು ಕರೆದುಕೊಂಡು ಹೋದ। ಸುಮಾರು ನೀಲ ತಿಮಿಂಗಿಲಗಳು ಸಮುದ್ರ ತೀರದ ಹತ್ತಿರವೇ ಆಡುತ್ತಿದ್ದವು. ನಾನು ಅಲ್ಲೇ ಕೊಂಡುಕೊಂಡ ಬೋಂಡಾವನ್ನು ತಿನ್ನುತ್ತಾ ಜೊತೆಗಿದ್ದ ಕರಿ ನಾಯಿಗೂ ಎಸೆಯುತ್ತಿದ್ದೆ. ಅದು ಹಾರಿ ಹಾರಿ ಹಿಡಿದು ತಿನ್ನುತ್ತಿತ್ತು. ಹಾಗೆ ಒಮ್ಮೆ ಒಂದು ಬೋಂಡಾವನ್ನು ಅರ್ಧಕ್ಕೆ ಕಚ್ಚಿ ತಿಂದು ಕೈಯಲ್ಲಿ ಉಳಿದಿದ್ದ ಅರ್ಧ ಭಾಗವನ್ನು ನೋಡಿದೆ. ಅದು ಮಾಂಸದಿಂದ ಮಾಡಿದಂತಿತ್ತು. ಸಸ್ಯಾಹಾರಿಯಾದ ನಾನು ಮಾಂಸವನ್ನು ತಿಂದುಬಿಟ್ಟೆನಲ್ಲಾ ಎಂದು ಕೈಯಲ್ಲಿದ್ದುದನ್ನು ಬಿಸಾಡಿದೆ. ಬಹಳ ಬೇಜಾರಾಗುತ್ತಿತ್ತು. ಬಿಸಾಡಿದ ಭಾಗವನ್ನು ಗಮನವಿಟ್ಟು ನೋಡಿದೆ. ಆವಾಗ ತಿಳಿಯಿತು ಅದು ಮುಸುಕಿನ ಜೋಳದ ಬೋಂಡವೆಂದು ! ಸದ್ಯ, ಮಾಂಸ ತಿನ್ನಲಿಲ್ಲವೆಂದು ಸಮಾಧಾನವಾಯಿತು. ನಂತರ ಎಲ್ಲರೂ ಊಟಕ್ಕೆ ಹೋದೆವು. ಒಂದು ಜಾಗದಲ್ಲಿ ನೂರಾರು ಜನ ಉಣ್ಣುತ್ತಿದ್ದರು. ನಾವೂ ಕುಳಿತುಕೊಂಡೆವು. ನಮ್ಮ ಹಿಂದೆಯೇ ಬಚ್ಚಲುಕೋಣೆಗಳಿದ್ದವು. ಅಂತಹ ಜಾಗದಲ್ಲಿ ಊಟಕ್ಕೆ ಹಾಕಿದ್ದರು. ಹವ್ಯಕ ಕನ್ನಡ ಮಾತಾಡುವ ಕೇಸರಿ ಪಂಚೆ ಉಟ್ಟುಕೊಂಡ ಜನರು ನಮಗೆ ಅನ್ನ, ತಿಳಿಸಾರು ಬಡಿಸಿದರು. ಮಾತಾಡುತ್ತಾ ಊಟ ಮುಗಿಸಿ ನಿದ್ದೆ ಹೋಗಿಬಿಟ್ಟೆ.

**********

ಇದು ಕಥೆಯಲ್ಲ, ಕಲ್ಪನೆಯಲ್ಲ, ನಿಜನಡೆದದ್ದೂ ಅಲ್ಲ, ಇದಕ್ಕೆ ತಲೆಬುಡವಿಲ್ಲ, ಅರ್ಥವಂತೂ ಮೊದಲೇ ಇಲ್ಲ. ಆದರೆ ಇವಿಷ್ಟನ್ನೂ ನಾನು ಕಂಡಿದ್ದಂತೂ ಸುಳ್ಳಲ್ಲ. ಹಾಗಿದ್ದರೆ ಮತ್ತೇನಿರಬಹುದು ಇದು?! ಇಂತಹ, ಇದಕ್ಕಿಂತ ವಿಚಿತ್ರಗಳು ಎಲ್ಲರ ಅನುಭವಕ್ಕೂ ಬಂದಿರಬಹುದು. ಹೆಚ್ಚಾಗಿ ಇವು ನೆನಪಿನಲ್ಲಿ ಉಳಿಯುವುದಿಲ್ಲ. ಉಳಿದರೂ ಸ್ಪಷ್ಟವಾಗಿ ಏನೂ ನೆನಪಿರುವುದಿಲ್ಲ. ಅಪರೂಪಕ್ಕೊಮ್ಮೆ ಹೀಗೆ ಕಂಡದ್ದು ಅಷ್ಟೂ ನೆನಪಿನಲ್ಲುಳಿದು ಪರಮ ಆಶ್ಚರ್ಯ ಕೊಡುತ್ತದೆ. ಹಾಗಿದ್ದರೆ ಇದು ’ಏನು’ ಎಂದು ನಿಮಗೇನಾದರೂ ಗೊತ್ತಾಯಿತೆ?! :)

ಶುಕ್ರವಾರ, ನವೆಂಬರ್ 2, 2007

ಚಿರಂಜೀವಿ ಮಗಳು ಓಡೋದ್ರೆ ನಮ್ಗೇನು ?

ಚಿರಂಜೀವವಲ್ಲದ ಸಂಬಂಧಗಳು - ಒಂದು ಯೋಚನೆ
ಮೊನ್ನೆ ಹೀಗೆ ಗೆಳೆಯರೆಲ್ಲಾ ಮಾತಾಡ್ತಾ ಕೂತಿದ್ದಾಗ ತೆಲುಗು ಚಿತ್ರನಟ ಚಿರಂಜೀವಿಯ ಮಗಳು ಓಡಿ ಹೋದ ವಿಷ್ಯ ಬಂತು. ಒಬ್ಬ ಅಂದ " ಹೇಳಿ ಕೇಳಿ ಚಿರಂಜೀವಿಯ ಮಗಳು ಅವಳು, ಅವ್ಳಿಗೇನು ಕಡಿಮೆ ಆಗಿತ್ತು ಮಾರಾಯ ಓಡೋಗಕ್ಕೆ?! " ಎಲ್ಲರೂ ದನಿಗೂಡಿಸಿದರು ಅದಕ್ಕೆ. ಎಲ್ಲರ ಬಾಯ್ಮುಚ್ಚಿಸುವಂತೆ ಮತ್ತೊಬ್ಬನಿಂದ ಬಂತು ಮಾತು "ಚಿರಂಜೀವಿ ಮಗಳಾದರೆ ಏನಂತೆ ಅವಳಿಗೂ ಏನೋ ಕೊರತೆ ಇತ್ತು ಅನ್ನಿಸುತ್ತೆ . ನಿಮಗೆ ಜೀವನದಲ್ಲಿ ಏನೂ ಕೊರತೆಯೇ ಇಲ್ವಾ ಆತ್ಮಸಾಕ್ಷಿಯಾಗಿ ಹೇಳಿ ?". ಒಂದಿಬ್ಬರು ಹಣದ ಕೊರತೆ ಇದೆ ಎಂದು ಒಪ್ಪಿಕೊಂಡರು. ನನ್ನನ್ನೂ ಹಿಡಿದು ಇನ್ನು ಕೆಲವರು ಎಲ್ಲವೂ ತೃಪ್ತಿಕರವಾಗಿದ್ದಂತೆ ಕಂಡರೂ ಹಾಗೆ ಹೊರಗಡೆ ಹೇಳಲಾಗದಂಥ ಏನೋ ಬೇಕು ಅನ್ನುವ ಕೊರತೆ ಇದೆ ನಮಗೂ ಇದೆ ಎಂದು ಒಪ್ಪಿಕೊಂಡೆವು. "ಹಾಗೆಯೇ ಚಿರಂಜೀವಿ ಮಗಳು ಕೂಡ. ಅವಳಿಗೆ ಎಲ್ಲಾ ಇದೆ ಅಂತ ನಮಗನಿಸಿದರೂ ಏನೋ ಕೊರತೆಯನ್ನು ಅವಳು ಅನುಭವಿಸುತ್ತಿದ್ದಳು ಅನಿಸುತ್ತದೆ. ಅವಳಿಗೆ ಬೇಕಾದ್ದು ಬೇರೆಲ್ಲೋ ಸಿಗುತ್ತದೆ ಎಂಬುದನ್ನು ಅವಳು ಯೋಚಿಸಿಯೇ ತೀರ್ಮಾನ ಮಾಡಿ ಹೋಗಿದ್ದಾಳೆ " ಎಂದ. ಅಲ್ಲಿಗೆ ಎಲ್ಲರೂ ಬಾಯಿ ಮುಚ್ಚಿಕೊಂಡರು. ಮಾತು ಬೇರೆಡೆಗೆ ಹೊರಳಿತು.

ನಾನು ಯೋಚಿಸುತ್ತಿದ್ದೆ. ಹಾಗಿದ್ದರೆ ಇಷ್ಟು ದಿನ ಇದ್ದುದರಲ್ಲಿ ಏನೋ ಕೊರತೆ ಕಂಡಾಗ ಅದನ್ನು ಬಿಟ್ಟು ಹೋಗಿ ಬಿಡುವುದು ನ್ಯಾಯವೇ? ಅಷ್ಟಕ್ಕೂ ಇವತ್ತು ಒಂದು ಕಡೆ ಕೊರತೆ ಕಂಡು ಬಿಟ್ಟು ಹೋದವರಿಗೆ ಅವರು ಹೋದಲ್ಲಿ ಮತ್ತೆ ಇನ್ನೇನೋ ಕೊರತೆ ಕಂಡುಬಂದರೆ ಅದನ್ನೂ ಬಿಟ್ಟು ಹೋಗಿಬಿಡುತ್ತಾರಾ. ಹಾಗಿದ್ದರೆ ಇದೊಂದು ಸಂಪೂರ್ಣ ಸ್ವಾರ್ಥದ ಪ್ರಕ್ರಿಯೆಯಲ್ಲದೇ ಮತ್ತಿನ್ನೇನು ! ಸ್ವಾರ್ಥ ಇರಬೇಕಾದ್ದು ಹೌದು. ಅದಿಲ್ಲದೆ ಮನುಷ್ಯ ಬೆಳೆಯಲು ಸಾಧ್ಯವೇ ಇಲ್ಲ ನಿಜ. ಆದರೆ ಇದು ಈಗಿರುವ ಕಂಪನಿಯಲ್ಲಿ ಸಂಬಳ, ಸೌಲಭ್ಯ ಕಡಿಮೆ ಎಂದು ಅದನ್ನು ಬಿಟ್ಟು ಬೇರೆ ಕಂಪನಿಗೆ ಹೋದಂತೆ ಅಲ್ಲ. ಇದು ನಮ್ಮ ರಕ್ತ, ಸ್ನೇಹ ಸಂಬಂಧಗಳಿಗೆ, ನಂಬಿಕೆ ವಿಶ್ವಾಸ ಪ್ರೀತಿ ಎನ್ನುವ ಭಾವನೆಗಳಿಗೆ ಸಮಾಧಿ ಕಟ್ಟುವ ಸ್ವಾರ್ಥ !

ಚಿರಂಜೀವಿಯನ್ನೇ ತೆಗೆದುಕೊಳ್ಳಿ ಅಥವಾ ಯಾವ ತಂದೆ ತಾಯಿಯನ್ನೇ ತೆಗೆದುಕೊಳ್ಳಿ, ಅವರು ಉದ್ದೇಶಪೂರ್ವಕವಾಗಿ ತಮ್ಮ ಮಕ್ಕಳಿಗೆ ಇಂತದ್ದನ್ನು ಕಡಿಮೆ ಮಾಡಬೇಕೆಂದು ಅಂದುಕೊಂಡಿರುವುದಿಲ್ಲ. ಇವತ್ತು ಚಿರಂಜೀವಿಯಂಥ ಚಿರಂಜೀವಿಯನ್ನೇ ತೊರೆದು ಅವನ ಮಗಳು ಇನ್ಯಾರೊಂದಿಗೋ ಓಡಿಹೋದಳೆಂದಳೆ ಅವಳಿಗೆ ತನ್ನ ತಂದೆ ತಾಯಿಯಿಂದ ದೊರೆಯದ ಏನೋ ಒಂದು ಮತ್ತೊಬ್ಬರಲ್ಲಿ ದೊರೆತಿದೆ ಎಂಬುದು ಎಷ್ಟು ಸತ್ಯವೋ ನಂತರ ಮತ್ತೇನೋ ಅವಳು ಬಯಸಿದ್ದು ಆ ಮತ್ತೊಬ್ಬನಲ್ಲಿ ಸಿಗದಿದ್ದಾಗ ಅವನನ್ನೂ ತೊರೆಯುತ್ತಾಳೆಂಬುದು ಅಷ್ಟೆ ಸತ್ಯವಲ್ಲವೆ!.

ಇದು ಬರಿ ಹುಡುಗಿಯರು ಈ ರೀತಿ ಮಾಡುತ್ತಾರೆ ಅಥವಾ ಚಿರಂಜೀವಿ ಮಗಳು ಮಾಡಿದಳು ಎಂಬ ಅರ್ಥವಲ್ಲ. ಇಂತವು ಬೇಕಾದಷ್ಟು ಸಾಮಾನ್ಯ ಜನರಲ್ಲೂ ನೆಡೆಯುತ್ತಲೇ ಇರುತ್ತದೆ. ಹುಡುಗರೂ ಕೂಡ ಇದರಿಂದ ಹೊರತಾಗಿಲ್ಲ. ಪ್ರೀತಿಯೆಂಬುದು ಸ್ವಾರ್ಥದ ಇನ್ನೊಂದು ಸ್ವಷ್ಟ ಮುಖವೆಂದು ಅಭಿಪ್ರಾಯ ಬರುವುದೇ ಆವಾಗ. ಯಾರಿಗಾದರೂ ನಾವು ನಮ್ಮ ಕೈಲಾದಷ್ಟೂ ಪ್ರೀತಿ ಕೊಟ್ಟರೂ ಕೂಡ ಅವರು ನಮ್ಮನ್ನೇ ಬಿಟ್ಟು ಹೋದಾಗ ನಾನು ಇಷ್ಟು ಪ್ರೀತಿ ಕೊಟ್ಟರೂ ಬಿಟ್ಟು ಹೋದರು ಎಂಬ ನೋವಿಗಿಂತ ಅವರ್ಯಾಕೆ ನಮ್ಮನ್ನು ಬಿಟ್ಟರು ನಮ್ಮ ಪ್ರೀತಿಯಲ್ಲಿ ಏನು ಕೊರತೆಯಿತ್ತು ಎನ್ನುವ ನೋವೇ ಹೆಚ್ಚಿರುತ್ತದೆಂಬ ಭಾವನೆ ನನ್ನದು. ನಮ್ಮಿಂದ ಅವರಿಗೆ ಏನು ಕೊರತೆಯಾಯಿತೆಂಬುದು ನಮಗೆ ತಿಳಿಯುವುದು ಹೇಗೆ ! ತಾನು ಏನು ಕಡಿಮೆ ಮಾಡಿದ್ದೇನೆಂದು, ಅಥವಾ ತಾನು ಕೊಡಲಾರದಂತಹುದ್ದನ್ನು ಇನ್ಯಾರೋ ಕೊಡುತ್ತಾರೆಂದುಕೊಂಡು ತನ್ನನ್ನೇ ಬಿಟ್ಟುಹೋದ ಮಗಳಿಂದ ಅಪ್ಪನಿಗೆ ತಾನೇನು ಕೊಡಬೇಕಿತ್ತು ಅಥವಾ ತನ್ನ ಮಗಳು ತನ್ನಿಂದೇನು ಬಯಸಿದ್ದಳು ಎಂದು ತಿಳಿಯುವುದು ಹೇಗೆ ! ಇದರಲ್ಲಿ ಎಲ್ಲವನ್ನೂ ಕೇಳಿ ಪಡೆಯಲು ಸಾಧ್ಯವಿಲ್ಲದಿರುವುದರಿಂದ ತಾವಾಗಿಯೇ ತಿಳಿದುಕೊಳ್ಳುವಂತದ್ದೂ ಬಹಳಷ್ಟಿರುತ್ತದೆ.

ಇದು ಎಲ್ಲಾ ಮಾನವ ಸಂಬಂಧಗಳಿಗೂ ಅನ್ವಯಿಸುವಂತದ್ದು. ಎಲ್ಲಾ ಸಂಬಂಧಗಳಲ್ಲೂ ಇಂತದ್ದೇ ಸ್ವಾರ್ಥವು ಬರುತ್ತಾ ಹೋದಾಗ ಯಾವ ಸಂಬಂಧಕ್ಕೂ ಅರ್ಥವಿಲ್ಲದಂತಾಗುವುದಿಲ್ಲವೆ? ವರ್ಷಗಟ್ಟಲೇ ಪ್ರೀತಿ ಮಾಡಿ ಯಾವುದೊ ಒಂದು ಬಾಲಿಶ ವಿಷಯಕ್ಕೆ ಬೇರಾದ ಪ್ರೇಮಕ್ಕೂ, ವರ್ಷಗಟ್ಟಲೇ ಸಂಸಾರ ಮಾಡಿ ಚಿಕ್ಕ ಜಗಳ ಬೆಳೆದು ವಿಚ್ಛೇದನದವರೆಗೆ ನೆಡೆದ ದಾಂಪತ್ಯಕ್ಕೂ ಅರ್ಥ ಕಳೆದು ಹೋಗುವುದೇ ಆವಾಗ. ಎಷ್ಟೋ ಕಾಲದಿಂದ ಜೊತೆ ಇದ್ದು, ಮನಸ್ಸಿಗೆ ಒಪ್ಪಿಗೆಯಾಗಿ ನಂತರ ಮತ್ಯಾವತ್ತೋ ಅವರ ಹೆಸರು ಕೇಳಿದರೆ ಕಿರಿಕಿರಿಯಾಗುವ ಸ್ಥಿತಿ ಬರುವದೇಕೆ? ಹಾಗಿದ್ದರೆ ಎಲ್ಲವೂ ನೀರಿನ ಮೇಲಿನ ಗುಳ್ಳೆಯಂತೆ ಅಂದುಕೊಂಡು ಯಾವುದನ್ನೂ ಹಚ್ಚಿಕೊಳ್ಳದೇ, ಯಾರಿಗೂ ಪ್ರೀತಿ ಕೊಡದೇ ಸಾಧ್ಯವಾದರೆ ತನ್ನನ್ನಷ್ಟೇ ತಾನು ಪ್ರೀತಿ ಮಾಡಿಕೊಂಡು ಬದುಕುವುದೇ ಜೀವನವಾ ? ಏಕೆಂದರೆ ನಿನ್ನೆ ’ನಿನ್ನ ಬಿಟ್ಟು ಹೇಗಿರಲಿ’ ಎಂದವರು ಇವತ್ತು ’ನಿನ್ನ ದ್ವೇಷಿಸುತ್ತೇನೆ’ ಅಂದು ನಾಳೆ ’ನೀನ್ಯಾರು?’ ಅನ್ನುವದಿಲ್ಲ ಎಂದೇನು ಖಾತರಿ?! ಹಾಗಿದ್ದರೆ better ಅನ್ನಿಸುವೆಡೆಗೆ ನೆಡೆದು ಹೋಗುವುದೂ ತಪ್ಪಾ?! ಯಾಕೆಂದರೆ ಯಾವ ಮಗಳಿಗೂ ತನ್ನಪ್ಪನಿಗೆ ತನ್ನನ್ನು ಪ್ರೀತಿ ಮಾಡು ಎಂದು ಗೋಗರೆಯಲಿಕ್ಕಂತೂ ಆಗದಿದ್ದರೂ ಆ ಪ್ರೀತಿ ಪಡೆಯುವದಕ್ಕಾಗಿ ಬೇರೊಬ್ಬನೊಂದಿಗೆ ಹೋಗುವದಕ್ಕಂತೂ ಸಾಧ್ಯವಿದೆಯಲ್ಲ !! ಅಂದರೆ ಒಟ್ಟಿನಲ್ಲಿ ಈ ಜಗತ್ತಿನಲ್ಲಿ ಯಾವುದೂ ’ಚಿರಂಜೀವಿ’(ಶಾಶ್ವತ) ಯಲ್ಲ !

ಬುಧವಾರ, ಅಕ್ಟೋಬರ್ 10, 2007

ನಮ್ಮೂರಿಗೂ ಬಂದಿದ್ದರು ಕಾರಂತಜ್ಜ !

ಆವಾಗಿನ್ನೂ ಜ್ಞಾನಪೀಠವೆಂದರೇನು ಎನ್ನುವ ಜ್ಞಾನ ಕೂಡ ಇರಲಿಲ್ಲ. ಪರೀಕ್ಷೆಯಲ್ಲಿ "ಕನ್ನಡದಲ್ಲಿ ಜ್ಞಾನಪೀಠ ಪಡೆದವರವರನ್ನು ಹೆಸರಿಸಿ" ಎಂದರೆ ಸಾಲಾಗಿ ೫ ಜನರ ಹೆಸರು ಬರೆಯಲು ಬರುತ್ತಿತ್ತು. ಅದರಲ್ಲಿ ಶಿವರಾಮ ಕಾರಂತರ ಹೆಸರು ನೆನಪು ಬಂದ ಹಾಗೆ ಮೊದಲಿಗೋ ಕೊನೆಗೋ ಬರೆಯುತ್ತಿದ್ದೆ. ಅವರು ಪುಸ್ತಕ ಬರೆಯುತ್ತಾರೆ ಎಂದು ಗೊತ್ತಿತ್ತು. ಆಗಿನ ವಯಸ್ಸಿನಲ್ಲಿ ಅಷ್ಟೇ ತಿಳುವಳಿಕೆ ಶಿವರಾಮ ಕಾರಂತರ ಬಗ್ಗೆ.

ನಮ್ಮ ಮನೆಯ ಹತ್ತಿರವೇ ಲಯನ್ಸ್ ಸಂಸ್ಥೆಯವರು ಒಂದು ಕಣ್ಣಿನ ಆಸ್ಪತ್ರೆ ಕಟ್ಟಿಸಿದ್ದರು. ಅದರ ಉದ್ಘಾಟನೆಗೆ ಅವರು ಕರೆಸಿದ್ದು ಶಿವರಾಮ ಕಾರಂತರನ್ನ! ಆವಾಗಾಗಲೇ ಕಾರಂತರಿಗೆ ಸುಮಾರು ವಯಸ್ಸಾಗಿತ್ತು. ಅದಕ್ಕಿಂತ ಮೊದಲು ಅವರು ನಮ್ಮ ಊರಿಗೆ ಬಂದಿದ್ದರೋ ಇಲ್ಲವೋ ಗೊತ್ತಿಲ್ಲ. ಲಯನ್ಸ್ ಸಂಸ್ಥೆಯಲ್ಲಿ ಪ್ರಭಾವಿಗಳು ಇದ್ದುದ್ದರಿಂದ ಕಾರಂತರನ್ನು ಕರೆಸಲು ಸಫಲರಾಗಿದ್ದರು ಅನಿಸುತ್ತದೆ. ಮನೆಯಲ್ಲಿ ಅಪ್ಪ ಶಿವರಾಮ ಕಾರಂತರು ಬರುತ್ತಾರಂತೆ ಎಂದು ಸಂಭ್ರಮದಿಂದ ಓಡಾಡುತ್ತಿದ್ದರೆ ನಾನು ನಮ್ಮ ಮಾಮೂಲಿ ಶಾಲೆಯ ಕಾರ್ಯಕ್ರಮದಂತೆ ಒಂದಿಷ್ಟು ಭಾಷಣ ಚಪ್ಪಾಳೆಗಳಿರುತ್ತವೆ ಎಂದು ಹೊತ್ತು ಕಳೆಯಲು ಸಮಾರಂಭಕ್ಕೆ ಹೋಗಿದ್ದೆ. ನಮ್ಮ ಊರಿನ, ಪಕ್ಕದೂರುಗಳ ಅಭಿಮಾನಿಗಳು, ಬುದ್ಧಿಜೀವಿಗಳು ಸುಮಾರು ಜನರು ಬಂದಿದ್ದರೆಂದು ಕಾಣುತ್ತದೆ ಅಂತೂ ಸಾಕಷ್ಟು ಜನರಂತೂ ಇದ್ದರು. ಮಾಮೂಲಿನಂತೆ ಉದ್ಘಾಟನೆ , ಪ್ರಾರ್ಥನೆ, ಸ್ವಾಗತ, ಪರಿಚಯ ಇತ್ಯಾದಿ ಎಲ್ಲಾ ಆದಮೇಲೆ ಕಾರಂತರು ಮಾತನಾಡಲು ಶುರು ಮಾಡಿದರು. ಆವಾಗಾಗಲೇ ಶೆಖೆಯಿಂದ ಷಾಮಿಯಾನಾದ ಕೆಳಗೆ ಕೂತಿದ್ದ ಎಲ್ಲರಲ್ಲೂ ಧಾರಾಕಾರವಾಗಿ ಬೆವರು ಹರಿಯುತ್ತಿತ್ತು. ಸರಳವಾಗಿ ಮಿತವಾಗಿ ಮಾತನಾಡಿದ ಅವರು ಉರಿಬಿಸಿಲನ್ನೇ ಉದಾಹರಣೆಗೆ ತೆಗೆದುಕೊಂಡು "ಕಣ್ಣಿನ ಆಸ್ಪತ್ರೆಯನ್ನೇನೋ ಕಟ್ಟಿದ್ದೀರಾ, ಅದರಲ್ಲಿ ಒಳ್ಳೆಯ ಡಾಕ್ಟರುಗಳು, ಒಳ್ಳೆಯ ಉಪಕರಣಗಳು, ಒಳ್ಳೆಯ ಸೇವೆಗಳು ಇತ್ಯಾದಿ ಎಲ್ಲವನ್ನೂ ಮಾಡುತ್ತೀರಾ ಎಂಬ ಭರವಸೆಯಿದೆ, ಅದರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಆದರೆ ಇಷ್ಟೆ ಆದರೆ ಆಯಿತು ಅಂದುಕೊಳ್ಳಬೇಡಿ. ಆಸ್ಪತ್ರೆಯ ಸುತ್ತಲೂ ಮರಗಿಡಗಳನ್ನು ಬೆಳೆಸಿ, ವಾತಾವರಣವನ್ನು ಹಸಿರಿನಿಂದ ತುಂಬಿಸಿ. ಆಗ ಇಲ್ಲಿ ಬರುವ ರೋಗಿಗಳ ತೊಂದರೆ ಆಸ್ಪತ್ರೆಯ ಬಾಗಿಲಿನ ಒಳಗೆ ಕಾಲಿಡುವುದಕ್ಕೇ ಮೊದಲೇ ಅರ್ಧ ವಾಸಿಯಾಗಿರುತ್ತದೆ. ವಾತಾವರಣ ತಂಪಾಗಿರುತ್ತದೆ. ಹಸಿರಿನಿಂದ ತುಂಬಿದ ಪರಿಸರ ಎಲ್ಲರಿಗೂ ಸಂತೋಷ ಕೊಡುತ್ತದೆ, ಮನಸ್ಸು ದೇಹ ಆರೋಗ್ಯವಾಗಿರುತ್ತದೆ" ಎಂದು ಹೇಳಿದ್ದರು.

