ಬುಧವಾರ 27 ಜುಲೈ 2011

ಅರೆಸ್ಟ್

ಲ್ಲಪ್ಪ ಯಾವುದೋ ಜಗಳಕ್ಕೆ ತನ್ನ ತಮ್ಮನನ್ನೇ ಕೊಲೆ ಮಾಡಿ ಜೈಲು ಸೇರಿದ್ದ. ಸ್ವಂತ ತಮ್ಮನನ್ನೇ ಭೀಕರವಾಗಿ ಕೊಲೆ ಮಾಡಿದ ಕಲ್ಲಪ್ಪನಿಗೆ ನ್ಯಾಯಾಲಯದಿಂದ ಇನ್ನೂ ಶಿಕ್ಷೆಯ ಪ್ರಮಾಣ ಘೋಷಣೆಯಾಗಬೇಕಿತ್ತು. ಆ ವಿಕೃತ ಕೊಲೆಗೆ ಮರಣದಂಡನೆಯಾಗುವುದು ಖಚಿತವಾಗಿತ್ತು. ಆದರೆ ಅಷ್ಟರಲ್ಲೇ ಒಂದು ರಾತ್ರಿ ಜೈಲರನನ್ನು ಕಬ್ಬಿಣದ ಸರಳಿನಲ್ಲಿ ಹೊಡೆದು ಬೀಗದ ಕೈ ಕಿತ್ತುಕೊಂಡು ಬಾಗಿಲು ತೆಗೆದು ಪರಾರಿಯಾಗಿದ್ದ. ಆ ಸಮಯದಲ್ಲಿ ಜೈಲರನ ಕೈಯಲ್ಲಿ ಯಾವುದೇ ಆಯುಧವಿಲ್ಲದಿದ್ದುದರಿಂದ ಕಲ್ಲಪ್ಪನ ಏಟಿನಿಂದ ತಪ್ಪಿಸಿಕೊಳ್ಳಲಾಗದೇ ಆತ ದಾರುಣವಾಗಿ ಹೊಡೆತ ತಿಂದು ಬಿದ್ದಿದ್ದ.

ಜೈಲಿನಿಂದ ಹೊರಬಿದ್ದ ಕಲ್ಲಪ್ಪ ಓಡಲು ಶುರುಮಾಡಿದ. ಊರಿನ ಬೀದಿಗಳಲ್ಲಿ ಚಟುವಟಿಕೆ ಕಡಿಮೆಯಾಗುತ್ತಿತ್ತು. ಜನರೆಲ್ಲಾ ಮನೆ ಸೇರಿಕೊಳ್ಳುತ್ತಿದ್ದರು. ಅಲ್ಲಿಂದ ಊರು ದಾಟಿ ಕಾಡಿನೊಳಗೆ ಸೇರಿ ಎಷ್ಟೋ ಹೊತ್ತಿನವರೆಗೆ ಓಡುತ್ತಾ ಓಡುತ್ತಾ ಸುಸ್ತಾದ ಕಲ್ಲಪ್ಪ ಸುಧಾರಿಸಿಕೊಳ್ಳಲು ನಿಂತ. ಅವತ್ಯಾಕೋ ಕತ್ತಲು ಹೆಚ್ಚೇ ಇದ್ದಂತಿತ್ತು. ಹಾಗೇ ತಲೆ ಎತ್ತಿ ನೋಡಿದ. ಆಕಾಶದಲ್ಲಿ ಚಂದ್ರ ಕಾಣಲಿಲ್ಲ, ನಕ್ಷತ್ರಗಳೂ ತಲೆಮರೆಸಿಕೊಂಡಿದ್ದವು. ಕಲ್ಲಪ್ಪನಿಗೆ ತಾನು ಎಲ್ಲಿದ್ದೇನೆ ಎಂಬುದೇ ಗೊತ್ತಾಗಲಿಲ್ಲ. ಆ ಕಾಡು ಅವನಿಗೆ ಅತ್ಯಂತ ಅಪರಿಚಿತ ಅನ್ನಿಸಿತು. ಅದೇ ಕಾಡಿನಲ್ಲಿ ಹಾಗೇ ಹೋದರೆ ಊರಿನಿಂದ ದೂರಕ್ಕೆ ಹೋಗುತ್ತೇನೋ ಅಥವಾ ಮತ್ತೆ ಊರೊಳಗೇ ಹೋಗುತ್ತೇನೋ ಎಂದು ಗೊತ್ತಾಗದೇ ಗೊಂದಲಕ್ಕೊಳಗಾಗಿ ಯೋಚಿಸತೊಡಗಿದ. ಇಷ್ಟು ಹೊತ್ತಿಗಾಗಲೇ ತಾನು ಜೈಲರನನ್ನು ಹೊಡೆದು ಓಡಿಬಂದ ವಿಷಯ ಎಲ್ಲರಿಗೂ ತಿಳಿದಿರುತ್ತದೆ, ತನ್ನನ್ನು ಹುಡುಕಿಕೊಂಡು ಪೋಲೀಸರು ಹೊರಟಿರುತ್ತಾರೆ, ಎಲ್ಲ ಕಡೆಯಲ್ಲೂ ಮಾಹಿತಿ ಕೊಟ್ಟಿರುತ್ತಾರೆ ಎಂದು ಅವನಿಗೆ ಖಾತ್ರಿಯಿತ್ತು. ತನ್ನ ಊರಿಗೆ ಹೋದರೂ ಅಲ್ಲಿ ಪೋಲೀಸರ ದಂಡೇ ಕಾದುಕುಳಿತಿರುತ್ತದೆ ಎಂದು ಗೊತ್ತಿತ್ತು. ಜೈಲಿನ ಬಂಧನದಿಂದ ತಪ್ಪಿಸಿಕೊಂಡು ಬಂದರೂ ಇನ್ನು ಯಾವತ್ತೂ ಈ ಜಗತ್ತಿನಲ್ಲಿ ಸ್ವತಂತ್ರವಾಗಿರುವುದು ಸಾಧ್ಯವಿಲ್ಲ ಅನ್ನಿಸತೊಡಗಿತು. ಮತ್ತೆ ಜೈಲಿನಲ್ಲಿರುವಂತೆಯೇ ಭಾಸವಾಯಿತು. ಹಾಗೇ ಮುಂದೆ ನಡೆಯತೊಡಗಿದ.


ಸ್ವಲ್ಪ ದೂರ ನೆಡೆಯುತ್ತಿದ್ದಂತೇ ಅಲ್ಲೇ ಪಕ್ಕದಲ್ಲಿ ಒಂದು ಹಳೇ ದಾರಿಯಿದ್ದಂತೆ ಕಂಡಿತು. ಅದರ ಕಡೆ ಓಡಿ ಹೋದ. ಅವನ ಅದೃಷ್ಟ ಅಲ್ಲಿಯೇ ಕೈಕೊಟ್ಟಿತ್ತು. ಕತ್ತಲಿನಲ್ಲಿ ಸ್ವಲ್ಪ ದೂರದಲ್ಲಿ ವ್ಯಕ್ತಿಯೊಬ್ಬ ನಿಂತಿದ್ದು ಕಂಡಿತು. ಆತನ ಮುಖ ಸರಿಯಾಗಿ ಕಾಣುತ್ತಿರಲಿಲ್ಲ. ಅಷ್ಟು ಹೊತ್ತಿಗೆ ಕರಿಮೋಡಗಳ ಮರೆಯಿಂದ ಚಂದ್ರ ಹೊರಕ್ಕೆ ಇಣುಕಿ ಮರದ ಎಲೆಗಳ ಸಂದಿಯಿಂದ ಬಂದ ಸಣ್ಣ ಬೆಳಕಿನಲ್ಲಿ ಆ ವ್ಯಕ್ತಿಯ ಕೈಲಿದ್ದ ಕೋವಿ ಕಲ್ಲಪ್ಪನಿಗೆ ಕಂಡಿತು. ಕಲ್ಲಪ್ಪನ ಎದೆ ಧಸಕ್ಕೆಂದಿತು. ಆ ಕೋವಿ ಕಲ್ಲಪ್ಪನೆಡೆಗೇ ನೆಟ್ಟಿತ್ತು. ಅಲ್ಲಿಂದ ಓಡಲು ಕಲ್ಲಪ್ಪ ಹವಣಿಸುತ್ತಿದ್ದಂತೆಯೇ "ಈ ಬಂದೂಕು ಪೂರ್ತಿ ಲೋಡ್ ಆಗಿದೆ" ಎಂದ ಆ ವ್ಯಕ್ತಿ. ಕಲ್ಲಪ್ಪ ಮರಗಟ್ಟಿ ನಿಂತ. ಅವನ ಎದೆ ಜೋರಾಗಿ ಹೊಡೆದುಕೊಳ್ಳತೊಡಗಿತು. ಕೈಕಾಲೇ ಆಡದಂತಾದ. ಆ ದಾರಿಯಲ್ಲಿ ಹಿಂದೆ ತಿರುಗಿ ನಡೆಯುವಂತೆ ಕಲ್ಲಪ್ಪನಿಗೆ ಕೋವಿಯಿಂದಲೇ ಸನ್ನೆ ಮಾಡಿದ ಆ ವ್ಯಕ್ತಿ. ಕಲ್ಲಪ್ಪ ತಪ್ಪಿಸಿಕೊಳ್ಳುವ ಅವಕಾಶವಿಲ್ಲದಷ್ಟು ಹತ್ತಿರ ಸಿಕ್ಕಿಹಾಕಿಕೊಂಡಿದ್ದ. ಬೇರೆ ವಿಧಿಯಿಲ್ಲದೇ ಆತ ತೋರಿಸಿದ ದಾರಿಯಲ್ಲಿ ನಿಧಾನಕ್ಕೆ ನಡೆಯತೊಡಗಿದ. ಹಿಂದೆ ಕುತ್ತಿಗೆಗೆ ಕೋವಿಯ ನಳಿಕೆ ತಾಗುತ್ತಿತ್ತು. ಜೋರಾಗಿ ಉಸಿರಾಡಲೂ ಹೆದರಿಕೆಯಾಗಿ ಎಡಬಲಕ್ಕೆ ಸ್ವಲ್ಪವೂ ತಿರುಗದೇ ಮನ್ನಡೆದ. ಕತ್ತು ಭಯಂಕರವಾಗಿ ನೋಯುತ್ತಿತ್ತು. ದೇಹ ಸೋತುಹೋದಂತೆ ಅನ್ನಿಸಿತು.