ಕಾರಂತರ ಮಾತು ನಿಜಕ್ಕೂ ಅಲ್ಲಿ ನೆರೆದಿದ್ದವರ ಮೇಲೆ ಪ್ರಭಾವ ಬೀರಿತ್ತು. ಸಂಸ್ಥೆಯವರು ಕಾರಂತರ ಮಾತನ್ನು ಅರ್ಥ ಮಾಡಿಕೊಂಡಿದ್ದರು. ಅದರ ಪರಿಣಾಮವಾಗಿ ಮಾರನೆಯ ದಿನವೇ ಆಸ್ಪತ್ರೆಯ ಸುತ್ತ ಮುತ್ತಲೂ ಗಿಡಗಳನ್ನು ನೆಡಲಾಯಿತು.ಮೊದಲು ಯಾವುದಕ್ಕೂ ಉಪಯೋಗವಿಲ್ಲದ ಕೊಳಚೆ ತುಂಬಿದ್ದ ಬರಡು ಭೂಮಿಯಿದ್ದ ಜಾಗದಲ್ಲಿ ನಂತರ ಎಂತಹ ಸುಂದರ ಹಸಿರು ಪರಿಸರ ನಿರ್ಮಾಣವಾಯಿತೆಂದರೆ ಈಗಲೂ ನಾನು ಪ್ರತೀ ಸಲ ಊರಿಗೆ ಹೋದಾಗ ಅಲ್ಲಿ ಹೋಗಿ ಖುಷಿ ಪಡುತ್ತೇನೆ. ಆಗಿನಿಂದ ಕಾರಂತರ ಮೇಲೆ ಮೂಡಿ ಬಂದ ಗೌರವ ಅವರ ಸಾಹಿತ್ಯವನ್ನೋದುತ್ತಾ ಈಗಲೂ ಹೆಚ್ಚಾಗುತ್ತಿದೆ. ಹಿರಿಯರ, ಜ್ಞಾನಿಗಳ, ಅನುಭವಿಗಳ ವಿಚಾರಗಳನ್ನು ಅಳವಡಿಸಿಕೊಂಡಾಗ ಅವು ಹೇಗೆ ಬದಲಾವಣೆಗಳನ್ನು ತರಬಲ್ಲುದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಒಂದು ಒಳ್ಳೆ ಉದ್ದೇಶ ಸಾರ್ಥಕವಾಗಲು, ಸಮಾಜಕ್ಕೆ ಸರಿ ದಾರಿ ತೋರಿಸಲು ಇಂತಹ ಹಿರಿಯರು ಹೇಗೆ ಮುಖ್ಯ ಎಂಬುದಕ್ಕೆ ಇದೊಂದು ನಿದರ್ಶನ. ನಯಾಪೈಸೆ ಉಪಯೋಗವಿಲ್ಲದ ಕೆಲವು ಚಿತ್ರನಟಿಯರನ್ನು ರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯನ್ನಾಗಿ ಕರೆಸಿ ಅವರ ಇಂಗ್ಲೀಷು-ಕನ್ನಡದ ಭಾಷಣ ಕೇಳಿ ಚಪ್ಪಾಳೆ ಕುಟ್ಟಿ ಮಾಡುವ ಆಡಂಬರಕ್ಕೆ ಏನರ್ಥವಿದೆ!
******

ಇವೆಲ್ಲಾ ನೆನಪಾಗುವುದಕ್ಕೆ ಕಾರಣವೇನೆಂದರೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹೊರತಂದಿರುವ "ಶಿವರಾಮ ಕಾರಂತರ ಸಾಹಿತ್ಯ ಶ್ರೇಣಿ" ಪುಸ್ತಕಗಳನ್ನು ಮೊನ್ನೆ ಮೊನ್ನೆ ಕೊಂಡು ತಂದೆ. ನಮ್ಮ ಸರ್ಕಾರಗಳೂ ಅಪರೂಪಕ್ಕೆ ಮಾಡುವ ಒಳ್ಳೆ ಕೆಲಸ ನೋಡಿ ಖುಷಿಯಾಯಿತು. ಹತ್ತಿರ ಹತ್ತಿರ ಐದು ನೂರು ಪುಟಗಳ ಕಾರಂತರ ೨-೩ ಕಾದಂಬರಿಗಳು, ನಾಟಕಗಳಿರುವ ಪ್ರತಿ ಪುಸ್ತಕಕ್ಕೆ ಕೇವಲ ೫೦ ರೂಪಾಯಿ ಬೆಲೆ.!! ಓದುವ ಆಸಕ್ತಿಯುಳ್ಳವರು ಬೆಲೆ ಬಗ್ಗೆ ಚಿಂತಿಸುವುದು ಕಡಿಮೆಯಾದರೂ ಕೂಡ ಅದೇ ಕಾರಣದಿಂದ ಹಿಂದೇಟು ಹಾಕುವವರೂ ಬಹಳ ಮಂದಿ ಇರುವುದೂ ಸುಳ್ಳಲ್ಲ. ಸುಮ್ಮನೇ ಒಂದು ರೌಂಡ್ ಹೊರಗೆ ಹೋಗಿಬಂದರೆ ೫೦ ರೂಪಾಯಿ ಖರ್ಚಾಗುವ ಈ ಕಾಲದಲ್ಲಿ ಶಿವರಾಮಕಾರಂತರ ಅಸೀಮ ಸಾಹಿತ್ಯ ಇಷ್ಟು ಸುಲಭ ಬೆಲೆಯಲ್ಲಿ ಸಿಗುತ್ತಿರುವುದು ಅದೃಷ್ಟವೇ ಸೈ. ಇದೇ ರೀತಿ ಕಾರಂತರ ’ವಿಜ್ಞಾನ, ಪರಿಸರ ಸಾಹಿತ್ಯ’ ವೂ ದೊರಕುವಂತಾದರೆ ಚೆನ್ನಾಗಿರುತ್ತದೆ. ಪ್ರತಿ ವರುಷ ಆ ಸಮ್ಮೇಳನ, ಈ ಸಮ್ಮೇಳನ ಎಂದು ಕೋಟ್ಯಾಂತರ ರೂಪಾಯಿ ಸುರಿದು ಮಾಡುವ ಅದ್ಧೂರಿಗಳಿಗಿಂತ ನಿಜವಾಗಿಯೂ ಕನ್ನಡಕ್ಕೆ ಬೇಕಾಗಿರುವುದು ಇಂತಹುದೇ. ಕೋಟಿ ಖರ್ಚು ಮಾಡಿ ಸಮ್ಮೇಳನ ನೆಡೆಸಿ ಪ್ರತಿ ವರುಷ ಕನ್ನಡದ ಒಳಿತಿಗಾಗಿ ಕೈಗೊಂಡ ತೀರ್ಮಾನಗಳನ್ನು ಕಡತಗಳಲ್ಲಿ ಧೂಳು ಹಿಡಿಸುವ ಬದಲು ಅದೇ ಖರ್ಚಿನ ಒಂದು ಭಾಗವನ್ನು ಕನ್ನಡ ಪುಸ್ತಕಗಳಿಗೆ ಬಳಸಿದರೆ ಕನ್ನಡ ಪುಸ್ತಕಗಳ ಮಾರಾಟ ಸಂಖ್ಯೆ ಮೂರು ಪಟ್ಟು ಆಗುವುದರಲ್ಲಿ ಸಂದೇಹವಿಲ್ಲ. ಕನ್ನಡ ಸಾಹಿತ್ಯದ ಪ್ರಚಾರದ ಜೊತೆಗೆ ಇಂಗ್ಲೀಷಿನ ಅಬ್ಬರದಲ್ಲಿ ಕಳೆದು ಹೋಗುತ್ತಿರುವ ಕನ್ನಡದ ಮುಂದಿನ ಪೀಳಿಗೆಯಲ್ಲಿ ಕನ್ನಡವನ್ನು, ಕನ್ನಡತನವನ್ನು ಉಳಿಸಲು ಇಂತಹ ಯೋಜನೆಗಳು ನಿಜಕ್ಕೂ ಸಹಾಯಕಾರಿ.
********
ಕನ್ನಡದ ಆಸ್ತಿ, ಪರಿಸರವಾದಿ , ಕಲಾಸೇವಕ, ಕಡಲ ತೀರದ ಭಾರ್ಗವ, ಬಾಲವನದ ಪ್ರೀತಿಯ ಕಾರಂತಜ್ಜನಿಗೆ ಈ ಬ್ಲಾಗ್ ಮೂಲಕ ಸುಮ್ಮನೇ ಒಂದು ಗೌರವ ನಮನ.

ಬುಧವಾರ, ಸೆಪ್ಟೆಂಬರ್ 5, 2007

ಯಾರನ್ನೂ ಜೀವನಪೂರ್ತಿ ಪ್ರೀತಿ ಮಾಡೋಕ್ಕಾಗಲ್ವಾ?

ಯಾವುದೋ ಒಂದು ಗಳಿಗೆಯಲ್ಲಿ ಅವನು ಹೇಳುತ್ತಾನೆ... "ನಾನು ನಿನ್ನನ್ನ ಜೀವನ ಪೂರ್ತಿ ಪ್ರೀತಿ ಮಾಡ್ತೀನಿ".

ತಕ್ಷಣವೇ ಅವಳಿಂದ ಉತ್ತರ ಬರುತ್ತದೆ.. "ಈ ಜೀವನ ಪೂರ್ತಿ ಪ್ರೀತಿ ಅನ್ನೋದೆಲ್ಲಾ crap".

ಅವನಿಗೆ ಗಾಬರಿ..

ಅವಳೇ ಮುಂದುವರೆಸುತ್ತಾಳೆ.. "ಹೌದು ಕಣೋ, ಈ ಜೀವನ ಪೂರ್ತಿ ಪ್ರೀತಿ ಅನ್ನೋದು ನಾವು ಯಾವುದೋ ಒಂದು ಒಳ್ಳೆ ಮೂಡಲ್ಲಿದ್ದಾಗ ಮಾಡಿಕೊಳ್ಳೋ ಒಂದು assumption ಅಷ್ಟೆ. ಅದು reality ಅಲ್ಲ".
ಕಡ್ಡಿ ಮುರಿದಂತೆ ಅವಳ ಮಾತುಗಳು. ಅವಳು ಹಾಗೇ, ಎಲ್ಲರ ಹಾಗೆ ಭ್ರಮಾಲೋಕದಲ್ಲಿ ತೇಲುತ್ತಾ, ಕನಸು ಕಂಡು, ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಕೊನೆಗೆ ಕೊರಗುವಳಲ್ಲ. ಅವಳದ್ದೇನಿದ್ದರೂ ವಾಸ್ತವತೆಗೆ ಹೆಚ್ಚು ಮಹತ್ವ. ಅದರಲ್ಲೇ ಹೆಚ್ಚು ನಂಬಿಕೆ.

ಅವಳು ಹೇಳುತ್ತಾಳೆ ..."ಮೊದಲನೆಯದಾಗಿ ಈ ಪ್ರೀತಿ ಅನ್ನೋದೆ ಅಗತ್ಯ, ಅನಿವಾರ್ಯತೆ, ಕಮಿಟ್ ಮೆಂಟ್ ಗಳ ಮೇಲೆ ನಿಂತಿರುವಂತದ್ದು".

"ನೀನು ಸುಮ್ನೆ ಎಲ್ಲಾದಕ್ಕೂ ನೆಗೆಟಿವ್ ಯೋಚನೆ ಮಾಡ್ತೀಯಾ ಕಣೆ. ಎಷ್ಟೋ ವರುಷಗಳಿಂದ ಪ್ರೀತಿ ಇಟ್ಕೊಂಡು ಬದುಕ್ತಾ ಇರೋರನ್ನ ನೋಡಿಲ್ವಾ. ಗೆಳೆಯ ಗೆಳತಿಯರ ಸ್ನೇಹದಲ್ಲೇ ಎಂಥಾ ಪ್ರೀತಿ ಇರತ್ತೆ ಗೊತ್ತಾ.?"

"ಹೌದು, ಈ ಪ್ರೀತಿ ಅನ್ನೋದು ಹಾಗೆ. ಒಂದು ಹಂತದವರೆಗೆ ಇರತ್ತೆ. ನಾವು ಅವರು ಚೆನ್ನಾಗಿರೋವಷ್ಟು ದಿನ, ಸಂಪರ್ಕದಲ್ಲಿರೋವಷ್ಟು ದಿನ. ಕ್ರಮೇಣ ಅದು ಅವರವರ ಕೆಲಸ, ಜೀವನದ ಗಿಜಿಗಿಜಿಯಲ್ಲಿ ಮಾಯವಾಗತ್ತೆ. ನಂತರ ಅದು ಬರೀ ನೆನಪಿನಂಗಳದಲ್ಲಿ ಮಾತ್ರ ಉಳಿಯತ್ತೆ. ಸ್ನೇಹ ಅನ್ನೋದು ಹಾಗೇ ಇರಬಹುದೆ ಹೊರತು ಅದು ಜೀವನ ಪೂರ್ತಿ ಪ್ರೀತಿ ಅಂತ ಕರೆಸ್ಕಳೊಕ್ಕಾಗಲ್ಲ."

"ಹಾಗಿದ್ರೆ ಈ ಅಮ್ಮ, ಮಗ, ಮಗಳು, ಅಣ್ಣ, ತಂಗಿ, ಅಪ್ಪ ಇತ್ಯಾದಿ ರಕ್ತ ಸಂಬಂಧಗಳ ಕಥೆ?"

"ಅದೂ ಹಾಗೆ, ಎಲ್ಲಾ ಚೆನ್ನಾಗಿರೋ ತನಕ ಅಷ್ಟೆ. ಒಮ್ಮೆ ಏನಾದರೂ ಅಸಮಾಧಾನ, ವಿರಸ, ಜಗಳ ಏನೋ ಆಯ್ತು ಅಂದ್ರೆ ಆ ಪ್ರೀತಿ ಒಳಗೊಳಗೇ ಕರಗುತ್ತಾ ಹೋಗತ್ತೆ. ಮೇಲಿಂದ ಅವರು ನಮ್ಮ ಅಕ್ಕ ತಂಗಿ ಅಮ್ಮ ಅಪ್ಪ ಅಂತ ಒಂದು ವಾತ್ಸಲ್ಯ, ಜವಾಬ್ದಾರಿ ಇದ್ರೂ ಕೂಡ ಅದನ್ನೂ ಕೂಡ ಜೀವನ ಪೂರ್ತಿ ಪ್ರೀತಿ ಅನ್ನೋಕಾಗಲ್ಲ."

"೩೦-೪೦ ವರ್ಷಗಳಿಂದ ಪ್ರೀತಿ,ಅಭಿಮಾನದಿಂದ ಚೆನ್ನಾಗಿ ಸಂಸಾರ ಮಾಡ್ಕೊಂಡು ಇರೋ ಗಂಡ ಹೆಂಡತಿಯರು ಎಷ್ಟು ಜನ ಇಲ್ಲ , ಅವ್ರೇನು ಸುಮ್ ಸುಮ್ನೆ ಜೊತೆಗಿದಾರೆ ಅನ್ಕೊಂಡಿದಿಯಾ?"

"ಅದು ಪ್ರೀತಿ, ಅಭಿಮಾನ ಅಲ್ವೋ, ಅದು ಅಗತ್ಯ, ಅನಿವಾರ್ಯತೆ, ಅವಲಂಬನೆ, ರೂಢಿ ಅಷ್ಟೆ. ಉದಾಹರಣೆಗೆ ಮಕ್ಕಳು, ಸಮಾಜ ಇತ್ಯಾದಿ. ಅವರಿಬ್ಬರಲ್ಲಿ ಎಂದೂ ಬತ್ತದ ಪ್ರೀತಿ ಇರತ್ತೆ ಅದರಿಂದಲೇ ಅವರು ಜೀವನ ಪೂರ್ತಿ ಒಟ್ಟಿಗೇ ಇರ್ತಾರೆ ಅಂತ ಹೇಳಕ್ಕಾಗಲ್ಲ."

"ಏನೋ ಹೇಳ್ತೀಯಮ್ಮಾ ನೀನು. ಒಟ್ನಲ್ಲಿ ಜೀವನ ಪೂರ್ತಿ ಪ್ರೀತಿ ಮಾಡೋಕ್ಕಾಗಲ್ಲ, ಅದು ಸುಳ್ಳು ಅಂತನಾ ನಿನ್ನಭಿಪ್ರಾಯ?"

"ಸುಳ್ಳು ಅಂತ ಹೇಳ್ತಾ ಇಲ್ಲ, ಆದ್ರೆ ಈ ಜೀವನ ಪೂರ್ತಿ ಪ್ರೀತಿ ಅನ್ನೋದು ಒಂದು ರೀತಿ ಕಮಿಟ್ ಮೆಂಟ್ ಆಗತ್ತೇ ಹೊರತು ನಿಜವಾದ ಪ್ರೀತಿ ಅಲ್ಲ ಅಂತಿದಿನಿ. ಪ್ರೀತಿ ಸತ್ತೋದಮೇಲೆ ಆ ಕಮಿಟ್ ಮೆಂಟ್ ಗೆ ಅಥವಾ ಜೊತೆಗಿರೋದ್ರಲ್ಲಿ ಅರ್ಥ ಏನಿದೆ ಹೇಳು?"

"ಹೌದು ಕಣೇ, ಪ್ರೀತಿ ಸತ್ತೋದ್ಮೇಲೆ ಅದಕ್ಕೆ ಅರ್ಥ ಇಲ್ಲ, ಅದು ಕಮಿಟ್ ಮೆಂಟ್ ಆಗತ್ತೇ ಅಂತ ಒಪ್ಕೋತೀನಿ, ಅದು ವ್ಯರ್ಥ, ಆದ್ರೇ ಆ ಪ್ರೀತಿ ಸಾಯದೇ ಇರೋ ತರ ಸಂಬಂಧ ಇಟ್ಕೋಬೇಕು ಅಂತ ನಾನು ಹೇಳ್ತಿರೋದು."

"ಹಾಗೆ ನಾವು ಅನ್ಕೋತೀವಿ, ಆದ್ರೆ ನಮಗೆ ಗೊತ್ತಿಲ್ಲದ ಹಾಗೆ ಅದಕ್ಕೆ ವಿರುದ್ಧವಾಗಿ ಆಗ್ಬಿಡತ್ತೆ. ಈಗ ಒಂದು ಕೆಳಮಟ್ಟದ ಉದಾಹರಣೆ ತಗಳೋಣ. ನಿನ್ನ ಹೆಂಡತಿಗೋ, ಪ್ರೇಮಿಗೋ ಅಥವಾ ಇನ್ಯಾರಿಗೋ ಏನೋ ಆಗತ್ತೆ, ಅವರ ಕಣ್ಣು ಕುರುಡಾಗ್ಬೋದು, ಅವರ ಕಾಲು ಮುರ್ದೋಗ್ಬೋದು, ಬುದ್ಧಿ ಭ್ರಮಣೆ ಆಗ್ಬೋದು. ಆವಾಗ್ಲೂ ಅವರಲ್ಲಿ ಅದೇ ಪ್ರೀತಿ ಇರತ್ತಾ? ಅನುಕಂಪ ಹುಟ್ಬೋದು, ಅದು ಬೇರೆ ವಿಷ್ಯ. ಅದು ಪ್ರೀತಿ ಆಗಲ್ಲ."


"ಅಲ್ಲೇ ನೀನು ತಪ್ಪು ತಿಳ್ಕೊಂಡಿರೋದು, ಪ್ರೀತಿ ಅನ್ನೋದು ಈ ಮೋಹ, ಅನುಕಂಪ, ವಾತ್ಸಲ್ಯ, ಕಾಮ, ರೂಢಿ, ಬದ್ಧತೆ, ಸೇವೆ, ಸ್ನೇಹ, ರಕ್ತ ಸಂಬಂಧ, ಸೆಳೆತ, ಅಗತ್ಯ, ಕೆಲವೊಮ್ಮೆ ಆಕಸ್ಮಿಕ ಹೀಗೆ ಇನ್ನೂ ಹಲವಾರು ರೂಪಗಳಲ್ಲಿ ಅಥವಾ ಅವುಗಳಲ್ಲಿ ಕೆಲವುದರ ಮಿಶ್ರಣದ ರೂಪದಲ್ಲಿ ಇರತ್ಯೇ ಹೊರತು ಪ್ರೀತಿ ಅನ್ನೋದಕ್ಕೆ ಬೇರೆಯಾದ ರೂಪ ಇಲ್ಲ ಕಣೇ."


"ಏನೇ ಇರ್ಲಿ, ಜೀವನ ಪೂರ್ತಿ ಪ್ರೀತಿ ಅನ್ನೋದು ತಾನಾಗೇ ಇರುವಂತದ್ದು, ಬರುವಂತದ್ದೇ ಹೊರತು ನಾವು ಮಾಡ್ತೀವಿ, ಕಾಪಾಡ್ಕೋತೀವಿ ಅನ್ಕೊಳೋವಂತದ್ದಲ್ಲ. ಅದು ಸಾಧ್ಯನೂ ಇಲ್ಲ."

"ಒಟ್ನಲ್ಲಿ ನಾನು ಹೇಳೋದು ನಿಂಗರ್ಥ ಆಗ್ತಾ ಇಲ್ಲ, ನೀ ಹೇಳೋದು ನಂಗರ್ಥ ಆಗಲ್ಲ."

"ಹಾಗಿದ್ರೆ ಏನಂತ ತೀರ್ಮಾನ ಮಾಡೋಣ?"

"ಅಯ್ಯೋ, ನಾವು ತೀರ್ಮಾನ ಮಾಡೋವಷ್ಟು ದೊಡ್ಡೋರೂ ಅಲ್ಲ, ನಮಗಿನ್ನೂ ಆ ಮಟ್ಟಿಗೆ ಮನಸ್ಸು ಪಕ್ವವಾಗೂ ಇಲ್ಲ. ಏನೋ ನಮಗನ್ನಿಸಿದ್ದು, ನಮ್ಮ ವಯಸ್ಸಿಗೆ ಅನುಭವಕ್ಕೆ ಬಂದಷ್ಟು, ನಮ್ಮ ಜಗತ್ತಿನಲ್ಲಿ ಕಂಡದ್ದನ್ನ ಹೇಳ್ಕೋತೀವಷ್ಟೆ. ಈ ತೀರ್ಮಾನ ಎಲ್ಲಾ ಅವರವರಿಗೇ ಬಿಟ್ಟಿದ್ದು."

"ಹ್ಮ್.. ಹೌದು. ಅದೂ ಸರಿನೇ ಬಿಡು. "

ನಂತರ ನೆಲೆಸಿದ್ದು ಅಲ್ಲೊಂದು ದೀರ್ಘ ಮೌನ.

ಬುಧವಾರ, ಆಗಸ್ಟ್ 29, 2007

ಬೋಡಿಲಿಂಗ

ಭರ್ರೆನ್ನುತ್ತಾ ಬರುತ್ತದೆ ಬಿ.ಎಂ.ಟಿ.ಸಿ ಬಸ್ಸು. ತಕ್ಷಣವೇ ಏನೋ ಆಯಿತೆನ್ನುವ ಹಾಗೆ ಜನರ ಗುಂಪು ಆ ಕಡೆಗೆ ಓಡುತ್ತದೆ. ಒಂದೇ ಸಮನೆ ಬಾಗಿಲಲ್ಲಿ ನೂಕಾಟ, ತಳ್ಳಾಟ, ತಿಕ್ಕಾಟ. ಎಲ್ಲರಿಗೂ ಸೀಟು ಹಿಡಿಯುವ ತವಕ. ಡ್ರೈವರ್ರು, ಕಂಡಕ್ಟರ್ರು ಮೂಕ ಪ್ರೇಕ್ಷಕರು. ದಿನಾ ಸಾಯುವವರಿಗೆ ಅತ್ತೂ ಅತ್ತೂ ಅವರೂ ಸತ್ತಿದ್ದಾರೆ. ಹೇಗೋ ಸಾವರಿಸಿಕೊಂಡು ಈತನೂ ಹತ್ತುತ್ತಾನೆ. ಬಾಗಿಲಲ್ಲೇ ಮುಕುರಿಕೊಂಡ ಜನ. ಒಳಗೆ ಜಾಗವಿದ್ದರೂ ಅಲ್ಲೇ ಅಂಟು ಹಾಕಿಕೊಂಡು ನಿಂತಿದ್ದಾರೆ. ಕೇಳಿದರೆ ಎಲ್ಲರೂ ನೆಕ್ಸ್ಟ್ ಸ್ಟಾಪು ! “ಒಳಗೆ ಹೋಗ್ರಿ, ಹಿಂದಕ್ಕೆ ಹೋಗ್ರಿ ಖಾಲಿ ಇದೆ....” ಕಂಡಕ್ಟರನ ಕೂಗು ಅರಣ್ಯ ರೋದನ. ಇವನ ದುರಾದೃಷ್ಟ . ಸೀಟಂತೂ ಇಲ್ಲ. ಸೀಟು ಸಿಕ್ಕವರಿಗೆಲ್ಲಾ ಏನೋ ತೃಪ್ತಿ. ಇನ್ನು ಕೆಲವೆ ಹೊತ್ತಿನಲ್ಲಿ ಆ ಸೀಟಿಗೂ ನಮಗೂ ಸಂಬಂಧವಿಲ್ಲವೆಂದು ಗೊತ್ತಿದ್ದರೂ ತಾವು ಹಿಡಿದಿರುವುದು ಸಿಂಹಾಸನವೇನೋ ಎಂಬಂತ ಭಾವ.“ಯೋ ನಿಂಗ್ಯಾವನಯ್ಯ ಬ್ಯಾಗ್ ಇಡಕ್ಕೇಳಿದ್ದು ? ಸಿಟಿ ಬಸ್ಸಲ್ಲಿ ರಿಸರ್ವೇಷನ್ ಇಲ್ಲ ಹೋಗಯ್ಯ” ಮೂರನೇ ಸಾಲಿನಲ್ಲೇನೋ ಜಗಳ. ಅದರೆಡೆಗೊಂದು ಈತನ ನಿಸ್ತೇಜ ನೋಟ. ನಿಂತುಕೊಳ್ಳಲಾದರೂ ಒಳ್ಳೆ ಜಾಗ ಸಿಗುತ್ತದೆಯೊ ಎಂದು ನೋಡಿದವನಿಗೆ ಹಿಂದುಗಡೆ ಕೊನೆ ಕಂಬವೊಂದು ಆಶಾಕಿರಣ. ಅವಸವಸರವಾಗಿ ಹೋಗಿ ಆ ಕಂಬಕ್ಕೆ ಬೆನ್ನು ಚೆಲ್ಲಿದವನಿಂದ ಒಂದು ಸಣ್ಣ ನಿಟ್ಟುಸಿರು.

ಕಂಬಕ್ಕೊರಗಿಯೇ ಈತ ಒಮ್ಮೆ ಸುತ್ತಲೂ ಕಣ್ಣು ಹಾಯಿಸುತ್ತಾನೆ. ಯಾರಾದರೂ ಮುಂದಿನ ಸ್ಟಾಪಿನಲ್ಲಿ ಇಳಿಯಬಹುದಾ, ತನಗೆ ಸೀಟು ಸಿಗುತ್ತದಾ? ಅವನ್ಯಾವನದೋ ಕೈಯಲ್ಲಿ ದೊಡ್ಡ ಚೀಲ, ಅವನು ಖಂಡಿತ ಇಳಿಯುವುದಿಲ್ಲ, ಬ್ಯಾಗಿನೊಳಗೆ ಕೈಹಾಕಿ ನೋಟ್ಸು ತೆಗೆಯುತ್ತಿರುವ ಕಾಲೇಜು ಹುಡುಗ, ಕೈಯಲ್ಲಿ ವಿಜಯ ಕರ್ನಾಟಕ ಹಿಡಿದು ಸೆಟ್ಲಾಗಿರುವ ಅಂಕಲ್ಲು, ಎಪ್ಫೆಮ್ ಕೇಳಲು ಕಿವಿಗೆ ಇಯರ್ ಫೋನ್ ತುರುಕಿಕೊಳ್ಳುತ್ತಿರುವ ಯುವಕ, ಕೊನೆಯ ಸಾಲಿನ ಅಷ್ಟೂ ಸೀಟುಗಳನ್ನು ಆಕ್ರಮಿಸಿ ಯುದ್ಧ ಗೆದ್ದವರಂತೆ ಕೂತು “ಲೇ ಕಿಟ್ಕಿ ತೆಗಿಲೇ, ಸರಿಲೇ ಆಕಡಿ, ಮಂದಾಕಿನಿ ಸಾಂಗ್ ಹಾಕ್ಲೇ....” ಎಂದು ಗದ್ದಲ ಮಾಡುತ್ತಿರುವ ಉತ್ತರ ಕರ್ನಾಟಕದ ಹುಡುಗರು... ಉಹೂಂ ಯಾರೂ ಹತ್ತಿರದಲ್ಲಿ ಇಳಿಯುವ ಲಕ್ಷಣ ಕಾಣುತ್ತಿಲ್ಲ. ಅವನಿಗೆ ಆ ಕಂಬವೇ ಗತಿ.

ರೈಟ್ ರೈಟ್ ..... ಎಂಟ್ರಿ ಹಾಕಿಸಿ ದಡಬಡಾಯಿಸಿ ಹತ್ತಿದ ಕಂಡಕ್ಟರ್ ಕೂಗಿನ ಬೆನ್ನಲ್ಲೇ ಬಸ್ಸು ಸ್ಟಾರ್ಟಾಗುತ್ತದೆ. ತುಂಬಿ ಹರಿಯುತ್ತಿರುವ ಟ್ರಾಫಿಕ್ಕಿಗೆ ಬಸ್ಸಿನ ಸೇರ್ಪಡೆಯಾಗುತ್ತದೆ. "ಯಾರ್ರೀ ಟಿಕೆಟ್, ಪಾಸ್ ನವ್ರೆಲ್ಲಾ ಕೈಯಲ್ಲಿ ಹಿಡ್ಕಳ್ರಿ.. ಎಲ್ಲಿಗ್ರೀ ನಿಮ್ದು...ಚಿಲ್ರೆ ಕೊಡ್ರಿ... " ಅನ್ನುತ್ತಾ ಕಂಡಕ್ಟರನ ಆಗಮನ, ಅಬ್ಬರ. "ಪಾಸ್ ಪಾಸ್ ಪಾಸ್ ಪಾಸ್ ...." ಹಿಂದಿನ ಸಾಲಿನ ಹುಡುಗರೆಲ್ಲಾ ಕೈ ಎತ್ತುತ್ತಾರೆ. “ತೆಗ್ದು ತೋರ್ಸ್ಬೇಕು ಎಲ್ರೂ” ಅನ್ನುತ್ತಲೇ ಉಳಿದವರಿಗೆಲ್ಲಾ ಟಿಕೆಟ್ ಕೊಟ್ಟು ಕಂಡಕ್ಟರ್ ನಿರ್ಗಮನ ಮುಂದೆ ಹೆಂಗಸರ ಕಡೆಗೆ. ಬಾಗಿಲಲ್ಲಿ ನಿಂತವರಿಗೆ ರೂಢಿಯಂತ “ಒಳಗೋಗ್ರಿ ಖಾಲಿ ಇದೆ, ಇಲ್ಲಿ ನಿಂತ್ಕಂಡ್ಯಾಕ್ರೀ ಸಾಯ್ತೀರಾ” ಎಂಬ ಬೈಗುಳ.


೧೦ ನಿಮಿಷ, ೧೫ ನಿಮಿಷ, ೨೦ ನಿಮಿಷ ಆಯಿತು...ಬಸ್ಸು ಹೋಗುತ್ತಿದೆ..... ಸ್ಟಾಪುಗಳಲ್ಲಿ ನಿಂತು ಜನರನ್ನು ಹತ್ತಿಸಿಕೊಳ್ಳುತ್ತಾ, ಇಳಿಸುತ್ತಾ. ಈತ ಕೊನೆ ಕಂಬದಲ್ಲಿ ಅಂಟಿಕೊಂಡಿದ್ದಾನೆ. ಕಾಲುಗಳಲ್ಲಿ ಸಣ್ಣ ನೋವು. ಅದನ್ನು ಮರೆಯಲು ಹಾಡು ಕೇಳೋಣವೆಂದು ಎಪ್ಫೆಮ್ ಕಿವಿಗಿಟ್ಟುಕೊಳ್ಳುತ್ತಾನೆ. 'ಓನ್ಲಿ ಕನ್ನಡ ಸಾಂಗ್ಸ್ ಅಷ್ಟೆ' ಎಂದು ಇಂಗ್ಲೀಷಿನಲ್ಲಿ ಅರಚುತ್ತಿರುವ ಚಾನೆಲ್ ಒಂದನ್ನು ಟ್ಯೂನ್ ಮಾಡುತ್ತಾನೆ. ಅದರಲ್ಲಿ ಅದೇ “ಏನೋ ಒಂಥರಾಆಆಆಆಆಆಆಅ....” ಹಾಡು. ದಿನಾ ಅದನ್ನೇ ಕೇಳಿ ಕೇಳಿ ಬೇಜಾರಾಗಿ ಏನೋ ಒಂಥರಾ ಆಗುತ್ತಿದೆ. ಬಸ್ಸು ಸಾಗುತ್ತಿದೆ.

ಹಾಡು ಬೇಜಾರಾಗಿದೆ. ಕಂಬಕ್ಕೊರಗಿಕೊಂಡೇ ಸುತ್ತಲಿನ ಜನರನ್ನು ನೋಡುತ್ತಾನೆ. ಕಿಟಕಿಯಿಂದ ಹೊರಗೆ ನೋಡುತ್ತಾ ಸುಮ್ಮನೇ ಕುಳಿತವರ ಮುಖದಲ್ಲಿ ಶೂನ್ಯಭಾವ, ಇಯರ್ ಫೋನ್ ಕಿವಿಗಿಟ್ಟಿಕೊಂಡು ಸುಮ್ಮನೇ ಕಣ್ಣು ಮುಚ್ಚಿದ್ದಾರೊ ಅಥವಾ ನಿದ್ದೆ ಮಾಡಿದ್ದಾರೋ ಗೊತ್ತಾಗದ ಜನ,ವಿಜಯ ಕರ್ನಾಟಕ ಹಿಡಿದುಕೊಂಡವನು ಕೊನೆಯ ಪುಟಕ್ಕೆ ಬಂದಿದ್ದಾನೆ, ಅವನು ಮುಗಿಸಿದ ಕೂಡಲೇ ಇಸಿದುಕೊಳ್ಳಲು ಪಕ್ಕದವನ ತವಕ, ನೋಟ್ಸು ತಿರುವಿ ಹಾಕುತ್ತಿರುವ ಕಾಲೇಜು ಹುಡುಗನ ಮುಖದಲ್ಲಿ ಯಾವುದೋ ಪರೀಕ್ಷೆಯ ಆತಂಕ, ಜೋಲು ಮುಖಗಳು, ತನಗ್ಯಾರಾದರೂ ಸೀಟು ಬಿಟ್ಟು ಕೊಡುವರೇನೋ ಎಂದು ಎಲ್ಲಾ ಕಡೆ ತಿರುತಿರುಗಿ ನೋಡುತ್ತಿರುವ ಮುದುಕ, ಯಾರೊಂದಿಗೋ ಫೋನಿನಲ್ಲಿ ಮಾತಾಡುತ್ತಾ, ನಗುತ್ತಿರುವವರು, ಸೀಟೊಂದಕ್ಕೆ ಒರಗಿ ನಿಂತವನ ಜೋಳಿಗೆಯಂತಾ ಚೀಲದಿಂದ ಏನೋ ಸೋರುತ್ತಿದೆ, ಬಹುಶಃ ಊಟದ ಡಬ್ಬಿಯಿಂದ ಸಾರೋ ನೀರೋ ಇರಬೇಕು, ಹಿಂದೆ ಕೇಕೆ ಮುಂದುವರಿಸಿರುವ ಹುಡುಗರು.... ಹೀಗೇ ಏನೇನೋ , ಯಾರ್ಯಾರೋ . ಎಲ್ಲಾ ದಿನಾ ಕಾಣುವಂತವೇ ಅಂದುಕೊಂಡು ಮುಖ ಕೆಳಕ್ಕೆ ಹಾಕುತ್ತಿರುವಾಗ ಎಫ್ಫೆಮ್ ನಲ್ಲಿ ಅಣ್ಣಾವ್ರ ಹಾಡು..."ಮಾನವನಾಗಿ ಹುಟ್ಟಿದ ಮೇಲೆ ಏನೇನು ಕಂಡಿ, ಸಾಯೋತನಕ..... " ಅವನ ಮನಸ್ಸಿಗೆ ಖುಷಿಯೆನಿಸಿ ಮತ್ತೆ ಎಪ್ಫೆಮ್ನಲ್ಲಿ ತಲ್ಲೀನನಾಗುತ್ತಾನೆ.

ಇದ್ದಕ್ಕಿದ್ದಂತೇ ಬಾಗಿಲಿನ ಪಕ್ಕದ ಸೀಟಿನಲ್ಲಿ ಏನೋ ಜಗಳ, ಕೂಗಾಟ. ಎಲ್ಲರೂ ಅಲ್ಲಿ ನೋಡುತ್ತಾರೆ. ೪ ಜನ ತಮಿಳಿನಲ್ಲಿ ಏನೊ ಮಾತಾಡುತ್ತಿದ್ದಾರೆ. ಈತನಿಗೆ ತಿಳಿಯುತ್ತಿಲ್ಲ. ಆದರೂ ಅದು ಜಗಳವಲ್ಲ. ಅವರು ಮಾತಾಡುವುದೇ ಹಾಗೇ ಎಂದು ತಿಳಿಯುತ್ತದೆ, ಸಮಾಧಾನವಾಗುತ್ತದೆ. ಬಾಗಿಲಿನಲ್ಲಿ ಬಿಹಾರಿಯೊಬ್ಬ ಕೂಗುತ್ತಿದ್ದಾನೆ. ಒಳಗೆಲ್ಲೋ ಕುಳಿತ ಅವನ ಸ್ನೇಹಿತನನ್ನು ಕರೆಯುತ್ತಿದ್ದಾನೆ. ಅವರಿಗೆ ತಾವು ಹತ್ತಿದ್ದೆಲ್ಲಿ, ಇಳಿಯುವುದೆಲ್ಲಿ ಎನ್ನುವುದೂ ಗೊತ್ತಿಲ್ಲ. ಸ್ವಲ್ಪ ಹೊತ್ತು ಕಿರುಚಾಡಿ ಸುಮ್ಮನಾಗುತ್ತಾರೆ. ಯಾರದ್ದೋ ನೋಕಿಯಾ ಫೋನು ಕಿವಿ ಕೊರೆಯುವಂತೆ ಮೊಳಗುತ್ತದೆ. ಎತ್ತಿಕೊಂಡವನಿಂದ ತನ್ನ ಬಾಸಿಗೆ ಇಂಗ್ಲೀಷಿನಲ್ಲಿ ಸುಳ್ಳುಗಳ ಸುರಿಮಳೆ. ಅವನ ಮಾತಿನಿಂದ ಅವನ್ಯಾವುದೋ ವ್ಯಾಪಾರ ಮಾಡುವವನೆಂದು ತಿಳಿಯುತ್ತದೆ. ಅದೋ ಆ ೧ ಸಾಲು ಆಚೆ ಇಬ್ಬರು ಇಳಿಯಲು ಏಳುತ್ತಿದ್ದಾರೆ. ತಕ್ಷಣವೇ ಸೀಟಿಗೆ ಪೈಪೋಟಿ. ಈತನೂ ವಿಫಲ ಯತ್ನ ನೆಡೆಸುತ್ತಾನೆ. ಮತ್ತೆ ಅದೇ ಕಂಬವೇ ಗತಿಯಾಗುತ್ತದೆ. ಮತ್ತೆ ಪ್ರಯಾಣ ಮುಂದುವರೆಯುತ್ತದೆ. ಕಾಲು ನೋವು ಜೋರಾಗುತ್ತಿದೆ. ಕೈಗಳು ಸೋಲುತ್ತಿವೆ. ನಿಲ್ಲುತ್ತಾ, ಓಡುತ್ತಾ, ಮುಗ್ಗರಿಸುತ್ತಾ ಬಸ್ಸು ಸಾಗುತ್ತಿದೆ.


ನಂತರದ್ದು ಯಾವುದೋ ಮುಖ್ಯ ಸ್ಟಾಪು. ಬಸ್ಸು ನಿಲ್ಲುತ್ತಿದ್ದಂತೇ ಸುಮಾರು ಜನ ಇಳಿಯುತ್ತಾರೆ. ಈತನಿಗೆ ಕಂಬದಿಂದ ಮುಕ್ತಿ. ಕಿಟಕಿ ಪಕ್ಕದ ಸೀಟಿನಲ್ಲಿ ನೆಮ್ಮದಿಯಿಂದ ಪವಡಿಸುತ್ತಾನೆ. ಇಳಿದಷ್ಟೆ ಜನ ಮತ್ತೆ ಹತ್ತುತ್ತಾರೆ. ಬಸ್ಸು ಹೊರಡುತ್ತದೆ. ಸಹಜವಾಗಿ ದೃಷ್ಟಿ ಬಸ್ಸಿನ ಮುಂಭಾಗದತ್ತ ಹೊರಳುತ್ತದೆ. ಕಣ್ಣು ಅರಳುತ್ತದೆ. ರೇಷ್ಮೆ ಕೂದಲ ಹುಡುಗಿ !. ಮುಂದಕ್ಕೆ ಮುಖ ಮಾಡಿಕೊಂಡು ನಿಂತಿದ್ದಾಳೆ, ಹಿಂದಿನಿಂದ ಸಕತ್ ಫಿಗರ್ ! ಮುಖ ನೋಡುವ ಆಸೆಯಾಗುತ್ತದೆ. ಅರೆ, ಇಷ್ಟು ಹೊತ್ತು ಇವಳ್ಯಾಕೆ ಕಾಣಲಿಲ್ಲ ಎಂದುಕೊಳ್ಳುತ್ತಿರುವಾಗಲೇ ಡ್ರೈವರ್ ಕೆಟ್ಟದಾಗಿ ಬ್ರೇಕು ಹಾಕುತ್ತಾನೆ ಯಾರನ್ನೋ ಬೈಯುತ್ತಾನೆ, ಮುಂದೆ ಸಾಗುತ್ತಾನೆ. ಈತನಿಗೆ ಆ ಹುಡುಗಿಯ ಮುಖ ನೋಡುವ ಕುತೂಹಲ. ಆಕೆ ಒಂದು ಸ್ವಲ್ಪವೂ ಹಿಂದೆ ತಿರುಗುತ್ತಿಲ್ಲ. ಗೊಂಬೆಯಂತೆ ನಿಂತಿದ್ದಾಳೆ. ಹೊತ್ತು ಕಳೆದಂತೆ ಕುತೂಹಲ ಜಾಸ್ತಿಯಾಗುತ್ತದೆ. ಕಾಯುತ್ತಾನೆ. ಕಾದೂ ಕಾದು ಬೇಸರ ಶುರುವಾಗುತ್ತದೆ. ಇದ್ದಕ್ಕಿದ್ದ ಹಾಗೇ ಯಾವುದೋ ಹುಡುಗಿ ಯಾರನ್ನೋ ಕರೆಯುತ್ತಾಳೆ. ಅಲ್ಲಿವರೆಗೆ ಮುಂದೆ ನೋಡುತ್ತಾ ನಿಂತಿದ್ದ ಹುಡುಗಿ ಹಿಂದಕ್ಕೆ ತಿರುಗುತ್ತಾಳೆ. ಈತನಿಗೆ ನಿರಾಸೆ. ಆ ಹುಡುಗಿ ನೋಡಲೂ ಚೂರೂ ಚೆನ್ನಾಗಿಲ್ಲ. ಹಿಂದಿನಿಂದ ಮಾತ್ರ ಸೊಗಸು. ಮನಸ್ಸಿನಲ್ಲೇ ಥತ್ ಎಂದುಕೊಂಡು ಕೂರುತ್ತಾನೆ.ಹೊರಗೆ ತಲೆಕೆಡಿಸುವ ಟ್ರಾಫಿಕ್ಕು. ದಿನಾ ನೋಡಿ ಅಭ್ಯಾಸವಿರುವುದರಿಂದ ಅದರೆಡೆಗೆ ವಿಶೇಷ ಗಮನ ಹೋಗುವುದಿಲ್ಲ. ಆಗ ನೆನಪಾಗುತ್ತದೆ ತಾನು ಟೈಂಪಾಸಿಗೆ ಓದಲು ತಂದಿರುವ ಪುಸ್ತಕ. ಕವರಿನಿಂದ ಪುಸ್ತಕ ತೆಗೆದು ಓದಲು ತೊಡಗುತ್ತಾನೆ. ಕಥೆ ಆಸಕ್ತಿ ಕೆರಳಿಸುತ್ತಿದೆ. ಬಸ್ಸಿನಲ್ಲಿ ಏನಾಗುತ್ತಿದೆ ಎಂಬ ಪರಿವೆಯಿಲ. ಅದರ ಅಗತ್ಯವೂ ಇಲ್ಲ. ಆದರೆ ಸ್ವಲ್ಪ ಹೊತ್ತಿನಲ್ಲೇ ಕಣ್ಣುಗಳೇಕೋ ಸೋಲುತ್ತವೆ. ಗಮನವಿಟ್ಟು ಓದಲಾಗುತ್ತಿಲ್ಲ. ಹಾಗೆಯೇ ಸೀಟಿಗೆ ತಲೆಯಾನಿಸುತ್ತಾನೆ. ಕಣ್ಣುಗಳು ತಾನಾಗೇ ಮುಚ್ಚಿಕೊಳ್ಳುತ್ತವೆ. ನಿದ್ದೆಗೆ ಜಾರುತ್ತಾನೆ. ಯಾವುದೋ ಸಿಗ್ನಲ್ಲಿನಲ್ಲಿ ಹಾಕಿದ ಬ್ರೇಕಿಗೆ ತಟ್ಟನೇ ಎಚ್ಚರಾಗುತ್ತದೆ. ತೊಡೆಮೇಲಿದ್ದ ಪುಸ್ತಕ ಬಿಡಿಸಿ ಮತ್ತೆ ಓದಲು ತೊಡಗುತ್ತಾನೆ. ಸ್ವಲ್ಪ ಹೊತ್ತಿನಲ್ಲೇ ಆತ ಇಳಿಯುವ ಸ್ಟಾಪು ಬರುತ್ತದೆ. ಮುಖ ಒರೆಸಿಕೊಂಡು ಬಾಗಿಲಿನ ಹತ್ತಿರ ಹೋಗುತ್ತಾನೆ. ಬಸ್ಸು ನಿಲ್ಲುತ್ತದೆ. 'ಸ್ವಯಂಚಾಲಿತ ಬಾಗಿಲು, ಕೈಯಿಂದ ತೆಗೆಯಲು ಪ್ರಯತ್ನಿಸಬೇಡಿ' ಎಂದು ಬರೆದಿರುವ ಬಾಗಿಲುಗಳು ತೆರೆದುಕೊಳ್ಳುತ್ತದೆ. ಆತನು ಇಳಿಯುತ್ತಾನೆ. ಬಸ್ಸು ಮುಂದೆ ಸಾಗುತ್ತದೆ.


ಹೀಗೆ ಆತನ ಒಂದು ಪ್ರಯಾಣ, ಒಂದು ಬೆಳಗ್ಗೆ ಈ ಬರಹದಂತೆಯೇ ಯಾವುದೇ ವಿಶೇಷವಿಲ್ಲದೇ ಮುಗಿದುಹೋಗುತ್ತದೆ.

ಕೋಟಿ ಲಿಂಗಗಳ ಮಧ್ಯದಲ್ಲೆಲ್ಲೋ ಒಂದು ಬೋಡಿ ಲಿಂಗ ಪೂಜೆಯಿಲ್ಲದೇ ಕೊರಗುತ್ತಿದೆ...ಸೊರಗುತ್ತಿದೆ.

ಬಲಿಷ್ಠ ರೂಪಾಯಿ=ಬಲಿಷ್ಠ ಭಾರತ

ಆಗಸ್ಟ ೦೭, ೨೦೦೭ ರಂದು thatskannada.com ನಲ್ಲಿ ಪ್ರಕಟವಾದ ನನ್ನದೊಂದು ಅನುವಾದಿತ ಲೇಖನ : ಭಾರತ ಆರ್ಥಿಕವಾಗಿ ಬಲಾಡ್ಯವಾಗುವುದು ಇವರಿಗೇಕೆ ಬೇಡ?

ಮೂಲ ಲೇಖಕರು: ಶ್ರೀ ಗುರುದೇವ್
ಮೂಲ ಲೇಖನ: Stronger Rupee = Stronger India


ಇವತ್ತಿನ ದಿನಗಳಲ್ಲಿ ಡಾಲರ್ ಬೆಲೆ ರೂಪಾಯಿಯ ಮುಂದೆ ಗಣನೀಯವಾಗಿ ಕುಸಿದಿದೆ. ಮೊದಲು ೧ ಡಾಲರ್ ಗೆ ಸುಮಾರು ೪೭ ರೂಪಾಯಿಗಳಷ್ಟಿದ್ದದ್ದು ಈಗ ಸುಮಾರು ೪೦ ರೂಪಾಯಿಯಾಗಿದೆ.

ಹೀಗಾಗುತ್ತಿದ್ದಂತೆ ಭಾರತದ ಐ.ಟಿ. ಕಂಪನಿಗಳು ಹಾವು ತುಳಿದಂತೆ ಬೆಚ್ಚಿಬಿದ್ದು ಆತಂಕಕ್ಕೊಳಗಾಗಿವೆ. ರೂಪಾಯಿಯ ಬೆಲೆ ಜಗತ್ತಿನ ಮಾರುಕಟ್ಟೆಯಲ್ಲಿ ಹೆಚ್ಚಾದಾಗ ಖುಷಿಯಾಗುವುದನ್ನು ಬಿಟ್ಟು ಐ.ಟಿ. ಕಂಪನಿಗಳು ಹೀಗೇಕೆ ದುಗುಡಗೊಂಡಿವೆ ಎಂಬುದನ್ನು ನೋಡಿದರೆ ಈ ಕಂಪನಿಗಳ ಲಾಭವು ನೇರವಾಗಿ ಅಮೆರಿಕದ ಕಂಪನಿಗಳು ಕೊಡುವ ಡಾಲರಗಳ ಮೇಲೆ ನಿಂತಿರುವುದು ತಿಳಿಯುತ್ತದೆ. ಈಗ ರೂಪಾಯಿಯ ಬೆಲೆ ಜಾಸ್ತಿಯಾದುದರಿಂದ ಕಂಪನಿಗಳಿಗೆ ಸಿಗುತ್ತಿದ್ದ ಡಾಲರುಗಳು ರೂಪಾಯಿಗಳಿಗೆ ಪರಿವರ್ತಿತವಾದಾಗ ಸಿಗುತ್ತಿದ್ದ ಲಾಭ ಕಡಿಮೆಯಾಗಿದೆ. ದೇಶದ ಆರ್ಥಿಕತೆಯು ಗಟ್ಟಿಯಾಗುತ್ತಿರುವುದರಿಂದ ದೇಶವು ಸಂಭ್ರಮಮಿಸುತ್ತಿರುವಾಗ ಈ ಐ.ಟಿ ಕಂಪನಿಗಳು ಈ ಬೆಳವಣಿಗೆಯಿಂದ ತಮ್ಮ ಲಾಭಕ್ಕಾದ ಅಲ್ಪಹಾನಿಯನ್ನು ತುಂಬಿಕೊಳ್ಳುವುದಕ್ಕೋಸ್ಕರ ತಮ್ಮ ಉದ್ಯೋಗಿಗಳನ್ನು ವಾರಕ್ಕೆ ಇನ್ನೂ ಒಂದು ದಿನ ಹೆಚ್ಚು ದುಡಿಸಿಕೊಳ್ಳಲು ಯೋಜನೆ ರೂಪಿಸುತ್ತಿವೆ. ಈ ಮೂಲಕ ಹೆಚ್ಚಿನ ಕೆಲಸ ಮಾಡಿ ತಮ್ಮ ಲಾಭವನ್ನು ಸರಿದೂಗಿಸಿಕೊಳ್ಳುವುದು ಅವುಗಳ ತಂತ್ರ.

ನಾವು ಯೋಚಿಸಬೇಕಾದುದೇನೆಂದರೆ ಈ ಐ.ಟಿ. ಕಂಪನಿಗಳು ಡಾಲರಿನ ಬೆಲೆ ಬಿದ್ದುದಕ್ಕೆ ಆತಂಕಗೊಂಡು ಹುಯಿಲಿಡುವ ಬದಲು ನಮ್ಮ ದೇಶಕ್ಕೆ ಸದೃಢ ಆರ್ಥಿಕತೆಯನ್ನು (strong economy) ತಂದುಕೊಳ್ಳುವಂತ ಸ್ವಾಭಿಮಾನಿ ಕೆಲಸಗಳಲ್ಲೇಕೆ ತೊಡಗುತ್ತಿಲ್ಲ ಎನ್ನುವುದು !

ಇದೆಲ್ಲಕ್ಕಿಂದ ಮೊದಲು ನಮ್ಮ ದೇಶಕ್ಕೆ ಯಾವರೀತಿ ಆರ್ಥಿಕ ಸಧೃಡತೆ (economic strength) ಬೇಕು ಎಂಬುದನ್ನು ಯೋಚಿಸೋಣ.