ಕಲ್ಲಪ್ಪ ತನ್ನ ತಮ್ಮನನ್ನು ಕೊಲೆ ಮಾಡಿದ ರೀತಿಯಲ್ಲೇ ಅವನೆಂತಹ ಕ್ರೂರ ಮನಸ್ಸಿನವನೆಂದು ಹೇಳಬಹುದಿತ್ತು. ತನ್ನ ಕೊರಳಿಗೆ ಕುಣಿಗೆ ಬೀಳುವುದು ಖಂಡಿತ ಎಂದು ಗೊತ್ತಾದ ಮೇಲೂ ಕೂಡ ಜೈಲರನನ್ನು ಹೊಡೆದು ಓಡಿಬರುವ ಸಾಹಸಕ್ಕೆ ಕೈ ಹಾಕಿದ್ದ. ಆದರೆ ಅಂತಹ ಮನುಷ್ಯನೂ ಈಗ ಏನೂ ಮಾಡದವನಂತಾಗಿದ್ದ. ಆತನ ಹುಂಬ ಧೈರ್ಯ ಕೊನೆಯಾದಂತೆ ಅನ್ನಿಸಿತು. ಹಿಂದೆ ಆ ವ್ಯಕ್ತಿ ಹತ್ತಿರದಲ್ಲೇ ನಡೆಯುತ್ತಿದ್ದ ಶಬ್ದ ಕೇಳುತ್ತಿತ್ತು. ಕತ್ತಲು ಹೆಚ್ಚುತ್ತಿತ್ತು. ಹೀಗೆ ಎಷ್ಟೋ ದೂರ ಅವರಿಬ್ಬರೂ ನಡೆದರು. ಹಾಗೇ ನಡೆಯುತ್ತಾ ಒಮ್ಮೆ ಬೆಳದಿಂಗಳ ಯಾವುದೋ ಒಂದು ಕ್ಷಣದಲ್ಲಿ ಕಲ್ಲಪ್ಪ ಅಚಾನಕ್ಕಾಗಿ ಹಿಂದಿರುಗಿ ನೋಡಿದ. ನೋಡಿದವನೇ ಬೆಚ್ಚಿಬಿದ್ದ. ಅವನ ಹಿಂದೆ ಬರುತ್ತಿದ್ದ ವ್ಯಕ್ತಿ ಅವನಿಂದ ಹೊಡೆಸಿಕೊಂಡ ಜೈಲರ್ ಆಗಿದ್ದ. ಆ ಮುಖ ಬಿಳುಚಿಕೊಂಡಿತ್ತು. ಕಬ್ಬಿಣದ ಸರಳಿನಿಂದ ಕಲ್ಲಪ್ಪ ಹೊಡೆದ ಗುರುತು ಮುಖದ ಮೇಲೆ ಹಾಗೇ ಎದ್ದು ಕಾಣುತ್ತಿತ್ತು. ಕಲ್ಲಪ್ಪ ಪೂರ್ತಿ ಧೈರ್ಯ ಕಳೆದುಕೊಂಡ. ಎಂತದೇ ಧೈರ್ಯವಂತನಾದರೂ ಅಸಹಾಯಕನಾದಾಗ ಸೋತುಬಿಡುತ್ತಾನೆ.

ಅವರಿಬ್ಬರೂ ಹಾಗೇ ನೆಡೆಯುತ್ತಾ ಊರಿನೊಳಗೆ ಬಂದರು. ಅಷ್ಟೊತ್ತಿಗೆ ಬೆಳಗಿನ ಜಾವ. ಊರ ಬೀದಿಗಳೆಲ್ಲಾ ಖಾಲಿಯಿದ್ದವು. ಆ ಜೈಲರ್ ಸೀದಾ ಕಲ್ಲಪ್ಪನನ್ನು ಜೈಲಿನ ದಾರಿಗೆ ನಡೆಸಿಕೊಂಡು ಹೋದ. ಜೈಲಿನ ಮುಖ್ಯದ್ವಾರಕ್ಕೆ ಬಂದು ಕಲ್ಲಪ್ಪ ಬಾಗಿಲನ್ನು ತಳ್ಳಿದ. ಹಾಗೇ ತೆಗೆದುಕೊಂಡಿತು. ಒಳಗೆ ಹೋಗುತ್ತಿದ್ದಂತೆಯೇ ಅಲ್ಲಿ ಕಾವಲಿದ್ದ ಪೋಲೀಸರು ಇವನನ್ನು ಹಿಡಿದುಕೊಂಡರು. ಕಲ್ಲಪ್ಪ ಹಿಂದಿರುಗಿ ನೋಡಿದ. ತನ್ನ ಹಿಂದೆ ಬರುತ್ತಿದ್ದ ಜೈಲರ್ ತನ್ನ ಜೊತೆಗೆ ಒಳಗೆ ಬಂದಿದ್ದು ಕಾಣಲಿಲ್ಲ.

ಬಂಧಿಸಿದ್ದ ಕಲ್ಲಪ್ಪನಿಗೆ ಕೋಳ ತೊಡಿಸಿ ಜೈಲಿನ ಕೋಣೆಯ ಕಡೆಗೆ ಕರೆದೊಯ್ದರು..... ಅಲ್ಲೇ ಕಾರಿಡಾರ್ ನ ಬದಿಯಲ್ಲಿ ಮೇಜಿನ ಮೇಲೆ ಜೈಲರನ ಹೆಣವನ್ನು ಮಲಗಿಸಲಾಗಿತ್ತು !


****

ಇಂಗ್ಲೀಶ್ ಮೂಲ ಕಥೆ:  AN ARREST by Ambrose Bierce
ಸಖಿ ಪತ್ರಿಕೆಗಾಗಿ ಅನುವಾದಿಸಿ ಬರೆದಿದ್ದು.



ಸೋಮವಾರ 11 ಜುಲೈ 2011

ಐಸ್ ವೈನ್ & ಕೊಮಗಟ ಮರು

ಯಾವುದಾದರೂ ಊರಿಗೆ/ಪ್ರದೇಶಕ್ಕೆ ಹೋದಾಗ ಅಲ್ಲಿನ ವಿಶೇಷ ಅನ್ನಿಸುವಂತದ್ದು ಏನಾದರೂ ಇದೆಯಾ ಎಂದು ತಿಳಿದುಕೊಳ್ಳುವುದು ನನ್ನ ಅಭ್ಯಾಸ. ಅಂದರೆ ಆ ಊರಿನ ವಿಶೇಷ ಪದಾರ್ಥಗಳು, ಆ ಊರಲ್ಲಿ ಮಾತ್ರ ಸಿಗುವಂತದ್ದು, ಬೆಳೆಯುವಂತದ್ದು, ತಯಾರಾಗುವಂತದ್ದು. ಉದಾಹರಣೆಗೆ ಹಾಸನ ಅಂದಕೂಡಲೇ ಸೌತೆಕಾಯಿ, ಶುದ್ಧ ನೀರಾ ಹೀಗೆ. ಮೊದಲೆಲ್ಲಾ ಸುಮಾರಷ್ಟು ಊರುಗಳಲ್ಲಿ ಆ ಊರಿನದ್ದೇ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವಂತದ್ದೇನಾದರೂ ಇರುತ್ತಿದ್ದವು. ಈಗಲೂ ಇವೆ. ಮೊಳಕಾಲ್ಮೂರು ಸೀರೆ, ಚನ್ನಪಟ್ಟಣದ ಬೊಂಬೆ,  ಮತ್ಯಾವುದೋ ಕಲೆ, ತರಕಾರಿ, ತಿಂಡಿ, ಸಿಹಿ ಮುಂತಾದವು.  ಆದರೆ ಜಾಗತೀಕರಣದ ನಂತರ ಎಲ್ಲ ಸ್ವಲ್ಪ ಕಲಸುಮೇಲೋಗರವಾಗಿದ್ದರೂ ಕೂಡ ಕೆಲವು ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಇರಲಿ.


www.en.wikipedia.org/wiki/Ice_wine

ಅದೇ ರೀತಿ ಇಲ್ಲಿ ಕೆನಡಾದಲ್ಲಿ ನಾನಿರುವ ಪ್ರದೇಶದ ವಿಶೇಷದ ಬಗ್ಗೆ ವಿಚಾರಿಸಿದಾಗ ನನಗೆ ತಿಳಿದು ಬಂದದ್ದು ’ಐಸ್ ವೈನ್’. ನಾನು ರೆಡ್ ವೈನ್, ವೈಟ್ ವೈನ್ ಕೇಳಿದ್ದೆ ಆದರೆ ಈ ಐಸ್ ವೈನ್ ಬಗ್ಗೆ ಇದುವರೆಗೂ ಕೇಳಿರಲಿಲ್ಲ. ಈ ಒಂಟಾರಿಯೋ ರಾಜ್ಯದ ನಯಾಗರ ಪ್ರದೇಶದಲ್ಲಿ ಬಹಳ ದ್ರಾಕ್ಷಿ ತೋಟಗಳಿವೆ. ಆದ್ದರಿಂದ ಬಹಳ ವೈನರಿಗಳೂ ಇವೆ. ಹಲವು ಬಗೆಯ ವೈನ್ ಗಳು ತಯಾರಾಗುತ್ತವೆ. ಒಂದೊಂದು ವೈನ್ ಗೂ ಅದರದ್ದೇ ಆದ ವಿಶೇಷತೆಗಳಿವೆ. ಇಲ್ಲಿ ತಯಾರಾಗುವ ಅಂತಹ ವಿಶೇಷ ವೈನ್ ಗಳಲ್ಲಿ ಮುಖ್ಯವಾದದ್ದು ಈ ಐಸ್ ವೈನ್. ಇದು ಜಗತ್ತಿನ ಹಲವು ಶೀತ ದೇಶಗಳಲ್ಲಿ ತಯಾರಾಗುತ್ತದಾದರೂ ಕೆನಡಾದ ಐಸ್ ವೈನ್ ಗುಣಮಟ್ಟ ಮತ್ತು ಪ್ರಮಾಣದಲ್ಲಿ ನಂ. ೧ ಆಗಿದ್ದು ಪ್ರಸಿದ್ಧವಾಗಿದೆಯಂತೆ. ಸಾಮಾನ್ಯವಾಗಿ ವೈನ್ ಮಾಡುವಾಗ ದ್ರಾಕ್ಷಿ ಮಾಗಿದ ಅನಂತರ ಬಳ್ಳಿಯಿಂದ ಕಿತ್ತು ಸಂಸ್ಕರಣೆ ಮಾಡುತ್ತಾರೆ, ಆದರೆ ಈ ಐಸ್ ವೈನ್ ಗೆ ಮಾತ್ರ ಈ ರೀತಿ ಮಾಡುವುದಿಲ್ಲ. ಐಸ್ ವೈನ್ ವಿಶೇಷತೆ ಇರುವುದೇ ಅಲ್ಲಿ. ದ್ರಾಕ್ಷಿಯ ಗೊಂಚಲನ್ನು ಬಳ್ಳಿಯಲ್ಲಿ ಹಾಗೆಯೇ ಬಿಡುತ್ತಾರೆ. ಚಳಿಗಾಲದಲ್ಲಿ ಮೈನಸ್ ವಾತಾವರಣದಲ್ಲಿ ಅವುಗಳ ಮೇಲೆ ಹಿಮ ಕೂರುತ್ತದೆ. ಆಗ ಅದರಲ್ಲಿನ ನೀರಿನ ಅಂಶ ಹೆಪ್ಪುಗಟ್ಟಿ ಹೋಗುತ್ತದೆ. ಆದರೆ ಸಕ್ಕರೆ ಮತ್ತು ತಿರುಳಿನ ಅಂಶ ಮಾತ್ರ ಹಾಗೇ ಉಳಿಯುತ್ತದೆ. ಇದರಿಂದ ಮಾಮೂಲಿ ದ್ರಾಕ್ಷಿಗಿಂತ ದಪ್ಪ ಮತ್ತು ಸಿಹಿಯಾದ ಸಿರಪ್ ಸಿಗುತ್ತದೆ.. ಇದನ್ನು ಸಂಸ್ಕರಣೆ ಮಾಡಿ ವೈನ್ ತಯಾರಿಸುತ್ತಾರೆ. ಇದನ್ನು ಮಾಡುವುದು ಸುಲಭವಲ್ಲ ಮತ್ತು ಬಹಳ ಕಡಿಮೆ ಪ್ರಮಾಣದಲ್ಲಿ ಸಿಗುವುದರಿಂದ ಬೇರೆ ವೈನ್ ಗಳಿಗೆ ಹೋಲಿಸಿದರೆ ಬಹಳ ದುಬಾರಿ ಕೂಡ.

ಈ ಬಗ್ಗೆ ಇಂಗ್ಲೀಷ್ ವಿಕಿಪಿಡಿಯಾ ಮಾಹಿತಿ ಇಲ್ಲಿದೆ. ಇದನ್ನು ಗೂಗ್ಲ್ ಟ್ರಾನ್ಸ್ ಲೇಟರ್ ಟೂಲ್ ಕಿಟ್ ಬಳಸಿ ಸದ್ಯದಲ್ಲೇ ಕನ್ನಡ ವಿಕಿಪಿಡಿಯಾಗೂ ಹಾಕುತ್ತೇನೆ.