ಅ) ವಿದೇಶಿ ಕಂಪನಿಗಳು ಕೊಡುವ ಕೆಲಸಗಳನ್ನು ಮಾಡುತ್ತಾ , ಅವರು ಉನ್ನತ ತಂತ್ರಜ್ಞಾನದ ಕೆಲಸದಲ್ಲಿ ತೊಡಗಿರುವಾಗ ಅವರ ಕೆಲಸಗಳಿಗೆ support, service, maintenance ಕೆಲಸಗಳನ್ನು ಮಾಡುತ್ತಾ, ಅವರು ಹೇಳಿದ ಬದಲಾವಣೆಗಳನ್ನು ಮಾಡುತ್ತಾ, ಅವರಿಗೆ ಬೇಕಾದ software ಇತ್ಯಾದಿ product ಗಳಿಗೆ coding ಮಾಡುತ್ತಾ, ತಡರಾತ್ರಿಯವರೆಗೆ, ರಾತ್ರಿ ಪಾಳಿಯಲ್ಲಿ ದುಡಿಯುತ್ತಾ , ಒಟ್ಟಾರೆ ಇಂತಹ low profile ಕೆಲಸಗಳಿಗೆ ತಕ್ಕುದಾದ ಅಗ್ಗದ ಮಾನವ ಸಂಪನ್ಮೂಲಗಳಿಂದ ನಿರ್ಮಾಣಗೊಳ್ಳುವ ಆರ್ಥಿಕತೆ ಬೇಕೆ?

ಅಥವಾ

ಬ) ನಮ್ಮದೇ ಆದ ಸೃಜನಶೀಲ, ಕ್ರಿಯಾತ್ಮಕ ಕೆಲಸಗಳನ್ನು ಮಾಡುತ್ತಾ, ಹೊಸ ಹೊಸ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಸುತ್ತಾ, ಭಾರತದ ಉತ್ಪನ್ನಗಳಿಗೆ (software / product) ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಬರುವಂತೆ ಮಾಡಿ , ಎಷ್ಟು ಡಾಲರುಗಳಿಗೆ ಎಷ್ಟು ರೂಪಾಯಿಯೆಂದು ತಲೆಕೆಡಿಸಿಕೊಳ್ಳದೇ ದಿನದ ಸಮಯದಲ್ಲಿ ದುಡಿದು ಉಳಿದ ಸಮಯವನ್ನು ವೈಯಕ್ತಿಕ, ಸಾಮಾಜಿಕ ಜೀವನಕ್ಕೆ ತೊಡಗಿಸಿಕೊಂಡು ಬದುಕುವ ಸ್ವಾವಲಂಬೀ ಆರ್ಥಿಕತೆ ಬೇಕೆ?

ನಿಜವಾಗಿಯೂ ನೋಡಿದರೆ ಇವತ್ತಿನ ಅರ್ಥಿಕತೆ ಬೆಳೆದು ನಿಂತಿದ್ದು , ಭಾರತ ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವುದು ಎಲ್ಲವೂ ಮೊದಲನೆಯ (ಅ) ರೀತಿಯ ಆರ್ಥಿಕತೆಯಿಂದ ಅನ್ನುವುದರಲ್ಲಿ ಸಂಶಯವಿಲ್ಲ. ಬೇರೆ ದೇಶಗಳಿಂದ ನಮಗೆ ಕೆಲಸಗಳು, ಗುತ್ತಿಗೆಗಳು ಹರಿದು ಬಂದಿದ್ದು, ಬರುತ್ತಿರುವುದು ಎಲ್ಲವೂ ಇಲ್ಲಿ ಸಿಗುವ ಅಗ್ಗದ ಮಾನವ ಸಂಪನ್ಮೂಲದಿಂದ ಎಂಬುದೂ ಸತ್ಯ. ಇಷ್ಟು ದಿನವೇನೋ ಹೀಗಾಯಿತು. ಆದರೆ ನಾವು ಶಾಶ್ವತವಾಗಿ ಇದೇ ರೀತಿಯಲ್ಲೆ ಉಳಿಯಬೇಕೆ? ನಾವು ಅಗ್ಗದ ಸಂಪನ್ಮೂಲವೆಂದು ಅನಿಸಿಕೊಂಡಿರುವುದಕ್ಕೇ ಕಾರಣವೇ ನಮ್ಮ ದುರ್ಬಲ ಆರ್ಥಿಕತೆ. ಇವತ್ತು ನಾವು ಅಮೆರಿಕದಲ್ಲಿ ಏನಾದರೂ ಆದರೆ ಅಲ್ಲಿನ ನೇರ ಪರಿಣಾಮ ಇಲ್ಲಿ ಅನುಭವಿಸುತ್ತೇವೆ, ಡಾಲರ್ ಎದುರು ರೂಪಾಯಿ ಚಿಗಿತುಕೊಂಡರೆ ಆತಂಕಕ್ಕೊಳಗಾಗುತ್ತೇವೆ !

ಎಂತಾ ವಿಪರ್ಯಾಸ !!

೧೯೪೭ ರಲ್ಲಿ ಸ್ವಾತಂತ್ರ್ಯ ಬಂದಾಗ ಒಂದು ಡಾಲರು = ಒಂದು ರೂಪಾಯಿ ಆಗಿತ್ತು ಎಂಬುದು ಎಷ್ಟು ಜನರಿಗೆ ಗೊತ್ತು? ಆದರೆ ಅದೇ ಆರ್ಥಿಕತೆಯನ್ನು ನಾವೇಕೆ ಉಳಿಸಿಕೊಳ್ಳಲು ಆಗಲಿಲ್ಲ?

ನಮ್ಮಲ್ಲಿ ಪ್ರತಿಭೆಗಳಿಗೇನು ಕೊರತೆಯಿಲ್ಲ, ನಮಗೆ ಬೇಕಾಗುವ ಎಲ್ಲಾ ವಸ್ತುಗಳನ್ನು / ತಂತ್ರಜ್ಞಾನಗಳನ್ನು ನಾವೇ ತಯಾರು ಮಾಡಿಕೊಳ್ಳುವಷ್ಟು ಮಟ್ಟಿಗೆ ನಮ್ಮಲ್ಲಿ skilled , unskilled resource ಇದೆ. ಈ ಐ.ಟಿ ಕಂಪನಿಗಳು ಈಗಲಾದರೂ ಡಾಲರ್ ಬೆಲೆ ಮೇಲೆ ಅವಲಂಬಿತವಾಗುವುದನ್ನು ಬಿಟ್ಟು ಇಲ್ಲಿಯೇ ಹೊಸ ಸಾಫ್ಟ್ ವೇರ್/ ಟೆಕ್ನಾಲಜಿ ಗಳನ್ನು ತಯಾರಿಸುವ ಕೆಲಸಗಳಲ್ಲಿ ತೊಡಗಬೇಕು. ಇದುವರೆಗೂ ಈ ಕಂಪನಿಗಳು ಇಂತಹ ಹೊಸದನ್ನು ಮಾಡಿರುವುದು ಬಹಳ ಕಡಿಮೆ. ನಮ್ಮಲ್ಲೇಕೆ ಇದುವರೆಗೂ Operating Systems, Compilers, database systems, development platforms ಇತ್ಯಾದಿಗಳು ತಯಾರಾಗುತ್ತಿಲ್ಲ? ನಮ್ಮಲ್ಲೇಕೆ Photoshop, Flash ಇತ್ಯಾದಿ Tool ಗಳು ಹೊರಬರುತ್ತಿಲ್ಲ?

ನಮ್ಮಲ್ಲಿ ಇದನ್ನೆಲ್ಲಾ ಮಾಡುವ ಪ್ರತಿಭೆ, ತಾಕತ್ತು, ಸವಲತ್ತು ಎಲ್ಲವೂ ಇದೆ. ಆದರೆ ನಾವು ಮಾಡುತ್ತಿರುವುದು ಅಮೆರಿಕದ ಕಂಪನಿಗಳಿಗೆ. ನಮ್ಮಿಂದ ಅಗ್ಗದ ಬೆಲೆಗೆ ಮಾಡಿಸಿಕೊಂಡು ಅವರು ಅದೇ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಮಾರಿ ಹೆಚ್ಚಿನ ಲಾಭ ತಂದುಕೊಳ್ಳುತ್ತಾರೆ. ಉದಾಹರಣೆಗೆ: ಬೋಯಿಂಗ್, ಏರ್ ಬಸ್ ವಿಮಾನಗಳ low end ಕೆಲಸಗಳು ಭಾರತದ ಕಂಪನಿಗಳಲ್ಲಿ ನೆಡೆಯುತ್ತಿವೆ. ಆದರೆ ಅದೇ ವಿಮಾನಗಳ high end ಕೆಲಸಗಳು ನೆಡೆಯುತ್ತಿರುವುದು ವಿದೇಶಗಳಲ್ಲಿ. ನಮಗೆ ಅಂತಹ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಇದ್ದರೂ ಸಹ ಅವರ ಕೆಲಸಗಳನ್ನು ಮಾಡಿಕೊಟ್ಟು ನಂತರ ಅದನ್ನೇ ನಾವು ದುಬಾರಿ ಬೆಲೆಗೆ ಕೊಂಡುಕೊಳ್ಳುತ್ತಿದ್ದೇವೆ. ಅದರ ಬದಲು ನಮ್ಮ ಕಂಪನಿಗಳೇ ತಮ್ಮಲ್ಲೇ ಇಂತಹ ಉತ್ಪನ್ನ (software, other product) ಗಳನ್ನು ತಯಾರು ಮಾಡುವ ಕೆಲಸದಲ್ಲೇಕೆ ತೊಡಗಬಾರದು. ಕೊನೆ ಪಕ್ಷ ಈ ಕೆಲಸಕ್ಕಾಗಿ ತಮ್ಮ ಕಂಪನಿಗಳಲ್ಲಿ ಒಂದು ಸಣ್ಣ ವಿಭಾಗವನ್ನೇಕೆ ತೆರೆಯಬಾರದು.?

ಭಾರತವು ಸೂಪರ್ ಪವರ್ ಆಗಬೇಕು , ವಿಶ್ವದ ಮುಂಚೂಣಿಯಲ್ಲಿರುವ ದೇಶಗಳ ಸಾಲಿನಲ್ಲಿ ನಿಲ್ಲಬೇಕೆಂದು ಬಯಸುತ್ತೇವೆ. ಹೀಗೆ ಬೆಳೆಯಲು ಮುಖ್ಯವಾಗಿ ಬೇಕಾಗಿರುವುದು ಒಂದು ಬಲಿಷ್ಠ economy ಹೊರತು ಬೇರೇನಲ್ಲ. ಆದರೆ ಹೀಗೆ ನಮ್ಮ week currencyಯನ್ನೆ ಬಂಡವಾಳ ಮಾಡಿಕೊಂಡು ಮುಂದುವರೆಯುತ್ತಾ ಹೋದರೆ ನಮ್ಮ ಆರ್ಥಿಕತೆ ಬೆಳೆಯುವುದು ಸಾಧ್ಯವೇ ಇರುವುದಿಲ್ಲ. ನಮ್ಮ ರೂಪಾಯಿ ಮೌಲ್ಯ ದಿನೇ ದಿನೇ ಹೆಚ್ಚ ಬೇಕು. Low profile ಕೆಲಸಗಳಲ್ಲಿ ತೊಡಗುವುದನ್ನು ಬಿಟ್ಟು ಕ್ರಿಯಾತ್ಮಕ ಕೆಲಸಗಳಲ್ಲಿ, ಉನ್ನತ ತಂತ್ರಜ್ಞಾನದ ಕೆಲಸಗಳಲ್ಲಿ, ನಮ್ಮ ದೇಶಕ್ಕೆ, ನಮ್ಮ ಆರ್ಥಿಕತೆಗೆ ಉಪಯೋಗವಾಗುವಂತಹ ಕೆಲಸಗಳಲ್ಲಿ ತೊಡಗಬೇಕು. ಇವು ಬರೀ ಸಾಫ್ಟ್ ವೇರ್ ಗೆ ಸೀಮಿತವಾಗಬೇಕಿಲ್ಲ. ಕೃಷಿಯಿಂದ ಹಿಡಿದು ಬಾಹ್ಯಾಕಾಶದವರೆಗೂ ಹೀಗಾಗಬೇಕು. ನಮ್ಮ ಉತ್ಪನ್ನಗಳನ್ನು , ನಮ್ಮ software, tool ಗಳನ್ನು ಕೊಳ್ಳಲು , ನಮ್ಮಲ್ಲಿ ತಯಾರಾದ ಮೊಬೈಲು, ವಿಮಾನ, ಆಟೊಮೊಬೈಲುಗಳನ್ನು ಕೊಳ್ಳಲು ಇತರ ರಾಷ್ಟ್ರಗಳು ತವಕಿಸುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು.

ರೂಪಾಯಿ ಬೆಲೆ ಹೆಚ್ಚಾದಾಗ ನಾವು ಬೋಯಿಂಗ್ ವಿಮಾನ ಕೊಳ್ಳಲು ಕೋಟ್ಯಂತರ ರೂಪಾಯಿ ಸುರಿಯಬೇಕಿಲ್ಲ. ವಿದೇಶ ಪ್ರಯಾಣಕ್ಕೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಿಲ್ಲ. ಸುಲಭವಾಗಿ ಯಾವ ದೇಶಕ್ಕಾದರೂ ಹೋಗಬಹುದು. ಜಗತ್ತಿನ ಯಾವುದೇ ವಸ್ತುವಿನ ಬೆಲೆಯಾದರೂ ನಮ್ಮ ಕೈಗೆಟುಕುವ ಮಟ್ಟ ತಲುಪುತ್ತದೆ. ಮಾರುತಿ ಕಾರು ಹಾಗೂ ಬೆಂಜ್ ಕಾರು ಕೊಳ್ಳುವುದರಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ನಾವು ಕುಲು ಮನಾಲಿಗೆ ಪ್ರವಾಸ ಹೋಗುವಂತೆ ಸ್ವಿಡ್ಜರ್ಲ್ಯಾಂಡಿಗೂ ಪ್ರವಾಸ ಹೋಗಬಹುದು. ಅಮೆರಿಕಾದ ಜನರು ಸುಲಭ ವಿಶ್ವ ಪ್ರವಾಸ ಮಾಡಲು ಕಾರಣವಾಗಿರುವುದು ಅವರು ಹೆಚ್ಚು ದುಡಿಯುತ್ತಾರೆ, ಗಳಿಸುತ್ತಾರೆ ಎಂಬುದು ಅಲ್ಲ. ಬದಲಾಗಿ ಅವರ ಕರೆನ್ಸಿಗಿರುವ ಮೌಲ್ಯದಿಂದ. ರೂಪಾಯಿಯ ಮೌಲ್ಯವು ಹೆಚ್ಚಾದಾಗ ನಮಗೆ ಇವೆಲ್ಲವೂ ಸಾಧ್ಯವಾಗುತ್ತದೆ.

Low End ಕೆಲಸಗಳನ್ನು ಮಾಡುವುದು ತಪ್ಪಲ್ಲ. ಆದರೆ ಅದರ ಮೇಲೆ ಅವಲಂಬಿತವಾಗಿ ಉಳಿದು ಬಿಡುವ ಬದಲು ಕ್ರಿಯಾತ್ಮಕ ಕೆಲಸಗಳಿಂದ, ಸಂಶೋಧನೆಗಳಿಂದ, ಉತ್ಪನ್ನಗಳಿಂದ ನಮ್ಮ ಸ್ವಾವಲಂಬಿ ಬಲಿಷ್ಠ ಆರ್ಥಿಕತೆಯನ್ನು ನಿರ್ಮಿಸಿಕೊಳ್ಳುವ ಯಶಸ್ಸಿನ ಪಥದಲ್ಲಿ ಸಾಗೋಣ.

ಆ ನಿಟ್ಟಿನಲ್ಲಿ ಪ್ರಯಾಣ ಈಗ ಆರಂಭಗೊಂಡಿದೆ.
ಇದು ಎಲ್ಲದಕ್ಕೂ ನಾಂದಿಯಾಗಲಿ.

ಶುಕ್ರವಾರ, ಜುಲೈ 27, 2007

ಇವಳೇನು ಸೆಕ್ಸಿ ಟೀಚರ್ರಾ ?!!

ಜಾಹೀರಾತಿನ ಈ ಪರಿ !
ಚಿತ್ರವನ್ನು ನೋಡಿ. ಇದು ಬೆಂಗಳೂರಿನ ರಿಚ್ಮಂಡ್ ವೃತ್ತದ ಹತ್ತಿರ ಹಾಕಿರುವ ಜಾಹೀರಾತು ಫಲಕ. ಪಿ.ಯು.ಸಿ, ಸಿ.ಇ.ಟಿ ತರಬೇತಿ ಕೊಡುವ ಖಾಸಗಿ ಸಂಸ್ಥೆಯೊಂದು ಈ ರೀತಿಯ ಜಾಹಿರಾತನ್ನು ಹಾಕಿದೆ. ವಿದ್ಯೆ, ಶಿಕ್ಷಣವನ್ನು ಸಹ ಮಾದಕ ಹೆಣ್ಣಿನ ಫೋಟೋ ಹಾಕಿ ಮಾರುಕಟ್ಟೆಯಲ್ಲಿ ತೆರೆದಿಡಲಾಗಿದೆ. ಇದೇ ರೀತಿ ಕೋರಮಂಗಲದ ಹತ್ತಿರ ಇನ್ನೊಂದು ಕಡೆಯಲ್ಲಿ ಯಾವುದೋ ಶಿಕ್ಷಣ ಸಂಸ್ಥೆಯೊಂದು ಹುಡುಗಿಯೊಬ್ಬಳು ತನ್ನ ಎರಡೂ ಕೈಗಳನ್ನು ಅಗಲಿಸಿ ಕುಳಿತುಕೊಂಡಿರುವ ಚಿತ್ರವನ್ನು ಹಾಕಿ "ಅಡ್ಮಿಷನ್ಸ್ ಓಪನ್" ಎಂದು ಬರೆಯಲಾಗಿದೆ. ಪಿಯುಸಿ, ಸಿಇಟಿ ಅಥವಾ ಇನ್ಯಾವುದೇ ಶಿಕ್ಷಣಕ್ಕೂ ಈ ಹುಡುಗಿಯರ ಚಿತ್ರಕ್ಕೂ ಯಾವ ರೀತಿ ಸಂಬಂಧವೆನ್ನುವುದು ತಿಳಿಯುವುದಿಲ್ಲ. ಉತ್ತಮ ತರಬೇತಿ, ಗುಣಮಟ್ಟದಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಬೇಕಾದ ಕಡೆಯಲ್ಲಿ ಮದ್ಯದ ಜಾಹೀರಾತಿನಂತಹ ಚಿತ್ರವನ್ನು ಹಾಕಿ ತಮ್ಮ ಇರುವಿಕೆಯನ್ನು ತೋರ್ಪಡಿಸಲಾಗಿದೆ.


ಇವತ್ತು ಶಿಕ್ಷಣವೆನ್ನುವುದು ಯಾವ ರೀತಿ ವ್ಯಾಪಾರೀಕರಣಕ್ಕೊಳಪಟ್ಟಿದೆ ಎಂಬುದಕ್ಕೆ ಇದೊಂದು ನಿದರ್ಶನ. ಶಿಕ್ಷಣದಂತಹ ಪವಿತ್ರ ಕ್ಷೇತ್ರಗಳೂ ದುಡ್ಡು ಮಾಡುವ ದಂಧೆಗಳಾದಾಗ ಇಂತಹ ವಿಕೃತಿ, ವಿಚಿತ್ರಗಳು ತಲೆ ಎತ್ತುತ್ತವೆ. ಇವು ನಮ್ಮ ಸಮಾಜದ ನೈತಿಕ ಅಧಃಪತನದ ಧ್ಯೋತಕವೆ ಅಥವಾ ಇಂದಿನ ಸ್ಪರ್ಧಾತ್ಮಕ ಜಗತ್ತಿನ ಅನಿವಾರ್ಯತೆಯೆ ? ಇದು ಹೀಗೆ ಮುಂದುವರೆದರೆ ಸ್ಪರ್ಧೆಯ, ಆಕರ್ಷಣೆಯ , ಅಂತಸ್ತಿನ ಜಿದ್ದಿಗೆ ಬಿದ್ದು ಶಿಕ್ಷಣ ಸಂಸ್ಥೆಗಳು, ಕಾಲೇಜುಗಳು ಅರೆಬೆತ್ತಲೆ ಜಾಹೀರಾತುಗಳನ್ನು ಹಾಕಿ ತಮ್ಮ ಇರುವಿಕೆಯನ್ನು ಪ್ರಚುರಪಡಿಸಿ, ವಿದ್ಯಾರ್ಥಿಗಳನ್ನು ಸೆಳೆಯಲು ಮಾಡೆಲ್ ಗಳನ್ನು ನೇಮಿಸಿಕೊಳ್ಳುವ ಹಂತಕ್ಕೆ ಇಳಿದರೂ ಅಚ್ಚರಿಯೇನಿಲ್ಲ.
******************************************************
(೩೧-೦೭-೨೦೦೭ ರಂದು thatskannada.com ನಲ್ಲಿ ಪ್ರಕಟಗೊಂಡಿದೆ ,

ಇದರ ಬಗ್ಗೆ ವಿಜಯ ಕರ್ನಾಟಕದಲ್ಲಿ ಸಚಿತ್ರ ವರದಿ ಪ್ರಕಟವಾಗಿ ಸಂಬಂಧಪಟ್ಟ ಸಂಸ್ಥೆಗೆ ಹಾಗೂ ಬೆಂಗಳೂರು ಮಹಾನಗರ ಪಾಲಿಕೆಗೆ ಛೀಮಾರಿ ಹಾಕಿದ ಮಾರನೆಯ ದಿನವೇ ಈ ಜಾಹಿರಾತನ್ನು ತೆಗೆದು ಹಾಕಲಾಯಿತು.ಸೋಮವಾರ, ಜುಲೈ 9, 2007

ಹಾಡು ಹಳೆಯದಾದರೇನು... ಭಾವ ನವನವೀನ....

೧೪ ಇನ್ ಲ್ಯಾಂಡ್ ಲೆಟರ್ಸ್ ಕೊಡಿ”. ಗ್ಲಾಸಿನ ಕಿಂಡಿಯಲ್ಲಿ ನೋಡುತ್ತಾ ಕೇಳಿದೆ.
ಕೌಂಟರಿನ ಒಳಗಿಂದ ಆತ ನನ್ನ ಮುಖವನ್ನೇ ಒಂದು ಥರಾ ನೋಡಿದ. ಅಥವಾ ನನಗೇ ಹಾಗನ್ನಿಸಿತೋ ಏನೋ ! ಅಮೋಘ ೨ ವರುಷಗಳ ನಂತರ ಅಂಚೆ ಕಛೇರಿಯೊಳಕ್ಕೆ ಕಾಲಿಟ್ಟಿದ್ದೆ. ಬೆಂಗಳೂರಿಗೆ ಬಂದ ಹೊಸತರಲ್ಲಿ ಅಲ್ಲಿ ಇಲ್ಲಿ ರೆಸ್ಯೂಮ್ ಕಳಿಸಲು ಆಗಾಗ ಹೋಗುತ್ತಿದ್ದೆ. ಎರಡು ವರುಷಗಳ ಹಿಂದೆ ಪಾಸ್ ಪೋರ್ಟ್ ಅರ್ಜಿ ತರಲೆಂದು ಹೋದವನು ಮತ್ತೆ ಹೋಗಿರಲೇ ಇಲ್ಲ. ನಂತರ ಅಲ್ಲಿಗೆ ಹೋಗುವ ಅಗತ್ಯವೇ ಬಿದ್ದಿರಲಿಲ್ಲ. ಮೊನ್ನೆ ಯಾವತ್ತೋ ನಾವು ಕೆಲವು ಗೆಳೆಯರು ಹೀಗೇ ಕಟ್ಟೆಯಲ್ಲಿ ಕೂತು ಮಾತಾಡುವಾಗ ಪತ್ರಗಳ ಬಗ್ಗೆ ಮಾತು ಬಂದಿತ್ತು. ಈಗಿನ ಮೊಬೈಲು, ಈ-ಮೇಲು ಗಳ ಅಬ್ಬರದಲ್ಲಿ ಕಳೆದು ಹೋದ ಆಗಿನ ಪತ್ರ ವೈಭವಗಳ ಬಗ್ಗೆ ನೆನಪಿಸಿಕೊಂಡು ವ್ಯಥೆಪಟ್ಟಿದ್ದೆವು. ಅದನ್ನೆ ಮೆಲುಕು ಹಾಕುತ್ತಾ ಅವತ್ತಿನ ರಾತ್ರಿ ಮನೆಯಲ್ಲಿ ಕುಳಿತಿದ್ದಾಗ ಬಂದದ್ದೇ ಈ ಯೋಚನೆ. ನಾನ್ಯಾಕೆ ಒಮ್ಮೆ ಎಲ್ಲರಿಗೂ ಸಣ್ಣವನಿದ್ದಾಗ ಬರೆಯುತ್ತಿದ್ದಂತೆ ಪತ್ರ ಬರೆಯಬಾರದು ಎಂದು. ಈ ಯೋಚನೆ ಬರುತ್ತಿದ್ದಂತೆ ಏನೋ ಒಂದು ರೀತಿ ಖುಷಿಯಾಯಿತು. ಎಷ್ಟೋ ವರುಷಗಳಿಂದ ಪತ್ರ ಬರೆಯುವ ಅಭ್ಯಾಸವೇ ಬಿಟ್ಟು ಹೋಗಿತ್ತು. ಈಗ ಮತ್ತೊಮ್ಮೆ ಪತ್ರ ಬರೆಯುವ ಪ್ರಯತ್ನ ಮಾಡಿದರೆ ಹೇಗೆ ಅಂದುಕೊಂಡೆ. ಇಷ್ಟು ವರುಷಗಳ ನಂತರದ ಪ್ರಯತ್ನ ಹೇಗಿರುತ್ತದೋ ಎಂಬ ಯೋಚನೆ ಒಂದೆಡೆಯಾದರೆ, ಯಾರ್ಯಾರ ಪ್ರತಿಕ್ರಿಯೆ ಹೇಗಿರುತ್ತದೋ ನೋಡೋಣ ಎಂಬ ಕುತೂಹಲ ಇನ್ನೊಂದೆಡೆ ಇತ್ತು. ಅವತ್ತು ರಾತ್ರಿಯೇ ಯಾರ್ಯಾರಿಗೆ ಪತ್ರ ಬರೆಯಬೇಕು ಎಂದು ಪಟ್ಟಿ ಮಾಡಿಟ್ಟುಕೊಂಡು ಮಾರನೇ ದಿನವೇ ಪತ್ರಗಳನ್ನು ತೆಗೆದುಕೊಳ್ಳಲು ಅಂಚೆ ಕಛೇರಿಗೆ ಬಂದಿದ್ದೆ. ಈಗ ಇನ್ಲ್ಯಾಂಡ್ ಪತ್ರಕ್ಕೆ ಎಷ್ಟು ದುಡ್ಡು ಎಂಬುದು ಕೂಡ ಗೊತ್ತಿರಲಿಲ್ಲ. ಸುಮ್ಮನೇ ನೂರರ ನೋಟನ್ನು ಕೊಟ್ಟು ಚಿಲ್ಲರೆ ಎಣಿಸಿಕೊಂಡೆ. ಮನೆಗೆ ಬಂದು ಪೆನ್ನು ರೆಡಿ ಮಾಡಿಕೊಂಡು ಕುಳಿತೆ. ಹೊಸ ಹೊಸ ಇನ್ಲ್ಯಾಂಡುಗಳನ್ನು ಬಿಡಿಸುತ್ತಿದ್ದಂತೆ ಆ ಗರಿ ಗರಿ ಕಾಗದದ ವಾಸನೆಯು ಸಂಭ್ರಮದಿಂದಿದ್ದ ಮನಸ್ಸನ್ನು ಹಾಗೆಯೆ ಹಿಂದಿನ ದಿನಗಳಿಗೆ ಕೊಂಡೊಯ್ಯಿತು.


****************************************
ಟ್ರಿನ್ ಟ್ರಿನ್... ಪೋಸ್ಟ್.... ಎಂಬ ಅಂಚೆಮಾಮನ ಕರೆ ಕೇಳಿದೊಡನೆ ಮನೆಯಿಂದ ಹೊರಗೆ ಓಡಿಬರುತ್ತಿದ್ದೆ. ಆಗ ಪೋಸ್ಟ್ ಮ್ಯಾನ್ ಬಂದಿದ್ದಾನೆಂದರೆ ಖುಷಿ. ಯಾರದ್ದಾದರೂ ಪತ್ರ ಬಂದೇ ಬಂದಿರುತ್ತದೆ ಎಂಬುದು ಖಾತ್ರಿ ಇರುತ್ತಿತ್ತು. ಆಗ ಇನ್ನೂ ಮೊಬೈಲ್ ಫೋನ್ ಇರಲಿ ಮಾಮೂಲಿ ಫೋನ್ ಕೂಡ ಇನ್ನು ಸರಿಯಾಗಿ ಸಣ್ಣ ಊರುಗಳಲ್ಲಿ ಕಣ್ಣು ಬಿಟ್ಟಿರಲಿಲ್ಲ. ಎಲ್ಲಾ ಪತ್ರಗಳ ಮೂಲಕವೇ ಮಾತು ಕತೆ ನಡೆಯುತ್ತಿತ್ತು. ನಮ್ಮ ಮನೆಗಂತೂ ವಾರಕ್ಕೆ ಎರಡು ಮೂರಾದರೂ ಪತ್ರ ಇದ್ದೇ ಇರುತ್ತಿತ್ತು. ಅಪ್ಪನ ಅಮ್ಮನ ಕಡೆಯ ಬಳಗ ದೊಡ್ಡದಿದ್ದುದರಿಂದ ಒಬ್ಬರಲ್ಲದಿದ್ದರಿನ್ನೊರೊಬ್ಬರ ಪತ್ರ ಖಾಯಂ ಇರುತ್ತಿತ್ತು. ನಮ್ಮ ಮನೆಗೆ ಹೆಚ್ಚಾಗಿ ಬರುತ್ತಿದ್ದುದು ಸಂಬಂಧಿಕರ ಪೈಕಿ ಅಜ್ಜನದು, ದೊಡ್ಡಮ್ಮನದು, ಚಿಕ್ಕಪ್ಪಂದಿರು, ಅತ್ತೆಯರು ಮತ್ತವರ ಮಕ್ಕಳು ಅಂದರೆ ನನ್ನ ಕಸಿನ್ ಗಳದ್ದು. ಇವು ಬಿಟ್ಟರೆ ಅಪ್ಪನ ವ್ಯಾವಹಾರಿಕ ಪತ್ರಗಳು. ಪೋಸ್ಟ್ ಬಂದಕೂಡಲೇ ಅಪ್ಪನ ಪತ್ರಗಳು ಎಂದು ಗೊತ್ತಾಗುತ್ತಿದ್ದಂತೆ ಅದನ್ನು ಒಡೆಯದೇ ಒಂದು ಕಡೆ ಇಡುವುದು ಆಗಿನ ಅಭ್ಯಾಸವಾಗಿತ್ತು. ಅಪ್ಪ ಆಮೇಲೆ ಬಂದು ನೋಡಿಕೊಳ್ಳುತ್ತಿದ್ದರು.

ಅತ್ತೆ-ಮಾವಂದಿರ, ಚಿಕ್ಕಪ್ಪಂದಿರ, ಕಸಿನ್ ಗಳ ಪತ್ರಗಳನ್ನು ಓದಿದಾಗ ಊರಿನ, ಅಲ್ಲಿನ ಆಗು ಹೋಗುಗಳ ಸಂಪೂರ್ಣ ಚಿತ್ರಣವೇ ಕಣ್ಣ ಮುಂದೆ ಬರುತ್ತಿತ್ತು. ಪತ್ರಗಳ ವಿಶೇಷತೆ ಅಂತಹುದು. ಅತ್ತೆ ಬರೆಯುತ್ತಿದ್ದುದು ಅಪ್ಪಟ ಹವ್ಯಕ ಭಾಷೆಯಲ್ಲಿ. ಚಿಕ್ಕಪ್ಪಂದಿರದ್ದು ಅರ್ಧ ಪೇಟೆ ಭಾಷೆ , ಅರ್ಧ ಹವ್ಯಕ ಭಾಷೆ. ಖುದ್ದಾಗಿ ಅವರೇ ಕೂತು ಮಾತಾಡುತ್ತಿದ್ದಾರೇನೋ ಅನ್ನುವಷ್ಟು ಖುಷಿಯಾಗುತ್ತಿತ್ತು. ಯಾರ ಪತ್ರ ಬಂದರೂ ಕೊನೆಯಲ್ಲಿ “ವಿಕಾಸ ಏನು ಮಾಡುತ್ತಿದ್ದಾನೆ, ಅವನಿಗೆ ನನ್ನ ನೆನಪುಗಳು” ಎಂದು ಇರುವುದನ್ನು ನೋಡಿದರೆ ಬಹಳ ಸಂತೋಷವಾಗುತ್ತಿತ್ತು.


ನನ್ನ ಅಜ್ಜನ, ಅಂದರೆ ನನ್ನ ಅಪ್ಪನ ಅಪ್ಪನ ಪತ್ರದ ಮಜಾನೇ ಬೇರೆ. ಅಜ್ಜ ಸಣ್ಣಗೆ ಇರುವೆ ಕೊರೆದಂತೆ ಕೊರೆದು ಬರೆಯುತ್ತಿದ್ದ. ಪತ್ರ ಬಿಡಿಸಿದರೆ ಬರೀ ಸುರುಳಿ ಸುರುಳಿ ಸುತ್ತಿರುವಂತೆ ಕಾಣುತ್ತಿತ್ತು. ಅವರು ಬರೆಯುತ್ತಿದ್ದುದು ಅರ್ಥವಾಗುತ್ತಿದ್ದುದು ಅಪ್ಪನಿಗೆ ಮಾತ್ರ. ಅದು ಯಾವ ಭಾಷೆಯೋ ಏನು ಲಿಪಿಯೋ ಏನು ವಿಷಯವೋ ಒಂದು ಸ್ವಲ್ಪವೂ ತಿಳಿಯುತ್ತಿರಲಿಲ್ಲ. ಅಪ್ಪ ಮಾತ್ರ ಸಲೀಸಾಗಿ ಮೂಗಿನ ಮೇಲೆ ಒಂದು ಕನ್ನಡಕ ಏರಿಸಿ ಹತ್ತು ನಿಮಿಷದಲ್ಲಿ ಓದಿ ಮುಗಿಸಿ ಪಕ್ಕಕ್ಕೆ ಇಡುತ್ತಿದ್ದರು. ಅಪ್ಪ ಇಲ್ಲದಿದ್ದಾಗ ನಾನು ಓದಲು ಪ್ರಯತ್ನಪಡುತ್ತಿದ್ದೆ. ಅದು ಕನ್ನಡದಂತೇ ಇದ್ದರೂ ಕನ್ನಡದಂತೆ ಇರಲಿಲ್ಲ !! ಆ ವಿಚಿತ್ರ ಲಿಪಿಯ ಬಗ್ಗೆ ಕುತೂಹಲ ತಡೆಯಲಾರದೆ ಅಮ್ಮನಿಗೆ ಕೇಳಿದ್ದೆ ಅದು ಯಾವ ಭಾಷೆ ಎಂದು. “ಅದೆಂತದೋ ಮೋಡಿ ಲಿಪಿಯಡ ಅದು. ನಂಗೂ ಸಮಾ ಗೊತ್ತಾಗ್ತಿಲ್ಲೆ ಅದು . ನಿಮ್ಮಜ್ಜ ನಿಮ್ಮಪ್ಪ ಎಂತಾ ಬರ್ಕತ್ವೋ ಏನೋ ಅವ್ಕೇ ಗೊತ್ತಾಗವು ” (ಅದೇನೋ ‘ಮೋಡಿ ಲಿಪಿ’ಯಂತೆ ಅದು. ನಂಗೂ ಸರಿಯಾಗಿ ಗೊತ್ತಾಗಲ್ಲ ಅದು . ನಿಮ್ಮಜ್ಜ ನಿಮ್ಮಪ್ಪ ಏನು ಬರ್ಕತಾರೋ ಏನೋ ಅವರಿಗೇ ಗೊತ್ತಾಗ್ಬೇಕು) ಎಂದಿದ್ದಳು ಅಮ್ಮ.

ಈ ಕಥೆ ಹೀಗಾದರೆ ನನ್ನ ಅಮ್ಮನ ಅಕ್ಕ ಅಂದರೆ ದೊಡ್ಡಮ್ಮನದು ಪತ್ರ ಬರೆಯುವ ಶೈಲಿ ಬೆಂಗಳೂರಿನಲ್ಲಿ ಮನೆ ಕಟ್ಟಿದಂತೆ. ಅಂದರೆ ಇನ್ ಲ್ಯಾಂಡ್ ಪತ್ರದಲ್ಲಿ ಒಂದು ಚೂರೂ ಜಾಗ ಬಿಡದಂತೆ ತುಂಬಿಸಿರುತ್ತಿದ್ದರು. ಅಂಚಿನಲ್ಲಿ ಮಡಿಚಲು ಇರುವ ಜಾಗದಲ್ಲೂ ಬರೆಯುತ್ತಿದ್ದಳು. ಅದೇನಿರುತ್ತಿತ್ತೋ ಅಕ್ಕ ತಂಗಿಯರ ಕಷ್ಟ ಸುಖ ವಿನಿಮಯಗಳು ಹೇಳಿಕೊಂಡಷ್ಟೂ ಸಾಕಾಗುತ್ತಿರಲಿಲ್ಲವೇನೋ !. ಪೂರ್ತಿ ಕಾಗೆಕಾಲು ಗುಬ್ಬಿಕಾಲು ಅಕ್ಷರಗಳು. ನಾಲ್ಕು ಸಾಲು ಕಷ್ಟ ಪಟ್ಟು ಓದುವುದರಲ್ಲಿ ತಲೆ ಕೆಟ್ಟು ಕೈಬಿಡುತ್ತಿದ್ದೆ. ಯಥಾ ಪ್ರಕಾರ ಅಮ್ಮನಿಗೆ ಮಾತ್ರ ಸಲೀಸು.

ಇನ್ನೊಂದು ವಿಶೇಷ ನೆನಪಿನಲ್ಲಿರುವ ಪತ್ರವೆಂದರೆ ಅದು ಅಪ್ಪನ ಹಿರಿಯ ಸಹೋದ್ಯೋಗಿಯೊಬ್ಬರದು. ಅವರು ನಿವೃತ್ತಿಯಾದ ಮೇಲೆ ಬೆಂಗಳೂರಿಗೆ ಹೋಗಿ ನೆಲೆಸಿದ್ದರು. ಅವರು ಕೊನೆ ಕ್ಷಣ ದಲ್ಲಿ ಮಾಡಿಕೊಂಡ ಏನೋ ಆವಾಂತರದಿಂದ ಅವರ ಕಾಗದ ಪತ್ರಗಳಲ್ಲಿ ಏನೋ ಹೆಚ್ಚು ಕಮ್ಮಿ ಯಾಗಿ ಅವರ ಪೆನ್ಶನ್ ಹಣ ಬಿಡುಗಡೆಯಾಗಿರಲಿಲ್ಲ. ಪಾಪ ಅವರು ವಾರಕ್ಕೊಂಮ್ಮೆ, ಹದಿನೈದು ದಿನಕ್ಕೊಮ್ಮೆ ಅಪ್ಪನಿಗೆ ಪತ್ರ ಬರೆದು ಈ ಬಗ್ಗೆ ವಿಚಾರಿಸುವಂತೆ ಕೇಳಿಕೊಳ್ಳುತ್ತಿದ್ದರು. ಅದು ಸರ್ಕಾರಿ ಕೆಲಸವಾದ್ದರಿಂದ ಮಾಮೂಲಿನಂತೆ ‘ಮಾಮೂಲಿ’ ಕೊಡದೇ ಏನೂ ಆಗುತ್ತಿರಲಿಲ್ಲವಾದ್ದರಿಂದ ವರ್ಷಗಳಿಂದ ಎಳೆಯಲ್ಪಟ್ಟು ಹಾಗೇ ಉಳಿದಿತ್ತು. ಅವರು ಪಾಪ ವಯಸ್ಸಾದವರು ಬೆಂಗಳೂರಿನಿಂದ ಓಡಾಡಲು ಆಗದ ಪರಿಸ್ಥಿತಿ ಇದ್ದುದರಿಂದ ಪತ್ರಗಳ ಮೂಲಕ ಸ್ಥಿತಿಗತಿ ತಿಳಿದುಕೊಳ್ಳುತ್ತಿದ್ದರು. ಅವರ ಪತ್ರ ಬಂದಾಗಲೆಲ್ಲ ಅಪ್ಪ ಅಮ್ಮ ಅವರ ಬಗ್ಗೆ ಮಾತಾಡಿಕೊಂಡು ಮರುಕ ಪಡುತ್ತಿದ್ದರು.


ಹೀಗೆ ಬರುತಿದ್ದ ಪತ್ರಗಳಿಗೆಲ್ಲಾ ಕಡ್ಡಾಯವಾಗಿ ಉತ್ತರ ಬರೆಯುವ ಪರಿಪಾಠ ಇತ್ತು. ಸಂಬಂಧಿಕರಿಗೆ ಬರೆಯುವ ಪತ್ರಗಳಲ್ಲಿ ಅಪ್ಪ , ಅಮ್ಮ ಬರೆದಾದ ಮೇಲೆ ಕೊನೆಯಲ್ಲಿ ಸ್ವಲ್ಪ ಜಾಗ ನನಗಾಗಿಯೇ ಮೀಸಲಿಡುತ್ತಿದ್ದರು. ಅದರಲ್ಲಿ ನಾನು ನನ್ನ ಸುಂದರವಾದ(!) ಕನ್ನಡ ಕೈಬರಹದಿಂದ ೮-೧೦ ಸಾಲುಗಳನ್ನು ಬರೆದು ಷರಾ ಹಾಕುತ್ತಿದ್ದೆ. ನನ್ನ ವಾರಗೆಯವರಿಗೆಲ್ಲಾ ಪೂರ್ತಿ ನಾನೇ ಪತ್ರ ಬರೆದು ಅಮ್ಮನಿಗೆ ತೋರಿಸಿ ಪೋಸ್ಟ್ ಮಾಡುತ್ತಿದ್ದೆ.

ನಂತರ ನನ್ನ ಹೈಸ್ಕೂಲಿನ ಪ್ರಾರಂಭದ ವರುಷಗಳಲ್ಲಿ ಅಣ್ಣ ಮೈಸೂರಿಗೆ ಓದಲು ಹೋದ. ಇನ್ನೊಬ್ಬ ಅಣ್ಣ ಅಂದರೆ ನನ್ನ ದೊಡ್ಡಮ್ಮನ ಮಗ ಅಮೆರಿಕಾಕ್ಕೆ ಓದಲು ಹೋದ ನಂತರ ನನಗೆ ಇಂಗ್ಲೀಷಿನಲ್ಲಿ ಪತ್ರ ಬರೆಯುವ ತಿಕ್ಕಲು ಹತ್ತಿಕೊಂಡಿತು. ಏನೇನು ಬರೆಯಲು ಬರುತ್ತದೋ ಎಲ್ಲಾ ಬರೆದು ಮೊದಲು ಅಪ್ಪನಿಗೆ ಎಡಿಟಿಂಗ್ ಮಾಡಲು ಕೊಡುತ್ತಿದ್ದೆ. ಅಪ್ಪ ನೋಡಿ ಸೈ ಅಂದ ಮೇಲೆ ಸಂಭ್ರಮದಿಂದ ಪೋಸ್ಟ್ ಮಾಡುತ್ತಿದ್ದೆ. ಆಮೇಲೆ ಅಣ್ಣಂದಿರು ಇಂಗ್ಲೀಷಿನಲ್ಲೇ ಉತ್ತರ ಬರೆಯುತ್ತಿದ್ದರು. ಏನೋ ಸಾಧನೆ ಮಾಡಿದ ತೃಪ್ತಿ ದೊರಕುತ್ತಿತ್ತು. ಎಷ್ಟಂದರೂ ನಾನೂ ಭಾರತೀಯನಲ್ಲವೇ .. ಇಂಗ್ಲೀಷನಲ್ಲಿ ಬರೆದರೆ, ಮಾತಾಡಿದರೆ ದೊಡ್ಡಸ್ತಿಕೆ, ಬುದ್ಧಿವಂತಿಕೆ ಎಂಬ ಭಾವನೆ ಸಾಮಾನ್ಯವಾಗಿ ಎಲ್ಲರಲ್ಲೂ ಇರುವಂತೆ ಆಗ ನನ್ನಲ್ಲೂ ಇತ್ತು.
(ಆದರೆ ಈಗ ಈ-ಮೇಲು, ಚಾಟಿಂಗ್ ಗಳನ್ನೂ ಕೂಡ ಕನ್ನಡದಲ್ಲೇ ಬರೆಯುವಂತಾಗಿರುವುದು ಸಂತೋಷದ ವಿಚಾರ).

ತದನಂತರ ಕ್ರಮೇಣ ಎಲ್ಲರ ಮನೆಗೆ ಫೋನ್ ಬರುತ್ತಿದ್ದಂತೆ ಈ ಪತ್ರ ಬರೆಯುವ ಅಭ್ಯಾಸವೂ ಕೂಡ ನಿಧಾನವಾಗಿ ಕಡಿಮೆಯಾಗುತ್ತಾ ಹೋಯಿತು. ನಾನು ಎಂಜಿನಿರಿಂಗ್ ಓದುವಾಗ ಮೊದ ವರ್ಷದಲ್ಲಿ ಮನೆಗೆ ಬರೆದ ಪತ್ರವೇ ಕೊನೆ ಇರಬೇಕು ನಂತರ ಬರೇ ಫೋನಿನಲ್ಲೇ ಎಲ್ಲಾ ಸುದ್ದಿ ಸುಖ ದುಃಖ ವಿಚಾರಣೆ ಮುಗಿದುಹೋಗುತ್ತಿತ್ತು. ನಂತರ ಕೆಲವು ವರ್ಷಗಳು ಹಬ್ಬದ ದಿನಗಳ ಹಾರೈಕೆಗೆ ಎಲ್ಲರಿಗೂ ಗ್ರೀಟಿಂಗ್ಸ್ ಕಳುಹಿಸುವ ಅಭ್ಯಾಸ ಮಾತ್ರ ಹಾಗೆ ಉಳಿದಿತ್ತು. ಆಮೇಲೆ ಈ ಮೊಬೈಲ್ ಫೋನ್ ಬಂದ ಮೇಲೆ ಆ ಅಭ್ಯಾಸವೂ ನಿಂತು ಹೋಯಿತು.

ಈಗಲೂ ಮನೆಗೆ ಹೋದಾಗ ಅಂಚೆ ಮಾಮನ ಸೈಕಲ್ ಗಂಟೆಯ ಟ್ರಿಣ್ ಟ್ರಿಣ್ ಶಬ್ದ ಕೇಳುತ್ತದೆ. ಆದರೆ ಮೊದಲಿನಂತೆ ಓಡಿ ಹೋಗಿ ನೋಡುವ ಸಂಭ್ರಮ ಮನಸ್ಸಲ್ಲಿ ಉಳಿದಿಲ್ಲ. ಮದುವೆ ಇತ್ಯಾದಿ ಶುಭಕಾರ್ಯಗಳ ಆಮಂತ್ರಣ ಪತ್ರಗಳು, ಎಂದೋ ಆದ ಅಜೀವ ಸದಸ್ಯತ್ವಕ್ಕೆ ಪ್ರತಿಯಾಗಿ ಬರುವ ಪತ್ರಿಕೆಗಳು, ಬ್ಯಾಂಕಿನ, ಇನ್ನಿತರ ವ್ಯವಹಾರದ ಪತ್ರಗಳು ಇಷ್ಟೆ ಆಗಿರುತ್ತವೆ.
***********************


ಹ್ಮ್.. ಎಲ್ಲಾ ಹೀಗೆ ನೆನಪಿಸಿಕೊಂಡು ಒಮ್ಮೆ ನಿಟ್ಟುಸಿರಿಟ್ಟು ಬರೆಯಲು ಕುಳಿತೆ. ಮೊದಲ ಎರಡು ಸಾಲು ಉಭಯಕುಶಲೋಪರಿ ಸಾಂಪ್ರತ ಬರೆದೆ. ಮುಂದೆ ಏನು ಬರೆಯುವುದು ಗೊತ್ತಾಗುತ್ತಿಲ್ಲ! ಬರೆಯುವುದಕ್ಕೆ ಏನೂ ವಿಷಯವೇ ಸಿಗುತ್ತಿಲ್ಲ. ಮೊದಲಾದರೆ ಎಷ್ಟೆಲ್ಲಾ ವಿಷಯಗಳಿರುತ್ತಿತ್ತು. ಶಾಲೆ, ಪರೀಕ್ಷೆ, ಆಟ, ಪ್ರವಾಸ, ಮಳೆ, ಅಪರೂಪಕ್ಕೆ ನೋಡುತ್ತಿದ್ದ ಸಿನೆಮಾ ಹೀಗೇ ಇನ್ನೂ ಏನೇನೋ. ಪತ್ರದಲ್ಲಿ ಇದ್ದ ಜಾಗವು ಸಾಲುತ್ತಿರಲಿಲ್ಲ. ಈಗ ಹಾಗಲ್ಲ, ಎಲ್ಲಾ ಫೋನಿನಲ್ಲೆ ಮುಗಿದುಹೋಗಿರುತ್ತದಲ್ಲ. ! ಈ-ಮೇಲುಗಳಲ್ಲಂತೂ ನಾಲ್ಕು ಸಾಲು ಬರೆದರೆ ಹೆಚ್ಚು. ಕಷ್ಟಪಟ್ಟು ಯೋಚಿಸಿ ಯೋಚಿಸಿ ನನ್ನ ಕೆಲಸದ ಬಗ್ಗೆ, ಬೆಂಗಳೂರಿನ ಟ್ರಾಫಿಕ್ಕಿನ ಬಗ್ಗೆ, ಮಳೆಯ ಬಗ್ಗೆ, ‘ಮುಂಗಾರು ಮಳೆ' ಚಿತ್ರದ ಬಗ್ಗೆ ಹೀಗೇ ಏನೇನೋ ಬರೆದೆ. ಅವರಿರುವ ಊರಿನ ಹವಾಮಾನ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಇನ್ನೇನೆನೊ ಕೇಳಿದೆ. ಎಷ್ಟು ಬರೆದರೂ ಖಾಲಿಯಿದ್ದ ಜಾಗವನ್ನು ತುಂಬಿಸಲು ಆಗಲೇ ಇಲ್ಲ. ಆದಷ್ಟು ಬರೆದು ಖಾಲಿ ಉಳಿದ ಜಾಗದಲ್ಲಿ ಸುಮ್ಮನೇ ಒಂದು ಹೂವಿನ ಚಿತ್ರ ಬರೆದು ಎಲ್ಲವನ್ನೂ ಪೋಸ್ಟ್ ಮಾಡಿದೆ. ಇದನ್ನು ಓದಿದ ಕೂಡಲೇ ಎಲ್ಲರೂ ಪತ್ರ ಬರೆಯುತ್ತಾರೆ, ಹಾಗೆಯೆ ಮತ್ತೆ ನಾನು ಬರೆಯುತ್ತೇನೆ, ಅವರು ಮತ್ತೆ ಉತ್ತರಿಸುತ್ತಾರೆ, ಹಾಗೆ ಪತ್ರ ವೈಭವ ಮರುಕಳಿಸುತ್ತದೆ ಎಂಬ ನಂಬಿಕೆಯಂತೂ ಖಂಡಿತಾ ಇರಲಿಲ್ಲ. ನೋಡೋಣ ಎಂದುಕೊಂಡು ಸುಮ್ಮನಾದೆ. ಹಾಗೆಯೇ ೨-೩ ದಿನಗಳ ನಂತರ ಒಬ್ಬೊಬ್ಬರದೇ ಉತ್ತರ ಬರತೊಡಗಿತು. ಪತ್ರ ತಲುಪಿದ ಎಲ್ಲರೂ ಪ್ರತಿಕ್ರಯಿಸಿದ್ದರು. ನಿನ್ನ ಪತ್ರ ತಲುಪಿತು, ಏನೋ ಈಗ ನಿಂಗೆ ಪತ್ರ ಬರಿಬೇಕು ಅನ್ನಿಸಿದೆ? ಖುಷಿಯಾಯಿತು ತುಂಬಾ ಎಂದಿದ್ದರು. ಆದರೆ ಉತ್ತರಿಸಿದ್ದು ಪತ್ರಗಳ ಮೂಲಕವಂತೂ ಖಂಡಿತಾ ಅಲ್ಲ. ದೊಡ್ಡವರೆಲ್ಲಾ ಫೋನ್ ಮಾಡಿ ಹೇಳಿದರೆ, ಚಿಕ್ಕವರದ್ದು ಇದೆಯಲ್ಲಾ, ಎಸ್ಸೆಮ್ಮೆಸ್ಸು. !