***

www.sikh-history.com/sikhhist/events/kamagatamaru.html
ಇನ್ನೊಂದು ಸಂಗತಿಯೆಂದರೆ ಇಲ್ಲಿನ ಭಾರತೀಯರಿಗೆ ಸಂಬಂಧಿಸಿದ ಇತಿಹಾಸದ ಒಂದು ಘಟನೆ. ಕೆನಡಾದ ಭಾರತೀಯ ಜನಸಂಖ್ಯೆಯಲ್ಲಿ ಸಿಖ್ಖರು ಹೆಚ್ಚಿದ್ದಾರೆ. ಬ್ರಿಟಿಷ್ ಕೊಲಂಬಿಯಾ ರಾಜ್ಯದಲ್ಲಿ ಅವರ ಸಂಖ್ಯೆ ಹೆಚ್ಚಿದೆ. ಇಪ್ಪತ್ತನೇ ಶತಮಾನದ ಶುರುವಿನಲ್ಲಿ ಕೆನಡಾದಲ್ಲಿ ಜನಸಂಖ್ಯೆ ಬಹಳ ಕಡಿಮೆ ಇತ್ತು. ಆಗ ಇಲ್ಲಿ ಬ್ರಿಟಿಷರ ನೇರ ಆಡಳಿತವಿತ್ತು. ಅವರು ವಲಸಿಗರಿಗೆ ಕರೆಕೊಟ್ಟು ಕೆನಡಾಗೆ ಬರಮಾಡಿಕೊಳ್ಳುತ್ತಿದ್ದರಂತೆ. ಕೃಷಿ ಮಾಡಲು ಭೂಮಿಯನ್ನೂ ಕೊಡುತ್ತಿದ್ದರಂತೆ. ಇದರಿಂದಾಗಿ ಭಾರತದಿಂದಲೂ ಬಹಳ ಜನ ಪಂಜಾಬಿಗಳು ಅಲ್ಲಿಗೆ ಹೋದರು. ಆದರೆ ಬ್ರಿಟಿಷರಿಗೆ ಕಪ್ಪು/ಕಂದು ಚರ್ಮದ ಜನರು ಅಲ್ಲಿಗೆ ಬರುವುದು ಇಷ್ಟವಿರಲಿಲ್ಲ. ಅವರು ಕೇವಲ ಬಿಳಿಯರನ್ನು ಮಾತ್ರ ಪ್ರೋತ್ಸಾಹಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಬೇರೆ ಜನರು ಅಲ್ಲಿಗೆ ವಲಸೆ ಬರದಂತೆ ತಡೆಯಲು ಅಲ್ಲಿನ ಆಡಳಿತ ಒಂದು ಕಾನೂನನ್ನು ಮಾಡುತ್ತದೆ. ಕೆನಡಾಗೆ ನೇರವಾಗಿ ಒಂದೇ ಪ್ರಯಾಣದಲ್ಲಿ ಬಂದವರಿಗೆ ಮತ್ತು ಒಂದು ಮೊತ್ತದ ಹಣ ಇಟ್ಟುಕೊಂಡು ಬಂದವರಿಗೆ ಮಾತ್ರ ಪ್ರವೇಶ ಎಂದು. ದಕ್ಷಿಣ ಏಷ್ಯಾದ ಜನರು ಕೆನಡಾಗೆ ಬರದಂತೆ ತಡೆಯುವುದು ಅವರ ಉದ್ದೇಶವಾಗಿರುತ್ತದೆ. ಭಾರತದಿಂದ ನೇರವಾಗಿ ಕೆನಡಾಗೆ ಹೋಗಲು ಆಗಿನ ಕಾಲದಲ್ಲಿ ಯಾವ ವ್ಯವಸ್ಥೆಯೂ ಇರಲಿಲ್ಲ. ೧೯೧೪ರಲ್ಲಿ ಸಿಖ್ ವ್ಯಾಪಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರನಾದ ಗುರ್ದಿತ್ ಸಿಂಗ್ ಎನ್ನುವವರು ಆ ಕಾನೂನು ಮೀರದೇ ವಲಸೆ ಮಾಡಲು ಯೋಚಿಸುತ್ತಾರೆ. ಒಂದು ಜಪಾನಿ ಹಡಗನ್ನು ಬಾಡಿಗೆಗೆ ಪಡೆಯುತ್ತಾರೆ. ಅದರ ಹೆಸರೇ ’ಕೊಮಗಟ ಮರು’. ಅದರಲ್ಲಿ ಹಾಂಗ್ ಕಾಂಗ್ ನಿಂದ ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್ ನಗರಕ್ಕೆ ನೇರವಾಗಿ ಒಂದೇ ಪ್ರಯಾಣ ಮಾಡುವ ಉಪಾಯ ಮಾಡುತ್ತಾರೆ. ಅದರಂತೆ ಆ ಹಡಗು ೩೭೬ ಜನ ಭಾರತೀಯರನ್ನು ತುಂಬಿಕೊಂಡು ಹೊರಟು ವ್ಯಾಂಕೋವರ್ ತಲುಪಿದಾಗ ಅಲ್ಲಿನ ಬ್ರಿಟಿಷರು ಅದನ್ನು ಬಂದರಿನೊಳಗೆ ಬಿಟ್ಟುಕೊಳ್ಳುವುದಿಲ್ಲ. ಆ ಹಡಗು ಅತಂತ್ರವಾಗಿ ಪ್ರಯಾಣಿಕರ ಸಮೇತ ಸಮುದ್ರದಲ್ಲಿ ಎರಡು ತಿಂಗಳುಗಳ ಕಾಲ ನಿಲ್ಲಬೇಕಾಗುತ್ತದೆ. ಕೊನೆಗೆ ಕೆನಡಾ ನೌಕಾದಳವು ಅದನ್ನು ಬಲವಂತವಾಗಿ ಅಲ್ಲಿಂದ ಹೊರದಬ್ಬಿ ಕೋಲ್ಕೋತಾಗೆ ತಲುಪಿಸುತ್ತದೆ. ಆಗ ಭಾರತವು ಬ್ರಿಟಿಷರ ಕೈಯಲ್ಲಿದ್ದ ಕಾಲ. ಕೋಲ್ಕೋತಾಗೆ ಬಂದ ಆ ಹಡಗಿನ ಜನರ ಮೇಲೆ ಬ್ರಿಟಿಷರು ಅನುಮಾನದಿಂದ ಗುಂಡು ಹಾರಿಸುತ್ತಾರೆ. ಬಂಧಿಸಲು ತಯಾರಾಗುತ್ತಾರೆ. ಆಗ ಅಲ್ಲಿ ಕಾದಾಟಗಳಾಗಿ ೨೦ ಜನ ಭಾರತೀಯರು ಕೊಲ್ಲಲ್ಪಡುತ್ತಾರೆ.

ಇದು ಕೆನಡಾದ ಇತಿಹಾಸದಲ್ಲಿ ಒಂದು ವಿಶೇಷ ಘಟನೆಯಾಗಿದೆ (Sikh History link). ಇದು ನಡೆದು ಒಂದು ಶತಮಾನವಾಗುತ್ತಿರುವಾಗ ೨೦೦೬ರಲ್ಲಿ ಕೆನಡಾದ ಪ್ರಧಾನಿ ಹಾರ್ಪರ್ ಈ ಘಟನೆಯ ಬಗ್ಗೆ ಬಹಿರಂಗವಾಗಿ ಭಾರತೀಯ ಸಮುದಾಯದ ಕ್ಷಮೆಯನ್ನೂ ಯಾಚಿಸಿದ್ದಾರೆ. ಕೊಮಗಟ ಮರು ಘಟನೆಯ ಬಗ್ಗೆ ಕಂಟಿನ್ಯುಯಸ್ ಜರ್ನಿ ಎನ್ನುವ ಸಿನೆಮಾ ಕೂಡ ಇದೆ. (IMDb link)

ಬುಧವಾರ 6 ಜುಲೈ 2011

ದಿಢೀರ್ ದೋಸೆ

ದೋಸೆ ತಿನ್ನುವ ತಲುಬು ಬಂದಿದೆ. ಅಕ್ಕಿ ನೆನೆಸಿಲ್ಲ, ಹಿಟ್ಟು ರುಬ್ಬಿಲ್ಲ. ವಿಧವಿಧದ ದೋಸೆ ಮಾಡಲು ಪದಾರ್ಥಗಳೂ ಇಲ್ಲ.

ಪರಿಹಾರ? ಹಿಟ್ಟಿನ ದೋಸೆ ಅಲಿಯಾಸ್ ದಿಢೀರ್ ದೋಸೆ ! ಅತ್ಯಂತ ಸರಳವಾಗಿ ಮತ್ತು ಕಡಿಮೆ ಸಮಯದಲ್ಲಿ ಮಾಡಬಹುದಾದ ದೋಸೆ.

ಬೇಕಾಗುವ ಪದಾರ್ಥಗಳು..

  • ಅಕ್ಕಿಹಿಟ್ಟು, ಗೋಧಿಹಿಟ್ಟು, ಸಣ್ಣರವೆ(ಸೂಜಿರವೆ), ಉಪ್ಪು.......ಇವು ನಾಲ್ಕೂ must.
  • ಜೀರಿಗೆ, ಖಾರದ ಪುಡಿ ಎಷ್ಟು ಬೇಕೋ ಅಷ್ಟ್.

ಮಾಡುವುದು ಹೀಗೆ...
  1. ಒಂದು ಅಳತೆ ಅಕ್ಕಿಹಿಟ್ಟಿಗೆ ಅರ್ಧ ಅಳತೆ ಗೋಧಿ ಹಿಟ್ಟು, ಅರ್ಧ ಅಳತೆ ರವೆ ಬೆರೆಸಿರಿ. ಸ್ವಲ್ಪ ಜೀರಿಗೆ ಹಾಕಿ.
  2. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ತುಂಬಾ ತೆಳುವಾಗದಂತೆ ಎಚ್ಚರವಹಿಸಿ.
  3. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಖಾರದ ಪುಡಿ ಹಾಕಿ ಚೆನ್ನಾಗಿ ಬೆರೆಸಿ. ಅಲ್ಲಿಗೆ ದೋಸೆ ಹಿಟ್ಟು ತಯಾರಾಯ್ತು!
  4. ಒಲೆ ಹಚ್ಚಿ ಅದರ ಮೇಲೆ ಕಾವಲಿ ಇಟ್ಟು ಬಿಸಿ ಮಾಡಿ.
  5. ಚೆನ್ನಾಗಿ ಕಾದ ಮೇಲೆ ದೋಸೆ ಎರೆಯಲು ಶುರುಮಾಡಿ. ಮೀಡಿಯಮ್ ದಪ್ಪ ಇರಲಿ.
  6. ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ. ಎರಡೂ ಕಡೆ ಚೆನ್ನಾಗಿ ಬೇಯಿಸಿ.

ಬಿಸಿಬಿಸಿ ದೋಸೆ ತಯಾರು.
ಹಿಟ್ಟಿನ ದೋಸೆ
(Item shown in the picture may not represent the actual product. ಇನ್ನೂ ಚೆನ್ನಾಗಿ ಆಗಬಹುದು;-))

***

  • ಬೇಕಿದ್ದರೆ ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ದೋಸೆ ಹಿಟ್ಟಿಗೆ ಹಾಕಬಹುದು.
  • ಇದೀಗ ಬಂದ ಮಾಹಿತಿ ಪ್ರಕಾರ ಗೋಧಿಹಿಟ್ಟಿನ ಬದಲಿಗೆ ರಾಗಿಹಿಟ್ಟನ್ನೂ ಬಳಸಬಹುದು!
  • ಮತ್ತೊಂದು ದಿಡೀರ್ ರವೆ ದೋಸೆ ರೆಸಿಪಿ ಇಲ್ಲಿದೆ:  ಧಿಡೀರ್ ರವಾಮಸಾಲ್‌ದೋಸೆ
  • ಸಮಯ ಇದ್ದಾಗ ದೋಸೆಗೆ ಹೀಗೆ ಆಲೂಗಡ್ಡೆ ಪಲ್ಯ ಮಾಡಿಕೊಳ್ಳಬಹುದು.

***

"ಇಷ್ಟಬಂದಹಾಗೆ ಇರಬೇಕು ಅಂದರೆ ಇಷ್ಟಪಟ್ಟಿದ್ದನ್ನೆಲ್ಲಾ ಕಲೀಬೇಕು". ಹೀಗಂತ ಹೇಳಿದ್ದು ಶಿವರಾಮ ಕಾರಂತರು...’ಹುಚ್ಚು ಮನಸಿನ ಹತ್ತು ಮುಖಗಳು’ ಪುಸ್ತಕದಲ್ಲಿ.

ಅಂದಹಾಗೆ, ನಾನಿನ್ನೂ ಅಡುಗೆಶಾಲೆಯಲ್ಲಿ ಕಲಿಯುತ್ತಿರುವ ವಿಧೇಯ ವಿದ್ಯಾರ್ಥಿ. :)

ಮಂಗಳವಾರ 21 ಜೂನ್ 2011

ಹಾಚಿಕೊ



ಅವತ್ತಿನ ಕೆಲಸ ಮುಗಿಸಿಕೊಂಡು ಮಾಮೂಲಿನ ರೈಲಿನಲ್ಲಿ ರಾತ್ರಿ ಬಂದಿಳಿದ ಫ್ರೊಫೆಸರ್ ಪಾರ್ಕರ್ ದಿಕ್ಕಿಲ್ಲದೇ ಓಡಾಡುತ್ತಿರುವ ಒಂದು ಮುದ್ದಾದ ನಾಯಿಮರಿಯನ್ನು ನೋಡುತ್ತಾನೆ. ಅದನ್ನು ಕರುಣೆಯಿಂದ ಎತ್ತಿಕೊಂಡು ಸ್ಟೇಷನ್ ಮಾಸ್ತರನಿಗೆ ಕೊಡಲು ಹೋಗುತ್ತಾನೆ. ಸ್ಟೇಶನ್ ಮಾಸ್ತರನು ಅದನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾನೆ. ಫ್ರೊಫೆಸರನಿಗೆ ಅದನ್ನು ಅಲ್ಲೇ ಬಿಡಲು ಇಷ್ಟವಿಲ್ಲದೇ ಮಾರನೇ ದಿನ ಸಂಬಂಧಪಟ್ಟವರಿಗೆ ತಲುಪಿಸಬೇಕೆಂದುಕೊಂಡು ಅದನ್ನು ತನ್ನ ಮನೆಗೆ ತೆಗೆದುಕೊಂಡು ಹೋಗುತ್ತಾನೆ. ಹೆಂಡತಿಗೆ ಗೊತ್ತಾದರೆ ಬಯ್ಯುತ್ತಾಳೆಂದು ಅದನ್ನು ಅಡಗಿಸಿಡುತ್ತಾನೆ. ರಾತ್ರಿ ಚಿಕ್ಕಮಗುವಿನಂತೆ ಅದನ್ನು ಸಂತೈಸುತ್ತಾನೆ. ಮರುದಿನದಿಂದ ಅದನ್ನು ಸಂಬಂಧಿಸಿದವರು ತೆಗೆದುಕೊಂಡು ಹೋಗಬೇಕೆಂದು ಎಲ್ಲೆಡೆ ಸುದ್ದಿ ಕೊಟ್ಟರೂ ಸಹ ಯಾರೂ ತೆಗೆದುಕೊಳ್ಳಲು ಬರುವುದೇ ಇಲ್ಲ. ಅದರ ಕುತ್ತಿಗೆಯಲ್ಲಿದ್ದ ಜಪಾನಿ ಭಾಷೆಯ ಸಂಕೇತದ ಸರವನ್ನು ತನ್ನ ಗೆಳೆಯನ ಮೂಲಕ ಓದಿಸಿ ತಿಳಿದುಕೊಂಡು ಅದಕ್ಕೆ ’ಹಾಚಿ’ ಎಂದು ಹೆಸರಿಡುತ್ತಾನೆ. ಜಪಾನಿ ಭಾಷೆಯಲ್ಲಿ ಹಾಚಿ ಎಂದರೆ ಶುಭಶಕುನ. ಹಲವು ದಿನಗಳು ಉರುಳುತ್ತವೆ. ಆ ಮರಿಯೊಂದಿಗೆ ಫ್ರೊಫೆಸರನ ಸ್ನೇಹವಾಗಿರುತ್ತದೆ. ಒಂದು ದಿನ ನಾಯಿ ದತ್ತು ತೆಗೆದುಕೊಳ್ಳುವವರ ಫೋನ್ ಬರುತ್ತದೆ. ಅವರ ಹೆಂಡತಿ ಮೊದಲು ಮರಿಯನ್ನು ಆದಷ್ಟು ಬೇಗ ಹಿಂದಿರುಗಿಸುವಂತೆ ತಾಕೀತು ಮಾಡಿದ್ದರೂ ಸಹ ಈಗ ತನ್ನ ಗಂಡ ಮತ್ತು ನಾಯಿಮರಿ ಒಡನಾಟವನ್ನು ನೋಡಿ, ಅದರ ಜೊತೆ ಆತನ ಖುಷಿಯನ್ನು ನೋಡಿ ಅದನ್ನು ತಮ್ಮ ಮನೆಯಲ್ಲೇ ಉಳಿಸಿಕೊಳ್ಳುತ್ತಾಳೆ. ಅದು ಫ್ರೊಫೆಸರರ ಕುಟುಂಬದಲ್ಲಿ ಒಂದಾಗುತ್ತದೆ. ಹಾಗೇ ಸಹಜವೆಂಬಂತೆ ವರ್ಷಗಳು ಉರುಳುತ್ತವೆ. ಮರಿ ದೊಡ್ಡದಾಗುತ್ತದೆ. ಅವರಿಬ್ಬರ ನಡುವೆ ಒಂದು ಅನ್ಯೋನ್ಯತೆ ಬೆಳೆದಿರುತ್ತದೆ. ಅವರಿಗೂ ಹಾಚಿಗೂ ಒಂದು ಅತೀ ಆಪ್ತ ಸಂಬಂಧವಾಗಿರುತ್ತದೆ. ಜೊತೆಜೊತೆಗೇ ಅವರಿಬ್ಬರ ಆಟ, ಊಟ, ಓಡಾಟ. ಅದರೊಂದಿಗೆ ಪ್ರೊಫೆಸರ್ ತುಂಬಾ ಖುಷಿಯ ಜೀವನವನ್ನು ಅನುಭವಿಸುತ್ತಾನೆ. ಫ್ರೊಫೆಸರನ ಮಗಳಿಗೂ ಕೂಡ ಆ ನಾಯಿ ಬಹಳ ಪ್ರೀತಿಯದಾಗಿರುತ್ತದೆ.

ಹೀಗೇ ಒಂದು ದಿನ ಫ್ರೊಫೆಸರರು ಬೆಳಗ್ಗೆ ಎಂದಿನಂತೆ ಕಾಲೇಜಿಗೆ ಹೊರಟಾಗ ಆ ನಾಯಿಯೂ ಅವರ ಜೊತೆಗೇ ಬರಲು ಹಠ ಮಾಡುತ್ತದೆ. ಅದನ್ನು ಕೂಡಿ ಹಾಕಿ ಹೋದರೂ ಅದು ತಪ್ಪಿಸಿಕೊಂಡು ರೈಲ್ವೆ ಸ್ಟೇಷನ್ನಿಗೆ ಬರುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ಅದು ಹಿಂದಿರುಗಿ ಹೋಗಲು ಒಪ್ಪದಿದ್ದಾಗ ಪ್ರೊಫೆಸರರು ಅದನ್ನು ಮನೆಗೆ ಕರೆದೊಯ್ದು ಬಿಟ್ಟು ಬರುತ್ತಾರೆ. ಆದರೆ ಅದು ಸಂಜೆ ಮತ್ತೆ ಸ್ಟೇಶನ್ನಿಗೆ ಹೋಗಿ ಅವರಿಗಾಗಿ ಕಾಯತೊಡಗುತ್ತದೆ. ಮಾರನೇ ದಿನವೂ ಅದರ ಹಠದಿಂದ ಅದನ್ನು ಅವರ ಜೊತೆಗೇ ರೈಲ್ವೆ ಸ್ಟೇಶನ್ನಿಗೆ ಕರೆದೊಯ್ಯುಬೇಕಾಗುತ್ತದೆ..ಅಲ್ಲಿ ಅದು ಆತ ಹೋಗುವವರೆಗೂ ಕಾದಿದ್ದು ವಾಪಸ್ಸು ಬರುತ್ತದೆ. ಮತ್ತೆ ಸಂಜೆ ಹೋಗಿ ಸ್ಟೇಶನ್ನಿನ ಮುಂದಿರುವ ಕಟ್ಟೆಯಲ್ಲಿ ಕಾಯುತ್ತಾ ಕೂರುತ್ತದೆ. ಆತ ವಾಪಸ್ಸು ಬಂದಾಗ ಅವನ ಜೊತೆ ಮನೆಗೆ ಹೊರಡುತ್ತದೆ. ಅದರ ಮಾರನೇ ದಿನವೂ ಇದೇ ಮರುಕಳಿಸುತ್ತದೆ. ಕ್ರಮೇಣ ಇದು ದಿನನಿತ್ಯದ ರೂಢಿಯಾಗುತ್ತದೆ. ಬೆಳಗ್ಗೆ ಫೊಫೆಸರನ ಜೊತೆ ಹೋಗಿ ಬರುವುದು, ಸಂಜೆ ಮತ್ತೆ ಹೋಗಿ ಆತನ ಜೊತೆ ಆಟವಾಡುತ್ತಾ ಮರಳಿ ಬರುವುದು. ಸುತ್ತಮುತ್ತಲಿನ ಅಂಗಡಿಗಳಿಗೆ, ವ್ಯಾಪಾರಿಗಳಿಗೆ ಅದು ಚಿರಪರಿಚಿತವಾಗುತ್ತದೆ. ವರ್ಷ ಉರುಳುತ್ತದೆ. ಒಂದು ದಿನ ಕಾಲೇಜಿಗೆ ಹೋದ ಪ್ರೊಫೆಸರರು ಅಲ್ಲಿಯೇ ಹೃದಯಾಘಾತದಿಂದ ತೀರಿಕೊಂಡುಬಿಡುತ್ತಾರೆ. ಅವತ್ತು ಸಂಜೆಯೂ ಹಾಚಿ ಅವರಿಗಾಗಿ ಕಾಯುತ್ತದೆ. ಆತ ಬರುವುದಿಲ್ಲ. ಫೊಫೆಸರರ ಅಳಿಯ ಬಂದು ಹಾಚಿಯನ್ನು ಕರೆದುಕೊಂಡುಹೋಗುತ್ತಾನೆ. ಆದರೆ ಅದು ಅವನ ಮನೆಯಿಂದ ತಪ್ಪಿಸಿಕೊಂಡು ತನ್ನ ಮನೆಗೆ ಹೋಗಿ ಅಲ್ಲಿಂದ ಸ್ಟೇಶನ್ನಿನ ದಾರಿ ಹಿಡಿಯುತ್ತದೆ. ಅಲ್ಲಿ ಬಂದು ಮತ್ತೆ ತನ್ನ ಎಂದಿನ ಜಾಗದಲ್ಲಿ ಕಾಯುತ್ತದೆ. ಫ್ರೊಫೆಸರ್ ಬರುವುದೇ ಇಲ್ಲ. ಸಂಜೆರೈಲಿನ ಸದ್ದಿಗೆ ಕಿವಿಕೊಡುತ್ತಾ, ಸ್ಟೇಶನ್ನಿನ ಬಾಗಿಲನ್ನೇ ಗಮನಿಸುತ್ತಾ, ಅಲ್ಲಿಂದ ಹೊರಬರುವವರಲ್ಲಿ ಫ್ರೊಫೆಸರನನ್ನು ಹುಡುಕುತ್ತಾ ಅದು ಅಲ್ಲೇ ಕಾಯುತ್ತದೆ..ದಿನವೂ ಅದೇ ಸಮಯಕ್ಕೆ ಅಲ್ಲಿ ಕಾಯುತ್ತದೆ..ಮುಂದಿನ ಒಂಭತ್ತು ವರ್ಷಗಳವರೆಗೆ ಪ್ರತಿದಿನ ಕಾಯುತ್ತಲೇ ಇರುತ್ತದೆ!