ಆದರೆ ನನ್ನ ದೊಡ್ಡಮ್ಮನದು ಮಾತ್ರ ಸುದ್ದಿಯೇ ಇಲ್ಲ ! ಏನಾಯ್ತಪ್ಪಾ ಇವರಿಗೆ ನನ್ನ ಪತ್ರ ತಲುಪಿತೋ ಇಲ್ಲವೊ ಎಂದುಕೊಂಡೆ. ಫೋನಾದ್ರೂ ಮಾಡಬೇಕಿತ್ತಲ್ಲಾ ಇವರು ಎಂದುಕೊಂಡು ಇರಲಿ ನೋಡೋಣ ಅಂತ ಸುಮ್ಮನಾದೆ. ಕೆಲದಿನಗಳ ನಂತರ ರಾತ್ರಿ ಮನೆಗೆ ಹೋದಾಗ ಬಾಗಿಲಲ್ಲಿ ಇನ್ಲ್ಯಾಂಡು ಪತ್ರವೊಂದು ಇತ್ತು. ಮದ್ಯಾಹ್ನ ಬಂದ ಅಂಚೆಯವನು ಸಿಗಿಸಿ ಹೋಗಿದ್ದ ಎನಿಸುತ್ತದೆ. ವಿಳಾಸದ ಕೈಬರಹ ನೋಡುತ್ತಿದ್ದಂತೆ ಖುಷಿಯಿಂದ ಹಿಗ್ಗಿದೆ. ದೊಡ್ಡಮ್ಮ ಪತ್ರ ಬರೆದಿದ್ದರು. ಸದ್ಯ ಇವರೊಬ್ಬರಾದರೂ ಬರೆದರಲ್ಲ ಎಂದುಕೊಂಡು ಸಂತೋಷದಿಂದ ಓದಿ ಮುಗಿಸುತ್ತಿದ್ದಂತೆ ಕೈ ಆಯಾಚಿತವಾಗಿ ಮೊಬೈಲಿನಲ್ಲಿ ದೊಡ್ಡಮ್ಮನ ಮನೆ ಫೋನ್ ನಂಬರನ್ನು ಒತ್ತುತ್ತಿತ್ತು. ನಿಮ್ಮ ಪತ್ರ ಬಂದು ತಲುಪಿದೆ ಎಂದು ತಿಳಿಸಲು ಫೋನು ಮಾಡುತ್ತಿದ್ದೆ.

========================================

ಅಷ್ಟಕ್ಕೂ ಪತ್ರಗಳೆಂದರೆ ಭಾರೀ ಹಿಂದಿನ ಇತಿಹಾಸವೇನಲ್ಲ. ಮೊನ್ನೆ ಮೊನ್ನೆಯಷ್ಟೆ ಕೆಲವೇ ವರುಷಗಳ ಹಿಂದೆ ಬಳಕೆಯಿಂದ ಕಡಿಮೆಯಾಗಿರುವಂತವು. ಈಗ ಕಾಲ ಬದಲಾಗಿದೆ, ಯಾರೊಟ್ಟಿಗಾದರೂ ಇದ್ದ ಸ್ಥಳದಿಂದಲೇ, ಆ ಕ್ಷಣದಲ್ಲೇ ಸಂಪರ್ಕ ಸಾಧಿಸಬಹುದು. ಫೋನು, ಮೊಬೈಲು, ಈ-ಮೇಲು, ಚಾಟಿಂಗ್, ವಾಯ್ಸ್ ಚಾಟ್ ಏನೇನೋ ಇದೆ. ಈಗ ವಿದೇಶದಲ್ಲಿರುವವರಿಗೂ ಪಕ್ಕದ ಊರಿನಲ್ಲಿರುವವರಿಗೂ ವ್ಯತ್ಯಾಸವೇ ಗೊತ್ತಾಗದಷ್ಟು ಟಚ್ ಇರುತ್ತದೆ. ಇವೆಲ್ಲಾ ಇರುವಾಗ ಮತ್ಯಾಕೆ ಆ ಹಳೆಯ ಪತ್ರಗಳಿಗೆ ಜೋತು ಬೀಳುವುದು ಸುಮ್ಮನೆ ವ್ಯರ್ಥ ಅನಿಸುವುದು ಸಹಜ. ಪತ್ರಗಳ ಬಗ್ಗೆ ಈ ರೀತಿ ಬ್ಲಾಗ್ ಬರೆದು ಕುಯ್ತಾ ಇರೋದು ಹಾಸ್ಯಾಸ್ಪದವೆನಿಸಬಹುದು. ಆದರೇ ಏನೇ ಹೇಳಿ, ಪತ್ರಗಳೆಂದರೆ ಬರೀ ಅಕ್ಷರಗಳಲ್ಲ, ಭಾವನೆಗಳೇ ಅಕ್ಷರ ರೂಪಕ್ಕೆ ಇಳಿದಿರುವಂತಹುದು ಅದು. ಪತ್ರಗಳಲ್ಲಿ ಆಗುತ್ತಿದ್ದ ಭಾವನೆಗಳ ವಿನಿಮಯ ಈಗಿನ ಸಂಪರ್ಕ ಮಾಧ್ಯಮಗಳಲ್ಲಿ ಸಾಧ್ಯವಿಲ್ಲ ಬಿಡಿ. ‘ಬೆರಳಂಚಿನ ಭಾವಗೀತೆ’ಗಳೆಂದು ಹೆಸರಾಗಿರುವ ಈ ಎಸ್ಸೆಮ್ಮೆಸ್ಸು ಗಳು ಸ್ವಲ್ಪ ಆ ನಿಟ್ಟಿನಲ್ಲಿದ್ದರೂ ಅವುಗಳದ್ದೇ ಆದ ಮಿತಿಗಳಿಂದ ಪತ್ರಗಳ ಸಮಕ್ಕೆ ಬರಲು ಸಾಧ್ಯವಿಲ್ಲ. ಏನೇ ಆದರೂ ಮನಸ್ಸಿಗೆ ಹಿತವೆನಿಸುವುದೇ ಆ ಹಿಂದಿನ ದಿನಗಳು, ಆ ಪತ್ರಗಳು. ಅನುಭವಿಸಿದವರಿಷ್ಟೆ ಗೊತ್ತು ಅದರ ಸುಖ.

ಅದಕ್ಕೇ ಹೇಳುವುದು ಯಾವತ್ತೂ,
ಹಾಡು ಹಳೆಯದಾದರೇನು..... ಭಾವ ನವನವೀನ.......
ನೀವೂ ಒಮ್ಮೆ ಪ್ರಯತ್ನಿಸಿ ನೋಡಿ.

ಬುಧವಾರ, ಜೂನ್ 20, 2007

ಪ್ರೇಮಿಗಳ ಸಂಭಾಷಣೆ (ಇದು ಹುಡುಗಿಯರಿಗಲ್ಲ !!)

"Lovers' conversation" ಎಂಬ ಹೆಸರಿನಲ್ಲಿ ಬಂದ e mail ಒಂದು ಬಹಳ ಚೆನ್ನಾಗಿದೆ ಅನ್ನಿಸಿದ್ದರಿಂದ ಅದನ್ನು ಕನ್ನಡದಲ್ಲಿ ಬರೆದು ಹಾಕುತ್ತಿದ್ದೇನೆ. ಇದನ್ನು ರಚಿಸಿದವರು ಯಾರು ಎಂದು ಗೊತ್ತಿಲ್ಲ. "ನದಿ ಮೂಲ ಋಷಿ ಮೂಲ" ಹುಡುಬಾರದು ಅಂತ ಮಾತಿದೆ. ಅದಕ್ಕೆ "ಹೆಣ್ಣಿನ ಮೂಲ"ವೂ ಕೂಡ ಸೇರಿಕೊಂಡಿದೆ. ಅದೇ ರೀತಿ "e mail forwardನ ಮೂಲ"ವನ್ನು ಕೂಡ ನಾವು ಹುಡುಕಲು ಹೋಗಬಾರದು ಎಂಬುದು ಐ.ಟಿ. ಕ್ಷೇತ್ರದ ಅಲಿಖಿತ ನಿಯಮ. ಏನೇ ಆಗಲಿ ಇದರ ಮೂಲ ಲೇಖಕರಿಗೊಂದು ದಿವ್ಯ ಧನ್ಯವಾದ ಹೇಳುತ್ತಿದ್ದೇನೆ.

ಇದಕ್ಕೆ ಪ್ರೇಮಿಗಳ ಸಂಭಾಷಣೆ ಎಂಬ ಹೆಸರಿದ್ದರೂ ನಿಜವಾದ ಪ್ರೇಮಿಗಳ ಸಂಭಾಷಣೆ ಹೀಗಿರುವುದಿಲ್ಲ ಎನ್ನುವುದು ಬಲ್ಲವರ ಅಭಿಪ್ರಾಯ, ಇದು ಬರೀ ಪ್ರೇಮಿಗಳ ನಡುವಣ ಸಂಭಾಷಣೆ ಮಾತ್ರ ಆಗಬೇಕಿಲ್ಲ ಎಂಬುದೂ ಇನ್ನು ಕೆಲವರ ಅಂಬೋಣ. ಪ್ರೀತಿ ಒಂದು ಹಂತಕ್ಕೆ ಬಂದ ಮೇಲೆ ಇಂತಹುದು ಸಹಜ ಮತ್ತು ಸತ್ಯ ಎಂಬುದು ಅನುಭವಿಗಳ ವಾದ. ನನಗಂತೂ ಗೊತ್ತಿಲ್ಲ , ಅನುಭವವಿರದ ಕಡೆಗಳಲ್ಲಿ ಅಭಿಪ್ರಾಯ ಮಂಡಿಸುವುದು ನನಗಿಷ್ಟವಿಲ್ಲ. :-)

ನಿರ್ಧಾರ ಓದುಗರಿಗೆ ಬಿಟ್ಟದ್ದು........


ವಿ.ಸೂ: ೧. ಆವರಣ (bracket)ಗಳಲ್ಲಿರುವುದು ಮನಸಿನ ಮಾತುಗಳು
೨. ಪ್ರೀತಿ ಮಾಡ್ತಾ ಇರೋರು ಬಯ್ಕೊಂಡ್ರೆ ನಾನೇನೂ ಮಾಡಕ್ಕಾಗಲ್ಲ.


-------------------------------------------------------------------

ರಾತ್ರಿ ಹನ್ನೊಂದೂ ವರೆ ಗಂಟೆ....

ಹುಡುಗಿ ಹುಡುಗನಿಗೆ ಮಿಸ್ಡ್ ಕಾಲ್ ಕೊಡ್ತಾಳೆ... ಅವನು ಅವಳಿಗೆ ವಾಪಸ್ ಫೋನ್ ಮಾಡ್ತಾನೆ...


ಹುಡುಗಿ: ಹಲೋ !
ಹುಡುಗ: (ಅಯ್ಯೋ.. ಏನ್ ಕುಯ್ತಾಳೋ ಏನೋ... ) ಹಾಯ್... ಏನ್ ಹೇಳು ..?
ಹುಡುಗಿ: ಏನಿಲ್ಲಾ , ಸುಮ್ನೆ ಕಾಲ್ ಮಾಡಿದೆ.
ಹುಡುಗ: (ಕಾಲ್ ಯಾವಾಗ್ ಮಾಡಿದೆ..ಮಿಸ್ಡ್ ಕಾಲ್ ತಾನೆ ಕೊಟ್ಟೆ...) ಒಹ್... ಒ.ಕೆ .. ಏನ್ ಮಾಡ್ತಾ ಇದ್ದೆ ಚಿನ್ನು?
ಹುಡುಗಿ: ಈಗ್ ತಾನೆ ಊಟ ಆಯ್ತು honey... ನೀನು ಏನ್ ಮಾಡ್ತಿದ್ದೆ?
ಹುಡುಗ: ನಂದೂ ಈಗ ತಾನೆ ಊಟ ಆಯ್ತು... ಈಗ "ಕುಣಿದು ಕುಣಿದು ಬಾರೆ" ಹಾಡು ಕೇಳ್ತಾ ಇದ್ದೆ FMನಲ್ಲಿ.
ಹುಡುಗಿ: nice song

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ..... ಅವಳು ಹಾಡನ್ನು ಗುನುಗುತ್ತಾಳೆ

ಹುಡುಗ: (ಅಲ್ಲೇನು ಇಲಿ ಕಿಚುಗುಡ್ತಾ ಇದಿಯಾ?..) ಹೇಯ್!!! ನೀನ್ ಇಷ್ಟು ಚೆನ್ನಾಗಿ ಹಾಡ್ತಿಯಾ?! ನಂಗೆ ಗೊತ್ತೇ ಇರ್ಲಿಲ್ಲಾ!
ಹುಡುಗಿ: **ಕಿಲಕಿಲ ನಗು**
ಹುಡುಗ: ಹೇಯ್.. ಇನ್ನೊಂದು ಸಲ ಹಾಡು please!
ಹುಡುಗಿ: ಇಲ್ಲಿ ಎಲ್ಲಾ ಮಲ್ಗಿದಾರೆ .. ಅಮೇಲೆ ಎಲ್ಲಾ ಭಯ ಪಡ್ತಾರೆ..
ಹುಡುಗ: (correct.. ಅವ್ರು ಯಾವುದೋ ಮೋಹಿನಿ ಪಿಶಾಚಿ ಅನ್ಕೋತಾರೆ..) Come on! Please!
ಹುಡುಗಿ: ಹೋಗೋ.. ನಾನೇನು ಅಷ್ಟು ಚೆನಾಗಿ ಹಾಡಲ್ಲ.
ಹುಡುಗ: (ಅದು ಊರಿಗೇ ಗೊತ್ತು... :-)) ತುಂಬಾ ಚೆನಾಗಿತ್ತು ಹಾಡಿದ್ದು.. please ಹಾಡು dear
ಹುಡುಗಿ: ನಂಗೇನೋ odd ಆಗಿದೆ ಅನ್ಸ್ತಿದೆ ಚಿನ್ನು.
ಹುಡುಗ: ಅದ್ರಲ್ಲಿ ಏನಿದೆ? ಚೆನ್ನಾಗೇ ಹಾಡ್ತಿಯಲ್ಲಾ

ಹುಡುಗಿ: ನೀನೇ ಹೇಳ್ಬೇಕು ಅಷ್ಟೆ
ಹುಡುಗ: (ನಾನಾ? ನಾನು ಬೇರೆ ದಾರಿ ಇಲ್ದೇ ಹೇಳ್ದೆ...) ಈಗ ಹಾಡ್ತೀಯೋ ಇಲ್ವೋ?
ಹುಡುಗಿ: ಯಾಕೋ ತಲೆ ತಿಂತೀಯಾ?
ಹುಡುಗ: ಹ್ಮ್.... ಸರಿ ಬಿಡು. ಒ.ಕೆ
ಹುಡುಗಿ: ನನ್ voice ಅಷ್ಟೆನೂ ಚೆನಾಗಿಲ್ಲ
ಹುಡುಗ: (ಕತ್ತೆ ಕೂಡ ನಾಚ್ಕಳೋ voice.....) hmmm
ಹುಡುಗಿ: ಸರಿ... ಇಷ್ಟೋಂದು ಕೇಳ್ತಿದಿಯಾ.. ಒಂದೇ ಒಂದು stanza ಹಾಡ್ತಿನಿ ಆಯ್ತಾ??
ಹುಡುಗ: (ಇನ್ನೇನು ಕಾದಿದಿಯೋ...) great!!
ಹುಡುಗಿ: ಯಾವ ಹಾಡು ಹಾಡ್ಲಿ?
ಹುಡುಗ: (ನೀನು ಯಾವ ಹಾಡು ಹಾಡಿದ್ರೇನು.... ನನ್ ನಿದ್ದೆ ಅಂತೂ ಹಾಳಾಗೋಯ್ತು...) ಪ್ರೇಮಲೋಕದ್ದು "ನಿಂಬೆ ಹಣ್ಣಿನಂತ ಹುಡುಗಿ ಬಂತು..."?
ಹುಡುಗಿ: ಒಳ್ಳೆ ಹಾಡು... ಆದ್ರೆ ನಂಗೆ lyrics ಜ್ಞಾಪಕ ಇಲ್ಲಾ
ಹುಡುಗ: (textbook ಬಿಟ್ರೆ ನಿಂಗೇನ್ ಜ್ಞಾಪಕ ಇರತ್ತೆ ಹೇಳು..) "ಸಂತೋಷಕ್ಕೆ ಹಾಡು ಸಂತೋಷಕ್ಕೆ"??
ಹುಡುಗಿ: ಇಲ್ಲಾ ಅದೇ ಹಾಡು ಹಾಡ್ತೀನಿ
ಹುಡುಗ: (ಎಲ್ಲಾ ಒಂದೇ , ಯಾವ ಹಾಡಾದ್ರೂ ಕಿವಿ ಕೆಟ್ಟೆ ಕೆಡುತ್ತೆ...) cool

ಅವಳು ಸಣ್ಣಗೆ ಕೆಮ್ಮಿ ಗಂಟಲು ಸರಿ ಮಾಡ್ಕೊಂಡು, ಒಂದು ಸಾಲು ನಿಧಾನಕ್ಕೆ ಗುನುಗುತ್ತಾಳೆ...


ಹುಡುಗಿ: ಹೇಯ್, ಬೇಡ ಕಣೋ.. ನಾಚಿಕೆ ಆಗತ್ತೆ !
ಹುಡುಗ: ಹಾಡು ಹಾಡು... ನಿನ್ನ ಹಾಡಿನ ಅಲೆಯಲ್ಲಿ ನಾನು ಮುಳುಗಿ ಮುಳುಗಿ ತೇಲಬೇಕು
ಹುಡುಗಿ: ನೋಡು ಜಗಳ ಶುರು ಮಾಡ್ತಿದಿಯಾ..
ಹುಡುಗ: (ಗೊತ್ತಾಯ್ತು ತಾನೆ... ಮತ್ತಿನ್ನೇನು..) ಇಲ್ಲ್ಲಾ ಇಲ್ಲಾ.. ನೀನು ನಾಚಿಕೆ ಅಂದ್ಯಲ್ಲಾ ಅದ್ಕೆ.. Trying to make u cool
ಹುಡುಗಿ: hmm
ಹುಡುಗ: please ಹಾಡೆ

ಹುಡುಗಿ:ನಾಳೆ ಹಾಡ್ಲಾ?
ಹುಡುಗ: (ಅಬ್ಬಾ.. ತಪ್ಸ್ಕೊಂಡೆ...escape) ಸರಿ ಮಾ. ನಿಂಗೆ ಯಾವಾಗ ಹಾಡ್ಬೇಕು ಅನ್ಸತ್ತೋ ಆವಾಗ್ಲೇ ಹಾದು ಆಯ್ತಾ
ಹುಡುಗಿ: hmm
ಹುಡುಗ: Good nightಹುಡುಗಿ: Good night, Sweet Dreams.. Take care...
ಹುಡುಗ: (ಜೀವ ಉಳಿತು..) Sweets dreams to u too...
ಹುಡುಗಿ: hmm


ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಅವಳ ಫೋನು (ಅಂದ್ರೆ ಮಾಮೂಲಿ ಮಿಸ್ಡ್ ಕಾಲ್ ಅಷ್ಟೆ) , ಹುಡುಗ ಫೋನ್ ಮಾಡುತ್ತಾನೆ...

ಹುಡುಗಿ: ಹೇಯ್.. ಮಲಗಿಬಿಟ್ಯಾ
ಹುಡುಗ: (ಇಲ್ಲಾ .. ಕರೆಂಟ್ ಕಂಡು ಹಿಡಿತಾ ಇದಿನಿ...) ಇಲ್ಲಾ ಮಾ. ಹೇಳು
ಹುಡುಗಿ: ಏನ್ ಮಾಡ್ತಿದಿಯಾ?
ಹುಡುಗ: (ನಡು ರಾತ್ರಿಲಿ ಏನ್ ಐಸ್ ಪೈಸ್ ಆಡಕ್ಕಾಗತ್ತಾ?..) match ನೋಡ್ತಾ ಇದ್ದೆ
ಹುಡುಗಿ: ಸರಿ.. ನೀನು match ನೋಡ್ಕೊ
ಹುಡುಗ: ಹೇಯ್.. ಇರ್ಲಿ ಹೇಳು.. ಅದ್ಯಾವ್ದೋ ಹಳೇ match.
ಹುಡುಗಿ: ಅಲ್ಲಾ, ನಾ ಹಾಡಿದ್ದು ಕೆಟ್ಟದಾಗಿತ್ತಾ?


ಇದು ಹುಡುಗಿಯರು ಎಸೆಯೋ tricky ಪ್ರಶ್ನೆ... ಅವನು ಸ್ವಲ್ಪ ಯೋಚಿಸ್ತಾನೆ...

ಹುಡುಗ: (ಅಬ್ಬಾ.. ಇವತ್ತು ನಾನು ಬಚಾವಾದೆ.. ಸದ್ಯ ನೀನು ಹಾಡ್ಲಿಲ್ವಲ್ಲಾ!) ಕೆಟ್ಟದಾಗಿತ್ತು ಅಂತ ನಾನೆಲ್ಲಿ ಹೇಳ್ದೆ.. ನೀನು ನಾಚಿಕೆ ಅಂದ್ಯಲ್ಲಾ ಅದ್ಕೆ ನೀನು comfortable ಆಗು ಮೊದಲು ಅಂತ ಅಷ್ಟೆ. ನಾಳೆ ಹಾಡ್ತಿನಿ ಅಂದ್ಯಲ್ಲ.. ಅದಕ್ಕೆ ಕಾಯ್ತಾ ಇದಿನಿ....(ಇವತ್ತಂತೂ ತಪ್ಪಿಸಿಕೊಂಡೆ ಅನ್ಕಂಡಿದಿನಿ..)

ಹುಡುಗಿ: ಈಗ್ಲೇ ಹೇಳ್ತೀನಿ ಕೇಳು...


ಅವಳು ಒಂದು stanza ಹಾಡು ಹೇಳ್ತಾಳೆ, ಹುಡುಗ ಸುಮ್ಮನೆ ಕೇಳ್ತಾ ಇರ್ತಾನೆ..

ಹುಡುಗ: (ಥೂ......) wow. too good !
ಹುಡುಗಿ: ಸುಳ್ಳು... ನಂಗೊತ್ತು ನನ್ voice ಎಷ್ಟು ಕಚ್ಚಡವಾಗಿದೆ ಅಂತ
ಹುಡುಗ: (ನಿಂಗೂ self realization ಇದೆ ಅಂತಾಯ್ತು..:-)) ಹೇಯ್.. ತುಂಬಾ ಚೆನಾಗಿ ಹಾಡ್ತೀಯಾ ಕಣೆ.
ಹುಡುಗಿ: ಹೋಗೋ, ಸುಮ್ನೆ ಹೇಳ್ಬೇಕಲ್ಲಾ ಅಂತ ಹಿಂಗೆಲ್ಲಾ ಹೇಳ್ತಿಯಾ.
ಹುಡುಗ: (ಛಿ ಕಳ್ಳಿ... ಸರಿಯಾಗೇ ಕಂಡು ಹಿಡಿದುಬಿಟ್ಟೆ..) ಛೆ ಛೆ.. ನಿನ್ voice ಸರಿ ಇರ್ಲಿಲ್ಲಾ ಅಂದ್ರೆ ನಾನು ಇಷ್ಟೊತ್ತು ಕೇಳ್ತಾನೇ ಇರ್ಲಿಲ್ಲಾ..
ಹುಡುಗಿ: hmmmmm
ಹುಡುಗ: ನೀನು ಇಷ್ಟು ಚೆನಾಗಿ ಹಾಡ್ತಿಯಾ ಅಂತ ಗೊತ್ತೇ ಇರ್ಲಿಲ್ಲ! (ಮತ್ತೆ ಗೊತ್ತಾಗೋದೂ ಬೇಡ..)
ಹುಡುಗಿ: Hmmm! ಸರಿ good night.. ನೀನು ಮಲ್ಕೋ..
ಹುಡುಗ: (ನಿನ್ ಹಾಡು ಕೇಳಿದ್ಮೇಲೆ ಇನ್ನೆಲ್ಲಿಂದ ಬರ್ಬೇಕು ನಿದ್ದೆ....) good night
ಹುಡುಗಿ: take care
ಹುಡುಗ: you too


ಹುಡುಗಿ: ಹೇಯ್..
ಹುಡುಗ: (ಅಯ್ಯೋ.... ಇವಳು ಬಿಡಲ್ಲ ಇವತ್ತು...) ಹಾಂ.. ಹೇಳು
ಹುಡುಗಿ: ಚಿನ್ನು... ನಿಜ್ವಾಗ್ಲೂ ನನ್ voice ಚೆನಾಗಿದಿಯಾ?
ಹುಡುಗ: (...ಹಾಳಾಗೋಗು ಎಲ್ಲಾದ್ರೂ.. ನಿನ್ voice record ಮಾಡಿ ಒಂದ್ಸಲ ಕೇಳು ಗೊತಾಗತ್ತೆ..) ನಿಜ್ವಾಗ್ಲೂ ಕಣೆ..
ಹುಡುಗಿ: ಬರೀ ಸುಳ್ಳು
ಹುಡುಗ: (ಇವ್ಳಜ್ಜಿ !! ಇನ್ನು ನಿದ್ದೆ ಮಾಡೋಕ್ಕೆ ಬಿಡ್ಲಿಲ್ಲಾ ಅಂದ್ರೆ...) ಏನಿಲ್ಲಪ.. ಚೆನಾಗೇ ಹಾಡ್ತಿಯ.

........................................................................

.................................................................

............ and the conversation continues ......... ..........
ಬುಧವಾರ, ಮೇ 16, 2007

ಅರೇಂಜ್ಡ್ ಮ್ಯಾರೇಜ್ - ಕಥೆ

ಇಂದಿನ ಯುವಜನಾಂಗದ ದೃಷ್ಟಿಯಲ್ಲಿ ಅರೇಂಜ್ಡ್ ಮ್ಯಾರೇಜ್ ಎಂಬುದು ಅರ್ಥ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯವಾಗಿ ಇಂಗ್ಲೀಷಿನಲ್ಲಿ ನಾನು ಓದಿದ ಸಣ್ಣ ಕಥೆಯೊಂದನ್ನು ಕನ್ನಡದಲ್ಲಿ ಓದಿಸುವ ಪ್ರಯತ್ನ ಮಾಡಿದ್ದೇನೆ


=======================================================

ದಟ್ಟವಾದ ಗಿಡಮರಗಳ ಮಧ್ಯ ಒದ್ದೆಯಾದ ಮಣ್ಣಿನ ದಾರಿಯಲ್ಲಿ ಅವಳು ನಿಧಾನಕ್ಕೆ ಹೆಜ್ಜೆ ಹಾಕುತ್ತಿದ್ದಳು. ಪಕ್ಕದಲ್ಲಿ ಬರುತ್ತಿದ್ದವನು ತನ್ನ ಗಂಡ ಎಂದಷ್ಟೆ ಅವಳಿಗೆ ಗೊತ್ತಿತ್ತು. ಅವನು ಬಹಳ ಖುಷಿಯಾಗಿ, ದೂರದಲ್ಲೆಲ್ಲೋ ಆಡುತ್ತಿದ್ದ ಮಕ್ಕಳನ್ನು ನೋಡುತ್ತಾ ಬರುತ್ತಿದ್ದ. ಅವಳ ಕೈಯ ಮೆಹಂದಿ ಎರಡು ದಿನಗಳ ಸಂಭ್ರಮವನ್ನು ನೆನಪಿಸುತ್ತಿತ್ತು.