***

ಜಪಾನಿನ ಟೋಕಿಯೋದಲ್ಲಿ ಆದ ನಿಜಕತೆ ಇದು! ಆ ಫ್ರೊಫೆಸರನ ಹೆಸರು Hidesaburo Ueno. ಒಂಭತ್ತು ವರ್ಷ ಕಾದು ೧೯೩೫ರಲ್ಲಿ ಆ ನಾಯಿ ಅದೇ ಜಾಗದಲ್ಲಿ ಸಾಯುತ್ತದೆ. ೧೯೮೭ ರಲ್ಲಿ ಬಿಡುಗಡೆಯಾದ Seijirō Kōyama ನಿರ್ದೇಶನದ Hachikō Monogatari ಎಂಬ ಜಪಾನಿ ಭಾಷೆ ಸಿನೆಮಾವನ್ನು ೨೦೦೯ರಲ್ಲಿ ಇಂಗ್ಲೀಷಿಗೆ ರೀಮೇಕ್ ಮಾಡಿರುವ ಸಿನೆಮಾ ಇದು. ನಿರ್ದೇಶಕ Lasse Hallström. ಹಾಚಿಯ ನೆನಪಿಗಾಗಿ ಟೋಕಿಯೋದ ಶಿಬುಯಾ ರೈಲ್ವೆ ನಿಲ್ದಾಣದಲ್ಲಿ ಅದರ ಕಂಚಿನ ಪ್ರತಿಮೆ ಮಾಡಿಟ್ಟಿದ್ದಾರಂತೆ. ಪ್ರತಿವರ್ಷ ಏಪ್ರಿಲ್ ೮ರಂದು ಹಾಚಿಯ ನೆನಪಿಗಾಗಿ ಶಿಬುಯಾ ಸ್ಟೇಶನ್ನಿನ್ನಲ್ಲಿ ನೂರಾರು ಜನ ಸೇರಿ ಅದಕ್ಕೆ ಗೌರವ ಸಲ್ಲಿಸುತ್ತಾರಂತೆ. ಆ ಸ್ಟೇಶನ್ನಿನ ಪ್ರವೇಶದ್ವಾರಕ್ಕೆ Hachikō-guchi ಎಂದೇ ಹೆಸರಿಡಲಾಗಿದೆ.

Hachiko: A Dog's Story....ನಾಯಿಯ ನಿಯತ್ತು, ಮನುಷ್ಯ ಮತ್ತು ನಾಯಿಯ ನಡುವಿನ ಸ್ನೇಹಬಾಂಧವ್ಯದ ನಿಜಅನಾವರಣವಿದು. ನೋಡಿದ ಮೇಲೆ ನಿಮ್ಮ ಮನೆಯ ನಾಯಿಯಲ್ಲೂ 'ಹಾಚಿ' ಕಾಣತೊಡಗುವುದು ಖಂಡಿತ.

ಕಣ್ಣೀರು ತರಿಸುವ ಸಿನೆಮಾ.

*******

ನನಗೆ ಈ ಸಿನೆಮಾ ಸಲಹೆ ಮಾಡಿದ ಸೀಮಾ ಹೆಗಡೆಯವರಿಗೆ ಧನ್ಯವಾದಗಳು.

ಗುರುವಾರ 9 ಜೂನ್ 2011

'ನಯಾಗರ'ದಲ್ಲಿ ಒಂದು ದಿನ

ನಾನಿರುವ ಬರ್ಲಿಂಗ್ಟನ್ ಊರಿನಿಂದ ಪ್ರಸಿದ್ಧ ನಯಾಗರ ಫಾಲ್ಸ್ ೮೦ ಕಿ.ಮಿ. ದೂರವಿದೆ. ನಯಾಗರ ಬಗ್ಗೆ ಬಹಳ ಕೇಳಿದ್ದರಿಂದ ಅದರ ಬಗ್ಗೆ ಕುತೂಹಲವಿತ್ತು. ಬಹಳ ದಿನಗಳಿಂದ ಹೋಗಬೇಕು ಅಂದುಕೊಂಡಿದ್ದರೂ ಸಹ ವಾರದ ಕೊನೆಯ ದಿನಗಳಲ್ಲಿ ಹವಾಮಾನ ಅನುಕೂಲಕರವಾಗಿ ಇಲ್ಲದಿರುತ್ತಿದ್ದುದರಿಂದ ಹೋಗಲು ಆಗಿರಲಿಲ್ಲ. ಅಂತೂ ಕೊನೆಗೆ ಮೊನ್ನೆ ಭಾನುವಾರ ಕಾಲ ಕೂಡಿ ಬಂತು. ಹವಾಮಾನ ಮುನ್ಸೂಚನೆ ನೋಡಿಕೊಂಡು ಅವತ್ತು ’ಸನ್ನಿ ಡೇ’ ಎಂದು ಖಾತ್ರಿ ಮಾಡಿಕೊಂಡು ಬೆಳಗ್ಗೆ ಇಲ್ಲಿಂದ GO ಬಸ್ಸಿನಲ್ಲಿ ಹೊರಟು ಅಲ್ಲಿಗೆ ತಲುಪಿದೆವು. (ನಮ್ಮ ಕ.ರಾ.ರ.ಸಾ.ನಿ. ತರಹ ಇಲ್ಲಿ GO ಬಸ್ಸುಗಳು/ಟ್ರೈನುಗಳು). ಬಸ್ಸಿಳಿದು ಸ್ವಲ್ಪ ದೂರ ಕಾಲ್ನಡಿಗೆಯಲ್ಲಿ ಹೋಗಬೇಕು. ಅವತ್ತು ಒಳ್ಳೆಯ ಬಿಸಿಲಿತ್ತು. ಆದ್ದರಿಂದ ಜನರೂ ಬಹಳ ಇದ್ದರು. ಕ್ಲಿಫ್ಟನ್ ಹಿಲ್ ಎನ್ನುವ ರಸ್ತೆಯಲ್ಲಿ ಚಿತ್ರವಿಚಿತ್ರ ಅಂಗಡಿಗಳು, ಮ್ಯೂಸಿಯಂಗಳು, ಅಬ್ಬರದ ಕರ್ಕಶ ಸಂಗೀತ, ಪಾರ್ಕ್, ಮತ್ತೇನೇನೋ ಆಕರ್ಷಣೆಗಳನ್ನು ದಾಟಿ ಸ್ವಲ್ಪ ಕೆಳಗೆ ಇಳಿಯುತ್ತಿದ್ದಂತೇ ದೂರದಲ್ಲಿ ಎದುರಾದದ್ದು ನಯಾಗರ! ನೋಡಿದ ಕೂಡಲೇ ನನ್ನ ಮನಸ್ಸಿನಲ್ಲಿ ಜೋಗದೊಡನೆ ಹೋಲಿಕೆ ಶುರುವಾಗಿತ್ತು.


ನಯಾಗರ ಕೆನಡಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ ದೇಶಗಳ ಗಡಿಯಲ್ಲಿದೆ. ಗಡಿರೇಖೆ ಆ ಜಲಪಾತ ಮತ್ತು ನದಿಯ ಮೇಲೇ ಹಾದುಹೋಗುತ್ತದೆ. ಈರಿ ಮತ್ತು ಒಂಟಾರಿಯೋ ಸರೋವರಗಳ ನಡುವೆ ಹರಿಯುವ ನದಿಯಲ್ಲಿ ಈ ಜಲಪಾತವಿದೆ. ಇಲ್ಲಿ ಎರಡು ಜಲಪಾತಗಳಿವೆ. ಒಂದನ್ನು ಅಮೇರಿಕನ್ ಫಾಲ್ಸ್ ಎನ್ನುತ್ತಾರೆ. ಮತ್ತೊಂದು, ಕುದುರೆಲಾಳದಾಕಾರದಲ್ಲಿ ಇರುವುದು ಕೆನಡಾ ಕಡೆಯ ಜಲಪಾತ (ಹಾರ್ಸ್ ಶೂ ಫಾಲ್ಸ್). ನಯಾಗರ ಜಲಪಾತ ಬಹಳ ಎತ್ತರವಿಲ್ಲ. ಆದರೆ ಅಗಲ ಮತ್ತು ಬೀಳುವ ನೀರಿನ ಪ್ರಮಾಣ ಅಗಾಧ. ಕುದುರೆಲಾಳಾಕಾರದಲ್ಲಿ ಎಲ್ಲಾ ಕಡೆಯಿಂದ ಒಂದೇ ಪ್ರಮಾಣದಲ್ಲಿ ನೀರು ನೊರೆ ನೊರೆಯಾಗಿ ಬೀಳುತ್ತದೆ. ಅಲ್ಲೆಲ್ಲಾ ಇಬ್ಬನಿ ತುಂಬಿಕೊಂಡಿತ್ತು. ಆ ಜಾಗದಲ್ಲಿ ನೀರಿನ ಹನಿಗಳು ಹೊಗೆಹೊಗೆಯಂತೆ ಮೇಲೇಳುವುದು ತುಂಬಾ ಚಂದ. (ದೇವಲೋಕದಿಂದ ಗಂಗೆ ಭೂಮಿಗೆ ಧುಮುಕಿದಂತೆ ಕಾಣುತ್ತಿತ್ತು ಅಂತೆಲ್ಲಾ ಸುಮ್ ಸುಮ್ನೇ ಹೈಪ್ ಮಾಡಲ್ಲ :)). ನಯಾಗರದಲ್ಲಿ ಕೆನಡಾ ಮತ್ತು ಯು.ಎಸ್. ಸಂಪರ್ಕಿಸಲು ಒಂದು ಸೇತುವೆ ಇದೆ. ನೀರ್ಬೀಳು ಕೆನಡಾ ಕಡೆಗೆ ಮುಖ ಮಾಡಿರುವುದರಿಂದ ಅಮೆರಿಕಾದ ಕಡೆಗಿಂತ ಕೆನಡಾದ ಕಡೆಯಿಂದ ಪೂರ್ಣ ಮತ್ತು ಸುಂದರವಾಗಿ ಕಾಣುತ್ತದಂತೆ. ಅದಕ್ಕೇ ಅಲ್ಲಿಂದಲೂ ಜನ ಈ ಕಡೆ ಬಂದು ನೋಡುತ್ತಾರಂತೆ.

ಕೆನಡಾ ಮತ್ತು ಯು.ಎಸ್.ಎ ಸಂಪರ್ಕಿಸುವ ರೇನ್ ಬೋ ಸೇತುವೆ

ನಯಾಗರ ಅಮೆರಿಕನ್ ಫಾಲ್ಸ್

ಮೇಯ್ಡ್ ಆಫ್ ದಿ ಮಿಸ್ಟ್ ದೋಣಿಯಲ್ಲಿ ಜಲಪಾತದ ಬುಡದವರೆಗೆ ಕರೆದುಕೊಂಡು ಹೋಗುತ್ತಾರೆ, ಹತ್ತಿರದಿಂದ ನೋಡಬಹುದು. ಆ ದೋಣಿಯಲ್ಲಿ ಕುದುರೆಲಾಳದ ಒಳಗೆ ಹೋದಾಗ ಸುತ್ತಲೂ ಎಲ್ಲಾ ಬಿಳಿಬಿಳಿ ನೀರಿನ ಜಗತ್ತು ! ಮಳೆಯಂತೆ ಹನಿಗಳ ಸಿಂಚನ. ಒಂದು ದೊಡ್ಡ ನೀರಿನ ಕೋಟೆಯೊಳಗೆ ನಿಂತಂತೆ ಅನ್ನಿಸುತ್ತಿತ್ತು. ಒಂಥರಾ fantasy ಲೋಕದಂತಿತ್ತು. ಇದು ಖುಷಿಕೊಟ್ಟ ಅನುಭವ. ಅದಾದ ಮೇಲೆ 'ಜರ್ನಿ ಬಿಹೈಂಡ್ ದಿ ಫಾಲ್ಸ್' (ಸುರಂಗದೊಳಗಿಂದ ಜಲಪಾತ ಹಿಂದಕ್ಕೆ ಹೋಗಿನೋಡುವುದು) ಮುಂತಾದ ಚಟುವಟಿಕಗಳನ್ನು ಮುಗಿಸಿದೆವು. ಅನಂತರ ಪಕ್ಕದಲ್ಲಿರುವ ಉದ್ಯಾನದಲ್ಲಿ ಕೂತು ಊಟ ಮಾಡಿ ವಿಶ್ರಾಂತಿ ತೆಗೆದೆವು. ನಯಾಗಾರವನ್ನು ಒಂದು ಮುಖ್ಯ ಪ್ರವಾಸಿ/ಮನರಂಜನಾ ತಾಣವಾಗಿ ನಿರ್ವಹಿಸಿಟ್ಟಿದ್ದಾರೆ. ಹೆಲಿಕಾಪ್ಟರ್ ರೈಡ್, ವೈಟ್ ವಾಟರ್ ವಾಕ್, ವರ್ಲ್ ಪೂಲ್, ವಿವಿಧ ಪಾರ್ಕುಗಳು ಮುಂತಾದ ಬಹಳ ಚಟುವಟಿಕೆಗಳು, ಆಕರ್ಷಣೆಗಳಿವೆ. ಸುಮಾರು ಕೆಸಿನೋಗಳಿವೆ. ಅಲ್ಲಿನ ರಸ್ತೆಗಳಲ್ಲಿ ಒಂದಿಷ್ಟು ಸುತ್ತಾಡಿದೆವು. ಸಂಜೆಯಾಗುತ್ತಿತ್ತು. ಕತ್ತಲಾದ ಮೇಲೆ ಬಣ್ಣ ಬಣ್ಣದ ದೀಪಗಳನ್ನು ಹಾಕುತ್ತಾರಂತೆ. ಆಗಿನ ನೋಟ ಇನ್ನೂ ಅದ್ಭುತವಂತೆ. ನೋಡಬೇಕೆಂಬ ಆಸೆಯೇನೋ ಇತ್ತು. ಆದರೆ ಬೆಳಗ್ಗಿಂದ ತಿರುಗಿ ಸುಸ್ತಾಗಿದ್ದರಿಂದ ಮತ್ತು ನಮ್ಮ ಬಸ್ ತಪ್ಪಿಹೋದರೆ ತೊಂದರೆಯಾಗುತ್ತಿದ್ದುದರಿಂದ ವಾಪಸ್ ಹೊರಟೆವು.

ನಯಾಗರ ಕುದುರೆಲಾಳ ಜಲಪಾತ

ಆವತ್ತು ಜಾಸ್ತಿ ಜನ ಇದ್ದುದರಿಂದ ಹೊರಡುವ ಸ್ಥಳದಿಂದಲೇ ಎಲ್ಲಾ ಸೀಟನ್ನೂ ತುಂಬಿಕೊಂಡು ಬಂತು ಬಸ್ಸು. ನಮ್ಮ ಸ್ಟಾಪಿಗೆ ಬಂದಾಗ ನಾವು ಸುಮಾರು ಜನ ಬಸ್ಸು ಕಾಯುತ್ತಿದ್ದುದನ್ನು ನೋಡಿ ಡ್ರೈವರ್ ವಿಷಾದಿಸಿದ. ನಮಗ್ಯಾರಿಗೂ ಸೀಟಿರಲಿಲ್ಲ. ಮುಂದಿನ ಬಸ್ಸಿಗೆ ಇನ್ನೂ ಒಂದುವರೆ ತಾಸು ಕಾಯಬೇಕಿತ್ತು. ನಿಂತುಕೊಂಡು ಪ್ರಯಾಣ ಮಾಡುವುದಿದ್ದರೆ ಬನ್ನಿ, ಈಗಲೇ ಹೇಳಿದ್ದೇನೆ, ಸೀಟಿಲ್ಲ, ಸ್ಸಾರಿ ಸ್ಸಾರಿ ಎಂದು ಮೂರ್ನಾಲ್ಕು ಬಾರಿ ಹೇಳಿದ. ಬಿಳಿಯರು ಯಾರೂ ಬಸ್ ಹತ್ತಲಿಲ್ಲ. ನಾವು ಒಂದಿಷ್ಟು ಜನ ಭಾರತದವರು, ನೀನ್ಯಾಕ್ ಅಷ್ಟೆಲ್ಲಾ ಬೇಜಾರ್ ಮಾಡ್ಕೋತೀಯಾ, ಇದೆಲ್ಲಾ ನಮಗೆ ಮಾಮೂಲು ಅಂತ ಅಂದುಕೊಂಡು ಬಸ್ ಹತ್ತಿದೆವು. ಆ ಬಸ್ಸು ಅಲ್ಲಿನ ಹಳ್ಳಿಗಳಲ್ಲೆಲ್ಲಾ ಹಾದು ನಮ್ಮನ್ನು ತಂದುಬಿಡುವಷ್ಟರಲ್ಲಿ ರಾತ್ರಿಯಾಗಿತ್ತು.

***

ಅಮೇರಿಕ ಕಡೆಯಿಂದ ಹಂಸಾನಂದಿಯವರ ಪ್ರವಾಸ ಬರಹ : ನಯಾಗರ ಫಾಲ್ಸ್ ನಲ್ಲಿ ಮಸಾಲೆ ದೋಸೆ ಗಾಡಿ!

***

Useful external links

೧. Attractions in the Niagara falls area

ಗುರುವಾರ 5 ಮೆ 2011

Kannada typing in computer

ಕಂಪ್ಯೂಟರ್ ನಲ್ಲಿ ಕನ್ನಡ ಟೈಪ್ ಮಾಡುವುದು...

ನಾನು ಕಂಪ್ಯೂಟರ್ ತಗೊಂಡಿದ್ದು ಸುಮಾರು ಹತ್ತು ವರ್ಷಗಳ ಹಿಂದೆ ಇರಬಹುದು. ಆಗ ಕಂಪ್ಯೂಟರ್ ನಲ್ಲಿ ಕನ್ನಡ ಟೈಪ್ ಮಾಡುವುದು ಎನ್ನುವ ವಿಷಯ ನನಗೆ ಹೊಸದಾಗಿತ್ತು. ನನ್ನ ಗಣಕದಲ್ಲಿ ’ಬರಹ’ ಮತ್ತು ’ನುಡಿ’ ತಂತ್ರಾಂಶಗಳನ್ನೂ ಅಳವಡಿಸಿಕೊಂಡಿದ್ದ ನೆನಪು. ಆದರೆ ನಾನು ಕನ್ನಡದಲ್ಲಿ ಅಪರೂಪಕ್ಕೆ ಬರೆದರೂ ಕಾಗದದ ಮೇಲೆ ಬರೆಯುತ್ತಿದ್ದುದರಿಂದ ಕಂಪ್ಯೂಟರ್ ನಲ್ಲಿ ಬರೆಯುವ ಪ್ರಮೇಯವಿರಲಿಲ್ಲ. ಆದ್ದರಿಂದ ಕನ್ನಡ ಟೈಪಿಸುವ ತಂತ್ರಾಂಶಗಳು ಯಾವಾಗಲಾದರೊಮ್ಮೆ ಸುಮ್ಮನೇ ಕುತೂಹಲಕ್ಕಷ್ಟೇ ಆಗಿತ್ತು. 'ಬರಹ 'ತಂತ್ರಾಂಶದ ANSI fontಗಳನ್ನು ಬಳಸಿ ಮೈಕ್ರೋಸಾಫ್ಟ್ ವರ್ಡ್ ನಲ್ಲಿ ಕೆಲವು ಕಡತಗಳನ್ನು ಟೈಪಿಸಿದ್ದು ನೆನಪಿದೆ. ಆಗ ಅಂತರಜಾಲವೂ ಕೂಡ ಇಷ್ಟು ವ್ಯಾಪಕವೂ ಆಗಿರಲಿಲ್ಲ ಮತ್ತು ನಮಗೂ ಅಷ್ಟು ನಿಲುಕಿರಲಿಲ್ಲ. ಆಮೇಲಿನ ದಿನಗಳಲ್ಲಿ ಎಲ್ಲ ಕಡೆಗಳಲ್ಲೂ ಹೊಂದುವಂತಹ ಅಂತಾರಾಷ್ಟ್ರೀಯ ಸ್ಟ್ಯಾಂಡರ್ಡಿನ ಯುನಿಕೋಡ್ * ಫಾಂಟುಗಳು ತಯಾರಾದವು. ಬರಹ, ನುಡಿ ತಂತ್ರಾಂಶಗಳು ಯುನಿಕೋಡ್ ಅಕ್ಷರಗಳನ್ನು ಟೈಪಿಸುವ ಸವಲತ್ತುಗಳನ್ನು ಒದಗಿಸಿಕೊಟ್ಟವು. ಆರ್ಕುಟ್ ಮತ್ತು ಬ್ಲಾಗ್ ಗಳಲ್ಲಿ ಕನ್ನಡ ಯುನಿಕೋಡ್ ನ ಬರಹಗಳು ಕಾಣಿಸತೊಡಗಿದವು. ಅಂತರಜಾಲದ ಬಳಕೆ ಹೆಚ್ಚಿದ ಮೇಲೆ ಕಂಪ್ಯೂಟರ್ ನಲ್ಲಿ ಕನ್ನಡ ಬರೆಯುವುದು ಹೆಚ್ಚುತ್ತಾ ಹೋಯಿತು. ಹಳೆಯ ಆಪರೇಟಿಂಗ್ ಸಿಸ್ಟಮ್ (O.S) ಮತ್ತು ಕೆಲವು ಬ್ರೌಸರ್ ಗಳಲ್ಲಿ ಕನ್ನಡ ಕಾಣಿಸಲು ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬೇಕಾಗಿತ್ತು.

ಈಗ ಅದೆಲ್ಲಾ ಹಳೆಯ ಕತೆಯಾಗಿದೆ. ಎಲ್ಲಾ ಒಂದು ಹಂತಕ್ಕೆ ಬಗೆಹರಿದಿದೆ. ಎಲ್ಲಾ O.S.ಗಳೂ, ಬ್ರೌಸರ್ ಗಳೂ ಭಾರತೀಯ ಲಿಪಿಗಳ ಫಾಂಟುಗಳನ್ನು ಬೆಂಬಲಿಸುತ್ತವೆ. ನಾವು ಅನಿವಾರ್ಯವಾಗಿ ಬಳಸುವ ಇಂಗ್ಲೀಷ್ ಅಕ್ಷರಗಳಿರುವ ಕೀಲಿಮಣೆಯ ಮೂಲಕವೇ ಕನ್ನಡವನ್ನು ಟೈಪಿಸಲು ಆಗುವ ಹಲವಾರು ಟೂಲ್ ಗಳು ಇವೆ. ಇಂಗ್ಲೀಷ್ ಟೈಪ್ ಮಾಡಿದಷ್ಟೇ ಸುಲಭವಾಗಿ ಇವತ್ತು ಕನ್ನಡವನ್ನು ಟೈಪ್ ಮಾಡಬಹುದು. ಸದ್ಯಕ್ಕೆ ಕನ್ನಡ ಟೈಪಿಂಗನ್ನು ಇದಕ್ಕಿಂತಲೂ ಅನುಕೂಲ ಮಾಡಲಿಕ್ಕಾಗುವುದಿಲ್ಲ ಅನ್ನಿಸುತ್ತದೆ.