ಹೇಯ್. ಅಲ್ನೋಡು..! ಆಶ್ಚರ್ಯದಿಂದ ಏನನ್ನೋ ತೋರಿಸುತ್ತಾ ಅವನು ಕೂಗಿದ. ಅವನು ತೋರಿಸಿದೆಡೆಗೆ ನೋಡಿದಳು. ಸುಂದರವಾದ ಬಣ್ಣ ಬಣ್ಣದ ಬಲೂನುಗಳಿಂದ ಆಕಾಶವು ತುಂಬಿ ಹೋಗಿತ್ತು. ಮಕ್ಕಳು ಆಕಾಶವನ್ನು ನೋಡುತ್ತಾ ಕುಣಿಯುತ್ತಿದ್ದರು. ಇವನು ಅದರಲ್ಲೇ ಪೂರ್ತಿ ಮುಳುಗಿಹೋಗಿದ್ದ. ಹೌದು, ಬಣ್ಣಗಳೆಂದರೆ ಯಾವಾಗಲೂ ಖುಷಿ ಕೊಡುವಂತದ್ದು.. ಆದರೆ ಈಗೇಕೋ ಹಾಗೆ ಅನಿಸುತ್ತಿಲ್ಲ. ಏಕೆಂದರೆ ಅವಳು ಅವಳ ಗೆಳತಿಯರೊಂದಿಗೆ ಇಲ್ಲ, ಅಪ್ಪ-ಅಮ್ಮಂದಿರೊಂದಿಗಿಲ್ಲ, ತನ್ನ ಸಹೋದ್ಯೋಗಿಗಳೊಂದಿಗೂ ಇಲ್ಲ. ಇದು ಶಾಲೆಯ ಅಥವಾ ಕಂಪನಿಯಿಂದ ಬಂದ ಪ್ರವಾಸವಾಗಿರಲಿಲ್ಲ. ಇದು ಅವಳ ಜೀವನದ ಪ್ರಶ್ನೆಯಾಗಿತ್ತು ಮತ್ತು ಅವಳ ಬದುಕನ್ನು ಈ ಹುಡುಗನೊಟ್ಟಿಗೆ ಒತ್ತಾಯಪೂರ್ವಕವಾಗಿ ಸೇರಿಸಲಾಗಿತ್ತು. ಒಂದು ರೀತಿಯ ಒಬ್ಬಂಟಿತನ, ಅಸಮಾಧಾನ ಮನಸ್ಸನ್ನು ಕಾಡುತ್ತಿತ್ತು. ತಾನು ಮದುವೆಯಾದ ಹುಡುಗನ ಹೆಸರು ಮತ್ತು ಕೆಲಸ ಇಷ್ಟು ಬಿಟ್ಟು ಮತ್ತೇನೂ ಅವಳಿಗೆ ಸರಿಯಾಗಿ ಗೊತ್ತೇ ಇರಲಿಲ್ಲ. ಆ ಹುಡುಗನನ್ನು ಇದಕ್ಕೂ ಮೊದಲು ಅವಳು ನೋಡಿದ್ದು ಒಮ್ಮೆ ಮಾತ್ರ . ಒಂದೆರಡು ಬಾರಿ ಮಾತಾಡಿದ್ದಳು ಅಷ್ಟೆ. ಎಲ್ಲವೂ ಬಹಳ ತರಾತುರಿಯಲ್ಲಿ ನಡೆದು, ಅವಳು ಉಸಿರು ಬಿಡುವುದರೊಳಗೆ ಎಲ್ಲವೂ ಮುಗಿದುಹೋಗಿತ್ತು. ಈಗ ಮದುವೆಯಾದ ಆ ಹುಡುಗನೊಂದಿಗೆ ಒಂದು ಗಿರಿಧಾಮಕ್ಕೆ ಬಂದಿದ್ದಳು. ಇಷ್ಟು ದಿನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡ ಇವರು ಈಗ ಯಾರೋ ಗುರುತು ಪರಿಚಯ ಇಲ್ಲದವನ ಜೊತೆ ತಮ್ಮ ಮಗಳನ್ನು ಮದುವೆ ಮಾಡಿ ಈ ರೀತಿ ಅದು ಹೇಗೆ ಇಷ್ಟು ದೂರ ಒಬ್ಬಂಟಿಯಾಗಿ ಕಳುಹಿಸಿದರು ಎಂದು ಮನಸ್ಸಿನಲ್ಲಿ ಅಪ್ಪ ಅಮ್ಮರಿಗೆ ಶಾಪ ಹಾಕುತ್ತಾ ಸುಮ್ಮನೇ ಅವನೆಡೆಗೆ ನೋಡುತ್ತಾ ಯೋಚಿಸಿದಳು. "ಈ ಹುಡುಗನಿಗೆ ತನ್ನ ಜೊತೆಗಿರುವವಳು ತನ್ನ ಹೆಂಡತಿ ಎಂದು ಅರ್ಥ ಆಗಿದೆಯೆ?ಅಪರಿಚಿತ ಹುಡುಗಿಯೊಬ್ಬಳನ್ನು ಈ ಹುಡುಗ ಅರ್ಥಮಾಡಿಕೊಳ್ಳುತ್ತಾನಾ, ನನ್ನ ಭಾವನೆಗಳನ್ನು ಗೌರವಿಸುತ್ತಾನಾ, ಪ್ರೀತಿ ಮಾಡುತ್ತಾನಾ, ಬಾಳುತ್ತಾನಾ!"


******************************************

"ಅಮ್ಮಾ ಈ ರೀತಿ ಎಲ್ಲಾ ಸರಿ ಆಗಲ್ಲ, ದಯವಿಟ್ಟು ನಿಲ್ಲಿಸು ಇದನ್ನ", ಅವಳು ಕೊನೆಯ ಗಳಿಗೆವರೆಗೂ ತನ್ನ ತಾಯಿಗೆ ಹೇಳುತ್ತಲೇ ಇದ್ದರೆ ಅವಳಮ್ಮ ಅದಕ್ಕೆ ಕಿವಿಗೊಡದೆ ಮಗಳಿನ ಕೇಶ ಶೃಂಗಾರದಲ್ಲಿ ತೊಡಗಿದ್ದರು. ರಾತ್ರಿಯೆಲ್ಲಾ ಅತ್ತು ಅತ್ತು ಬಾಡಿದ ಅವಳ ಮುಖಕ್ಕೆ ಪುನಃ ಕಾಂತಿ ತರಿಸುವ ಪ್ರಯತ್ನವೆಂಬಂತೆ ಎರಡು-ಮೂರು ಸಾರಿ ಮೇಕಪ್ ಮಾಡಬೇಕಾಗಿತ್ತು. ಆದರೆ ಈಗ ಬಹಳ ತಡವಾಗಿಹೋಗಿತ್ತು. ಇನ್ನು ಸ್ವಲ್ಪ ಹೊತ್ತಿಗೆ ಅವಳ ಮದುವೆ. ಆ ಮದುವೆಯ ಮುಂಜಾನೆ ಒಂದು ದುಃಸ್ವಪ್ನದಂತೆ ಭಾಸವಾಗಿತ್ತು. ಜೀವನದಲ್ಲಿ ಮೊದಲನೇ ಬಾರಿ ಅವಳಿಗೆ ತಾನು ಯಾರನ್ನಾದರೂ ಪ್ರೀತಿ ಮಾಡಿ ಮದುವೆಯಾಗಬೇಕಿತ್ತು ಎನಿಸಿತ್ತು. ತನಗೆ ಮನಸ್ಸಿಗೆ ಹಿತವೆನಿಸುವ, ಅವನ ಹೆಸರು ಹಿಡಿದು ಕೂಗಿ ತನ್ನ ಗೆಳತಿಯರಿಗೆಲ್ಲಾ ಪರಿಚಯ ಮಾಡಿಕೊಡುವಂತಹ, ನಂಬಿಕೆ ಇರುವಂತಹ ಒಬ್ಬ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸುತ್ತಿತ್ತು. ಅವಳು ಯಾರನ್ನಾದರೂ ಪ್ರೀತಿಸಿ ಅವನನ್ನೆ ಮದುವೆಯಾಗಿತ್ತೇನೆ ಎಂದಿದ್ದರೆ ಅವಳ ತಂದೆ-ತಾಯಿಗಳು ಬೇಡವೆನ್ನುತ್ತಿರಲಿಲ್ಲ. ಆದರೆ ಅವಳು ಇದುವರೆಗೂ ಯಾರನ್ನೂ ಅದರಲ್ಲೂ ಯಾವ ಹುಡುಗನನ್ನೂ ಭಾವನಾತ್ಮಕವಾಗಿ ಹಚ್ಚಿಕೊಂಡಿರಲೇ ಇಲ್ಲ. ತನ್ನ ಗೆಳೆಯರೊಂದಿಗೆ ಸ್ನೇಹದಿಂದ ವರ್ತಿಸುತ್ತಾ, ಆಟ ಆಡುತ್ತಾ, ಕೀಟಲೆ ಮಾಡುತ್ತಾ ಆರಾಮಾಗಿದ್ದಳೇ ಹೊರತು ಯಾರೊಂದಿಗೂ ಆ ರೀತಿಯ ಬೇರೆ ಭಾವನೆಗಳು ಅವಳಿಗೆ ಯಾವತ್ತೂ ಬಂದಿರಲಿಲ್ಲ. ಈಗ ಮದುವೆಯ ವಯಸ್ಸಿಗೆ ಬಂದ ಮೇಲೆ ಸಹಜವಾಗಿಯೇ ಮಗಳಿಗೆ ಹುಡುಗನನ್ನು ಹುಡುಕಿ ಮದುವೆ ಮಾಡುವ ಕರ್ತವ್ಯ ತಂದೆ-ತಾಯಿಯರಿಗೆ ಬಂದಿತ್ತು. ತಮ್ಮ ಮಗಳಿಗೆ ಯೋಗ್ಯ ವರನನ್ನು ಹುಡುಕಲು ಬಹಳ ಕಷ್ಟ ಪಟ್ಟಿದ್ದರು. ಜಾತಿ, ಜಾತಕ, ಒಳ್ಳೆಯ ಕುಟುಂಬ, ಸುರೂಪಿ, ಒಳ್ಳೆ ಆದಾಯ ಹೀಗೆ ಹತ್ತು ಹಲವು ವಿಷಯಗಳ ಆಧಾರದ ಮೇಲೆ ಹುಡುಗನನ್ನು ಹುಡುಕಿದ್ದರು. ಅಂತೂ ಅವರ ಪ್ರಯತ್ನ ೮ ತಿಂಗಳ ನಂತರ ಫಲ ಕೊಟ್ಟಿತ್ತು. ಆದರೆ ಅವಳು ತನ್ನ ತಂದೆಗೆ ಹೇಳಿಬಿಟ್ಟಿದ್ದಳು. ಈ ಹುಡುಗನನ್ನು ನೋಡಿದರೆ ನನಗೆ ಯಾವುದೇ ಭಾವನೆಗಳು ಬರುತ್ತಿಲ್ಲ. ತನಗೆ ಅವನು ದಿನಾ ನೋಡುವ ಹುಡುಗರಂತೆ, ಚಾಟ್ ರೂಮಿನಲ್ಲಿ ಸಿಗುವ ಯಾರೋ ಒಬ್ಬನಂತೆ, ಯಾರೋ ಒಬ್ಬ ಅಪರಿಚಿತ ಮನುಷ್ಯನೇ ಹೊರತು ಬೇರೇನೂ ಅನಿಸಿರಲಿಲ್ಲ. ಅವಳ ತಂದೆ ಇಬ್ಬರನ್ನೂ ಪರಸ್ಪರ ಭೇಟಿಯಾಗಲು ಹೇಳಿದ್ದರು, ನಿಮ್ಮ ಇಷ್ಟ ಕಷ್ಟಗಳನ್ನು ಚರ್ಚಿಸಿ ಒಪ್ಪಿಗೆ ಮಾಡಿಕೊಳ್ಳಿ ಎಂದು ಅವಕಾಶ ಕೊಟ್ಟಿದ್ದರು. ಅದರಂತೆಯೇ ಭೇಟಿಯೋ ಆಯಿತು, ಮಾತಾಡಿಯೂ ಆಯಿತು. ಅದು ಅವಳಿಗೆ ತನ್ನ ಕಂಪನಿಯ ಯಾವುದೋ ಮೀಟಿಂಗಿನಂತೆ, ಸೆಮಿನಾರಿನಂತೆ ಅಷ್ಟೆ ಅನಿಸಿತ್ತು. ಬರುತ್ತಿದ್ದಂತೆ ತಂದೆ ಕೇಳಿದ್ದರು, "ಅವನೊಟ್ಟಿಗೆ ಮಾತಾಡಿದೆಯಾ, ಹೇಗನ್ನಿಸಿತು, ಹುಡುಗ ಒಳ್ಳೆಯವನು ತಾನೆ, ಚೆನಾಗಿ ಮಾತಾಡಿದನೆ?" ಅದೂ ಇದೂ ಕೇಳಿದರು. ಇನ್ನೇನು ಹೇಳುವುದು, ಎಲ್ಲಾದಕ್ಕೂ ಹೂಂ ಎಂದು ತಲೆಯಾಡಿಸಿದ್ದಳು. ಹೇಳುವುದಕ್ಕೆ ಏನಾದರೂ ಇದ್ದರೆ ತಾನೆ! ಮನಸ್ಸಿನಲ್ಲಿ ಮಾತ್ರ "ಅವನು ಕೊಡಿಸಿದ ಐಸ್ ಕ್ರೀಂ ಭಾರಿ ಚೆನಾಗಿತ್ತು" ಅಂದುಕೊಂಡು ಸುಮ್ಮನೆ ಎದ್ದು ಬಂದಿದ್ದಳು.ಅವಳ ತಂದೆ-ತಾಯಿಗಳು, ಬಂಧುಗಳು ಎಲ್ಲಾ ಚರ್ಚಿಸಿ, ಅವಳಿಗೆ ತನ್ನ ಜೀವನ ಸಂಗಾತಿ ಆಗುವವನನ್ನು ಅರ್ಥಮಾಡಿಕೊಳ್ಳಲು ಅವಕಾಶ ಕೊಟ್ಟಾಯಿತು. ಇನ್ನು ಮದುವೆ ಮಾಡಲು ತೊಂದರೆ ಏನಿಲ್ಲ ಎಂದು ನಿರ್ಧರಿಸಿದ್ದರು. ಮದುವೆಯ ಸಿದ್ಧತೆ ಭರದಿಂದ ಸಾಗಿತ್ತು. ನೋಡನೋಡುತ್ತಿದ್ದಂತೆ ಮದುವೆಯ ದಿನ ಬಂದೇ ಬಿಟ್ಟಿತ್ತು. ಮದುವೆಯ ಸಂಭ್ರಮ ಮುಗಿಲು ಮುಟ್ಟಿತ್ತು. ಮದುವೆ ಮನೆಯ ತುಂಬಾ ಜನಗಳು, ಹಬ್ಬದ ವಾತಾವರಣ. ಮದುವೆ ಹಾಲಿನಲ್ಲಿ ಮಕ್ಕಳು ಕುಣಿದು, ಓಡುತ್ತಾ, ಕೂಗಾಡುತ್ತಾ ಆಡುತ್ತಿದ್ದರೆ, ಹೆಂಗಸರಿಗೆಲ್ಲಾ ರೇಷ್ಮೆ ಸೀರೆಯ ಸಂಭ್ರಮ. ಹಿತವಾದ ಗುಲಾಬಿಯ, ಮಲ್ಲಿಗೆಯ ಪರಿಮಳ.. ಸಣ್ಣಗೆ ಕೇಳಿ ಬರುತ್ತಿದ್ದ ಮಂಗಳ ವಾದ್ಯದ ಸದ್ದು, ಮಂತ್ರೋದ್ಘೋಷದ ಮಧ್ಯೆ ಅವಳ ಕೊರಳಿಗೆ ತಾಳಿ ಬಿದ್ದಿತ್ತು. ನಂತರ ಯಥಾಪ್ರಕಾರ ಫೋಟೊಗಳಿಗೆ, ವಿಡಿಯೋ ಗೆ ಸಂಬಂಧಿಕರ, ಗೆಳೆಯರ ಜೊತೆ ನಿಂತು ಕೃತಕ ನಗೆ ಬೀರುವುದು ಎಲ್ಲಾ ಮುಗಿದಿತ್ತು. ಈಗ ಅವಳು ಅವನ ಹೆಂಡತಿ. ಸಮಾಜ ಮತ್ತು ಕಾನೂನಿನ ಪ್ರಕಾರ ಅವರಿಬ್ಬರು ದಂಪತಿಗಳು. ತಂದೆ-ತಾಯಿಯರಿಗೆ ತಮ್ಮ ಕರ್ತವ್ಯ ಭಾರ ಇಳಿದಂತೆ ನಿಟ್ಟುಸಿರು ಬಿಟ್ಟಿದ್ದರು. ತುಂಬಿದ ಮದುವೆ ಮನೆಯಿಂದ ಜನರೆಲ್ಲಾ ಒಬ್ಬೊಬ್ಬರಾಗಿ ಖಾಲಿ ಯಾಗಿ ಈಗ ಅವರಿಬ್ಬರೂ ಹೊಸ ಜಗತ್ತಿನ , ಹೊಸ ಬದುಕಿನ ಪ್ರಾರಂಭದಲ್ಲಿ ನಿಂತಿದ್ದರು.************************************

"ಬಾ ಇಲ್ಲಿ ಕೂರೋಣ"..

ಅವನು ಅವಳ ಕೈಯನ್ನು ಮೃದುವಾಗಿ ಹಿಡಿದೆಳೆಯುತ್ತಾ ಒಂದು ಕಲ್ಲಿನ ಬೆಂಚಿನೆಡೆಗೆ ಕರೆದ. ಆಗಷ್ಟೆ ಬಿದ್ದ ಸಣ್ಣ ಮಳೆಯಿಂದ ಕಲ್ಲಿನ ಬೆಂಚು ಇನ್ನೂ ಸ್ವಲ್ಪ ಒದ್ದೆ ಇತ್ತು .. ಕೂತಾಗ ತಣ್ಣನೆ ಅನುಭವ.

"ಏನು ಯೋಚನೆ ಮಾಡ್ತಾ ಇದಿಯಾ? ನಿನಗೆ ಈ ಮದುವೆ ಇಷ್ಟ ಇರಲಿಲ್ಲವೇ?"

ಇದ್ದಕ್ಕಿದ್ದಂತೆ ಅನಿರೀಕ್ಷಿತ ಪ್ರಶ್ನೆ ಅವನಿಂದ! ತಾನು ಉತ್ತರಿಸಬೇಕೆ? ಸುಮ್ಮನಿರಬೇಕೆ? ಏನೂ ಹೇಳಲು ಮನಸ್ಸಾಗುತ್ತಿಲ್ಲ! ಅವಳ ಮನಸ್ಸು ತಾನು ಹಿಂದಿನ ತಿಂಗಳು ತನ್ನ ಕಂಪನಿಯಲ್ಲಿ ನಡೆಸಿಕೊಟ್ಟ ಒಂದು ಕಾರ್ಯಕ್ರಮದ ಬಗ್ಗೆ ಯೋಚಿಸುತ್ತಿತ್ತು. ಅದರಲ್ಲಿ ಎಲ್ಲರೂ ಕೇಳುತ್ತಿದ್ದ ಪ್ರಶ್ನೆಗಳಿಗೆ ಎಷ್ಟು ವಿಶ್ವಾಸದಿಂದ ನಗುನಗುತ್ತಾ ಉತ್ತರಿಸುತ್ತಿದ್ದೆ. ಈಗೇಕೆ ಆಗುತ್ತಿಲ್ಲ!! ಅವಳು ಉತ್ತರಿಸದೇ ಸುಮ್ಮನೇ ಉಳಿದಳು.

ಅವನೆ ಮುಂದುವರೆಸಿದ .."ನಿನಗೆ ಗೊತ್ತಾ ... ನಾನು ಕೂಡ ಇಂತಹ ಮದುವೆಗೆ ತಯಾರಿರಲಿಲ್ಲ...."

"ಅಯ್ಯೋ ದೇವರೆ ..ಏನಿದು!! ಇದನ್ನು ಅವನೇ ಹೇಳುತ್ತಿದ್ದಾನಾ ಅಥವಾ ನಾನೇ ಯೋಚನೆ ಮಾಡುತ್ತಾ ಜೋರಾಗಿ ಹೇಳಿಬಿಟ್ಟೆನಾ" !! ಅವಳಿಗೇ ತಿಳಿಯಲಿಲ್ಲ.

"ಅವನ ಈ ಮಾತಿನ ಅರ್ಥ ಏನು, ಅವನಿಗೆ ನಾನು ಇಷ್ಟ ಇಲ್ಲವಾ, ಅವನು ಒತ್ತಾಯಪೂರ್ವಕವಾಗಿ ನನ್ನನ್ನು ಮದುವೆಯಾದನೆ? ಅಥವಾ ನನ್ನ ಮನಸ್ಸಿನ ಯೋಚನೆ ನನ್ನ ಮುಖಭಾವದಿಂದ ಅವನಿಗೆ ತಿಳಿದು ಹೋಯಿತಾ!!"

ಅವನ ಮುಖವನ್ನೇ ನೋಡಿದಳು.

ಅವನು ಕಿರುನಗೆಯೊಂದಿಗೆ ಮುಂದುವರೆಸಿದ...

"ನಾನು ನನ್ನ ಹುಡುಗಿಯನ್ನು ನಾನೇ ಹುಡುಕಿಕೊಳ್ಳಬೇಕು ಅಂತ ಇದ್ದೆ.. ಮನಸ್ಸಿಗೆ ಒಪ್ಪುವಂತಹ ಹುಡುಗಿಯನ್ನು ನೋಡಿ ಪ್ರೀತಿ ಮಾಡಿ ನಾನು ಅವಳ ಜೊತೆ ಸುತ್ತಾಡಬೇಕು, ಅವಳಿಗೆ ಶಾಪಿಂಗ್ ಮಾಡಿಸಬೇಕು, ತಮಾಷೆ ಮಾಡಿ ನಗಬೇಕು, ಅವಳೊಂದಿಗೆ ವಾದ ಮಾಡಬೇಕು, ಸುಖ-ದುಃಖ ಹಂಚಿಕೊಳ್ಳಬೇಕು, ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು, ಒಟ್ಟಿನಲ್ಲಿ ಅವಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು.. ಆಮೇಲೆ ಅವಳನ್ನ ಮದುವೆಯಾಗಿ ಅವಳೊಂದಿಗೆ ಜೀವನ ಮಾಡಬೇಕು ಅಂತ ಆಸೆ ಪಟ್ಟಿದ್ದೆ. ಬೇರೆ ರೀತಿಯ ಮದುವೆ ಏನಿದ್ದರೂ ಎಲ್ಲಾ ಸುಮ್ಮನೆ ನಾಟಕದಂತೆ ಆಗುತ್ತದೆ ಅಂತ ನನ್ನ ಭಾವನೆ ಆಗಿತ್ತು. ನಾನು ಅದಕ್ಕೆ ತಯಾರಿರಲಿಲ್ಲ. ಆದರೆ ನನ್ನ ಕೆಲಸದ ಮೇಲಿನ ಪ್ರೀತಿಯಿಂದ ಅದರಲ್ಲೆ ಮುಳುಗಿಬಿಟ್ಟೆ. ನನಗೆ ನನ್ನ ಹುಡುಗಿಯನ್ನು ಹುಡುಕಿಕೊಳ್ಳಲು ಸಮಯವೇ ಸಿಗಲಿಲ್ಲ. ಅದರ ಬಗ್ಗೆ ಯೋಚನೆ ಮಾಡಲೂ ಮನಸ್ಸು ಬರದೆ ಹೋಯಿತು. ಆದರೆ ಮದುವೆಯ ವಯಸ್ಸು ಆಗುತ್ತಿದ್ದಂತೆ ಮನೆಯಲ್ಲಿ ಹೆಣ್ಣು ಹುಡುಕಲು ಪ್ರಾರಂಭಿಸಿದಾಗಲೇ ನಾನು ಎಚ್ಚೆತ್ತುಕೊಂಡಿದ್ದು. ಆದರೆ ಆಗ ಸಮಯ ಮಿಂಚಿ ಹೋಗಿತ್ತು. ಕೊನೆಗೆ ನಮ್ಮ ಅಪ್ಪ ಅಮ್ಮ ಯಾರನ್ನು ಹುಡುಕಿತ್ತಾರೋ ಅವಳನ್ನೇ ಮದುವೆಯಾಗುವುದು ಎಂದುಕೊಂಡು ಸುಮ್ಮನಾಗಿಬಿಟ್ಟೆ. ಅದನ್ನು ಬಿಟ್ಟು ಬೇರೇ ಏನನ್ನೂ ಮಾಡಲು ನನ್ನಿಂದ ಸಾದ್ಯವಿರಲಿಲ್ಲ. ಮದುವೆಗೆ ಮುಂಚೆ ನಮಗೆ ಮಾತನಾಡಲು ಅವಕಾಶ ಕೊಟ್ಟಾಗ ನಿನಗೆ ನನ್ನೊಂದಿಗೆ ಮಾತಾಡುವುದು, ಸಮಯ ಕಳೆಯುವುದು ಕಷ್ಟ, ಕಿರಿಕಿಯಾಗುತ್ತಿದ್ದುದು ನನಗೆ ಅರ್ಥ ಆಗುತ್ತಿತ್ತು. ಒಟ್ಟಿನಲ್ಲಿ ಈ ರೀತಿ ಅಪರಿಚಿತನೊಂದಿಗೆ ಇದ್ದಕ್ಕಿದ್ದಂತೆ ಬದುಕನ್ನು ಹೊಂದಿಸಿಕೊಳ್ಳಲು ನಿನಗೆ ಇಷ್ಟವಿಲ್ಲದಿರುವುದು ತಿಳಿಯುತ್ತಿತ್ತು. ಏಕೆಂದರೆ ನನಗೂ ಅದೇ ರೀತಿ ಆಗುತ್ತಿತ್ತು. ನಾವಿಬ್ಬರೂ ಅಪರಿಚಿತರು. ಆದರೆ ಏನು ಮಾಡುವುದು, ನನಗೆ ನಿನ್ನನ್ನು ಸಾಕಷ್ಟು ಅರ್ಥ ಮಾಡಿಕೊಳ್ಳಲು ಆ ಸಮಯದಲ್ಲಿ ಸಾಧ್ಯವಿರಲಿಲ್ಲ. ನನ್ನ ಬಗ್ಗೆ ನಿನಗೆ ನಂಬಿಕೆ ಬರಿಸಲು, ನಿನಗೆ ನನ್ನ ಬಗ್ಗೆ ತಿಳಿಸಲು ಆ ಸಮಯದಲ್ಲಿ ಸಾಧ್ಯವಿರಲಿಲ್ಲ. ಎಲ್ಲವೂ ತರಾತುರಿಯಲ್ಲಿ ನಡೆದು ಹೋಯಿತು. ಆದರೆ ಈಗಲೂ ಕಾಲ ಮಿಂಚಿಲ್ಲ. ನನ್ನ ಮುಂದೆ ಇನ್ನೂ ಅಗಾಧವಾಗ ಜೀವನವಿದೆ. ಅದರಲ್ಲಿ ನಿನ್ನನ್ನು ಪ್ರೀತಿಸಲು, ನೋಡಿಕೊಳ್ಳಲು, ನಿನ್ನ ನಂಬಿಕೆಯಲ್ಲಿ ಬದುಕಲು ಬೇಕಾದಷ್ಟು ಸಮಯವಿದೆ. ನಾನು ಇದುವರೆಗೂ ಹುಡುಕುತ್ತಿದ್ದ ಹುಡುಗಿ ಯಾರೋ ಅಲ್ಲ. ಅದು ನೀನೆ ಅಂದು ಕೊಳ್ಳುತ್ತೇನೆ".