*************************

ಕನ್ನಡ ಟೈಪಿಂಗಿಗೆ ಮುಖ್ಯವಾಗಿ ನಾಲ್ಕು ಬಗೆಯ ಕೀಲಿಮಣೆ ವಿನ್ಯಾಸಗಳಿವೆ (keyboard layouts). ಇವುಗಳಲ್ಲಿ ಯಾವುದಾದರೊಂದನ್ನು ಬಳಸಬಹುದು.  ಕೀಲಿಮಣೆ ವಿನ್ಯಾಸವೆಂದರೆ ಯಾವ ಕನ್ನಡ ಅಕ್ಷರ ಮೂಡಿಸಲು ಯಾವ ಕೀ ಒತ್ತಬೇಕು ಎಂಬುದರ ವಿನ್ಯಾಸ. ಅಷ್ಟೆ. 

೧. ಫೊನೆಟಿಕ್ * ಕೀಲಿಮಣೆ:  ಕನ್ನಡವನ್ನು ಇಂಗ್ಲೀಷಿನಂತೆ ಟೈಪ್ ಮಾಡುವುದು. ಅಂದರೆ ’ಕನ್ನಡ’ ಎಂದು ಬರೆಯಬೇಕಾದರೆ kannaDa ಎಂದು ಟೈಪಿಸಬೇಕು. ಇದು 'ಟ್ರಾನ್ಸ್ ಲಿಟೆರೇಶನ್ * ಕೀಲಿಮಣೆ' ಎಂದೂ ಗುರುತಿಸಲ್ಪಡುತ್ತದೆ. 'ಬರಹ ಕೀಲಿಮಣೆ' ಎಂದರೂ ಇದೇ ಎನ್ನಬಹುದು. ವಿನ್ಯಾಸ ಹೀಗಿದೆ: www.baraha.com/help/Keyboards/kan_phonetic.htm

೨. ಕೆ.ಪಿ.ರಾವ್ ಅಥವಾ ಕನ್ನಡ ಗಣಕ ಪರಿಷತ್ತು (ಕಗಪ) ಕೀಲಿಮಣೆ: ಇದೂ ಕೂಡ ಬಹುತೇಕ ಇಂಗ್ಲೀಷಿನ ಕೀಲಿಮಣೆಗೆ ಅನುಗುಣವಾಗಿದೆ. ಒಂದೊಂದು ಕೀಲಿಗೂ ಒಂದೊಂದು ಕನ್ನಡ ಅಕ್ಷರಗಳನ್ನು ನಿಗದಿ ಮಾಡಲಾಗಿದೆ. k ಗೆ ಕ, j ಗೆ ಜ, ಉ ಗೆ u .. ಹೀಗೆ.  ಕನ್ನಡ ಪದಗಳನ್ನು ಇಂಗ್ಲೀಷಿನಂತೆ ಟೈಪ್ ಮಾಡುವುದು ಬೇಕಾಗಿಲ್ಲ. 'ಗಣಕ' ಎಂದು ಬರೆಯಲು gNk  ಒತ್ತಿದರಾಯ್ತು.  ಇದು ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸ.  www.baraha.com/help/Keyboards/kan_brhkbd.htm

೩. ಟೈಪ್ ರೈಟಿಂಗ್ ಕೀಲಿಮಣೆ: ಹಿಂದೆ ಬಳಸುತ್ತಿದ್ದ ಕನ್ನಡ ಬೆರಳಚ್ಚು ಯಂತ್ರದ (ಟೈಪ್ ರೈಟಿಂಗ್ ಮೆಶೀನ್) ಕೀಲಿಮಣೆ. ಕನ್ನಡ ಟೈಪ್ ರೈಟಿಂಗ್ ಕಲಿತವರಿಗೆ ಇದು ಅನುಕೂಲ.

೪. ಇನ್ ಸ್ಕ್ರಿಪ್ಟ್ (inscript) ಕೀಲಿಮಣೆ: www.baraha.com/help/Keyboards/kan_inscript.htm - ಇದು ಇಂಗ್ಲೀಷ್ ಕೀಲಿಮಣೆಗೆ ಸಂಬಂಧವಿಲ್ಲದಂತ ಬೇರೆ ವಿನ್ಯಾಸ.  C-DAC ಸಂಸ್ಥೆ ಅಭಿವೃದ್ಧಿ ಪಡಿಸಿ ಭಾರತ ಸರ್ಕಾರದಿಂದ ಅಧಿಕೃತಗೊಳಿಸಿದ ಕೀಲಿಮಣೆ. www.java.sun.com/products/jfc/tsc/articles/InputMethod/indiclayout.html

ಇವು ನಾಲ್ಕರಲ್ಲಿ ಹೆಚ್ಚಾಗಿ ಬಳಸಲ್ಪಡುತ್ತಿರುವುದು ಮೊದಲಿನ ಎರಡು ವಿನ್ಯಾಸಗಳಾದರೂ ಕೂಡ, ಹೆಚ್ಚು ಟೈಪ್ ಮಾಡುವ ಕೆಲಸವಿರುವವರು ಕೊನೆ ಎರಡು ಕೀಲಿಮಣೆ ಕಲಿತು ಬಳಸಿದರೆ ವೇಗವಾಗಿ ಟೈಪ್ ಮಾಡಬಹುದು ಅಂತ ಬಲ್ಲವರು ಹೇಳುತ್ತಾರೆ. ಅದು ವೈಯಕ್ತಿಕ ಆಯ್ಕೆಗೆ ಬಿಟ್ಟದ್ದು.

***

ಕೀಲಿಮಣೆ ವಿನ್ಯಾಸದ ಬಗ್ಗೆ ಆಯಿತು. ಈಗ ಕನ್ನಡ ಟೈಪಿಸಲು ಬಳಸಬಹುದಾದ ತಂತ್ರಾಂಶಗಳನ್ನು ನೋಡೋಣ. ಇದಿಷ್ಟು ದಿನಗಳಲ್ಲಿ ನಾನು ಗಮನಿಸಿದ, ಬಳಸಿದ, ಬಳಸುತ್ತಿರುವ ಕೆಲವು ಕನ್ನಡ ಟೈಪಿಂಗ್ ಟೂಲ್ ಗಳನ್ನು ಪಟ್ಟಿ ಮಾಡಿದ್ದೇನೆ. ಎಲ್ಲಾ ತಂತ್ರಾಂಶಗಳೂ/ಟೂಲ್ ಗಳೂ ಮೇಲೆ ಹೇಳಿರುವ ಒಂದು ಅಥವಾ ಹೆಚ್ಚು ಬಗೆಯ ಕೀಲಿಮಣೆ ವಿನ್ಯಾಸವನ್ನು ಬಳಸಿ ಟೈಪಿಸಲು ಆಯ್ಕೆಗಳನ್ನು ಕೊಡುತ್ತವೆ.

I. ಆಫ್ ಲೈನ್ ತಂತ್ರಾಂಶಗಳು: ಇವುಗಳನ್ನು ಬಳಸಲು ಅಂತರಜಾಲ ಸಂಪರ್ಕ ಬೇಕಿರುವುದಿಲ್ಲ. ನಮ್ಮ ಕಂಪ್ಯೂಟರ್ ನಲ್ಲಿ  ತಂತ್ರಾಂಶ ಅಳವಡಿಸಿಕೊಂಡರೆ ಆಯಿತು. (install).

೧. ಬರಹ:- http://www.baraha.com/ ಇದರಲ್ಲಿ 'ಬರಹ ಕೀಲಿಮಣೆ' ಎಂದೇ ಹೆಸರಾಗಿರುವ ಫೊನೆಟಿಕ್ ಕೀಲಿಮಣೆ ಮೂಲಕ ಟೈಪಿಸಬಹುದು. 'ಕಗಪ & ಇನ್ ಸ್ಕ್ರಿಪ್ಟ್ ಕೀಲಿಮಣೆ'ಯ ಆಯ್ಕೆಯೂ ಇದೆ. ಯುನಿಕೋಡ್ ಮತ್ತು non-ಯುನಿಕೋಡ್ ಫಾಂಟ್ಸ್ ಇವೆ.

೨. ನುಡಿ:- http://www.kagapa.org/ ಕಗಪ ಕೀಲಿಮಣೆ ಮೂಲಕ ಟೈಪಿಸಬಹುದು. ಯುನಿಕೋಡ್ ಮತ್ತು non-ಯುನಿಕೋಡ್ ಫಾಂಟ್ಸ್ ಇವೆ.

೩. ಪದ:- http://www.pada.co.in/ ಫೊನೆಟಿಕ್/ಟ್ರಾನ್ಸ್ ಲಿಟೆರೇಶನ್, ಕಗಪ ಕೀಲಿಮಣೆ ಸೌಲಭ್ಯವಿದೆ. ಯುನಿಕೋಡ್  ಟೈಪಿಸಬಹುದು.

ಈಮೇಲಿನ ಮೂರು ತಂತ್ರಾಂಶಗಳಲ್ಲಿ ಟೈಪಿಸಿದ ಅಕ್ಷರಗಳನ್ನು ಎಡಿಟ್ (ಬಣ್ಣ, ಗಾತ್ರ, ಹಿನ್ನೆಲೆ etc.,) ಮಾಡುವುದು, ಫೈಲ್ ಗಳನ್ನು ಬೇರೆ ಬೇರೆ ಮಾದರಿಗಳಲ್ಲಿ ಉಳಿಸುವುದು (save as), ಫಾಂಟ್ ಪರಿವರ್ತನೆ (font convert) ಮುಂತಾದ ಸವಲತ್ತುಗಳಿವೆ. ಬರಹ, ನುಡಿಗಳಲ್ಲಿ ಬೇರೆ ಬೇರೆ ರೀತಿಯ non unicode ಅಕ್ಷರ ಶೈಲಿಗಳ (font types) ಸೌಲಭ್ಯಗಳಿವೆ.

೪. ವಿಂಡೋಸ್ ಇಂಡಿಕ್ ಇನ್ ಪುಟ್ :- www.bhashaindia.com/Downloads/pages/home.aspx - ಯಾವ ಹೊರ ತಂತ್ರಾಂಶದ ಅಗತ್ಯವೂ ಇಲ್ಲದಂತೆ ಕನ್ನಡ ಟೈಪ್ ಮಾಡಲು ವಿಂಡೋಸ್ ನಲ್ಲೇ ಸೌಲಭ್ಯ ಇರುತ್ತದೆ.  ಕಂಟ್ರೋಲ್ ಪ್ಯಾನಲ್ ಗೆ ಹೋಗಿ ಕನ್ನಡ ಕೀಲಿಮಣೆ ಸೇರಿಸಿಕೊಳ್ಳಬೇಕಾಗುತ್ತದೆ ಅಷ್ಟೆ. (ಕೀಲಿಮಣೆ ಸೇರಿಸುವುದು ಹೇಗೆ ಎಂದು ತಿಳಿಯಲು ಮೇಲಿನ ಕೊಂಡಿಗೆ ಹೋಗಿ help document ನೋಡಿ ಅಥವಾ ಇಲ್ಲಿ ಚಿಟುಕಿ).  ಮಾಮೂಲಾಗಿ ವಿಂಡೋಸ್ O.S.ನಲ್ಲಿ ಇನ್ ಸ್ಕ್ರಿಪ್ಟ್ ಕೀಲಿಮಣೆ ಇರುತ್ತದೆ. ಈ ತಂತ್ರಾಂಶ ಅಳವಡಿಸಿಕೊಂಡರೆ ನಾಲ್ಕೂ ಬಗೆಯ ಕೀಲಿಮಣೆ ಸೌಲಭ್ಯ ದೊರೆಯುತ್ತದೆ.

೫. ಗೂಗಲ್  ಟ್ರಾನ್ಸ್ ಲಿಟೆರೇಶನ್ IME :- www.google.com/ime/transliteration ಟ್ರಾನ್ಸ್ ಲಿಟೆರೇಶನ್ ಕೀಲಿಮಣೆ ಮೂಲಕ ಟೈಪಿಸಬಹುದು.

ಮೇಲಿನ  ಐದು ತಂತ್ರಾಂಶಗಳಲ್ಲಿ IME (input method editor) on ಮಾಡಿಟ್ಟುಕೊಂಡು word, excel, ppt ಮುಂತಾದ ಬೇರೆ ಬೇರೆ ಅಪ್ಲಿಕೇಶನ್ ಗಳಲ್ಲಿ, ವೆಬ್ ಸೈಟ್, ಚಾಟ್ ಎಲ್ಲಾ ಕಡೆ ನೇರವಾಗಿ ಕನ್ನಡ ಟೈಪಿಸಬಹುದು. ಕನ್ನಡ ಮತ್ತು ಇಂಗ್ಲೀಷಿನ ಮಧ್ಯೆ toggle ಮಾಡುತ್ತಾ ಬಳಸಿಕೊಳ್ಳಬಹುದು. (ಬರಹ ಡೈರೆಕ್ಟ್, ನೇರ ನುಡಿ, ಪದ IME )

೬. ಪ್ರಮುಖ್ ಟೈಪ್ ಪ್ಯಾಡ್ :- www.service.vishalon.net/pramukhtypepad.htm - Download for Offline Use : ಆಫೀಸಿನಲ್ಲೋ, ಮತ್ತೆಲ್ಲೋ ನಿಮ್ಮ ಕಂಪ್ಯೂಟರ್ ಗೆ ಯಾವ ಸಾಫ್ಟ್ ವೇರ್ ಅಳವಡಿಸಿಕೊಳ್ಳಲೂ ಅಡ್ಮಿನ್ ರೈಟ್ಸ್ ಇಲ್ಲ ಎಂದಾಗ ಮತ್ತು ಅಂತರಜಾಲ ಸಂಪರ್ಕ ಕೂಡ ಇಲ್ಲ ಎಂದಾಗ ಇದನ್ನು ಇಟ್ಟುಕೊಂಡು ಕನ್ನಡ ಟೈಪ್ ಮಾಡಬಹುದು.


II. ಆನ್ ಲೈನ್ ಟೂಲ್ ಗಳು: ಅಂತರಜಾಲ ಸಂಪರ್ಕವಿರುವಾಗ ಮಾತ್ರ ತೆಗೆದು ಬಳಸಲು ಸಾಧ್ಯ.

ಈ ಕೆಳಗಿನವು ಟ್ರಾನ್ಸ್ ಲಿಟೆರೇಶನ್ ಟೂಲ್ ಗಳು. ಕನ್ನಡವನ್ನು ಇಂಗ್ಲೀಷಿನಲ್ಲಿ ಟೈಪ್ ಮಾಡಿ ಸ್ಪೇಸ್ ಬಾರ್ ಒತ್ತಿದ ಅನಂತರ ಕನ್ನಡ ಅಕ್ಷರಗಳಾಗಿ/ಪದಗಳಾಗಿ ರೂಪಾಂತರ ಹೊಂದುತ್ತವೆ. ಪದಗಳು ತಪ್ಪಾಗಿಯೂ ಬರಬಹುದು. ಇದು ಟೈಪ್ ಮಾಡುವವರ ಟೈಪಿಂಗ್ ತಿಳುವಳಿಕೆಯ ಮೇಲೆ ಮತ್ತು ತಂತ್ರಾಂಶದ ಬುದ್ಧಿವಂತಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಅದು ಹಲವು ಸಲಹೆಗಳನ್ನೂ ಕೊಡುತ್ತದೆ, ತಪ್ಪಾಗಿ ಬಂದರೆ ನಾವು ಸರಿಪಡಿಸಬೇಕಾಗುತ್ತದೆ.

೧. ಗೂಗಲ್ ಟ್ರಾನ್ಸ್ ಲಿಟೆರೇಶನ್ www.google.com/transliterate/kannada

ಗೂಗಲ್ ನವರು transliteration bookmarklets ಎಂಬ ಟೂಲ್ ಕೂಡ ಕೊಟ್ಟಿದ್ದಾರೆ. ಅದನ್ನು ನಮ್ಮ ಬ್ರೌಸರಿನ ಫೇವರೆಟ್ ಬಾರ್ ನಲ್ಲಿ ಹಾಕಿಕೊಂಡಿದ್ದರೆ ಬೇಕಾದಾಗ ಆನ್ ಮಾಡಿಕೊಂಡು ಯಾವುದೇ ಜಾಲತಾಣದಲ್ಲಾದರೂ ಕೂಡ ಕನ್ನಡ ಟೈಪಿಸಬಹುದು. ವಿವರಗಳು ಇಲ್ಲಿವೆ : www.t13n.googlecode.com/svn/trunk/blet/docs/help.html#Save

೨. ತಮಿಳ್ ಕ್ಯೂಬ್ www.tamilcube.com/translate/kannada.aspx

೩. ಕ್ವಿಲ್ ಪ್ಯಾಡ್ http://www.quillpad.in/editor.html

೪. ಮೈಕ್ರೋಸಾಫ್ಟ್ www.specials.msn.co.in/ilit/Kannada.aspx


ಈ ಕೆಳಗಿನವುಗಳಲ್ಲಿ ಟೈಪ್ ಮಾಡಿದಾಗ ನೇರವಾಗಿ ಕನ್ನಡ ಅಕ್ಷರಗಳೇ ಮೂಡುತ್ತವೆ. ಇಂಗ್ಲೀಷ್ ಅಕ್ಷರಗಳ ಮಧ್ಯಸ್ಥಿಕೆ ಬೇಕಾಗುವುದಿಲ್ಲ. ಅಂತರಜಾಲದ ಮೂಲಕ ಕನ್ನಡ ಟೈಪಿಸುವವರು ಇವುಗಳನ್ನು ಬಳಸುವುದು ಒಳ್ಳೆಯದು. ಹೆಚ್ಚಿನ ಎಲ್ಲವೂ ಫೊನೆಟಿಕ್ ಕೀಲಿಮಣೆ ವಿನ್ಯಾಸವನ್ನು ಹೊಂದಿವೆ.

೧ . ಕನ್ನಡ ಸ್ಲೇಟ್ http://www.kannadaslate.com/

೨ . ಯಂತ್ರಂ http://type.yanthram.com/kn/

೩ . ವೆಬ್ ದುನಿಯಾ www.utilities.webdunia.com/kannada/transliteration.html

೪ . ಮಾನ್ಯುಸಾಫ್ಟ್ www.service.monusoft.com/KannadaTypePad.htm

೫ . ಪ್ರಮುಖ್ www.service.vishalon.net/pramukhtypepad.htm

೬ . ಲಿಪಿಕಾರ್ www.lipikaar.com/editor/kannada

೭ . ಮೈ ಲ್ಯಾಂಗ್ವೇಜ್ www.mylanguages.org/kannada_phonetic_keyboard.php

ಮೇಲಿನ ಟೂಲ್ ಗಳಲ್ಲಿ ಕೆಲವು ಕೇವಲ ಅಕ್ಷರ ಟೈಪಿಸಲು ಮಾತ್ರ ಅವಕಾಶ ಕೊಟ್ಟರೆ, ಇನ್ನು ಕೆಲವು ಎಡಿಟಿಂಗ್ (ಅಕ್ಷರಗಳ ಬಣ್ಣ, ಗಾತ್ರ ಮುಂತಾದ ಬದಲಾವಣೆಗಳು) ಮಾಡಲು ಸಾಧ್ಯ ಮಾಡಿಕೊಡುತ್ತವೆ.

****

ಲಿನಕ್ಸ್ ನಲ್ಲಿ ಕನ್ನಡ ಟೈಪಿಸಲು O.S.ನಲ್ಲೇ ಟೂಲ್ ಗಳು ಇವೆ. ಹೇಗೆಂದು ತಿಳಿಯಲು ಇದನ್ನು ಓದಿ :
ನಮಗೆ ಬೇಕಾದ ಹಾಗೆ ಕೀಲಿಮಣೆ ವಿನ್ಯಾಸ ಮಾಡಿಕೊಳ್ಳಲು ಅವಕಾಶವೂ ಇದೆ. ಆದರೆ ಬೇರೆ ಬೇರೆ ರೀತಿಯ text editingಗೆ ಹೊರ ತಂತ್ರಾಂಶಗಳು ಬೇಕಾಗಬಹುದು.

Macintosh O.S.ನಲ್ಲಿ ಕನ್ನಡ ಸೇರಿಸುವ ಬಗ್ಗೆ ಇಲ್ಲಿ ಓದಿ:
www.imacusers.com/adding-kannada-support-to-mac-os-x


ಕಂಪ್ಯೂಟರ್ ನಲ್ಲಿ ಕನ್ನಡ ಅಂದ್ರೆ ಬರೀ ಕನ್ನಡ ಟೈಪಿಸೋದು ಮಾತ್ರ ಅಲ್ಲ, ಇನ್ನೂ ಮಾಡಬೇಕಾಗಿರುವ ಬಹಳಷ್ಟು ಕೆಲಸಗಳಿವೆ, ನಾವು ಹಿಂದುಳಿದಿದ್ದೇವೆ ಅಂತ  ಗಣಕತಜ್ಞ 'ಪವನಜ' ಅವರು ಯಾವಾಗಲೂ ಹೇಳ್ತಾ ಇರ್ತಾರೆ. ಈ ಬಗ್ಗೆ ಬರೆದಿದ್ದಾರೆ. ಅದು ಇಲ್ಲಿದೆ: ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ -ಅಂದು, ಇಂದು, ಮುಂದು


****

So....ಕನ್ನಡ ಟೈಪಿಂಗ್ ಕಷ್ಟ, ಕನ್ನಡ ಟೈಪ್ ಮಾಡೋಕೆ ಯಾವುದೂ ಸರಿಯಾದ ಟೂಲೇ ಇಲ್ಲ .. ಅದೂ ಇದೂ ಅಂತ ಯಾರೂ ನೆಪ ಹೇಳುವ ಹಾಗಿಲ್ಲ. ನಿಮಗ್ಯಾವುದಿಷ್ಟನೋ ಆ ಟೂಲ್ ಸೆಲೆಕ್ಟ್ ಮಾಡ್ಕೊಳ್ಳಿ. ಶುರು ಹಚ್ಕೊಳ್ಳಿ.. :)

=================================================

  •  *ಟ್ರಾನ್ಸ್ಲಿಟೆರೇಶನ್ (transliteration) = ಲಿಪ್ಯಂತರ = ಒಂದು ಭಾಷೆಯ ಲಿಪಿಯನ್ನು ಮತ್ತೊಂದು ಭಾಷೆಯ ಲಿಪಿಯಾಗಿಸುವುದು.  
  •  *ಫೊನೆಟಿಕ್(phonetic) = ಧ್ವನ್ಯಾತ್ಮಕ = ನಾವು ಹೇಗೆ ಮಾತಾಡುತ್ತೀವೋ ಹಾಗೆ ಬರೆಯುವುದು.
  •  *ಯುನಿಕೋಡ್ ಎಂದರೆ ಏನು ಎಂದು ತಿಳಿಯಲು ಇಲ್ಲಿ ಚಿಟುಕಿ.

Share it