ಅವನು ಅವಳ ಕಣ್ಣುಗಳನ್ನೆ ಆಳವಾಗಿ ನೋಡುತ್ತಾ ಕೇಳಿದ.


" ಈಗ ಹೇಳು ನೀನು ನನ್ನನ್ನು ಪ್ರೀತಿಸ್ತೀಯಾ?"


ಅವಳ ಕಣ್ಣಿಂದ ನೀರ ಹನಿಯೊಂದು ಜಾರಿತು. ತನ್ನ ತಂದೆ-ತಾಯಿಗಳು ತನಗೆ ನಿಜವಾಗಿಯೂ 'ಯೋಗ್ಯ' ಹುಡುಗನನ್ನೇ ಹುಡುಗನನ್ನೆ ಹುಡುಕಿದ್ದಾರೆ ಅನ್ನಿಸಿತು. ಮನಸ್ಸಿನಲ್ಲಿಯೇ ಅಪ್ಪ-ಅಮ್ಮರಿಗೆ ನಮಸ್ಕಾರ ಮಾಡಿದಳು. "ನನ್ನನ್ನು ಪ್ರೀತಿಸುತ್ತೀಯಾ" ಎಂದು ಅವನು ಕೇಳಿದ ಪ್ರಶ್ನೆಗೆ ಉತ್ತರ ಕೊಡುವ ಅಗತ್ಯ ಕಾಣಿಸಲಿಲ್ಲ. ಇಬ್ಬರಿಗೂ ಅದರ ಉತ್ತರ ತಿಳಿದಿತ್ತು.

ಅವನು ಅವಳ ಹೆಗಲ ಮೆಲೆ ಕೈ ಹಾಕಿ, ಅವಳು ಅವನ ಭುಜಕ್ಕೊರಗಿ ನಡೆಯುತ್ತಿದ್ದರೆ ಮುಳುಗುತ್ತಿದ್ದ ಸೂರ್ಯ ಅಲ್ಲಿ ಪ್ರಾರಂಭಗೊಂಡ ಹೊಸ ಬದುಕೊಂದಕ್ಕೆ ಸಾಕ್ಷಿಯಾಗಿದ್ದ. ಹಿತವಾದ ತಂಗಾಳಿ ಬೀಸುತ್ತಾ ಮರಗಿಡಗಳು ತೂಗಾಡುತ್ತಾ ಪ್ರಕೃತಿಮಾತೆ ಹೊಸ ದಾಂಪತ್ಯಕ್ಕೆ ಎದೆತುಂಬಿ ಹಾರೈಸಿದ್ದಳು.

ಶುಕ್ರವಾರ, ಮೇ 11, 2007

ನಾಲ್ಕನೇ ಕ್ಲಾಸಿನಲ್ಲಿ Love Propose !!

ಬಹಳಷ್ಟು ಜನರಿಗೆ ತಮ್ಮ ತಮ್ಮ ಬಾಲ್ಯ ಜೀವನದ ನೆನಪುಗಳು, ಶಾಲೆಯ ದಿನಗಳ ನೆನಪುಗಳು ಅಮರ ಮಧುರ. ಆಗ ಇರುತ್ತಿದ್ದ, ಬರುತ್ತಿದ್ದ ಭಾವನೆಗಳು, ನಮ್ಮದೇ ಆದ ಇತಿ ಮಿತಿಯ ಪ್ರಪಂಚದೊಳಗೆ ಮೆರೆಯುತ್ತಿದ್ದುದು ಎಲ್ಲಾ ಈಗ ನೆನಪಿಸಿಕೊಂಡರೆ ಏನೋ ಒಂದು ರೀತಿಯ ಹಿತಾನುಭವ. ಅಂಥದರಲ್ಲಿ ನನಗೆ ನನ್ನ ನಾಲ್ಕನೇ ಕ್ಲಾಸಿನ ಲವ್ ಸ್ಟೋರಿಯೊಂದು ಎಂದಿಗೂ ಮರೆಯಲಾಗದ ಘಟನೆ. ಆಗಿನ್ನೂ ಪ್ರೀತಿ ಪ್ರೇಮದ ಬಗ್ಗೆ ಏನೂ ಗೊತ್ತಿರದಿದ್ದರೂ ಏನೋ ಒಂಥರಾ ಕುತೂಹಲ. ಭಾನುವಾರ ಬರುತ್ತಿದ್ದ ಸಿನೆಮಾ, ಶುಕ್ರವಾರ ಬರುತ್ತಿದ್ದ ಚಿತ್ರಗೀತೆಗಳು, ಮತ್ತು ಕೆಲವು ಧಾರಾವಾಹಿಗಳು ಇವಿಷ್ಟನ್ನೇ ನೋಡುತ್ತಾ ಅದರಲ್ಲೆ ಪ್ರೇಮದ ಕಲ್ಪನೆ ಮಾಡಿಕೊಂಡಿದ್ದ ಕಾಲ. ಅದರಲ್ಲೂ ಹೆಚ್ಚು ಪ್ರಭಾವ ಮಾಡಿದ್ದು ಅಂದರೆ ಪ್ರೇಮವೇ ಮುಖ್ಯವಾಗಿರುವ ರವಿಚಂದ್ರನ್ ಚಿತ್ರಗಳು.

ಪಲ್ಲವಿ(ಹೆಸರು ಬದಲಾಯಿಸಿದೆ) ಎನ್ನುವಳೊಬ್ಬಳು ನಮ್ಮ ಜೊತೆಯಲ್ಲೆ ೧ ನೇ ಕ್ಲಾಸಿನಿಂದ ಓದುತ್ತಿದ್ದ ಒಂದು ಹುಡುಗಿಯಿದ್ದಳು. ಅವಳು ಸ್ವಲ್ಪ ಗೋಧಿ ಬಣ್ಣದಿಂದ ಮುದ್ದು ಮುದ್ದಾಗಿ ಇದ್ದು ಓದಿನಲ್ಲಿ ಮತ್ತಿತರ ಚಟುವಟಿಕೆಗಳಲ್ಲಿ ಮುಂದಿದ್ದುರಿಂದ ನಮ್ಮ ಕ್ಲಾಸಿಗೆ ಅಘೋಷಿತ ಹೀರೋಯಿನ್ ಆಗಿದ್ದಳು. ಮೊದಲಿನಿಂದಲೂ ಅವಳೆಡೆಗೆ ಸ್ವಲ್ಪ ಹೆಚ್ಚೇ ಅನ್ನಿಸುವ ಆಕರ್ಷಣೆಯಿತ್ತು. ಅವಳಿಗೇ ಲೈನ್ ಹಾಕುತ್ತಿದ್ದೆ, ಅವಳೂ ಸ್ವಲ್ಪ ಸ್ವಲ್ಪವಾಗಿ ಲೈನ್ ಕೊಡುತ್ತಿದ್ದಳು (ಅಂತ ನಾನು ಅಂದು ಕೊಂಡಿದ್ದೆನೋ ಏನೋ ಗೊತ್ತಿಲ್ಲ, ಯಾಕಂದ್ರೆ ಹುಡುಗಿಯರು ಸುಮ್ಮನೆ ನಕ್ಕರೆ, ಮಾತಾಡಿಸಿದರೆ ಸಾಕು.. ಬಿದ್ದೇ ಹೋದರು ಅಂದುಕೊಳ್ಳುವುದು ಹುಡುಗರ ಹುಟ್ಟು ಗುಣ).

ಹೀಗೇ ಇದ್ದಾಗ ನನಗೆ ಅವಳಿಗೆ ಪ್ರಪೋಸ್ ಮಾಡಬೇಕು ಅನ್ನುವ ಯೋಚನೆ ಬಂದುಬಿಟ್ಟಿತ್ತು. ಸರಿ.. ಒಂದು ದಿನ ಯಾವುದೋ ಒಂದು ವಿಷಯದ ಟೀಚರ್ ಬಂದಿರಲಿಲ್ಲವಾದ್ದರಿಂದ ಆಟ ಆಡಿಕೊಳ್ಳಲು ಹೊರಗೆ ಮೈದಾನಕ್ಕೆ ಬಿಟ್ಟಿದ್ದರು. ಒಂದು ಕಡೆ ಹುಡುಗಿರ ಗುಂಪು, ಇನ್ನೊಂದು ಕಡೆ ಹುಡುಗರ ಗುಂಪು ಆಡಿಕೊಳ್ಳುತ್ತಿತ್ತು. ಕೆಲವರು ಹರಟೆ ಹೊಡೆಯುತ್ತಾ ಕೂತಿದ್ದರು. ನಮ್ಮ ಪಲ್ಲವಿಯೂ ಕೂಡ ಗೆಳತಿಯರ ಜೊತೆ ಏನೋ ಮಾತಾಡುತ್ತಾ ನಗುತ್ತಾ ನಿಂತಿದ್ದಳು. ನನಗೆ ಇದೇ ಸರಿಯಾದ ಸಮಯ ಎನ್ನಿಸಿ ಸೀದಾ ಅವಳ ಹತ್ತಿರ ನಡೆದೆ. ನನಗೋ ಪೂರ್ತಿ ಕೈಕಾಲುಗಳೆಲ್ಲಾ ನಡುಗಲು ಆರಂಭಿಸಿತ್ತು. ಹೋಗಿ ಪಲ್ಲವಿ ಮುಂದೆ ನಿಂತೆ.. ಏನನ್ನು ಹೇಗೆ ಶುರುಮಾಡಬೇಕೋ ತಿಳಿಯಲಿಲ್ಲ. "ಪಲ್ಲವಿ, ನಾನು ನಿನ್ನನ್ನ ಪ್ರೀತಿ ಮಾಡ್ತಾ ಇದಿನಿ, ನಿನ್ನನ್ನೇ ಮದುವೆ ಮಾಡ್ಕೋತೀನಿ" ಅಂತ ಒಂದೇ ಉಸಿರಿನಲ್ಲಿ ಹೇಳಿಬಿಟ್ಟೆ. ಆವಾಗಿನ ಪಲ್ಲವಿಯ ಮುಖಭಾವ, ಸುತ್ತಲೂ ನಿಂತಿದ್ದ ಹುಡುಗಿರ ಮುಖದಲ್ಲಿ ಮೂಡಿದ ಭಾವನೆಗಳು ಇನ್ನೂ ನನ್ನ ಕಣ್ಣು ಗಳಲ್ಲಿ ಹಾಗೇ ಇದೆ.

ಸರಿ , ಹೀಗೆ ಹೇಳಿ ನಾನು ಏನು ಮಾಡಬೇಕು ಗೊತ್ತಾಗದೇ ವಾಪಸ್ ಬಂದು ಬಿಟ್ಟೆ. ಪಲ್ಲವಿ ಕಣ್ಣಲ್ಲಿ ನೀರು ತುಂಬಿಕೊಂಡು ಮೈದಾನದಿಂದ ಓಡಿದಳು. ನಾನು ಭಯದಿಂದ ಬೆಪ್ಪಾಗಿ ಕುಳಿತಿದ್ದೆ. ನಂತರ ಎಲ್ಲರೂ ಕ್ಲಾಸ್ ರೂಮಿಗೆ ಹೋದೆವು. ಇಡೀ ಕ್ಲಾಸ್ ತುಂಬಾ ಅದೇ ಗುಸು ಗುಸು. ನಾನು ಹೇಳುವುದೇನೋ ಹೇಳಿ ಬಿಟ್ಟಿದ್ದೆ, ಆದರೆ ಈಗ ಅದರ ನಂತರದ ಪರಿಣಾಮಗಳನ್ನು ನೆನಪಿಸಿಕೊಂಡು ಪೂರ್ತಿ ಭಯಗೊಂಡಿದ್ದೆ. ಈ ವಿಷಯ ಟೀಚರ್ ಗಳಿಗೆಲ್ಲಾ ಗೊತ್ತಾಗಿ, ಮನೆಯಲ್ಲಿ ಗೊತ್ತಾದರೆ ನನ್ನ ಮಾನ ಮರ್ಯಾದೆ(!) ಪ್ರಶ್ನೆ ಏನು ಎಂದು ಚಿಂತೆಗೊಳಗಾಗಿದ್ದೆ. ನನ್ನ ಭಯ ಸುಳ್ಳಾಗಲಿಲ್ಲ. ೫ ನಿಮಿಷಕ್ಕೆ ಹೆಡ್ ಮಾಸ್ಟರ್ ರಿಂದ ಬುಲಾವ್ ಬಂತು. ಪಲ್ಲವಿ ಅಳುತ್ತಾ ಸೀದ ಓಡಿದ್ದು ಹೆಡ್ ಮಾಸ್ಟರ್ ಹತ್ತಿರ ಎಂದು ತಿಳಿಯಿತು. ಹಾಗೇ ನಡುಗುತ್ತಾ ಹೊರಟೆ. ನಾನು ನನ್ನ ಬೆಂಚಿನಿಂದ ಹೊರಟು ನೆಡೆದುಕೊಂಡು ಬರುತ್ತಿದ್ದರೆ ಎಲ್ಲರೂ ಕೂಡ ಇವನು ವಾಪಸ್ ಬರುವಾಗ ಯಾವ ಆಕಾರದಲ್ಲಿರುತ್ತಾನೋ ಎಂದು ಕಲ್ಪಿಸಿಕೊಳ್ಳುತ್ತಿದ್ದರು. ಯಾಕೆಂದರೆ ನಮ್ಮ ಹೆಡ್ ಮಾಸ್ಟರ್ರು ಹೊಡೆಯುವುದನ್ನು ನೋಡಿದರೇ ಸಾಕು ಮಕ್ಕಳು ಚಡ್ಡಿ ಒದ್ದೆ ಮಾಡಿಕೊಳ್ಳುತ್ತಿದ್ದರು. ಇನ್ನು ಇಂತಹ 'ಲವ್ ಕೇಸಿ'ನಲ್ಲಿ ಸಿಕ್ಕಿಹಾಕಿಕೊಂಡ ನನ್ನ ಗತಿ ಏನಾಗಬಹುದು ಎಂದು ಎಲ್ಲರಿಗೂ ಭಯಮಿಶ್ರಿತ ಕುತೂಹಲ ಇತ್ತು.

ಅಳುಕುತ್ತಲೇ ಹೆಡ್ ಮಾಸ್ಟರ್ ಕೋಣೆಗೆ ಹೋಗಿ ನಿಂತೆ. ನೋಡಿದರೆ ಹೆಡ್ ಮಾಸ್ಟರ್ ಸೀಟಿನಲ್ಲಿ ನಮ್ಮ ಇನ್ನೊಬ್ಬರು ಹಿರಿಯ ಉಪಾದ್ಯಾಯರು ಕೂತಿದ್ದರು. ಒಳಗೆ ಬಾ ಎಂದು ಕರೆದು ಕುರ್ಚಿಯ ಮೇಲೆ ಕೂರಲು ಹೇಳಿದರು. ಪುಣ್ಯವಶಾತ್ ಅವತ್ತು ನಮ್ಮ ಉಗ್ರಗಾಮಿ ಹೆಡ್ ಮಾಸ್ಟರ್ರು ರಜ ಹೋಗಿದ್ದರಿಂದ ಅವತ್ತಿನ ಮಟ್ಟಿಗೆ ಇನ್ನೊಬ್ಬರು ಆ ಸೀಟಿನಲ್ಲಿದ್ದರು. ಈಗ ಸ್ವಲ್ಪ ನಿರಾಳವೆನಿಸಿತು. ಯಾಕೆಂದರೆ ಆ ಹಿರಿಯ ಉಪಾದ್ಯಾಯರು ೭೦ ವರುಷ ವಯಸ್ಸಿನವರು. ಅವರಿಗೆ ಕೋಪವು ಬರುತ್ತಿದ್ದುದೆ ಕಡಿಮೆ. ಇನ್ನು ನನಗಂತು ಹೊಡೆಯುವುದಿಲ್ಲ, ಹೆಚ್ಚೆಂದರೆ ಬೈದಾರು.. ಬೈಸಿಕೊಂಡರಾಯಿತು. ಆಮೇಲೆ ಸ್ವಲ್ಪ ಅತ್ತಂತೆ ಮಾಡಿ ಮನೆಗೆ ಹೇಳಬೇಡಿ ಸಾರ್ ಎಂದು ಬೇಡಿಕೊಂಡು ಬರುವುದು ಎಂದು ನಿಶ್ಚಯಿಸಿದೆ. ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ. ಅವರು ಒಂದು ಸ್ವಲ್ಪವೂ ಕೋಪವಿಲ್ಲದೆ ಏನಪ್ಪಾ ಪಲ್ಲವಿಗೆ ಮದುವೆ ಆಗ್ತೀನಿ ಅಂದ್ಯಂತೆ ಹೌದಾ ಎಂದರು. ನಾನು ಕಣ್ಣಲ್ಲಿ ನೀರು ತುಂಬಿಕೊಂಡು ಹೌದು ಎಂದೆ. ಅವರು ಆಗ ಶುರು ಮಾಡಿಕೊಂಡರು ... ನೋಡಪ್ಪಾ ನಿಂದಿನ್ನೂ ಚಿಕ್ಕ ವಯಸ್ಸು, ಈಗ ಪ್ರೀತಿ, ಮದುವೆ ಅಂತೆಲ್ಲಾ ತಲೆ ಕೆಡಿಸಿಕೊಳ್ಳಬೇಡ, ಈ ಸಿನಿಮಾ ಅದು ಇದು ಎಲ್ಲಾ ನೋಡಿ ಹಿಂಗೆಲ್ಲಾ ಆಡ್ತೀರಾ... ಮಕ್ಕಳನ್ನ ಈ ಟಿ.ವಿ ಗಳು ಹಾಳು ಮಾಡ್ತಿವೆ.. ಅದೂ ಇದೂ ಅಂತ ಒಂದು ೧೦ ನಿಮಿಷ ಏನೇನೋ ಹೇಳಿದರು. ನಾನು ಪೂರ್ತಿ ಸಪ್ಪೆ ಮೋರೆ ಹಾಕಿಕೊಂಡು ಹೌದು ಹೌದು ಎಂದು ತಲೆ ಹಾಕುತ್ತಿದ್ದೆ. ಎಲ್ಲಾ ಮಾತಾಡಿ ಮುಗಿಯಿತು. ನಿಮ್ಮ ಅಪ್ಪ ಅಮ್ಮಂಗೆ ಹೇಳುವುದಿಲ್ಲ ಹೆದರಬೇಡ ಹೋಗು ಎಂದು ಭರವಸೆ ಕೊಟ್ಟರು. ಸರಿ ಎಂದು ಹೊರಟೆ .. ಆಗ ಅವರು ಇನ್ನೊಂದು ಮಾತು ಹೇಳಿದರು.. ನಿಂಗೆ ಅವಳು ಅಷ್ಟೊಂದು ಇಷ್ಟ ಇದ್ದರೆ ದೊಡ್ಡವನಾದ ಮೇಲೂ ಅವಳ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಅವಳನ್ನೇ ಮದುವೆ ಆಗುವಿಯಂತೆ ಬಿಡು, ನಾನೇ ನಿಮ್ಮ ತಂದೆ ತಾಯಿಗೆ ಹೇಳುತ್ತೇನೆ ಎಂದರು. ಹೊರಡುವಾಗ ನನ್ನ ಕೈಯಲ್ಲಿ ಎರಡು ಚಾಕಲೇಟುಗಳನ್ನಿಟ್ಟು ನನಗೂ ನಿನ್ನ ವಯಸ್ಸಿನ ಮೊಮ್ಮಕ್ಕಳಿದ್ದಾರೆ ಎಂದು ಕೆನ್ನೆ ತಟ್ಟಿದರು. ನಾನು ಹ್ಹೆ ಹ್ಹೆ ಎಂದು ಪೇಲವ ನಗೆ ನಕ್ಕು ಬದುಕಿದೆಯಾ ಬಡ ಜೀವವೇ ಎಂದು ಹೊರಗೆ ಬಂದೆ.

ಆಮೇಲೆ ಬಹಳ ದಿನಗಳ ತನಕ ನಮ್ಮ ಶಾಲೆಯಲ್ಲಿ ಇದು ಭಾರೀ ಪ್ರಸಿದ್ದಿ ಪಡೆದ ಸುದ್ದಿಯಾಗಿತ್ತು. ಈಗಲೂ ಸಹ ನನ್ನ ಶಾಲೆಯ ಗೆಳೆಯರು ಸಿಕ್ಕಿದರೆ "ಎಲ್ಲಿ ನಿನ್ ನಾಲ್ಕನೆ ಕ್ಲಾಸ್ ಡವ್ವು" ಎಂದು ತಮಾಷೆ ಮಾಡುತ್ತಿರುತ್ತಾರೆ. ಆವಾಗೆಲ್ಲ ಪಲ್ಲವಿಯನ್ನು ನೆನೆಸಿಕೊಂಡು ನಗುತ್ತೇನೆ.

ಗುರುವಾರ, ಮೇ 10, 2007

ಬ್ಲಾಗ್ ಪ್ರವೇಶ

ನನಗೆ ಮೊದಲಿಂದ ಬರೆಯುವ, ಬರೆಯುತ್ತಿರುವ ಆಸೆ. ಚಿಕ್ಕ ವಯಸ್ಸಿನಿಂದಲೂ ಪತ್ರಿಕೆಗಳು, ಪುಸ್ತಕಗಳ ಮೇಲೆ ಏನೋ ಪ್ರೀತಿ. ನನಗೆ ಇದುವರೆಗೂ ಅಕ್ಷರಗಳೇ ಒಳ್ಳೆಯ ಮಿತ್ರರು. ಪತ್ರಿಕೆಗಳ ಮೇಲಿನ ಆಕರ್ಷಣೆಯಿಂದ ಮೊದಲು ಪತ್ರಕರ್ತನಾಗಬೇಕೆಂಬ ಆಸೆ ಇಟ್ಟುಕೊಂಡಿದ್ದೆ. ಆದರೆ ಕಾಲಕ್ರಮೇಣ ಅದು ಮಸುಕಾಯಿತು. ಕಾರಣಗಳು ಹಲವಾರು. ಆದರೆ ಬರೆಯುವ ಆಸೆ ಮಾತ್ರ ಮಸುಕಾಗಿಲ್ಲ. ಏನನ್ನು ಕಂಡರೂ ಅದರ ಬಗ್ಗೆ ಬರೆಯಬೇಕು ಅನಿಸುತ್ತದೆ. ಆದರೆ ಒಂದು ವಿಷಯದ ಬಗ್ಗೆ ಬರೆಯಬೇಕೆಂದು ಹೊರಟರೆ ಏನನ್ನು ಹೇಗೆ ಬರೆಯುವುದು ಎಂದು ನಿರ್ಧರಿಸುವುದೇ ಕಷ್ಟವಾಗುತ್ತದೆ. ಬೇರೆಯವರು ಬರೆದಿದ್ದಕ್ಕೆ ಉತ್ತರಗಳನ್ನು, ವಿಮರ್ಶೆಗಳನ್ನು ಚೆನ್ನಾಗಿ ಬರೆಯಬಲ್ಲೆ, ಚರ್ಚೆಗಳನ್ನು ಚೆನ್ನಾಗಿ ಮಾಡಬಲ್ಲೆ. ಹಲವಾರು ವಿಷಯಗಳು ತಲೆಯಲ್ಲಿದ್ದರೂ ಯಾವುದನ್ನೂ ಪೂರ್ತಿಯಾಗಿ ಬರಹರೂಪಕ್ಕೆ ಇಳಿಸಲು ಆಗುತ್ತಿಲ್ಲ. ಬರೆಯಲು ಶುರುಮಾಡಿ ಸ್ವಲ್ಪ ಹೊತ್ತಿಗೇ ಬೇಜಾರು ಬಂದು ಬಿಡುತ್ತದೆ. ಮೊದಲಾದರೆ ಬರದುದ್ದನ್ನೆಲ್ಲಾ ಸುಮ್ಮನೆ ಇಟ್ಟುಕೊಳ್ಳಬೇಕಿತ್ತು ಇಲ್ಲವೇ ಪತ್ರಿಕೆಗಳಿಗೆ ಕಳುಹಿಸಿ ನೀರೀಕ್ಷಿಸಬೇಕಿತ್ತು. ಆದರೆ ಈಗ ಹಾಗಿಲ್ಲ. ಅಂತರ್ಜಾಲವೆಂಬ ಲೋಕದ ಬ್ಲಾಗು ತಾಣಗಳು ಸುಮ್ಮನೆ ಬರೆಯುವವರಿಗೆ ಒಳ್ಳೆಯ ಅವಕಾಶವನ್ನು ಕಲ್ಪಿಸಿವೆ. ಬರೆದುದ್ದಲ್ಲಾ ಇಂಟರ್ನೆಟ್ಟಿನಲ್ಲಿ ಪುಕ್ಕಟೆ ಪ್ರಕಟಣೆ. ಎಲ್ಲಿಂದ ಬೇಕಾದರೂ ಯಾರು ಬೇಕಾದರೂ ಓದುವಂತೆ. ಓದಿ ಸಲಹೆ ನೀಡಲು, ಉತ್ತೇಜಿಸಲು, ಬೈಯಲು, ಜಗಳ ಆಡಲು, ಪ್ರೀತಿ ಮಾಡಲು ಸ್ನೇಹಿತರಿದ್ದಾರೆ, ಹಿತೈಷಿಗಳಿದ್ದಾರೆ ಎಂಬ ಧೈರ್ಯದೊಂದಿಗೆ ಬಿಟ್ಟು ಹೋಗಿದ್ದ ಬರೆಯುವ ಅಭ್ಯಾಸವನ್ನು ಪುನರಾರಂಭಿಸುವ ಪುಟ್ಟ ಪ್ರಯತ್ನ ಮಾಡುತ್ತಿದ್ದೇನೆ. ಆದ್ದರಿಂದ ಇನ್ನು ಮುಂದೆ ಏನನ್ನಾದರೂ ಮನಸಿಗೆ ತೋಚುವ ವಿಷಯಗಳನ್ನು ಬರೆಯುತ್ತಾ ಹೋಗುವುದು ಮತ್ತು ಬೇರೆ ಕೆಲವು ಇಷ್ಟವಾದ ವಿಷಯಗಳನ್ನು ಹಾಕುವುದು ಅಂದುಕೊಂಡಿದ್ದೇನೆ. ಎಷ್ಟು ಕಾರ್ಯಗತವಾಗುವುದೋ ಕಾಣೆ.